ಅಪನಂಬಿಕೆಗಳಲ್ಲೇ ಮನುಷ್ಯ ಎಷ್ಟೊಂದು ನಂಬಿಕೆಗಳ ಹುಟ್ಟಿಸುವನಲ್ಲಾ… ಆದರೆ ದೇವರ ನಂಬಿಕೆಗಳಲ್ಲಿ ಎಷ್ಟೆಲ್ಲ ಅಪನಂಬಿಕೆ ಅಂತರ ತಾರತಮ್ಯಗಳಿವೆಯಲ್ಲಾ… ಇಂತಹ ದ್ವಂದ್ವಗಳಲ್ಲಿ ಬದುಕು ಸವೆದ ಎಕ್ಕಡವಾಗಿರುತ್ತದೆಯೇ. ಜೋಪಾನ ಮಾಡಿದ್ದ ಎಕ್ಕಡ ಕೊನೆಗೆ ಎಲ್ಲಿ ಹೋಗಿ ಬೀಳುತ್ತದೆ? ಹೆಗಲ ಮೇಲೆ ಕೈ ಹಾಕುವಷ್ಟು ಸಲಿಗೆ ಬಂದುಬಿಟ್ಟಿತಲ್ಲ ಇವನಿಗೆ… `ಬೀಡಿ ಸೇದುವೆಯಾ’ ಎಂದ? `ಹೂಂ; ಕೊಡು’ ಎಂದು ಜೊತೆಗೆ ಸೇದಿದೆ. ಯಾರ ವಯಕ್ತಿಕ ವಿವರವನ್ನೂ ಕೇಳುವವನಲ್ಲ ನಾನು. ಹಾಗೆಯೆ ಯಾರಾದರೂ ನನ್ನ ಬಗ್ಗೆ ಕೇಳಿದರೆ ಸರಿ ಉತ್ತರ ನೀಡಲಾರೆ. ಅದೊಂದು ತರ ಹುಚ್ಚು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹೊಸ ಬರಹ.

ನಿಯಂತ್ರಣ ಮೀರಿ ಮನಸ್ಸು ಹಾರಿ ಹೋಗಿತ್ತು. `ಸಾಧ್ಯವಿಲ್ಲಾ, ನಡೆ ಹೊರಕ್ಕೆ’ ಎಂದಿತ್ತು ಹಾಸ್ಟೆಲ್ ಸಿಬ್ಬಂದಿ. ಒಂದಷ್ಟು ಪುಸ್ತಕ ಇದ್ದವು. ಅವನ್ನೆಲ್ಲ ಒಬ್ಬ ಗೆಳೆಯನಿಗೆ ಕೊಟ್ಟುಬಿಟ್ಟೆ. ಅವನ್ನು ಹೊತ್ತುಕೊಂಡು ಎಲ್ಲಿ ಹೋಗುವುದು… ಬಣ್ಣಗೆಟ್ಟ ಹಳೆಯ ಬಟ್ಟೆಗಳ ಒಂದು ಬ್ಯಾಗಿಗೆ ತುಂಬಿಕೊಂಡೆ. ಯಾರಿಗೂ ಹೇಳಲಿಲ್ಲ. ನಡೆದುಕೊಂಡು ನಗರದ ಮುಖ್ಯ ಬೀದಿಗಳಲ್ಲಿ ಅಡ್ಡಾಡಿದೆ. ಎಷ್ಟೊಂದು ಸುಖವಾಗಿದೆಯಲ್ಲ ಲೋಕ ಎನಿಸಿತು. ಅಡ್ಡಾಡಿದೆ. ಹೀಗೆ ಅನಾಥವಾಗಿರುವುದೂ ಕೂಡ ಹಿತ ಎನಿಸಿತು. ದುಃಖಿಸಿದರೆ ದಾರಿಯೆ ಮುಚ್ಚಿ ಹೋಗುತ್ತದೆ ಎಂದು ನಗೆ ಮೊಗದಲ್ಲಿ ಜನರನ್ನು ವಿಶ್ವಾಸದಿಂದ ನೋಡಿದೆ. ಸುಮ್ಮನೆ ನಕ್ಕೋತ ಹೊರಟರು. ಎಲ್ಲೊ ನೋಡಿದ್ದೆ ಅನಿಸುತ್ತೆ ಎಂಬಂತೆ ಕೆಲವರು ಹಿಂತಿರುಗಿ ನೋಡಿದರು. ಅವರತ್ತ ಕೈ ಬೀಸಿದೆ. ಅವರೂ ಹಾಗೇ ಮಾಡಿದರು. ಏನೋ ಸಮಾಧಾನವಾಯಿತು. ಹಿರಿಯರೊಬ್ಬರು ನಿಂತು ಕೈ ಹಿಡಿದರು. ಇನ್ನಷ್ಟು ನಕ್ಕಿದೆ… `ನೆನ್ಪಾಗ್ತಿಲ್ಲಾ; ವಯ್ಸಾಯ್ತು… ಮರೆವು… ಎಲ್ಲೊ ನೋಡಿದ್ದೆ ಅನ್ಸುತ್ತೆ’ ಎಂದರು ಸಭ್ಯತೆಯಲ್ಲಿ. ಇನ್ನೆಲ್ಲಿ ನೋಡಲು ಸಾಧ್ಯ… ಇದೇ ಮೈಸೂರಲ್ಲೇ ಈ ಭೂಮಿಯ ಮೇಲೇ; ಮನುಷ್ಯ ಮನುಷ್ಯರನ್ನು ನೋಡಿ ಮಾತಾಡಿಸೋದು ಕಾಮನ್ನು ಸಾರ್ ಎಂದೆ. `ಯಸ್ ಯಸ್; ಯೂ ಆರ್ ರೈಟ್… ಒನ್ ಶುಡ್ ನೋ ಈಚದರ್’ ಎಂದು ಹೇಳಿ ಸಿಗ್ನಲ್ ದಾಟಿದರು. ಆಚೆ ಮರೆಗೆ ಹೋಗುವ ತನಕ ಈಚೆ ರಸ್ತೆಯ ಸುಂದರ ಕಟ್ಟಡದ ಬಳಿಯೇ ನಿಂತು ಆ ವಯಸ್ಕರ ನೋಡಿದೆ. ಈ ವಯಸ್ಸಿನಲ್ಲಿ ಒಬ್ಬರೇ ಅಲೆದಾಡುತ್ತಿದ್ದಾರೆ. ಪ್ರಾಯದಲ್ಲಿ ತುಂಬ ಜನ ಜೊತೆಗಿದ್ದರೇನೊ ಎಂದುಕೊಂಡೆ. ಯಾರಿಗೆ ಗೊತ್ತು… ಅವರವರ ದಾರಿ ಅವರವರದು. ಅವರಿವರ ಹಿಂಬಾಲಿಸಿದರೇ ಕೆಡುಕೇನೊ.

ಅಷ್ಟು ದೂರದಿಂದ ಬಿಗಿದ ಮೈಯ್ಯ ಚೆಲುವೆಯರು ಬರುತ್ತಿದ್ದರು. ಕಂಡೆ ಅವರ ಮಿಡ್ಡಿಯ ಕಾಲಿನ ಮೀನಕಂಡಗಳ. ಅಮಾಯಕನಂತೆ ಹಿಂಬಾಲಿಸಿದೆ. ಸುಗಂಧ ತೇಲಿ ಬರುತ್ತಿತ್ತು ಅವರ ದೇಹದಿಂದ. ಉದ್ದ ಕೂದಲ ಬೆನ್ನ ಮೇಲೆ ಹರಡಿಕೊಂಡಿದ್ದರು. ಗಿಣಿಗಳ ಹಾಗೆ ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದರು. ಗದ್ದಲದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ತೊಂದರೆ ಕೊಡದೆ ಚೆಲುವೆಯರ ಹಿಂದೆ ಹಿಂಬಾಲಿಸಲು ಯಾವ ಕಾಸೂ ಖರ್ಚಾಗುತ್ತಿರಲಿಲ್ಲ. ಯಾರೂ ಆಕ್ಷೇಪ ಮಾಡುತ್ತಿರಲಿಲ್ಲ. ಒಂದೆರಡು ಬಾರಿ ಹಿಂತಿರುಗಿ ನೋಡಿದರು. ಕತ್ತು ಬಗ್ಗಿಸಿಕೊಂಡು ಮುಂದೆ ನಡೆದೆ. ಇನ್ನೊಂದು ಸಿಗ್ನಲ್ ಬಳಿ ಕ್ರಾಸಾದರು. ಯಾರಿಗೆ ಏನೂ ಗೊತ್ತಾಗಲಿಲ್ಲ. ಅವರ ಚೆಲುವನ್ನು ಕದ್ದು ಮನದ ಮೂಲೆಯಲ್ಲಿ ಜೋಪಾನ ಬಚ್ಚಿಟ್ಟುಕೊಂಡೆ. ನಾನು ಕದ್ದಿದ್ದೇ ಅವರಿಗೆ ತಿಳಿಯಲಿಲ್ಲ. ಎಂತಹ ಮಾಯದ ಚೋರ ನಾನು! ಅದೇ ಮುಖ್ಯ ರಸ್ತೆಯ ಮರದ ಕೆಳಗೆ ಒಬ್ಬಳು ನಿಂತಿದ್ದಳು. ಯಾರಾದರೂ ಬಂದು ಪಿಕ್ ಮಾಡುವರು ಎಂದು, ಅವಳತ್ತ ನೋಡದವನಂತೆ ಹಾದು ಹೋದೆ. ಚಿಕ್ಕ ಗಡಿಯಾರದ ಬಳಿಯ ಮಾರ್ಕೆಟ್ಟಿನ ಒಳಕ್ಕೆ ಹೋದೆ. ಭಾಗಶಃ ನಾನೆಲ್ಲೂ ಅಷ್ಟೊಂದು ಚೆಂದದ ತರಕಾರಿ ಮಾರುಕಟ್ಟೆಯನ್ನು ಕಂಡೇ ಇಲ್ಲ. ಆಗತಾನೆ ಹೊಲಗಳಿಂದ ಬುಟ್ಟಿ ತುಂಬಿ ಬಂದಂತೆ ರಾಶಿಯಾಗಿರುತ್ತಿದ್ದವು ಕಾಯಿ ಪಲ್ಲೆಗಳು. ಹಸಿದ ಹಸು ತೋಟಕ್ಕೆ ನುಗ್ಗಿ ತಿಂದುಬಿಡುವಂತೆ ಮನಸ್ಸಾಗುತ್ತಿತ್ತು. ಇಡೀಯಾಗಿ ಸೌತೆಕಾಯಿ ಮಾರುತಿದ್ದರು. ಚೆನ್ನಾಗಿದ್ದ ಎರಡು ಸೌತೆಕಾಯಿಗಳ ಎತ್ತಿಕೊಂಡು ಎಷ್ಟು ಕಾಸು ಕೊಡಲಿ ಎಂದೆ. ಅದು ಆ ವ್ಯಾಪಾರಿಗೆ ಲೆಕ್ಕವೇ ಅಲ್ಲಾ. ತಕಂಡೋಗು ಎಂದ. ಕಚ್ಚಿ ತಿಂದೆ. ಅಹಾ! ಎಷ್ಟೊಂದು ಸುಖ. ಒಂದು ಮಾಂಸದ ತುಂಡಿನಲ್ಲಿ ಎಷ್ಟು ರಸ ರುಚಿ ಇದೆಯೋ ಅಷ್ಟೇ ಸವಿ ಈ ಸೌತೆಕಾಯಲ್ಲೂ ಇದೆ ಎಂದು ಒಂದು ಮೂಲೆಯಲ್ಲಿ ಕೂತು ತಿಂದೆ. ಸದ್ಯಕ್ಕೆ ಅದೇ ಆ ಹೊತ್ತಿನ ಊಟವಾಗಿತ್ತು.

ಎಲ್ಲಿಗೆ ಹೋಗುವುದು ಎಂದು ಯೋಚಿಸಲೇ ಇಲ್ಲ. ಅದರ ಒತ್ತಡವನ್ನು ಎಳೆದುಕೊಳ್ಳಲಿಲ್ಲ. ಬಜಾರನ್ನು ಸುತ್ತಿದೆ. ಅಲ್ಲಿ ಸಿಹಿ ಗೆಣಸು ಕಂಡಿತು. ಕೇಳಿದೆ. ಕೊಟ್ಟರು. ಬ್ಯಾಗಲ್ಲಿ ಇಟ್ಟುಕೊಂಡೆ. ಕತ್ತಲಾಗುತ್ತಿತ್ತು. ವೇಷ್ಯೆಯರು ಕಂಡರು. ಅತ್ತೆಯರ ನೆನಪಾಯಿತು. ನಗುನಗುತ್ತಲೆ ಇದ್ದೆ. ಹಸನ್ಮುಖಿಯಾಗಿರುವುದು ಬಹಳ ಕಷ್ಟ ಎನಿಸಿತು. ನೂರಾರು ಬಗೆಯ ಮುಖ ಚಹರೆಗಳ ಮನುಷ್ಯ ತುಂಬ ಹೊತ್ತಿನ ತನಕ ನಗುವಂತೆಯೆ ಕಾಣಲಾರ. ಕವಟೆಗಳ ಯಾರೂ ಹಿಡಿದೆಳೆದು ಕಿವಿಗಳಿಗೆ ಕ್ಲಿಪ್ ಹಾಕಿದ್ದಾರೇನೊ ಎನಿಸಿತು. ಸದಾ ನಗುತ್ತಲೆ ಇರುವಂತೆ ಕಾಣುವುದು ಕೂಡ ಕುರೂಪ. ಬೇಕಿದ್ದರೆ ಕನ್ನಡಿಯಲ್ಲಿ ನೋಡಿಕೊಳ್ಳಿ. ಆ ಸಿನಿಮಾ ನಟರೊ ಹೇಗೆ ಸದಾ ಹಲ್ಲು ಬೀರುತ್ತ ಕಾಣಿಸಿಕೊಳ್ಳುವರೊ! ನಿಜಕ್ಕೂ ನಟಿಯರಿಗೆ ಅದು ದಂಡನೆ. ಅರಸು ರಸ್ತೆಯಲ್ಲಿ ಅದೇ ಮೈಸೂರಿನ ದಿನಸಿಯ ಅಂಗಡಿಗಳ ಮುಂದೆ ಜನ ಗಿಜಿಗುಟ್ಟುತ್ತಿತ್ತು. ಆ ರಸ್ತೆ ಆಗ ತಾನೆ ಹೊಸದಾಗಿ ನಿರ್ಮಾಣವಾಗಿತ್ತು. ಆ ತುದಿಯಿಂದ ಈ ತುದಿಯ ಉದ್ದಕ್ಕೂ ನಗು ಮರೆತು ಹ್ಯಾಪು ಮೋರೆ ಹಾಕುತ್ತ ನಡೆದೆ. ಹಳ್ಳಿಗಮಾರ್ ತರ ಮುಖವೆಲ್ಲ ಜಿಡ್ಡಾಗಿತ್ತು. ಧೂಳು ಹೊಗೆ ಅಲಂಕಾರ ಮಾಡಿದ್ದವು. ನನ್ನ ಮುಸುಡಿಗೆ ಯಾರೂ ನಗಾಡಲಿಲ್ಲ. ಬಿಕನಾಸಿ ಮುಖಕ್ಕೆ ತಿರಸ್ಕಾರಗಳ ನೋಟ. ಸಲ್ಲದವರು ಅಂತಹ ರಾಜ ಬೀದಿಗಳಲ್ಲಿ ಕಾಣಿಸಿಕೊಳ್ಳುವುದೇ ತಮ್ಮನ್ನು ತಾವೇ ಅಪಹಾಸ್ಯ ಮಾಡಿಕೊಂಡಂತೆ. ಹೌದು! ಏನೀಗ. ನಾನೊಬ್ಬ ಬಿಕನಾಸಿ… ಬನವಾಸಿಯ ಕವಿ ಅಲ್ಲವಲ್ಲಾ. ಹೋದರೆ ಹೋಗಲಿ; ಮಾನಮರ್ವಾದಿ ಇದ್ದರೆ ತಾನೆ ಅದು ಹೋಗೋದೂ… ಏನೂ ಇಲ್ಲಾ ಎಂದಾಗ ಹೋಗೋದೆನಿದೆ ಎಂದು ಆ ಮೈಸೂರು ದೊರೆಯ ಪ್ರತಿಮೆಯ ಸರ್ಕಲ್ಲಿನಲ್ಲಿ ಕೂತು ಬೆಳಗುತ್ತಿದ್ದ ದೀಪಗಳ ಅಂದ ಚಂದವ ನೋಡುತಿದ್ದೆ. ಕುದುರೆ ಗಾಡಿಗಳು ಲಟಲಟನೆ ಸದ್ದು ಮಾಡುತ್ತ ಸಾಗಿದ್ದವು. ಅವುಗಳಲ್ಲಿ ಕೂತಿದ್ದವರು ಇನ್ನೂ ರಾಜರ ಕಾಲದಲ್ಲಿದ್ದೀವಿ ಎಂಬಂತೆ ಕಡಲೇಕಾಯಿ ಸಿಪ್ಪೆಯ ಬೀದಿಗೆ ಎಸೆಯುತ್ತ ಮೆಲ್ಲುತ್ತ ಹೊರಟಿದ್ದರು. ರಸ್ತೆ ಬದಿಯ ಚುರುಮುರಿ ತಿಂದೆ.

ಯಾರೊ ಕರೆದರು. ಹಿಂತಿರುಗಿ ನೋಡಿದೆ. ಅವನು ಯಾರೊ ನನ್ನಂತೆಯೆ ಒಬ್ಬ ಬಿಕನಾಸಿ. ಹೆದರಿಸುವಂತೆ ದಿಟ್ಟಿಸಿದ. ಏನೂ ಎಂಬಂತೆ ಗುರಾಯಿಸಿದೆ. ಅಂತವರು ದೇಹ ಭಾಷೆಯಲ್ಲೇ ಅರ್ಥ ಮಾಡಿಕೊಂಡುಬಿಡುತ್ತಾರೆ. ನಾನು ಹೆದರಿದ್ದರೆ ಬೇರೆ ಏನೊ ಆಗುತ್ತಿತ್ತು. `ಏನಪ್ಪಾ… ಬಾಳಾ ಹೊತ್ತಿಂದ ನೋಡ್ತನೆ ಇದ್ದೀನಿ… ಇಲ್ಲಿಲ್ಲೆ ಸುತ್ತಾಡ್ತಿದ್ದೀಯಲ್ಲಾ… ಏನ್ ಸ್ಕೆಚ್ಚು… ನಾನೂ ಇದ್ದೀನಪ್ಪಾ’ ಎಂದು ಸ್ನೇಹದ ಕಣ್ಣಾಡಿಸಿದ. ಅವನ ದೃಷ್ಠಿಯಲ್ಲಿ ಯಾವುದೂ ಒಂದು ಐನಾತಿ ಕಳ್ಳತನಕ್ಕೆ ನಾನಲ್ಲಿ ಸುತ್ತಾಡುತ್ತಿರುವೆ ಎಂಬ ಅರ್ಥಕ್ಕೆ ಎಡೆ ಮಾಡಿತ್ತು. ನಗರ ಎಂದರೇ ಹಾಗೆ. ಪ್ರತಿ ಹೆಜ್ಜೆಯಲ್ಲು ಸಂಶಯ ಮೂಡಿರುತ್ತದೆ. ನಲವತ್ತು ವರ್ಷಗಳ ದಾಟಿದ್ದ. ಸಂಸಾರ ಬಿಟ್ಟು ಬೀದಿಗೆ ಬಿದ್ದವನಂತಿದ್ದ. ನಾನು ಅವನಿಂದ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಪಡೆಯುವುದೇ ಇತ್ತು. ಸದ್ಯ ಜೊತೆಗೆ ಒಬ್ಬ ಸಿಕ್ಕಿದ ಎಂದು ಮಹಾನಗೆ ಬೀರಿದೆ. ಅಸಹಜ ನಗೆ. ನನ್ನ ನಗೆಯಿಂದ ಆತ ಒಳಗೆ ಭಯಗೊಂಡಂತೆ ಕಂಡಿತು. ಶ್ರೀರಂಗಪಟ್ಟಣ ಎಂದು ಪರಿಚಯ ಮಾಡಿಕೊಂಡ. ನಾನು ಮದ್ದೂರಿಂದ ಬಂದಿರುವೆ ಎಂದು ಕೈ ಕುಲುಕಿದೆ. ತಣ್ಣನೆಯ ಮೆತ್ತಗಿನ ಅವನ ಕೈಗಳು ಉಗ್ರವಾಗಿರಬೇಕಿತ್ತು. ಏನೊ ಯಡವಟ್ಟು ಪಾರ್ಟಿ ಎಂದುಕೊಂಡೆ. ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಬಳಿ ಚಹಾ ಕುಡಿದೆವು. ನಾನೆ ಕಾಸುಕೊಟ್ಟೆ. ಮುಂಜಾಗರೂಕತೆಯಿಂದ ಒಂದಿಷ್ಟು ಕಾಸು ಇಟ್ಟುಕೊಂಡಿದ್ದೆ. ಅವನು ಒಂದು ಸುಳ್ಳು ಹೆಸರು ಹೇಳಿದ. ನಾನೂ ಅದನ್ನೇ ಮಾಡಿದೆ. ಗತಕಾಲದ ಗೆಳೆಯರಾಗಿಬಿಟ್ಟಿದ್ದೆವು ಬೈಟು ಟೀ ಕುಡಿದು.

ಅಪನಂಬಿಕೆಗಳಲ್ಲೇ ಮನುಷ್ಯ ಎಷ್ಟೊಂದು ನಂಬಿಕೆಗಳ ಹುಟ್ಟಿಸುವನಲ್ಲಾ… ಆದರೆ ದೇವರ ನಂಬಿಕೆಗಳಲ್ಲಿ ಎಷ್ಟೆಲ್ಲ ಅಪನಂಬಿಕೆ ಅಂತರ ತಾರತಮ್ಯಗಳಿವೆಯಲ್ಲಾ… ಇಂತಹ ದ್ವಂದ್ವಗಳಲ್ಲಿ ಬದುಕು ಸವೆದ ಎಕ್ಕಡವಾಗಿರುತ್ತದೆಯೇ. ಜೋಪಾನ ಮಾಡಿದ್ದ ಎಕ್ಕಡ ಕೊನೆಗೆ ಎಲ್ಲಿ ಹೋಗಿ ಬೀಳುತ್ತದೆ? ಹೆಗಲ ಮೇಲೆ ಕೈ ಹಾಕುವಷ್ಟು ಸಲಿಗೆ ಬಂದುಬಿಟ್ಟಿತಲ್ಲ ಇವನಿಗೆ… `ಬೀಡಿ ಸೇದುವೆಯಾ’ ಎಂದ? `ಹೂಂ; ಕೊಡು’ ಎಂದು ಜೊತೆಗೆ ಸೇದಿದೆ. ಯಾರ ವಯಕ್ತಿಕ ವಿವರವನ್ನೂ ಕೇಳುವವನಲ್ಲ ನಾನು. ಹಾಗೆಯೆ ಯಾರಾದರೂ ನನ್ನ ಬಗ್ಗೆ ಕೇಳಿದರೆ ಸರಿ ಉತ್ತರ ನೀಡಲಾರೆ. ಅದೊಂದು ತರ ಹುಚ್ಚು. ಬಾಲ್ಯದಿಂದಲೂ ಬಂದುಬಿಟ್ಟಿತ್ತು. ಇವನ್ಯಾರು ಎಂದು ತುಚ್ಛವಾಗಿ ಕೇಳಿ ನೋಡಿದಂತೆಲ್ಲ ನಾನು ತೀರಾ ಕೆಳಮಟ್ಟಕ್ಕೆ ಇಳಿದುಬಿಡುತ್ತಿದ್ದೆ. ಅವರು ಅಂದುಕೊಂಡಿದ್ದಕ್ಕಿಂತ ಕೀಳಾದ ಸ್ಥಾನದಲ್ಲಿ ಗುರುತಿಸಿಕೊಂಡರೆ ಏನೋ ಹಮ್ಮು, ಮೇಲರಿಮೆ ಅವರಿಗೆ ಬಂದುಬಿಡುತ್ತಿತ್ತು. ಎಂತಹ ಸುಖದ ಜನ! ಜೊತೆಗಿದ್ದವನು ಕೊಂಚ ಮೇಲರಿಮೆಯಲ್ಲೆ ಕೇಳಿದ…

`ಏನ್ಕೆಲ್ಸ ಮಾಡ್ತಿಯೆ’
`ಈಗ್ತಾನೆ ಕೆಲ್ಸ ಹುಡುಕ್ತಾ ಇದ್ದೀನಿ’
`ಯೆಂತಾ ಕೆಲ್ಸ ಮಾಡಿಯೆ’
`ಯಾವ್ದಾದ್ರೂ ಸರಿಯೇ… ಕಸಗುಡ್ಸೋದು ನನ್ನ ಫೇವರಿಟ್ ಜಾಬ್’
`ಯೇ ಅದ್ಬೇಡಾ… ಯೆಂಗ್ಸುರ್ಕೆಲ್ಸ; ಸಂಬ್ಳನು ಕಡ್ಮೆ’
`ಆದ್ರೆ ಅದ್ರೆಲಿ ಸಂತೋಷ ಇದಿಯಲ್ಲಾ’
`ಸಂತೋಸ ಅನ್ಕ ವೋದ್ರೆ ವಟ್ಟೆ ತುಂಬದೇ’
`ನಿಜಾ; ಆದ್ರೆ ಸಂತೋಷವಾಗಿರೋರು ಯಾವ ಕೆಲ್ಸನು ಮಾಡ್ದೆ ಕುಂತು ಉಂಡು ಅಲ್ಲೇ ಮಲ್ಗೇಬಿಡ್ತರಲ್ಲಾ…’

`ಯಾರ್ದೊ ವಿಸ್ಯ ತಕಂಡು ನಾವ್ಯಾಕಪ್ಪ ತಲೆ ಕೆಡಿಸ್ಕಬೇಕೂ. ಪುಣ್ಯ ಮಾಡಿರ್ತರೆ. ಸಂಪಾದ್ಸಿ ಬಿಟ್ಟೋಗಿರ್ತದೆ. ನಮ್ದೇಳೂ… ಇವತ್ತಿನೊಪ್ಪತ್ತಿಗಿದ್ರೆ ನಾಳೆ ವತಾರಕೆ ಯಂಗೆ ಅನ್ನುವಂಗಿರ್ತದಲ್ಲಾ… ಇದಾ ತಲೆಗಾಕೊ… ನೀ ಸಂಪಾದ್ಸಿ ಕೂಡಿಡು ಅಂತಾ ಯೇಳ್ತಿಲ್ಲಾ… ನಾಳೆ ಯೆಡ್ತಿ ಮಕ್ಕಳು ಬತ್ತರೆ. ಅವ್ರ ಯಂಗಪ್ಪ ಸಾಕಿಯೇ. ನಮ್ಮವ್ವ ಸತ್ತಾಗ ಅವಳ ಸೆರಿಗಿನ ಗಂಟೆಲಿ ಎಂಟಾಣೆ ನಾಕಾಣೆ ಚಿಲ್ರೆ ಕಾಸಿದ್ದೊ ಅಷ್ಟೇ… ಅಸ್ಟೆಕಣೊ… ಏನೂ ತರ್ಲಿಲ್ಲ ಏನ್ನೊ ತಕಂದೋಗ್ಲಿಲ್ಲ. ಸಂಪಾದ್ನೆ ಅಂದ್ರೂ ಅಷ್ಟೆಯಾ! ಲಾಬ ನಷ್ಟನು ಅದ್ರೆಲೆ ಬತ್ತವೆ. ಮೂರ್ಕಾಸು ಇದ್ರೆ ಸಾಕು. ಕೋಟಿ ಕೋಟಿ ಯಾಕಪ್ಪ ಬೇಕೂ… ಇಗಾ ನನ್ನೇ ನೋಡೂ; ಮನೆ ಬಿಟ್ಬಂದಿವಿನಿ. ಮೂರ್ತಿಂಗ್ಳಾಯ್ತು. ಅಲ್ಲಿ ಇಲ್ಲಿ ಪ್ಯಾಟೆ ಬೀದಿಲೆ ದುಡ್ಕಂಡು ಉಣ್ಕಂಡು ಪುಟ್ಬಾತೆಲೆ ಬಲಿಕತಿನಿ. ಯಾರ್ನ ಯಾರು ಕೇಳುದಿಲ್ಲ ಇಲ್ಲಿ. ನನ್ನೆಡ್ತಿ ಕೈಗೆ ನಾಕ್ಕಾಸ ಕೊಡ್ಬೇಕು ಅನಿಸ್ಲಿಲ್ಲ. ಜಗ್ಳ ಮಾಡುದ್ಲು. ಕೈಗೆ ಬರ್ಲು ತಕಂದ್ಲು; ಓಹೋ; ಇಸ್ಟಾದ್ಮೇಲೆ ನಾನು ಕಾಲ್ಕಸ ಆದೆ ಅನಿಸ್ತು. ವಂಟ್ಬಂದೆ ಮಕ್ಕುಳ ಮುಕಾ ನೋಡ್ಬೇಕು ಅನ್ಸುದಿಲ್ಲಾ…’

ಅವನ ಮಾತು ಮುಗಿಯುವಷ್ಟರಲ್ಲಿ ನಾವು ಅರಮನೆಯ ಮುಂದಿದ್ದೊ. ಅದ್ಧೂರಿ ದೀಪಾಲಂಕಾರ. ರಾಜರಾಣಿಯರೆ ಇಲ್ಲದ ಖಾಲಿ ಖಾಲಿ ಅರಮನೆ. ನನ್ನ ಮನಸ್ಸು ಒಂದು ಸ್ಮಶಾನದಂತಿತ್ತು. ಪಾರ್ಕಿನಲ್ಲಿ ಕೂತೆವು. ಇವನು ಸಾಮಾನ್ಯ ಅಲ್ಲ ಎನಿಸಿತು. ಪುಸ್ತಕದ ಅರಿವಿಗೂ ಬದುಕಿನ ಅರ್ಥಕ್ಕೂ ಎಷ್ಟೊಂದು ಅಂತರ ಎಂದು ಲೆಕ್ಕಿಸಿದೆ.

`ಯಾವ ವೋಟ್ಲೆಲಿ ರೂಂ ಮಾಡಿಯೆ’
`ನೀನಿರುವಾಗ ನನಗೆ ರೂಂ ಯಾಕೆ ಬೇಕೂ’
`ಅಂಗಾರೆ ಸರೋಯ್ತು ಬಿಡು, ನಾನೂ ಒಂಟಿ, ನೀನೂ ಒಂಟಿ’
`ನೀನೆಲ್ಲಿ ಮಲಿಕೊತಿಯೆ’
`ಇದೇ ಪುಟ್ಬಾತೆಲಿ’
`ತೊಂದ್ರೆ ಇಲ್ವೇ… ಪೋಲಿಸ್ನೋರೂ… ಯಾರಾರ ತರ್ಲೆ ಮಾಡೋರು…’
`ಇರ್ತವೆ, ಅವ್ರ  ಪಾಡ್ಗೆ ಅವು ವೋಯ್ತವೆ ಯೆಪ್ಪಾ, ಅಣ್ಣಾ ಅಂದ್ರೆ ಪಾಪಿ ಅನ್ಕಂಡು ಬಿಟ್ಟೋಯ್ತವೆ.’
`ಯೆಡ್ತಿ ಜೊತೆಲೆ ಅನ್ಸರಿಸ್ಕಂಡು ಇರ್ಬಹುದಿತ್ತಲ್ಲಾ. ಮಕ್ಕಳಿವೆ ಅಂತೀಯಾ…’
`ವಾಪಸ್ಸು ವೊಯ್ತಿನಿ. ನಾನಿಲ್ದೆ ಇದ್ರೆ ಯೆಸ್ಟು ಕಸ್ಟ ಅನ್ನುದು ಗೊತ್ತಾಗ್ಲಿ… ಆಗ ಸೇರ್ಕತಿನಿ… ಬಿಡೂ ಕಾದದೇ’
`ಅಲ್ಲಿ ತನ್ಕ ಅವರಗತಿ’
`ಅಂತೂ ಯೆಂಡ್ತಿ ಮೇಲೆ ಪ್ರೀತಿ ಇನ್ನೂ ಇದೇ’

`ಅದೇ! ಆದ್ರೆ ಆ ಬೊಡ್ಡಿ ನನ್ಮೇಲೆ ಜೀವ ಮಡಿಕಂಡಿಲ್ವಲ್ಲಾ… ಯಾವ್ನೊವಬ್ಬ ನೋಡ್ದ ಅಂತಾ ಅವ್ನ ಜೊತೆ ಸೇರ್ಕಂದವಳೆ. ಬ್ಯಾಡಕನಮ್ಮಿ ಇದು ತರ್ವಲ್ಲ ಅಂದೆ. ತಲೆ ವಗುದ್ಲು. ನಾನೇನಪ್ಪ ಮಾಡನೆ. ವಡ್ದು ಬಡ್ದು ಮಾನನೆಲ್ಲ ನಾನೆ ಹರಾಜಕಂದು ಯಾವ್ಸುಕಾ ಪಡ್ಲೀ… ವೋಗತಾಗಿ; ನೀನೆ ಸುಕುವಾಗಿರು ಅಂತಾ ಬಿಟ್ಟು ಬಂದ್ಬುಟ್ಟೆ.’

ಅವನ ಆ ನಡೆಗೆ ಏನು ಹೇಳಬೇಕೆಂದು ತೋಚಲಿಲ್ಲ. ಇಂತವರೂ ಇರುತ್ತಾರಲ್ಲ ಎನಿಸಿ ಅಚ್ಚರಿಗೊಂಡೆ. ನನ್ನ ಅಪ್ಪ ನನ್ನ ತಾಯನ್ನು ಒಂದು ಯಕಶ್ಚಿತ್ ಅನುಮಾನದ ನೆಪ ತೆಗೆದು ಕೊಂದುಬಿಟ್ಟಿದ್ದ. ಇವನನ್ನು ನೋಡಿದರೆ ಹೆಣ್ಣಿನ ಸಂತನಂತೆ ಕಾಣುತ್ತಾನಲ್ಲಾ.

`ಏನಪ್ಪಾ ನಿನ್ನ ಸ್ಕೆಚ್ಚು… ನಾನೂ ಇದ್ದೀನಿ ಅಂದಿದ್ದಲ್ಲಾ; ನಿನ್ನ ಮನಸ್ಸಲ್ಲಿ ಏನಿತ್ತು. ನಾನು ಹಾಗೆ ಕಂಡೆನೇ’

`ಇರ್ತರಲ್ಲಪ್ಪಾ; ಬೀಗ ಮುರಿಯೋರೂ. ಅವ್ರ ನೋಡಿ ಸಾಕಾಗಿವಿನಿ ಕನಪ್ಪಾ. ಮೊದ್ಲೆ ಯೆಚ್ಚುರ್ಕೆ ಕೊಟ್ಟುಬುಟ್ರೆ, ಬ್ಯಾರೆ ಕಡೆಗೆ ವಂಟೋಯ್ತರೆ. ರಾತ್ರಿವತ್ಗೆ ಪೋಲಿಸ್ನೋರು ಬೀಟ್ಗೆ ಬತ್ತರಲ್ಲಾ; ಅವ್ರು ನನ್ನ ಅಂತೆವುನ ಅಂತಾ ಯಿಡ್ಕಂದೋಗಿ ರುಬ್ಬಾಕ್ಬುಟ್ಟಿದ್ರು. ಅಂತವ್ನೆಲ್ಲ ಅಂತಾ ಬಿಟ್ಟಿದ್ರು. ಯಾರೊ ಕಾಲೇಜೋದುನ್ತರ ಕಾಣ್ತನೆ. ಬಡ್ತನ ಕೆಟ್ಟುದ್ದು. ಕಳ್ತನ ಮಾಡಿಸ್ತದೆ. ಅಂಗೆ ಸಿಕ್ಕಾಕೊಂಡೋರ ಬಾಳ ಕಂಡಿವಿನಿ ಕನಪ್ಪಾ. ಅದ್ಕೆ ಮೊದ್ಲೆ ಯೆಚ್ಚುರ್ಕೆ ಕೊಡ್ಮ ಅಂತ ಅಂಗಂದೆ. ತಪ್ಪ ತಿಳ್ಕಬ್ಯಾಡಾ’

ಅವನ ಕಾಳಜಿ ಇಷ್ಟ ಆಯ್ತು. ಮತ್ತೆ ಅಲ್ಲಿ ಇಲ್ಲಿ ಸುತ್ತಿ ಚಾಮರಾಜರಸ್ತೆಯತ್ತ ಬಂದೆವು. ಅಲ್ಲೊಂದು ತಳ್ಳುಗಾಡಿಯಲ್ಲಿ ಅನ್ನ ಸಾಂಬರ್ ಕೊಡಿಸಿದ. ಮುಂದೆ ಬಂದರೆ ಅಲ್ಲಿ ಸಿನಿಮಾ ಥಿಯೇಟರ್ ಎದುರು ನಿಂತ. `ಗಜ್ಜೆ ಪೂಜೆ’ ಸಿನಿಮಾ ಪೋಸ್ಟರ್ ಆಕರ್ಷಿಸಿತು. ಸಿನಿಮಾ ನೋಡ್ತಿಯಾ ಎಂದು ಕೇಳಿದ. ಆಗಲಿ ಎಂಬಂತೆ ತಲೆ ಆಡಿಸಿದೆ. ಇವ್ರೆಲ್ಲ ಒಳಾಕೆ ವೋಗಿ ಗಲಾಟೆ ತಗ್ಲಿ… ಆಗ ಬರುವ ಬಾ ಎಂದು ಅತ್ತಿತ್ತ ತಿರುಗಾಡಿಸಿದ. ಸಿನಿಮಾ ನೋಡಿ ಸಮಯ ಕಳೆಯುತ್ತದೆ. ಆ ಮೇಲೆ ಮಧ್ಯರಾತ್ರಿ ಎಲ್ಲಿ ಹೋಗಿ ಮಲಗುವುದು ಎಂದು ಚಿಂತಿಸಿದೆ. ಅದನ್ನೇ ಕೇಳಿದೆ. `ನೀ ಸುಮ್ನಿರಪ್ಪಾ; ನೀ ಪಿಚ್ಚರ ನೋಡ್ಬೇಕಲುವೇ; ಆ ಸರೊತ್ತೆಲಿ ಮಲಿಕಬೇಕಲ್ಲುವೇ; ಎಲ್ಲಾ ಅದಾಗಿದ್ದು ಅದಾಯ್ತದೆ ತಲೆಕೆಡಿಸ್ಕ ಬ್ಯಾಡ ಸುಮ್ನಿರು’ ಎಂದ. ಹಗುರಾದೆ. ಥಿಯೇಟರ್ ಬಳಿ ಹೋದೆವು. ಪರದೆಯ ಮುಂದಿನ ಸೀಟುಗಳ ಬಾಗಿಲ ಬಳಿ ಟಿಕೇಟ್ ಹರಿಯುವವನು ನಿಂತಿದ್ದ. ಇವನೂ ಅವನೂ ಮಾತಾಡಿಕೊಂಡರು. ಒಳಕ್ಕೆ ಆತ ಟಿಕೇಟಿಲ್ಲದೆ ಸ್ನೇಹದ ಮೇರೆಗೆ ಬಿಟ್ಟ. `ಅರೇ ಇವನಾ…’ ಜೀವನೋಪಾಯ ಚೆನ್ನಾಗಿ ಕಲಿತಿದ್ದಾನಲ್ಲ ಎನಿಸಿತು.

ಆ ನಟಿ ಕಲ್ಪನಾ, ಪುಟ್ಟಣ್ಣ ಇವರ ಬಗ್ಗೆ ಗೊತ್ತಿತ್ತು. ಅಷ್ಟೂ ಹತ್ತಿರದಿಂದ ಸಿನಿಮಾ ನೋಡಲು ಕಷ್ಟವಾಗುತ್ತಿತ್ತು. ಶ್ರೀಧರ ಬಹಳ ಹಿಂದಿ ಇಂಗ್ಲೀಷ್ ಸಿನಿಮಾಗಳ ತೋರಿಸಿದ್ದ. ಅದಲ್ಲದೆ ಅದಾಗಲೆ ಮೈಸೂರು ಮಹರಾಜ ಕಾಲೇಜಿನ ಪತ್ರಿಕೋದ್ಯಮ ವಿಭಾಗದವರು ಸತ್ಯಜಿತ್‍ರಾಯ್ ಅವರ ಪ್ರಖ್ಯಾತ `ಫತೇರ್ ಪಾಂಚಾಲಿ’ ಸಿನಿಮಾವನ್ನು ಸೀನಿಯರ್ ಬಿ.ಎ. ಹಾಲ್‍ನಲ್ಲಿ ತೋರಿಸಿದ್ದರು. ದಸರಾ ಸಿನಿಮಾ ಉತ್ಸವಗಳಲ್ಲಿ ವಿಖ್ಯಾತ ಚಲನಚಿತ್ರಗಳ ಧಾರಳವಾಗಿ ನೋಡಿ ಆನಂದಿಸಿದ್ದೆ. ಸಿನಿಮಾ ಆರಂಭ ಆಗಿಬಿಟ್ಟಿತ್ತು. ಆ ಸಿನಿಮಾವನ್ನು ಹಿಂದೆಯೆ ಒಮ್ಮೆ ನೋಡಿದ್ದೆ. ಕರುಣಾಜನಕ ಕಥೆಯಾಧಾರಿತ ಚಿತ್ರ. ಸೆಕೆಂಡ್ ಶೋ ಆಗಿದ್ದರಿಂದ ಜನ ಅಷ್ಟಾಗಿ ಇರಲಿಲ್ಲ. ಖಾಲಿ ಖಾಲಿ ಇತ್ತು. ಕೂತು ನೋಡಿದೆವು. ಸ್ವಲ್ಪ ಹೊತ್ತಿನಲ್ಲೆ ತೂಕಡಿಸುತ್ತಿದ್ದ. ಛೇರಲ್ಲೇ ಕಾಲು ನೀಡಿ ಕತ್ತ ತನ್ನ ಹೆಗಲ ಮೇಲಿಟ್ಟುಕೊಂಡಂತೆ ಗೊರಕೆ ಹೊಡಯುತ್ತಿದ್ದ.

ಓಹ್! ಈ ರಾತ್ರಿ ನಾವು ಇಲ್ಲಿಯೇ ಮಲಗುವುದು ಎಂದು ಅರ್ಥ ಮಾಡಿಕೊಂಡೆ. ಇದೊಂತರಾ ಮಜಾ. ಸಿನಿಮಾನು ನೋಡಬಹುದು, ನಿದ್ದೆನೂ ಮಾಡಬಹುದು. ಯಾರ ಕಾಟವೂ ಇಲ್ಲ. ಇದು ಎಷ್ಟೊಂದು ಚೆಂದ ಅಲ್ಲವೇ ಎಂದು ಪೂರ್ತಿ ಸಿನಿಮಾ ನೋಡಿದೆ. ಯಾವ ಕ್ರಾಂತಿಯ ಕನಸುಗಳೂ ನನ್ನನ್ನು ಪ್ರಶ್ನಿಸಲಿಲ್ಲ. ಯಾರೂ ಬೇಡ ಎಂದು ಹಾಸ್ಟಲಿಂದ ಹೊರ ಬಂದವನಿಗೆ ಈ ಹೊರ ಅನ್ಯ ಜಗತ್ತು ಎಷ್ಟೊಂದು ಆಪ್ತವಾಗಿ ಸ್ವಾಗತಿಸಿದೆಯಲ್ಲಾ ಎಂದು ವಿಶ್ವಾಸ ಹೆಚ್ಚಾಯಿತು. ಸಿನಿಮಾ ಮುಗಿದಿತ್ತು. ಚಕ್ಕೆಂದು ಅಲಾರಾಂ ಕೊಟ್ಟುಕೊಂಡಿದ್ದವನಂತೆ ಎದ್ದಿದ್ದ. ಆ ಸದ್ದೇ ಅವನಿಗೆ ನಿದ್ದೆ ತರಿಸುವ ಮಾಯೆ ಆಗಿತ್ತು. ಎದ್ದು ಹೊರಡುವಂತೆ ನಟಿಸಿದ. ಟಾಯ್ಲೆಟ್ ರೂಂನಲ್ಲಿ ವಿಸರ್ಜಿಸಿದೆವು. ಜನ ಹೊರಟು ಹೋಗಿದ್ದರು. ಊಹಿಸಿದ್ದು ನಿಜವಾಗಿತ್ತು. ಆ ಟಿಕೇಟಿನವನು; ಜೋಪಾನ ಯಾರ್ನೊ ಕರ್ಕಂಡು ಬಂದಿದ್ದೀಯ ಎಂದು ನನ್ನನ್ನು ಎಚ್ಚರಿಸುವಂತೆ ಗುಪ್ತವಾಗಿ ಒಳಗೆ ಕಳುಹಿಸಿ ಬೀಗ ಹಾಕದೆ ಬಾಗಿಲು ಎಳೆದುಕೊಂಡು ಹೊರಟು ಹೋದ. ಎಲ್ಲ ಲೈಟುಗಳು ಆಫ್ ಆಗಿದ್ದವು. ಬಾಲ್ಕನಿಯಲ್ಲಿ ಒಂದು ಸಣ್ಣ ಲೈಟ್ ಉರಿಯುತ್ತಿತ್ತು. ನನ್ನ ಜೀವ ಮಾನದಲ್ಲಿ ಹಾಗೆ ಮಲಗಿದ್ದು ಅಂತಹ ಒಂದು ದೊಡ್ಡ ಥಿಯೇಟರಿನಲ್ಲಿ ಅದೇ ಮೊದಲು ಹೆದರಿಕೆ ಆಗಲಿಲ್ಲ. ಜಗತ್ತು ಯಾವತ್ತೂ ಇಷ್ಟು ಏಕಾಂತ ಮೌನದಲ್ಲಿ ಕಾಲದ ಅಲೆ ಅಲೆಗಳಲ್ಲಿ ತೇಲುತ್ತ ಅನಂತತೆಯತ್ತ ಸಾಗಬೇಕು ಎಂದುಕೊಂಡೆ. ಬ್ಯಾಗಲ್ಲಿ ಕಾರ್ಪೆಟ್, ಹೊದಿಕೆ ಇದ್ದವು. ಹಾಸಿ ಮಲಗಿದೆ. ಆತ ನನಗೆ ಹತ್ತಿರದ ಕುರ್ಚಿಯಲ್ಲಿ ಒರಗಿ ಇದು ನನಗೆ ಅಭ್ಯಾಸ ಆಗಿದೆ ನಾನಿಲ್ಲೆ ಮಲಗುವೆ ಎಂದು ನಿದ್ದೆಗೆ ಹೋದ.

ದಿಢೀರನೆ ನಿದ್ದೆ ಬರಲಿಲ್ಲ. ನನ್ನನ್ನು ಹೀಗೆ ಇಲ್ಲಿ ನಂಬಿಸಿ ಮಲಗಿಸಿ ಏನಾದೂ ತೊಂದರೆ ಮಾಡಿಬಿಟ್ಟರೆ… ಎಂಬ ಸಣ್ಣ ಅಳುಕು ಬಂತು. ಬ್ಲೇಡೇಟಿನ ಚಿಕ್ಕಣ್ಣನ ಬ್ಲೇಡು ಪೀಸುಗಳು ಬ್ಯಾಗಲ್ಲೆ ಇದ್ದವು. ನಿರಾತಂಕ ನಿದ್ದೆಯಲ್ಲಿದ್ದ. ಅವನ ಕಾಲನ್ನು ಸವರಿದೆ. ನಿಜಕ್ಕೂ ಗಾಢ ನಿದ್ದೆಯಲ್ಲಿದ್ದ. ಮಾರುಕಟ್ಟೆಗೆ ಬರುವ ತರಕಾರಿ ಚೀಲ, ಬುಟ್ಟಿಗಳನ್ನು ಇಳಿಸಿ ಹೊತ್ತೊಯ್ದು ಇಟ್ಟು ಕಾಸು ಸಂಪಾದಿಸುತ್ತಿದ್ದ. ಅಲ್ಲೆಲ್ಲ ಅವನಿಗೆ ಜನ ಪರಿಚಯ ಇದ್ದರು. ಮನುಷ್ಯನನ್ನು ಹೇಗೆ ಅನಾಥ ಎಂದು ಭಾವಿಸುವುದು? ಅದು ಸರಿಯೆ? ಬಂಧು ಬಳಗ ಸಂಸಾರ ಇದ್ದರೆ ಮಾತ್ರ ಪೂರ್ಣನೆ? ಇವನು ಬಿಕಾರಿ ಎಂದುಕೊಂಡಿದ್ದೆ. ಈಗ ನೋಡಿದರೆ ಇಷ್ಟು ದೊಡ್ಡ ಥಿಯೇಟರಿನ ಯಜಮಾನ ನಾನೆ ಎಂಬಂತೆ ನನಗೂ ಆಶ್ರಯಕೊಟ್ಟು ಮಲಗಿದ್ದಾನಲ್ಲಾ… ಪಂಚಭೂತಗಳೆ ಇವನ ಅಂಗೈಯಲ್ಲಿವೆಯಲ್ಲಾ… ಆಕಾಶ ನಮ್ಮ ನೆತ್ತಿಯ ಮೇಲಿದೆ ಎಂದ ಮೇಲೆ ಅಲ್ಲಿರುವ ಸಕಲಗಳ ಜೊತೆಯೂ ನಾವು ಇದ್ದೇವೆ ಎಂದು ಅರ್ಥ ತಾನೆ? ಬರಿದೆ ಸಮಾಜದ ಸದಸ್ಯತ್ವ ನಾಟಕೀಯವಾದುದು. ನಾಟಕ ಮುಗಿದ ಕೂಡಲೆ ಆ ಸದಸ್ಯತ್ವ ರದ್ದಾಗುತ್ತದೆ! ಅನಾದಿ ಅನಾಥನಿಗಿರುವ ಸದಸ್ಯತ್ವ ಬಹಳ ದೊಡ್ಡದು. ಅವನ ಹೆಸರಲ್ಲಿ ಯಾವುದೇ ದಾಖಲೆಗಳಿಲ್ಲ. ಮತ ಪತ್ರ ಜಾತಿ ಪತ್ರ ಗುರುತಿನ ಚೀಟಿ ಮನೆಯ ವಿಳಾಸ ಏನೂ ಇಲ್ಲ. ಅವಿಲ್ಲದೆಯೂ ಎಷ್ಟು ಸುಖವಾಗಿ ವಿಶ್ವಾಸದಿಂದ ನಿದ್ದೆ ಮಾಡುತ್ತಿದ್ದಾನಲ್ಲಾ…

ಇದು ಹೇಗೆ ಸಾಧ್ಯ. ಇದು ನನ್ನದು ಎಂದು ಕಿತ್ತಾಡಿ ಖೂನಿ ಮಾಡುವ ಲೋಕ ಎಷ್ಟು ಗಳಿಸಿದರೆ ತಾನೆ ಏನು? ಎಲ್ಲದರ ಮೋಹದಿಂದ ಸದೂರ ಕಾಯ್ದುಕೊಂಡರೆ ಆಸೆ ನಿರಾಸೆಗಳು ಬಾದಿಸಲಾರವು. ಸಂಸಾರದ ಗಾಯಗಳು ಇವನಿಗೆ ಏನೂ ಮಾಡಲಾರವು. ಎಷ್ಟೊಂದು ಸುಖವಾಗಿ ತಗ್ಗಿ ಬಗ್ಗಿ ಜನರ ಜೊತೆ ವರ್ತಿಸುತ್ತಾನಲ್ಲಾ… ಜನರೇ ಹೀಗೆ; ತಮಗಿಂತ ಕೆಳಗಿರಬೇಕು ಅಷ್ಟೇ ಎಂದು ಬಯಸುತ್ತಾರೆ. ಹಾಗೇ ನಡೆದುಕೊಂಡರಾಯಿತು. ಅದು ಗುಲಾಮಗಿರಿ ಎನ್ನುವಿರಾ, ಹೇಡಿ ಬದುಕು ಎಂದು ತೀರ್ಮಾನಿಸುವಿರಾ. ಅಂದುಕೊಳ್ಳಿ. ನನಗೇನು ಅದರಿಂದ ನಷ್ಟವಿಲ್ಲ. ನಾನು ಬಿಕಾರಿ; ದೀನ, ದುರ್ಬಲ… ಏನಾದರು ಅನ್ನಿ. ಆದರೆ ನಾನು ಒಬ್ಬ ಸಾಮ್ರಾಟನಿಗಿಂತ ಮಿಗಿಲು ನನ್ನಂತೆ ಆತ ಬದುಕಲಾರ. ಬರಿಗೈಯಲ್ಲಿ ಓಡಾಡಲಾರ. ನಾನು ಆಕಾಶದ ಜೊತೆ ಮಾತಾಡುವೆ. ಅವನು ನಿದ್ದೆಯಲ್ಲೂ ಶತ್ರುಗಳ ಜೊತೆ ಮಾತ್ರ ಗುದ್ದಾಡಿ ದ್ವೇಷದ ಮಾತಾಡುವನು ಅಷ್ಟೇ. ಅವನ ಅರಮನೆಯ ಸುಖ ಮಾತ್ರ ಸುಖವೇ? ಬೀದಿ ಬದಿಯ ನಾಯಿಯ ಜೊತೆ ನಾನು ಮಲಗಿ ನಿರ್ಭಯವಾಗಿ ನಿದ್ದೆ ಮಾಡಬಲ್ಲೆ ಎಂದು ಆತ ಕನಸಲ್ಲಿ ಎದ್ದು ಕೂತು ಮಾತಾಡಿದಂತಾಯಿತು. ನಾನು ತಕ್ಕವನ ಜೊತೆಗಿರುವೆ ಎನಿಸಿತು. ಆ ನನ್ನ ಬಿಕ್ಕಪ್ಪ ಇನ್ನೊಬ್ಬ ಇದ್ದಾನೆ. ಅವನೂ ನರಭಕ್ಷಕನೇ. ಯಾಕೊ ಆ ಪಾಪಿ ನೆನಪಾಯಿತು. ಪೇದೆಯಾಗಿದ್ದ. ಅದೊಂದು ದಾಸರಹಳ್ಳಿ ಉಪಠಾಣೆ. ಆಗ ಅಲ್ಲಿ ತನಕ ಬೆಂಗಳೂರು ಬೆಳೆದಿರಲಿಲ್ಲ. ಇಬ್ಬರು ಪೇದೆಗಳು ಮಾತ್ರ ಆ ಠಾಣೆಯಲ್ಲಿ ವಾಹನಗಳ ತಪಾಸಣೆಗೆ ಇದ್ದರು. ಗಾಡಿ ತಡೆಯಬೇಡಿ; ಮಾಮೂಲು ಕೊಟ್ಟು ಹೋಗುತ್ತೇವೆ ಎಂದು ಹಿಂದಿನಿಂದಲು ಒಪ್ಪಂದ ಮಾಡಿಕೊಂಡಿದ್ದರು ವಾಹನ ಚಾಲಕರು.

ಕವಟೆಗಳ ಯಾರೂ ಹಿಡಿದೆಳೆದು ಕಿವಿಗಳಿಗೆ ಕ್ಲಿಪ್ ಹಾಕಿದ್ದಾರೇನೊ ಎನಿಸಿತು. ಸದಾ ನಗುತ್ತಲೆ ಇರುವಂತೆ ಕಾಣುವುದು ಕೂಡ ಕುರೂಪ. ಬೇಕಿದ್ದರೆ ಕನ್ನಡಿಯಲ್ಲಿ ನೋಡಿಕೊಳ್ಳಿ. ಆ ಸಿನಿಮಾ ನಟರೊ ಹೇಗೆ ಸದಾ ಹಲ್ಲು ಬೀರುತ್ತ ಕಾಣಿಸಿಕೊಳ್ಳುವರೊ! ನಿಜಕ್ಕೂ ನಟಿಯರಿಗೆ ಅದು ದಂಡನೆ.

ನಾನಾಗ ಪಿ.ಯು.ಸಿ ಮೊದಲ ವರ್ಷದ ರಜೆಯಲ್ಲಿದ್ದೆ. ಅವನ ಮನೆಗೆ ಹೋಗಲೆಬೇಕಿತ್ತು. ಇಷ್ಟ ಇರಲಿಲ್ಲ ಹೋದೆ. ಅವನ ಚಾಕರಿ ಕಂಡು ಅಸಹ್ಯ ಎನಿಸಿತು. ಅವನ ಪೇದೆ ಕಾಲದ ಇಡೀ ಸರ್ವೀಸ್ ಅದೇ ಆಗಿತ್ತು. ಠಾಣೆಯ ಮುಂದೆಯೆ ಮಾಗಡಿ ರಸ್ತೆ. ಬಂದು ಹೋಗುವ ಗಾಡಿಗಳೆಲ್ಲ ನಾಲ್ಕಾಣೆಯನ್ನು ಪೇದೆಯ ಮುಖದ ಮೇಲೆ ಥೂ ಎಂದು ಉಗಿದಂತೆ ಎಸೆದು ವೇಗವಾಗಿ ಹೊರಟು ಹೋಗುತ್ತಿದ್ದರು. ಆ ಪೇದೆ ಮಹಾತ್ಮ ಆ ಕಾಲಕ್ಕೆ ಮಹರಾಜ ಕಾಲೇಜಿನಲ್ಲಿ ಬಿದ್ದು ಬಿದ್ದು ಪಾಸಾಗಿ ಬಿ.ಎ. ಮುಗಿಸಿದ್ದ. ಆ ಒಂದು ಪದವಿ ಪತ್ರಕ್ಕೆ ಕಟ್ಟು ಹಾಕಿಸಿ ಮನೆಯ ಹಜಾರದಲ್ಲಿ ಎದ್ದು ಕಾಣುವಂತೆ ಹಾಕಿಕೊಂಡಿದ್ದ. ಹಾಗೆ ಎಸೆದು ಹೋಗುವ ಚಿಲ್ಲರೆ ಕಾಸನ್ನು ನಾಟಕೀಯವಾಗಿ ಎತ್ತಿ ಜೇಬಿಗೆ ಬಿಟ್ಟುಕೊಳ್ಳುತ್ತಿದ್ದ. ನಾನು ಅಲ್ಲಿಗೆ ಹೋಗಿದ್ದಾಗ ನನ್ನನ್ನು ಆ ಕಾಸುಗಳ ಆಯಲು ನೇಮಿಸಿದ. ಆಗದು ಎಂದೆ. `ಬಸ್ಸಿಗೆ ತಳ್ಳಿ ಪಚುಕ್ಕನ್ನಿಸಿಬುಡ್ತಿನಿ’ ಎಂದು ಕೆಕ್ಕರಿಸಿದ. ಆಯ್ತು ಎಂದು ಮೂರು ದಿನವೆಲ್ಲ ಆಯ್ದುಕೊಟ್ಟೆ. ಜೀತದ ಆಳಿನಂತೆ ನಡೆಸಿಕೊಂಡಿದ್ದ. ರಾತ್ರಿ ಹೊತ್ತು ಆ ಬಿಕ್ಷೆ ರೀತಿಯ ಕಾಸುಗಳ ಎರಡು ಮೂರು ಸಲ ಎಣಿಸಿ ತೃಪ್ತಿಯಿಂದ ಊಟ ಮಾಡುತ್ತಿದ್ದ. ಹಾಗೆ ಎತ್ತಿಕೊಟ್ಟ ಪ್ರತಿಸಲವೂ ನನ್ನ ಜೇಬುಗಳ ಶೋಧಿಸಿ ಎಲ್ಲೂ ಬಚ್ಚಿಟ್ಟುಕೊಂಡಿಲ್ಲ ತಾನೆ ಎಂದು ಹೆದರಿಸುತ್ತಿದ್ದ.

ಎಂತಹ ನಾಟಕೀಯ ನೆನಪು! ಈ ಪಾಪಿಗೇ ನಾನು ಎಂ.ಎ. ಮಾಡಬೇಕು ಐವತ್ತು ರೂಪಾಯಿ ಕಳಿಸಿಕೊಡಿ ಎಂದು ವಿನಂತಿಸಿಕೊಂಡು ಪತ್ರ ಬರೆದಿದ್ದುದು. ಹತಾಶೆಯಲ್ಲಿ ಯಾರನ್ನಾದರೂ ಕೇಳುವ ಧೀನತೆ ಬಂದು ಬಿಟ್ಟಿರುತ್ತದೆ. ಹೀಗೆ ಜೊತೆಗೆ ಕರೆತಂದು ಇಲ್ಲಿ ಮಲಗಿರುವ ಇವನ ಮುಖದ ಒಂದು ಕಡೆಯಲ್ಲಿ ಆ ಪಾಪಿ ಚಿಕ್ಕಪ್ಪ ನಕ್ಕಂತೆ ಕಾಣುತ್ತದೆ. ಆದರೆ ಎಷ್ಟೊಂದು ವ್ಯತ್ಯಾಸ. ಪ್ರಾಣ ಮಿತ್ರನಾಗಿ ಬಿಟ್ಟಿದ್ದಾನಲ್ಲ ಒಂದೇ ಒಂದು ಮುಗ್ಧ ನಗೆಗೆ… ಸಂಬಂಧಗಳು ಇದ್ದಾಗಲೂ ಬಿಕಾರಿ ಬಿಕನಾಸಿ ಬೇವರ್ಸಿ ಆಗಿರುತ್ತೇವೆ. ನಾನೇ ಈಗ ಆ ಸ್ಥಿತಿಯಲ್ಲಿ ಇದ್ದೇನೆ. ಯಾವುದು ಸಂಬಂಧ ಅಲ್ಲ ಎಂದು ನಿರಾಕರಿಸಿರುತ್ತೇವೆಯೊ ಅವೇ ನಮ್ಮನ್ನು ಪುರಸ್ಕರಿಸಿ ಪೊರೆಯುತ್ತ ಬರುತ್ತವೆ. ನಿರೀಕ್ಷೆಯ ಸಂಬಂಧಗಳು ವ್ಯವಹಾರವಾಗುತ್ತವೆ. ಈ ಇವನಿಗೆ ಯಾವುದೇ ವ್ಯಾಪಾರ ನನ್ನ ಜೊತೆಗೆ ಇಲ್ಲವಲ್ಲಾ… ಇಬ್ಬರೂ ಸುಳ್ಳು ಪರಿಚಯ ಮಾಡಿಕೊಂಡೆವೇ! ನಾನು ಹಾಸ್ಟೆಲಿಂದ ಹೊರ ತಳ್ಳಿಸಿಕೊಂಡು ಬಂದವನಲ್ಲವೆ? ಈ ಥಿಯೇಟರಿನಲ್ಲಿ ಮಲಗಿರುವೆ. ನಾಳೆ ಇನ್ನೆಲ್ಲೊ… ಆಚೆ ನಾಳಿದ್ದು ಒಂದು ಮರದ ಕೆಳಗೆ ಇರಬಹುದು. ಎಲ್ಲಾ ಸಂಬಂಧಗಳ ತ್ಯಜಿಸಿ ಅನಾಮಿಕನಾಗಿ ಬದುಕಬಹುದಲ್ಲವೆ. ಆದಿ ಮಾನವ ಯಾವ ಹೆಸರಿಟ್ಟುಕೊಂಡಿದ್ದ? ಆದರೆ ಅವನ ಗುರುತುಗಳು ವಿಶ್ವವ್ಯಾಪಿಯಾಗಿವೆ. ಅವನು ಉಳಿಸಿ ಹೋದ ಕುರುಹುಗಳ ಈಗಲೂ ಹುಡುಕುತ್ತಿದ್ದಾರೆ. ಅವನಿಗೆ ನಾವು ಕೊಟ್ಟ ಹೆಸರೇನು? ಹೋಮೊಸೆಪಿಯನ್ ಅವನಿಗೂ ಮೊದಲಿನ ಅರೆಮಾನವನ ಹೆಸರು… ಆಸ್ಟ್ರೇಲೋಪಿತಿಕಸ್. ಆದಿಮಾನವರ ತವರೂರು ಆಫ್ರಿಕಾ… ಕ್ರೋಮ್ಯಾಗ್ನನ್, ನಿಯೊಂಡರ್ಥಲ್, ಕಕೇಷಿಯಾಡ್, ನೀಗ್ರಾಯಿಡ್, ಮಂಗೊಲಾಯಿಡ್ ಎಷ್ಟೊಂದು ಸ್ಪೀಷೀಸ್‍ಗಳು… `ದಿಟ್ರೈಬ್’ ಎನ್ನುತ್ತೇವೆ ಕೆಲವು ಮಾನವರ ಗುಂಪುಗಳ. ಆ ಗೊರಿಲ್ಲಾ, ಚಿಂಪಾಂಜಿ, ಒರಾಂಗುಟಾನ್‌ಗಳು ಕೂಡ ಟ್ರೈಬ್‌ಗಳೇ. ಗುಂಪಿನ ಆಚೆಯ ಸದಸ್ಯರನ್ನು ಆ ಪ್ರಾಣಿಗಳು ಖಂಡಿತ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಅಲ್ಲಿಂದಲೆ ಮಾನವನಿಗೆ ಬಂತೇನೊ! ನನ್ನ ಅಸ್ತಿತ್ವವೂ ಮೊದಲು, ನಾನೇ ಉಳಿಯಬೇಕು, ನಾನೇ ಬಲಶಾಲಿ, ನನಗೇ ಸಂಬಂಧಿಸಿದ್ದು ಇಲ್ಲಿರುವ ಎಲ್ಲವೂ… ನಾನೇ ಇದರ ಯಜಮಾನ. ನಾನೇ ಗುಂಪಿನ ನಾಯಕ ಎಂಬ ಹೆಗ್ಗುರುತುಗಳ ಇತಿಹಾಸವನ್ನು ನೋಡಿದರೆ ಈ ಮನುಷ್ಯ ಪ್ರಾಣಿಯಿಂದ ಇನ್ನೂ ಬೇರ್ಪಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ ಅಲ್ಲವೇ… ಎಷ್ಟೊಂದು ನಾಗರೀಕ ಸಂಹಿತೆಗಳು… ಕಟ್ಟೆಚ್ಚರದಿ ಕಾಯುವ ಗಡಿಗಳು… ಭದ್ರ ಕೋಟೆಗಳು… ರಕ್ಷಣಾ ಸಚಿವಾಲಯಗಳು… ಯುದ್ಧ ಬೇಡ ಎಂಬ ಒಪ್ಪಂದಗಳು… ಹೊಸ ಹೊಸ ಅಣ್ವಸ್ತ್ರಗಳು… ಅಪಾರ ವೆಚ್ಚಗಳ ಸೈನ್ಯಗಳು… ಸ್ವಯಂ ನೀತಿ ನಿರ್ದೇಶನ ನಿರಂಕುಷ ಜಾಣ್ಮೆಗಳು… ಇವಾವೂ ಮನುಷ್ಯನಿಗೆ ಅನಿವಾರ್ಯ ಆಗಿರಲಿಲ್ಲ. ಒಂದು ಸೇಬಿನ ಮರ ಹಣ್ಣು ಬಿಟ್ಟಿತ್ತು. ಒಂದು ಹೆಣ್ಣು ಬೆದೆಗೆ ಬಂದಿತ್ತು. ಅವನಿಗೆ ತೃಷೆಯಾಗಿತ್ತು. ಮಿಲನವಾಗಿ ಅಲೆದಾಡಿದ್ದರು. ಇಷ್ಟು ಸಾಕಾಗಿತ್ತಲ್ಲವೆ ಮನುಷ್ಯನಿಗೆ… ದೇವರು ಧರ್ಮ ಸ್ವರ್ಗ ನರಕ ಪಾಪ ಪುಣ್ಯ ಇವೆಲ್ಲ ಅವನ ವ್ಯರ್ಥ ಆಲಾಪಗಳಲ್ಲವೇ… ದೇವರನ್ನು ಕೂಗಿ ಕರೆಯಬೇಕೇ… ಅವನಿಗೆ ಪೂಜೆಯ ವ್ಯವಹಾರ ಬೇಕಿತ್ತೇ…

ಸುಮ್ಮನೆ ಆ ಸಾಕೇತನ ಜೊತೆ ಹೊರಟು ಹೋಗದೆ ತಪ್ಪಿಸಿಕೊಂಡೆ ಯಾಕೆ? ಮನುಷ್ಯನ ಆದಿಮ ಹೆಜ್ಜೆಗಳಿಂದ ಹಿಡಿದು ಇಲ್ಲಿವರೆಗಿನ ಈ ಹೆಜ್ಜೆಗಳಲ್ಲಿ ಯಾವುದು ಸರಿಯಾದ ಹೆಜ್ಜೆ, ದಿಕ್ಕು, ಪಯಣ ಎಂದು ಹೇಗೆ ಹೇಳುವುದು? ಒಟ್ಟಿನಲ್ಲಿ ಅಲೆಮಾರಿಯಾಗಿರಬೇಕು… ಈ ಎಲ್ಲ ಜಂಜಡ ತರ್ಕ, ಊಹೆಗಳ ಬಿಡಬೇಕು ಎಂದು ಮಲಗಿದೆ. ಗಗನದ ಗರ್ಭದಲ್ಲಿ ಇರುವಂತೆ ಬಾಸವಾಯಿತು. ಅಹಾ ಎಂತಹ ಹಿತ ಅಲ್ಲವೇ… ಕುಬ್ಜತೆಗಳಿಂದ ಪಾರಾಗಲು ಎಲ್ಲ ಬಗೆಯ ಆಸೆಗಳಿಂದ ಪಾರಾಗಬೇಕು. ಇದು ನನ್ನದಲ್ಲ. ನನಗೆ ಇಲ್ಲಿ ಯಾವುದೂ ಬೇಡ. ನನಗೆ ಯಾವ ಹಕ್ಕು ಅಧಿಕಾರ ಗುರುತುಗಳಿಲ್ಲ. ನನಗೆ ಯಾರೊ ಕೊಡುವ ಚಹರೆಯೆ ಬೇಡ. ಅವರು ಇಟ್ಟ ಹೆಸರುಗಳ ಹಂಗು ಎನಗೇಕೆ? ನಾನು ಯಾರು ಎಂಬುದು ನನಗೇ ಗೊತ್ತಿಲ್ಲ. ಲಕ್ಷಾಂತರ ವರ್ಷಗಳ ಹಿಮ ಯುಗದ ನಿಯೊಂಡರ್ಥಲ್ ಮಾನವನ ಯಾವ ಜೀನ್ ನನ್ನ ಯಾವ ನಡತೆಯಲ್ಲಿ ಅಡಗಿದೆಯೊ; ನಾಗರೀಕತೆಯ ಅಬ್ಬರವೇ ಅಪಾಯಕಾರಿ. ನಾನು ಕಳೆದು ಹೋಗಬೇಕು. ನಿಗೂಢವಾಗಿರಬೇಕು. ಸತ್ತು ಹೋದ ಎಂದು ಜನ ತಿಳಿಯಬೇಕು. ಅಂತವರ ನಡುವೆಯೆ ನನ್ನನ್ನು ನಾನೆ ಅವರಂತೆಯೆ ತೆಗಳಿ ಮರೆತುಬಿಡಬೇಕು. ಅಹಾ! ಎಂತಹ ಚೆಂದ ಬಯಕೆ? ಸಾಧ್ಯವೇ? ಹೌದು. ಇದು ಸಾಧ್ಯ. ಈ ಹೊರ ಜಗತ್ತಿನ ಜೊತೆಗಿನ ಭೌತಿಕ ಸಂಬಂಧಗಳನ್ನೆಲ್ಲ ಕಳೆದುಕೊ. ದೂರ ಹೋಗಿ ಮರೆಯಾಗಿರಬೇಕಾದ್ದಿಲ್ಲ. ಒಟ್ಟಾಗಿದ್ದೇ ಒಂಟಿಯಾಗಿರಲು ಸಾಧ್ಯ. ಈ ಲೋಕದ ಜೊತೆ ಅಂತಹ ನಿಷ್ಟೂರ ಅಂತರವನ್ನು ಕಾಯ್ದುಕೊಳ್ಳುವ ಮಾನಸಿಕ ಸಾಮರ್ಥ್ಯ ನಿನಗಿದೆ ಎಂತಾದರೆ; ಮುಂದಿನದು ಬಹಳ ಸುಲಭ. ಅಸಾಧ್ಯವಾದದ್ದು ಯಾವುದೂ ಇಲ್ಲ. ಅದು ನೀನು ಗ್ರಹಿಸುವ ವ್ಯಾಪ್ತಿಯಲ್ಲಿದೆ… ಅಹಾ! ನಾನು ವೇದಾಂತಿಯೇ… ಇಲ್ಲವೇ ಬಾಲ್ಯದಲ್ಲಿ ನಾನು ಆತ್ಮದ ಜೊತೆ ಮಾತನಾಡಲು ಕಲಿಯುತ್ತಿದ್ದೆ ಅಲ್ಲವೇ. ನನ್ನ ಆತ್ಮ ಈಗ ನನ್ನ ಮೂಲಕವೆ ಮಾತಾಡುತ್ತಿದೆಯೆ? ಇರಬೇಕು; ಅಲ್ಲದಿದ್ದರೆ ಕಸಗುಡಿಸುವ ಕೆಲಸ ಮಾಡಲು ಬಯಸುವ ನನ್ನ ತಲೆಗೆ ಇಷ್ಟೆಲ್ಲ ಬುದ್ಧಿ ಹೇಗೆ ತಾನೆ ಬರಲು ಸಾಧ್ಯ?

ಬೇಗನೆ ಎದ್ದಿದ್ದೆವು ಒಟ್ಟಿಗೇ. ಮುಂಜಾವಿನ ಮುಖ ಅಷ್ಟಕ್ಕೆ ಅಷ್ಟೇ. ಯಾಕೆ ಮುಖ ಆಗತಾನೆ ಸಾವಿನಿಂದ ಎದ್ದು ಬಂದಂತೆ ಕಾಣುತ್ತದೆ… ಛೇ; ಬೆಳ ಬೆಳಿಗ್ಗೆಯೆ ಇದೆಲ್ಲ ಯಾಕೆ ಎಂದು ಥಿಯೇಟರಿನ ಟಾಯ್ಲೆಟ್ ರೂಂಗೆ ಹೋಗಿ ತೊಳೆದುಕೊಂಡೆವು. ನಾನಾಗ ಬಹಳ ಕಷ್ಟ ಇದ್ದಾಗ ನಂಜನಗೂಡಿನ ಹಲ್ಲಿನ ಪೌಡರ್ ಬಳಸುತ್ತಿದ್ದೆ. ಬ್ಯಾಗಲಿತ್ತು. ಅವನಿಗೂ ಕೊಟ್ಟು ಚೆನ್ನಾಗಿ ಉಜ್ಜಿ ಬಾಯಿ ಗಂಟಲು ಕಿರುನಾಲಿಗೆ ಹಲ್ಲುಗಳ ತೊಳೆದುಕೊಂಡೆವು. ಅಷ್ಟು ಮಾಡಿ ಚೆನ್ನಾಗಿ ಕೆನ್ನೆ ಹಣೆ ತುಟಿ ಮೂಗುಗಳ ಉಜ್ಜಿ ತೊಳೆದುಕೊಂಡರೆ ಮುಖಕ್ಕೆ ಕಳೆ ಬಂದು ಬಿಡುತ್ತಿತ್ತು. ಆತ ಗಡಿಬಿಡಿಯಲ್ಲಿದ್ದ. ಥಿಯೇಟರ್ ಹೆಬ್ಬಾಗಿಲು ಕಾಯುವ ಗಾರ್ಡ್ ಬಾಗಿಲು ತೆರೆದಿದ್ದ. ಅವನಿಗೆ ಗೊತ್ತಿತ್ತು ಒಳಗೆ ನಾವು ಮಲಗಿದ್ದೆವು ಎಂಬುದು. ನಗಾಡಿದ. ಅವೆಲ್ಲ ವ್ಯವಹಾರ ಲೋಕದ ಆಚೆಗಿನ ಮಾನವ ರೂಢಿಗಳ ರೀತಿಯ ನಡತೆಗಳು. ನಮಸ್ಕರಿಸಿದ್ದೆ. ಈಗ ತಾನೆ ಈ ಲೋಕಕ್ಕೆ ಬಂದೆವು ಎನಿಸಿತ್ತು. ಭಾಗಶಃ ಇಬ್ಬರೂ ಕಳೆದು ಹೋಗಿದ್ದೆವು. ಹೊತ್ತು ಮುಳುಗುವ ತನಕ ಮತ್ತೆ ಅದೇ ಎಲ್ಲ ಜಂಜಡಗಳ ಒಳಗಿದ್ದೇ ಅವುಗಳಿಂದ ಹೊರಬರುವ ದಾರಿಗಾಗಿ ಕಾಯಬೇಕಿತ್ತು.

ಹಂಡ್ರೆಡ್ ಫೀಟ್ ರೋಡದು. ಪುಟ್ಟ ಕ್ಯಾಂಟೀನು. ಅದ್ಧೂರಿ ಪೂರಿ ಸಾಗು ಪಲ್ಯ ಕ್ಷಣ ಮಾತ್ರದಲ್ಲಿ ಎಳೆದು ಕೂರಿಸಿಕೊಂಡವು. ತಿಂದೆವು. ಅರ್ಧರ್ಧ ಚಿತ್ರಾನ್ನ ಹಾಕಿಸಿಕೊಂಡೆವು. ಲಗಾಯಿಸಿದೆವು. ಕಾಸು ಕೊಡಲು ಮುಂದಾದೆ. ಆಗ ಅವೆಲ್ಲ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಮಧ್ಯಾಹ್ನ ನೀನು ಊಟ ಕೊಡಿಸು ಸಾಕು ಎಂದ. ಅಲ್ಲಿಂದ ಬರಬರನೆ ಚಿಕ್ಕ ಗಡಿಯಾರದ ಬಳಿ ಬಂದೆವು. ದೂರದಿಂದ ಬರುವ ಹಣ್ಣಿನ ಬುಟ್ಟಿಗಳ ಲಾರಿಯಿಂದ ಇಳಿಸಿಕೊಳ್ಳುವುದಿತ್ತು. ಅದಕ್ಕೂ ಮೊದಲೇ ತರಕಾರಿ ಮಾಲು ಐದು ಗಂಟೆಗೆ ಬರುತ್ತಿತ್ತು. ತಡ ಮಾಡಿದ್ದೆವು. ಮುಲಾಜಿಲ್ಲದೆ ಅವನ ಜೊತೆ ಪುಟ್ಟ ಪುಟ್ಟ ಹಣ್ಣಿನ ಬುಟ್ಟಿಗಳ ಇಳಿಸಿಕೊಂಡೆ. ಆ ಹೊತ್ತಿಗೆ ಅಲ್ಲಿಗೆ ನನ್ನ ಪರಿಚಯದವರು ಬರಲು ಸಾಧ್ಯವಿರಲಿಲ್ಲ. ಹಣ್ಣಿನ ಕೂಲಿ ಹೆಚ್ಚು. ಉಪಾಯದ ಕೆಲಸ. ಮೊದಲ ಬಾರಿಗೆ ನಗರದ ಮಾರುಕಟ್ಟೆಯಲ್ಲಿ ಕೂಲಿ ಮಾಡಿದ್ದೆ. ಅವತ್ತು ಕೈತುಂಬ ಕೂಲಿ ಕೊಟ್ಟಿದ್ದರು. ನನಗೆ ಇವತ್ತು ಲಕ್ಷಾಂತರ ಸಂಬಳ. ಮೂರು ಲಕ್ಷಗಳಷ್ಟು… ಇಷ್ಟು ದೊಡ್ಡ ಮೊತ್ತ ಗಳಿಸಿದರೂ ಅವತ್ತು ಪಡೆದಿದ್ದ ನೂರು ರೂಪಾಯಿ ಕೂಲಿಯಿಂದಾಗಿದ್ದ ಆನಂದ ಇವತ್ತು ಯಾವ ಸಂಬಳ ಸಂಭಾವನೆಗಳಿಂದಲು ಸಿಗಲು ಸಾಧ್ಯವಿಲ್ಲ. ಕೂಲಿಯ ಬೆವರು ನನ್ನ ಹಣೆಯಲ್ಲಿ ಮೂಡಿದ್ದವು. ಆ ದಣಿವು ಸುಖವಾಗಿತ್ತು. ಗಟಗಟನೆ ನೀರು ಕುಡಿದಿದ್ದೆ. ಬೇಷ್ ಎಂದು ಬೆನ್ನು ತಟ್ಟಿದ್ದ. ಕಿತ್ತಲೆ ಹಣ್ಣಿನ ಬುಟ್ಟಿಯಲ್ಲಿ ಕೆಲವು ಡ್ಯಾಮೇಜ್ ಆಗಿದ್ದವು. ಅವನ್ನು ತೆಗೆದಿಟ್ಟಿದ್ದರು. ಬ್ಯಾಗಿಗೆ ತುಂಬಿಕೊಂಡೆ. ಅಂತವನ್ನೆಲ್ಲ ವ್ಯಾಪಾರಿಗಳು ಬೀದಿ ಬದಿಯ ಬದುಕಿನವರಿಗೇ ಕೊಟ್ಟುಬಿಡುತ್ತಿದ್ದರು.

ಅಲ್ಲಿಗೆ ದಿನದ ಕೂಲಿ ಮುಗಿದಿತ್ತು. `ಮತ್ತೆ ಯಾವ ಕೆಲಸ ಮಾಡುವ’ ಎಂದೆ. `ಸಾಕು; ಇವತ್ತಿಗಿಷ್ಟು ದುಡಿಮೆ. ನಾಳೆಗೆ ನಾಳೆ ಕೆಲ್ಸ. ಬದ್ಕುಕೆ ಉಣ್ಣುಕೆ ಎಷ್ಟು ಸಂಪಾದಿಸ್ಬೇಕೂ…’ ಎಂದ. ನಾಲ್ಕಾರು ಕಾಸು ಸಂಪಾದಿಸಿ ಇಟ್ಟುಕೊಂಡರೆ ಮತ್ತೆ ನಾಳೆ ಗಂಗೋತ್ರಿಗೆ ಹೋಗಿ ಸಲೀಸಾಗಿ ಪ್ರಯತ್ನ ಮಾಡಬಹುದಲ್ಲಾ ಎಂಬುದು ನನ್ನ ಯೋಜನೆಯಾಗಿತ್ತು. `ದಿನಾಲೂ ಹೀಗೇ ಹಣ್ಣಿನ ಲೋಡು ಬರುತ್ತವಾ’ ಎಂದು ಕೇಳಿದೆ ಕಣ್ಣರಳಿಸಿ. `ಬಂದೆ ಬತ್ತವೆ ಕನಪ್ಪಾ. ಇಲ್ದೆ ಇದ್ರೆ ನಮ್ಮಂತೋರು ಬದ್ಕುದು ಎಂಗೆʼ ಎಂದ. ಸಮಾಧಾನವಾಯಿತು. `ಇಡೀ ದಿನನೆಲ್ಲ ಎಂಗೆ ಕಳಿಯುದು… ನೀನೇನ್ಮಾಡಿಯೆ’ ಎಂದೆ. ಅಲ್ಲಿ ಇಲ್ಲಿ ಕುಂತು ನಿಂತು ತಿರ್ಗಾಡಿ; ಅಲ್ಲೆಲ್ಲಾರ ಪಾರ್ಕೆಲೊಸಿ ನಿದ್ದೆ ಮಂಪರ ಕಳ್ಕಂದ್ರೆ ಸಂದೆಯಾಯ್ತದೆ. ಬೀದಿಗಳೆಲ್ಲ ಲಿಗಾ ಆಯ್ತವೆ. ಮಾರ್ಕೆಟೆಲಿ ಏನಾರ ಸಣ್ಣ ಪುಟ್ಟ ಕೂಲಿ ಇರ್ತವೆ. ಅವಾ ಮಾಡ್ಕಂದ್ರೆ ಆಯ್ತು. ಅಲ್ಗೆ ದಿನ ಮುಗುದೋಯ್ತದೆ’ ಎಂದ. ಎಲಾ ಬದುಕೇ; ನೀನು ಇವನ ಜೊತೆ ಇಷ್ಟು ಸುಲಭವಾಗಿ ಇದ್ದೀಯೆಲ್ಲಾ… ಕಷ್ಟ ನಷ್ಟ ಅಂತಾ ಜನ ಅಷ್ಟೊಂದು ಪರದಾಡ್ತರೆ ಬಂಡಿ ಎಳೆಯುಕಾಗುದಿಲ್ಲಾ ಅಂತಾ. ಇಲ್ನೋಡುದ್ರೆ ಇಷ್ಟು ಸುಲಭ ಇದೆಯಲ್ಲ ಜೀವನ… ಇವತ್ತು ರಾತ್ರಿ ಎಲ್ಲಿ ಎಂದು ಮಲಗುವ ವಿಷಯ ಕೇಳಿದೆ. `ಅದಕೆ ಯಾಕಪ್ಪ ಯೀಗಿಂದ್ಲೆ ಚಿಂತೆ. ಅದು ಬಂದಾಗ ನೋಡ್ಕಂದ್ರಾಯ್ತು. ನಿಂಜೊತೆನೆ ಕೆಲದಿನ ಇರ್ತೀನಿ ಅಂದಿದ್ದೀಯೆ. ಇರು ನಂಜೊತೆ ನಾ ನೋಡ್ಕತಿನಿ ಕಷ್ಟ ಆಗದಂಗೆ’ ಎಂದ. ಬದುಕಿನ ಆಯಾ ಕ್ಷಣವನ್ನು ಆ ಪ್ರತಿಕ್ಷಣದಲ್ಲೇ ಎದುರಿಸಬೇಕು. ಪೂರ್ವ ಯೋಜಿತ ಕ್ರಮಗಳು ನಮ್ಮನ್ನು ಬದುಕಿನ ಗೂಟಕ್ಕೆ ಕಟ್ಟಿ ಹಾಕಿಬಿಡುತ್ತವೆ.
ಮುಂಜಾಗರೂಕತೆಯ ಪ್ರಜ್ಞೆಗೆ ಇವನ ಬಳಿ ಮೂರು ಪೈಸೆಯ ಬೆಲೆಯೂ ಇಲ್ಲವಲ್ಲಾ ಎನಿಸಿತು. ಹಾಗಾದರೆ ಮುಂಗಾಣ್ಕೆ ಮುನ್ನೆಚ್ಚರಿಕೆ ಬೇಡವೇ? ಯಾರು ಬೇಡ ಎಂದವರು? ಇಟ್ಟುಕೊ; ಆದರೆ ಅದು ವ್ಯಾಪಾರ ಆಗಬಾರದು. ನನ್ನ ಎಚ್ಚರದಿಂದಲೆ ಬೆಳಗಾಯ್ತು ಎಂದು ಜಂಬ ಮಾಡಬಾರದು. ಹುಟ್ಟಿನಿಂದಲೆ ಬಂದಿರುತ್ತದೆ ಅದು. ಅಷ್ಟಿಲ್ಲದಿದ್ದರೆ ನಿನಗೆ ಲೋಕದ ಈ ನಿಗೂಢಗಳು ಗೊತ್ತಾಗಿ ಬಿಡುತ್ತಿದ್ದವೇ… ಅರೇ ಇದು ನನ್ನ ಮಾತೊ ಆತ್ಮದ ಆಲೋಚನೆಯೊ… ಗೊಂದಲ ಯಾಕೆ… ಬಂದದ್ದನ್ನು ಬಂದಂತೆಯೆ ನಿಭಾಯಿಸಿದರೆ ಆಯಿತು. ಈಗ ನೂರು ರೂಪಾಯಿ ಬಂತು. ಅದು ಮೊದಲೆ ನನಗೆ ಗೊತ್ತಿರಲಿಲ್ಲವಲ್ಲ. ಬಂದ ಕೂಡಲೆ ನಾನು ಒಂದು ಉದ್ದೇಶ ಕಾರ್ಯಕ್ಕೆ ಮುಂದಾದೆ. ಆದ್ದರಿಂದಲೆ ಮತ್ತೆ ಯಾವ ಕೂಲಿ ಎಂದು ಆಸೆ ಪಟ್ಟೆ. ಬದುಕಿನ ಈ ರೂಢಿಯನ್ನು ಬಿಡಬೇಕು ಎನಿಸಿತು.

ಕಾಲದ ಅಲೆ ಮೇಲೆ ನಾನೊಂದು ಮುರಿದ ಟೊಂಗೆ ಎನಿಸಿತು. ಆಹಾ! ಎಂತಹ ಅದೃಷ್ಟ ಆ ಟೊಂಗೆಯದು. ಅದು ಸಮುದ್ರದ ಯಾವ ಕಿನಾರೆ ಕಡಲ ದಂಡೆಯಿಂದ ಬಂತೊ. ಎಷ್ಟು ಅಲೆಗಳ ಜೊತೆ ಆ ಟೊಂಗೆ ಮಾತನಾಡಿತ್ತೊ. ಸಮುದ್ರದ ಮೇಲೆ ಊರು ಕೇರಿ ಹೊಲಗೇರಿ ಅಗ್ರಹಾರಗಳೇ… ಮಾಡಿಕೊಂಡರೂ ಉಳಿಯಬಲ್ಲವೇ? ಬಿರುಗಾಳಿ ಸುಂಟರಗಾಳಿಗಳೆದ್ದು ಬಂದರೆ ಅವುಗಳ ಮನುಷ್ಯಾಧಿಪತ್ಯಕ್ಕೆ ಅರ್ಥ ಇದೆಯೇ? ಆದರೆ ಮುರಿದು ಬಿದ್ದ ಮರದ ಕೊಂಬೆಗೊ ದಿಮ್ಮಿಗೊ ಬಹಳ ದೂರ ಸಾಗುವ ಸಾಮರ್ಥ್ಯ ಇದೆ. ಅದರ ಒಂಟಿತನವೆ ಅದರ ಶಕ್ತಿ. ಅದರ ದಿಕ್ಕಿಲ್ಲದ ಗತಿಯೆ ದಿಕ್ಕು ಎಂದುಕೊಂಡೆ. ಏನು ಯೋಚನೆ ಮಾಡ್ತಿದ್ದೀಯೆ ಎಂದು ಕೇಳಿದ. ಊರಿಗೆ ಹೋಗೋದೊ ಬ್ಯಾಡವೊ ಅಂತಾ ಚಿಂತೆ ಮಾಡ್ತಿದ್ದೆ ಎಂದೆ. `ಊರುಕೇರಿನೆಲ್ಲ ಬಿಡಪ್ಪಾ… ಅವುತ್ರು ಜೊತೆ ಬದ್ಕುಕೆ ಆದದೇ. ಎಲ್ಲ ಕಿತ್ಕಂದು ತಿನ್ನೋ ಜನಾ. ನನ್ನಂಗೆ ಗುಂಟುಕೋಬಿ ತರ ಇದ್ಬುಡು. ಆ ಮೆಕೆ ಅವ್ರೆ ತಡಿಕಂದು ಬತ್ತರೆ. ಆಗಿರ್ತದೆ ನಮ್ಗೆ ಮಾತು. ಬುಟ್ಬುಡು ಅತ್ತಾಗಿನ ವಿಚಾರವಾ’ ಎಂದು ಮಾರುಕಟ್ಟೆಯ ಒಳಗೆ ಸುತ್ತಿಸಿದ.

ಆಶ್ಚರ್ಯ! ಎಲ್ಲ ಅಂಗಡಿಯವರೂ ಅವನಿಗೆ ಪರಿಚಯ. ಎಲ್ಲರಿಗೂ ನಮಸ್ಕರಿಸುತ್ತಿದ್ದ. ಅವನ ಕಷ್ಟ ಸುಖ ವಿಚಾರಿಸುತ್ತಿದ್ದರು. ನಾನೇ ಗತಿಗೆಟ್ಟವನು ಎನಿಸಿತು. ದುರುದ್ದೇಶವಿಲ್ಲದೆ ಹೀಗೆ ಮನುಷ್ಯರ ಮನದ ಒಳಕ್ಕೆ ಹೋಗಬಹುದು ಎಂಬುದನ್ನು ಕರಗತ ಮಾಡಿಕೊಂಡಿದ್ದ. ಇವನೊಬ್ಬ ಗಣ್ಯ ವ್ಯಕ್ತಿ ಎನಿಸಿತು. ಯಾರ್ಯಾರು ಗಣ್ಯರು ಎಂದು ರಾರಾಜಿಸುತ್ತಿದ್ದರೊ ನನಗೆ ನಗಣ್ಯ ಎನಿಸಿದರು. ಕ್ರಾಂತಿಕಾರಿ ಮಾತುಗಳು ಮೌನವಾಗಿದ್ದವು. ವಿಪರೀತ ತಮಾಷೆ ಮಾಡುತ್ತಿದ್ದೆ. ಇವನ ಮುಂದೆ ಅವೆಲ್ಲ ವ್ಯರ್ಥ ಕುಹಕ ಜಂಬ ಎನಿಸಿತು. ಗಂಭೀರವಾಗಿರಲೇ; ಸುಮ್ಮನೆ ನಗುತ್ತಿರಲೇ… ಮಹಾ ಯುದ್ಧಗಳಿಂದ ಯೂರೋಪು ನಗುವುದನ್ನು ಮರೆತಿತ್ತಂತೆ. ಸಾಮೂಹಿಕ ಹತ್ಯೆಗಳು ಆಗಲ್ಲಿ ನಿತ್ಯ ನರ್ತಿಸುತ್ತಿದ್ದವು. ಹಿಟ್ಲರನ ಕಾಲದಲ್ಲಿ ಬಹುಪಾಲು ಯುರೋಪಿನ ಪುಟ್ಟ ಸುಂದರ ನಗರಗಳೆಲ್ಲ ದ್ವಂಸವಾಗಿದ್ದವು. ಜರ್ಮನಿಯನ್ನು ಮಿತ್ರ ರಾಷ್ಟ್ರಗಳು ಪುಡಿಗುಟ್ಟಿಸಿದ್ದವು. ಒಂಬತ್ತು ಲಕ್ಷ ಯಹೂದಿಗಳನ್ನು ಡೆತ್ ಕ್ಯಾಂಪುಗಳಲ್ಲಿ ಕೊಲ್ಲಲಾಗಿತ್ತು. ಕೈಗಾರಿಕಾ ಕ್ರಾಂತಿಯು ತಲುಪಿದ್ದ ಗತಿ ಅದು. ಎರಡು ಮಹಾ ಯುದ್ಧಗಳನ್ನು ಹುಟ್ಟಿಸಿತ್ತು ಅದು. ಅದರ ವಿವರಗಳೆಲ್ಲ ಕಣ್ಣ ಮುಂದೆ ಬಂದವು. ಅಂತಹ ಸ್ಥಿತಿ ನಮ್ಮ ಜಾತಿಗಳಿಗೆ ಬಂದಿದ್ದರೆ ಏನಾಗುತ್ತಿತ್ತು. ಚಾಣಾಕ್ಷನಾಗಿದ್ದನಂತೆ ಕಕೇಷಿಯಾಡ್ ಮಾನವ. ಅವರು ಅತ್ಯಾಧುನಿಕ ಎನಿಸುವಂತೆ ಪುಟ್ಟಪುಟ್ಟ ಆಯುಧಗಳ ನಿರ್ಮಿಸಿ ಬಳಸಿ ಜಗತ್ತಿನ ಉದ್ದಕ್ಕೂ ವ್ಯಾಪಿಸಿದರಂತೆ. ವೆಪನ್ ಈಸ್ ದಿ ನಟೋರಿಯಸ್ ಇನ್ವೆನ್ಸನ್ ಇನ್ ದಿ ಇವಲ್ಯೂಷನ್ ಆಫ್ ಮ್ಯಾನ್ ಎಂದು ಉದ್ಘರಿಸಿದೆ; ತಡೆಯಲಾರದೆ ಮೆಲ್ಲಗೆ. ಗಮನಿಸಿದ. `ಅದೇನಂದೇ… ಇಂಗ್ಲೀಸ್ನು ಮಾತಾಡಿಯಾ’ ಎಂದು ಕೇಳಿದ. ಸ್ವಲ್ಪ ಸ್ವಲ್ಪ ಬರ್ತದೆ. ಫುಲ್ ಬರೋಲ್ಲ. ವಸಿ ಬಂದ್ರು ಸಾಕು ಬಿಡೊ… ಮ್ಯಾನೇಜ್ಮಾಡ್ಬೋದೂ… ಬೇರೆ ವಿಷಯ ತೆಗೆದ. ನಾನು ಅಲ್ಲೆ ಇದ್ದೆ. ಮನುಷ್ಯ ಭಾಷೆ ಕಲಿತನೊ; ಭಾಷೆ ಎಂಬ ಶಕ್ತಿ ಮನುಷ್ಯನನ್ನೇ ರೂಪಿಸಿತೊ… ಎಲ್ಲಿಂದ ಬಂತು ಭಾಷೆ. ಅದು ಅಂತರ್ಗತ ಆವಿಷ್ಕಾರ. ಬಾಹ್ಯ ಸಂಗತಿ ಅಲ್ಲ ಎಂದುಕೊಂಡೆ.

ಮಾತು ಮಾತು ಎಲ್ಲೆಲ್ಲು ಮನುಷ್ಯನದೇ ಮಾತು. ಇಷ್ಟೆಲ್ಲ ಮಾತುಗಳು ಬೇಕಿರಲಿಲ್ಲ ಅಲ್ಲವೇ… ಆದರೆ ಇಂಗ್ಲೀಷ್ ಕಲಿಯಬೇಕು ಎಂಬ ಮೋಹ ಈಗಲೂ ಹೋಗಿಲ್ಲವಲ್ಲಾ. ಕಿವಿ ಕಿತ್ತು ಹೋಗುವಂತೆ ಮಾತುಗಳು ಬಂದು ಅಪ್ಪಳಿಸುತ್ತವಲ್ಲಾ… ಮನುಷ್ಯ ಮಾತಿಲ್ಲದೆ ಬದುಕಲಾರನೆ. ಆದಿ ಶಿಲಾಯುಗದವರು ಚಿತ್ರ ಬಿಡಿಸುತ್ತಿದ್ದರು. ಆದಿಯಲ್ಲಿ ಮನುಷ್ಯನಿಗೆ ಸಾಧ್ಯವಿದ್ದುದು ಕೆಲವೇ ಶಬ್ಧಗಳು. ಈಗ ನೋಡಿ; ಒಬ್ಬನೇ ಒಬ್ಬ ಒಂದು ಕೋಟಿ ಸುಳ್ಳುಗಳನ್ನಾದರೂ ಮಾತಿನ ಮೋಡಿಯಲ್ಲಿ ನಂಬಿಸಬಲ್ಲ. ಭಾಷೆ ಸುಳ್ಳುಗಳಿಂದಲೇ ಬೆಳೆದು ಬಂದಿರುವುದಲ್ಲವೆ… ಸುಳ್ಳು ಪ್ರಮಾಣಗಳಿಂದ ಮನುಷ್ಯ ಬಹಳ ಕೆಟ್ಟವನಾಗಿದ್ದಾನೆ. ಸತ್ಯ ನುಡಿದವರು ಸುಳ್ಳುಗಳ ಚಪ್ಪಡಿ ಕಲ್ಲುಗಳ ಕೆಳಗೆ ಸಿಲುಕಿ ಸಮಾಧಿ ಆಗಿದ್ದಾರೆ… `ಊಟಕ್ಕೆ ಹೋಗೋಣವೇ’ ಎಂದು ಕರೆದೆ. `ವಟ್ಟಸಿವ ತಡ್ಕಪ್ಪಾ… ಅದೂ ಒಂದು ತಡೆಯೇ! ಮರೀ ಅದಾ. ಯಾವಾಗ್ಲು ಇರ್ತದೆ… ಅಮೆಕೆ ಯೇನಾದ್ರು ತಿಂದ್ರಾಯ್ತು’ ಎಂದ. ನಿಜಾ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಋಷಿಗಳು ತಿಂಗಳಾನುಗಟ್ಟಲೆ ಊಟವನ್ನೆ ಮಾಡುತ್ತಿರಲಿಲ್ಲವಂತೆ. ಬಡವರೂ ಅಷ್ಟೇ ಅಲ್ಲವೆ? ಯಾವತ್ತು ತಾನೆ ಅವರು ಹೊಟ್ಟೆ ತುಂಬ ಉಂಡಿದ್ದರು. ಹೆಚ್ಚಾಗಿ ನೀರು ಕುಡೀತಿದ್ದರು. ಆ ಮಡಕೂಸಮ್ಮ ಬರೀ ಚಹಾ ಮಾತ್ರ ಸೇವಿಸುತ್ತಿದ್ದಳು. ಆ ಅತ್ತೆಯರ ತಾಯಿ ಕರುಗಮ್ಮ ಜೇಡಿಮಣ್ಣು ತಿಂದೇ ಕಾಲ ಕಳೆದುಬಿಡುತ್ತಿದ್ದಳು. ನಮ್ಮನ್ನು ಕೊನೆಗೆ ತಿನ್ನುವ ಮಣ್ಣನ್ನೂ ಮನುಷ್ಯರು ಬಿಡೋದಿಲ್ಲಾ… ಅದನ್ನೂ ತಿಂತಾರೆ. ಕಿತ್ತಲೆ ಹಣ್ಣ ಬಿಡಿಸಿ ಅವನಿಗೆ ಕೊಟ್ಟೆ. ಬಾಯಿಗೆ ಹಾಕಿಕೊಂಡ. ನಾನೂ ತಿಂದೆ. ಅದು ಊಟದ ಬಯಕೆಯ ಮುಂದೂಡಿತ್ತು. ಆಸೆಗಳನ್ನು ಮುಂದೂಡುತ್ತ ಬರುವುದೇ ಪರಮ ಉಪಾಯ. ಹಠಯೋಗ ಫಲವಿಲ್ಲದ್ದು. ನಾಳೆ ನಾಳೆಗೆ ತಳ್ಳುತ್ತಾ ಹೋದಂತೆ ಆಸೆಯ ಮಿತಿಗಳು ಕಾಣುತ್ತವೆ. ವ್ಯಾಮೋಹ ತುಂಡಾಗುತ್ತ ಹೋಗುತ್ತದೆ ಎಂದು ಯೋಚಿಸಿದೆ. ಇವನ ಜೊತೆಗಿದ್ದರೆ ನಾನು ಸನ್ಯಾಸಿ ಆಗಿ ಬಿಡುವೆ ಎಂದು ಭಯವಾಯಿತು.

ತಕ್ಷಣ ಉಪಾಯ ಹೊಳೆಯಿತು. ಅಣ್ಣಾ; ನಮ್ಮೂರೊರೊಬ್ಬರು ಕೆ.ಆರ್.ಆಸ್ಪತ್ರೆಲವರೆ. ಉಷಾರಿಲ್ಲ. ಕಳೆದ ವಾರ ಹೋಗಿದ್ದೆ. ಇನ್ನೊಂದ್ಸಲ ನೋಡ್ಕಂಡು ಬರ್ತೀನಿ. ನೀನು ಇದೇ ಏರಿಯಾದೆಲಿ ಇರ್ತಿಯಾ ತಾನೆ… ಬೇಗ ವಾಪಸ್ಸು ಬಂದು ಬಿಡ್ತೀನಿ ಎಂದೆ. `ವೋಗಿದ್ದು ಬಾರಪ್ಪಾ… ನಾನೂ ಬರ್ಲಾ ಯೇಳೂ…’ ಎಂದ. ಆ ಕೂಡಲೆ ನನಗೆ ಏನೊ ಬೇರೆಯಾಗಬೇಕೆನಿಸಿತು. ಒಂದು ವಾರ ಅವನ ಜೊತೆ ಕಳೆದಿದ್ದೆ. ತುಂಬ ದಿನಗಳಿಂದ ಆ ಚೆಲುವಾಂಬ ಆಸ್ಪತ್ರೆಯ ಒಳಗೆ ಅಡ್ಡಾಡಬೇಕೆನಿಸಿತ್ತು. ಮಾರುಕಟ್ಟೆಯಿಂದ ಬಂದೆ. ಆಸ್ಪತ್ರೆಗಳು ಯಾವತ್ತೂ ವಿಷಾದಗಳಿಂದ ತುಂಬಿ ತುಳುಕುತ್ತಿರುತ್ತವೆ. ಒಬ್ಬೊಬ್ಬರದೂ ಒಂದೊಂದು ಕತೆ. ನಾಲ್ವಡಿ ಕೃಷ್ಣರಾಜೇಂದ್ರ ಅವರ ಕಾಲದ ಆ ಸಾಲು ಆಸ್ಪತ್ರೆಗಳು ಬಡವರ ಪಾಲಿನ ದಯಾ ಕೇಂದ್ರಗಳಾಗಿದ್ದವು. ಚೆಲುವಾಂಬ ಆಸ್ಪತ್ರೆ ಮಹಿಳಾ ರೋಗಿಗಳಿಗೆ ಮೀಸಲಾಗಿತ್ತು. ಒಳಗೆ ನಡೆದೆ ತಡೆಯುವವರು ಆಗ ಇರಲಿಲ್ಲ. ರೋಗಿಯ ಕಡೆಯವರು ಎಂದು ಬಿಡುತ್ತಿದ್ದರು. ಹಿಂದೊಮ್ಮೆ ಹಾಗೆ ಬಂದಿದ್ದೆ. ಇಲ್ಲಿ ನಮ್ಮವರು ಯಾರೊ ಒಬ್ಬರು ವಾರ್ಡಿನ ಒಂದು ಮಂಚದ ಮೇಲೆ ಜೀವನ್ಮರಣದ ಸ್ಥಿತಿಯಲ್ಲಿ ಮಲಗಿದ್ದಾರೆ ಎಂದು ಭಾವಿಸಿ ಒಬ್ಬೊಬ್ಬರನ್ನೂ ನೋಡುತ್ತ ನಡೆದರೆ ಅವ್ಯಕ್ತವಾದ ಏನೊ ಹುಡುಕಾಟ ನನ್ನಲ್ಲಿ ಉಂಟಾಗುತ್ತಿತ್ತು. ಹಾಗೆ ಎಲ್ಲಾ ವಾರ್ಡುಗಳ ನೋಡುತ್ತ ಒಳ ರೋಗಿಯ ಸರಿ ವಿಳಾಸ ಸಿಗದೆ ಹುಡುಕಾಡುತ್ತಿರುವೆ ಎಂಬಂತೆ ನಟಿಸುತ್ತಿದ್ದೆ. ಜನ ಎಷ್ಟು ಮುಗ್ಧರು! ಬಡವರ ಮುಗ್ಧತೆಗೆ ದೇವರೂ ಸಮ ಅಲ್ಲವೇನೊ. ನಿಮ್ಮ ಸಹಾಯಕ್ಕಾಗಿ ಸವಾಲು ಸ್ವೀಕರಿಸುವಂತೆ ಮುಂದೆ ಬಂದುಬಿಡುತ್ತಾರೆ. ಸಂಶಯವೇ ಇರುವುದಿಲ್ಲ ಅವರಿಗೆ. ಬುದ್ಧಿವಂತರು ಬಹಳ ಚೆನ್ನಾಗಿ ನಾಟಕ ಮಾಡಿ ಟೋಪಿ ಹಾಕಿಯೇ ಬಿಡುತ್ತಾರೆ… ನನ್ನಂತೆ! ಎಂದುಕೊಂಡೆ. ಸಂಜೆ ಸಮೀಪಿಸುತ್ತಿತ್ತು. ನಾಲ್ಕಗಂಟೆ. ರೋಗಿಗಳಿಗೆ ಹಾಲು ಬ್ರೆಡ್ಡು ನೀಡುವ ಸಮಯ ಅದು. ಉದ್ದನೆಯ ವಾರ್ಡುಗಳಲ್ಲಿ ಬಡ ರೋಗಿಗಳ ಕಡೆಯವರು ಬ್ರೆಡ್ಡು ಹಾಲಿಗಾಗಿ ದೊಡ್ಡದಾಗಿ ಕೈನೀಡಿ ಪಡೆಯುತ್ತಿದ್ದರು. ರೋಗಿಗಳು ಹಾಸಿಗೆ ಮೇಲೆ ನರಳುತ್ತ ಮಲಗಿಯೊ; ಬೆನ್ನನ್ನು ಎತ್ತರದ ದಿಂಬಿಗೆ ಒರಗಿಸಿಕೊಂಡೊ ಕಾಲು ನೀಡಿ ಗುಣಮುಖದ ಭರವಸೆಯಲ್ಲಿ ಕೂತಿರುತ್ತಾರೆ. ಅದನ್ನು ವಿವರಿಸಲಾರೆ. ರೋಗಿಯ ಮಂಚದ ಕೆಳಗೆ ಪುಟ್ಟ ಮಕ್ಕಳು ಮಲಗಿದ್ದರೆ; ತಾಯಿ ಆಗಾಗ ನರಳುತ್ತ; ಇಲ್ಲೇ ಇದ್ದೀರಾ; ಹೊರಗೆ ಹೋಗಬೇಡಿ ಎಂದು ಎಚ್ಚರಿಸುತ್ತಿರುತ್ತಾರೆ. ಅವರ ವಯಸ್ಸಾದ ತಾಯಂದಿರು ಕೂತು ಕೂತು ಸಾಕಾಗಿ ಕಾರಿಡಾರಿನಲ್ಲಿ ಅಡ್ಡಾಡಿಯೊ; ಸಹ ರೋಗಿಯ ಜೊತೆಯವರ ವಿಶ್ವಾಸ ಮಾಡಿಯೊ ಕಷ್ಟಸುಖ ಮಾತಾಡುತ್ತಿರುತ್ತಾರೆ.

ಮನುಷ್ಯರ ನಿಟ್ಟುಸಿರ ಆಲಿಸಿ ಕಷ್ಟಗಳ ಕೇಳಿ ಹೆಪ್ಪುಗಟ್ಟಿದ ಅವರ ಮುಖಗಳನ್ನು ಅರಿಯುವುದು ಸುಖವೇ… ಅದೊಂದು ಪ್ರೇಕ್ಷಣೀಯ ತಾಣವೇ; ದೇವಾಲಯವೇ? ಕಾರಿಡಾರಿನ ಅಲ್ಲಲ್ಲಿ ಕೂರಲು ವ್ಯವಸ್ಥೆ ಇತ್ತು. ಕೂತುಕೊಂಡೆ. ಬಿಳಿಯ ಬಟ್ಟೆ ಧರಿಸಿದ ದಾದಿಯರು ನಿರ್ಭಾವುಕವಾಗಿ ಅಡ್ಡಾಡುತ್ತಿದ್ದರು. ಅವರ ಮುಖದಲ್ಲೊ ಯಾರೊ ಯಾವಾಗಲೂ ನಗು ಮೆತ್ತಿಕೊಂಡಂತಿತ್ತು. ಸದಾ ನೋವು ರೋಗ ನರಳಿಕೆಯ ವಿರುದ್ಧ ದಂಗೆ ಎದ್ದವರಂತೆ ವಾರ್ಡಿಂದ ವಾರ್ಡಿಗೆ ಹಾಸಿಗೆಯಿಂದ ಹಾಸಿಗೆಗೆ ಓಡಾಡುವ ಅವರ ಬಗ್ಗೆ ಭಕ್ತಿ ಉಂಟಾಯಿತು. ಮಹಿಳೆಯರ ಸಾಮಾನ್ಯ ವಾರ್ಡಿನ ವರಾಂಡದಲ್ಲಿದ್ದೆ. ಅಲ್ಲಿಗೆ ಹೋಗಿ ಕೂರುವುದು ನನಗೆ ರೂಢಿ. ನಾನಾಗ ಹತ್ತು ವರ್ಷಗಳ ಒಳಗಿನ ಬಾಲಕ. ತಾಯಿಗೆ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿತ್ತು. ಇದೇ ಆಸ್ಪತ್ರೆಗೆ ಸೇರಿಸಿದ್ದರು, ಆಪರೇಷನ್‍ಗೆ ದಿನ ನಿಗಧಿ ಆಗಿತ್ತು. ನನ್ನ ತಾಯಿಯ ತಾಯಿ ಸಿದ್ದವ್ವ ನೋಡಿಕೊಂಡಿದ್ದಳು. ನನ್ನ ಮಗನ ಕರೆಸು. ನೋಡಿಕೊಂಡು `ವಟ್ಟೆಕುಯಿಸ್ಕತಿನಿ’ ಎಂದಿದ್ದಳು. ತಾತ ಕರೆದುಕೊಂಡು ಬಂದಿದ್ದ. ಅಷ್ಟು ದೊಡ್ಡ ಆಸ್ಪತ್ರೆಯಲ್ಲಿ ತಾತ ಕೈ ಹಿಡಿದು ತಂದು ತಾಯ ಮುಂದೆ ನಿಲ್ಲಿಸಿದ್ದ. ಎದ್ದು ಕೂರಲಾರದಷ್ಟು ಹೊಟ್ಟೆ ನೋವಿತ್ತು ತಾಯಿಗೆ. ಆದರೂ ತಾಯ ಸಹಾಯದಿಂದ ಒರಗಿ ಕೂತಳು. ಆಸ್ಪತ್ರೆಯ ಒಂದು ನಿಲುವಂಗಿಯ ಕಟ್ಟಿದ್ದರು. ಬೆನ್ನು ಅರೆ ಬರೆ ಕಾಣುತ್ತಿತ್ತು. ತಾಯ ಬೆನ್ನ ಹೊಳೆಯಲ್ಲಿ ತೊಳೆದುಕೊಡುತ್ತಿದ್ದುದು ನೆನಪಾಯಿತು. ತಲೆ ಸವರಿದಳು. ಕಾಲು ಬಾತುಕೊಂಡಿದ್ದವು. ಕಣ್ಣುಗಳು ಒಳ ಸರಿದಿದ್ದವು. ಅಪ್ಪ ತಿರುಗಿಯು ನೋಡಿರಲಿಲ್ಲ. ತಾತನೆ ಕರೆತಂದು ಸೇರಿಸಿದ್ದ. ಅಜ್ಜಿ ಕಾಡಿಂದ ನಾಡಿಗೆ ಬಂದಂತೆ ಪರದಾಡುತ್ತಿದ್ದಳು. ಅಷ್ಟಾಗಿ ಅಲ್ಲಿನ ನರಕ ನನಗೆ ಗೊತ್ತಾಗಿರಲಿಲ್ಲ. ರೋಗಿಯ ನೋಡಲು ಬಂದವರು ಹೆಚ್ಚು ಹೊತ್ತು ನಿಲ್ಲುವಂತಿರಲಿಲ್ಲ. ತಾಯಿ ಅಜ್ಜಿಗೆ ಏನೊ ತೋರಿ ಹೇಳಿದಳು. ಬಾಲ್ಯದಲ್ಲಿ ನನಗೆ ಬ್ರೆಡ್ಡಿನ ಒಂದು ಚೂರು ಸಿಕ್ಕರೂ ಸಾಕೆಂದು ದೀನವಾಗಿ ನೋಡುವ ನಾಯಂತೆ ತಿನ್ನುವವರ ಕೈ ಬಾಯನ್ನೆ ಗಮನಿಸುತ್ತಿದ್ದೆ. ತಾಯಿ ಕರೆದು ಅಲ್ಲೆಲ್ಲಾರ ಹೋಗಿ ಆಟ ಆಡಿಕೊ ಎಂದು ಹೆದರಿಸಿ ಕಳಿಸಿಬಿಡುತ್ತಿದ್ದಳು. ಹೂಂ ಎಂದು ಹೋಗಿ ಮತ್ತೆ ಮರೆಯಿಂದ ಮುಂಬಾಗಿಲ ಪಡಸಾಲೆಗೆ ಬಂದು ಆ ದೊಡ್ಡಣ್ಣನ ಮಗಳು ತಿನ್ನುತ್ತಿದ್ದ ಆ ವಿಶೇಷ ಬ್ರೆಡ್ಡಿನ ಆಸೆಯಿಂದ ಹಾಗೇ ಕಣ್ಣುಬಿಟ್ಟುಕೊಂಡು ನಿಂತಿರುತ್ತಿದ್ದೆ. ಅವಳು ಒಂದು ಚೂರನ್ನೂ ಕೊಡುತ್ತಿರಲಿಲ್ಲ. ಅದನ್ನು ಕಂಡಿದ್ದ ತಾಯಿ ಆಸ್ಪತ್ರೆಯವರು ತನಗಾಗಿ ಕೊಟ್ಟಿದ್ದ ಆ ಎಲ್ಲ ಬ್ರೆಡ್ ಪೀಸುಗಳನ್ನು ತಿನ್ನದೆ ಬ್ಯಾಗಿನಲ್ಲಿ ಸಂಗ್ರಹಿಸಿಟ್ಟಿದ್ದಳು.

ಅಜ್ಜಿ ತುಂಬಿದ್ದ ಬ್ರೆಡ್ಡಿನ ಬ್ಯಾಗನ್ನು ನನ್ನ ಕೈಗಿತ್ತಳು. ಒಣಗಿದ ರೊಟ್ಟಿಯಂತಾಗಿ ತಿನ್ನಲು ಕರುಂ ಎನ್ನುವಂತಿದ್ದವು. ಅಲ್ಲೆ ತಿನ್ನಲು ತೊಡಗಿದೆ. ಅಂತಹ ನೋವಿನಲ್ಲೂ ನಾನು ಬ್ರೆಡ್ಡನ್ನು ಬಾಯಿ ತುಂಬ ತಿನ್ನುತ್ತಿದ್ದ ಪರಿಯ ಕಂಡು ತಾಯಿ ಆನಂದದಿಂದ ಕಣ್ಣೊರಿಸಿಕೊಂಡಿದ್ದಳು. ಊರಿಗೆ ಹಿಂತಿರುಗಿದ್ದೆ. ಬ್ರೆಡ್ಡಿನದೇ ಚಿಂತೆಯಾಗಿತ್ತು. ಯಾರಿಗೂ ಕೊಡದೆ ತೋರದೆ ಬಚ್ಚಿಟ್ಟು ತಿನ್ನುವುದು ಹೇಗೆಂದು ತಿಳಿಯದೆ ತಾತನ ಕೇಳಿದ್ದೆ. ಗಹನವಾದ ಚಿಂತೆಯಲ್ಲಿ ನನ್ನ ಮಾತ ನಿರ್ಲಕ್ಷಿಸಿದ್ದ. ಹಳ್ಳಿಗೆ ಹೋಗಿದ್ದೆ ತಡ; ಅಜ್ಜಿ ಬ್ಯಾಗನ್ನು ಕಿತ್ತುಕೊಂಡಿದ್ದಳು. ಜೋರಾಗಿ ಕಿರುಚಲು ಆಗಿರಲಿಲ್ಲ. ಅಲ್ಲೆ ಇದ್ದ ಅಪ್ಪ ಕಾಗೆಗಳಂತೆ ಬ್ಯಾಗಿನ ತುಂಬ ಇದ್ದ ಬ್ರೆಡ್ಡಿನ ಚೂರುಗಳು ಗಳಿಗೆಯಲ್ಲೆ ಮಾಯವಾಗಿದ್ದವು. ಹಿತ್ತಿಲಿಗೆ ಹೋಗಿ ಅದೇ ಹೊಂಗೆ ಮರದ ಮೇಲೆ ಕೂತಿದ್ದೆ. ಈಗ ಅದೇ ವಾರ್ಡಿನ ವರಾಂಡದಲ್ಲಿ ಕೂತಿರುವೆ. ಬಾಗಿಲ ಬಳಿಯೇ ಇದ್ದ ಹಾಸಿಗೆ ಅದು. ಅವತ್ತಿನಿಂದಲೂ ಅದು ಅಲ್ಲೇ ಇತ್ತು. ಬದಲಾಗಿಯೆ ಇರಲಿಲ್ಲ. ನನ್ನ ತಾಯಂತಹ ಎಷ್ಟು ಹೆಂಗಸರು ಅಲ್ಲಿ ಮಲಗಿ ಹೋಗಿದ್ದರೊ! ಈಗಲೂ ಮಧ್ಯ ವಯಸ್ಸಿನ ಹೆಂಗಸು ಅದೇ ಹಾಸಿಗೆಯಲ್ಲಿ ಮಲಗಿದ್ದಳು. ಕತ್ತಲಾದದ್ದೇ ಗೊತ್ತಾಗಲಿಲ್ಲ. ಆಸ್ಪತ್ರೆಯ ಪಾರ್ಕಿನ ರಸ್ತೆಯ ಆಚೀಚಿನ ಮೆಳೆ ಮರಗಳ ತುಂಬ ಗಿಳಿವಿಂಡು ಗಾನಗೈದಿತ್ತು. ಹೊತ್ತು ಮುಳುಗಿದ ಕೂಡಲೆ ಮನುಷ್ಯ ಚಟುವಟಿಕೆಗಳಲ್ಲಿ ತಂತಾನೆ ಗಡಿಬಿಡಿ ಏನೊ ಒತ್ತಡ ಬಂದು ಬಿಡುತ್ತದೆ. ಕೆಲ ರೋಗಿಗಳ ಕೈ ಹಿಡಿದು ಕಾರಿಡಾರಿನಲ್ಲಿ ಕಾಲಾಡಿಸುತ್ತಿದ್ದರು. ನೋವಿನ ಹೆಜ್ಜೆಗಳು. ಎಲ್ಲೆಲು ದೀಪಗಳು ಬೆಳಗುತ್ತಿದ್ದವು. ವಯಸ್ಸಾದ ರೋಗಿಗಳು ಲೋಕಕ್ಕೆ ವಿದಾಯ ಹೇಳಲು ಸಿದ್ಧವಾದಂತೆ ನಿಸ್ತೇಜ ಕಣ್ಣುಗಳ ಚಲಿಸದೆ ಹಾಗೇ ಕೂತಿದ್ದರು.

ಜನ ಸಂಚಾರ ರಾತ್ರಿಗೆ ಸಿದ್ಧವಾಗುತ್ತಿತ್ತು. ಬೇಗ ಬಂದು ಬಿಡುವೆ ಎಂದು ಹೇಳಿ ಬಂದಿದ್ದೆ. ಈಗ ನೋಡಿದರೆ ನನ್ನ ಮನಸ್ಸು ಎತ್ತಲೂ ಜಗ್ಗದೆ ಇಲ್ಲೇ ಕೂತಿದೆ. ಏನೆಂದುಕೊಂಡನೊ ಏನೊ… ನಾಳೆ ಸಿಕ್ಕೇ ಸಿಗುತ್ತಾನೆ ಎಂದುಕೊಂಡೆ. ಆಸ್ಪತ್ರೆಯ ಕಾರಿಡಾರಿನ ಉದ್ದಕ್ಕೂ ಅವರಿವರು ಕೂತಿದ್ದರು. ಕೆಳಗೆ ಹೋಗಿ ರಸ್ತೆ ಬದಿಯಲ್ಲಿ ಏನಾದರೂ ತಿಂದು ಬರುತ್ತಿದ್ದರು. ಅವರೆಲ್ಲ ರೋಗಿಗಳ ಸಂಬಂಧಿಕರು. ಅವರದೇ ಒಂದು ಸುಖದುಃಖ. ನೂರೆಂಟು ತರದ ಮಾತು. ಅಲ್ಲಿಂದಾಗಲೇ ಹೊಂದಾಣಿಕೆ ಮಾಡಿಕೊಂಡು ಬಂಧುಗಳಾಗಿ ಬಿಡುತ್ತಿದ್ದರು. ಯಾರೊ ಒಂದು ಹೆಂಗಸು ಪರಿಚಯ ಮಾಡಿಕೊಂಡಿತು. ಕೊಳ್ಳೆಗಾಲದ ಹಳ್ಳಿಯೊಂದರಿಂದ ಮಗಳ ಕರೆತಂದು ಅಲ್ಲೆ ಸೇರಿಸಿದ್ದಳು. `ನೀ ಯಾರಪೈ…. ನಿಮ್ಮಪ್ಪುನ್ಗೆ ಉಸಾರಿಲ್ಲುವೇನಪೈ’ ಎಂದು ಕೇಳಿದ್ದಳು. ಹೂಂ ಎಂದಿದ್ದೆ. ಅಲ್ಲಿ ನಮ್ಮಜ್ಜಿ ನಮ್ಮವುನ್ನ ನೋಡ್ಕಂದವುಳೇ… ನಾನಿಲ್ಲಿವಿನಿ ಎಂದೆ. `ಊಟ ಮಾಡ್ದಪೈ’ ಎಂದಳು. ಹೂಂ ಎಂದು ತಲೆಯಾಡಿಸಿದೆ. ದಟ್ಟಣೆ ಕಡಿಮೆ ಆಗುತಿತ್ತು. ಹಳ್ಳಿಯಿಂದ ವಿಶೇಷ ಊಟ ಮಾಡಿ ತಂದಿದ್ದವರು ಕಾರಿಡಾರಿನಲ್ಲೆ ಕೂತು ಉಂಡು ಕಸದ ಡಬ್ಬಿಗೆ ಉಳಿಕೆಯ ಎಸೆಯುತ್ತಿದ್ದರು. ಗಮ್ಮೆಂದಿತು. ಹಳ್ಳಿಯ ಬಾಡೂಟದ ಗಮಲು. ಹಸಿವನ್ನು ತಡಿ, ಮುಂದೂಡು ಎಂದಿದ್ದ ಅವನ ಮಾತು ನೆನಪಾಯಿತು. ಗಳಿಗೆಯಲ್ಲೆ ಆ ಹಸಿವು ಮಾಯವಾಯಿತು. ಯಾಕೆ ಇವೆಲ್ಲ ಸ್ವಯಂ ದಂಡನೆ ಎಂದು ಆತ್ಮವ ಕೇಳಿಕೊಂಡೆ. ಅದು ಎಲ್ಲೊ ಹೋಗಿತ್ತು. ಎದೆಗೂಡು ಖಾಲಿ ಎನಿಸಿತ್ತು. ಸಾವು ನೋವು ನರಳಿಕೆಯಲ್ಲು ಜನ ತಮ್ಮ ವಿಶ್ವಾಸ ಕಳೆದುಕೊಂಡಿರಲಿಲ್ಲ. ವೈದ್ಯರು ತಮ್ಮ ರಾತ್ರಿ ಪಹರೆಯ ಮುಗಿಸಿ ಹೋಗುತ್ತಿದ್ದರು. ಅವರ ಹಿಂದೆ ಎಂಟತ್ತು ಮಂದಿ ಮೆಡಿಕಲ್ ವಿದ್ಯಾರ್ಥಿಗಳು ನಿಷ್ಠೆಯಿಂದ ಹಿಂಬಾಲಿಸುತ್ತಿದ್ದರು. ಆ ವೈದ್ಯರೊ ಜೀವ ಉಳಿಸುವ ದೇವ ಮಾನವರಂತೆ ಎತ್ತಲೊ ನೋಡುತ್ತ ಮೆಟ್ಟಿಲು ಏರುತ್ತಿದ್ದರು. ಅವರು ಹಾಗೆ ಬಂದು ಹೋದ ಮೇಲೆ ಏನೊ ನಿರಾಳತೆಯ ಗಾಳಿ ಅಲ್ಲಿ ಬೀಸಿದಂತೆ ಆಗುತ್ತಿತ್ತು. ಆಸ್ಪತ್ರೆಗೆ ಹಗಲು ರಾತ್ರಿಗಳ ಅಂತರ ಇರಲಿಲ್ಲ. ಯಾರೊ ಯಾವಾಗಲೊ ಬರುತ್ತಿದ್ದರು ಹೋಗುತ್ತಿದ್ದರು. ಅಸಂಗತನಾಗಿ ಅಲ್ಲೇ ಸಾಲಾಗಿ ಕಾರಿಡಾರಿನಲ್ಲಿ ಮಲಗಿದ್ದವರ ಸಾಲಿನಲ್ಲಿ ಮಲಗಿದೆ. ಕೊಳೆಯಾಗಿದ್ದೆ. ಬಟ್ಟೆಗಳ ತೊಳೆದು ಸುಮಾರು ದಿನ ಆಗಿತ್ತು. ನರಳುವ ರೋಗಿಗಳ ಸದ್ದು ಅಲ್ಲೆಲ್ಲ ತೇಲಾಡುತ್ತಿತ್ತು. ಉಸಿರಾಟದ ಏರುಪೇರಲ್ಲಿ ಗೊರಕೆ ಹೊಡೆವವರು ಮಗ್ಗುಲು ಬದಲಿಸುತ್ತಿದ್ದರು. ಆಗ ತಾನೆ ನಿದ್ದೆಗೆ ಜಾರಿ ಕೆಲ ಗಳಿಗೆಯಲ್ಲೆ ಎಚ್ಚರವಾಗಿ ದುಃಸ್ವಪ್ನ ಕಂಡವರಂತೆ ಎದ್ದು ಕೂತು ಏನೊ ಹುಡುಕುವಂತೆ ಮಾಡುತ್ತಿದ್ದರು. ಜೀವನದಲ್ಲಿ ಏನೇನು ಕಳೆದುಕೊಂಡು ಅಲ್ಲಿಗೆ ಬಂದಿದ್ದರೊ ಏನೊ! ಮಧ್ಯ ರಾತ್ರಿ ಆಗಿತ್ತು. ನಿದ್ದೆ ಬರಲಿಲ್ಲ. ಹಗಲಿರುಳು ನರ್ಸುಗಳು ಎಚ್ಚರವಿದ್ದರು.

ಕಾರಿಡಾರಿನ ಸುತ್ತ ಒಂದು ರೌಂಡು ಹಾಕುವ ಎನಿಸಿತು. ಬ್ಯಾಗನ್ನು ಜಾಗದ ಗುರುತಿಗೆ ಎಂದು ಅಲ್ಲೆ ಬಿಟ್ಟು ನಡೆದೆ. ಹೊಸದಾಗಿ ಆ ಅವೇಳೆಯಲ್ಲಿ ತುರ್ತು ಎಂದು ರೋಗಿಗಳ ಕರೆತಂದು ಹಾಸಿಗೆ ಮೇಲೆ ಮಲಗಿಸಿ ಡ್ರಿಪ್ ಹಾಕುತಿದ್ದರು. ಅರೆ ಎಚ್ಚರದ ಶವದಂತೆ ರೋಗಿಗಳು ಬಿದ್ದಿರುತ್ತಿದ್ದರು. ಆಚೆ ಮೂಲೆಯಿಂದ ಈಚೆ ಮೂಲೆಗೆ ಬರುವಷ್ಟರಲ್ಲಿ ಒಂದು ಜನ್ಮದ ಅವಧಿ ಮುಗಿಸಿದಂತಾಗುತಿತ್ತು. ಕೆಲ ರೋಗಿಗಳು ಅಲ್ಲೇ ತಮ್ಮ ಕೊನೆ ಉಸಿರ ಬಿಟ್ಟಿರುತ್ತಿದ್ದರು. ಸತ್ತ ಹೆಣಗಳ ಕೊಠಡಿಗೆ ಶವವನ್ನು ಸ್ಟ್ರೆಚರ್‍ನಲ್ಲಿ ಎತ್ತಿ ಹಾಕಿ ತಳ್ಳಿಕೊಂಡು ಆ ಕೆಲಸದವರು ಮೌನವಾಗಿ ಸಾಗುತಿದ್ದರು. ಆ ಶವಗಳ ಕೊಠಡಿಯ ಮುಂದೆ ನಿಂತೆ. ನೋಡಬಾರದು ಮನುಷ್ಯರ ಈ ಸ್ಥಿತಿಯ ಎನಿಸಿತು. ಹೆಣಗಳ ಸಂಬಂಧಿಕರು ಅನಾಥವಾಗಿ ಅಲ್ಲೇ ಹೊರಗೆ ಕಾಯುತ್ತ ಕೂತಿದ್ದರು. ವಾರಸುದಾರರೇ ಇಲ್ಲದ ಹೆಣಗಳು ಉಬ್ಬಿ ವಾಸನೆ ಬೀರುತ್ತಿದ್ದವು. ಆ ಹೆಣಗಳ ಜೊತೆ ಹೇಗಪ್ಪ ಈ ಮನುಷ್ಯ ಹೆಣಗಾಡುತ್ತಾನೆಂದು ಸ್ಟ್ರೆಚರ್ ತಳ್ಳಿಕೊಂಡು ಬರುವವನನ್ನೆ ನೋಡುತ್ತಿದ್ದೆ. ಅದೆಲ್ಲ ಅವರಿಗೆ ಮಾಮೂಲು. ಅಲ್ಲಿನ ಟಾಯ್ಲೆಟ್ ರೂಂಗಳತ್ತ ಮುಖ ತಿರುವಿಸಲು ಸಾಧ್ಯವೆ ಇರಲಿಲ್ಲ. ಹೊಲಸು ಬೀರುತಿದ್ದವು. ಆ ಬಡವರಿಗೆ ಅದೇನೂ ಸಮಸ್ಯೆ ಎನಿಸುತ್ತಿರಲಿಲ್ಲ. ಹಿಂತಿರುಗಿ ಬಂದು ಮಲಗಿದೆ. ಭಾಗಶಃ ಬೆಳಗಾಗಲು ಸ್ವಲ್ಪ ಸಮಯ ಇತ್ತು ಎನಿಸುತ್ತದೆ. ಆಗ ನಿದ್ದೆ ಬಂದಿತ್ತು. ಮಾಯದ ಗೊರಕೆಯ ನಿದ್ದೆ. ಸಾವಿನ ಮನೆಯ ಮುಂದೆ ನಿಂತು ಸಾವಿಲ್ಲದ ಮನೆಯಲ್ಲಿ ಸಾಸಿವೆ ತಾ ಎಂದರೆಲ್ಲಾ… ಹಾಗೆಂದರೆ ಏನೆಂದು ಕೇಳಿದ್ದೆ.