ಬಬಲ್ ಬ್ಲೋವರ್

ಬಾಂದಳದ ನೀಲ ನೀಲದಲಿ
ಚಿಲಿಪಿಲಿ ಗುಬ್ಬಿಗಳ ಸಂಗದಲಿ
ಚಿಣ್ಣರು ಮೂರು ಜೊತೆಯಲಿ
ಹತ್ತು, ಎಂಟು, ಐದು ವರ್ಷ

ನಿನ್ನೆ ರಾತ್ರಿ ಜಾತ್ರೆಯಲಿ ತಂದ
ಆಟಿಕೆ ಗುಳ್ಳೆಗಳ ಉಸುರುವ
ಪ್ಲಾಸ್ಟಿಕ್ ಕುಡಿಕೆ ಕೈಯಲಿ
ಸ್ವರ್ಗದ ಹೊಗೆಯಂತೆ ಕಂಡು

ಕುಡಿಕೆ ಹಿಡಿದು ಎತ್ತರಿಸಿ
ಬಾಯಿಯ ಉಸಿರು ನೂಕಿ
ಗುಳ್ಳೆ ಒಂದೊಂದಾಗಿ ತೂರಿ
ಲೋಕ ಗುಳ್ಳೆಗಳ ಹಬ್ಬ

ವಿಸ್ಮಯದ ಕಣ್ಣರಳಿಸಿದ
ಮಕ್ಕಳಿಗೆ ಬೋಧನೆ ಹೀಗೆ
ಹಿಡಿದು, ಎತ್ತರಿಸಿ, ಉಸಿರು
ನೂಕಿ, ಗುಳ್ಳೆಗಳ ಹುಟ್ಟು

ಹುಃ ಗುಟ್ಟಿದ ಮಕ್ಕಳು
ಅಕ್ಷದಲಿ ಗುಳ್ಳೆಗಳೇ
ತುಂಬಿ, ಚಕಿತಗೊಂಡು
ಪ್ಲಾಸ್ಟಿಕ್ ಕುಡಿಕೆಯ ಜಾದು

ಎಲ್ಲಿಂದಲೋ ಬಂದ ಚಿಕ್ಕ ಪೋರ
ನೋಡಿ ನನ್ನ ಗುಳ್ಳೆ ಸರ್ಕಸ್
“ಎ ಅಕ್ಕಾ, ಕೈಯಲ್ಲಿ ಹೀಗ
ಹಿಡಿ, ಜಾಡಿಸು ನೆಲ ಸಮಾಂತರ”

ಸಂಶಯಿಸಿ ಉಪದೇಶ
ಕುಡಿಕೆಯಲಿ ಎದ್ದಿ ಕಟಿಗೆ
ನೆಲ ಸಮಾಂತರ ಜಾಡಿಸಿ
ಆಶ್ಚರ್ಯ! ಗುಳ್ಳೆಗಳೇ ಗುಳ್ಳೆಗಳು!!

ಕಣ್ಣಲ್ಲಿ ಕಣ್ಣನ್ನಿಟ್ಟು, ಮೂರು
ಮಕ್ಕಳು ಮತ್ತು ಆ ಪೋರ
ನನ್ನ ನೋಡಿ ಮಂದಸ್ಮಿತ
ನಾನೂ ನಕ್ಕೆ, ಕಲಿಕೆ ಎಷ್ಟೊಂದಿದೆ!

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.
ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ.
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ