ಅಪ್ಪ ಒಂದುಕಟ್ಟು ಬೀಡಿ ಮುಗಿಸಿದ್ದ. ಆತ ಎದ್ದು ಇನ್ನೂ ಬಾರಕೋಲು ತಗೊಂಡಿರಲಿಲ್ಲ, ನಾನೂ, ಸಾಂತ ಕೀಲಿಕೊಟ್ಟ ಗೊಂಬೆಗಳಂತೆ ಹೊಯ್ಕೊಳ್ಳಕೆ ಶುರು ಮಾಡಿದೆವು. ಅಪ್ಪನ ಸಿಟ್ಟು ನಮ್ಮ ಮೇಲೆ ವರ್ಗಗೊಂಡಿತು. ಇಬ್ಬರ ಬೆನ್ನಿಗೊಂದೊಂದು ಜೋರಾಗಿ ಗುದ್ದುಕೊಟ್ಟ. ನನಗಂತು ಅಳಲಿಕ್ಕೆ ಉಸುರು ಇಲ್ಲದಂಗಾಗಿತ್ತು. ಅವ್ವ ಅವತ್ತು ಉದಗಳ್ಳಿ ತಗಂಡು ಬೀಸಿದಳು ಅಪ್ಪನಿಗೆ. ಆತನ ಮೊಣಕಾಲಿಗೊಂದು ಗಿಚ್ಚ ಕುಂತಿತು. ಧಾರಾಕಾರ ರಕ್ತ ಸುರಿಯತೊಡಗಿತು. ಅಂದು ಓಣಿಯವರೆಲ್ಲ ನಮ್ಮ ಬಂಕದೊಳಗೆ ಸೇರಿದ್ದರು. ಆಗಲೂ ಅವ್ವ ಅಪ್ಪ ದೆವ್ವ ಬಂದಂಗೆ ಆಡ್ತಿದ್ರು. ನನಗಂತು ಅವರಿಬ್ಬರನ್ನು ಒದ್ದು ಕೊಲ್ಲಬೇಕೆನ್ನಿಸಿತ್ತು. ಸಾಂತಿ ಬಿಕ್ಕಿ ಬಿಕ್ಕಿ ಅಳುತ್ತಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಬರೆದ ಕತೆ “ವಜ್ರಮುನಿ”
ಇದೆಲ್ಲಾ ಬಹಳ ವರ್ಷಗಳ ಹಿಂದಿನ ಮಾತು. ಹುಸೇನಿ ಬಳ್ಳಾರಿಯಲ್ಲಿ ಆತನ ಪ್ರೇಯಸಿಯಿಂದಲೇ ಕೊಲೆಯಾಗಿ ಕಾಲವೇ ಆಗಿದೆ, ಆತ ಕುಂತು ಆಡಿಕೊಳ್ಳುತ್ತಿದ್ದ ಬಾವಿಕಟ್ಟೆಯನ್ನು ಒಡೆದು ಕಾಂಪ್ಲೆಕ್ಸ್ ಒಂದು ತಲೆಎತ್ತಿದೆ, ಅಪ್ಪ ಎತ್ತು ಹೊಡಕೊಂಡು ಹೋಗುತ್ತಿದ್ದ ಹಳ್ಳದ ಮೇಲೆ ರಸ್ತೆ ಹರಿದು ಹೇಳ ಹೆಸರಿಲ್ಲವಾಗಿದೆ, ಜಡಿಯಪ್ಪ ಸೇರಿದಂತೆ ಅಪ್ಪನ ಸ್ನೇಹಿತರಲ್ಲಿ ಹಲವರಾಗಲೇ ಕಲ್ಲೇಶ್ವರನ ಪಾದ ಸೇರಿದ್ದಾರೆ. ಅವರ ಮಕ್ಕಳೆಲ್ಲ ಬೆಂಗಳೂರು ಸೇರಿದ್ದಾರೆ. ನನ್ನವ್ವ ತುಂಗಭದ್ರೆಯೂ ಕಲ್ಲೇಶ್ವರನ ಪಾದ ಸೇರಿ ವರ್ಷವಾಯಿತು. ದೊಡ್ಡಮ್ಮ ದುಡಿಯಲಿಕ್ಕೆ ಹೋದ ತನ್ನ ಮಕ್ಕಳೊಂದಿಗೆ ಬೆಂಗಳೂರಿನ ಯಾವುದೋ ನಗರವೊಂದರ ಅಪಾರ್ಟ್ಮೆಂಟ್ ಮುಂದಿನ ಇಟ್ಟಿಗೆ ಗೂಡಿನಂಥ ಮನೆಯಲ್ಲಿ ದಿನಕಳೆಯುತ್ತಿದ್ದಾಳೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಯಕ ಚಳ್ಳೂರು ಬರೆದ ಕತೆ “ವಜ್ರಮುನಿ”
ನಾನು ಐದನೇ ಇಯತ್ತೆ ಇದ್ದಾಗ ನಮ್ಮ ಮನೆಯಲ್ಲುಳಿದಿದ್ದ ಕೊನೆಯ ಎಮ್ಮೆ ಭದ್ರಿಯೂ ಸತ್ತು ಹೋಯಿತು. ಅದರೊಂದಿಗೆ ನಮ್ಮ ಬಂಕ ಖಾಲಿ ಖಾಲಿಯಾಯಿತು. `ನಾಕೆತ್ತು, ಮೂರೆಮ್ಮಿ, ಮೂರಾಕಳಾ ಕಟ್ತಿದ್ದ ಬಂಕದು. ಇದು ನಿಮಪ್ ಇಸ್ಪಟ್ಟಾಡಿ ಓಸೂ ನುಂಗ್‌ಬುಡ್ತಿ… ತುಡುಗರಸನಾಡ’ ಎಂದು ಆಗಾಗ ಅವ್ವ ಅಪ್ಪನನ್ನು ಶಪಿಸುತ್ತಿದ್ದಳು. ಅವ್ವ ಯಾವಾಗಲೂ ಹಾಗೆ. ಯಾವುದೇ ವಿಷಯಕ್ಕೆ ಸಿಟ್ಟು ಬಂದರೂ ಅಡುಗೆ ಮನೆಯೊಳಗಿನ ಕಂಬಕ್ಕೆ ತಲೆಚಚ್ಚಿಕೊಂಡು ಅಪ್ಪ ಮಾರಿದ ಹೊಲ, ದನಕರುಗಳನ್ನು ನೆನಪಿಸಿಕೊಂಡು ದುಃಖಿಸುತ್ತಾಳೆ. ರಾಡ್ಯಾ, ಸಂಗ, ಹೆಂಗಸರಂತೋನು, ಕೈಲಾಗದೋನು, ಅಡವುಡಿಗುಟ್ಟಿದ್ದು, ಮಿಂಡ್ರಿಗುಡಿದೋನು, ರಾಕ್ಷಿಯಂತೋನು ಅಂತೆಲ್ಲ ಅಪ್ಪನನ್ನು ನಿಂದಿಸುತ್ತಾಳೆ. ಅಪ್ಪ ಸುಮ್ಮನಿದ್ದಷ್ಟು ಆಕೆಗೆ ಸಿಟ್ಟು ಬರುತ್ತದೆ. ಬೈಗಳು ಹೆಚ್ಚುತ್ತಲೇ ಹೋಗುತ್ತವೆ. ಅಪ್ಪ ಖಾಲಿ ಗ್ವಾದಲಿಯ ಕಟ್ಟೆಗೆ ಕೂತು ಒಂದಾದಮೇಲೊಂದು ಬೀಡಿ ಹಚ್ಚುತ್ತಿರುತ್ತಾನೆ. ಆಗೆಲ್ಲ ನಾನೂ, ಸಾಂತಿ ಪಾಟೀಚೀಲಗಳ ಮುಂದೆ ಗಪ್ಪ ಕೂತಿರುತ್ತಿದ್ದೆವು. ಅಪ್ಪ ನೋಡೂಮಟ ನೋಡಿ ಪ್ರತಿಕ್ರಿಯಿಸುತ್ತಿದ್ದ. ಗ್ವಾದಲಿ ಕಟ್ಟೆಯಿಂದೆದ್ದು ಅಟ್ಟದಲ್ಲಿರುತ್ತಿದ್ದ ಬಾರಕೋಲು ತಗಂಡು ಅವ್ವನಿಗೆ ದ್ಯಪದ್ಯಪ ಬಾರಿಸುತ್ತಿದ್ದ. ಅವ್ವ `ಯವ್ವೋಯಪ್ಪೋ… ನಾನ್ ಸತ್ನ್ಯೋ… ಯಪ್ಪಾ…’ ಅಂತ ಅರಚುತ್ತಿದ್ದಳು. ನಾನೂ ಸಾಂತ ಲಬ ಲಬ ಹೊಯ್ಕೊಂಡಾಗಲೇ ಅಪ್ಪ ಅವ್ವನನ್ನು ಬಿಡುತ್ತಿದ್ದ.
ಭದ್ರಿ ಸತ್ತಾಗ ಸ್ವತಃ ಅಪ್ಪನಿಗೇ ತುಂಬ ದುಃಖವಾದಂತಿತ್ತು. ಅವ್ವ ಯಾವಾಗಿನಂತೆ ಶಪಿಸಲಿಕ್ಕೆ ಸುರು ಮಾಡಿದಳು. ಅವತ್ತು ಎಷ್ಟೊತ್ತಾದರೂ ಬೈಗಳು ನಿಲ್ಲಲಿಲ್ಲ. ಅಪ್ಪ ಒಂದುಕಟ್ಟು ಬೀಡಿ ಮುಗಿಸಿದ್ದ. ಆತ ಎದ್ದು ಇನ್ನೂ ಬಾರಕೋಲು ತಗೊಂಡಿರಲಿಲ್ಲ, ನಾನೂ, ಸಾಂತ ಕೀಲಿಕೊಟ್ಟ ಗೊಂಬೆಗಳಂತೆ ಹೊಯ್ಕೊಳ್ಳಕೆ ಶುರು ಮಾಡಿದೆವು. ಅಪ್ಪನ ಸಿಟ್ಟು ನಮ್ಮ ಮೇಲೆ ವರ್ಗಗೊಂಡಿತು. ಇಬ್ಬರ ಬೆನ್ನಿಗೊಂದೊಂದು ಜೋರಾಗಿ ಗುದ್ದುಕೊಟ್ಟ. ನನಗಂತು ಅಳಲಿಕ್ಕೆ ಉಸುರು ಇಲ್ಲದಂಗಾಗಿತ್ತು. ಅವ್ವ ಅವತ್ತು ಉದಗಳ್ಳಿ ತಗಂಡು ಬೀಸಿದಳು ಅಪ್ಪನಿಗೆ. ಆತನ ಮೊಣಕಾಲಿಗೊಂದು ಗಿಚ್ಚ ಕುಂತಿತು. ಧಾರಾಕಾರ ರಕ್ತ ಸುರಿಯತೊಡಗಿತು. ಅಂದು ಓಣಿಯವರೆಲ್ಲ ನಮ್ಮ ಬಂಕದೊಳಗೆ ಸೇರಿದ್ದರು. ಆಗಲೂ ಅವ್ವ ಅಪ್ಪ ದೆವ್ವ ಬಂದಂಗೆ ಆಡ್ತಿದ್ರು. ನನಗಂತು ಅವರಿಬ್ಬರನ್ನು ಒದ್ದು ಕೊಲ್ಲಬೇಕೆನ್ನಿಸಿತ್ತು. ಸಾಂತಿ ಬಿಕ್ಕಿ ಬಿಕ್ಕಿ ಅಳುತ್ತಿತ್ತು. `ನೀವಿಬ್ರು ನಮಿಗೆ ಬ್ಯಾಡಾ ಬ್ಯಾಡಾ. ರಾಕ್ಷಿ ಆಡಿದಂಗಾಡ್ತೀರಿ. ನಾವಿಬ್ರು ದೊಡಮ್ಮಂತಾಕೋಗ್ತೇವು’ ಅಂದಾಗಲೇ ಅವರಿಬ್ಬರು ತಮ್ಮ ಹರ‍್ಯಾಟ ನಿಲ್ಲಿಸಿದ್ದು. ಅಷ್ಟೊತ್ತಿಗೆ ದೊಡಮ್ಮ ಬಂದು ಇಬ್ಬರನ್ನೂ ಬೈದು, ಮಷ್ಕಿರಿ ನೋಡೋಕೆ ಬಂದಿದ್ದ ಮಂದೀನೆಲ್ಲ ಕಳಿಸಿ, ನಮ್ಮನೇಲೇ ಉಳಿದುಕೊಂಡಳು. ರಾತ್ರಿಪೂರ ಇಬ್ಬರಿಗೂ ಬುದ್ಧಿ ಹೇಳಿದಳು.
ಅಪ್ಪ ಅದಾದ ಮೇಲೆ ಪೂರ್ತಿ ಬದಲಾಗಿಬಿಟ್ಟ. ಅವ್ವ ಅಪ್ಪ ಮಾತು ಕಮ್ಮಿ ಮಾಡಿದರು. ಮಾತಾಡಿದರೆ ಕಿಡಿಗೆ ಕಿಡಿಗೆ ಹತ್ತಿ ಜಗಳವಾಗುತ್ತದೆಂದುಕೊಂಡು ಸುಮ್ಮನಿರುತ್ತಿದ್ದರೋ ಏನೋ ಗೊತ್ತಿಲ್ಲ. ಮುಂಜಾನೆ ಬೇಗ ಎದ್ದು ಬೆಳಕು ಹರಿಯುವುದರೊಳಗೆ ತಮ್ ತೆಂಡಿಗೆ ಹೋಗಿ ಬಂದು ಗ್ವಾದಲಿ ಕಟ್ಟೆಗೆ ಕೂತುಬಿಡುತ್ತಿದ್ದ ಅಪ್ಪ. ಅವ್ವನಿಗೆ ತುಂಬ ಹಳಹಳ ಆಗಿತ್ತು. `ಹೇಣ್ತಿಕುಡ ಉದಗಳ್ಳಿಲೆ ಬಡಿಸ್ಯಂದಾನ ಜೋಕುಮಾರ…ʼ ಅಂತ ಊರ್‌ಮಂದಿ ಆಡಿಕ್ಯಳಂಗ್ ಮಾಡಿದ್ನೋ.’ ಅಂತ ಒಂದು ದಿನ ಪೂರ್ತಿ ಅತ್ತಿದ್ದಳು. ಅಂದು ಅಪ್ಪ ನಮ್ಮೆಲ್ಲರಿಗೆ ವಿಚಿತ್ರ ಎನಿಸುವಂತೆ `ಇಲ್ಲೇಳಾ ಖೋಡಿ… ನಾನೂ ಉಡ್ರನ್ನ ಉಸುರುಗಟ್ಟಂಗ್ ಗುದ್ಬಾಡ್ತಿತ್ತು.’ ಎಂದು ನನ್ನ ಸಾಂತಳ ಮುಖಗಳನ್ನು ಸವರಿದ. ಬೀಡಿ ವಾಸನೆಯುಳ್ಳ ಅಪ್ಪನ ಬಿರುಸು ಕೈಗಳ ಮಮತೆಯನ್ನು ನಾನಿಂದಿಗೂ ಮರೆಯಲಾರೆ.
ನಾನು ಬೀಡಿ ತರಲೆಂದು ಕತ್ರಿಗೋದಾಗ ಒಬ್ಬರಾದರೂ `ನಿಮಪ್ ಹೆಂಗದಾನ್ಲೇ?’ ಎಂದು ಕೇಳುತ್ತಿದ್ದರು. ನಾನಾಗ ಒಳಗೆ `ನಿಮ್ಮಮ್ಮನ್‌ತು.. ಇದ್ದಾಂಗದಾನ.’ ಎಂದು ಬಯ್ದುಕೊಳ್ಳುತ್ತಿದ್ದೆ. ಅಪ್ಪ ಗಾಯ ಪೂರ್ತಿ ಮಾಯ್ದರೂ ಹೊರಗೆ ಹೋಗಲಿಲ್ಲ. ಅವ್ವ, ದೊಡಮ್ಮ ಎಷ್ಟೇ ಹೇಳಿದರೂ ಆತ ಮನೆಬಿಟ್ಟು ಹೊರಗೆ ಅಡ್ಡಾಡಲು ಒಪ್ಪಲೇಇಲ್ಲ. `ನನ್ ಸುಮ್ನ ಬುಟ್‌ಬುಡ್ರಿ… ಹೊರಗೋಗಿ ಮಾಡದೇನೈತಿ?’ ಎನ್ನುತ್ತಿದ್ದ. ಬೇಗ ಎದ್ದು ತಮ್‌ತೆಂಡಿಗೆ ಹೋಗುವುದು, ಬಂದು ಗ್ವಾದಲಿಗೆ ಕುಂತು ಬೀಡಿ ಸೇದುವುದು, ಇಲ್ಲಾ ನನ್ನೂ ಸಾಂತಿನೂ ಕರಕೊಂಡು ಹುಲಿಮನಿ ಆಡುವುದು… ಇದೇ ಆತನ ದಿನಚರಿಯಾಗಿ ಹೋಯಿತು. ಊರಮಂದಿಯೆಲ್ಲ ಸಸಿ ಹಚ್ಚಲಿಕ್ಕೆ ತಯಾರಿ ಮಾಡುತ್ತಿದ್ದರೆ ಅಪ್ಪ ತನಗದು ಸಂಬಂಧವೇ ಇಲ್ಲದಂತೆ ಸುಮ್ಮನಿದ್ದ. ಅವ್ವ ಮೊದಲಿಗಿಂತ ಹತ್ತು ಪಟ್ಟು ಗೋಳಾಡಿದರೂ ಶಪಿಸಿದರೂ ಕಂಬಕ್ಕೆ ಹಣೆಚಚ್ಚಿಕೊಂಡರೂ ಏನೂ ಪ್ರಯೋಜನವಾಗಲಿಲ್ಲ. ಅವ್ವ ದೊಡಮ್ಮರೇ ಕೂಡಿಕೊಂಡು ಅವರಿವರ ಸಹಾಯದಿಂದ ಆ ವರ್ಷದ ಬೆಳೆ ತೆಗೆದರು.
ನನಗೂ ಸಾಂತಿಗೂ ಅಪ್ಪ ನಮ್ಮೊಂದಿಗೆ ಹುಲಿಮನಿ, ಆಣಿಕಲ್ಲು, ಚಪ್ಪಳಾಟ ಆಡುವುದು, ತಾನು ಮಾಡಿದ ಮೊಲಬ್ಯಾಟಿಗಳ ಕತೆ ಹೇಳುವುದು ಶುರು ಮಾಡಿದ್ದರಿಂದ ಆತ ಹೊರಗೆ ಹೋಗದಿರುವುದೇ ಬೇಸು ಎನಿಸಿತ್ತು. ಅವ್ವನಿಗೂ ಹೇಳಿಹೇಳಿ ಸಾಕಾಯಿತು. ದೊಡಮ್ಮನೊಂದಿಗೆ ಬೆಣಕಲ್ಲಿಗೆ ಹೋಗಿ ತಾಯತ ಮಾಡಿಸಿಕೊಂಡು ಬಂದಳು. ಆದರೆ ಅದನ್ನು ಅಪ್ಪನಿಗೆ ಕಟ್ಟಲಿಕ್ಕಾಗಲಿಲ್ಲ. ಒತ್ತಾಯ ಮಾಡಿದಾಗ `ಎಣ್ಣಿಕುಡುದು ಸಾಯ್ತೀನಿ?’ ಅಂತ ಹೆದರಿಸುತ್ತಿದ್ದ.
ಊರ ಮಂದಿಯೆಲ್ಲ `ಭಗವಂತಪ್ಪಗ ದಳ ಬಡದೈತಿ’ ಅಂತ ಆಡಿಕೊಳ್ಳತೊಡಗಿದರು. ನನ್ನೂ ಸಾಂತಿನೂ ಪಾಪದ ಮಕ್ಕಳಂತೆ ಕಾಣತೊಡಗಿದರು. ಅವ್ವ ದೊಡ್ಡಮ್ಮರು ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಹುಲಿಗೆಮ್ಮನ ಜಾತ್ರಿಯಲ್ಲಿ ಎರಡು ಹೋತ ಬ್ಯಾಟಿ ಮಾಡಿಸಿದರು, ಪ್ರತಿ ವರ್ಷ ಅಲಬ್ಬದ ಕುಣಿಗೆ ಉಪ್ಪು ಹಾಕಿದರು, ದೀಡ ನಮಸ್ಕಾರ ಹಾಕಿದರು. ಆದರೆ ಅಪ್ಪ ಗ್ವಾದಲಿ ಬಿಟ್ಟು ಏಳಲೇ ಇಲ್ಲ.
ಅಪ್ಪ ಮನೆಯಲ್ಲೇ ಮುದುರಿ ಕುಳಿತುಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಖ್ಯಾಡೇದ ಹುಸೇನಿ ಎಂದು ಒಂದು ದಿನ ಅಪ್ಪನ ಮಾತುಗಳಿಂದಲೇ ಗೊತ್ತಾಯಿತು. ಖ್ಯಾಡೇದ ಹುಸೇನಿ ಎಂದರೆ ನಮ್ಮೂರಷ್ಟೇ ಅಲ್ಲ ಪಕ್ಕದ ನಾಲ್ಕಾರು ಊರುಗಳಿಗೂ ಚಿರಪರಿಚಿತ. ನಾಟಕಗಳಲ್ಲಿ ಯಾವಾಗಲೂ ಚ್ಯಾಷ್ಟಿ ಪಾರ್ಟು ಮಾಡುವ ಆತನಿಗೆ ಬಾವಿಕಟ್ಟೆಗೆ ಕೂತು ಊರಮಂದೀನೆಲ್ಲ ಆಡಿಕೊಳ್ಳುವ ಚಾಳಿ. ಆತನೊಂದಿಗೆ ಯಾವಾಗಲೂ ಯಾರಾದರಿಬ್ಬರು ಕೆಲಸಗೇಡಿಗಳು ಇರುತ್ತಿದ್ದರು. ಅವರೊಂದಿಗೆ ಕುಂತು ಇವತ್ತು ಯರ‍್ಯಾರ ಹೆಂಡಿರು ಯರ‍್ಯಾರಿಗೆ ಎಲ್ಲೆಲ್ಲಿ ಭೆಟ್ಟಿಯಾಗಿ ಕಾಲೆತ್ತಿದರು, ಯಾರ ಮಗಳು ಯಾರ ಮಗನಿಗೆ ದಡ್ಡಿಗೆ ಹೋಗುವಾಗ ಸಿಕ್ಕು ಬೆಲ್ಲ ಕೊಟ್ಟಳು ಅಂತೆಲ್ಲ ಊರತಿಪ್ಪಿ ಕೆದರುವುದು ಅವನು ಮತ್ತು ಅವನ ಪಟಾಲಮ್‌ಗಿದ್ದ ಏಕೈಕ ಉದ್ಯೋಗ. `ಈ ಚ್ಯಾಷ್ಟಿ ಸೂಳೇಮಗ ಹೇಂತಿತಂದಾಕಿದ್ದು ತಿಂದು ಕರಗಿಸ್ಕ್ಯಳಾಕ ಊರ್ ಮಂದೀನ್ ಆಡಿಕ್ಯಂತಾನ.’ ಎಂದು ಅವನನ್ನು ಊರಮಂದಿ ಬಯ್ದುಕೊಳ್ಳುತ್ತಿದ್ದರು. ಆದರೆ ಯಾರಿಗೂ ಎದುರಿಗೆ ಅಂದು ತಾರಿಸಿಕೊಳ್ಳುವ ಧೈರ್ಯ ಇರಲಿಲ್ಲ. ಮೊದಲೇ ಇಲ್ಲದ್ದು ಇದ್ದದ್ದು ಒಂದು ಮಾಡಿ ಕಥಿಕಟ್ಟುವುದರಲ್ಲಿ ಎತ್ತಿದ ಕೈಯಾಗಿದ್ದ ಅವನ ತಂಟೆಗೆ ಹೋಗದಿರುವುದೇ ಲೇಸೆಂದು ಸುಮ್ಮನಿದ್ದರು. ಆದರೆ ಅಪ್ಪ ಸುಮ್ಮನಿರಬೇಕಲ್ಲ. ಹುಸೇನಿ ಆಡಿಕೊಳ್ಳುವುದಕ್ಕೆಷ್ಟು ಫೇಮಸ್ಸೋ ಅಪ್ಪನ ಸಿಟ್ಟೂ ಅಷ್ಟೇ ಫೇಮಸ್ಸು. `ಭಗಂತಪ್ಪ ಸಿಟ್ ಬಂದಾಗ ಮನ್ಷ್ಯಾ ಆಗಿರಲ್ಲ.’ ಎನ್ನುತ್ತಿದ್ದರು. ಅವ್ವನ ಬೆನ್ನಿಗೆ ಎಷ್ಟೋ ಸಲ ಕಾವು ಕೊಟ್ಟಿದ್ದ ನನಗೆ ಅದನ್ನುಅವರಿಂದ ಕೇಳಿ ತಿಳಿಯಬೇಕಾಗಿರಲಿಲ್ಲ ಎಂಬುದು ಬೇರೆ ಮಾತು.
ಅಪ್ಪನ ಸಿಟ್ಟನ್ನು ಬಣ್ಣಿಸುವಾಗ ಅವ್ವ ಆಗಾಗ ಅದೊಂದು ಘಟನೆ ನೆನಪಿಸಿಕೊಂಡು ನಗುತ್ತಿದ್ದಳು.
ಹಂಗಾಮದಲ್ಲಿದ್ದಾಗ ಅಪ್ಪನಿಗೆ ರಾಜಕುಮಾರನ ಸಿನಿಮಾಗಳನ್ನು ನೋಡುವ ಹುಚ್ಚು. ಬಭ್ರುವಾಹನ ಸಿನಿಮಾವನ್ನು ಹತ್ತನ್ನೆರೆಡು ಬಾರಿ ನೋಡಿದ್ದ. ಆಗೊಮ್ಮೆ ನಮ್ಮ ಹೊಲದಲ್ಲಿ ನೆಲ್ಲು ತುಳಿಸಲೆಂದು ನಾಲ್ಕಾರು ಬಂಡಿಗಳು ಕಲೆತಿದ್ದವು ಕಣದಲ್ಲಿ. ಎಲ್ಲ ಮುಗಿದ ಮೇಲೆ ಅಪ್ಪನ ಗೆಳೆಯರಲ್ಲಿ ಯಾರೋಒಬ್ಬರು `ಬಬ್ರುವಾನಆಡಂಬ್ರಿ’ ಎಂದಿದ್ದ. ಎಲ್ಲರಲ್ಲೂ ಉಮ್ಮಸ್ ಬಂದಿದೆ. ಅಪ್ಪ ಬಭ್ರುವಾಹನನಾಗಿ ಒಂದು ಬಂಡಿಯಲ್ಲಿ ನಿಂತರೆ, ಇನ್ನೊಂದು ಬಂಡಿಯಲ್ಲಿ ಅರ್ಜುನನಾಗಿ `ಜಡಿಯಪ್ಪ’ ನಿಂತಿದ್ದ. ಆ ಕಡೆ ಪಾಳಯಕ್ಕೆ ಒಂದಷ್ಟು ಮಂದಿ, ಈ ಕಡೆ ಪಾಳಯಕ್ಕೆ ಒಂದಷ್ಟು ಮಂದಿ. ಬಿಲ್ಲು ಬಾಣಗಳಷ್ಟೇ ಕಮ್ಮಿ. ಶುರುವಾಯಿತು `ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ…’ ಎಂದು. ಇಬ್ಬರೂ ಹತ್ತನ್ನೆರಡು ಸಲ ಸಿನಿಮಾ ನೋಡಿರುವವರೇ. ಒಂದೂ ಮಾತು ತಪ್ಪುತ್ತಿಲ್ಲ. ಸೂರ್ಯ ಕೆಳಗಿಳಿಯುತ್ತಿದ್ದರೆ ಇವರ ಮಾತುಗಳ ಕಾವು ಏರುತ್ತಿದೆ. ಪ್ರೇಕ್ಷಕರು ಬೇರೆ ಹಕ್ಕಾ ಹಕ್ಕಾ ಎಂದು ಹುರಿದುಂಬಿಸುತ್ತಿದ್ದಾರೆ. ಸವಾಲಿನಾಟ ಕೊನೆಯಾಗಿ ಯುದ್ಧ ಶುರುವಾಗುವ ಹೊತ್ತು. ಕೊನೆಗೆ ಅರ್ಜುನ, `ಥೂಜಾರಿಣಿಯ ಮಗನೇ’ ಎಂದು ಹಂಗಿಸುತ್ತಾನೆ. ಬಬ್ರುವಾಹನನ್ನು ಆವಾಹಿಸಿಕೊಂಡಿದ್ದ ಅಪ್ಪನಿಗೆ ಅಷ್ಟೊತ್ತಿಗೆ ತಾನು ನಾಲ್ಕೆತ್ತಿನ ಭೀಮಣ್ಣನ ಏಕೈಕ ಮಗ ಭಗವಂತ ಎಂಬುದೇ ಮರೆತು ಹೋಗಿದೆ. ನನ್ನನ್ನು ಜಾರಿಣಿಯ ಮಗ ಅಂದನಲ್ಲ ಇವನು ಎಂದು ಸಿಟ್ಟಿಗೆದ್ದು ಬಂಡಿಯ ಗೂಟ ಕಿತ್ತಿಕೊಂಡು ಬೀಸಿದ್ದಾನೆ ಜಡಿಯಪ್ಪನ ಕಡೆಗೆ. ಇನ್ನಷ್ಟು ಜೋರಾಗಿ ಬೀಸಿದ್ದರೆ ಜಡಿಯಪ್ಪನ ಜಲ್ಮದ ನೆನಪುಗಳೆಲ್ಲ ನಮ್ಮ ಹೊಲದ ಕಣದಲ್ಲಿ ರಕ್ತವಾಗಿ ಸುರಿಯುತ್ತಿದ್ದವು. ಅಪ್ಪನ ರೌದ್ರಾವತಾರ ನೋಡಿದ ಎಲ್ಲರೂ `ಇದೇನಾತ್ ಇದಕ್ ಖೋಡಿಗೆ’ ಎಂದು ಬೆಚ್ಚಿ ಬಿದ್ದಿದ್ದರಂತೆ. `ನಿಮಪ್ಪನ್ ಅವತ್ ಭೀಮಣ್ ಮಾವಾ… ಅಗಸಿ ಮುಂದಗೋಸ್ಯಾಗ ನಿಂದ್ರಿಸಿ ಬಡದಿದ್ದ.’ ಎಂದು ನೆನಪಿಸಿಕೊಂಡು ಕೊಕ್ಕೆಂದು ನಗುತ್ತಿದ್ದಳು ಅವ್ವ.
ಅದಾದಮೇಲೆ `ವಜ್ರಮುನಿ’ ಅಂತಲೇ ಅಪ್ಪನನ್ನು ಜನ ಗುಟ್ಟಾಗಿ ಕರೆಯತೊಡಗಿದರು.
ಇಂತಿಪ್ಪ ಅಪ್ಪನನ್ನು ಖ್ಯಾಡೇದ್ ಹುಸೇನಿ ಸುಮ್ಮನಿರಲಾರದೆ ಅದೊಂದು ದಿನ ತಡವಿಬಿಟ್ಟಿದ್ದಾನೆ. ನೀರು ಕುಡಿಸಿಕೊಂಡು ಬರಲು ಹಳ್ಳಕ್ಕೆ ಎತ್ತು ಹೊಡಕೊಂಡು ಹೊಂಟಿದ್ದ ಅಪ್ಪನನ್ನು `ಎಲ್ಲಿಗ್ ಹೊಂಟೀ ವಜ್ರಮುನಿ ಮಾವಾ’ ಎಂದು ಕೆಣಕಿದ್ದಾನೆ. ಅಪ್ಪ ಆಗ ಕೊಟ್ಟ ನೋಟಕ್ಕೆ ಸುಮ್ಮನಾಗುವುದು ಬಿಟ್ಟು, `ನಿನಿಗೊಂದ್ ವಿಲನ್ ಪಾರ್ಟ್‌ಕೊಡ್ಲ್ಯನು ಹೊಸ ನಾಟಕದಾಗ’ ಎಂದಿದ್ದಾನೆ. ಅಪ್ಪನಿಗೆ ಕೊಂಕೆಂದರೆ ಮೊದಲೇ ಆಗಿಬರುವುದಿಲ್ಲ. ಏನಿದ್ದರೂ ನೇರಾನೇರಾ ಆಗಬೇಕು. `ಹೆಂಗಸ್ರಂಗ್ ಏನಲೇ ಹುಸೇನಿ ನಿಂದು ಕೊಂಕು.. ಯಾಕಿವತ್ತು ತಿಂಡಿಗೆದ್ದಿಯಲ’ ಎಂದಿದ್ದಾನೆ. ಹುಸೇನಿ ಮೆಲ್ಲಗೆ ಹೆಂಗಸರ ದನಿಯಲ್ಲಿ `ಹಂಗೇನಿಲ್ ಮಾವಾ… ನಿಂಗೂ ಇಸ್ಪಟ್ ಬ್ಯಾಸರಾಗಿ ಬ್ಯಾರೆ ಆಟ ಆಡಂಗಾಗಿರಬೇಕು. ಅದ್ಕಾ ಪಾರ್ಟೇನರ ಕಲಿತಾನನು ಅಂತ ಕೇಳಿದ್ನ್ಯಪ’ ಎಂದಿದ್ದ. ಅಪ್ಪನ ಮರ್ಮಕ್ಕೆ ಬೆಂಕಿ ಹತ್ತಿದೆ. ಇಸ್ಟೀಟಿನ ದೆಸೆಯಿಂದ ಹೊಲ ಮನಿ ಅಷ್ಟೂ ಕಳಕೊಂಡು ಪರ‍್ದೇಸಿ ಆಗುವ ಹಂತಕ್ಕೆ ತಲುಪಿದ್ದ ಸಮಯವದು. ಹುಸೇನಿಯ ಈ ಮಾತು ಮರ್ಮಕ್ಕೆ ಬೆಂಕಿ ಹಚ್ಚದೆ ಸುಮ್ಮನಿದ್ದೀತೇ? `ನಿಮ್ಮೋನ್ ಚಾಷ್ಟಿ ಸುಳೆಮಗನೆ. ಬುಟ್ಟಂಗಲ್ಲ ಬಾಳಾಗ್ಯೇತಿ ನಿಂದು.’ ಎಂದು ಕಾಲಲ್ಲಿದ್ದ ಕೊಲ್ಲಾಪುರಿ ಚಪ್ಪಲಿ ತೆಗೆದುಕೊಂಡಿದ್ದ. ಹುಸೇನಿ ಕಾಲಿಗೆ ಬುದ್ಧಿ ಹೇಳಿದ್ದಾನೆ. ಅಪ್ಪಅವತ್ತು ಹುಸೇನಿಯನ್ನು ಓಡಾಡಿಸಿ ಬಡಿದ. ಮೊದಲೇ ಹುಸೇನಿ ತಮ್ಮ ಹೆಂಡಿರು ಮಕ್ಕಳನ್ನು ಯರ‍್ಯಾರಿಗೋ ಸೇರಿಸಿ ಮಾತಾಡುತ್ತಾನೆಂದು ಸಿಟ್ಟಿದ್ದ ಜನ ಬಿಡಿಸಿಕೊಳ್ಳುವ ಮಬ್ಬತನಕ್ಕೆ ಕೈ ಹಾಕಲಿಲ್ಲ.
ಅಪ್ಪ ಅದಾದ ಮೇಲೆ ಪೂರ್ತಿ ಬದಲಾಗಿಬಿಟ್ಟ. ಅವ್ವ ಅಪ್ಪ ಮಾತು ಕಮ್ಮಿ ಮಾಡಿದರು. ಮಾತಾಡಿದರೆ ಕಿಡಿಗೆ ಕಿಡಿಗೆ ಹತ್ತಿ ಜಗಳವಾಗುತ್ತದೆಂದುಕೊಂಡು ಸುಮ್ಮನಿರುತ್ತಿದ್ದರೋ ಏನೋ ಗೊತ್ತಿಲ್ಲ. ಮುಂಜಾನೆ ಬೇಗ ಎದ್ದು ಬೆಳಕು ಹರಿಯುವುದರೊಳಗೆ ತಮ್ ತೆಂಡಿಗೆ ಹೋಗಿ ಬಂದು ಗ್ವಾದಲಿ ಕಟ್ಟೆಗೆ ಕೂತುಬಿಡುತ್ತಿದ್ದ ಅಪ್ಪ. ಅವ್ವನಿಗೆ ತುಂಬ ಹಳಹಳ ಆಗಿತ್ತು.
ತಾನು ಅವ್ವನೊಂದಿಗೆ ತಿಂದಿರುವ ಉದುಗಳ್ಳಿ ಏಟನ್ನು ಮುಂದಿಟ್ಟುಕೊಂಡು ಹುಸೇನಿ ಹಂಗಿಸದೆ ಬಿಡುವುದಿಲ್ಲವೆಂಬುದು ಅಪ್ಪನ ಮುಖ್ಯ ಭಯವಾಗಿತ್ತು. ಅದೇ ಅವನನ್ನು ಗ್ವಾದಲಿಗೆ ಕಟ್ಟಿಹಾಕಿತ್ತು. ಹುಸೇನಿ ಯಾರೋ ನಾಟಕದ ಹಿರೋಯಿನ್ನಿನೊಡನೆ ಓಡಿ ಹೋದಮೇಲೂ ಅಪ್ಪ ಹೊರಗೆ ಹೋಗಲು ಧೈರ್ಯ ಮಾಡಲಿಲ್ಲ.
ಇದೆಲ್ಲಾ ಬಹಳ ವರ್ಷಗಳ ಹಿಂದಿನ ಮಾತು. ಹುಸೇನಿ ಬಳ್ಳಾರಿಯಲ್ಲಿ ಆತನ ಪ್ರೇಯಸಿಯಿಂದಲೇ ಕೊಲೆಯಾಗಿ ಕಾಲವೇ ಆಗಿದೆ, ಆತ ಕುಂತು ಆಡಿಕೊಳ್ಳುತ್ತಿದ್ದ ಬಾವಿಕಟ್ಟೆಯನ್ನು ಒಡೆದು ಕಾಂಪ್ಲೆಕ್ಸ್ ಒಂದು ತಲೆಎತ್ತಿದೆ, ಅಪ್ಪ ಎತ್ತು ಹೊಡಕೊಂಡು ಹೋಗುತ್ತಿದ್ದ ಹಳ್ಳದ ಮೇಲೆ ರಸ್ತೆ ಹರಿದು ಹೇಳ ಹೆಸರಿಲ್ಲವಾಗಿದೆ, ಜಡಿಯಪ್ಪ ಸೇರಿದಂತೆ ಅಪ್ಪನ ಸ್ನೇಹಿತರಲ್ಲಿ ಹಲವರಾಗಲೇ ಕಲ್ಲೇಶ್ವರನ ಪಾದ ಸೇರಿದ್ದಾರೆ. ಅವರ ಮಕ್ಕಳೆಲ್ಲ ಬೆಂಗಳೂರು ಸೇರಿದ್ದಾರೆ. ತುಂಗಭದ್ರೆ ಬತ್ತಿ ಜನರೆಲ್ಲ ಬೆಂಗಳೂರು, ಮಂಗಳೂರು ಅಂತ ಗುಳೆ ಹೋಗುತ್ತಿದ್ದಾರೆ. ನನ್ನವ್ವ ತುಂಗಭದ್ರೆಯೂ ಕಲ್ಲೇಶ್ವರನ ಪಾದ ಸೇರಿ ವರ್ಷವಾಯಿತು. ದೊಡ್ಡಮ್ಮ ದುಡಿಯಲಿಕ್ಕೆ ಹೋದ ತನ್ನ ಮಕ್ಕಳೊಂದಿಗೆ ಬೆಂಗಳೂರಿನ ಯಾವುದೋ ನಗರವೊಂದರ ಅಪಾರ್ಟ್ಮೆಂಟ್ ಮುಂದಿನ ಇಟ್ಟಿಗೆ ಗೂಡಿನಂಥ ಮನೆಯಲ್ಲಿ ದಿನಕಳೆಯುತ್ತಿದ್ದಾಳೆ. ಸಾಂತೀ ತನ್ನ ಗಂಡನ ಮನೆಯ ಕಾರುಬಾರುಗಳಲ್ಲೇ ಮುಳುಗಿಬಿಟ್ಟಿದ್ದಾಳೆ. ಆಗಾಗ ಬಂದು ಅಪ್ಪನನ್ನು ನೋಡಿಕೊಂಡು ಹೋಗುತ್ತಾಳೆ. ಓದು ಕೆಲಸ ಅಂತ ದೊಡ್ಡದೊಡ್ಡ ಊರಗಳನ್ನೇ ತಿರುಗಿದ ನಾನಿಂದು ವಾಪಾಸು ನಮ್ಮೂರಿಗೆ ಬಂದಿದ್ದೇನೆ. ಅದೇಕೋ ರೆಕ್ಕೆಯ ಮೋಹ ಕಡಿಮೆಯಾಗಿ ಮಣ್ಣಿನ ಸೆಳೆತ ಹೆಚ್ಚಾಗಿದೆ.
ಜಗತ್ತು ಎಷ್ಟೆಲ್ಲಾ ಬದಲಾಗಿದ್ದರೂ ಅಪ್ಪ ಮಾತ್ರ ಬದಲಾಗಿಲ್ಲ. ಗ್ವಾದಲಿಯನ್ನೇ ತನ್ನ ಜಗತ್ತಾಗಿ ಮಾಡಿಕೊಂಡುಬಿಟ್ಟಿದ್ದಾನೆ. ಅವ್ವ ಸತ್ತಾಗಲೂ ಬಂಕ ಬಿಟ್ಟು ಬರಲಿಲ್ಲ ಆತ. ಅದ್ಯಾಕೆ ಸತ್ತು ಕಾಲವಾಗಿರೋ ಹುಸೇನಿಗೆ ಹೆದರಿಕೊಂಡು ಇನ್ನೂ ಗ್ವಾದಲಿಗೇ ಅಂಟಿಕೊಂಡಿದ್ದಾನೋ ತಿಳಿಯದು. ಯಾವಾಗಲೂ ಖಾಲಿ ಬಂಕದತ್ತ ದಿಟ್ಟಿಸುತ್ತ ಕೂತುಬಿಟ್ಟಿರುತ್ತಾನೆ.
`ಯಪಾ.. ದಿನಾ ಇಲ್ಲೇ ಕುಂದ್ರಾಕ ಬ್ಯಾಸರಾಗಲ್ಲನು? ಅದೇನೈತ್ಯಂತ ನೋಡ್ತರ‍್ತೀ ಆ ಖಾಲಿ ಬಂಕದಾಗ?’ ಎಂದು ಕೇಳಿದೆ.
`ಇಲ್ಲಪಾ.. ಈ ಖಾಲಿ ಬಂಕದಾಗ ಜಲ್ಮದ ನೆನಪು ಅದಾವು.. ಅವನ್ ನೋಡಿಕ್ಯಂತ ಕುಂದರ‍್ತೇನಿ’
`ಏನವು ಜಲ್ಮದ ನೆನಪುಗಳು?’
`ನಮಪ್ಪ, ಅವ್ವ, ಅವರಪ್ಪ, ಅವ್ವ, ಅವರಿಗೆ ಹಾಲುಣಿಸಿದ ದನ ಅದಾವು… ನಿಮ್ ತಾತಯಂಡೀಗಸ ಬಳಿಯೋದೂ, ನಿಮಮ್ಮ ಹಾಲಿಂಡಾದು ಕಾಣ್ತೇತಿ… ನಿಮವ್ವಾನೂ ಅದಾಳ’
`ನನಿಗೆ ಕಾಣವಲ್ತಲ?’
`ನಿನಿಗೆ ಕಾಣಲ್ಲದು.. ನಿನಿಗೆ ನಾಳೆ ನಾನು ತೀರಿಕ್ಯಂಡ್‌ಮ್ಯಾಲೆ ಈ ಗ್ವಾದಲಿ ನೋಡಿದ್ರ ಬೀಡಿ ಸೇದಿಕ್ಯಂತ ನಾ ಕುಂತಿರಾದು ಕಾಣತ್ತ…’
ಸಾವಿನ ವಿಷಯ ಬಂದದ್ದೇ ಹೆದರಿಕೆ ಎನಿಸಿ ವಿಷಯಾಂತರ ಮಾಡಿದೆ.
`ಯಪಾ.. ಹುಸೇನಿ ಸತ್ತೇ ಇಪ್ಪತ್ತೊರ್ಷ ಆತು… ನೀನ್ಯಾಕ್ ಇನ್ನಾ ಹೊರಾಗ್ ಹೋಗ್ವಲ್ಲಿ?’
`ಈಗೇನು ಹುಸೇನಿಗೆ ಹೆದ್ರಿಕೊಂಡೇನು ಕುಂತಿಲ್ ಪಾ ನಾ ಇಲ್ಲಿ?’
`ಮತ್ಯಾಕ?’
`ಅಲ್ಲೇನೈತಿ ಹೋಗಾಕ? ಕಾಡ್ಸಾಕ್ ಹುಸೇನಿ ಸೈತ ಇಲ್ಲ ಅಲ್ಲಿ. ಎಲ್ಲಾ ಇಲ್ಲೇಐತಿ… ನನ್ನ ಬ್ರಹ್ಮಾಂಡನ ಈ ಬಂಕದಾಗ ನಿಂತೈತಿ…’
`ಅಲ್ಲಪಾ… ಜಗತ್ತೆಷ್ಟ್ ಬದಲಾಗ್ಯೇತಿ ಅಂತನರೇ ನೋಡಾಕನ ಹೊರಾಗ್ ಬಾ’
`ವಲ್ಯಪಾ… ನಾ ಈಗ ಹೊರಾಗ್ ಬಂದ್ರ ಹೊರಗಿನ ಬ್ರಹ್ಮಾಂಡ ನನ್ ಬ್ರಹ್ಮಾಂಡನ ತಿಂದಾಕುಂದ್ರುತೈತಿ..’
`ಹಂಗಂದ್ರ?’
`ಹುಚ್ಚಪ್ಪಾ… ಹೆಂಗ್ ತಿಳಿಸಿ ಹೇಳ್ಯೋ ನಿನಗ… ನಾ ನಂದಾ ಒಂದು ಕಥಿ ಕಟ್ಟಿಗ್ಯೊಂದು ಅದ್ರಾಗ ಅರಾಮದೀನಿ… ಅದನ್ ಸುಳ್ ಮಾಡೂ ಯಾವ್ ಕಥೀನೂ ಬ್ಯಾಡಾಗ್ಯೇತಿ ನನಗ…’
`ಏನದು ನಿನ್ ಕಥಿ?’
`ನನ್ ಕಥೀ ಅಂದ್ರ ನಮ್ಮೂರಿನ್ ಕಥಿ, ನಮ್ ಮನೆತನದ್ ಕಥಿ, ನಿಮವ್ವನ್ ಕಥಿ, ಕಣದಾಗ ಬಭ್ರುವಾಹನ ಆಗಿದ್ ಕಥಿ, ನಾ ಜಡಿಯಪ್ಪಗ ಗೂಟ ತಗೊಂಡ್ ಬೀಸಿ ವಜ್ರಮುನಿ ಆಗಿದ್ ಕಥಿ, ಹುಸೇನಿಗೆ ಓಡ್ಯಾಡಿಸಿ ಬಡದದ್‌ಕಥಿ… ಎಲ್ಲಾ ನಮೂನಿ ಕಥಿ. ಈ ಕಥಿಗೋಳು, ಇದ್ರಾಗಿರೂ ಎಲ್ಲಾರೂ ಈ ಬಂಕದಾಗಷ್ಟಾ ಜೀವಂತ ಅದಾರ… ನಾ ಏನರೆ ಹೋರಾಗ್ ಹೋದ್ನೀ… ಪಕ್ಕಾ ಅವರೆಲ್ಲ ಮಣ್ಣಾಗ್ತಾರ.’
ಹೀಗೆ ಅಪ್ಪ ಏನೇನೋ ಮಾತನಾಡುತ್ತಾನೆ. ಕೆಲವೊಮ್ಮೆ ಹುಚ್ಚನಂತೆ, ಕೆಲವೊಮ್ಮೆ ಏನೋ ಬಚ್ಚಿಟ್ಟುಕೊಂಡಿರುವ ದಾರ್ಶನಿಕನಂತೆ ಕಾಣಿಸುತ್ತಾನೆ. ಬೇರಿನ ಸೆಳತಕ್ಕೀಡಾಗಿ ನನ್ನದೇ ಕತೆಯನ್ನು ತಲೇಲಿಟ್ಟುಕೊಂಡು ಬಂದಿರುವ ನನಗೀಗ ಆತನ ಮಾತುಗಳು ಅರ್ಥ ಆಗುತ್ತಿವೆ. ಕಾಲದ, ಬದಲಾವಣೆಯ ಹೊಡೆತಕ್ಕೆ ಸಿಕ್ಕು ಹೇಗೇಗೋ ಆಗಿರುವ ನನ್ನೂರು ನನ್ನೊಳಗಿದ್ದ ಕತೆಯನ್ನು ಇಂಚಿಂಚೇತಿಂದು ಹಾಕುತ್ತಿದೆ. ಅಪ್ಪನಿಗಾದರೂ ತನ್ನ ಕತೆಯನ್ನು ಉಳಿಸಿಕೊಳ್ಳಲು ಬಂಕವಿದೆ. ನನಗೆ?
ಬೆರಳು ನೀಡಿದರೆ ಹಸ್ತ ನುಂಗುವ ಪೈಕಿ
‘ನಮ್ಮ ಕತೆಗಳೇ ನಾವು. ಅವು ಪಂಜರವಾಗಬಲ್ಲವು ಮತ್ತು ಅದನ್ನೊಡೆವ ಸಲಾಕೆಗಳೂ ಆಗಬಲ್ಲವು’ ಎನ್ನುತ್ತಾಳೆ ಅಮೆರಿಕದ ಲೇಖಕಿ ರೆಬೆಕ್ಕಾ ಸಾಲ್ನಿಟ್. ‘ಜಗತ್ತು ಅಣುಗಳಿಂದ ಮಾಡಲ್ಪಟ್ಟಿಲ್ಲ, ಅದು ಕತೆಗಳಿಂದ ಮಾಡಲ್ಟಟ್ಟಿದೆ’ ಎಂಬ ಮಾತನ್ನು ತುಸು ಹೆಚ್ಚೇ ನಂಬಿರುವ ಮತ್ತು ಕತೆಗಾರನ ಕಣ್ಣಲ್ಲೇ ಯಾವತ್ತೂ ಜಗತ್ತನ್ನು ನೋಡಲು ಪ್ರಯತ್ನಿಸುವ ನನಗೆ ಸಾಲ್ನಿಟ್‌ಳ ಈ ಮಾತು ಯಾವಾಗಲೂ ನೆನಪಿಗೆ ಬರುತ್ತಿತ್ತು. ಕತೆಗಳಿಗೆ ನಮ್ಮನ್ನು ಕೂಡಿ ಹಾಕುವ ಶಕ್ತಿಯಿದೆ ಮತ್ತು ಆ ಬಂಧನದಿಂದ ಬಿಡುಗಡೆ ಮಾಡುವುದೂ ಅವಕ್ಕೆ ಗೊತ್ತಿದೆ ಎಂಬ ಸಾಲ್ನಿಟ್ ವಿಚಾರವನ್ನು ಎಷ್ಟು ಧೇನಿಸಿದರೂ ಅದರ ಅರ್ಥ ಕೈಗೆ ಸಿಕ್ಕಂತೆ ಮಾಡಿ ಮುಂದಕ್ಕೆ ಮುಂದಕ್ಕೆ ಮುಂದಕ್ಕೆ ಓಡುತ್ತಿತ್ತು. ಅದರ ಪೂರ್ಣಾರ್ಥ ನನ್ನ ಕೈಗೆ ಸಿಕ್ಕಿಹಾಕಿಕೊಂಡಿದ್ದು ಮತ್ತು ಅನುಭವದೊಂದಿಗೆ ಒಳಗಿಳಿದಿದ್ದು ‘ವಜ್ರಮುನಿ’ ಕತೆ ಬರೆಯುತ್ತಿದ್ದಾಗ. ಹಾಗಾಗಿ ಇವತ್ತಿಗೂ‘ವಜ್ರಮುನಿ’ ನನ್ನ ನೆಚ್ಚಿನ ನನ್ನದೇ ಕತೆಯಾಗಿ ಉಳಿದಿದೆ.
ಸಾಲ್ನಿಟ್ ಳ ಮಾತಿನ ಗುಂಗಲ್ಲಿರುವಾಗಲೇ‘ವಜ್ರಮುನಿ’ಯನ್ನು ಬರೆಯಲು ಶುರು ಮಾಡಿದ್ದರಿಂದಲೋ ಏನೋ ಆ ಕತೆಗೆ ಅವಳ ಮಾತಿನ ವಿನ್ಯಾಸ ನನಗೂ ಗೊತ್ತಾಗದಂತೆ ಒದಗಿಬಿಟ್ಟಿದೆ. ಅದೂ ನನ್ನ ಗಮನಕ್ಕೆ ಬಂದದ್ದು ಕತೆಯನ್ನು ಮುಕ್ಕಾಲು ಬರೆದು ಹೇಗೆ ಮುಗಿಸುವುದೆಂದು ತಲೆಕೆಡಿಸಿಕೊಂಡು ಅಲ್ಲಿವರೆಗೂ ಹಾಳೆಗಿಳಿದಿದ್ದ ಕತೆಯನ್ನು ಮತ್ತೆ ಮತ್ತೆ ಓದುತ್ತಿದ್ದಾಗ. ಆ ಕ್ಷಣವಂತೂ ಅದೆಷ್ಟು ಚಕಿತಗೊಂಡಿದ್ದೆ! ಹಾಗೆ ನೋಡಿದರೆ ಆ ಮಾತು ನನ್ನದೇ ಕತೆಯಿಂದ ನನ್ನನ್ನು ಬಿಡುಗಡೆ ಮಾಡಿ ಪುಣ್ಯಕಟ್ಟಿಕೊಂಡಿತ್ತು!
ಅಲ್ಲಲ್ಲಿ ಹರಡಿದ ಮೋಡಗಳಂಥ ಕೆಲವು ನೆನಪುಗಳೊಂದಿಗೆ ಆ ಕತೆಯನ್ನು ಶುರುಮಾಡಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆ ಕತೆ ಬರೆಯುವ ಮುಂಚೆ ಅಷ್ಟೇನೂ ಯೋಚನೆ ಮಾಡಿರಲಿಲ್ಲ. ಕತೆಯ ಶುರು ಹೇಗಾಗಬೇಕು, ನಡುವೆ ಏನಾಗಬೇಕು, ಕೊನೆಗೆ ಏನಾಗಬೇಕು ಎಂಬುದರ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಂಡಿರಲಿಲ್ಲ. ಭಾಷೆ ಮತ್ತು ಪ್ರಜ್ಞೆಯ ಮೇಲೆ ಭಾರ ಹಾಕಿ ಒಂದು ಸಾಲು ಬರೆದೆ. ಆ ಸಾಲು ಉದ್ಧೀಪಿಸಿದ ಮತ್ತೊಂದು ಸಾಲು ಬರೆದೆ. ಹೀಗೆ ಬರೆಯುತ್ತ ಬರೆಯುತ್ತ ಒಂದು ಪ್ಯಾರಾ ಆಯಿತು. ಆಮೇಲೆ ಆ ಪ್ಯಾರಾಕ್ಕೆ ಹೊಂದುವ ಇನ್ನೊಂದು ಪ್ಯಾರಾ ಬರೆದೆ. ಹೀಗೆ ಬರೆಯುತ್ತ ಬರೆಯುತ್ತ ಅದೊಂದು ಕತೆಯ ರೂಪ ಪಡೆಯಿತು. ಈ ಅನುಭವ ನಿಜಕ್ಕೂ ಎಳೆಯ ಕತೆಗಾರನಾದ ನನಗೆ ತುಂಬಾ ಹೊಸದು. ಇದಕ್ಕೂ ಮುಂಚೆ ಬರೆದಿದ್ದ ಕೆಲವು ಕತೆಗಳನ್ನು ತುಂಬಾ ತಲೆಕೆಡಿಸಿಕೊಂಡು ಬರೆದಿದ್ದೆ. ಮನಸಲ್ಲಿದ್ದದ್ದನ್ನು ಹಾಳೆಗಿಳಿಸಲಾಗುತ್ತಿಲ್ಲವಲ್ಲಾ ಎಂದು ಸಂಕಟಪಟ್ಟುಕೊಂಡಿದ್ದೆ. ಆದರೆ ಕತೆ ಎನ್ನುವುದು ಬೆರಳು ನೀಡಿದರೆ ಹಸ್ತ ನುಂಗುವ ಪೈಕಿಯೆಂದೂ ಅದಕ್ಕೆ ನಾವು ಒಪ್ಪಿಸಿಕೊಳ್ಳುವ ಮನಸ್ಸು ಮಾಡಿದರೆ ಅದೇ ದಡ ಸೇರಿಸುತ್ತದೆಂದೂ ನನ್ನ ಅನುಭವಕ್ಕೆ ಬಂದದ್ದು “ವಜ್ರಮುನಿ”ಯ ದೆಸೆಯಿಂದ.
ಮಂಜುನಾಯಕ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರು. ಸದ್ಯ ಬೆಂಗಳೂರಿನ ನಿವಾಸಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಂಜುನಾಯಕ ಪ್ರಸ್ತುತ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕತೆಗಳಿಗೆ 2017ರ ಸಾಲಿನ ಟೋಟೋ ಪುರಸ್ಕಾರ ಲಭಿಸಿದೆ. “ಫೂ” ಇವರ ಪ್ರಕಟಿತ ಕಥಾ ಸಂಕಲನ.