ಮಾಸ್ಕೋ ಸಮೀಪದ ಬೊರೊದಿನೊ ಎಂಬ ಗ್ರಾಮದಲ್ಲಿ ನೆಪೊಲಿಯನ್ ಬೊನಾಪಾರ್ಟೆ ಸೈನ್ಯದ ವಿರುದ್ಧ ನಡೆದ ಯುದ್ಧದಿಂದ ಆ ಗ್ರಾಮ ಹೇಗೆ ನಾಶವಾಯಿತು ಎಂಬುದನ್ನು ರಷ್ಯನ್ ಪನೋರಮಾದಲ್ಲಿ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಲಾಗಿದೆ. ದಾಳಿಗೊಳಗಾಗಿ ಸಾಯುತ್ತಿರುವ ಸೈನಿಕರು, ಬಿದ್ದು ಒದ್ದಾಡುತ್ತಿರುವ ಯುದ್ಧ ಕುದುರೆಗಳು, ಸುಡುತ್ತಿರುವ ಮನೆಗಳು, ಸುಟ್ಟು ಹೊಗೆಯಾಡುತ್ತಿರುವ ಪ್ರದೇಶಗಳು, ಹಾಹಾಕಾರದ ವಾತಾವರಣ ಹೀಗೆ ಎಲ್ಲವೂ ನಮ್ಮ ಮುಂದೆ ನಡೆಯುತ್ತಿರುವ ಹಾಗೆ ಅನಿಸುತ್ತದೆ. ನೆಪೊಲಿಯನ್ ಬೋನಾಪಾರ್ಟೆ ವಿನಾಶಕಾರಿ ಯುದ್ಧನೃತ್ಯ ಮಾಡುತ್ತಿರುವ ಹಾಗೆ ಅನಿಸುತ್ತದೆ.
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ 48ನೇ ಕಂತು ಇಲ್ಲಿದೆ.

ಮಾಸ್ಕೋದ ಹೋಟೆಲ್ ಯುಕ್ರೇನಿಯಾದಲ್ಲಿ ನಮ್ಮ ಗುಡ್‌ವಿಲ್ ಡೆಲಿಗೇಷನ್ನಿನ ಎಲ್ಲ 7 ಪ್ರತಿನಿಧಿಗಳಿಗೆ ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕೊ ನದಿ ದಂಡೆಯಲ್ಲಿ ನಿರ್ಮಾಣವಾದ ಈ ನಯನಮನೋಹರ ಹೋಟೆಲ್ 1957ರಲ್ಲಿ ಪ್ರಾರಂಭವಾಯಿತು. 1976ರ ವರೆಗೆ ಇದು ಜಗತ್ತಿನ ಅತಿ ಎತ್ತರದ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ರಷ್ಯಾ ಮತ್ತು ಉಕ್ರೇನ್ ಏಕೀಕರಣದ 300ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಹೋಟೆಲ್ ನಿರ್ಮಾಣ ಮಾಡಿದ ಕಾರಣ ಅದಕ್ಕೆ ಯುಕ್ರೇನ್ ಎಂದು ಹೆಸರಿಡಲಾಯಿತು.

1935 ರಲ್ಲಿ ಆರಂಭವಾದ ಮಾಸ್ಕೋ ಮೆಟ್ರೊ ಜಗತ್ತಿನ ಅತಿ ಸುಂದರ ಮೆಟ್ರೊ ಎಂದು ಪ್ರಸಿದ್ಧವಾಗಿದೆ. ಆರಂಭದಲ್ಲಿ ಅದು 11 ಕಿಲೊ ಮೀಟರ್ ವರೆಗೆ ಓಡುತ್ತಿತ್ತು. ಈಗ 436 ಕಿಲೊ ಮೀಟರ್ ದೂರದವರೆಗೆ ಕ್ರಮಿಸುವುದು. ಚೈನಾ ಬಿಟ್ಟರೆ ಜಗತ್ತಿನಲ್ಲಿ ಅತಿ ದೂರ ಸಾಗುವ ಮೆಟ್ರೊ ಇದಾಗಿದೆ. 1983ರಲ್ಲಿ ನಾವು ಹೋದಾಗ ಇದರ ಟಿಕೆಟ್ ಕೇವಲ 5 ಕೊಪೆಕ್ ಇತ್ತು. ನೂರು ಕೊಪೆಕ್ ಸೇರಿ ಅಲ್ಲಿನ ಕರೆನ್ಸಿ ರುಬೆಲ್ ಆಗಿದೆ. ಟಿಕೆಟ್‌ಗೆ ಇಷ್ಟೊಂದು ಕಡಿಮೆ ಬೆಲೆನಾ? ಎಂದು ನಮ್ಮೊಳಗಿನ ಯಾರೋ ಕೇಳಿದರು.

ಕಳೆದ 60 ವರ್ಷಗಳಿಂದ ನಮ್ಮ ದೇಶದಲ್ಲಿ ಯಾವೊಂದು ವಸ್ತುವಿನ ಬೆಲೆಯೂ ಏರಿಲ್ಲ ಎಂದು ನಮ್ಮ ಗೈಡ್ ಹೇಳಿದಳು. ನೀವು ಎಲ್ಲಿಂದ ಟಿಕೆಟ್ ಪಡೆದಿರುವಿರೊ ಅಲ್ಲಿಯವರೆಗೆ ಒಂದು ಸುತ್ತು ಹಾಕಿಕೊಂಡು ಬರಬಹುದು ಎಂದು ತಿಳಿಸಿದಳು. ನಮ್ಮ ಲಿಸ್ಟಲ್ಲಿ ಟಿ.ವಿ. ಟವರ್ ಭೇಟಿ ಇರಲಿಲ್ಲ. ಆದರೆ ಆ ಟವರ್ ಎಲ್ಲೆಡೆಯಿಂದ ಕಾಣುತ್ತಿತ್ತು. 120 ಮಹಡಿಗಳಿಂದ ಕೂಡಿದ ಆ ಟವರ್ 540 ಮೀಟರ್ ಉದ್ದವಿದೆ ಎಂದು ಗೈಡ್ ವಿವರಿಸಿದಳು.

ಮೆಟ್ರೊ ಪ್ರಯಾಣದ ನಂತರ ಹೃದಯಭಾಗವಾದ ಕ್ರೆಮ್ಲಿನ್‌ಗೆ ಪ್ರವೇಶ ಮಾಡಿದೆವು. ಅಲ್ಲಿನ ಕೆಂಪುಚೌಕದಲ್ಲಿ ರಷ್ಯಾದ ಮಹಾನ್ ನಾಯಕ ಹಾಗೂ ಝಾರ್ ಸಾಮ್ರಾಜ್ಯದ ವಿರುದ್ಧ 1917ರ ಅಕ್ಟೋಬರ್ ಮಹಾ ಕ್ರಾಂತಿಯ ಯಶಸ್ಸಿಗೆ ಕಾರಣವಾದ ಲೆನಿನ್ ಮಹಾಶಯರ ಪಾರ್ಥಿವ ಶರೀರವನ್ನು ಸಂರಕ್ಷಿಸಿ ಇಟ್ಟ ಸಮಾಧಿ ಸ್ಥಳಕ್ಕೆ ಮೊದಲಿಗೆ ಭೇಟಿ ನೀಡಿ ಗೌರವ ಸಲ್ಲಿಸಿದೆವು. 1924ರಲ್ಲಿ ಅವರು ತೀರಿಕೊಂಡ ವರ್ಷವೇ ಪಾರ್ಥಿವ ಶರೀರ ಕೆಡದಂತೆ ವೈಜ್ಞಾನಿಕವಾಗಿ ರಕ್ಷಿಸಿ ಸಮಾಧಿಯ ವ್ಯವಸ್ಥೆ ಮಾಡಲಾಯಿತು. ಗೌರವ ಸೂಚಕವಾಗಿ ಹ್ಯಾಟ್, ಗಾಗಲ್ ತೆಗೆದು ಮೌನವಾಗಿ ಸಮಾಧಿ ಕಟ್ಟಡದ ಒಳಗೆ ಹೋಗಿ ಲೆನಿನ್ ದೇಹಕ್ಕೆ ಒಂದು ಸುತ್ತು ಹಾಕುವಾಗ ಆ ಮಹಾನ್ ಕ್ರಾಂತಿಕಾರಿಯನ್ನು ಭೇಟಿ ಮಾಡಿದ ಅನುಭವವಾಗುವುದು. ಶಾಂತವಾಗಿ ಮಲಗಿದಂತೆ ದೇಹವನ್ನು ಇಡಲಾಗಿದ್ದು ನೀಲಿ ಫುಲ್ ಸೂಟ್ ಟೈ ಮುಂತಾದವುಗಳಿಂದ ಆವೃತವಾದ ಆ ದೇಹದಲ್ಲಿ ಲೆನಿನ್ ಅವರ ಬಂಗಾರ ವರ್ಣದ ಪ್ರಸನ್ನ ಮುಖ ಮಾತ್ರ ಕಾಣುವುದು. ಆ ತೇಜಃಪುಂಜವಾದ ಮುಖವನ್ನು ಮರೆಯಲು ಸಾಧ್ಯವಿಲ್ಲ. ಹೋರಾಟವನ್ನೇ ಉಸಿರಾಗಿಸಿಕೊಂಡು ಮಾರ್ಕ್ಸ್‌ವಾದದ ಅರಿವನ್ನು ಆಚರಣೆಗೆ ತಂದ ಕೀರ್ತಿ ಅವರಿಗೆ ಲಭಿಸುತ್ತದೆ.

ಗೌರವ ಸೂಚಕವಾಗಿ ಹ್ಯಾಟ್, ಗಾಗಲ್ ತೆಗೆದು ಮೌನವಾಗಿ ಸಮಾಧಿ ಕಟ್ಟಡದ ಒಳಗೆ ಹೋಗಿ ಲೆನಿನ್ ದೇಹಕ್ಕೆ ಒಂದು ಸುತ್ತು ಹಾಕುವಾಗ ಆ ಮಹಾನ್ ಕ್ರಾಂತಿಕಾರಿಯನ್ನು ಭೇಟಿ ಮಾಡಿದ ಅನುಭವವಾಗುವುದು. ಶಾಂತವಾಗಿ ಮಲಗಿದಂತೆ ದೇಹವನ್ನು ಇಡಲಾಗಿದ್ದು ನೀಲಿ ಫುಲ್ ಸೂಟ್ ಟೈ ಮುಂತಾದವುಗಳಿಂದ ಆವೃತವಾದ ಆ ದೇಹದಲ್ಲಿ ಲೆನಿನ್ ಅವರ ಬಂಗಾರ ವರ್ಣದ ಪ್ರಸನ್ನ ಮುಖ ಮಾತ್ರ ಕಾಣುವುದು.

ಜಗತ್ತಿನ ಅತಿ ಸುಂದರ ಪ್ರದೇಶಗಳಲ್ಲಿ ಕ್ರೆಮ್ಲಿನ್ ಕೂಡ ಒಂದಾಗಿದೆ. ಕ್ರೆಮ್ಲಿನ್ ಸಂಕೀರ್ಣ 90 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. 20 ಗೋಪುರಗಳಿಂದ ಕೂಡಿದ 5 ಅರಮನೆಗಳು, ವಿವಿಧ ಬಗೆಯ ಗೋಪುರಗಳಿಂದ ಕೂಡಿದ 4 ಚರ್ಚ್ ಆವರಣಗಳು, 8 ಲಕ್ಷ ಚದರ ಅಡಿಯ ಕೆಂಪುಚೌಕ ಮತ್ತು ಕಲಾತ್ಮಕ ಗಟ್ಟಿಮುಟ್ಟಾದ ಕೆಂಪು ಇಟ್ಟಿಗೆಗಳಿಂದ ನಿರ್ಮಿಸಿದ ಕೋಟೆ ಮುಂತಾದವುಗಳ ಶಿಲ್ಪಕಲಾ ವೈಭವದಿಂದಾಗಿ ಕಣ್ಮನ ಸೆಳೆಯುವ ಸುಂದರ ಪ್ರದೇಶ ಇದಾಗಿದೆ. ಕ್ರೆಮ್ಲಿನ್ ಮತ್ತು ಕೆಂಪುಚೌಕದ ಮಧ್ಯದ ಕಂದಕ ಒಟ್ಟು ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದೆ.

ಮಾಸ್ಕೊ ಕ್ರೆಮ್ಲಿನ್ ನಿರ್ಮಾಣ ಪ್ರಾರಂಭವಾಗಿದ್ದು 15ನೇ ಶತಮಾನದ ಅಂತ್ಯದಲ್ಲಿ, 16ನೇ ಶತಮಾನದ ಪೂರ್ವಾರ್ಧದಲ್ಲಿ ಅದು ಜಗತ್ತಿನ ಆಕರ್ಷಕ ತಾಣಗಳಲ್ಲಿ ಒಂದಾಗಿ ಬೆಳೆಯಿತು.

ಜಗತ್ತಿನಲ್ಲೇ ಅತಿ ದೊಡ್ಡದಾದ ಗಂಟೆ ಕೂಡ ಇದೇ ಪ್ರದೇಶದಲ್ಲಿದೆ. ವರ್ಣರಂಜಿತ ನವಗೋಪುರಗಳಿಂದ ಕೂಡಿದ ‘ಸೇಂಟ್ ಬಾಸಿಲ್ ದ ಬ್ಲೆಸ್ಡ್’ ಚರ್ಚ್ ತನ್ನದೇ ಆದ ಆಕರ್ಷಣೆಯಿಂದ ಎದ್ದು ಕಾಣುತ್ತದೆ.

ಮಾಸ್ಕೋ ಬಟಾನಿಕಲ್ ಗಾರ್ಡನ್ ಭೇಟಿಯಲ್ಲಿ ಹೊಸ ಸಸ್ಯ ಜಗತ್ತಿನ ದರ್ಶನವಾಯಿತು. ಗ್ರೀನ್ ಹೌಸ್‌ನಲ್ಲಿ ನಮ್ಮ ರಾಜ್ಯದ ಗಂಧದ ಗಿಡಗಳೂ ಇದ್ದವು. ಈ ಗಿಡಗಳಿಗೆ ಬೇಕಾದ ಉಷ್ಣಾಂಶದ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿತ್ತು. ಜಗತ್ತಿನ ವಿವಿಧ ದೇಶಗಳ ವಿಶಿಷ್ಟ ಗಿಡಗಳನ್ನು ಅಲ್ಲಿ ಕಾಣಬಹುದು. ಎಲ್ಲ ಬಣ್ಣಗಳ ಗುಲಾಬಿ ತೋಟಗಳು ನೆನಪಿನಿಂದ ಮರೆಯಾಗುವುದೇ ಇಲ್ಲ. ಅಲ್ಲಿ ಸಹಸ್ರಾರು ಕಪ್ಪು ಗುಲಾಬಿಗಳಿಂದ ತೋಟದ ಒಂದು ಭಾಗ ಕಂಗೊಳಿಸುತ್ತಿತ್ತು. ಹಂಸ ಮುಂತಾದ ಜಲಚರ ಪಕ್ಷಿಗಳ ಸರೋವರಗಳಿದ್ದವು, ನದಿಗಳು ಹರಿಯುತ್ತಿದ್ದವು.

900 ಎಕರೆಗಳಷ್ಟು ವಿಶಾಲವಾದ ಪ್ರದೇಶವನ್ನು ಹೊಂದಿದ ಈ ಗಾರ್ಡನ್ 21 ಸಾವಿರ ಪ್ರಕಾರದ ಮರಗಿಡಬಳ್ಳಿಗಳನ್ನು ಹೊಂದಿದೆ. ಇಡೀ ಐರೋಪ್ಯ ಖಂಡದಲ್ಲೇ ಬೃಹತ್ತಾದ ಬಟಾನಿಕಲ್ ಗಾರ್ಡನ್ ಇದು. ನಮ್ಮ ನಿಯೋಗಕ್ಕೆ ಇಲ್ಲಿನ ಅಧಿಕಾರಿಯ ಜೊತೆಗೆ ಭೇಟಿಯ ಅವಕಾಶ ಕಲ್ಪಿಸಲಾಗಿತ್ತು. ಅವರ ಜೊತೆ ಮಾತನಾಡುವಾಗ ನಾನು ಬೆಂಗಳೂರಿನಿಂದ ಬಂದದ್ದು ಅವರಿಗೆ ತಿಳಿಯಿತು. ಅವರು ಕೂಡಲೆ ‘ಬೆಂಗಳೂರಿಗೆ ಹಸಿರುಪಟ್ಟಿ ವಲಯದ ಅವಶ್ಯಕತೆ ಇದೆ’ ಎಂದು ತಿಳಿಸಿದರು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಹಸಿರುಪಟ್ಟಿ ವಲಯದ ಕುರಿತು ಕ್ರಮಕೈಗೊಂಡಿದ್ದಾರೆ ಎಂದು ಹೇಳಿದಾಗ ಅವರು ಸಂತಸಪಟ್ಟರು.

ಬೆಂಗಳೂರಲ್ಲಿರುವವರಿಗೇ ಈ ಪ್ರಜ್ಞೆ ಇಲ್ಲದಾಗ ದೂರದ ಮಾಸ್ಕೊ ಬಟಾನಿಕಲ್ ಗಾರ್ಡನ್‌ನಲ್ಲಿ ಕುಳಿತ ತಜ್ಞನೊಬ್ಬ ಬೆಂಗಳೂರಿನ ಬಗ್ಗೆ ಚಿಂತಿಸಿದ್ದು ಆಶ್ಚರ್ಯವನ್ನುಂಟು ಮಾಡಿತು. (ಬೆಂಗಳೂರಿನ ಹಸಿರುಪಟ್ಟಿ ವಲಯಕ್ಕೆ ರಾಜಕಾರಣಿಗಳು, ರಿಯಲ್ ಎಸ್ಟೇಟ್‌ವಾಲಾಗಳು ಮತ್ತು ಧನಾಡ್ಯರು ಕಲ್ಲು ಹಾಕುತ್ತಾರೆ ಎಂಬ ಅರಿವು ನನಗಿತ್ತು. ಆದರೆ ಹೇಳಲಿಲ್ಲ.)

(ಬೊರೊದಿನೊ ರಷ್ಯನ್ ಪನೋರಮಾ)

ಇಷ್ಟೆಲ್ಲ ವೈಭವದ ಮಧ್ಯೆ ತಿರುಗಾಡಿದ ನಾನು ‘ಬೊರೊದಿನೊ ರಷ್ಯನ್ ಪನೋರಮಾ’ ನೋಡಲು ಹೋದಾಗ ಆದ ಅನುಭವವೇ ಬೇರೆ. ಅದು ರಷ್ಯನ್ನರ ಘನತೆಯ ಮತ್ತು ಛಲದ ಸಂಕೇತವಾಗಿದ್ದು ನಮ್ಮ ಮುಂದೆಯೆ ಯುದ್ಧವೊಂದು ನಡೆದು ಎಂಥ ಅನಾಹುತ ಸೃಷ್ಟಿಸಿತು ಎಂಬ ಭಾವ ಮೂಡುವ ಹಾಗೆ ರಷ್ಯನ್ ಪನೋರಮಾ ನಿರ್ಮಾಣವಾಗಿದೆ.

ಮಾಸ್ಕೋ ಸಮೀಪದ ಬೊರೊದಿನೊ ಎಂಬ ಗ್ರಾಮದಲ್ಲಿ ನೆಪೊಲಿಯನ್ ಬೊನಾಪಾರ್ಟೆ ಸೈನ್ಯದ ವಿರುದ್ಧ ನಡೆದ ಯುದ್ಧದಿಂದ ಆ ಗ್ರಾಮ ಹೇಗೆ ನಾಶವಾಯಿತು ಎಂಬುದನ್ನು ರಷ್ಯನ್ ಪನೋರಮಾದಲ್ಲಿ ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಲಾಗಿದೆ. ದಾಳಿಗೊಳಗಾಗಿ ಸಾಯುತ್ತಿರುವ ಸೈನಿಕರು, ಬಿದ್ದು ಒದ್ದಾಡುತ್ತಿರುವ ಯುದ್ಧ ಕುದುರೆಗಳು, ಸುಡುತ್ತಿರುವ ಮನೆಗಳು, ಸುಟ್ಟು ಹೊಗೆಯಾಡುತ್ತಿರುವ ಪ್ರದೇಶಗಳು, ಹಾಹಾಕಾರದ ವಾತಾವರಣ ಹೀಗೆ ಎಲ್ಲವೂ ನಮ್ಮ ಮುಂದೆ ನಡೆಯುತ್ತಿರುವ ಹಾಗೆ ಅನಿಸುತ್ತದೆ. ನೆಪೊಲಿಯನ್ ಬೋನಾಪಾರ್ಟೆ ವಿನಾಶಕಾರಿ ಯುದ್ಧನೃತ್ಯ ಮಾಡುತ್ತಿರುವ ಹಾಗೆ ಅನಿಸುತ್ತದೆ.

ಈ ಬೊರೊದಿನೊ ಗ್ರಾಮದಲ್ಲಿ 1812ರಲ್ಲಿ ನೆಪೊಲಿಯನ್ ದಾಳಿ ಮಾಡಿ ದುರಂತ ಸೃಷ್ಟಿಸಿದ. ಆ ಯುದ್ಧ ಸೃಷ್ಟಿಸಿದ ದುರಂತವನ್ನು ಸೋವಿಯತ್ ದೇಶ ‘ಬೊರೊದಿನೊ ರಷ್ಯನ್ ಪನೋರಮಾ ಮೂಜಿಯಂʼನಲ್ಲಿ ಕಲೆಯ ಮೂಲಕ ಜನರಿಗೆ ಶಾಂತಿಯ ಪಾಠ ಕಲಿಸ ಬಯಸಿತು. 1912ರಲ್ಲಿ ಬೊರೊದಿನೊ ಯುದ್ಧ ವಿಜಯದ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಈ ‘ಬೊರೊದಿನೊ ರಷ್ಯನ್ ಪನೋರಮಾ ಮ್ಯೂಜಿಯಂ’ ಆರಂಭಿಸಲಾಯಿತು. ಈ ದುಂಡನೆಯ ಮೂಜಿಯಂ ಕಟ್ಟಡ ಯುದ್ಧದ ಕ್ರೌರ್ಯ ಮತ್ತು ರಷ್ಯನ್ನರ ಆತ್ಮಸ್ಥೈರ್ಯವನ್ನು ತೋರಿಸುವುದರ ಜೊತೆಗೆ ಶಾಂತಿಯ ಸಂದೇಶವನ್ನೂ ಬೀರುತ್ತದೆ. ರಷ್ಯಾದ ಯುದ್ಧ ಕಲಾವಿದ ಫ್ರಾಂಜ್ ರೌಬೌದ್ 360 ಡಿಗ್ರಿಯಲ್ಲಿ 115 ಮೀಟರ್ ಉದ್ದ ಹಾಗೂ 15 ಮೀಟರ್ ಎತ್ತರದ ಈ ಯುದ್ಧ ಪೇಂಟಿಂಗ್ ಅನ್ನು ಕಲಾವಿದ ಎಷ್ಟು ಅದ್ಭುತವಾಗಿ ಚಿತ್ರಿಸಿದ್ದಾನೆಂದರೆ ನಾವು ಯುದ್ಧದ ಮಧ್ಯೆಯೆ ನಿಂತಂತಾಗುವುದು. ಈ ಪೇಂಟಿಂಗ್ ಮುಂದಿನ ಕಲಾಕೃತಿಗಳು ಆ ಗ್ರಾಮ ಸುಡುತ್ತಿರುವ ಮತ್ತು ಯುದ್ಧದ ಭೀಕರತೆಯನ್ನು ನೈಜವೆಂಬಂತೆ ಸೂಚಿಸುತ್ತವೆ.

ನೆಪೊಲಿಯನ್ ಬೊನಾಪಾರ್ಟೆ ಭಾರಿ ಯುದ್ಧಕೋರನಾಗಿದ್ದ. ಫ್ರಾನ್ಸಿನಿಂದ 2500 ಕಿಲೊ ಮೀಟರ್ ದೂರದ ಸೋವಿಯತ್ ರಾಜಧಾನಿ ಮಾಸ್ಕೊ ಸಂಪದ್ಭರಿತ ನಗರವಾಗಿದ್ದರಿಂದ ಅದರ ಮೇಲೆ ದಾಳಿ ಮಾಡುವುದಕ್ಕಾಗಿ ಯೋಜನೆ ರೂಪಿಸಿದ. ರಷ್ಯನ್ ಸೈನಿಕರು ಮಾಸ್ಕೊ ಬಳಿಯ ಬೊರೊದಿನೊ ಗ್ರಾಮದ ಬಳಿ ನೆಪೊಲಿಯನ್ ಸೈನ್ಯವನ್ನು ತಡೆದರು. ಅಲ್ಲಿಯೆ ಯುದ್ಧ ಆರಂಭವಾಯಿತು. ಫ್ರೆಂಚ್ ಮತ್ತು ರಷ್ಯನ್ ಸಾಮ್ರಾಜ್ಯಗಳು ಯುದ್ಧಕ್ಕಿಳಿದ ಗ್ರಾಮವಾಯಿತು ಬೊರೊದಿನೊ. ರಷ್ಯದ ರಾಜಕುಮಾರ ಮಿಖಾಯಿಲ್ ಕುತುಜೊವ್ ಸೇನಾಧಿಪತಿಯಾಗಿದ್ದ.

1812ನೇ ಸೆಪ್ಟೆಂಬರ್ 7 ರಂದು ಯುದ್ಧ ತಾರಕಕ್ಕೇರಿತು. ನೆಪೊಲಿಯನ್‌ನ ಗ್ರ್ಯಾಂಡ್ ಆರ್ಮಿಯ 1,35,000 ಸೈನಿಕರು, ಬಂದೂಕುಗಳು, ಕುದುರೆಗಳು, 587 ಫಿರಂಗಿ ಮುಂತಾದ ಯುದ್ಧ ಸಾಮಗ್ರಿಗಳೊಂದಿಗೆ ಯುದ್ಧ ಆರಂಭಿಸಿದ. 1,14,000 ರಷ್ಯನ್ ಸೈನಿಕರು, ಹೆಚ್ಚಿನ 8,000 ಅಶ್ವದಳ, 30,000 ಪ್ರಜಾಸೈನ್ಯದೊಂದಿಗೆ ರಷ್ಯಾ ಯುದ್ಧವನ್ನು ಎದುರಿಸಿತು. ಕೊಲೆ, ಸುಲಿಗೆ, ಹಾಹಾಕಾರದ ಮಧ್ಯೆ ಹತ್ತಾರು ಸಹಸ್ರ ಕುದುರೆಗಳ ಹೇಷಾರವದ ಮಧ್ಯೆ ಒಂದೇ ದಿನದಲ್ಲಿ ಫ್ರೆಂಚ್ ಫಿರಂಗಿಗಳು 60,000 ಗುಂಡುಗಳನ್ನು ಸಿಡಿಸಿದವು. ರಷ್ಯನ್ನರು 50,000 ಗುಂಡುಗಳನ್ನು ಸಿಡಿಸಿದರು.

ಯುದ್ಧದ ಪರಿಣಾಮವಾಗಿ ಫ್ರೆಂಚ್ ಪದಾತಿ ದಳ 1,40,000 ಕಾಟ್ರಿಜ್‌ಗಳನ್ನು ಹಾರಿಸಿತು. ರಷ್ಯನ್ ಪದಾತಿದಳ 1,20,000 ಕಾಟ್ರಿಜ್‌ಗಳನ್ನು ಹಾರಿಸಿತು. ಪ್ರತಿ ಸೆಕೆಂಡ್‌ಗೆ ಮೂರು ಫಿರಂಗಿಗಳಿಂದ ಗುಂಡು ಹಾರುತ್ತಿದ್ದವು. ಆ ದಿನ ನೆಪೊಲಿಯನ್‌ನ 28,000 ಸೈನಿಕರ ಹತ್ಯೆಯಾಯಿತು. 1500 ಕುದುರೆಗಳು ಸತ್ತಿದ್ದವು. 10 ಮಂದಿ ಫ್ರೆಂಚ್ ಜನರಲ್‌ಗಳು ಸತ್ತು 39 ಜನರಲ್‌ಗಳು ಗಾಯಗೊಂಡರು. 45,000 ರಷ್ಯನ್ ಸೈನಿಕರು ಸತ್ತರು ಮತ್ತು ತೀವ್ರ ಗಾಯಗೊಂಡರು. 6 ಮಂದಿ ಜನರಲ್‌ಗಳು ಸತ್ತು 23 ಜನರಲ್‌ಗಳು ಗಾಯಗೊಂಡರು.

1812 ನೇ ಸೆಪ್ಟೆಂಬರ್ 14 ರಂದು ಫ್ರೆಂಚ್ ಗ್ರ್ಯಾಂಡ್ ಆರ್ಮಿ ಮಾಸ್ಕೊ ಪ್ರವೇಶ ಮಾಡಿತು. 2,63,000 ನಿವಾಸಿಗಳು ಮನೆಬಿಟ್ಟು ಹೋಗಿದ್ದರು. ಉಳಿದವರು ಕೇವಲ 10,000 ನಿವಾಸಿಗಳು. ವೈರಿಗಳಿಗೆ ಏನೂ ಸಿಗಬಾರದು ಎಂಬ ಕಾರಣಕ್ಕೆ ಮಾಸ್ಕೋದ ಪೊಲೀಸ್ ಮುಖ್ಯಾಧಿಕಾರಿ ನಗರಕ್ಕೆ ಬೆಂಕಿ ಹಚ್ಚಲು ಆದೇಶಿಸಿದ.

ಇಷ್ಟೊಂದು ಸಾವು ನೋವಿನ ಮಧ್ಯೆಯೂ ನೆಪೋಲಿಯನ್ 1812 ನೇ ಸೆಪ್ಟೆಂಬರ್ 15 ರಂದು ಮಾಸ್ಕೊ ಪ್ರವೇಶಿಸಿ ಕ್ರೆಮ್ಲಿನ್‌ನಲ್ಲಿ ತಳವೂರುತ್ತಾನೆ. ಆತ ರಷ್ಯಾ ಮೇಲೆ ದಾಳಿ ಮಾಡಿ ಇಂದಿಗೆ 83 ದಿನಗಳಾಗಿದ್ದವು. ಅಲ್ಲದೆ ಸೆಪ್ಟೆಂಬರ್ 7 ರಂದು ಬೊರೊದಿನೊ ಯುದ್ಧ ಗೆದ್ದು ಒಂದು ವಾರವಾಗಿತ್ತು. ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿದ್ದ ಝಾರ್ ದೊರೆ ಅಲೆಕ್ಸಾಂಡರ್ ಶಾಂತಿ ಸಂಧಾನಕ್ಕೆ ಬರುತ್ತಾನೆ ಎಂಬ ಭಾವನೆ ಆತನದಾಗಿತ್ತು. ಆದರೆ ಹಾಗಾಗಲಿಲ್ಲ. ಸ್ಪಲ್ಪೇ ಹೊತ್ತಿನಲ್ಲಿ ಮಾಸ್ಕೋದ ಹಳೆಯ ಗಲ್ಲಿಗಳ ಬೆಂಕಿ ಮತ್ತು ಹೊಗೆ ಕಾಣಿಸಿಕೊಳ್ಳತೊಡಗಿತು. ಈ ಸಂದರ್ಭದಲ್ಲಿ ಅಂದರೆ ಸೆಪ್ಟೆಂಬರ್ 15ರಂದು ಮಾಸ್ಕೊ ವಿಶ್ವವಿದ್ಯಾಲಯದ ಗ್ರಂಥಾಲಯ ಕೂಡ ಸುಟ್ಟು ಬೂದಿಯಾಯಿತು. ಸೆಪ್ಟೆಂಬರ್ 16 ರಂದು ಕ್ರೆಮ್ಲಿನ್ ಬಳಿಯ ಕುದುರೆ ಲಾಯಗಳು ಉರಿಯತೊಡಗಿದವು. ಆಗ ನೆಪೊಲಿಯನ್ ಮಾಸ್ಕೊ ಬಿಟ್ಟು ಸಮೀಪದ ಪೆತ್ರೊವ್‌ಸ್ಕಿ ಅರಮನೆಯಲ್ಲಿ ಬೀಡುಬಿಟ್ಟ. ಸೆಪ್ಟೆಂಬರ್ 20 ರೊಳಗಾಗಿ ಮಾಸ್ಕೊ ಹೊತ್ತಿ ಉರಿಯುತ್ತಿತ್ತು. ಶೇಕಡಾ 29 ರಷ್ಟು ಮನೆಗಳು ನೆಲ ಕಚ್ಚಿದ್ದವು. ಶೇಕಡಾ 73 ರಷ್ಟು ಚರ್ಚ್‌ಗಳು ಮತ್ತು ಅಸಂಖ್ಯ ಸಾಂಸ್ಕೃತಿಕ ಸಂಪತ್ತು ನಾಶವಾಗಿ ಮಾಸ್ಕೋ ಹಾಳಾದ ನಗರವಾಗಿ ಭಯಾನಕ ವಾತಾವರಣ ಸೃಷ್ಟಿಯಾಯಿತು. ಅಳಿದುಳಿದವರು ಕೋಪ ಮತ್ತು ಭಯದಿಂದ ಸಾವನ್ನು ಎದುರಿಸುತ್ತಿರುವವರಂತೆ ಕಾಣುತ್ತಿದ್ದರು. ಉಗ್ರರೂಪ ತಾಳಿದ ಫ್ರೆಂಚ್ ಸೈನಿಕರು ಮನಬಂದತೆ ಕೊಲೆ ಮತ್ತು ಲೂಟಿ ಮಾಡುತ್ತಿದ್ದರು. ಅಸಂಖ್ಯಾತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರು. ಅಮಾನುಷ ಕೃತ್ಯಗಳಿಗೆ ಕೊನೆ ಇಲ್ಲದಾಯಿತು. ಕೊಲೆ ಸುಲಿಗೆ ದರೋಡೆ ಅತ್ಯಾಚಾರ ನಡೆದೇ ಇತ್ತು. ಇಂಥ ಸಂದರ್ಭದಲ್ಲಿ ಒಂದಿಷ್ಟು ರಷ್ಯನ್ ಪ್ರಜೆಗಳು ಕೂಡ ತಮಗೆ ಸಿಕ್ಕಷ್ಟು ಲೂಟಿ ಮಾಡಿಕೊಂಡು ಪಾರಾಗುತ್ತಿರುವ ದೃಶ್ಯಗಳೂ ಕಂಡುಬಂದವು!

ವೈರಿಗೆ ನಿರುಪಯುಕ್ತವಾಗುವ ಹಾಗೆ ರಷ್ಯನ್ನರು ರಾಜಧಾನಿ ಮಾಸ್ಕೋ ನಾಶಗೊಳಿಸಿದ್ದರು. 4 ದಿನಗಳಲ್ಲಿ ಶೇಕಡಾ 66 ರಷ್ಟು ಮಾಸ್ಕೋ ಹಾಳಾಗಿತ್ತು. 1812ನೇ ಅಕ್ಟೋಬರ್ 13 ರಂದು ಹಿಮ ಬೀಳಲು ಪ್ರಾರಂಭವಾದ ನಂತರ ರಷ್ಯನ್ನರಿಗೆ ಅನುಕೂಲವಾಗತೊಡಗಿತು. ಅಕ್ಟೋಬರ್ 19ರಂದು 1,00,000 ಗ್ರ್ಯಾಂಡ್ ಆರ್ಮಿ ಮಾಸ್ಕೊದಿಂದ ನಿರ್ಗಮಿಸಿತು. ನವೆಂಬರ್ 4 ರಿಂದ ಭಾರಿ ಪ್ರಮಾಣದಲ್ಲಿ ಹಿಮ ಬೀಳತೊಡಗಿತು. ಉಷ್ಣಾಂಶ ಮೈನಸ್ 20 ಡಿಗ್ರಿ ಸೆಂಟಿಗ್ರೇಡ್‌ಗೆ ಇಳಿಯಿತು. ಝಾರ ದೊರೆ ಅಲೆಕ್ಸಾಂಡರ್ ಜೊತೆ ಸಂಧಾನಕ್ಕಾಗಿ ಕಾದು ಕಾದು ಸೋತ ನೆಪೊಲಿಯನ ಡಿಸೆಂಬರ್ 5 ರಂದು ಮರಳಿ ಹೊರಟ. 13 ದಿನಗಳ ನಂತರ ಫ್ರೆಂಚ್ ಸೈನ್ಯ ಪ್ಯಾರಿಸ್ ತಲುಪಿತು. ಹೀಗೆ ನೆಪೊಲಿಯನ್ ಗೆದ್ದು ಸೋತ. ಆದರೆ ರಷ್ಯನ್ನರು ಸೋತು ಗೆದ್ದರು. ಆದರೆ ನಿಜವಾದ ಅರ್ಥದಲ್ಲಿ ಎರಡೂ ಕಡೆಯವರನ್ನು ಯುದ್ಧ ಸೋಲಿಸಿತ್ತು. ನೆಪೊಲಿಯನ್ನೆ ರಷ್ಯಾ ಮೇಲೆ ದಾಳಿ ಮಾಡಿದ್ದು ಯುದ್ಧದ ಭಾರಿ ಅನಾಹುತಗಳಲ್ಲಿ ಒಂದಾಗಿದೆ. ನೆಪೊಲಿಯನ್ನನ ತಪ್ಪು ನಿರ್ಧಾರ ಮತ್ತು ರಷ್ಯನ್ನ ಸೇನಾಧಿಕಾರಿಗಳ ತಪ್ಪು ನಿರ್ಧಾರಗಳಿಂದ ಹೆಚ್ಚಿನ ಸಾವು ನೋವು ಮತ್ತು ಅನಾಹುತಗಳು ಸಂಭವಿಸಿದವು.

ರಷ್ಯನ್ ಪನೋರಮಾ ಮ್ಯೂಜಿ಼ಯಂ, ಬ್ರೋಷರ್ ಮತ್ತು ಗೈಡ್‌ಗಳಿಂದಾಗಿ ಬೊರೊದಿನೊ ಯುದ್ಧದ ಅನಾಹುತದ ಭಯಾನಕ ದೃಶ್ಯ ಮನದಲ್ಲಿ ಮನೆ ಮಾಡಿತು.


ಅನಾದಿಕಾಲದಿಂದ ಮಾನವನ ಮನದಲ್ಲಿ ಶೇಖರಗೊಂಡ ಕ್ರೌರ್ಯವನ್ನು ಜಾಗೃತಗೊಳಿಸಿದಾಗ ಯುದ್ಧ, ವರ್ಣದ್ವೇಷ, ಕೋಮುಭಾವನೆ ಮುಂತಾದವು ಕ್ರಿಯಾಶೀಲವಾಗುತ್ತವೆ. ಇವನ್ನೆಲ್ಲ ಇಲ್ಲವಾಗಿಸಲು ಶಾಂತಿಪ್ರಜ್ಞೆಯಿಂದ ಮಾತ್ರ ಸಾಧ್ಯ.

(ಮುಂದುವರೆಯುವುದು…)