ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳಿನಿಂದ ಅಧ್ಯಾಪಕರಿಲ್ಲದೇ ಕಾದಿದ್ದ ಅವರಿಗೆ ನಾನು ನಿರ್ಜನ ದಾರಿಯಲ್ಲಿ ದಾರಿ ಕೇಳಲು ಸಿಕ್ಕ ಏಕೈಕ ವ್ಯಕ್ತಿಯಂತೆ ಕಂಡಿರಬೇಕು. ಪಾಠಪುಸ್ತಕ, ನೋಟ್ಸ್‌ ಪುಸ್ತಕ, ಪೆನ್ನು, ಕಂಪಾಸ್‌ ಹಿಡಿದು ತಯಾರಾಗಿ ಕುಳಿತಿದ್ದರು. ಬಹಳ ಆಸಕ್ತಿಯಿಂದಲೇ ಪಾಠಕೇಳಿದರು. ನನಗೆ ಆ ವರೆಗೂ ದೊಡ್ಡ ತರಗತಿಗೆ ಪಾಠಮಾಡಿ ಅಭ್ಯಾಸ ಇತ್ತು. ಈ ತರಗತಿ ಮೊದಲಿಗೆ ಖಾಲಿ ಖಾಲಿ ಅನಿಸಿದರೂ ಮಕ್ಕಳ ಆಸಕ್ತಿಯ ಮುಂದೆ ಮಧ್ಯಾಹ್ನದವರೆಗೂ ಸಮಯ ಹೋದದ್ದೇ ತಿಳಿಯಲಿಲ್ಲ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ

 

ಮಾರ್ಚ್‌ ತಿಂಗಳು ಬಂತೆಂದರೆ ಬೇಸಗೆಯ ಬಿಸಿಯ ಜೊತೆ ಶಾಲಾ ಪರೀಕ್ಷೆಗಳು ಮತ್ತು ಫಲಿತಾಂಶದ ಬಗೆಗಿನ ಮಂಡೆ ಬಿಸಿಯೂ ಏರುತ್ತಾ ಹೋಗುತ್ತದೆ. ಮಕ್ಕಳಿಗಿಂತ ಅವರ ಪೋಷಕರಿಗೇ ಪರೀಕ್ಷಾ ದೈವ ಮತ್ತು ಪರೀಕ್ಷಾ ಜ್ವರ ಆವರಿಸುವುದು ಹೆಚ್ಚು. ಇದಕ್ಕಾಗಿಯೇ ಇರಬೇಕು ಮಾರ್ಚ್‌ ತಿಂಗಳಿನಲ್ಲಿ ನೀವು ಯಾವುದಾದರೂ ಪ್ರಸಿದ್ಧ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿದರೆ ಉಳಿದ ಸಮಯದಲ್ಲಿ ಕಾಣಸಿಗುವ ಜನಜಂಗುಳಿ ಇರುವುದಿಲ್ಲ. ಮಾರ್ಚ್‌ ತಿಂಗಳು ಬಂತು ಎಂದಾದರೆ ಹೈಸ್ಕೂಲ್‌ ಶಿಕ್ಷಕನಾದ, ಅದರಲ್ಲೂ ಗಣಿತ ಶಿಕ್ಷಕನಾದ ನನಗೆ ನನ್ನ ಹತ್ತನೆಯ ತರಗತಿಯ ಮಕ್ಕಳನ್ನು ಪರೀಕ್ಷೆ ಎಂಬ ಯುದ್ಧಕ್ಕೆ ಅಣಿಗೊಳಿಸುವ ಕೆಲಸ ಹೆಚ್ಚುತ್ತಾ ಹೋಗುತ್ತಿತ್ತು. ಅವರೇನಾದರೂ ನಮ್ಮ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದರೆ ಅದು ನಾನೇ ಸೋತಂತೆ ಎಂಬ ಭಾವ ಅಧ್ಯಾಪಕರಾದ ನಮ್ಮದಾಗಿರುತ್ತಿತ್ತು.

ಒಂದು ಶಾಲೆಯ ಮಕ್ಕಳನ್ನು ನನ್ನ ಗಣಿತ ವಿಷಯದಲ್ಲಿ ತಯಾರುಗೊಳಿಸುವುದು ಒಂದು ದೊಡ್ಡ ಸವಾಲು ಎಂದಾದರೆ, ಒಂದೇ ಬಾರಿಗೆ ಎರಡೆರಡು ಶಾಲೆಯ ಮಕ್ಕಳನ್ನು ಗಣಿತ ವಿಷಯದಲ್ಲಿ ಪರೀಕ್ಷೆಗೆ ತಯಾರು ಮಾಡುವುದು ಇನ್ನೂ ಸವಾಲಿನ ಕೆಲಸ. ಇಂತಹ ಸವಾಲೊಂದು ನಾನು ಶಿಕ್ಷಕನಾದ ಎರಡನೇ ವರ್ಷವೇ ನನಗೆ ಒದಗಿಬಂದಿತ್ತು. ನನ್ನ ಶಾಲೆ ಸಂಸೆ, ನನ್ನ ಪಕ್ಕದ ಶಾಲೆ ಕುದುರೆಮುಖದಲ್ಲಿ ಗಣಿತ ಶಿಕ್ಷಕರಿಗೆ ವರ್ಗಾವಣೆಯಾಗಿ ಅಲ್ಲಿ ಗಣಿತ ಬೋಧಿಸಲು ಶಿಕ್ಷಕರೇ ಇರಲಿಲ್ಲ. ಎಂಟು ಮತ್ತು ಒಂಭತ್ತನೆಯ ತರಗತಿಗಳಿಗೆ ಉಳಿದ ಶಿಕ್ಷಕರು ಪಾಠಗಳನ್ನು ಮಾಡಿ ಮುಗಿಸುತ್ತಿದ್ದರು. ಆದರೆ ಹತ್ತನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಮತ್ತು ಫಲಿತಾಂಶ, ಅದರಿಂದಾಗಿ ಮಕ್ಕಳ ಭವಿಷ್ಯ ಮತ್ತು ಶಾಲೆಯ ಮರ್ಯಾದೆ ಇವೆರಡನ್ನೂ ನಿಭಾಯಿಸಬೇಕಾದ ಕಾರಣಕ್ಕಾಗಿ ಉಳಿದ ಶಿಕ್ಷಕರು ಹತ್ತನೆಯ ತರಗತಿಗೆ ಗಣಿತ ಮಾಡಲು ಹಿಂದೇಟು ಹಾಕಿದರು. ಶಾಲಾ ಮುಖ್ಯಶಿಕ್ಷಕರು ಈ ವಿಷಯವನ್ನು ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಾಗ ಪಕ್ಕದ ಸರಕಾರಿ ಶಾಲೆಯ ಗಣಿತ ಅಧ್ಯಾಪಕನಾದ ನನಗೆ ಮೂರುದಿನ ಪಕ್ಕದ ಶಾಲೆಯ ಫಲಿತಾಂಶ ಹೆಚ್ಚಳ ಕಾರಣಕ್ಕಾಗಿ ನಿಯೋಜನಾ ಭಾಗ್ಯ ಒದಗಿ ಬಂತು.

ತನ್ನ ಶಾಲೆಯ ಗಣಿತ ಶಿಕ್ಷಕ ವಾರದಲ್ಲಿ ಮೂರುದಿನ ಪಕ್ಕದ ಶಾಲೆಗೆ ಹೋದರೆ ನಮ್ಮ ಶಾಲೆಯ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತದೆ ಎಂದು ನಮ್ಮ ಶಾಲಾ ಮುಖ್ಯ ಶಿಕ್ಷಕರು ಚೌಕಾಸಿ ಮಾಡಿ ನಿಯೋಜನೆಯನ್ನು ಮೂರರಿಂದ ಎರಡು ದಿನಗಳಿಗೆ ಇಳಿಸಿ, ಶುಕ್ರವಾರ ಮತ್ತು ಶನಿವಾರ ಪಕ್ಕದ ಶಾಲೆಗೆ ಹೋಗುವಂತೆ ಆದೇಶ ಮಾಡಿದರು. ನಮ್ಮ ಶಾಲೆಯಿಂದ ಇನ್ನೂ ಸುಮಾರು ಹನ್ನೆರಡು ಕಿಲೋಮೀಟರ್‌ ದೂರದಲ್ಲಿದ್ದ ಕುದುರೆಮುಖ ಶಾಲೆಗೆ ವಾರದಲ್ಲಿ ಎರಡು ದಿನ ಹೋಗಲಾರಂಭಿಸಿದೆ.

ನನ್ನ ಶಾಲೆಯಲ್ಲಿ ತರಗತಿಯಲ್ಲಿದ್ದ ಐವತ್ತು ಮಕ್ಕಳಿಗೆ ದೊಡ್ಡದಾಗಿ ಭಾಷಣ ಬಿಗಿಯುತ್ತಾ ಪಾಠ ಮಾಡುತ್ತಿದ್ದ ನನಗೆ ಪಕ್ಕದ ಶಾಲೆಯಲ್ಲಿ ತರಗತಿಯಲ್ಲಿದ್ದ ಕೇವಲ ಎಂಟು ಮಕ್ಕಳನ್ನು ನೋಡಿ ಖಾಲಿ ಖಾಲಿ ಎನಿಸಿತು. ಅಯ್ಯೋ ಈ ಕೇವಲ ಎಂಟು ಮಕ್ಕಳಿಗಾಗಿ ನಾನು ನನ್ನ ಶಾಲೆಯಿಂದ ಇಲ್ಲಿವರೆಗೂ ಅಂಕುಡೊಂಕಾದ ದಾರಿಯಲ್ಲಿ ಹೊಟ್ಟೆ ತೊಳೆಸಿಕೊಂಡು ಬಂದು ಪಾಠಮಾಡಬೇಕೇ? ಎಂಬ ಯೋಚನೆಬಂತು. ಆದರೆ ಅಲ್ಲಿನ ಉಳಿದ ಅಧ್ಯಾಪಕರು ಬಹಳ ಪ್ರೀತಿ ವಿಶ್ವಾಸಗಳಿಂದಲೇ ನನ್ನನ್ನು ಬರಮಾಡಿಕೊಂಡರು. ಬೆಳಗ್ಗಿನ ನಾಲ್ಕೂ ಅವಧಿ ನೀವೇ ಗಣಿತ ತೆಗೆದುಕೊಳ್ಳಬಹುದು ಎಂದು ತರಗತಿಯನ್ನು ಬಿಟ್ಟುಕೊಟ್ಟರು. ಅಲ್ಲಿ ಗಣಿತ ಮಾತ್ರವಲ್ಲ ಇನ್ನೂ ಕೆಲವು ವಿಷಯದ ಶಿಕ್ಷಕರು ಇರಲಿಲ್ಲ, ಇದ್ದ ನಾಲ್ಕು ಮಂದಿ ಉಳಿದ ವಿಷಯಗಳನ್ನು ತೆಗೆದುಕೊಳ್ಳುತ್ತ ಶಾಲೆಯನ್ನೂ ನಿಭಾಯಿಸುತ್ತಿದ್ದರು ಎಂದು ತಿಳಿದದ್ದು ಅಲ್ಲಿಗೆ ಹೋದಾಗಲೇ.

ತರಗತಿಯ ಒಳಗೆ ಹೋದಾಗ ಅಗಲವಾದ ಕಣ್ಣುಗಳಿಂದ ಹೊಸ ಶಿಕ್ಷಕರನ್ನು ಕಾಯುತ್ತಿದ್ದ ಮಕ್ಕಳು ಬಹಳ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡರು. ಕುದುರೆಮುಖ ಒಂದು ಕಾಲದಲ್ಲಿ ಅತ್ಯಂತ ಪ್ರಸಿದ್ಧ ಕಬ್ಬಿಣದ ಅದಿರಿನ ಗಣಿ ಇದ್ದ ಜಾಗ. ಪಶ್ಚಿಮ ಘಟ್ಟದ ನಟ್ಟ ನಡುವೆ ಭದ್ರಾ ನದಿ ಹುಟ್ಟುವ ಜಾಗವೂ ಆಗಿತ್ತು. ಅದೇ ಕಾರಣಕ್ಕೆ ಪರಿಸರ ಹೋರಾಟಗಾರರ ಪ್ರಯತ್ನದಿಂದ ಗಣಿಗಾರಿಕೆ ಕೊನೆಗೊಂಡು ಅಲ್ಲಿನ ಖಾಯಂ ಕೆಲಸಗಾರರೆಲ್ಲ ಬೇರೆಕಡೆಗೆ ಹೋಗಿದ್ದರು. ಮತ್ತೆ ಕೆಲಸ ಸಿಗಬಹುದು ಎಂಬ ಆಶಾ ಭಾವದಿಂದ ಇನ್ನೂ ಅಲ್ಲೇ ಉಳಿದಿದ್ದ ಕೆಲ ಕೂಲಿಕಾರ್ಮಿಕರ ಮಕ್ಕಳು, ಅಲ್ಲೇ ಆಸುಪಾಸಿನ ಅರಣ್ಯದ ನಡುವೆ ಸಣ್ಣ ಹಿಡುವಳಿ ಹೊಂದಿದ್ದ ಕೆಲ ರೈತರ ಮಕ್ಕಳು ಆ ತರಗತಿಯಲ್ಲಿ ಇದ್ದರು. ಅವರ ಪರಿಚಯ ಮಾಡಿಕೊಂಡು ಮೊದಲನೇ ಪಾಠದಿಂದ ಆರಂಭ ಮಾಡಿದೆ.

ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳಿನಿಂದ ಅಧ್ಯಾಪಕರಿಲ್ಲದೇ ಕಾದಿದ್ದ ಅವರಿಗೆ ನಾನು ನಿರ್ಜನ ದಾರಿಯಲ್ಲಿ ದಾರಿ ಕೇಳಲು ಸಿಕ್ಕ ಏಕೈಕ ವ್ಯಕ್ತಿಯಂತೆ ಕಂಡಿರಬೇಕು. ಪಾಠಪುಸ್ತಕ, ನೋಟ್ಸ್‌ ಪುಸ್ತಕ, ಪೆನ್ನು, ಕಂಪಾಸ್‌ ಹಿಡಿದು ತಯಾರಾಗಿ ಕುಳಿತಿದ್ದರು. ಬಹಳ ಆಸಕ್ತಿಯಿಂದಲೇ ಪಾಠಕೇಳಿದರು. ನನಗೆ ಆ ವರೆಗೂ ದೊಡ್ಡ ತರಗತಿಗೆ ಪಾಠಮಾಡಿ ಅಭ್ಯಾಸ ಇತ್ತು. ಈ ತರಗತಿ ಮೊದಲಿಗೆ ಖಾಲಿ ಖಾಲಿ ಅನಿಸಿದರೂ ಮಕ್ಕಳ ಆಸಕ್ತಿಯ ಮುಂದೆ ಮಧ್ಯಾಹ್ನದವರೆಗೂ ಸಮಯ ಹೋದದ್ದೇ ತಿಳಿಯಲಿಲ್ಲ. ಬನ್ನಿ ಸಾರ್‌ ಊಟದ ಹೊತ್ತಾಯ್ತು, ಊಟ ಮಾಡೋಣ ಎಂದು ಶಿಕ್ಷಕರಾದ ರಾಜೇಶ್‌ ಸರ್‌ ಬಂದು ಕರೆದಾಗಲೇ ತಿಳಿದದ್ದು ನಾವು ನಿರಂತರ ನಾಲ್ಕು ಅವಧಿಗಳು ಗಣಿತ ಕಲಿಕೆಯಲ್ಲಿ ತಲ್ಲೀನರಾಗಿದ್ದೆವು ಎಂದು. ಮಕ್ಕಳಿಗೂ ನನಗೂ ಪರಸ್ಪರ ಹೊಂದಾಣಿಕೆಯಾಗಿತ್ತು. ಮಧ್ಯಾಹ್ನದ ನಂತರವೂ ನೀವೇ ಬನ್ನಿ ಎಂಬ ಆಹ್ವಾನ ಮಕ್ಕಳಿಂದ ಬಂತು. ಆಗಲಿ ಎಂದು ಊಟದ ವಿರಾಮ ನಂತರವೂ ಗಣಿತವನ್ನೇ ಮುಂದುವರೆಸಿದೆವು. ಚೆನ್ನಾಗಿ ಹಸಿದರೆ ಎಂತಹ ಊಟವೂ ರುಚಿಸುತ್ತದೆ ಎಂಬ ಮಾತೇ ಇದೆಯಲ್ಲ. ನಾನು ಮಧ್ಯಾಹ್ನದ ಊಟದಬಗ್ಗೆ ಹೇಳುತ್ತಿಲ್ಲ. ಪಾಠವಿಲ್ಲದೆ ಕಾದಿದ್ದ ಮಕ್ಕಳ ಹಸಿವೆಯ ಬಗ್ಗೆ ಹೇಳುತ್ತಿದ್ದೇನೆ. ಕಲಿಯಬೇಕೆಂಬ ಹಸಿವೆ ಮತ್ತು ವಾರಕ್ಕೆ ಎರಡೇ ದಿನ ಸಿಗುವ ಮಾಸ್ತರ ಎಂಬ ಎರಡೂ ಸೇರಿ ಮಕ್ಕಳ ಪಾಠಕೇಳುವ ಆಸಕ್ತಿಯನ್ನು ಇನ್ನೂ ಹೆಚ್ಚುಮಾಡಿತ್ತು.

ಮುಂದಿನ ವಾರಗಳಲ್ಲಿ ಬೇಗಬೇಗನೇ ಪಾಠಗಳನ್ನು ಮುಗಿಸಿ, ಅರ್ಧವಾರ್ಷಿಕ ಪರೀಕ್ಷೆ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳ ಕಡೆಗೆ ತಲಪಿದೆವು. ಶಾಲೆಯ ಉಳಿದ ಅಧ್ಯಾಪಕರೂ ಬಹಳ ಸಹಕಾರ ನೀಡುತ್ತಿದ್ದರು. ವಾರದ ಎರಡು ದಿನ ಹೆಚ್ಚಿನ ಅವಧಿಗಳನ್ನು ನನಗೇ ಮೀಸಲಾಗಿ ಇಡುತ್ತಿದ್ದರು. ಕೊನೆಯಲ್ಲಿ ಪಬ್ಲಿಕ್‌ ಪರೀಕ್ಷೆ ನಡೆದಾಗ ಆ ಎಂಟು ಮಕ್ಕಳೂ ಗಣಿತ ವಿಷಯದಲ್ಲಿ ಉತ್ತೀರ್ಣರಾದರು ಎಂಬುದು ನನಗೆ ಬಹಳ ಸಮಾಧಾನದ ಸಂಗತಿ.

ಹತ್ತನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಮತ್ತು ಫಲಿತಾಂಶ, ಅದರಿಂದಾಗಿ ಮಕ್ಕಳ ಭವಿಷ್ಯ ಮತ್ತು ಶಾಲೆಯ ಮರ್ಯಾದೆ ಇವೆರಡನ್ನೂ ನಿಭಾಯಿಸಬೇಕಾದ ಕಾರಣಕ್ಕಾಗಿ ಉಳಿದ ಶಿಕ್ಷಕರು ಹತ್ತನೆಯ ತರಗತಿಗೆ ಗಣಿತ ಮಾಡಲು ಹಿಂದೇಟು ಹಾಕಿದರು. ಶಾಲಾ ಮುಖ್ಯಶಿಕ್ಷಕರು ಈ ವಿಷಯವನ್ನು ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಾಗ ಪಕ್ಕದ ಸರಕಾರಿ ಶಾಲೆಯ ಗಣಿತ ಅಧ್ಯಾಪಕನಾದ ನನಗೆ ಮೂರುದಿನ ಪಕ್ಕದ ಶಾಲೆಯ ಫಲಿತಾಂಶ ಹೆಚ್ಚಳ ಕಾರಣಕ್ಕಾಗಿ ನಿಯೋಜನಾ ಭಾಗ್ಯ ಒದಗಿ ಬಂತು.

ನನ್ನ ಮಟ್ಟಿಗೆ ಇದೊಂದು ಮುಖ್ಯವಾದ ಕಲಿಕೆ. ನನ್ನ ಶಾಲೆ ಎಂಬ ಕರ್ತವ್ಯದ ವ್ಯಾಪ್ತಿಯಿಂದ ಹೊರಗಿನ ಒಂದು ಶಾಲೆಯನ್ನು ನೋಡುವ ಅವರ ಜೊತೆ ಬೆರೆಯುವ, ಅವರ ಬದುಕನ್ನು ತಿಳಿಯುವ ಅವಕಾಶ ನನ್ನ ಪಾಲಿಗೆ ಸಿಕ್ಕಿತ್ತು. ಇದರ ಜೊತೆಗೆ ಗಣಿತವೆಂದರೆ ಕಬ್ಬಿಣದ ಕಡಲೆ, ಅದನ್ನು ದಿನವೂ ಬೆಳಗ್ಗಿನ ಹೊತ್ತು ಬರೆದು ಅಭ್ಯಾಸ ಮಾಡಬೇಕು, ಆಗಲೇ ತಲೆಗೆ ಹೋಗುತ್ತದೆ ಎಂದೆಲ್ಲಾ ಹೇಳುತ್ತಿದ್ದ ನನಗೆ ದಿನವಿಡೀ ಗಣಿತ ವಿಷಯವನ್ನು ಮಕ್ಕಳ ಜೊತೆ ಮಾಡಬಹುದು, ಹಾಗೆ ಮಾಡುವ ಅವಕಾಶ ಸಿಕ್ಕರೆ ದಿನಕ್ಕೆ ಒಂದು ಅವಧಿ ಗಣಿತ ಕಲಿಯುವುದಕ್ಕಿಂತ ಆಳವಾಗಿ ಮತ್ತು ಗಾಢವಾಗಿ ಕಲಿಕೆ ನಡೆಯಲು ಸಾಧ್ಯ ಎಂಬ ಜ್ಞಾನೋದಯ ನನಗಾಗಿತ್ತು.

ಮುಂದಿನ ವರುಷ ಕಳಸದ ಪಕ್ಕದ ಹೊರನಾಡು ಹೈಸ್ಕೂಲಿನ ಗಣಿತ ಶಿಕ್ಷಕಿ ಹೆರಿಗೆ ರಜೆಗೆ ಹೋದಕಾರಣ ಆ ಶಾಲೆಗೂ ವಾರದ ಎರಡು ದಿನ ನಿಯೋಜನಾ ಭಾಗ್ಯ ನನಗೆ ಸಿಕ್ಕಿತ್ತು. ನನ್ನ ಸಂಸೆ ಶಾಲೆಯಂತೆ ಅಲ್ಲಿನ ಮಕ್ಕಳೂ ಆರೆಂಟು ಕಿಲೋಮೀಟರ್‌ ಕಾಲ್ನಡಿಗೆಯಲ್ಲಿ ಶಾಲೆಗೆ ಬರುತ್ತಿದ್ದರು. ಅವರ ಶಿಕ್ಷಕಿ ಪಾಠಗಳನ್ನು ಮುಗಿಸಿದ್ದರು. ಪರೀಕ್ಷೆಗೆ ಅವರನ್ನು ತಯಾರು ಮಾಡುವ ಕೆಲಸ ನನಗೆ ದೊರಕಿತ್ತು. ಸುಮಾರು ಮೂವತ್ತೈದು ಮಕ್ಕಳು ಇದ್ದ ತರಗತಿಗೆ ಪರೀಕ್ಷೆಯನ್ನು ಬರೆಯುವ ಸುಲಭ ವಿಧಾನಗಳನ್ನು ಹೇಳಿಕೊಡಬೇಕಾಗಿತ್ತು. ಮುಗ್ಧ ಮಕ್ಕಳು. ಎಷ್ಟೋ ಮನೆಗಳಲ್ಲಿ ವಿದ್ಯುತ್‌ ಸಹಾ ಇರಲಿಲ್ಲ. ಒಂದೆರಡು ವಾರಗಳಲ್ಲಿ ನನ್ನ ವಿಧಾನದ ಜೊತೆ ಹೊಂದಾಣಿಕೆ ಮಾಡಿಕೊಂಡು ಬೇಗನೆ ಕಲಿಯಲಾರಂಭಿಸಿದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಹೆಚ್ಚಿನ ವಿದ್ಯಾರ್ಥಿಗಳು ಪಾಸಾದರು.


ಅದರ ಮುಂದಿನ ವರುಷ ಕಳಸದಿಂದ ಹದಿನಾರು ಕಿಲೋಮೀಟರ್‌ ದೂರದ ಬಾಳೆಹೊಳೆ ಎಂಬ ಶಾಲೆಯ ಶಿಕ್ಷಕಿ ಹೆರಿಗೆ ರಜೆಗೆ ಹೋದಾಗ ಅಲ್ಲಿನ ಮಕ್ಕಳ ಜೊತೆಗೂ ಪರೀಕ್ಷಾ ತಯಾರಿಯ ಬಗ್ಗೆ ಎರಡು ತಿಂಗಳು ವಾರಕ್ಕೆರಡು ದಿನ ಕಲಿಸುವ ಅವಕಾಶ ನನಗೆ ಒದಗಿ ಬಂದಿತ್ತು. ಹೀಗೆ‌ ನಾಲ್ಕೇ ವರ್ಷದಲ್ಲಿ ಹೋಬಳಿ ಕೇಂದ್ರ ಕಳಸದ ಸುತ್ತಮುತ್ತಲಿನ ನಾಲ್ಕು ಶಾಲೆಗಳ ಮಕ್ಕಳಜೊತೆ ಬೆರೆಯುವ, ಕಲಿಯುವ ಮತ್ತು ಕಲಿಸುವ ಅವಕಾಶ ನನ್ನನ್ನು ಹೊಸಹೊಸ ಅನುಭವಗಳಿಗೆ ತೆರೆಯುವಂತೆ ಮಾಡಿತು.

ಬೇರೆಬೇರೆ ಶಿಕ್ಷಕರ ಬಳಗದ ಜೊತೆ ಕೆಲಸಮಾಡುತ್ತಾ ಅವರ ಹಿನ್ನೆಲೆ, ಅವರ ಕೆಲಸ ಮಾಡುವ ವಿಧಾನ ಅವರು ಸಮಸ್ಯೆಗಳನ್ನು ಪರಿಹರಿಸಲು ಬಳಸುತ್ತಿದ್ದ ವಿವಿಧ ಉಪಾಯಗಳು, ಅವರು ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದ ರೀತಿ, ಶಾಲೆಯ ಜೊತೆಗೆ ಪೋಷಕರ ಬಾಂಧವ್ಯ ಮೊದಲಾದ ಹಲವಾರು ವಿಷಯಗಳನ್ನು ಹತ್ತಿರದಿಂದ ಗಮನಿಸಿ ಕಲಿಯುವ ಅವಕಾಶ ನನ್ನನ್ನು ಬೆಳೆಸಿತು.

ಮಲೆನಾಡಿನ ಆ ಎಲ್ಲ ಶಾಲೆಗಳಲ್ಲೂ ಮಕ್ಕಳು ಬಹಳ ಮುಗ್ಧರು. ಪರಿಸರದ ಜೊತೆ ಅವರ ನಿಕಟವಾದ ಸಂಬಂಧ, ದಿನವೂ ಶಾಲೆಗೆ ನಡೆದು ಬರುತ್ತಿದ್ದ ಪರಿಣಾಮದಿಂದಾಗಿ ಅವರಿಗಿದ್ದ ಗಿಡಮರಗಳ ಪರಿಚಯ, ಭಾನುವಾರ ಮತ್ತು ರಜಾ ದಿನಗಳಲ್ಲಿ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿ ನಾಲ್ಕಾರು ಕಾಸು ಸಂಪಾದಿಸಿ ಅವರಿಗಿದ್ದ ಅನುಭವ, ಮಲೆನಾಡಿನ ಮಳೆ, ಚಳಿಗಳ ಜೊತೆ ಅವರು ಸೊಗಸಾಗಿ ಬೆರೆತುಕೊಂಡಿದ್ದ ರೀತಿ, ಮುಂದೆ ತಾನೇನು ಕಲಿತರೆ ಉತ್ತಮ ಕೆಲಸ ಸಿಗಬಹುದು, ನಾನು ಹೇಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಪ್ರಶ್ನೆಗಳು, ಬಾಯಿ ತುಂಬಾ ಹರಟೆಯ ಮಾತು, ಅವರ ಊರಿನ ಜಾತ್ರೆಗಳಲ್ಲಿ ನಮ್ಮನ್ನು ಕಂಡರೆ ತಮ್ಮ ಮನೆಗೆ ಬಂದ ಅಥಿತಿಗಳನ್ನು ಉಪಚರಿಸುವಂತೆ ನಮಗೂ ಚುರುಮುರಿ, ಐಸ್ ಕ್ರೀಂ ಕೊಡಿಸುತ್ತಿದ್ದ ಅವರ ಪ್ರೀತಿ ಇವೆಲ್ಲಾ ಆ ಮಕ್ಕಳನ್ನು ಮತ್ತೆ ಮತ್ತೆ ನೆನಪಿಸುತ್ತವೆ. ಶಿಕ್ಷಕನಾಗಿ ಈ ಮಕ್ಕಳಿಗೆ ನಾನೇನು ಮಾಡಬೇಕು ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಕೊಳ್ಳುವಂತೆ ಮಾಡುತ್ತವೆ.