ಕಣ್ಣುಮುಚ್ಚಿ ಒರಗಿದವನಿಗೆ ನಿದ್ರೆ ಬರಲಿಲ್ಲ. ಬಣ್ಣ ಬಣ್ಣದ ವೇಷ ತೊಟ್ಟ ಯಕ್ಷಗಾನದ ಪಾತ್ರಗಳು ರಿಂಗಣ ಹಾಕಲು ಪ್ರಾರಂಭಿಸಿದಂತೆ ಬದುಕಿನ ಭೂತಕಾಲ ಬೆತ್ತಲೆಯಾಗಿ ನಿಂತಿತು. ಅವನು ತನ್ನ ಅಮ್ಮಿಜಾನಳ ಹೊಟ್ಟೆಯಿಂದ ಈ ಪ್ರಪಂಚಕ್ಕೆ ಬಂದಾಗ ಅಪ್ಪ ಇರಲಿಲ್ಲ. ಅವನ ಅಪ್ಪ ಕಂಕನಾಡಿಯ ವಿಟ್ಟುಪೈಯವರ ಮಂಡಿಯಲ್ಲಿ ಉಪ್ಪು ಮೀನು ಪಡೆದು ಘಟ್ಟದ ಕಡೆಗೆ ಲಾರಿಯಲ್ಲಿ ಸಾಗಿಸಿ, ಬೈಸಿಕಲ್ಲಿನಲ್ಲಿ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿ ಮನೆಗೆ ಮರಳಬೇಕಾದರೆ ವಾರವೆರಡು ಕಳೆಯುತ್ತಿದ್ದವು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಭದ್ರಪ್ಪ ಶಿ ಹೆನ್ಲಿ ಬರೆದ ಕತೆ ‘ಎದೆ ಹತ್ತಿ ಉರಿದೊಡೆ’

 

ಪಳ್ಳಿಯ ಬಾಂಗು ಬಾರಿಸುವ ಮೊದಲೇ ಕುತ್ತುಪ್ಪಾಡಿಯ ಸರಹದ್ದುನ್ನು ದಾಟಿದ್ದ ಹುಸೇನಿ. ಪಾಣಾಜೆಯ ಅಂಕಣ್ಣ ಮೊಗೇರರ ಲಾರಿ ಡ್ರೈವರ್ ಆದ ಲಾಗಾಯ್ತು ಅವನು ಎಂದೂ ಕುತ್ತುಪ್ಪಾಡಿಯಲ್ಲಿ ಸೂರ್ಯನ ಕಿರಣಗಳನ್ನು ಕಂಡದ್ದೇ ಇಲ್ಲ! ಮೊಗೇರರ ಮಂಡಿಯಿಂದ ಮೀನು ತುಂಬಿಕೊಂಡು ಮಡಿಕೇರಿ, ಮೈಸೂರು, ಬೆಂಗಳೂರು, ದಾವಣಗೆರೆಯವರೆಗೆ ವಿಲೇವಾರಿ ಮಾಡಿ ಮತ್ತೆ ಅದೇ ದಾರಿಯಲ್ಲಿ ಹಿಂತಿರುಗಬೇಕಾದರೆ ಪೂರ್ತಿ ಎರಡು ದಿನಗಳು ಉರುಳುತ್ತಿದ್ದವು. ಹಲೀಮಳೊಡನೆ ನಿಖಾ ಮಾಡಿಕೊಳ್ಳುವುದಕ್ಕಿಂತಲೂ ಬಹಳ ಮುಂಚಿನಿಂದಲೂ ಇದೇ ದಾರಿಯಲ್ಲಿ ನಿರಂತರವಾಗಿ ಮೊಗೇರರ ಈ ಮೂಕಾಂಬಿಕಾ ಲಾರಿಯೊಂದಿಗೆ ತನ್ನ ಬದುಕಿನ ಬಂಡಿಯನ್ನು ಸಾಗಿಸಿಕೊಂಡು ಬಂದಿದ್ದಾನೆ. ಹಿರೇ ಮಗ ಸಲೀಮ ಐದು ವರ್ಷಗಳ ಹಿಂದೆಯೇ ದುಬೈ ಸೇರಿದ್ದಾನೆ. ಐದು ಹೆಣ್ಣು ಮಕ್ಕಳು ಬೀಡಿ ಕಟ್ಟುತ್ತಾ ಅಬ್ಬಾಜಾನ್ ಮತ್ತು ಅಮ್ಮಿಯರಿಬ್ಬರ ಮೇಲೆಯೇ ಪೂರ್ಣ ಭಾರ ಬೀಳದಂತೆ ನೋಡಿಕೊಂಡಿದ್ದಾರೆ. ಈ ರಜೆಗೆ ಬರುವ ಮಗ ಸಲೀಮನಿಗೆ ಪಾಲೇಮಾರಿನ ಅಬ್ಬೆ ಬ್ಯಾರಿಯ ಮಗಳೊಂದಿಗೆ ನಿಖಾ ಮಾಡುವ ಮಾತುಕತೆಗಳು ನಡೆದಿವೆ.

ತನಗೆ ಬುದ್ಧಿ ಬಂದಾಗಿನಿಂದಲೂ ತನ್ನ ಒಡನಾಡಿಯಾಗಿರುವ ಅಂಕಣ್ಣ ಮೊಗೇರರ ಈ ಮೂಕಾಂಬಿಕೆಯನ್ನು ತನ್ನ ಸ್ವಂತ ಮಗಳನ್ನು ಜೋಪಾನ ಮಾಡಿದಂತೆಯೇ ನೋಡಿಕೊಂಡಿದ್ದ. ರಾತ್ರಿ ಮನೆಯ ಕೊಟ್ಟಿಗೆಯಲ್ಲಿ ನಿಲ್ಲಿಸುವಾಗ ಧೂಳು ಕಸವನ್ನೆಲ್ಲಾ ಸ್ವಚ್ಛ ಮಾಡಿ, ಬೆಳಿಗ್ಗೆ ನೆಲ್ಲೂರು ಕ್ರಾಸಿನಲ್ಲಿ ನೇತ್ರಾವತಿಗೆ ಇಳಿಸಿ ಸ್ನಾನ ಮಾಡಿಸಿ, ಪಾಣಾಜೆಯ ಗಣಪತಿ ದೇವಸ್ಥಾನದ ತಿರುವಿನಲ್ಲಿ ಅಣ್ಣು ಪೂಜಾರಿಯ ಹೂವಿನ ಅಂಗಡಿಯಿಂದ ಒಂದು ಮಾರು ಸೇವಂತಿಗೆಯನ್ನು ಖರೀದಿಸಿ, ಹಣೆಯ ಮುಂದಕ್ಕೆ ಒಪ್ಪವಾಗಿ ಮುಡಿಸಿ, ಹಾರನ್ನು ಒತ್ತಿದರೆ ಪಾಣಾಜೆಯ ಅಂಕಣ್ಣ ಮೊಗೇರರ ಮೀನಿನ ಮಂಡಿಯ ಮುಂದೆ ಮುದ್ದಿನ ಕರುವಿನಂತೆ ನಿಲ್ಲುತ್ತಿದ್ದಳು ಮೂಕಾಂಬಿಕೆ. ಇಷ್ಟು ವರ್ಷಗಳಾದರೂ ಈ ಮೂಕಾಂಬಿಕೆಗೆ ಸಣ್ಣ ಶೀತ, ಜ್ವರ, ದನ ನಾಯಿಗಳು ಅಡ್ಡ ಬಂದಾಗ ಒತ್ತಿದ ಬ್ರೇಕಿನಿಂದಾಗಿ ಸಣ್ಣಪುಟ್ಟ ತರಚಿದ ಗಾಯಗಳಾಗಲೀ, ಘಟ್ಟ ಹತ್ತಿದ ಉಬ್ಬಸವಾಗಲೀ ಬಾರದೆ ಆರೋಗ್ಯವಾಗಿದ್ದುದ್ದಕ್ಕೆ ಹುಸೇನಿಯ ಜೋಪಾನವೇ ಕಾರಣವಾಗಿತ್ತು. ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ತನ್ನ ಮೀನಿನ ಮಂಡಿಯಲ್ಲೇ ಬೆಳೆದ ಹುಸೇನಿಯ ಬಗ್ಗೆ ಅಂಕಣ್ಣ ಮೊಗೇರರಿಗೆ ಎಲ್ಲಿಲ್ಲದ ಪ್ರೀತಿ. ಹುಸೇನಿ ಮದುವೆಯಾಗುವ ಮೊದಲು ಆಗಾಗ್ಗೆ ‘ಏಯ್ ಹುಸೇನಿ.. ನಿನ್ನಂಥ ಅಳಿಯನನ್ನು ಪಡೆಯುವ ಯಾವ ಸಾಬಣ್ಣನಾದರೂ ಪುಣ್ಯವಂತನೇ ಸೈ ಮಾರಾಯ’ ಎನ್ನುತ್ತಿದ್ದರು. ಆದರೆ ಆದದ್ದೇ ಬೇರೆ. ಕರಾವಳಿಯ ಯಾವ ಸಾಬಣ್ಣನಿಗೂ ಅಳಿಯನಾಗದೆ ಹರಿಹರದ ಆಚೆಗಿನ ಹಳ್ಳಿಯ ಹನುಮಕ್ಕನನ್ನು ನಿಖಾ ಮಾಡಿಕೊಂಡೆನೆಂದು ಹೇಳಿದ್ದನ್ನಾಗಲೀ, ಅವಳ ಹೆಸರು ಹಲೀಮಾ ಎಂದು ಇವನೇ ನಾಮಕರಣ ಮಾಡಿದ್ದನ್ನಾಗಲೀ, ಅವಳು ದಾವಣಗೆರೆಯ ಲಬ್ಬೆ ಬ್ಯಾರಿ ಲತೀಫನ ಮಗಳೆಂದು ಹೇಳಿದ ಅಪ್ಪಟ ಸುಳ್ಳುಗಳನ್ನು ಅನುಮಾನಿಸುವಂತಹ ಕೆಟ್ಟ ಮನಸ್ಸು ಅಂಕಣಮೊಗೇರರಿಗಾಗಲೀ, ಕುತ್ತುಪ್ಪಾಡಿಯ ತನ್ನ ಜನರಿಗಾಗಲೀ ಬಾರದಿದ್ದುದು ಆಶ್ಚರ್ಯವೂ ಅಲ್ಲ, ಪಾಪವೂ ಅಲ್ಲ.

ಕಳೆದ ಇಪ್ಪತ್ತೆಂಟು ವರ್ಷಗಳಿಂದಲೂ ತನ್ನ ಅಂಗೈ ಗೆರೆಗಳಂತೆಯೇ ಆತ್ಮೀಯವಾಗಿದ್ದ ಈ ರಸ್ತೆಗಳು ಇತ್ತೀಚೆಗೆ ವಿಚಿತ್ರ ರೂಪಗಳನ್ನು ತಾಳುತ್ತ ನಿರಾಳವಾಗಿದ್ದ ಬದುಕಿನಲ್ಲಿ ದುಗುಡವನ್ನು ತುಂಬಿದ್ದವು. ಬೆಳಿಗ್ಗೆ ಹೊರಟರೆ ಮತ್ತೆ ಎರಡನೆ ದಿನ ಮನೆ ಸೇರುವವರೆಗೆ ಹೆದರಿಕೆಯಿಂದಲೇ ಇರಬೇಕಾದ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಂಡು ಸಾಗುತ್ತಿದ್ದವನು, ಬಿ.ಸಿ. ರೋಡಿನ ಕ್ರಾಸಿನಲ್ಲಿ ದಡಕ್ಕನೆ ಬ್ರೇಕು ಒತ್ತಿದ. ರಸ್ತೆಗೆ ಉಜ್ಜಿದ ಟೈರಿನಿಂದ ಸುಸ್ತಾದ ಮೂಕಾಂಬಿಕೆಯನ್ನು ಸಮಾಧಾನ ಮಾಡುತ್ತಿದ್ದಾಗಲೇ ತನ್ನ ಕಣ್ಣೆದುರೇ ಊರು ಹೊತ್ತಿ ಉರಿಯುತ್ತಿದ್ದುದನ್ನು ಕಂಡು ಬೆವತುಹೋದ. ಕಲ್ಲು ತೂರಾಟ, ಹೆಣದ ಮೆರವಣಿಗೆ, ಲಾಠಿ ಚಾರ್ಜು, ಗಾಳಿಯಲ್ಲಿ ಗುಂಡು, ಕೋಮು ಗಲಭೆ.. ಬಂದ್..! ಬಸವಳಿದು ನಿಂತ ಮೂಕಾಂಬಿಕೆಯ ಮುಂದೆ ಒಂದು ಕಿಲೋಮೀಟರಿಗೂ ಮೀರಿ ವಾಹನಗಳು ನಿಂತಿದ್ದವು. ಇತ್ತೀಚಿನ ಐದಾರು ವರ್ಷಗಳಲ್ಲಿ ಇಂತಹ ಅನಿಷ್ಟ ವರ್ಷಕ್ಕೆ ಮೂರ್ನಾಲ್ಕು ಬಾರಿಯಾದರೂ ಪುನರಾವರ್ತನೆಯಾಗುತ್ತಲೇ ಇತ್ತು. ಹೆಣಗಳು ಬೀಳುತ್ತಲೆ ಇದ್ದುವು. ಮೂರ್ನಾಲ್ಕುಗಂಟೆಯವರೆಗೆ ಜಪ್ಪಯ್ಯ ಎಂದರೂ ವಾಹನಗಳು ಮುಂದೆ ಸಾಗುತ್ತಲೇ ಇರಲಿಲ್ಲ.

ಬೇಸಿಗೆಯಲ್ಲಿ ಘಟ್ಟ ಹತ್ತುವಾಗ ಕಾಡ್ಗಿಚ್ಚನ್ನು ನೋಡುವುದು ಹುಸೇನಿಗೆ ಸಾಮಾನ್ಯವಾಗಿತ್ತು. ಒಂದು ಕಾಡ್ಗಿಚ್ಚು ನಂದಬೇಕಾದರೆ ಅದರ ವಿರುದ್ಧ ಇನ್ನೊಂದು ಕಾಡ್ಗಿಚ್ಚು ಹಬ್ಬಬೇಕು ಎನ್ನುವುದೇ ಈ ಕೋಮು ದಳ್ಳುರಿಗೆ ಅನ್ವಯವಾಗುವುದೇ? ಮೊದಲು ಬೆಂಕಿ ಹತ್ತಿಸುವವರ್ಯಾರು? ಅದಕ್ಕೆ ಮೂಲ ಕಾರಣಗಳು ಬೆಳಕಿಗೆ ಬಾರದೇ ಸುಳ್ಳು-ಸತ್ಯಗಳಿಗೆ ತುಪ್ಪ ಸುರಿಯುತ್ತಲೇ ತದ್ವಿರುದ್ಧ ದಿಕ್ಕಿನಿಂದ ಜ್ವಾಲೆಯನ್ನು ಎಬ್ಬಿಸುತ್ತಲೇ ವರ್ತಮಾನದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದುದು ಮತ್ತು ಇದಕ್ಕೆ ಕಾರಣವಾದ ಮೂಲ ಸಂಗತಿಗಳು ಅತಿ ಸಾಮಾನ್ಯವಾಗಿರುತ್ತಿದ್ದುದು ಹುಸೇನಿಯಂತಹ ಸಾಮಾನ್ಯರಿಗೆಲ್ಲರಿಗೂ ತಿಳಿದಿತ್ತು. ಈ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದವರೇ ಬೇರೆ. ಈ ಬೆಂಕಿಯಲ್ಲಿಯೇ ಬೀಡಿ ಹತ್ತಿಸಿಕೊಳ್ಳುತ್ತಿದ್ದವರು ಒಂದು ಕಡೆ ಯಜ್ಞ ಕುಂಡಗಳನ್ನು ನೆರವೇರಿಸುತ್ತಿದ್ದವರು, ಮತ್ತೊಂದು ಕಡೆ ನಮಾಜು ಮಾಡುತ್ತಿದ್ದವರು, ಯಾರೂ ಈಗ ಪ್ರಾಮಾಣಿಕರಾಗಿ ಉಳಿದಿರಲಿಲ್ಲ. ಈ ದಿನವಂತೂ ಯಾವುದೋ ಸಂಘಟನೆಯ ಮುಖಸ್ಥನೇ ಕೊಲೆಯಾಗಿದ್ದನಂತೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕಾರ್ಯಕಾರಣ ಸಂಬಂಧದ ಸಿದ್ಧ ಸೂತ್ರದ ತುದಿಯೆರಡನ್ನು ಹಿಡಿದು ಜಗ್ಗುತ್ತಿದ್ದಾಗ ಎಷ್ಟೋ ಬಾರಿ ಹುಸೇನಿಯಂತಹ ಅಮಾಯಕರೇ ಆಹುತಿಯಾಗುತ್ತಿದ್ದರು.

ತೂಕಡಿಸುತ್ತಾ ಕುಳಿತ ಹುಸೇನಿಗೆ ಎರಡು ಸಾಮಾನ್ಯ ಘಟನೆಗಳು ವಿರಾಟ್ ರೂಪ ಪಡೆದದ್ದು ಕನಸಿನಂತೆ ಕಣ್ಣ ಮುಂದೆಯೇ ಸಾಗಿಹೋಯಿತು. ಕೆಮ್ಮಣ್ಣುಗುಂಡಿಯ ಅಬ್ದುಲ್ಲಾ ಸಂಘಟನೆಯ ಮುಖಂಡನಾಗಿದ್ದ. ಟಿಂಬರ್ ವ್ಯಾಪಾರಿಯೂ ಆಗಿದ್ದುದರಿಂದ ಸಣ್ಣಪುಟ್ಟ ಮಾಪಿಳ್ಯಾಗಳಿಗೆ ವ್ಯಾಪಾರಕ್ಕೆ ಕೈಗಡ ಕೊಡುತ್ತಿದ್ದ. ಮೂಸಾಬ್ಯಾರಿ ಸಾಲ ಪಡೆದು ಮೀನು ಮಾರಾಟಕ್ಕೆ ಘಟ್ಟ ಹತ್ತಿದ. ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಹಿಂತಿರುಗುತ್ತಿದ್ದ ಮೂಸಾ ಸಾಲ ತೀರಿಸಿ, ಮತ್ತೆ ಸಾಲ ಪಡೆದು ಘಟ್ಟ ಹತ್ತುತ್ತಿದ್ದ. ಅದೆಷ್ಟೋ ವರ್ಷಗಳಿಂದಲೂ ಇದು ನಡೆದುಕೊಂಡೇ ಬಂದಿತ್ತು. ಆದರೆ ಅವನ ಸಾಲ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ. ತನ್ನ ಹೆಂಡತಿಯನ್ನಲ್ಲದೆ ಮಗಳನ್ನೂ ಬಳಸಿಕೊಂಡುದಕ್ಕೆ ಅಷ್ಟು ಕೋಪ ಬಾರದಿದ್ದರೂ, ಹಳೆ ಸಾಲವನ್ನು ಚುಕ್ತಾ ಮಾಡದೆ ಮತ್ತೆ ಬಿಡಿಗಾಸನ್ನೂ ಕೊಡುವುದಿಲ್ಲವೆಂದ ಅಬ್ದುಲ್ಲಾನ ಕಿಬ್ಬೊಟ್ಟೆಗೆ ಚೂರಿ ಹಾಕಿ ರಾತ್ರಾನುರಾತ್ರಿಯೇ ಘಟ್ಟ ಹತ್ತಿದ ಮೂಸಾ. ಬೆಳಗಾಗುವಷ್ಟರಲ್ಲಿ ಅದು ಧರ್ಮ ಯುದ್ಧಕ್ಕೆ ಕಾರಣವಾಗಿತ್ತು!

ಇದಕ್ಕಿಂತಲೂ ರೋಚಕವಾದ ಘಟನೆಗೆ ಹುಸೇನಿಯೇ ಸಾಕ್ಷಿಯಾಗಿದ್ದರೂ ಧರ್ಮಯುದ್ಧವನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ತುದಿಯಡ್ಕದ ಕಲ್ಲುಗುಂಡಿ ತಿರುವಿನಲ್ಲಿ ಗಣೇಶ ಕಾಮತರ ಮಗಳು ಮತ್ತು ಸಂಜೀವ ಶೆಟ್ಟರ ಮಗ ಭೇಟಿಯಾಗುತ್ತಿದ್ದುದು, ಕಾಲುದಾರಿಯಲ್ಲಿ ಸರಸವಾಡುತ್ತ ಮನೆ ಸೇರುತ್ತಿದ್ದುದು, ಅವರ ಕಾಲೇಜು ಗೆಳೆಯರಿಗೆ ತಿಳಿದಿತ್ತು. ಒಂದು ದಿನ ಹೊಂಚು ಹಾಕಿ ಇವರಿಬ್ಬರ ಮೇಲೆ ಕಾಡಿನೊಳಗಿನಿಂದ ತುಂಟರು ಬೀಸಿದ ಕಲ್ಲುಗಳು ಅದೇ ಸಮಯದಲ್ಲಿ ಅಲ್ಲಿ ಚಲಿಸುತ್ತಿದ್ದ ಕೋಸಲೆ ಮಠಾಧೀಶರ ಕಾರಿಗೆ ಬಿದ್ದವು. ಕಾರನ್ನು ನಿಲ್ಲಿಸಿ ಸುತ್ತ ಮುತ್ತ ನೋಡುತ್ತಿದ್ದಾಗ ಅದೇ ಮಾರ್ಗದಲ್ಲಿ ಬರುತ್ತಿದ್ದ ಜೀಪಿನಲ್ಲಿ ಮಂಟೆಕಾನದ ಮುಸ್ಲಿಂ ಪಡ್ಡೆ ಹುಡುಗರಿದ್ದರು. ಅವರೇ ಮಠದ ಕಾರಿಗೆ ಕಲ್ಲು ಹೊಡೆದರೆಂದು, ಕೈ ಕೈ ಮಿಲಾಯಿಸಿ ಅದೇ ಕಾರಣವಾಗಿ ಸುತ್ತೂರು ಎರಡು ವಾರ ಜ್ವರ ಬಂದು ಮಲಗಿತು. ಆ ಜೀಪಿನ ಹಿಂದೆಯೇ ಬರುತ್ತಿದ್ದ ಹುಸೇನಿಯ ಮೂಕಾಂಬಿಕೆಗೆ ಸತ್ಯ ಗೊತ್ತಿದ್ದರೂ ಬಾಯಿ ಬಿಡಲಾಗಲಿಲ್ಲ.

ಇಷ್ಟು ವರ್ಷಗಳಾದರೂ ಈ ಮೂಕಾಂಬಿಕೆಗೆ ಸಣ್ಣ ಶೀತ, ಜ್ವರ, ದನ ನಾಯಿಗಳು ಅಡ್ಡ ಬಂದಾಗ ಒತ್ತಿದ ಬ್ರೇಕಿನಿಂದಾಗಿ ಸಣ್ಣಪುಟ್ಟ ತರಚಿದ ಗಾಯಗಳಾಗಲೀ, ಘಟ್ಟ ಹತ್ತಿದ ಉಬ್ಬಸವಾಗಲೀ ಬಾರದೆ ಆರೋಗ್ಯವಾಗಿದ್ದುದ್ದಕ್ಕೆ ಹುಸೇನಿಯ ಜೋಪಾನವೇ ಕಾರಣವಾಗಿತ್ತು. ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ತನ್ನ ಮೀನಿನ ಮಂಡಿಯಲ್ಲೇ ಬೆಳೆದ ಹುಸೇನಿಯ ಬಗ್ಗೆ ಅಂಕಣ್ಣ ಮೊಗೇರರಿಗೆ ಎಲ್ಲಿಲ್ಲದ ಪ್ರೀತಿ.

ಜನಸಾಮಾನ್ಯರ ಮಧ್ಯೆ ನಡೆಯುತ್ತಿದ್ದ ಸುಳ್ಳು ಸಂಗತಿಗಳೆಲ್ಲವೂ ಸತ್ಯಗಳಾಗಿ, ಸತ್ಯಗಳೆಲ್ಲವೂ ಸುಳ್ಳುಗಳಾಗಿ ಪರಿವರ್ತನೆಯಾಗುವ ವರ್ತಮಾನದ ಬೆರಗಿಗೆ ತಲೆಯಾಡಿಸುತ್ತ ತೂಕಡಿಸುತ್ತಿದ್ದವನಿಗೆ ಪೊಲೀಸ್ ಪೇದೆಯ ಲಾಠಿ ಶಬ್ದದಿಂದ ಎಚ್ಚರವಾಯಿತು. ವಾಹನಗಳು ಚಲಿಸಲು ಪ್ರಾರಂಭಿಸಿದವು. ಮೂಕಾಂಬಿಕೆಯನ್ನು ಮೈದಡವಿದ. ಪಾಣಾಜೆಯನ್ನು ತಲುಪಿದಾಗ ರಾತ್ರಿ ಒಂಬತ್ತು ಗಂಟೆ ಕಳೆದಿತ್ತು. ಮರುದಿನ ನಸುಕಿನಲ್ಲಿ ಲೋಡು ಹೊರಡುವುದು ಸೂಕ್ತವೆಂದು ಮೊಗೇರರು ಹೇಳಿದ ಬುದ್ಧಿವಾದಕ್ಕೆ ಒಪ್ಪಿ ಅಲ್ಲೇ ಮಲಗಿದ.

ಕಣ್ಣುಮುಚ್ಚಿ ಒರಗಿದವನಿಗೆ ನಿದ್ರೆ ಬರಲಿಲ್ಲ. ಬಣ್ಣ ಬಣ್ಣದ ವೇಷ ತೊಟ್ಟ ಯಕ್ಷಗಾನದ ಪಾತ್ರಗಳು ರಿಂಗಣ ಹಾಕಲು ಪ್ರಾರಂಭಿಸಿದಂತೆ ಬದುಕಿನ ಭೂತಕಾಲ ಬೆತ್ತಲೆಯಾಗಿ ನಿಂತಿತು. ಅವನು ತನ್ನ ಅಮ್ಮಿಜಾನಳ ಹೊಟ್ಟೆಯಿಂದ ಈ ಪ್ರಪಂಚಕ್ಕೆ ಬಂದಾಗ ಅಪ್ಪ ಇರಲಿಲ್ಲ. ಅವನ ಅಪ್ಪ ಕಂಕನಾಡಿಯ ವಿಟ್ಟುಪೈಯವರ ಮಂಡಿಯಲ್ಲಿ ಉಪ್ಪು ಮೀನು ಪಡೆದು ಘಟ್ಟದ ಕಡೆಗೆ ಲಾರಿಯಲ್ಲಿ ಸಾಗಿಸಿ, ಬೈಸಿಕಲ್ಲಿನಲ್ಲಿ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿ ಮನೆಗೆ ಮರಳಬೇಕಾದರೆ ವಾರವೆರಡು ಕಳೆಯುತ್ತಿದ್ದವು. ಹೀಗೆ ಮೀನು ಮಾರಾಟ ಮಾಡುತ್ತಿದ್ದ ಮೀನು ಬ್ಯಾರಿ ಒಂದು ಮಳೆಗಾಲದಲ್ಲಿ ಘಟ್ಟಕ್ಕೆ ಹೋದವನು ಎಣ್ಣೆ ಹೊಳೆಯ ಪ್ರವಾಹಕ್ಕೆ ಸಿಕ್ಕಿ ಮತ್ತೆ ಮನೆಗೆ ಮರಳಲಿಲ್ಲ. ಆಗ ಅವನ ಬೀಬಿಗೆ ಮಕ್ಕಳಿರಲಿಲ್ಲ. ವಿಟ್ಟುಪೈಯವರ ಅಂಗಡಿಯಲ್ಲಿ ಚಾಕರಿ ಮಾಡುತ್ತ ಬೀಡಿ ನೇಯುತ್ತಲೇ ಈ ಹುಸೇನಿಯನ್ನು ಹಡೆದದ್ದು ದೊಡ್ಡ ಸುದ್ದಿಯಾಗಲಿಲ್ಲ.

ವಿಟ್ಟುಪೈ ಸತ್ತು ಹೋಗುವ ಮುನ್ನ ಇನ್ನೂ ಮೀಸೆ ಮೂಡದಿದ್ದ ಹುಸೇನಿಯನ್ನು ತನ್ನ ಮಿತ್ರರಾದ ಅಂಕಣ್ಣ ಮೊಗೇರರ ಕೈಗೆ ಹಾಕಿ ‘ಅಕಾ ಮೊಗೇರರೇ ಈ ಕುನ್ನಿ ನಿಮ್ಮಲ್ಲೇ ಇದ್ದರೆ, ನಿಮಗೇನೂ ಭಾರವಾಗದು, ನಿಮಗೂ ಪುಣ್ಯ ಬರುತ್ತದೆ’ ಎಂದು ತನ್ನ ಋಣ ತೀರಿಸಿಕೊಂಡರು. ಅಂದಿನಿಂದ ಮೊಗೇರರ ಅಂಗಡಿಯಲ್ಲೇ ಬೆಳೆದ ಕುನ್ನಿ, ಹುಸೇನಿಯಾಗಿ, ಮೊಗೇರರ ಮೂಕಾಂಬಿಕಾ ಸರ್ವೀಸ್‌ನ ನಂಬಿಕಸ್ಥ ಚಾಲಕನಾಗಿ ಬೆಳೆದದ್ದು, ಅವನ ಅಮ್ಮಾಜಾನ್ ಮತ್ತು ಮೊಗೇರರಿಗೆ ಬಿಟ್ಟರೆ ಈಗ ಇನ್ನಾರಿಗೂ ಗೊತ್ತಿಲ್ಲ. ವಿಟ್ಟುಪೈ ಅವರ ಅಸ್ಪಷ್ಟ ರೂಪವನ್ನು ಬಿಟ್ಟು ಅವನಿಗೆ ಏನೂ ನೆನಪಿಲ್ಲ. ಮೊಗೇರರ ಅಂಗಡಿಯ ನಂಬಿಕಸ್ಥ ಚಾಲಕನಾಗಿ ಮೂಕಾಂಬಿಕೆಯನ್ನು ಘಟ್ಟ ಹತ್ತಿಸುವ ಪ್ರಾರಂಭದಲ್ಲಿಯೇ ಅಮ್ಮಾಜಾನ್ ಪುಪ್ಪುಸ ಕ್ಷಯದಿಂದ ಸತ್ತು ಹೋದಳು.

ನಸುಕಿನಲ್ಲಿಯೇ ಮನೆಬಿಟ್ಟು ಮೀನಿನ ಲೋಡಿನೊಂದಿಗೆ ಘಟ್ಟ ಹತ್ತುವ ಬೆಳಗಿನ ಸಮಯದಲ್ಲಿ ತನ್ನ ಎರಡೂ ಕಿವಿಗಳಿಗೆ ಬೀಳುತ್ತಿದ್ದ ಪಳ್ಳಿಯ ಬಾಂಗುಗಳಾಗಲೀ, ದೇವಸ್ಥಾನದ ಜಾಗಟೆಗಳಾಗಲೀ, ಚರ್ಚುಗಳ ಗಂಟೆಗಳಾಗಲೀ ಯಾವುದರ ಶಬ್ದವೂ ಯಾವ ಪರಿಣಾಮವನ್ನೂ ಬೀರದೆ ನಿರ್ಲಿಪ್ತನಾಗಿ ಸಾಗುತ್ತಿದ್ದಾಗ, ಹರಿಹರದ ಸಂತೆಮಾಳದ ತಿರುವಿನಲ್ಲಿ ಗಕ್ಕನೆ ಎದುರಾಗಿದ್ದಳು ಆ ಅಮಾಯಕ ಹೆಣ್ಣು. ರಾತ್ರಿ ಲಾರಿ ಚಾಲಕರ ಅಡ್ಡೆ ಜಾಗವಾಗಿದ್ದ ಅಲ್ಲಿ ಅಚಾನಕ್ಕಾಗಿ ಎದುರಾದ ಅವಳೇ ಹನುಮಕ್ಕ. ಮತ್ತೆ ಮತ್ತೆ ಭೇಟಿಯಾದ ನಂತರ ಅವಳು ಮತ್ತೆ ದೂರವಾಗಲೇ ಇಲ್ಲ. ತಾನು ದಾವಣಗೆರೆಯಲ್ಲಿ ನಿಖಾ ಮಾಡಿಕೊಂಡೆನೆಂದು, ಅವಳು ಹಲೀಮಾ ಎಂದು, ಅಂಕಣ್ಣ ಮೊಗೇರರ ಆಶೀರ್ವಾದ ಪಡೆದು ತನ್ನ ನಾಮಾಂಕಿತದವರು ಇರುವ ಧರ್ಮದ ಸುರಕ್ಷಿತ ಸ್ಥಳವಾದ ಕುತ್ತುಪ್ಪಾಡಿಯಲ್ಲಿ ಒಂದು ಮನೆ ಮಾಡಿ, ಹಲೀಮಾಳೊಂದಿಗೆ ನಾಲ್ಕೈದು ಮಕ್ಕಳನ್ನು ಪಡೆದ.

ತನ್ನ ಪೂರ್ವಿಕರ ಕಸುಬನ್ನಲ್ಲದೆ ಮತ್ತೇನನ್ನೂ ಮಾಡಲಾರದಾಗಿದ್ದ ಹನುಮಕ್ಕ ಅಚಾನಕ್ಕಾಗಿ ಸಿಕ್ಕಿದ ಹುಸೇನಿಯ ಕೈಹಿಡಿದು, ಮೂಕಾಂಬಿಕೆಯನ್ನೇರಿ ಕುತ್ತುಪ್ಪಾಡಿಗೆ ಬಂದು ಹಲೀಮಳಾದದ್ದು ಹುಸೇನಿಗೆ ಬಿಟ್ಟು ಮತ್ತಾರಿಗೂ ಇಂದಿಗೂ ತಿಳಿದಿಲ್ಲ. ಧಾರ್ಮಿಕ ಮುಖಂಡರು ನೀಡಿದ ಯಾವುದೋ ಪುಸ್ತಕದ ಜೊತೆಗೆ, ತನ್ನ ತಾಯಿ ಕೊಟ್ಟ ಯಲ್ಲಮ್ಮನ ಸಣ್ಣ ಬೆಳ್ಳಿ ಮೂರ್ತಿಯನ್ನು ಹಳೆಯ ಪೆಟ್ಟಿಗೆಯಲ್ಲಿಟ್ಟು ಅದನ್ನು ಅಟ್ಟದಲ್ಲಿಟ್ಟಿದ್ದಾಳೆ. ಕುತ್ತುಪ್ಪಾಡಿಯಲ್ಲಿ ಸತ್ಯ ಸುಳ್ಳಿನ ಪರಿಧಿಯ ಮೇಲೆ ನಿರ್ಲಿಪ್ತವಾಗಿ ಬದುಕುತ್ತಿದ್ದವರಿಗೆ ಇತ್ತೀಚಿನವರೆಗೆ ಯಾವ ಅಭದ್ರತೆಯೂ ಕಾಡಿರಲಿಲ್ಲ. ಆದರೆ ಇಂದು ಅವನ ಹೊಟ್ಟೆಯೊಳಗೆ ವಿಚಿತ್ರ ಸಂಕಟವುಂಟಾಯಿತು. ಅಂಗಡಿಗೆ ಬೀಡಿ ಕೊಟ್ಟು ಬರುವಾಗ ಹಲೀಮಾಳಿಗೇನಾದರೂ ಆದರೆ… ಊರಿಗೆ ಮರಳುತ್ತಿರುವ ಮಗ ಸಲೀಮ ದಾರಿ ಮಧ್ಯೆಯೇ ಇವರಿಗೆ ಸಿಕ್ಕಿಬಿದ್ದರೆ..? ಬೆಚ್ಚಿ ಎದ್ದು ಕುಳಿತುಕೊಂಡ. ಪಳ್ಳಿಯ ಬಾಂಗು ಬಾರಿಸಿತು. ಪ್ರತಿಸ್ಪರ್ಧಿಯಂತೆ ಜಾಗಟೆಯ ಶಬ್ದವೂ ಕೇಳಿಸಿತು. ಬದುಕಿನಲ್ಲಿ ಮೊದಲ ಬಾರಿಗೆ ತೀರಾ ಹೆದರಿಕೆಯಿಂದ ಬಸವಳಿದು ಕುಳಿತ. ಬೆಳಿಗ್ಗೆ ನಸುಕಿನಲ್ಲಿಯೇ ಕೆಲಸಗಾರರು ಮೀನು ಪೆಟ್ಟಿಗೆಗಳ ಲೋಡು ಮಾಡಿದರು. ಮೂಕಾಂಬಿಕೆಯ ಮುಖ ಒರೆಸಿ, ನೀರು ಕುಡಿಸಿ, ಹೂವು ಮುಡಿಸಿ, ಗೇರು ಬದಲಾಯಿಸಿ ಸಿದ್ಧಗೊಳಿಸಿ, ಹಾರನ್ ಮಾಡಿದ. ಅಂಕಣ್ಣ ಮೊಗೇರರು ‘ಹುಸೇನಿ ಎಚ್ಚರಿಕೆಯಿಂದರು’ ಎಂದರು. ನಿನ್ನೆ ಹೊತ್ತಿ ಉರಿಯುತ್ತಿದ್ದ ರಸ್ತೆಯ ಮೇಲೆಯೇ ಸಾಗಬೇಕು, ಮನಸ್ಸಿನ ತಳಮಳದೊಂದಿಗೆ ಗೇರು ಬದಲಾಯಿಸಿದ. ಮೂಕಾಂಬಿಕೆ ವೇಗವಾಗಿ ಚಲಿಸುತ್ತಿದ್ದಳು. ಮಂಗಳೂರು, ಬಿ.ಸಿ.ರೋಡು, ಬೊಳುವಾರು ದಾಟಿ, ಕುತ್ತಡ್ಕದ ದಿಕ್ಕಿಗೆ ಮುಖ ಮಾಡಿ ಸಾಗುತ್ತಿದ್ದ ಮೂಕಾಂಬಿಕೆ ಒಮ್ಮೆಲೆ ಹುಲಿಯನ್ನು ಕಂಡಂತೆ ಬೆದರಿ ನಿಂತಳು. ಹತ್ತಾರು ಜನರ ಗುಂಪು ಸುತ್ತುವರೆಯಿತು. ಅನಾಮತ್ತು ಹುಸೇನಿಯನ್ನು ಹೊರಗೆಳೆದು ಹೊಡೆಯಲು ಪ್ರಾರಂಭಿಸಿದರು.

‘ದನದ ಮಾಂಸ ಸಾಗಿಸುತ್ತಿದ್ದಿಯೇನೋ ಬ್ಯಾರಿ, ಮಗನೇ.. ಮಗನೇ.. ಮಗನೇ… ಓಯ್ ಆಯನ ಲಾರಿಯಾ… ಅಂಕಣ್ಣ ಮೊಗೇರಂದಾ.. ಅಂವ ಆ ಪಾರ್ಟಿಯವನಾ..’

‘ಈ ಬ್ಯಾರೀನ ಪೊಲೀಸ್ ಸ್ಟೇಷನ್‌ಗೆ ಎಳಕೊಂಡೋಗಿ’

‘ಓಹೋಹೋ… ಉಪ್ಪು ಮೀನು ಪೆಟ್ಟಿಗೆಗಳ ಜೊತೆ ದನದ ಮಾಂಸ ನಮಕ್ ಹರಾಮ್ ಬ್ಯಾರಿ…

‘ಮೊಗೇರನೂ ಬರ್ಲಿ.. ಎಳಕೊಂಡು ಹೋಗಿ ಪೊಲೀಸ್ ಸ್ಟೇಷನ್‍ಗೆ..’
ಹುಸೇನಿಯ ಮೂಗು ಬಾಯಿಯಲ್ಲಿ ರಕ್ತ ಸುರಿಯುತ್ತಿದ್ದುದನ್ನು ಮೂಕಾಂಬಿಕೆ ನೋಡುತ್ತಾ ಸಂಕಟಪಡುತ್ತಿದ್ದಳು. ನೆಲಕ್ಕೆ ಬೀಳಿಸಿ, ಮುಖ ಮೈಯನ್ನೆಲ್ಲ ತುಳಿಯುತ್ತಿದ್ದ ಧರ್ಮರಕ್ಷಕ ಪಡೆಯನ್ನು ತಡೆಯಲಾರದೆ ಅಸಹಾಯಕಳಾಗಿ ನಿಂತಿದ್ದಳು. ಹುಸೇನಿಯ ಮಾತು.. ಅಳು.. ನೋವು.. ಯಾವುದೂ ತಟ್ಟದ ಧರ್ಮಾಂಧರ ರುದ್ರ ಭೀಕರ ನರ್ತನದ ಮಧ್ಯೆ ಮೂಕಾಂಬಿಕೆ ಬೆದರಿ ಸ್ತಬ್ಧವಾಗಿ ನಿಂತಿದ್ದಳು. ದನದ ಮಾಂಸದ ಡಬ್ಬಿಗಳನ್ನು ಹೊರತೆಗೆದರು ಧರ್ಮರಕ್ಷಕರು. ಅವು ಅಲ್ಲಿಗೆ ಬಂದುದಾದರೂ ಹೇಗೆಂದು ನೋಡಿದ ಹುಸೇನಿ. ನೋವಿನಿಂದ ನೋಡುತ್ತಾ ನಿಂತವನೆದುರೇ ಅವನ ಉಸಿರಾಗಿದ್ದ ಮೂಕಾಂಬಿಕೆಯ ಮುಂಭಾಗಕ್ಕೆ ಬೆಂಕಿ ಹತ್ತಿಕೊಂಡಿತು. ಮೈಗೆ ಹತ್ತಿದ ಉರಿಯನ್ನು ನುಂಗಿಕೊಳ್ಳುತ್ತಲೇ ಅತೀವ ಸಂಕಟದಿಂದ ಹುಸೇನಿಯನ್ನು ಮೂಕಾಂಬಿಕೆ ನೋಡುತ್ತಿದ್ದಂತೆ, ಹುಸೇನಿಯ ಕಣ್ಣು ಮಂಜಾಯಿತು. ‘ನನ್ನನ್ನು ಬೇಕಿದ್ದರೆ ಸುಟ್ಟು ಹಾಕಿ.. ನನ್ನ ಮೂಕಾಂಬಿಕೆಯನ್ನು ಬಿಡಿ…’ ಎಂದು ಕಿರುಚುತ್ತಾ ಕುಸಿದು ಬಿದ್ದ.

ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ: ಸಂಘದ ಮುಖಂಡನ ಹತ್ಯೆಯ ಬೆಂಕಿ ಆರುವ ಮೊದಲೇ ಮೀನಿನ ಜೊತೆ ದನದ ಮಾಂಸವನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆ ಹಿಡಿಯಲಾಗಿದೆ. ಲಾರಿಯ ಚಾಲಕನನ್ನು ದಸ್ತಗಿರಿ ಮಾಡಲಾಗಿದೆ. ಆಡಳಿತ ಪಕ್ಷದ ಪರವಾಗಿರುವ ಅಂಕಣ್ಣ ಮೊಗೇರರ ಲಾರಿ ಬೆಂಕಿಯಿಂದ ಸುಟ್ಟು ಹೋಗಿದೆ. ಮುಂದೆ ನಡೆದದ್ದು ಸಮುದ್ರ ಮಂಥನ. ಪಕ್ಷಾತೀತವಾದ! ಮಾಧ್ಯಮಗಳ ಬಣ್ಣದ ವೇಷಗಳು ಜೈಲಿನ ಒಂಟಿ ಕೋಣೆಯೊಳಗೆ ನೋವಿನಿಂದ ಕುಳಿತ ಹುಸೇನಿಯ ಕಣ್ಮುಂದೆ ರಿಂಗಣ ಹಾಕತೊಡಗಿದವು. ಮೂಕಾಂಬಿಕೆ ಕಣ್ಣೆದುರೇ ಸುಟ್ಟು ಹೋಗಿದ್ದು, ದುಬೈನಿಂದ ಹಿಂತಿರುಗಬೇಕಿರುವ ಮಗನ ಬಗ್ಗೆ ಏನೂ ತಿಳಿಯದಿರುವುದು ಅವನನ್ನು ಪ್ರಪಾತಕ್ಕೆ ಬೀಳಿಸಿದ್ದವು. ನೋವಿನಿಂದ ನರಳುತ್ತಾ ಅಂಕಣ್ಣ ಮೊಗೇರರ ದಾರಿಯನ್ನು ಕಾಯುತ್ತ ಕತ್ತಲಲ್ಲಿ ಕುಸಿದ.

ಮಾರನೆಯ ದಿನ ಕಾರಾಗೃಹದಲ್ಲಿದ್ದ ಹುಸೇನಿಗೆ ಮುಟ್ಟಿದ ಸುದ್ದಿ: ದುಬೈನಿಂದ ಹಿಂದಿರುಗಿದ ಸಲೀಮನನ್ನು ಮಂಗಳೂರಿನಲ್ಲಿ ತಪಾಸಣೆಗೆ ಒಳಪಡಿಸಿದಾಗ, ಅವನಲ್ಲಿದ್ದ ವಿದ್ಯುನ್ಮಾನ ಉಪಕರಣದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದ ಮಾಹಿತಿಯ ಜಾಲ ಪತ್ತೆಯಾಗಿದೆ. ಅವನನ್ನು ದಸ್ತಗಿರಿ ಮಾಡಲಾಗಿದೆ. ಕರಾವಳಿಯ ಕಾಡಿನಲ್ಲಿ ಮತ್ತೆ ಬೆಂಕಿ ಹತ್ತಿತು. ದನದ ಮಾಂಸದ ಸಾಗಣೆಯಲ್ಲಿ ಸಿಕ್ಕಿಬಿದ್ದ ಲಾರಿ ಚಾಲಕನ ಮಗನೇ ಉಗ್ರಗಾಮಿ ಸಂಘಟನೆಯ ಸಂಚುಗಾರನಾಗಿದ್ದು, ಅಲ್ಪಸಂಖ್ಯಾತರ ಮತ ಬ್ಯಾಂಕಿನ ರಾಜಕಾರಣವೆಂದು, ಧಾರ್ಮಿಕ ಮತಾಂಧರ ವಿಕೃತಿ ಎಂದು, ಸಧ್ಯದಲ್ಲಿಯೇ ಬರುತ್ತಿರುವ ಚುನಾವಣಾ ತಂತ್ರಗಳೆಂದು, ದೇಶದ್ರೋಹವೆಂದು, ಆ ಕಾಡಿನ ಪ್ರಾಣಿಗಳೆಲ್ಲವೂ ತಮ್ಮ ಅಮೇಧ್ಯವನ್ನು ಪರಸ್ಪರ ಎರಚಾಡಿಕೊಂಡವು! ದಸ್ತಗಿರಿಯಾಗಿ ತಾನಿದ್ದ ಜೈಲಿಗೇ ಬಂದ ಸಲೀಮನನ್ನು ಕಾಣುವ ಗಳಿಗೆಯೂ ಹುಸೇನಿಗೆ ಬಂತು.

‘… ಅಂಕಣ್ಣ ಮೊಗೇರರಿಗೆ ಆಗದವರು ಮೀನಿನ ಡಬ್ಬಗಳ ಮಧ್ಯೆ ದನದ ಮಾಂಸದ ಪೆಟ್ಟಿಗೆಯನ್ನಿಟ್ಟಿದ್ದರು. ತಾವೇ ಇಟ್ಟಿದ್ದ ಮಾಂಸವನ್ನು ತಾವೇ ತೆಗೆದು ತೋರಿಸಿದರು ಮೋನೆ…’

‘…. ಕುತ್ತುಪ್ಪಾಡಿಯ ಮುಖಂಡರ ಸ್ನೇಹಿತರೊಬ್ಬರು ಈ ವಿದ್ಯುನ್ಮಾನ ಯಂತ್ರವನ್ನು ತನ್ನ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ್ದೇನೆ ತಲುಪಿಸು ಎಂದರು… ಅಬ್ಬಾಜಾನ್…’

‘…ಮೋನೆ, ನಿಮ್ಮನ್ನೆಲ್ಲಾ ಸಾಕಿದ ನನ್ನ ಮೂಕಾಂಬಿಕೆ ಬೆಂಕಿಯಲ್ಲಿ ಸುಟ್ಟು ಹೋದಳು..’

‘… ಅಬ್ಬಾಜಾನ್ ನಮ್ಮನ್ನೆಲ್ಲಾ ತುತ್ತು ನೀಡಿ ಸಾಕಿದ್ದ ಅಮ್ಮಿ ಎದೆಯೊಡೆದು ಸತ್ತು ಹೋದಳು’

ಅವರಿಬ್ಬರೂ ಬಿಡುಗಡೆಯಾಗುವುದಕ್ಕೂ ಮುಂಚೆಯೇ ಚುನಾವಣೆ ಬಂತು. ಎರಡೂ ಕಡೆಯ ಬಾವುಟಗಳು ಹಾರಾಡಿದವು. ಘೋಷಣೆಗಳು ಮೊಳಗಿದವು. ಕುತ್ತುಪ್ಪಾಡಿಗೂ ಚುನಾವಣೆ ಬೆಂಕಿ ಹಬ್ಬಿತು. ‘ನಾವು ನಿಮಗೆ ರಕ್ಷಣೆ ಕೊಡುತ್ತೇವೆ’ ಎಂದರು ಇವರು, ‘ನೀವು ಮತ ಬ್ಯಾಂಕುಗಳಾಗಬೇಡಿ’ ಅಂದರು ಅವರು. ಎರಡೂ ಅರ್ಥವಾಗದ ಹುಸೇನಿಯ ಹೆಣ್ಣುಮಕ್ಕಳಿಬ್ಬರು ಓಟು ಹಾಕಿ ಬಂದರು. ಅಟ್ಟದ ಮೇಲಿದ್ದ ಹಳೆಯ ಪೆಟ್ಟಿಗೆಯನ್ನು ತೆರೆದರು. ಅದರೊಳಗೆ ಮಸಿ ಹಿಡಿದ ಧರ್ಮಗ್ರಂಥದ ಜೊತೆಗೇ ಯಲ್ಲವ್ವನ ಬೆಳ್ಳಿ ವಿಗ್ರಹವೂ ಇತ್ತು. ಅವರಿಗೇನೂ ಅರ್ಥವಾಗದೆ ಹಾಗೆಯೇ ಮುಚ್ಚಿ ಅಟ್ಟಕ್ಕೆ ಎಸೆದರು. ಅಪ್ಪ ಮತ್ತು ಅಣ್ಣ ಬರುವುದನ್ನೇ ಕಾಯುತ್ತ ಬೀಡಿ ಹೊಸೆಯಲು ಪ್ರಾರಂಭಿಸಿದರು.

ವ್ಯಾಪಾರ ಕುಸಿದು ಬಿದ್ದ ಅಂಗಡಿಯ ಮುಂಗಟ್ಟೆಯಲ್ಲಿ ಕುಳಿತ ಅಂಕಣ್ಣ ಮೊಗೇರರ ಕಣ್ಮುಂದೆ ವಿಟ್ಟುಪೈ, ಹುಸೇನಿಯ ಅಮ್ಮಿ, ಸಾಗಿ ಹೋದರು. ಈ ಚುನಾವಣೆಯ ಫಲಿತಾಂಶವೇನಾಗಬಹುದು? ಹುಸೇನಿ-ಸಲೀಮರಿಗೆ ಬಿಡುಗಡೆಯಾಗಬಹುದೆ? ಎಂದು ಯೋಚಿಸುತ್ತ ಚಿಂತಾಕ್ರಾಂತರಾಗಿ ಕಡಲನ್ನು ನೋಡುತ್ತಾ ಕುಳಿತರು.

*****
ಸಮಕಾಲೀನ ಸಾಮಾಜಿಕ ಸಮಸ್ಯೆಯೊಂದನ್ನು ಕಥೆಯಾಗಿಸುವ ಸವಾಲು ಎದುರಾಯಿತು. ಜಾತಿ ಮತ್ತು ಧಾರ್ಮಿಕ ಸಂಘರ್ಷಗಳಲ್ಲಿ ಅಟ್ಟಹಾಸಗೈಯುವ ರಾಜಕೀಯ ಪ್ರೇರಿತ ಅಮಾನವೀಯತೆಯ ಅಟ್ಟಹಾಸಕ್ಕೆ ಬಲಿಯಾಗುವ ಮುಗ್ಧ ಮತ್ತು ಶೋಷಿತ ಜನರ ಬದುಕನ್ನು ನೋಡುತ್ತಿರುವ ಈ ವರ್ತಮಾನವನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ಹುಸೇನಿ, ಹನುಮಕ್ಕ ಮತ್ತು ಅವರ ಮಕ್ಕಳಿಗೆ ಆದರ್ಶದ ಗೀಳಿಲ್ಲ, ಆದರೆ ಅವರ ಮುಗ್ಧ ಬದುಕೆ ಆದರ್ಶವಾಗಿದೆ. ಪ್ರಾಮಾಣಿಕ ಕೆಲಸವಲ್ಲದೆ ಹುಸೇನಿಗೆ ಮತ್ತಾವುದೂ ಗೋತ್ತಿಲ್ಲ, ಮೂಕಾಂಬಿಕೆ ಅವನಿಗೆ ಕೇವಲ ಲಾರಿಯಲ್ಲ, ಅವನ ಪ್ರೀತಿಯ, ನಂಬಿಕೆಯ ಜೀವನಾಧಾರ, ಅದು ನಿರ್ಜೀವವಲ್ಲ, ಅವನಿಗೆ ಜೀವಂತ ಬಂಧು. ಅವನ ಸಂಸಾರಕ್ಕೆ ಧರ್ಮ ಅಡ್ಡ ಗೋಡೆಯಾಗಿರಲಿಲ್ಲ. ಆದರೆ ಧಾರ್ಮಿಕ ಮತಾಂಧತೆ ಅವನ ಸಂಸಾರವನ್ನೆ ಬಲಿ ತೆಗೆದುಕೊಳ್ಳುವ ಧಾರುಣ ವರ್ತಮಾನದ ಸತ್ಯಗಳನ್ನು ಕ್ರೀಯಾಶೀಲ ಕಲಾಕೃತಿಯನ್ನಾಗಿ ರೂಪಿಸಬೇಕಾಯಿತು. ಅತಿ ಸಂಕೀರ್ಣವಾದ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿರೂಪಿಸಲು ಅಗತ್ಯವಾದ ಸಾಂದ್ರತೆಯನ್ನು ಕಲಾಕೃತಿಯಲ್ಲಿ ಅಳವಡಿಸಲು ಪ್ರಯತ್ನಿಸಿದ್ದೇನೆ. ಯಾವುದೇ ರೂಪಕಗಳ ಮತ್ತು ಅನವಶ್ಯಕ ತಂತ್ರಗಳನ್ನು ಬಳಸದೆ ನೇರವಾಗಿ ಕಥೆ ಹೇಳಿದ್ದೇನೆಂದು ತೃಪ್ತಿಯಿದೆ. ಸಾಂದ್ರತೆ, ಸಂಕ್ಷಿಪ್ತತೆ ಮತ್ತು ಪರಿಣಾಮಕಾರಿ ನಿರೂಪಣೆಯೇ ಈ ಕಥೆಯ ಹೆಗ್ಗಳಿಕೆಯೆಂಬ ಭಾವನೆ ನನ್ನದು. ಜೀವಂತ ಸಮಸ್ಯೆಯ ಕ್ರೀಯಾಶೀಲ ಅಭಿವ್ಯಕ್ತಿಯಾಗಿರುವ ಈ ಕಥೆ ನನ್ನ ಆಯ್ಕೆಯಾಗಿದೆ.