ಇಂಗ್ಲೆಂಡಿನಿಂದ ಬೆಂಗಳೂರಿಗೆ ಮಕ್ಕಳೊಂದಿಗೆ ಬಂದಿಳಿದ ರಮ್ಯಾಳ ಮೂಲಕ ಅನಾವರಣಗೊಳ್ಳುವ ಈ ಕಾದಂಬರಿ ಶೀರ್ಷಿಕೆಯನ್ವಯ ರೊಟ್ಟಿಯನ್ನು ಸುಡುವುದರೊಂದಿಗೆ ಮುಕ್ತಾಯವಾಗುತ್ತದೆ. ಕಾದಂಬರಿಯ ಶೀರ್ಷಿಕೆ ಭಿನ್ನವಾಗಿದೆಯಲ್ಲಾ ಎನ್ನುತ್ತಲೇ ಕೈಗೆತ್ತಿಕೊಂಡಾಗ ಕಾದಂಬರಿಯಲ್ಲಿ ಬೇರೆ ಬೇರೆ ವಸ್ತುಗಳಿರಬಹುದೇ? ಅಥವಾ ರಮ್ಯಾಳೊಬ್ಬಳ ಕಥಾನಕವೇ ಅನ್ನಿಸಿ ಕಾದಂಬರಿ ಓದುತ್ತಾ ಹೋದಂತೆ ಏಕಕಾಲಕ್ಕೆ ರಮ್ಯಾ ಜೊತೆಗೆ ಅವರಮ್ಮ ಸತ್ಯಳ ಕತೆಯಾಗಿರುವುದು ವಿಶೇಷ ಅನ್ನಿಸುತ್ತದೆ.
ಉಷಾ ನರಸಿಂಹನ್‌ ಅವರ ಕೆಂಡದ ರೊಟ್ಟಿ ಕಾದಂಬರಿಯ ಕುರಿತು ಸುಮಾವೀಣಾ ಬರಹ

 

ಉಷಾ ನರಸಿಂಹನ್ ಅವರ ‘ಕೆಂಡದ ರೊಟ್ಟಿ’ ಕಾದಂಬರಿ ಬರುತ್ತಿದೆ ಎಂದಾಗಲೆ ಹೊಸತೇನೋ ಇರುತ್ತದೆ ಅನ್ನಿಸಿತ್ತು. ‘ಕೆಂಡದ ರೊಟ್ಟಿ’ ಕೈಸೇರಿದ ಕೂಡಲೆ ಕೈಬಿಡದೆ ಓದಿಸಿಕೊಂಡು ಹೋದ ಪುಸ್ತಿಕೆ. ಜಟಿಲವಾದ ವಿಷಯವೊಂದನ್ನು ಇರಿಸಿಕೊಂಡು ಅಷ್ಟೇ ಸುಭಗವಾಗಿ ಬಿಡಿಸಿ, ಕಾದಂಬರಿಯ ಪ್ರತೀ ಪಾತ್ರವೂ ತನ್ನದೇ ನೆಲೆಯಲ್ಲಿ ‘ಸರಿ’ ಎಂದು ಕಾದಂಬರಿಕಾರ್ತಿ ಇಲ್ಲಿ ಸಾಬೀತು ಮಾಡಿದ್ದಾರೆ. ಭಾವನೊಂದಿಗೆ ನಾದಿನಿಯ ಸಂಬಂಧ, ಅತ್ತಿಗೆಯೊಡನೆ ಮೈದುನನಿಗೆ ಇರುವ ಸಂಬಂಧಗಳು ಇಂದಿಗೆ ಹತ್ಯೆಯಲ್ಲಿಯೇ ಪರ್ಯಾವಸಾನಗೊಳ್ಳುತ್ತಿವೆ. ಆದರೆ ಸವಾಲುಗಳು ಅಂತಹುದೇ ಮಾದರಿಯಲ್ಲಿದ್ದರೂ,  ಪಾತ್ರರಚನೆಯಲ್ಲಿ ಆವೇಶ ಇಲ್ಲಿಲ್ಲ. ಕಾದಂಬರಿ ಇಂತಹ ಸಂಬಂಧಗಳನ್ನು ಕುರಿತು ಹೇಳಿದರೂ ಅವುಗಳನ್ನು ಮೀರಿ ಬದುಕನ್ನು ಬೇರೆ ಆಯಾಮಕ್ಕೆ ಹೊಂದಿಸಿಕೊಳ್ಳುವ ರೀತಿ ಸದುದ್ದೇಶವನ್ನು ಹೊಂದಿದೆ.

ಮದುವೆಗಳು ಮನೆಯವರ ಬಲವಂತದ ಆಯ್ಕೆಯಾಗಿರಬಾರದು. ಮದುಮಕ್ಕಳ ಆಯ್ಕೆಯಾಗಿರಬೇಕೆಂಬುದು ‘ಕೆಂಡದ ರೊಟ್ಟಿ’ ಕಾದಂಬರಿ ಮೊದಲು ಸಾರುವ ಸಂದೇಶ . ಪ್ರಸ್ತುತ ಕಾದಂಬರಿಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ವೇಣಿಯಮ್ಮ ಮತ್ತು ರಮ್ಯಳ ಪಾತ್ರಗಳು ಇದೇ ಸಮಸ್ಯೆಯನ್ನು ಎದುರಿಸುತ್ತವೆ.

ಲಿಂಗ ಅಸಮಾನತೆಯ ಕುರಿತೂ ಇಲ್ಲಿ ಪ್ರಸ್ತಾಪವಿದೆ.  ‘ಹುಡುಗಂಗೆ ಹುಡುಗಿ ಸಿಕ್ಕಿದರೆ ಸಾಕು ಅನ್ನೋ ಕಾಲ’ ಎಂಬ ಮಾತಿನ ಮೂಲಕ ಗೋಪಾಲ ಹಾಗು ವೇಣಿಯರ ಮದುವೆ ಸಂದರ್ಭವನ್ನು ವಿವರಿಸಿದ್ದಾರೆ.

(ಉಷಾ ನರಸಿಂಹನ್‌)

ತಾಯಿ ಮಗಳ ಸಂಬಂಧ ತನ್ನ ಸ್ವರೂಪವನ್ನು ಬದಲಾವಣೆ ಮಾಡಿಕೊಂಡು ಸ್ನೇಹಮುಖಿಯಾಗುತ್ತಿದೆ ಎಂಬುದನ್ನು ರಮ್ಯಾ ಮತ್ತು ಸತ್ಯರ ಮಾತಿನ ನಡುವೆ ಕಾದಂಬರಿಕಾರ್ತಿ “ತಾಯೀನ ಕೇಳೋ ಮಾತಾ ಇದು…. ಬಿಗಿತೀನಿ ನೋಡು’ ಅಂದಾಗ ‘ಮಗಳು ಅಂದುಕೋಬೇಡ, ನಿನ್ನ ಫ್ರೆಂಡ್ ಅಂದುಕೋ, ಆಗ ಮಾತಾಡಕ್ಕೆ ಕಷ್ಟ ಆಗಲ್ಲ’ ಎಂಬ ಸಲಹೆ ಮಾಡುತ್ತಾರೆ.

ಹೆಣ್ಣು ಮಕ್ಕಳು ಧೈರ್ಯ ಮಾಡಿ ಮುನ್ನುಗ್ಗಬೇಕು. ಪರಿಸ್ಥಿತಿಯನ್ನು ಮುಗುಮ್ಮಾಗಿ ಅನುಭವಿಸುವುದಕ್ಕಿಂತ ಬಿಡುಗಡೆ ಪಡೆದು ಹೊಸ ಬದುಕನ್ನು ಪಡೆಯಬೇಕು ಎಂಬುದನ್ನು ರಮ್ಯಾಳ ಪಾತ್ರದ ಮೂಲಕ ತಿಳಿಸಿದ್ದಾರೆ. ವಾಯ್ಸ್ ರೆಕಾರ್ಡ್, ಹಣ ವರ್ಗಾವಣೆ ಮಾಡಿದ ದಾಖಲೆ ಇತ್ಯಾದಿಗಳನ್ನು ನ್ಯಾಯಕ್ಕೆ ಪೂರಕವಾಗಿ ಬಳಸಿಕೊಳ್ಳುವ ಪರಿ ಪ್ರಸ್ತುತ ದಿನಮಾನದ ವಸ್ತುವಿಷಯಗಳು- ಎಂಬುದನ್ನು ಕತೆ ಹೇಳುತ್ತದೆ. ಉಬರ್, ಕ್ಯಾಬ್, ಮೋರ್ ಮುಂತಾದ ಆಧುನಿಕ ಜೀವನ ಶೈಲಿಯನ್ನು ನೆನಪಿಸುವ ಪರಿಪ್ರೇಕ್ಷ್ಯ, ಉಡುಪಿ ದೋಸೆ, ಗಟ್ಟಿಕಾಫಿ, ಇಡ್ಲಿಚಟ್ನಿ, ಎಳನೀರು ಮುಂತಾದ ಪದಗಳು ಅಲ್ಲಲ್ಲಿ ಓದುಗರನ್ನು ಹಿತವಾಗಿ ಸ್ಪರ್ಶಿಸಿ ಮರೆಯಾಗುವುದು ಓದುಗರ ಲವಲವಿಕೆಯನ್ನು ಹೆಚ್ಚಿಸುತ್ತವೆ.

ಇಂಗ್ಲೆಂಡಿನಿಂದ ಬೆಂಗಳೂರಿಗೆ ಮಕ್ಕಳೊಂದಿಗೆ ಬಂದಿಳಿದ ರಮ್ಯಾಳ ಮೂಲಕ ಅನಾವರಣಗೊಳ್ಳುವ ಈ ಕಾದಂಬರಿ ಶೀರ್ಷಿಕೆಯನ್ವಯ ರೊಟ್ಟಿಯನ್ನು ಸುಡುವುದರೊಂದಿಗೆ ಮುಕ್ತಾಯವಾಗುತ್ತದೆ. ಕಾದಂಬರಿಯ ಶೀರ್ಷಿಕೆ ಭಿನ್ನವಾಗಿದೆಯಲ್ಲಾ ಎನ್ನುತ್ತಲೇ ಕೈಗೆತ್ತಿಕೊಂಡಾಗ ಕಾದಂಬರಿಯಲ್ಲಿ ಬೇರೆ ಬೇರೆ ವಸ್ತುಗಳಿರಬಹುದೇ? ಅಥವಾ ರಮ್ಯಾಳೊಬ್ಬಳ ಕಥಾನಕವೇ ಅನ್ನಿಸಿ ಕಾದಂಬರಿ ಓದುತ್ತಾ ಹೋದಂತೆ ಏಕಕಾಲಕ್ಕೆ ರಮ್ಯಾ ಜೊತೆಗೆ ಅವರಮ್ಮ ಸತ್ಯಳ ಕತೆಯಾಗಿರುವುದು ವಿಶೇಷ ಅನ್ನಿಸುತ್ತದೆ. ಯಾರೋ ಹೇಳಿದ್ದು, ಎಲ್ಲೋ ಕೇಳಿದ್ದು, ಅಜ್ಜಿ ಚಿಕ್ಕಮ್ಮರ ಮಾತಿನ ನಡುವೆ ಸ್ಪಷ್ಟವಾಗಿ ಅಸ್ಪಷ್ಟವಾಗಿ ಜಾರಿದ್ದು, ರಮ್ಯಾಳಿಗೆ ನೀಲಮ್ಮಾ ಹಾಗು ಸತ್ಯಳ ಮೂಲಕ, ತನ್ನ ಅಪ್ಪ ಯಾರು ಎಂದು ತಿಳಿದಾಗ ಆಕೆ ಪ್ರತಿಕ್ರಿಯಿಸುವ ರೀತಿ ಇಲ್ಲಿ ಭಿನ್ನವಾಗಿದೆ.

ರಮ್ಯಾ ‘ಹಂಗಾರೆ ಯಾವುದು ಸತ್ಯ? ಸತ್ಯವತಿಯರು ಸತ್ಯ ಹೇಳುವ ಮನಸ್ಸು ಮಾಡಬೇಕು’ ಎಂದು ನಾಟಕೀಯವಾಗಿ ಹೇಳುವುದು ಏಕಕಾಲಕ್ಕೆ ‘ಹೀಗ್ ಮಾಡ್ಬಾರದಿತ್ತು, ಹೋಗ್ಲಿಬಿಡು ಅಪ್ಪನು ಹಂಗೆ ಆಡ್ತಾನೆ’ ಎಂದು ಸಮಾಧಾನವನ್ನು ಏಕಕಾಲಕ್ಕೆ ಮಾಡುವಂತಿದೆ.

ಕಾದಂಬರಿಯ ಉದ್ದಕ್ಕೂ ಸತ್ಯಳಿಗೆ ಪರ್ಯಾಯವಾಗಿ ನಡೆಯುವ ಪಾತ್ರ ವೇಣಿಯಮ್ಮನದು. ಈಕೆ ಘಟವಾಣಿ ಹೆಂಗಸು, ಬಹಳ ಶಿಸ್ತು ಅನ್ನಿಸಿದರೂ ಇಷ್ಟವಿಲ್ಲದ ಮದುವೆ, ಜೊತೆಯಲ್ಲಿ ಆಡಿಬೆಳೆದವರ ಜೊತೆಗೆ ಸಂಸಾರ, ಅದು ಹೇಗೆ ಸಾಧ್ಯ? ಎನ್ನುತ್ತಾ ತನ್ನ ಸಂಸಾರವನ್ನು ನಿಸ್ಸಾರ ಮಾಡಿಕೊಂಡರೂ,  ಪ್ರಶಾಂತ್ ಮತ್ತು ರಮ್ಯಾಳ ಸಂಗತಿಯ ಹೊರತಾಗಿ ದೊಡ್ಡಮ್ಮನಾಗಿ ರಮ್ಯಾಳನ್ನು ನೋಡಿಕೊಳ್ಳುವ ರೀತಿ ಶ್ಲಾಘನೀಯ. ‘ನಾನೂ ಮನುಷ್ಯಳೆ ಕಣೆ ನಂಗೆ ನೋವು ನುಡಿ ಇರಲ್ವಾ?’ ಎಂಬ ಮಾತುಗಳು ಅವಳ ನೋವನ್ನು ಪ್ರಕಟಪಡಿಸುತ್ತವೆ. ಬಹು ಮುಖ್ಯವಾಗಿ ಇಲ್ಲಿ ‘ಮತ್ತೊಬ್ಬರ ತಪ್ಪುಗಳು ಆತ್ಮರಕ್ಷಣೆಯ ಕವಚಗಳು’ ಎನ್ನುವುದು ಯೋಚಿಸಿದಷ್ಟೂ ಹೌದು ಅನ್ನಿಸುತ್ತದೆ.

‘ನನ್ನ ಬೇರುಗಳು ಭಾರತದಲ್ಲಿ ಇವೆ ಎಂದು ಇಲ್ಲಿಗೆ ಬಂದರೆ ಅದೂ ರೋಗಗ್ರಸ್ಥವಾಗಿದೆ.. ಇಂಗ್ಲೆಂಡ್ ಸದಾ ನನ್ನತ್ತ ನೂಕುತ್ತಿದ್ದರೆ ಭಾರತ ನನ್ನನ್ನು ಬರಸೆಳೆದು ಅಪ್ಪಿಕೊಳ್ಳುತ್ತಿಲ್ಲ’ ಎಂಬ ಮಾತು ರಮ್ಯಾಳ ತಹತಹವನ್ನು ಹೇಳುತ್ತದೆ. ಪ್ರಶಾಂತನ ನಡೆವಳಿಕೆಗಳು, ತಂದೆಯ ನಡವಳಿಕೆಗಳು ಜೀವನದಲ್ಲಿ ಜೀವನೋತ್ಸಾಹವನ್ನು ಕುಂದಿಸಿದರೆ, ಅಪ್ಪ ಅಮ್ಮನ ಜಗಳ ನಿಂದೆ ಅವಾಚ್ಯ ಬೈಗುಳಗಳು ರಮ್ಯಾಳನ್ನು ವೇಣಿಯಮ್ಮನ ಮನೆಗೆ ಕಳಿಸುತ್ತವೆ. ಈ ಕಾದಂಬರಿಯು ಪೋಷಕರಿಗೆ ಮಕ್ಕಳ ಏಳಿಗೆಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಬೀದಿಗೆ ತರಬಾರದು ಎಂಬ ಕಿವಿ ಮಾತನ್ನೂ ಹೇಳುತ್ತದೆ. ಅಪ್ಪ ಅಮ್ಮನ ಜಗಳದಲ್ಲಿ ಸಿಕ್ಕು ಮಕ್ಕಳು ಅಜ್ಜಿ-ತಾತರ ಪ್ರೀತಿಯನ್ನು ಕಳೆದುಕೊಳ್ಳುತ್ತವೆ.

‘ಕೆಂಡದ ರೊಟ್ಟಿ’ ಸಾಮಾಜಿಕ ಕಾದಂಬರಿಯಾದರೂ ಮನೋವೈಜ್ಞಾನಿಕ ಸೂಕ್ಷ್ಮವೂ ಆಗಿದೆ. ‘ಅಪ್ಪನಿಗೆ ಅಮ್ಮನ ಮೇಲೆ ಸಿಟ್ಟಿತ್ತೋ ಅಥವಾ ಅವಳ ನಡವಳಿಕೆ ಇಸರಿಕೆಗಳ ಮೇಲೋ ಗೊಂದಲವಾಗುತ್ತದೆ. ಬಹುಶಃ ಆಕೆಯ ಮೇಲಿನ ಸಿಟ್ಟು ಆಕೆಯಲ್ಲಿ ತಪ್ಪು ಹುಡುಕಲು ಕಾರಣವಾಗಿದೆಯೇನೋ’ ಎಂಬ ವಿಶ್ಲೇಷಣೆ ಇಲ್ಲಿದೆ. ಪಾತ್ರ ತಪ್ಪು ಎಂದಾದರೂ ಏಕೆ? ಎಂದು ಸಮರ್ಥಿಸುವ ಕಾದಂಬರಿಯ ತಂತ್ರಗಾರಿಕೆ ವಿಶೇಷವಾಗಿದೆ. ಬಾಲಣ್ಣನಿಗೆ ತಂಗಿಯನ್ನು ಕಂಡರೆ ದ್ವೇಷ ಬರುವುದಕ್ಕೂ ಗೋಪಾಲರ ಪಕ್ಷಪಾತವೇ ಕಾರಣವಾಗುತ್ತದೆ. ಒಡಹುಟ್ಟಿದವರಾದರು ಪೋಷಕರು ಮಕ್ಕಳಲ್ಲಿ ಸಮಾನತೆ ಕಾಪಾಡದೆ ಇದ್ದರೆ ಆಗುವ ಅನಾಹುತವನ್ನು ಹೇಳುತ್ತದೆ.

‘ನಾನೂ ಮನುಷ್ಯಳೆ ಕಣೆ ನಂಗೆ ನೋವು ನುಡಿ ಇರಲ್ವಾ?’ ಎಂಬ ಮಾತುಗಳು ಅವಳ ನೋವನ್ನು ಪ್ರಕಟಪಡಿಸುತ್ತವೆ. ಬಹು ಮುಖ್ಯವಾಗಿ ಇಲ್ಲಿ ‘ಮತ್ತೊಬ್ಬರ ತಪ್ಪುಗಳು ಆತ್ಮರಕ್ಷಣೆಯ ಕವಚಗಳು’ ಎನ್ನುವುದು ಯೋಚಿಸಿದಷ್ಟೂ ಹೌದು ಅನ್ನಿಸುತ್ತದೆ.

ಸಂಸಾರದಲ್ಲಿ ಅದೆಷ್ಟೋ ತಾಪತ್ರಯಗಳು ಇಣುಕುತ್ತವೆ. ಅವುಗಳಿಗೆ ಅಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಉತ್ತಮ. ಇಲ್ಲವಾದರೆ ಅದರ ಪರಿಣಾಮ ಮಕ್ಕಳ ಮೇಲಾಗುತ್ತದೆ, ಪರಿಸ್ಥಿತಿಯನ್ನು ಇತರರು ಅಂದರೆ ಬಂಧುಗಳು ದುರುಪಯೋಗ ಪಡಿಸಿಕೊಳ್ಳಬಹುದು ಎಂಬುದನ್ನು ‘ಕೆಂಡದ ರೊಟ್ಟಿ’ ವಿವರಿಸಿದೆ. ಯೌವ್ವನವಿದ್ದಾಗ ತಪ್ಪುಗಳು ಅಷ್ಟಾಗಿ ಕಾಡುವುದಿಲ್ಲ. ಆದರೆ ವಯಸ್ಸು, ಮನಸ್ಸು ಮಾಗಿದ ಮೇಲೆ ಪಾಪಪ್ರಜ್ಞೆ ಕಾಡುತ್ತದೆ. ಎಲ್ಲಾದರೂ ದೂರ ಹೋಗಬೇಕು ಅನ್ನಿಸುತ್ತದೆ ಎನ್ನುವ ಗುರುನಂಜಪ್ಪರೊಂದಿಗಿನ ಗೋಪಾಲರ ಸಂಭಾಷಣೆ ಓದುಗರನ್ನು ಚಿಂತನೆಗೆ ಅಣಿಗೊಳಿಸುತ್ತದೆ.

‘ಗಟ್ಟಿ ಕಾಫಿಯ ಅದೇ ಸವಿಗೆ ಮೊದಲಿನ ಘಮ ಉಳಿದಿಲ್ಲ’ವೆನ್ನುವ ಮಾತು ರಮ್ಯಾಳಿಗೆ ಅನ್ವಯಿಸಿ ಬಂದಿದೆ ಅಂದರೆ ಯಾವುದೇ ಸತ್ಯಾಂಶ ತಿಳಿಯದಿದ್ದಾಗ ಅರ್ಧ ಸತ್ಯ ತಿಳಿದಾಗ, ಪೂರ್ಣ ಸತ್ಯ ತಿಳಿದಾಗ ರಮ್ಯಳ ಪ್ರತಿಕ್ರಿಯೆಯನ್ನು ಕಾಫಿಯ ಪ್ರತಿಮೆಯೊಂದಿಗೆ ಹೇಳಿರುವುದು ಉಷಾನರಸಿಂಹನ್ ಅವರ ಪ್ರಬುದ್ಧ ಶೈಲಿಗೆ ಸಾಕ್ಷಿಯಾಗಿದೆ. ಕಾದಂಬರಿಯಲ್ಲಿ ನಿಯತ್ತಿಗೆ ಅನ್ವಯವಾಗಿರುವಂಥ ನೀಲಮ್ಮ ತನ್ನ ಒಡತಿಯ ಬೆನ್ನಿಗೆ ಸದಾ ನಿಲ್ಲುವ ಆಕೆಯ ನಿಷ್ಕಾಮಕರ್ಮದ ನಿಲುಮೆ ಅವಳ ಉನ್ನತ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

‘ಏನೇ ಆಗಲಿ ತನ್ನ ತವರಿನ ಸಮಸ್ಯೆಯ ಮೂಲವನ್ನು ಜಾಲಾಡಿಬಿಡಬೇಕು, ಸೋಸಿಬಿಡಬೇಕು, ಒಕ್ಕಬೇಕು, ಒನೆಯಬೇಕು, ತವಡು ಹೊಟ್ಟು ಕಲ್ಲು ಕಸಗಳನ್ನು ಕಾಲಿನಿಂದ ಬೇರ್ಪಡಿಸಬೇಕು ಎನ್ನುವ ನಿಶ್ಚಯದಿಂದಲೇ ಬಂದಿದ್ದಳುʼ ಎಂದು ಬರೆಯುವ ಉಷಾ ನರಸಿಂಹನ್ ಅವರ ಪದಕೌಶಲ್ಯ ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.

ಬುದ್ಧಿತಿಳಿದಾಗಿನಿಂದ ದೊಡ್ಡಪ್ಪನ ಪ್ರೀತಿಯ ತೋಳ್ತೆಕ್ಕೆಯಲಿ ಮಿಂದಿದ್ದ ರಮ್ಯಾ ಅವರ ಸಾವಿನ ರಹಸ್ಯವನ್ನು ಬೇಧಿಸಿರುವುದು ವಿಶೇಷವಾಗಿದೆ. ಅಣ್ಣನ ಮುಖಭಾವಗಳ ಅವಲೋಕನದಲ್ಲಿ, ಪೋಲಿಸ್, ಪುಕಾರು ಅನ್ನುವ ಪದಗಳ ಬೆಂಗಾವಲಿನಲ್ಲಿ ಸತ್ಯ ಹೊರ ತೆಗೆಯುವ ಪರಿ ಬೇರೆ ಇನ್ಯಾರೋ ವಿಷಪ್ರಾಶನ ಮಾಡಿಸಿರಬಹುದೇ ಇಲ್ಲವೇ ಎಂಬುದಕ್ಕೆ ತೆರೆ ಎಳೆಯುತ್ತದೆ.

‘ಕೆಂಡದ ರೊಟ್ಟಿ’ ಶ್ರೀಸಾಮಾನ್ಯರ ಬದುಕಿನ ಕೈಗನ್ನಡಿಯಾಗಿದ್ದು ನಂಬಿಕೆಯಿಂದ ಸಂಶಯದೆಡೆಗೆ ಪಯಣಿಸಿ ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳುತ್ತದೆ. ಕಾದಂಬರಿಯನ್ನು ಓದಿದ ನಂತರ ಶೀರ್ಷಿಕೆಯನ್ನು ಅವಲೋಕಿಸುವುದಾದರೆ ಕೆಂಡ ಎನ್ನುವುದು ಮನಸ್ಸಿನ ಬೇಗುದಿಯನ್ನು ರೊಟ್ಟಿ ಎಂಬುದು ಬಾಳಿನ ಫಲಿತವನ್ನು ಹೇಳುವಂಥದ್ದಾಗಿದೆ. ಕೆಂಡವನ್ನು ಕಂಡಾಗಲೆ ಸುಡುತ್ತೆ ಅನ್ನುವ ಭಯವಿರುತ್ತದೆ. ಅದೇ ಕೆಂಡವನ್ನು ಒಡಲಿಗೇ ಸುರುವಿಕೊಂಡರೆ ಗತಿಯೇನು? ಬರುವ ಫಲಿತ ಫಲದಾಯಕವಾಗಿರುವುದಿಲ್ಲ ಅಲ್ಲವೇ. ಅದೇ ಕೆಂಡವನ್ನು ನಾಜೂಕಿನಿಂದ ಬಳಸಿದರೆ ಒಳ್ಳೆಯ ಪರಿಪಾಕ ಬರುತ್ತದೆ. ಕಮಟುವಾಸನೆಯಿಲ್ಲದೆ ಪರಿಮಳಭರಿತವಾಗಿರುತ್ತದೆ ಎಂಬ ಅಂತಃಸತ್ವ ಕಡೆಯವರೆಗೂ ಪ್ರವಹಿಸಿದೆ. ಸ್ತ್ರೀ ಬದುಕಿನ ಭಾವಭಿತ್ತಿಯ ಹಲವಾರು ಪದರುಗಳು ಇಲ್ಲಿ ಕೆಂಡ ಹಾಗು ರೊಟ್ಟಿಯ ಮೂಲಕ ಹಾದು ಹೋಗಿವೆ. ಕಾದಂಬರಿಯಲ್ಲಿ ಸತ್ಯಳನ್ನು ಓದಿ, ವೇಣಿಯಮ್ಮನನ್ನು ಅನುಸಂಧಾನಿಸಿ ಸುಮ್ಮನಾಗಲು ಮನಸ್ಸು ಒಪ್ಪುತ್ತಿಲ್ಲ. ಈ ರೀತಿಯ ಜಟಿಲತೆಯಲ್ಲಿ ಸಿಲುಕಿರುವ ಅದೆಷ್ಟೋ ಜೀವಗಳ ಜೊತೆಗೆ ಅನ್ಯಾಯಕ್ಕೂ ಒಳಗಾಗಿರುವ ಅದೆಷ್ಟೋ ಮನಸ್ಸುಗಳು ವಾಸ್ತವದಲ್ಲಿವೆ.

ಓರ್ವ ಪದಪ್ರೇಮಿಯಾಗಿ ನಾನು ನೆತ್ತಿಹೊಟ್ಟು, ಗೋವಿನಪಾದ, ಕಿನಿಸು, ಇಸರಿಕೆ, ಮಲಗುಡುಗೆ, ಹವಣು, ದುಬ್ದಿ, ಹೇರಾಶಿ-ಪೇರಾಶಿ ಮುಂತಾದ ಪದಗಳ ಓದುತ್ತ, ಗ್ರಹಿಸುತ್ತ ಆ ಮೂಲಕ ಕಾದಂಬರಿಯನ್ನು ಅನುಭವಿಸಿದ್ದೇನೆ. ಇಂಗ್ಲೆಂಡ್, ಬೆಂಗಳೂರು, ಹೊನ್ನೇಸರ, ಶಿವಮೊಗ್ಗ, ಸಾಗರದಲ್ಲಿ ವಿಹರಿಸಿ ಮತ್ತೆ ಬೆಂಗಳೂರಿಗೆ ಸ್ಥಿತವಾಗುವ ರಮ್ಯಾ ಮಗಳಾಗಿ, ಹೆಂಡತಿಯಾಗಿ, ಅಮ್ಮನಾಗಿ ಓದುಗರ ಭಾವಭಿತ್ತಿಯಲ್ಲಿ ಕಾಡುವ ಪಾತ್ರವಾಗಿ ಚಿತ್ರಿತಳಾಗಿದ್ದಾಳೆ. ಸಮಾಜದಲ್ಲಿ ಇಂದಿಗೂ ರೂಪಾಂತರದಲ್ಲಿ ಇರುವ ಜಟಿಲವಾದ ವಸ್ತುವಿಷಯವನ್ನು ಉಷಾ ನರಸಿಂಹನ್ ಅವರು ಆಯ್ಕೆ ಮಾಡಿಕೊಂಡಿದ್ದರೂ ಕಾದಂಬರಿಯಲ್ಲಿ ಎಲ್ಲಿಯೂ ಆವೇಗಕ್ಕೆ ಕೊಂಡೊಯ್ಯದೆ, ಸಮಾಧಾನ ಚಿತ್ತದಿಂದ ಬಿಡಿಸಿರುವುದು ಅವರ ಪ್ರಬುದ್ಧತೆಗೆ ಸಾಕ್ಷಿಯಾಗಿದೆ.

(ಕೃತಿ: ಕೆಂಡದ ರೊಟ್ಟಿ (ಕಾದಂಬರಿ), ಲೇಖಕರು: ಉಷಾ ನರಸಿಂಹನ್‌, ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು, ಬೆಲೆ:  130/-)