ಲಾಂಗೂಲಾಚಾರ್ಯ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಪಾಡಿಗಾರು ವೆಂಕಟರಮಣಾಚಾರ್ಯ (ಪಾ.ವೆಂ. ಆಚಾರ್ಯ) ಜನಿಸಿದ್ದು ಉಡುಪಿಯಲ್ಲಿ ಫೆಬ್ರವರಿ ೧೫, ೧೯೧೫ರಲ್ಲಿ. ಬಡತನದ ಕಾರಣ ಹೆಚ್ಚಿಗೆ ಓದಲಾಗದೇ ಹತ್ತನೇ ತರಗತಿಗೇ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು.ಶಿಕ್ಷಣದ ಬಳಿಕ ಅವರು ಅಂತರಂಗ’ ದ ಉಪ ಸಂಪಾದಕರಾಗಿ ಸಂಯುಕ್ತ ಕರ್ನಾಟಕ’ ಪತ್ರಿಕೆಯ ಮುದ್ರಣಾಲಯದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡಿದ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಹಾಯಕ ಸಂಪಾದಕರೂ ಆದರು.

ಸಂಯುಕ್ತ ಕರ್ನಾಟಕ’ ವತಿಯಿಂದ ೧೯೫೯ರಲ್ಲಿ ‘ಕಸ್ತೂರಿ’ ಎಂಬ ಕನ್ನಡ ಡೈಜೆಸ್ಟ್ (ಮಾಸ ಪತ್ರಿಕೆ) ಪ್ರಾರಂಭವಾದಾಗ ಪಾವೆಂ ಅವರಿಗೆ ಇದರ ಸಂಪಾದಕತ್ವವನ್ನು ವಹಿಸಲಾಯಿತು.

ಪಾವೆಂ ಅವರ ಕೆಲವು ಕೃತಿಗಳು: ಬಯ್ಯ ಮಲ್ಲಿಗೆ (ತುಳು ಕವನಗಳ ಸಂಗ್ರಹ), ರಶಿಯಾದ ರಾಜ್ಯ ಕ್ರಾಂತಿ, ಸ್ವತಂತ್ರ ಭಾರತ (ರಾಜಕೀಯ ವಿಶ್ಲೇಷಣೆ), ಸುಭಾಷಿತ ಚಮತ್ಕಾರ, ಪದಾರ್ಥ ಚಿಂತಾಮಣಿ ಇತ್ಯಾದಿ. ಪಾವೆಂ ಅವರಿಗೆ ೧೯೭೭ರಲ್ಲಿ ಪತ್ರಿಕೋದ್ಯಮದಲ್ಲಿನ ಸೇವೆಗಾಗಿ ಪಿ.ಆರ್. ರಾಮಯ್ಯ ಪ್ರಶಸ್ತಿ, ೧೯೯೨ರಲ್ಲಿ ಅಖಿಲ ಭಾರತದ ಮಟ್ಟದ ‘ಗೋಯೆಂಕಾ ಪ್ರಶಸ್ತಿ’ ಹಾಗೂ ಇವರ ಮೊದಲ ಕವನ ಸಂಕಲ ‘ನವ ನೀರದ’ ಕ್ಕೆ ಮುಂಬಯಿ ಸರಕಾರದ ಪಾರಿತೋಷಕ ದೊರೆತಿದೆ.
ಅವರು ಬರೆದ ನುಸಿಗೆ ಎಂಬ ಕವನ ಇಂದಿನ ಕನ್ನಡ ಕಾವ್ಯ ಕುಸುಮ ಮಾಲೆಯಲ್ಲಿ ನಿಮ್ಮ ಓದಿಗೆ

ನುಸಿಗೆ

ಬಡ ಮುನಿಸಿಪಾಲಿಟಿಗೆ ಒಡಹುಟ್ಟಿದವ ನೀನು!
ನಿನ್ನ ಗಾನದ ಸಿರಿಗೆ ಕರುಬಿ, ನಾಚಿಕೊಂಡು
ಕಾಡಾಡಿಯಾಗಿ ತಲೆಮರೆಸಿಹುದು ಪಿಕವೊಂದು!
ನಾಗರಿಕ ನರನಾರಿವದನಕಮಲದ ಜೇನು
ಸವಿದು ಜೇಂಕರಿಸಿ ನಲಿವಾರಡಿಯೆ ನೀನೇನು?
ನಿದ್ದೆವೆಣ್ಣಿನ ಕೈಯ ಬೀಣೆ! ನಿನ್ನಯ ದನಿಯ
ಮಾಧುರಿಗೆ ಮಾನವನು ಮೈಮರೆತು ಮನದಣಿಯು
ತಾಳೆವಿಕ್ಕುವ ಭರಕೆ, ಸೂಕ್ಷ್ಮ ಜೀವಿಯೆ, ನೀನು
ನಜ್ಜುಗುಜ್ಜಾಗುವುದು ಇಹುದು,- ಎಂತಹ ದುಗುಡ!
ಓ ನುಸಿಯೆ, ಪ್ರೇಮಗಾನದ ಸಸಿಯೆ, ಸಂತಸಿಯೆ!
ನಿನ್ನನರಿಯದೆ ಜರೆವ ಮಾನವನೆ ಕಡುಕಿವುಡ!
ಇದಕೊ! ನಿನಗೆನ್ನ ನೆತ್ತರ ಕಾಣ್ಕೆ, ಹಸಿಬಿಸಿಯೆ!
ಬೇಡುವರ ರೇಡಿಯೋ ನೀನು! ಬಡವರ ಬಂಧು!
ಹರಕುಗೋಡೆಯ ವಾಸಿ! ನಿನಗೆ ನಮಿಸುವೆ ನಿಂದು!

(ಕರಾವಳಿಯ ಕವಿರಾಜಮಾರ್ಗ ಸರಣಿಯಲ್ಲಿ ಪಾ.ವೆಂ. ಆಚಾರ್ಯರ ಕುರಿತು ಡಾ. ಜನಾರ್ಧನ ಭಟ್‌ ಬರೆದ ಲೇಖನದ ಕೊಂಡಿ ಇಲ್ಲಿದೆ.)