ಹತ್ತೋ ಇಪ್ಪತ್ತೋ ಜನರು ಹಿಡಿಸಬಲ್ಲ ಲೋಹದ ಬುಟ್ಟಿ ಬಲೂನಿಗೆ ಜೋತುಬಿದ್ದು ಗಾಳಿಸಂಚಾರ ಮಾಡುತ್ತದೆ. ವರ್ಷಕ್ಕೊಮ್ಮೆ ಬರುವ ನಾಲ್ಕು ದಿನಗಳ ಈ ಬಲೂನು ಹಬ್ಬದ ದಿನಗಳಲ್ಲಿ ಊಹೆಗೆ ನಿಲುಕದ “ಬ್ರಿಟಿಷ್ ವೆದರ್” ಸಹಕರಿಸದೇ ನಿರಾಶೆ ಹುಟ್ಟಿಸುವುದಿದೆ. ಹಾಗಂತ ಒಮ್ಮೆ ಹಾರಿದ್ದೆ ಹೌದಾದರೆ ನೆಲದ ಮೇಲೂ ಅಲ್ಲ, ವಿಮಾನಗಳಷ್ಟು ಎತ್ತರದಲ್ಲೂ ಅಲ್ಲ ನಡುವಿನ ಅವಕಾಶದಲ್ಲಿ ಒಂದು ಸುವಿಹಾರ ನಡೆಯುತ್ತದೆ. ಬ್ರಿಸ್ಟಲಿನ ಜನವಸತಿ ಪ್ರದೇಶಗಳ ಆಗಸದಲ್ಲಿ ಹೀಗೆ ಬಲೂನುಗಳು ತೇಲುತ್ತ ಸಾಗುವಾಗ ಅಲ್ಲಲ್ಲಿನ ಮಕ್ಕಳು ಮನೆಯಿಂದ ಹೊರಬಂದು ಈ ಬಲೂನುಗಳನ್ನು ನೋಡುತ್ತಾ ನಿಲ್ಲುವುದಿದೆ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್
ಇಂಗ್ಲೆಂಡ್ ಇರಲಿ, ಇಂಡಿಯಾ ಇರಲಿ…. ಹಬ್ಬಗಳೇನು ಎಲ್ಲೂ ಯಾರನ್ನೂ ಕೇಳಿ ಬರುವವಲ್ಲ ಬಿಡಿ. ಬದಲಿಗೆ ಎಂದು ಬಂದಾವೋ ಎಂದು ಕಾಯುವಂತೆ ಮಾಡುವವು. ನಮ್ಮ ಆಸುಪಾಸಿನಲ್ಲಿ ಸಂಭ್ರಮವಿದೆಯೋ, ವೇದನೆಯಿದೆಯೋ, ಸಂತಸ ಮನೆಮಾಡಿದೆಯೋ, ಸೂತಕ ಆವರಿಸಿದೆಯೋ ಅಂತ ಲೆಕ್ಕಿಸದೆ ಅತ್ಯಂತ ನಿರ್ಲಿಪ್ತವಾಗಿ ನಮ್ಮೆದುರು ಬಂದು ನಗುತ್ತ ನಿಲ್ಲುವವು. ಹಬ್ಬ, ತೇರು, ಜಾತ್ರೆ…. ಎಂಬ ಬಗೆಬಗೆಯ ಹೆಸರುಗಳು ಉತ್ಸಾಹ, ಉಮೇದು, ಕಾತರ, ಸದ್ದು-ಸಡಗರ ಎಂಬೆಲ್ಲ ಶಬ್ದಗಳನ್ನು ಅಳತೆಮಾಡಿ ಬೆರೆಸಿದ್ದಕ್ಕೆ ಹುಟ್ಟಿದವು ಇರಬೇಕು.
ಒಂದು ಜಾತ್ರೆಯ ಬೀದಿಯಲ್ಲೋ ಹಬ್ಬದ ಬಯಲಿನಲ್ಲೋ ನಡೆಯುವುದೆಂದರೆ ಉತ್ಸಾಹದ ಉತ್ಸವದಲ್ಲಿ ಭಾಗವಹಿಸಿದಂತೆ. ಹಬ್ಬದ ಹೆಸರುಗಳು ಕಾರಣಗಳು ಬೇರೆ ಬೇರೆ ಆದರೂ ಒಮ್ಮೆ ಹಬ್ಬದ ಪ್ರಭಾವಲಯದೊಳಗೆ ಕಾಲಿಟ್ಟಮೇಲೆ ಯಾವ ಊರಿನ ಯಾವ ಹಿನ್ನೆಲೆಯ ಹಬ್ಬವೂ ನೀಡುವ ಅನುಭೂತಿ ಸರಿಸುಮಾರು ಒಂದೇ. ಉತ್ಸಾಹ ಉಮೇದು ಖುಷಿ, ಕಾತರ. ಜಾತ್ರೆಗಳೊಳಗೆ ಇಷ್ಟು ಹುಮ್ಮಸ್ಸು ಖುಷಿ ಕಲರವ ತುಂಬಿರುವುದಕ್ಕೆ ಕಾರಣಗಳೇನೊ ಆ ಜಾತ್ರೆಗೋ ಹಬ್ಬಕ್ಕೋ ಅಥವಾ ಅಲ್ಲಿ ಕಾಣಸಿಗುವ ಚಿತ್ರಗಳಿಗೋ ಗೊತ್ತಿರಬಹುದು. ಹಬ್ಬ ಜಾತ್ರೆಗಳು ಯಾವ ದಿಕ್ಕಿನ ಯಾವ ಊರಲ್ಲೇ ಇರಲಿ ಅಲ್ಲೆಲ್ಲ ಕಾಣುವ ಸಿಗುವ ಖಾಯಂ ಚಿತ್ರಗಳು ಕೆಲವಿವೆ. ಓಡುವ ಆಡುವ ಕುಣಿಯುವ ದಿಟ್ಟಿಸುವ ನಗುವ ಮಾತಾಡುವ ಆಟಿಕೆಗಳ ರಾಶಿ, ಬಿಳಿ ಹಳದಿ ಕೆಂಪು ಬಣ್ಣಬಣ್ಣದ ಮಿಠಾಯಿಗಳ ಗುಡ್ಡ, ನೆಟ್ಟಗೆ ಅಲುಗಾಡದೇ ನಿಂತ ಮಂಡಕ್ಕಿ ಚೀಲಗಳು, ಹಗ್ಗದ ಮೇಲೆ ಕೈಬಿಟ್ಟು ನಡೆಯುವ ರಿಂಗಿನೊಳಗೆ ಮೈತೂರಿಸಿ ಹೊಕ್ಕಿ, ಹೊರಬರುವ ಪೋರಿ, ಜನರ ಸರಸರ ತಿರುಗಾಟ, ಧೂಳು, ಗೌಜು, ಮಕ್ಕಳ ಕೇಕೆ, ರೋದನ, ಕಿಲಕಿಲ… ಹೀಗೆ ಇನ್ನು ಏನೇನೋ… ಮತ್ತೆ ಇವುಗಳ ನಡುವೆ ಒಂದೇ ಮುಖಭಾವ ಮುದ್ರೆಯನ್ನು ಹೊತ್ತ, ನಗುವನ್ನೊ ಅಳುವನ್ನೊ ವ್ಯಕ್ತಪಡಿಸಲು ಬೇಕಾಗುವ ಬಾಯಿ ಹುಬ್ಬು ನಾಸಿಕ ಇವು ಯಾವವೂ ಇರದ ಉರುಟು ಪುಗ್ಗೆಗಳ ಗುಚ್ಛ.
ಗಾಳಿ ಊದಿಸಿಕೊಂಡು ಜೀವಪಡೆದ ಹಗುರಾದ ನಲಿವ ತೇಲುವ ಬಣ್ಣಬಣ್ಣಗಳ ಆಯಆಕಾರಗಳ ಪುಗ್ಗೆಗಳು…. ಕೆಲವು ಪುಗ್ಗೆಗಳೊಳಗೆ ಕಾಳುಗಳನ್ನೂ ತೂರಿಸಿ ಸದ್ದು ಮಾಡಿಸಿ ಚಿಕ್ಕಮಕ್ಕಳನ್ನು ವಶೀಕರಣಗೊಳಿಸುವುದೂ ಇದೆ. ಉತ್ಕಟ ಆಸೆಯಲ್ಲಿ ಅಪ್ಪ-ಅಮ್ಮನಲ್ಲಿ ಕಾಡಿಬೇಡಿ ಕೊಂಡ ಪುಗ್ಗೆಗಳು ಮನೆಮುಟ್ಟುವ ಮೊದಲೇ ಮಕ್ಕಳ ಕೈಯಲ್ಲೇ ಒಡೆದು ಠುಸ್ ಆಗಿ ಮಹಾಅವಘಡವನ್ನು ತಂದೊಡ್ಡುವುದೂ ನಡೆಯುತ್ತದೆ. ಮಾರುವವರ ಹೆಗಲ ಮೇಲೆ ಆಧರಿಸಿದ ಕೋಲಿನ ತುದಿಗೆ ಸಿಕ್ಕಿಸಿಕೊಂಡ ಈ ಪುಗ್ಗೆಗಳ ಯಾನೆ ಬಲೂನುಗಳ ರಾಶಿ ಎಲ್ಲ ಜಾತ್ರೆಗಳಲ್ಲೂ ಕಾಣಸಿಗುವುದೇ. ಈ ಬಲೂನುಗಳನ್ನು ಮಾರುವಾತನ (ವಾಕೆಯ) ಮುಖ ನಮ್ಮ ನೆನಪಿನಲ್ಲಿ ನಿಲ್ಲದಿದ್ದರೂ ಅಂದಿನ ಜಾತ್ರೆಯಲ್ಲಿ ಕಂಡ ಬಲೂನುಗಳ ರಾಶಿ ಮನಸ್ಸಿನಲ್ಲಿ ನಿಲ್ಲುತ್ತದೆ. ಮಕ್ಕಳ ಕೈಯ ಮುಷ್ಟಿಬಿಗಿಯಲ್ಲಿರುವ ದಾರದ ಅಥವಾ ಕೋಲಿನ ತುದಿಗೆ ಮಗುವಿನಂತೆಯೇ ಮುಗ್ಧವಾಗಿ ಕತ್ತು ತಿರುಗಿಸಿ ಅತ್ತಿತ್ತ ನೋಡುತ್ತಾ ಬಲೂನುಗಳೂ ಮಕ್ಕಳೊಟ್ಟಿಗೆ ಓಡಾಡುವುದನ್ನು ಕಾಣಬಹುದು. ಜಾತ್ರೆಯೊಂದರ ನಲಿವಿನ ಉತ್ಸಾಹದ ಜೀವಾಳದಂತೆ ಇರುವವು ಈ ಪುಗ್ಗೆಗಳು ಬಲೂನುಗಳು.
ಇವರ ಹಬ್ಬ ಅವರ ಜಾತ್ರೆ ಈ ಭಗವಂತ ಆ ದೈವ ಎನ್ನುವ ತಕರಾರಿಲ್ಲ ಎಲ್ಲೂ ಸಲ್ಲುವವು. ಅವು ನೆಲದ ಮೇಲೆ ನಿಲ್ಲುವುದೇ ನಡೆಯುವುದೇ ಕಡಿಮೆ. ರಚನೆಯಲ್ಲಿ ಆಯುಷ್ಯದಲ್ಲಿ ಅತ್ಯಂತ ನಾಜೂಕಿನದಾದರೂ ಮುಖ ಆಕಾಶಕ್ಕೆ ಮಾಡಿ ಉತ್ಸಾಹದ ಚಿಲುಮೆಯಂತೆ ತೋರುವ, ಈಗ ತನ್ನನ್ನು ಬಿಟ್ಟರೆ ಈ ಕ್ಷಣಕ್ಕೆ ನೆಗೆದು ಗಗನ ಮುಟ್ಟಿಯೇನು ಎನ್ನುವ ಉಮೇದಿನಲ್ಲಿಯೇ ಇರುವವು. ಜಗತ್ತಿನ ಮೂಲೆಮೂಲೆಯ ಹಬ್ಬಗಳ ಜಾತ್ರೆಗಳ ಹಾಜರಿಪಟ್ಟಿಯಲ್ಲಿ ಬಲೂನುಗಳದು ಖಾಯಂ ಹೆಸರು.
ಸದ್ಯಕ್ಕೆ ಇಲ್ಲೊಂದು ಜಾತ್ರೆಯ ತಯಾರಿ ನಡೆಯುತ್ತಿದೆ. ಬಲೂನುಗಳ ಉಪಸ್ಥಿತಿ ಇಲ್ಲೂ ಇದೆ. ವಿಶೇಷವೆಂದರೆ ಈ ಜಾತ್ರೆಯಲ್ಲಿ ಸಕಲ ಜಾತ್ರೆಗಳಿಗೂ ಕಳೆಕೊಡುವ ಬಲೂನುಗಳದೇ ಪ್ರಧಾನ ಭೂಮಿಕೆ, ಬಲೂನುಗಳದೇ ದರ್ಬಾರು, ಕಾರುಬಾರು. ನಾಳೆಯಿಂದ ಬ್ರಿಸ್ಟಲಿನಲ್ಲಿ ಬಲೂನು ಮೇಳ….
ಹೀಗೊಂದು ಹಬ್ಬ ಬಲೂನುಗಳ ಹೆಸರಲ್ಲಾದರೂ ಎಲ್ಲ ದೇಶಗಳ ಊರುಗಳ ಹಬ್ಬಗಳಂತೆಯೇ ಇಲ್ಲೂ ಗೌಜು ಗಿಜಿಗಿಜಿ ಸಂಭ್ರಮ ತಿಂಡಿ ತಿನಿಸು ಆಟ ಆಟಿಕೆ ಎಲ್ಲವೂ ಇರುತ್ತವೆ. ನೀವಿದನ್ನು ಪುಗ್ಗೆಗಳ ಹಬ್ಬ, ಬಲೂನುಗಳ ಜಾತ್ರೆ.. ಏನು ಬೇಕಾದರೂ ಕರೆಯಬಹುದು. “ಅಂತಾರಾಷ್ಟ್ರೀಯ ಬಲೂನು ಉತ್ಸವ” ಎಂತಲೂ ಕರೆಸಿಕೊಳ್ಳುವ ನಾಲ್ಕು ದಿನಗಳ ಈ ಜಾತ್ರೆ ನಲವತ್ತು ವರ್ಷಗಳಿಂದ ಬ್ರಿಸ್ಟಲ್ ನಲ್ಲಿ ನಡೆದು ಬರುತ್ತಿರುವಂತಹದ್ದು ಮತ್ತು ಯುರೋಪಿನಲ್ಲಿಯೇ ಅತಿ ದೊಡ್ಡ ಬಲೂನುಗಳ ಮೇಳ ಎಂದೂ ಕರೆಸಿಕೊಳ್ಳುವಂತಹದ್ದು. ಇಲ್ಲಿನ ಬೇಸಿಗೆಯ ಆಗಷ್ಟ್ ತಿಂಗಳಿನ ಒಂದು ಗುರುವಾರದಿಂದ ಆದಿತ್ಯವಾರದವರೆಗೆ ಈ ಮೇಳ ನಡೆಯುತ್ತದೆ.
ಈ ಬಲೂನುಗಳು ಚಿಕ್ಕಮಕ್ಕಳು ತಟ್ಟಿ ಹಾರಿಸುವ, ಒತ್ತಿ ಒಡೆಯುವ, ಹುಟ್ಟುಹಬ್ಬಕ್ಕೆ ಗೋಡೆ ಬಾಗಿಲು ಕಿಟಕಿಗಳಲ್ಲಿ ತೂಗಾಡುವ ತೋರಣವಾಗುವ, ಎದೆಯೊಳಗಿನ ನಾಲ್ಕುಮುಷ್ಠಿ ಗಾಳಿಯನ್ನಷ್ಟೇ ತುಂಬಿಸಿಕೊಂಡು ಉಬ್ಬುವವು ಅಲ್ಲ.. ಬದಲಿಗೆ ಸಾವಿರಗಟ್ಟಲೆ ಘನಅಡಿಗಳಷ್ಟು ಬಿಸಿಗಾಳಿಯನ್ನು ತಮ್ಮೊಳಗೆ ತುಂಬಿಕೊಂಡು ದೈತ್ಯ ನಿಲುವನ್ನು ತಾಳಿ, ಬೀಸುವ ಗಾಳಿಯನ್ನು ಮೆಟ್ಟಿಲು ಮಾಡಿಕೊಂಡು ಏರಿ, ಊರುಕೇರಿ ಕಾಡುಮೇಡುಗಳನ್ನು ಮೇಲಿಂದಲೇ ನೋಡುತ್ತ ಹಾರುವವು… ತೇಲುವವು….
ಹುಟ್ಟಿನ ಮೂಲದಲ್ಲಿ ಎಲ್ಲ ಪುಗ್ಗೆಗಳಂತೆ ಸಣ್ಣ ಸರಳ ತೃಪ್ತ ಜೀವಿಯಾಗಿ ಹುಟ್ಟಿ ಬದುಕಿನ ಹುಡುಕಾಟ, ಕಳೆದು ಹೋದ ದಾರಿ, ಬದುಕಿನ ಮಾರ್ಪಾಟಿನಲ್ಲಿ ಇಂತಹ ಅವತಾರವೊಂದನ್ನು ಪಡೆದಿರಲೂಬಹುದು. ವಂಶದಲ್ಲಿ ಪುಗ್ಗೆಗಳ ವಂಶದವಾದರೂ ಗಾತ್ರದಲ್ಲಿ ಮಕ್ಕಳು ಕೈಯಲ್ಲಿ ಹಿಡಿದು ಆಡುವ ಪುಗ್ಗೆಗಳಿಗಿಂತ ಅತಿ ದೊಡ್ಡವು ಇವು. ಈ ಬಿಸಿಗಾಳಿಯ ಬಲೂನುಗಳಿಗೆ ಮನುಷ್ಯರನ್ನು ಹೊತ್ತು ಸಾಗಿಸಿದ “ಮೊದಲ ವಿಮಾನ” ಎಂದೂ ಕರೆಯುವುದಿದೆ. ಬಿಸಿಗಾಳಿ ಬಲೂನುಗಳ ಬಳಕೆ ಶುರುವಾಗಿ ಕೆಲ ಶತಮಾನಗಳು ಕಳೆದಿವೆ. ಯಂತ್ರಚಾಲಿತ ವಿಮಾನಗಳು ಆಕಾಶದಲ್ಲಿ ಹಾರುವ ಮೊದಲೇ ಬಿಸಿಗಾಳಿಯ ಬಲೂನುಗಳನ್ನು ಹಾರಿಸಿ ಅವುಗಳಲ್ಲಿ ಮನುಷ್ಯರೂ ವಿಹರಿಸಿದ ಉದಾಹರಣೆಗಳಿವೆ. ಮತ್ತೆ ಅಂತಹ ವಿಹಾರಗಳಲ್ಲಿ ಅಪಘಾತವಾಗಿ ಜೀವತೆತ್ತವರ ಪಟ್ಟಿಯೂ ಉದ್ದ ಇದೆ.
ಗಾಳಿ ಊದಿಸಿಕೊಂಡು ಜೀವಪಡೆದ ಹಗುರಾದ ನಲಿವ ತೇಲುವ ಬಣ್ಣಬಣ್ಣಗಳ ಆಯಆಕಾರಗಳ ಪುಗ್ಗೆಗಳು…. ಕೆಲವು ಪುಗ್ಗೆಗಳೊಳಗೆ ಕಾಳುಗಳನ್ನೂ ತೂರಿಸಿ ಸದ್ದು ಮಾಡಿಸಿ ಚಿಕ್ಕಮಕ್ಕಳನ್ನು ವಶೀಕರಣಗೊಳಿಸುವುದೂ ಇದೆ. ಉತ್ಕಟ ಆಸೆಯಲ್ಲಿ ಅಪ್ಪ-ಅಮ್ಮನಲ್ಲಿ ಕಾಡಿಬೇಡಿ ಕೊಂಡ ಪುಗ್ಗೆಗಳು ಮನೆಮುಟ್ಟುವ ಮೊದಲೇ ಮಕ್ಕಳ ಕೈಯಲ್ಲೇ ಒಡೆದು ಠುಸ್ ಆಗಿ ಮಹಾಅವಘಡವನ್ನು ತಂದೊಡ್ಡುವುದೂ ನಡೆಯುತ್ತದೆ.
ವಿಮಾನಗಳನ್ನು ಹಾರಿಸಲು ಕಲಿಸಿದ ವಿಜ್ಞಾನ ಭೌತಶಾಸ್ತ್ರಗಳ ನಿಯಮಗಳೇ ಬಲೂನುಗಳನ್ನು ಹಾರಿಸುವ ಏರಿಸುವ ಸಿದ್ಧಾಂತಗಳನ್ನೂ ಒದಗಿಸಿವೆ. ಮತ್ತೆ ವಿಮಾನಗಳ ಸುರಕ್ಷತೆಯ ಬಗ್ಗೆ ನಿರ್ದೇಶನಗಳಿರುವಂತೆ ಈ ಹಾರುವ ಬಲೂನುಗಳ ಬಗೆಗೂ ಹೇಗೆ ಎಲ್ಲಿ ಯಾವಾಗ ಹಾರಿಸಬಹುದು? ಎಲ್ಲಿ ಹೇಗೆಲ್ಲ ಹಾರಿಸಬಾರದು? ಎಂಬ ಬಗ್ಗೆ ಈಗ ವಿಧಿವಿಧಾನಗಳಿವೆ. ಹಾಗಾಗಿ ಈ ಕಾಲದ ಬಲೂನು ವಿಹಾರಗಳು ಹಿಂದಿಗಿಂತ ಸುರಕ್ಷಿತ ಎನ್ನಬಹುದು.
ವಿಮಾನವೊಂದಕ್ಕೆ ಇರುವ ಎಲ್ಲ ನಿಯಂತ್ರಣಗಳು ಪರ್ಯಾಯ ವ್ಯವಸ್ಥೆಗಳು ಈ ಹಾರುವ ಬಲೂನುಗಳಿಗೆ ಇಲ್ಲದಿರುವ ಕಾರಣ ಇವನ್ನು ವಿಮಾನದಷ್ಟು ಸುರಕ್ಷಿತ ಎನ್ನಲೂ ಆಗದು. ಮತ್ತೆ ಅಂದಿನ ಗಾಳಿ ಮಳೆ ಬಿಸಿಲು ಇತ್ಯಾದಿ ಹವಾಮಾನದ ಮನೋಧರ್ಮದ ಮೇಲೂ ಬಲೂನು ಹಾರಾಟ ಅವಲಂಬಿತವಾಗಿದೆ. ಹಾಗಾಗಿ ವಾತಾವರಣ ಪ್ರತಿಕೂಲವಾಗಿದ್ದರೆ ಇವುಗಳಿಗೆ ಗಾಳಿ ತುಂಬುವುದೂ ಇಲ್ಲ, ಹಾರಿಸುವುದೂ ಇಲ್ಲ.
ಒಂದು ವೇಳೆ ಅನುಕೂಲಕರ ಹವಾಮಾನ ಇರುವ ದಿನವೇ ಆದರೆ, ಬಲೂನುಗಳ ಕೆಳಗಿರುವ ಬರ್ನರ್ ಸಹಾಯದಿಂದ ಬಲೂನಿನ ಒಳಗಿನ ಗಾಳಿಯನ್ನು ಬಿಸಿ ಮಾಡುತ್ತಾರೆ, ಹೊರಗಿನ ತಣ್ಣಗಿನ ಭಾರದ ಗಾಳಿಗಿಂತ ಹಗುರಾದ ಬಿಸಿಗಾಳಿ ತುಂಬಿಕೊಂಡ ಬಲೂನುಗಳು ಮೇಲಕ್ಕೆ ಆಕಾಶಕ್ಕೆ ನೆಗೆಯುತ್ತವೆ. ನೀರಿನಲ್ಲಿ ಹಗುರವಾದ ವಸ್ತು ತೇಲುವಂತೆ, ತಣ್ಣಗಿನ ಗಾಳಿಯಲ್ಲಿ ಬಿಸಿಗಾಳಿಯ ಗೋಲ ತೇಲುತ್ತದೆ. ಇಂತಹ ಬಲೂನುಗಳ ಬುಡಕ್ಕೆ ನೇತಾಡುವ ಬುಟ್ಟಿಯಲ್ಲಿ ಟಿಕೇಟು ಪಡೆದು ಜನರೂ ಒಂದು ತಿರುಗಾಟ ಮಾಡುತ್ತಾರೆ.
ಹತ್ತೋ ಇಪ್ಪತ್ತೋ ಜನರು ಹಿಡಿಸಬಲ್ಲ ಲೋಹದ ಬುಟ್ಟಿ ಬಲೂನಿಗೆ ಜೋತುಬಿದ್ದು ಗಾಳಿಸಂಚಾರ ಮಾಡುತ್ತದೆ. ವರ್ಷಕ್ಕೊಮ್ಮೆ ಬರುವ ನಾಲ್ಕು ದಿನಗಳ ಈ ಬಲೂನು ಹಬ್ಬದ ದಿನಗಳಲ್ಲಿ ಊಹೆಗೆ ನಿಲುಕದ “ಬ್ರಿಟಿಷ್ ವೆದರ್” ಸಹಕರಿಸದೇ ನಿರಾಶೆ ಹುಟ್ಟಿಸುವುದಿದೆ. ಹಾಗಂತ ಒಮ್ಮೆ ಹಾರಿದ್ದೆ ಹೌದಾದರೆ ನೆಲದ ಮೇಲೂ ಅಲ್ಲ, ವಿಮಾನಗಳಷ್ಟು ಎತ್ತರದಲ್ಲೂ ಅಲ್ಲ ನಡುವಿನ ಅವಕಾಶದಲ್ಲಿ ಒಂದು ಸುವಿಹಾರ ನಡೆಯುತ್ತದೆ. ಬ್ರಿಸ್ಟಲಿನ ಜನವಸತಿ ಪ್ರದೇಶಗಳ ಆಗಸದಲ್ಲಿ ಹೀಗೆ ಬಲೂನುಗಳು ತೇಲುತ್ತ ಸಾಗುವಾಗ ಅಲ್ಲಲ್ಲಿನ ಮಕ್ಕಳು ಮನೆಯಿಂದ ಹೊರಬಂದು ಈ ಬಲೂನುಗಳನ್ನು ನೋಡುತ್ತಾ ನಿಲ್ಲುವುದಿದೆ. ಯಾವುದೊ ಜಾತ್ರೆಯಲ್ಲಿ ಅಪ್ಪ ಅಮ್ಮನನ್ನು ಕಾಡಿಸಿ ಪೀಡಿಸಿ ಕೊಂಡ ಪುಗ್ಗೆಗಳಿಗಿಂತ ದೊಡ್ಡದಾದ ದೂರದಲ್ಲಿರುವ ಎಷ್ಟು ಹಿಂಬಾಲಿಸಿದರೂ ಕೈಗೆ ನಿಲುಕದ ಬಿಸಿಗಾಳಿಯ ಬಲೂನುಗಳ ನೋಟ ಮಕ್ಕಳನ್ನು ಬಲೂನು ಮೇಳಕ್ಕೆ ಸೆಳೆಯುವುದಿದೆ.
ಬಲೂನುಗಳ ಸುತ್ತಲ ಎಲ್ಲ ಕಾತರಿಕೆ ಕನವರಿಕೆ ಉತ್ಸುಕತೆಗೆ ಪೂರಕವಾಗಿ ಇದೀಗ ಬಲೂನು ಮೇಳ ಶುರುವಾಗಲಿದೆ. ನಾಳೆ, ಗುರುವಾರ ಸಂಜೆಗೆ “ನೈಟ್ ಗ್ಲೋ” ಎನ್ನುವ ಸಂಪ್ರದಾಯದ ವಿಧಿ ನಡೆಯುತ್ತದೆ. ಕತ್ತಲಿನ ರಾತ್ರಿಯಲ್ಲಿ ತನ್ನ ಬುಡದ ಜ್ವಾಲೆಯಲ್ಲಿ ಪ್ರಕಾಶಿಸುವ ಬಲೂನುಗಳನ್ನು ನೋಡಲು ಕಿಕ್ಕಿರಿದು ಜನ ಸೇರುತ್ತಾರೆ. ಹಾರುವ ಬಲೂನುಗಳ ಚಂದವನ್ನು ನೋಡ ಬರುವವರು ಹಲವರಾದರೆ ಅಂಧಕಾರದಲ್ಲಿ ಬೆಳಗುವ ಬಲೂನುಗಳನ್ನು ನೋಡಿ ಹೋಗಲೆಂದೇ ಬರುವ ಪ್ರೇಕ್ಷಕರೂ ಬಹಳ ಇದ್ದಾರೆ. ಒಂದುಸಲ ಭೇಟಿ ಕೊಟ್ಟು ಇವೆಲ್ಲ ಬರಿಯ ಉತ್ಪ್ರೇಕ್ಷೆ, ಜನಜಂಗುಳಿ, ಗದ್ದಲ ಎಂದು ಮುಂದಿನ ವರ್ಷ ಆ ಕಡೆ ಹೋಗದವರೂ ಇದ್ದಾರೆ.
ಬಲೂನುಗಳ ಹಬ್ಬವನ್ನು ವರ್ಷವೂ ಕಾದು ಸುತ್ತಾಡಲು ಬರುವವರಿಗೆ ಒಮ್ಮೆಗೆ ನೂರಕ್ಕೂ ಮಿಕ್ಕಿ ಬಲೂನುಗಳು ಆಕಾಶಕ್ಕೆ ನೆಗೆಯುವುದೂ ಇನ್ನೊಂದು ಆಕರ್ಷಣೆಯಾಗಿಯೂ ಕಾಡುತ್ತದೆ. ವಿಶಾಲ ಹೂವಿನಂತಹ ಆಕಾಶದಲ್ಲಿ ಬಣ್ಣಬಣ್ಣದ ಚಿಟ್ಟೆಗಳಂತೆಯೋ, ಕೊನೆಮೊದಲಿಲ್ಲದ ಸಮುದ್ರದ ಮೇಲೆ ಗೊತ್ತುಗುರಿ ಇಲ್ಲದೆ ದಿಕ್ಕು-ದೆಸೆಗಳಿಗೆ ಹಾರುವ ಹಕ್ಕಿಗಳಂತೆಯೋ ಇವು ಕಾಣಿಸುವುದಿದೆ. ಖಾಲಿನೀಲಿ ಆಗಸವನ್ನು ಚುಕ್ಕೆಗಳಿಂದ ತುಂಬುವ ವ್ಯರ್ಥ ಸಾಹಸಕ್ಕೆ ಯಾರೋ ಮನಮಾಡಿದಂತೆ ತೋರುವುದಿದೆ.
ಬ್ರಿಸ್ಟಲ್ ಅನ್ನು ಬಲೂನು ಮೇಳಕ್ಕೋಸ್ಕರವಾಗಿಯೇ ನೆನಪಿಡುವವರು ಭೇಟಿ ಮಾಡುವವರು ಬಲೂನುಗಳು ತುಂಬುವ ಆಕಾಶವನ್ನು ಬಲೂನುಗಳು ಬೆಳಗುವ ಕತ್ತಲೆಯನ್ನು ನೋಡಲೆಂದೇ ಹೊಂಚುಹಾಕುವವರು. ಇಂತಹ ಬಲೂನು ರಸಿಕರಿಗಲ್ಲದೆ, ಬಲೂನುಗಳ ಸಂತತಿಯಲ್ಲೂ ಬ್ರಿಸ್ಟಲ್ ಚಿರಪರಿಚಿತ ಊರು. ಈ ಬಲೂನುಗಳನ್ನು ನೋಡಲು ನಾಲ್ಕು ದಿನಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಬಂದು ಹೋಗುತ್ತಾರೆ. ನೂರಾರು ಬಲೂನು ಹಾರಿಸುವ ಕಂಪೆನಿಗಳು ಇದ್ದು ಹೋಗುತ್ತಾರೆ. ಬಲೂನು ಮೇಳ ನಡೆಯುವ ನಾಲ್ಕು ದಿನಗಳು ಬ್ರಿಸ್ಟಲಿನ ಕೇಂದ್ರದಲ್ಲಿರುವ ಬೀದಿಗಳು ಬಸ್ಸುಗಳು ಗಿಜಿಗಿಜಿಯಲ್ಲಿದ್ದು ಜನಸಂದಣಿಯನ್ನು ದ್ವೇಷಿಸುವ ಕೆಲ ಆಂಗ್ಲರಲ್ಲಿ ಅಸಹನೆಯನ್ನು ಹೆಚ್ಚಿಸುವುದಿದೆ. ಇವೆಲ್ಲದರ ಗೊಡವೆ ಇಲ್ಲದ ದೇಶವಿದೇಶಗಳ ಬಗೆಬಗೆಯ ಹಾರುವ ಏರುವ ಬಲೂನುಗಳು ಇದೀಗ ಬ್ರಿಸ್ಟಲ್ ತಲುಪಿಯಾಗಿದೆ. ಬಲೂನುಗಳ ಸಮಾವೇಶದಲ್ಲಿ ನಾಳೆಯಿಂದ ಹಾರಬೇಕಲ್ಲ ಏರಬೇಕಲ್ಲ ಎಂದು ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡಿಯೆದುರು ಕುಳಿತು ತಯಾರಾಗುತ್ತಿವೆ.
ಬರೇ ನೋಡಲು ಬರುವವರು, ಹತ್ತಿ ಸುತ್ತಾಡಲು ಬರುವವರು, ಫೋಟೋ ತೆಗೆಯುವವರು, ರಾತ್ರಿಯನ್ನು ಬೆಳಗುವ ಅಥವಾ ಹಗಲಿನ ಸಮೂಹ ಹಾರಾಟದ ಘಳಿಗೆಯಲ್ಲಿ ಉತ್ತೇಜನ ನೀಡಲು ಕೇಕೆ ಹೊಡೆಯುವವರು, ವರ್ಷವರ್ಷವೂ ಬರುವವರು, ಹೊಸತಾಗಿ ಭೇಟಿ ಮಾಡುವವರು, ಪರಿಚಿತರು ಅಪರಿಚಿತರು, ಎಲ್ಲರೂ ಜೊತೆಯಾದ ಮೇಳದಲ್ಲಿ ಪ್ರದರ್ಶನ ನೀಡುವ ಮತ್ತೆ ತಮ್ಮ ಮೇಲಿರುವ ತೀವ್ರ ನಿರೀಕ್ಷೆಗಳನ್ನು ಉಳಿಸಿಕೊಳ್ಳವ ಒತ್ತಡದಲ್ಲಿ ಬಲೂನುಗಳು ಬೆವರುತ್ತಿವೆ. ಊರೂರಿನ ಹಬ್ಬಗಳ ಖಾಯಂ ಸದಸ್ಯರಾದ ಪುಗ್ಗೆ ಸಂತತಿಯ ಒಂದು ಕವಲೊ ಟಿಸಿಲೊ ಮಾರ್ಪಾಟೊ ಆದ ಬಿಸಿಗಾಳಿಯ ಬಲೂನುಗಳು ಈಗ ಕ್ಷಣಗಣನೆಯಲ್ಲಿವೆ.
(ಚಿತ್ರಕೃಪೆ : ಸ್ಟೀವ್ ವಿಲ್ಸನ್ )
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.