ಜೊನಿನಾಸ್ ಅವರ ತಲೆಮಾರಿನವರಿಗೆ ಮುಖವಾಡಗಳೊಂದಿಗೆ ಆಟವಾಡುವುದು ಒಂದು ತರಹದ ಜೀವನಶೈಲಿಯಾಗಿತ್ತು. ಆಗ ಚಾಲ್ತಿಯಲ್ಲಿದ್ದ ಬೂದು ಬಣ್ಣದ ಉಡುಪುಗಳ ವ್ಯತಿರಿಕ್ತವಾಗಿ ಇವರು ಹಿಪ್ಪಿ ಮತ್ತು ಷೋಕಿಯ ಉಡುಪುಗಳಲ್ಲಿ ಸಾಂಕೇತಿಕ ಪ್ರಾಮುಖ್ಯತೆಯನ್ನು ಕಂಡರು. ಆಗಿನ ವ್ಯವಸ್ಥೆಯೊಳಗೆ ತಮ್ಮದೇ ಆದ ಸ್ವಾಯತ್ತ ಜಗತ್ತನ್ನು ಸೃಷ್ಟಿಸಲು ಪ್ರಯತ್ನಿಸಿದ ಪೀಳಿಗೆಯಿದು. ಮನುಷ್ಯನ ಸ್ವತಂತ್ರ ಆಂತರಿಕ ಜೀವನವು ಜೊನಿನಾಸ್-ರ ಕಾವ್ಯದ ಪ್ರಮುಖ ನೈತಿಕ ಗುಣಗಳಲ್ಲಿ ಒಂದಾಗಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ಅಂಟನಾಸ್ ಎ. ಜೊನಿನಾಸ್ (Antanas A. Jonynas) ಅವರ ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ
1953ರಲ್ಲಿ ಜನಿಸಿದ ಅಂಟನಾಸ್ ಎ. ಜೊನಿನಾಸ್ ಅವರು ಲಿಥುವೇನಿಯನ್ ಸಾಹಿತ್ಯದ ಪ್ರಸಿದ್ಧ ಕವಿಗಳಲ್ಲಿ ಒಬ್ಬರು. ವಿಲ್ನಿಯಸ್ ವಿಶ್ವವಿದ್ಯಾಲಯದಲ್ಲಿ ಲಿಥುವೇನಿಯನ್ ಭಾಷಾಶಾಸ್ತ್ರದಲ್ಲಿ ಪದವಿ ಪಡೆದ ಜೊನಿನಾಸ್‌ರು, 1976 ಮತ್ತು 1993-ರ ಮಧ್ಯೆ ‘ವಾಗಾ’ ಪ್ರಕಾಶನದಲ್ಲಿ ಸಂಪಾದಕರಾಗಿ ಕೆಲಸ ಮಾಡಿದರು. 1993-1995-ರ ಅವಧಿಯಲ್ಲಿ ಬಾಲ್ಟಿಕ್ ಟಿ.ವಿ.-ಯ (ವಿಲ್ನಿಯಸ್ ಕೇಂದ್ರ) ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾಗಿದ್ದರು. 1995 ರಿಂದ ಸ್ವತಂತ್ರ ಭಾಷಾಂತರಕಾರರಾಗಿದ್ದಾರೆ. ಅವರ ಮೊದಲ ಬರಹಗಳು 1973 ರಲ್ಲಿ ಪ್ರಕಟವಾಯಿತು. 1977 ರಿಂದ ತಮ್ಮ ಹಲವಾರು ಕವನ ಸಂಕಲನಗಳು, ಮಕ್ಕಳ ಕವನಗಳು, ವಿಡಂಬನೆಗಳು ಮತ್ತು ವಿಮರ್ಶಾತ್ಮಕ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಜೊನಿನಾಸ್‌ರ ಕೃತಿಗಳನ್ನು ಇಂಗ್ಲಿಷ್, ಜರ್ಮನ್, ಫ್ರೆಂಚ್, ರಷ್ಯನ್, ಸ್ವೀಡಿಷ್, ನಾರ್ವೇಜಿಯನ್, ಪೋಲಿಷ್, ಸ್ಲೋವೇನಿಯನ್, ಎಸ್ಟೋನಿಯನ್ ಹಾಗೂ ಲ್ಯಾಟ್ವಿಯನ್ ಭಾಷೆಗಳಿಗೆ ಅನುವಾದಿಸಲಾಗಿದೆ.
ಜೊನಿನಾಸ್ ಅವರು ಸ್ವತಃ ರಷ್ಯನ್, ಲ್ಯಾಟ್ವಿಯನ್ ಮತ್ತು ಜರ್ಮನ್ ಭಾಷೆಗಳಿಂದ, ಹೆಚ್ಚಾಗಿ ಕವನಗಳನ್ನು, ಲಿಥುವೇನಿಯನ್ ಭಾಷೆಗೆ ಅನುವಾದಿಸುತ್ತಾರೆ. ಅವರ ಅನುವಾದಿತ ಕೃತಿಗಳಲ್ಲಿ ಖ್ಯಾತ ಜರ್ಮನ್ ಸಾಹಿತಿ ಯೋಹಾನ್ ವೋಲ್ಫ್‌ಗಾಂಗ್ ಫಾನ್ ಗೂಠ (Johann Wolfgang von Goethe) ಅವರ “ಫೌಸ್ಟ್” (Faust) ಪ್ರಸಿದ್ಧ ಕೃತಿಯಾಗಿದೆ.
ಜೊನಿನಾಸ್ ಅವರು ತಮ್ಮದೇ ನಿಯಮಗಳೊಂದಿಗೆ ಪ್ರತ್ಯೇಕವಾದ, ಅನನ್ಯವಾದ ಜಗತ್ತನ್ನು ರಚಿಸಲು ತಮ್ಮ ಕಾವ್ಯವನ್ನು ಬಳಸುತ್ತಾರೆ ಮತ್ತು ಅವರ ಕಾವ್ಯದಲ್ಲಿ ಹೆಚ್ಚು ಅನ್ಯೋನ್ಯತೆ ಇದೆ, ಏಕಾಂತತೆ ಇದೆ, ಸೂಕ್ಷ್ಮ ವ್ಯಂಗ್ಯವಿದೆ. ಇವೆಲ್ಲರ ತುಲನೆಯಲ್ಲಿ ನೊಡಿದರೆ ಕೋಪದ ಅಂಶ ಕಡಿಮೆಯೆ ಎಂದು ಹೇಳಬೇಕು:
ನಾನು ಒಂದು ದೊಡ್ಡ ಉದ್ಯಾನವನ್ನು ರಚಿಸಿದೆ.
ಹಕ್ಕಿಯೊಂದು ಸುಂಟರಗಾಳಿಯಲ್ಲಿ ಹಾರಿಬಂತು.
[…] ನಾನು ಕೈ ಚಾಚಿದೆ,
ಹಕ್ಕಿ ಅದರ ಮೇಲೆ ಬಂದು ಇಳಿಯಿತು.
ನಾನು ಉದ್ಯಾನದ ಮಧ್ಯದಲ್ಲಿ ನಿಂತಿರುವೆ,
ಏನು ಮಾಡಬೇಕೆಂದು ತಿಳಿದಿಲ್ಲ.
ಜೊನಿನಾಸ್ ಅವರನ್ನು ಅನೇಕ ವೇಳೆ ಒಬ್ಬ ಭಾವುಕ ಕವಿ ಎಂದು ವರ್ಣಿಸಲಾಗಿದೆ, ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಅವರ ಕವಿತೆಗಳಲ್ಲಿ ಭಾವನಾತ್ಮಕತೆಯು ವ್ಯಂಗ್ಯದೊಂದಿಗೆ ಕಾಣಿಸಿಕೊಳ್ಳುತ್ತದೆ, ಹಲವು ಬಾರಿ ಒಂದು ರೀತಿಯ ಮುಖವಾಡವಾಗಿ, ಕೆಲವೊಮ್ಮೆ ಮುಖವಾಡವಿಲ್ಲದೆಯೂ.
20ನೇ ಶತಮಾನದ ಆಧುನಿಕ ಕಾವ್ಯದಲ್ಲಿ ಬೆಳಕಿಗೆ ಬಂದ ವಿಘಟನೆಯ ಪರಿಣಾಮ, ಅಂತರತೆ, ಮಧ್ಯಸ್ಥಿಕೆಯ ವಿವಿಧ ಹಂತಗಳಂತಹ ವಿಷಯಗಳನ್ನು ಜೊನಿನಾಸ್ ಅವರು ಪ್ರೀತಿಯ ಭಾವಗೀತೆಯಾಗಿ ಪರಿಚಯಿಸುತ್ತಾರೆ. ಅವರ ಕಾವ್ಯವು ನಿಷ್ಕಪಟವಾದ ಪ್ರಾಮಾಣಿಕತೆ ಮತ್ತು ಸಾಹಿತ್ಯಿಕ ಸೌಂದರ್ಯೀಕರಣದ ನಡುವಿನ ಸಮತೋಲನವನ್ನು ಕಾಪಾಡುತ್ತದೆ.
ಜೊನಿನಾಸ್ ಅವರ ತಲೆಮಾರಿನವರಿಗೆ ಮುಖವಾಡಗಳೊಂದಿಗೆ ಆಟವಾಡುವುದು ಒಂದು ತರಹದ ಜೀವನಶೈಲಿಯಾಗಿತ್ತು. ಆಗ ಚಾಲ್ತಿಯಲ್ಲಿದ್ದ ಬೂದು ಬಣ್ಣದ ಉಡುಪುಗಳ ವ್ಯತಿರಿಕ್ತವಾಗಿ ಇವರು ಹಿಪ್ಪಿ ಮತ್ತು ಷೋಕಿಯ ಉಡುಪುಗಳಲ್ಲಿ ಸಾಂಕೇತಿಕ ಪ್ರಾಮುಖ್ಯತೆಯನ್ನು ಕಂಡರು. ಆಗಿನ ವ್ಯವಸ್ಥೆಯೊಳಗೆ ತಮ್ಮದೇ ಆದ ಸ್ವಾಯತ್ತ ಜಗತ್ತನ್ನು ಸೃಷ್ಟಿಸಲು ಪ್ರಯತ್ನಿಸಿದ ಪೀಳಿಗೆಯಿದು. ಮನುಷ್ಯನ ಸ್ವತಂತ್ರ ಆಂತರಿಕ ಜೀವನವು ಜೊನಿನಾಸ್-ರ ಕಾವ್ಯದ ಪ್ರಮುಖ ನೈತಿಕ ಗುಣಗಳಲ್ಲಿ ಒಂದಾಗಿದೆ:
ಮತ್ತೆ ಅವಿವೇಕತೆ ಗೆದ್ದಾಗ
ನಾನು ದಂಗೆಯೇಳಲ್ಲ,
ನಾನು ಬರೆಯುತ್ತಲಿರುತ್ತೇನೆ,
ಮನುಷ್ಯ ಜೀವನವೊಂದೇ
ಸದ್ಗುಣ,
ನಾನು ಬೇರೆ ಏನನ್ನೂ ಕೇಳಲ್ಲ.
ಅನೇಕರು ಅವರ ಸಾಹಿತ್ಯಕಾರ್ಯವನ್ನು ಬೀಟ್ನಿಕ್‌ಗಳ (Beatnik) ಕಾವ್ಯಕ್ಕೆ ಹೋಲಿಸಿದ್ದಾರೆ, ಆದರೆ ಅವರು ಬೀಟ್ನಿಕ್ ಕವಿಗಳಿಗಿಂತ ಹೆಚ್ಚು ವ್ಯಕ್ತಿವಾದಿ, ಹಾಗೂ ಸಾಮಾಜಿಕ ಕಾತರಗಳಿಗಿಂತ ಆಂತರಿಕ ಉಪಸ್ಥಿತಿಗಳು ಮತ್ತು ವ್ಯಕ್ತಿಯ ಕಲಕುವಿಕೆಗಳ ಬಗ್ಗೆ ಕಾಳಜಿ ತೋರುತ್ತಾರೆ. ಇವರ ಕಾವ್ಯದಲ್ಲಿ ಕಂಡುಬರುವ ಹಂಬಲ, ಅನುಮಾನ ಮತ್ತು ಹಿಂಜರಿಕೆಗಳು ಕಳೆದುಹೋದ ಪೀಳಿಗೆಯೆಡೆಗೆ ಗಮನಹರಿಸುತ್ತದೆಯೆಂದು ವಿಮರ್ಶಕರು ನಂಬುತ್ತಾರೆ. ಅವರ ಕಾವ್ಯವನ್ನು ವಿವರಿಸುವಾಗ, ಹೆಚ್ಚಿನ ವಿಮರ್ಶಕರು ಸಂಗೀತ ರೂಪಕಗಳನ್ನು ಬಳಸುತ್ತಾರೆ ಮತ್ತು ಜಾಝ್ ಮತ್ತು ಬ್ಲೂಸ್ (Jazz and Blues) ಅನ್ನು ಹೆಚ್ಚಾಗಿ ಉಲ್ಲೇಖಿಸುತ್ತಾರೆ, ಉದಾಹರಣೆಗೆ, ಕವನಗಳ ಚಲನೆ ಕ್ರಿಯಾತ್ಮಕವಾಗಿದೆ, ಪದಗುಚ್ಛಗಳು ಸಂಗೀತಮಯವಾಗಿವೆ, ಆಗಾಗ್ಗೆ ಪುನರಾವರ್ತನೆ, ಲಯವನ್ನು ಮುರಿಯುವುದು ಮತ್ತು ಇಳಿಯುವ ಸ್ವರಗಳನ್ನು ಒಳಗೊಂಡಿರುತ್ತವೆ. ಈ ತರಹದ ಕವಿತೆಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು “ದಿ ಬ್ಲೂಸ್ ಆಫ್ ದಿ ಎಂಪ್ಟಿ ಹೋಮ್” (The Blues of the Empty Home).
ಜೊನಿನಾಸ್ ಅವರ 2011-ರಲ್ಲಿ ಪ್ರಕಟವಾದ ಕವನ ಸಂಗ್ರಹ, “ಕಂಬರೀಸ್”-ನಲ್ಲಿ (The Room) ಹೆಚ್ಚು ಶಾಂತತೆಯಿದೆ ಮತ್ತು ಧ್ವನಿಯಲ್ಲಿ ನಾಟಕೀಯತೆ ಕಡಿಮೆಯಿದೆ. ಕವಿತೆಗಳಲ್ಲಿ ವಿಷಣ್ಣತೆಯಿಲ್ಲ, ಬದಲಾಗಿ, ಸ್ಪಷ್ಟವಾದ ನಿಶ್ಚಲತೆಯಿದೆ. ಸಂಗ್ರಹದ ಹೆಸರೇ ಒಂದು ನಿರ್ದಿಷ್ಟ ಏಕಾಂತತೆಯ ಗುಣವನ್ನು ಸೂಚಿಸುತ್ತದೆ, ಆಂತರಿಕತೆಗೆ ಮರಳಿಹೋಗುವುದು ಮತ್ತು ವರ್ತಮಾನದ ಮೇಲೆ ನೆನಪಿನ ಮೇಲ್ಮೆಯನ್ನೂ ಸೂಚಿಸುತ್ತದೆ.
ಜೊನಿನಾಸ್ ಒಬ್ಬ ತತ್ವಜ್ಞಾನಿ ಕವಿಯಾಗಿರಲಿಲ್ಲ – ಅವರು ಜಾಝ್ ಅನ್ನು ರಚಿಸಿದ ಕವಿ. ಅವರ ಪದ್ಯವು ಅಂತಃಕರಣಕ್ಕೆ ಶರಣಾಯಿತು, ಯಾವುದೇ ಪೂರ್ವಕಲ್ಪಿತ ಚಿಂತನೆಗೆ ಅಲ್ಲ. ಸಂದರ್ಶನವೊಂದರಲ್ಲಿ ಜೋನಿನಾಸ್ ಒಪ್ಪಿಕೊಂಡರು:
“ಒಟ್ಟಾರೆಯಾಗಿ, ನಾನು ಬಹುಶಃ ತಾತ್ವಿಕ ವರ್ಗಗಳಲ್ಲಿ ಯೋಚಿಸುವ ಜನರಲ್ಲಿ ಒಬ್ಬನಲ್ಲ, ಆದರೆ ವಿಮರ್ಶಕರು ಇದನ್ನು ಸಾಮಾನ್ಯವಾಗಿ ಬೇರೆ ರೀತಿಯಲ್ಲಿ ಗ್ರಹಿಸುತ್ತಾರೆ.”
1978 ರಲ್ಲಿ ಅವರ ಚೊಚ್ಚಲ ಕವನ ಸಂಕಲನಕ್ಕಾಗಿ ಜೊನಿನಾಸ್ ‘ಗೆಲೆ’ ಪ್ರಶಸ್ತಿಯನ್ನು (Gėlė Prize) ಪಡೆದರು. 1984-ರಲ್ಲಿ ‘ಅತ್ಯುತ್ತಮ ಯುವ ಲೇಖಕ ಸಾಹಿತ್ಯ ಪ್ರಶಸ್ತಿ’ ಹಾಗೂ ವರ್ಷದ ಅತ್ಯುತ್ತಮ ಪುಸ್ತಕಕ್ಕಾಗಿ ಬರಹಗಾರರ ಒಕ್ಕೂಟದ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದರು. ಅವರ ಕವನ ಸಂಕಲನ ‘ನೈಟ್ ಟ್ರೇನ್’-ನ್ನು (Night Train) 1993 ರಲ್ಲಿ ಲಿಥುವೇನಿಯನ್ ರಾಜ್ಯ ಪ್ರಶಸ್ತಿಗೆ ನೇಮಿಸಲಾಯಿತು. ಅವರು ಪಡೆದ ಇತರ ಪ್ರಶಸ್ತಿಗಳಲ್ಲಿ, ‘ವಾಟರ್‌ಫಾಲ್ ಅಂಡರ್ ದಿ ಐಸ್’ (Waterfall Under the Ice) ಪ್ರೇಮ ಕವನಗಳ ಸಂಕಲನಕ್ಕಾಗಿ 1997 ವರ್ಷದ ಅತ್ಯುತ್ತಮ ಕವನ ಸಂಕಲನಕ್ಕಾಗಿ ಜೊಟ್ವಿಂಗಿಯೈ ಪ್ರಶಸ್ತಿಯೂ (Jotvingiai Prize) ಸೇರಿವೆ. ಜೊನಿನಾಸ್‌ರು ಒಬ್ಬ ಕಾವ್ಯಾತ್ಮಕ ರೂಪಗಳ ಕಲಾಭಿಜ್ಞ. ಹಲವಾರು ಸಾನೆಟ್ ಸೈಕಲ್‌ಗಳು, ಕವನಗಳು, ಕಾವ್ಯಾತ್ಮಕ ಪಾತ್ರಗಳು, ಲಿಥುವೇನಿಯಾದಲ್ಲಿ ಅಪರೂಪವಾಗಿ ಕಂಡುಬರುವ ವಿನೋದದ ಲಿಮರಿಕ್ಸ್, ಅಲ್ಲದೆ ಹಲವಾರು ಕಾವ್ಯಾತ್ಮಕ ರೂಪಗಳನ್ನೊಳಗೊಂಡ ಸಾಹಿತ್ಯವನ್ನು ಅನುವಾದಿಸಿದ್ದಾರೆ. ಅವರ ಇತ್ತೀಚಿನ ಕವನ ಸಂಕಲನ ‘ಹೊಸ ಸೊನೆಟ್ಸ್’ (New Sonnets) ವನ್ನು 2020 ರಲ್ಲಿ ಪ್ರಕಟವಾಯಿತು. ಜೊನಿನಾಸ್‌ರು ಲಿಥುವೇನಿಯನ್ ಬರಹಗಾರರ ಒಕ್ಕೂಟ ಮತ್ತು ಲಿಥುವೇನಿಯನ್ PEN ಕೇಂದ್ರದ ಸದಸ್ಯರಾಗಿದ್ದಾರೆ.
ಜೊನಿನಾಸ್ ಅವರು 1970-ರ ಕೊನೆಯ ಮತ್ತು 80-ರ ದಶಕದ ಲಿಥುವೇನಿಯಾದ ಸಾಹಿತ್ಯಿಕ ಸಂದರ್ಭದ ಅತ್ಯಂತ ಮಹತ್ವದ ಸಾಹಿತಿ. ಜೊನಿನಾಸ್ ಅವರ ಕಾವ್ಯವು ಪ್ರಧಾನವಾಗಿ ಹಿಪ್ಪಿ ಸಂಸ್ಕೃತಿ, ರಾಕ್ ಮತ್ತು ಬ್ಲೂಸ್ ಸಂಗೀತ, ಸ್ವಾತಂತ್ರ್ಯದ ಮನೋಭಾವ, ವಿಲ್ನಿಯಸ್ (ಲಿಥುವೇನಿಯಾದ ರಾಜಧಾನಿ ನಗರ), ಪಾಶ್ಚಿಮಾತ್ಯ ಸಂಸ್ಕೃತಿ, ವೈನ್, ಪ್ರೀತಿಯ ಭಾಷೆ, ವ್ಯಂಗ್ಯಾತ್ಮಕ ನಗು ಮತ್ತು ಇಂತಹ ವಿಷಯಗಳೊಂದಿಗೆ ಸಂಬಂಧ ಹೊಂದಿದೆ. ಕಾವ್ಯರಂಗದಲ್ಲಿ ಈಗಲೂ ಸಕ್ರಿಯವಾಗಿರುವ ಜೊನಿನಾಸ್‌ರು, ಇವರಿಲ್ಲದ ಸಾಹಿತ್ಯೋತ್ಸವವನ್ನು ಲಿಥುವೇನಿಯಾದಲ್ಲಿ ಕಲ್ಪಿಸಿಕೊಳ್ಳುವುದು ಅಸಾಧ್ಯವೆನ್ನುವಷ್ಟು ಮಹತ್ವವುಳ್ಳ ಸಾಹಿತಿಯಾಗಿದ್ದಾರೆ.
2022-ರ ಅಕ್ಟೋಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆದ ವಿಶ್ವ ಕವಿ ಸಮ್ಮೇಳನ ‘ಸಂಗಂ’ ನಲ್ಲಿ ಅಂಟನಾಸ್ ಎ. ಜೊನಿನಾಸ್ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಂಡು ತಮ್ಮ ಕವಿತೆಗಳನ್ನು ಓದಿದರು.
ಇಲ್ಲಿರುವ ಅಂಟನಾಸ್ ಎ. ಜೊನಿನಾಸ್-ರ ಆರೂ ಕವನಗಳನ್ನು ಮೂಲ ಲಿಥುವೇನಿಯನ್‌ನಿಂದ ಇಂಗ್ಲಿಷ್‌ಗೆ ರಿಮಾಸ್ ಉಜ಼್‌ಗಿರಿಸ್‌ರವರು (Rimas Uzgiris) ಅನುವಾದಿಸಿದ್ದಾರೆ.
1
ಪ್ರತಿಕೂಲ ಹವಾಮಾನ
ಲಟಲಟ ಸದ್ದುಮಾಡುತ್ತಾ ಅಡ್ಡಾದಿಡ್ಡಿ ಚಲಿಸುವ ಯಂತ್ರದ
ಹಾಗೆ ತನ್ನ ಕೋಪವನ್ನು ಕೊಡವುತ್ತಾ
ಈ ಶೀತಕಾಲದ ದಿನ
ಬಾಲ್ಯದ ನಿರ್ಜನ ಗುಪ್ತತಾಣಗಳ ಜತೆ
ತನ್ನ ಏಕಾಂತದ ಐಶ್ವರ್ಯಗಳನ್ನು ಹಂಚಿಕೊಳ್ಳುತ್ತದೆ
ಗೆಳೆಯರು ನಮಗೆ ನಂಬಿಕೆದ್ರೋಹ ಮಾಡಿದರೇನಂತೆ
ಗೆಳೆಯರು ನಮಗೆ ನಂಬಿಕೆದ್ರೋಹ ಮಾಡುವರೆಂಬುದು ದಿಟ
ಫೆಬ್ರವರಿಯ ಉಜ್ವಲ ಹರ್ಷದ ಠಣಠಣಿಸುವ ನಾಣ್ಯಗಳು
ಹಸಿ ಮುಸ್ಸಂಜೆಯ ಸಂದೂಕದೊಳಗೆ ಎಡವಿ ಬೀಳುತ್ತವೆ
ಕರಕರಿಸುವ ರೇಡಿಯೋಗಳು ಇನ್ನು ಕೆಲವೆ ಕ್ಷಣಗಳಲ್ಲಿ
ಘೋಷಿಸುತ್ತವೆ ಸರಿಯಾದ ಸಮಯದ ಬೇಕಿಲ್ಲದ ವಿವರ
ನನಗಿಂತಲೂ ಖಾಲಿಯಾಗಿರುವ ಈ ಶಹರಿನ
ಔಷದಿ ಅಂಗಡಿ ಮುಚ್ಚಿದೆ
ನಾವು ಸುಮ್ಮನೆ ಸಾಯಬಹುದು
ಮೂಲ: Inclement Weather
2
ಸಮಯ ಸಂದಿದೆ ಮಾಸ ಮುಗಿದಿದೆ
ಸಮಯ ಸಂದಿದೆ ಮಾಸ ಮುಗಿದಿದೆ
‘ಸಂತರ ದಿನಾಚರಣೆ’ಗಾಗಿ ಸಮಾಧಿಗಳನ್ನು
ಚೊಕ್ಕಟ್ಟಗೊಳಿಸುತ್ತಿದ್ದಾರೆ
ಬೂದಿಕವಿದ ಕಲ್ಲುಗಳನ್ನು ತಿಕ್ಕಿತೊಳೆಯುತ್ತಿದ್ದಾರೆ
ಆದರೆ ಮೀನುತೊಟ್ಟಿಯಂತಹ ನಗರ ಖಾಲಿ ಬಿದ್ದಿದೆ
ಓಝೋನ್ ಬೊಬ್ಬುಳಿಯೊಂದು ಮೇಲೆ ಸ್ವರ್ಗದಲ್ಲಿ ಒಡೆದು
ಅಲ್ಲಿ ಮೇಲಿಂದ ಮುರಮುರಿಸುತ್ತಾ ಗರಿಗಳನ್ನು ಚದುರಿಸುತ್ತಿದೆ
ಅದೇ ವೇಳೆ ಬುಡಮೇಲಾದ ನಸುಕಿನ ಬೋಗುಣಿಯಡಿಯ
ಸೀಸಬಣ್ಣದ ಬಾನಿನಲ್ಲಿ ಬಾಣಬಿರುಸುಗಳು ಸಿಡಿದರಳುತ್ತಿವೆ.
ಕಾಯಿಲೆಗಳು ಮರಳುತ್ತವೆ ಮತ್ತೂ ಘೋರವಾಗಿ
ಮತ್ತೆ ಮತ್ತದೇ ಭ್ರಮೆಗಳ ವಿನಿಮಯ
ನಾನು ಮತ್ತೆ ಮತ್ತೊಮ್ಮೆ ಅವುಗಳ ಅಮಾಯಕ ಬಲೆಯೊಳಗೆ ಕಾಲಿಡುತ್ತೇನೆ
ನವೆಂಬರ್ ಮಾಸವು ತನ್ನ ಮಳೆಯಂಗಿಯನ್ನು ತೊಳೆದು ಸ್ವಚ್ಛವಾಗಿಸುತ್ತೆ
ಅದೇ ವೇಳೆ ನೂರಾರು ಹೊನ್ನಮೀನುಗಳ ಬಿಳಿ ಕಣ್ಣುಗಳು
ನಿರ್ಭಾವದಿಂದ ದಿಟ್ಟಿಸುತ್ತಿವೆ ಕದಡಿದ ಗಾಳಿಯೊಳಗೆ
ಮೂಲ: The time is up the season’s over
3
ಹೂವರಳಿದ ಚೆರಿ ಮರಗಳು
ಜನ್ನಲಿನ ನೀಲಿ ಚೌಕಟ್ಟಿನೊಳಗೆ
ಒಂದು ಗುಲಾಬಿಬಣ್ಣದ ಪಿಯೊನಿ-ಹೂವು ಅರಳಿದೆ;
ಮತ್ತೆ ಕವನಗಳೆಂದರೆ ಕನಸೊಂದರಲ್ಲಿ
ನೆಕ್ಕಿದ ಹಾಲಿನಕೆನೆಯಂತೆ
ಜನ್ನಲಿನ ಹೊರಗೋಡೆಯ ಬುಡದಲ್ಲಿರುವ ಒಂದು ಚೆರಿ ಮರ
ಆಕಾಶದ ಪರದೆಯ ಮೇಲೆ ತನ್ನ ಕುಸುಮಿತ ರೇಷಿಮೆಯನ್ನು ಎರಚುತ್ತೆ
ಡಚ್ ಚಿತ್ರಕಲೆಯ ಸುವರ್ಣಯುಗದಲ್ಲಿ ಬಿಡಿಸಿದಂತೆ
ಚೌಕದಲ್ಲಿ ಚೆರಿಹೂವುಗಳು ಹಿಮದಂತೆ ಎರಚಿ ಬಿದ್ದಿವೆ
ಮತ್ತೆ ಹೆಂಗಸೊಬ್ಬಳು ಹಾಸಿಗೆಯಲ್ಲಿ ಮೈಮುರಿಯುತ್ತಾಳೆ
ತನ್ನ ಭಾವನೆಗಳ ಪೆಟ್ಟಿಗೆಯನ್ನು ಮುಚ್ಚುತ್ತಾಳೆ
ಅರ್ಮಿನ್-ನ ತೀಕ್ಷ್ಣ ನೋಟದ ಉದ್ಧಟತನದಿಂದ
ಕಣ್ಣುಹಾಯಿಸುತ್ತಾಳೆ ಬೀದಿದೃಶ್ಯದೆಡೆಗೆ
ಬಂಗಾರದ ದೂಳಿನ ಕಣಗಳು
ಉದ್ರಿಕ್ತ ಚಕ್ರಗಳಲ್ಲಿ ಕುಣಿಯಲಾರಂಭಿಸುತ್ತವೆ
ರಸ್ತೆಬದಿಯಲ್ಲಿ
ಆಗ ಕೋಲಿನ ಹಾಗೆ ಏರುತ್ತೆ ಮೇಲಕ್ಕೆ ಒಂದು ಕಿಡಿ;
ಆಗಷ್ಟೇ, ಆ ಕ್ಷಣದಿಂದ ಅನಿಸುತದೆ
ತೋಟವ ಸುತ್ತಿರುವ ತಡಿಕೆ ಬೇಲಿಯು
ಸಿಡಿಗುಂಡಿನ ಝಳಪಿನಂತೆ ಸ್ಫೋಟಿಸುವ
ಹೂವುಗಳ ರಾಶಿಯನ್ನು ಹತೋಟಿಯಲ್ಲಿಡಲಾರದು;
ಮತ್ತೆ ಅವಳ ಕೈಯಲ್ಲಿ ಗಟ್ಟಿ-ಹುಲ್ಲು ಗಾಜಿನ ಸೂಜಿ
ಅಚಾನಕ್ಕಾಗಿ ಮಿಂಚುತ್ತದೆ
ಆ ಮಿಂಚು ಜೇನ್ನೊಣದಂತೆ ದಿಕ್ಕುತಿರುಗಿ ನೇರವಾಗಿ
ಪ್ರವೇಶಿಸುತ್ತದೆ ಒಂದು ಅರಕ್ಷಿತ ಗುಡಿಯೊಳಗೆ,
ಕನಸಿನಲ್ಲಿ ಕಂಡಂತೆ, ಆದರೆ ನೋವುಂಟುಮಾಡದೆ.
ಮೂಲ: Blossoming cherry trees
4
ಯಾತ್ರಿಕನ ಕೊರೆ
ಕ್ಷಿಪ್ರವಾಗಿ ಅಸ್ತಮಾನವಾಗುತ್ತಿರುವ ಸೂರ್ಯನ ಸೆರಗಿನ
ಅಂಚಿನಿಂದ ಈ ಸಂಜೆಯು ತನ್ನನ್ನು ಕವಿಸಿಕೊಳ್ಳುತ್ತೆ:
ಶರತ್ಕಾಲದ ಕಮಟು ಹವೆಯಲ್ಲಿ
ಯಾತ್ರಿಕನೊಬ್ಬನ ದಂಡ ಪ್ರಕಟವಾಗುತ್ತೆ
ಪುಡಿಪುಡಿಯಾಗುತ್ತಿರುವ ಸಿಮೆಂಟಿನ ಹೊಸ್ತಿಲು
ಲೊಡ್ಡಾಗುತ್ತಿರುವ ಬಾವಿಕಟ್ಟೆಯ ಮುಚ್ಚಿಗೆ
ಕಪ್-ನ ಒಡೆದ ತಿರುಕಾವು
ರಾತ್ರಿಯೆಲ್ಲಾ ಅವನು ನಿದ್ದೆಹೋಗಲು ಯತ್ನಿಸುವ
ಹೀಗೆ ಕಷ್ಟಪಡುವುದು ವ್ಯರ್ಥವೆಂದು ತಿಳಿದೂ ಕೂಡ
ಯಾಕೆಂದರೆ ಯಾರೋ ಹಿಂದೆ ಪ್ರಯತ್ನಿಸಿರುವರು:
ಅ) ಬೆಳಗ್ಗೆದ್ದು ಅವನು ತೆರಳುವ
ಬಾವಿಯಲ್ಲಿ ಸೆರೆಯಾಗಿರುವ ನಕ್ಷತ್ರಗಳನ್ನು ನೋಡದೆನೆ
ಆ) ದಾರಿಯಲ್ಲಿ ನಿಂತಿರುವವನೊಬ್ಬ ಗಂಟೆಯ ಬಾರಿಸುವನು,
ನಕ್ಷತ್ರಗಳು ಮಡಿಯುತ್ತಾವೆ ಸ್‌ಸ್‌ಸ್‌ಸ್-ನ್ನುತ್ತಾ
ಮೂಲ: The Traveller’s Sorrow
5
ಹಿಮಚೆಂಡು
ಎಲ್ಲವೂ ಕರಗುತ್ತವೆ: ಸಮಯವು, ಮನುಜರೂ,
ಅವಳು ಕೈಯಲ್ಲಿ ಸೇಬು ಹಿಡಕೊಂಡು ನಿಂತಿದ್ದಾಳೆ,
ಟ್ರೈನಿಗಾಗಿ ಕಾಯುತ್ತಿದ್ದಾಳೆ,
ಅದರ ಗೋಳಾಕಾರದ ಗಾಲಿಗಳು ಜಂಕ್ಷನ್ನುಗಳ
ಮೇಲೆ ಗಡಗಡಿಸುತ್ತಾ ಬರುತ್ತಾವೆ,
“ಅಭಿಪ್ರಾಯ ನೀಡುವುದು ಸುಲಭ, ಸಾಕ್ಷಿ ಕೊಡುವುದು ಕಷ್ಟ”
ಎಂದು ಯಾರೊ ಒಮ್ಮೆ ನನಗೆ ಹೇಳಿದ್ದರು, ನಾನಂದುಕೊಂಡೆ,
ಇದು ಅದಲ್ಲ, ಪ್ರಿಯೆ, ಅದು ಅಲ್ಲವೇ ಅಲ್ಲ,
ನಮ್ಮಲ್ಲೇನಾದರೂ ಸೌಶೀಲ್ಯತೆಯ ಕೆಲವಂಶವಾದರೂ ಉಳಿದಿದ್ದರೆ,
ಏಕೆಂದರೆ ಏನೋ ಕೆಟ್ಟದ್ದು ಲಟಲಟಿಸುತ್ತಾ
ಬರುತ್ತೆ ಈ ಎಕ್ಸ್‌ಪ್ರೆಸ್ ಟ್ರೈನಿನಲ್ಲಿ,
ಈ ಚೊಕ್ಕಟ್ಟವಾದ ಕಂಪಾರ್ಟ್‌ಮೆಂಟಿನಲ್ಲಿ
ಈ ನಡುಬೇಸಿಗೆಯ ಟ್ರೈನಿನಲ್ಲಿ,
ಕಂಡಕ್ಟರ್-ನ ಕಿಸೆಯಿಂದ
ಕೊಳಕುಹಿಮ ತೊಟ್ಟಿಕ್ಕುತ್ತಿದೆ ಇಲ್ಲಿ
ಅವಳು ಕಲ್ಲ-ಗಟ್ಟಿಯಾದ ಬೆಂಚಿನ ಮೇಲೆ ಮಲಗಿದಳು
ಹಾಗೇ ಸೇಬು ಉರುಳಿತು ಕರಗಿದ ಹಿಮದ ಮೇಲೆ
ನೆಲದ ಉದ್ದಕ್ಕೂ.
ಮೂಲ: Snowball
6
ಕಡಲತೀರದಲ್ಲಿ ಡೇಕಾರ್ತ್
ಕಡಲು, ಅದು ಹೇಗೆ ಘರ್ಜಿಸಿತು! ಅಂದ್ರೆ, ಸಣ್ಣ ಘರ್ಜನೆಯೆ:
ಅಲೆಗಳು ಮೆಲ್ಲಮೆಲ್ಲನೆ ಉರುಳುತ್ತಿವೆ ತೀರದೆಡೆಗೆ
ನಾನು ಚಂದ್ರನ ತಟ್ಟೆಯನ್ನು ನಿಟ್ಟಿಸಿ ನೋಡುತ್ತಿದ್ದೆ
ತನ್ನ ಜಾದೂಮಣಿಯ ಕಳಕೊಂಡ ನಾಗನಂತೆ.
ಪೈನ್ ಮರಗಳು ನಿಂತಿವೆ ತಮ್ಮ ಸೂಜಿಯೆಲೆಗಳ ಏರಿಸಿ,
ಬದಲಾಗದ ನಿಶಾದೃಶ್ಯಗಳನ್ನು ನೊಡುತ್ತಾ ನೋಡುತ್ತಾ ದಣಿದಿವೆ ಅವು,
ಗಲ್ ಹಕ್ಕಿಗಳಾಗಲಿ, ಐಡರ್ ಹಕ್ಕಿಗಳಾಗಲಿ,
ಐಡಿಯಾಗಳಾಗಲಿ ಯಾವುದೂ ಎತ್ತರಕ್ಕೇರುತ್ತಿಲ್ಲ,
ಗಾಳಿಯೂ ತನ್ನ ಗೂಡಿನೊಳಗೆ ಅಡಗಿ ಕೂತಿದೆ ಮುದುರಿಕೊಂಡು.
ಒಂದು ವಿಚಾರ ಮಾತ್ರ ಹಠಾತ್ತನೆ ದುಃಖ ತರಿಸಿತು,
ನನ್ನಲ್ಲಿ ಸಂದೇಹವ ಚುಚ್ಚಿ ಮತ್ತೆ ಮಾಯವಾಯಿತು:
ನಾನು ಮಾಡಿದ ಪಾಪಗಳಿಗೆ ಏನಾದರೂ
ಬೆಲೆಯಿರುವುದಾ ಕೊನೆಯಲ್ಲಿ?
ನನಗೂ ಡೇಕಾರ್ತ್-ನಿಗೂ ಹೊಂದಾಣಿಕೆಯೇನೂ ಆಗಲಿಲ್ಲ,
ಆದರೆ ಪ್ರೀತಿಪಾತ್ರರು ಹಲವು ಬಾರಿ ನನಗೆ ಇಲ್ಲವೆಂದಿದ್ದಾರೆ,
ಭರವಸೆ ಸಾಲದ ಯಾವುದೋ ಪುರಾವೆಯಂತೆ.
ಮೂಲ: Descartes by the Sea
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.
I am delighted to see my poems in your magazine and many thanks to the excellent translator Jayasrinivasa Rao!
oadikolluvaga nanage ellavu kannadada layagalalle kelisithu.idu nimma anuvadadinda addaddou illa moollayave heegideyou?Oduganagi nane aenu Madabeku/
Of course perception and in some poems imagery just happens before u.
Thanks for sharing sir.