ಆಸ್ಟ್ರೇಲಿಯಾದಲ್ಲಿ ಈ ವರ್ಷ ಚುನಾವಣೆ. ಫೆಡರಲ್ ಸರ್ಕಾರಕ್ಕೆ. ಯಾವಾಗ ಎಂದು ಇನ್ನೂ ಗೊತ್ತಿಲ್ಲ. ಪ್ರಧಾನಿ ಹವರ್ಡ್ ಮೀನ ಮೇಷ ಎಣಿಸುತ್ತಾ, ಕಾಲ ಕೂಡಿ ಬರುವುದಕ್ಕೆ ಕಾಯುತ್ತಿದ್ದಾನೆ. ಈವತ್ತು ಮುಂಜಾನೆ ಇನ್ನೂ ಏಳು ಗಂಟೆ ಹೊಡೆದಿಲ್ಲ. ಆಗಲೇ ಈ ಪ್ರದೇಶದ ವಿರೋಧಪಕ್ಷದ ಲೇಬರ್‍ ಅಭ್ಯರ್ಥಿ ರೈಲು ನಿಲ್ದಾಣದ ಎದುರು ಒಬ್ಬಂಟಿ ನಿಂತಿದ್ದಾನೆ. ತನಗೆ ಓಟ್ ಹಾಕಿ ಎಂದು ಚೀಟಿ ಹಂಚುತ್ತಿದ್ದಾನೆ. ಹಲ್ಲು ಕಿರಿದು ‘ಗುಡ್ ಮಾರ್ನಿಂಗ್’ ಹೇಳುತ್ತಿದ್ದಾನೆ. ಜನ ಎಂದಿನಂತೆ ಅಸಡ್ಡೆಯಿಂದ ಅವನತ್ತ ಒಂದು ಅರೆನೋಟ ಬೀರಿ ಹೋಗುತ್ತಿದ್ದಾರೆ.

ನೆನಪಾಯಿತು: ಹಿಂದೊಮ್ಮೆ ರಸ್ತೆಯಲ್ಲಿ ಡೆಮಾಕ್ರಾಟ್ಸ್‌ನ ನಾಯಕ ಆಂಡ್ಯ್ರೂ ಬಾರ್ಟ್ಲೆಟ್ ಸಿಕ್ಕು ಅವನೊಡನೆ ಮಾತಿಗೆ ನಿಂತಿದ್ದೆ. ನಾನು ಯಾರೆಂದು ಗೊತ್ತಿಲ್ಲದಿದ್ದರೂ ಸುಮಾರು ಅರ್ಧ ಗಂಟೆ ನನ್ನೊಡನೆ ಮಾತಾಡಿದ. ಅಂದಿನ ಆಗು ಹೋಗುಗಳ ಬಗ್ಗೆ. ಚಿಂತೆ, ತವಕ ತಲ್ಲಣಗಳ ಬಗ್ಗೆ. ಎರಡೂ ಪ್ರಮುಖ ರಾಜಕೀಯ ಪಕ್ಷಗಳ ಕೊರತೆಗಳ ಬಗ್ಗೆ, ಮೋಸಗಳ ಬಗ್ಗೆ ಮಾತಾಡಿದೆವು. ನನಗೆ ಖುಷಿಕೊಟ್ಟದ್ದು ಏನಂದರೆ ಒಂದು ಬಾರಿಯೂ ಅವನು ತನ್ನ ಪಕ್ಷದ ಪ್ರಣಾಳಿಕೆಯಾಗಲಿ, ಅದರ ನಿಲುವು/ಕೆಲಸದ ಬಗ್ಗೆಯಾಗಲಿ ಚಕಾರವೆತ್ತಲಿಲ್ಲ. ಮತ್ತು ಮಾತಿನ ನಡುವೆ ಇಂಡಿಯದ ವಿಚಾರ ತೂರಿಸುವ ಪ್ರಯತ್ನ ಮಾಡಲಿಲ್ಲ. ಯಾಕೆ ಹೇಳಿದೆನಂದರೆ, ಇಲ್ಲಿ ಇಂಡಿಯಾದವರಿಗೆ ಸಭೆಗಳಿಗೆ ರಾಜಕಾರಣಿಗಳನ್ನು ಕರೆಸುವ ತೆವಲಿದೆ. ಬಂದವರಿಗೂ ಉದ್ದುದ್ದಾನ ‘ಭಾರತದ ಸಂಸ್ಕೃತಿ’ ಅದೂ ಇದೂ ಅಂತ ಹೊಗಳುವ ತೆವಲಿದೆ. ಅದರ ಬಗ್ಗೆ ಇನ್ನೊಮ್ಮೆ ಹೇಳ್ತೀನಿ.

ಈ ಮುಂಜಾನೆ ವೋಟು ಕೇಳುವ ಅಭ್ಯರ್ಥಿ ಚೇಲಾಗಳು ಇಲ್ಲದೆ, ಯಾವುದೇ ಡೌಲಿಲ್ಲದೆ ಒಬ್ಬಂಟಿ ನಿಂತು ತಾನೇ ಚೀಟಿ ಹಂಚುವುದು ಒಳ್ಳೆಯದೆ. ಅವನನ್ನು ನಿರ್ಲಕ್ಷ್ಯದಿಂದ ನೋಡುವುದೂ ಸರಿಯೆ. ಇಲ್ಲದಿದ್ದರೆ ಇಂತವರು ತಲೆ ಮೇಲೆ ಬಂದು ಕೂತುಬಿಡುತ್ತಾರೆ. “ನಾನು ನಿನ್ನನ್ನು ಆಳುವವ” ಅನ್ನುತ್ತಾರೆ. ಆದರೆ ಈಗ “ನಿನ್ನ ಕೆಲಸ ನೀನು ಮಾಡು, ನನ್ನ ಕೆಲಸ ನಾನು ಮಾಡುತ್ತೇನೆ. ನೀನು ಹೆಚ್ಚೇನಲ್ಲ. ನಾನು ಕಡಿಮೆಯೇನಲ್ಲ” ಎಂಬ ಅಲಿಖಿತ ಒಪ್ಪಂದ ಇದ್ದಂತಿದೆ. ಆ ಒಪ್ಪಂದದ ಚೌಕಟ್ಟಿನಲ್ಲೇ ಜನ-ನಾಯಕನ ನಡುವೆ ವ್ಯವಹಾರ ನಡೆಯಲು ಅನುವಾದಂತಿದೆ.

ಇಷ್ಟೆಲ್ಲದರ ಹಿಂದೆ ಬೇರೊಂದು ಆತಂಕದ ವಿಷಯವೂ ಇದೆ. ಅದನ್ನೂ ಹೇಳಿಬಿಡುತ್ತೇನೆ. ಯಾಕೋ ಅಸ್ಟ್ರೇಲಿಯಾದವರು ನಿರಂಬಳ ಅ-ರಾಜಕೀಯ ಜನ ಅನಿಸುತ್ತದೆ. ಇದು ನೋಡಿ ಒಂದು ವಿಚಿತ್ರ. ಈ ದೇಶದ ಚರಿತ್ರೆ ಗಮನಿಸಿದರೆ ಇವರು ರಾಜಕೀಯವಾಗಿ ತುಂಬಾ ಸಕ್ರಿಯರಾಗಿಯೇ ಇರಬೇಕಲ್ಲ ಅನಿಸುತ್ತದೆ. ಅತಿವೃಷ್ಟಿಯಿಂದಾಗಿ ಹೀಗಾಗಿದ್ದಾರೆಯೇ ಎಂಬ ಅನುಮಾನ ಹುಟ್ಟುತ್ತದೆ. ಯುರೋಪು, ಅಮೇರಿಕಾದ ಉಳಿದ ಪಾಶ್ಚಿಮಾತ್ಯ ದೇಶಗಳಂತೆ ರಾಜಕೀಯ ಇಲ್ಲಿ ಜನರ ನೆತ್ತರಿನ ಬಿಸಿಯೇಕೆ ಏರಿಸುವುದಿಲ್ಲ? ಇಲ್ಲಿ ಮತದಾನ ಕಂಪಲ್ಸರಿಯಲ್ಲದಿದ್ದರೆ ಜನ ವೋಟೇ ಮಾಡುವುದಿಲ್ಲ ಎಂಬ ಭಯವೇಕೆ? ವೋಟು ಕಂಪಲ್ಸರಿಯಾಗಿರುವಾಗ ಜನರು ರಾಜಕೀಯ ನಿರಾಶೆ ಹೇಗೆ ತೋರಿಸಿಕೊಳ್ಳಬೇಕು?

ಎಷ್ಟು ದಿನ ಹೀಗೆ ನಡೆದೀತು ಎಂದುಕೊಂಡು ನಾನೂ ನನ್ನ ಹೆಜ್ಜೆಗಳನ್ನೇ ನೋಡಿಕೊಳ್ಳುತ್ತಾ, ತಲೆಯೆತ್ತಿ ಅಭ್ಯರ್ಥಿಯ ಮುಖ ನೋಡದೆ, ಅವನ ‘ಗುಡ್ ಮಾರ್ನಿಂಗ್’ ಕೇಳಿಸದವನಂತೆ ಮುಂದೆ ಹೋಗುತ್ತೇನೆ.