Advertisement
‘ನೆಟ್ ವರ್ಕ್’ ಬಿಸಿಲ್ಗುದುರೆ ಏರಬಯಸಿ ಹೊರಟು!: ಬಸವನಗೌಡ ಹೆಬ್ಬಳಗೆರೆ ಸರಣಿ

‘ನೆಟ್ ವರ್ಕ್’ ಬಿಸಿಲ್ಗುದುರೆ ಏರಬಯಸಿ ಹೊರಟು!: ಬಸವನಗೌಡ ಹೆಬ್ಬಳಗೆರೆ ಸರಣಿ

ಈ ರೀತಿ ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿಗೆ ಜಾಯಿನ್ ಆದಾಗ ಮೊದಮೊದಲು ಜಾಯಿನ್ ಆದವರಿಗೆ ಮಾತ್ರ ಹಣ ಸಿಗುತ್ತೆ. ಕೊನೆಗೆ ಜಾಯಿನ್ ಆದವರ ಕೈಗೆ ಚಿಪ್ಪೇ ಗತಿ!! ಆ ರೀತಿ ಆದಂತಹ ಪರಿಸ್ಥಿತಿ ನನ್ನದಾಗಿತ್ತು ಅವರು ಎಷ್ಟೇ ಪ್ರೇರಣೆ ಮಾಡೋಕೆ ಬಂದ್ರು ನಾನು ಮಾತ್ರ ಆ ಕಂಪನಿಗೆ ಮತ್ತೆ ಸೇರಿಸೋ ಸುದ್ದಿಗೆ ಹೋಗಲಿಲ್ಲ. ಆದರೂ ಎಲ್ಲೋ ಒಂದು ಕಡೆ ನಾನು ಏಳು ಜನರನ್ನು ಸೇರಿಸಿದ ಒಂದು ಪಾಪಪ್ರಜ್ಞೆ ನನ್ನನ್ನು ಕಾಡ್ತಾ ಇತ್ತು. ಇವರೂ ಅಷ್ಟೇ. ಹಣದ ಬಗ್ಗೆ ನನ್ನನ್ನು ಕೇಳಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

ಒಬ್ಬ ವ್ಯಕ್ತಿ‌‌, ಕತ್ತೆಯ ಮೇಲೆ ಭಾರ ಹೊರಿಸಿ ಅದನ್ನು ಮುಂದೆ ಎಳೆಯಲು ಭಾರಿ‌ ಪ್ರಯತ್ನ‌ ಪಡ್ತಾ ಇದ್ದ. ಆದರೆ ಆ ಕತ್ತೆ ಮಾತ್ರ ಒಂಚೂರು ಕದಲುತ್ತಿರಲಿಲ್ಲ… ಕೋಲಲ್ಲಿ ಬಾರಿಸಿದ. ಆದರೂ ಜಪ್ಪೆನ್ನಲಿಲ್ಲ. ಆಗ ಮತ್ತೊಬ್ಬ ಕತ್ತೆಯನ್ನು ಮುಂದೆ ಕರೆದೊಯ್ಯಲು ಒಂದು ಐಡಿಯಾ ಕೊಟ್ಟ. ಆ ಐಡಿಯಾವನ್ನು ಪಾಲಿಸಿದಾಗ ಅವನ‌ ಕತ್ತೆ ಸಾಕಷ್ಟು ವೇಗವಾಗಿ ಮುಂದೆ ಮುಂದೆ ಹೋಗಲು ಶುರು‌ ಮಾಡಿತು. ಆ ಐಡಿಯಾ ಈ ರೀತಿ ಇತ್ತು:

ಕತ್ತೆ ಮುಖದ ಮುಂಭಾಗದಲ್ಲಿ ಕೋಲಿಗೆ ಕಟ್ಟಿರುವ ಕ್ಯಾರೆಟ್ ಜೋತು ಬೀಳುವಂತೆ ಇಡುವುದು. ಆ ಕ್ಯಾರೆಟ್ ಅದರ ಬಾಯಿಗೆ ಸಿಗುವಂತಿರಬಾರದು… ಆದರೆ ಅದು ಕತ್ತೆ ಕಣ್ಣಿಗೆ ಕಾಣುತ್ತಿರಬೇಕು. ಈ ರೀತಿ ಮಾಡಿದ ತಕ್ಷಣ ಕತ್ತೆಯು ಕ್ಯಾರೆಟ್ ಆಸೆಗೆ ಮುಂದೆ ಹೋಗಲು‌ ಪ್ರಾರಂಭಿಸಿತು. ಕತ್ತೆ ಮುಂದೆ‌ ಮುಂದೆ ಹೋದಂತೆ ಕೋಲಿಗೆ ಸಿಕ್ಕಿಸಿದ್ದ ಕ್ಯಾರೆಟ್ ಮುಂದೆ ಹೋಗುವುದರಿಂದ ಕತ್ತೆಗೆ ಕ್ಯಾರೆಟ್ ಸಿಗಲಿಲ್ಲ! ಇದೇ ಸಮಯದಲ್ಲಿ ‌ಅದರ ಮಾಲೀಕನ‌ ಆಸೆಯೂ ಈಡೇರಿತು. ಕ್ಯಾರೆಟ್ಟೂ ಉಳಿಯಿತು.

ಈ‌ ಮೇಲಿನ ಪ್ರಸಂಗದಿಂದ ತಿಳಿದು ಬರುವುದೇನೆಂದರೆ ನಮ್ಮ ಜೀವನದಲ್ಲೂ ಸಹ ಕೆಲವರು‌ ನಮಗೂ ಅದೂ ಇದೂ ಆಸೆ ತೋರಿಸಿ ನಮ್ಮನ್ನು  ಬಳಸಿಕೊಂಡು  ಅವರು‌ ದುಡ್ಡು‌ ಮಾಡಿಕೊಳ್ತಾರೆ. ರಸ್ತೆಯಲ್ಲಿ ರಣಬಿಸಿಲಿರುವ ಮಟ ಮಟ ಮಧ್ಯಾಹ್ನದ ಹೊತ್ತು ಸಾಗುವಾಗ ದೂರದಲ್ಲಿ ರಸ್ತೆ ಮೇಲೆ ನೀರು ಕಂಡಂತೆ ಕಾಣುವ ‘ಬಿಸಿಲ್ಗುದುರೆ’ ಯಂತೆ ನಮಗೆ ಹಣ, ಆಮಿಷ ಕಾಣುತ್ತಿರುತ್ತದೆಯೇ ಹೊರತು ಅದರ ಹತ್ತಿರಕ್ಕೆ ಹೋದಾಗ ಮಾತ್ರ ನೈಜತೆ ಗೊತ್ತಾಗುತ್ತದೆ.

ರಾಮಾಯಣದಲ್ಲಿ ನಡೆದ ಜಿಂಕೆಯ ಪ್ರಸಂಗವೂ ಸಹ ಚಿನ್ನದ ಜಿಂಕೆಯು ಇರಲು ಸಾಧ್ಯವೇ? ಎಂದು ಸ್ವಲ್ಪವೂ ಆಲೋಚಿಸದೇ ಸೀತೆಯು ಚಿನ್ನದ ಜಿಂಕೆಗೆ  ಆಸೆ  ಪಡುವಂತೆ ಮಾಡಿದ  ಕಥೆ ಬಹುತೇಕರಿಗೆ ತಿಳಿದಿರುತ್ತದೆ… ಅಲ್ಲದೇ ಹಣ ಮಾಡಲೆಂದೇ ಹುಟ್ಟಿಕೊಳ್ಳುವ ಮೋಸದ ಕಂಪೆನಿಗಳ ಬಗ್ಗೆ ಜಾಗೃತಿ ಮೂಡಿಸಿದರೂ ಒಂದು‌ ಕುರಿ ಹಳ್ಳಕ್ಕೆ ಬಿದ್ದರೆ ಅವುಗಳ ಹಿಂಡು ಗುಂಡಿಗೆ ಬೀಳುವಂತೆ ಕೆಲವರು ಇಂತವಕ್ಕೆ ಸೇರಿ ಉಳಿದವರನ್ನು ಸೇರಿಸುವ ಮೂಲಕ ಅವರೂ ಸಹ ಯಾಮಾರಾಗುವಂತೆ ಮಾಡುತ್ತಾರೆ!

ಹಣ ಮಾಡಲು ಹೊರಟವನಿಗೆ ಹಣವೊಂದೇ ಕಾಣುತ್ತೇ ಹೊರತು ಬೇರೆಯದು ಯಾವುದೂ ಕಾಣೋಲ್ಲ… ಈ ಸಮಯದಲ್ಲಿ ಬೇರೆಯವರು ಬುದ್ಧಿವಾದ ಹೇಳಿದರೂ ಅವರ ಮಾತನ್ನು ಯಾರೂ ಕೇಳೊಲ್ಲ. ಹಿಂದಿನಿಂದಲೂ ಧನ, ಧಾನ್ಯ ಸಂಪತ್ತಿಗಾಗಿ ಜನರು ತಮ್ಮ ತಮ್ಮಲ್ಲೇ ಕಚ್ಚಾಡಿಕೊಳ್ಳುವ ಪ್ರಸಂಗಗಳನ್ನು ನಾವು ಕೇಳಿದ್ದೇವೆ. ಹಣದ ಬಗ್ಗೆ ಶ್ಲೋಕವೊಂದು ಈ ರೀತಿ ಇದೆ:

ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ ।
ಸ ಏವ ವಕ್ತಾ ಸ ಚ ದರ್ಶನೀಯಃ ಸರ್ವೇ ಗುಣಾಃ ಕಾಂಚನಮಾಶ್ರಯಂತಿ ||

ಅರ್ಥ:-

ಯಾರ ಬಳಿ ಹಣ (ವಿತ್ತ) ಇದೆಯೋ, ಅವನೇ ಉತ್ತಮ ಕುಲದವನು, ಅವನೇ ಪಂಡಿತನು, ಅವನೇ ಶಾಸ್ತ್ರ ಬಲ್ಲವನು ಮತ್ತು ಗುಣವಂತನು ಎಂದು ಲೋಕ ತಿಳಿಯುತ್ತದೆ. ಅವನೇ ಅತ್ಯುತ್ತಮ ಭಾಷಣಕಾರ ಹಾಗೂ ಅವನೇ ನೋಡಲು ಸುಂದರನಾಗಿ ಕಾಣುತ್ತಾನೆ. ಏಕೆಂದರೆ, ಈ ಜಗತ್ತಿನಲ್ಲಿ ಎಲ್ಲಾ ಗುಣಗಳೂ ಚಿನ್ನವನ್ನು (ಹಣವನ್ನು) ಆಶ್ರಯಿಸಿರುತ್ತವೆ.

ಹಣ ಮಾಡಿದವರ ಬಗ್ಗೆ ಅನೇಕರು ಈ ರೀತಿ ಹೇಳ್ತಾ ಇದ್ದರು. ಒಂದು ಕೆರೆ ತುಂಬಬೇಕು ಅಂದ್ರೆ ಒಂದೇ ಕಡೆಯಿಂದ ನೀರು ಬಂದರೆ ಸಾಲದು ಅದಕ್ಕೆ ಬೇರೆ ಬೇರೆ ಕಡೆಯಿಂದ ನೀರು ಬರಬೇಕು ಹಾಗಾದರೆ ಮಾತ್ರ ಕೆರೆ ಬೇಗ ತುಂಬುತ್ತೆ ಅಂತ ಯಾವಾಗಲೂ  ಹೇಳ್ತಾ ಇದ್ರು ಅದೇ ರೀತಿ ನಾವಷ್ಟೇ ದುಡಿದರೆ ಶ್ರೀಮಂತರಾಗಲ್ಲ ಬದಲಾಗಿ  ನಮಗೆ ಅಂತಾನೆ ದುಡಿಯೋ ಕೈಗಳು ಬಹಳ ಇದ್ದರೆ ನಾವು ಶ್ರೀಮಂತರಾಗುತ್ತೇವೆ ಅಂತ ಯಾವಾಗಲೂ ಹೇಳ್ತಾ ಇದ್ರು. ಮೊದಲಿನಿಂದಲೂ ಶ್ರೀಮಂತರಾಗಬೇಕು ಅಂತ ಕನಸು ಕಂಡಿದ್ದ ನನಗೆ ನಾನು ವಿವಾಹವಾಗುವ ಮುನ್ನ ಸಾಕಷ್ಟು  ಹಣ ಮಾಡಲು ಏನಾದ್ರೂ ಮಾಡಬೇಕು  ಎಂಬ ಹಂಬಲ ನನ್ನಲ್ಲಿ ತುಂಬಾ ಇತ್ತು. “ನೀವು ನಿದ್ದೆ ಮಾಡುವಾಗಲೂ ನಿಮ್ಮ ಹಣ ನಿಮಗಾಗಿ ದುಡಿಯಬೇಕು” ಎಂಬ ವಾರೆನ್ ಬಫೆಟ್‌ರ ಮಾತು ನನ್ನ ಮೇಲೆ ಪ್ರಭಾವ ಬೀರಿತ್ತು. ಇದಕ್ಕಾಗಿ ನಾನು ಶೇರ್ ಟ್ರೇಡಿಂಗ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲಿಕ್ಕೆ ಒಂದು ತರಬೇತಿಗೆ ಹೋಗಿದ್ದೆ. ಆದರೆ ಡಿಮ್ಯಾಟ್ ಅಕೌಂಟ್ ಮಾಡಿಸಲಿಕ್ಕೆ ಆಗದೆ ಆ ಒಂದು ಆಸೆಯನ್ನ ಕೈ ಚೆಲ್ಲಿದ್ದೆ.

ಈ ಸಮಯದಲ್ಲಿ ನಮ್ಮ ಹಾಸ್ಟೆಲ್‌ನಲ್ಲಿ ಇದ್ದಂತಹ ಅನೇಕ ಇಂಜಿನಿಯರಿಂಗ್ ಹುಡುಗರು ಒಂದು ನೆಟ್ವರ್ಕ್ ಮಾರ್ಕೆಟಿಂಗ್ ಕಂಪೆನಿ  ಬಗ್ಗೆ  ಮಾಹಿತಿಯನ್ನು ತಿಳಿಸಿದ್ರು. ಅದರಲ್ಲೂ ನನ್ನ ರೂಮಿನ ಪಕ್ಕದವನಾದ ಒಬ್ಬ ವ್ಯಕ್ತಿ ಈ ನೆಟ್ವರ್ಕ್ ಮಾರ್ಕೆಟಿಂಗ್ ಬಗ್ಗೆ ತುಂಬಾನೆ ಹೇಳಿದ್ದ. “ನೀನು ಹಾಕಿದ ಹಣವನ್ನು ವಾಪಸ್ ಕೊಡಿಸುವ ಜವಾಬ್ದಾರಿ ನನ್ನದು” ಎಂಬ ಆಸೆ ಹುಟ್ಟಿಸಿದ್ದ. ನಾನು ಅವನ ಮಾತಿನಿಂದ ತುಂಬಾ ಇಂಪ್ರೆಸ್ ಆಗಿದ್ದೆ. ಆದರೂ ಆ ಕಂಪೆನಿಗೆ ಸೇರಲು  ಒಳಮನಸ್ಸು  ಒಪ್ಪಿರಲಿಲ್ಲ. ವಿಪರ್ಯಾಸ ಅಂದರೆ ಇದಕ್ಕೂ  ಮೊದಲು ಇದರ ಬಗ್ಗೆ  ವ್ಯಂಗ್ಯವಾಗಿ ಮಾತಾಡಿದ್ದೆ ನಾನು. ಅದು ಹೆಂಗೆ ಆಗುತ್ತೆ? ನಾವು ಬರಿ 7000 ಕೊಟ್ಟು ಜಾಯಿನ್ ಆಗಿ, ಮತ್ತೆ ಏಳು ಜನ ಸೇರಿಸಿದರೆ ನಮ್ಮ ದುಡ್ಡು ಬರುತ್ತೆ ಓಕೆ. ನಂತರ ಹೆಂಗೆ ಮತ್ತೆ ನಮಗೆ ಕೋಟಿಗಟ್ಟಲೆ ದುಡ್ಡು  ಬರುತ್ತೆ? ಹಂಗೆ ಹಣ ಬರೋದಾಗಿದ್ರೆ ಎಲ್ಲರೂ ಅದನ್ನೇ ಮಾಡ್ತಿದ್ರಲ್ವಾ? ಇದು ಸುಳ್ಳು ಅಂತ ನಾನು ಎಲ್ಲರಿಗಿಂತಲೂ ಮೊದಲೇ ವಿರೋಧ ಮಾಡಿದ್ದೆ. ಆದರೆ ಅವನು ಇದನ್ನೇ ಚಾಲೆಂಜ್ ಆಗಿ ತಗೊಂಡು ಸಿಕ್ಕಾಪಟ್ಟೆ ಜನರನ್ನು ಆ ನೆಟ್ವರ್ಕ್ ಮಾರ್ಕೆಟಿಂಗ್ ಸೇರಿಸಿದ್ದ. ಮತ್ತೊಮ್ಮೆ ಅವನನ್ನು ಭೇಟಿ ಮಾಡಿದಾಗ ಅವನ ಲೆವೆಲ್ ಚೇಂಜ್ ಆಗಿತ್ತು!!

ಅವನ ಈ ಪ್ರಗತಿಯನ್ನು ನೋಡಿ ನನಗೂ ಸಹ ಅವನು ಹೇಳಿದ ಕಂಪನಿಯನ್ನು ಸೇರಲು ನನಗೂ ಮನಸ್ಸಾಯ್ತು. ಆದರೆ ಅಷ್ಟು ಹಣವನ್ನು ಹೇಗೆ ಹೊಂದಿಸೋದು ಎಂಬ ಚಿಂತೆಯಾಯ್ತು. ಕಾರಣ ಆ ಸಮಯದಲ್ಲಿ ಇದೇ ಅತಿ ದೊಡ್ಡ ಮೊತ್ತವಾಗಿತ್ತು. ಅದಕ್ಕಾಗಿ ನಾನು ಎಲ್ಲರ  ಬಳಿಯೂ ಕೇಳಿದೆ. ಆದರೆ ಯಾರೂ ಅಷ್ಟು ಹಣ ಕೊಡಲಿಲ್ಲ. ಕೊನೆಗೆ ನಾನು ‘ಬಂದ ದಾರಿಗೆ ಸುಂಕ ಇಲ್ಲ’ ಅಂತ ವಾಪಸ್ ಚಿಕ್ಕಬಳ್ಳಾಪುರಕ್ಕೆ ತೆರಳಿದೆ.

ಆದರೂ ಸಹ ಆ ಕಂಪನಿಗೆ ಸೇರಲೇಬೇಕು ಎಂಬ ಆಸೆ ಮಾತ್ರ ಹಾಗೆ ಇತ್ತು. ಆ ಸಮಯದಲ್ಲಿ ನನಗೆ ಬರುತ್ತಿದ್ದ ವೇತನವು  ಕಡಿಮೆ ಇತ್ತು. ಹಾಗೋ ಈಗೋ ಹೇಗೋ ಸಾಲ ಸೋಲ ಮಾಡಿ ಆ ಕಂಪನಿಗೆ ನಾನು ಜಾಯಿನ್ ಆದೆ. ಕೊನೆಗೆ ಗೊತ್ತಾಯಿತು ನಾನೇನೋ ಜಾಯಿನ್ ಆಗೋದು ಆದೆ. ನನ್ನ ಕೆಳಗೆ ಮತ್ತೆ ಏಳು ಜನರನ್ನು ಜಾಯಿನ್ ಮಾಡಿಸಲು  ತುಂಬಾ ಕಷ್ಟಪಟ್ಟೆ. ತುಂಬಾ ಕಷ್ಟಪಟ್ಟು ಆ ಏಳು ಜನನ್ನ ಜಾಯಿನ್ ಮಾಡಿಸಿದೆ. ಆ ಸಮಯದಲ್ಲಿ ಎಷ್ಟು ಕಷ್ಟ ಆಯ್ತು ಅಂದ್ರೆ ಇದನ್ನು ವಾಪಾಸ್ ಇಲ್ಲಿಗೆ ನಿಲ್ಲಿಸಿಬಿಡೋಣ ಎಂದುಕೊಳ್ತಿದ್ದೆ. ಆದರೆ ಮತ್ತೆ ಇದೇ ಆ ವ್ಯಕ್ತಿ ಬಂದು ನಮಗೆ ಇತರರನ್ನು ಜಾಯಿನ್ ಮಾಡಿಸಲು ತುಂಬಾ ಪ್ರೇರಣೆ ನೀಡ್ತಾ ಇದ್ದ. ಇವನಿಂದ ಪ್ರೇರಿತನಾಗಿ ತುಂಬಾ ಕಷ್ಟಪಟ್ಟೆ ಆದರೂ ಯಾರು ಜಾಯಿನ್ ಆಗಲಿಲ್ಲ. ಕಾರಣ ಇಷ್ಟೇ. ಅವರು  7000 ರೂಪಾಯಿ ಕೊಟ್ಟರೂ ಸಹ  ಕಂಪೆನಿಯಿಂದ ಯಾವ ಒಂದು ವಸ್ತುವನ್ನೂ ಸಹ ಕೊಡ್ತಾ ಇರಲಿಲ್ಲ. ಇದರ ಬದಲಾಗಿ ಬರೀ ಒಂದು ಸಿಡಿ ಕೊಡ್ತಾ ಇದ್ರು. ಆ ಸಿಡಿಯಲ್ಲಿ ಕಂಪ್ಯೂಟರ್ ಕೋರ್ಸ್ ಇದಾವೆ!  ಆ ಕೋರ್ಸ್ ಗಳ ಬೆಲೆ ಅಷ್ಟು ಇಷ್ಟು ಅಂತ ಹೇಳಿ ನಮಗೆಲ್ಲ ನಂಬಿಸಿ ಆ ಸಿಡಿ ಕೊಡ್ತಾ ಇದ್ರು!!  ನನ್ನ ಜೊತೆಗೆ ಇದ್ದ ಬಹುತೇಕ ಇಂಜಿನಿಯರಿಂಗ್ ಹುಡುಗರೆ ಈ ಕಂಪೆನಿಗೆ ಜಾಯಿನ್ ಆಗಿದ್ದರಿಂದ ನಾನು “ಅವರು ತುಂಬಾ ಬುದ್ಧಿವಂತರು. ಅದು ನಿಜ ಇರಬಹುದೇನೋ?” ಎಂದುಕೊಂಡು‌ ನಾನೂ ಜಾಯಿನ್ ಆಗಿದ್ದೆ. ಆದರೆ ನನ್ನ ಮಾತನ್ನು ಕೇಳಿ ಯಾರು ಜಾಯಿನ್ ಆಗಲಿಲ್ಲ. ನನಗೆ ಬರೀ ಹೋರಾಟವೇ ಗತಿಯಾಯ್ತು. ನನ್ನ ಒಂದು ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಆದರೆ ಆ ವ್ಯಕ್ತಿ ಮಾತ್ರ ತುಂಬಾ ದುಡ್ಡು ಮಾಡ್ತಾ ಹೋದ! ದುಡ್ಡು ಮಾಡ್ತಾ ಹೋದ! ದುಡ್ಡು ಮಾಡ್ತಾ ಹೋದ! ಯಾವ ರೀತಿ ದುಡ್ಡು ಮಾಡ್ತಾ ಹೋದ ಅಂದ್ರೆ ಆ ಬಂದಂತಹ ಹಣ ಅವನ ತಲೆ ತಿರುಗಿಸಿತು. ತಲೆ ತಿರುಗಿಸಿ ಅವನು ತಾನು ಸೇರಿದ್ದ ಇಂಜಿನಿಯರಿಂಗ್ ಕೋರ್ಸ್ ಅನ್ನೇ ಮೊಟಕುಗೊಳಿಸಿ ಇದನ್ನೇ ಮಾಡಲಿಕ್ಕೆ ಶುರು ಮಾಡಿದ.

ಈ ರೀತಿ ನೆಟ್ವರ್ಕ್ ಮಾರ್ಕೆಟಿಂಗ್ ಕಂಪನಿಗೆ ಜಾಯಿನ್ ಆದಾಗ ಮೊದಮೊದಲು ಜಾಯಿನ್ ಆದವರಿಗೆ ಮಾತ್ರ ಹಣ ಸಿಗುತ್ತೆ. ಕೊನೆಗೆ ಜಾಯಿನ್ ಆದವರ ಕೈಗೆ ಚಿಪ್ಪೇ ಗತಿ!! ಆ ರೀತಿ ಆದಂತಹ ಪರಿಸ್ಥಿತಿ ನನ್ನದಾಗಿತ್ತು ಅವರು ಎಷ್ಟೇ ಪ್ರೇರಣೆ ಮಾಡೋಕೆ ಬಂದ್ರು ನಾನು ಮಾತ್ರ ಆ ಕಂಪನಿಗೆ ಮತ್ತೆ ಸೇರಿಸೋ ಸುದ್ದಿಗೆ ಹೋಗಲಿಲ್ಲ. ಆದರೂ ಎಲ್ಲೋ ಒಂದು ಕಡೆ ನಾನು ಏಳು ಜನರನ್ನು ಸೇರಿಸಿದ ಒಂದು ಪಾಪಪ್ರಜ್ಞೆ ನನ್ನನ್ನು ಕಾಡ್ತಾ ಇತ್ತು. ಇವರೂ ಅಷ್ಟೇ. ಹಣದ ಬಗ್ಗೆ ನನ್ನನ್ನು ಕೇಳಲಿಲ್ಲ. ಏಕೆಂದರೆ ಅವರು ಈ ಕಂಪೆನಿಗೆ ಸೇರುವ ಮೊದಲು ಹೇಳಿದ್ದೆ. ನೀವು ಮತ್ತೊಬ್ಬರನ್ನು ಸೇರಿಸದ ಹೊರತು ಇದರಿಂದ ಸುಮ್ಮನೆ ಹಣ ಬರೋದಿಲ್ಲ ಅಂತಾ! ಈ ಒಂದು ಮಾತಿನಿಂದಾಗಿ ನಾನು ಬಚಾವಾದೆ… ಆದರೂ ಒಬ್ಬ ಮಾತ್ರ ಹಣವನ್ನು ವಾಪಸ್ ಕೊಡು ಎಂದು ಪಟ್ಟು‌ ಹಿಡಿದ. ನನ್ನ ವೇತನದಿಂದ ಅವನಿಗೆ ವಾಪಸ್ವಕೊಟ್ಟೆ!!  ಅವನ ಹಾಳು ಸಹವಾಸಕ್ಕೆ ಹೋಗಲಿಲ್ಲ!!

ಆದರೆ ಆ ವ್ಯಕ್ತಿ ತುಂಬಾ ಹಣ ಮಾಡ್ತಾ ಹೋದ ಯಾವ ರೀತಿ ಅಂತ ಅಂದ್ರೆ “ನಾನು ಇಂಜಿನಿಯರಿಂಗ್ ಮಾಡಿ ಎಷ್ಟು ದುಡಿತಿದ್ನೋ ಅದರ ಸಾವಿರ ಪಟ್ಟು ದುಡಿತೀನಿ! ಅದು ಇದು ಅಂತ ಕೊಚ್ಕೊಂಡು ಅನೇಕ ಇಂಜಿನಿಯರಿಂಗ್ ಹುಡುಗರು, ಬೇರೆ ಬೇರೆ ಡಿಗ್ರಿ ಹುಡುಗರು, ಪಿಯುಸಿ, ಡಿಪ್ಲೋಮಾ ಹುಡುಗರು ಹೀಗೆ ಎಲ್ಲರನ್ನು ಸೇರಿಸುತ್ತಾ ಅವನ ಗಳಿಕೆ ಹೆಚ್ಚು‌ ಮಾಡಿಕೊಂಡ. ಈ ಜಾಲ ಎಲ್ಲಾ ಕಡೆ ಹಬ್ಬಿ ಅನೇಕರು ಈ ಜಾಲದಲ್ಲಿ ಸಿಕ್ಕಿ ಹಾಕಿಕೊಂಡರು. ಕೆಲವರಂತೂ ಅವರು ಮಾಡುತ್ತಿದ್ದ ಕೋರ್ಸ್ ನ್ನು ಮೊಟಕುಗೊಳಿಸಿ ಇದನ್ನೇ ಫುಲ್ ಟೈಂ ಮಾಡೋಕೆ ಮುಂದಾದರು!! ನನಗೇನೋ ಕೆಲಸ ಇತ್ತು ನಾನು ಅದೇ ಕೆಲಸದಲ್ಲಿ ಮುಂದುವರೆದೆ. ಆದರೆ ಪಾಪ ಅವರ ಅವನ ಮಾತು ಕೇಳಿ ಯಾರ್ಯಾರು ಈ ಕಂಪೆನಿಗೆ ಜಾಯಿನ್ ಆಗಿದ್ರೋ ಅವರೆಲ್ಲ ಜೀವನದಲ್ಲಿ ತುಂಬಾ ಯಾಮಾರಿದ್ರು!! ಇದರ ಜೊತೆ ನಾನೂ ಯಾಮಾರಿದ್ದೆ.  ಕೆಲಸ ಸಿಕ್ಕ‌ ಕೂಡಲೇ ಇದೇ ಕೆಲಸಕ್ಕೆ ಸಂತೃಪ್ತನಾಗಿ‌ ಮುಂದೆ ಯಾವ ಕೋರ್ಸನ್ನೂ‌ ಮಾಡಲು ಮುಂದಾಗಲಿಲ್ಲ.

ನಾನು ಯಾಮಾರಿದ್ದು ಬರೀ ಇದೊಂದೇ ಬಾರಿಯಾ? ಅಥವಾ ಮತ್ತೂ ನನ್ನ ಜೀವನದಲ್ಲಿ ಇದೇ ರೀತಿ ತಪ್ಪು ಮಾಡಿದೆನಾ? ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

ಮುಗಿಸೋ ಮುನ್ನ:

ನಾವು ಹಣ ಕಳೆದುಕೊಂಡಿದ್ದನ್ನು ಯಾರ ಬಳಿಯೂ ಹೇಳಿಕೊಳ್ಳಬಾರದಂತೆ. ಆದರೂ ನಾನು ಮಾಡಿದ ತಪ್ಪನ್ನು ಬೇರೆಯವರು ಮಾಡದಿರಲಿ ಎಂಬ ಕಾಳಜಿಯಿಂದ ನಾನು ಮಾಡಿದ ತಪ್ಪು ನಡೆಯನ್ನು ನಿಮ್ಮೆಲ್ಲರ ಮುಂದಿರಿಸಿದ್ದೇನೆ… ಯಾಕೆಂದರೆ ಜೀವನದಲ್ಲಿ ನಾವೇ ತಪ್ಪು‌ ಮಾಡಿ ಕಲಿಯುವಷ್ಟು ಜೀವನ ದೊಡ್ಡದಲ್ಲ. ಪರರ ತಪ್ಪಿನಿಂದ ನಾವು ಕಲಿಯಬೇಕು.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ