ಇಲ್ಲಿ ಎಲ್ಲವೂ ‘ಧರ್ಮಸಮ್ಮತ’ವೆ! ಹಾಗಾಗಿ ಎಲ್ಲವೂ ಸರಳ, ಸುರಳೀತ ನಡೆಯಬೇಕು. ಆದರೆ ಧರ್ಮಸಮ್ಮತವಾದದ್ದು ಹೃದಯ ಸಮ್ಮತ ಆಗಿರಲೇಬೇಕೆಂದೇನೂ ಇಲ್ಲವಲ್ಲ? ತನಗೆ ಸಹಾಯಕಿಯಾಗುತ್ತಾಳೆ ಎಂದು ಮತ್ತೊಬ್ಬ ಹೆಣ್ಣನ್ನು ಸ್ವಾಗತಿಸಲು ಸಿದ್ಧವಾಗುವ ಅವಾತೆಫ್ ಗೆ ಆ ಹೆಣ್ಣು ತನ್ನ ಗಂಡನೊಂದಿಗಿರಲಿ ಮಕ್ಕಳ ಮನಸ್ಸಿನಲ್ಲಿ ಜಾಗ ಮಾಡಿಕೊಳ್ಳುವುದನ್ನೂ ಸಹಿಸಲಾಗುವುದಿಲ್ಲ. ಬದುಕಿನಲ್ಲಿ ಎಲ್ಲವನ್ನೂ ಔಟ್ ಸೋರ್ಸ್ ಮಾಡಲು ಆಗುವುದಿಲ್ಲವಲ್ಲ… ಅದು ಅರಿವಾದ ಮರುದಿನ ಮುಂಜಾನೆ ಮೊದಲ ಸಲ ಅವಳು ಮಕ್ಕಳನ್ನು ಮುದ್ದಿಟ್ಟು ಎಬ್ಬಿಸುತ್ತಾಳೆ.
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಲೆಬನಾನಿನ ಚಿತ್ರ ಹಲಾಲ್ ಲವ್.

‘ಪವಿತ್ರ ಪ್ರೇಮ’ – ಈ ಹೆಸರೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾವುದು ಪವಿತ್ರ, ಯಾವುದು ಅಪವಿತ್ರ? ಪವಿತ್ರ-ಅಪವಿತ್ರಗಳನ್ನು ನಿರ್ಧರಿಸುವವರು ಯಾರು? ಮಾನಸಿಕ ಪ್ರೇಮ ಮಾತ್ರ ಪವಿತ್ರವೆ? ಅಥವಾ ಧರ್ಮ ಶಾಸ್ತ್ರಗಳ ಅನುಮತಿಯನ್ನು ಪಡೆದ ಪ್ರೇಮ ಮಾತ್ರ ಪವಿತ್ರವೆ? ಅಥವಾ ಮನಸ್ಸು ಒಪ್ಪಿದ ಪ್ರೇಮ ಪವಿತ್ರವೆ? ಧಾರ್ಮಿಕ ಕಟ್ಟುಪಾಡುಗಳೇ ಪ್ರೇಮದ ಪವಿತ್ರತೆಯನ್ನು ನಿರ್ಧರಿಸುತ್ತದೆ ಎಂದು ಹೇಳುವವರು, ಪ್ರೇಮವೇ ಇಲ್ಲದ ಸಂಸಾರಗಳನ್ನು ನೋಡಿ ಏನು ಹೇಳುತ್ತಾರೆ? ತುಂಬಾ ಹಿಂದೆ ಒಂದು ಚಿತ್ರ ನೋಡಿದ್ದೆ. ಅದರಲ್ಲಿ ಆಕೆ ಮತ್ತು ಆತ ಪ್ರೇಮಿಸಿರುತ್ತಾರೆ. ಅವರ ಪ್ರೇಮದ ಕುರುಹಾಗಿ ಒಂದು ಮಗು. ನಂತರ ಆತ ತನ್ನ ಗುರಿಯ ಸಾಧನೆಗೆ ಸಂಸಾರ ಅಡ್ಡಿಯಾಗಬಹುದು ಎಂದಾಗ ಆಕೆ ಆತನನ್ನು ಕಳಿಸಿಕೊಡುತ್ತಾಳೆ. ಅವಳು ಒಬ್ಬ ಲೆಕ್ಚರರ್. ಮುಂದೆ ಮಗ ಬೆಳೆದು ದೊಡ್ಡವನಾಗುತ್ತಾನೆ. ಅಮ್ಮನನ್ನು ಕರೆದುಕೊಂಡು ಹೋಗಲು ಕಾಲೇಜಿಗೆ ಬಂದಾಗ ಆಕೆಯ ವಿದ್ಯಾರ್ಥಿಯೊಬ್ಬ ಆ ಹುಡುಗನನ್ನು ‘ಬಾಸ್ಟರ್ಡ್’ ಎಂದು ಛೇಡಿಸುತ್ತಾನೆ. ಆಗ ಅವಳೊಂದು ಮಾತು ಹೇಳುತ್ತಾಳೆ, ‘ನಾನು, ನನ್ನವನು ಪ್ರೀತಿಸಿದ್ದಕ್ಕೆ ಇವನು ಹುಟ್ಟಿದ, ಮದುವೆ ಆಗಿದ್ದೇವೆ ಎಂದು ‘ಡ್ಯೂಟಿ’ ಮಾಡಿದ್ದಕ್ಕಲ್ಲ’ ಎಂದು. ಇದು ಏಕಪಕ್ಷೀಯ ಅನ್ನಿಸಬಹುದು, ಬಲ್ಲೆ, ಆದರೆ ಆ ಮಾತು ಹೇಳುವಾಗ ಅವಳ ಧ್ವನಿಯಲ್ಲಿದ್ದ ಬದ್ಧತೆಯನ್ನು ಮರೆಯಲಾಗುತ್ತಿಲ್ಲ. ಮದುವೆ ಆಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವರದ್ದು ‘ಪವಿತ್ರ ಪ್ರೇಮ’ವಲ್ಲದೆ ಹೋಗುತ್ತದೆಯೆ? ಪ್ರೀತಿಯೇ ಇಲ್ಲದ ಮದುವೆಗಳು ಸಾಧ್ಯ ಎನ್ನುವಾಗ, ಮದುವೆ ಇಲ್ಲದ ಪ್ರೀತಿ ಸಾಧ್ಯವಿಲ್ಲವೆ?

ಪ್ರೇಮದ ಬಗ್ಗೆಯೇ ಇಷ್ಟು ಪ್ರಶ್ನೆಗಳಿವೆ, ಇನ್ನು ‘ಕಾಮ?’. ಕಾಮ ಎಂದ ಕೂಡಲೇ ಅದನ್ನು ಅಪವಿತ್ರ ಎಂದು ಚೌಕಟ್ಟು ಹಾಕಿಬಿಡುವ ಪ್ರವೃತ್ತಿ ಇರುವ ಸಮಾಜದಲ್ಲಿ ಬಹುಶಃ ಈ ಪ್ರಶ್ನೆಯೇ ಅಸಹಜ ಅನ್ನಿಸಬಹುದು. ಅಸಹಜ ಏನು, ಅಪವಿತ್ರ ಎಂದೇ ಅನ್ನಿಸಬಹುದು. ಕಾಮಕ್ಕಿರುವ ಆಯಾಮಗಳು ಅನೇಕ. ಅದನ್ನು ಹೀಗೇ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಒಬ್ಬರಿಗೆ ಕಾಮ ಅನ್ನಿಸುವುದು ಇನ್ನೊಬ್ಬರಿಗೆ ಪ್ರೇಮದ ಅವಿಭಾಜ್ಯ ಅಂಗವೇ ಆಗಿರಬಹುದು, ಅದರ ಅನುಪಸ್ಥಿತಿಯಲ್ಲಿ ಪ್ರೇಮ ಅಪೂರ್ಣ ಆಗಿರಬಹುದು. ಈ ಪ್ರೇಮ ಕಾಮಗಳ ಬಗ್ಗೆ ಚಿತ್ರ ಮಾಡುವುದೆಂದರೆ ಅದೊಂದು ಸವಾಲೇ ಸರಿ. ಆ ಸವಾಲನ್ನು ಕೈಗೆತ್ತಿಕೊಂಡವರು ಲೆಬನೀಸ್ ನಿರ್ದೇಶಕ ಅಸಾದ್ ಫೌಲಾದ್ಕರ್ (Assad Fouladkar). ಚಿತ್ರದ ಹೆಸರು ಹಲಾಲ್ ಲವ್ (Halal Love (and Sex). Halal ಎಂದರೆ ಪವಿತ್ರ. ಇಸ್ಲಾಂ ಧರ್ಮದ ಚೌಕಟ್ಟಿನೊಳಗೆ, ಅದು ಅನುಮೋದಿಸುವ ನೀತಿ ನಿಯಮಾವಳಿಗಳ ಹೊಸ್ತಿಲಿನೊಳಗಡೆಯೇ ನಡೆಯುವ ಪ್ರೇಮ ಮತ್ತು ಕಾಮದ ಹುಡುಕಾಟ ಈ ಚಿತ್ರ. ಇಲ್ಲಿ ನಿರ್ದೇಶಕ ಪ್ರೇಮವನ್ನು ಮಾತ್ರ ಕೇಂದ್ರೀಕರಿಸಿಲ್ಲ, ಒಂದು ಸಂಬಂಧದ ಪೂರ್ಣತೆಗೆ ಹೇಗೆ ಎರಡೂ ಪೂರಕವಾಗುತ್ತದೆ ಮತ್ತು ಎರಡೂ ಅಗತ್ಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ ಆತ ಈ ಚಿತ್ರವನ್ನು ಕಟ್ಟುತ್ತಾರೆ.

ಪ್ರೇಮದ ಬಗ್ಗೆಯೇ ಇಷ್ಟು ಪ್ರಶ್ನೆಗಳಿವೆ, ಇನ್ನು ‘ಕಾಮ?’. ಕಾಮ ಎಂದ ಕೂಡಲೇ ಅದನ್ನು ಅಪವಿತ್ರ ಎಂದು ಚೌಕಟ್ಟು ಹಾಕಿಬಿಡುವ ಪ್ರವೃತ್ತಿ ಇರುವ ಸಮಾಜದಲ್ಲಿ ಬಹುಶಃ ಈ ಪ್ರಶ್ನೆಯೇ ಅಸಹಜ ಅನ್ನಿಸಬಹುದು. ಅಸಹಜ ಏನು, ಅಪವಿತ್ರ ಎಂದೇ ಅನ್ನಿಸಬಹುದು. ಕಾಮಕ್ಕಿರುವ ಆಯಾಮಗಳು ಅನೇಕ.

ಚಿತ್ರದಲ್ಲಿ ಮೂರು ಜೋಡಿಗಳಿವೆ. ಎಲ್ಲರೂ ಇಸ್ಲಾಂ ಧರ್ಮವನ್ನು ಪಾಲಿಸುವವರು. ಪ್ರೇಮ-ಕಾಮಕ್ಕೆ ಸಂಬಂಧಿಸಿದಂತೆ ಧರ್ಮದ ಲಕ್ಷ್ಮಣರೇಖೆಯೊಳಗೇ ಅವರು ಕಂಡುಕೊಂಡ ಪರಿಹಾರಗಳು ಎಷ್ಟರ ಮಟ್ಟಿಗೆ ಪರಿಹಾರಗಳಾಗುತ್ತವೆ, ಎಷ್ಟರ ಮಟ್ಟಿಗೆ ಹೊಸಸಮಸ್ಯೆಗಳಿಗೆ ದಾರಿಯಾಗುತ್ತವೆ ಎನ್ನುವುದನ್ನು ಚಿತ್ರ ಹಾಸ್ಯದ ಮೂಲಕ ಹೇಳುತ್ತಾ ಹೋಗುತ್ತದೆ. ಚಿತ್ರ ಪ್ರಾರಂಭ ಆಗುವ ರೀತಿಯೇ ಮಜವಾಗಿದೆ! ೧೦-೧೨ ವಯಸ್ಸಿನ ಪೋರಿಯರಿರುವ ಶಾಲೆ. ಅಲ್ಲಿ ಒಬ್ಬ ಮೇಡಂ ಲೈಂಗಿಕ ಶಿಕ್ಷಣ ಪಾಠ ಮಾಡಬೇಕು. ಮಕ್ಕಳು ಹೇಗೆ ಹುಟ್ಟುತ್ತಾರೆ ಎನ್ನುವ ಬಗೆಯನ್ನು ಆ ಟೀಚರ್ ವಿವರಿಸುವುದು ಹೀಗೆ. ‘ಗಂಡಿನ ಮೈಯಲ್ಲಿ ಒಂದು ಹುಳ ಇರುತ್ತದೆ, ಅದು ಚಲಿಸುತ್ತಾ, ಚಲಿಸುತ್ತಾ ಬಂದು ಹೆಣ್ಣಿನ ಮೈ ಸೇರಿದರೆ ಮಕ್ಕಳಾಗುತ್ತವೆ’. ಅದನ್ನು ಕೇಳಿದ ಒಬ್ಬ ಹುಡುಗಿ ಪೂರಾ ಗಾಬರಿಯಾಗಿ, ಮನೆಗೆ ಬಂದು ತಂಗಿಗೆ ಹೇಳುತ್ತಾಳೆ. ಅಲ್ಲಾ ಈ ಸಲ ತಮ್ಮ ಬರುತ್ತಾನೆ ಎಂದು ಅಮ್ಮ ಹೇಳುತ್ತಿದ್ದರು, ನಾವು ತಿಳಿಯದೆ ಕಾಲಿಟ್ಟು ತಮ್ಮ ಬರುವ ಆ ಹುಳುವನ್ನು ತುಳಿದು ಹಾಕಿದರೆ ಏನು ಗತಿ ಎಂದು ಯೋಚಿಸುವ ಆ ಪುಟಾಣಿಯರು ಅಂದಿನಿಂದ ಒಂದೊಂದೊಂದು ಹೆಜ್ಜೆಯನ್ನೂ ನೋಡಿ, ನೋಡಿ ಇಡುತ್ತಾರೆ! ಅಷ್ಟರಲ್ಲಿ ಒಬ್ಬಳಿಗೆ ಇನ್ನೊಂದು ಅನುಮಾನ ಬರುತ್ತದೆ, ಅಲ್ಲಾ ಮಲಗಿರುವಾಗ ಅಕಸ್ಮಾತ್ ಆ ಹುಳ ಬಂದು ತಮ್ಮ ಮೈ ಸೇರಿಕೊಂಡರೆ ಏನು ಗತಿ?! ಗಾರ್ಬೇಜ್ ಕವರ್ ತೆಗೆದುಕೊಂಡು ಅದರೊಳಕ್ಕೆ ತೂರಿ ಮಲಗುತ್ತಾರೆ. ಬೆಳಗ್ಗೆ ಏಳುವಾಗ ಒಬ್ಬಳ ಕವರ್ ಜಾರಿಹೋಗಿರುತ್ತದೆ. ತಂಗಿ ಬಂದು ಕೇಳುತ್ತಾಳೆ, ‘ನೀನು ಗರ್ಭಿಣಿ ಏನೇ?’ ಎಂದು. ಮೊದಲನೆಯವಳು ‘ಯಾಕೋ ವಾಂತಿ ಬರ್ತಾ ಇದೆ’ ಎಂದು ಮೆಲ್ಲಗೆ ಹೆಜ್ಜೆಯಿಟ್ಟುಕೊಂಡು ಬಾತ್ ರೂಮಿಗೆ ಹೋಗುತ್ತಾಳೆ. ನೋಡುವಾಗ ನಗು ತಡೆಯಲಾಗುವುದಿಲ್ಲ!

ಆ ಮಕ್ಕಳ ಗಲಾಟೆಗೆ ತಾಯಿ ಎಷ್ಟು ಬಸವಳಿಸಿರುತ್ತಾಳೆ ಎಂದರೆ ಪ್ರತಿದಿನ ಮುಂಜಾನೆ ಅವಳ ದಿನ ಶುರುವಾಗುವುದೇ ಅಸಹನೆಯಿಂದ. ಇನ್ನು ಗಂಡನ ಅತಿ ಪ್ರೀತಿ ಅವಳ ಇನ್ನೊಂದು ಸಮಸ್ಯೆ! ಹೇಗೋ ಮಾಡಿ, ಹಾಡಿ, ರಮಿಸಿ, ಕಾಡಿ, ಬೇಡಿ ಪ್ರತಿರಾತ್ರಿ ಅವನು ಹೆಂಡತಿಯನ್ನು ಕೂಡಲೇಬೇಕು. ಕೊನೆಗೊಮ್ಮೆ ಸಿಟ್ಟಾದ ಅವಳು, ಧರ್ಮದ ಪ್ರಕಾರ ನೀನು ನಾಲ್ಕು ಮದುವೆ ಆಗಬಹುದು, ಹಾಗಾಗಿ ಇನ್ನೊಂದು ಮದುವೆ ಆಗಿಬಿಡು, ನಾನು ಅವಳು ಇಬ್ಬರೂ ಸೇರಿ ನಿನ್ನನ್ನು ನೋಡಿಕೊಳ್ಳುತ್ತೇವೆ, ಮಕ್ಕಳ ಕಾಟ ವಿಪರೀತ, ಅವಳು ನನಗೆ ಮನೆಯಲ್ಲೂ ಸಹಾಯಕಿ ಆಗಿರುತ್ತಾಳೆ ಎಂದು ಗಂಡನನ್ನು ಪುಸಲಾಯಿಸುತ್ತಾಳೆ. ಅವನು ಒಪ್ಪುವುದಿಲ್ಲ, ‘ಅಯ್ಯೋ ನನಗೆ ಹೆಂಡತಿ ನೀನೇ ಇದ್ದೀಯಲ್ಲಾ’ ಅನ್ನುತ್ತಾನೆ. ಅವಳು ಗಟ್ಟಿದನಿಯಲ್ಲಿ ಹೇಳುತ್ತಾಳೆ, ‘ಹಾಗಾದರೆ ನನಗೆ ಹೆಂಡತಿ ಬೇಕು!’. ಕೊನೆಗೂ ಹೆಣ್ಣೊಬ್ಬಳನ್ನು ಹುಡುಕುತ್ತಾಳೆ, ಗಂಡನನ್ನು ವಿಧವಿಧವಾಗಿ ಹೊಗಳಿ, ಹುಡುಗಿಯನ್ನು ಒಪ್ಪಿಸುತ್ತಾಳೆ, ಮನೆಗೂ ಕರೆದುಕೊಂಡು ಬರುತ್ತಾಳೆ. ಅವಳೂ ಪಾಪ ಒಳ್ಳೆಯವಳು. ಮೊದಮೊದಲು ಮಕ್ಕಳೊಡನೆ ಹೊಂದಿಕೊಳ್ಳುತ್ತಾಳೆ. ಗಂಡನೂ ಈ ಹೊಸ ಹುಡುಗಿಯಲ್ಲಿ ಆಸಕ್ತಿ ತೋರಿಸುತ್ತಾನೆ. ಆ ಹೆಂಡತಿಯ ಸಮಸ್ಯೆ ಆಗ ಶುರು ಆಗುತ್ತದೆ. ಯಾವುದೇ ಸಂಬಂಧದ ಎಲ್ಲೆಗಳನ್ನು ಮೂರನೆಯವರು ನಿರ್ಧರಿಸಲಾಗುವುದಿಲ್ಲ. ಗಂಡನ ದೇಹಕ್ಕೆ ಸಂಗಾತಿಯಾಗಲೆಂದು ತಂದ ಹೆಣ್ಣನ್ನು ಗಂಡನ ಮನಸ್ಸಿನೊಳಗೆ ಹೆಜ್ಜೆ ಇಡದಂತೆ ತಡೆಯುವುದು ಹೇಗೆ? ಗಂಡನ ದೇಹವನ್ನು ಹಂಚಿಕೊಂಡಷ್ಟು, ಅವನ ಪ್ರೇಮವನ್ನು ಹಂಚಿಕೊಳ್ಳುವುದು ಅವಳಿಗೆ ಆಗುವುದೇ ಇಲ್ಲ… ಸಂಬಂಧದಲ್ಲಿರುವ ಇಬ್ಬರಲ್ಲಿ ಒಬ್ಬರು ಇನ್ನೊಬ್ಬರ್ಯಾರಿಗೋ ಹತ್ತಿರಾಗಿ, ‘ಆದರೆ ನಮ್ಮಿಬ್ಬರ ನಡುವೆ ದೈಹಿಕವಾಗಿ ಏನೂ ಆಗಲಿಲ್ಲ’ ಎಂದಂತೆ ಇದು. ಮನಸ್ಸು ಹಂಚಿಕೊಂಡಮೇಲೆ ದೇಹವನ್ನು ಹಂಚಿಕೊಳ್ಳುವುದು ಬಹಳಷ್ಟು ಸಲ ‘ಇನ್ಸಿಡೆಂಟಲ್’ ಮಾತ್ರ, ಹಾಗೆ ದೇಹ ಹಂಚಿಕೊಂಡ ಮೇಲೆ ಮನಸ್ಸನ್ನು ಹಂಚಿಕೊಳ್ಳುವುದು ಸಹ…

ಅವರ ನೆರೆಮನೆಯಲ್ಲಿ ಹೊಸದಾಗಿ ಮದುವೆ ಆದ ಜೋಡಿ ಒಂದಿದೆ. ಬಟೋಲ್ ಮತ್ತು ಮುಖ್ತಾರ್. ಅವನಿಗೆ ಹೆಂಡತಿ ಎಂದರೆ ವಿಪರೀತ ಮೋಹ ಮತ್ತು ಆ ಕಾರಣಕ್ಕೆ ವಿಪರೀತ ಅನುಮಾನ. ಹೆಂಡತಿ ಯಾರನ್ನೋ ನೋಡಿ ನಕ್ಕಳು ಎಂದಿರಲಿ, ಹೆಂಡತಿಯನ್ನು ನೋಡಿ ಯಾರೋ ನಕ್ಕ ಎನ್ನುವ ಕಾರಣಕ್ಕೆ ಹಾದಿರಂಪ ಮಾಡುತ್ತಾನೆ. ಅವರ ಜಗಳ ಮನೆಯೊಳಗಲ್ಲ, ಅಪಾರ್ಟ್ಮೆಂಟಿನ ಪಡಸಾಲೆಯಲ್ಲೇ ಆಗಬೇಕು. ಎಲ್ಲರಿಗೂ ಅದು ಎಷ್ಟು ಅಭ್ಯಾಸ ಆಗಿರುತ್ತದೆ ಎಂದರೆ, ಅದು ಶುರುವಾದ ತಕ್ಷಣ ಗಂಡಸರೆಲ್ಲಾ ಬಂದು ಅವನನ್ನು, ಹೆಂಗಸರೆಲ್ಲಾ ಬಂದು ಅವಳನ್ನು ಎಳೆದು ಬೇರೆ ಮಾಡುತ್ತಾರೆ. ನೆರೆಮನೆಯ ಒಬ್ಬ ಅಜ್ಜನಂತೂ ಮನೆಯೊಳಗಿನಿಂದ ಒಂದು ಚೇರ್ ಎಳೆದುಕೊಂಡು ಬಂದು, ಪ್ರಶಸ್ತ ಜಾಗದಲ್ಲಿ ಖುರ್ಚಿ ಹಾಕಿಕೊಂಡು ಕೂತು, ಒಂದು ಸಿನಿಮಾ ನೋಡುವಷ್ಟು ಸ್ವಾರಸ್ಯವಾಗಿ ಜಗಳ ನೋಡುತ್ತಾ ಕೂರುತ್ತಾನೆ. ಸಿಟ್ಟಿನ ಭರದಲ್ಲಿ ಮೊಕ್ತಾರ್ ಒಂದು ಸಲ ‘ತಲಾಕ್’ ಎಂದು ಕೂಗುತ್ತಾನೆ. ಮಿಕ್ಕವರು ಅವನನ್ನು ಅಷ್ಟಕ್ಕೇ ತಡೆಯುತ್ತಾರೆ. ಅಂದರೆ ಧಾರ್ಮಿಕತೆಯ ಲೆಕ್ಕದಲ್ಲಿ ಅವನ ಒಂದು ‘ತಲಾಖ್’ ಈಗಾಗಲೇ ಅವರ ಸಂಬಂಧದ ಒಂದು ಗಂಟನ್ನು ಕಳಚಿಹಾಕಿ ಆಗಿದೆ. ಮತ್ತೊಮ್ಮೆ ಇದೇರೀತಿ ಇನ್ನೊಂದು ಬೀದಿಜಗಳ ಆಗುತ್ತದೆ, ‘ತಲ್ಲಾಕ್’, ‘ತಲ್ಲಾಕ್’ ಎಂದು ಅವನು ಸಿಟ್ಟಿನಲ್ಲಿ ಕೂಗಿಬಿಡುತ್ತಾನೆ. ಒಂದು ಕ್ಷಣದ ಗಂಡಹೆಂಡತಿ ಆಗಿದ್ದವರು, ಇದ್ದಕ್ಕಿದ್ದಂತೆ ಏನೂ ಅಲ್ಲದವರಾಗಿ ಹೋಗಿಬಿಡುತ್ತಾರೆ. ಧರ್ಮ ಅವರಿಬ್ಬರ ಹೃದಯಗಳನ್ನೂ ಹರಿದುಹಾಕಿದೆ.

ಯಾವುದೇ ಸಂಬಂಧದ ಎಲ್ಲೆಗಳನ್ನು ಮೂರನೆಯವರು ನಿರ್ಧರಿಸಲಾಗುವುದಿಲ್ಲ. ಗಂಡನ ದೇಹಕ್ಕೆ ಸಂಗಾತಿಯಾಗಲೆಂದು ತಂದ ಹೆಣ್ಣನ್ನು ಗಂಡನ ಮನಸ್ಸಿನೊಳಗೆ ಹೆಜ್ಜೆ ಇಡದಂತೆ ತಡೆಯುವುದು ಹೇಗೆ? ಗಂಡನ ದೇಹವನ್ನು ಹಂಚಿಕೊಂಡಷ್ಟು, ಅವನ ಪ್ರೇಮವನ್ನು ಹಂಚಿಕೊಳ್ಳುವುದು ಅವಳಿಗೆ ಆಗುವುದೇ ಇಲ್ಲ…

ಇನ್ನೊಬ್ಬಳು ಹೆಣ್ಣಿದ್ದಾಳೆ, ಲುಬ್ನಾ, ಪ್ರೌಢೆ. ಪ್ರೀತಿಸಿದವನನ್ನು ಬಿಟ್ಟು ಅಮ್ಮ ತೋರಿಸಿದ್ದ ಗಂಡನ್ನು ಮದುವೆ ಆಗಿದ್ದವಳು. ಆದರೆ ಆ ಮದುವೆ ಬಾಳುವುದಿಲ್ಲ. ಕಡೆಗೆ ವಿಚ್ಛೇದನ ತೆಗೆದುಕೊಂಡು, ಆ ಪತ್ರವನ್ನು ಹಿಡಿದುಕೊಂಡು ಮೊದಲ ಪ್ರೇಮಿಯ ಬಳಿ ಬರುತ್ತಾಳೆ. ಅವನಿಗೆ ಈಗಾಗಲೇ ಮದುವೆ ಆಗಿದೆ. ಆದರೆ ಧರ್ಮ ನಾಲ್ಕು ಮದುವೆಗಳನ್ನು ಹಲಾಲ್ ಎನ್ನುತ್ತದೆ. ವಿಚ್ಛೇದನ ಎಂದರೆ ಛೀಮಾರಿ ಹಾಕುವ ಸಮಾಜದಲ್ಲಿ ಅವಳಿಗಿರಬಹುದಾದ ಇನ್ನೊಂದು ಆಯ್ಕೆ ಆಸ್ಟ್ರೇಲಿಯಾದಲ್ಲಿರುವ ತಮ್ಮನ ಬಳಿ ಹೋಗಿ, ಹೊಸ ಬದುಕು ಕಟ್ಟಿಕೊಳ್ಳುವುದು. ಅದಕ್ಕೆ ಮೊದಲು ಧಾರ್ಮಿಕ ಚೌಕಟ್ಟಿನೊಳಗೇ ಇರುವ ‘ಅಲ್ಪಾವದಿಯ ಮದುವೆ’ ಮಾಡಿಕೊಂಡು ಹಳೆಯ ಪ್ರೇಮಿಯೊಡನೆ ಬದುಕು ಸಾಧ್ಯವೇ ಎಂದು ನೋಡಬಹುದಲ್ಲಾ ಎಂದುಕೊಂಡು ಅದಕ್ಕೆ ಮುಂದಾಗುತ್ತಾಳೆ. ಅವನಿಗಾಗಿ ಅಡಿಗೆ ಮಾಡುತ್ತಾಳೆ, ಸಿಂಗಾರವಾಗುತ್ತಾಳೆ, ಕಾಯುತ್ತಾಳೆ. ಆದರೆ ಅವರಿಬ್ಬರ ನಡುವಿನ ಮಾಂತ್ರಿಕತೆ ಅವರಿಬ್ಬರ ವಯಸ್ಸಿನ ಹಾದಿಯಲ್ಲಿ ಎಲ್ಲೋ ಕಳೆದುಹೋಗಿದೆ… ಹಳೆಯ ಪ್ರೇಮವನ್ನು ನೆನಪಾಗಿ ಮಾತ್ರ ಇಡಬೇಕು. ನಾವು ಪ್ರೀತಿಸುತ್ತಲಿರುವುದು ‘ಅಂದಿನ’ ಅವನು ಅಥವಾ ಅವಳನ್ನು. ಇಂದು ನಾವು ಬೆಳೆದು ಬೇರೇನೋ ಆಗಿರುವಂತೆ ಅವರೂ ಮತ್ತೇನೋ ಆಗಿರುತ್ತಾರೆ. ನಮ್ಮ ‘ಇಂದಿಗೆ’ ಅವರ ‘ಇಂದು’ ಹೊಂದಲೇಬೇಕೆಂದಿಲ್ಲ. ಜೊತೆಯಾಗಿ ಬೆಳೆಯದ ಭೂತಕಾಲದ ಪ್ರೀತಿ ವರ್ತಮಾನಕ್ಕೆ ಸಲ್ಲುವುದು ಕಷ್ಟ.

ಇಲ್ಲಿ ಎಲ್ಲವೂ ‘ಧರ್ಮಸಮ್ಮತ’ವೆ! ಹಾಗಾಗಿ ಎಲ್ಲವೂ ಸರಳ, ಸುರಳೀತ ನಡೆಯಬೇಕು. ಆದರೆ ಧರ್ಮಸಮ್ಮತವಾದದ್ದು ಹೃದಯ ಸಮ್ಮತ ಆಗಿರಲೇಬೇಕೆಂದೇನೂ ಇಲ್ಲವಲ್ಲ? ತನಗೆ ಸಹಾಯಕಿಯಾಗುತ್ತಾಳೆ ಎಂದು ಮತ್ತೊಬ್ಬ ಹೆಣ್ಣನ್ನು ಸ್ವಾಗತಿಸಲು ಸಿದ್ಧವಾಗುವ ಅವಾತೆಫ್ ಗೆ ಆ ಹೆಣ್ಣು ತನ್ನ ಗಂಡನೊಂದಿಗಿರಲಿ ಮಕ್ಕಳ ಮನಸ್ಸಿನಲ್ಲಿ ಜಾಗ ಮಾಡಿಕೊಳ್ಳುವುದನ್ನೂ ಸಹಿಸಲಾಗುವುದಿಲ್ಲ. ಇದು ತನ್ನ ಮನೆ, ತನ್ನ ಪ್ರಪಂಚ, ಇದನ್ನು ಹಾಗೆಯೇ ಉಳಿಸಿಕೊಳ್ಳಬೇಕಾದರೆ ಆ ಗಲಾಟೆ ಮಾಡುವ ಮಕ್ಕಳನ್ನು ಮತ್ತು ಗಂಡನನ್ನು ತಾನೇ ಸಂಭಾಳಿಸಬೇಕು ಎಂದು ಅವಳಿಗೆ ಅರ್ಥವಾಗುತ್ತದೆ. ಬದುಕಿನಲ್ಲಿ ಎಲ್ಲವನ್ನೂ ಔಟ್ ಸೋರ್ಸ್ ಮಾಡಲು ಆಗುವುದಿಲ್ಲವಲ್ಲ… ಅದು ಅರಿವಾದ ಮರುದಿನ ಮುಂಜಾನೆ ಮೊದಲ ಸಲ ಅವಳು ಮಕ್ಕಳನ್ನು ಮುದ್ದಿಟ್ಟು ಎಬ್ಬಿಸುತ್ತಾಳೆ.


ಸಿಟ್ಟಿನಲ್ಲಿ ಹೆಂಡತಿಗೆ ಮೂರು ಸಲ ‘ತಲ್ಲಾಖ್’ ಎಂದು ಹೇಳಿದ ಗಂಡ ಈಗ ಹೆಂಡತಿಯೊಡನೆ ಮಾತನಾಡಲೂ ಅವರ ಮನೆಯವರ ಅನುಮತಿ ಬೇಡಬೇಕಾದ ಪರಿಸ್ಥಿತಿ ಎದುರಾಗಿ ಕಂಗೆಟ್ಟಿದ್ದಾನೆ. ಅವನಿಗೆ ಅವಳು ಬೇಕು, ಅವಳೇ ಬೇಕು. ಅವಳ ಮನೆಯ ಮಹಡಿಯ ಮೇಲೆ ಕದ್ದು ಹೋಗಿ ಅವಳನ್ನು ಭೇಟಿ ಮಾಡುತ್ತಾನೆ. ತಮಗೆ ಹುಟ್ಟಬಹುದಾದ ಮಕ್ಕಳನ್ನು ನೆನೆದು ಕಂಬನಿಗರೆಯುತ್ತಾನೆ. ಅವಳ ಒಂದು ಚುಂಬನಕ್ಕಾಗಿ ಬೇಡುತ್ತಾನೆ. ಈಗ ಮತ್ತೆ ಅವಳನ್ನು ಮದುವೆ ಆಗಬೇಕು. ಅದಕ್ಕಾಗಿ ಧರ್ಮದ ಮುಖಂಡರನ್ನು ಭೇಟಿ ಆಗುತ್ತಾನೆ. ಆದರೆ ಅದು ಸುಲಭ ಅಲ್ಲ. ಮತ್ತೆ ಅವಳನ್ನು ಮದುವೆ ಆಗಬೇಕಾದರೆ, ಆಕೆ ಅದಕ್ಕೆ ಮೊದಲು ಇನ್ನೊಬ್ಬನನ್ನು ವರಿಸಿ, ಅವನ ಜೊತೆ ಸಂಸಾರ ನಡೆಸಿರಬೇಕು. ಹೆಂಡತಿಯನ್ನು ನೋಡಿ ಯಾರೋ ಮುಗುಳ್ನಗೆ ಬೀರಿದರು ಎನ್ನುವುದನ್ನೇ ಸಹಿಸಲಾಗದ ಇವನು ಕಡೆಗೆ ಅದಕ್ಕೂ ಒಪ್ಪುತ್ತಾನೆ. ಆದರೆ ಯಾರಾದರೂ ಚೆನ್ನಾಗಿರುವವರನ್ನು ಹುಡುಕಿ, ಈಕೆಗೆ ಅವನೇ ಇಷ್ಟವಾಗಿ, ಅಲ್ಲೇ ಇರುತ್ತೇನೆ ಎಂದುಬಿಟ್ಟರೆ? ಯಾರೋ ದಿನಗೂಲಿಯವನನ್ನು ಹುಡುಕುತ್ತಾನೆ, ಹೆಂಡತಿಯನ್ನು ಅಲ್ಲಿಗೆ ಕರೆತರುತ್ತಾನೆ. ಆಗ ಹೆಂಡತಿ ಕೇಳುತ್ತಾಳೆ, ‘ಅಲ್ಲಾ, ಅವನನ್ನು ಮದುವೆ ಆಗಬೇಕಿರುವವಳು ನಾನು, ಅವನೊಡನೆ ಸ್ವಲ್ಪ ಕಾಲಕ್ಕಾದರೂ ಸರಿ ಸಂಸಾರ ಮಾಡಬೇಕಾದವಳು ನಾನು, ಅವನನ್ನು ನಾನೂ ಸಹ ಒಪ್ಪಬೇಕಲ್ಲವೆ?’. ಆದರೆ ಇಷ್ಟಾದರೂ ಅವನ ಸಿಟ್ಟು, ಅಸೂಯೆ ಕಡಿಮೆ ಆಗಿರುವುದೇ ಇಲ್ಲ. ಅವಳು ಕಡೆಗೂ ಅವನನ್ನು ಬಿಟ್ಟು ನಡೆದುಬಿಡುತ್ತಾಳೆ.

(ನಿರ್ದೇಶಕ ಅಸಾದ್ ಫೌಲಾದ್ಕರ್ (Assad Fouladkar)

ಲುಬ್ನಾ ತನ್ನ ಹಳೆಯ ಗೆಳೆಯನನ್ನು ‘ನಿಖಾ ಮುತಹ್’ ಎನ್ನುವ ಪದ್ಧತಿಯಲ್ಲಿ ವರಿಸಿರುತ್ತಾಳೆ. ಅದೊಂದು ಅಲ್ಪಾವಧಿಯ ವಿವಾಹ, ಗಂಡು ಹೆಣ್ಣು ಒಟ್ಟಿಗಿದ್ದು, ಪರಸ್ಪರರನ್ನು ಅರಿಯಲು ಧರ್ಮ ಕೊಡುವ ಅನುಮತಿ. ಹಾಗೆ ಮದುವೆ ಆಗಿದ್ದರೂ ಅವರು ಅದನ್ನು ಹೊರಗೆ ಹೇಳಿಕೊಳ್ಳುವಂತಿರುವುದಿಲ್ಲ. ಒಂದು ಸಲ ಮೂರನೆಯವರ ಕಣ್ಣಿಗೆ ತಾವು ಸಿಕ್ಕಿಹಾಕಿಕೊಳ್ಳಬಹುದು ಎಂದು ಅನ್ನಿಸಿದ ತಕ್ಷಣ, ಆ ಗೆಳೆಯ ತನ್ನ ಸಿಟ್ಟನ್ನೆಲ್ಲಾ ಅವಳೆಡೆಗೆ ತಿರುಗಿಸಿ, ‘ನೀನಂತೂ ನಡತೆಗೆಟ್ಟವಳು, ವಿಚ್ಛೇದಿತೆ, ನನ್ನ ಕತೆ ಹೇಳು, ನನಗೆ ಮದುವೆ ಆಗಿದೆ’ ಎಂದು ಸಿಟ್ಟಿನಲ್ಲಿ ಅಬ್ಬರಿಸುತ್ತಾನೆ. ಅವಳ ಮನಸ್ಸು ಮುರಿದುಬಿಡುತ್ತದೆ. ಒಂಟಿ ಬದುಕುವ ಲುಬ್ನಾಗೆ ದೈಹಿಕ ಸಾಂಗತ್ಯದ ಜೊತೆಜೊತೆಗೆ ಮಾನಸಿಕ ಸಾಂಗತ್ಯ ಮತ್ತು ಸಾಂತ್ವಾನದ ಅಗತ್ಯ ಇರುತ್ತದೆ. ಅವಳಿಗೆ ಬೇಕಿರುವುದು ಕಾಮವಲ್ಲ, ಆತುಕೊಳ್ಳುವ ಒಂದು ಸಂಬಂಧ. ಕಡೆಗವಳು ದುಃಖದಿಂದ ಅವನಿಗೆ ಹೇಳುತ್ತಾಳೆ, ‘ನೀನು ಒಂದು ಕನಸಾಗಿಯೇ ನನಗೆ ಹೆಚ್ಚು ಆಪ್ತನಾಗಿದ್ದೆ. ನಿನ್ನ ನೆನಪಿನಲ್ಲೇ ನಾನು ಬದುಕಿನ ಸಮಸ್ಯೆಗಳನ್ನು ಎದುರಿಸಲು ಧೈರ್ಯ ಮಾಡಿದ್ದೆ, ನೀನು ವಾಸ್ತವ ಆಗಬಾರದಿತ್ತು…’. ನಿಜ ಕಾಲಾಂತರದಲ್ಲಿ ನಮ್ಮ ಮನಸ್ಸಿನಲ್ಲಿರುವ ಕನಸುಗಳಿಗೂ ವಯಸ್ಸಾಗಿರುತ್ತದೆ, ಅವುಗಳಿಗೂ ರೆಕ್ಕೆ ಮೊಳೆತಿರುತ್ತದೆ ಅಥವಾ ಕಳಚಿರುತ್ತದೆ.

ಇಲ್ಲಿನ ಮೂರೂ ಹೆಣ್ಣುಗಳೂ ತಮ್ಮತಮ್ಮ ಸಂಬಂಧದ ಹಲವಾರು ತೊಡಕಿನಲ್ಲಿ ಸಿಲುಕಿಕೊಂಡಿರುತ್ತಾರೆ. ಧರ್ಮ ಅವರ ಜೊತೆಗಿಲ್ಲ, ರಾಜಕಾರಣ ಅವರ ನೆರವಿಗಿಲ್ಲ, ಸಮಾಜ ಅವರ ಬೆನ್ನಿಗೆ ನಿಲ್ಲುವುದಿಲ್ಲ. ಆದರೆ ಈ ಎಲ್ಲಾ ಚೌಕಟ್ಟಿನೊಳಗೂ ಅವರು ತಮ್ಮನ್ನು ತಾವು ಕಾಪಿಟ್ಟುಕೊಳ್ಳುವ ಅವರ ಮನೋಶಕ್ತಿ ಚಿತ್ರದ ವಸ್ತು. ಒಂದಿಷ್ಟು ಎಳೆ ತಪ್ಪಿದರೂ ಹಾಸ್ಯಾಸ್ಪದ ಅಥವಾ ಅಶ್ಲೀಲ ಆಗಬಹುದಾಗಿದ್ದ ಚಿತ್ರ ಇದು. ಆದರೆ ‘ನಗೆಯ ಕಡಲೊಳು ತೇಲಿ ಬರುವ ವಿಷಾದದ ಹಾಯಿದೋಣಿ’ಯಂತೆ ಆ ನಗುವಿನ ಆಳದಲ್ಲಿ ಪ್ರೇಮ ಕಾಮದ ಸಂಕಷ್ಟಗಳು ಮತ್ತು ಎರಡಕ್ಕೂ ಇರುವ ಸಂಬಂಧ ನಮ್ಮನ್ನು ಸೆಳೆಯುತ್ತದೆ. ಅದಕ್ಕೆ ಪೂರಕವಾಗಿ ಅಥವಾ ಸಾಂಕೇತಿಕವಾಗಿ ಬರುವುದು ಚಿತ್ರದಲ್ಲಿ ಪದೇ ಪದೇ ಬರುವ ಬೈರೂತ್ ನಗರದ ಎತ್ತರೆತ್ತರ ಕಟ್ಟಡಗಳು ಮತ್ತು ಅವುಗಳ ಮೇಲೆ ಒಂದರೊಡನೊಂದು ಬಲೆಯಂತೆ ಹೆಣೆದುಕೊಂಡಿರುವ ಸಂಕೀರ್ಣ ಕೇಬಲ್ ಗಳು. ಅವೆಷ್ಟು ಗೋಜಲಾಗಿರುತ್ತವೆ ಎಂದರೆ ಏನಾದರೂ ಕೆಟ್ಟರೆ ಯಾವ ಕೇಬಲ್ ಅನ್ನು ತೆಗೆದು ದುರಸ್ತಿಗೊಳಿಸಬೇಕು ಎಂದು ಅರ್ಥವೂ ಆಗದಷ್ಟು… ಆ ಎತ್ತರ ಕಟ್ಟಡಗಳಲ್ಲಿ ಹಗ್ಗಕ್ಕೊಂದು ಬುಟ್ಟಿ ಕಟ್ಟಿ ಹಣ್ಣು, ತರಕಾರಿ ಕೊಳ್ಳಲು ಮೇಲಿನಿಂದ ಇಳಿಬಿಟ್ಟಿರುತ್ತಾರೆ – ಯಾವುದೋ ಒಂದು ಬುಟ್ಟಿ ಇಳಿಬಿಟ್ಟು ಬದುಕನ್ನು ಒಂದಿಷ್ಟು ಸಹನೀಯಗೊಳಿಸಲು ಹೆಣಗುವ ನಮ್ಮೆಲ್ಲರ ಎದೆಯಾಳದ ಆಶಯದಂತೆ.