ಮನೆಯ ಎದುರಿಗೆ ರಸ್ತೆಯ ಪಕ್ಕದಲ್ಲಿ ಜೀರಕನ ಮರ ಹಣ್ಣು ಬಿಟ್ಟಾಗ ನಮಗೆ ಆ ಮರದ ಆಕರ್ಷಣೆ.. ಹೊಂಬಣ್ಣದ ಜೀರ್ಕ ಹಣ್ಣುಗಳನ್ನು ದೋಟಿಗೆ ಎಟುಕಿಸಿ ಉದುರಿಸಿ ಹಿರಿಯರ ಕಣ್ಣು ತಪ್ಪಿಸಿ ಅಡಿಕೆ ಚಪ್ಪರದ ಮೇಲೆ ತೆಗೆದುಕೊಂಡು ಹೋಗಿ ಇಟ್ಟು.. ಅಡಿಗೆ ಮನೆಯಿಂದ ಉಪ್ಪು ಬಾಳೆಲೆ, ಬೆಲ್ಲ ಇನ್ನೊಬ್ಬರು ತರುವುದು. ಜೀರಿಗೆ ಮೆಣಸು ಮತ್ತೊಬ್ಬರು.. ಹಣ್ಣಿನ ತೊಳೆ ಬಿಡಿಸಿ ಬಾಳೆ ಎಲೆ ಮೇಲೆ ಉಪ್ಪು, ಮೆಣಸು ಬೆಲ್ಲ ಹಾಕಿ ಕಲೆಸಿ ಮತ್ತೆ ಚಿಕ್ಕ ಬಾಳೆ ಎಲೆ ತುಂಡಿನ ಮೇಲೆ ಎಲ್ಲರಿಗೂ ಹಂಚಿ ಆ ಕಟುವಾದ ಹುಳಿ, ಸಿಹಿ, ಖಾರದ ರುಚಿಯನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದೆವು..
ಡಾ. ಎಲ್.ಸಿ. ಸುಮಿತ್ರಾ ಬರೆದ ಪ್ರಬಂಧ

 

ಶಾಲೆ, ಕಾಲೇಜು, ಮನೆ ಎಲ್ಲೆ ಆಗಲಿ ಬಿಸಿಲಿದ್ದಾಗ ಮಕ್ಕಳು ಆಟವಾಡಲು ಸಮೀಪದ ಮರ ಹುಡುಕುವುದು ಸಾಮಾನ್ಯ. ನಾವು ಶನಿವಾರ ಭಾನುವಾರ ಮತ್ತು ಬೇಸಿಗೆ ರಜೆ, ದಸರಾ ರಜೆಗಳಲ್ಲಿ ಹಾಗೆ ಮನೆಯ ಸುತ್ತ ಮುತ್ತ ಇದ್ದ ಮರಗಳ ಕೆಳಗೆ ನಮ್ಮ ಆಟ.. ಹಾಗೆ ಹೆಚ್ಚು ಸಮಯ ಕಳೆಯುತ್ತಿದ್ದುದು ಅತ್ತಿ ಮರದ ಕೆಳಗೆ. ಮಳೆಗಾಲದಲ್ಲಿ ಅದು ನೀರು ಹರಿಯುವ ಜಾಗವಾದುದರಿಂದ ಅಲ್ಲಿ ಹೋಗುತ್ತಿರಲಿಲ್ಲ.. ಬೇಸಿಗೆಯಲ್ಲಿ ಅತ್ತೀ ಹಣ್ಣಿನ ಪರಿಮಳ ಅಲ್ಲೆಲ್ಲ ತುಂಬಿರುತ್ತಿತ್ತು. ದನಗಳಿಗೆ ಅತ್ತೀ ಹಣ್ಣು ಪ್ರಿಯವಾದುದು. ಅವು ಒಂದನ್ನೊಂದು ತಳ್ಳಿ ಹಣ್ಣು ತಿನ್ನಲು ಸ್ಪರ್ಧೆ ನಡೆಸುತ್ತಿದ್ದವು. ನಾವೂ ಹಣ್ಣಿನ ಬಣ್ಣ ಬಣ್ಣದ ಆಕರ್ಷಣೆಯಿಂದ ತಿನ್ನಲು ಬಿಚ್ಚಿದರೆ ಒಳಗೆಲ್ಲ ಸಣ್ಣ ಬೀಜದ ಜತೆಗೆ ಹುಳುಗಳು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹುಳುವಿಲ್ಲದ ಹಣ್ಣು ಹುಡುಕಿ ತಿನ್ನುತ್ತಿದ್ದೆವು. ಮರದ ಒಂದು ಬದಿಯಲ್ಲಿ ಹುಟ್ಟಿಕೊಂಡ ಅಣ್ಣೆ ಸೊಪ್ಪಿನ ಗಿಡಗಳು ನವೆಂಬರ್ ಹೊತ್ತಿಗೆ ಪ್ಲಾಸ್ಟಿಕ್ ಹೂವಿನಂತೆ ಹೂ ಬಿಡುತ್ತಿದ್ದವು.

ಮರದ ಪಕ್ಕದಲ್ಲಿ ಗದ್ದೆಬಯಲು. ಇನ್ನೊಂದು ಪಕ್ಕದಲ್ಲಿ ಅಡಕೆ ತೋಟ… ಅದರ ಬೇಲಿಯಲ್ಲಿ ಒಂದು ಆಮ್ರದ ಹಣ್ಣಿನ ಗಿಡ.. ಅಥವ ಸಣ್ಣ ಮರ. ಇದರ ಮೇಲೆಯು ಹತ್ತಿ ಹಣ್ಣು ಕೀಳುತ್ತಿದ್ದೆವು. ಹಣ್ಣು ಕೆಂಬಣ್ಣಕೆ ತಿರುಗೋದರೊಳಗೆ ಅದನ್ನು ಕಿತ್ತು ತಿಂದು ಆಗಿರುತ್ತಿತ್ತು. ಹಣ್ಣು ಮಾಗಿ ಕಪ್ಪು ಬಣ್ಣಕ್ಕೆ ತಿರುಗಿದಾಗ ಅದು ತುಂಬಾ ಸಿಹಿ.(ಹಿಪ್ಪು ನೇರಳೆ ಅಂತ ಆಗ ಗೊತ್ತಿರಲಿಲ್ಲ). ಪಕ್ಕದ ಮನೆಯವರ ಈ ತೋಟದಲ್ಲಿ ಒಂದು ಚಿಕ್ಕ ಗುಮ್ಮಿ ಬಾವಿ ಇತ್ತು. ಅದನ್ನು ನೋಡುವುದೂ ಆಟದ ಭಾಗವಾಗಿತ್ತು. ಕಾವಿಗೆ ಕೂತ ಕೋಳಿಗೆ ಕಾರಣಾಂತರದಿಂದ ಮೊಟ್ಟೆ ನಷ್ಟವಾಗಿ ಕಾವು ಮರೆಸಬೇಕಾದಾಗ ಚನ್ನಿ ಆ ಕೋಳಿಯನ್ನು ಈ ಬಾವಿಯ ನೀರಿನಲ್ಲಿ ಮುಳುಗಿಸಿ ತೆಗೆಯುತ್ತಿದ್ದಳು. ಈ ಆಮ್ರದ ಹಣ್ಣಿನ ಗಿಡದ ಸಮೀಪದಲ್ಲಿ ದೊಡ್ಡದೊಂದು ಕಲ್ಲು ಚಪ್ಪಡಿಯನ್ನು ಎರಡೂ ಕಡೆ ಕಲ್ಲು ಕಟ್ಟಿ ಕೂರಲು ಅನುಕೂಲವಾಗುವಂತೆ ಅದರಮೇಲೆ ಇಟ್ಟಿದ್ದರು. ಅದನ್ನು ಕೂರುಕಲ್ ಕಟ್ಟಣೆ ಎನ್ನುತ್ತಿದ್ದೆವು. ಅದರ ಮೇಲೆ ಕುಳಿತು ಆಟ, ಜಗಳ ಎಲ್ಲ ನಡೆಯುತ್ತಿದ್ದವು. ಈ ಜಾಗ, ಅತ್ತೀಮರದ ಜಾಗ ಪಕ್ಕದ ಮನೆಯವರದು.. ಆದರೆ ಆ ವಯಸ್ಸಿನಲ್ಲಿ ನಮಗೆ ಆಟದ ಜಾಗ ಅಷ್ಟೇ. ಅವರದು ಇವರದು ವ್ಯತ್ಯಾಸ ಗೊತ್ತಾಗದ ಮನಸ್ಸು.

ಅತ್ತಿಯ ಮರದ ಬುಡದಿಂದ ಜಾನುವಾರುಗಳು ಗದ್ದೆಗೆ ಇಳಿದು. ಇಳಿಜಾರಾದ ದಾರಿಯನ್ನು ಮಾಡಿದ್ದವು. ನಾಲ್ಕೈದು ಅಡಿ ತಗ್ಗಾದ ಗದ್ದೆಗೆ ಇಳಿದು ಹೋಗುವಂತಿತ್ತು. ಸಾಮಾನ್ಯವಾಗಿ ನಮ್ಮ ರಜೆಯ ದಿನಗಳಲ್ಲಿ ಅತ್ತೀ ಹಣ್ಣುಗಳು ಬಿಡುವ ಸಮಯ. ಹಸಿರು ಗೊಂಚಲು ಕಾಯಿಗಳು ನಡುವೆ ಆಕರ್ಷಕ ಕೆಂಬಣ್ಣದ ಹಣ್ಣುಗಳು ನಮ್ಮನ್ನು ಸೆಳೆಯುತ್ತಿದ್ದವು.. ಮರದ ಸುತ್ತಲೂ ಹಣ್ಣಿನ ನವಿರಾದ ಪರಿಮಳ ಪಸರಿಸಿರುತ್ತಿತ್ತು.. ಕೊಯ್ಲಿಗೆ ಸಿದ್ಧವಾದ ಗದ್ದೆಯ ಕಡೆಯಿಂದ ಭತ್ತದ ಪರಿಮಳ, ಗದ್ದೆಗಳ ನಡುವೆ ಅಂಚಿನ ಮೇಲೆ ನಡೆದು ಹೋಗುತ್ತಿದ್ದರೆ ಒಂದು ದಿವ್ಯ ಅನುಭೂತಿ.. ಮಕ್ಕಳಾದ ನಮಗೆ ಸಂತೋಷದಿಂದ ಚಿಟ್ಟೆಗಳಾಗಿ ಹಾರಾಡುವಂತೆನಿಸುತ್ತಿತ್ತು. ನವೆಂಬರ್ ಹೊತ್ತಿಗೆ ಗದ್ದೆಬಯಲಿನ ಮೇಲಿಂದ ಬೀಸುವ ಗಾಳಿಗೆ ಒಂದು ವಿಶಿಷ್ಟ ಸುವಾಸನೆ. ಗದ್ದೆಯ ಒಂದು ಮೂಲೆಯಲ್ಲಿ ಪೇರಳೆ ಮರಗಳು, ಪನ್ನೆರಳೆ ಮರಗಳೂ ಇದ್ದವು. ಅಪರೂಪಕೆ ಅವುಗಳಲ್ಲಿ ಹಣ್ಣು ಸಿಗುತ್ತಿದ್ದವು.. ಆದರೆ ಬೇಸಿಗೆಯಲ್ಲಿ ಗೇರು ಹಣ್ಣು ಮತ್ತು ಬೀಜ ಬೇಕಾದಷ್ಟು ಸಿಗುತ್ತಿದ್ದವು. ಬೇಸಿಗೆ ರಜೆಯಲ್ಲಿ ದೊಡ್ಡಮ್ಮನ ಊರಿಗೆ ಹೋದಾಗ ಅವರ ಮನೆ ಹಿಂದೆ ಇದ್ದ ಅಗಲವಾಗಿ ಹರಡಿ ಬೆಳೆದಿದ್ದ ಗೇರುಮರದ ಮೇಲೇ ನಮ್ಮ ದಿನದ ಅರ್ಧ ಕಳೆಯುತ್ತಿತ್ತು.

ಭೂಮಿ ಹುಣ್ಣಿಮೆಯ ಸಮಯಕ್ಕೆ ಹಸಿರಾಗಿದ್ದ ತೆನೆಗಳು, ದೀಪಾವಳಿಯ ವೇಳೆಗೆ ಹೊಂಬಣ್ಣಕ್ಕೆ ತಿರುಗುತ್ತಿದ್ದವು. ದೀಪಾವಳಿಯ ದಿನ ಸಂಜೆ ಗದ್ದೆಗೆ ದೀಪದ ಕೋಲುಗಳನ್ನು ಇಟ್ಟು ದೀಪ ಹಚ್ಚುವಾಗ ಹೊಡೆಯುವ ದೊಡ್ಡ ಸದ್ದು ಮಾಡುವ ಪಟಾಕಿ ವಾಸನೆ ಪರಿಸರದ ಹೂಹಣ್ಣಿನ ವಾಸನೆಗೆ ಅಪರಿಚಿತವಾಗಿತ್ತು.

ಗದ್ದೆ ಕೋಯಿಲಾದ ಮೇಲೆ ಒದ್ದೆಯಾದ ಮೆತ್ತನೆ ಕೆನೆ ಮಣ್ಣನ್ನು ತಂದು ನಮ್ಮ ಆಟಕ್ಕೆ ಬೇಕಾದ ಕುಡಿಕೆ, ಮಡಿಕೆ, ತಟ್ಟೆ, ಬಟ್ಟಲು, ಒರಳು ಕಲ್ಲು, ಬೀಸುವ ಕಲ್ಲು ಇತ್ಯಾದಿಗಳನ್ನು ಮಾಡಿ ಒಣಗಿಸಲು ನೆರಳಿನಲ್ಲಿ ಇಡುತ್ತಿದ್ದೆವು.

ಅತ್ತಿಯ ಮರದ ಕೆಳಗೆ ಗದ್ದೆಗೆ ಇಳಿಯುವ ಇಳಿಜಾರಾದ ದಾರಿಯಲ್ಲಿ ಅಡಿಕೆ ಹಾಳೆಯ ಮೇಲೆ ಒಬ್ಬರು ಕುಳಿತು ಇನ್ನೊಬ್ಬರು ಅವರು ಕುಳಿತ ಹಾಳೆಯ ತುದಿಯನ್ನು ಎಳೆಯುವ ಆಟ ನಮಗೆ ಮೋಜಿನದಾಗಿತ್ತು.. ಎತ್ತರದಿಂದ ತಗ್ಗಿನ ಕಡೆಗೆ ಎಳೆಯುವಾಗ ಹಾಳೆಯ ಮೇಲೆ ಕುಳಿತವರು ಮಗುಚಿ ಬಿದ್ದು ಮೈಕೈ ತರಚಿ ಹೋಗುವುದೂ ಇತ್ತು. ಸರದಿಯ ಪ್ರಕಾರ ಇನ್ನೊಬ್ಬರನ್ನು ಕೂರಿಸಿ ಎಳೆಯಬೇಕಾದುದರಿಂದ ಅಳುತ್ತ ಕೂರಲು ಪುರುಸೊತ್ತಿಲ್ಲ…

ಮನೆಯ ಎದುರಿಗೆ ರಸ್ತೆಯ ಪಕ್ಕದಲ್ಲಿ ಜೀರಕನ ಮರ ಹಣ್ಣು ಬಿಟ್ಟಾಗ ನಮಗೆ ಆ ಮರದ ಆಕರ್ಷಣೆ.. ಹೊಂಬಣ್ಣದ ಜೀರ್ಕ ಹಣ್ಣುಗಳನ್ನು ದೋಟಿಗೆ ಎಟುಕಿಸಿ ಉದುರಿಸಿ ಹಿರಿಯರ ಕಣ್ಣು ತಪ್ಪಿಸಿ ಅಡಿಕೆ ಚಪ್ಪರದ ಮೇಲೆ ತೆಗೆದುಕೊಂಡು ಹೋಗಿ ಇಟ್ಟು.. ಅಡಿಗೆ ಮನೆಯಿಂದ ಉಪ್ಪು ಬಾಳೆಲೆ, ಬೆಲ್ಲ ಇನ್ನೊಬ್ಬರು ತರುವುದು. ಜೀರಿಗೆ ಮೆಣಸು ಮತ್ತೊಬ್ಬರು.. ಹಣ್ಣಿನ ತೊಳೆ ಬಿಡಿಸಿ ಬಾಳೆ ಎಲೆ ಮೇಲೆ ಉಪ್ಪು, ಮೆಣಸು ಬೆಲ್ಲ ಹಾಕಿ ಕಲೆಸಿ ಮತ್ತೆ ಚಿಕ್ಕ ಬಾಳೆ ಎಲೆ ತುಂಡಿನ ಮೇಲೆ ಎಲ್ಲರಿಗೂ ಹಂಚಿ ಆ ಕಟುವಾದ ಹುಳಿ, ಸಿಹಿ, ಖಾರದ ರುಚಿಯನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದೆವು.. ಜೀರಕನ ಹಣ್ಣು ತುಂಬಾ ಹುಳಿ ಆದುದರಿಂದ ಪಿತ್ಥ ಅಂತ ದೊಡ್ಡವರು ಬಯ್ಯುತ್ತಿದ್ದರು..

ಆಮ್ರದ ಹಣ್ಣಿನ ಗಿಡದ ಸಮೀಪದಲ್ಲಿ ದೊಡ್ಡದೊಂದು ಕಲ್ಲು ಚಪ್ಪಡಿಯನ್ನು ಎರಡೂ ಕಡೆ ಕಲ್ಲು ಕಟ್ಟಿ ಕೂರಲು ಅನುಕೂಲವಾಗುವಂತೆ ಅದರಮೇಲೆ ಇಟ್ಟಿದ್ದರು. ಅದನ್ನು ಕೂರುಕಲ್ ಕಟ್ಟಣೆ ಎನ್ನುತ್ತಿದ್ದೆವು. ಅದರ ಮೇಲೆ ಕುಳಿತು ಆಟ, ಜಗಳ ಎಲ್ಲ ನಡೆಯುತ್ತಿದ್ದವು.

ನಮ್ಮ ಮನೆಯ ಕಣದ ಉಣು ಗೋಲನ್ನು ಸಿಕ್ಕಿಸಲು ಅದರ ಒಂದು ಬದಿಗೆ ಇದ್ದ ಹಳೆಯ ರಂಜೆ ಮರದ ಪೊಟರೆ ಬಳಕೆ ಆಗುತ್ತಿತ್ತು. ಮತ್ತೋಂದು ಬದಿಗೆ ಅಮಟೆ ಮರ ಇತ್ತು. ಪಕ್ಕದಲ್ಲಿ ಮಾವಿನಮರ ಇತ್ತು. ಈ ಹಳೆಯ ರಂಜದ ಮರ ಎಷ್ಟು ಟೋಳ್ಳಾಗಿತ್ತು ಅಂದರೆ ಅದರ ಮಧ್ಯೆ ಒಬ್ಬ ಮನುಷ್ಯ ಅವಿತುಕೊಳ್ಳಬಹುದಿತ್ತು. ಆದರೂ ಹೂ ಹಣ್ಣುಗಳನ್ನು ಬಿಡುತ್ತಿತ್ತು.. ಚಳಿಗಾಲದ ಬೆಳಿಗ್ಗೆ ನಕ್ಷತ್ರಗಳಂತೆ ಉದುರಿದ ಹೂಗಳನ್ನು ಆಯ್ದು ಮಾಲೆ ಮಾಡಿ ಮುಡಿಯುತ್ತಿದ್ದೆವು. ಈ ಮರದ ಹಣ್ಣು ಸಹ ಸ್ವಲ್ಪ ಜಾಸ್ತಿ ಕೆಂಪು ಮತ್ತು ರುಚಿ ಇತ್ತು. ಬೆಳಿಗ್ಗೆ ಮರದ ಹತ್ತಿರ ಹೋದಾಗ ಹಕ್ಕಿಗಳು ಕುಕ್ಕಿ ಬೀಳಿಸಿದ ಹಣ್ಣುಗಳು ಒಣಗಿದ ಎಲೆಗಳ ನಡುವೆ ಹೊಳೆಯುತ್ತ ಬಿದ್ದಿರುತ್ತಿದ್ದವು.

ಹಲಸಿನ ಮರ, ಮಾವಿನ ಮರಗಳು ಅವುಗಳಲ್ಲಿ ಬೆಳೆದಿರುತ್ತಿದ್ದ ಒಂದು ಜಾತಿಯ ಆರ್ಕಿಡ್ ಗಡ್ಡೆಗಾಗಿ ನಮಗೆ ಆಕರ್ಷಣೆ. ಅದನ್ನು ನೀರುಕಾಯಿ ಅಂತ ಕರೆದು ಸ್ಲೇಟ್ ಒರೆಸಲು ಬಳಸುತ್ತಿದ್ದೆವು. ಸಾಮಾನ್ಯವಾಗಿ ಶಾಲೆಯ ದಾರಿಯ ಪಕ್ಕ ಇರುವ ಯಾವ ಹಣ್ಣಿನ ಮತ್ತು ಹೂವಿನ ಮರಗಳೂ ನಮಗೆ ಕಾಣದೆ ಹೂ ಹಣ್ಣು ಬಿಡುವಂತಿರಲಿಲ್ಲ. ಮಠದ ಶಾಲೆಯ ಹತ್ತಿರ ತಿಳಿಹಸಿರು. ಕಾಯಿ ಬಿಡುವ ಮರವೊಂದು ಇತ್ತು.. ಆ ಕಾಯಿಗಳನ್ನು ಬಾಯಲ್ಲಿಟ್ಟು ಚೀಪುತ್ತಾ ಇರುತ್ತಿದ್ದೆವು. ತುಟಿಗೆಲ್ಲ ಅಂಟು.. ಸಪ್ಪೆ ರುಚಿ. ಅದು ಚಳ್ಳೆ ಹಣ್ಣು ಅಂತ ಆಮೇಲೆ ತಿಳಿಯಿತು.. ನಮ್ಮ ಮಲೆನಾಡಿನಲ್ಲಿ ಸಳ್ಳೆ ಹಣ್ಣು ಅಂತ ಒಂದಿದೆ ಹುಳಿಸಿಹಿ ರುಚಿ. ಸಣ್ಣ ಗಾತ್ರದ ಮರ. ಮಳೆಗಾಲದಲ್ಲಿ ಹಣ್ಣು. ಮಳೆಗಾಲದಲ್ಲಿ ಕರ್ಜೀ ಹಣ್ಣು ಸಿಗುತ್ತಿತ್ತು. ಮಳೆಗಾಲದ ಪ್ರಾರಂಭದಲ್ಲಿ ನೇರಳೆ ಹಣ್ಣು. ಚಳಿಗಾಲ ಬಂದರೆ ಹೊಲಿಗೆ ಹಣ್ಣು.. ಬೇಸಿಗೆಯ ಆರಂಭದಲ್ಲಿ ಕಬಳೆ ಹಣ್ಣು, ಕಲ್ಲು ಸಂಪಿಗೆ, ಬೆಮ್ಮಾರಳು.

ಪ್ರೈಮರಿ ಶಾಲೆಯ ಬಳಿ ಎರಡು ಬೃಹತ್ ಸುರಗಿ ಹೂವಿನ ಮರಗಳಿದ್ದವು. ಅವುಗಳನ್ನು ಬರೀ ನೋಡುವುದಷ್ಟೇ. ಬೆಳಿಗ್ಗೆ ಬಿಸಿಲು ಬೀಳುವ ಮುನ್ನವೇ ಹೂವುಗಳನ್ನು ಕೀಳಬೇಕು. ಆಮೇಲೆ ಅರಳಿ ದಳ ಉದುರಿಸುತ್ತವೆ. ಹೀಗೆ ಮಕ್ಕಳಿಗೆ ಎಟುಕದ ಮರಗಳಲ್ಲಿ ಸಂಪಿಗೆಯು ಒಂದು.. ಯಾರಾದರೂ ಹೂಕೊಯ್ದು ತಂದುಕೊಡುತ್ತಿದ್ದರು.

ಇನ್ನು ಕೆಲವು ಮರಗಳಲ್ಲಿ ಬಿಡುವ ಕಾಯಿಗಳು ಒಣಗಿದಾಗ ಅವುಗಳನ್ನು ಒಡೆದರೆ ಒಳಗೆ ರುಚಿಯಾದ ತಿರುಳು ಇರುತ್ತಿತ್ತು. ಹಾಗೆ ಗುಲಾಬಿ ಬಣ್ಣದ ಹೂಗಳನ್ನು ಬಿಡುವ ತಾರೆ ಮರವು ಕಾಯಿಗಳನ್ನು ಬಿಟ್ಟು ಅವು ಒಣಗಿ ಉದುರಿದಾಗ ನಾವು ಅವುಗಳನ್ನು ಆಯ್ದು ಕಲ್ಲಿನಿಂದ ಜಜ್ಜಿ ಒಳಗಿನ ಕೊಬ್ಬರಿಯಂತಹ ತಿರುಳನ್ನು ತಿನ್ನುತ್ತಿದ್ದೆವು.

ತಾರೆಮರ ದಟ್ಟವಾದ ನೆರಳನ್ನು ಕೊಡುತ್ತಿರಲಿಲ್ಲ. ನೇರವಾದ ಕಾಂಡ ತಲೆ ಕೆದರಿಕೊಂಡು ಇರುವಂತಹ ಮೇಲ್ಭಾಗ.. ಆದರೆ ನಾವು ತಲೆ ಎತ್ತಿ ನೋಡುವಂತಹ ನೇರವಾಗಿ ಬೆಳೆದು ಕಡುಹಸಿರು ಹಸಿರು ಎಲೆಗಳಿಂದ ಕೂಡಿದ ಧೂಪದ ಮರ ನಮಗೆ ಪ್ರಿಯವಾಗಿತ್ತು. ಬಲಿತ ಕಾಯಿಗಳು ಮರದ ಬುಡದಲ್ಲಿ ಬಿದ್ದಿರುತ್ತಿದ್ದವು. ಕಲ್ಲಿನಿಂದ ಜಜ್ಜಿ ಬಾದಾಮಿ ತರಹದ ತಿರುಳು ಸಿಗುತ್ತಿತ್ತು. ಇದಲ್ಲದೆ ಮರದ ಬುಡದಲ್ಲಿ ಜೇನು ಬಣ್ಣದ ಪಾರದರ್ಶಕವಾದ ಗಮ್ ಸಿಗುತ್ತಿತ್ತು. ನಮಗೆ ಹರಿದ ಪುಸ್ತಕ ಅಂಟಿಸಲು ಇದು ಒದಗುತ್ತಿತ್ತು. ಗಾಳಿಪಟ ಮಾಡಲು ಬಳಸುತ್ತಿದ್ದೆವು. ಈ ಧೂಪದ ಅಂಟನ್ನು ಬೆಂಕಿಯ ಶಾಖದಲ್ಲಿ ಕರಗಿಸಿ ಬಾಟಲಿಗೆ ತುಂಬಿ ಇಟ್ಟುಕೊಳ್ಳುತ್ತಿದ್ದೆವು.

ಈ ಧೂಪದ ಕಾಯಿಗಳಿಗಾಗಿ ನಾವು ಬರ್ಕನ ಕಾಡು ಎಂಬ ಸಮೀಪದ ಕಾಡಿಗೆ ಹೋಗಬೇಕಿತ್ತು. ಅದು ನಾಲ್ಕಾರು ಜನ ಮಕ್ಕಳು ಇದ್ದರೆ ಮಾತ್ರ ಸಾಧ್ಯ.

ಮರದ ನೆರಳು ಅಂದಾಗ ನಾವು ಶಾಲೆಗೆ ಹೋಗುವ ದಾರಿಯಲ್ಲಿ ದೇವಸ್ಥಾನ ಒಂದು ಇತ್ತು. ಈಗಲೂ ಇದೆ. ಅದಕ್ಕೆ ಮೊದಲು ಸಿಗುವ ಹಲಸಿನ ಮರದ ಕೆಳಗೆ ಕಣ್ಣು ಮುಚ್ಚಿ ಕುಳಿತು ಋಷಿ ಆಟ ಆಡುತ್ತಿದ್ದೆವು. ಒಂದು ಕೋಲನ್ನು “ದಂಡ” ಅಂತ ಭಾವಿಸಿ ಅದರ ಮೇಲೆ ಕೈ ಊರಿ ಕಣ್ಣು ಮುಚ್ಚಿ ಕುಳಿತ ಋಷಿ ಸ್ವಲ್ಪ ತಣ್ಣನೆಯ ಗಾಳಿಗೆ ಕ್ಷಣ ಮೈಮರೆತರೆ ಋಷಿಯನ್ನು ಅಲ್ಲಿಯೇ ಬಿಟ್ಟು ಉಳಿದವರು ಮುಂದೆ ಓಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಕಣ್ಣು ತೆರೆದು ನೋಡಿ ಋಷಿ ತನ್ನ ಗಾಂಭೀರ್ಯ ಮರೆತು ಮುಂದೆ ಹೋದವರನ್ನು ನಿಲ್ಲುವಂತೆ ಗೋಗರೆಯುತ್ತ ಇರಬೇಕಿತ್ತು. ಆ ದಾರಿಯಲ್ಲಿ ನಾಯಿ, ಹಾವು ಇತ್ಯಾದಿಗಳ ಭಯ. ಇತ್ತೀಚೆಗೆ ಒಮ್ಮೆ ಈ ದಾರಿಯನ್ನು ನೋಡಲು ಹೋದಾಗ ಅಲ್ಲಿ ಹಲಸಿನಮರ ಇರಲಿಲ್ಲ. ಎರಡು ಬದಿಗಳಲ್ಲೂ ಮನೆಗಳು ಇದ್ದವು. ಶಾಲೆಯ ಸಮೀಪದ ಮರದ ವಿಷಯ ಹೇಳ ಹೊರಟರೆ ನಾವು ಮರಕೋತಿ ಆಟ ಆಡುತ್ತಿದ್ದ ಕತ್ತಿ ಕಾಯಿಮರ (ಮೇಫ್ಲವರ್) ನೆನಪಾಗುತ್ತದೆ. ಗಡಿಬಿಡಿಯಲ್ಲಿ ಮರ ಇಳಿಯಲು ಹೋಗಿ ಚೂಪು ಕೊಂಬೆಗೆ ಲಂಗ ಸಿಕ್ಕಾಕೊಂಡು ನಾನು ತಲೆ ಕೆಳಗಾಗಿ ಜೋತಾಡಿದ್ದು ಯಾರೋ ದಾರಿಯಲ್ಲಿ ಹೋಗುವವರು ನನ್ನನ್ನು ಕೆಳಗಿಳಿಸಿದ್ದರು.

ನನಗೆ ತುಂಬಾ ಆಕರ್ಷಕವಾದ ಸುಂದರವಾದ ನೆನಪುಗಳು ಇರುವುದು ಮಠದ ಶಾಲೆಯಲ್ಲಿ (ಮಠ ಎಂಬ ಕಟ್ಟಡದ ಒಂದು ಕೊಠಡಿಯಲ್ಲಿ ನಮ್ಮ ಶಾಲೆಯಿತ್ತು) ನಮ್ಮ ತರಗತಿ ಕೊಠಡಿಯ ಎದುರಿಗೆ ಇದ್ದ ಅಂಜೂರದ ಮರ. ಆ ಮರ ಈಗಲೂ ಇದೆ. ಒಳ್ಳೆ ಬೀಟ್ರೂಟ್ ಬಣ್ಣದ ಅಂಜೂರದ ಹಣ್ಣುಗಳು ನಮಗೆ ಮೇಷ್ಟ್ರು ಮಾಡುವ ಪಾಠಕ್ಕಿಂತ ಹೆಚ್ಚು ಇಷ್ಟವಾಗಿತ್ತು. ಆದರೆ ಆ ಮನೆಯ ಹುಡುಗನೊಬ್ಬ ಮಕ್ಕಳು ಅಂಜೂರದ ಹಣ್ಣು ಕೀಳದಂತೆ ಕಾವಲು ಮಾಡುತ್ತಿದ್ದ. ಅವನಿಲ್ಲದ ಸಮಯ ನೋಡಿ ನಾವು ನಮಗೆ ಎಟಕುವಂತೆ ಕೆಳಗೇ ಬೇರುಗಳ ನಡುವೆ ಇದ್ದ ಹಣ್ಣುಗಳನ್ನು ಕೀಳುತ್ತಿದ್ದೆವು. ಇತ್ತೀಚೆಗೆ ಒಮ್ಮೆ ಈ ಜಾಗವನ್ನು ನೋಡಲು ಹೋದಾಗ ಹಳೆಯ ಅಂಜೂರದ ಮರ ಸತ್ತು ಅದರ ಬುಡದಿಂದಲೇ ಹೊಸ ಮರ ಹುಟ್ಟಿ ದೊಡ್ಡದಾಗಿದೆ ಎಂದು ಹೇಳಿದರು. ಬಾಲ್ಯದ ದಿನಗಳ ಸುಂದರ ನೆನಪುಗಳು ಈ ಮರದ ಜತೆಗಿವೆ.

ಇನ್ನು ನಮ್ಮ ಗದ್ದೆಯ ಪಕ್ಕ ಇದ್ದ ಹಾಡ್ಯದಲ್ಲಿ ಬೃಹದಾಕಾರದ ಅಡಕೆ ಮಾವಿನ ಮರ ಇತ್ತು. ಪಕ್ಕದಲ್ಲಿ ಪುರಾತನವಾದ ಗಣಪೆಬಳ್ಳಿ. ಅದು ಮಾವಿನ ಮರದಿಂದ 100 ಮೀಟರ್ ದೂರದ ವಾಟೆ ಮರದವರೆಗೂ ಹಬ್ಬಿತ್ತು. ನಮ್ಮ ಮನೆ ಹಿಂಭಾಗ ಕಣದ ಮನೆ ಅಂತ ಕರೆಯುವ ಮನೆ ಇತ್ತು. ಅವರು ಕಣದ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರು. ಅದಕ್ಕೇ ಹಾಗೆ ಹೆಸರು. ಅವರ ಮನೆ ಕಣದ ಪಕ್ಕದಲ್ಲಿ ದೊಡ್ಡ ಕಾಡು ಮಾವಿನ ಮರ ಇತ್ತು. ಅದರ ಒಂದು ಬದಿ ಆಳವಾದ ಧರೆ ಇತ್ತು. ಸಮೀಪದ ಮನೆಯ ಅಜ್ಜಿಗೆ ಕಷ್ಟ ಬಂದಾಗ ನಾನು ನೇಣು ಬಿಗಿದುಕೊಂಡು ಸಾಯುತ್ತೇನೆ ಅಂದರಂತೆ. ಕಿಡಿಗೇಡಿ ಮೊಮ್ಮಕ್ಕಳು ಹಗ್ಗವನ್ನು ತಂದು ಅದನ್ನು ಆ ಮಾವಿನ ಕೆಲ ಕೊಂಬೆಗೆ ಕಟ್ಟಿ ಹೀಗೆ ಮಾಡಬೇಕು ಎಂದು ತೋರಿಸಿದರಂತೆ. ಆ ಅಜ್ಜಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮಾವಿನ ಮರಕ್ಕೆ ನೇಣು ಬಿಗಿದು ಸತ್ತುಹೋದರು. ಈ ಕತೆ ನಾನು ಹುಟ್ಟುವ ಮೊದಲು ನಡೆದದ್ದು. ಇದನ್ನು ಕೇಳಿ ಭಯವಾಗಿತ್ತು. ಆ ಮಾವಿನ ಮರದ ಬಳಿ ನಾವು ಹೋಗುತ್ತಿರಲಿಲ್ಲ. ನಮ್ಮ ಅಜ್ಜಿಯ ಮನೆಗೆ ಹೋದಾಗ ಹಳ್ಳದ ದಂಡೆಯಲ್ಲಿದ್ದ ಇಪ್ಪೆಯ ಮರದ ಸಮೀಪ ಹೋದರೆ ಪರಿಮಳದ ಕಡಲು ಹೊಕ್ಕಂತೆ ಇಪ್ಪೆ ಹೂವಿನ ಪರಿಮಳ. ಹಕ್ಕಿಗಳು ಗಾಳಿಯ ಜತೆ ಸೇರಿ ಉದುರಿಸಿದ್ದ ಇಪ್ಪೆಯ ಹೂಗಳನ್ನು ಆಯ್ದು ಅದರ ಸಿಹಿ ರಸ ಹೀರುವುದು ಇಷ್ಟದ ಕೆಲಸವಾಗಿತ್ತು. ಈಗ ನಾನು ಮೊದಲು ಉಲ್ಲೇಖಿಸಿದ ಅತ್ತೀ ಮರವೊಂದು ಇದೆ.. ಉಳಿದವೆಲ್ಲವು ಕಾಲನ ಹೊಡೆತಕ್ಕೆ ಸಿಲುಕಿವೆ ಅಥವಾ ಮನುಷ್ಯರ ಕೊಡಲಿಯ ಪೆಟ್ಟಿಗೆ ಮಲಗಿವೆ.. ಅತೀ ಹೆಚ್ಚು ಮರಗಳನ್ನು ತಿಂದಿರುವುದು ಹೆದ್ದಾರಿಗಳು.. ಕಳೆದ ನಾಲ್ಕು ದಶಕಗಳಲ್ಲಿ ವರ್ಷಕ್ಕೆ ನಾಲ್ಕಾರು ಸಲ ಮೈಸೂರಿಗೆ ಹೋಗುವಾಗ ಮುನ್ನೂರು ಕಿಮೀ ಪ್ರಯಾಣದಲ್ಲಿ ಎರಡು ಸ್ಟಾಪ್ ಗಳು. ಅದರಲ್ಲೊಂದು ಅರಸೀಕೆರೆ ಚನ್ನರಾಯಪಟ್ಟಣದ ನಡುವೆ ಒಂದು ಎತ್ತರದ ಜಾಗದಲ್ಲಿ ರಸ್ತೆಯ ಪಕ್ಕದಲ್ಲಿ ಬೆಳೆದ ದೊಡ್ಡ ಆಲದ ಮರದ ಕೆಳಗೆ ಸಮೀಪದಲ್ಲಿ ಜನವಸತಿ ಇಲ್ಲ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರು. ಕಾಡು ಹೂಗಳು ಹಕ್ಕಿಗಳು.. ಮರದ ನೆರಳು, ಬೀಸುವ ತಂಪಾದ ಗಾಳಿ.. ಬಹಳ ವರ್ಷ ಇದನ್ನು ಅನುಭವಿಸಿದೆವು.. ತಂದಿದ್ದ ತಿಂಡಿ ತಿಂದು, ಕಾಫಿ ಕುಡಿದು.. ಮತ್ತೆ ಹೊರಡುವುದು. ಮಗ ಚಿಕ್ಕವನಿದ್ದಾಗ ಇದು ಇನ್ನೂ ಅನುಕೂಲವಾಗಿತ್ತು. ಈಗ ನಾವು ಹಿರಿಯ ನಾಗರಿಕರಾಗಿ ಅನಿವಾರ್ಯವಾಗಿದೆ. ಕೆಲವು ವರ್ಷಗಳ ಹಿಂದೆ ರಸ್ತೆ ಅಗಲವಾದಾಗ ಆ ಮರ ಕಡಿದು ಅಲ್ಲೊಂದು ಗೂಡಿನ ತರಹ ಕಾಂಕ್ರೀಟ್ ಬಸ್ ಸ್ಟಾಪ್ ಬಂದಿದೆ. ಒಂದು ಮರ ಇದ್ದಾಗ ಮತ್ತು ಅದು ಹೋದಮೇಲೆ ಎಂತಹ ವ್ಯತ್ಯಾಸ ಎಂದು ಪ್ರತೀಸಲ ಈ ಜಾಗವನ್ನು ಹಾದು ಹೋಗುವಾಗ ಅರಿವಾಗುತ್ತದೆ.

ನನ್ನ ಮನೆಯ ಸುತ್ತ ಬಾಲ್ಯ ಸಖಿಯರಂತೆ ಇರುವ ಮರಗಳು ನನಗೆ ಪ್ರಿಯವಾಗಿದ್ದವು. ರಂಜದ ಹೂವನ್ನು ಬೆಳಿಗ್ಗೆ ಆಯ್ದು ತಂದು ಪೋಣಿಸುವುದು ಬಹಳ ಇಷ್ಟದ ಕೆಲಸವಾಗಿತ್ತು. ಚಳಿಗಾಲದಲ್ಲಿ ಹೂ ಬಿಡುವ ಮುತ್ತುಗ, ಬೂರಗದ, ಉದುರಿ ಬಿದ್ದ ಹೂಗಳನ್ನು ತಂದು ಮನೆ ಆಟ ಆಡುತ್ತಿದ್ದ ಆ ಕಾಲವೊಂದಿತ್ತು, ಬಾಲ್ಯ ತಾನಾಗಿತ್ತು.