ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆʼಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೇಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು ಮತ್ತು ಯಾವಾಗ ಹೋದರೂ ಅವೇ ಆಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇ-ಟ್ರಿಪ್ʼ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛತ್ರಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ, ದೇವಸ್ಥಾನದ ಅಥವಾ ಮಠದ ಊಟ ಮಾಡಿದರೆ ಅಲ್ಲಿಗೆ ನಮ್ಮ ಹಾಲಿಡೆ ಖತಮ್.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್ ಪತ್ರ’

 

ಬೇಸಿಗೆಯ ರಜೆ ಬಂದರೆ ಸಾಕು, ಹುಬ್ಬಳ್ಳಿಯಲ್ಲಿರುವ ಅಜ್ಜಿಯ ಮನೆಗೆ ಹೋಗಲು ತುದಿಗಾಲಲ್ಲಿ ನಿಂತಿರುತ್ತಿದ್ದೆ. ಬೇಕಾದುದನ್ನೆಲ್ಲ ಕೊಡಿಸುವ ಮಾಮಂದಿದ್ದರು. ಮಾಮಿಯಂದಿರು ಮಾಡುವ ರುಚಿ ರುಚಿ ಬಿಸಿ ಬಿಸಿ ಅಡುಗೆ ಇರುತ್ತಿತ್ತು. ಕಸಿನ್ಗಳು ಸೇರಿ ಹುಬ್ಬಳ್ಳಿಯನ್ನೆಲ್ಲ ಜಾಲಾಡಿಸುತ್ತಿದ್ದೆವು, ದಿನ ಪೂರ್ತಿ ಆಡುತ್ತಿದ್ದೆವು. ರಾಜಕುಮಾರನ ಹೊಸ ಸಿನೆಮಾ ಸುಜಾತಾ ಟಾಕೀಜ್ನಲ್ಲಿ ಇರುತ್ತಿತ್ತು, ರಾಜಕುಮಾರನ ಹಳೆಯ ಸಿನೆಮಾಗಳು ವಾರಕ್ಕೊಂದರಂತೆ ಚಂದ್ರಕಲಾ ಟಾಕೀಜ್ನಲ್ಲಿ ಬರುತ್ತಿದ್ದವು. ಬಾಗಲಕೋಟೆ ಎಂಬ ಪುಟ್ಟ ಪಟ್ಟಣದಲ್ಲಿ ಬೆಳೆಯುತ್ತಿದ್ದವನಿಗೆ ಹುಬ್ಬಳ್ಳಿ ಒಂದು ಮಾಯಾನಗರಿಯಂತೆ ಕಾಣುತ್ತಿತ್ತು. ಕಣ್ಣು ತುಂಬ ಕನಸುಗಳನ್ನು ತುಂಬಿಕೊಂಡಿರುವ ಆ ವಯಸ್ಸಿನಲ್ಲಿ ಇನ್ನೇನು ತಾನೆ ಬೇಕಿತ್ತು? ನನ್ನ ಹಾಗೆಯೇ ನನ್ನ ಬಹಳಷ್ಟು ಸಹಪಾಠಿಗಳು ಕೂಡ ಬೇಸಿಗೆಯ ರಜೆ ಬಂದರೆ ಸಾಕು, ಅಜ್ಜನ ಮನೆಗೋ, ಅಜ್ಜಿಯ ಮನೆಗೋ, ಮಾಮಾ-ಕಾಕಾಗಳ ಮನೆಗೋ ಹೋಗುತ್ತಿದ್ದರು. ಈಗಲೂ ಭಾರತದಲ್ಲಿ ಮಕ್ಕಳು ಬೇಸಿಗೆಯ ರಜೆಯಲ್ಲಿ ಮೊದಲಿನಷ್ಟು ದಿನಗಳಿರದಿದ್ದರೂ ನಾಕಾರು ದಿನಗಳ ಮಟ್ಟಿಗಾದರೂ ಬಂಧುಗಳ ಮನೆಗೆ ಹೋಗಿ ಬೇಸಿಗೆಯ ರಜೆಯನ್ನು ಕಳೆಯುವುದು ಸಾಮಾನ್ಯ.

ಆದರೆ ಇಂಗ್ಲೆಂಡಿನಲ್ಲಿ ಹಾಗಲ್ಲ. ಬೇಸಿಗೆಯ ರಜೆಯಲ್ಲಿ ಅಜ್ಜಅಜ್ಜಿಯ ಮನೆಗೋ, ಮಾಮಾ-ಕಾಕಂದಿರ ಮನೆಗೋ ಹೋಗುವುದಿಲ್ಲ. ಹಾಗಾಗಿ ಇಂಗ್ಲೆಂಡಿನಲ್ಲಿ ಬೇಸಿಗೆಯ ರಜೆ ಶುರುವಾದರೆ ಸಾಕು, ಕುಟುಂಬ ಸಮೇತ ಪ್ರವಾಸಗಳು ಶುರುವಾಗುತ್ತವೆ. ಕುಟುಂಬ ಸಮೇತ ಪ್ರವಾಸ ಕೈಗೊಂಡು, ಊರಿನಿಂದ ದೂರ ಪಯಣಿಸಿ, ಹೊಟೇಲಿನಲ್ಲಿದ್ದು, ನಾಕಾರು ದಿನ ಸುತ್ತ ಮುತ್ತೆಲ್ಲ ಕಳೆದು ಸುತ್ತಾಡಿ ಮನೆಗೆ ಮರಳುತ್ತಾರೆ. ಇಂಗ್ಲೆಂಡಿನಲ್ಲಿ ಈ ‘ಹಾಲಿಡೆ‘ಗಳಿಗೆ ಬಹಳ ಮಹತ್ವ. ವಾರ್ಷಿಕ ವರಮಾನ ಎಷ್ಟೇ ಇರಲಿ, ವರ್ಷಕ್ಕೆ ಕುಟುಂಬ ಸಮೇತ ಒಂದಾದರೂ ಹಾಲಿಡೆ ಮಾಡದಿದ್ದರೆ ಅದೆಂಥ ಬದುಕು ಎನ್ನುತ್ತದೆ ಇಲ್ಲಿನ ಸಮಾಜ.

(ಬೈಬರಿ ಎಂಬ ಮಧ್ಯಕಾಲೀನ ಹಳ್ಳಿ)

ಈ ದೇಶದ ಜನರು ಪಯಣ ಪ್ರಿಯರು. ಇಂಗ್ಲೆಂಡಿನಲ್ಲಿ ಲಂಡನ್ ಹೊರತಾಗಿ ಬೇಕಾದಷ್ಟು ನೈಸರ್ಗಿಕ, ಐತಿಹಾಸಿಕ ಮತ್ತು ಆಧುನಿಕ ಪ್ರೇಕ್ಷಣೀಯ ಸ್ಥಳಗಳಿವೆ; ಕಾರಿನಲ್ಲಿ ಎಲ್ಲ ಸರಂಜಾಮು ತುಂಬಿಕೊಂಡು ಹೋಟೆಲ್ ಬುಕ್ ಮಾಡಿ ಅಂಥ ಊರುಗಳಿಗೆ ಹೊರಟುಬಿಡುತ್ತಾರೆ. ಆದರೆ ಇಲ್ಲಿನ ಜನರಿಗೆ ವಿದೇಶ ಪ್ರಯಾಣದ ಹುಚ್ಚು, ಬಹುಷಃ ಇಲ್ಲಿನ ಜನರಿಗಿರುವಷ್ಟು ವಿದೇಶ ಪ್ರಯಾಣದ ಹುಚ್ಚು ಬೇರೆ ಯಾವ ದೇಶದವರಿಗೂ ಇಲ್ಲ ಎನಿಸುತ್ತದೆ. ಅದರಿಂದಾಗಿಯೇ ಇವರು ಪ್ರಪಂಚದ ಮೂಲೆಮೂಲೆಗಳಲ್ಲಿ ಸಾಮ್ರಾಜ್ಯಗಳನ್ನು ಸ್ಥಾಪಿಸಿದರೋ ಅಥವಾ ಎಲ್ಲೆಲ್ಲೂ ಸಾಮ್ರಾಜ್ಯಗಳನ್ನು ಸ್ಥಾಪಿಸಿದ್ದಕ್ಕಾಗಿ ಇಲ್ಲಿಯ ಜನರಲ್ಲಿ ವಿದೇಶ ಪ್ರವಾಸದ ಹುಚ್ಚು ಶುರುವಾಯಿತೋ? ಯುರೋಪಿನ ಬೇರೆ ದೇಶಗಳಿಗೆ ಪ್ರವಾಸ ಹೋಗುವುದೆಂದರೆ ಇವರಿಗೆ ಪ್ರಾಣ. ಉಳ್ಳವರು ಅಮೇರಿಕದ ನಗರ ಪ್ರವಾಸಕ್ಕೆ ಹೋಗುತ್ತಾರೆ, ನ್ಯೂಯಾರ್ಕ್, ಚಿಕಾಗೊ, ಫ್ಲೋರಿಡಾ, ಲಾಸ್ ವೇಗಾಸ್ ಎಂದರೆ ತುಂಬ ಇಷ್ಟ. ಭಾರತ, ಶ್ರೀಲಂಕಾ, ಥಾಯ್ಲ್ಯಾಂಡ್ಗಳೂ ಬಹಳ ಜನಪ್ರೀಯ. ಇಲ್ಲಿನ ಪತ್ರಿಕೆಗಳಲ್ಲಿ ಪ್ರತಿ ದಿನ ನಾಕಾರು ಪುಟಗಳನ್ನು ಪ್ರವಾಸದ ಜಾಹೀರಾತುಗಳಿಗೇ ಮೀಸಲಾಗಿರುತ್ತವೆ ಎಂದರೆ ಇಲ್ಲಿನ ಜನರ ಪ್ರವಾಸದ ಹುಚ್ಚು ಯಾವ ಮಟ್ಟಿಗಿರಬಹುದು ಊಹಿಸಿ.

ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆʼಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು ಮತ್ತು ಯಾವಾಗ ಹೋದರೂ ಅವೇ ಆಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್ʼ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛರ್ತಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ, ದೇವಸ್ಥಾನದ ಅಥವಾ ಮಠದ ಊಟ ಮಾಡಿದರೆ ಅಲ್ಲಿಗೆ ನಮ್ಮ ಹಾಲಿಡೆ ಖತಮ್. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಮೈಸೂರುಗಳೇನಿದ್ದರೂ ಶಾಲೆಯಿಂದ ಹೋಗಬೇಕಾದ ಹಾಲಿಡೆ ತಾಣಗಳು. ಊಟಿ, ಕೊಡೈಕೆನಾಲ್ಗಳೇನಿದ್ದರೂ ಹನಿಮೂನಿಗೆ ಮಾತ್ರ! ಇನ್ನು ತಾಜಮಹಲ್, ದಿಲ್ಲಿ, ಜಯಪುರಗಳ ಪ್ರವಾಸಗಳು ನಮ್ಮ ಕನಸಿನಲ್ಲೂ ಬರುತ್ತಿರಲಿಲ್ಲ.

(ರೋಮನ್ನರು ಕಟ್ಟಿದ ಬಾತ್ ಪಟ್ಟಣ)

ಇಂಗ್ಲೆಂಡಿನಲ್ಲಿ ಈ ‘ಹಾಲಿಡೆ‘ಗಳಿಗೆ ಬಹಳ ಮಹತ್ವ. ವಾರ್ಷಿಕ ವರಮಾನ ಎಷ್ಟೇ ಇರಲಿ, ವರ್ಷಕ್ಕೆ ಕುಟುಂಬ ಸಮೇತ ಒಂದಾದರೂ ಹಾಲಿಡೆ ಮಾಡದಿದ್ದರೆ ಅದೆಂಥ ಬದುಕು ಎನ್ನುತ್ತದೆ ಇಲ್ಲಿನ ಸಮಾಜ.

ಇತ್ತೀಚಿನ ದಶಕಗಳಲ್ಲಿ ಭಾರತದಲ್ಲಿ ಹಾಲಿಡೆಗಳ ಬಗ್ಗೆ ಪ್ರವಾಸಗಳ ಬಗ್ಗೆ ಮನೋಭಾವ ಬದಲಾಗುತ್ತಿದೆ. ಕೆಳಮಧ್ಯಮ ವರ್ಗದವರೂ ತೀರ್ಥಯಾತ್ರಗಳಲ್ಲದೇ ಬೇರೆ ಪ್ರದೇಶಗಳಿಗೂ ಹಾಲಿಡೆಗೆಂದು ಹೋಗುತ್ತಿದ್ದಾರೆ. ಎಲ್ಲ ಐತಿಹಾಸಿಕ ಮತ್ತು ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ತಂಗಲು ಬಜೆಟ್ ಹೊಟೇಲುಗಳಿಂದ ಹಿಡಿದು ದುಬಾರಿ ರಿಸಾರ್ಟುಗಳವರೆಗೆ ಸಿಗುತ್ತವೆ.

ಇಂಗ್ಲೆಂಡಿನಲ್ಲಿ ಹಾಲಿಡೆಗೆ ಹೋಗುವವರು ಮುಖ್ಯವಾಗಿ ಜಾಗಗಳನ್ನು ಆರಿಸಿಕೊಳ್ಳುವುದು ತಮ್ಮ ಮಕ್ಕಳ ವಯಸ್ಸು ಮತ್ತು ತಮ್ಮ ಹವ್ಯಾಸಗಳ ಆಧಾರಗಳ ಮೇಲೆ. ಚಿಕ್ಕ ಚಿಕ್ಕ ಮಕ್ಕಳಿದ್ದರೆ ಬೀಚ್ಗಳು ಇರುವ ಊರಿಗೋ ಅಥವಾ ಮಕ್ಕಳ ಚಟುವಟಿಕೆಗಳಿರುವ ಪ್ರದೇಶಗಳಿಗೋ (ಬಟ್ಲಿನ್ಸ್ ಅಥವಾ ಸೆಂಟರ್ ಪಾರ್ಕ್) ತಮ್ಮದೇ ಕಾರಿನಲ್ಲಿ ಹೋಗುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ತಮ್ಮ ಕಾರುಗಳ ಬೆನ್ನ ಮೇಲೆ ಸೈಕಲ್ಗಳನ್ನು ಹೇರಿಕೊಂಡು ನೈಸರ್ಗಿಕ ತಾಣಗಳಿಗೆ ಹೋಗುತ್ತಾರೆ. ಬೆಟ್ಟ, ಗುಡ್ಡ, ಕಣಿವೆ, ತೊರೆಗಳಲ್ಲಿ ಸೈಕಲ್ ಓಡಿಸಿಕೊಂಡೋ, ಹೈಕಿಂಗ್ ಮಾಡಿಕೊಂಡೊ, ನೀರಿನಲ್ಲಿ ಹುಟ್ಟು ಹಾಕಿಕೊಂಡೋ ರಜೆಯ ಸಮಯವನ್ನು ಕಳೆಯುತ್ತಾರೆ. ಹೊಟೇಲುಗಳಲ್ಲಲ್ಲದೇ ಕ್ಯಾರಾವಾನ್ಗಳಲ್ಲಿ ಅಥವಾ ಟೆಂಟುಗಳಲ್ಲಿ ರಾತ್ರಿಗಳನ್ನು ಕಳೆಯುತ್ತಾರೆ. ಹಾಗೆಯೇ ಈ ದೇಶದಲ್ಲಿ ಸಿಕ್ಕಾಪಟ್ಟೆ ಕಾಲುವೆಗಳಿವೆ. ಆ ಕಾಲುವೆಗಳಲ್ಲಿ ಚಿಕ್ಕ ಚಿಕ್ಕ ನಾವೆ(ಬೋಟು)ಗಳನ್ನು ಬಾಡಿಗೆಗೆ ಪಡೆದು ಹಾಲಿಡೆ ಮಾಡುತ್ತಾರೆ. ಚಿಕ್ಕ ಬೋಟುಗಳಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಸಾಗಿ, ರಾತ್ರಿಗಳನ್ನು ಬೋಟುಗಳಲ್ಲೇ ಕಳೆಯಬಹುದು.

ಬೇರೆ ದೇಶಗಳ ಜನರಿಗೆ ಲಂಡನ್ ಪ್ರಮುಖ ಪ್ರೇಕ್ಷಣೀಯ ಸ್ಥಳ, ಆದರೆ ಬ್ರಿಟನ್ನಿನ ಜನರು ಹಾಲಿಡೆಗಳಿಗಾಗಿ ಲಂಡನ್ನಿಗೆ ಹೆಚ್ಚಾಗಿ ಹೋಗುವುದಿಲ್ಲ. ಐತಿಹಾಸಿಕ ಅಥವಾ ನೈಸರ್ಗಿಕ ಪ್ರದೇಶಗಳಿಗೆ ಹೋಗಲು ಇಷ್ಟ ಪಡುತ್ತಾರೆ. ಯು.ಕೆಯಲ್ಲಿ ಸರಕಾರವು ನೈಸರ್ಗಿಕ ರಮ್ಯತಾಣಗಳನ್ನು ಗುರುತಿಸಿ (AONB – Area of Natural beauty ಮತ್ತು ಯು.ಕೆ ನ್ಯಾಶನಲ್ ಪಾರ್ಕ್ಸ್) ಅದರ ರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿರುವುದರಿಂದ, ಎಷ್ಟೇ ಪ್ರವಾಸಿಗಳು ಬಂದು ಹೋದರೂ, ಎಷ್ಟೇ ಜನಪ್ರೀಯವಾದರೂ, ಆಯಾ ಸ್ಥಳಗಳ, ಕಾಡುಗಳ, ಊರುಗಳ ಸೌಂದರ್ಯದಲ್ಲಿ ಯಾವ ರೀತಿಯಲ್ಲಿಯೂ ಹೆಚ್ಚೂ ಕಮ್ಮಿ ಆಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಐತಿಹಾಸಿಕ ಪಟ್ಟಣಗಳು ಮತ್ತು ಮಧ್ಯಕಾಲೀನ ಹಳ್ಳಿಗಳು ಇನ್ನೂ ತಮ್ಮ ಸೊಗಡನ್ನು ಉಳಿಸಿಕೊಂಡು ಜನರನ್ನು ಆಕರ್ಷಿಸುತ್ತಿವೆ.

(ಹೈಲ್ಯಾಂಡ್ಸ್_ನ ಹಳ್ಳಿ)

ಇಲ್ಲಿನ ಕಾಡುಗಳು ದಟ್ಟ ಕಾಡುಗಳಲ್ಲ, ದೊಡ್ಡ ಕಾಡು ಪ್ರಾಣಿಗಳು ಇಲ್ಲಿ ಇರುವುದಿಲ್ಲ. ಆದರೂ ಇಲ್ಲಿನ ಕಾಡುಗಳು ಮತ್ತು ಗುಡ್ಡಗಳು ನಡೆದಾಡಲು, ಹೈಕಿಂಗ್ ಮಾಡಲು ಅನುಕೂಲಕರವಾಗಿವೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಏರ್ಪಾಡುಗಳನ್ನು ಮಾಡಿದ್ದಾರೆ.

ಕ್ರೂಸ್ ಹಾಲಿಡೆಗಳು ಕೂಡ ಇಲ್ಲಿ ತುಂಬ ಜನಪ್ರಿಯ. ಒಂದು ಚಿಕ್ಕ ಪಟ್ಟಣವನ್ನು ಹೋಲುವ ದೊಡ್ಡ ದೊಡ್ಡ ಹಡಗುಗಳು ಸಾವಿರಾರು ಜನರನ್ನು ತುಂಬಿಕೊಂಡು ವಾರದಿಂದ ಹಿಡಿದು ತಿಂಗಳುಗಳವರೆಗೆ ಯುರೋಪನ್ನು, ಕೆರೇಬಿಯನ್ ದ್ವೀಪಗಳನ್ನು, ಅಮೇರಿಕದ ಅಲಸ್ಕಾವನ್ನು ಸುತ್ತಾಡಿಸಿ ಕರೆದುಕೊಂಡು ಬರುತ್ತವೆ. ಒಂದು ಶಿಪ್ಪಿನಲ್ಲೇ ನಾಕಾರು ಕೆಲವೊಮ್ಮೆ ಹತ್ತಾರು ರೆಸ್ಟೋರೆಂಟುಗಳಿರುತ್ತವೆ, ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಡಿನ್ನರ್ವರೆಗೆ ಪ್ರಪಂಚದ ವಿವಿಧ ಅಡುಗೆಗಳನ್ನು ಮಾಡಿರುತ್ತಾರೆ. ವಿಧ ವಿಧ ಪೇಯಗಳಿರುತ್ತವೆ. ಪ್ರದರ್ಶನಕ್ಕೆಂದು ಸಭಾಂಗಣವಿರುತ್ತದೆ. ಮಕ್ಕಳ ಆಟಕ್ಕೆಂದು ಜಾಗಗಳನ್ನು ಮಾಡಿರುತ್ತಾರೆ.

ಈ ಪ್ರವಾಸ/ಹಾಲಿಡೆ ಮಾಡುವ ಹುಚ್ಚು ವಲಸೆ ಬಂದ ನಮ್ಮನ್ನೂ ತಟ್ಟಲು ಬಹಳ ಕಾಲವೇನೂ ಬೇಕಾಗುವುದಿಲ್ಲ. ನಾವು ಕೂಡ ಈ ದೇಶಕ್ಕೆ ಬಂದ ಮೇಲಿಂದ ಇಲ್ಲಿನ ಜನರಂತೆ ಪ್ರತಿ ವರ್ಷ ಮಕ್ಕಳ ಬೇಸಿಗೆಯ ರಜೆಯ ಸಮಯದಲ್ಲಿ ಪ್ರವಾಸಕ್ಕೆ ಹೋಗುತ್ತೇವೆ. ಯುರೋಪಿನ ದೇಶಗಳಾದ ಫ್ರಾನ್ಸ್, ಇಟಲಿ, ಗ್ರೀಸ್, ಸ್ಪೇನ್, ನೆದರ್ಲ್ಯಾಂಡ್, ಟರ್ಕಿ, ಕೆನರಿ ದ್ವೀಪಗಳು ಹಾಲಿಡೆಗಳಿಗಾಗಿ ತುಂಬ ಜನಪ್ರೀಯ. ಹಾಗೆಯೇ ಬ್ರಿಟನ್ನಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳಾದ ಲಂಡನ್, ಬಾತ್, ಕಾಟ್ಸ್ವಲ್ಡ್, ಕಾರ್ನ್ವಾಲ್, ಪೀಕ್ ಡಿಸ್ಟ್ರಿಕ್ಟ್, ಲೇಕ್ ಡಿಸ್ಟ್ರಿಕ್ಟ್, ಸ್ಕಾಟ್ಲ್ಯಾಂಡಿನ ಹೈಲ್ಯಾಂಡ್ಸ್ಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ. ಬ್ರಿಟನ್ನಿನ ಸುತ್ತಮುತ್ತ ಕಿರುದ್ವೀಪಗಳಿವೆ, ಹಾಲಿಡೆ ತಾಣಗಳಾಗಿ ಅವೆಲ್ಲ ಬಹಳ ಜನಪ್ರೀಯ. ಅವುಗಳ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೇನೆ.