ಭಿಕ್ಷೆ ಬೇಡೋಕೆ ಮಾತ್ರೆ ತಿನ್ನಬೇಕು.. ಮಾತ್ರೆ ದುಡ್ಡಿಗೆ ಭಿಕ್ಷೆ ಬೇಡಬೇಕು ಎನ್ನುತ್ತಾರೆ ಫ್ರೂಟ್ ಮಾರ್ಕೆಟ್ಟಿನ ಅಮೀರುನ್ನೀಸಾ

ಮಳೆ ಬಂದ್ರೆ ಕಷ್ಟ. ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ತೆವಳಿಕೊಂಡು ಹೋಗಬೇಕು. ಬಟ್ಟೇ ಎಲ್ಲ ಸವೆದು ಹೋಗ್ತವೆ. ಕುಂಡೀ ಹತ್ರ ಬಟ್ಟೆ ಎಲ್ಲ ಹರುದು ಹೋಗ್ತವೆ. ಭಿಕ್ಷೆ ಬೇಡಿದ ದುಡ್ಡಲ್ಲಿ ಅಷ್ಟು ಇಷ್ಟು ಹಣ ಉಳಿಯುತ್ತಲ್ಲ ಅದ್ರಲ್ಲಿ, ಇಲ್ಲಿದಾಳಲ್ಲ ಅವಳ ಕೈಲಿ ಹೂವಿನ ಮಾರ್ಕೆಟ್ಟಿಂದ ಅರ್ಧ ಕೆಜಿ ಬಿಡಿ ಹೂವ ತರಿಸ್ಕೋತೀನಿ. ಅದನ್ನ ಕಟ್ಟಿ ಒಂದು ಮೊಳಕ್ಕೆ ೧೦ ರೂಪಾಯಿ ಹಂಗೆ ಮಾರ್ತೀನಿ. ಆ ದುಡ್ಡನ್ನ ಸಾಲ ತೀರಿಸೋಕೆ ಅಂತ ಎತ್ತಿಟ್ಕೋತೀನಿ. ಇವಾಗ ೨-೩ ತಿಂಗಳ ಹಿಂದೆ ಬಾಬರಿ ಮಸೀದಿ ಗಲಾಟಿದು ಕೋರ್ಟ್ ಆಯ್ತಲ್ಲ. ಅವಾಗ ಪೋಲೀಸ್ನೋರು ಇಲ್ಲೆಲ್ಲ ಇರಬೇಡ ಕಣಮ್ಮ. ಇಂದೂ ಮುಸ್ಲಿಂ ಗಲಾಟೆಗಳಾಗ್ತವೆ. ನಿಂಗೇನಾದ್ರೂ ಏಟು ಬೀಳ್ತವೆ, ಒಂದೆರಡು ದಿನ ಎಲ್ಲಾದ್ರೂ ಹೋಗು ಅಂತಂದ್ರು. ನಾನು ಇಲ್ಲೇ ಪಕ್ಕದಲ್ಲಿ ಮುರುಗಮಲ್ಲ ದೇವಸ್ಥಾನ ಅಂತ ಐತಲ್ಲ ಅಲ್ಲಿ ಬುರ್ಖಾ ಬದಲು ಸೀರೆ ಉಟ್ಟಿಕೊಂಡು ಒಂದೈದು ದಿನ ಇದ್ದೆ. ಕೋರ್ಟು ಗಲಾಟೆ ಎಲ್ಲ ಮುಗಿದ ಮೇಲೆ ಮತ್ತೆ ಇಲ್ಲಿಗೇ ವಾಪಸ್ ಬಂದೆ.
ಅಪಾರ ಪ್ರತಿಭೆಯ ತರುಣ ಬರಹಗಾರ ಟಿ.ಕೆ.ದಯಾನಂದ ಬರೆದ ರಸ್ತೆನಕ್ಷತ್ರ ಅಂಕಣ ಇಲ್ಲಿದೆ.

ನಂಗೆ ಯಾರೂ ಇಲ್ಲ ಕಣಪ್ಪ. ಗಂಡ ಬಿಟ್ಟೋಗಿಬಿಟ್ಟ. ಎರಡು ಮಕ್ಕಳು. ಮೊದ್ಲು ನಾನು ಭಿಕ್ಷೆ ಮಾಡ್ತಾ ಇರಲಿಲ್ಲ. ಗಂಡ ಸತ್ತೋದ ಮೇಲೆ ನಾನೇ ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ಮಕ್ಕಳನ್ನ ಸಾಕಿ ಇಬ್ಬರಿಗೂ ಮದುವೆ ಮಾಡಿದೆ. ಅಲ್ಲಿತನಕ ಎಲ್ಲಾ ಚೆನ್ನಾಗೇ ಇತ್ತು. ಮಕ್ಕಳು ಮದ್ವೆ ಮಾಡ್ಕೊಂಡ ಮೇಲೆ ಸೊಸೆಯಂದಿರು ಇಬ್ಬರೂ ಈ ಮುದುಕಿ ಯಾಕೆ. ಮನೆ ಬಿಟ್ಟು ಕಳಿಸಿಬಿಡಿ ಅಂತ ನನ್ನ ಮಕ್ಕಳ ತಲೆಕೆಡಿಸಿಬಿಟ್ರು. ಅವಾಗ ನನ್ನ ಇಬ್ಬರೂ ಮಕ್ಕಳೂ ಸೇರಿಕೊಂಡು ನನ್ನ ಮನೆಯಿಂದ ಹೊರಗೆ ಓಡಿಸಿಬಿಟ್ರು. ನಾನು ನಮ್ಮಕ್ಕನ ಮನೆಗೆ, ಅದೇ ಮೈಸೂರ್ ರೋಡಲ್ಲಿ ಐತಲ್ಲ, ಗುಡ್ಡದಳ್ಳಿಗೆ ಬಂದೆ.. ಅಕ್ಕನ ಮನೆಯಲ್ಲಿ ಒಂದಷ್ಟು ವರ್ಷ ಇದ್ದೆ. ಈಗ್ಗೆ ೨ ವರ್ಷದ ಹಿಂದೆ ನಮ್ಮಕ್ಕನೂ ಸತ್ತೋಗಿಬಿಟ್ಳು. ಕಳ್ಳೇ ಮಣ್ಣು ಸೇರಿಕೊಂಡ ಮೇಲೆ ಬಳ್ಳಿಗಳು ಏನ್ ಮಾಡ್ತವೆ ಹೇಳು.? ಅವಳ ಮಕ್ಕಳು ಮತ್ತೆ ನನ್ನನ್ನ ಈಚೆಗೆ ಓಡಿಸಿಬಿಟ್ರು. ಆ ಮನೆಯಿಂದ ಈಚೆಗೆ ಬಂದ ಮೇಲೆ ನಾನು ಬಿದ್ದ ಪಾಡು ಒಂಡೆರಡಲ್ಲ. ರೋಡಲ್ಲಿ ಮಲಗಿ, ಕ್ರಿಸೇನ್ಸ್‌ರ ಮಸಾಣದಲ್ಲಿ ಒಂದಷ್ಟು ದಿನ ಇದ್ದು… ಒಂದೊಂದಲ್ಲ…

ಆಮೇಲೆ ಒಂದಿನ ಇನ್ಯಾರೂ ನನಗೆ ಇಲ್ಲ. ನನ್ನನ್ನ ನಾನೇ ಸಾಕಿಕೊಳ್ಳಬೇಕು ಅಂತ ಅನ್ನಿಸಿಬಿಡ್ತು. ೧೫% ಬಡ್ಡಿಗೆ ಸಾಲ ತಗೊಂಡು ಇಲ್ಲೇ ಹಣ್ಣಿನ ಮಾರ್ಕೆಟ್ಟಲ್ಲಿ ಹಣ್ಣು ತಂದು ರೋಡಲ್ಲಿ ಗುಡ್ಡೆ ಇಟ್ಟುಕೊಂಡು ಮಾರಿಕೊಂಡು ಹೊಟ್ಟೆಪಾಡು ಮಾಡ್ತಾ ಇದ್ದೆ. ಒಂದೆರಡು ತಿಂಗಳು ಆದ ಮೇಲೆ ಮಳೆಗಾಲ ಶುರುವಾಯ್ತು. ಮಳೇನಲ್ಲಿ ಬೀದೀಲಿ ಕುಳಿತುಕೊಂಡು ಯಾಪಾರ ಮಾಡೋಕೆ ಆಗ್ತಾ ಇರಲಿಲ್ಲ. ಗಿರಾಕಿಗಳು ಯಾರೂ‍ ಬರ್ತಾ ಇರಲಿಲ್ಲ. ನನಗೇ ಇರೋಕೆ ಅಂತ ಯಾವುದೇ ಜಾಗ ಇಲ್ಲ ಅಂದ್ಮೇಲೆ ಹಣ್ಣುಗಳನ್ನ ಇಟ್ಕೊಳೋಕೆ ಅಂಗಡಿ ಎಲ್ಲಿಂದ ಹಾಕ್ಲಿ. ಜೊತೆಗೆ ಯಾರ್ಯಾರೋ ಬರೋರು ಕಾಸು ಕೊಡು ಇಲ್ಲಾಂದ್ರೆ ಅಂಗಡಿ ತೆಗಿ ಅಂತ ಜಗಳ ಮಾಡೋರು. ಅವರಿಗೆ, ಪೋಲೀಸಿನವರಿಗೆ ಕೊಟ್ಟೂ ಕೊಟ್ಟೂ ನನಗೇನೂ ಉಳೀತಾ ಇರಲಿಲ್ಲ. ಹಂಗಾಗಿ ಹಣ್ಣಿನ ವ್ಯಾಪಾರ ಬರಕತ್ತಾಗಲಿಲ್ಲ. ಲಾಸ್ ಆಗಿಬಿಡ್ತು.

ಬಡ್ಡಿಗೆ ಸಾಲ ತಗೊಂಡಿದ್ನಲ್ಲ. ಅವ್ರು ಸಾಲ ಕೇಳೋಕೆ ಶುರು ಮಾಡಿದ್ರು. ನಾನು ಹಿಂಗಿಂಗೆ, ಮಳೆಗಾಲ ಸ್ವಾಮಿ. ಯಾಪಾರ ಮಾಡೋಕೆ ಆಗ್ತಿರಲಿಲ್ಲ. ಲಾಸಾಗೋಯ್ತು ಅಂತ ಹೇಳಿದೆ. ಅವ್ರು ನನ್ನ ಮಾತು ಕೇಳಲಿಲ್ಲ. ಏನಾದ್ರೂ ಮಾಡು, ಭಿಕ್ಷೆ ಮಾಡು, ತಿಂಗಳ ಬಡ್ಡಿ ಕಟ್ಟು ಅಂತ ಹೆದರಿಸಿದ್ರು. ವಯಸ್ಸಾದೊಳು ಅಂತಾನೂ ನೋಡದಂಗೆ ಇಲ್ಲೇ ಈ ಸೇತುವೆ ಕೆಳಗೇನೆ ನಂಗೆ ಹೊಡೆದ್ರು. ಈ ವಯಸ್ಸಲ್ಲಿ ಏನು ಕೆಲಸ ಮಾಡಲಿ. ನಂಗೆ ಯಾರು ಕೆಲಸ ಕೊಡ್ತಾರೆ..? ಜೊತೆಗೆ ಬಡ್ಡಿ ಕೊಟ್ಟೋರು ನಂಗೆ ಹೊಡೆದ್ರಲ್ಲ. ಅವಾಗಿಂದ ನನ್ನ ಕಾಲೆಲ್ಲ ಇಷ್ಟಿಷ್ಟು ದಪ್ಪ ಊದಿಕೊಂಡಿತ್ತು. ನಡೆದಾಡೋಕೆ ಆಗ್ತಾ ಇರಲಿಲ್ಲ. ಇವಾಗಲೂ ಅದು ಸರಿ ಹೋಗಿಲ್ಲ. ನೋಡಿಲ್ಲಿ. ನನ್ನೂ, ನನ್ ಕಾಲನ್ನೂ ಬೇರೆ ಬೇರೆ ತೂಕ ಹಾಕಿದ್ರೆ ನನ್ ಕಾಲೇ ಜಾಸ್ತಿ ತೂಕ ಬತ್ತವೆ. ಹಂಗೆ ಊದಿಕೊಂಡಿದಾವೆ. ಸರಿ ಅಂತ ಇನ್ನೇನು ಮಾಡೋದು ಭಿಕ್ಷೇನೇ ಬೇಡೋಣ ಅಂತ ತೀರ್ಮಾನಿಸಿದೆ. ಇಲ್ಲೇ ಮಾರ್ಕೆಟ್ ಪಕ್ಕ ಇರೋ ಮಸೀದಿ ಹತ್ರ ಬುರ್ಖಾ ಹಾಕ್ಕೊಂಡು ಭಿಕ್ಷೆ ಬೇಡ್ತಾ ಇದ್ದೆ. ಭಿಕ್ಷೆ ಬೇಡೋದು ಹೆಂಗೆ ಅಂತಾನೂ ನನಗೆ ಗೊತ್ತಾಗ್ತಾ ಇರಲಿಲ್ಲ. ಆಮೇಲೆ ಅಕ್ಕ ಪಕ್ಕದಲ್ಲಿ ಭಿಕ್ಷೆ ಬೇಡ್ತಾ ಇದ್ದೋರು ಹಂಗಲ್ಲ ಕಣಮ್ಮ ಹಿಂಗೆ ಬುರ್ಖಾ ಹಾಕ್ಕೊಂಡು ಭಿಕ್ಷೆ ಬೇಡಿದ್ರೆ ಯಾರೂ ಭಿಕ್ಷೆ ಹಾಕಲ್ಲ. ಬುರ್ಕಾ ತೆಗೆದು ಅಮ್ಮಾ ಅಮ್ಮ, ಸಲಾಮಾಲೇಕುಂ. ಅಲ್ಲಾಹ್ ದುವಾ ಕರೇಗಾ.. ಮೇರೆ ಬಾಪ್. ಅಂತ ಕೂಗ್ತಾ ಇರಬೇಕು. ಅವಾಗ ಯಾರಾದ್ರೂ ಕಾಸು ಕೊಡ್ತಾರೆ ಅಂತ ಹೇಳಿದ್ರು. ಹಂಗೇ ಮಾಡಿದೆ.

ಸ್ವಲ್ಪ ಚಿಲ್ರೆ ಕಾಸು ಬೀಳ್ತಾ ಇತ್ತು. ಅದ್ರಲ್ಲಿ ಊಟ ತಿಂಡಿಗೆ ಅಂತ ಖರ್ಚು ಮಾಡಿದ್ರೆ ಕಡೇಗೆ ನನಗೆ ಅಂತ ಏನೂ ಉಳೀತಾ ಇರಲಿಲ್ಲ. ಅವಾಗ ಅಗೋ, ಅಲ್ಲಿ ಸರ್ಕಲ್‌ನಲ್ಲಿ ಭಿಕ್ಷೆ ಬೇಡ್ತಿದಾಳಲ್ಲ. ನಸೀಮಾ ಅಂತ. ಅವಳು ಊಟಕ್ಕೆ ಹೋಟ್ಲುಗೆ ಹೋಗಬೇಡ. ಮಸೀದಿಯವರು ಸಂಜೆ ಮತ್ತೆ ರಾತ್ರಿ ಇಲ್ಲದೋರಿಗೆ ಊಟ ಕೊಡ್ತಾರೆ. ನಾನು ಹೇಳ್ತೀನಿ.. ಬೆಳಿಗ್ಗೆ ಹೊತ್ತು ಮಾತ್ರ ಹೋಟ್ಲಲ್ಲಿ ತಿಂಡಿ ತಿಂದ್ಕೋ ಅಂತ ಹೇಳಿದ್ಲು. ಅವಾಗಿಂದ ಮಸೀದಿಯೋರು ಮಧ್ಯಾನ್ಹ ಊಟ ಕೊಡ್ತಾರೆ. ಭಿಕ್ಷೆ ಬೇಡಿದ ದುಡ್ಡಲ್ಲಿ ಎಲ್ಲ ಸೇರಿಸ್ಕೊಂಡು ತಿಂಗಳಿಗೊಂದು ಸಾರಿ ಹಣ್ಣು ವ್ಯಾಪಾರಕ್ಕೆ ಬಡ್ಡಿಸಾಲ ಮಾಡಿದ್ನಲ್ಲ, ಅದರ ಬಡ್ಡಿ ಕಟ್ತಾ ಇದೀನಿ. ಜೊತೇಗೆ ಸ್ವಲ್ಪ ದುಡ್ಡು ಕೂಡಿಟ್ಟಿದೀನಿ. ಎಲ್ಲ ಸೇರಿಸಿ ಒಂದ್ಸಲ ಆ ಸಾಲದ ದುಡ್ಡು ೪ ಸಾವಿರ ರೂಪಾಯಿನ ತೀರಿಸಿಬಿಟ್ರೆ ಆಮೇಲೆ ನಾನು ಸತ್ತೋಗಿಬಿಟ್ರೂ ಚಿಂತೆ ಇಲ್ಲ. ಇನ್ನೊಬ್ಬರ ಋಣ ಹೊತ್ಕೊಂಡು ಸತ್ತೋಗಿಬಿಟ್ರೆ ದೇವರು ನಮ್ಮನ್ನ ಸುಮ್ಮನೆ ಬಿಡಲ್ಲ. ನೆಮ್ಮದಿ ಇರಲ್ಲ. ಏನೋ ಭಿಕ್ಷೆ ಬೇಡ್ತೀನಿ. ಸಿಕ್ಕಿದ್ದು ತಿಂತೀನಿ.. ದೇವ್ರು ಬಿಟ್ರೆ ನನಗೆ ಇನ್ಯಾರೂ ದಾರಿ ಇಲ್ಲ.

ಮೊದಲಿನಂಗೆ ನಂಗೆ ಇವಾಗ ನಡೆಯೋಕೆ ಆಗಲ್ಲ. ಕಾಲುಗಳು ಊದಿಕೊಂಡಿದಾವೆ. ರಾತ್ರಿ ಹೊತ್ತು ಇಲ್ಲೇ ಸೇತುವೆ ಕೆಳಗೆ ಮಲಕ್ಕೋತೀನಿ. ಬೆಳಿಗ್ಗೆ ಎದ್ದು ಯಾರಾದ್ರೂ ಮಸೀದಿ ಪಕ್ಕ ಕರ್ಕೊಂಡು ಹೋಗಿ ಕೂರಿಸ್ತಾರೆ. ಒಂದೊಂದ್ಸಲ ಯಾರೂ ಇಲ್ಲದಾಗ ನಾನೇ ತೆವಳಿಕೊಂಡು ಅಲ್ಲಿಗೆ ಹೋಗ್ತೀನಿ, ರಾತ್ರೆ ತನಕ ಅಲ್ಲೇ ಭಿಕ್ಷೆ ಬೇಡ್ತಾ ಇರ್ತೀನಿ. ಈಗ ಎರಡ್ಮೂರು ತಿಂಗಳ ಹಿಂದೆ ನನ್ ನಾಲಿಗೆ ಈಚೆಗೆ ಬಿದ್ದು ಜೋತಾಡ್ತಾ ಇತ್ತು. ಅದೇನು ಖಾಯಿಲೇನೋ ಏನೋ. ಇಲ್ಲೇ ಒಬ್ರು ಡಾಕ್ಟ್ರು ಹತ್ರ ಇಗೋ ಈ ಕಸ ತಳ್ಳೋ ಗಾಡೀ ಇದೆಯಲ್ಲ. ಅದ್ರಲ್ಲಿ ನನ್ನ ಹಾಕ್ಕೊಂಡು ಇಲ್ಲಿರೋರೆಲ್ಲ ಕರ್ಕೊಂಡೋಗಿದ್ರು. ಡಾಕ್ಟ್ರು ಅದೆನೋ ಔಷಧಿ ಕುಡಿಸಿ ನಾಲಿಗೇನ ಒಳಗೆ ತಳ್ಳಿದ್ರು. ಒಂದಷ್ಟು ದಿನ ಮಾತಾಡಬೇಡ. ಬರೀ ನೀರಿನ ಪದಾರ್ಥ ಕುಡಿ ಅಂತ ಹೇಳಿದ್ರು. ಹಂಗೇ ಮಾಡಿದೆ. ಆಮೇಲೆ ಸ್ವಲ್ಪ ಸರೋಯ್ತು. ಮಾತಾಡಬೇಕಾದ್ರೆ ಇವಾಗ್ಲೂ ನಾಲಿಗೆ ನೋಯ್ತಾ ಇರುತ್ತೆ. ಒಂದ್ಕಡೆ ಕಾಲು ಊದಿಕೊಂಡಿದೆ. ಇನ್ನೊಂದು ಕಡೆ ನಾಲಿಗೆ ನೋಯ್ತದೆ. ಇಲ್ಲೇ ಒದ್ದಾಡ್ತಿನಿ. ಈ ಪೋಲೀಸ್ನೋರು ನನ್ ಪರಿಸ್ಥಿತಿ ನೋಡಿ, ಯಾಕಮ್ಮ ಹಿಂಗೆ ನರಳ್ತಾ ಇರ್ತೀಯ, ಯಾರಿಗಾದ್ರೂ ಹೇಳು ಮನೆ-ಗಿನೆ ಮಾಡಿಸಿಕೊಡ್ತಾರೆ. ಕಾರ್ಪೊರೇಷನ್‌ಗೆ ಹೋಗಿ ಕೇಳು ಅಂತಾರೆ. ನಡೆಯೋಕೆ ಆಗಲ್ಲ ಆಪೀಸ್‌ಗೆ ಹೆಂಗೆ ಹೋಗಲಿ. ಯಾರನ್ನ ಕೇಳಲಿ? ನಂಗೆ ಊಟ ಬೇಡ ಏನೂ ಬೇಡ. ಭಿಕ್ಷೆ ಬೇಡಿಕೊಂಡು ತಿಂತೀನಿ. ನನ್ ಕಾಲೊಂದು ನೆಗವಾಗಿದ್ರೆ ಖಂಡಿತವಾಗಲೂ ನಾನು ಭಿಕ್ಷೆ ಬೇಡ್ತ ಇರಲಿಲ್ಲ ಕಣಪ್ಪ. ನಮ್ಮೆಜಮಾನ ಬದುಕಿದ್ದಾಗ ನೆಂಟ್ರು ಇಷ್ಟರು ಮನೇಗೆ ಪಿತಪಿತ ಅನ್ನೋರು, ಇದೇ ಕೈಯೆತ್ತಿ ನೂರು ಜನಕ್ಕೆ ಹಾಕಿದ್ದೀನಿ, ಹತ್ತು ಜನಕ್ಕೆ ಮದುವೆ ಮಾಡಿಸಿದ್ದೀನಿ. ನಂಗಿಂಥಾ ನಸೀಬ್ ಕೊಟ್ಬುಟ್ಯಲ್ಲ ಅಂತ ದೇವ್ರುನ್ನ ಬೈಕಂತೀನಿ, ಇಲ್ಲಾಂದ್ರೆ ಗಾಡಿ ಎಳಕೊಂಡಾದ್ರೂ ನನ್ನ ಅನ್ನ ವಂಚಿಕೊಂಡು ಇರ್ತಿದ್ದೆ. ಆಯ್ಕಂಡ್ ತಿನ್ನೋ ಕೋಳಿ ಕಾಲು ಮುರಿದುಬಿಟ್ಟ ದೇವರು. ಹಾಳಾಗೋಗ್ತನೆ ಅವನು. ಬೇರೆ ದಾರಿ ಇಲ್ಲದಂಗೆ ಭಿಕ್ಷೆ ಮಾಡ್ತಾ ಇದೀನಿ. ಒಂದು ಮನೆ ಅಂತ ಆದ್ರೆ ಒಂದು ನೆರಳಿರುತ್ತೆ. ಭಿಕ್ಷೆ ಬೇಡಿ ಹೋಗಿ ಮಲಗಿಕೋಬಹುದು.

ಮಳೆ ಬಂದ್ರೆ ಕಷ್ಟ. ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ತೆವಳಿಕೊಂಡು ಹೋಗಬೇಕು. ಬಟ್ಟೇ ಎಲ್ಲ ಸವೆದು ಹೋಗ್ತವೆ. ಕುಂಡೀ ಹತ್ರ ಬಟ್ಟೆ ಎಲ್ಲ ಹರುದು ಹೋಗ್ತವೆ. ಭಿಕ್ಷೆ ಬೇಡಿದ ದುಡ್ಡಲ್ಲಿ ಅಷ್ಟು ಇಷ್ಟು ಹಣ ಉಳಿಯುತ್ತಲ್ಲ ಅದ್ರಲ್ಲಿ, ಇಲ್ಲಿದಾಳಲ್ಲ ಅವಳ ಕೈಲಿ ಹೂವಿನ ಮಾರ್ಕೆಟ್ಟಿಂದ ಅರ್ಧ ಕೆಜಿ ಬಿಡಿ ಹೂವ ತರಿಸ್ಕೋತೀನಿ. ಅದನ್ನ ಕಟ್ಟಿ ಒಂದು ಮೊಳಕ್ಕೆ ೧೦ ರೂಪಾಯಿ ಹಂಗೆ ಮಾರ್ತೀನಿ. ಆ ದುಡ್ಡನ್ನ ಸಾಲ ತೀರಿಸೋಕೆ ಅಂತ ಎತ್ತಿಟ್ಕೋತೀನಿ. ಇವಾಗ ೨-೩ ತಿಂಗಳ ಹಿಂದೆ ಬಾಬರಿ ಮಸೀದಿ ಗಲಾಟಿದು ಕೋರ್ಟ್ ಆಯ್ತಲ್ಲ. ಅವಾಗ ಪೋಲೀಸ್ನೋರು ಇಲ್ಲೆಲ್ಲ ಇರಬೇಡ ಕಣಮ್ಮ. ಇಂದೂ ಮುಸ್ಲಿಂ ಗಲಾಟೆಗಳಾಗ್ತವೆ. ನಿಂಗೇನಾದ್ರೂ ಏಟು ಬೀಳ್ತವೆ, ಒಂದೆರಡು ದಿನ ಎಲ್ಲಾದ್ರೂ ಹೋಗು ಅಂತಂದ್ರು. ನಾನು ಇಲ್ಲೇ ಪಕ್ಕದಲ್ಲಿ ಮುರುಗಮಲ್ಲ ದೇವಸ್ಥಾನ ಅಂತ ಐತಲ್ಲ ಅಲ್ಲಿ ಬುರ್ಖಾ ಬದಲು ಸೀರೆ ಉಟ್ಟಿಕೊಂಡು ಒಂದೈದು ದಿನ ಇದ್ದೆ. ಕೋರ್ಟು ಗಲಾಟೆ ಎಲ್ಲ ಮುಗಿದ ಮೇಲೆ ಮತ್ತೆ ಇಲ್ಲಿಗೇ ವಾಪಸ್ ಬಂದೆ. ದೇವಸ್ಥಾನದಲ್ಲಿ ಪೂಜಾರಪ್ಪನೋರು ಯಾರಮ್ಮ ನೀನು ಯಾವ ಪೈಕಿ ಅಂತ ಎಲ್ಲ ಕೇಳಿದ್ರು. ನಾನು ನನ್ನ ಹೆಸ್ರು ಸರೋಜಮ್ಮ. ಅಂತ ಸ್ವಾಮಿ. ನಂಗೆ ಯಾರೂ ಇಲ್ಲ ಎರಡು ದಿನ ಒಂದು ಮೂಲೇಲಿ ಇರ್ತೀನಿ ಅಂತ ಹೇಳಿ ಅಲ್ಲಿದ್ದೆ. ನಾವು ಸಾಬ್ರು ಅಂತ ಹೇಳಿದ್ರೆ ಅವ್ರು ಒಳೀಕೆ ಸೇರಿಸ್ಕೊಳ್ಳಲ್ಲ. ಪೂಜಾರಿಕೆ ಮಾಡೋರು ಬಾಡು ತಿನ್ನೋ ಸಾಬುರನ್ನ ಮನೇಗೇ ಸೇರಿಸಲ್ಲ. ಅಂತಾದ್ರಾಗೆ ದೇವಸ್ಥಾನದ ಒಳಗೆ ಬಿಡ್ತಾರಾ? ಅದ್ಕೇ ನಾನು ಸುಳ್ಳು ಹೇಳ್ದೆ. ನನ್ನದು ಅಂತ ಒಂದು ಮನೆ ಇದ್ರೆ, ನಾನು ಅಲ್ಲಿಗೇ ಹೋಗಿ ಇರ್ತಿದ್ದೆ. ಪಿಂಚಣಿ ಮಾಡಿಸಿಕೊಡ್ತೀನಿ ಅಂತ ತುಂಬಾ ಜನ ಬಂದು ಕಾಸು ಈಸ್ಕೊಂಡು ಹೋದ್ರು. ಅವರಿಗೆ ಕೊಡಬೇಕು. ಇವರಿಗೆ ಕೊಡಬೇಕು ಅಂತ ದುಡ್ಡು ಕೇಳೋರು. ಬಡ್ಡಿ ಕೊಡೋ ಕಾಸಲ್ಲಿ ಅವರಿಗೆ ಕಾಸು ಕೊಟ್ಟೆ ಯಾರೂ ಏನೂ ಮಾಡಿಸ್ಲಿಲ್ಲ. ಪಿಂಚಣಿನಾದ್ರೂ ಬಂದ್ರೆ ಆ ದುಡ್ಡನಾದ್ರೂ ಒಟ್ಟಿಗೆ ಸೇರಿಸ್ಕೊಂಡು ಸಾಲ ತೀರಿಸಬಹುದು. ಅವ್ರೂ ನಂಗೆ ಮೋಸ ಮಾಡ್ಬಿಟ್ರು. ಬಡುವ್ರ ಕಡೆ ಯಾರೂ ನೋಡೋದಿಲ್ಲ. ಸಾವುಕಾರರನ್ನೇ ನೋಡ್ತ ಇರ್ತಾರೆ. ನಮ್ಮನ್ನ ಕೇಳೋರು ಯಾರೂ ಇಲ್ಲ.

ಕಾಯಿಲೆ ಬಂದ್ರೆ ಮಾತ್ರೆ ತಗೋಬೇಕು. ಈ ಕಾಲು ಊತಕ್ಕೆ ಈ ಮಾತ್ರೆ, ನಾಲಿಗೆ ಬೀಳ್ತದಲ್ಲ ಅದುಕ್ಕೆ ಈ ಮಾತ್ರೆ ಬರೆದುಕೊಟ್ಟವ್ರೆ. ೨ ಮಾತ್ರೆಗೆ ೫೦ ರೂಪಾಯಿ ಕೊಡಬೇಕು. ಈಟೀಟು ದಪ್ಪ ಸೇತುವೆ ಕಟ್ಟುಸವ್ರಲ್ಲ, ಬಡುವ್ರಿಗೆ ಅಂತ ಮಾತ್ರೆ ಔಸ್ದ ರೇಟಾದ್ರೂ ಕಡಿಮೆ ಮಾಡಬಹುದಲ್ಲವಾ? ೫೦ ರೂಪಾಯಿ ಅಂದ್ರೆ ೫೦ ರೂಪಾಯಿ. ಕಡಿಮೆ ಮಾಡ್ಕಳಪ್ಪ ದಿಕ್ಕಿಲ್ಲದೋಳು ಅಂತಂದ್ರೆ, ಕಡಿಮೆ ಮಾಡ್ಕಳದಿಲ್ಲ. ೫೦ ರೂಪಾಯಿ ನಮಗೆ ಒಂದು ದಿನದ ಭಿಕ್ಷೆ ಕಾಸು. ಅದನ್ನ ಕೊಟ್ಟು ಮಾತ್ರೆ ತಗೋಬೇಕು. ವಾರಕ್ಕೆ ಎರಡು ಮೂರು ಸಲ ಮಾತ್ರೆ ತಿನ್ನಬೇಕಂತೆ. ಮಾತ್ರೆ ದುಡ್ಡಿಗೆ ಭಿಕ್ಷೆ ಬೇಡಬೇಕು, ಭಿಕ್ಷೆ ಬೇಡೋಕೆ ಉಸಿರು ಬೇಕಲ್ಲ ಅದಕ್ಕೆ ಮಾತ್ರೆ ತಿನ್ನಬೇಕು. ಭಿಕ್ಷೆ ಬೇಡೋಕೂ ಬಿಡಲ್ಲ. ಒಂದ್ಸಲ ಏನಾಯ್ತು ಅಂದ್ರೆ ಇಲ್ಲಿ ಭಿಕ್ಷೆ ಬೇಡ್ತಾ ಇದ್ದೆ. ಬೆಗ್ಗರ್ ಕಾಲೋನಿನೋರು ವ್ಯಾನ್ ತಗೊಂಡು ಬಂದು ನನ್ನನ್ನೂ ವ್ಯಾನಿಗೆ ಎತ್ತಿ ಹಾಕಿ ಬಿಟ್ಟಿದ್ರು. ಬಿಡ್ರಪ್ಪ ಬಿಡ್ರಪ್ಪ ಅಂತ ಕಾಲು ಹಿಡ್ಕೊಂಡರೂ ಕೇಳಲಿಲ್ಲ. ಕಡೆಗೆ ಇವ್ರು ನನ್ನ ಬಿಡಲ್ಲ ಕರ್ಕೊಂಡೋಗಿ ಕೂಡಾಕ್ತಾರೆ ಅಂತ ಅವರಲ್ಲಿ ಒಬ್ಬನ ಕೈ ಕಚ್ಚಿಬಿಟ್ಟೆ. ಕೂಗಾಡಿದೆ. ಅಷ್ಟೊತ್ತಿಗೆ ಮಸೀದಿನವ್ರು ಬಂದು ಈ ಯಮ್ಮ ಭಿಕ್ಷೆ ಬೇಡ್ತಿಲ್ಲ. ಮಸೀದಿ ಕೆಲಸ ಮಾಡುತ್ತೆ ಅವರನ್ನ ಬಿಡ್ರಿ ಅಂತ ಹೇಳಿ ಗಲಾಟೆ ಮಾಡಿದ ಮೇಲೆ ಅದನ್ನ ಬರೆದುಕೊಡ್ರಿ ಅಂದ್ರು. ಮಸೀದಿಯೋರು ಈ ಯಮ್ಮ ಮಸೀದಿಲಿ ಕೆಲಸ ಮಾಡ್ತಿದಾಳೆ ಭಿಕ್ಷುಕಿ ಅಲ್ಲ ಅಂತ ಬರೆದುಕೊಟ್ಟ ಮೇಲೆ, ನನ್ನೊಬ್ಬಳನ್ನ ಬಿಟ್ಟು ಬಿಟ್ರು. ಮಿಕ್ಕಿದೋರನ್ನ ಎಳ್ಕೊಂಡು ಹೋದ್ರು. ಹಿಂಗೇ ಭಿಕ್ಷೆ ಬೆಡ್ಕೊಂಡು ಇದೀನಿ. ಯಾವತ್ತೋ ಒಂದಿನ ಸತ್ತೋಗ್ತೀನಿ. ಅವತ್ತು ಬೇವರ್ಸಿ ಹೆಣ ಅಂತ ಯಾರೋ ಮುನ್ಸಿಪಾಲ್ಟಿನೋರು ಮಣ್ಣು ಮಾಡ್ತಾರೆ. ಅದನ್ನ ನೆನಸಿಕೊಂಡ್ರೆ ಕಣ್ಣಲ್ಲಿ ನೀರು ಬರುತ್ತೆ. ನನ್ನ ಮಕ್ಕಳು ಎಲ್ಲೆಲ್ಲಿದಾರೋ ಏನೋ. ಅವರೇ ನನ್ನ ಮಣ್ಣು ಮಾಡಿದ್ರೆ….. ಅಷ್ಟೇ ಸಾಕು ನಂಗೆ.

(ಅಮೀರುನ್ನೀಸಾ ಫೋಟೋಗಳು: ಲೇಖಕರಿಂದ)