ಡಚ್ಚರಿಗೆ ತಮ್ಮ ಸೈಕಲ್ ಸವಾರಿಯ ಬಗ್ಗೆ ಅಪಾರ ಅಭಿಮಾನ. ಅವರು ನಿದ್ರಿಸುತ್ತಲೂ ಸೈಕಲ್ ತುಳಿಯಬಲ್ಲರೇನೋ ಎನಿಸುತ್ತದೆ. ನಾನು ಎಲ್ಲಿ ಬೇಕಾದಲ್ಲಿಎಂಥ ಜನನಿಬಿಡ ಪ್ರದೇಶದಲ್ಲೂ ಆರಾಮಾಗಿ ಸೈಕಲ್ ಸವಾರಿ ಮಾಡಬಲ್ಲೆಆದರೆ ಒಬ್ಬ ಡಚ್ ವ್ಯಕ್ತಿ ಯಾವ ಆತ್ಮವಿಶ್ವಾಸದೊಂದಿಗೆ ಸೈಕಲ್ ಸವಾರಿ ಮಾಡುತ್ತಾನೋ ಅಷ್ಟು ವಿಶ್ವಾಸದಿಂದ ನಾನೆಂದಿಗೂ ಮಾಡಲು ಸಾಧ್ಯವಿಲ್ಲ. ಇಲ್ಲಿರುವ ವಿದೇಶಿ ಜನ ಡಚ್ಚರ ಸೈಕಲ್ ಸವಾರಿಯ ವರಸೆಯನ್ನು ನೋಡಿದಾಗಇವರೆಲ್ಲರೂ ಬಹುಶ ತಾಯಿಯ ಗರ್ಭದಿಂದ ಹೊರಬರುವಾಗ ಒಂದು ಸೈಕಲ್ ಕೂಡ ಜೊತೆಯಲ್ಲಿಟ್ಟುಕೊಂಡೇ ಬಂದಿರಬಹುದು‘ ಎಂದು ಗೇಲಿಮಾಡುತ್ತಾರೆ. ಯುವಜನರಂತೂ ಸೈಕಲ್ ಹ್ಯಾಂಡಲ್ ಹಿಡಿಯುವುದೇ ಕಡಿಮೆಸೀಮಾ ಎಸ್ ಹೆಗಡೆ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

 

ನೆದರ್ ಲ್ಯಾಂಡ್ಸ್ ನ ಜನರ ಜೀವನದಲ್ಲಿ ಸೈಕಲ್ ಗಳಿಗೆ ಮಹತ್ವದ ಪಾತ್ರ. ಬರೀ ಜೀವನದಲ್ಲೇನು, ಸೈಕಲ್ ಅವರ ಸಂಸ್ಕೃತಿಯ ಒಂದು ಭಾಗವೇ ಆಗಿಹೋಗಿದೆ! ಅದನ್ನವರು ‘ಬೈಕ್ ಕಲ್ಚರ್’ ಎಂದು ಕರೆದುಕೊಳ್ಳುತ್ತಾರೆ. ಡಚ್ಚರು ಸೈಕಲ್ ಅನ್ನು ‘ಬೈಕ್’ ಎಂದು ಕರೆಯುತ್ತಾರೆ. ನಾವು ಭಾರತೀಯರು ಯಾವುದನ್ನು ಬೈಕ್ ಎಂದು ಕರೆಯುತ್ತೀವೋ ಅದನ್ನವರು ‘ಮೋಟಾರ್ ಬೈಕ್’ ಎಂದು ಕರೆಯುತ್ತಾರೆ. ಮೊದಮೊದಲು ನಮಗೆ ಡಚ್ಚರ ಬಾಯಿಂದ ‘ಬೈಕ್’ ಎಂಬುದನ್ನು ಕೇಳಿದಾಗ ಗೊಂದಲವಾಗುತ್ತಿತ್ತು. ಕೆಲ ದಿನಗಳಲ್ಲಿ ಅಭ್ಯಾಸವಾಯಿತು. ಈಗ ನಾವೂ ಕೂಡ ಬೈಕ್ ಎನ್ನತೊಡಗಿದ್ದೇವೆ!

ಮೊನ್ನೆ ನಾನು ಸೈಕಲ್ ಏರಿ ಹೋಗುತ್ತಿದ್ದಾಗ ರಸ್ತೆಗಳು ಒಂದಕ್ಕೊಂದು ಸಂಧಿಸಿದ ಜಾಗವೊಂದರಲ್ಲಿ ನನ್ನ ಎದುರಲ್ಲಿ ಬೆಕ್ಕೊಂದು ಪುಸಕ್ಕೆಂದು ಅಡ್ಡಹೋದಂತೆ ಭಾಸವಾಯಿತು. ಕತ್ತು ಹೊರಳಿಸಿ ನೋಡಿದೆ, ಅರೆರೆ! ಬೆಕ್ಕಲ್ಲ, ಆದರೆ ಬೆಕ್ಕಿಗಿಂತ ವೇಗವಾಗಿ ರಸ್ತೆಗೆ ಅಡ್ಡವಾಗಿ ಒಬ್ಬ ಸೈಕಲ್ ಸವಾರ ನನ್ನ ಮುಂದೆ ದಾಟಿದ್ದ. ನಾನು ಏನಾಯಿತೆಂದು ಗೊಂದಲದಿಂದ ಹೊರಬರುವಷ್ಟರಲ್ಲಿ ಕ್ಷಣಾರ್ಧದಲ್ಲಿ ಆತ ದಾಟಿ ಹಲವಾರು ಮಾರು ದೂರ ಹೋಗಿಯಾಗಿತ್ತು! ಇದು ಮೊಟ್ಟ ಮೊದಲ ಬಾರಿಗೆ ನಡೆದುದೇನಲ್ಲ, ಇಂಥ ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಆದರೂ ಪ್ರತಿಯೊಂದು ಸಲ ಹೀಗಾದಾಗಲೂ ಡಚ್ಚರ ರೀತಿಯ ಆತ್ಮವಿಶ್ವಾಸ ಸೈಕಲ್ ಸವಾರಿಯಲ್ಲಿ ನನಗೆ ಎಷ್ಟು ವರ್ಷ ಇಲ್ಲಿಯೇ ಉಳಿದರೂ ಬರುವುದೇ ಇಲ್ಲವೇನೋ ಎಂದುಕೊಳ್ಳುತ್ತೇನೆ! ಡಚ್ಚರಿಗೆ ಅದು ಹುಟ್ಟಿನಿಂದಲೇ ಬರುವಂಥದು, ನಾನಾದರೋ ಹದಿಮೂರನೆಯ ವಯಸ್ಸಿನಲ್ಲಿ ಸೈಕಲ್ ಕಲಿತವಳು.

ಮಳೆಯಿರಲಿ, ಚಳಿಯಿರಲಿ, ಹಿಮವಿರಲಿ, ಗಾಳಿಯಿರಲಿ ಡಚ್ಚರು ಸೈಕಲ್ ಮಾತ್ರ ಬಿಡರು. ಸಮತಟ್ಟಾದ ಭೂಭಾಗವಾಗಿರುವ ನೆದರ್ ಲ್ಯಾಂಡ್ಸ್ ನಲ್ಲಿ ಕೆಲವೊಂದು ದಿನ ತಾಸಿಗೆ ಅರವತ್ತರಿಂದ ಎಂಭತ್ತು ಕಿಲೋಮೀಟರ್ ಗಳಷ್ಟು ಜೋರಾಗಿ ಗಾಳಿಯಿರುತ್ತದೆ. ಹವಾಮಾನ ಇಲಾಖೆಯವರಿಂದ ಎಚ್ಚರಿಕೆಗಳೂ ಇರುತ್ತವೆ. ಅಂಥದರಲ್ಲಿ ಕೂಡ ಅವರು ಸೈಕಲ್ ತುಳಿಯುತ್ತಾರೆ! ನನ್ನ ಸಾಧನೆ ಮೂವತ್ತೈದರಿಂದ ನಲವತ್ತು ಕಿಲೋಮೀಟರಷ್ಟು ಜೋರಾದ ಗಾಳಿಗೆ ನಿಂತಿದೆ. ಇತ್ತೀಚಿಗೆ ಒಮ್ಮೆ ಇದೇ ರೀತಿ ಗಾಳಿಯಿದ್ದಾಗ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ನನ್ನನ್ನು ಗಾಳಿ ನನ್ನ ಸೈಕಲ್ ಸಮೇತ ರಸ್ತೆಗೆ ತಳ್ಳಿಬಿಟ್ಟಿತ್ತು! ರಾಜೀವ ಏನಾದ ಎಂದು ತಿರುಗಿ ನೋಡಿದೆ, ಆತ ಅವನ ಸೈಕಲ್ ಸಮೇತ ಹೋಗಿ ಪಕ್ಕದಲ್ಲಿರುವ ವ್ಯಕ್ತಿಯ ಮೇಲೆ ಆತು ನಿಂತಿದ್ದ! ಡಚ್ಚರು ಧಡೂತಿ ಶರೀರದವರು. ಸಾಧಾರಣ ಗಾಳಿಗೆ ಬಗ್ಗುವವರಲ್ಲ. ನಮ್ಮಂಥ ಬಡ ಜೀವಗಳು ತರಗೆಲೆಗಳಂತೆ ಹಾರುವುದನ್ನು ಕಂಡರೆ ಅವರಿಗೆ ಕನಿಕರ, ನಮ್ಮ ಸಹಾಯಕ್ಕೆ ಬರುತ್ತಾರೆ.

ನೆದರ್ ಲ್ಯಾಂಡ್ಸ್ ನಲ್ಲಿ ಸೈಕಲ್ ಇಲ್ಲದ ಬದುಕನ್ನು ಊಹಿಸಿಕೊಳ್ಳಲೂ ಅಸಾಧ್ಯ. ಒಬ್ಬರ ಬಳಿ ಒಂದು ಅಥವಾ ಒಂದಕ್ಕಿಂತ ಜಾಸ್ತಿ ಸೈಕಲ್ ಗಳಿರುತ್ತವೆ. ಆದ್ದರಿಂದಲೇ ನೆದರ್ ಲ್ಯಾಂಡ್ಸ್ ನಲ್ಲಿನ ಸರಾಸರಿ ಸೈಕಲ್ ಗಳ ಸಂಖ್ಯೆ ತಲಾ 1.3 ಮತ್ತು ಜಗತ್ತಿನಲ್ಲಿಯೇ ಅತಿ ಹೆಚ್ಚು. ಸೈಕಲ್ ಗಳ ಸಂಖ್ಯೆ ಎಷ್ಟೆಂದರೆ ಕೆಲವೊಮ್ಮೆ ಯಕಶ್ಚಿತ ಸೈಕಲ್ ನಿಲ್ಲಿಸಲು ಜಾಗ ಹುಡುಕಬೇಕಾಗುತ್ತದೆ! ಮುನಿಸಿಪಾಲಿಟಿಯವರು ಸೈಕಲ್ ನಿಲ್ಲಿಸಲು ಮಾಡಿರುವ ಸ್ಥಳಗಳು ತುಂಬಿ ತುಳುಕುತ್ತಿರುತ್ತವೆ, ಜನರು ಎಲ್ಲೆಂದರಲ್ಲಿ, ಮರಗಳಿಗೆ, ದೀಪದ ಕಂಬಗಳಿಗೆ ತಮ್ಮ ಸೈಕಲ್ ಆನಿಸಿ ನಿಲ್ಲಿಸಿ ಬೀಗ ಹಾಕಿ ಹೊರಡುತ್ತಾರೆ. ಆಮ್ಸ್ಟರ್ ಡ್ಯಾಮ್ ನಗರವೊಂದರಲ್ಲೇ ಒಂದು ದಿನಕ್ಕೆ ಜನರು ಸೈಕಲ್ ಓಡಿಸುವ ಒಟ್ಟೂ ದೂರ ಇಪ್ಪತ್ತು ಲಕ್ಷ ಕಿಲೋಮೀಟರುಗಳಷ್ಟು! ಅಲ್ಲಿರುವ ಸೈಕಲ್ ಗಳ ಸಂಖ್ಯೆ 8,81,000, ನಮ್ಮ ಎರಡು ಸೈಕಲ್ ಗಳೂ ಸೇರಿ! ಈ ಸಂಖ್ಯೆ ನಗರದಲ್ಲಿರುವ ಕಾರುಗಳ ಸಂಖ್ಯೆಗಿಂತ ಬರೋಬ್ಬರಿ ನಾಲ್ಕು ಪಟ್ಟು ಜಾಸ್ತಿ! ನಗರದ ಸೆಂಟ್ರಲ್ ಜಾಗದಲ್ಲಿ ಅಧಿಕೃತವಾಗಿ 7,800 ಸೈಕಲ್ ಗಳ ಪಾರ್ಕಿಂಗ್ ಗೆ ಜಾಗವಿದೆ, ಆದರೆ ಅಲ್ಲಿ ಎಲ್ಲಾ ಸಮಯದಲ್ಲೂ 8,200 ಅಥವಾ ಅದಕ್ಕಿಂತ ಹೆಚ್ಚು ಸೈಕಲ್ ಗಳು ನಿಂತಿರುತ್ತವೆ. ನಾವು ಸೈಕಲ್ ನಿಲ್ಲಿಸಿದ ಜಾಗವನ್ನು ಸರಿಯಾಗಿ ನೆನಪಿಟ್ಟುಕೊಳ್ಳದಿದ್ದರೆ ಹಿಂದಿರುಗಿ ಬಂದು ಆ ಸೈಕಲ್ ಗಳ ಸಮುದ್ರದಲ್ಲಿ ನಮ್ಮ ಸೈಕಲ್ ಹುಡುಕಿ ತೆಗೆಯುವುದು ಸಾಧ್ಯವೇ ಇಲ್ಲ, ಸುತ್ತಮುತ್ತ ಎಲ್ಲಿ ನೋಡಿದಲ್ಲಿ ಸೈಕಲ್ ಗಳು, ತಲೆ ತಿರುಗಿದಂತಾಗುತ್ತದೆ. ಸೈಕಲ್ ನಿಲ್ಲಿಸಲು ಜಾಗ ಸಿಗದೇ ಜನರು ಪರದಾಡುವುದನ್ನು ತಪ್ಪಿಸಲು ಸದ್ಯದಲ್ಲಿ ಸರ್ಕಾರ ಹೊಸ ಜಾಗಗಳ ವ್ಯವಸ್ಥೆಮಾಡಲು ಬರೀ ಆಮ್ಸ್ಟರ್ ಡ್ಯಾಮ್ ನಗರದ ಮೇಲೆ 900 ಲಕ್ಷ ಯೂರೊಗಳಷ್ಟು ಹಣವನ್ನು ಖರ್ಚುಮಾಡಲಿದೆಯಂತೆ!

(ಮುನಿಸಿಪಾಲಿಟಿಯವರು ಸೈಕಲ್ ನಿಲ್ಲಿಸಲು ಮಾಡಿರುವ ಸ್ಥಳ)

ಇಲ್ಲಿನ ರಾಜ ರಾಣಿ ಕೂಡ ಸೈಕಲ್ ತುಳಿಯುತ್ತಾರೆ, ಪ್ರಧಾನಮಂತ್ರಿ ಸೈಕಲ್ ಸವಾರಿ ಮಾಡಿಕೊಂಡು ತಮ್ಮ ಕಚೇರಿಗೆ ಹೋಗುವುದಂತೂ ಸಾಮಾನ್ಯ. ಪ್ರಧಾನಮಂತ್ರಿಯೇ ಸೈಕಲ್ ತುಳಿದು ಕಚೇರಿಗೆ ಹೋಗುತ್ತಾರೆಂದಮೇಲೆ ಇನ್ನು ದೊಡ್ಡ ಕಂಪನಿಗಳ CEO ಗಳೂ ಸೈಕಲ್ ತುಳಿದುಕೊಂಡು ತಮ್ಮ ಕಚೇರಿಗಳಿಗೆ ಹೋಗುತ್ತಾರೆಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.  ಜನರು ಕೆಲಸಕ್ಕೆ ಹೋಗುವಾಗ ಮತ್ತು ಸಂಜೆ ಮನೆಗೆ ಮರಳುವ ಹೊತ್ತಿನಲ್ಲಿ ಸೈಕಲ್ ಲೇನ್ ಗಳಲ್ಲಿ ಯಾವ ಪ್ರಮಾಣದ ನಿಬಿಡತೆಯೆಂದರೆ ಒಬ್ಬರ ಮೊಣಕೈ ಇನ್ನೊಬ್ಬರನ್ನು ತಾಕುತ್ತಿರುತ್ತದೆ! ಅವರ ಈ ಬೈಕ್ ಸಂಸ್ಕೃತಿಗೆ ಮರುಳಾಗದವರಿಲ್ಲ, ಕೆಲವು ವಿದೇಶೀಯರಂತೂ ಇದೇ ಕಾರಣಕ್ಕೆ ಇಲ್ಲೇ ಶಾಶ್ವತವಾಗಿ ಉಳಿಯಲು ನಿರ್ಧರಿಸಿದ ಉದಾಹರಣೆಗಳೂ ಇವೆ!

(ಪ್ರಧಾನಮಂತ್ರಿ ಮಾರ್ಕ್ ರುಟ್ಟ ಸೈಕಲ್ ಮೇಲೆ)

ನೆದರ್ ಲ್ಯಾಂಡ್ಸ್ ನಲ್ಲಿ ಇಡೀ ದೇಶದ ತುಂಬೆಲ್ಲಾ ಸೈಕಲ್ ಗಳಿಗೆ ಪ್ರತ್ಯೇಕ ಲೇನ್ ಮಾಡಿದ್ದಾರೆ. ಇಡೀ ದೇಶವನ್ನು ಸೈಕಲ್ ಮೇಲೆ ಸೈಕಲ್ ಲೇನ್ ನಲ್ಲಿಯೇ ಸುತ್ತಬಹುದು. ಅಲ್ಲದೇ, ರೈಲಿನಲ್ಲಿ ಸೈಕಲ್ ಗೆ ಪ್ರತ್ಯೇಕ ಟಿಕೆಟ್ ಖರೀದಿಸಿ ನಮ್ಮದೇ ಸೈಕಲ್ ಹೇರಿಕೊಂಡು ಬೇಕಾದಲ್ಲಿ ಹೋಗಬಹುದು. ರಶ್ ಇರುವ ಸಮಯದಲ್ಲಿ ಸೈಕಲ್ ಕೊಂಡೊಯ್ಯುವುದು ನಿಷಿದ್ಧ. ಮಡಚಿ ಕೊಂಡೊಯ್ಯುವಂತ ಸೈಕಲ್ ಒಯ್ಯಬಹುದು, ಅದಕ್ಕೆ ಟಿಕೆಟ್ ಕೂಡ ಕೊಳ್ಳುವ ಅಗತ್ಯವಿಲ್ಲ. ಇದೂಕೂಡ ಕೆಲವೊಮ್ಮೆ ಕಿರಿಕಿರಿ ಎನಿಸುತ್ತದೆ, ಅದಕ್ಕಾಗಿ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆಯವರೇ ಇಟ್ಟಿರುವಂತಹ ಉತ್ತಮ ಸ್ಥಿತಿಯಲ್ಲಿರುವ ಬಾಡಿಗೆಯ ಸೈಕಲ್ ಗಳು ದೊರೆಯುತ್ತವೆ. ಇವುಗಳನ್ನು ಸಾರ್ವಜನಿಕ ಸೈಕಲ್ ಗಳೆಂದು ಕರೆಯುತ್ತಾರೆ. ನೀಲಿ ಮತ್ತು ಹಳದಿ ಬಣ್ಣದ ವಿಶಿಷ್ಟವಾದ ಸೈಕಲ್ ಗಳು. ನಿಜ ಹೇಳಬೇಕೆಂದರೆ ನೆದರ್ ಲ್ಯಾಂಡ್ಸ್ ನಲ್ಲಿ ಸೈಕಲ್ ಬಾಡಿಗೆಗೆ ಸಿಗದಿರುವ ಜಾಗವೇ ಇಲ್ಲ!

ನೆದರ್ ಲ್ಯಾಂಡ್ಸ್ ನಲ್ಲಿನ ಸರಾಸರಿ ಸೈಕಲ್ ಗಳ ಸಂಖ್ಯೆ ತಲಾ 1.3 ಮತ್ತು ಜಗತ್ತಿನಲ್ಲಿಯೇ ಅತಿ ಹೆಚ್ಚು. ಸೈಕಲ್ ಗಳ ಸಂಖ್ಯೆ ಎಷ್ಟೆಂದರೆ ಕೆಲವೊಮ್ಮೆ ಯಕಶ್ಚಿತ ಸೈಕಲ್ ನಿಲ್ಲಿಸಲು ಜಾಗ ಹುಡುಕಬೇಕಾಗುತ್ತದೆ! ಮುನಿಸಿಪಾಲಿಟಿಯವರು ಸೈಕಲ್ ನಿಲ್ಲಿಸಲು ಮಾಡಿರುವ ಸ್ಥಳಗಳು ತುಂಬಿ ತುಳುಕುತ್ತಿರುತ್ತವೆ, ಜನರು ಎಲ್ಲೆಂದರಲ್ಲಿ, ಮರಗಳಿಗೆ, ದೀಪದ ಕಂಬಗಳಿಗೆ ತಮ್ಮ ಸೈಕಲ್ ಆನಿಸಿ ನಿಲ್ಲಿಸಿ ಬೀಗ ಹಾಕಿ ಹೊರಡುತ್ತಾರೆ.

ಸೈಕ್ಲಿಂಗ್ ವಿಚಾರ ಬಂದಾಗ ಡಚ್ಚರು ಒಂಥರಾ ವಿಶೇಷ ಜನ, ದಿನವೂ ಕೆಲಸಕ್ಕೆ, ಮನೆಗೆ, ಶಾಪಿಂಗ್ ಗೆ ಸೈಕಲ್ ತುಳಿದು ಅವರಿಗೆ ಬೇಜಾರಾಗುವುದೇ ಇಲ್ಲ. ವಾರಾಂತ್ಯ ಬಂತೆಂದರೆ ಕೆಲವರಿಗೆ ಸೈಕ್ಲಿಂಗ್ ಹುಚ್ಚು. ದಿನದಲ್ಲಿ 300 ಗಟ್ಟಲೆ ಕಿಲೋಮೀಟರುಗಳಷ್ಟು ಸೈಕಲ್ ತುಳಿಯುವವರೂ ಇದ್ದಾರೆ! ಹೌದು, ನಾನು ಹಾಕಿದ ಸೊನ್ನೆಗಳ ಸಂಖ್ಯೆ ಸರಿಯಾಗಿಯೇ ಇದೆ. ಮೂವತ್ತಲ್ಲ, ಮುನ್ನೂರು!

(ರೈಲ್ವೆ ಇಲಾಖೆಯ ಬಾಡಿಗೆ ಸೈಕಲ್- OV-fiets)

ನೀವಾಗಲೇ ಮೂಗಿನ ಮೇಲೆ ಬೆರಳಿಟ್ಟಿದರೆ ತೆಗೆಯಬಹುದು. ರೇಸ್ ಸೈಕಲ್ ಏರಿ ಬೆಳಿಗ್ಗೆಯೆದ್ದು ಹೊರಟರೆಂದರೆ ಮನೆಗೆ ಹಿಂದಿರುಗುವುದು ಸಂಜೆಯಾದ ಮೇಲೆ. ಎಷ್ಟು ದೂರ ಹೋದರೂ ಮುಗಿಯದ ಸೈಕಲ್ ಲೇನ್ ಇದಕ್ಕೆ ಪೂರಕ. ನಗರದ ಒಳಗಡೆ ಮಾತ್ರವಲ್ಲದೇ ಹಳ್ಳಿಗಳಲ್ಲೂ, ಹೊಲಗಳ ಪಕ್ಕದಲ್ಲೂ ಸೈಕಲ್ ಲೇನ್ ಗಳು. ಇವು ಕೆಂಪು ಬಣ್ಣದಲ್ಲಿರುತ್ತವೆ, ಅವುಗಳ ಮೇಲೆ ಅಲ್ಲಲ್ಲಿ ಸೈಕಲ್ ಗಳನ್ನೂ ಚಿನ್ಹೆಯನ್ನು ಮುದ್ರಿಸಿರುತ್ತಾರೆ. ಹಾಗಾಗಿ ಹೊಸಬರಿಗೂ ಕೂಡ ಗೊಂದಲಕ್ಕೆ ಅವಕಾಶವಿಲ್ಲ.

ಹೆದ್ದಾರಿಗಳಿಗಿದ್ದಂತೆ ಎಲ್ಲ ಸೈಕಲ್ ಲೇನ್ ಗಳಿಗೂ ವ್ಯವಸ್ಥಿತವಾದ ಸಂಖ್ಯೆಯಿರುತ್ತದೆ, ಅಲ್ಲಲ್ಲಿ ಅದರ ಬೋರ್ಡ್ ಇರುತ್ತದೆ. ಗೂಗಲ್ ಮ್ಯಾಪ್ ಉಪಯೋಗಿಸದೇ ಬರಿದೆ ಸೈಕಲ್ ಲೇನ್ ಸಂಖ್ಯೆಯನ್ನು ನೋಡಿಕೊಂಡು ಬೇಕಾದಲ್ಲಿಗೆ ಹೋಗಿ ತಲುಪಬಹುದು. ನಗರದ ಹೊರಗೆ ದೂರ ಹೋಗುವುದಾದರೆ ಸೈಕಲ್ ಲೇನ್ ಗಳಲ್ಲಿ ಎರಡು ವಿಧ- ಹತ್ತಿರದ ರಸ್ತೆ ಮತ್ತು  ಸೀನಿಕ್ ರಸ್ತೆ. ಸೀನಿಕ್ ರಸ್ತೆ ದೂರ, ಆದರೆ ನದಿ, ಕೆರೆ, ಗಾಳಿಯಂತ್ರಗಳು, ಇನ್ನೂ ಏನೇನೋ ದೃಶ್ಯಗಳನ್ನು ಸವಿಯಲು ಅವಕಾಶ ಕೊಟ್ಟು ನಮ್ಮನ್ನು ಹೋಗಬೇಕಾದಲ್ಲಿಗೆ ತಲುಪಿಸುತ್ತದೆ. ಕೆಲವೊಂದು ಜಾಗಗಳಲ್ಲಂತೂ ಜೋರಾಗಿ ಹೋಗುವ ರೇಸ್ ಸೈಕಲ್ ನವರಿಗೆಂದೇ ಮೀಸಲಾದ ವಿಶೇಷ ಲೇನ್ ಗಳಿರುತ್ತವೆ.

(ನಗರದಿಂದ ಹೊರಗಿನ ಜಾಗದಲ್ಲಿ ಸೈಕಲ್ ಲೇನ್)

ನಗರಗಳ ಜನನಿಬಿಡ ಪ್ರದೇಶಗಳಲ್ಲೂ ಸಹ ಸೈಕಲ್ ಸವಾರರು ನಿಶ್ಚಿಂತೆಯಿಂದ ಸೈಕಲ್ ಲೇನ್ ಗಳಲ್ಲಿ ತಮ್ಮ ಪಾಡಿಗೆ ತಾವು ಸಂಚಾರ ಮಾಡಬಹುದು. ಅಲ್ಲಿ ಕಾರುಗಳು ಬರುತ್ತವೆಂಬ ಭಯವಿಲ್ಲ. ಸೈಕಲ್ ಗಳಿಗೆಂದು ನಿಗದಿಯಾದ ಲೇನ್ ನಲ್ಲಿ ಬೇರೆ ಯಾರೂ ಬರುವುದೇ ಇಲ್ಲ. ಆದರೆ ಸೈಕಲ್ ಸವಾರರಿಗೂ ಕೆಲವು ರಸ್ತೆ ನಿಯಮಗಳಿವೆ. ಪಾದಚಾರಿಗಳಿದ್ದರೆ ಅವರಿಗೆ ಮೊದಲು ರಸ್ತೆ ದಾಟುವ ಆದ್ಯತೆ, ನಂತರದ ಆದ್ಯತೆ ಸೈಕಲ್ ಸವಾರರಿಗೆ, ಕೊನೆಯಲ್ಲಿ ಕಾರು ಮತ್ತಿತರ ವಾಹನಗಳಿಗೆ.  ರಸ್ತೆಯಿಂದ ಆಚೀಚೆ ತಿರುಗುವಾಗ ಯಾವಕಡೆ ತಿರುಗಲಿದ್ದೇವೆ ಎನ್ನುವುದನ್ನು ಕೈ ಮಾಡಿ ತೋರಿಸಿದ ನಂತರವೇ ತಿರುಗಬೇಕು. ಎಲ್ಲಕ್ಕಿಂತ ಮುಖ್ಯ ಮತ್ತು ವಿಶೇಷವಾದುದು ‘ಶಾರ್ಕ್ ಟೀತ್’. ಇದು ರಸ್ತೆಗಳು ಸಂಧಿಸಿದ್ದಲ್ಲಿ ಯಾರಿಗೆ ಮೊದಲ ಆದ್ಯತೆ ಎಂಬುದನ್ನು ಸೂಚಿಸುತ್ತದೆ. ಯಾರ ಕಡೆ ಶಾರ್ಕ್ ಟೀತ್ ಮುಖಮಾಡಿರುತ್ತವೆಯೋ ಅವರು ನಿಲ್ಲಬೇಕಾಗುತ್ತದೆ, ಶಾರ್ಕ್ ನ ಬಾಯಿಯಲ್ಲಿ ಸಿಕ್ಕಿಹಾಕಿಕೊಂಡಂತೆ! ನನಗೆ ಮೊದಲೊಂದೆರಡು ಸಲ ಇದು ಅರ್ಥವಾಗಲಿಲ್ಲ. ಡಚ್ ಸ್ನೇಹಿತರೊಬ್ಬರನ್ನು ಕೇಳಿ ತಿಳಿದುಕೊಳ್ಳಬೇಕಾಯಿತು.

ವರ್ತುಲಾಕಾರಗಳಿದ್ದಲ್ಲಿ ಇತರ ವಾಹನಗಳಿಗೂ ಶಾರ್ಕ್ ಟೀತ್ ಇರುತ್ತವೆ. ಸೈಕಲ್ ಸವಾರರು ದಾಟುವತನಕ ಅವರೆಲ್ಲರೂ ಕಾಯುತ್ತಾರೆ. ಕಾರು ಚಾಲಕರಿಗಿರುವ ಇನ್ನೊಂದು ನಿರ್ಬಂಧವೆಂದರೆ ತಮ್ಮ ಕಾರಿನ ಬಾಗಿಲನ್ನು ತೆಗೆಯುವಾಗ ಬಾಗಿಲಿಗೆ ಹತ್ತಿರದ ಕೈಯ್ಯನ್ನಲ್ಲದೇ ಇನ್ನೊಂದು ಕೈಯನ್ನು ಬಳಸುವುದು. ಇದನ್ನು ‘ಡಚ್ ರೀಚ್’ ಎಂದು ಕರೆಯುತ್ತಾರೆ. ರಸ್ತೆಯ ಪಕ್ಕ ಕಾರು ನಿಲ್ಲಿಸಿ ಇಳಿಯುವಾಗ ಮುಂದಾಲೋಚನೆಯಿಲ್ಲದೇ ಬಾಗಿಲು ತೆರೆದರೆ ಪಕ್ಕದಲ್ಲಿ ಬರುತ್ತಿರುವ ಸೈಕಲ್ ಸವಾರನಿಗೆ ತಾಕಿಬಿಡಬಹುದು. ಅದನ್ನು ತಪ್ಪಿಸಲು ಬಾಗಿಲಿಗೆ ಪಕ್ಕದ ಕೈ ಬದಲಾಗಿ ಇನ್ನೊಂದು ಕೈಯ್ಯನ್ನು ಉಪಯೋಗಿಸಿದರೆ ಬಾಗಿಲು ತೆಗೆಯುವ ಮೊದಲು ನಮ್ಮ ಶರೀರ ಅರ್ಧ ತಿರುಗುವುದರಿಂದ ಕಾರಿನ ಹಿಂದುಗಡೆ ದೃಷ್ಟಿ ಹಾಯುತ್ತದೆ, ಪಕ್ಕದಲ್ಲಿ ಯಾರಾದರೂ ಬರುತ್ತಿದ್ದರೆ ಕಾಣಿಸುತ್ತದೆ, ಅವಘಡಗಳು ತಪ್ಪುತ್ತವೆ.

(ವರ್ತುಲಾಕಾರದಲ್ಲಿ ಶಾರ್ಕ್ ಟೀತ್)

ಸೈಕಲ್ ಗಳು ಜನರ ಜೀವನದಲ್ಲಿ ಇಷ್ಟೆಲ್ಲಾ ಹಾಸುಹೊಕ್ಕಾದಮೇಲೆ ಬೇರೆ ಬೇರೆ ಉದ್ದೇಶಗಳಿಗಾಗಿ, ಅನುಕೂಲಕ್ಕೆ ತಕ್ಕಂತೆ ವಿಧ ವಿಧವಾದ ಸೈಕಲ್ ಗಳು ಇರಲೇಬೇಕು. ಹೌದು, ಪ್ರತಿಯೊಬ್ಬರ ಅನುಕೂಲಕ್ಕೆ ತಕ್ಕಂತೆ ತರಹೇವಾರಿ ಸೈಕಲ್ ಗಳು- ಮಡಚುವಂತಹ ಸೈಕಲ್, ಒಂದೇ ಗಾಲಿಯುಳ್ಳದ್ದು, ಎರಡು ಮೂರು ಜನರು ಒಟ್ಟಿಗೆ ಪೆಡಲ್ ಮಾಡಲು ಸಾಧ್ಯವಿರುವ ಟೆಂಡೆಮ್ ಸೈಕಲ್,  ಮಲಗಿಕೊಂಡು ಪೆಡಲ್ ಮಾಡಲು ಅವಕಾಶವಿರುವ ಸೈಕಲ್, ಎಲೆಕ್ಟ್ರಿಕ್ ಸೈಕಲ್, ಕೈಯ್ಯಲ್ಲಿ ಬ್ರೇಕಿಲ್ಲದೇ ಪೆಡಲ್ ಬ್ರೇಕ್ ಇರುವ ಡಚ್ ಸೈಕಲ್, ಪೆಡಲ್ ಮಾಡದೇ ಸೈಕಲ್ ಮೇಲೆ ನಡೆದುಕೊಂಡು ಹೋಗುವಂಥ ಟ್ರೆಡ್ ಮಿಲ್ಲ್ ಸೈಕಲ್, ರೇಸ್ ಸೈಕಲ್, ಕೈಯ್ಯಲ್ಲಿ ಬ್ರೇಕ್ ಇಲ್ಲದ ಪೆಡಲ್ ಬ್ರೇಕ್ ನ ‘ಓಮಾ ಫೀತ್ಸ್’ ಅಂದರೆ ಅಜ್ಜಿಯರ ಸೈಕಲ್. ಹೀಗೇ ಕಲ್ಪನೆಗೂ ಮೀರಿದ ವಿಧಗಳು. ಎಲ್ಲ ಸೈಕಲ್ ಗಳೂ ಕೂಡ ಅನನ್ಯ. ಓಮಾ ಫೀತ್ಸ್ ಗಳನ್ನು ಡಚ್ ಬೈಕ್ ಎಂದೂ ಕರೆಯುತ್ತಾರೆ. ಅದು ಪೆಡಲ್ ಬ್ರೇಕ್. ಕೈಗಳಲ್ಲಿ ಬ್ರೇಕ್ ಇಲ್ಲ. ಬ್ರೇಕ್ ಹಾಕಬೇಕಿದ್ದಲ್ಲಿ ಪೆಡಲ್ ಅನ್ನು ಉಲ್ಟಾ ತಿರುಗಿಸಬೇಕು.

ಹೊಸದರಲ್ಲಿ ಇದು ಕಷ್ಟವೆನಿಸುತ್ತದೆ. ಆದರೆ ಇದರಲ್ಲಿ ಬ್ರೇಕ್ ಹಾಳಾಯಿತು ಎಂಬ ಕಿರಿಕಿರಿ ಇಲ್ಲವೇ ಇಲ್ಲ. ಹೆಚ್ಚು ಜನ ಡಚ್ಚರು ಇದನ್ನೇ ಉಪಯೋಗಿಸುತ್ತಾರೆ. ನಾನು ಈ ಸೈಕಲ್ ಉಪಯೋಗಿಸುವ ಸಾಹಸಕ್ಕೆ ಮುಂದಾಗಿಲ್ಲ. ನಾಲ್ಕು ವರ್ಷದ ಮಗನನ್ನು ಹಿಂದೆ ಕೂರಿಸಿಕೊಂಡು ಹೋಗುವಾಗ ತಟ್ಟನೇ ಬ್ರೇಕ್ ಹಾಕಬೇಕಾದಲ್ಲಿ ಕೈಯ್ಯಲ್ಲಿ ಬ್ರೇಕ್ ಒತ್ತಲು ಪ್ರಯತ್ನಿಸಿ, ನಂತರ ಒಹೋ ಇದು ಪೆಡಲ್ ಬ್ರೇಕ್ ಎಂಬುದು ಅರಿವಾಗಿ, ಕಾಲು ಉಲ್ಟಾ ಪೆಡಲ್ ಮಾಡುವಷ್ಟರಲ್ಲಿ ನನ್ನ ಸೈಕಲ್ ಮುಂದೆ ಹೋಗಿ ಯಾರಿಗಾದರೂ ಗುದ್ದಿರುತ್ತದೆ. ಇಷ್ಟೆಲ್ಲಾ ವಿಧದ ಸೈಕಲ್ ಗಳ ಚಿತ್ರಗಳನ್ನು ಒಂದೇ ಲೇಖನದಲ್ಲಿ ಹಾಕಿ ಪೂರೈಸಲು ಸಾಧ್ಯವಿಲ್ಲವೆನಿಸಿತು. ಆದ್ದರಿಂದ ಕೊಲಾಜ್ ಮಾಡಿದ್ದೇನೆ.

(ದಿನ ನಿತ್ಯ ಕಾಣಸಿಗುವ ಬಗೆಬಗೆಯ ಸೈಕಲ್ ಗಳು)

ಮಕ್ಕಳನ್ನು, ಸಾಮಾನು ಸರಂಜಾಮುಗಳನ್ನು ಸಾಗಿಸಲು ಉಪಯೋಗಿಸುವ ಸೈಕಲ್ ಗಳನ್ನು ‘ಬಾಕ್ ಫೀತ್ಸ್’ ಎನ್ನುತ್ತಾರೆ. ಅಂದರೆ ‘ಡಬ್ಬವಿರುವ ಸೈಕಲ್’ ಎನ್ನಬಹುದು. ಸೈಕಲ್ ನ ಮುಂದೊಂದು ದೊಡ್ಡ ಡಬ್ಬವಿರುತ್ತದೆ. ಅದರಲ್ಲಿ, ಮಕ್ಕಳನ್ನೂ, ನಾಯಿಯನ್ನೂ, ವಸ್ತುಗಳನ್ನೂ ಸಾಗಿಸುತ್ತಾರೆ. ಹಲವಾರು ಡಚ್ಚರಿಗೆ ಮೂರು, ನಾಲ್ಕು ಮಕ್ಕಳಿರುತ್ತಾರೆ. ಎಲ್ಲರನ್ನೂ ಆ ಡಬ್ಬದಲ್ಲಿ ಕೂರಿಸಿಕೊಂಡು ಹೋಗುವುದು ಸುಲಭವಾಗುತ್ತದೆ. ಮಳೆ, ಹಿಮ ಬೀಳುತ್ತಿದ್ದರೆ ಆ ಡಬ್ಬವನ್ನು ಪ್ಲಾಸ್ಟಿಕ್ ನಿಂದ ಮುಚ್ಚಿರುತ್ತಾರೆ, ಆದ್ದರಿಂದ ಹಿಮ ಬೀಳುವ ಸಮಯದಲ್ಲೂ ಮಕ್ಕಳು ಬೆಚ್ಚಗೆ ಕುಳಿತಿರುತ್ತಾರೆ. ಬೆಳಿಗ್ಗೆ ಶಾಲೆ ತೆರೆಯುವ ಸಮಯದಲ್ಲಿ ರಸ್ತೆಯ ಮೇಲೆ ಎಲ್ಲಿನೋಡಿದರೂ ಇಂತಹ ಡಬ್ಬದ ಸೈಕಲ್ ಗಳೇ ಜಾಸ್ತಿ ಕಾಣಿಸುತ್ತವೆ. ಇನ್ನು ಕೆಲವರು ತಮ್ಮ ಸೈಕಲ್ ಗೇ ಹೆಚ್ಚುವರಿ ಸೀಟ್ ಹಚ್ಚಿ ಮಕ್ಕಳನ್ನು ಅದರ ಮೇಲೆ ಕೂರಿಸಿಕೊಂಡು ಹೋಗುತ್ತಿರುತ್ತಾರೆ. ಇಂಥ ಸೈಕಲ್ ಗಳ ವೈವಿಧ್ಯತೆಗೂ ಕೊನೆಯಿಲ್ಲ.

ಮಕ್ಕಳು ಹುಟ್ಟಿದ ಸುಮಾರು ಹದಿನೈದು ದಿನಗಳ ನಂತರ ಅವರನ್ನು ಹೊರಗೆ ಕರೆದುಕೊಂಡು ಹೋಗಲು ಆರಂಭಿಸುತ್ತಾರೆ. ಆಗೆಲ್ಲಾ ಡಬ್ಬದ ಸೈಕಲ್ ಗಳಲ್ಲಿ ಅವರನ್ನು ಮಲಗಿಸಿಟ್ಟುಕೊಂಡು ಹೋದರೆ, ಕೆಲ ತಿಂಗಳುಗಳ ನಂತರ ಆ ಮಕ್ಕಳು ಕುಳಿತುಕೊಳ್ಳುವಂತಾದ ಕೂಡಲೇ ಮಕ್ಕಳ ಸೀಟ್ ಮೇಲೆ ಕೂಡ ಕುಳ್ಳಿರಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಇನ್ನು ಕೆಲವು ವರ್ಷಗಳ ನಂತರ ಮಕ್ಕಳೇ ಸೈಕಲ್ ಸವಾರಿ ಕಲಿತುಬಿಡುತ್ತಾರೆ. ಒಂದೂವರೆ ಎರಡು ವರ್ಷದವರಿದ್ದಾಗಿನಿಂದ ಮಕ್ಕಳು ಸೈಕಲ್ ಸವಾರಿಯನ್ನು ಕಲಿಯತೊಡಗುತ್ತಾರೆ. ಮೊದಲು ಅವರು ಆರಂಭಿಸುವುದು ಪೆಡಲ್ ರಹಿತ ಸೈಕಲ್ ಗಳಿಂದ. ಅದನ್ನು  ‘ಲೋಪ್ ಫೀತ್ಸ್’ ಎಂದು ಕರೆಯುತ್ತಾರೆ; ಅಂದರೆ ‘ನಡೆಯುವ ಸೈಕಲ್’. ಸೈಕಲ್ ಮೇಲೆ ಕುಳಿತು, ಅದನ್ನು ಕಾಲಿನಲ್ಲಿ ತಳ್ಳಿಕೊಂಡು ಮುಂದೆಹೋಗಿ, ಹಾಗೆಯೇ ನಿಧಾನವಾಗಿ ಕಾಲು ಬಿಟ್ಟು, ಸಮತೋಲನವನ್ನು ಕಲಿತು ಅತ್ಯಂತ ಸುಲಭವಾಗಿ ಸೈಕಲ್ ಕಲಿತುಬಿಡುತ್ತಾರೆ.

(ವಿವಿಧ ಸೈಕಲ್ ಗಳಲ್ಲಿ ಮಕ್ಕಳು)

ಕೆಲದಿನಗಳ ಹಿಂದೆ ಕಾರೊಂದರ ಮೇಲೆ ನಾಲ್ಕಾರು ಸೈಕಲ್ ಗಳನ್ನು ಹೇರಿಕೊಂಡು ಹೋಗುತ್ತಿದ್ದುದನ್ನು ನೋಡಿದೆ. ಕಾರಿನ ಮೇಲೆ ‘Swapfiets’  (ವಿನಿಮಯದ ಸೈಕಲ್) ಎಂದು ಬರೆದಿತ್ತು. ಏನೆಂದು ಗೊತ್ತಾಗಲಿಲ್ಲ, ಹುಡುಕಿ ನೋಡಿದೆ, ಆಶ್ಚರ್ಯವಾಯಿತು. ಎಂಥ ಅದ್ಭುತವಾದ ವ್ಯಾಪಾರದ ಮಾದರಿ! ಕೇವಲ ನಾಲ್ಕಾರು ವಿದ್ಯಾರ್ಥಿಗಳು ಸೇರಿ ಪ್ರಾರಂಭಿಸಿದ ಉದ್ಯಮ. ತಿಂಗಳಿಗಿಂತಿಷ್ಟು ಎಂದು ಕಂಪನಿಗೆ ಹಣಕೊಟ್ಟು ಒಂದು swapfiets ಪಡೆದರಾಯಿತು. ಎಲ್ಲಿ ಕೆಟ್ಟುನಿಂತರೂ ಕಂಪನಿಯವರು ತಕ್ಷಣದಲ್ಲಿ ಬಂದು ರಿಪೇರಿ ಮಾಡುತ್ತಾರೆ, ಅಥವಾ ಬೇರೆ ಸೈಕಲ್ ಕೊಡುತ್ತಾರೆ. ನೆದರ್ ಲ್ಯಾಂಡ್ಸ್ ನ ಒಂದು ನಗರದಲ್ಲಿ ಪ್ರಾಯೋಗಿಕವಾಗಿ ಕೆಲವೇ ಸೈಕಲ್ ಗಳೊಂದಿಗೆ ಪ್ರಾರಂಭವಾದ ಉದ್ಯಮ ಇಂದು ಬೆಲ್ಜಿಯಂ, ಜರ್ಮನಿ, ಮತ್ತು ಡೆನ್ ಮಾರ್ಕ್ ಗೂ ಕೂಡ ವಿಸ್ತರಿಸಿದೆ.

ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೇರಿಕಾ ಮತ್ತಿತರ ದೇಶಗಳಂತೆ ನೆದರ್ ಲ್ಯಾಂಡ್ಸ್ ನಲ್ಲಿ ಸೈಕಲ್ ಸವಾರಿಮಾಡುವಾಗ ಯಾರೂ ಹೆಲ್ಮೆಟ್ ಧರಿಸುವುದಿಲ್ಲ, ಮಕ್ಕಳೂ ಕೂಡ. ಯಾರಾದರೂ ಧರಿಸಿದ್ದನ್ನು ಕಂಡರೆ ಅವರು ಡಚ್ಚರಲ್ಲವೆಂದು ತೀರ್ಮಾನಿಸಿಬಿಡಬಹುದು. ಡಚ್ಚರಿಗೆ ಹೆಲ್ಮೆಟ್ ಎಂದರೆ ಕಿರಿಕಿರಿ. ಒಮ್ಮೆ ಸರಕಾರ ಹೆಲ್ಮೆಟ್ ಕಡ್ಡಾಯ ಮಾಡಲು ಪ್ರಯತ್ನಿಸಿ ಯೋಜನೆಯನ್ನು ಕೈಬಿಡಬೇಕಾಯಿತಂತೆ. ಹೆಲ್ಮೆಟ್ ಕಡ್ಡಾಯವೆಂದಾಕ್ಷಣವೇ ಸೈಕಲ್ ಉಪಯೋಗಿಸುವವರ ಸಂಖ್ಯೆಯೇ  ಇಳಿಮುಖವಾಯಿತಂತೆ!

(ಡಚ್ಚರ ಸೈಕಲ್ ಸವಾರಿಯ ವರಸೆ)

ಡಚ್ಚರಿಗೆ ತಮ್ಮ ಸೈಕಲ್ ಸವಾರಿಯ ಬಗ್ಗೆ ಅಪಾರ ಅಭಿಮಾನ. ಅವರು ನಿದ್ರಿಸುತ್ತಲೂ ಸೈಕಲ್ ತುಳಿಯಬಲ್ಲರೇನೋ ಎನಿಸುತ್ತದೆ. ನಾನು ಎಲ್ಲಿ ಬೇಕಾದಲ್ಲಿ, ಎಂಥ ಜನನಿಬಿಡ ಪ್ರದೇಶದಲ್ಲೂ ಆರಾಮಾಗಿ ಸೈಕಲ್ ಸವಾರಿ ಮಾಡಬಲ್ಲೆ, ಆದರೆ ಒಬ್ಬ ಡಚ್ ವ್ಯಕ್ತಿ ಯಾವ ಆತ್ಮವಿಶ್ವಾಸದೊಂದಿಗೆ ಸೈಕಲ್ ಸವಾರಿ ಮಾಡುತ್ತಾನೋ ಅಷ್ಟು ವಿಶ್ವಾಸದಿಂದ ನಾನೆಂದಿಗೂ ಮಾಡಲು ಸಾಧ್ಯವಿಲ್ಲ. ಇಲ್ಲಿರುವ ವಿದೇಶಿ ಜನ ಡಚ್ಚರ ಸೈಕಲ್ ಸವಾರಿಯ ವರಸೆಯನ್ನು ನೋಡಿದಾಗ ‘ಇವರೆಲ್ಲರೂ ಬಹುಶ ತಾಯಿಯ ಗರ್ಭದಿಂದ ಹೊರಬರುವಾಗ ಒಂದು ಸೈಕಲ್ ಕೂಡ ಜೊತೆಯಲ್ಲಿಟ್ಟುಕೊಂಡೇ ಬಂದಿರಬಹುದು’ ಎಂದು ಗೇಲಿಮಾಡುತ್ತಾರೆ. ಯುವಜನರಂತೂ ಸೈಕಲ್ ನ ಹ್ಯಾಂಡಲ್ ಹಿಡಿಯುವುದೇ ಕಡಿಮೆ. ಸ್ಯಾಂಡ್ವಿಚ್ ತಿನ್ನುತ್ತಲೋ, ಎರಡೂ ಕೈಯ್ಯಲ್ಲಿ ಫೋನ್ ಹಿಡಿದು ಮೆಸೇಜ್ ಮಾಡುತ್ತಲೋ ಹೋಗುತ್ತಿರುತ್ತಾರೆ. ಕೆಲವೊಮ್ಮೆ ತಿರುವಿನಲ್ಲೂ ಕೂಡ ತಮ್ಮ ಮೈಯ್ಯನ್ನೇ ಬಗ್ಗಿಸಿ ಸೈಕಲ್ ತಿರುಗಿಸಿಕೊಂಡು ಹೋಗುತ್ತಾರೆ, ಹ್ಯಾಂಡಲ್ ಮುಟ್ಟದೆಯೇ! ಅವರೆಲ್ಲರೂ ಬಹುತೇಕ ಓಮಾ ಫೀತ್ಸ್ ಉಪಯೋಗಿಸುವುದರಿಂದ ಬ್ರೇಕ್ ಹಾಕಲೂ ಕೂಡ ಕೈಗಳ ಅಗತ್ಯವಿಲ್ಲ, ಕಾಲುಗಳೇ ಸಾಕು! ಕೆಲವೊಮ್ಮೆ ಒಂದು ಸೈಕಲ್ ಅನ್ನು ಸವಾರಿಮಾಡಿಕೊಂಡು ಇನ್ನೊಂದನ್ನು ಕೈಯ್ಯಲ್ಲಿ ಹಿಡಿಕೊಂಡು ಹೋಗುತ್ತಿರುತ್ತಾರೆ. ಏನೆಲ್ಲಾ ವಸ್ತುಗಳನ್ನು ಎಳೆದುಕೊಂಡು, ಹೇಗೆಲ್ಲಾ ಕುಳಿತುಕೊಂಡು, ನಿಂತುಕೊಂಡು ಸೈಕಲ್ ಮೇಲೆ ಹೋಗುತ್ತಿರುತ್ತಾರೆ- ಅವೆಲ್ಲವೂ ಒಂದೇ ಚಿತ್ರದಲ್ಲಿ.

ಯಾರಾದರೂ ಧರಿಸಿದ್ದನ್ನು ಕಂಡರೆ ಅವರು ಡಚ್ಚರಲ್ಲವೆಂದು ತೀರ್ಮಾನಿಸಿಬಿಡಬಹುದು. ಡಚ್ಚರಿಗೆ ಹೆಲ್ಮೆಟ್ ಎಂದರೆ ಕಿರಿಕಿರಿ. ಒಮ್ಮೆ ಸರಕಾರ ಹೆಲ್ಮೆಟ್ ಕಡ್ಡಾಯ ಮಾಡಲು ಪ್ರಯತ್ನಿಸಿ ಯೋಜನೆಯನ್ನು ಕೈಬಿಡಬೇಕಾಯಿತಂತೆ. ಹೆಲ್ಮೆಟ್ ಕಡ್ಡಾಯವೆಂದಾಕ್ಷಣವೇ ಸೈಕಲ್ ಉಪಯೋಗಿಸುವವರ ಸಂಖ್ಯೆಯೇ  ಇಳಿಮುಖವಾಯಿತಂತೆ!

(ನೆದರ್ ಲ್ಯಾಂಡ್ಸ್ ನ ರಾಜ ಮತ್ತು ರಾಣಿ ಬಾಕ್ ಫೀತ್ಸ್ ನೊಂದಿಗೆ)

ಡಚ್ಚರು ಚಿಕ್ಕವರಿದ್ದಾಗಿನಿಂದಲೇ ಸೈಕಲ್ ಸವಾರಿಯನ್ನು ಕರಗತವಾಗಿಸಿಕೊಂಡಿದ್ದಲ್ಲದೆ ಅದರ ರಿಪೇರಿಯನ್ನೂ ಕಲಿತುಬಿಟ್ಟಿರುತ್ತಾರೆ. ರಿಪೇರಿಯ ಅಂಗಡಿಗಳಿಗೇನಾದರೂ ಹೋಗಬೇಕಿದ್ದರೆ ದುಡ್ಡು ಚೆಲ್ಲಲು ತಯಾರಿದ್ದಿರಬೇಕು, ಅಷ್ಟೊಂದು ದುಬಾರಿ. ನಾವಿಲ್ಲಿಗೆ ಬಂದ ಹೊಸದರಲ್ಲಿ ನನ್ನ ಸೈಕಲ್ ಗೆ ಏನೋ ಸಮಸ್ಯೆಯಾಯಿತೆಂದು ನನ್ನ ಒಬ್ಬ ಡಚ್ ಸ್ನೇಹಿತ ಬಂದು ಅದನ್ನು ಸರಿ ಮಾಡಿಕೊಟ್ಟಿದ್ದ. ಅದನ್ನು ಕೇಳಿ ಅವನ ಹೆಂಡತಿ ಸಿಟ್ಟಾಗಿದ್ದಳನಂತೆ- ‘ನನ್ನ ಸೈಕಲ್ ಹಾಳಾದಾಗ ನೀನು ಅಲ್ಲಿಯೇ ಇದ್ದು ನೋಡುತ್ತಿದ್ದು ನನ್ನ ಬಳಿ ಮಾಡಿಸಿದ್ದೆ, ಆದರೆ ಈಗ ಸ್ನೇಹಿತರಿಗಾದರೆ ಸಹಾಯ ಮಾಡುತ್ತೀಯೆ’ ಎಂದಿದ್ದಳಂತೆ!

ನೆದರ್ ಲ್ಯಾಂಡ್ಸ್ ನಲ್ಲಿ ಅಪರಾಧದ ಸಂದರ್ಭಗಳು ಕಾಣಿಸುವುದಿಲ್ಲ, ಕೇಳಿಬರುವುದೂ ಇಲ್ಲ, ಆದರೆ ನಡೆಯುವ ಒಂದೇ ಒಂದು ಕಳ್ಳತನವೆಂದರೆ ಸೈಕಲ್ ಕಳ್ಳತನ. ಒಳ್ಳೆಯ ಸೈಕಲ್ ಎಲ್ಲಾದರೂ ಕಾವಲು ಇಲ್ಲದ ಜಾಗದಲ್ಲಿ ನಿಲ್ಲಿಸಿದರೆ ಕಳ್ಳತನವಾಗುವ ಸಾಧ್ಯತೆ ತುಂಬಾ ಜಾಸ್ತಿ. ಅದಕ್ಕೇ ಇಲ್ಲಿನ ಬಹುಪಾಲು ಜನರು ಸೆಕೆಂಡ್ ಹ್ಯಾಂಡ್ (second-hand) ಸೈಕಲ್ ಉಪಯೋಗಿಸುತ್ತಾರೆ, ನಾವೂ ಕೂಡ. ನಮಗೊಮ್ಮೆ ಸೆಕೆಂಡ್ ಹ್ಯಾಂಡ್ ಸೈಕಲ್ ಬೇಜಾರಾಗಿ ಹೊಸ ಸೈಕಲ್ ಕೊಳ್ಳುವ ಹುಮ್ಮಸ್ಸು ಬಂತು. ಇಲ್ಲಿದ್ದಾಗೊಮ್ಮೆ ಹೊಸ ಸೈಕಲ್ ಚಲಾಯಿಸುವ ಮಜಾ ಅನುಭವಿಸೋಣವೆಂದು ಧೈರ್ಯಮಾಡಿ ಹೊಸದನ್ನು ಕೊಂಡೆವು. ಕೊಂಡ ಹದಿನೈದೇ ದಿನಗಳಲ್ಲಿ ನಮ್ಮ ಎರಡೂ ಸೈಕಲ್ ಗಳು ಒಂದರ ನಂತರ ಒಂದರಂತೆ ಕಳುವಾಗಿದ್ದವು. ಹೊಸ ಸೈಕಲ್ ಕೊಳ್ಳುವದಿದ್ದರೆ ಜನರು ಅದಕ್ಕೆ ವಿಮೆ ಕೂಡ ಕೊಳ್ಳುತ್ತಾರೆ ಎಂಬುದು ಆನಂತರ ಗೊತ್ತಾಯಿತು. ಅಷ್ಟರ ನಂತರ ಹೊಸ ಸೈಕಲ್ ಗಳ ಗೋಜಿಗೇ ಹೋಗಲಿಲ್ಲ.

(ಮುನಿಸಿಪಾಲಿಟಿಯವರು ಕೆನಾಲ್ ನಿಂದ ಸೈಕಲ್ ಮೇಲೆತ್ತುತ್ತಿರುವುದು)

ಹಲವಾರು ಯಾತ್ರಿಕರೂ ಕೂಡ ಇಲ್ಲಿಗೆ ಬಂಡ ಕೂಡಲೇ ಒಂದು ಅಗ್ಗದ ಸೆಕೆಂಡ್ ಹ್ಯಾಂಡ್ ಸೈಕಲ್ ಕೊಳ್ಳುತ್ತಾರೆ. ಅದನ್ನು ತಾವಿಲ್ಲಿ ಇರುವಷ್ಟು ದಿನ ಉಪಯೋಗಿಸಿ ನಂತರ ಎಲ್ಲೋ ಒಂದು ಕಡೆ ನಿಲ್ಲಿಸಿ ಹೋಗಿಬಿಡುತ್ತಾರೆ. ಅದು ಎಷ್ಟೋದಿನಗಳವರೆಗೂ ಅಲ್ಲೇ ಇರುವುದನ್ನು ನೋಡಿದ ಮುನಿಸಿಪಾಲಿಟಿಯವರು ಅದಕ್ಕೊಂದು ಚೀಟಿ ಅಂಟಿಸುತ್ತಾರೆ. ಪುನಃ ಹದಿನೈದು ದಿನಗಳಾದರೂ ಅದನ್ನು ಯಾರೂ ಅಲುಗಾಡಿಸದಿದ್ದಾಗ ಅದರ ಬೀಗವನ್ನು ಮುರಿದು ತೆಗೆದುಕೊಂಡು ಹೋಗಿ ಹರಾಜು ಹಾಕುತ್ತಾರೆ. ಅದನ್ನು ಹರಾಜಿನಲ್ಲಿ ಸೆಕೆಂಡ್ ಹ್ಯಾಂಡ್ ಸೈಕಲ್ ಗಳನ್ನು ಮಾರುವ ಅಂಗಡಿಯವರು ಕೊಳ್ಳುತ್ತಾರೆ. ಚಿಕ್ಕಪುಟ್ಟ ರಿಪೇರಿ ಮಾಡುತ್ತಾರೆ, ಇನ್ಯಾರೋ ಯಾತ್ರಿಕರು ಅದನ್ನು ಕೊಳ್ಳುತ್ತಾರೆ. ಹೀಗೆಯೇ ಆ ಸೈಕಲ್ ನ ಜೀವನ ಒಂದು ವೃತ್ತಾಕಾರದಲ್ಲಿ ಸಿಕ್ಕಿಕೊಳ್ಳುತ್ತದೆ. ಈ ರೀತಿಯ ಅನಾಥ ಸೈಕಲ್ ಗಳನ್ನು ಕಂಡು ಹಿಡಿದು ಅದನ್ನು ವಿಲೇವಾರಿ ಮಾಡುವುದೇ ಮುನಿಸಿಪಾಲಿಟಿಯವರಿಗೆ ಒಂದು ದೊಡ್ಡ ಕೆಲಸ! ಇನ್ನೂ ಕೆಲವು ಯಾತ್ರಿಕರು, ವಿದ್ಯಾಭ್ಯಾಸ ಮುಗಿಸಿ ಹೊರಡಲಿರುವ ಕೆಲವು ವಿದ್ಯಾರ್ಥಿಗಳು ನಮ್ಮ ಸೈಕಲ್ ಅನ್ನು ಯಾವುದಾದರೂ ಕೆನಾಲ್ ಗೆ ಎಸೆದು ಇಲ್ಲಿಂದ ಮರಳುತ್ತಾರೆ. ಆಮ್ಸ್ಟರ್ ಡ್ಯಾಮ್ ನಲ್ಲಿ ಪ್ರತಿವರ್ಷ ಮುನಿಸಿಪಾಲಿಟಿಯವರು ಹನ್ನೆರಡರಿಂದ ಹದಿನೈದು ಸಾವಿರ ಸೈಕಲ್ ಗಳನ್ನು ಕೆನಾಲ್ ಗಳಿಂದ ಮೇಲೆತ್ತುತ್ತಾರೆ!

ಕೊನೆಯದಾಗಿ ಹೇಳಲೇಬೇಕಿರುವುದು ಒಂದೆರಡು ದಿನಗಳ ಸಲುವಾಗಿ ಆಮ್ಸ್ಟರ್ ಡ್ಯಾಮ್ ಗೆ ಬಂದು ಬಾಡಿಗೆಗೆ ಪಡೆದು ನಗರದ ಜನನಿಬಿಡ ಸೆಂಟ್ರಲ್ ಪ್ರದೇಶಗಳಲ್ಲಿ ಸೈಕಲ್ ಚಲಾಯಿಸಲು ಹೆಣಗಾಡಿ ಸ್ಥಳೀಯ ಜನರ ಕೈಲಿ ಬೈಸಿಕೊಳ್ಳುವ ಯಾತ್ರಿಕರ ಬಗ್ಗೆ. ಈ ರೀತಿಯ ಎರಡು-ಮೂರು ದಿನದ ಯಾತ್ರಿಕರಿಗೆಂದೇ ಸೈಕಲ್ ಬಾಡಿಗೆಗೆ ಕೊಡುವ ಕಂಪನಿಗಳಿವೆ. Yellow bike, Red bike, Green bike, Orange bike ಗಳೆಂಬ ಹಲವಾರು ಕಂಪನಿಗಳು. ಗುಂಪಾಗಿ ಬರುವ ಯಾತ್ರಿಕರು ಆ ಸೈಕಲ್ ಗಳನ್ನು ಕೊಂಡು ಹೊರಟರೆಂದರೆ ಸ್ಥಳೀಯರು ಜಾಗ್ರತೆ ವಹಿಸುತ್ತಾರೆ.

(Yellow bike ನ ಯಾತ್ರಿಕರು)

ಸೈಕಲ್ ತುಳಿದು ಅಭ್ಯಾಸವಿಲ್ಲದವರೂ ಕೂಡ ಆಮ್ಸ್ಟರ್ ಡ್ಯಾಮ್ ನಲ್ಲಿ ಉಳಿದೆಲ್ಲವುಗಳ ಜೊತೆ ಅದನ್ನೂ ಒಂದು ಅನುಭವ ಮಾಡಿಕೊಂಡೇ ಹೋಗೋಣವೆಂದು ಶುರುವಿಟ್ಟುಕೊಂಡಿರುತ್ತಾರೆ. ಕೆಲವರಿಗಂತೂ ಸಮತೋಲನವೂ ಇರುವುದಿಲ್ಲ, ಅಂಥದರಲ್ಲಿ ಜನನಿಬಿಡ ಪ್ರದೇಶದಲ್ಲಿ ಬಂದಿರುತ್ತಾರೆ. ಏಷಿಯಾದಿಂದ ಬಂದಿದ್ದ ಯಾತ್ರಿಕರಂತೂ ಇನ್ನೊಂದು ಬಗೆ. ಇಲ್ಲಿ ರಸ್ತೆಯ ಬಲಗಡೆ ವಾಹನ, ಸೈಕಲ್ ಚಲಾಯಿಸುತ್ತಿದ್ದರೆ, ಅವರು ತಮ್ಮ ಪಾಡಿಗೆ ತಾವು ಎಡಗಡೆಯಲ್ಲಿ ಸೈಕಲ್ ಹತ್ತಿ ಹೊರಟು ಎದುರುಗಡೆಯಿಂದ ಬರುವವರನ್ನೆಲ್ಲ ಬ್ಲಾಕ್ ಮಾಡುತ್ತಿರುತ್ತಾರೆ. ಸೈಕಲ್ ಬ್ಯಾಲೆನ್ಸ್ ಮಾಡುವುದರಲ್ಲೇ ನಿರತರಾಗಿರುವ ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಪರಿವೆಯೇ ಇರುವುದಿಲ್ಲ!

ತಮ್ಮ ಸೈಕಲ್ ದಾರಿಗೆ ಯಾತ್ರಿಕರು ಯಾರಾದರೂ ಅಡ್ಡಬಂದರೆ ಡಚ್ಚರಿಗೆ ಅಸಾಧ್ಯ ಕೋಪಬರುತ್ತದೆ, ಅವರ ಬಾಯಿಂದ ಮಂತ್ರೋಚ್ಚಾರಣೆಯಾಗುತ್ತದೆ – ‘ಕ್ಯಾನ್ಸರ್’ ಅಥವಾ ‘ಟೈಫಾಯಿಡ್ ‘ ಎಂದು. ನಿಜ, ಇವು ಡಚ್ ಸೈಕಲ್ ಸವಾರರ ಬೈಗುಳಗಳು! ಸಾಮಾನ್ಯವಾಗಿ ಈ ಮಂತ್ರಪುಷ್ಪಗಳನ್ನು ಪಡೆಯುವವರು ಯಾತ್ರಿಕರು, ಸ್ಥಳೀಯರು ಎಂದೂ ಅಡ್ಡಬರುವುದಿಲ್ಲ. ನಾವು ಇಲ್ಲಿಗೆ ಬಂದ ಕೆಲ ವರ್ಷಗಳ ತನಕ ಸೆಂಟ್ರಲ್ ಜಾಗಕ್ಕೆ ಸೈಕಲ್ ಕೊಂಡೊಯ್ಯುತ್ತಲೇ ಇರಲಿಲ್ಲ. ನಂತರದ ವರ್ಷಗಳಲ್ಲಿ ಹೆಚ್ಚು ಅಭ್ಯಾಸವಾದಂತೆಲ್ಲಾ ಕೊಂಡೊಯ್ಯತೊಡಗಿದ್ದೇವೆ. ಈಗೀಗ ನಾವೂ ಕೂಡ ಯಾತ್ರಿಕರನ್ನು ಕಂಡ ಕೂಡಲೇ ‘ಅಯ್ಯೋ Yellow bike ನವರು ಬಂದರು ಸರಿದು ನಿಲ್ಲೋಣ’ ಎಂದು ಮುಂಜಾಗ್ರತೆ ವಹಿಸುತ್ತೇವೆ. ಆದರೂ ಇನ್ನೂ ಯಾರಿಗೂ ಕ್ಯಾನ್ಸರ್ ಅಥವಾ ಟೈಫಾಯಿಡ್ ಎಂದು ಬೈದಿಲ್ಲ, ಬೈಯ್ಯುವ ಇರಾದೆಯೂ ಇಲ್ಲ. ಖುಷಿಯ ವಿಚಾರವೆಂದರೆ ನಾವೂ ಯಾರಿಂದಲೂ ಬೈಗುಳ ತಿಂದಿಲ್ಲ!