ಅವಳು ಸಾಯಬಾರದು..

ಪತ್ರಿಕೆಯ ಮುಖಪುಟದಲೇ
ಜೋರು ಸುದ್ದಿ
ಅವಳು ಸತ್ತು ಹೋದಳಂತೆ

ಈ ಸಾಮ್ರಾಜ್ಯದ ಅಪರೂಪದ
ದೇವತೆ
ಎಲ್ಲಾ ವಯೋಮಾನದ ಅಣುಗಳನ್ನು
ದಾಹಕ್ಕೆ ಕುಡಿದವಳು
ಸತ್ತಳೆಂದರೆ ಹೇಗೆ?
ಇರಿ,
ಅದು ಸುಳ್ಳಾಗಿರಬಹುದು

ಸಾವನ್ನೇ ಸೊಂಟಕ್ಕೆ ಸುತ್ತಿ
ಡಾಬು ಹೆಣೆದವಳು
ಸತ್ತಳೆಂದರೆ ದಿಟವೇ?
ಇರಿ ಅವಳು
ಲೋಕದ ನೋವಿಗೆ ನೂಕುನುಗ್ಗಲಿನಲಿ
ಔಷಧಿ ಖರೀದಿಸುತ್ತಿರಬಹುದು

ಅವಳು ಹಚ್ಚಿದ ಸಿಗಾರಿನ ಹೊಗೆಯಲ್ಲಿ
ಈ ಜನ ಮೈ ಬೆಚ್ಚನೆ ಮಾಡುವಾಗ
ಹೀರಿಬಿಟ್ಟ ವೈನಿನ ಎಂಜಲು ಹೀರಿದ
ನೊಣವೊಂದು ಭೂಪಟದ ಮಧ್ಯೆ
ಹಿಕ್ಕೆ ಹಾಕುವಾಗ
ಬುಲೆಟಿನ ನಳಿಕೆಯಲ್ಲಿ ಗಂಡೆದೆಗೆ
ಗುಂಡು ಇಡುತ್ತಿದ್ದವಳು
ಸತ್ತು ಹೋದ ಸುದ್ದಿ ನಂಬಬಹುದೆ?

ಅವಳಾದರೂ ಏಕೆ ಸಾಯಬೇಕು
ದೇಶದ ತೂತು ನಳಿಕೆಯಲಿ
ಬಡವರ ರಕ್ತ ಸೋರಿಸಿ ಕೊಡ ತುಂಬಿಸಿ
ಹಸಿವಿನ ಹೆಬ್ಬುಲಿಗೆ ಹೊಟ್ಟೆ ತುಂಬಿಸಿ
ಸವಾರಿ ಮಾಡಿದವಳು

ಸತ್ತಿಲ್ಲ ಸುಮ್ಮನಿರಿ
ಅವಳ ಐರನ್ ಸೀರೆ ನೆರಿಗೆಯಲಿ
ಬಡವರ ಬೆವರ ಸೋಕುವ ಮುನ್ನ
ಅವಳು
ಸುವಾಸಿತ ರಕ್ತದ ಸ್ನಾನ ಮಾಡುತ್ತಿದ್ದಾಳೆ

ಅವಳು ಸಾಯಬಾರದು
ಸತ್ತು ಗೋರಿಯಲಿ ಮಲಗಬಾರದು
ಸದಾ ಎಚ್ಚರವಾಗೆ ಗಡಿಯಾರದ ಮುಳ್ಳಿಗೆ
ಸೂಜಿ ಚುಚ್ಚಬೇಕು
ದಿನಗಳು ಸಾಯದಂತೆ ಕಾಪಿಡಬೇಕು