ಗ್ರಹಣದ ದಿನ. ಆಳುಗಳೆಲ್ಲಾ ರಜೆ ಕೋರಿದ್ದರಿಂದ ಒಪ್ಪಿದ ಸೀತಾರಾಮನಿಗೆ ಹೆಚ್ಚಿನ ಕೆಲಸವೇನಿರಲಿಲ್ಲ. ಹೊರಗೆ ಹೋದರೆ ಸೂರ್ಯನ ಕಡೆ ಕಣ್ಣಾಡಿಸದೆ ಇರಲಾಗುವುದಿಲ್ಲ. ಕಣ್ಣು ಹೋದರೆ ಈ ಮಲೆನಾಡಿನಲ್ಲಿ ಯಾವ ಕೆಲಸವೂ ನಡೆಯುವುದಿಲ್ಲ ಎಂಬ ಭಯದಿಂದ, ಅಡಿಕೆ ಆಯುತ್ತಾ ಜಗಲಿಯಲ್ಲಿ ಕೂರುವುದೇ ಒಳ್ಳೆಯದು ಎಂದು ತೀರ್ಮಾನಿಸಿದ. ಮಧ್ಯಾಹ್ನ ಗ್ರಹಣ ಬಿಡುವವರೆಗೆ ಊಟವಿಲ್ಲ ಎಂದು ಹೆಂಡತಿಯೂ ಅಮ್ಮನೂ ಹುಕುಂ ಹೊರಡಿಸಿದ್ದರಿಂದ ಹೆಚ್ಚಿನ ವ್ಯಾಜ್ಯ ತೆಗೆಯದೆ ತನ್ನ ಪಾಡಿಗೆ ತಾನು ಆಯುತ್ತ ಕುಳಿತ. ಅಮ್ಮನು ದೇವರ ಕೋಣೆಯ ಬಾಗಿಲ ಬಳಿ ಕೂತು ಒಂದಾದ ಮೇಲೊಂದರಂತೆ ನಾಮಾವಳಿ ಹೇಳುತ್ತಿದ್ದರೆ, ಸರೋಜ ಅಚಾನಕ್ಕಾಗಿ ಸಿಕ್ಕ ಬಿಡುವಿನಲ್ಲಿ ತನ್ನ ಸೈಲವಾದ ರವಿಕೆಗಳಿಗೆಲ್ಲ ಟಕ್ಸ್ ಹಾಕುತ್ತಾ, ಆಚೆ ಕೇರಿಯ ಹೆಣ್ಮಕ್ಕಳು ಕೊಟ್ಟ ರವಿಕೆ ಬಟ್ಟೆಗಳನ್ನು ಅಳತೆಗೆ ತಕ್ಕಂತೆ ಕತ್ತರಿಸುತ್ತ ಕೂತಿದ್ದಳು. ಮಕ್ಕಳು ಸಾಗರದ ಕಾಲೇಜಿನಲ್ಲಿ ಏರ್ಪಡಿಸಿದ ಗ್ರಹಣ ನೋಡುವಿಕೆಗೆ ಹೋಗಿದ್ದರು.

ಕೈ ತನ್ನ ಪಾಡಿಗೆ ತಾನು ಅಡಿಕೆ ಆಯುತ್ತಾ ಆಪಿ, ಚಾಲಿ, ಬೆಟ್ಟೆ ಅಂತೆಲ್ಲ ವಿಭಜಿಸಿ ರಾಶಿ ಮಾಡುತ್ತಿತ್ತಾದರೂ ಮನಸ್ಸಿನಲ್ಲಿ ಮುಂದಿನ ತಿಂಗಳಿನಲ್ಲಿ ಬರಲಿರುವ ಅಪ್ಪಯ್ಯನ ತಿಥಿಯ ರೂಪುರೇಷೆಗಳು ಮೂಡುತ್ತಿದ್ದವು. ಹಿರೇಮನೆಯ ದತ್ತಭಟ್ಟರೂ ಮತ್ತವರ ಅಸಿಸ್ಟೆಂಟ್ ಇಡುವಾಣಿಯ ನಾಗೇಂದ್ರ ಇಬ್ಬರನ್ನೂ ಈ ವಾರದೊಳಗೇ ಫೋನ್ ಮಾಡಿ ಬುಕ್ ಮಾಡಬೇಕು ಅಂದುಕೊಂಡ.

ಈ ಸಲ ಅಷ್ಟೇನೂ ಕೊಳೆ ಬಂದಿಲ್ಲ. ಒಳ್ಳೆಯ ಇಳುವರಿಯೇ ಬಂದಿದೆ. ಮಕ್ಕಳ ಜೊತೆಗೆ ಒಂದು ಪುಣ್ಯಕ್ಷೇತ್ರ ಯಾತ್ರೆ ಮಾಡಿಬರಬಹುದು ಎನ್ನಿಸಿತು. ಪುಣ್ಯಕ್ಷೇತ್ರವೆಂದರೆ ಮುಖ ಹಿಂಡುತ್ತಾರೆ. ಅದೆಂತದೋ ಟೀವಿಯಲ್ಲಿ ಬಡಕೊಳ್ಳುವ ವಾಂಡರ್ಲಾ ವಾಂಡರ್ಲ ನೋಡಬೇಕಂತೆ. ಸಮಾ ಸಿಟ್ಟು ಬಂದರೂ ಮಕ್ಕಳಲ್ಲವೇ ಅಂದುಕೊಂಡು ಸುಮ್ಮನಾದ. ಈಗಿನ ಮಕ್ಕಳಿಗೆ ಹೇಳಿ ಪೂರೈಸಲಾಗುವುದಿಲ್ಲ. ಹಿಂದೆ ತಾನೆಂದಾದರೂ ಸಣ್ಣಿದ್ದಾಗ ಅಪ್ಪಯ್ಯನ ಮಾತಿಗೆ ಎದುರು ನುಡಿದಿದ್ದಿದೆಯೇ? ದೊಡ್ಡವನಾಗಿ ಮನೆವಾರ್ತೆ ನೋಡುವಾಗ ಮಾತ್ರ ತನ್ನ ಮಾತೆ ನಡೆಯಿತಾದರೂ, ಆಗ ಅಪ್ಪಯ್ಯ ಶೀರ್ಣಜೀರ್ಣನಾಗಿದ್ದರಿಂದ ಮಾತ್ರ ಅದು ನಡೆದಿದ್ದು ಎಂದು ಗೊತ್ತಿದೆ.

ಹೀಗೆಲ್ಲ ಮನಸು ತನ್ನ ಜಾಡು ಹಿಡಿದು ಹೋಗುತ್ತಿರಲಾಗಿ, ಬಿಸಿಲು ಬಣ್ಣಗೆಡುತ್ತಿತ್ತು. ಎಂದಿನಂತಿದ್ದರೆ ಇಷ್ಟೊತ್ತಿಗೆ ಬಿಸಿಬಿಸಿ ನೀರು ಸುರಿದು ಸ್ನಾನವಾಗಿ, ಮಡಿಯಲ್ಲಿ ದೇವರ ತಲೆಯ ಮೇಲೆ ನಾಕು ಹೂವು ಬೀಳಿಸಿ, ನೈವೇದ್ಯವಿಟ್ಟು ಊಟದ ಮನೆಯಲ್ಲಿ ಮಣೆ ಕಿರ್ರೆನ್ನುತ್ತಿತ್ತು. ಯಾರು ಏನೇ ಹೇಳಬಹುದು, ಸರೋಜಳ ಕೈಯ ಹದವೇ ಹದ. ರುಚಿಯಾಗೇ ಮಾಡಿದ್ದರೂ ಅಮ್ಮನ ಮೇಲೆ ಕೂಗಾಡುತ್ತಿದ್ದ ಅಪ್ಪನೇ ತಣ್ಣಗೆ ಸರೋಜಳ ಅಡಿಗೆ ಕತ್ತರಿಸುತ್ತಿದ್ದುದೇ ಇದಕ್ಕೆ ಸಾಕ್ಷಿ. ಇವತ್ತೇನಡಿಗೆ ಮಾಡಿದ್ದಳೋ? ಹ್ವಾ ಇವತ್ತು ಗ್ರಾಣ ಬಿಟ್ಟ ಮೇಲೆ ಮುಂದಿನ ಕೆಲಸ ಅಲ್ದೋ.

ಸರೂ.. ನವುರಾಗಿ ಕರೆದ.
ಎಂತೂ? ..ಕಣ್ಣು ಬಟ್ಟೆಯಳತೆಯಲ್ಲೇ ಇತ್ತು. ಮಾತು ಗಂಡನೆಡೆಗೆ ಸಾಗಿತು.
“ಇವತ್ತು ಒಂದು ತೊಂಡೇ ಪಲ್ಯ, ಬಸಳೇಸಪ್ಪಿನ ಪಳದ್ಯ ಸಾಕಿತ್ತನಾ ಹೇಳಿ ಕಾಣ್ತು, ಎಂತ ಹೇಳ್ತೆ?”
“ಗೊತ್ತಾತಲ ಬಿಡಿ ಮಾರಾಯ್ರ ಖಾಯಿಶು. ಮಾಡದಾತಲ ಮತ್ತೆ. ಅಲ್ಲ ಒಂದ್ ಗ್ರಾಣ ಅಂದ್ರೆ ಮುಗ್ಯಾ ತನಕಾನೂ ಹೊಟ್ಟೆ ಕಾಯದಿಲ್ಯಲ ಹೇಳಿ,” – ಅವಳ ಮಾತು ಕಿರುನಗೆಯ ಕೊಂಕಿನ ಸಂದಲ್ಲಿ ತೂರಿತು.
ಮತ್ತೆ ತಿರುಗಿ ಉಚಾಯಿಸಿ ಮಾತಾಡಿ ರುಚಿಕಟ್ಟಾದ ಊಟ ಕಟ್ಟಾದೀತು ಎಂಬ ಹುಶಾರಿಯಲ್ಲಿ ಸೀತಾರಾಮನಿಗೆ ಅಡಿಕೆ ಆಯುವುದಾಯಿತು.

ಎಷ್ಟೇ ನವುರಾಗಿ ಮಾತುಕತೆ ನಡೆದರೂ ಕಿವಿ ಚುರುಕಾಗಿರುವ ಅಮ್ಮ ಸುಮ್ಮನಿರದೆ “ಅವರಿಗಂತೂ ತೊಂಡೇಕಾಯಿ ಪಲ್ಯ ಅಂದ್ರೆ ಮುಗತ್ತು, ರಾಶಿ ಕಾಯಿ ತುರ್ದು ಹಾಕಿದ್ರಂತೂ ಕೇಳದೇ ಬ್ಯಾಡ, ಸಂಜಿಗೆ ಮತ್ತೆ ಹೊಸದಾಗಿ ಬಾಳೆ ತುದೀಗೆ ಏನಾರ ಮಾಡಾವಾಗಿತ್ತು,” ಅಂದಾಯಿತು. “ಹುಂ ಇಷ್ಟವಾಗದೆ ಏನಾಗ್ತು, ಆರೈಕೆ ಮಾಡವು ಇದ್ರೆ ಎಂತ ಬೇಕಾರೂ ಎಷ್ಟ್ ಬೇಕಾರೂ ತಿನ್ಲಕ್ಕು ತಗಾ” ಮಾತಿನ ಬಾಣ ನಾಲಿಗೆಯ ಹೆದೆ ತೂರಿ ಹೊರಟೇ ಹೋಯಿತು. ಸರೋಜ ಕಣ್ಣು ದೊಡ್ಡಕೆ ಬಿಟ್ಟು ಹೆದರಿಸುತ್ತಿದ್ದರೂ ಸೀತಾರಾಮನ ನಂಜಿನ ನಗೆ ಬಾಡಲಿಲ್ಲ. ಅಮ್ಮನ ಶ್ಲೋಕದ ವಾಲ್ಯೂಮ್ ದೊಡ್ಡದಾಯಿತಾದರೂ, ಸ್ಪಷ್ಟತೆಯನ್ನು ನುಂಗಿಕೊಂಡಿತು.

ಭಟ್ಟರಿಗೆ ಫೋನ್ ಮಾಡಿ ಮುಂದಿನ ಬಹುಳ ಬಿದಿಗೆಗೆ ಬರುವ ಅಪ್ಪನ ತಿಥಿಗೆ ಬುಕ್ ಮಾಡಿಕೊಂಡಾಯಿತು.

ಇನ್ನು ಸ್ವಲ್ಪ ಹೊತ್ತಿನಲ್ಲಿ ಗ್ರಹಣ ಬಿಟ್ಟ ಅಂದಾಜಿಗೆ, ದೇವಸ್ಥಾನದ ದೊಡ್ಡ ಗಂಟೆ ಬಾರಿಸಿತು. ಸರೋಜ ತನ್ನ ಸ್ನಾನ ಮುಗಿಸಿ ಸೀತಾರಾಮನಿಗೆ ನೀರು ತೋಡಿಟ್ಟು ಹೊರಟಳು, ಬಿಸಿ ಬಿಸಿ ನೀರೆರೆದುಕೊಂಡ, ಬಚ್ಚಲ ಮೆಟ್ಟಿಲು ಹತ್ತಿ ಒಳಮನೆಗೆ ಬರುವಾಗ ಸ್ವಲ್ಪ ಗಡಿಬಿಡಿಯಾದಂತಾಗಿ ಮೆಟ್ಟಿಲ ಮೇಲಿನ ಒದ್ದೆಗಾಲು ಜಾರಿ, ಧೊಪ್ಪನೆ ಬಿದ್ದ. ಸೊಂಟದಿಂದ ಕುತ್ತಿಗೆಯವರೆಗೆ ಯಮಯಾತನೆಯ ಝರಿ ಚುಳ್ಳನೆ ಹರಿಯಿತು. ಕಣ್ಣು ಕತ್ತಲಿಟ್ಟಿತು. ಮೈ ಬೆವರೊಡೆಯುತ್ತಿದ್ದಂತೆ ಹೆದರಿಕೆಯಿಂದ ‘ಹೋದ್ನಲ್ರೇ ಹೋದಿ” ಎಂದು ಕೂಗು ಹಾಕಿದ. ಇದ್ದ ಎರಡು ಹೆಣ್ಣು ಜೀವಗಳು ಓಡೋಡಿ ಬಂದರು. ಒಬ್ಬಳಿಗೆ ನೈವೇದ್ಯದ ಮಡಿ, ಇನ್ನೊಬ್ಬಳಿಗೆ ಇನ್ನೂ ಗ್ರಹಣದ ಮೈಲಿಗೆ ಕಳೆದಿರಲಿಲ್ಲ. ಯಾರು ಮುಟ್ಟುವುದು ಬಿಡುವುದು ಎಂಬ ನಿರ್ಣಯಕ್ಕೆ ಹಿರಿಯಳಾದ ಭುವನೇಶ್ವರಿಯೇ ಮುಂದಾಗಿ, ಮೈಲಿಗೆ ಕೈಯಲ್ಲೇ ಮಗನ್ನ ಹಿಡಿದು ಅಲ್ಲೇ ಗೋಡೆಗೆ ಒರಗಿಸಿ ಕೂರಿಸಿದಳು. ಈಗ ಸಂಭಾಳಿಸಿಕೊಂಡ ಸರೋಜ ಮಡಿಯನ್ನು ಮೀರಿ ಗಂಡನ ಬೆವೆತ ಹಣೆಯೊರಸಿ, ಕೈಯಲ್ಲಿದ್ದ ತಂಬಿಗೆಯಿಂದ ನೀರು ಸಿಡಿಸಿ, ಬಾಯಿಗೆ ನಾಲ್ಕು ಹನಿ ತೊಟ್ಟು ತೊಟ್ಟಾಗಿ ಬಿಟ್ಟಳು. ಎಲ್ಲವನ್ನೂ ಮಿಕ್ಕು ಮೀರಿ ನೋವು ಹರಡುತ್ತಿತ್ತು. “ನಿಧಾನ ಎದ್ದು ನಿಂತಕಳ್ಳೀ ಹೆಂಗಾರೂ ಒಳಗಡೆ ಕಾಲುಮಂಚದವರಿಗೆ ಹೋಪನ” ಅಂತ ಸರೋಜ ಎಬ್ಬಿಸಲು ನೋಡಿದಳು. “ಎನ್ ಕೈಲಾಗತಿಲ್ಯೆ” ಎಂಬ ಗೊಗ್ಗರು ಮಾತು ಮಾತ್ರ ಹೊರಟಿತು ಸೀತಾರಾಮನಿಂದ.

ಹೆದ್ರಡ ಸುಮ್ನಿರು, ಆನು ಕಾಲ್ಕಡಿಗೆ, ಮೊಣಕಾಲ್ ಕೆಳ್ಗೆ ಎರಡೂ ಕೈ ಹಾಕಿ ಹಿಡ್ಕತ್ತಿ, ನೀ ಭುಜದ ಕೆಳಗಿಂದ ಎತ್ತು, ಇಲ್ಲೇ ಕಂಬಳಿ ಮೇಲೆ ಮಲಗ್ಸನ ಎಂದು ಮತ್ತೆ ಭುವನೇಶ್ವರಿ ಸೊಸೆಗೆ ಆಸರೆಯಾದಳು. ಇಬ್ರೂ ಹೇಗೋ ಆ ದೊಡ್ಡ ಆಳನ್ನು ಎತ್ತಿ ತಂದು ಅಲ್ಲೆ ಯಾವಾಗಲೂ ಕಾಲುಮಣೆಯ ಬಿಡಿಸಿಕೊಂಡೇ ಇರುತ್ತಿದ್ದ ಕಂಬಳಿಯ ಮೇಲೆ ಹೊತ್ತು ಮಲಗಿಸಿದರು. ಹಾಗೇ ಸ್ವಲ್ಪ ನೋವಿನೆಣ್ಣೆ ತಿಕ್ಕಿ, ನಿಂಬೆ ಪಾನಕ ಕುಡಿಸಿ, ಅವನಿಗೆ ಇತ್ತಲ ನೆದರು ಬಂದ ಮೇಲೆ, ಸರೋಜ ಆಚೆಮನೆಗೆ ಹೋದಳು.

ಆಚೆಮನೆಯ ಸತೀಶನ ಕಾರಿನಲ್ಲಿ ಅವರಿವರ ಸಹಾಯದಿಂದ ಕೂರಿಸಿ ಕರಕೊಂಡು ಸಾಗರದ ಆಸ್ಪತ್ರೆಗೆ ಸಾಗಿಸಿದರು. ದೊಡ್ಡಾಸ್ಪತ್ರೆ ಡಾಕ್ಟರು ಎಕ್ಸ್ ರೇ ತೆಗೆದು ನೋಡಿಸಿ, ಏನೇನೂ ತೊಂದರೆಯಿಲ್ಲ. ಫ್ರಾಕ್ಚರಿನ ಪಂಚಾತಿಕೆ ಇಲ್ಲ್ಲ. ಬರೆ ನರ ಹಿಡಿದಿರುವುದಷ್ಟೇ- ಮಸಲ್ ಸ್ಪ್ರೈನ್ ಅಂತಾರೆ ಇದಕ್ಕೆ. ಇನ್ನೊಂದೆರಡು ವಾರ ಈ ಕ್ರೇಪು ಬ್ಯಾಂಡೇಜು ಸುತ್ತಿಕೊಂಡೇ ಇರಿ, ಭಾರ ಎತ್ತಬೇಡಿ, ಹೆಚ್ಚಿಗೆ ಅಲುಗಾಟದ ಕೆಲಸ ಬೇಡ. ಈಗ ಒಂದೆರಡು ವ್ಯಾಯಾಮ ತೋರಿಸಿಕೊಡುತ್ತೇನೆ. ದಿನವೂ ಮನೆಯವರ ಸಹಾಯದಿಂದ ಅದನ್ನು ಮೂರು ನಾಕು ಸಾರ್ತಿಯಾದರೂ ಮಾಡಬೇಕು ಅಂತೆಲ್ಲ ಹೇಳಿ, ಒಂದಿಷ್ಟು ನೋವಿನ ಮಾತ್ರೆ, ಮುಲಾಮು ಎಲ್ಲ ಬರೆದುಕೊಟ್ಟರು. ಕ್ರೇಪು ಬ್ಯಾಂಡೇಜೂ ಕೂಡ. ಈಗಿನ ನೋವಿಗೆ ಒಂದು ಇಂಜಕ್ಷನ್ ಕೊಟ್ಟು ಶಮನದ ಮಾತಾಡಿದರು. ಮಲಗಿಕೊಂಡು ಕೈಕಾಲು ನುರಿಸಿ ಮಾಡುವ ನಾಲ್ಕಾರು ವ್ಯಾಯಾಮ ತೋರಿಸಿಕೊಟ್ಟರು.

ಸೀತಾರಾಮನ ಊರು ಬಾಳೆಹಳ್ಳಿ ಸಾಗರದಿಂದ ಆರು ಕಿಮೀ ಅಷ್ಟೇ. ಶರಾವತಿಯ ಹಿನ್ನೀರಿನ ಕಣಿವೆ ಕೊಳ್ಳದ ಮೇಲುಬದಿಯ ಕಾನುಮನೆಗಳಲ್ಲಿ ಅದೊಂದು. ಬಸ್ಸು ಓಡಾಟ- ಟಾರು ಇದ್ದಿದ್ದರಿಂದ ಬಾಳೆಹಳ್ಳಿ ಹೆಸರಿಗೆ ಮಾತ್ರ ಹಳ್ಳಿಯಾಗಿ ಉಳಿದಿತ್ತು. ಮಾಧ್ಯಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ, ಅಂಗನವಾಡಿ ಮತ್ತು ಒಂದಿಷ್ಟು ಆಪತ್ತಿನ ಅಂಗಡಿ ಮುಂಗಟ್ಟು, ಟೇಲರಂಗಡಿ, ಎಲ್ಲ ಇದ್ದ ಊರು ಅಂದರೇ ಹೆಚ್ಚು ಸರಿ. ಅನಗತ್ಯ ಕುಲುಕಾಟವಿಲ್ಲದೆ ಸತೀಶನ ಹುಶಾರು ಡ್ರೈವಿಂಗಿನಲ್ಲಿ ಮತ್ತೆ ಮನೆ ಸೇರಿಕೊಂಡ.  ದಾರಿಯಲ್ಲಿ ಸರೋಜನ ಸೊರಬರ ಕಡಿಮೆಯಾಗಿ ಸಮಾಧಾನದಿಂದ ಕೂತಿದ್ದಳು. ಈಗ ಹೊಟ್ಟೆ ಚುರುಗುಡುವುದು ಗೊತ್ತಾಗುತ್ತಿತ್ತು. ಮನೆಯಲ್ಲಿ ಭುವನೇಶ್ವರಿ ಅವಲಕ್ಕಿ ಕಲಸಿ ಕಾಯುತ್ತಿದ್ದಳು.

ಮರುದಿನದಿಂದ ಶೆಟ್ಟಿ ಬಿಡಾರದ ಯಶೋದಕ್ಕನಿಗೆ ಮನೆಯ ಸುತ್ತುಗೆಲಸದ ಜೊತೆಗೆ ಸೀತಾರಾಮನ ಹೊರ ಆರೈಕೆಯೂ ಸೇರಿಕೊಂಡಿತು. ಯಜಮಾನ ಮಲಗಿಬಿಟ್ಟಿದಾನೆ. ಮಕ್ಕಳು ಸ್ಕೂಲು ಕಾಲೇಜಿಗೆ ಹೋಗುವವರು. ಅತ್ತೆಗೆ ಮಡಿಮೈಲಿಗೆಯಿಂದಾಗಿ ಎಲ್ಲ ಕೆಲಸವನ್ನೂ ಪರಾಂಬರಿಸುವಂತಿಲ್ಲ. ಹಾಗಾಗಿ ತೋಟಗದ್ದೆಯ ದೇಖರೇಖೆ ಸರೋಜಳದೇ ಆದವು, ಅಡಿಗೆ ಮನೆ,ಕೊಟ್ಟಿಗೆಯೂ ಬಗಲು ಜಗ್ಗುವ ಕೆಲಸವೇ. ಇದ್ದಿದ್ದರಲ್ಲಿ ಅತ್ತೆ ಭುವನೇಶ್ವರಿ ಸೀತಾರಾಮನ ಔಷಧ ಮಾತ್ರೆಗಳ ಹೊಣೆ ವಹಿಸಿಕೊಂಡಿದ್ದಕ್ಕಾಯಿತು. ದಿನವೂ ಬೆಳಿಗ್ಗೆ ಭುವನೇಶ್ವರಿ ಮತ್ತು ಸರೋಜರ ಸಹಾಯದಿಂದ ಹೊರಗೆ ಅಂಗಳದಲ್ಲಿ ಚಿಕ್ಕದೊಂದು ಸ್ಟೂಲಿನ ಮೇಲೆ ಕೂರುವ ಹೆಗಡೇರ ಬೆನ್ನಿಗೆ ಯಶೋದೆಯು ನೋವಿನೆಣ್ಣೆ ಮತ್ತು ಡಾಕ್ಟರ ಮುಲಾಮು ಎರಡನ್ನೂ ಸವರಿ, ಬಿಸಿಲಲ್ಲಿ ಕೂರಿಸಿ ಅರ್ಧಗಂಟೆ ಬಿಟ್ಟು ಪುಟ್ಟ ಬಾಟಲಿಯಲ್ಲಿ ಬಿಸಿನೀರು ತುಂಬಿ ಕುತ್ತಿಗೆಯಿಂದ ಬೆನ್ನಿನತನಕ ನೀವಿ ನೋವು ಹೊಡೆಯುವ ಕೆಲಸ ಮಾಡಿದಳು. ಅದು ಮುಗಿಯುತ್ತಲೇ ಎರಡು ದೊಡ್ಡ ಚರಿಗೆ ಬಿಸಿನೀರು ಸುರಿಸುರಿದು ಹೆಗಡೇರಿಗೆ ಸ್ನಾನ ಮಾಡಿಸಿಯೂ ಆಯಿತು. ಅಷ್ಟೊತ್ತಿಗೆ ಸರೋಜಕ್ಕ ತರುವ ಹಾಲುಬಿಸಿನೀರು ಕುಡಿಯಲು ಯಶೋದೆ ಹೋಗುವಳು. ಈಗ ಸರೋಜ ಗಂಡನ ಮೈಯೊರಸಿ, ಹೊರಪಂಚೆ ಬದಲಿಸಿ, ಮತ್ತೆ ಅತ್ತೆಯ ಸಂಗಡ ಒಳಗೆ ಕರೆದೊಯ್ಯುವಳು. ಅಲ್ಲಿ ಮತ್ತೊಂದಿಷ್ಟು ಉಪಚಾರ ನಡೆದು, ವಾರದ ಕೊನೆಗೆ ಸೀತಾರಾಮನು ಮೊದಲಿನ ದಿನಚರಿಯ ಹಾದಿ ಕಾಣುವ ಭರವಸೆ ಬಂತು. ಸಂಜೆ ಕಾಲೇಜು ಮುಗಿಸಿ ಬಂದ ಮಗ ಸುಮಂತ ಡಾಕ್ಟರು ಕಲಿಸಿದ ವ್ಯಾಯಾಮಗಳನ್ನ ಮಾಡಿಸುವನು. ಮೊದಲ ದಿನ ಯಶೋದೆ ಬೆನ್ನಿಗೆ ಎಣ್ಣೆ ಸವರಿ, ಬಾಟಲಿಯಲ್ಲಿ ನೀವಿ, ನೀರು ಸುರಿವಾಗ ನಾಚಿಕೆಯಾದರೂ, ಆ ನಂತರದಲ್ಲಿ ಅದರ ಹಿತ ಅವನನ್ನೇ ಸೆಳೆಯತೊಡಗಿತು.

ಹೀಗೆ ಉಪಚಾರದ ಮೇಲೆ ಉಪಚಾರ ಹೊದ್ದು ಕಳಕ್ಕೆನ್ನುವ ನೋವಿನಿಂದ ಬಿಡುಗಡೆ ಪಡೆವಾಗ ಬರೊಬ್ಬರಿ ಮೂರು ವಾರವೇ ಆಯಿತೇನೋ.
ಚೇತರಿಸಿಕೊಂಡು ಮೇಲೆದ್ದ ಸೀತಾರಾಮನ ಮೋರೆ ಸ್ವಲ್ಪ ಬಚ್ಚಿದ್ದರೂ, ಆ ಮೂರು ವಾರದ ನೋವು ಮತ್ತು ಬಿಡುವು ಅವನಿಗೆ ಹೊಸದೇ ನಿಲುವು ನೀಡಿದ್ದು ಸುಳ್ಳಲ್ಲ.

ಭುವನೇಶ್ವರಿ ಮಗನನ್ನು ಕರೆದು ಅಂದಳು “ಸೀತೂ, ಹೆಚ್ಚೂ ಕಮ್ಮೀ ಹುಶಾರಾದಂಗಾತು, ಅವ್ಳ ಜೊತೀಗೆ ಹೋಗಿ ದೇವಸ್ಥಾನದಾಗೆ ಒಂದು ಹಣ್ಣು ಕಾಯಿ ಮಾಡಿಸ್ಕಂಡು ಬಾ ನೋಡನ. ಅವತ್ತು ನೀ ಬಿದ್ದ ಕೂಡಲೇ ಎತ್ತಕ್ಕಾರೆ ಆನಂತೂ ಎಮ್ಮೂರ ಗಣಪತಿಗೇ ಬೇಡಿದ್ದು. ಎನ್ನ ಮಾತು ತೆಗದು ಹಾಕಲ್ಲೆ ಅಂವ. ಪಾಕ್ಚರು ಮಾಡಿಸದೇ ಹಂಗೇ ಶಣ್ಣ ಪೆಟ್ಟು ಕೊಟ್ಟು ಕಳದ.”

ಅಲ್ಲೇ ಇದ್ದ ಮಕ್ಕಳು ನಕ್ಕರು. ಅಜ್ಜಿಯ ಇಂಗ್ಲೀಶು ಅವರಿಗೆ ಎಂದಿಗೂ ತಮಾಷೆಯೇ. ಸುಮಂತ ಅಂದ “ಹೌದೇ ಅಮ್ಮಮ್ಮಾ, ಮತ್ತೇ ನೀ ಕೇಳಿದ್ದಕ್ಕೇ ಗಣ್ಪತಿ ಡಾಕ್ಟರ ಎಕ್ಸರೇ ಒಳಗೆ ತೂರಿಕ್ಯಂಡು ‘ಪಾಕ್ಚರು’ ಮಾಡದೆ ಸ್ಪ್ರೈನ್ ಮಾಡಿದ್ದು”, ಹೈಸ್ಕೂಲಿನ ತಂಗಿ ಸ್ವಾತಿ ಕಿಸಕ್ಕೆಂದಳು. ಭುವನೇಶ್ವರಿಗೆ ಸಿಟ್ಟೇ ಬಂತು. “ಹೌದ್ರೋ ನಿಂಗಕ್ಕೆ ತಮಾಶಿ. ಅವತ್ತು ಮನೇಲಿದ್ದು ನೋಡಕ್ಕಾಗಿತ್ತು. ತೇಲುಗಣ್ಣು ಮೇಲುಗಣ್ಣಾಗಿ ಬಿದ್ದಿದ್ದು ಎನ್ ಮಗ. ಬದುಕಿಸಿಕೊಂಡ್ ಬಂದಿದ್ದು ನಿಂಗ್ಳ ಅಮ್ಮ, ಕಾದಿದ್ದು ಗಣಪತೆ. ಪ್ಯಾಟೆ ಮೇಲೆ ಗ್ರಹಣದ ದಿನ ತಿರುಗಕ್ಕೆ ಹೋದ ನಿಂಗಕ್ಕೆಂತ ಗೊತ್ತಿದ್ದು ಮಣ್ಣು. ದೊಡ್ಡವ್ರು ಅಂದ್ರೆ, ದೇವ್ರು ದಿಂಡ್ರು ಅಂದ್ರೆ ವಿನಯ ಇಲ್ದೆ ಇದ್ ಮೇಲೆ ಅದ್ಯಂತಾ ಪಾಠ ಕಲಸ್ತಾ ಆ ಮಾಷ್ಟ.”

ಮೊಮ್ಮಕ್ಕಳ ನಗು ವಿಶಾಲವಾಯಿತು. ಅಮ್ಮಮ್ಮನಿಗೆ ಸಿಟ್ಟು ಬಂದರೆ ಮಾಷ್ಟರು ಎಂಬ ಕಂಗ್ಲೀಷು ಪದದ ಬಹುವಚನ ಕಳಚಿ ಮಾಷ್ಟ ಎಂಬ ಏಕವಚನಕ್ಕೆ ತಿರುಗಿಕೊಂಡುಬಿಡುತ್ತಿತ್ತು. ಇಬ್ಬರೂ ಒಬ್ಬರಿನ್ನೊಬ್ಬರು ಚೂಟಿಕೊಂಡು ನಗಹತ್ತಿದರು. “ಅಮ್ಮ, ನಿಮ್ಮನೇವರನ್ನ ಕರಕಂಡು ಹೊರಡು ಮತ್ತೆ ಗಪ್ಪತಿಗೆ ಲೈಟಾಗಿ ಹೋಗ್ತು” ಎಂದು ಅಲ್ಲೇ ನಿಂತು ಈಕ್ಷಿಸುತ್ತಿದ್ದ ಅಮ್ಮನಿಗೆ ನಗೆ ದಾಟಿಸಿ ಹೊರಗೆ ಪರಾರಿಯಾದರು.
ಪೂಜೆ ಮುಗಿಸಿಕೊಂಡು ದೇವಸ್ಥಾನದ ಮೆಟ್ಟಲಿಳಿಯುವಾಗ “ಅವಳಿಗೊಂದು ಹೊಸ ಸೀರೇನೆ ಕೊಟ್ರೆ ಆತೇನ” ಸರೋಜ ಅಂದಳು. ಯಾರಿಗೇ ಮಾರಾಯ್ತೀ ಅಂದವನಿಗೆ ತಿರುಗಿಸಿ ಅಂದಳು. “ದಿನಾ ಗನಾಗಿ ಎಣ್ಣೆ ಹಚ್ಚಿಸಿಕೊಂಡು ಮೀಯಕ್ಕಾರೆ ಬೇಕಿತ್ತು, ಈಗ ಹುಶಾರಾದ ಮೇಲೆ ಗಣಪತಿಯೊಂದೇ ಕಾರಣ ಆದ್ನಾ? ಹೆಂಗಿದ್ರೂ ಇಂವಗೆ ಒಂದು ಕಾಯಿ ಎರಡು ಬಾಳೆಹಣ್ಣಲ್ಲಿ ಮುಗಿಸಲಕ್ಕಲ್ಲ ಅಲ್ದಾ?”

“ಅದ್ಯಂತಾ ಮಾತೇ ನಿಂದು. ಕೊಂಕು ಕೂರದೆ ಮಾತಾಡಕ್ಕೆ ಬರದಿಲ್ಯಾ? ಅವಳ ಹೆಸರು ಹೇಳಿಯೇ ಸೀರೆ ಹೇಳಿದ್ರೆ ಆನು ಬ್ಯಾಡ ಅನ್ನವ್ನಾ” ಅಂದರೂ ಅವನಿಗೇ ಮನಸ್ಸಲ್ಲಿ ಚುಳ್ಳೆಂದಿದ್ದು ಮತ್ಯಾತಕ್ಕೂ ಅಲ್ಲ. ಈ ವಿಷಯ ಮೊದಲೇ ತನಗೆ ಹೊಳೆಯದೇ ಹೋಯಿತಲ್ಲಾ ಎಂದು. “ಹೋಗಲಿ ಬಿಡು. ನೀನೆ ಪರಮಾಯಿಶಿ ಮಾಡಿ ಕೊಡು. ಬೇಕಾರೆ ಇಲ್ಲೆ  ವಿಟ್ಠಲ ಮರಾಟೆ ಅಂಗಡಿಯಲ್ಲಿರೋ ಸೀರೆ ಆರಿಸಿ ತಗ”. ಅಂತ ನಿಧಾನಕ್ಕೆ ಅಂದ. ಮತ್ತೆ ಸರೋಜ ಅದೇ ವಿಷಯವನ್ನ ಹಿಂಜಲು ಹೋಗಲಿಲ್ಲ. ಮರುದಿನವೇ ಸೀರೆ ಆರಿಸಿ, ಗಂಡನಿಗೂ ಅತ್ತೆಗೂ ತೋರಿಸಿ, ಅರಶಿನ ಕುಂಕುಮದೊಡನೆ, ಒಂದು ಸೇರಕ್ಕಿ, ಒಂದು ದೊನ್ನೆ ಬೆಲ್ಲವನ್ನೂ ಇಟ್ಟು ಯಶೋದೆಗೆ ಕೊಡುವಾಗ ಕೊಟ್ಟವಳು ಇಸಗೊಂಡವಳು ಇಬ್ಬರ ಕಣ್ಣಲ್ಲೂ ಹನಿಗೂಡಿದ್ದು ಬೇರೆ ಯಾರ ಗಮನಕ್ಕೂ ಬರಲಿಲ್ಲ. ಹೆಗ್ಡೇರ ಮನೆಯ ಹೊರಗೆಲ್ಸವೇ ಒಂದ್ರಾಶಿ ಇದ್ದರೂ ದಿನಾ ನಿಗಾವಹಿಸಿ ಸೇವೆ ಮಾಡಿದ್ದ ಮುದುಕಮ್ಮಗೆ ಇಷ್ಟೂ ಮಾಡದೆ ಹೇಗೆ, ಯಾವ ರಿಣವೋ ಎಂದು ಸರೋಜೆಯ ಕಣ್ಣು ಹನಿದಿತ್ತು. ತನ್ನ ನಿಷ್ಟೆ ಗುರುತಿಸಿದ ಹೆಗ್ಗಡತಿ ಕೊಟ್ಟ ಅಂಚಿನ ಸೀರೆ ಮತ್ತು ಮರ್ಯಾದೆ, ಹೆಗಡೇರು ಹುಶಾರಾದ್ವಲಾ ಎಂಬ ನಿರಾಳ, ಆ ನಿಸ್ಪ್ರಹ ಜೀವಿ ಯಶೋದೆಯ ಕಣ್ಣಲ್ಲಿ ಹನಿ ತರಿಸಿತ್ತು.

ಅಂದು ಸಂಜೆ ಹುಲ್ಲು-ಕರಡ ಕೊಯ್ಯುವ ಆಳುಗಳ ನಿಗಾ ನೋಡಲು ಬ್ಯಾಣಕ್ಕೆ ಹೋದವನಿಗೆ ಇದ್ದಕ್ಕಿದ್ದಂಗೆ ಒಂದು ವಿಷ್ಯ ನೆನಪಾಗಿ ಮನಸು ಮುದುಡಿತು. ಜೀರ್ಣವಾಗಿ ಹೋಗಿದ್ದ ಅಪ್ಪಯ್ಯನ ಮೈಯ ತುಂಬ ಡಾಕ್ಟರ ಸೂಜಿ ಗುರುತಿತ್ತು. ಮಲಗಿ ಮಲಗಿ ಬೆನ್ನು ನೋವಾದ ಜೀವಕ್ಕೆ, ಬೆಳಗ್ಗೆ ಬಿಸಿನೀರಲ್ಲಿ ಮೀಯಿಸಿಕೊಳ್ಳುವ ಆಸೆ. ಅಮ್ಮ ಹೆಚ್ಚೂ ಕಮ್ಮಿ ಅಪ್ಪನಷ್ಟೇ ಮುದುಕಿಯಾಗಿ ಈ ಬಗೆಯ ಸೇವೆ ಸಾಧ್ಯವಾಗುತ್ತಿರಲಿಲ್ಲ. ಅಪ್ಪ ಅವನ ಬಲಗೈಯಂತಿದ್ದ ಬಂಟ ನರಸನ ಮಗ ಗಣ್ಪನಿಗೆ ಹೇಳಿಸಿಕೊಂಡು ದಿನ ಬಿಟ್ಟು ದಿನ ಎಣ್ಣೆ ಹಚ್ಚಿಸಿಕೊಂಡು ಮೀಯ ಹೊರಡುತ್ತಿದ್ದ. ಆ ಹೊತ್ತಿಗೆ ಸೀತಾರಾಮ ಮನೆಯಲ್ಲಿದ್ದರೆ ಕೊಂಕಾಡದೆ ಬಿಡುತ್ತಿದ್ದಿಲ್ಲ. ಮುದುಕನ ಚಪಲವೆಂಬ ಉಪೇಕ್ಷಿತ ಮನಸ್ಸಿನ ಮಗನಿಗೆ ಹಿಂದೆಲ್ಲ ತನ್ನನ್ನು ಅಂಗೈಯಲ್ಲಿಟ್ಟು ಆಟವಾಡಿಸಿದ ಅಪ್ಪನನ್ನು ಮಾತಿನಲ್ಲೆ ಹದ ಹಾಕುವ ತುಡಿತ.

“ಅಮ್ಮಾ ನೋಡಿದ್ಯನೇ ಹೆಗಡೇರ ಅವತಾರಾನಾ? ಮಂಚದ ಮೇಲೆ ಕೂತು ಮಾತ್ರೆ ತಗಂಬಲೂ ತ್ರಾಣಿಲ್ಲೆ ಹೇಳಿ ಬಾಯಿಗೆ ಹಾಕಿಸ್ ಕ್ಯತ್ತ ನಿನ್ ಹತ್ರ, ಈಗ ಅಂಗಳದಾಗೆ ಕುಂತು ಮಾತಾಡಿಕ್ಯಂಡು ಎಣ್ಣೆ ಸ್ನಾನ ಮಾಡಕ್ಯಂಬಲೆ ಅಡ್ಡಿಲ್ಲೆ.”
“ದಿನಬಿಟ್ಟು ದಿನ ದೊಡ್ಡಹಬ್ಬದ ಅಭ್ಯಂಜನ ನಡೆಸೀರು ಹೆಗಡೇರು”
“ಓಹೋ ಹೆಗಡೇರ ಸ್ನಾನ ಜೋರಲೀ, ಯಾವೂರ ಪಟೇಲಿಕೆ ಕಾಯ್ತಾ ಇದ್ದೋ”

ಅಮ್ಮ ಚಿಟ್ಟೆ ತುದಿಯಲ್ಲಿ ಸುಮ್ಮನಿರು ಸೀತೂ ಎಂದರೆ ಇವನ ನಾಲಿಗೆ ತಣ್ಣಗಾಗುವುದೇ ಇಲ್ಲ. ಅವಳ ಕಣ್ಣಲ್ಲಿ ಹನಿನೀರು. ಅಪ್ಪನ ಮುಖ ಕಪ್ಪಡರಿರುತ್ತಿತ್ತು. ಮತ್ತೆ ನಾಲ್ಕು ದಿನ ಸ್ನಾನದ ಕಾರ್ಯಕ್ರಮವಿರುತ್ತಿರಲಿಲ್ಲ. ಅಥವ ಮಗನು ತೋಟದ ಕೆಲಸ ಮುಗಿಸಿ ಬರುವ ಮೊದಲೆ ಅಪ್ಪನು ಕದ್ದು ಸ್ನಾನ ಮಾಡಿರುತ್ತಿದ್ದ. ಅಪ್ಪನ ಹಿಂಜರಿತ, ಹೆದರಿಕೆ ಎಲ್ಲವೂ ಸೀತಾರಾಮನಿಗೆ ಹೆಚ್ಚಿನ ಮುದವನ್ನೂ ಶಕ್ತಿಯನ್ನೂ ನೀಡಿದಂತೆನಿಸುತ್ತಿತ್ತು.

ಮಕ್ಕಳಿಗೆ ಅಜ್ಜನಲ್ಲಿ ಪ್ರೀತಿ. ರಜೆಯ ದಿನಗಳಲ್ಲಿ ಅಜ್ಜನಿಗೆ ಎಣ್ಣೆ ಹಚ್ಚಿ ನೀವಲು ಕಾದಿರುತ್ತಿದ್ದವು. ಅವರ ಮುಂದೂ ಸೀತಾರಾಮ ಸುಮ್ಮನಿರುತ್ತಿರಲಿಲ್ಲ.

ಹಚ್ಚಿ ಹಚ್ಚಿ, ಸಮಾ ಹಚ್ಚಿ ತಿಕ್ಕಿ, ಹೆಗಡೇರು ಗದ್ದೆ ನೆಟ್ಟಿ ಮಾಡಿ, ಕೊನೆಕೊಯ್ಲು ಮಾಡವು. ಅಂತಲೋ, ಸಮಾ ಸೇವೆ ಮಾಡ್ರೋ ಹೆಗಡೇರಿಗೆ, ನಾಳೆ ಊರಹಬ್ಬಕ್ಕೆ ತೇರೆಳಿಯವ್ರೇ ಇವ್ರು ಅಂತಲೋ ಮಾತಲ್ಲೆ ಜಪ್ಪುತ್ತಿದ್ದ. ಮಕ್ಕಳು ಪೆಚ್ಚಾದರೆ, ಅಜ್ಜ ನಿಧಾನಕ್ಕೆ ಹೋಕ್ಯಳ್ಲಿ ಬಿಡಿ ಎಂದು ಮೇಲೇಳುತ್ತಿದ್ದ.

ಮೊನ್ನೆ ಮೊನ್ನೆಯವರೆಗೂ ಪೆಟ್ಟು ಬಿದ್ದು ಯಶೋದೆಯ ಕೈಯಲ್ಲಿ ಎಣ್ಣೆ ತಿಕ್ಕಿಸಿಕೊಂಡು ಮೀಯಿಸಿಕೊಳ್ಳುವವರೆಗೂ ಸ್ನಾನದ ಮುದವೇ ಗೊತ್ತಿಲ್ಲದೆ ಹೋಗಿತ್ತಲ್ಲ ತನಗೆ. ಏರುವಯಸ್ಸಿನ ತನಗೇ ಅದು ಕೊಟ್ಟ ಹಿತದ ನೂರು ಪಟ್ಟು ಹೆಚ್ಚು ಹಿತವನ್ನ ಆ ಮುದಿಜೀವ ಅನುಭವಿಸಿತ್ತೇನೋ.

ಆ ನೋವಿನ ಜಾಗದಲ್ಲಿ ಅವಳು ನೀವಿದಲ್ಲಿ ಚುಳ್ಳೆಂದರೂ ಅದರ ಮೇಲೆ ಬಿಸಿಬಿಸಿಯಾದ ನೀರು ಸುರಿಯುವಾಗ ಆದ ಹಿತವನ್ನ ಯಾವ ಮಾತು ತಾನೇ ಕಟ್ಟಿಕೊಟ್ಟೀತು. ಅನುಭವಿಸಿದ್ದೆನೇನೋ ಇದನ್ನ ಶಿಶುವಿದ್ದಾಗ ಅಮ್ಮ ನೀರೆರೆಯುವಾಗ, ಆದರೂ ಅದರ ಮುದ, ಹದ ಅನುಭವಕ್ಕೆ ಬಂದಿದ್ದೇ ಈಗ.

ಯಾವ ಔಷಧಿಯೂ ಬ್ಯಾಡ, ಡಾಕ್ಟರೂ ಬ್ಯಾಡ ಮಾತ್ರೆ ಬೇಡವೇ ಬೇಡ ಎಂದು ಹಟಹಿಡಿಯುತ್ತಿದ್ದ ಅಪ್ಪಯ್ಯ ಕೊನೆಗಾಲದಲ್ಲಿ ಬಯಸಿದ್ದ ಸುಖ ಸ್ನಾನದ್ದೊಂದೇ ಆಗಿತ್ತು ಎಂದು ಕಾಣುತ್ತದೆ. ಅಂತವನ ಜೀವ ತಿಂದೆನಲ್ಲಾ ತಾನು ಅನ್ನಿಸಿ ಖಿನ್ನನಾದ. ಆಳುಮಕ್ಕಳೆಲ್ಲ ಕರಡ ಹೊತ್ತು, ಹೆಗ್ಡೇರೆ ಕಪ್ಪಾತಲ ಮನಿಗೆ ಹೋತ್ರಿಲ್ಯ ಅಂತ ಕೇಳಿದಾಗಲೆ ಎಚ್ಚರ.

ಬ್ಯಾಣದಾಚೆ ಆವರಿಸಿದ ಹಿನ್ನೀರ ಶರಾವತಿಯ ಆಳಕ್ಕೆ ಸೂರ್ಯ ಅರ್ಧ ಮುಳುಗುತ್ತಿದ್ದ. ಜಗದ ಕೊಳಕುಗಳಿಗೆ ಕಣ್ಣಾದವನು ಸಂಜೆ ಸ್ನಾನಕ್ಕೆ ಹೊರಟ ಹಾಗೆ ತೋರಿತು. ಅಥವಾ ಜಗದ ಕೊಳೆಯ ತೊಳೆವ ನದಿಯು ಬೆಳಕ ಮಿಂದು ಶುದ್ಧವಾಯಿತೋ? ಮನೆಗೆ ಬಂದು ಸುತ್ತುಗೆಲಸ ಮುಗಿದು ದೇವರ ದೀಪ ಬೆಳಗಿ, ಮಕ್ಕಳ ಜೊತೆಗೆ ಒಂದೆರಡು ಶ್ಲೋಕ ನುಡಿದು ಮುಗಿಸುವಾಗ ಎಂದಿನಂತೆ ಕರೆಂಟು ಕೈ ಕೊಟ್ಟಿತ್ತು.

ಮಕ್ಕಳು, ಅಮ್ಮ,ಸರೋಜ ಎಲ್ಲ ಜಗಲಿಯಲ್ಲಿ ಅವರವರಿಗೆ ಆರಾಮು ಕಂಡಲ್ಲಿ ಕೂತಿದ್ದರು. ಮಗಳು ಸ್ವಾತಿ ತನ್ನ ಶಾಲೆಯ ಬಳಿ ಇತ್ತೀಚೆಗೆ ಬಂದಿರುವ ಹುಚ್ಚು ಭಿಕ್ಷುಕನ ಬಗ್ಗೆ ಮಾತಾಡುತ್ತಿದ್ದಳು. ಆ ವಯಸ್ಸಾದ ಭಿಕ್ಷುಕನಿಗೆ ಮೈಯೆಲ್ಲ ಕಜ್ಜಿಯಂತೆ. ಆಗಾಗ ಸುತ್ತಲಿನ ಮಣ್ಣು ಸುರಿದುಕೊಂಡು ಸ್ನಾನ ಮಾಡುತ್ತಿರುವೆ ಎಂದು ಹೇಳಿ ಹಲ್ಕಿರಿಯುವನಂತೆ ಹೊರತು ಬೇರ್ಯಾರ ಪಾಡಿಗೂ ಹೋಗದೆ ಯಾರಾದರೂ ಎಸೆದಿದ್ದು ತಿಂದುಕೊಂಡು ಬಿದ್ದಿರುವನಂತೆ. ಸರೋಜ ಭಯದಿಂದ ಹಾಂಗೆಲ್ಲ ಭಿಕ್ಷುಕರು ಹುಚ್ಚರ ಹತ್ತಿರ ಹೋಗಡ ಮಗಳೆ ಎಂದು ನಿಗಾ ಮಾಡಿದಳು.

ಅಷ್ಟರಲ್ಲಿ ಅಮ್ಮ ನೆನಪಿಸಿದಳು, ಸೀತೂ ತಿಥಿ ಇನ್ನು ವಾರ ಇದ್ದಲೋ ಎಲ್ಲ ತಯಾರಿ ಮಾಡ್ತಾ ಇದ್ಯ ಹೆಂಗೆ.
ಈಗ ಸೀತಾರಾಮನ ನಿರ್ಧಾರ ಗಟ್ಟಿಯಾಗಿತ್ತು. ಹೂಂ ಮಾಡಿದ್ನೇ ಅಂದ ಗಂಭೀರನಾಗಿ.
ಬಿದಿಗೆಯ ಬೆಳಿಗ್ಗೆಯ ಇಬ್ಬನಿ ಆರುವುದರೊಳಗೆ ದತ್ತಭಟ್ಟರೂ ಮತ್ತವರ ಅಸಿಸ್ಟೆಂಟ ನಾಗೇಂದ್ರ ಇಬ್ಬರೂ ಬಜಾಜ್ ಎಂ ೮೦ಯ ಮೇಲೆ ಡಬ್ಬಲ್ ರೈಡು ಮತ್ತು ಸ್ಪೀಡುಗಳಲ್ಲಿ ಬಂದಿಳಿದಾಯಿತು. ಸೀತಾರಾಮನ್ನ ಹುಡುಕಿದರೆ ಅವನೆಲ್ಲಿ? ಮನೆಮಂದಿ ಆತಂಕಗೊಂಡರು.

ಅಷ್ಟರಲ್ಲಿ ಮೋಟರಿನ ದನಿ ಕೇಳಿತು. ನೋಡಿದರೆ ಸೀತಾರಾಮ ಆಟೋದಿಂದ ಇಳಿಯುತ್ತಿದ್ದಾನೆ, ಜೊತೆಗೆ ಕಜ್ಜಿಮೈಯ ಭಿಕ್ಷುಕ.
“ರಾಮರಾಮ ನಿಂಗಕ್ಕೆ ಏನು ಬಂತು” ಎಂದು ಕೇಳುವ ಸರೋಜಳೆಡೆಗೆ ತೀಕ್ಷ್ಣ ನೋಟದಿಂದಲೇ ಉತ್ತರವಿಟ್ಟ. ಮೂಗಿನ ಮೇಲೆ ಬಂದ ಕನ್ನಡಕವನ್ನ ಹಣೆಗೆ ಎತ್ತರಿಸಿ ಕಣ್ಣು ಬಾಯಿ ಎರಡೂ ಬಿಟ್ಟುಕೊಂಡು ದತ್ತಭಟ್ಟರು “ತಿಥೀ ದಿನ ಇದೆಂತದಾ ತಮಾ ಮಳ್ ವ್ಯಾಷ” ಎಂದರು.
“ತಿಥಿಯೆಂದರೆ ಹೋದ ಹಿರಿಯರಿಗೆ ಸಲ್ಲುವ ಗೌರವ, ಅವರ ಪ್ರೀತಿಯದನ್ನ ಸಲ್ಲಿಸುವ ಹೆಳೆ, ಉಳಿದ ಕಿರಿಯರು ನೆನಸಿಕೊಳ್ಳುವ ಹೊತ್ತು ಅಲ್ದನಾ ಭಟ್ರೆ? ಎನ್ನ ಅಪ್ಪಯ್ಯಂಗೆ ಕೊನಿಕೊನಿಗೆ ಸ್ನಾನವೆಂದರೆ ಜೀವ. ಅದಕ್ಕೆ ತಿಳಿಯದೆ ಅಹಂಕಾರದಿಂದ ಕುತ್ತು ತಂದವನೇ ಆನು. ಈಗ ಬರೇ ವಡೆ, ಪಾಯಸ ನೈವೇದ್ಯ ಇಟ್ಟು ಕೈಮುಗದ್ರೆ ಅವನಿಗೆ ಸಲ್ಲುತ್ತದೆಯೇ ಅದು ಎಂಬುದೇ ಕಾಣ್ತಾ ಇದ್ದು ಎನಗೆ. ನಿಂಗ ದೊಡ್ದವರು ಪುರೋಹಿತರು ಇದ್ದಿ- ಶಾಸ್ತ್ರಪ್ರಕಾರ ಅಳಿದ ಹಿರಿಯರಿಗೆ ಮನ್ನಣೆ ತೀರ್ಸಾಕೆ. ನಿಂಗಳ ಡ್ಯೂಟಿ ನೀವು ಮಾಡಿ. ನಿಲ್ಲಿಸಿದರೆ ಅಮ್ಮನ ಕಣ್ಣಲ್ಲಿ ನೀರು ಹಾಕಿಸಿದ ಹಾಂಗಾಗ್ತು.

ಆನು ಮಾತ್ರ ಎನ್ನ ಮನಸಿಗೊಪ್ಪಿದ ಹಾಂಗೆ ಅಪ್ಪನ ನೆನಸಿಕಂಡು ಈ ಅಜ್ಜಯ್ಯಗೆ ಎಣ್ಣೆ ಸ್ನಾನಾ ಮಾಡಿಸಿ ಎನ್ನ ಋಣ ಸಂದಾಯ ಮಾಡತಿ.

“ನೀವು ಮಾಡುವ ಕರ್ಮದ ಸಾಮಾನು ಸರಂಜಾಮು ಎಲ್ಲದ್ನೂ ಒಳಗೆ ಮಡೀಲೆ ಅನು ಮಾಡಿಟ್ಟಿದ್ದಿ. ಸರೋಜ ಮಡಿಲಿ ನೈವೇದ್ಯಕ್ಕೆ ಅಣಿಮಾಡ್ತಲೆ ಇದ್ದು. ಆಚೆಮನೆ ತಮ್ಮಯ್ಯ ಕರ್ಮಕ್ಕೆ ಕೂರಲೆ ಒಪಕ್ಯಂಡಿದ್ದ. ಇನ್ನೇನ್ ಬರ್ತ. ನಿಮ್ಮ ಶಾಸ್ತ್ರ ಅಲ್ಲಿ ನಡೀಲಿ” ಎಂದು ಒಳ ಮನೆಯ ಭವಂತಿಯನ್ನು ತೋರಿಸಿದ.

ಅಂಗಳದಲ್ಲಿ ಅಡಿಕೆ ಚಪ್ಪರದಡಿಗೆ ಬಿಸಿಲು ರಂಗೋಲಿ ಹರಡಿತ್ತು. “ಇದು ಈ ಶಾಸ್ತ್ರ ಇಲ್ಲಿ ನಡೀಲಿ” ಅಂತೊಂದು ಮಾತು ಅಂದ ಹಾಗೆ ಅನ್ನಿಸಿದರೂ ಪೂರ್ತಿ ಹೊರಗೆ ಬರಲಿಲ್ಲ. ಒಳಗೇ ಉಳಿಯಿತು. ಮಾತಾಡುತ್ತ ಆಡುತ್ತಲೇ ಸೀತಾರಾಮ ಭಿಕ್ಷುಕನನ್ನ ಅಂಗಳದಲ್ಲಿ ಯಾವಾಗಲೋ ತಂದಿಟ್ಟಿದ್ದ ಸ್ಟೂಲಿನ ಮೇಲೆ ಕೂರಿಸಿದ. “ಅಮ್ಮ ಒಂದು ಲೋಟ ಕಾಫಿ ಕೊಡ್ತ್ಯಾ ಈ ಅಜ್ಜಯ್ಯಗೆ.” ಅಮ್ಮನ್ನ ಕೇಳಿದ. ಭುವನೇಶ್ವರಿ ಸುಮ್ಮಗೆ ಅಂಗಳದ ಬಿಸಿಲುನೆರಳ ರಂಗೋಲಿಯಲ್ಲಿ ಕಣ್ಣು ನೆಟ್ಟಿದ್ದಳು. ಅಜ್ಜಿಯ ಗೊಂದಲ ನೋಡಿದ ಸ್ವಾತಿ ಒಳಗೋಡಿ ಕಾಫಿ ತಂದಳು.

ದತ್ತಭಟ್ಟರಂತ ದತ್ತಭಟ್ಟರೇ ಮಾತು ಮರೆತರು. “ಹಾಂ ತಮಾ ಅಡ್ಡಿಲ್ಯೋ ನೀನು” ಎನ್ನುವುದಷ್ಟರ ಹೊರತಾಗಿ ಬೇರೆ ಏನೂ ಹೊಳೆಯಲಿಲ್ಲವರಿಗೆ. ಕೇಳಿದವರು ಏನೆಂದುಕೊಂಡಾರು ಅನ್ನಿಸಿತು ಅವರಿಗೆ, ಆದರೂ ಸೀತಾರಾಮ ಮಾಡಿದ್ದೆ ಸರಿ ಎನ್ನಿಸಿತು ಅವರ ಪಕ್ವ ಜೀವಕ್ಕೆ. ಅವರೂ ಮುಳುಗಡೆಯ ಮೂಲೆ ಊರುಗಳಿಂದ ಹಿಡಿದು ಬೆಂಗಳೂರಿನ ತುದಿಯವರೆಗಿನ ಹವ್ಯಕ ಕುಟುಂಬಗಳಿಗೆ ಕಾರ್ಯ- ಕರ್ಮ ಮಾಡಿಸಿದವರು; ಇದ್ದವರ ನಶೀಬದ ಮೇಲೆ ನಡೆಯುವ ಜಗದ ಪರಿಯ ಕಂಡವರು, ಮತ್ತು ಯಾವ ಕಾಲದಲ್ಲೂ ನಿರ್ಮಲ ಮನಸ್ಸಿನ ಸತ್ಯಕ್ಕೆ ಜಯವೆಂದು ನಂಬಿ ಬೆಳೆದವರು. ಮಡಿಗಿಂತ ಮಾನವತೆ ಒಂದು ಹೆಜ್ಜೆ ಮೇಲು ಎಂದು ಅವರ ಏರಿಳಿತದ ಜೀವನವೇ ಅವರಿಗೆ ಕಲಿಸಿತ್ತು. ಕರ್ಮಕ್ಕೆ ಚ್ಯುತಿ ತರದೆ, ತನ್ನ ಮನಸ್ಸಿಗೂ ಕೊರೆಯಾಗದೆ ಅಣಿಮಾಡಿಕೊಂಡವನ ಬಗ್ಗೆ ತುಸು ಮೆಚ್ಚುಗೆಯೇ ಹುಟ್ಟಿತೆಂದರೂ ಸರಿಯೆ.

ಅಷ್ಟರಲ್ಲಿ ಸೀತಾರಾಮ ಎಣ್ಣೆಯ ಬಟ್ಟಲು ಹಿಡಿದು ಬಂದಾಗಿತ್ತು. ಹಿಂದಿನ ದಿನವೇ ತಂದಿಟ್ಟುಕೊಂಡಿದ್ದ ಹೊಸ ಮಡಿವಸ್ತ್ರಗಳನ್ನ ಅಲ್ಲೆ ಬದಿಯಲ್ಲಿ ನ್ಯಾಲೆಯ ಮೇಲೆ ಇಡಿಸಿದ್ದ. ಯಶೋದೆಗೆ ಎಣ್ಣೆ ಹಚ್ಚಿ ಮುಗಿಯುತ್ತಲೂ ಎರಡು ದೊಡ್ಡ ಚರಿಗೆ ನೀರು ತಂದು ಸುರಿಯಲು ಹೇಳಿಯಾಯಿತು. ಮಗ ಸುಮಂತ ಹೊಸ ಸಂತೂರ್ ಸೋಪಿನ ಕವರು ತೆಗೆಯುತ್ತ ನಗುತ್ತ ಬಂದ.

ಪಿಂಡಪ್ರದಾನವಾಗಿ ಒಳಗೆ ಸರೋಜ ಬ್ರಾಹ್ಮಣತ್ರಯರಿಗೆ ಬಡಿಸುತ್ತಿದ್ದರೆ, ಇತ್ತ ಸೀತಾರಾಮ ಅಜ್ಜಯ್ಯಗೆ ಮಡಿಯುಡಿಸಿ, ತಾನೂ ಮಿಂದು ಬಂದು ತನ್ನ ಕೈಯಾರೆ ಬಡಿಸುತ್ತಿದ್ದ. ಒಳ್ಳೆಯ ಸ್ನಾನದಿಂದ ಅಜ್ಜಗೆ ನಿದ್ದೆ ಬರುವಂತಾಗಿದ್ದರೂ ರುಚಿಯಾದ ಊಟ ಮೆಲ್ಲುತ್ತಾ ಪ್ರಸನ್ನನಾಗಿ ಕಣ್ಣ ಅಂಚಲ್ಲಿ ನಗು ಹೊಳೆಯುತ್ತಿತ್ತು.

ಸೀತಾರಾಮನ ಕಣ್ಣಂಚೂ ಹೊಳೆಯಿತು, ಹನಿಗಳ ಪ್ರತಿಫಲನದಲ್ಲಿ.