ಬಾಣಾವರವು ನಿರಂತರ ಯುದ್ಧ ಹಾಗೂ ಸೈನಿಕ ಚಟುವಟಿಕೆಗಳ ಕೇಂದ್ರವಾಗಿದ್ದುದರಿಂದಲೋ ಏನೋ ಇಲ್ಲಿ ಹೊಯ್ಸಳ ಶಿಲ್ಪಕಲೆಯ ವೈವಿಧ್ಯವನ್ನು ಬಿಂಬಿಸುವ ದೊಡ್ಡ ದೇಗುಲಗಳ ನಿರ್ಮಾಣವಾಗಿಲ್ಲ. ಆದರೆ ಇತಿಹಾಸವನ್ನು ನೆನಪಿಸುವ ಅನೇಕ ದೇವಾಲಯಗಳು ಇಲ್ಲಿ ಕಂಡುಬರುತ್ತವೆ. ಬಾಣಾವರದ ಬಾಗಿಲಲ್ಲಿರುವೋನೆ ಬಾಲೆಯ ಮಗನೆ ಬೆನವಣ್ಣಾ ಎಂದು ಜನಪದರ ಸ್ತುತಿಗೆ ಪಾತ್ರನಾದ ಗಣಪತಿಯ ಗುಡಿ ಈಗ ಊರಿನ ನಡುಭಾಗದಲ್ಲಿರುವ ಬಾಣೇಶ್ವರನ ಗುಡಿಯ ಪಕ್ಕದಲ್ಲಿದೆ. ಎರಡು ಕಾಲುಗಳನ್ನೂ ನೆಲಕ್ಕೂರಿದಂತೆ ಕುಳಿತ ಗಣಪನ ಭಂಗಿ, ಉದ್ದವಾದ ಕಿರೀಟಗಳಿಂದಾಗಿ ಈ ಶಿಲ್ಪ ವಿಶೇಷವೆನಿಸುತ್ತದೆ. ಪುರಾತನವಾದ ಬಾಣೇಶ್ವರನ ಗುಡಿಯ ಕಲ್ಲುಕಂಬಗಳು ತಿರುಗಣೆಯಿಂದ ಮಾಡಲಾಗಿದ್ದು ಗಮನ ಸೆಳೆಯುತ್ತವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಎಪ್ಪತ್ನಾಲ್ಕನೆಯ ಕಂತು

 

ಹಾಸನ ಜಿಲ್ಲೆ – ಕರ್ನಾಟಕದ ಇತಿಹಾಸದ ಅನೇಕ ಮಹತ್ವದ ಘಟನೆಗಳಿಗೆ ಶತಶತಮಾನಗಳ ನಿರಂತರ ಸಾಕ್ಷಿಯಾಗಿ ನೆಲೆನಿಂತ ಪ್ರದೇಶ. ಭಾರತೀಯಧರ್ಮ, ಕಲೆ, ಸಂಸ್ಕೃತಿಗಳ ಬೆಳೆವಣಿಗೆಗೆ ಇಲ್ಲಿನ ರಾಜವಂಶಗಳ ಆದರಲ್ಲೂ ಮುಖ್ಯವಾಗಿ ಹೊಯ್ಸಳರ ಕೊಡುಗೆ ಅಪರಿಮಿತ. ಹೊಯ್ಸಳರ ರಾಜಧಾನಿ ದ್ವಾರಸಮುದ್ರವನ್ನು (ಹಳೇಬೀಡು) ನಾಡಿನ ಉಳಿದ ಮುಖ್ಯಕೇಂದ್ರಗಳಿಗೆ ಸಂಪರ್ಕಿಸುವ ಕೇಂದ್ರಭಾಗದಲ್ಲಿದ್ದ ಬಾಣವೂರು ನಿರಂತರ ರಾಜಕೀಯ ವ್ಯವಹಾರ, ಸೈನಿಕ ಚಟುವಟಿಕೆಗಳ ಕೇಂದ್ರವೂ ಆಗಿದ್ದಿತು. ಹೊಯ್ಸಳರ ನಂತರವೂ ವಿಜಯನಗರ, ಕೆಳದಿಯ ನಾಯಕರು, ಮರಾಠ ಪೇಶ್ವೆ, ಮೈಸೂರು ಒಡೆಯರು ಅಂತೆಯೇ ಬ್ರಿಟಿಷರ ಕಾಲಕ್ಕೂ ಪ್ರಮುಖ ಕೇಂದ್ರವಾಗಿ ಮುಂದುವರೆದ ಬಾಣವೂರು ಬ್ರಿಟಿಷರ ನಾಲಗೆಯಲ್ಲಿ ಬಾಣಾವರ್‍ ಆಯಿತೋ ಏನೋ. ಅಂತೂ ಈಗ ಬಾಣಾವರ ಎಂದು ಕರೆಸಿಕೊಳ್ಳುತ್ತಿರುವ ಅರಸೀಕೆರೆ ತಾಲ್ಲೂಕಿನ ಹೋಬಳಿ ಕೇಂದ್ರವೇ ಈ ಬಾಣವೂರು.

ಬಹುಶಃ 6-7 ನೇ ಶತಮಾನದಲ್ಲಿ ಕನ್ನಡ ನಾಡಿನ ಹಲವು ಭಾಗಗಳನ್ನಾಳಿದ ಬಾಣವಂಶದ ಅರಸರ ಹೆಸರು ಈ ಊರಿಗೆ ಅಂಟಿಕೊಂಡಿರಬಹುದು. ಈ ಊರಿನ ದೇಗುಲವೊಂದರಲ್ಲಿ ಬಾಣೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುವ ಶಿವಲಿಂಗವಿದೆ. ಬಾಣವೂರಿನ ಹೆಸರಿನಿಂದಲೇ ಶಿವನಿಗೆ ಬಾಣೇಶ್ವರ ಎಂಬ ಹೆಸರು ಬಂದಿದ್ದರೂ ಆಶ್ಚರ್ಯವಿಲ್ಲ.

ಕ್ರಿ.ಶ. ಹತ್ತರಿಂದ ಹದಿನಾಲ್ಕನೇ ಶತಮಾನದವರೆಗೆ ಆಳಿದ ಹೊಯ್ಸಳರ ಕಾಲದಲ್ಲಿ ಸೈನಿಕರ ತಂಗುದಾಣವಾಗಿ, ಆಯುಧಾಗಾರವಾಗಿ ಆಚೀಚಿನ ಯುದ್ಧ ಚಟುವಟಿಕೆಗಳಿಗೆ ಬಾಣವೂರು ಸಂಪರ್ಕ ಸರಬರಾಜುಗಳ ಕೇಂದ್ರವಾಗಿದ್ದುದನ್ನು ನೆನಪಿಸುವ ಬೃಹದಾಕಾರದ ಕೋಟೆಯ ಉಗ್ರಾಣ ಇಂದಿಗೂ ಬಾಣಾವರದ ಊರಿನ ನಡುವೆ ಇದೆ. ಬೇರಾವುದೇ ದೇಶದಲ್ಲಿ ಇತಿಹಾಸದ ಅಮೂಲ್ಯ ಸಂಪತ್ತಿನಂತೆ ರಕ್ಷಣೆಗೊಳಪಡಬಹುದಾಗಿದ್ದ ಇಂತಹ ವಿಸ್ಮಯಕಾರಿ ಸ್ಮಾರಕವನ್ನು ಉಳಿಸಿಕೊಳ್ಳುವ ಆಲೋಚನೆಯನ್ನೇ ಮಾಡದೆ ಹಾಳುಗೆಡವಲು ಬಿಟ್ಟ ಸರ್ಕಾರ ಹಾಗೂ ಜಿಲ್ಲಾಡಳಿತದ ಅವಜ್ಞೆ ಪ್ರಶ್ನಾರ್ಹ. ಈ ಬೃಹತ್ ನಿರ್ಮಾಣದಗತಿಯೇ ಹೀಗೆ. ಇನ್ನು ಬಾಣಾವರದ ಸುತ್ತಲೂ ಅನಾಥ ಅವಶೇಷಗಳಾಗಿರುವ ಕೋಟೆ, ಕಂದಕ, ಬತೇರಿಗಳ ಬಗ್ಗೆ ಹೇಳುವುದೇನು?

ಬಾಣಾವರವು ನಿರಂತರ ಯುದ್ಧ ಹಾಗೂ ಸೈನಿಕ ಚಟುವಟಿಕೆಗಳ ಕೇಂದ್ರವಾಗಿದ್ದುದರಿಂದಲೋ ಏನೋ ಇಲ್ಲಿ ಹೊಯ್ಸಳ ಶಿಲ್ಪಕಲೆಯ ವೈವಿಧ್ಯವನ್ನು ಬಿಂಬಿಸುವ ದೊಡ್ಡ ದೇಗುಲಗಳ ನಿರ್ಮಾಣವಾಗಿಲ್ಲ. ಆದರೆ ಇತಿಹಾಸವನ್ನು ನೆನಪಿಸುವ ಅನೇಕ ದೇವಾಲಯಗಳು ಇಲ್ಲಿ ಕಂಡುಬರುತ್ತವೆ. ಬಾಣಾವರದ ಬಾಗಿಲಲ್ಲಿರುವೋನೆ ಬಾಲೆಯ ಮಗನೆ ಬೆನವಣ್ಣಾ ಎಂದು ಜನಪದರ ಸ್ತುತಿಗೆ ಪಾತ್ರನಾದ ಗಣಪತಿಯ ಗುಡಿ ಈಗ ಊರಿನ ನಡುಭಾಗದಲ್ಲಿರುವ ಬಾಣೇಶ್ವರನ ಗುಡಿಯ ಪಕ್ಕದಲ್ಲಿದೆ. ಎರಡು ಕಾಲುಗಳನ್ನೂ ನೆಲಕ್ಕೂರಿದಂತೆ ಕುಳಿತ ಗಣಪನ ಭಂಗಿ, ಉದ್ದವಾದ ಕಿರೀಟಗಳಿಂದಾಗಿ ಈ ಶಿಲ್ಪ ವಿಶೇಷವೆನಿಸುತ್ತದೆ. ಪುರಾತನವಾದ ಬಾಣೇಶ್ವರನ ಗುಡಿಯ ಕಲ್ಲುಕಂಬಗಳು ತಿರುಗಣೆಯಿಂದ ಮಾಡಲಾಗಿದ್ದು ಗಮನ ಸೆಳೆಯುತ್ತವೆ. ಈಗ ಈ ಗುಡಿಯನ್ನು ಪುನರ್ನಿರ್ಮಾಣ ಮಾಡಲಾಗುತ್ತಿದ್ದು ಶಿಲ್ಪವಿನ್ಯಾಸ ಬದಲಾಗಿದೆ.

ಬಾಣಾವರದ ಕೋಟೆಯ ದಿಡ್ಡಿಬಾಗಿಲ ಹೊರಗೆ ಊರಿಗೆ ಅಭಿಮುಖವಾಗಿ ಆಂಜನೇಯನ ಗುಡಿಯಿದೆ. ಇಲ್ಲಿ ಹತ್ತು ಅಡಿ ಎತ್ತರವಿರುವ ಶಿಲಾಫಲಕದಲ್ಲಿ ಮೂಡಿರುವ ಹನುಮಂತನ ಬಿಂಬವು ಆಕರ್ಷಕವಾಗಿದ್ದು ವಿಜಯನಗರದ ಕಾಲದ್ದೆಂದು ತೋರುತ್ತದೆ. ವ್ಯಾಸರಾಯರು ನಾಡಿನಾದ್ಯಂತ ಸ್ಥಾಪಿಸಿದ ಹನುಮಂತ ಶಿಲ್ಪಗಳ ವಿನ್ಯಾಸಕ್ಕೆ ಅನುಗುಣವಾಗಿ ಈ ಶಿಲ್ಪವೂ ಕಂಡುಬರುತ್ತದೆ. ಎಡಕ್ಕೆ ತಿರುಗಿದ ಮೊಗ, ಬಲತೋಳು ಮೇಲೆತ್ತಿ ವಿಜಯಸೂಚಕವಾಗಿ ತೋರುವ ಅಂಗೈ, ಬಲದಿಂದ ಮೇಲೆದ್ದು ಎಡಕ್ಕೆ ಹೊರಳಿ ಕೆಳಗಿಳಿದ ಸುರುಳಿಬಾಲ, ಸೊಂಟಕ್ಕೆ ಆನಿಸಿ ಎಡಗೈಯಲ್ಲಿ ಹಿಡಿದ ಹಣ್ಣಿನ ಗೊಂಚಲು ಇವೆಲ್ಲ ಸ್ಪಷ್ಟವಾಗಿ ಮೂಡಿರುವ ಈ ಶಿಲಾಫಲಕ ವಿಜಯನಗರ ಶೈಲಿಯ ಹನುಮ ಶಿಲ್ಪದ ಅತ್ಯುತ್ತಮ ಮಾದರಿಗಳಲ್ಲೊಂದು.

ಗುಡಿಯ ಪಕ್ಕ ಈಶಾನ್ಯ ಮೂಲೆಯಲ್ಲಿರುವ ಶಿವಲಿಂಗಕ್ಕೆ ಕಲ್ಲೇಶ್ವರನೆಂಬ ಹೆಸರು. ಇತ್ತೀಚೆಗೆ ಉತ್ತಮ ರೀತಿಯಲ್ಲಿ ಜೀರ್ಣೋದ್ಧಾರಗೊಂಡಿರುವ ಕಲ್ಲೇಶ್ವರನ ಗುಡಿಯಲ್ಲಿ ನೀಲಕಂಠೇಶ್ವರ, ಗಣಪತಿ, ಹಾಗೂ ಪಾರ್ವತೀದೇವಿಯರ ಶಿಲ್ಪಗಳೂ ಇವೆ.

(ಫೋಟೋಗಳು: ಲೇಖಕರವು)

ಹನುಮನ ಗುಡಿಯೆದುರು ಊರೊಳಗೆ ಕಾಲಿಟ್ಟಲ್ಲಿ ಅದೇ ರಸ್ತೆಯುದ್ದಕ್ಕೂ ಅನೇಕ ಗುಡಿಗಳು. ಅವುಗಳಲ್ಲಿ ಪುರಾತನವಾದ ಮೈಲಾರಲಿಂಗಗುಡಿ, ಬನಶಂಕರಿ, ಕಾಳಮ್ಮನ ದೇಗುಲಗಳು. ಎಡಕ್ಕೆ ಕೋಟೆಯ ಉಗ್ರಾಣದ ಬೃಹದಾಕಾರದ ಗೋಡೆ. ಅದರ ಅಂಚಿಗೆ ಉಯ್ಯಾಲೆ ಕಂಬದ ಎದುರಿಗೆ ಚನ್ನಕೇಶವ ಗುಡಿ. ಹೊಯ್ಸಳ ಕಾಲದಲ್ಲಿ ಕಟ್ಟಿದ ಈ ಗುಡಿಯನ್ನು ವಿಜಯನಗರದ ಅಧೀನ ಪಾಳೇಗಾರರು ಜೀರ್ಣೋದ್ಧಾರ ಮಾಡಿದ್ದಾರೆ. ಮುಖ್ಯಗುಡಿಯಲ್ಲಿ ಚನ್ನಕೇಶವನ ಸುಂದರವಾದ ವಿಗ್ರಹವಿದೆ. ಪಕ್ಕದ ಕೋಣೆಗಳಲ್ಲಿ ಆಂಜನೇಯ, ಸೌಮ್ಯನಾಯಕಿ ಅಮ್ಮನವರ ವಿಗ್ರಹಗಳಿವೆ.

ದೇವಾಲಯದ ಕೋಷ್ಠದಲ್ಲಿದ್ದ ಮಹಿಷಮರ್ದಿನಿ ಚಾಮುಂಡೇಶ್ವರಿ ಈಗ ಪ್ರತ್ಯೇಕಗುಡಿಯಲ್ಲಿ ನೆಲೆಸಿದ್ದಾಳೆ. ಹೊರಗೆ ವೇಣುಗೋಪಾಲನ ಪುರಾತನ ವಿಗ್ರಹವೊಂದಿದೆ. ಇತ್ತೀಚೆಗೆ ನರಸಿಂಹ ದೇವರ ಗುಡಿಯೊಂದನ್ನೂ ಇದೇ ಪ್ರಾಂಗಣದಲ್ಲಿ ಕಟ್ಟಲಾಗಿದೆ. ಬಾಣಾವರದಿಂದ ಕಣಕಟ್ಟೆಗೆ ಹೋಗುವ ದಾರಿಯಲ್ಲಿ ಕೃಷ್ಣಯೋಗೀಶ್ವರ ಅವಧೂತರ ವೇದಿಕೆಯೊಂದಿದೆ. ಅಲ್ಲೆ ಮುಂದೆ ಮಣಕತ್ತೂರಿನಲ್ಲಿರುವ ಹೊಯ್ಸಳ ಕಾಲದ ಭೈರವದೇವಾಲಯವೂ ಪ್ರಸಿದ್ಧವಾದ ಕ್ಷೇತ್ರವೆನಿಸಿದೆ.