ಒಮ್ಮಿಂದೊಮ್ಮೆಲೆ ಮೂಡುತ್ತಿದ್ದ ಆ ಕಳೆ ನಮ್ಮಲ್ಲಿ ಚಿಂತೆ ಉಂಟುಮಾಡಿದ್ದು ಹೌದು. ಅಂತಹ ಗಿಡಗಳು ಬೆಳೆಯುವಂತೆ ಯಾರಾದರೂ ಬೇಕಂತಲೇ ಒಂದಿಷ್ಟು ಬೀಜಗಳನ್ನು ನಮ್ಮ ಭತ್ತದ ಬೆಳೆಗಳ ನಡುವೆ ಎಸೆದಿರಬೇಕು ಎಂಬ ಸಂಶಯ ನಾಗಣ್ಣ ಅವರಿಗೆ ಮೂಡಿತು. ಇದ್ದರೂ ಇದ್ದೀತು ಅಂತ ನನಗೂ ಅನಿಸಿತು. ಆದರೆ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡೋಣ ಅಂತ ಸುಮ್ಮನಾದೆ. ಒಂದು ಮೂಟೆ ಭತ್ತ ಬಂದರೂ ಸಾಕು, ಒಂದಿಷ್ಟು ದಿನ ವಿಷರಹಿತ ಅನ್ನ ಉಣ್ಣಬಹುದು ಎಂಬ ಸಣ್ಣ ಆಸೆ ನಮಗಿತ್ತು ಅಷ್ಟೇ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ನಾವು ಸಿಂಪಡಣೆ ಮಾಡಿದ್ದ ಸಾವಯವ ಔಷಧಿ ಕೆಲಸ ಮಾಡಿತ್ತು. ನಮ್ಮ ಭತ್ತದ ಗಿಡಗಳು ರೋಗಮುಕ್ತವಾಗಿ ಸಮೃದ್ಧವಾಗಿ ಬೆಳೆಯುತ್ತಿದ್ದವು. ತೆನೆಗಳೂ ತುಂಬಾ ಚೆನ್ನಾಗಿ ಬಂದಿದ್ದವು. ಆದರೆ ಮಧ್ಯದಲ್ಲಿ ಒಂದಿಷ್ಟು ಕಡೆ ಹೊಸದಾದ ಕಳೆಯೇನೋ ಅನಿಸುವ ಒಂದಿಷ್ಟು ಗಿಡಗಳು ಮೂಡತೊಡಗಿದ್ದವು.
ಅಷ್ಟರಲ್ಲೇ ನಮ್ಮ ಬೆಳೆಯ ಬೆಳವಣಿಗೆಯನ್ನು ನೋಡಿಕೊಂಡು ಹೋಗಿದ್ದ ಸಂಗಪ್ಪ, ಅತ್ತೆ ಮಾವರ ಎದುರು
“ಭತ್ತ ಏನೂ ಸರಿ ಬಂದಿಲ್ಲ, ಎಲ್ಲಾ ಕಸಾನ ತುಂಬಿಕೊಂಡೈತಿ ಹೊಲದಾಗ. ಒಣಗಿದ ಮ್ಯಾಲೆ ಎಲ್ಲಾ ಸುಡೋದ. ಕೈಗೆ ಏನೂ ಬರಂಗಿಲ್ಲ” ಅಂತ ಹೇಳಿದ್ದನಂತೆ.
ನಾನು ಬೈದಿದ್ದು ಅವನಿಗೆ ಇನ್ನೂ ಕೋಪ ಇತ್ತು. ಅದಕ್ಕೇ ನನ್ನ ಬೆಳೆ ಹಾಳಾಗಲಿ ಅಂತಲೆ ಅವನು ಬಯಸಿದ್ದ. ಯಾರು ಏನೇ ಬಯಸಿದರೂ ನಮಗಂತೂ ನಮ್ಮ ಕೈಯಲ್ಲಿ ಬೆಳೆದಿದ್ದ ಸಸಿಗಳಲ್ಲಿ ಫಲ ಕಂಡ ಖುಷಿ ಇತ್ತು. ಯಾವುದೇ ನಿರೀಕ್ಷೆ ಇಲ್ಲದೆ ಈ ಒಂದು ಪ್ರಕ್ರಿಯೆಯನ್ನು ಅನುಭವಿಸುತ್ತಿದ್ದೆವು.
ಆದರೂ ಒಮ್ಮಿಂದೊಮ್ಮೆಲೆ ಮೂಡುತ್ತಿದ್ದ ಆ ಕಳೆ ನಮ್ಮಲ್ಲಿ ಚಿಂತೆ ಉಂಟುಮಾಡಿದ್ದು ಹೌದು. ಅಂತಹ ಗಿಡಗಳು ಬೆಳೆಯುವಂತೆ ಯಾರಾದರೂ ಬೇಕಂತಲೇ ಒಂದಿಷ್ಟು ಬೀಜಗಳನ್ನು ನಮ್ಮ ಭತ್ತದ ಬೆಳೆಗಳ ನಡುವೆ ಎಸೆದಿರಬೇಕು ಎಂಬ ಸಂಶಯ ನಾಗಣ್ಣ ಅವರಿಗೆ ಮೂಡಿತು. ಇದ್ದರೂ ಇದ್ದೀತು ಅಂತ ನನಗೂ ಅನಿಸಿತು. ಆದರೆ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡೋಣ ಅಂತ ಸುಮ್ಮನಾದೆ. ಒಂದು ಮೂಟೆ ಭತ್ತ ಬಂದರೂ ಸಾಕು, ಒಂದಿಷ್ಟು ದಿನ ವಿಷರಹಿತ ಅನ್ನ ಉಣ್ಣಬಹುದು ಎಂಬ ಸಣ್ಣ ಆಸೆ ನಮಗಿತ್ತು ಅಷ್ಟೇ! ಎಷ್ಟೋ ಸಲ ಯಾರೊ ನಮಗೆ ಏನೋ ಒಂದು ಕೆಡಕು ಮಾಡಲು ಬಯಸಿದರೆ ಅದು ಬೇರೇನೋ ಒಳ್ಳೆಯದೇ ಮಾಡಿರುತ್ತದೆ. ಅದೇನೋ ಅಂತಾರಲ್ಲ ಭಗವಂತ ಒಂದು ಉಡುಗೊರೆ ಕಳಿಸಿದಾಗ ಅದರ ಸುತ್ತಲೂ ಸಮಸ್ಯೆಗಳನ್ನು ಸುತ್ತಿ ಕಳಿಸುತ್ತಾನೆ! ಹಾಗೆ ಸಮಸ್ಯೆಗಳು ಇದ್ದಷ್ಟು ಅಲ್ಲೊಂದು ಹೊಸ ಬೆಳಕು ಇದ್ದೇ ಇರುತ್ತದೆ.
ಭತ್ತ ಕಟಾವಿಗೆ ತಯಾರಾಗುವವರೆಗೆ ನಮಗೆ ಸ್ವಲ್ಪ ಸಮಯ ಇತ್ತು. ಈಗ ಮಾಡುತ್ತಿರುವುದರ ಜೊತೆಗೆ ಕೈಗೆ ದುಡ್ಡು ಬರುವಂತೆ ಏನಾದರೂ ಮಾಡಬಹುದೇ ಎಂದು ಯೋಚಿಸತೊಡಗಿದೆ. ಬೆಂಗಳೂರಿನಲ್ಲಿ ವಿಷ ಮುಕ್ತ ತರಕಾರಿಗೆ ಬೆಲೆ ಇದೆ ಅಂತ ಗೊತ್ತಿತ್ತು. ಕೆಲವು ತರಕಾರಿಗಳನ್ನು ಇಲ್ಲಿ ಬೆಳೆದು ಅಲ್ಲಿ ಮಾರಿದರೆ ಹೇಗೆ ಎಂಬ ಯೋಚನೆ ಬಂತು. ನನಗೆ ಮಣ್ಣಿನಲ್ಲಿ ಬೆಳೆಯುವುದಕ್ಕಿಂತ ಮಣ್ಣಿಲ್ಲದೆ ಬೆಳೆಯುವುದರಲ್ಲೆ ಹೆಚ್ಚು ಅನುಭವ ಇತ್ತಲ್ಲ. ಹೀಗಾಗಿ ಅಲ್ಲೊಂದು Polyhouse ಇದ್ದರೆ ಎಷ್ಟು ಚೆನ್ನ ಅಂತ ಅನಿಸಿತು.
Polyhouse ಅಂದರೆ ಕೆಲವು ತೋಟಗಾರಿಕಾ ಬೆಳೆ ಬೆಳೆಯಲು ಇರುವ ಸುರಕ್ಷಿತವಾದ ಒಂದು ಪ್ಲಾಸ್ಟಿಕ್ ಮನೆ ಅಂತ ಹೇಳಬಹುದು. ಅದನ್ನು poly film ಅನ್ನುವ ಬೆಳಕನ್ನು ಸೋಸಿ ಕಳಿಸುವ ಪ್ಲಾಸ್ಟಿಕ್ ಒಂದರಿಂದ ಕಟ್ಟುತ್ತಾರೆ. ಇದನ್ನು ಕಟ್ಟಿದರೆ ಮೇಲಿನಿಂದ ಮಳೆಯ ನೀರು ಒಳಗೆ ಬರಲಾರದು. ಅಕ್ಕ ಪಕ್ಕದಲ್ಲಿ shade net ನಿಂದ ಆವೃತ ಆಗಿರುತ್ತದೆ. ಇದರಿಂದಾಗಿ ಗಾಳಿ ಒಳಗೆ ಬರುತ್ತದೆ, ಆದರೆ ಯಾವುದೇ ಕ್ರಿಮಿ ಕೀಟಗಳು ಒಳಗೆ ಬರಲಾರವು.
ನೈಸರ್ಗಿಕ ಕೃಷಿ ಮಾಡುವವರಿಗೆ ಇದು ಸೂಕ್ತವಲ್ಲ. ನೈಸರ್ಗಿಕ ಕೃಷಿಯಲ್ಲಿ ವೈವಿಧ್ಯತೆ ಇರಬೇಕು. ಅಲ್ಲಿ ಹಲವು ಬಗೆಯ ಬೆಳೆಗಳ ಜೊತೆಗೆ ಹಲವು ಕೀಟಗಳೂ ಇರಬೇಕು. ಅಲ್ಲೊಂದು eco system ಇರಬೇಕು. ಆದರೆ Polyhouse ನಲ್ಲಿ ಹಾಗಾಗೋಲ್ಲ.
ಇದರಲ್ಲಿ ತುಂಬಾ ಜನರು nursery ಮಾಡುತ್ತಾರೆ. ಹಾಗೆಂದರೆ ಬೀಜ ಬಿತ್ತಿ ಸಸಿಗಳನ್ನು ತಯಾರಿಸಿ ರೈತರಿಗೆ ಮಾರುವದು. ಯಾವುದೇ ಕ್ರಿಮಿ ಕೀಟಗಳ ಬಾಧೆ ಇಲ್ಲದಂತೆ ನೋಡಿಕೊಳ್ಳಲು polyhoyse ಸೂಕ್ತ ವಾತಾವರಣ ನೀಡುತ್ತದೆ. ಇನ್ನೂ ಹೆಚ್ಚಿನವರು ಅದರಲ್ಲಿ ಸೊಪ್ಪು ತರಕಾರಿಗಳನ್ನು ಕೂಡ ಬೆಳೆಯುತ್ತಾರೆ. ಹೀಗೆ ಬೆಳೆಯುವುದರಿಂದ ಕ್ರಿಮಿ ನಾಶಕದ ಬಳಕೆ ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು.
ಇಂತಹ ಅನೇಕ ಬಗೆಯ structure ಗಳು ಇವೆ. ನಮ್ಮ ಬೆಳೆಗೆ ತಕ್ಕಂತೆ ಅವುಗಳನ್ನು ಕಟ್ಟಿಕೊಳ್ಳಬಹುದು. ಬೆಂಗಳೂರಿನಲ್ಲಿ ಈಗಾಗಲೇ ನಮ್ಮದು ಒಂದು ಸಣ್ಣ polyhouse ಇತ್ತು. ಹಳ್ಳಿಯಲ್ಲಿ ಇನ್ನೂ ಇರಲಿಲ್ಲ.
ಇಂತಹ ಒಂದು structure ತಯಾರಿಸಲು ಒಂದು ಎಕರೆಗೆ ಸುಮಾರು ನಲವತ್ತು ಲಕ್ಷ ಖರ್ಚು ಬರುತ್ತದೆ. ಸರ್ಕಾರಗಳು ರೈತರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ೫೦ ಪ್ರತಿಶತ ಸಬ್ಸಿಡಿ ನೀಡುತ್ತಾರೆ. ಕನಿಷ್ಠ ಕಾಲು ಎಕರೆ ಆದರೂ ಮಾಡಿಸಬೇಕು. ಅಷ್ಟಾದರೆ ಮಾತ್ರ ಸಬ್ಸಿಡಿ ಸಿಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಶೇಕಡಾ ೯೦ ರಷ್ಟು ಸಬ್ಸಿಡಿ ಸಿಗುತ್ತದೆ.
ಭತ್ತ ಕಟಾವಿಗೆ ತಯಾರಾಗುವವರೆಗೆ ನಮಗೆ ಸ್ವಲ್ಪ ಸಮಯ ಇತ್ತು. ಈಗ ಮಾಡುತ್ತಿರುವುದರ ಜೊತೆಗೆ ಕೈಗೆ ದುಡ್ಡು ಬರುವಂತೆ ಏನಾದರೂ ಮಾಡಬಹುದೇ ಎಂದು ಯೋಚಿಸತೊಡಗಿದೆ. ಬೆಂಗಳೂರಿನಲ್ಲಿ ವಿಷ ಮುಕ್ತ ತರಕಾರಿಗೆ ಬೆಲೆ ಇದೆ ಅಂತ ಗೊತ್ತಿತ್ತು. ಕೆಲವು ತರಕಾರಿಗಳನ್ನು ಇಲ್ಲಿ ಬೆಳೆದು ಅಲ್ಲಿ ಮಾರಿದರೆ ಹೇಗೆ ಎಂಬ ಯೋಚನೆ ಬಂತು. ನನಗೆ ಮಣ್ಣಿನಲ್ಲಿ ಬೆಳೆಯುವುದಕ್ಕಿಂತ ಮಣ್ಣಿಲ್ಲದೆ ಬೆಳೆಯುವುದರಲ್ಲೆ ಹೆಚ್ಚು ಅನುಭವ ಇತ್ತಲ್ಲ.
ಎಷ್ಟೋ ಜನರು ಸರ್ಕಾರದಿಂದ ಈ ಸೌಲಭ್ಯ ಸಿಗುತ್ತೆ ಎಂಬ ಕಾರಣಕ್ಕೆ ಅಗತ್ಯ ಇರದಿದ್ದರೂ ಕೂಡ ಒಂದು Polyhouse ಮಾಡಿ ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಕೆಲವು ಜಾತಿ ಪಂಗಡಗಳಿಗೆ ಇಷ್ಟು ಅಂತ ಮೊದಲೇ ದುಡ್ಡು sanction ಆಗಿರುತ್ತೆ. ಹೀಗಾಗಿ ಅವಶ್ಯಕತೆ ಇರುವ ಸಾಮಾನ್ಯ ವರ್ಗದವರಿಗೆ ಅದೂ ಸಿಗದೆ ಅವಶ್ಯಕತೆ ಇಲ್ಲದ ಬೇರೆ ವರ್ಗದವರ ಪಾಲಾಗುವ ಸಾಧ್ಯತೆ ಕೂಡ ಇರುತ್ತದೆ. ಇದು ಅನುಕೂಲ ಆಗಲಿ ಅಂತ ಮಾಡಿದ ಸೌಲಭ್ಯ ಆದರೂ ಕೆಲವು ಸಲ ಹೀಗೆ ನಿರುಪಯೋಗಿ ಆಗುತ್ತದೆ. ಕೆಲವು ಸೌಲಭ್ಯಗಳ ದುರ್ಬಳಕೆ ಹೇಗೆ ಆಗುತ್ತದೆ ಅಂದರೆ ಯಾವ ಜಾತಿಯ ಹೆಸರಿನಲ್ಲಿ ಸೌಲಭ್ಯ ಇರುತ್ತದೋ ಅವರ ಹೆಸರಿನಲ್ಲಿ sanction ಮಾಡಿಸಿಕೊಳ್ಳುವ ಭೂಪರೂ ಇದ್ದಾರೆ. ನಮ್ಮ ದೇಶದಲ್ಲಿ ಕಾನೂನಿಗೆ ಯಾರು ಹೆದರುತ್ತಾರೆ!?
ಅದೇ ಊರಿನಲ್ಲಿ ಒಬ್ಬರ ಹೊಲದಲ್ಲಿ ಇದ್ದ Polyhouse ಒಂದರ ಬಗ್ಗೆ ನನಗೆ ಮೊದಲಿನಿಂದಲೂ ಒಂದು ಕಣ್ಣಿತ್ತು. ನಮ್ಮ ಹೊಲದ ಹತ್ತಿರವೇ ಇದ್ದ ಅವರು ಸರ್ಕಾರದಿಂದ ಸಬ್ಸಿಡಿ ತೆಗೆದುಕೊಂಡು ಒಂದು Polyhouse ಕಟ್ಟಿದ್ದನ್ನು ಆರು ತಿಂಗಳ ಹಿಂದೆಯೇ ನಾನು ಗಮನಿಸಿದ್ದೆ. ಅಲ್ಲಿ ಅವರು ಏನೂ ಬೆಳೆಯದೆ ಹುಲ್ಲು ಕಂಟಿ ಬೆಳೆದಿದ್ದನ್ನು ನೋಡಿ, ಅದನ್ನು ನನಗೆ ಬಾಡಿಗೆಗೆ ಕೊಡುತ್ತೀರಾ ಅಂತ ನಾನು ವಿಚಾರಿಸಿದೆ. ತಿಂಗಳ ಬಾಡಿಗೆಗೆ ಕೊಟ್ಟರೆ ಅದರಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆಯಬಹುದು ಎಂಬ ಯೋಜನೆ ನನ್ನದು. Hydroponics / ಮಣ್ಣು ರಹಿತ ವಿಧಾನದಲ್ಲಿ ಬೆಳೆಯಲು polyhouse ತುಂಬಾ ಸೂಕ್ತವಾದದ್ದು. ಸಸ್ಯಗಳಿಗೆ ಬೇಕಾಗುವ ಪೋಷಕಾಂಶಗಳನ್ನು ನಾವು ಹೊರಗಿನಿಂದ ಕೊಡುವ ಕಾರಣ ಮಳೆಯಿಂದ ಸಂರಕ್ಷಣೆ ಬೇಕಾಗುತ್ತದೆ. ಅದನ್ನು polyhouse ಕೊಡುತ್ತದೆ. ಹಾಗೆ ಕೇಳಿದಾಗ ಅದರ ಮಾಲೀಕ ಇನ್ನೊಂದೆರಡು ವಾರದಲ್ಲಿ ಬನ್ನಿ ನೋಡೋಣ ಅಂದರು. ಅಷ್ಟೊತ್ತಿಗೆ ನಾನು ಮತ್ತೆ ಬೆಂಗಳೂರಿಗೆ ಹೋಗಬೇಕಿತ್ತು. ಬಂದ ಮೇಲೆ ವಿಚಾರಿಸೋಣ ಅಂತ ಹೊರಟೆ.
*****
ಹೋಗುವ ಮೊದಲು ನನಗೂ ಒಂದು ಇರಲಿ ಅಂತ Polyhouse ಗೆ ಅರ್ಜಿ ಸಲ್ಲಿಸಿ ಹೋಗಿದ್ದೆ. ತೋಟಗಾರಿಕಾ ಇಲಾಖೆಯಲ್ಲಿ ಅದಕ್ಕೆ ಅರ್ಜಿ ಹಾಕಬೇಕು. ನಮಗೆ ಸಿಗುವ ಸಾಧ್ಯತೆ ಇದ್ದರೆ ಡಿಸೆಂಬರ್ ಅಷ್ಟೊತ್ತಿಗೆ ಅವರೆ ಫೋನ್ ಮಾಡಿ ಹೇಳುತ್ತಾರೆ. ಆಗ ನಾವು ತಯಾರಿದ್ದರೆ ಅದು ಮುಂದುವರಿಯುತ್ತದೆ. ಇಲಾಖೆಯವರೆ ಶಿಫಾರಸು ಮಾಡಿದ ಒಂದಿಷ್ಟು ಗುತ್ತಿಗೆದಾರರುಗಳಲ್ಲಿ ಒಬ್ಬರ ಹತ್ತಿರ polyhouse ಕಟ್ಟಿಸಿಕೊಳ್ಳಬೇಕಾಗುತ್ತದೆ.
ಬೆಂಗಳೂರಿನಲ್ಲಿ ಒಂದಿಷ್ಟು ದಿನಗಳು ಇದ್ದು ಮತ್ತೆ ಹಳ್ಳಿಗೆ ಮರಳಿದೆ. ಊರಿಗೆ ಬಂದ ಕೂಡಲೇ ಹೊಲ ನೋಡಿಕೊಂಡು ಬರಲು ಹೊರಟೆ. ದಾರಿಯಲ್ಲೇ polyhouse ಇತ್ತಾದ್ದರಿಂದ ಈಗಲಾದರೂ ಬಾಡಿಗೆಗೆ ಕೊಡುವರೋ ಅಂತ ಅವರನ್ನು ಒಂದು ಮಾತು ಕೇಳೋಣ ಅಂತ ಅಲ್ಲಿಗೆ ಹೊರಟೆ. ಮಾಮೂಲಿಯಾಗಿ ಅದಿದ್ದ ಜಾಗದಲ್ಲಿ ಕಣ್ಣು ಆಡಿಸಿದಾಗ ಅಲ್ಲಿ ಎಲ್ಲ ಬಯಲು ಬಯಲು! ಅರೆ polyohouse ಎಲ್ಲಿ ಕಾಣುತ್ತಲೇ ಇಲ್ಲವಲ್ಲ ಅಂತ ಆಶ್ಚರ್ಯ ಆಯ್ತು. ನಾನು ತಪ್ಪು ಜಾಗದಲ್ಲಿ ನೋಡುತ್ತಿದ್ದೇನೆ ಎಂಬ ಸಂಶಯ ಬಂದು ಮತ್ತೆ ಮತ್ತೆ ಹುಡುಕಿದೆ. ಆದರೂ ಅದು ಸಿಗಲಿಲ್ಲ! ವಿಚಾರಿಸಲು ಅದರ ಮಾಲೀಕರಿಗೆ ಫೋನ್ ಮಾಡಿದೆ.
“ಅದನ್ ಒಬ್ಬರಿಗೆ ಮಾರಿಬಿಟ್ಟೆ ತೋಗೊರಿ. ಇನ್ನೊಂದ್ sanction ಆಗ್ತೈತಿ, ಅದನ್ನ ಬೇಕಂದರ ಬಾಡಿಗಿ ಕೊಡ್ತೀನಿ” ಅನ್ನಬೇಕೆ!
ಅಂದರೆ? ಸರ್ಕಾರದಿಂದ ಸವಲತ್ತು ತೆಗೆದುಕೊಂಡು ಕಟ್ಟಿಸಿದ್ದ polyhouse ಆರೇ ತಿಂಗಳ ಒಳಗೆ ಇನ್ನೊಬ್ಬರಿಗೆ ಮಾರಿ ದುಡ್ಡು ಮಾಡಿಕೊಂಡಿದ್ದ ಆ ಪ್ರಚಂಡ! ತಿರುಗಿ ಅದೇ ಜಾಗದಲ್ಲಿ ಮತ್ತೊಂದನ್ನು sanction ಮಾಡಿಸಿಕೊಳ್ಳಲು ತಯಾರಾಗಿದ್ದ.
ಇದೊಂದು ದೊಡ್ಡ ದಂಧೆ ಆಗಿಬಿಟ್ಟಿದೆ. ಹಳೆಯ polyhouse ಗಳನ್ನು ಖರೀದಿಸಿ, ಅದನ್ನು ಬೇರೆಯವರಿಗೆ ಕಡಿಮೆ ಬೆಲೆಗೆ ಮಾರುವ ಏಜೆಂಟ್ಗಳು ತುಂಬಾ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಯಾರಿಗೂ ತಾವು ಮಾಡುತ್ತಿರುವುದು ತಪ್ಪು ಎಂಬ ಯೋಚನೆಯೇ ಇಲ್ಲ. ಹಾಗಂತ ಸರಕಾರದ ಈ ಸೌಲಭ್ಯದ ಸದುಪಯೋಗ ಮಾಡಿಕೊಳ್ಳುವವರು ಕೂಡ ಇದ್ದಾರೆ. ಅಂತವರು ಕೆಲವೇ ಕೆಲವು ಜನ. ಮಿಕ್ಕವರಲ್ಲಿ ಒಂದೋ polyouse ಬಳಕೆ ಮಾಡಲು ಗೊತ್ತಿಲ್ಲದೆ ಅದನ್ನು ಹಾಗೆಯೇ ನೀಡುವವರು, ಉಳಿದವರು ಅದನ್ನು ಮಾರಿಕೊಂಡು ಲಾಭ ಮಾಡಿಕೊಂಡು ಮೋಸ ಮಾಡುವವರು. ಇದರಲ್ಲಿ ಮಾತ್ರ ತಾರತಮ್ಯ ಇಲ್ಲ. ಎಲ್ಲಾ ಜಾತಿಯವರೂ ಇಂತಹ ಮೋಸದಲ್ಲಿ ಭಾಗಿಗಳು. ಒಂದೇ ವ್ಯತ್ಯಾಸ ಅಂದರೆ ಕೆಲವರಿಗೆ ಅವರ ವಿಶೇಷ ಸೌಲಭ್ಯದ ಕಾರಣ ಹೆಚ್ಚಿಗೆ ದುಡ್ಡು ಸಿಗುತ್ತದೆ! ಇದಕ್ಕೆಲ್ಲ ಕೊನೆ ಯಾವಾಗ ಅನಿಸಿ ವಿಷಣ್ಣನಾದೆ.
ಒಟ್ಟಿನಲ್ಲಿ ನಮ್ಮ Polyhouse ಕೃಷಿ ಯೋಜನೆಗೆ ಸಧ್ಯಕ್ಕೆ ಅಲ್ಪ ವಿರಾಮ ಹಾಕಿದೆವು. ಒಂದು ರೀತಿಯಲ್ಲಿ ಅದು ಒಳ್ಳೆಯದೇ ಆಯ್ತು!
(ಮುಂದುವರಿಯುವುದು…)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.