”ಈ ಸಂಕಲನದ ಕವಿತೆಗಳ ಮುಖ್ಯಲಕ್ಷಣ ಅನುಭವಗಳ ಭಾವತೀವ್ರತೆಯನ್ನು ನಿರೂಪಣೆಯಲ್ಲಿ ಸಮರ್ಥವಾಗಿ ಹಿಡಿದಿರುವುದು. ಇಲ್ಲಿ ಹೆಣ್ಣಿನ ಉತ್ಕಟತೆ, ಎಚ್ಚರ, ಪ್ರಾಮಾಣಿಕ ನಿಷ್ಠುರತೆ, ಸಮಚಿತ್ತ, ವಿಶ್ಲೇಷಣೆ, ಅಗಲಿಕೆಯ ನೋವು. ಗಂಡಿನ ಗೈರಿನಿಂದ ಉಂಟಾದ ವಿರಹ, ಕನಸು, ಕಣ್ಣೀರು ಹೀಗೆ ಇಲ್ಲಿ ಕಟ್ಟಿಕೊಟ್ಟಿರುವ ಅನುಭವಗಳನ್ನು ಹಿಡಿಯಲು ನೀರಿನ ರೂಪಕವನ್ನು ಬಳಸಬಹುದು. ನೀರು ಆವಿಯಾಗುವ, ಹನಿಯಾಗುವ, ಹೊಳೆಯಾಗುವ, ಸಾಗರವಾಗುವ ಎಷ್ಟು ರೂಪಗಳು, ಹರಿವ ಎಷ್ಟು ಪಾತ್ರಗಳು ಸಂಕಲನದ ಒಂದೊಂದು ಕವಿತೆಯಲ್ಲೂ ಕಾಣಸಿಗುತ್ತವೆ. ಅವುಗಳ ಆರ್ದ್ರತೆ ನಮ್ಮ ಒಳಗನ್ನು ಒದ್ದೆಯಾಗಿಸುವುದು ಈ ಬರವಣಿಗೆಯ ವಿಶೇಷತೆ. ಕಾವ್ಯ ಶಿಲ್ಪದಲ್ಲಿ ಇಂಥ ಚಲನಶೀಲತೆಯನ್ನು ಸಾಧಿಸಿರುವುದು ಅಚ್ಚರಿಯ ಸಂಗತಿಯಾಗಿದೆ”
ನಾಳೆ ಭಾನುವಾರ ಬಿಡುಗಡೆಯಾಗಲಿರುವ ಸಂಧ್ಯಾರಾಣಿ ಮತ್ತು ಭಾರತಿ ಬಿ.ವಿ ಅವರ ಸಂಯುಕ್ತ ಕವನ ಸಂಕಲನ ‘ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ’ ಕೃತಿಗೆ ಡಾ. ಕೆ ವೈ ನಾರಾಯಣಸ್ವಾಮಿ ಬರೆದ ಮುನ್ನುಡಿ.

 

ಸಂಧ್ಯಾರಾಣಿ ಮತ್ತು ಭಾರತಿ ಇಬ್ಬರೂ ಪ್ರಾಣ ಸ್ನೇಹಿತರು, ಕವಿಗಳು. ಕನ್ನಡದ ಓದುಗ ಪ್ರಪಂಚಕ್ಕೆ ತಮ್ಮ ಅತೀವ ಜೀವನ ಪ್ರೀತಿಯ ಬರಹಗಳಿಂದ ಪರಿಚಿತರು.ಇಬ್ಬರೂ ಭಾರತದ, ಅಷ್ಟೇ ಏಕೆ ಜಗತ್ತಿನ ಶ್ರೇಷ್ಠ ಕವಿತೆಗಳ ಅಭ್ಯಾಸಿಗಳು. ಬೋದಿಲಿಯರ್, ಗಿಬ್ರಾನ್, ರೂಮಿ, ಗಾಲಿಬ್ ನಿಂದ ಹಿಡಿದು ಇವೊತ್ತಿನ ಮಹತ್ವದ ಕವಿ ಶಿವಪ್ರಕಾಶರವರೆಗೆ ಕವಿತೆಗಳನ್ನು ಅನುರಕ್ತಿಯಿಂದ ಓದುತ್ತಿರುವವರು. ಭಾರತದ ದಿಟ್ಟ ಮಹಿಳಾ ಕವಿಗಳಾದ ಅಮೃತಾ ಪ್ರೀತಂ ಮತ್ತು ಕಮಲದಾಸ್ ಅವರ ಕವಿತೆಗಳನ್ನು ಕವಿತೆಯ ಹುಚ್ಚಿನಿಂದ ಓದುತ್ತಿರುವ ಕವಿಗಳು. ಈಗ ಇಬ್ಬರೂ ಒಂದುಗೂಡಿ ಕವಿತಾ ಸಂಕಲನವೊಂದನ್ನು ರೂಪಿಸಿದ್ದಾರೆ. ಇದು ಕನ್ನಡದ ಮಟ್ಟಿಗೆ ಹೊಸ ಪ್ರಯೋಗ.

ಹಲವು ಕವಿಗಳು ಕೂಡಿ ಕವಿತೆಗಳ ಸಂಕಲನವನ್ನು ಪ್ರಕಟಿಸುವುದು ರೂಢಿಯಲ್ಲಿರುವ ಪದ್ಧತಿ ಸರಿಯೇ ಸರಿ. ಆದರೆ ಇಬ್ಬರು ಕವಿಗಳು ಒಂದೊಂದು ಪ್ರತ್ಯೇಕ ಕವಿತಾ ಸಂಕಲನವಾಗುವಷ್ಟು ಕವಿತೆಗಳನ್ನು ಒಟ್ಟು ಮಾಡಿ ಪ್ರಕಟಿಸುತ್ತಿರುವುದು ವಿಶೇಷ. ಅಲ್ಲದೆ ಈ ಸಂಯುಕ್ತ ಕವಿತಾ ಸಂಕಲನ ಒಂದು ನಿರ್ದಿಷ್ಟ ವಸ್ತುವೊಂದನ್ನು (ಹೆಣ್ಣುಗಂಡಿನ ಸಂಬಂಧ) ಕುರಿತು ತಾವು ತೀವ್ರವಾಗಿ ಪರಿಭಾವಿಸಿ ಬರೆದ ಮನೋಯಾನಗಳ ಹಾಗೂ ಅನುಭವ ಪ್ರಯಾಣಗಳ ಅಗ್ನಿದಿವ್ಯದಂತಹ ನಿರೂಪಣೆಗಳ ಸಂಕಲನವಾಗಿರುವುದು ಇದರ ವಿಶೇಷ. ಇಲ್ಲಿ ಸಂಕಲಿತವಾದ ಕವಿತೆಗಳಲ್ಲಿ ಒಳ ಸಂವಾದಗಳು ಇರುವಂತೆ ಈ ಇಬ್ಬರ ಕವಿತೆಗಳ ನಡುವೆಯೂ ಸಂವಾದಗಳು ಏರ್ಪಡುವ ಮಾದರಿಗಳನ್ನು ಕಾಣಬಹುದು. ಇಬ್ಬರು ಸಮಕಾಲೀನ ಕವಿಗಳು ಹೀಗೆ ಜಿದ್ದಿಗೆ ಬಿದ್ದಂತೆ ಅನಾದಿಯಿಂದ ಮನುಷ್ಯಲೋಕ ಶೋಧಿಸುತ್ತಿರುವ ಸಂಗತಿಯನ್ನೇ ಬೆನ್ನುಹತ್ತಿ ಹಲ್ಲುಕಚ್ಚಿ ಬರೆದಿರುವುದು ಸೋಜಿಗವಾಗಿದೆ. ಆದ ಕಾರಣ ಇದು ಕನ್ನಡ ಕಾವ್ಯಲೋಕದಲ್ಲಿ ಒಂದು ಅಪರೂಪದ ಪ್ರಯೋಗವೆಂದೇ ಹೇಳಬೇಕು.

ಇಬ್ಬರು ಕವಿಗಳು ಕಂಡಿರಿಸಿರುವ ಕವಿತೆಗಳನ್ನು ಓದಿ ಮುಗಿಸಿದ ತಕ್ಷಣ ನನ್ನ ಮನಸ್ಸಿಗೆ ಹಿಂದೆ ಎಲ್ಲೋ ಓದಿದ್ದ, ಕೇಳಿದ್ದ ಎರಡು ಘಟನೆಗಳು ಧುತ್ತನೆ ನೆನಪಿಗೆ ಬಂದವು. ಒಂದು ಸಂಸ್ಕೃತದ ಸುಭಾಷಿತವಿರಬೇಕು. ಒಂದು ವಸಂತದಲ್ಲಿ ಹೂಬಿಟ್ಟ ಮುತ್ತುಗದ ಮರದ ಕೊಂಬೆಯ ಮೇಲೆ ಗಿಳಿ ಒಂದು ಕುಳಿತಿತ್ತು. ಅಲ್ಲಿಗೆ ದುಂಬಿಯೊಂದು ಮಧುವನ್ನು ಅರಸಿ ಬಂತು. ದುಂಬಿ ಬಂದ ವೇಳೆಗೆ ಸರಿಯಾಗಿ ತಲೆ ಎತ್ತಿ ನೋಡಿದ ಗಿಳಿಗೆ ನೇರಳೆ ಹಣ್ಣೊಂದು ನೇರ ಆಕಾಶದಿಂದ ಕೆಳಗೆ ಬೀಳುತ್ತಿರುವಂತೆ ಭಾಸವಾಯಿತು. ಗಿಳಿ ಆಸೆಯಿಂದ ಬಾಯನ್ನು ಅಗಲಕ್ಕೆ ತೆಗೆದು ಅದನ್ನು ನುಂಗಲು ಕಾತರಿಸಿತು. ಆ ಕ್ಷಣಕ್ಕೆ ದುಂಬಿಗೆ ಗಿಳಿಯ ತೆರೆದ ಬಾಯಿ ಮಧು ತುಂಬಿದ ಕೆಂಪಾದ ಕೇದಿಗೆಯ ಹೂ ಪಾತ್ರೆಯಂತೆ ತೋರಿ ಅದು ಕೂಡ ಆತುರದಿಂದ ಗಿಳಿಯ ತೆರೆದ ಬಾಯಿಯತ್ತ ಧಾವಿಸಿತು. ಹೀಗೆ ಹೂವೆಂದು ದುಂಬಿ, ನೇರಳೆ ಹಣ್ಣೆಂದು ಗಿಳಿ ಪರಸ್ಪರ ಹಂಬಲಿಸಿದವು. ಆದರೆ ಈ ಕೂಟ ಎರಡಕ್ಕೂ ಮೃತ್ಯುರೂಪಿ, ಬೆಂಕಿಯನ್ನು ರಮಿಸಲೆತ್ನಿಸಿದ ಮಳೆಯ ಹುಳುವಿನಂತೆ. ಗಿಳಿ ಮತ್ತು ದುಂಬಿಯ ಈ ಆಕರ್ಷಣೆ ಮತ್ತು ಯಾನ ಎರಡೂ ಪ್ರಜ್ಞಾಸ್ತರಗಳನ್ನು ಮೀರಿದ್ದರಿಂದ ಸಂಭವಿಸಿದ ಜೀವೋತ್ಸಾಹ ಸಂಭ್ರಮ ಮತ್ತು ಪ್ರಾಣೋತ್ಕ್ರಮಣ ಸಂಕಟ. ಈ ಎರಡರ ಅನುಭೂತಿಯೇ ಈ ಘಟನೆಯನ್ನು ಅನನ್ಯವಾಗಿಸಿರುವ ವಿದ್ಯಮಾನ.

ಎರಡನೆಯ ಘಟನೆ ಮಹಾಭಾರತಕ್ಕೆ ಸಂಬಂಧಿಸಿದ್ದು. ಯಕ್ಷ ಪ್ರಶ್ನೆಯ ಭಾಗದ ಹಲವು ನಿರೂಪಣೆಗಳಲ್ಲಿ ಇದೂ ಒಂದಿರಬಹುದು. ಒಂದು ಮಹಾ ವೃಕ್ಷವು ಗಗನದಷ್ಟು ಎತ್ತರ ಬೆಳೆದಿತ್ತು. ಅದರೆ ಈ ವೃಕ್ಷ ಪಾತಾಳದಂತಹ ಪ್ರಪಾತದ ದಡದಲ್ಲಿ ಇತ್ತು. ಅದರ ಚಾಚಿದ ಕೊಂಬೆಯ ತುದಿಯಲ್ಲಿ ಒಂದು ಜೇನುಹುಟ್ಟಿತ್ತು. ಆ ಜೇನುಹುಟ್ಟನ್ನು ಬೇಟೆಗೆ ಬಂದ ಬೇಟೆಗಾರ ನೋಡಿದ. ಹಸಿವು ಮತ್ತು ಜೇನಿನ ಆಕರ್ಷಣೆ ಅವನನ್ನು ಜೇನುಹುಟ್ಟಿಗೆ ಆಸೆಪಡುವಂತೆ ಮಾಡಿತು. ಆದರೆ ಇದರಲ್ಲಿ ಒಂದು ಸಮಸ್ಯೆ ಇತ್ತು. ಜೇನುಹುಟ್ಟಿಗೆ ಏರುವಾಗ ಜಾರಿದರೆ ಕೆಳಗೆ ಪ್ರಪಾತದಲ್ಲಿ ಕಾರ್ಕೋಟಕ ವಿಷ ಸರ್ಪಗಳ ಪಡೆಯೇ ಹಸಿದು ಕಾದಿದ್ದವು. ಈ ಪ್ರಾಣಾಪಾಯದ ಅರಿವಿದ್ದೂ ಬೇಟೆಗಾರ ಜೇನುಹುಟ್ಟಿಗೆ ಕೈಹಾಕಲು ಆ ಘಳಿಗೆ ತೀರ್ಮಾನಿಸಿದ್ದ. ಆತ ಮರ ಏರಿ ಇನ್ನೇನು ಗಗನತುದಿಯ ಜೇನುಹುಟ್ಟಿಗೆ ಕೈ ಹಚ್ಚಬೇಕು. ಅವನೆಲ್ಲಾ ಶ್ರದ್ದೆ ಮತ್ತು ಹಠಗಳನ್ನೂ ಮೀರಿ ಆತ ಹಿಡಿತ ಕಳೆದುಕೊಂಡು ಪ್ರಪಾತಕ್ಕೆ ಜಾರಿದ. ಆದರೆ ಆ ಸಂದರ್ಭದಲ್ಲಿ ಸಣ್ಣ ಬಿಳಲೊಂದು ಕೈಗೆ ಸಿಕ್ಕಿತು. ಅದು ಎಷ್ಟು ಹೊತ್ತು ಇವನ ಭಾರವನ್ನು ಹೊರುವುದೋ ತಿಳಿಯದು ಅಥವಾ ಇವನ ಕೈಹಿಡಿತವೇ ಕಳೆದುಕೊಂಡು ಬೀಳುತ್ತಾನೋ ತಿಳಿಯದು. ಇಂತಹ ಘಳಿಗೆ ಆಕಾಶದಷ್ಟು ಎತ್ತರದಿಂದ ಜೇನುಹುಟ್ಟಿನ ಹನಿಯೊಂದು ಪ್ರಪಾತಕ್ಕೆ ಬೀಳುವುದನ್ನು ಕಂಡ ಈ ವ್ಯಕ್ತಿ ತಾನು ಸಾವಿನತ್ತ ಕ್ಷಣಕ್ಷಣಕ್ಕೂ ಹತ್ತಿರವಾಗುತ್ತಿರುವ ಜೀವಭೀತಿಯನ್ನು ಮೀರಿ ಮೇಲಿಂದ ಜಾರುತ್ತಿರುವ ತೊಟ್ಟು ಹನಿಗಾಗಿ ತನ್ನ ನಾಲಿಗೆಯನ್ನು ಚಾಚಿದನಂತೆ! ಈ ಮನುಷ್ಯನೇಕೆ ಜೀವಸಂಕಟದ ಗಳಿಗೆಯಲ್ಲೂ ಹೀಗೆ ಭಯ ಮತ್ತು ತರ್ಕಗಳನ್ನು ಮೀರಿ ವರ್ತಿಸಿದ ಎಂಬ ಪ್ರಶ್ನೆಯನ್ನು ಯಕ್ಷ ಧರ್ಮರಾಯನಿಗೆ ಕೇಳಿದನೆಂದು ಸಂಸ್ಕೃತ ವಿದ್ವಾಂಸರು ಹತ್ತಿಪ್ಪತ್ತು ವರ್ಷಗಳ ಹಿಂದೆ ವಿಚಾರ ಸಂಕಿರಣವೊಂದರಲ್ಲಿ ಹೇಳಿದ ಮಹಾಭಾರತದ ಈ ಉಪಕತೆ ನನ್ನಲ್ಲಿ ನೀರೊಳಗಣ ಕಿಚ್ಚಿನಂತೆ ಉಳಿದು ಹೋಗಿದೆ. ಈ ಎರಡೂ ಪ್ರಕರಣಗಳಲ್ಲಿನ ಜೀವಗಳ ವರ್ತನೆಯೂ ಲೋಕದ ನೆನಪು ಮತ್ತು ತರ್ಕಗಳನ್ನು ಮೀರಿ ಆ ಕ್ಷಣಿಕವಾಗಿ ಕಂಡ ಮಾಯೆಗೆ ಮನವೊಲಿದ ಪರಿಯು ನಿಗೂಢವಾಗಿ ಕಾಣುತ್ತದೆ. ಈ ಘಟನೆಗಳ ಕಾರ್ಯಕಾರಣಗಳನ್ನು ಚರಿತ್ರೆ ಮನುಷ್ಯ ಲೋಕದ ದುರಂತಕತೆಯಾಗಿ ನಿರ್ಣಯಿಸಬಯಸುತ್ತದೆ. ಇದರ ಪರಿಣಾಮ ಕಾರಣಗಳನ್ನು ಕಾವ್ಯ ಸಂಭ್ರಮಿಸಿ ಹಾಡಬಯಸುತ್ತದೆ. ಕವಿತೆಗೆ ನಿಗೂಢದ ನೆಲೆಗಳತ್ತ ನಡೆಸುವ ಪಯಣವೇ ಗುರಿ. ಬೇಂದ್ರೆ ಅವರ ಜೋಗಿ ಪದ್ಯದ ಕೂಗಿನ ಹಾಗೆ! ಹೆಣ್ಣನ್ನು ಕುರಿತ ಗಂಡಿನ ತಿಳಿವು ಮತ್ತು ಗಂಡನ್ನು ಕುರಿತ ಹೆಣ್ಣಿನ ಎಚ್ಚರ ಇವುಗಳ ಆಚೆಗೆ ನಿರಂತರವಾಗಿ ಅಂಟು ನಂಟಿನ ಬಳ್ಳಿ ಚಿಗುರುತ್ತಲೇ ಇರುವ ಚೋದ್ಯವೇ ಕವಿತೆಯ ಪಯಣವಾಗಿದೆ. ಮನುಕುಲ ನೆನಪಿಟ್ಟುಕೊಳ್ಳುವ ಕಾಲಚಕ್ರ ಮತ್ತು ನೆನಪಿನ ಹಂಗು ತೊರೆಯುವ ಜೀವ ಚಕ್ರಗಳು ಜೊತೆಜೊತೆಗೆ ಉರುಳುತ್ತಾ ಉಳಿಯುವ ಸಂಕಟ ಸಂಭ್ರಮಗಳ ಕಥನವೇ ಪ್ರೇಮಕವಿತೆ ಎಂಬ ನಿಗೂಢ ಪ್ರಯಾಣ. ಪ್ರೇಮವನ್ನು ನಿಯಂತ್ರಿಸುವುದೇ ಎಲ್ಲಾ ಕಾಲದ ಎಲ್ಲಾ ಶಾಸ್ತ್ರಗಳ ಗುರಿಯಾಗಿರುವುದನ್ನು ಗಮನಿಸಬಹುದು. ಎಲ್ಲ ಧರ್ಮಗಳು, ನೀತಿ ಶಾಸ್ತ್ರಗಳು ಪ್ರೇಮದ ವಿಚಾರದಲ್ಲಿ ಅಂಜುವುದನ್ನು ಗಮನಿಸಬಹುದು. ಸಂಕ್ರಾಂತಿ ನಾಟಕದಲ್ಲಿ ಇಂತಹ ಒಳ ನೋಟವೊಂದನ್ನು ಲಂಕೇಶರು ಹೊಳೆಯಿಸುತ್ತಾರೆ.

(ಭಾರತಿ ಬಿ.ವಿ., ಸಂಧ್ಯಾರಾಣಿ)

ಈ ಇಬ್ಬರ ಕವಿತೆಗಳನ್ನು ಓದುವಾಗ ಈ ನೆನಪುಗಳು ಯಾಕೆ ನನ್ನ ಮನಸ್ಸಿಗೆ ಬಂದವು? ಈ ಕವಿತೆಗಳು ನಿರೂಪಿಸಲೆತ್ನಿಸುವ ಅನುಭವಗಳಿಗೂ ಈ ನೆನಪುಗಳಿಗೂ ಯಾವುದೋ ನಂಟು ಇರಬೇಕು ಎಂದು ನನಗೆ ಅನ್ನಿಸುತ್ತಿದೆ. ಸಂಧ್ಯಾರಾಣಿ ಮತ್ತು ಭಾರತಿ ಅವರು ಈ ನಿಗೂಢ ಲೋಕದಲ್ಲಿ ತಾವು ಕೈಗೊಂಡ ಮನೋಪ್ರಯಾಣಗಳ ದಾಖಲಾತಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಇಂಥ ಪ್ರಯಾಣಗಳ ಹೆಣ್ಣಿನ ಎರಡು ನಿಚ್ಚಳ ದಾರಿಗಳನ್ನು ಉತ್ತರದ ಕವಿ ಅಮೃತಾ ಪ್ರೀತಂ ಮತ್ತು ದಕ್ಷಿಣದ ಕವಿ ಕಮಲದಾಸ್ ಕಾಣಿಸಿದ್ದಾರೆ. ಇನ್ನು ಕಾಳಿದಾಸನಿಂದ ಹಿಡಿದು ಕುವೆಂಪು ಬೇಂದ್ರೆಯವರಿಗೆ ಎಷ್ಟೊಂದು ಮಹಾಕವಿಗಳು ತಮ್ಮ ಅಮರಕೃತಿಗಳಲ್ಲಿ ಗಂಡುಕಣ್ಣಿಂದ ಹೆಣ್ಣಿನ ಲೋಕವನ್ನು ಕಾಣಲು ಯತ್ನಿಸಿದ್ದಾರೆ. ಆದರೆ ಅವರ ನಿರೂಪಣೆಗಳು ಬಹುತೇಕ ಗಂಡು ಕಂಡ ಚಿತ್ರಗಳಿಗಿಂತ, ಗಂಡು ಕಾಣಲು ಬಯಸಿದ ಹೆಣ್ಣು ಪ್ರಪಂಚಗಳೇ ಅಕ್ಷರಗಳಿಗೆ ಇಳಿದಿವೆ. ಸಾವಿರಾರು ವರ್ಷಗಳ ಅಕ್ಷರಚರಿತ್ರೆಯ ದಾಖಲೆಗಳಾದ ಕಾವ್ಯದಲ್ಲಿ ಮತ್ತು ಶಾಸ್ತ್ರದಲ್ಲಿ ಕಟ್ಟಿ ಕೊಟ್ಟಿರುವ ಹೆಣ್ಣಿನ ಪ್ರಪಂಚ ಅತ್ಯಂತ ಚಿಕ್ಕ ಪ್ರಮಾಣದ್ದು ಎಂದು ಗಂಡುಲೋಕಕ್ಕೆ ತಿಳಿದ್ದು ಈಚೆಗೆಷ್ಟೆ. ಸಿಮೋಂದೋ ಬುವಾ ಅವರ ‘ಸೆಕೆಂಡ್ ಸೆಕ್ಸ್’ ಪುಸ್ತಕ ಹೆಣ್ಣಿನ ಕುರಿತಂಥ ಲೋಕಜ್ಞಾನದ ಕುರುಡನ್ನು ತೋರಿದ ಮೇಲೆಯೇ ನಮಗೆ ಈ ವಿಷಯ ಸ್ಪಷ್ಟ ಅರಿವಿಗೆ ಬಂದದ್ದು. ಅಕ್ಕನ ಕವಿತೆಗಳಲ್ಲಿ, ಜನಪದದ ಹಾಡುಗಳಲ್ಲಿ, ತತ್ವಪದಗಳಲ್ಲಿ ಕಳೆದ ಶತಮಾನದ ಮಹಿಳಾ ಕವಿತೆಗಳಲ್ಲಿ ನಿರೂಪಿಸಿರುವ ಜಗತ್ತನ್ನು ನೋಡಿದರೆ ಹೆಣ್ಣಿನ ಕುರಿತ ತಿಳಿವಿನ ಅಭಾವದ ಕುರುಹು ನಮಗೆ ತಿಳಿಯುತ್ತದೆ. ಆದಿಕವಿ ಪಂಪ ದ್ರೌಪದಿಯನ್ನು ಕುರಿತು ‘ಭವತ್ಕೇಶ ಪಾಶ ಪ್ರಪಂಚ’ ಎಂದೂ, ಬೋದಿಲಿಯರ್ ಮಹಾಶಯ ಹೆಣ್ಣಿನ ಕೂದಲಿನಲ್ಲಿ ಅರ್ಧ ಪ್ರಪಂಚ ಎಂದೂ ಬರೆದಿರುವುದನ್ನು ನೋಡಿದರೆ ನಮ್ಮ ಅಕ್ಷರಗಳಲ್ಲಿ ಮುಕ್ಕಾಗಿ ದಾಖಲಾಗಿರುವ ಸ್ತ್ರೀ ರೂಪಗಳು, ಸಿದ್ದ ಚೌಕಟ್ಟಿನ ಕೆಲವೇ ಕೆಲವು ಚಿತ್ರಗಳು ಮಾತ್ರ ನಮಗೆ ಕಾಣಸಿಗುತ್ತವೆ.

ಮಹಿಳಾ ನಿರೂಪಣೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಅಕ್ಕನನ್ನು ಹೊರತುಪಡಿಸಿ ಗಂಡು ಕಟ್ಟಿಕೊಟ್ಟ ಹೆಣ್ಣು ಕಲ್ಪನೆಗಳನ್ನೇ ಬಳಸಿ ಕಾವ್ಯ ರಚಿಸುತ್ತಿದ್ದ ಕನ್ನಡದ ಮಹಿಳಾ ಕಾವ್ಯಲೋಕ ಈಚೆಗೆ ಈ ಬಂಧನವನ್ನು ತೊಡೆದು ಕೊಂಡಿದೆ. ಹೆಣ್ಣಿನ ಕಣ್ಣು ಕಂಡಿರಿಸಿದ ಲೋಕ ನಿರೂಪಣೆಯ ಸಾಧ್ಯತೆಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಅಗ್ನಿರಾಜನ ಮಗಳು ಕೃತ್ತಿಕೆ, ಯಶೋಧರನ ಪರಿತ್ಯಕ್ತ ಮಡದಿ ಅಮೃತಮತಿ, ನಳನ ಹೆಂಡತಿ ದಮಯಂತಿ, ಜನಪದದ ಜಮದಗ್ನಿಯ ಪತ್ನಿ ರೇಣುಕಾ, ಮಹದೇವನ ಮಡದಿ ಭಾಗೀರತಿ, ಹೇಮರೆಡ್ಡಿ ಮಲ್ಲಮ್ಮ ಹೀಗೆ ಎಷ್ಟೊಂದು ಪಾತ್ರಗಳು ಈಗ ಮಾತನಾಡಲು ಪ್ರಾರಂಭಿಸಿವೆ. ಅದೂ ತಮ್ಮದೇ ದನಿಗಳಲ್ಲಿ. ಈ ಹೆಣ್ಣುಗಳ ಮೌನ ಕಾಪಾಡಿಕೊಂಡು ಬಂದಿದ್ದ ಗಂಡು ಲೋಕದ ಸನಾತನ ಮೌಲ್ಯಗಳು ಕೆಂಡದ ಮೇಲೆ ಬಿದ್ದ ಹುಳುಗಳು ಸೀಯುವಂತೆ ಚಿಟಪಟವೆಂದು ಸದ್ದುಮಾಡುತ್ತಿವೆ. ಈಗ ಹೆಣ್ಣು ಕಂಡ, ಕಾಣಿಸುತ್ತಿರುವ ಲೋಕಗಳು ನಮಗೂ ಕಾಣುತ್ತಿವೆ. ಹೆಣ್ಣು ಮಕ್ಕಳು ಬರೆಯುತ್ತಿದ್ದರೂ ಗಂಡು ಕಣ್ಣುಗಳ ಚಿತ್ರಗಳಿಂದ ಪಾರಾಗುವುದು ನಮ್ಮಂಥ ಪಿತೃಪ್ರಧಾನ ಸಮಾಜದಲ್ಲಿ ಅಷ್ಟು ಸುಲಭದ ಮಾತಲ್ಲ. ಪ್ರೇಮ, ಪ್ರೀತಿ, ಪ್ರಣಯ ಹೀಗೆ ಹೆಣ್ಣಿನ ಯೌವನ, ವಯೋಮಾನ ಗಂಡುಲೋಕದಲ್ಲಿ ಶೋಧಿತವಾದಂತೆ ಆಕೆಯ ವ್ಯಕ್ತಿತ್ವದ ಅನಂತ ಸಾಧ್ಯತೆಗಳು, ಅನೂಹ್ಯ ರೂಪಗಳು ಇನ್ನೂ ಕವಿತೆಯ ಆಚೆಗಿನ ನೇಪಥ್ಯದಲ್ಲಿ ಬಣ್ಣ ಹಚ್ಚಿ ತಮ್ಮ ಪ್ರವೇಶಕ್ಕೆ ಕಾಯುತ್ತಾ ಕುಂತಿವೆ. ಈ ಕವನ ಸಂಕಲನದಲ್ಲಿ ಇಂಥ ಎಷ್ಟೋ ಪಾತ್ರಗಳನ್ನು ಕಾವ್ಯ ರಂಗದ ಮೇಲೆ ಈ ಇಬ್ಬರು ಕವಿಗಳು ಕರೆದು ತಂದಿದ್ದಾರೆ.

ಕ್ಷಮಿಸು
ನಾನೆಂದರೆ ನಿನ್ನೊಳಗಿನ
ಬರಿ ಎರಡು ಆಯಾಮದ
ಚಿತ್ರ ಮಾತ್ರವಾಗಲಾರೆ (ಭಾರತಿ)

‘ಅದೊಂದು ದಿನ ಓಟ ಶುರುವಾಯಿತು, ನಿನ್ನಿಂದ ತಪ್ಪಿಸಿಕೊಳ್ಳುವ ಓಟ’ ಹೀಗೆ ಪ್ರಜ್ಞಾಪೂರ್ವಕವಾಗಿ ಹೆಣ್ಣು ಬಂಧನದಿಂದ ಬಿಡುಗಡೆಗೊಂಡ ಘೋಷಣೆಯಂತೆ ಈ ಮಾತು ಕೇಳುತ್ತಿದೆ. ಮಹಿಳೆಯ ಅರಿವಿನ ಹಾದಿಯನ್ನು ಲೆಕ್ಕವಿಡುವ ಕೆಲಸವಿನ್ನು ಗಂಡು ಲೋಕದ ಪಾಲಿಗೆ ಮೀಸಲಿದೆ ಎಂದು ಈ ನಿರ್ಣಯ ಹೇಳುವಂತಿದೆ.

ಈ ಸಂಕಲನದ ಕವಿತೆಗಳ ಮುಖ್ಯಲಕ್ಷಣ ಅನುಭವಗಳ ಭಾವತೀವ್ರತೆಯನ್ನು ನಿರೂಪಣೆಯಲ್ಲಿ ಸಮರ್ಥವಾಗಿ ಹಿಡಿದಿರುವುದು. ಇಲ್ಲಿ ಹೆಣ್ಣಿನ ಉತ್ಕಟತೆ, ಎಚ್ಚರ, ಪ್ರಾಮಾಣಿಕ ನಿಷ್ಠುರತೆ, ಸಮಚಿತ್ತ, ವಿಶ್ಲೇಷಣೆ, ಅಗಲಿಕೆಯ ನೋವು. ಗಂಡಿನ ಗೈರಿನಿಂದ ಉಂಟಾದ ವಿರಹ, ಕನಸು, ಕಣ್ಣೀರು ಹೀಗೆ ಇಲ್ಲಿ ಕಟ್ಟಿಕೊಟ್ಟಿರುವ ಅನುಭವಗಳನ್ನು ಹಿಡಿಯಲು ನೀರಿನ ರೂಪಕವನ್ನು ಬಳಸಬಹುದು. ನೀರು ಆವಿಯಾಗುವ, ಹನಿಯಾಗುವ, ಹೊಳೆಯಾಗುವ, ಸಾಗರವಾಗುವ ಎಷ್ಟು ರೂಪಗಳು, ಹರಿವ ಎಷ್ಟು ಪಾತ್ರಗಳು ಸಂಕಲನದ ಒಂದೊಂದು ಕವಿತೆಯಲ್ಲೂ ಕಾಣಸಿಗುತ್ತವೆ. ಅವುಗಳ ಆರ್ದ್ರತೆ ನಮ್ಮ ಒಳಗನ್ನು ಒದ್ದೆಯಾಗಿಸುವುದು ಈ ಬರವಣಿಗೆಯ ವಿಶೇಷತೆ. ಕಾವ್ಯ ಶಿಲ್ಪದಲ್ಲಿ ಇಂಥ ಚಲನಶೀಲತೆಯನ್ನು ಸಾಧಿಸಿರುವುದು ಅಚ್ಚರಿಯ ಸಂಗತಿಯಾಗಿದೆ.

ಹನಿಯಾಗಿ
ಸ್ವರವಾಗಿ
ರಾಗವಾಗಿ
ಹಾಡಾಗಿ
ಕಡಲಾಗಿ ಮೊರೆದು
ಮೆಟ್ಟಿಲು ಒತ್ತಿ, ಗುಡ್ಡವ ಹತ್ತಿ
ಬೆಟ್ಟದ ತುದಿ ಏರಿ
ಕಾಲು ಮೀಟಿ
ಒಮ್ಮೆಲೆ
ಸ್ವತಂತ್ರವಾಗಿ
ಆಗಸದುದ್ದ ಹರಡಿ
ಮರುಕ್ಷಣ ನೀರವತೆಯಲ್ಲಿ
ಇಲ್ಲವಾಗುವುದು
ನಿಯತಿ..
ರಾಗದ್ದೂ ಸಹ (ಸಂಧ್ಯಾರಾಣಿ)

(ಡಾ ಕೆ ವೈ ನಾರಾಯಣಸ್ವಾಮಿ)

ಈ ಸಂಕಲನದ ಮತ್ತೊಂದು ಮುಖ್ಯವಾದ ಸಾಧನೆಯೆಂದರೆ ಇಲ್ಲಿನ ನಿರೂಪಣೆಗಳು ವರ್ತಮಾನದಲ್ಲಿ ಕನ್ನಡದ ಮಹಿಳಾ ಕಾವ್ಯ ಎದುರಿಸುತ್ತಿರುವ ಬಿಕ್ಕಟ್ಟೊಂದನ್ನು ಸುಲಭವಾಗಿ ದಾಟಿರುವುದು. ಸ್ತ್ರೀವಾದ ಕಲಿಸಿದ, ಹೆಣ್ಣನ್ನು ಬಲಿಪಶುವೆಂದು ಬಿಂಬಿಸಿದ ನೆಲೆಯಿಂದ ಬಿಡುಗಡೆಗೊಂಡು ಆಲೋಚಿಸುತ್ತಿರುವ ವಿಧಾನ ಆರೋಗ್ಯಕರವಾದ ಬೆಳವಣಿಗೆಯಾಗಿದೆ. ಇದು ತಮ್ಮ ಕವಿತೆಗಳಲ್ಲಿ ಮುಖಾಮುಖಿಯಾಗುತ್ತಿರುವ ಗಂಡು ಪಾತ್ರಗಳನ್ನು ನಿರೂಪಿಸಲು ಬೇಕಾದ ಪೂರ್ವಗ್ರಹಮುಕ್ತತೆಯನ್ನು ಇಲ್ಲಿ ಕವಿಗಳಿಗೆ, ಕವಿತೆಗಳಿಗೆ ಒದಗಿಸಿದೆ. ಆದ ಕಾರಣ ತಮ್ಮ ನಿರೂಪಣೆಗಳಲ್ಲಿ ತಮ್ಮ ಪ್ರಯಾಣಗಳಿಗೆ ಪ್ರಾಮಾಣಿಕವಾಗಿರಲು ಸಾಧ್ಯವಾಗಿದೆ. ಈ ಸಂಕಲನದ ಎಷ್ಟೋ ಕವಿತೆಗಳು ಕನ್ನಡ ಕಾವ್ಯ ಪರಂಪರೆಯೊಂದಿಗೆ ಮಾತನಾಡಲು ಯತ್ನಿಸುತ್ತಿವೆ. ಕೆ. ಎಸ್. ಎನ್ ಅವರ ಕವಿತೆಗಳೊಂದಿಗೆ ಈ ಕವಿತೆಗಳು ಅನುಸಂಧಾನಿಸಿದಂತೆ ನನಗೆ ಭಾಸವಾಗುತ್ತಿದೆ.

ಈ ಕವಿತೆಗಳ ಅಂತರಂಗದಲ್ಲಿ ತೇಲುತ್ತಿರುವುದು ಸಂಗಾತ ಸಂಹಿತವೆನ್ನಬಹುದು. ಗಂಡನ್ನು ಉದ್ದೇಶಿಸುವ ಎಲ್ಲಾ ಸಂಬೋಧನೆಗಳು ಕೂಡ ಈ ಕವಿತೆಗಳು ನಿರ್ವಚಿಸುತ್ತಿರುವ ಪುರುಷ ಕಲ್ಪನೆಗಳನ್ನು ಮುರಿದು ಹಾಕಿವೆ. ಹೆಣ್ಣು ಮತ್ತು ಗಂಡು ಪ್ರಕೃತಿಯ ನಿಯತಿಯಂತೆ ಜತೆಗೂಡಿ ನಡೆಸಬೇಕಾದ ಪ್ರಯಾಣವನ್ನು ಮನಗಾಣಿಸಲು ಈ ಕವಿತೆಗಳು ಹಂಬಲಿಸುತ್ತಿವೆ. ಜ್ಞಾನ ಮತ್ತು ಅಧಿಕಾರದ ನೆನಪುಗಳಿಂದ ಸಂಗಾತಿ ಗಂಡಸನ್ನು ಪಡೆಯುವ ಅನಿವಾರ್ಯತೆಯನ್ನು ಕವಿತೆಗಳು ನಿರೂಪಿಸುತ್ತಿವೆ. ಈ ಕವಿತೆಗಳಲ್ಲಿ ಮೂರು ಬಗೆಯ ಗಂಡುಗಳು ಕಾಣಸಿಗುತ್ತಾರೆ. ಸಮಾಜ ರೂಪಿಸಿದ ಮೌಲ್ಯಗಳಿಂದ ನಿಯಂತ್ರಿತರಾದ ಗಂಡಸರ ಚಹರೆಗಳು ಈ ಕವಿತೆಗಳಲ್ಲಿ ಕಾಣುತ್ತವೆ. ಹೆಣ್ಣನ್ನು ಮಣ್ಣು ಮತ್ತು ಹೊನ್ನಿನಂತೆ ಕಾಯುವ, ಕಾಮಿಸುವ ‘ಕಾಲವಶದಿಂ ಮರ್ಯಾದೆಯಂ ದಾಂಟಿದರೆ’ ಕೊಲ್ಲುವ ಗಂಡಸರ ಗುಣ ಧರ್ಮಕ್ರಿಯೆಗಳು ಇಲ್ಲಿ ಪುನರ್ ಸಂಭವಿಸಿವೆ. ಬೇಟವೂ ಬೇಟೆಯಾಗುವ ನೆಲೆ (ಬೇಟೆ-ಕವಿತೆ) ಈ ಕವಿತೆಗಳ ಗುರುತ್ವ ಕೇಂದ್ರವಾಗಿದೆ.

ಇಲ್ಲಿನ ಕವಿತೆಗಳಲ್ಲಿ ನಿರೂಪಿತವಾಗಿರುವ ಎರಡನೆ ಬಗೆಯ ಗಂಡುಚಹರೆಯೂ ಕವಿಯ ಮನೋಗತ ಚಿತ್ರಿಸಿಕೊಂಡಿರುವ ಪುರುಷರೂಪಿಯಾಗಿದೆ. ಈ ಗಂಡಸು ಪುರುಷ ಯಜಮಾನಿಕೆಯನ್ನು ಒಲ್ಲದ ಮಾದರಿ. ಈತನ ಜೊತೆಗಿನ ಸಂಬಂಧಕ್ಕೆ ಮಳೆಯ ಹನಿಗೆ ಭೂಮಿಯಿಂದ ಹೊಮ್ಮುವ ಗಮಲಿನ ಪರಿಮಳವಿದೆ. ‘ಮಳೆಮೆದ್ದ ಮಣ್ಣ ಪರಿಮಳ ನೆನಪಿಸುತ್ತದೆ ನಿನ್ನೆದೆಯ ಬೆವರಿನ ಘಮ ಮಳೆಯಂಥವನೆ’ (ಸಂಧ್ಯಾರಾಣಿ) ‘ಕಾದಾಡಿದ ಮರುಘಳಿಗೆ ಹತ್ತಿರಕ್ಕೆಳೆದು ಬೆನ್ನು ತಡುವುತ್ತಾನೆ ಅಪ್ಪಟ ಪ್ರೇಮಿಯಾದ ಮರುಗಳಿಗೆ ಎದೆಗಪ್ಪುವ ಅಮ್ಮನಾಗುತ್ತಾನೆ'(ಭಾರತಿ) ಇದು ಪುರುಷನ ಆದರ್ಶೀಕರಣದ ನೆಲೆ. ಅಕ್ಕ ಹಂಬಲಿಸಿದ ಮಲ್ಲಿಕಾರ್ಜುನ ಕೂಡ ಇಂತಹ ಪುರುಷನೇ ಆಗಿದ್ದ. ಇಲ್ಲಿ ಪುರುಷ ಮೈಯೊಳಗೆ ಹೆಣ್ಣಿನ ಮನಸು ಮೈಪಡೆಯುವ ಬಗೆಯ ಲಕ್ಷಣವನ್ನು ಪಡೆದುಕೊಂಡಿದೆ. ಈ ಕವಿಗಳಿಬ್ಬರ ಕವಿತೆಗಳು ಈ ಪುರುಷನ ಗುಣಗಾನವನ್ನು ಎಗ್ಗಿಲ್ಲದೆ ಎದೆಯ ಹಾಡಾಗಿಸಿಕೊಂಡಿವೆ. ಕನ್ನಡದಲ್ಲಿ ಇಂತಹ ಪುರುಷನನ್ನು ಕಲ್ಪಿಸಿಕೊಂಡು ಹುಡುಕುವ ಪರಿ ಕಸ್ತೂರಿ ಮೃಗ ಸುಗಂಧವನ್ನರಸುವ ಪ್ರಕ್ರಿಯೆಯಂತೆ ಕಾಣುತ್ತದೆ. ಮಹಿಳಾ ಕಾವ್ಯದಲ್ಲಿ ಮತ್ತೆ ಮತ್ತೆ ಕಾಣಿಸುವ ಆದಿಮ ಪ್ರತಿಮೆ ಇದು.

ಇನ್ನು ಮೂರನೆಯ ಮಾದರಿ ಹೆಣ್ಣಿನ ಬದುಕಿನಲ್ಲಿ ಗಂಡಿನ ಗೈರು ಹಾಜರಿ ಉಂಟು ಮಾಡುವ ಖಾಲಿತನದ ಅನುಭವ ಮತ್ತು ಸುಖದ ನೆನಹಿನ ನಿರೂಪಣೆಗಳು. ಈ ಮಾದರಿಯಲ್ಲಿ ಗಂಡು ಈಗಾಗಲೇ ಹೆಣ್ಣಿನ ಬದುಕಿನಿಂದ ನಿಷ್ಕ್ರಮಣಗೊಂಡಿದ್ದಾನೆ. ಆದರೆ ಆತನ ಜೊತೆಗಿನ ನೆನಪುಗಳು ಇನ್ನೂ ಹಸಿಯಾಗಿರುವುದನ್ನು ಮೆಲುಕು ಹಾಕುವ ಧಾಟಿಯ ನಿರೂಪಣೆಗಳು. ಇವು ಅತ್ಯಂತ ಜನಪ್ರಿಯ ಮಾದರಿಯ ನಿರೂಪಣೆಗಳು. ಕವಿತೆಯನ್ನು ಬರೆಯಹೊರಟ ಹೊಸಬರೆಲ್ಲಾ ಸಾಮಾನ್ಯವಾಗಿ ಬಳಸುವ ಮಾದರಿ ಇದು. ಇಂತಹ ಕವಿತೆಗಳು ಕೂಡ ಇಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ.

(ಚಿತ್ರಗಳು: ಸೃಜನ್ )

ಹೀಗೆ ಈ ಕವಿತೆಗಳು ಕನ್ನಡ ಮಹಿಳಾ ಕಾವ್ಯದ ವಿಸ್ತಾರವನ್ನು ಹಿಗ್ಗಿಸುವ ಹೊಸ ಸಂವೇದನೆಗಳನ್ನು ಸೇರಿಸುವ ಕವಿತೆಗಳಾಗಿರುವುದರಿಂದ ಓದುಗರ ಹೃದಯವನ್ನು ಸಂಮೋಹನಗೊಳಿಸುವ ಶಕ್ತಿಯನ್ನು ಪಡೆದುಕೊಂಡಿವೆ. ಇಂತಹ ಕವಿತೆಗಳಿಗೆ ಬೇಕಾದ ಭಾವಧ್ಯಾನ ಮತ್ತು ಶಿಲ್ಪಿ ಸಹನೆಗಳನ್ನು ಈ ಇಬ್ಬರು ಕವಿಗಳು ತಮ್ಮ ಬರವಣಿಗೆಯಲ್ಲಿ ಸಾಧಿಸಿದ್ದಾರೆ. ಭಾರತಿ ಅವರು ಸ್ವಲ್ಪ ಆಕ್ರಮಣ ರೀತಿಯಲ್ಲೂ, ಸಂಧ್ಯಾ ಅವರು ಸ್ವಲ್ಪ ಸಂತೈಕೆಯ ರೀತಿಯಲ್ಲೂ ಭಾವನೆಗಳನ್ನು ನಿಭಾಯಿಸಿದ್ದಾರೆ.

ಇನ್ನು ಒಂದು ಕೊನೆಯ ಮಾತು, ಕವಿತೆಯಲ್ಲಿ ಬಳಕೆಯಾದ ಭಾಷಾ ಪ್ರಯೋಗಕ್ಕೆ ಸಂಬಂಧಿಸಿದ್ದು. ಈ ಸಮಸ್ಯೆ ಈ ಇಬ್ಬರು ನಿರೂಪಣೆಗೆ ಮಾತ್ರವಲ್ಲದೆ ವರ್ತಮಾನದ ಕನ್ನಡ ಕವಿತೆಗೂ ಅನ್ವಯಿಸುವಂಥದ್ದು. ಕವಿತೆಗಳಲ್ಲಿ ಕಾಣಿಸುವ ವಸ್ತು ವೈವಿಧ್ಯತೆ ಮತ್ತು ಅನುಭವ ಸೂಕ್ಷ್ಮತೆಯ ನವಿರು ಆಯಾಮಗಳು ಕವಿತೆಯ ಭಾಷಾ ಬಳಕೆಯ ಕೌಶಲ್ಯದಲ್ಲಿ ಕಾಣುವುದಿಲ್ಲ. ಎದೆ ತುಂಬುವ ಭಾವನಾತ್ಮಕತೆಯನ್ನು ಸೊಲ್ಲಿನಲ್ಲಿ ನುಡಿಸುವ ಪ್ರಯತ್ನವನ್ನು ಕವಿಗಳು ಪ್ರಜ್ಞಾಪೂರ್ವಕವಾಗಿಯೇ ಕಟ್ಟಬೇಕಿದೆ. ಕವಿತೆಯ ಭಾಷೆ ಕೂಡ ಕವಿತೆಯ ದೇಹ ಮಾತ್ರವಲ್ಲ, ಜೀವ ಪ್ರಕಟಿಸುವ ಸಾಧನವೆಂಬ ಸತ್ಯ ಕವಿಗಳಿಗೆ ಅರಿವಾಗಬೇಕಾದ ಸಂಗತಿಯಾಗಿದೆ. ಹೆಣ್ಣಿನ ಕಣ್ಣು ಕವಿತೆಯಲ್ಲಿ ಪ್ರಧಾನವಾದಂತೆ, ಕಿವಿಯೂ ಪ್ರಧಾನವಾದರೆ ಈ ಸಮಸ್ಯೆ ತಾನೇ ತಾನಾಗಿ ನೀಗುತ್ತದೆ. ‘ಕವಿಗೆ ಕಿವಿ ಪ್ರಮಾಣಮಲ್ತೆ’ ಎಂದ ಕುವೆಂಪು ಅವರ ಅಣತಿಯಂತೆ ಕವಿತೆ ಹಾಡಾಗುತ್ತದೆ.

ಈ ಇಬ್ಬರು ಗೆಳತಿಯರು ಅದಾವ ಧೈರ್ಯದ ಮೇಲೆ ನನ್ನನ್ನು ಈ ಸಂಯುಕ್ತ ಕವನ ಸಂಕಲನಕ್ಕೆ ಮುನ್ನುಡಿಯ ಮಾತುಗಳನ್ನು ಬರೆಯಲು ಹೇಳಿದರೋ ಗೊತ್ತಿಲ್ಲ. ಈ ನೆಪದಲ್ಲಿ ಕವಿತೆಗಳನ್ನು ಓದುವ ಸುಖವನ್ನು ಒದಗಿಸಿದ್ದಾರೆ. ಇವರ ಮುಂದಿನ ಕಾವ್ಯ ಪ್ರಯೋಗವನ್ನು ನಾನು ಕುತೂಹಲದಿಂದ ನಿರೀಕ್ಷಿಸುತ್ತೇನೆ. ಈ ಇಬ್ಬರು ಕವಿಗಳಿಗೆ ಶುಭ ಕೋರುತ್ತೇನೆ.