ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ ಗೇರು ಹಿತ್ತಲಿನ ಜಿಗ್ಗು ತರುವಷ್ಟು ಗಟ್ಟಿಯಾಗುತ್ತಿದ್ದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಛಾಯಾ ಭಟ್‌ ಕತೆ ‘ಮಾಕಬ್ಬೆ’ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

 

ಎಂದೂ ಮುಸುಕಲು ಹಾಕಿ ಮಲಗದ ಪರಮು ಕಂಬಳಿಯ ಜೊತೆಗೆ ಎರಡು ಚಾದರವನ್ನೂ ಸೇರಿಸಿದ ಹೊದಕಲೊಳಗೆ ಸಣಕಲು ಶರೀರವನ್ನು ಬಿಲ್ಲಿನಂತೆ ಕುಗ್ಗಿಸಿ ನಿಗಟಿಕೊಂಡು ನಿದ್ದೆ ಬಂದಿದೆ ಎಂದು ತನ್ನನ್ನೇ ತಾನು ನಂಬಿಸಲು ಪ್ರಯತ್ನಿಸುತ್ತಿದ್ದ. ಮನಸ್ಸು ಈಗಲೂ ತಹಬಂದಿಗೆ ಬಂದಿರಲಿಲ್ಲ. ಮಾಕಬ್ಬೆಯ ಜಮಟೆಯಂತಹ ಬಾಯಿಯಿಂದ ಬೈಗುಳದ ಹೊರತಾಗಿ ಬೇರೇನೂ ಬಂದಿದ್ದು ಇಲ್ಲಿಯವರೆಗೆ ಯಾರೂ ಕೇಳಿರಲಿಕ್ಕಿಲ್ಲ. ನಮ್ಮ ಭಾಷೆ ಅವಳೊಟ್ಟಿಗೆ ಸೇರಿ ಇಷ್ಟೊಂದು ಕೆಳಮಟ್ಟಕ್ಕೂ ಇಳಿಯಬಹುದೇ ಅಂತ ಸಂದೇಹ ಮೂಡಿಸುವಂತಿರುತ್ತಿತ್ತು. ಸೊಂಟದ ಕೆಳಗಿನ ಭಾಷೆಯ ಹೊರತಾಗಿ ಅವಳ ಮುಖದ ಮೇಲಿರುವ ಬಾಯಿ ಬೇರೆ ಆಡಿದ್ದೇ ಇಲ್ಲ. ಒಂದು ಮಾತೂ ಕೆಳಗೆ ಬೀಳಲು ಕೊಡದಷ್ಟು ಕಾಲು ಕೆರೆದು ಜಗಳಕ್ಕಿಳಿಯುತ್ತಿದ್ದವಳು ಈಗ ಯಾರ ಮಾತಿಗೂ ಸಿಗದಷ್ಟು ದೂರ ಹೋಗುತ್ತಿದ್ದಾಳೆ!! ಬೆಚ್ಚಗಿನ ಚಾದರದೊಳಗೆ ಇದ್ದಷ್ಟೂ ಹೊತ್ತು ಹೊರಗಿನ ಹಂಗಿಲ್ಲವೆಂಬಂತೆ ಮಲಗಿದ ಪರಮುವಿಗೆ ಮಾಕಬ್ಬೆಯ ಗುಂಗು ಬೇಡವೆಂದು ತಳ್ಳಿದರೂ ತಾನಾಗಿ ಮತ್ತೆ ತನ್ನತ್ತ ಸೆಳೆದುಕೊಳ್ಳುತ್ತಿತ್ತು.. ಅಬ್ಬರದ ಸಮುದ್ರದ ಸುಳಿ ಎಳೆದೆಳೆದು ಕೆಳಗಿಳಿಸಿಬಿಟ್ಟಂತೆ.

ಮಾಕಬ್ಬೆಯ ಕ್ಷೀಣಗೊಳ್ಳುತ್ತಿರುವ ಉಸಿರು, ಅವಳೊಂದಿಗೆ ಹಂಚಿಕೊಂಡ ದಿನಗಳನ್ನು, ಕೆಲೆತ-ಹೊಡೆತಗಳನ್ನು, ಕಾಗೆ ಎಂಜಲು ಮಾಡಿ ಹಂಚಿ ತಿಂದ ಕದ್ದು ತಂದಿದ್ದ ನೆಲ್ಲಿ- ಪೇರಲೆಗಳನ್ನು. ಹೀಗೆ ಏನೇನೋ ಬಹಳಷ್ಟನ್ನು. ಒಟ್ಟಿನಲ್ಲಿ ಇಂದಿನವರೆಗಿನ ಬದುಕಿನ ದೊಡ್ಡ ತುಕಡಿಯನ್ನೇ ಬರಿದುಮಾಡುವ ಹುನ್ನಾರದಲ್ಲಿತ್ತು. ಮಾಕಬ್ಬೆಯ ಮುಸುಡಿ ನೋಡುವುದೂ ಅಸಹ್ಯವಾಗಿದ್ದು ಸುಳ್ಳೆನಿಸುವಷ್ಟು ಅವಳು ತನ್ನೊಳಗೆ ಇಳಿದಾಳು ಎಂಬ ಕಲ್ಪನೆ ಇಲ್ಲಿವರೆಗೂ ಬಂದಿದ್ದೇ ಇಲ್ಲ. ಕಂಗಾಲಾದ ಪರಮು.. ಬೆಚ್ಚಗಿನ ಚಾದರದೊಳಗೂ ದವಡೆ ನೋವು ಬರುವಷ್ಟು ನಡುಗುತ್ತಿದ್ದ. ಎಲ್ಲೇ ಅಡಗಿ ಮುಡುಗಿದರೂ ಕಳೆಯದ ನಿನ್ನೆಯ ನೆರಳು. ಚಾದರದ ಕತ್ತಲೆಯೊಳಗೆ ಇನ್ನೂ ಢಾಳವಾಗಿತ್ತು.

ಪರಮುವಿಗೆ ವರ್ಷ ಹತ್ತಾಗುವವರೆಗೂ ‘ಮಹಾಲಕ್ಷ್ಮಿ’ ಮಾಕು ಚಿಕ್ಕಿಯೇ ಆಗಿದ್ದಳು. ಅವರಿಬ್ಬರೂ ಏರದ ಮರಗಳಿಲ್ಲ, ಆಡದ ಆಟಗಳಿಲ್ಲ, ಮಾಡದ ಕೆಲಸಗಳೇ ಇಲ್ಲ. ತಾಯಿಯ ಸಣ್ಣ ತಂಗಿ ಮಾಕು ಚಿಕ್ಕಿಗಿಂತ ಗೆಳತಿಯಾಗಿ ಪರಮುವಿಗೆ ಹತ್ತಿರವಾದವಳು. ಬರೀ 4 ವರ್ಷಕ್ಕೆ ದೊಡ್ಡವಳು. ಹಿತ್ತಲಿನ ತೆಂಗು, ಗೇರು, ಹೊನ್ನೆಗಳಿಗೂ ಇವರ ಸ್ನೇಹ ಖುಷಿಯನ್ನೇ ಕೊಟ್ಟಿತ್ತು. ಪರಮುವಿನ ಮೂಗಲ್ಲಿ ಸೊರ ಬರ ಸಪ್ಪಳ ಮಾಡುತ್ತ ಕೆಳಗಿಳಿವ ಹಳದಿ ಬಣ್ಣದ ಗೊಣ್ಣೆಯಾಗಲೀ, ಮಾಕುವಿನ ತಲೆ ತುಂಬ ಬಳ ಬಳ ಹರಿದಾಡುವ ಹೇನು, ರೆಪ್ಪೆಯಾಗಿ ಕೂದಲಿನ ಎಳೆ ಎಳೆಗೂ ಅಂಟಿದ ಸೀರಾಗಲಿ ಇವ್ಯಾವುದೂ ಅಸಹ್ಯ ಹುಟ್ಟಿಸುವುದು ಅಂತಿರಲಿ, ಲೆಕ್ಕಕ್ಕೂ ಬರುತ್ತಿರಲಿಲ್ಲ. ಇವರ ಸ್ನೇಹಕ್ಕೂ, ಬಾಂಧವ್ಯಕ್ಕೂ, ಪ್ರೀತಿಗೂ ಕಣ್ಣಿರಲಿಲ್ಲ.

ಎಲ್ಲವೂ ಇಷ್ಟು ಸುರಳೀತ ನಡೆಯುತ್ತಿರುವಾಗ ಅದೆಂಥದ್ದೋ ವಿಷ ಘಳಿಗೆ, ಪರಮುವನ್ನು ಒಂಭತ್ತು ತಿಂಗಳು ಹೊತ್ತು, ಹೆತ್ತ ಅಬ್ಬೆ ಮತ್ತೊಂದು ಗಂಡು ಶಿಶುವನ್ನು ಹಡೆಯುವಾಗ ನಂಜೇರಿ ತೀರಿಕೊಂಡುಬಿಟ್ಟಳು. ಹೊಟ್ಟೆಯಲ್ಲಿದ್ದ ಶಿಶು ಕಬ್ಬಿ ಮಾಡಿಯೇ ಹಸಿ ಬಾಳಂತಿಗೆ ನಂಜೇರಿದ್ದು ಅಂತ ಊರಿನ ಹೆಂಗಸರಿಗೆಲ್ಲ ಹಡೆಸಿದ ಕೊಂಕಣಿ ಅಜ್ಜಿ ಕಾರಣ ಕೊಟ್ಟಾಗ ಪರಮುವಿನ ಅಪ್ಪ ಹುಟ್ಟುತ್ತಲೇ ಅಬ್ಬೆ ಕೊಂದು, ತಾನೂ ಉಸಿರು ನಿಲ್ಲಿಸಿದ ಶಿಶುವಿಗೆ ಮುಷ್ಟಿಯಲ್ಲಿನ ಹಿಡಿ ಮಣ್ಣನ್ನು ಗಾಳಿಯಲ್ಲಿ ತೋಕುತ್ತ ಹಿಡಿಶಾಪ ಹಾಕಿ ಬೊಬ್ಬೆ ಹೊಡೆದು ಕೂಗುತ್ತಿದ್ದ. ದುಃಖ ಮರುದಿನದವರೆಗೇನೂ ಮುಂದುವರಿಯಲಿಲ್ಲ. ಎಂದಿನಂತೆ ದೋಸೆ ಬಂಡಿಯ ಮೇಲೆ ಹಸಿ ಹಿಟ್ಟು ಚಾಟಿ ದೋಸೆಯಾಗಿ ಬೇಯುತ್ತಿತ್ತು. ದೋಸೆ ಹೊಯ್ಯುತ್ತಿದ್ದದ್ದು ಮಾತ್ರ ಪಕ್ಕದ ಮನೆಯ ಗೌರಕ್ಕ. ಅಪ್ಪ ಸೂತಕ ಅಂತ ದೋಸೆ ದಿನಕ್ಕಿಂತ ಕಮ್ಮೀನೂ ತಿನ್ನಲಿಲ್ಲ.

ಇಷ್ಟಾಗಿ ವಾರ ಕಳೆದಿತ್ತೋ ಇಲ್ಲವೋ, ಮಾಕು ಮರ ಹತ್ತುವುದಿರಲಿ ಮನೆಯಿಂದ ಹೊರಬರುವುದನ್ನೂ ನಿಲ್ಲಿಸಿದಳು. ಅಜ್ಜಿಮನೆ ಪರಮುವಿಗೆ ದೂರವೇನಲ್ಲ ಮಾಕು ಬರದ ಕಾರಣ ತಿಳಿದು ಬರಲು. ಅಮ್ಮನಿಲ್ಲದ ಮನೆ, ಕಾಯಲು ಒಬ್ಬರು ಬೇಕಲ್ಲ!! ಮನೆ ಬಿಟ್ಟು ಹಿತ್ತಲ ದಣಪೆ ದಾಟುವಂತಿಲ್ಲ, ಅಂತ ಅಪ್ಪ ಮೊದಲೇ ಹೇಳಿದ್ದ.

ಅಷ್ಟರಲ್ಲಾಗಲೇ ಮಕ್ಕಳಿಗೆ ಪ್ರೀತಿ ಬೇಕು ಅಂತ ಪರಮುವಿನ ಮನೆ ತುಂಬಾ ಹುಯಿಲೋ ಹುಯಿಲು, ಬೊಜ್ಜದ ಮನೆಯಲ್ಲಿ ಜಾತಕ ನೋಡುವ ಕೆಲಸ. ಪತಂಗದ ಮರುದಿನವೇ ಮನೆ ಕಾಯಲಿಕ್ಕಾಗೋ, ಮಕ್ಕಳಿಗೆ ಪ್ರೀತಿ ಕೊಡುವುದಕ್ಕಾಗೋ ಮಾಕು ಚಿಕ್ಕಿಯೇ ಅಬ್ಬೆಯ ಜಾಗಕ್ಕೆ ಬರುವಳು ಎಂದು ಯಾರಿಗೆ ಗೊತ್ತಿದ್ದಿತ್ತು!! ಪರಮುವಿಗೆ ಮೊದ ಮೊದಲು ಆಟಕ್ಕೆ ಮಾಕು ಚಿಕ್ಕಿ ಮನೆಯಲ್ಲೇ ಇರುತ್ತಾಳಲ್ಲ ಅಂತ ಖುಷಿ ಆಗಿದ್ದು ಹೌದು. ಆದರೆ ಅಬ್ಬೆಯ ಪಾತ್ರದಲ್ಲಿ ಮಾಕುವಿಗೆ ಬೇರೆಯದೇ ಜವಾಬ್ದಾರಿಗಳಿದ್ದವಲ್ಲ!

ಕಾವೇರಿ ಪರಮುವಿನ ಹೆಂಡತಿ; ಹಿಸೆಯಲ್ಲಿ ಬಂದ, ಒಂದು ಕಾಲದಲ್ಲಿ ಅಬ್ಬೆ ಚಾಟಿ ಎರೆಯುತ್ತಿದ್ದ ಅದೇ ಬಂಡಿಯ ಮೇಲೆ ದೊಸೆಯನ್ನು ಚೊಯ್ಯೆನಿಸುತ್ತ ‘ಹೋಯ್, ಕೇಳಿಸ್ತಾ. ಆಚೆ ಮನೆ ಗಿರಿಜತ್ತಿಗೆಗೆ ಹುಳಿಗೆ ಬೀಸಾತು. ಕುಕ್ಕರ್ರು ಕೂ ಹೊಡೆದದ್ದು ಆಗಲೇ ಕೇಳಿಸಿತ್ತು. ಆಸ್ರಿಗೆ ಬರಲೇ ಇಷ್ಟು ಹೊತ್ತು ಮಾಡಿದ್ರೆ ನಾನು ಅಡಿಗೆ ಕಾಣಿಸುವುದು ಯಾವಾಗ?” ಜಗುಲಿಗೆ ಮಲಗಿದ ಪರಮುವಿಗೆ ಕೇಳಲೆಂದು ಒದರಿದಳು.
ದೋಸೆ ಬಂಡಿ ಗಾರು ಬಡಿದು, ಗುಮ್ಮನಂಥ ಕರಿ ಹೊಗೆ ಮೇಲೇರಿ ದಬ್ಬೆಗೆ ಕಟ್ಟಿದ್ದ ಈರುಳ್ಳಿ ತೊಪ್ಪೆಗೆ ಮತ್ತಷ್ಟು ಮಶಿ ಹಿಡಿಸುತ್ತಿತ್ತು. ಗಾರೆದ್ದ ಬಂಡಿಯ ಮೇಲೆ ಎರೆದ ದೋಸೆ ಮೇಲೇಳದೆ ಕತ್ತುತ್ತದೆ ಎಂದು ನೆನಪಿಸಿಕೊಂಡು ಕಾವೇರಿ ಎದುರಿಗೆ ಬಂದವರನ್ನೆಲ್ಲ ಇರಿಯುವ ಕೆಂಪು ಹೋರಿಯಂತೆ ಕಂಡದ್ದರ ಮೆಲೆಲ್ಲ ಸಿಟ್ಟು ತೋರಿಸುತ್ತಿದ್ದಳು.

‘ಮಾಕಬ್ಬೆ ಸಾಯಲು ಬಿದ್ದು ತಿಂಗಳಾಗ್ತಾ ಬಂತು.. ಇದೇನು ತೀರಾ ಸಾಯಬಾರದ ವಯಸ್ಸೇನಲ್ಲ. ಇದ್ದು ಹರಿಯುವಾದದರೂ ಎಂತನ್ನ. ಕೂಳಿಗೆ ದಂಡ, ಭೂಮಿಗೆ ಭಾರ. ಈಗ ಆಗಬಾರದ್ದು ಎಂತೋ ಆದವರಂತೆ ಹಿಂಗೆಲ್ಲ ವಿಶ್ರೂಪ ಮಾಡುತ್ತಾ ಕುಂತರೆ ಊರವರು ಸುಮ್ಮನೆ ಉಳೀತ್ವಾ? ಇದ್ದಾಗ ಕರೆಯದವರು ಸತ್ತಾಗ ಅಳ್ತಿದ್ದ ಅಂತ ಆಡಿಕೊಂಡು ನಗ್ತ.’ ಕಾವೇರಿಯ ದನಿ ಕೇರಿಯನ್ನೂ ದಾಟಿ ಹೋಗುತ್ತಿದ್ದರೂ ಪರಮುವಿನ ತಮಟೆಯತ್ತ ಹಾಯಲಿಲ್ಲ.

ಕಾವೇರಿಯ ದನಿಯ ಜೊತೆಯಾಗಿ ಜಗುಲಿಯ ಗೊಡೆಗೆ ನೇತು ಹಾಕಿದ್ದ ಗಡಿಯಾರದ ಲೋಲಾಕು ಹತ್ತು ಬಾರಿ ಢಣ ಢಣಗುಡುತ್ತಿತ್ತು. ಲೋಲಾಕಿರುವ ಪೆಂಡ್ಯುಲಮ್ ಗಡಿಯಾರ ಕಾವೇರಿಯ ದೌಲತ್ತು, ಅಪ್ಪನ ಮನೆಯಿಂದ ಮದುವೆಯ ಉಡುಗೊರೆಯಾಗಿ ಬಂದಿದ್ದು. ರಾತ್ರಿ, ಹಗಲೆನ್ನದೆ ಹನ್ನೆರಡು ಗಂಟೆಯಾದಾಗ ಹನ್ನೆರಡು ಬಾರಿ ಢಣಗುಟ್ಟುತ್ತದೆ ಎಂದೇ ಪರಮುವಿಗೆ ಗಡಿಯಾರ ಕಂಡರೆ ಆಗದು. ಗಡಿಯಾರದ ಮೇಲಿನ ಸಿಟ್ಟನ್ನು ಕಾವೇರಿಯೆದುರು ಎಲ್ಲಾದರೂ ತೋರಿಸುವುದುಂಟೇ, ದುಣ್ಣ ಕಲ್ಲಿನಡಿಗೆ ಬೇಕಂತಲೇ ಕಾಲಿಟ್ಟಷ್ಟೇ ಕಷ್ಟ ಅಂತ ಗೊತ್ತು ಅವನಿಗೆ.

ಕಡೆಗೂ ನಿದ್ದೆಯಿಂದ ಎದ್ದು ಬಂದವರಂತೆ ಉದ್ದುದ್ದ ಆಕಳಿಕೆ ಹೊಡೆಯುತ್ತ ಗತಿಯಿಲ್ಲದೆ ಪರಮು ಪಡಿಮಾಡಿಗೆ ಬಂದ. ಪರಮುವಿನ ಬೆಳಗ್ಗಿನ ದಿನಚರಿಯಾದ ಕೊಟ್ಟಿಗೆ ಚಾಕರಿಗೆ ಮಗ ಆಗಲೇ ಹೋಗಿಯಾಗಿತ್ತು, ಸೋಮಾರಿಯಲ್ಲದಿದ್ದರೂ ಪರಮುವಿಗೆ ಆ ಕ್ಷಣದ ಆಲಸ್ಯಕ್ಕೆ ಎದ್ದು ಛಕಾಛಕ್ ಯಾವ ಕೆಲಸವನ್ನೂ ಮಾಡುವ ಮನಸ್ಸಿರಲಿಲ್ಲ.

ಅಡುಗೆ ಓರಿಯಲ್ಲಿ ಬಂಡಿಯ ಜೊತೆ ತಾನೂ ಗಾರೆದ್ದ ಕಾವೇರಿ ಎರಡು ಹರಕು ದೋಸೆಯನ್ನು ಎರೆದು ಪರಮುವಿನ ಬಾಳೆ ಕೀಳೆಯ ಮೇಲೆ ಕುಕ್ಕಿದಳು. ದಣಿ ಹಲ್ಲುಜ್ಜಿ ಬಂದದ್ದಕ್ಕೋ, ದೋಸೆ ಹೊತ್ತಿದ್ದಕ್ಕೋ ಏನೋ ದೋಸೆಯ ಕಹಿ ಗಂಟಲಲ್ಲಿ ಇಳಿಯುತ್ತಲೇ ಇರಲಿಲ್ಲ ಪರಮುವಿಗೆ.
‘ಬಡ ಬಡನೆ ಪೂಜೆ, ನೈವೇದ್ಯ ಮಾಡಿ ಮುಗಿಸಿ. ಮಾಕಬ್ಬೆಯ ಸುದ್ದಿ ಬಂದರೆ ಪೂಜೆಯೂ ಇರ್ತಿಲ್ಲೆ. ಸಂಬಂಧ ಇಟ್ಟುಕೊಳ್ಳದವರ ಸೂತಕವನ್ನೂ ಮಾಡವು. ಕರ್ಮ ಖರ್ಮ.’

‘ಈ ಸಲ ಭಟ್ಟರ ಕರೆಸಿ ಮೂರೇ ದಿನದ ದಾಯಾದಿ ಆಗುವುದಿದ್ದರೆ ಏನೇನು ಮಾಡವೋ ಎಲ್ಲಾ ಕೇಳಿ ಮಾಡಬೇಕಾದ ಕೆಲಸಗಳನ್ನು ಮಾಡಿಸಿ ಮುಗಿಸಿಬಿಡುವಾ. ನನಗೂ ಯಾವತ್ತಿಗೋ ಸಾಕೆನಿಸಿದ್ದು ಹಾರುಬಿದ್ದ ಈ ಹಳಸಲು ಸಂಬಂಧಗಳ ಕಡಿವಾಣ’ ಪರಮು ಸೂಗುಟ್ಟ.

ಕುಳಿತಲ್ಲಿ ನಿಂತಲ್ಲಿ ಎಲ್ಲಾ ಕಡೆಯೂ ಪರಮುವಿಗೆ ಮಾಕಬ್ಬೆಯದೇ ಯೋಚನೆ, ಸಾಕೆನಿಸಿದ್ದು ಅವನಿಗೆ ಅವರ ಸಂಬಂಧವೂ ಇರಬಹುದು ಅಥವಾ ತಲೆಯಲ್ಲಿ ಹುಳ ಬಿಟ್ಟುಕೊಂಡಂತೆ ಚಿಂತಿಸಿ ಸುಣ್ಣವಾಗಿದ್ದು ಆಗಿರಲೂಬಹುದು. ಮಾಕಬ್ಬೆಯ ಸಾವಿನೊಂದಿಗೆ ಹಳೆಯ ನೆನಪುಗಳಿಗೆ, ಹಳೆಯದನ್ನು ನೆನಪಿಸುವ ಸಂಬಂಧಗಳಿಗೆ ಮುಕ್ತಿ ಕೊಡಬೇಕಾಗಿದೆ ಅಷ್ಟೇ.

ಪೂಜೆಗೆ ಹೂ ಕೀಳಲು ಹರಿವಾಣ ತಂದ ಪರಮು. ಗಂಟೆ ಹತ್ತರ ನಂತರವೂ ದೇವರಿಗೆ ಗಿಡದಲ್ಲಿ ಹೂವಿರಬೇಕೆಂದರೆ ಆಚೀಚೆ ಮನೆಯ ಭಕ್ತರು ಇಡುವರೇ? ಗಿಡದ ಹೂವುಗಳನ್ನು ಹತ್ತ ಬೋಳಿಸಲು ಗಿರಿಜತ್ತಿಗೆಯ ಗಂಡ ನಾಣಣ್ಣನೇ ಸಾಕು. ಕಾವೇರಿಯ ಬಾಯಲ್ಲಿ ಬೆಂಡಾಗಲು ಪೂಜೆಗೆ ಹೂವೂ ಇಲ್ಲ ಎಂಬ ಕಾರಣವೂ ಸೇರಿಕೊಳ್ಳುತ್ತದೆ ಈಗ ಎಂದು ಅಂಗಳ ದಾಟಿದ ಪರಮು. ಹರಿವಾಣದ ತುಂಬ ಹೂವು ತುಂಬಿಸುವುದಷ್ಟೇ ಈಗ ಪರಮುವಿನ ಉದ್ದೇಶ. ಬಾಡಿ ಬಕ್ಕಾಣೆಯಾದ ವಾರದ ಹಿಂದೇ ಬಿಟ್ಟ ಕಾಶೀ ಗೊಂಡೆಯ ಚಂಡಿಗೆಯನ್ನೆಲ್ಲ ಹರಿವಾಣ ತುಂಬುವಷ್ಟು ಕೀಳತೊಡಗಿದ, ಇವತ್ತಿನ ತನ್ನ ಪಾಲಿನ ಕೆಲಸ ಆಯಿತಾದರೆ ಸಾಕು ಎಂದುಕೊಂಡು. ಭಕ್ತಿಗಿಂತಲೂ ಭಕ್ತನ ಕೆಲಸವೇ ಮೇಲು ಎಂದು ತಿಳಿದು, ಅದಕ್ಕೆ ತಕ್ಕನಾಗಿ ನಡೆದುಕೊಂಡು ಬಂದವ ಇವನು.

ಅಂಗಳದಾಚೆಯ ದೂರ್ವೆ ಜಡ್ಡಿಯ ರಾಶಿಯ ಮೇಲೆ ಕಾಲಿಟ್ಟೇ ಕಾಶಿ ಗೊಂಡೆ ಹೂವು ಕೊಯ್ಯಲು ಹೋಗಬೇಕು. ಬೆಳಿಗ್ಗೆ ಕಾಲಡಿಗೆ ಸಿಕ್ಕಿ ಬಗ್ಗಿ ನಿಲ್ಲುವ ದೂರ್ವೆ ಸಾಯಂಕಾಲವಾಗುತ್ತಿದ್ದಂತೆ ಕಾವೇರಿ ಕೊಯ್ದು ತೊಳೆದರೆ ಗಣೇಶನ ಮುಡಿಗೇರುವಷ್ಟು ಮತ್ತೆ ಪವಿತ್ರವಾಗಿಬಿಡುತ್ತದೆ. ಕಾಲಡಿಗೆ ಸಿಕ್ಕ ನೋವು, ಮಲಿನಗೊಂಡ ಭಾವನೆ ಯಾವುದೂ ದೇವರಿಗೇರುವ ದೂರ್ವೆಗಿಲ್ಲ. ಯಾರದ್ದೇ ಕಾಲಡಿಗೆ ಆದರೂ ತನ್ನತನ ಕಳೆದುಕೊಳ್ಳದಿದ್ದರೆ ತುಳಿತಕ್ಕೊಳಗಾದ ನೋವು ಬಹಳ ಹೊತ್ತಿರದಲ್ಲವೇ, ಹಾಗೆ!!

ಮಾಕಬ್ಬೆಯ ಮುಸುಡಿ ನೋಡುವುದೂ ಅಸಹ್ಯವಾಗಿದ್ದು ಸುಳ್ಳೆನಿಸುವಷ್ಟು ಅವಳು ತನ್ನೊಳಗೆ ಇಳಿದಾಳು ಎಂಬ ಕಲ್ಪನೆ ಇಲ್ಲಿವರೆಗೂ ಬಂದಿದ್ದೇ ಇಲ್ಲ. ಕಂಗಾಲಾದ ಪರಮು.. ಬೆಚ್ಚಗಿನ ಚಾದರದೊಳಗೂ ದವಡೆ ನೋವು ಬರುವಷ್ಟು ನಡುಗುತ್ತಿದ್ದ. ಎಲ್ಲೇ ಅಡಗಿ ಮುಡುಗಿದರೂ ಕಳೆಯದ ನಿನ್ನೆಯ ನೆರಳು. ಚಾದರದ ಕತ್ತಲೆಯೊಳಗೆ ಇನ್ನೂ ಢಾಳವಾಗಿತ್ತು.

ತನ್ನತನವನ್ನು, ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಒಂದಾನೊಂದು ಕಾಲದಲ್ಲಿ ಮನೆ ಬಿಟ್ಟು ಓಡಿ ಹೋಗುವ ಯೋಜನೆಯಿತ್ತು ಪರಮುವಿಗೆ. ದೂರ್ವೆ ಮೆಟ್ಟು ನಿಂತಿದ್ದ ಕಾಲುಗಳ ಬುಡದಿಂದ ಮತ್ತದೇ ಹಳೆಯ ನೆನಪು ಆವರಿಸಿತು.

ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ ಗೇರು ಹಿತ್ತಲಿನ ಜಿಗ್ಗು ತರುವಷ್ಟು ಗಟ್ಟಿಯಾಗುತ್ತಿದ್ದಳು. ಅಬ್ಬೆಗೆ ಮತ್ತು ಅವಳ ಹಾಲು ಕುಡಿದ ಶಿಶುಗಳಿಗೆ ಅವಳೇ ಹಡೆದ ಮಕ್ಕಳಿಗೂ ಇರದ ಅದೇನೋ ಋಣವಿತ್ತು ಕಾಣಿಸುತ್ತದೆ. ಒಟ್ಟಿನಲ್ಲಿ ಮಾಕುಚಿಕ್ಕಿ ಮಾಕಬ್ಬೆಯಾಗುವುದು ಪರಮುವಿನ ಹಣೆಯಲ್ಲಿತ್ತು.

ಮದುವೆಯಾಗಿ ಬಂದ ಸ್ವಲ್ಪೇ ದಿನದಲ್ಲಿ ಅಪ್ಪನ ರಾತ್ರಿಯ ಕಿರಿಕಿರಿಗೆಲ್ಲ ಏರಿದ ಸಿಟ್ಟನ್ನು ಬೆಳಿಗ್ಗೆ ಎದ್ದು ಪರಮುವಿನ ಮೇಲೆ ತೆಗೆಯಲು ಶುರುವಿಟ್ಟುಕೊಂಡಳು ಮಾಕುಚಿಕ್ಕಿ. ಮಾಕು ಚಿಕ್ಕಿಯನ್ನು ಮಾಕಬ್ಬೆ ಅಂತ ಕರೆಯಲೇಬೇಕು ಅಂತಲೂ ಸಣ್ಣ ಹೊಡಪಡೆಯಾಯ್ತು. ಅಬ್ಬೆ ಅಂತ ತನ್ನ ಬಾಯಲ್ಲಿ ಕರೆಯಿಸಿಕೊಳ್ಳಬೇಕೆಂಬ ಹಠ ಅವಳಿಗೆ ಬಂದಿದ್ದು ಏಕೆ ಅಂತ ಈಗಲೂ ಪರಮುವಿಗೆ ಗೊತ್ತಿಲ್ಲ. ಅವಳ ದರ್ಪ ತನ್ನ ಮೇಲೆ ಹೇರಲು ಶುರುವಾಗಿದ್ದೇ ಇಲ್ಲಿಂದ ಅಂತ ಪರಮುವೂ ಎಣಿಸಿಬಿಟ್ಟ. ಅಂದಿನಿಂದ ಮಾಕು ಚಿಕ್ಕಿಯನ್ನು ಮಾಕಬ್ಬೆ ಅಂತಲೇ ಕರೆಯುತ್ತ ಬಂದ ಪರಮು.

ಮಾಕಬ್ಬೆ ಇನ್ನೂ ಚಿಕ್ಕಿಯಾಗಿದ್ದಾಗ ಕದ್ದು ತಂದಿದ್ದ ತಿಂಡಿಯನ್ನಾಗಲಿ ಅಥವಾ ಯಾರೇ ಕರೆದು ಕೊಟ್ಟಿದ್ದನ್ನೇ ಆಗಲಿ ಪರಮುವಿನೊಂದಿಗೆ ಹಂಚಿಕೊಳ್ಳದೆ ಅವಳೊಬ್ಬಳೇ ಎಂದೂ ತಿಂದಿದ್ದೇ ಇಲ್ಲ. ಸಣ್ಣ ಕೊಬ್ರಿ ಚೂರನ್ನೇ ಆದರೂ ಅವಳ ಹಳೆಯ ಲಂಗದ ಮಡಿಕೆಯಲ್ಲಿಟ್ಟು ಕಚ್ಚಿ ಭಾಗ ಮಾಡಿ ದೊಡ್ಡ ಪಾಲನ್ನೇ ಪರಮುವಿಗೆ ಕೊಡುತ್ತಿದ್ದಳು. ತಿಂಗಳೊಪ್ಪತ್ತಿನಲ್ಲಿ ಇದ್ದೊಬ್ಬ ಪ್ರೀತಿಯ ಗೆಳತಿಯೂ ಅಬ್ಬೆಯ ಜಾಗಕ್ಕೆ ಬಂದು ಬದಲಾಗುವಳು ಎಂದು ಎಣಿಕೆಯೂ ಇರಲಿಲ್ಲ ಪರಮುವಿಗೆ.

ಪರಮು ಕುಂತರೂ-ನಿಂತರೂ ಜಗಳ, ಉಂಡರೂ-ಉಗುಳಿದರೂ ಮಾಕಬ್ಬೆಯ ಜಗಳ ಇದ್ದಿದ್ದೇ… ‘… ನಿನ್ನಬ್ಬೆ ಅಂದ್ರೇ ಪ್ರೀತಿ ನಿನ್ನಪ್ಪಂಗೆ, ನಿನ್ನ ಹೊಟ್ಟೆ ತುಂಬಿಸವು ಹೇಳೇ ನನ್ನ ಕಟ್ಟಿಕೊಂಡದ್ದು. ನಿನ್ನಬ್ಬೆ ಮಾಡಿದ ಮೇಲಾರ ಮೈಗೆ ಹಿಡೀತಿತ್ತಡ, ನಾನು ಬೇಯಿಸಿದ್ದು ತಿಂದರೆ ಹೊಟ್ಟೆ ಉರೀತಡ’ ಅಂತ ಅಪ್ಪ ಮನೆ ಬಾಗಿಲು ದಾಟುತ್ತಿದ್ದಂತೆಯೇ ಗಲಾಟೆ ಶುರುವಾಗುತ್ತಿತ್ತು. ಮುಚ್ಚಿದ ಬಾಗಿಲ ಕೋಣೆಯೊಳಗೆ ಎಂಥೆಂತ ಮಾತಾಗುತ್ತಿತ್ತೋ, ತಪ್ಪು ಅಪ್ಪನದೋ ಮಾಕಬ್ಬೆಯದೋ, ಆದರೆ ಮಾಕಬ್ಬೆಗೆ ಸೌದೆ ಚೂರಿನಲ್ಲಿ ಬೀಳುವ ಕಡುಬು ಮಾತ್ರ ಎಲ್ಲರೆದುರು ಚೌಕಿಯಲ್ಲೇ ಬೀಳುತ್ತಿತ್ತು. ಆಗ ಮಾತ್ರ ತಪ್ಪು ಅಪ್ಪನದ್ದು ಎಂದೇ ಎನ್ನಿಸುತ್ತಿತ್ತು..

ಎಂದಿಗೂ ಗುಟ್ಟು ಮಾಡದ ಮಾಕುಚಿಕ್ಕಿ, ಅಬ್ಬೆ ಅಂತ ಕರೆಸಿಕೊಂಡಾಗಿನಿಂದ ಎಲ್ಲವನ್ನೂ ಮುಚ್ಚಟೆ ಮಾಡುತ್ತಿದ್ದಳು. ಮಾಕಬ್ಬೆಯ ಕಣ್ಣೀರು ಪರಮುವನ್ನು ಹಿಂಡಿದರೂ ಹೇಳಿ-ಕೇಳಿ ಮಾಡುವಂತಿಲ್ಲ, ಕೇಳಿದರೆ ಮತ್ತೆ ಮೈ ಮೇಲೆ ಏರಿ ಬಂದರೆ ಎಂದು!! ತನ್ನಿಂದ ಮಾಕಬ್ಬೆ ಇನ್ನೂ ದೂರಾದಳು ಎಂದು ಪರಮುವಿಗೆ ಎನ್ನಿಸಿದ್ದು ಅವಳು ಬೆಕ್ಕಿನ ಮರಿಯಂಥ ಸಣ್ಣ ಮಗನನ್ನು ಹಡೆದಾಗ. ಮಗುವಿನ ಸ್ನಾನಕ್ಕೆ ನೀರು ಹನಿಸಲು ಪರಮುವೇ ಬೇಕು, ಆದರೆ ಮಂಡಿ ನೋವು ಅಂತ ಮಾತ್ರ ಹೇಳುವಂತಿಲ್ಲ. ಹಾಗೇನಾದರೂ ಹೇಳಿದರೆ ಮಗುವಿಗೆ ಇನ್ನೂ ಹೆಚ್ಚು ಹೊತ್ತು ನೀರೆರೆಯುತ್ತಿದ್ದಳು. ಮಗ ಬೆಳೆದಂತೆ ಮಾಕಬ್ಬೆಯ ಸ್ವಾರ್ಥ, ಅಸೂಯೆಗಳೂ ಬೆಳೆಯಿತು. ಹಂಚಿ ತಿನ್ನುತ್ತಿದ್ದವಳು ಈಗ ಹುಗುಸಿಕೊಂಡು ಮಗನಿಗೆ ಮಾತ್ರ ಕೊಡುತ್ತಿದ್ದಳು.

ಅಬ್ಬೆ ದೂರಾದ ಮೇಲೆ ಇದ್ದೊಬ್ಬ ಗೆಳತಿಯನ್ನೂ ಅಪ್ಪ ಕಿತ್ತುಕೊಂಡ ಅಪ್ಪನೇ ಸ್ವಾರ್ಥಿ ಎಂದು ಮಾಕಬ್ಬೆಯನ್ನು ಪರವಹಿಸಿಕೊಂಡು ಯೋಚಿಸಿದಷ್ಟೂ ಮಾಕಬ್ಬೆಯ ಕುಟಿಲತೆ ಕಣ್ಣಿಗೆ ಕಟ್ಟುತ್ತಿತ್ತು. ಊಟ ತಿಂಡಿಯ ವಿಷಯ ಅಂತಿರಲಿ, ಬಟ್ಟೆ ಬರೆ, ಮಲಗುವ ಹಾಸಿಗೆ ಎಲ್ಲದಕ್ಕೂ ಸಿಕ್ಕಾಪಟ್ಟೆ ಗಲಾಟೆ. ಪರಮುವಿನ ಪಾಲಿಗೆ ಗನಾದೇನೂ ಸಿಗುವಂತಿಲ್ಲ, ಗಲಾಟೆ ಶುರು. ಅಪ್ಪ ಪರಮುವಿನ ಪರ ಮಾತಾಡಿದರೆ ಸಾಕು, ಮಾಕಬ್ಬೆ ಸಾಯುತ್ತೇನೆಂದು ಸಮುದ್ರಕ್ಕೆ ಓಡುತ್ತಿದ್ದಳು. ಎದೆ, ತಲೆ ಬಡಿದುಕೊಂಡು ವಕ್ಕಲ ಕೇರಿಗೆಲ್ಲ ಕೇಳುವಂತೆ ಅಳುತ್ತಿದ್ದಳು.. ಗಲೀಜು ಶಬ್ದಗಳಲ್ಲಿ ಕೆಲೆತವೂ ಶುರುವಾಗುತ್ತಿತ್ತು. ಕಣ್ಣು ಗುಡ್ಡೆ ಮೇಲೇರಿ ಸಿಕ್ಕಿ ಹಾಕಿಕೊಂಡಂತೆ, ಏದುಸಿರು ಬಂದು ಉಸಿರೇ ನಿಂತಂತೆಲ್ಲ ನಾಟಕ ಮಾಡಿ ಇದ್ದಬದ್ದವರ ಕೈಕಾಲು ಬಿಡಿಸುತ್ತಿದ್ದಳು. ಅಪ್ಪನೇ ಸೋತು ಸಮಾಧಾನ ಮಾಡಿದ ಮೇಲೆ ಪರಿಸ್ಥಿತಿ ಹಿಡಿತಕ್ಕೆ ಬರುತ್ತಿತ್ತು.

ಮಾಕಬ್ಬೆಗೆ ಹುಟ್ಟಿನಿಂದಲೂ ಇಷ್ಟೊಂದು ಹಠಮಾರಿತನ ಇತ್ತೇ!! ಸಾಯುವ ಬಯಕೆ ಇದ್ದರೆ ಮಾವಿನ ಕಾಯನ್ನು ಹಣ್ಣಿಗೆ ಹಾಕುವ ಕತ್ತಲೆ ಕೋಣೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ನೇಣು ಬಿಗಿದುಕೊಳ್ಳಬಹುದಲ್ಲವೇ ಅಂತ ಅವಳ ಸಾಯುವ ತವಕಕ್ಕೆ ಪರಿಹಾರ ಮನಸ್ಸಲ್ಲೇ ಕಂಡುಕೊಳ್ಳುತ್ತಿದ್ದ ಪರಮು.

ಮಾಕಬ್ಬೆಯ ಕ್ರೂರತನ ಅತಿಯಾಯಿತು ಎನ್ನಿಸಿದ್ದು ಅವಳು ಪರಮುವಿನ ಭವಿಷ್ಯಕ್ಕೇ ಮುಳ್ಳಾದಾಗ. ಮೆಟ್ರಿಕ್ ಪರೀಕ್ಷೆಯ ದಿನ ಬೆಳಿಗ್ಗೆ ಪರಮುವಿನ ಕಣ್ಣೆದುರೇ ಹಾಲ್ ಟಿಕೆಟ್ ಹರಿದೆಸೆದಿದ್ದಳು.. ಮಾಕಬ್ಬೆಯ ಮಗ ಶ್ರೀಧರನಿಗೆ ಅಂಗಿಯ ಗುಂಡಿ ಹಾಕಿದ್ದು ಸಮ ಆಗಲಿಲ್ಲ ಎಂದು ಅವ ಬೊಬ್ಬೆ ಹೊಡೆದ ಅಂತ ಪರಮುವಿನ ಹಾಲ್ ಟಿಕೆಟ್ ಹರಿದೆಸೆದು ಪರೀಕ್ಷೆಗೆ ಹೋಗದಂತೆ ಮಾಡಿಬಿಟ್ಟಿದ್ದಳು. ಇಷ್ಟೂ ದಿನ ಅಪ್ಪ ಕೆಟ್ಟವನಾಗಿದ್ದಕ್ಕೆ ಮಾಕಬ್ಬೆಯೂ ಹೀಗಾಡುತ್ತಿದ್ದಾಳೆ ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದ ಪರಮುಗೆ ಈಗ ತನ್ನ ಅಭಿಪ್ರಾಯವೇ ತಪ್ಪು ಅಂತ ಅನ್ನಿಸಿಬಿಟ್ಟಿತ್ತು..

ಜೀವನವೇ ರೋಸಿ ಬಂದಂತಾಗಿ ಇದಾದ ನಾಲ್ಕೇ ದಿನಕ್ಕೆ ಪರಮು ಓಡಿ ಹೋಗಲು ತಯಾರಾಗಿ, ಸಿಕ್ಕಿಬಿದ್ದ. ಯಥಾಪ್ರಕಾರ ಮಾಕಬ್ಬೆ ಎದೆ ಬಡಿದುಕೊಂಡು ಬಾಯಿಗೆ ಬಂದ ಕೆಟ್ಟ ಶಬ್ದಗಳಲ್ಲೆಲ್ಲ ಕೆಲೆಯುತ್ತ ‘ಮಲತಾಯಿ ಮನೆಬಿಟ್ಟು ಓಡಿಸಿ ಹಾಕ್ತು ಅಂತ ಊರವರು ನನ್ನ ಉಗಿಯಲಿ ಅಂತ ಓಡಿಹೋಗುತ್ತಿದ್ದ ಇವಾ’ ಎದೆ ಬಡಿದುಕೊಂಡು ಅತ್ತು ತನ್ನ ಖಾಯಮ್ ಚಾಳಿಯಂತೆ ಸಾಯಲು ಸಮುದ್ರಕ್ಕೆ ಓಡಿದಳು, ಅಪ್ಪನೂ ಅವಳ ಹಿಂದೆ ಓಡಿದ. ಅವಳನ್ನು ಸಾಯದಂತೆ ಹಿಡಿಯಲು.

ಪ್ರತಿದಿನದ ಇಂತಹ ನಾಟಕಕ್ಕೆ ತೆರೆ ಬೀಳಲು ರಾತ್ರಿ ಒಂದು ಗಂಟೆ ಹೊಡೆಯಬೇಕು. ಅಲ್ಲಿಯವರೆಗೂ ಕಣ್ಣೆವೆ ಮುಚ್ಚುವ ಹಾಗಿಲ್ಲ. ಹೀಗೆಯೇ ಒಂದಲ್ಲದಿದ್ದರೊಂದು ಗಲಾಟೆ ನಡೆಯುತ್ತಲೇ ದಿನಗಳುರುಳಿದವು.

ಒಂದು ಶುಭ ದಿನದಲ್ಲಿ ಮಾಕಬ್ಬೆಯೊಬ್ಬಳನ್ನು ಹೊರತುಪಡಿಸಿ ಮಿಕ್ಕ ಗುರು ಹಿರಿಯರೆಲ್ಲ ನಿಶ್ಚಯಿಸಿದ ಹೆಣ್ಣಿನೊಂದಿಗೆ ಪರಮು ಮದುವೆಯಾಗಿ ಬರುವುದರೊಳಗೇ ಹಿಸೆ ಆಗುವ ಬಗ್ಗೆ ಅದಾಗಲೇ ಚರ್ಚೆ ಜೋರಾಗಿ ನಡೆದಿತ್ತು. ಮದುವೆಯಾದ ಹದಿನೈದು ದಿನಕ್ಕೇ ಹಿಸೆಯೂ ಆಗಿಹೋಯ್ತು. ಇಷ್ಟಾದರೂ ಬಂದ ಸೊಸೆ ಮನೆಮುರಿದಳು ಎಂಬ ಪಟ್ಟ ಮಾತ್ರ ಆಗಲೇ ಕಾವೇರಿ ಮುಡಿಗೇರಿತ್ತು..

‘ಕೋಟಿ ಬಂದಾನ್ರೋ ವಡಿದೀರು, ಕಾಯ್ ಕೊಯ್ಯೂಕೆ ನಾಳೀಕೆ ಸುರು ಮಾಡ್ವ ಹೇಳಿದ್ನಪ. ಆಗುದಾ ಅಂತ ಕೇಳ್ಕ ಹೋಗೂಕೆ ಬಂದಾ ಕಾಣ್ತದೆ..’ ಮನೆಕೆಲಸದ ರಾಮ ಅಂಗಳದ ಅಂಚಿಗೆ ಬೆಳೆದ ದೂರ್ವೆ ಜಡ್ಡಿ ದಾಟಿ ಹೂವು ಕೊಯ್ಯುತ್ತಿದ್ದ ಪರಮುವಿನ ಹತ್ತಿರವೇ ಬಂದ. ರಾತ್ರಿ ಟೈಟ್ ಆಗಿದ್ದು ಇನ್ನೂ ಇಳಿದಿರಲಿಲ್ಲ, ಜಗಿಯುತ್ತಿದ್ದ ಪಾನಿನ ವಾಸನೆಯನ್ನೂ ಮೀರಿಸಿ ಸರ್ಕಾರಿ ಕೊಟ್ಟೆಯ ಘಾಟು ಪರಮುವನ್ನು ವಾಸ್ತವಕ್ಕೆಳೆಯಿತು.

‘ಇಕಳಪ್ಪ!! ಹಾರ್ಬಿದ್ದ ಅವ, ಒಂದ್ವಾರದಿಂದ ಹಿಂಗೆ ನಾಳಿಕೆ ಬತ್ತೆ ಹೇಳಿ ದುಡ್ಡ್ ಇಸ್ಕ ಹೋತಾ.. ಯಾರಾರು ಅವ್ನ ಮಾತು ನಂಬೂರಾ?’ ಎನ್ನುತ್ತಾ ಬಂದ ಪರಮು ಮನೆಯೆದುರು ಹಾಕಿದ ಗೋಣಿ ಪಾಟಿಗೆ ಕಾಲುಜ್ಜುತ್ತ ಕೋಟಿಗೆ ಹೇಳಿದ ‘ನಾಳೀಕಾದ್ರೆ ನಾಳೀಕೆ ಬಾ. ಕಾಯ್ ಕೊಯ್ದು ಮುಗ್ಸದ್ ವಿನಾ ದುಡ್ಡು ಕೊಡುಕಾಗುಕಿಲ್ಲ. ಇಲ್ದೆಗಿದ್ರೆ ಮೊನ್ನೀಕೆ ತಗಂಡ್ ಹೋದ್ ದುಡ್ಡು ವಾಪಸ್ ತಂದ್ ಕೊಟ್ಬುಡು, ನಾ ಬರಸ್ಗುಣಿ ಗಣಪಯ್ಯಗೆ ಬಗೀಲಿ ಕಾಯ್ ಕೊಯ್ದ್ ಕೊಟ್ಟಾಕ್ ಹೋಗು ಅಂತೆ’.

‘ಹಾಂಗಲ್ರಾ ವಡಿದೀರು, ನಿಮ್ ತಮ್ನೋರು ಇಂದು ಬೆಳಿಗ್ಗಿನ್ ಜಾವಕ್ಕೇ ಹೇಳಿ ಕಳ್ಸೀರು, ಸೌದೆ ಬಂದೋಬಸ್ತು ಮಾಡೂದು ಮತ್ತೆ ಚಟ್ಟ ಕಟ್ಟೂ ಕೆಲ್ಸ ನಿಂದೇಯಾ ಅಂದ್ಕಂಡಿ. ಇಲ್ದೆಗಿರೆ ನಾ ಇವತ್ತೇ ಬರ್ವವ ಕಾಯ್ ಕೊಯ್ಯುಕೆ. ಭಾಗ್ವತರ ಕಟ್ಟಿಗೆ ಹೋಗಿ ಸಾಬನ ಹತ್ರೆ ಒಂದ್ ಹೊರಿ ಕಟ್ಗಿ ಹೇಳಿ ಬರ್ತಿದ್ದವ, ಮತ್ ಇಲ್ಲಿ ಹೊಕ್ಕಿ ಹೇಳ್ ಹೋಗ್ವಾ ಮಾಡ್ದೆ. ನಾ ಕೆಲ್ಸಕ್ ಬತ್ತೆ ಮಾಡ್ಕಂಡಿ ಕಾವೇರ್ ವಡ್ತೀರು ಆಸ್ರಿಗೆ ತಯಾರ್ಮಾಡ್ಕ ಕುಂತ್ರೆಹೇಳಿ.’
ಪರಮುವಿಗೆ ಇಲ್ಲಿಯೂ ಸುಖವಿಲ್ಲ. ಬೇಡಾ ಎಂದರೂ ಒಬ್ಬರಲ್ಲಾ ಒಬ್ಬರ ಬಾಯಿಂದ ಮಾಕಬ್ಬೆಯ ಸುದ್ದಿ. ಕೇಳಬಾರದು ಅಂತ ಮನಸ್ಸು ತಡೆದರೂ ನಾಲಿಗೆ ತಡೆಯಲಿಲ್ಲ ‘ಉಸ್ರು ನಿಂತೋಯ್ತಾ?’ ಪಟಕ್ ಅಂತ ಪ್ರಶ್ನೆ ಉದುರಿ ಹೊಯ್ತು.

‘ಉಸ್ರು ಎಳ್ದು ಎಳ್ದು ತಕತ್ರು, ಮದ್ಯಾನ್ನ ಹಾಯು ನಮ್ನಿ ಇಲ್ಲಾ. ಉಸ್ರು ನಿಂತ್ ಮೇನೆ ಹೆಣ ಕಾಯ್ಸುದು ಬ್ಯಾಡಾ ಅಂದ್ಕಂಡಿ ಬಾಕಿ ತಯಾರಿ ಮಾಡ್ಕಂಬುದು ಅಂದಾರೆ ಸ್ರೀದರ್ ವಡಿದೀರು’

ಉರ್ಕಂತ್ನ ಸತ್ತವ ಅಂತ ಮಾಕಬ್ಬೆ ಬರೀ ಪರಮುವನ್ನೇ ಜರಿದಿದ್ದಾದರೂ ಹೊಟ್ಟೆ ಉರಿಸಿದವ ಮಾತ್ರ ಅವಳ ಮಗ ಶ್ರೀಧರನೇ. ಮಾಡದ ಉದ್ಯೋಗ ಇಲ್ಲ. ಟೀವಿ ರಿಪೇರಿ, ಜಮೀನ್ ಮಾಮ್ಲದಲ್ಲಿ ಮಧ್ಯಸ್ಥಿಕೆ ಮಾಡುವುದು, ಸಾಣಿಕಟ್ಟದಲ್ಲಿ ಗದ್ದೆ ಕೊಂಡು ಉಪ್ಪು ಮಾಡ್ತೆ ಅಂತ ಕುಂತಿದ್ದು. ಸರೀ ಬೋಳು ಹೆರೆಸಿಕೊಂಡು ಈಗ ಮನೆಗೆ ಬಂದು ಕುಂತವ ಶ್ರೀಧರ. ಅಬ್ಬೆಯ ಮೇಲೆ ಮೊದಲಿಂದಾನೂ ಇವತ್ತು ತೋರಿಸುವಷ್ಟು ಕಾಳಜಿ ಇದ್ದಿದ್ದರೆ ಅಪ್ಪ ಸತ್ತಾಗಲೇ ಅಬ್ಬೆ ಕಾಲ್ಬುಡಕ್ಕೆ ಬಂದು ತಾನಾಯ್ತು ತನ್ನ ಕೆಲಸಾಯ್ತು ಅಂತ ಮುಕಳಿ ಮುಚ್ಕಂಡು ಬಿದ್ದಿರ್ತಿದ್ದ. ಹೀಗೆ ಕೈ ಮೈ ಸುಟ್ಟುಕೊಳ್ಳುವ ವ್ಯಾಪಾರಕ್ಕೆ ಹೋಗಿ ಸಾಲ ಮಾಡಿ ಮಾಕಬ್ಬೆ ತಲೆಗೆ ಕಟ್ಟುತ್ತಿರಲಿಲ್ಲ. ಗಟ್ಟಿಯಿದ್ದಷ್ಟೂ ದಿನ ಮಾಕಬ್ಬೆ ಸಾಲ ತೀರಿಸುತ್ತಲೇ ಬದುಕಿದಳು.

‘ನೀವೂ ಒಂದ್ಸಲ ಕಂಡ್ಕ ಬರುದು ಬಲ ಆಗಿತ್ತಮಾಂಗೆ ಕಾಣ್ತದೆ’ ಅಂತ ಸಣ್ಣಕ್ಕೆ ಉಸುರಿದ. ಈ ಸಲಹೆಗೆ ಬೈದೇ ಬಿಟ್ಟಾರು ಎಂಬ ಡುಕಡುಕಿಯೂ ಇತ್ತು ಕೋಟಿಯ ದನಿಯಲ್ಲಿ.

ಬಹುಶಃ ಪರಮು ಬೆಳಿಗ್ಗೆಯಿಂದ ಯಾರಾದರೂ ಈ ಮಾತನ್ನು ಹೇಳಲಿ ಎಂದೇ ಕಾದು ತಲ್ಲಣಿಸುತ್ತಿದ್ದನೇನೋ..!! ಒಮ್ಮೆಗೇ ತನ್ನ ಮನಸ್ಸಿನ ಮಾತು ಕೋಟಿಯ ಬಾಯಲ್ಲಿ ಕೇಳಿ ನಿರಾಳನಾದ.

ಹೌದು, ಹೋಗಲೇ ಬೇಕಾದ ಜಾಗವದು. ತಾನು ಮತ್ತು ಅವಳು ಹೋಳಿ ಮಾಡಿ ಆಡುತ್ತಿದ್ದ ತೋಟ, ತಾನು ಹುಟ್ಟಿ ಬೆಳೆದ ಮನೆ. ಅಲ್ಲಿ ಸಾಯುತ್ತಿರುವ ಮಾಕಬ್ಬೆ.

ಮತ್ತೆ ದೂಸ್ರಾ ಯೋಚಿಸದೆ ಪರಮು ಗಳಕ್ಕೆ ನೇತು ಹಾಕಿದ್ದ ಅಂಗವಸ್ತ್ರ ಎಳೆದು ಹೆಗಲಿಗಿಡುತ್ತ ‘ಕಾವೇರಿ, ನಾನು ಕೆಳಗಿನ ಕೇರಿಗೆ ಹೋಗಿ ಬತ್ತೆ. ಏನಾದ್ರೂ ಆಗ್ಲಿ, ಒಂದ್ಸಲ ಹೊಗ್ಬರದು ಗನಾದು ಅನ್ನಿಸ್ತು. ಮಾಣಿಗೇ ಪೂಜೆ ಮಾಡು ಹೆಳ್ಬುಡು.’ ಅಂದ.

ಗಂಡನ ಮಾತನ್ನು ಕದ್ದಾಲಿಸುವ ಗುಣ ಕಾವೇರಿಗೆ ಮದುವೆಯಾದಾಗಿಂದಲೂ ಇದ್ದೇ ಇತ್ತು. ಇದು ಪರಮುವಿಗೂ ಗೊತ್ತು. ಹೆಂಡತಿಯ ಬಳಿ ಏನು ಕದ್ದು ಮುಚ್ಚಿ, ಅವಳ ಈ ಗುಣದಿಂದ ಪರಮುವಿಗೇನು ಫಾಯ್ದೆಯೂ ಇಲ್ಲ, ಲುಕ್ಸಾನೂ ಇಲ್ಲ, ಅಲ್ಲದೆ ತಕರಾರೂ ಇಲ್ಲ. ಹಾಗಾಗಿ ಇವತ್ತಿನದೂ ಹೊರತಾಗಿರಲಿಲ್ಲ..

ಬಾಗಿಲ ಹಿಂದಿದ್ದ ಕಾವೇರಿಗೆ ಕೂಡ ಮನಸ್ಸಿನಲ್ಲಿತ್ತು, ತುತ್ತು ಅನ್ನ ಬೇಯಿಸಿಟ್ಟವಳ ಕೊನೆಗಾಲಕ್ಕೆ ವಿಷ ಕಾರುವುದು ಒಳ್ಳೇದಲ್ಲವೆಂದು. ಆದರೂ ಕಾವೇರಿಗೂ ಏನೋ ದಿಗಿಲು, ‘ಹೋದವ್ರು ಹೋದಂಗೇ ಬನ್ನಿ. ಹಂಡ್ಯದಲ್ಲಿ ಬಿಶ್ನೀರು ಇದ್ದು’ ಅಂತ ಸ್ವಲ್ಪ ಒತ್ತಿ ಹೇಳಿದಳು.

ಕಾವೇರಿಗೂ, ಮಾಕಬ್ಬೆಗೂ ಹೊಯ್ದಕ್ಕಿ ಬೇಳೆ ಬೇಯುತ್ತಿರಲಿಲ್ಲ ಅಂತ ಹೇಳಲು ಅವರಿಬ್ಬರೂ ಒಂದೇ ಸೂರಿನಡಿ ಜಾಸ್ತಿ ದಿನ ಇದ್ದಿದ್ದೇ ಇಲ್ಲ. ಅದಕ್ಕಾಗಿ ಒಬ್ಬರ ಮೇಲೊಬ್ಬರಿಗೆ ಭಾವನೆಯೂ ಕಮ್ಮಿಯೇ. ಆದರೆ ಸಾವು ಅಂದಾಕ್ಷಣ ಅದು ನಮ್ಮವರದ್ದೋ, ಊರ ಮೇಲಿನವರದ್ದೋ ಮನಸ್ಸು ಒಮ್ಮೆ ನರಮ್ ಆಗಿಬಿಡುತ್ತದೆ. ನಮ್ಮವರದ್ದೇ ಆದರಂತೂ ಇಂಥ ಘಳಿಗೆಯಲ್ಲಿ ತಪ್ಪೆಲ್ಲ ನಮ್ಮದೇ ಎನ್ನಿಸುತ್ತದೆ. ಅವರೊಟ್ಟಿಗೆ ಮಾತನಾಡಬೇಕಾದ ವಿಷಯವಿತ್ತು, ಕೂತು ಕಳೆಯಲು ಇನ್ನೊಂದು ಸ್ವಲ್ಪ ಸಮಯ ಇರಲಾಗಿತ್ತು, ಎದುರು ಬದುರು ನಿಂತು ಮಾಡಿಕೊಳ್ಳಬಹುದಾದ ಆರೋಪ ಪ್ರತ್ಯಾರೋಪಗಳೂ ಬಹಳವಿದ್ದವು ಎಂದೆಲ್ಲ ಎನ್ನಿಸಿಯೇ ಎನ್ನಿಸುತ್ತದೆ.

‘ರಾಮ, ಬಾರಾ ಇಲ್ಲೇ ಕೆಳಗಿನ ಕೇರಿಗೆ ಹೋಗ್ಬರ್ವಾ. ಮನೀ ಬದಿಗಿದ್ರೂ ಮನ್ಸು ಇಲ್ಲಿ ನಿಲ್ಲೂದಿಲ್ಲ ಇಂದು’ ಒಬ್ಬನೇ ಇವತ್ತು ಒಂದು ಕ್ಷಣವನ್ನೂ ಕಳೆಯಲಾರೆ ಅಂತ ಅನ್ನಿಸಿತ್ತು ಪರಮುವಿಗೆ. ರಾಮನೂ ಜೊತೆಯಾದ.

ಇಬ್ಬರೂ ಗೇರು ಹಿತ್ತಲು ದಾರಿಯಲ್ಲಿ ಒಣಗಿ ಮುರುಟಿ ಬಿದ್ದ ಎಲೆಗಳ ಮೇಲೆ ಚರಕ್ ಪರಕ್ ಸಪ್ಪಳ ಮಾಡುತ್ತ ಸುಮ್ಮನೆ ಹೆಜ್ಜೆ ಹಾಕುತ್ತಿದ್ದರು. ಮರದ ಹಸಿರೆಲೆ ಚೂರು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬಿದ್ದಾಗಲೂ ಸಪ್ಪಳ ಮಾಡದು, ಸದ್ದು ಮಾಡುವುದೇನಿದ್ದರೂ ಒಣಗಿದ ಎಲೆಯೇ. ಬಚ್ಚಿಟ್ಟ ಭಾವನೆಗಳು ನೋವಿನ ತಾಪಕ್ಕೆ ಮನಸ್ಸಲ್ಲೇ ಒಣಗಿ, ಒಂಟಿಯಾಗಿ ಕುಳಿತಾಗೆಲ್ಲ ಗದ್ದಲವೆಬ್ಬಿಸುತ್ತದೆಯಲ್ಲ ಹಾಗೆ.

‘ಆಗ್ಲಿ ವಡಿದೀರೆ, ನನ್ ಮನ್ಸಾಗೂ ಒಂದ್ಸಲ ನೀವು ಮಾಕ್ ವಡ್ತೀರ್ ನೋಡ್ಕ ಬರುದು ಗನಾ ಅಂತಿತ್ತು. ಊರವ್ರ ಬಾಯ್ ಮುಚ್ಸೂಕೂ ಲಾಯ್ಕ್ ಆಯ್ತು ಕಾಣಿ!! ‘ಸಾಕದ್ ಪ್ರಾಣಿಗಿಂತ ಬಲ ಆಯ್ತು, ಶಿಟ್ಟು ಸಾಧಿಸೂಕೆ ಒಂದು ಎಣಿ ಅದೆ’ ಅಂತೆ ಈಗ್ಲೆ ಶುರು ಹಚ್ಕಂಡಿದ್ರು ಬೆನ್ನ ಹಿಂದೆ ಹೇಳೂಕೆ. ಧರ್ಮ ಕಾಷ್ಟ ಹಾಕುವರಿಗಾದ್ರೂ ಇದ್ದು ಬನ್ನಿ, ಆಗಾ?’ ಅಂತ ರಾಮನೇ ಬಾಯೊಡೆದ.

ಪರಮುವಿಗೆ ಊರವರ ಧಾಟಿಗೆ ದನಿ ಸೇರಿಸುವುದಾಗಲಿ, ಕುಣಿಯುವುದಾಗಲಿ ಮೊದಲಿಂದಲೂ ಖುಷಿಯೇನಲ್ಲ. ಆದರೆ ಯಾರ ವಿರೋಧ ಕಟ್ಟಿಕೊಂಡು ಬದುಕು ಕಟ್ಟಿಕೊಂಡವನಲ್ಲ. ಇವತ್ತೂ ಪರಮು ಊರವರ ಮೆಚ್ಚಿಸಲಿಕ್ಕಾಗಿ ಕೆಳಗಿನ ಕೇರಿಗೆ ಹೊರಟವನಲ್ಲ.

‘ನಾವು ಹೇಂಗೇ ಇದ್ರೂ ಊರವ್ರ ಬಾಯಿ ಮುಚ್ಸೂಕೆ ಅಗುದಿಲ್ಲ ರಾಮ. ಆಡ್ಕಂಬವ್ರ್ ಬಾಯಿ, ಹೇಲವ್ರ ಕುಂಡಿ ಮುಚ್ಸುಕೆ ಆಗುದಿಲ್ಲ ಅಂತ ಮಾಕಬ್ಬಿ ಖಾಯಮ್ ಹೇಳ್ತಿರ್ತಿತ್ತು’ ಅರಿವಿಲ್ಲದೆ ಮಾಕಬ್ಬೆಯ ನೆನಪು ಮತ್ತೆ ಪರಮುವಿನ ಬಾಯಲ್ಲಿ.. ಕಸಿವಿಸಿಯಾದ ಪರಮು.

ಕೆಳಗಿನ ಕೇರಿ ಹಿತ್ತಲ ದಣಪೆಯ ಸರಗೋಲು ಸರಿಸುತ್ತಲೇ ಅಪ್ಪ, ಅಬ್ಬೆ, ಮಾಕಬ್ಬೆ, ನೆಲ್ಲಿ-ಪೇರಲ, ಬಿಂಬಲು ಗಿಡದ ಬರಲು ಎಲ್ಲವೂ ಒಮ್ಮೆಗೇ ಕಣ್ಣೆದುರು ಬಂದವು ಪರಮುವಿಗೆ. ಜೊತೆಗೆ ತನ್ನ ಹರಿದ ಚಡ್ಡಿಗೆ ಮಾಕಬ್ಬೆಯ ಲಂಗದ ಗೋಟು, ತೇಪೆ ಕೂಡ.

ಅಪ್ಪ ಸಾಯುವ ಮೊದಲೇ, ಕಾವೇರಿ ಸೊಸೆಯಾಗಿ ಬಂದ ವಾರೊಪ್ಪತ್ತಿನಲ್ಲಿ ನಡೆದ ಹಿಸೆ ಪಂಚಾಯತ್ಗೆಯಲ್ಲಿ ಮಾಕಬ್ಬೆ ಶ್ರೀಧರನಿಂದ ಪರಮುವಿಗೆ ಎರಡು ಹೊಡೆಸಿದ್ದು, ಅಪ್ಪ ಮಂಕಾಗಿ ಎಲ್ಲವನ್ನೂ ನೋಡುತ್ತಿದ್ದದ್ದು.. ಕಾವೇರಿ ಗಂಡನ ಅಸಹಾಯಕತೆಗೆ ಕಣ್ಣಿರಾಗಿದ್ದು ಯಾವುದೂ ಮರೆತಿಲ್ಲ ಪರಮುಗೆ.

‘ಸತ್ತರೂ ನಿನ್ನ ಮುಖ ನೋಡತ್ನಿಲ್ಲೆ, ಇಲ್ಲಿಗೆ ಮುಗೀತು. ಸಾಕು ನಿಂಗ್ಳ ಸಹವಾಸ’ ಅಂತ ಬಾಯಂಚಿನಲ್ಲಿ ಹರಿವ ರಕ್ತ ವರೆಸುತ್ತ ಹಿಸೆಯಲ್ಲಿ ಬಂದಿದ್ದನ್ನೆಲ್ಲ ರಾಮನಿಗೆ ತರಲು ಹೇಳಿ ಕಾವೇರಿಯೊಂದಿಗೆ ಹಾಗೆಯೇ ಹೊರ ಬಂದಿದ್ದ ಪರಮು. ರಾಮನೊಟ್ಟಿಗೆ ಬಂದ ಅಪ್ಪನನ್ನೂ ತನ್ನ ಪುಟ್ಟ ಸಂಸಾರದಲ್ಲಿ ಸೇರಿಸಿಕೊಂಡು ಪರಮು ಮೇಲಿನ ಕೇರಿಯ ತೋಟದ ಮನೆಯಲ್ಲೇ ಉಳಿದ. ಪರಮುವಿನ ಅಪ್ಪ ಇಷ್ಟಾದ ಎರಡು ತಿಂಗಳಿಗೆ ರಾತ್ರಿ ಮಲಗಿದಲ್ಲೇ ಉಸಿರು ನಿಲ್ಲಿಸಿದ್ದ… ಇವೆಲ್ಲ ಆಗಿ ಹತ್ತೊಂಭತ್ತು ವರ್ಷದ ಮೇಲೆ ಕಳೀತು..

ದಣಪೆ ದಾಟುತ್ತಲೇ ಊದಿನಕಡ್ಡಿ ವಾಸನೆ ಮೂಗಿಗೆ ಬಡಿದು, ಪರಮುವಿಗೆ ಸೂಟು ಸಿಕ್ಕಿ ಹೋಯಿತು. ಹೇಳಿದ್ದನ್ನೇ ಸಾಧಿಸಿದ್ದಳು ಮಾಕಬ್ಬೆ. ಹಿಸೆ ಪಂಚಾಯತ್ಗೆ ಗಲಾಟೆಯಲ್ಲಿ, ಸಾಯುವಾಗ ತನ್ನ ಬಾಯಿಗೆ ನೀನು ನೀರು ಬಿಡುವುದೂ ಬೇಡ ನೀನು ಅಂತ ಲಟ್ಟಿಗೆ ಮುರಿದಿದ್ದಳು.

ಚಪ್ಪಲ್ಲು ಬಿಡುವಾಗಲೇ ಕಡಕಟ್ಟಿನಾಚೆಗೆ ಮಾಕಬ್ಬೆಯ ದೇಹ ತಣ್ಣಗೆ ಕೊರಟಿನಂತೆ ಮಲಗಿದ್ದು ಕಾಣಿಸಿತು ಪರಮುವಿಗೆ. ಶ್ರೀಧರನಿಗೂ ಈ ಹತ್ತೊಂಭತ್ತು ವರ್ಷದಲ್ಲಿ ಸಣ್ಣ ಬೊಜ್ಜು ಬಂದು ಮುದುಕರ ಲಕ್ಷಣ ಮುಖದಲ್ಲಿ ಸ್ವಲ್ಪ ಕಾಣಿಸುತ್ತಿತ್ತು. ಅತ್ತು ಊದಿಸಿಕೊಂಡ ಕಣ್ಣಿನಿಂದ ಅಣ್ಣನನ್ನು ನೋಡಿ ಮತ್ತೊಮ್ಮೆ ಗಳಗುಡುತ್ತ ಕಣ್ಣೀರಾದ ಶ್ರೀಧರ. ‘ಸಾಯುವ ಹೊತ್ತಿಗೆ ಮಾತು ಮುಟ್ಟಿ ಹೋಗಿತ್ತು.. ಆದರೂ ಅಬ್ಬೆಯ ಮನಸ್ಸಲ್ಲೇನಿತ್ತೋ ಕಾಣೆ, ಪರಮು ಪರಮು ಅಂತ ಹೇಳುತ್ತಲೇ ಪ್ರಾಣ ಬಿಟ್ತು.’

ಮತ್ತೂ ಅಪರಾಧಿಯಂತಾದ ಭಾವದಲ್ಲಿ ಮುಳುಗಿದ ಪರಮು, ಮಾಕಬ್ಬೆ ತನ್ನ ಹಠ ಸಾಧಿಸಿದಳೋ ಅಥವಾ ತಾನೇ ಕೆಳಗಿನ ಕೇರಿಗೆ ಬರುವುದು ತಡ ಮಾಡಿದೆನೋ ಅಂತ ಅರಿಯದಾದ.

ಮಾಕಬ್ಬೆಯ ಕೊಚ್ಚಾದ ಮೈ, ಸಾಯುತ್ತೇನೆಂದು ಸಮುದ್ರಕ್ಕೆ ಓಡಿ ಹೋಗುತ್ತಿದ್ದ ಕಾಲುಗಳ ಹೆಬ್ಬೆರಳುಗಳನ್ನು ಕೂಡಿಸಿ ಕಟ್ಟಿಡಲಾಗಿತ್ತು..
ಪರಮು ಮಾಕಬ್ಬೆಯ ಕಾಲು ಹಿಡಿದು- ‘ಮಾಕು ಚಿಕ್ಕಿ ..’ ಅಂತ ಏದುಸಿರು ಬಂದಂತೆ ಅಳತೊಡಗಿದ. ಮೈಯಲ್ಲಿದ್ದ ಶಕ್ತಿಯನ್ನೆಲ್ಲ ಚಟ್ಟದ ಮೇಲೆ ಮಲಗಿದ್ದ ಮಾಕಬ್ಬೆಯೇ ಕಸಿದುಕೊಂಡಳೋ ಎಂಬಂತೆ ಕಣ್ಣು ಕಸ್ಲೆ ಬಂದು ಕಡಕಟ್ಟಿಗೆ ಸಾಚಿದ.

‘ಮಾಕಬ್ಬೆಗೂ, ನಮ್ಮಿಬ್ಬರ ನಡುವಿನ ಹೊಸ ಸಂಬಂಧ ಕಡೆಯವರೆಗೂ ಹೊಂದಿಕೆಯಾಜೇ ಇಲ್ಲೆ ಅನ್ನಿಸ್ತು. ಸತ್ತ ಮೇಲೂ ನನ್ನ ಕಾಡವು ಹೇಳಿಯೇ ಸಾಯುವಾಗ ನನ್ನ ಹೆಸರು ಹೇಳಿ ಸತ್ತಿದ್ದು..’ ಅಂತ ಗೋಳಾಡಿದ.

‘ಮಾಕು ಚಿಕ್ಕಿ, ತಪ್ಪು ನಿಂದಲ್ಲ.. ಮಲತಾಯಿ-ಮಗನ ಸಂಬಂಧವೇ ಅಷ್ಟು ಕ್ರೂರ. ನೀನಾದರೂ ಏನು ಮಾಡ್ತಿದ್ದೆ, ಆಡುವ ವಯಸ್ಸಲ್ಲಿ ಹಡೆವಾಂಗೆ ಮಾಡಿದ ನನ್ನಪ್ಪ. ನಿನ್ನ ನೋವು ನನ್ಗೆ ಅರ್ಥವಾಗ್ದೆ ಹೋತು’

‘ತಪ್ಪೆಲ್ಲ ನಂದು.. ನಂದೇಯಾ..’ ಯಾರ ಸಮಾಧಾನಕ್ಕೂ ಪರಮುವಿನ ನೋವು ಬಗ್ಗಲಿಲ್ಲ.

ಅದಾಗಲೇ ಒಂದು ಬಾರಿ ಅತ್ತು ಮುಗಿದ ಸಾವಿನ ಮನೆಯಲ್ಲಿ ಮತ್ತೊಮ್ಮೆ ಗೌಜಿ ಎದ್ದಿತು. ಪರಮುವನ್ನು ಹಿಡಿತಕ್ಕೆ ತರುವುದೇ ಸಾಹಸವಾಯಿತು.
ಮುಂದಿನ ಕಾರ್ಯಕ್ಕೆ ಕಾದು ಕುಳಿತ ಭಟ್ಟರು ಹತ್ತಿರದವರಿಗೆಲ್ಲ ಹೆಣದ ಕಾಲಿನಿಂದ ತಲೆವರೆಗೂ ನೀರು ಹನಿಸಿ, ಅಪ್ರದಕ್ಷಿಣೆಯಾಗಿ ಸುತ್ತು ಹಾಕಿಸಿದರು.

‘ಹಾಂಗೇ ಕ್ರಿಯೆ ಹಿಡಿಯವ್ವು ಮುಂದೆ ಬನ್ನಿ’ ಕರೆದರು.

ಹಡೆದ ಲೆಕ್ಕದಲ್ಲಿ ಹೋದರೆ ಶ್ರೀಧರನೇ ಸರಿ ಕ್ರಿಯೆ ಹಿಡಿದು, ಬೊಜ್ಜ ಮಾಡಿ ಪಿಂಡ ಇಡಲು. ಆದರೆ ಸಂಬಂಧದ ಲೆಕ್ಕದಲ್ಲಿ ಪರಮುವೇ ಹಿರೀ ಮಗ.
ಪರಮುವಿಗೆ ಈಗ ಹೊಳೆಯಿತು ಕಾವೇರಿ ‘ಹೋದ ಹಾಗೆಯೇ ವಾಪಸ್ಸು ಬನ್ನಿ’ ಅಂದಿದ್ದು ಯಾಕೆ ಅಂತ.

ಧರ್ಮ ಕಾಷ್ಟ ಹಾಕಿದರೂ ಮಾಕು ಚಿಕ್ಕಿಯ ಋಣ ತೀರದು ಎಂದು ಪರಮುವಿಗೆ ಖಾತ್ರಿಯಿತ್ತು.. ಅಬ್ಬೆ ಎಂದು ಹಠ ತೊಟ್ಟು ಕರೆಯಿಸಿಕೊಂಡವಳ ಆತ್ಮಕ್ಕೆ ಶಾಂತಿ, ಪರಮುವಿಗೂ ನೆಮ್ಮದಿ ಬೇಕಿತ್ತು..

ಕುಳಿತಲ್ಲಿಂದ ಶ್ರೀಧರ ಏಳುವ ಮೊದಲೇ ಪರಮು ಧಡಕ್ಕನೆ ಎದ್ದು ನಿಂತ.

*****

ನಾವೆಲ್ಲಾರೂ ಒಳ್ಳೆಯವರೇ, ನಮ್ಮ ನಮ್ಮ ಜಾಗದಲ್ಲಿದ್ದಾಗ ಮಾತ್ರ. ಜಾಗದಲ್ಲಿ ಸ್ವಲ್ಪ ಏರುಪೇರಾದರೂ ನಮಗೇ ತಿಳಿಯದಂತೆ ನಮ್ಮ ನಿರೀಕ್ಷೆ, ಅನಿಸಿಕೆಗೂ ಮೀರಿ ನಮ್ಮ ಹೊಸಮುಖಗಳ ಪರಿಚಯ ಅನಾವರಣಗೊಳ್ಳುತ್ತ ಹೋಗುತ್ತದೆ. ಚಿಕ್ಕಿಯಾದವಳು ಸ್ನೇಹಿತೆಯಾಗಿ ಮುದ ನೀಡಿದರೂ ಅಬ್ಬೆಯಾದಾಗ ಮೊದಲಿನ ಸ್ನೇಹ-ಪ್ರೀತಿಯೆಲ್ಲ ಎಲ್ಲೋ ಮಾಯವಾಗಿಬಿಡುತ್ತದೆ. ಬದುಕಿರುವವರೆಗೂ ಸಾಧಿಸಿದ ದ್ವೇಷ, ಆಕೆ ಇಲ್ಲವೆಂದಾದಾಗ ಬೇರೆಯದೇ ತಲ್ಲಣ.. ಆಕೆಗಿದು ತಿಳಿಯುವುದೋ ಇಲ್ಲವೋ ಆದರೆ ಹೊಸ ಸಂಬಂಧಕ್ಕೊಂದು ನ್ಯಾಯ ಒದಗಿಸಲು ಪರಮು ಇಡುವ ಹೆಜ್ಜೆ ಕತೆಯಲ್ಲಿ ನನಗೆ ಇಷ್ಟವಾಗಿದ್ದು.
ಬಳಿಯಿದ್ದಾಗ ಹೇಳಿಕೊಳ್ಳಲಾಗದ ಅಥವಾ ಹೇಳಿಕೊಳ್ಳಲು ಬಿಡದ ಅಹಂ ಅನ್ನು ಸಂತೈಸಿ ಒಪ್ಪಿಸಲಾಗದ ನಾವು ಹಳಹಳಿಸುವುದು ವ್ಯಕ್ತಿ ದೂರವಾದಾಗ ಎಂಬುದನ್ನು ಕ್ಷಣ ಕ್ಷಣಕ್ಕೂ ನೆನೆಯುತ್ತಾ ಬರೆದ ಕತೆ ‘ಮಾಕಬ್ಬೆ’. ಇದು ತರಂಗ ಯುಗಾದಿ ವಿಶೇಷಾಂಕದಲ್ಲಿ (2017ರ ಯುಗಾದಿ ವಿಶೇಷಾಂಕ) ‘ಹೋದ ಹಾಗೆಯೇ ವಾಪಸು’ ಎಂಬ ಹೆಸರಿನಲ್ಲಿ ಪ್ರಕಟಗೊಂಡಿತ್ತು.