ಸಂಜೆ ಆರರ ಹೊತ್ತಿಗೆ ಮಗ್ರಿಬ್ ನಮಾಜಿಗೆ ಬಾಂಗ್ ಆಗುವ ಮೊದಲು ಹಿರಿಯರೆಲ್ಲ ಅಮವಾಸ್ಯೆ, ಪಾಡ್ಯ, ಚಂದ್ರ ದರ್ಶನದ ಲೆಕ್ಕಾಚಾರದಲ್ಲಿ ತೊಡಗಿದಾಗ ಮಕ್ಕಳಿಗೆಲ್ಲ ಒಂದುರೀತಿಯ ಸಂಭ್ರಮ. ರಮಜಾನ್ ತಿಂಗಳು ಪೂರ್ತಿ ಮದ್ರಸಾಕ್ಕೆ ರಜಾ. ಬೆಳಗ್ಗೆ ೮ರಿಂದ ೯.೩೦ರ ತನಕ, ಸಂಜೆ ಶಾಲೆ ಬಿಟ್ಟನಂತರ ೫ ರಿಂದ ೬ರ ತನಕ ಮಸೀದಿಯ ಪಕ್ಕದ ಹಾಲಿನಲ್ಲಿ ಕುರಾನ್ ಪಾಠ ಕಲಿಯುವ ಮದ್ರಸಾಕ್ಕೆ ಬಿಡುವು. ಶಾಲೆ ಎಂದಿನಂತೆ ಇದ್ದರೂ ಆಟ ಆಡುವ ಹೊತ್ತಿನಲ್ಲಿ ನಡೆಯುವ ಮದ್ರಸಾ ಪಾಠಕ್ಕೆ ಬಿಡುವು ಸಿಗುತ್ತದೆಂದರೆ ಚಿಲ್ಲರೆ ಸಂಗತಿಯೇನಲ್ಲ. ಅದೂ ಅಲ್ಲದೆ ಭಾನುವಾರ ಪೂರ್ತಿ ರಜಾ ಅನುಭವಿಸಬಹುದು. ಯಾಕೆಂದರೆ ಶಾಲೆಗೆ ಭಾನುವಾರ ರಜಾದಿನವಾದರೂ ಬೆಳಗ್ಗೆ ೮ ರಿಂದ ೧೧ಗಂಟೆಯತನಕ ಮದ್ರಸಾದಲ್ಲಿ ಕುರಾನ್ ಪಾಠವಿರುತ್ತದೆ. ಶಾಲೆಯ ಮನೆಕೆಲಸವೊಂದು ಮುಗಿಸಿದರೆ ಇನ್ನುಳಿದ ಹೊತ್ತು ರಮಜಾನಿನಲ್ಲಿ ಆಟವಾಡುವುದಕ್ಕೆ ಬಿಡುವೇ ಬಿಡುವು.

ಮಗ್ರಿಬ್ ನಮಾಜಿನ ಬಾಂಗ್ ಮುಗಿದ ಕೂಡಲೇ ನಮಾಜು ಶರು. ಅದು ಮುಗಿದ ಕೂಡಲೇ ಹೆಚ್ಚಿನವರು ಹೊರಗೆ ಬಂದು ಪಶ್ಚಿಮ ದಿಕ್ಕಿನ ಆಕಾಶದತ್ತ ಕತ್ತೆತ್ತಿ ನೋಡ ತೊಡಗಿದರು. ಮಕ್ಕಳನ್ನು ಕರೆದು ಆಕಾಶದಲ್ಲಿ ಕಾಣುತ್ತಿದ್ದ ಒಂದೇ ಒಂದು ನಕ್ಷತ್ರವನ್ನು ತೋರಿಸಿ ಅದರ ನೇರ ಕೆಳಗೆ ಚಂದ್ರ ಕಾಣುತ್ತಿದೆಯೋ ನೋಡ್ರೋ ಎನ್ನುವುದೇ ತಡ ನಾವೆಲ್ಲ ಬಿಟ್ಟಕಣ್ಣು ಬಿಟ್ಟು ಗಗನದತ್ತ ನೋಡ ತೊಡಗಿದೆವು. ನಮ್ಮ ಪೈಕಿ ದೊಡ್ಡವನೆನಿಸಿದ ಪುತ್ತಾಕನ ಮಗ ರಜಬು ಓ… ಅಲ್ಲಿ… ಎಂದು ದಿಗಂತವನ್ನು ತೋರಿಸಿದ. ಎಲ್ಲರೂ ಆ ಕಡೆ ನೋಡಿದರು. ಎಲ್ಲರ ದೃಷ್ಟಿಯೂ ಅವನು ಬೆರಳು ತೋರಿಸಿದ ಕಡೆ ನೆಟ್ಟಿತು. ‘ಹೌದು…ಹೌದು, ಓ… ಅಲ್ಲಿ! ಪುಣ್ಯಕ್ಕೆ ಮೋಡ ಇಲ್ಲದ ಕಡೆ ಕಾಣ್ತಾ ಇದೆ.’ ಎಂದು ಮಾತಾಡ ತೊಡಗಿದರು.

ನಾನು ತದೇಕ ಚಿತ್ತದಿಂದ ಅವರು ನೋಡುವ ಕಡೆಯೇ ನೋಡಿದೆ. ಸೂರ್ಯ ಮುಳುಗುವಾಗ ದಿಗಂತದಲ್ಲಿ ಕೆಂಪೇರುವಲ್ಲಿ ಬಂಗಾರ ವರ್ಣದ ಬೆಳಕಿನ ಅರ್ಧ ಚಂದ್ರ ಸಪೂರವಾಗಿ ಕಂಡು ಬಂದ. ಮೌಲವಿಯಾಗಿದ್ದ ನಮ್ಮ ಬಾಪ ರಮಜಾನಿನ ಪವಿತ್ರ ತಿಂಗಳ ಆಗಮನವನ್ನು ಸ್ವಾಗತಿಸುತ್ತಾ ಕೈಯೆತ್ತಿ ದುವಾಮಾಡ ತೊಡಗಿದರು. ಎಲ್ಲರೂ ತಲೆಯ ಮೇಲೆ ಕರ್ಚೀಪು ಕಟ್ಟಿಕೊಂಡು ದುವಾಕ್ಕೆ ಕೈ ಎತ್ತಿದರು. ದುವಾದ ಪ್ರತೀ ವಾಕ್ಯದ ಅಂತ್ಯದಲ್ಲಿ ಎಲ್ಲರೂ ‘ಆಮೀನ್’ ಎಂದು ದನಿಗೂಡಿಸಿದರು.

ದುವಾ ಮುಗಿದಾಗ ಎಲ್ಲರಿಗೂ ಸಂತೋಷ, ಸಂಭ್ರಮ. ಪರಸ್ಪರ ರಮಜಾನ್ ಮುಬಾರಕ್ ಹೇಳ ತೊಡಗಿದರು.

ಈ ಸಲ ನನಗೆ ಉಪವಾಸ ಮಾಡಲೇ ಬೇಕೆನಿಸಿತು. ನಾನು ಬಾಪಾನೊಂದಿಗೆ ನಾನು ಈ ಸಲ ನೋಂಬು ಮಾಡುತ್ತೇನೆ ಎಂದೆ.

ಮಧ್ಯಾಹ್ನದ ವರೆಗಿನ ನೋಂಬೋ ಅಲ್ಲ ಪೂರ್ತಿ ನೋಂಬೋ ? ಎಂದು ಬಾಪಾ ನಗುತ್ತ ಕೇಳಿದರು.

ಇಡೀ ನೋಂಬು. ಎಂದೆ ಗಂಭೀರವಾಗಿ.

ಹಾಗಾದರೆ ಅಮ್ಮನಿಗೆ ಹೇಳು ಎಂದರು.

ಓಡುತ್ತ ಮನೆಗೆ ಹೋಗುವಾಗ ದಾರಿಯಲ್ಲಿ ಪಳ್ಳಿಗುಡ್ಡೆಯ ಬಳಿ ದನವನ್ನು ಅಟ್ಟಿಸಿಕೊಂಡು ಹೋಗುವ ಅವ್ವಮಾದಳಿಗೆ ಹೇಳಿದೆ, ನಾಳೆಯಿಂದ ನೋಂಬು. ಮಾದ, ಕಂಡಿದೆ… ಅಮ್ಮನಿಗೆ ಹೇಳು, ರಾತ್ರಿ ತರಾಬಿಗೆ ಮನೆಗೆ ಬರುತ್ತೇನೆಂತ ಎನ್ನುತ್ತ ಅವಳು ಓಡುತ್ತಿರುವ ನನಗೆ ಮಾತ್ರವಲ್ಲ, ಕೋಟೆ ಬೀಡಿಗೆ ಕೂಡ ಕೇಳಿಸುವಷ್ಟು ಕೂಗಿ ಹೇಳಿದಳು. ಅವ್ವಮಾದನ ದೊಂಡೆ ಎಂದರೆ ಉತ್ಸವದಲ್ಲಿ ಕದೋಣಿ ಒಡೆದ ಸದ್ದಿನಂತೆ! ನಾಲ್ಕು ಮೈಲಿನ ತನಕ ಕೇಳುವಂತೆ ಅರಚುತ್ತಾಳೆ.

ಚುಮು ಚುಮು ಕತ್ತಲು ಆವರಿಸಿದ್ದರಿಂದ ಓಡುವ ವೇಗವನ್ನು ಸ್ವಲ್ಪ ಕಮ್ಮಿ ಮಾಡಿದೆ. ದಾರಿಯಲ್ಲಿ ಯಾರೋ ಮೂರು ಮಂದಿ ಹೆಂಗಸರು ಮಾತಾಡುತ್ತ ಹೋಗುತ್ತಿದ್ದರು. ಬೆಸ್ತರ ಹೆಂಗಸರು ಮೀನು ಮಾರಾಟ ಮಾಡಿ ಮಾರ್ಕೆಟಿನಿಂದ ಹಿಂದಕ್ಕೆ ಬರುವವರು. ಕೊಯಪಯ ಮಾತಾಡುತ್ತ ವೀಳ್ಯ ಜಗಿದು ಎಂಜಲನ್ನು ರಸ್ತೆ ತುಂಬ ಉಗಿಯುತ್ತ ನಡೆಯುತ್ತಿದ್ದರು. ತಲೆಯ ಮೇಲೆ ಖಾಲಿ ಬುಟ್ಟಿ, ಅದರೊಳಗಿಂದ ಕಾಣುವ ಅಡಕೆಯ ಹಾಳೆಗಳು. ಮೀನಿನ ವಾಸನೆ ಅಲ್ಲೆಲ್ಲ ಹರಡಿತ್ತು. ನಮ್ಮ ಮನೆಯ ನೆರೆಹೊರೆಯ ಸಂಕಿ, ನರ್ಸಿ, ಅಕ್ಕಿ ಮರಕಾಲ್ದಿಯರು. ರಸ್ತೆಯಲ್ಲಿ ಮುಂದೆ ದಟ್ಟವಾಗಿ ಬೆಳೆದಿರುವ ಆಲದ ಮರದ ಸಾಲು ಅಲ್ಲಿಂದ ಸ್ವಲ್ಪ ದೂರದ ತನಕ ಕತ್ತಲು ಗವ್ವನೆ ಹರಡಿಕೊಂಡಿರುವಂತೆ ಮಾಡಿದೆ. ಈ ಸಾಲು ಆಲದ ಮರದಡಿಯ ಕತ್ತಲೆಯಲ್ಲಿ ಕುಡ್ಪಲ್ ಭೂತ ಇದೆ ಅನ್ನುವ ಪುಕಾರು ಊರಲ್ಲೆಲ್ಲ ಹಬ್ಬಿದೆ. ಅದರ ಹಿನ್ನೆಲೆ ಹಲವಾರು ಅಂತೆ ಕಂತೆಯ ಕತೆಗಳು ಜನಜನಿತವಾಗಿದೆ. ಈ ಕಾರಣಕ್ಕಾಗಿ ಬೆಸ್ತ ಹೆಂಗಸರು ಹೆದರಿ, ತಮ್ಮ ನಡಿಗೆಯ ವೇಗವನ್ನು ಕಮ್ಮಿ ಮಾಡಿಕೊಂಡಿದ್ದರು. ಧೈರ್ಯಕ್ಕೆ ಯಾರಾದರೂ ಪರಿಚಯಸ್ಥ ಗಂಡಸರು ದಾರಿಯಲ್ಲಿ ಬರುತ್ತಾರೇನೂ ಅಂತ ಕಾಯುತ್ತ ಮೆಲ್ಲನೆ ನಡೆಯುತ್ತಿದ್ದರು. ತಲೆಯ ಮೇಲೆ ಮೀನು ತುಂಬಿದ ಬುಟ್ಟಿ ಇದ್ದರೆ ಕರೆದರೂ ನಿಲ್ಲುವವರಲ್ಲ. ಓಡುತ್ತಾ ಹೋಗಿ ಮಾರ್ಕೆಟ್ಟಿನಲ್ಲೇ ಇವರು ನಿಲ್ಲೋದು. ಮಾರ್ಕೆಟ್ಟಿನಲ್ಲೂ ಮೀನು ಮಾರುವಾಗ ಚೌಕಾಸಿ ಮಾಡಿದಾಗ ಸಿಟ್ಟು ಬಂದರೆ ಗಿರಾಕಿಗಳ ಮುಖಕ್ಕೆ ರಾಚುವಂತಹ ಮಾತು ಹೇಳಿ ಬೆವರಿಳಿಸುವ ಧೈರ್ಯಗಾತಿಯರು. ಅಂತಹ ಧೈರ್ಯದ ಓಟಗಾರ್ತಿಯರು ಈ ಮುಸ್ಸಂಜೆಯಲ್ಲಿ ಭೂತಕ್ಕೆ ಹೆದರಿ ಕಾಲಡಿಯ ಇರುವೆಗಳು ಕೂಡ ಸಾಯದಂತೆ ಮೆಲ್ಲನೆ ನಡೆಯುತ್ತಿದ್ದರು. ನನ್ನನ್ನು ಕಂಡ ಕೂಡಲೇ ನೀನಾ ಮಗ ಮೋನು? ಸ್ವಲ್ಪ ಮೆಲ್ಲಗೆ ಕತ್ತಲೆಯಲ್ಲಿ, ಒಟ್ಟಿಗೆ ಪೋಯಿ ಎಂದರು. ಬ್ಯಾರ್‍ಲೆಗ್ ಭೂತ ದಾಲ ಮಲ್ಪುಜ್ಜಿ ಅಂತ ಅವರೊಳಗೆ ತುಳುವಿನಲ್ಲಿ ಬ್ಯಾರಿಗಳಿಗೆ ಭೂತಯೇನೂ ಮಾಡಲಾರದು ಎಂದು ಗೊಣಗಿಕೊಂಡರು.

ನರ್ಸಿ ಮರಕಾಲ್ತಿಯ ಸ್ವರ ಕೇಳಿ ನಾನು ಬೆಚ್ಚಿ ಬಿದ್ದೆ! ಮನೆಯಲ್ಲಿ ಅಮ್ಮ ಮಗೂ ಎನ್ನುವ ಅರ್ಥದಲ್ಲಿ ‘ಮೋನು’ ಎಂದು ಕರೆದಂತೆ ನಮ್ಮ ಹಳ್ಳಿ ಕೋಟೆಗ್ರಾಮದಲ್ಲಿ ಎಲ್ಲರೂ ನನ್ನನ್ನು ಕರೆಯುವುದು ‘ಮೋನು’ ಎಂದೋ ಇಲ್ಲವೇ ‘ಗುರುಕುಲ ಮಗ’ ಎಂದೋ ಕರೆಯುತ್ತಾರೆ. ಶಾಲೆಯ ಸಹಪಾಠಿಗಳನ್ನು ಬಿಟ್ಟು. ಯಾರು ನನ್ನನ್ನು ನಿಜವಾದ ಹೆಸರಲ್ಲಿ ಕರೆಯುವುದಿಲ್ಲ, ನರ್ಸಿ ಮರಕಾಲ್ದಿ ಈ ಗುಂಪಿನಲ್ಲಿ ಇದ್ದಾಳೆಂದು ತಿಳಿದು ನಾನು ಅವರಿಂದ ಸ್ವಲ್ಪ ಅಂತರ ಇಟ್ಟುಕೊಂಡು ದೂರದಲ್ಲಿ ನಡೆಯ ತೊಡಗಿದೆ. ಈ ನರ್ಸಿಅಕ್ಕ ಬರೀ ಹೇಸಿಗೆ! ಅವಳು ಚಿಕ್ಕ ಮಕ್ಕಳನ್ನು ಕಂಡ ಕೂಡಲೇ ಚಡ್ಡಿಗೆ ಕೈಹಾಕಿ ‘ಮಿಣ್ಣಿ ತೋರಿಸು’ ಎಂದು ಸತಾಯಿಸುವಳು. ಅಪ್ಪಿ ಮುದ್ದು ಮಾಡುವಳು. ಒಮ್ಮೆ ಅಮ್ಮ ನೊಂದಿಗೆ ದೂರು ಹೇಳಿದ್ದೆ ‘ಇಸ್ಸಿ… ಅವಳೆಂತ ಹೇಸಿಗೆ’ ಎಂದಾಗ ಅಮ್ಮ ಬಿದ್ದು ಬಿದ್ದು ನಕ್ಕಿದ್ದಳು. ‘ಅವಳಿಗೆ ಗಂಡು ಮಕ್ಕಳೆಂದರೆ ತುಂಬ ಪ್ರೀತಿ’ ಎಂದಿದ್ದಳು. ಈಗ ನಾನು ಐದನೇ ಕ್ಲಾಸಿನಲ್ಲಿ ಕಲಿಯುವ ಹುಡುಗನಾದ್ದರಿಂದ ಅವಳು ಹಾಗೆ ಮಾಡುವುದಿಲ್ಲ. ಬದಲಿಗೆ ಅಮ್ಮ ಮೀನು ಖರೀದಿ ಮಾಡುವಾಗ ಒಂದರೆಡು ಹೆಚ್ಚೇ ಮೀನು ಹೆಕ್ಕಿ ಪಾತ್ರೆಗೆ ಹಾಕಿ ‘ಇದು ನಮ್ಮ ಮೋನುಗೆ’ ಅಂತ ಹೇಳಿ ಕೊಡುವಳು. ಆದರೂ ಕೂಡ ಅವಳು ಹತ್ತಿರ ಬರುತ್ತಾಳೇನೋ ಎನ್ನುವ ಅನುಮಾನ ಯಾವಾಗಲೂ ನನಗೆ ಇರುತ್ತಿತ್ತು. ಅದಕ್ಕಾಗಿ ಸ್ವಲ್ಪ ಅಂತರ ಇಟ್ಟುಕೊಂಡೇ ಇರುತ್ತಿದ್ದೆ.

ನರ್ಸಕ್ಕಾ, ನಾಳೆಯಿಂದ ನಮಗೆ ಉಪ್ಪಾಸ.. ಎಂದೆ.

ಅಂದ, ಮಗಾ… ಸಂಜೆಯ ಪಿರ್‍ನಿ, ಸೇಮೆಪಾಯಸ, ಪತ್ತಿರಿ ನನಗೂ ತೆಗೆದಿಡಲಿಕ್ಕೆ ನಿಮ್ಮಮ್ಮನಿಗೆ ಹೇಳು ಎಂದಳು. ಅವಳಿಗೆ ನಮ್ಮ ಉಪವಾಸವೆಂದರೆ ‘ಉಪ್ಪಾಸ’ ವಿಶೇಷ ತಿಂಡಿ ಅಡುಗೆಯ ಒಂದು ತಿಂಗಳ ಹಬ್ಬವೆಂದೇ ಅರ್ಥ.

ಮಾತಾಡುತ್ತ ನಗುತ್ತ ಅವರೆಲ್ಲ ಆಲದ ಮರದಡಿಯ ಕತ್ತಲನ್ನು ದಾಟಿದ್ದೇ ತಿಳಿಯಲಿಲ್ಲ. ಕುಡ್ಪಲ್ ಭೂತದ ಭಯ ಮಾತಿನ ಮಧ್ಯೆ ಎಲ್ಲಿ ಮಯವಾಯಿತೋ! ಒಮ್ಮೆ ದಟ್ಟ ಮರಗಳು ಮೂಡಿಸಿದ ಕತ್ತಲನ್ನು ದಾಟಿದ ನಂತರ ದಾಪುಗಾಲು ಹಾಕುತ್ತ ಹೆಂಗಸರೆಲ್ಲ ಹೊಸ ಉಲ್ಲಾಸದಿಂದ ನಡೆದರು.

ಮಣ್ಣಿನ ರಸ್ತೆ ಮುಗಿದಾಗ ಗದ್ದೆಯಂಚಿನ ಕಟ್ಟೆ ಪುಣಿಯಲ್ಲಿ ನಡೆದು ಹೋಗಬೇಕು. ದಟ್ಟ ಹಸುರು ಬತ್ತದ ಪೈರು ಬೆಳೆಯುತ್ತಿರುವ ಗದ್ದೆಗಳ ಮಧ್ಯೆ ಬೆಸ್ತರ ಹೆಂಗಸರು ತಲೆಯ ಮೇಲೆ ಮೀನು ತುಂಬಿದ ಬುಟ್ಟಿಗಳನ್ನು ಕೈಯಲ್ಲಿ ಹಿಡಿಯದೆ ಸರಿತೂಗಿಸಿಕೊಂಡು ಇರುವೆ ಸಾಲಿನಂತೆ ನಡೆದು ಹೋಗುವುದನ್ನು ಹಗಲು ಹೊತ್ತು ದೂರದಲ್ಲಿ ನಿಂತು ನೋಡುವುದೇ ಒಂದು ರೀತಿಯಲ್ಲಿ ಕಣ್ಣಿಗೆ ಹಬ್ಬ!

ಮನೆಗೆ ಹೋದವನೇ ಅಮ್ಮನಿಗೆ ಹೇಳಿದೆ ನಾಳೆ ನೋಂಬು. ನನಗೆ ನೋಂಬು ಹಿಡಿಯಬೇಕು.

ಆಯಿತು ಮಾರಾಯ… ನೀನಿನ್ನು ಚಿರಿಪಿರಿ ಮಾಡುತ್ತಿರಬೇಡ, ಅತ್ತಲಕ್ಕೆಲ್ಲ ತಯಾರು ಮಾಡಬೇಕು. ನಿನ್ನ ಅಕ್ಕ ಎಲ್ಲಿ ಹೋದ್ಲು ನೋಡು. ಹಟ್ಟಿಯಲ್ಲಿ ದನಗಳಿಗೆ ಹುಲ್ಲು ಹಾಕಲಿಕ್ಕೆ ಹೋಗಿರಬೇಕು. ಅವಳನ್ನು ಕರಿ, ಬೇಗ ಬರಬೇಕಂತ ಹೇಳು ನೋಡುವ. ಕೆಲಸ ರಾಶಿ ಬಿದ್ದಿದೆ ಎಂದಳು.

ಬ್ಯಾರಿ ಭಾಷೆಯಲ್ಲಿ ಉಪವಾಸ ಮಾಡುವುದು ಅನ್ನುವುದಕ್ಕೆ ‘ನೋಂಬು ಹಿಡಿಯುವುದು’ ಎಂದು ಹೇಳುವುದು. ನನ್ನ ತಲೆಯಲ್ಲಿ ನೋಂಬು ಹಿಡಿಯುವುದು ಅಂದರೆ ಅದೇನೋ ಮೀನಿನಂತಹ ಏನೋ ಒಂದು ಇರಬೇಕು. ಅದನ್ನು ಹಿಡಿದರೆ ಮಾತ್ರ ನೋಂಬು ಆಗುವುದು ಎಂದಿತ್ತು. ಹಟ್ಟಿಯಲ್ಲಿ ಲಾಟೀನು ದೀಪ ಹಿಡಿದುಕೊಂಡು ಹುಲ್ಲು ಹಾಕುತ್ತ ಗಂಗೆ ದನದ ತಲೆ ತಡವುತ್ತ ಇದ್ದ ಅಕ್ಕನನ್ನು ಕರೆದೆ, ಉಮ್ಮ ಕರೀತಿದ್ದಾರೆ, ಬೇಗ ಬರಬೇಕಂತೆ, ನಾಳೆ ನೋಂಬು ಎಂದೆ. ಅವಳು ‘ಹೂಂ…’ ಎಂದಳು. ನಮ್ಮ ಹಟ್ಟಿಯಲ್ಲಿ ಮೂರು ದನಗಳಿವೆ. ಒಂದು ಹಾಲು ಕೊಡುವ ಗಂಗೆ. ಅದಕ್ಕೊಂದು ಮುದ್ದಾದ ಪುಟ್ಟ ಕರು. ಮತ್ತೊಂದು ಕಾಳಿ, ಕಪ್ಪುದನ, ಅದು ಹಾಲು ಕೊಡುವುದು ನಿಲ್ಲಿಸಿದೆ, ‘ಬಚ್ಚೆಲ್… ತೆನೆ ಇದೆ’ ಅಂತಾಳೆ ಉಮ್ಮ. ಇನ್ನು ಸ್ವಲ್ಪ ಸಮಯದಲ್ಲಿ ಕರು ಹಾಕಲಿದೆ. ಇನ್ನೊಂದು ಗಂಗೆಯ ಮಗಳು ಬಿಳೀ ಹಸು ‘ಬೊಳ್ಳಿ’ ಅದು ಇನ್ನೂ ತೆನೆ ಬಂದಿಲ್ಲ. ‘ಅನೇಕಬಾರಿ ತನಿಯನ ಹೋರಿಯ ಬಳಿ ಕೊಂಡು ಹೋದರೂ ತೆನೆ ಬಂದಿಲ್ಲ’ ಅಂತಿದ್ದಳು ಉಮ್ಮ. ‘ಇದನ್ನು ಸಾಕೂದು ಬರೀ ದಂಡಕ್ಕೆ. ಇಷ್ಟೆತ್ತರಕ್ಕೆ ಬೆಳೆದಿದೆ ಅದು ಹೀಗೆ ಇದ್ದರೆ ಯಾರಾದರೂ ಪೈರಿನವರು(ದನದ ವ್ಯಾಪಾರಸ್ಥರು) ಬಂದರೆ ಮಾರಿ ಬಿಡಬೇಕು’ ಎನ್ನುತ್ತಿದ್ದಳು. ಅಮ್ಮ ಬೆಳಗ್ಗೆ ಸಂಜೆ ಗಂಗೆಯ ಹಾಲು ಕರೆಯುತ್ತಾಳೆ. ಮನೆಗೆ ಬೇಕಾದಷ್ಟು ಇಟ್ಟುಕೊಂಡು ಉಳಿದದ್ದನ್ನು ಮಾರುತ್ತಾಳೆ. ಮಾರುವಾಗ ಅಮ್ಮ ಹಾಲಿಗೆ ನೀರು ಬೆರೆಸುವುದಿಲ್ಲ. ಅದು ಇಸ್ಲಾಮಿನಲ್ಲಿ ನಿಷಿದ್ಧ ಅನ್ನುತ್ತಿದ್ದಳು. ಅದಕ್ಕೇ ನಮ್ಮ ಮನೆಯ ಹಾಲಿಗೆ ತುಂಬ ಬೇಡಿಕೆ. ನಮಗೆ ಬೇಕು, ನಮಗೆ ಬೇಕು ಅಂತ ಊರವರು ಕೇಳುತ್ತಿದ್ದರು. ಹೆಚ್ಚಾಗಿ ನೆರೆ ಮನೆಯ ದೇಜು ಮಾಸ್ಟ್ರ ಹೆಂಡತಿಗೇ ಖಾಯಮ್ಮಾಗಿ ಉಮ್ಮ ಹಾಲುಕೊಡುವುದು. ಅವರು ಉಮ್ಮನ ಖಾಸ ದೋಸ್ತು. ಮಾತ್ರವಲ್ಲ, ಅವರು ಹಾಲಿನ ಹಣ ತಿಂಗಳಿಗೊಮ್ಮೆ ಸರಿಯಾಗಿ ಲೆಕ್ಕ ಮಾಡಿ ಕೊಡುತ್ತಾರೆನ್ನುವುದು ಇದಕ್ಕೆ ಮುಖ್ಯ ಕಾರಣ. ನನಗೂ ಅವರೆಂದರೆ ಇಷ್ಟ. ಅವರ ಮನೆಯಲ್ಲಿರುವ ರಾಮಾಯಣ ಮಹಾಭಾರತದ ಕತೆ ಪುಸ್ತಕ ಓದುವುದಕ್ಕೆ ಹೋಗುತ್ತೇನೆ. ಇಲ್ಲೇ ಓದಿ, ಇಲ್ಲೇ ಪುಸ್ತಕವನ್ನು ಇಡಬೇಕು, ಅಂತ ಮಾಸ್ಟ್ರು ಕಟ್ಟುನಿಟ್ಟಾಗಿ ಹೇಳುತ್ತಾರೆ.

‘ಹಟ್ಟಿಯ ಬಾಗಿಲಿರುವಲ್ಲಿ ಕಟ್ಟಿದ ತೊಡಮೆ ದಾಟಿ ಬರುವಾಗ ಅಕ್ಕನನ್ನು ನೋಂಬು ಇರುವುದೆಲ್ಲಿ ?’ ಎಂದೆ.

ಅವಳು ‘ಯಾಕೆ?’ ಅಂದಳು.

‘ನಾಳೆ ನಾನು ನೋಂಬು ಹಿಡಿಯ ಬೇಕಲ್ಲಾ?’

‘ನೋಂಬು ಇರೋದು ಚೋಂಬಿನ ಗುಳಿಯಲ್ಲಿ..’ ಎಂದು ಅಕ್ಕ ಬಿದ್ದು ಬಿದ್ದು ನಕ್ಕಳು.

ಚೋಂಬಿನ ಗುಳಿಯಲ್ಲಿ ನೋಂಬಾ..? ಅಂದರೆ ಕೆಸುವಿನ ಗಿಡದ ಬುಡದಲ್ಲಿ ಇರ್ತದಾ ? ಅದನ್ನು ಹಿಡಿಯುವ ವಿಧಾನ ಹೇಗೆ ಎಂದು ಯೋಚಿಸಿದೆ.

‘ಏ… ಪೆದ್ದೇ … ಹಾಗಲ್ವೋ… ನೋಂಬು ಅಂದರೆ ಮುಂಜಾನೆ ಅತ್ತಲಕ್ಕೆ (ಸೆಹರಿ) ಎದ್ದು ಊಟ ಮಾಡಿ ನಾಳೆಯದಿನ ಅಲ್ಲಾಹನಿಗಾಗಿ ನೋಂಬು ಮಾಡುತ್ತೇನೆಂತ ನಿಯತ್ತು ಮಾಡುವುದು. ಸುಬಹದಿಂದ ಮಗ್ರಿಬ್ ನಮಾಜಿನ ಬಾಂಗ್ ತನಕ ಏನೂ ತಿನ್ನದೆ, ಬಾಯಿಯಲ್ಲಿ ಒಟ್ಟಾದ ಉಗುಳು ನೀರು ಕೂಡ ನುಂಗದೆ ಉಪವಾಸ ಮಾಡುವುದು…’ ಎಂದಳು.

ಅಪ್ಪ ಅತ್ತಲಕ್ಕಾಗಿ (ಸೆಹರಿಗಾಗಿ)ಪೇಟೆಯಿಂದ ಮೀನು ತರಕಾರಿ ತಂದರು.

‘ಇನ್ನು ತರಾವಿ ನಮಾಜು ಮುಗಿದು ಬರುವಾಗ ತುಂಬ ತಡವಾಗ್ತದಲ್ಲ, ಸ್ವಲ್ಪ ಸಜ್ಜಿಗೆ ಅವಲಕ್ಕಿ ಮಾಡಿದ್ದೇನೆ ತಿಂದು ಹೋಗಿ’ ಎಂದು ಅಮ್ಮ ಹೇಳಿದಳು.

ನಾನೂ ತರಾವಿ ನಮಾಜಿಗೆ ಅಪ್ಪನೊಟ್ಟಿಗೆ ಹೋಗ್ತೇನೆ ಎಂದು ಹಟ ಹಿಡಿದೆ.

ಅಲ್ಲಿ ಮಕ್ಕಳೊಟ್ಟಿಗೆ ಸೇರಿ ತಂಟೆ, ಗಲಾಟೆ ಮಾಡಕೂಡದು ಎಂದು ಬಾಪ ಎಚ್ಚರಿಸಿದರು.

‘ಇಲ್ಲಾಪ್ಪ… ನಾನು ಸುಮ್ಮನಿರ್ತೇನೆ, ಅದು ಗಲಾಟೆ ಮಾಡೋದು ಇಸ್ಮಾಲಿ, ಶಾಬು, ರಜಬು…’ ಎಂದೆ.

ಉಮ್ಮ ಕೊಟ್ಟ ಸಜ್ಜಿಗೆ ಅವಲಕ್ಕಿ ತಿಂದೆವು. ಬಿಳಿ ಪೈಜಾಮ ಬಿಳಿ ಕುರ್ತ ತೊಟ್ಟು ತಲೆಗೊಂದು ಬಿಳಿ ಲೇಸಿನ ತೊಪ್ಪಿ ಇಟ್ಟುಕೊಂಡು ಜಾಪಿನಿಂದ ಬಾಪಾನ ಹಿಂದೆ ಮಸೀದಿಗೆ ಹೊರಟೆ.

ಕತ್ತಲೆ ಆಗಲೇ ದಟ್ಟವಾಗಿ ಆವರಿಸಿದ್ದರಿಂದ ಬಾಪಾ ಆರು ಶೆಲ್ಲಿನ ದೊಡ್ಡ ಟಾರ್ಚು ಹಿಡಿದು ಬೆಳಕು ಹಾಯಿಸುತ್ತಿದ್ದರು. ಗದ್ದೆಯಂಚಿನ ಕಟ್ಟಪುಣಿಯ ಮೇಲೆ ಕತ್ತಲೆಯಲ್ಲಿ ನಡೆಯುವಾಗ ಹಾವುಗಳು ಕಾಲಿಗೆ ತಾಗುವುದೂ ಇದೆ. ಹೆಚ್ಚಿನ ಸಲ ವಿಷವಿಲ್ಲದ ಕೇರೆ ಹಾವು ಮತ್ತು ನೀರೊಳ್ಳೆ ಹಾವುಗಳು ಜಾಸ್ತಿ. ಒಮ್ಮೊಮ್ಮೆ ವಿಷದ ಕಂದೊಡಿ, ಕಟ್ಟುಹಾವು, ಸರ್ಪ ಮುಂತಾದವುಗಳನ್ನೂ ಬಾಪ ರಾತ್ರಿ ಇಶಾ ನಮಾಜು ಮುಗಿಸಿ ಮನೆಗೆ ಬರುವಾಗ ಕಂಡದ್ದಿದೆ. ಮಳೆಗಾಲದಲ್ಲಿ ಪುಣಿಯ ಬದಿಯ ಕೆರೆಯಲ್ಲಿ ನೀರು ತುಂಬಿದಾಗ ಮಡೆಂಜಿ, ಮುಗುಡು ಮೀನುಗಳೂ ಹುಲ್ಲುಗಳ ಮಧ್ಯೆ ಬಂದು ಕೂತು ನುಸಿ, ಕೀಟಗಳನ್ನು ಹಿಡಿಯುವುದಿದೆ. ಮನುಷ್ಯರು ಹತ್ತಿರಬಂದದ್ದು ತಿಳಿದ ಕೂಡಲೇ ಪುಳಕ್ಕನೆ ನೀರಿಗೆ ಹಾರಿಬಡುತ್ತದೆ. ನೆರೆಮನೆಯ ಯಾದವನಾದರೆ ಮೆಲ್ಲನೆ ಹೆಜ್ಜೆ ಹಾಕಿ ಬಂದು ಈ ಮಡೆಂಜಿ, ಮುಗುಡು ಮಿನುಗಳನ್ನು ಕೈಯಲ್ಲೇ ಹಿಡಿಯುತ್ತಾನೆ, ಇಲ್ಲವೇ ಹುಲ್ಲು ಕೊಯ್ಯುವ ಪರ್‍ಕತ್ತಿಯಿಂದ ಕಚಕ್ಕನೆ ಕಡಿದು ಚೀಲಕ್ಕೆ ಹಾಕಿಕೊಳ್ಳುತ್ತಾನೆ. ಇಕ್ಕಟ್ಟಿನ ಕಟ್ಟಪುಣಿಯಲ್ಲಿ ತೂರಾಡುತ್ತ ಬರುವ ಕಳ್ಳು, ಸಾರಾಯಿ ಕುಡಿದವರು ಅನೇಕಬಾರಿ ಗದ್ದೆಯ ಕೆಸರಲ್ಲಿ ಬಿದ್ದು ಎದ್ದದ್ದಿದೆ. ಇಂತಹ ಸಪೂರ ಕಟ್ಟಪುಣಿ ಹಾದಿಯಲ್ಲಿ ಒಮ್ಮೊಮ್ಮೆ ಬಾಪ ಸೈಕಲ್ಲು ಹೊಡೆದುಕೊಂಡು ಬರುವುದಿದೆ. ಹೀಗೆ ಬ್ಯಾಲೆನ್ಸ್ ಮಾಡಿಕೊಂಡು ಈ ದಾರಿಯಲ್ಲ ಸೈಕಲ್ ಬಿಡುವವರು ಊರಲ್ಲಿ ಎರಡೋ ಮೂರು ಮಂದಿ ಮಾತ್ರ. ಕಟ್ಟಪಣಿ ಹಾದಿ ದಾಟಿದಾಗ ಕೋಟೆ ಬೀಡಿನ ಮನೆಯ ಬಳಿ ರಸ್ತೆ ಸಿಗುತ್ತದೆ. ಅಲ್ಲಿಂದ ಮಣ್ಣಿನ ರಸ್ತೆ ಶುರುವಾಗಿ ಪಳ್ಳಿಗುಡ್ಡೆ ದಾಟಿ ಸರಾಗವಾಗಿ ಕಟ್ಪಾಡಿ ಪೇಟೆಯ ತನಕ ನಡೆಯಬಹುದು.

ಪಳ್ಳಿಗುಡ್ಡೆಯ ರಸ್ತೆಯಲ್ಲಿ ನಡೆದು ನಾವು ಮಸೀದಿ ತಲಪುವಾಗ ಇಶಾ ನಮಾಜಿಗೆ ಹೊತ್ತಾಗಿತ್ತು. ಬಾಂಗ್ ಕೊಡುವ ಮುಕ್ರಿ ಮಮ್ಮದಾಕ ಬಾಂಗ್ ಕೊಡಲು ಶುರು ಮಾಡಿದರು. ಅಲ್ಲೆಲ್ಲ ನಮಾಜಿಗೆ ಬಹಳ ಜನ ಸೇರಿದ್ದರು. ರಮಜಾನಿನ ಮೊದಲನೇ ತರಾವೀ ನಮಾಜು ಮಾಡಲು ಹೆಚ್ಚು ಸಂಖ್ಯೆಯಲ್ಲಿ ಜನ ಬರುತ್ತಾರೆ. ನಂತರದ ದಿನಗಳಲ್ಲಿ ಸಂಖ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ. ಮತ್ತೆ ಅಷ್ಟೇ ಜನ ಸೇರುವುದು ಇಪ್ಪತ್ತೇಳನೆಯ ವಿಶೇಷ ಲೈಲತುಲ್ ಕದ್‌ರ್ ದಿನ. ಬಾಪ ಇಮಾಮ್ ಕೂಡ ಆದದ್ದರಿಂದ ಹೀಗೆ ಮಾಡಕೂಡದು. ದಿನವೂ ತರಾವೀ ನಮಾಜಿಗೆ ಬಿಡದೆ ಬರಬೇಕು ಎಂದು ಆಗಾಗ ಹೇಳುತ್ತಿದ್ದರೂ ಜನ ಎಂದಿನಂತೆಯೇ ಬದಲಾಗುವುದಿಲ್ಲವೆಂದು ಅವರು ಬೇಸರದಿಂದ ಹೇಳುವುದಿದೆ. ನೋಂಬು, ನಮಾಜು, ಝಕಾತು ಮಾಡಿ ಅಂತ ಬಾಪ ಹೇಳುವುದನ್ನು ತಮ್ಮ ಎಂದಿನ ‘ವಾಳ್’ ಪ್ರವಚನದಲ್ಲಿ ಹೇಳುತ್ತಲೇ ಇರುತ್ತಾರೆ. ‘ಹೇಳುವುದು ನನ್ನ ಕರ್ತವ್ಯ ಪಾಲಿಸುವುದು ಬಿಡುವುದು ನಿಮಗೆ ಬಿಟ್ಟದ್ದು ’ ಎನ್ನುತ್ತಾರೆ.

ಮೊದಲನೇ ನೋಂಬಿನ ತರಾವೀ ನಮಾಜಾದ್ದರಿಂದ ಮಕ್ಕಳು ಕೂಡ ಹತ್ತಿಪ್ಪತ್ತು ಮಂದಿ ಬಂದಿದ್ದರು. ಕಚಪಚ ಮಾತಾಡುತ್ತ, ಜಗಳಾಡುತ್ತ ಗಲಾಟೆ ಮಾಡುತ್ತಿದ್ದ ಮಕ್ಕಳನ್ನು ಕಂಡು ಸಿಟ್ಟಾದ ಮಸೀದಿಯ ಆಡಳಿತ ಮೊಕ್ತೇಸರ ಇಸ್ಮಾಯಿಲ್ ಬ್ಯಾರಿಯವರು ಗಲಾಟೆ ಮಾಡಿದ್ರೆ ನೋಡಿ, ಎಳೆದು ಹೊರಗೆ ಹಾಕುತ್ತೇನೆ ಎಂದರು. ಮಕ್ಕಳು ಗಪ್‌ಚಿಪ್ಪಾದರು.

ಸ್ವಲ್ಪಹೊತ್ತಿನಲ್ಲೇ ಮತ್ತೆ ಶುರುವಾಯಿತು. ಈಗಿನ ವಿಷಯ ನಾಳೆ ಯಾರಿಗೆಲ್ಲ ನೋಂಬು ಇದೆ ಎಂಬುದು. ಎಲ್ಲರೂ ನಾನು… ನಾನು ಎಂದರು. ‘ಎಲ್ಲ ಈಗ ಹೇಳ್ತೀರಿ ನಾಳೆ ನೋಡ್ತೇನೆ ಯಾರೆಲ್ಲ ನೋಂಬು ಹಿಡ್ದಿದ್ದೀರಂತ’ ಎಂದ ರಜಬು ಗತ್ತಿನಿಂದ. ಅವನೀವತ್ತು ಒಂಥರ ಹೀರೋ ಅಗಿದ್ದ. ಯಾಕೆಂದರೆ ನೋಂಬಿನ ಮೊದಲ ಚಂದ್ರನನ್ನು ನೊಡಿದವನಲ್ಲವೇ! ಅವನ ಮಾತು ಕೇಳಿ ಎಲ್ಲರೂ ಬಾಯಿಗೆ ಕೈಹಿಡಿದು ಮುಸುಮುಸು ನಕ್ಕರು. ಗಟ್ಟಿ ನಕ್ಕುಬಿಟ್ಟರೆ ಮತ್ತೆ ಮೊಕ್ತೇಸರರು ಬಂದು ಕಿವಿ ಹಿಂಡುತ್ತಾರೆ.!

ಇಶಾ ನಮಾಜು ಶುರುವಾಯಿತು. ನಾವೆಲ್ಲ ಕೊನೇ ಸಾಲಿನಲ್ಲಿ ನಮಾಜಿಗೆ ಕೈಕಟ್ಟಿ ನಿಂತೆವು. ಇಶಾ ನಮಾಜಿನ ನಂತರ ತರಾವೀ ನಮಾಜು ತೊಡಗಿತು. ನಮಾಜಿನ ಮಧ್ಯೆ ಆ ಕಡೆ ಈ ಕಡೆ ನೋಡುವುದಾಗಲೀ ಮಾತಾಡುವುದಾಗಲೀ ಚಲಿಸುವುದಾಗಲೀ ನಿಷಿದ್ಧ. ಆದರೆ ತುಂಟ ಮಕ್ಕಳನ್ನು ಯಾವ ನಿಯಮವೂ ಕಟ್ಟಿಹಾಕಲಾರದು. ನಮಾಜಿಗಾಗಿ ಕೈ ಕಟ್ಟಿನಿಂತ ಹುಡುಗರು ಮತ್ತೆ ಕೀಟಲೆಗೆ ಶುರುಮಾಡಿದರು. ಇನ್ನೊಬ್ಬನ ಅಂಗಿ ಹಿಡಿದು ಎಳೆಯುವುದು, ಚಿವುಟುವುದು, ನಿಂತಲ್ಲಿಗೆ ಮೆಲ್ಲಗೆ ಹಿಂದಿನಿಂದ ಬಂದು ಕಚಗಳಿ ಇಡುವುದು, ಕಿಸಿಕಿಸಿ ನಗುವುದು ನಡೆಯುತ್ತಲೇ ಇತ್ತು. ನಮಾಜಿನ ಮಧ್ಯೆ ಎಲ್ಲರೂ ಸಲಾತ್ ಹೇಳುವಾಗ ಗಟ್ಟ ಕೂಗಿ ಬೊಬ್ಬೆಹಾಕುವುದು ಕೂಡ ತಮಾಷೆಯ ಭಾಗವಾಗಿತ್ತು. ಹೀಗೆ ತಮಾಷೆ, ಕೀಟಲೆಗಳ ಜೊತೆಗೆ ಒಂದೂವರೆ ಗಂಟೆಯ ದೀರ್ಘ ನಮಾಜು ಮುಗಿಯುವಾಗ ಎಲ್ಲರೂ ಸುಸ್ತಾಗಿದ್ದರು. ಕೆಲವು ಚಿಕ್ಕ ಹುಡುಗರು ಅಲ್ಲೇ ನಮಾಜಿಗೆ ಹಾಸಿದ ಜಮಖಾನದ ಮೇಲೆ ಮಲಗಿ ಬಿಟ್ಟಿದ್ದರು.

ಮನೆಗೆ ಹೊರಡುವಾಗ ಗಂಟೆ ಹತ್ತೂವರೆ ದಾಟಿತ್ತು. ಕಣ್ಣು ನಿದ್ದೆಗೆ ಎಳೆಯುತ್ತಿತ್ತು. ಅಪ್ಪ ನನ್ನ ಕೈ ಹಿಡಿದುಕೊಂಡಿದ್ದರು. ಅವರಿಗೆ ನಾನು ಅರೆನಿದ್ದೆಯಲ್ಲಿ ತೂರಾಡುವುದು ಗೊತ್ತಾಗಿತ್ತು. ಇನ್ನೊಂದು ಕೈಯಲ್ಲಿ ಟಾರ್ಚು ಬೆಳಗಿಸುತ್ತಿದ್ದರು. ಮುಕ್ರಿ ಮಹಮ್ಮದಾಕರ ಮನೆ ಇರೋದು ನಮ್ಮ ಮನೆಯ ಸ್ವಲ್ಪ ದೂರದಲ್ಲೇ. ನಮ್ಮ ಈ ಎರಡು ಮನೆಯ ಮಧ್ಯದಲ್ಲಿ ಸೇಕುಂಞಕರ ಮನೆ. ಅದಕ್ಕೆ ಕುದ್ರಾಡಿ ಅಂತ ಹೆಸರು. ಆ ಜಾಗದಲ್ಲಿ ಹಿಂದೆ ಕುದುರೆಗಳ ಲಾಯ ಇದ್ದಿರಬೇಕು. ಅಥವಾ ಕುದುರೆಗಳು ಮೇಯುವ ಹಾಡಿ ಇತ್ತೋ ಏನೋ. ಆ ಮನೆಯಿಂದ ಯಾರೂ ಆವತ್ತು ನಮಾಜಿಗೆ ಬಂದಿರಲಿಲ್ಲ. ಮತ್ತೆ ಇನ್ನೂ ದೂರದಲ್ಲಿ ನಮ್ಮ ದೊಡ್ಡ ತಂದೆಯವರ ಮನೆ. ಹೀಗೆ ಕೋಟೆ ಗ್ರಾಮದಲ್ಲಿ ಮುಸ್ಲಿಮರ ಮನೆ ಬರೇ ನಾಲಕ್ಕು ಮಾತ್ರ. ಮುಸ್ಲಿಮರ ಮನೆಗಳು ಹೆಚ್ಚು ಸಂಖ್ಯೆಯಲ್ಲಿರೋದು ಕಟ್ಪಾಡಿಯ ಪಶ್ಚಿಮ ದಿಕ್ಕಲ್ಲಿರುವ ಚೊಕ್ಕಾಡಿ. ಸರಕಾರಿ ಗುಡ್ಡೆಯಲ್ಲಿ.

ನಾವು ರಸ್ತೆಯಿಂದ ಗದ್ದೆ ಬಯಲಿನ ಕಟ್ಟೆ ಪುಣಿಯ ಮೇಲೆ ನಡೆಯುವಾಗ ಮಹಮ್ಮದಾಕ ಸಲಾಂ ಹೇಳಿ ಎಡ ಬದಿಯ ರಸ್ತೆಯಲ್ಲಿ ನಡೆದರು. ನಾವು ಜಾಗರೂಕತೆಯಿಂದ ಪುಣಿಯಲ್ಲಿ ನಡೆದುಕೊಂಡು ನಮ್ಮ ಮನೆಯ ಹಿತ್ತಲಿಗೆ ಕಾಲಿಟ್ಟೆವು.

ಮನೆಯಲ್ಲಿ ನಾಲ್ಕು ಹೆಂಗಸರು ಅಮ್ಮನ ಜೊತೆಗೆ ತರಾವೀ ನಮಾಜು ಮಾಡಿ ಹೊರಟಿದ್ದರು. ನಮ್ಮನ್ನು ಕಂಡ ಕೂಡಲೇ ಬದಿಗೆ ಸರಿದು ನಿಂತರು. ಕತ್ತಲೆಯಲ್ಲಿ ಪುಣಿಯಲ್ಲಿ ಹೇಗೆ ಹೋಗ್ತೀರಿ ? ಈ ಟರ್ಚನ್ನು ತಗೊಳ್ಳಿ ಅಂತ ಬಾಪ ಹೇಳಿದರು. ಇಲ್ಲ ನಮ್ಮತ್ರ್ರ ಟಾರ್ಚಿದೆ ಎಂದ ಅವ್ವಮಾದನ ಮಾತು ಮೆತ್ತಗಿತ್ತು. ಬಾಪಾನ ಎದುರಿಗೆ ಎಂದಿನ ದೊಂಡೆ ಉಡುಗಿತ್ತು.

ಅಮ್ಮ ಕೊಟ್ಟ ಊಟ ಉಣ್ಣುವಷ್ಟು ಸಹನೆ ಇಲ್ಲದೆ ಸ್ವಲ್ಪ ಉಂಡಂತೆ ಮಾಡಿ ಹಾಸಿಗೆಯಲ್ಲಿ ಬಿದ್ದುಕೊಂಡೆ. ನಿದ್ದೆ ಆವರಿಸುವ ಮುಂಚೆ ಅತ್ತಲಕ್ಕೆ ಎಬ್ಬಿಸುವುದಕ್ಕೆ ಮರೆಯ ಬೇಡ ಎಂದು ಅಮ್ಮನಿಗೆ ಹೇಳಿದ್ದೆ.

*********

ಮುಂಜಾನೆ ಮೂರುವರೆ ಗಂಟೆಯ ಹೊತ್ತಿಗೆ ತಲೆಗೆ ಹಸಿರುಮುಂಡಾಸು ಕಟ್ಟಿಕೊಂಡು ಬಗಲಲ್ಲಿ ದೊಡ್ಡ ಜೋಲಿಗೆ, ಕೈಯಲ್ಲಿ ದಾಯರೆ ಎಂಬ ಗೆಜ್ಜೆ ತಮಟೆ ಹಿಡಿದು ಮನೆಯ ಮುಂದೆ ಬಂದು ಫಕೀರ ದರವೇಶಿಗಳು ಒಂದು ಸಾಲು ಕವ್ವಾಲಿ ಹಾಡಿ ನಮ್ಮನ್ನೆಲ್ಲ ಅತ್ತಲಕ್ಕೆ ಎಬ್ಬಿಸಿದರು. ದೀಪ ಹಚ್ಚಿ, ಮನೆಯವರು ಎದ್ದದ್ದು ಅವರಿಗೆ ಕಾಣದಿದ್ದರೆ ತಮಟೆ ಮತ್ತು ಗೆಜ್ಜೆಯನ್ನು ದಬದಬನೆ ಬಡಿದು ಎಚ್ಚರಿಸುವರು.

ನಾವೆಲ್ಲ ಅತ್ತಲದ ಊಟಕ್ಕಾಗಿ ಎದ್ದೆವು. ಹಲ್ಲುಜ್ಜಿ ಕೈಕಾಲು ಮುಖ ತೊಳೆದು ಬರುವಷ್ಟರಲ್ಲಿ ಉಮ್ಮ ಮೀನು, ಉದ್ದಿನ ಹಪ್ಪಳ ಕರಿಯುವ ವಾಸನೆ ಹಿತವಾಗಿ ಮೂಗಿಗೆ ಬಡಿಯಿತು. ಊಟಕ್ಕಾಗಿ ಹಾಸಿದ ಚಾಪೆಯಲ್ಲಿ ಅನ್ನ ಸಾರು, ಮೊಸರು, ಕರಿದ ಮೀನು, ಹಪ್ಪಳ ಇಟ್ಟಿದ್ದರು. ಎಲ್ಲರೂ ಜೊತೆಗೆ ಕೂತು ಊಟ ಮುಗಿಸಿದೆವು. ಅಪ್ಪನಿಗೆ ಒಂದು ಗ್ಲಾಸು ಚಾ ಮಾಡಿ ಅಕ್ಕ ತಂದು ಕೊಟ್ಟಳು. ಅಪ್ಪ ಬಟ್ಟೆ ಬದಲಾಯಿಸಿ ಸುಬಹ್ ನಮಾಜಿಗಾಗಿ ಮಸೀದಿಗೆ ಹೊರಟರು. ಅಮ್ಮ ಹೇಳಿ ಕೊಟ್ಟಂತೆ ನೋಂಬಿನ ನೀಯತ್ತು ಹೇಳಿದೆವು. ಈ ವರ್ಷದ ನಮಗೆ ಪರ್ಳ್ (ಕಡ್ಡಾಯ) ಆದ ರಮಜಾನಿನ ನಾಳೆಯ ನೋಂಬನ್ನು ಮಾಡಿ ಅಲ್ಲಾಹನಿಗಾಗಿ ಸಮರ್ಪಿಸುತ್ತಿದ್ದೇನೆ.

ಇದೆಲ್ಲ ಆದ ನಂತರ ಅಮ್ಮ ಮತ್ತು ಅಕ್ಕ ಆಹಾರದ ಪಾತ್ರೆಗಳನ್ನು ತೊಳೆದಿಡಲು ಹೋದರು. ನನಗೆ ನಿದ್ದೆ ಬಂದು ಹಾಸಿಗೆಯಲ್ಲಿ ಮಲಗಿದೆ.

ನಿದ್ದೆಯಿಂದ ಏಳುವಾಗ ಎಂಟು ಗಂಟೆಯಾಗಿತ್ತು. ಬಚ್ಚಲು ಕೋಣೆಗೆ ಹೋಗಿ ಮುಖ ಕೈಕಾಲು ತೊಳೆದಾಗ ಈವತ್ತು ಬೆಳಗ್ಗಿನ ನಾಷ್ಟ ಇಲ್ಲವೆನ್ನುವುದು ತಿಳಿದು ಬೇಸರೆನಿಸಿತು. ನೋಂಬು ಮಾಡಿದ್ದೇನೆನ್ನುವ ನೆನಪು ಮೂಡುತ್ತಲೇ ಹೊಸ ಹುರುಪು ಮೂಡಿತು. ನಾನು ನೋಂಬು ಮಾಡುತ್ತಿದ್ದೇನೆನ್ನುವುದನ್ನು ಎಲ್ಲರಿಗೂ ತಿಳಿಸಬೇಕಲ್ಲ? ಶಾಲೆಗೆ ಹೊರಡುವ ಮುಂಚೆ ತೆಂಗಿನ ಮರಗಳ ಮಧ್ಯೆ ಪಡ್ಡಾಯಿ ತೋಟದಲ್ಲಿರುವ ಆಟವಾಡುವ ಸ್ಥಳದಲ್ಲಿ ಆಗಲೇ ಬಂದಿರುವ ಹುಡುಗರಿಗೆ ಸುದ್ದಿ ತಲಪಿಸಬೇಕೆಂದು ಹೊರಟೆ. ಅಲ್ಲಿ ಯೇದು, ಗುರುವ, ಸೀನ ಮಾತಾಡುತ್ತ ಕೂತಿದ್ದರು. ಅವರ ಬಳಿ ಹೋಗಿ ಸೇರಿಕೊಂಡೆ. ಅವರು ಕಳೆದವಾರ ಆಡಿದ ಆಟಗಳ ಬಗ್ಗೆ ಮಾತಾಡುತ್ತಿದ್ದರು. ತಾನು ನೋಂಬಿರುವುದನ್ನು ಸೂಚಿಸಲು ಮೂರು ನಾಲ್ಕು ಬಾರಿ ಅಚೀಚೆ ಉಗುಳು ನೀರನ್ನು ಪಿಚಕ್ಕನೆ ಉಗಿದೆ. ಅಲ್ಲಿದ್ದ ಹುಡುಗರಿಗೆ ಯಾರಿಗೂ ಗೊತ್ತಾಗಲಿಲ್ಲ. ಮತ್ತೂ ಅವರು ಕೇಳದಿದ್ದದ್ದು ಕಂಡು ಮನಸ್ಸು ಮುದುಡಿತು. ಕೊನೆಗೂ ಯೇದು ಕೇಳಿದ, ‘ಚಾ ತಿಂಡಿ ಆಯ್ತಾ?’

ನೋಂಬು ಇರುವುದನ್ನು ಇವರಿಗೆ ತಿಳಿಸುವುದಕ್ಕೆ ಕೊನೆಗೂ ನನಗೆ ಒಂದು ಅವಕಾಶ ಸಿಕ್ಕಿತು. ‘ಇಲ್ಲ ಮಾರಾಯ, ನಮಗೆ ಈವತ್ತಿನಿಂದ ಉಪವಾಸ’ ಎಂದೆ.

‘ಹೋ… ನಿಮಗೀಗ ಉಪ್ಪಾಸ ಶುರುವಾಯಿತಾ? ಅದ್ಹೇಗೆ ನೀರು ಕೂಡ ಕುಡಿಯದೆ ಸಂಜೆ ತನಕ ಇರ್‍ತೀರೊ? ನನಗಂತೂ ಸಾಧ್ಯ ಇಲ್ಲ ಮಾರಾಯ’ ಎಂದ ಸೀನ.

ಅವರು ಈ ವಿಷಯದ ಬಗ್ಗೆ ಚರ್ಚೆಯಲ್ಲಿ ತೊಡಗಿರುವುದನ್ನು ಕಂಡು ನಾನೇನೋ ಒಂದು ಸಾಧನೆ ಮಾಡಿದಷ್ಟು ಧನ್ಯನಾಗಿದ್ದೆ. ಶಾಲೆಗೆ ಹೊರಡುವ ವೇಳೆಯಾಯಿತೆಂದು ನಾನು ಅಲ್ಲಿಂದ ಹೊರಟು ಮನೆಗೆ ಬಂದೆ.

ಸ್ನಾನ ಮುಗಿಸಿ, ಬಟ್ಟೆ ಬದಲಾಯಿಸಿಕೊಂಡು ಚೀಲ ಹೆಗಲಿಗೇರಿಸಿ ಶಾಲೆಗೆ ಹೊರಟೆ. ದಾರಿಯಲ್ಲಿ ಮುಸ್ಲಿಮರು ಎದುರಾದಾಗ ನಾನು ನೋಂಬು ಮಾಡುತ್ತಿದ್ದೇನೆಂದು ಸೂಚಿಸುವುದಕ್ಕಾಗಿ ಉಗುಳುತ್ತಿದ್ದೆ. ಅವರು ಮೋನುಗೆ ನೋಂಬು ಇದೆಯಾ? ಒಳ್ಳೆಯ ಹುಡುಗ ಎಂದರೆ ತುಂಬ ಖುಶಿಯಾಗುತ್ತಿತ್ತು. ಇಲ್ಲವಾದರೆ ಒಂದು ಸಣ್ಣ ನಗೆ ಮೂಡಿಸಿ ಮುಂದುವರಿದರೂ ಧನ್ಯ. ನಮ್ಮ ಬೋರ್ಡ್ ಹಿಂದುಸ್ತಾನಿ ಶಾಲೆಯಲ್ಲಿ ಇರೋದು ಇಬ್ಬರು ಮೇಸ್ಟ್ರುಗಳು. ಅವರಲ್ಲಿ ಒಬ್ಬರು ಮೇಡಂ, ರೋಸಿ ಅಂತ ಅವರ ಹೆಸರು. ಅವರು ಕನ್ನಡ, ಲೆಕ್ಕ, ಪಾಠ ಮಾಡುತ್ತಿದ್ದರು. ಇನ್ನೊಬ್ಬರು ಹೆಡ್ಮಾಸ್ಟ್ರು ಇಬ್ರಾಹಿಂ ಮಾಸ್ಟ್ರು ಇವರನ್ನು ನಾವೆಲ್ಲ ಉಸ್ತಾದ್ ಎಂದು ಕರೆಯುತ್ತಿದ್ದೆವು. ಇವರು ಉರ್ದು, ಸಮಾಜ ಶಾಸ್ತ್ರ, ವಿಜ್ಞಾನ ಪಾಠ ಮಾಡುತ್ತಿದ್ದರು. ಈ ಶಾಲೆಯಲ್ಲಿ ಉರ್ದು ಪಾಠ ಹೇಳಿಕೊಡುವುದರಿಂದ ‘ಬ್ಯಾರ್‍ಲೆ ಶಾಲೆ’ ಎನಿಸಿ ಮುಸ್ಲಿಮ್ ಮಕ್ಕಳಲ್ಲದೆ ಬೇರೆ ಯಾವ ಮಕ್ಕಳೂ ಬರುತ್ತಿರಲಿಲ್ಲ. ಊರಿನ ಇತರ ಮಕ್ಕಳು ಒಂದೋ ಪೇಟೆಯ ಶಾಲೆಗೆ ಹೋಗುತ್ತಿದ್ದರು. ಇಲ್ಲವೇ ಹತ್ತಿರದ ಅಂಬಾಡಿ ಶಾಲೆಗೆ ಹೋಗುತ್ತಿದ್ದರು. ಈ ಶಾಲೆಯಲ್ಲಿ ಐದನೇ ತರಗತಿಯ ನಂತರ ಪೇಟೆಯಲ್ಲಿರುವ ಹೈಯರ್ ಎಲಿಮೆಂಟರಿ ಶಾಲೆ ನಂತರ ಹೈಸ್ಕೂಲಿಗೆ ಹೋಗಬೇಕು. ನಮ್ಮ ಶಾಲೆಯಲ್ಲಿ ಒಂದರಿಂದ ಐದು ತರಗತಿಗಳಿಗೆ ಇವರು ಇಬ್ಬರೇ ಮೇಸ್ಟ್ರು ಪಾಠ ಹೇಳಿಕೊಡಬೇಕು. ಇಬ್ಬರ ಕೈಯಲ್ಲೂ ಉದ್ದುದ್ದ ನಾಗರ ಬೆತ್ತ ಯಾವಾಗಲೂ ಇರುತ್ತಿತ್ತು. ಇಬ್ಬರಲ್ಲಿ ಪೆಟ್ಟು ಜೋರಾಗಿ ಬೀಳುವುದು ಇಬ್ರಾಹಿಂ ಮಾಸ್ಟ್ರಿಂದಲೇ. ಆದರೆ ರಮಜಾನ್ ತಿಂಗಳಲ್ಲಿ ಇಬ್ರಾಹಿಂ ಮೇಸ್ಟ್ರು ಬೆತ್ತ ಹಿಡಿಯೋದಿಲ್ಲ. ಈ ತಿಂಗಳಲ್ಲಿ ಹೆಚ್ಚಿನ ಮಕ್ಕಳು ಉಪವಾಸವಿರುತ್ತಾರೆಂದು ಅವರಿಗೆ ಗೊತ್ತು. ಉಪವಾಸವಿರುವ ಮಕ್ಕಳನ್ನು ಅವರು ಕೊಂಡಾಟ ಮಾಡುತ್ತಾರೆ. ತಪ್ಪು ಮಾಡಿದರೆ ತಿದ್ದಿ ತಾಳ್ಮೆಯಿಂದ ಹೇಳಿ ಕೊಡುತ್ತಾರೆ. ಅವರೂ ಉಪವಾಸ ಮಾಡುವವರಾದ್ದರಿಂದ ಈ ತಿಂಗಳಲ್ಲಿ ಸಂಜೆ ಹೊತ್ತಿಗೆ ಒಂದು ಗಂಟೆ ಮೊದಲೇ ಅಂದರೆ ಮೂರುವರೆ ಗಂಟೆಗೆ ದಿನವೂ ಶಾಲೆಬಿಡುವ ಏರ್ಪಾಡು ಮಾಡಿರುತ್ತಾರೆ. ರೋಸಿ ಮೇಡಂಗಂತೂ ಈ ತಿಂಗಳಲ್ಲಿ ಬಹಳ ಖುಶಿ. ಶಾಬಾನ್‌ನ ಕೈಯಲ್ಲಿ ಈ ತಿಂಗಳು ಪಂಚಾಯತಿ ಆಫೀಸಿನಲ್ಲಿ ಕೂತಿರುವ ರಂಗಣ್ಣರಿಗೆ ಚೀಟಿ ಕಳುಹಿಸುವ ಅಗತ್ಯ ಇರಲಿಲ್ಲ. ಒಂದು ಗಂಟೆ ಬಿಡುವು ಸಿಗುವುದರಿಂದ ರೋಸಿ ಮೇಡಂ ದಿನವೂ ಮಂಚಕಲ್ಲಿನಲ್ಲಿರುವ ತಮ್ಮ ಮನೆಗೆ ಹೋಗುವ ಬಸ್ಸು ಹಿಡಿಯುವುದಕ್ಕಾಗಿ ಕಟ್ಪಾಡಿ ಬಸ್‌ ಸ್ಟಾಂಡಿಗೆ ಓಡುವ ಅಗತ್ಯವೂ ಇರಲಿಲ್ಲ. ಸಾವಕಾಶವಾಗಿ ಪಂಚಾಯತಿ ಬೋರ್ಡು ಆಫೀಸಲ್ಲೇ ರಂಗಣ್ಣನನ್ನು ಭೇಟಿಮಾಡಿ ಮಾತಾಡಿ ಅವರ ಕಾರಿನಲ್ಲಿ ಬಸ್ ಸ್ಟಾಂಡ್ ತನಕ ಸಮಯದಲ್ಲಿ ತಲಪುವುದು ಸಾಧ್ಯವಾಗುತ್ತದೆ.

ಚೊಕ್ಕಾಡಿಯಿಂದ ಶಾಲೆಗೆ ಬರುವ ಹುಡುಗ ಶಾಬಾನ್ ಒಂಥರಾ ಮೊದ್ದುಮೊದ್ದು. ಕಲಿಯುವುದರಲ್ಲಿ ದಡ್ಡ ಎನಿಸಿಕೊಂಡವನು. ನಾಲ್ಕನೆಯ ಕ್ಲಾಸಿನಲ್ಲಿ ನಾಲ್ಕು ವರ್ಷ ಕೂತವನು. ಬರೀ ಚರಿಗೆ ಬರ್ತಿಗೆ ಶಾಲೆಗೆ ಬರುವವನು ಎನ್ನುತ್ತಾರೆ ಇಬ್ರಾಹಿಂ ಮೇಸ್ಟ್ರು. ಆದರೆ ರೋಸಿ ಮೇಡಂಗೆ ಬಹಳ ಹತ್ತಿರದವನು. ಅವರ ಚೀಟಿಯನ್ನು ನಿಯತ್ತಿನಿಂದ ರಂಗಣ್ಣನಿಗೆ ತಲುಪಿಸುವ ಕೆಲಸ ಮಾಡುತ್ತಾನೆ. ನಾವು ಎಷ್ಟು ಸಾರಿ ಪುಸಲಾಯಿಸಿದರೂ ಚೀಟಿ ಹಿಡಿದ ಮುಷ್ಟಿಯನ್ನು ಬಿಡುವವನಲ್ಲ. ಇಬ್ರಾಹಿಂ ಮೇಸ್ಟ್ರಿಗೆ ಇವನನ್ನು ನೋಡಿದರೆ ಆಗುವುದಿಲ್ಲ. ಅವರ ಪ್ರತೀ ಪಾಠದಲ್ಲೂ ಅವನಿಗೆ ಪೆಟ್ಟು ತಪ್ಪಿದ್ದಲ್ಲ. ಒಂದು ಸಲ ಶಾಲೆಯ ಗೋಡೆಯಲ್ಲಿ ಯಾರೋ ಇದ್ದಲ ತುಂಡಿನಲ್ಲಿ ದೊಡ್ಡದಾಗಿ ರೋಸಿ ಟೀಚರು ಮತ್ತು ರಂಗಣ್ಣನ ಬಗ್ಗೆ ಕೆಟ್ಟ ಭಾಷೆಯಲ್ಲಿ ಸೊಟ್ಟಗಾಗಿ ಬರೆದಿದ್ದರು. ಆ ಅಕ್ಷರಗಳು ಶಾಬಾನ್‌ನ ಸೊಟ್ಟ ಅಕ್ಷರಗಳಿಗೆ ಸನಿಹವಾಗಿ ಕಂಡದ್ದರಿಂದ ಮೊದಲು ರೋಸಿ ಮೇಡಂನ ಬೆತ್ತದ ಪೆಟ್ಟು ಬಿದ್ದದ್ದು ಶಾಬಾನ್‌ನಿಗೆ. ಈ ಘಟನೆಯ ನಂತರ ಶಾಬಾನ್ ತುಂಬಾ ನೊಂದುಕೊಂಡು ಅನ್ಯಮನಸ್ಕನಾಗಿ ಒಂದೆಡೆ ಒಂಟಿಯಾಗಿ ಕೂತು ಬಿಡುತ್ತಿದ್ದ. ಅವನು ಕೂತಲ್ಲಿಗೆ ಹೋಗಿ ಹುಡುಗರೆಲ್ಲ ಅವನಿಗೆ ಮಸ್ಕಿರಿ ಮಾಡಿ ನಗುತ್ತಿದ್ದರು. ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ ರೋಸಿ ಮೇಡಂ ಮತ್ತು ರಂಗಣ್ಣರ ಮಧ್ಯೆ ಇರುವ ಪ್ರೇಮ ಪ್ರಕರಣವನ್ನು ಎಲ್ಲರಿಗೂ ಹೇಳಿ ಬಹಿರಂಗ ಮಾಡಿ ಶಾಲೆಗೆ ಬರುವುದನ್ನು ನಿಲ್ಲಿಸಿಬಿಟ್ಟ. ಅವನನ್ನು ಊರ ದೊಡ್ಡ ಕುಳ ಸಾಧು ಭಟ್ಟರು ತಮ್ಮ ಬೆಂಗಳೂರಿನಲ್ಲಿರುವ ಹೋಟ್ಲಲ್ಲಿ ತಟ್ಟೆ ತೊಳೆಯುವ ಕೆಲಸಕ್ಕೆ ಕರಕೊಂಡು ಹೋದರಂತೆ. ಅಲ್ಲಿ ಅವನಿಗೆ ಜನಿವಾರ ಹಾಕಿ ಶಾಬಾನ್ ಹೋಗಿ ಸುಬ್ಬು ಎಂದು ಹೆಸರಿಟ್ಟು ಕರೆಯುತ್ತಿದ್ದರೆಂದು ಇಸ್ಮಾಲಿ ಹೇಳಿ ನಗುತ್ತಿದ್ದ.

ಮೂರುವರೆಗೆ ಶಾಲೆ ಬಿಡುವಾಗ ಸಾಕಷ್ಟು ಸುಸ್ತಾಗಿತ್ತು. ನೀರು ಕುಡಿಯದೇ ಇದ್ದುದರಿಂದ ಗಂಟಲು ಒಣಗಿದಂತಾಗಿತ್ತು. ಮನೆಗೆ ಹೋದವನೇ ಚೀಲವನ್ನು ಕೋಣೆಯಲ್ಲಿಟ್ಟು ಅಮ್ಮನ ಬಳಿಗೆ ಹೋದೆ. ಅವಳು ಮಡಕೆಯ ಓಡಿನಲ್ಲಿ ಅಕ್ಕಿಯ ರೊಟ್ಟಿ ತಟ್ಟಿ ಕಾಯಿಸುತ್ತಿದ್ದಳು. ಅಕ್ಕ ತಟ್ಟೆಗಳಲ್ಲಿ ಸೋಜಿಯ ಪಿರ್‍ನಿಯನ್ನು ಸುರಿದು ಇಡುತ್ತಿದ್ದಳು. ಒಲೆಯಲ್ಲಿ ಸಾಬಕ್ಕಿ ಪಾಯಸ ಮತ್ತು ಮತ್ತೆ ಗಂಜಿ ಬೇಯುತ್ತಿತ್ತು. ನನ್ನನ್ನು ಕಂಡವಳೇ ಅಮ್ಮ ‘ಹೇಗಿದೆಯೋ ನೋಂಬು? ಇದೆಯಾ ಇಲ್ಲ ಎಲ್ಲೋ ಓಡಿ ಹೋಯ್ತಾ?’ ಎಂದು ನಗುತ್ತಾ ಕೇಳಿದಳು. ಅಕ್ಕನೂ ನನ್ನನ್ನು ನೋಡಿ ನಕ್ಕಳು. ಅವರ ಮುಖ ಬಾಡಿದಂತಿತ್ತು. ಏನಾದರೂ ತಿಂತಿಯೇನೋ? ಎಂದು ಅಮ್ಮ ಕೇಳಿದಾಗ. ತಿನ್ನುವ ಆಸೆಯಾದರೂ ಹಟದಿಂದ ತಡೆದುಕೊಂಡೆ. ‘ಇಲ್ಲಪ್ಪ, ನಂಗೆ ನೋಂಬಿದೆ…’ ಎಂದೆ.

ಹಾಗಾದರೆ ನೀನು ಮತ್ತು ಅಕ್ಕ ಒಟ್ಟಿಗೆ ಹೋಗಿ ದನಗಳಿಗೆ ಸ್ವಲ್ಪ ಹಸಿರು ಹುಲ್ಲು ಕತ್ತರಿಸಿಕೊಂಡು ಬನ್ನಿ ನೋಡುವ… ಬೆಳಗ್ಗಿನಿಂದ ಆ ಮೂಕ ಪ್ರಾಣಿಗಳು ಒಣ ಹುಲ್ಲನ್ನೇ ತಿನ್ನುತ್ತಿವೆ ಎಂದಳು. ಅಮ್ಮ.

ನಾವಿಬ್ಬರೂ ಒಲ್ಲದ ಮನಸ್ಸಿನಿಂದಲೇ ಗದ್ದೆ ಬಯಲಿಗೆ ಹೊರಟೆವು. ಅಕ್ಕ ಬುಟ್ಟಿ ಮತ್ತು ಹುಲ್ಲು ಕೊಯ್ಯುವ ಹರಿತ ಕತ್ತಿಯನ್ನು ಹಿಡಿದುಕೊಂಡಳು. ಅಕ್ಕ ಹುಲ್ಲು ಕೊಯ್ಯಲು ಗದ್ದೆಗೆ ಇಳಿದಾಗ ನಾನು ಕೆರೆ ಬದಿಯಲ್ಲಿ ನಿಂತು ನೈದಿಲೆ ಹೂಗಳನ್ನು ನೋಡುತ್ತಿದ್ದೆ. ಹೂಗಳ ಮಧ್ಯೆ ಒಮ್ಮೆಲೇ ಬಳುಕ್ಕೆಂದು ದೊಡ್ಡ ಮೀನೊಂದು ತಲೆ ಹೊರಹಾಕಿ ಮತ್ತೆ ನೀರೊಳಗೆ ಹೋಯಿತು. ಮಡೆಂಜಿಯೋ ಅಥವಾ ಮೊರಂಟೆ ಮೀನಿರಬೇಕು. ಕೆರೆಯ ದಡದಲ್ಲಿದ್ದ ಮುಂಡಗನ ಪೊದೆಯಲ್ಲಿ ಪುಂಡುಕೋಳಿಗಳು ಓಡಾಡುತ್ತಿದ್ದವು. ಅಗಾಗ ಕ್ರೊ.॒……ಕ್ರೊ ಎಂದು ಕೂಗುತ್ತಿದ್ದವು. ಈ ಕೆರೆಯಲ್ಲಿ ಜನ ಬಟ್ಟೆಗಳನ್ನು ಒಗೆಯಲು ಬರುವುದರಿಂದ ‘ಮಡೆ ಕೆರೆ’ ಎಂದು ಊರವರು ಕರೆಯುತ್ತಿದ್ದರು. ಈ ಕೆರೆಯಿಂದ ಬಯಲಿನ ಕೆಲವು ಗದ್ದೆಗಳಿಗೆ ನೀರು ಏತದ ಮೂಲಕ ಹಾಯಿಸಿ ಕೊಳಕೆ ಬತ್ತದ ಪೈರನ್ನು ಬೆಳೆಸುತ್ತಾರೆ. ಸಂಜೆಯಲ್ಲಿ ಏತದ ಮೂಲಕ ನೀರೆಳೆಯುವುದಕ್ಕಾಗಿ ಸಂಕಿ, ಪಾರು, ಅಪ್ಪಿ ಬಂದು ಮೊಗೆಯನ್ನು ಎತ್ತಿಕೊಡುವ ಶೇಷಪ್ಪ ಬರುವುದಕ್ಕಾಗಿ ತೆಂಗಿನ ಮರದಡಿಯಲ್ಲಿ ಕೂತರು. ಸಂಕಿಯ ಕೈಯಲ್ಲಿದ್ದ ವೀಳ್ಯದ ಎಲೆ ಅಡಿಕೆ ಸುಣ್ಣವನ್ನು ಮೂವರೂ ಹಂಚಿಕೊಂಡು ಪಟ್ಟಾಂಗ ಹೊಡಿಯುತ್ತಾ ಕೂತರು. ನನ್ನನ್ನು ಕಂಡು ಶಾಲೆಯಿಂದ ಮಕ್ಕಳು ಬಂದಾಯ್ತು ಇನ್ನೂ ಶೇಷಣ್ಣ ಬಂದಿಲ್ಲವೆಂದು ಚಡಪಡಿಸ ತೊಡಗಿದರು. ಮೋನು.. ಶಾಲೆ ಆಗ್ಲೇ ಬಿಟ್ತೇನೋ …? ಎಂದು ಕೇಳಿದಳು ಅಪ್ಪಿ.

‘ನಮ್ಗೆ ಶಾಲೆ ಬೇಗ ಬಿಟ್ತು. ಉಪ್ಪಾಸ ಶುರುವಾಯ್ತಲ್ಲಾ..’ ಎಂದೆ.

‘ಓ.. ಹಾಗಾದರೆ ಮೋನುಗೆ ಈವತ್ತು ಉಪ್ಪಾಸ ಅಲ್ವಾ?’ ಎಂದಳು ಪಾರು.

‘ಹೌದು’ ಎಂದೆ ಗತ್ತಿನಿಂದ.

ಅವರಿಗೊಂದು ಮಾತಿಗೆ ವಿಷಯ ಸಿಕ್ಕಿತು. ಉಪವಾಸದ ಬಗ್ಗೆ ಅವರ ಮಧ್ಯೆ ಸಣ್ಣ ಚರ್ಚೆ ಶುರುವಾಯಿತು. ಅಕ್ಕ ಇಫ್ತಾರಿಗೆ ಹೊತ್ತಾಯಿತೆಂದು ಕೊಯ್ದಷ್ಟು ಹುಲ್ಲನ್ನು ಬುಟ್ಟಿಗೆ ಹಾಕಿಕೊಂಡು ಬಂದಳು.

ಬೇಗ ಬೇಗ ನಡೆದು ಮನೆಕಡೆ ಬಂದೆವು.

ಅಮ್ಮ ನಮ್ಮನ್ನೇ ಕಾಯುತ್ತ ಕೂತಿದ್ದಳು. ಬೇಗ ಕೈಕಾಲು ಮುಖ ತೊಳೆದು ವಳೂ ಮಾಡಿ ಬನ್ನಿ ನೋಡುವ, ಇಫ್ತಾರಿಗೆ ಹೊತ್ತಾಗ್ತಾ ಬಂತು ಎಂದಳು.

ಆಗಲೇ ಊಟದ ಚಾಪೆಯನ್ನು ಬಿಡಿಸಿ ಸುಪುರದ ಮೇಲೆ ಫಿರ್‍ನಿ, ಸಾಬಕ್ಕಿ ಸೇವಿಗೆ ಪಾಯಸ, ಸಮೋಸ, ಮೆಂತೆಯ ಗಂಜಿ ಎಲ್ಲ ಇಟ್ಟಿದ್ದಳು. ಪ್ರತಿಯೊಬ್ಬರಿಗೂ ಒಂದು ಲೋಟ ನೀರು ಜೊತೆಗೆ ಉತ್ತುತ್ತೆ ( ಒಣ ಖರ್ಜೂರ) ಎಲ್ಲ ಜೋಡಿಸಿ ಇಟ್ಟಿದ್ದಳು.

ಮಗ್ರೀಬ್ ನಮಾಜಿನ ಬಾಂಗ್ ಕೇಳಿದ ಕೂಡಲೇ ಖರ್ಜೂರವನ್ನು ಬಾಯಿಗೆ ಹಾಕ್ಕೊಂಡು ನೀರು ಕುಡಿದು ಮೊದಲ ದಿನದ ನೋಂಬು ಮುಗಿಸಿದೆವು. ಇಡೀ ದಿನ ತಿನ್ನುವುದಕ್ಕಿಂತ ಹೆಚ್ಚೇ ತಿಂದೆ ಅಂತ ನನಗೆ ಅನ್ನಿಸ್ತು. ಹೊಟ್ಟೆ ಭಾರವಾಗಿತ್ತು. ಸುಮ್ಮನೆ ಕುರ್ಚಿಯೊಂದರಲ್ಲಿ ಕೂತು ಉಸಿರುಬಿಟ್ಟೆ. ಅಮ್ಮ ಮತ್ತು ಅಕ್ಕ ಆಗಲೇ ಮಗ್ರಿಬ್ ನಮಾಜು ಮುಗಿಸಿದರು. ಅವರಿಗೆ ಕ್ಷಣವೂ ಆರಾಮ ಎಂಬುದಿರಲಿಲ್ಲ. ಅಕ್ಕ ಪಾತ್ರೆಗಳನ್ನು ತೊಳೆದಿಟ್ಟು ಲಾಟೀನು ಹಿಡಿದುಕೊಂಡು ಹಟ್ಟಿಗೆ ಹೋಗಿ ದನಗಳಿಗೆ ಹಸಿರು ಹುಲ್ಲು ಹಾಕಿ ಬಂದಳು. ಅಮ್ಮ ಅತ್ತಲಕ್ಕೆ ಬೇಕಾದ ಆಹಾರ ತಯಾರಿಸುತ್ತಿರುವಾಗ ಅವಳಿಗೆ ಸಹಾಯ ಮಾಡಲು ಅಕ್ಕ ಸೇರಿಕೊಂಡಳು. ಉಪವಾಸದ ತಿಂಗಳಲ್ಲಿ ಮನೆಯವರಿಗೆ ನಿಜಕ್ಕೂ ಉತ್ಸಾಹ, ಸಂಭ್ರಮ ತುಂಬುವವರು ಗೃಹಿಣಿಯರೇ ಸರಿ.

ದಿನದ ಉಪವಾಸ ಮುಗಿದ ಕೂಡಲೇ ಮತ್ತೆ ರಾತ್ರಿಯ ಕಾರ್ಯಕ್ರಮದ ಪುನರಾವರ್ತನೆಯಾಗುತ್ತದೆ. ಚುಮುಚುಮು ಕತ್ತಲೆಯಲ್ಲಿ ಬಾಪನಿಗಾಗಿ ನಾಶ್ತಾದ ಬುತ್ತಿಯನ್ನು ಹಿಡಿದುಕೊಂಡು ಮಸೀದಿಕಡೆ ಹೊರಟೆ. ಮತ್ತೆ ತರಾವೀಹ್ ನಮಾಜು, ಮತ್ತೆ ಸೆಹರಿ ಮತ್ತೆ ಉಪವಾಸ… …….!

ಹೆಚ್ಚುಕಮ್ಮಿ ಮೂವತ್ತು ಉಪವಾಸದ ದೈನಂದಿನ ದಿನಚರಿ ಒಂದೇ ತರವಾದರೂ ೧೭ನೇ ದಿನ ಬದ್ರ್ ಯುದ್ಧ ನಡೆದ ದಿನವೆಂದು ಸಂಜೆ ಬದ್ರ್ ಮಾಲೆಯನ್ನು ನಮ್ಮಿಂದ ಓದಿಸಿ ಆ ದಿನ ನಮಗೆ ಕೋಳಿ ಪಲ್ಯ ರೊಟ್ಟಿ ಮಾಡಿ ತಿನ್ನಿಸುತ್ತಾಳೆ. ಒಮ್ಮೊಮ್ಮೆ ದೊಡ್ಡ ಅಕ್ಕ ಮತ್ತು ಭಾವನನ್ನು ಕರೆಸಿ ಜೊತೆಗೆ ನೆರೆಯವರನ್ನು ಕರೆದು ಸಣ್ಣ ಮಟ್ಟದ ಇಫ್ತಾರ್ ಕೂಟ ಮಾಡಿಸುವುದೂ ಇದೆ. ಉಪವಾಸದ ದಿನಗಳು ಹೆಚ್ಚಾಗಿ ತರಕಾರಿಯ ತಿಂಡಿಗಳನ್ನು ಮೀನು ಸಾರು, ಫ್ರೈ, ಮಾಡುವುದೇ ಜಾಸ್ತಿ. ವಿಶೇಷ ದಿನಗಳಂದು ಮಾತ್ರ ಕೋಳಿಯ ಪಲ್ಯ, ಅಥವಾ ಆಡಿನ ಮಾಂಸದ ಪಲ್ಯ ಇರುತ್ತದೆ. ದನದ ಮಾಂಸ ನಮ್ಮ ಮನೆಗೆ ತರುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಅಮ್ಮ ಅದನ್ನು ತಿನ್ನದಿರುವುದು. ಅವಳು ಕೊಡುವ ಇನ್ನೊಂದು ಕಾರಣವೆಂದರೆ ಇಲ್ಲಿ ನಮ್ಮ ನೆರೆಹೊರೆಯವರು ಹಿಂದುಗಳಾದ್ದರಿಂದ ಮತ್ತು ಅವರು ನಮ್ಮ ಮನೆಯಲ್ಲಿ ಊಟ ತಿಂಡಿಯೆಲ್ಲ ತಿನ್ನುವುದರಿಂದ ಅವರಿಗೆ ಮುಜುಗರ ಉಂಟು ಮಾಡಬಾರದೆನ್ನುವುದು ಅವಳ ವಾದ. ಬಾಪ ಹೊರಗೆ ತಿಂದರೂ ಕೂಡ ಮನೆಯಲ್ಲಿ ಅಮ್ಮನ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದರು. ಅವಳು ಕೊಡುವ ಇನ್ನೊಂದು ಮುಖ್ಯ ಕಾರಣವೂ ಇದೆ. ಬದ್ರ್ ಯುದ್ಧದಲ್ಲಿ ವಿರೋಧಿ ಬಣದಲ್ಲಿ ತಮ್ಮ ದಾಯಾದಿಗಳು, ನೆಂಟರಿಷ್ಟರು, ಸಹೋದರರು, ಗಳೆಯರನ್ನು ಅಸಹಾಬಿಗಳು ಎದುರಿಸ ಬೇಕಾಗಿ ಬಂದಾಗ ಅವರ ಮನಸ್ಸು ತುಂಬಾ ನೊಂದಿತ್ತಂತೆ. ಅದಕ್ಕೆ ಅವರೆಲ್ಲರೂ ನಾವು ನಮ್ಮವರ ಮೇಲೆ ಹೇಗೆ ಯುದ್ಧಹೂಡುವುದೆಂದು ಹಿಂಜರಿದಾಗ ನೆಬಿಯವರು ಅವರಿಗೆ ‘ನಿಮ್ಮಲ್ಲಿ ಕರುಣೆ ಕಮ್ಮಿಯಾಗಬೇಕಿದ್ದರೆ ನೀವು ದನದ ಮಾಂಸ ತಿನ್ನಿ’ ಎಂದಿದ್ದರಂತೆ. ಅಮ್ಮನ ಪ್ರಕಾರ ದನದ ಮಾಂಸ ತಿನ್ನುವವರಿಗೆ ಕರುಣೆ ಎಂಬುವುದು ಇರುವುದಿಲ್ಲ. ಅಪ್ಪ ಈ ಮಾತಿಗೆ ನಕ್ಕು ಬಿಟ್ಟಿದ್ದರು. ನನಗನ್ನಿಸಿದ್ದು ಅವಳು ಹುಟ್ಟಿದ್ದು ಬೆಳೆದದ್ದು ಕೃಷಿಕರ ಕುಟುಂಬದಲ್ಲಿ ಮತ್ತು ಅವಳಿಗೆ ಹಸುಗಳನ್ನು ಸಾಕಿ ಬೆಳೆಸುವುದೆಂದರೆ ತುಂಬ ಅಚ್ಚುಮೆಚ್ಚಿನ ಕೆಲಸ. ಅವಳ ತವರಲ್ಲಿ ಕೂಡ ದನದ ಮಾಂಸ ಉಪಯೋಗ ಮಾಡುವುದಿಲ್ಲವಾದ್ದರಿಂದ ಅಮ್ಮ ದನದ ಮಾಂಸ ತಿನ್ನುವುದಕ್ಕೆ ವಿರೋಧಿಸುತ್ತಿರುವುದು.

ಉಪವಾಸದ ೨೭ನೇದಿನ ಲೈಲತುಲ್ ಖದ್ರ್ ವಿಶೇಷ ರಾತ್ರಿ. ಆದಿನದಂದು ಕುರಾನ್ ಮೊಟ್ಟಮೊದಲು ನಬಿಯವರಿಗೆ ಅಲ್ಲಾಹನ ದೇವದೂತ ಬಂದು ಬೋಧಿಸಿದ ದಿನವೆನ್ನಲಾಗುತ್ತದೆ. ಆದಿನ ದೇವದೂತರು ಭೂಮಿಗೆ ಬಂದು ಮನುಷ್ಯನ ಒಳಿತು ಕೆಡುಕುಗಳ ತಪಾಸಣೆ ನಡೆಸುತ್ತಾರೆನ್ನಲಾಗುತ್ತದೆ. ಈದಿನ ನಮ್ಮ ಮಸಿದಿಯನ್ನು ಸ್ವಚ್ಛಗೊಳಿಸಿ, ವಿದ್ಯುದ್ದೀಪಗಳಿಂದ ಅಲಂಕರಿಸುತ್ತಾರೆ. ಊರಲ್ಲಿ ಒಂದಕ್ಕಿಂತ ಹೆಚ್ಚು ಮಸೀದಿಗಳಿದ್ದರೆ ಅವುಗಳಿಗೆ ಭೇಟಿಕೊಟ್ಟು ಎರಡು ರಕಾತ್ ನಮಾಜ್ ಮಾಡುವ ಕ್ರಮವೂ ಇದೆ. ಈ ವಿಶೇಷ ರಾತ್ರಿ ಇಡೀ ಸುದೀರ್ಘವಾದ ತರಾವೀ ನಮಾಜಿನ ಜೊತೆಗೆ ತಸ್ಬೀಹ್ ನಮಾಜ್ ಕೂಡ ಮಾಡುತ್ತಾರೆ. ಈ ದಿನ ಅಮ್ಮನಿಗೆ ಕೆಲಸಗಳ ಒತ್ತಡ ಜಾಸ್ತಿ. ಜೊತೆಗೆ ಅವರ ಹೆಂಗೆಳೆಯರು ತೌಬ ಅಥವಾ ಕ್ಷಮಯಾಚನೆಯನ್ನು ಹೇಳಲು ಬರುತ್ತಾರೆ. ಅಸರ್ ನಮಾಜಿನ ನಂತರ ಬಂದ ಹೆಂಗಸರಿಗೆ ವಿಧಿವತ್ತಾದ ತೌಬವನ್ನು ಅಮ್ಮ ಹೇಳಿಕೊಡುತ್ತಾಳೆ ಅವರೆಲ್ಲರೂ ಅವಳು ಹೇಳಿದಂತೆ ಹೇಳುತ್ತಾರೆ. ಆದಿನ ಅಮ್ಮ ಅಕ್ಕಿಯ ಸೇವಿಗೆ ಮಾಡುತ್ತಾಳೆ. ಮರದ ಕುದುರೆಯಂತ ಕಾಣುವ ನಮ್ಮ ಮನೆಯಲ್ಲಿರುವ ಸೇವಿಗೆಯ ಮಣೆಯನ್ನು ತೊಳೆದು ಆ ದಿನ ಬಿಸಿಬಿಸಿ ಕಡುಬು ಬೇಯಿಸಿ ಕಂಚಿನ ನೂರಾರು ತೂತುಗಳಿರುವ ಪಾತ್ರೆಗೆ ಇಟ್ಟಾಗ ಮಣೆಯನ್ನು ಉತ್ಸಾಹದಿಂದ ನಾವು ಒತ್ತುತ್ತಿದ್ದೆವು. ಅಕ್ಕಿಯ ಸೇವಿಗೆಯನ್ನು ರಮಜಾನಿನ ೨೭ನೇ ದಿನ ಬೆಲ್ಲ, ಯಾಲಕ್ಕಿ ಪುಡಿ ಬೆರಸಿದ ತೆಂಗಿನ ತುರಿಯನ್ನು ಹಿಂಡಿ ತೆಗೆದ ಹಾಲಲ್ಲಿ ಮುಳುಗಿಸಿ ತಿನ್ನಲು ಕೊಡುತ್ತಾಳೆ. ಅದರ ರುಚಿ ಇಂದಿಗೂ ನೆನದರೆ ಬಾಯಿ ಚಪ್ಪರಿಸುವಂತಾಗುತ್ತದೆ.

ಹಬ್ಬಕ್ಕೆ ಒಂದು ವಾರವಿರುವಾಗಲೇ ಹೊಸ ಬಟ್ಟೆಗಳನ್ನು ಖರೀದಿಸುವುದು, ದರ್ಜಿಯ ಬಳಿ ಹೋಗಿ ಬೇಗ ಹೊಲಿದು ಕೊಡಬೇಕೆಂದು ಒತ್ತಡಹಾಕುವುದು ನನಗೆ ಪ್ರಿಯವಾದ ಕೆಲಸ, ಅಮ್ಮನಿಗೆ ಒಂದು ಸೀರೆ ಅಪ್ಪ ತಂದು ಕೊಡುತ್ತಿದ್ದರು. ಜೊತೆಗೆ ಒ೦ದೂವರೆ ಮೀಟರ್ ಚಿಕನ್ ಬಟ್ಟೆ ತಂದು ಕೊಡುತ್ತಿದ್ದರು. ಬಿಡುವಿಲ್ಲದ ಕೆಲಸದ ಮಧ್ಯೆಯೂ ಅವಳು ತನ್ನ ಕುಪ್ಪಸವನ್ನು ತಾನೇ ಹೊಲಿದುಕೊಳ್ಳುತ್ತಿದ್ದಳು. ಅದಕ್ಕೆ ಕೆಂಪು ನೂಲಿನಿಂದ ತೋಳಿನಲ್ಲಿ ಮತ್ತು ಕುತ್ತಿಗೆಯಲ್ಲಿ ಸರಳವಾದ ಕುಸುರಿ ಕೆಲಸವನ್ನು ಮಾಡುತ್ತಾಳೆ.

ರಮಜಾನಿನ ೨೯ನೇ ದಿನದಂದು ಹಬ್ಬದ ಚಂದ್ರನನ್ನು ಎದುರು ನೋಡಲು ಶುರುವಾಗುತ್ತದೆ. ಆ ದಿನ ಕಾಣದಿದ್ದರೆ ಮೂವತ್ತನೇ ದಿನದಂದು ಚಂದ್ರ ದರ್ಶನವಾಗಲೇ ಬೇಕು. ಆಗದಿದ್ದರೂ ಚಾಂದ್ರಮಾನ ದಿನತಖ್ತೆಯಲ್ಲಿ ತಿಂಗಳಿಗೆ ಮೂವತ್ತು ದಿನಕ್ಕಿಂತ ಹೆಚ್ಚಿರಲಾರದು. ಶವ್ವಾಲ್ ತಿಂಗಳ ಒಂದನೇ ದಿನದಂದು ರಮಜಾನ್ ಹಬ್ಬ. ಆ ದಿನದ ಸಂಭ್ರಮ, ಉತ್ಸಾಹ ಎಣೆಯಿಲ್ಲದ್ದು. ಬೆಳಿಗ್ಗೆ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಈದ್ ನಮಾಜಿಗಾಗಿ ಮಸೀದಿಗೆ ಹೋಗುವುದು, ಅಲ್ಲಿ ಗೆಳೆಯರ ಜೊತೆಗೆ ಸಂಭ್ರಮವನ್ನು ಹಂಚಿಕೊಳ್ಳುವುದು ಈದ್ ಶುಭಾಶಯಗಳನ್ನು ಹಂಚಿಕೊಳ್ಳುವುದು ಮುಖ್ಯ ಭಾಗ. ನಾವೆಲ್ಲ ಸಂಬಂಧಿಕರ ಮನೆಗೆ ಹೋಗುವುದು ಅವರು ನಮ್ಮ ಮನೆಗೆ ಬರುವುದು, ಯಥಾವತ್ತಾಗಿ ನಡೆಯುತ್ತಿದ್ದರೂ, ಅಮ್ಮ ಮಾತ್ರ ಮನೆಯಲ್ಲೇ ಇರುತ್ತಾಳೆ. ಅವಳು ಹೊಸ ಬಟ್ಟೆಯನ್ನು ತೊಟ್ಟು ಊರ ನೆರೆಹೊರೆಯವರಿಗೆ ತಾನು ಮಾಡಿದ ಸಿಹಿತಿಂಡಿಯನ್ನು ಹಂಚುತ್ತಾಳೆ. ಮಾಂಸಾಹಾರಿ ನೆರೆಯವರಿಗೆ ತಾನು ಮಾಡಿದ ತುಪ್ಪದನ್ನವನ್ನೊ, ಬಿರಿಯಾನಿಯನ್ನೋ ಹಂಚಿ ಸಂಭ್ರಮಿಸುತ್ತಾಳೆ. ಅವಳು ಆಚರಿಸುವ ಹಬ್ಬದ ಮುಖ್ಯ ಭಾಗವೆಂದರೆ ಹಂಚಿ ತಿನ್ನುವ ಖುಶಿ.

ನನಗೆ ರಮಜಾನ್ ತಿಂಗಳೆಂದರೆ ಉಪವಾಸ, ಧಾರ್ಮಿಕ ಆಚರಣೆಗೆ ಮಾತ್ರವಲ್ಲ. ಈ ತಿಂಗಳು ದುಃಖದಾಯಕ ನೆನಪನ್ನು ತರುವ ತಿಂಗಳು ಕೂಡ. ಯಾಕೆಂದರೆ ನನ್ನ ವ್ಯಕ್ತಿತ್ವವನ್ನು ಇಡಿಯಾಗಿ ರೂಪಿಸಿದ ಅತ್ಯಂತ ಪ್ರೀತಿ ಪಾತ್ರರಾದ ಹೆತ್ತವರು ನಿಧನರಾದದ್ದು ಈ ತಿಂಗಳಲ್ಲಿ. ನನ್ನ ತಂದೆಯವರು ೧೯೭೯ರ ರಮಜಾನ್ ತಿಂಗಳ ಮೊದಲ ದಿನದಲ್ಲೇ ತೀರಿಕೊಂಡಿದ್ದರು. ೧೯೯೬ರಲ್ಲಿ ನನ್ನ ತಾಯಿ ತೀರಿಕೊಂಡದ್ದು ರಮಜಾನ್ ತಿಂಗಳು ಮುಗಿದ ನಂತರ. ಈ ವರ್ಷ ಅವಳು ತೀರಿಕೊಂಡ ದಿನವನ್ನು ನೆನಪುತರುವ ಅಕ್ಟೋಬರ್ ಎರಡನೇ ತಾರೀಕು ಕೂಡ ರಮಜಾನಿನ ಜೊತೆಗೆ ತಳಕು ಹಾಕಿಕೊಂಡಿರುವುದು ನನಗೆ ಇನ್ನಷ್ಟು ವಿಶೇಷ ಮಹತ್ವವನ್ನು ತಂದು ಕೊಟ್ಟಿದೆ.