ನಾನು ಕಾರವಾರದಲ್ಲಿ ವರದಿಗಾರನಾಗಿದ್ದಾಗ ನಡೆದ ಘಟನೆ: ಭಟ್ಕಳ ಗಲಭೆಯ ಸಂದರ್ಭದಲ್ಲಿ ಪತ್ರಕರ್ತ ಮಿತ್ರರೆಲ್ಲ ಭಟ್ಕಳಕ್ಕೆ ಭೇಟಿ ನೀಡಿ ಬಸ್ಸಲ್ಲಿ ವಾಪಸ್ ಬರುತ್ತಿದ್ದೆವು. ಅಪರಾಹ್ನದ ವೇಳೆ. ಬಸ್ಸಿನಲ್ಲಿ ಒಬ್ಬಾತನನ್ನು ಬಿಟ್ಟು ಎಲ್ಲರೂ ಕುಳಿತಿದ್ದರು. ಹಿಂದೆ ಒಂದು ಸೀಟು ಖಾಲಿ ಇದ್ದರೂ ಆತ ಕುಳಿತಿರಲಿಲ್ಲ. ಇಡೀ ಬಸ್ಸಿನಲ್ಲಿ ಪ್ರಶಾಂತ ವಾತಾವರಣವಿತ್ತು. ಆಹ್ಲಾದಕರ ಗಾಳಿ ಬೀಸುತ್ತಿತ್ತು. ಬಸ್ಸು ಒಂದೇ ಲಯದಲ್ಲಿ ಹೊರಟಿತ್ತು. ಆ ಬಸ್ಸಿನಲ್ಲಿ ಕೆಲ ಮುಸ್ಲಿಂ ದಂಪತಿಗಳಿದ್ದರು. ಎಲ್ಲರೂ ಮೌನವಾಗಿ ಪ್ರಯಾಣದ ಸುಖವನ್ನು ಅನುಭವಿಸುತ್ತಿದ್ದರು. ಆದರೆ ಆ ನಿಂತ ವ್ಯಕ್ತಿ ಮುಸ್ಲಿಮರ ವಿರುದ್ಧ ಕಿಡಿ ಕಾರತೊಡಗಿದ. ಆದರೆ ಅವನ ಕಡೆ ಯಾರೂ ನೋಡಲಿಲ್ಲ. ಆತ ಪ್ರತಿಯೊಬ್ಬರಿಗೂ ಕೇಳಿಸುವಂತೆ ಮುಸ್ಲಿಮರನ್ನು ಜೋರು ಜೋರಾಗಿ ದ್ವೇಷಿಸತೊಡಗಿದ. ಅವನಿಗೆ ಯಾರೂ ಬೆಂಬಲಿಸಲಿಲ್ಲ. ಉಪದೇಶವನ್ನೂ ಮಾಡಲಿಲ್ಲ. ಬಸ್ಸಿನಲ್ಲಿ ಅವನ ಅಸ್ತಿತ್ವವೇ ಇಲ್ಲದಂತೆ ಎಲ್ಲರೂ ಕುಳಿತಿದ್ದರು. ನನ್ನ ಪಕ್ಕದಲ್ಲಿ ಕುಳಿತಿದ್ದ ಗಂಗಾಧರ ಹಿರೇಗುತ್ತಿಗೆ ಮೈಯೆಲ್ಲ ಕುದಿಯುತ್ತಿತ್ತು. ಇಂಥ ವಿಚಾರಗಳಲ್ಲಿ ಆತ ಬಹಳ ಭಾವುಕ. ಇಂಥ ಸನ್ನಿವೇಶಗಳನ್ನು ಆತ ತಡೆದುಕೊಳ್ಳುವವನಲ್ಲ. ಪ್ರತಿಭಟನೆ ಆತನ ಗುಣ. ಆದರೆ ನನಗೆ ತಮ್ಮನಾಗಿದ್ದರಿಂದ ಒಳ ಒಳಗೆ ಬೇಸರಪಟ್ಟುಕೊಂಡರೂ ನನ್ನ ಮಾತನ್ನು ಮೀರುತ್ತಿರಲಿಲ್ಲ. ಎರಡು ಮೂರು ಬಾರಿ ‘ನನಗೆ ತಡೆಯಲಿಕ್ಕಾಗುತ್ತಿಲ್ಲ; ಆತನಿಗೆ ಬುದ್ಧಿ ಕಲಿಸುತ್ತೇನೆ’ ಎಂದು ಗಂಗಾಧರ ಏಳುವ ಪ್ರಯತ್ನ ಮಾಡಿದ. ನಾನು ಪ್ರತಿಬಾರಿಯೂ ‘ಸುಮ್ಮನಿರು, ಜನ ಎಷ್ಟೊಂದು ಪ್ರಜ್ಞಾವಂತರಿದ್ದಾರೆ ನೋಡು’ ಎಂದು ಹೇಳುತ್ತಿದ್ದೆ. ಅದು ನನಗೆ ಸಂತೋಷದ ಕ್ಷಣವಾಗಿತ್ತು. ಆ ವ್ಯಕ್ತಿ ಅಂಕೋಲಾ ಬರುವ ಮೊದಲೇ ತನ್ನ ಒಂಟಿತನಕ್ಕೆ ಬೇಸರಪಟ್ಟುಕೊಂಡು ಸುಸ್ತಾಗಿ ಮೌನವಾದ. ಕಾರವಾರ ಬರುವ ವರೆಗೆ ಸುಮ್ಮನಿದ್ದು ಬಸ್ಸು ನಿಂತೊಡನೆ ಸರಸರನೆ ಇಳಿದುಹೋದ. ಜನರೆಲ್ಲ ಮೌನವಾಗೇ ಇದ್ದರು. ಮೌನವಾಗೇ ಇಳಿದುಹೋದರು. ಈ ದೇಶಕ್ಕೆ ಭವಿಷ್ಯವಿದೆ ಎಂದು ಸಮಾಧಾನ ಪಟ್ಟೆ.

ರಾಜಕಾರಣಿಗಳು ಮತ್ತು ಧರ್ಮಕಾರಣಿಗಳು ಜನರ ದೈನಂದಿನ ಬದುಕಿನಿಂದ ಏನನ್ನೂ ಕಲಿಯುವುದಿಲ್ಲ. ಆದರೆ ಅವರ ಮೇಲೆ ಹಾಗೂ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಾರೆ. ತಮಗೆ ಬೇಕಾದಂತೆ ಜನರಿಗೆ ಹೊಸ ಪಾಠಗಳನ್ನು ಕಲಿಸುತ್ತಲೇ ಹೋಗುತ್ತಾರೆ. ರಾಜಕಾರಣ ಮತ್ತು ಧರ್ಮ ಸದಾ ಒಂದಾಗಿರುವಂತೆ ನೋಡಿಕೊಳ್ಳುತ್ತಾರೆ. ರಾಜನೀತಿ ಮತ್ತು ಧರ್ಮದ ಪಾವಿತ್ರ್ಯವನ್ನು ಹಾಳುಗೆಡವುತ್ತಾರೆ.


ಭಟ್ಕಳ ಗಲಭೆಯ ಸಂದರ್ಭದಲ್ಲಿ ೨೦ ಮಂದಿ ಬಡ ಮುಸ್ಲಿಮರು ಮತ್ತು ೨೦ ಮಂದಿ ಬಡ ಮೀನುಗಾರ, ನಾಮಧಾರಿ ಮುಂತಾದ ಹಿಂದುಳಿದ ಜನಾಂಗದವರು ಜೀವ ಕಳೆದುಕೊಂಡರು. ನೂರಾರು ಜನ ಗಾಯಾಳುಗಳಾದರು. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ಹಾಳಾಯಿತು. ದಂಗೆಯ ದಿನಗಳಲ್ಲಿ ಒಂದು ರಾತ್ರಿ ಹಿಂದುಳಿದ ಜನಾಂಗದ ಬಡವನೊಬ್ಬನಿಗೆ ದುಷ್ಕರ್ಮಿಗಳು ಚಾಕು ಹಾಕಿದ್ದರು. ಆ ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಕಾರಲ್ಲಿ ಹೊರಟಿದ್ದ ಒಬ್ಬ ಮುಸ್ಲಿಂ ಕೂಡಲೇ ಕಾರಿಂದ ಇಳಿದು ಆತನನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲು ಮುಂದಾದ. ನೆರೆದವರು ಚಿಂತಾಜನಕ ಸ್ಥಿತಿಯಲ್ಲಿದ್ದ ಆ ವ್ಯಕ್ತಿಯನ್ನು ಕಾರಲ್ಲಿ ಹಾಕಿದರು. ಆದರೆ ಆತನ ಜೊತೆ ಯಾರೂ ಮಣಿಪಾಲ್‌ಗೆ ಹೋಗಲು ಸಿದ್ಧರಾಗಲಿಲ್ಲ. ಯಾರಾದರೂ ಹಿಂದುಗಳು ಜೊತೆಗೆ ಬನ್ನಿರಿ. ರಸ್ತೆಯಲ್ಲಿ ಯಾರಾದರೂ ತಡೆದು, ನಾನೇ ಚಾಕು ಹಾಕಿ ಕಾರಲ್ಲಿ ಒಯ್ಯುತ್ತಿದ್ದೇನೆ ಎಂದು ಭಾವಿಸಿದರೆ ಏನು ಹೇಳಲಿ ಎಂದು ಆ ಕಾರಿನವ ಅಂಗಲಾಚಿದ. ಯಾರೂ ಕಿವಿಗೊಡಲಿಲ್ಲ. ಗಾಯಾಳುವಿನ ಸಾವು ಬದುಕಿನ ಪ್ರಶ್ನೆ ಆತನ ಮುಂದಿತ್ತು. ಆತ ಯಾರ ಸಹಾಯವಿಲ್ಲದೆ ಗಾಯಾಳುವನ್ನು ಒಯ್ಯಲೇ ಬೇಕಾಯಿತು.


ಭಟ್ಕಳ ಬಳಿಯ ಕಡಲತೀರದ ನಸ್ತಾರ್ ಗ್ರಾಮದಲ್ಲಿ ಗಲಭೆಯ ದಿನಗಳಲ್ಲಿ ಒಂದು ರಾತ್ರಿ ಮೀನುಗಾರ ಯುವಕರು ಬರೀ ಹೆಣ್ಣುಮಕ್ಕಳೇ ಇದ್ದ ಮುಸ್ಲಿಮರೊಬ್ಬರ ಮನೆಗೆ ಬೆಂಕಿ ಹಚ್ಚುತ್ತಿದ್ದರು. ಮನೆಯೊಡತಿ ಆ ಬೆಂಕಿಯ ಮೇಲೆ ಬಕೆಟ್‌ನಿಂದ ನೀರು ಎರಚುತ್ತಿದ್ದಳು. ಅವಳ ಸಹಾಯಕ್ಕೆ ಬರುವ ಧೈರ್ಯವನ್ನು ಅಕ್ಕಪಕ್ಕದ ಯಾವ ಹಿಂದು ಅಥವಾ ಮುಸ್ಲಿಮ ಪುರುಷರು ಮಾಡಲಿಲ್ಲ. ಆಕೆಯೊಬ್ಬಳೇ ಈ ದುರಂತವನ್ನು ಎದುರಿಸುತ್ತಿದ್ದಳು. ಬೆಂಕಿ ಆರಿಸುವ ಆಕೆಯ ಪ್ರಯತ್ನಕ್ಕೆ ಅಡ್ಡಿಯುಂಟು ಮಾಡುವ ಉದ್ದೇಶದಿಂದ ಗುಂಪಿನಲ್ಲಿದ್ದ ಯುವಕನೊಬ್ಬ ಹೋಗಿ ಅವಳ ಕೈಹಿಡಿದ. ಆಗ ಅದೇ ಬೆಂಕಿ ಹಚ್ಚುವ ಗುಂಪಿನಲ್ಲಿದ್ದ ಇನ್ನೊಬ್ಬ ಮೀನುಗಾರ ಯುವಕ ಆವೇಶದಿಂದ ಎರಗಿ ಬಂದು ಆ ಕೈಹಿಡಿದವನ ಅಂಗಿ ಹಿಡಿದು ಹೊಡೆದುಬಿಟ್ಟ. ಕೈ ಹಿಡಿದ ಯುವಕನಿಗೆ ದಿಕ್ಕು ತೋಚದಂತಾಯಿತು. ಎಲ್ಲರೂ ಮೌನವಾದರು. ಅಲ್ಲಿಂದ ಹೊರಟು ಹೋದರು. ರಕ್ಷಣೆಗೆ ಬಂದ ಯುವಕ ಅಮ್ಮನ ಮಾನ ಕಾಯ್ದಿದ್ದ. ಆ ಹೆಣ್ಣುಮಗಳ ಪಕ್ಕದ ಮನೆಯವನಾದ ಆತ, ಬಾಲ್ಯದ ದಿನಗಳಲ್ಲಿ ಆಕೆಯ ಉಡಿಯಲ್ಲೇ ಬೆಳೆದ ಕಾರಣ ಅವಳಿಗೆ ‘ಅಮ್ಮ’ ಎಂದೇ ಕರೆಯುತ್ತಿದ್ದ!


ಒಂದು ದಿನ ಪತ್ರಕರ್ತರೆಲ್ಲ ಸೇರಿ ಕಾರವಾರದಿಂದ, ಗಲಭೆ ಪೀಡಿತ ಭಟ್ಕಳಕ್ಕೆ ಹೋಗುತ್ತಿದ್ದೆವು. ಭಟ್ಕಳದ ಹೊರ ವಲಯದಲ್ಲಿ ಚೀರೆಕಲ್ಲು ಕಡಿಯುತ್ತಿದ್ದ ಇಬ್ಬರು ಕೂಲಿಗಳನ್ನು ನೋಡಿದೆವು. ಈ ಗಲಭೆಯ ಬಗ್ಗೆ ಅವರ ಅನಿಸಿಕೆಯನ್ನು ತಿಳಿದುಕೊಳ್ಳಬೇಕೆನಿಸಿತು. ವಾಹನ ನಿಲ್ಲಿಸಿ ಅವರ ಬಳಿ ಹೊರಟೆ. ಇತರ ಗೆಳೆಯರೂ ಬಂದರು. ಆ ಇಬ್ಬರೂ ಕೂಲಿಕಾರರ ಮುಖ ಮತ್ತು ಮಾಸಿದ ಬಟ್ಟೆಗಳಿಗೆ ಚೀರೆಕಲ್ಲಿನ ಕೆಂಪುಹುಡಿ ಅಂಟಿಕೊಂಡಿತ್ತು. ಗಲಭೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದೆ. ‘ಗಲಭೆ ಮಾಡುವವರಿಗೆ ಕೇಳಿರಿ’ ಎಂದು ಅವರಲ್ಲೊಬ್ಬ ಬೆವರು ಒರೆಸಿಕೊಳ್ಳುತ್ತ ಹೇಳಿದ. ಇನ್ನೊಬ್ಬ ನಮ್ಮ ಕೂಡ ಮಾತನಾಡತೊಡಗಿದ. ‘ಈತ ಮುಸ್ಲಿಂ, ನಾನು ಹಿಂದು. ಇಬ್ಬರೂ ಕೂಡಿ ಕಷ್ಟಪಟ್ಟು ದುಡಿಯುತ್ತೇವೆ. ಆ ಕಡೆ ನೋಡಿರಿ. ನಮ್ಮ ಹೆಂಡಿರು ಮಾತನಾಡುತ್ತ ಬಟ್ಟೆ ಒಗೆಯುತ್ತಿದ್ದಾರೆ. ಆ ಗಿಡದ ಕೆಳಗೆ ನೋಡಿರಿ. ನಮ್ಮ ಮಕ್ಕಳು ಖುಷಿಯಿಂದ ಆಟ ಆಡುತ್ತಿದ್ದಾರೆ. ನಮ್ಮ ಗುಡಿಸಲುಗಳನ್ನು ನೋಡಿರಿ. ಎರಡೂ ಹತ್ತಿಕೊಂಡೇ ಇವೆ. ಅಡುಗೆಗೆ ಎಣ್ಣೆ ಇಲ್ಲದಾಗ ಇವನ ಗುಡಿಸಲಿನಿಂದ ಎಣ್ಣೆ ತರುತ್ತೇವೆ. ಇವನ ಗುಡಿಸಲಿನಲ್ಲಿ ಉಪ್ಪು ಇಲ್ಲದಾಗ ನಮ್ಮ ಗುಡಿಸಲಿನಿಂದ ಹೋಗುತ್ತದೆ. ನಾವು ಕಷ್ಟಪಟ್ಟು ದುಡಿದು ಸುಖದುಃಖ ಹಂಚಿಕೊಳ್ಳುತ್ತ ಆರಾಮಾಗಿ ಇದ್ದೇವೆ. ಗಲಭೆ ಅನ್ನೋದು ಕೆಲಸ ಇಲ್ಲದವರ ಕೆಲಸ’ ಎಂದು ಸುಮ್ಮನಾದ. ನಮಗೆ ಮಾತನಾಡಲಿಕ್ಕಾಗಲಿಲ್ಲ!


ನಾನು ಗುಲ್ಬರ್ಗಾದಲ್ಲಿ ಪತ್ರಕರ್ತನಾಗಿ ಇದ್ದಾಗ ಮಹಾರಾಷ್ಟ್ರದ ಮುಸ್ಲಿಂ ಪತ್ರಕರ್ತರೊಬ್ಬರು ಭಾವೈಕ್ಯ ಪ್ರಚಾರಕ್ಕಾಗಿ ಸ್ಕೂಟರ್ ಮೇಲೆ ದೇಶ ಸಂಚಾರ ಮಾಡುತ್ತ ಗುಲ್ಬರ್ಗಕ್ಕೆ ಬಂದಿದ್ದರು. ಈ ದೀರ್ಘವಾದ ದೇಶ ಪರ್ಯಟನ ಸಂದರ್ಭದಲ್ಲಿನ ಮರೆಯಲಾಗದ ಘಟನೆ ಬಗ್ಗೆ ಹೇಳಿರಿ ಎಂದು ಕೇಳಿದೆ. ಅಂಥ ಘಟನೆಗಳು ಬಹಳಷ್ಟಿವೆ ಎಂದು ಹೇಳಿದ ಅವರು, ಮಾನವ ಸೂಕ್ಷ್ಮತೆಯ ಪ್ರಸಂಗವೊಂದನ್ನು ತಿಳಿಸಿದರು. ಪಂಜಾಬ್ ಪ್ರವಾಸದಲ್ಲಿದ್ದಾಗ ಒಬ್ಬ ವ್ಯಕ್ತಿ ತಮ್ಮ ಮನೆಯಲ್ಲಿ ಒಂದು ರಾತ್ರಿ ಕಳೆಯಲು ಈ ಭಾವೈಕ್ಯದ ವ್ಯಕ್ತಿಗೆ ಮನವಿ ಮಾಡಿದರು. ಆ ಮನೆಯಲ್ಲಿ ರಾತ್ರಿ ಊಟದ ಸಮಯದಲ್ಲಿ ಈ ಭಾವೈಕ್ಯದ ವ್ಯಕ್ತಿಯ ತಲೆಯಲ್ಲಿ ಯಕ್ಷಪ್ರಶ್ನೆಯೊಂದು ಹೊಕ್ಕಿತು. ಇಷ್ಟೊಂದು ದೊಡ್ಡ ಮನೆ. ಅತ್ಯಾಧುನಿಕ ಅಡುಗೆ ಮನೆಯೂ ಇದೆ. ಆದರೆ ಇವರೇಕೆ ಪಕ್ಕದ ಮನೆಯಿಂದ ಅಡುಗೆ ಮಾಡಿಕೊಂಡು ಬರುತ್ತಿದ್ದಾರೆ ಎಂಬುದು ಅವರಿಗೆ ವಿಚಿತ್ರ ಎನಿಸಿತು. ಅವರು ಆ ಮನೆಯೊಡಯನಿಗೆ ಕೇಳಿಯೇ ಬಿಟ್ಟರು. ಆಗ ಆತ ಹೇಳಿದರು: ‘ನಮ್ಮ ಮನೆಯಲ್ಲಿ ಎಲ್ಲವೂ ಇದೆ. ಆದರೆ ನಮ್ಮ ಪಾತ್ರೆಗಳಲ್ಲಿ ಒಮ್ಮೊಮ್ಮೆ ಹಂದಿಯ ಮಾಂಸವನ್ನೂ ಬೇಯಿಸುತ್ತೇವೆ. ತಾವು ಮುಸ್ಲಿಂ ಧರ್ಮದವರಾಗಿರುವುದರಿಂದ, ಹಾಗೆ ಬಳಕೆಯಾದ ಪಾತ್ರೆಯಲ್ಲಿ ಅಡುಗೆ ಮಾಡಿ ತಮಗೆ ಉಣಬಡಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಬೇಕಾಯಿತು’ ಎಂದರು!


೧೯೪೯ನೇ ಡಿಸೆಂಬರ್ ೨೨/೨೩ರ ಮಧ್ಯರಾತ್ರಿ. ರಾಮ ಸೀತೆಯರ ಮೂರ್ತಿಗಳನ್ನು ಬಾಬರಿ ಮಸೀದಿಯಲ್ಲಿ ಇಡಲಾಯಿತು. ಫೈಜಾಬಾದ ಜಿಲ್ಲೆಯ ಅಂದಿನ ಕಲೆಕ್ಟರ್ ಕೆ.ಕೆ. ನಯ್ಯರ್ ಈ ಕೃತ್ಯದ ಹಿಂದೆ ಇದ್ದ. ಮೂರ್ತಿಗಳನ್ನು ತೆಗೆಯಬೇಕೆಂದು ಅಂದಿನ ಪ್ರಧಾನಿ ನೆಹರೂ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಗೋವಿಂದ ವಲ್ಲಭ ಪಂತ ಅವರು ಆದೇಶಿಸಿದರೂ ನಯ್ಯರ್ ‘ಬಹುಸಂಖ್ಯಾತ ಹಿಂದುಗಳನ್ನು ಎದುರಿಸಲಿಕ್ಕಾಗದು’ ಎಂದು ಕುಂಟುನೆಪ ಹೇಳುತ್ತ ಆ ಮೂರ್ತಿಗಳು ಬಾಬರಿ ಮಸೀದಿಯಲ್ಲೇ ಉಳಿಯುವಂತೆ ನೋಡಿಕೊಂಡ. ನಿವೃತ್ತಿಯ ನಂತರ ಜನಸಂಘ ಸೇರಿ ರಾಜಕಾರಣಿಯಾದ.

ಹೀಗೆ ಮೂರ್ತಿಗಳನ್ನು ಒಳಗೆ ಇಟ್ಟು ಬಾಬರಿ ಮಸೀದಿಗೆ ಬೀಗ ಹಾಕುವುದರಿಂದ ಮುಂದೊಂದು ದಿನ ಭಾರತ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಂದೇ ಎಚ್ಚರಿಸಿದವರು, ಆ ಸಮಯದಲ್ಲಿ ಫೈಜಾಬಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬ್ರಹ್ಮಚಾರಿ ಎಂಬವರು. ರಾಮಭಕ್ತ ಹಾಗೂ ಗಾಂಧೀವಾದಿಯಾಗಿದ್ದ ಅವರು ಗೋವಿಂದ ವಲ್ಲಭ ಪಂತ ಅವರಿಗೆ ಈ ಅನ್ಯಾಯದ ವಿರುದ್ಧ ಪತ್ರ ಬರೆದರು. ಮುಂದಿನ ದಿನಗಳಲ್ಲಿ ದೇಶ ಎದುರಿಸಬೇಕಾದ ಗಂಡಾಂತರದ ಬಗ್ಗೆ ಅವರು ಆ ಪತ್ರದಲ್ಲಿ ಎಚ್ಚರಿಕೆ ನೀಡಿದ್ದರು. ಒಬ್ಬ ಗಾಂಧಿವಾದಿಯಾಗಿ ಈ ಅನ್ಯಾಯವನ್ನು ವಿರೋಧಿಸುತ್ತೇನೆ ಎಂದೂ ಪತ್ರದಲ್ಲಿ ತಿಳಿಸಿದ್ದರು.


ಬಾಬರಿ ಮಸೀದಿಯಲ್ಲಿನ ರಾಮ ಮತ್ತು ಸೀತಾ ಮೂರ್ತಿಗಳ ಪೂಜಾರಿ ಲಾಲಬಾಬಾ ಎಂಬುವರು ತಾರುಣ್ಯದಲ್ಲಿ ಒಬ್ಬ ಕಮ್ಯೂನಿಸ್ಟ್ ಆಗಿದ್ದವರು! ಪೂಜಾರಿ ಕೆಲಸ ಅವರ ಕುಟುಂಬದ ವೃತ್ತಿಯಾಗಿದ್ದರಿಂದ, ಹೊಟ್ಟೆಪಾಡಿಗಾಗಿ ತಂದೆಯ ಪೂಜಾವೃತ್ತಿಯನ್ನೇ ಅವಲಂಬಿಸಿ ಬಾಬರಿ ಮಸೀದಿಯಲ್ಲಿ ರಾಮಲಲ್ಲಾ ಪೂಜಾರಿಯಾದರು. ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮುಂತಾದ ಸಂಘಪರಿವಾರದವರು ಅಯೋಧ್ಯೆಗೆ ಬಂದು ಜನರಲ್ಲಿ ಕೋಮುವಾದದ ವಿಷ ಬೀಜಗಳನ್ನು ಬಿತ್ತುವುದನ್ನು ಅವರು ವಿರೋಧಿಸುತ್ತಿದ್ದರು. ಮಾನುಷಿ ಪತ್ರಿಕೆ ಸಂಪಾದಕಿ ಮಧು ಕಿಷ್ವರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ ಮಾನವೀಯ ಮಾತುಗಳು ಅತ್ಯುನ್ನತ ಮಟ್ಟದಲ್ಲಿವೆ. ನಂತರ ಖ್ಯಾತ ಸಾಕ್ಷಿಚಿತ್ರ ನಿರ್ಮಾಪಕ ಆನಂದ ಪಟವರ್ಧನ ಅವರಿಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಕೂಡ ಅವರು ಇದೇ ಮಾತುಗಳನ್ನು ಆಡಿದರು. ಈ ರೀತಿಯ ಸಂದರ್ಶನಗಳಿಂದ ತಮ್ಮ ಕೊಲೆಯಾಗಬಹುದು ಎಂದು ಅವರು ಹೇಳಿದ್ದರು. ಬಾಬರಿ ಮಸೀದಿಯನ್ನು ಬೀಳಿಸುವ ಮೊದಲೇ ಅವರ ಕೊಲೆಯಾಯಿತು! ಈ ದೇಶದ ಸಂವೇದನಾಶೀಲ ವ್ಯಕ್ತಿಯೊಬ್ಬನ ಕೊಲೆಯ ಸುದ್ದಿ ದೇಶವಾಸಿಗಳಿಗೆ ಸರಿಯಾಗಿ ತಲುಪಲಿಲ್ಲ. ಮಾಧ್ಯಮಗಳಿಗೆ ಇದೊಂದು ಸಾಮಾನ್ಯ ಸುದ್ದಿಯಾಗಿತ್ತು.

೧೯೯೨ನೇ ಡಿಸೆಂಬರ್ ೬ರಂದು ಟಿವಿಗೆ ಅಂಟಿಕೊಂಡಿದ್ದೆ. ಅವರಿವರ ಮಧ್ಯೆ ಕುಳಿತಿದ್ದ ಪೇಜಾವರ ಶ್ರೀಗಳು ಬಾಬರಿ ಮಸೀದಿ ಕೆಡವುವುದನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು. ತಮ್ಮ ಕನಸು ನನಸಾಯಿತು ಎಂಬ ರೀತಿಯಲ್ಲಿ ಅವರ ಮುಖದಲ್ಲಿ ನೆಮ್ಮದಿಯ ಅಲೆಗಳು ಏಳುತ್ತಿರುವಂತೆ ಭಾಸವಾಗುತ್ತಿತ್ತು. ಆದರೆ ನಾನು ಆತಂಕದಲ್ಲಿದ್ದೆ. ಅಷ್ಟೊಂದು ಗದ್ದಲದಲ್ಲಿ ಹರೆಯದ ಹೆಣ್ಣುಮಗಳೊಬ್ಬಳು ಹಸುಗೂಸನ್ನು ಎತ್ತಿಕೊಂಡು ಮಸೀದಿ ಕೆಡವುವವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಳು. ಆ ಹುಚ್ಚುಗದ್ದಲದಲ್ಲಿ ಎಲ್ಲಿ ಆ ಮಗುವಿಗೆ ಅಪಾಯವಾಗಬಹುದು ಎಂಬ ಚಿಂತೆ ನನ್ನನ್ನು ಕಾಡುತ್ತಲೇ ಇತ್ತು. ಆ ಮಸೀದಿಯ ಗುಮ್ಮಟದ ಮೇಲೆ ಭಾವಾವೇಶದಿಂದ ಹತ್ತಿ ಅದನ್ನು ಕೆಡವುತ್ತಿರುವ ಜನರ ಮುಖಗಳನ್ನು ಟಿವಿಯಲ್ಲಿ ನೋಡುತ್ತಿದ್ದೆ. ಅವರ ಮೇಲೆ ಕರುಣೆ ಬರುತ್ತಿತ್ತು. ಅವರು ಪೌಷ್ಟಿಕಾಂಶಗಳ ಕೊರತೆಯಿಂದ ಬದುಕುತ್ತಿರುವ ಜನರೇ ಇರಬಹುದು ಎಂಬ ಸಂಶಯ ಕಾಡುತ್ತಿತ್ತು. ಮಸೀದಿ ಬೀಳುವಾಗ ಅವರು ಅದರಡಿ ಸಿಕ್ಕಿ ಸಾಯದಿರಲಿ ಎಂದು ನನ್ನೊಳಗೇ ಅಂದುಕೊಳ್ಳುತ್ತಿದ್ದೆ. ಈ ಬಡ ಮತ್ತು ಅಸಹಾಯಕ ಜನರಿಗೆ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಧರ್ಮದ ಅಪೀಮು ತಿನ್ನಿಸಿದವರು ಪೆಂಡಾಲ್ ಕೆಳಗೆ ಕುಳಿತು ಕೇಕೆ ಹಾಕುತ್ತಿದ್ದರು. ಮಸೀದಿ ಬೀಳಿಸಲು ಪ್ರಚೋದಿಸುವವರು, ಪ್ರಚೋದನೆಗೆ ಒಳಗಾದವರ ಸುಖಮಯ ಬದುಕಿಗಾಗಿ ಏನನ್ನೂ ಮಾಡಿಲ್ಲ ಎಂಬುದು ಅವರನ್ನು ನೋಡಿದಾಗ ಅನಿಸದೆ ಇರುತ್ತಿರಲಿಲ್ಲ.

ನಿಜ ಹೇಳಬೇಕೆಂದರೆ ಯಾವುದೇ ಧರ್ಮದ ಅಪೀಮಿಗೆ ಬಲಿಯಾಗುವವರು ಕೆಟ್ಟವರಾಗಿರುವುದಿಲ್ಲ. ಆದರೆ ಸ್ವಾರ್ಥಿಗಳು ಅವರ ಭಾವುಕತೆಯ ಜೊತೆಗೆ ಆಟವಾಡುತ್ತ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರುತ್ತಾರೆ. ಧರ್ಮವು ದುಷ್ಟರ ಸುಲಿಗೆಯ ಸಾಧನವಾಗಿರುತ್ತದೆ ಎಂಬುದು ಭಾವುಕರಿಗೆ ಅರ್ಥವಾಗುವುದಿಲ್ಲ.


ಬಾಬರಿ ಮಸೀದಿ ಬಿದ್ದ ಬಹಳ ದಿನಗಳ ನಂತರ ಆ ಕುರಿತು ಉದಯ ಟಿವಿಯಲ್ಲಿ ಪೇಜಾವರ ಶ್ರೀ, ಪ್ರೊ. ಜಿ.ಕೆ. ಗೋವಿಂದರಾವ್ ಮತ್ತು ನನ್ನ ಮಧ್ಯೆ ಚರ್ಚೆಯೊಂದನ್ನು ಏರ್ಪಡಿಸಲಾಗಿತ್ತು. ಗೋವಿಂದರಾಯರು ಬಹಳ ಆವೇಶಭರಿತರಾಗಿ ಪದೆ ಪದೆ ಪೇಜಾವರ ಶ್ರೀಗಳ ಮೇಲೆ ಹರಿಹಾಯುತ್ತಿದ್ದರು. ಅವರ ಆವೇಶ ಪೇಜಾವರ ಶ್ರೀಗಳ ಯತಿತ್ವವನ್ನೇ ಪ್ರಶ್ನಿಸುವಂತಿತ್ತು. ಏತನ್ಮಧ್ಯೆ ನಾನು ಮಾತನಾಡಲು ಆರಂಭಿಸಿದೆ. ಮಸೀದಿ ಧ್ವಂಸ ಮಾಡಿದ ಜಾಗದಲ್ಲಿ ಮತ್ತೆ ಮಸೀದಿ ನಿರ್ಮಾಣ ಬೇಡ, ರಾಮಮಂದಿರ ನಿರ್ಮಾಣವೂ ಬೇಡ. ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ೩೫ ಸಾವಿರದಷ್ಟು ಕೋಮುಗಲಭೆಗಾಳಗಿವೆ. ದೇಶಾದ್ಯಂತ ಅಂಥ ಕೋಮುಗಲಭೆಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗಾಗಿ ಅತ್ಯುನ್ನತ ಮಟ್ಟದ ಶಿಕ್ಷಣ ನೀಡುವಂಥ ವಸತಿಶಾಲೆಯೊಂದು ಆ ಸ್ಥಳದಲ್ಲಿ ನಿರ್ಮಾಣವಾಗಲಿ. ಅಂಥ ಅನಾಥ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ. ಮೂಲಭೂತವಾದಿಗಳಿಂದಾಗಿ ಅನಾಥರಾದ ಎಲ್ಲ ಜಾತಿ ಧರ್ಮಗಳ ಅವರು, ‘ಪ್ರಜಾಪ್ರಭುತ್ವ ನಮ್ಮ ಧರ್ಮ, ಸಂವಿಧಾನ ನಮ್ಮ ಧರ್ಮಗ್ರಂಥ’ ಎಂಬ ನಿರ್ಧಾರಕ್ಕೆ ಬರುವಂಥ ಶಿಕ್ಷಣ ಪಡೆಯಲಿ ಎಂದು ಮುಂತಾಗಿ ಹೇಳಿದೆ.

ನನ್ನ ಮೇಲೆ ಕುಪಿತಗೊಂಡ ಪೇಜಾವರ ಶ್ರೀಗಳು ‘ಅನಾಥ ಮಕ್ಕಳಿಗಾಗಿ ನಿಮ್ಮ ಮೆಕ್ಕಾದಲ್ಲಿ ವಸತಿ ಶಾಲೆ ಆರಂಭಿಸಲು ಸಲಹೆ ನೀಡಿರಿ. ಶ್ರೀರಾಮಚಂದ್ರ ಜನಿಸಿದ ಜಾಗದಲ್ಲಿ ಏಕೆ?’ ಎಂದು ಕೇಳಿದರು. ಆಗ ‘ಯತಿಗಳೇ ನಾನು ನನ್ನ ದೇಶದ ಸಮಸ್ಯೆ ಬಗೆಹರಿಸುವ ವಿಚಾರ ತಿಳಿಸುತ್ತಿದ್ದೇನೆ. ಹಾಗೆಲ್ಲ ಮಾತನಾಡಿದರೆ ಬೇರೆ ದೇಶದ ವ್ಯವಹಾರದಲ್ಲಿ ಕೈ ಹಾಕಿದ ತಪ್ಪು ಮಾಡಿದಂತಾಗಿ ನೀವು ತೊಂದರೆ ಅನುಭವಿಸಬೇಕಾಗಬಹುದು’ ಎಂದು ಹೇಳಿದೆ. ನಾನು ಹೇಳಿದ ರೀತಿಯಿಂದ ಪೇಜಾವರ ಶ್ರೀಗಳು ಒಂದು ಕ್ಷಣ ವಿಚಲಿತಗೊಂಡರು. ಆ ಜಾಗದಲ್ಲಿ ಮಂದಿರ ಮತ್ತು ಮಸೀದಿ ನಿರ್ಮಾಣವಾಗಲಿ ಎಂದು ಹೇಳಿಬಿಟ್ಟರು. ಕನಿಷ್ಠಪಕ್ಷ ಹಾಗಾದರೂ ಆಗಲಿ ಎಂದೆ.

ಮೊನ್ನೆ ಬಾಬರಿ ಮಸೀದಿ ತೀರ್ಪು ಬಂದ ನಂತರ ಕೆಲವರು ಆ ಜಾಗದಲ್ಲಿ ಮಂದಿರ ಮಸೀದಿ ನಿರ್ಮಾಣವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪೇಜಾವರ ಶ್ರೀಗಳು ಆ ಸಲಹೆ ವಿರೋಧಿಸಿದ್ದನ್ನು ಪತ್ರಿಕೆಯಲ್ಲಿ ಓದಿದೆ!