ಶಿವಪ್ರಕಾಶರು ತಮ್ಮಕವಿತೆಗಳಲ್ಲಿ ನಡೆಸಿರುವ ಭಾಷಿಕ ಪ್ರಯೋಗಗಳು ಅವರನ್ನು ನಿಸ್ಸಂದೇಹವಾಗಿ ಕನ್ನಡದ ವರ್ತಮಾನದ ದೊಡ್ಡಕವಿಯನ್ನಾಗಿ ಮಾಡಿವೆ. ಅನೇಕ ಜನ ಕವಿಗಳು ಒಂದೇ ಬಗೆಯ ಭಾಷಾ ಪ್ರಯೋಗದ ಸಿದ್ಧ ಏಕತಾನತೆಗೆ ಸಿಕ್ಕಿಕೊಂಡುಬಿಟ್ಟಿರುತ್ತಾರೆ. ವೈವಿಧ್ಯಮಯವಾದ ವಸ್ತುಗಳನ್ನು ಕುರಿತು ಕವಿತೆ ಬರೆಯುತ್ತಿದ್ದರೂ ಅವರ ಕಾವ್ಯಶಿಲ್ಪದ ಕಟ್ಟೋಣದಲ್ಲಿ ಮಾತ್ರ ಏಕರೂಪಕಾತ್ಮಕತೆಯು ಉಳಿದುಬಿಟ್ಟಿರುತ್ತದೆ. ಆದರೆ ಸಮರ್ಥ ಕವಿ ಮಾತ್ರ ಈ ಸಮಸ್ಯೆಯನ್ನುತಮ್ಮ ಭಾಷರೂಢಿಗಳನ್ನು ತಾವೇ ಮುರಿಯುವ ಮೂಲಕ ಮೀರುತ್ತಿರುತ್ತಾರೆ.
ಎಚ್.ಎಸ್. ಶಿವಪ್ರಕಾಶರ ನಾಲ್ಕುದಶಕದ ಕವಿತೆಗಳನ್ನು ಒಟ್ಟಾಗಿ ‘ಹೋಗಿ ಬನ್ನಿ ಋತುಗಳೇ’ ಎಂಬ ಪುಸ್ತಕದಲ್ಲಿ ಕೆ ವೈ ನಾರಾಯಣಸ್ವಾಮಿ ಅವರು ಸಮಗ್ರವಾಗಿ ಸಂಪಾದಿಸಿದ್ದು ಅವರ ಮಾತುಗಳು ಇಲ್ಲಿವೆ.

ಕಳೆದ ಐವತ್ತು ವರ್ಷಗಳಿಂದ ನಿಂತರವಾದ ಕಾವ್ಯಧ್ಯಾನದಲ್ಲಿರುವ ಎಚ್.ಎಸ್. ಶಿವಪ್ರಕಾಶ ಅವರು ನನ್ನ ವಾರಿಗೆಯ ನೂರಾರು ಕವಿಗಳಿಗೆ ಕಾವ್ಯ ಗುರುಗಳಾಗಿದ್ದಾರೆ. ಶಿವಪ್ರಕಾಶರ ಕವಿತಾಲೋಕ ಬದುಕಿನ ಎಲ್ಲಾ ಆಯಾಮಗಳನ್ನು ಹಾಗೂ ಎಲ್ಲಾ ಐಂದ್ರಿಕ ಅನುಭವಗಳ ಮೂಲಕ ದಾಟಿ ಬರುವ ಭಾವ-ಅನುಭಾವಗಳನ್ನು ಕನ್ನಡಿಸುತ್ತಲೇ ಬೆಳೆಯುತ್ತಿರುವ ರಚನೆಗಳಾಗಿವೆ. ಕವಿತೆಯ ಮೂಲಕ ಲೋಕವನ್ನು ಕಾಲವಿಸ್ತೀರ್ಣ, ದೇಶವಿಸ್ತೀರ್ಣ ಮತ್ತು ಮನೋವಿಸ್ತೀರ್ಣಗಳಲ್ಲಿ ಗ್ರಹಿಸುವ – ಅನುಸಂಧಾನಿಸುವ ಕಾವ್ಯಭಾಷೆಯ ರಸಸಿದ್ಧಿಯನ್ನು ಶಿವಪ್ರಕಾಶರು ಶೋಧಿಸುತ್ತಲೇ ಇದ್ದಾರೆ. ಕವಿತೆ ಅವರಿಗೊಂದು ದಾರಿಯಾಗಿರುವಂತೆ ಬದುಕಿನ ಗುರಿಯೂ ಆಗಿದೆ. ಸತಿದೇಹವನ್ನು ಹೆಗಲ ಮೇಲೆ ಹೊತ್ತು ಪರಿತಪಿಸುತ್ತಾ ಮೂರು ಲೋಕಗಳನ್ನು ತಿರುಗುವ ಶಿವನಂತೆ.  ಶಿವಪ್ರಕಾಶರು ಕವಿತೆಯ ಪ್ರಾಣ ಪ್ರತಿಷ್ಠಾಪನೆಯ ಕಾಯಕದಲ್ಲಿ ತಮ್ಮ ಕಾವ್ಯ ಜೀವನವನ್ನು ಸವೆಸಿದ್ದಾರೆ. ಕರ್ನಾಟಕ, ಭಾರತ ಮತ್ತು ಜರ್ಮನಿ ಹೀಗೆ ಗಡಿಗಳನ್ನು ಮೀರಿ ಬದುಕುವ ಸಂದರ್ಭದಲ್ಲೂ ಕವಿತೆಯ ಸಂಘವನ್ನು ತೊರೆಯದ ಮಹೇಶ್ವರ ನಿಷ್ಠೆ ಅವರನ್ನು ಕನ್ನಡ ಕಾವ್ಯಲೋಕದ ಮಹತ್ವದ ಕವಿಯನ್ನಾಗಿ ಮಾಡಿದೆ. ಈ ಮಹಾ ಪ್ರಯಾಣದ ಫಲವೇ ನಮ್ಮ ಮುಂದಿರುವ ಸಾವಿರ ಪುಟಗಳ ಕವಿತೆಗಳ ಸಂಕಲನ. ಈ ಬೃಹತ್ ಸಂಪುಟ ಅರ್ಧ ಶತಮಾನದ ಕನ್ನಡ ಜಗತ್ತಿನ ಸಾಂಸ್ಕೃತಿಕ ದಾಖಲೆಯಾಗಿರುವಂತೆ ಜಗತ್ತಿನ ಕಾವ್ಯ ಪರಂಪರೆಗಳ ಜೊತೆಗಿನ ಸಂವಾದವೂ ಆಗಿದೆ.

ಕಳೆದ ಶತಮಾನದ ಎಪ್ಪತ್ತರ ದಶಕ ಕನ್ನಡ ಸಂಸ್ಕೃತಿಯ ಚರಿತ್ರೆಯಲ್ಲಿ ಬಹುಮುಖ್ಯವಾದ ಕಾಲಘಟ್ಟ. ಕನ್ನಡ ಕವಿತೆಯ ಒಳಗೆ ಕರ್ನಾಟಕದ ಅನೇಕ ಹೊಸಲೋಕಗಳು ಪ್ರವೇಶವಾದ ಸಮಯವದು. ಕುವೆಂಪು, ಬೇಂದ್ರೆ, ಪುತಿನ, ಕೆಎಸ್‌ಎನ್‌ ಮುಂತಾದ ಮಹಾಮಹಿಮರು ರಂಗದಿಂದ ನೇಪಥ್ಯಕ್ಕೆ ಸರಿಯುತ್ತಿದ್ದ ಸಮಯ. ಕವಿತೆ ಎಂದರೆ ಅಡಿಗರ ಕವಿತೆಗಳ ವಸ್ತು-ರಚನೆಯ ಮಾದರಿಯನ್ನುಆರಾಧಿಸುತ್ತಿದ್ದ ಕಾಲ. ರಾಜಕೀಯವಾಗಿ ಪ್ರಜಾಪ್ರಭುತ್ವದ ತಾಳಿಕೆಯನ್ನು ಒರೆಗೆ ಹಚ್ಚಿ ನೋಡಿದ ಕಾಲವೂ ಹೌದು. ತುರ್ತುಪರಿಸ್ಥಿತಿ ಕೇವಲ ರಾಜಕೀಯವಾದ ವಾಸ್ತವ ಮಾತ್ರವಲ್ಲ ಎಂಬ ಸಂಗತಿ ಭಾರತದ ಜನ ಸಮುದಾಯಗಳಿಗೆ ಅರ್ಥವಾದ ಸಂದರ್ಭವದು. ಬಾಬಾ ಸಾಹೇಬರು ರೂಪಿಸಿದ ಸಂವಿಧಾನದ ಭರವಸೆಗಳು ಹಾಗೂ ಊಳಿಗಮಾನ್ಯ ಯಜಮಾನ್ಯದ ಪಾರಂಪರಿಕ ವರಸೆಗಳ ನಡುವೆ ಜನ ಸಮುದಾಯಗಳು ಸಿಕ್ಕಿ ನಲುಗುತ್ತಿದ್ದ ಕಾಲದಲ್ಲಿ ಕವಿತೆಯ ಹೊಣೆಗಾರಿಕೆಯ ಕುರಿತು ಚರ್ಚೆಗಳು ಬಿರುಸುಗೊಂಡಿದ್ದವು. ಬೂಸಾ ಚಳವಳಿಯ ಕಿಡಿಯಿಂದ ಹೊತ್ತಿಕೊಂಡ ಅಗ್ನಿಯಿಂದ ದಲಿತ ಸಂಘರ್ಷ ಸಮಿತಿರೂಪ ತಳೆದಿತ್ತು. ಕಲೆ ಜನರಿಗೆ ಬೆನ್ನು ಮಾಡದೆ ಮುಖ ಮಾಡಬೇಕು ಎನ್ನುವ ಉಮೇದಿನ ಸಮುದಾಯ ಸಾಂಸ್ಕೃತಿಕ ಸಂಘಟನೆಯೂ ಅಸ್ತಿತ್ವಕ್ಕೆ ಬಂದಿತ್ತು. ಅದೇ ಸುಮಾರಿಗೆ ರೈತರನ್ನು ಒಗ್ಗೂಡಿಸಿ ಪ್ರಭುತ್ವದಿಂದ ನ್ಯಾಯ ಕೇಳುವ ರೈತಚಳುವಳಿಯೂ ಕೂಡ ಕಾರ್ಯಾರಂಭ ಮಾಡಿತ್ತು. ಇವೆಲ್ಲಾ ಹೀಗೆ ಋತುಚಕ್ರದಂತೆ ತಿರುಗುತ್ತಿರುವ ಕಾಲದಲ್ಲಿಯೇ ದೇವರಾಜ ಅರಸು ಅವರು ಪ್ರಾರಂಭಿಸಿದ ಹಿಂದುಳಿದ ಸಮುದಾಯಗಳ ರಾಜಕಾರಣದಿಂದಾಗಿ ಅನೇಕ ಅಲಕ್ಷಿತ ಹಾಗೂ ನಿರ್ಲಕ್ಷಿತ ಸಮುದಾಯಗಳು ಸಾರ್ವಜನಿಕವಾಗಿ ಕಾಣಿಸತೊಡಗಿದವು. ಅಲ್ಲದೆ ಸ್ವಾತಂತ್ರ್ಯಾನಂತರದಲ್ಲಿ ಮೊದಲ ಬಾರಿಗೆ ಅಕ್ಷರಸ್ಥರಾದ ದಲಿತ ಶೂದ್ರ ಸಮುದಾಯದ ಯುವಕರಿಗೆ ತಾವು ಕಲಿಯುತ್ತಿರುವ ಸಾಹಿತ್ಯದಲ್ಲಿ ತಮ್ಮ ಸಮುದಾಯಗಳ ಗೈರು ಹಾಜರಿ ಎದ್ದು ಕಾಣತೊಡಗಿತು. ಮಾನವ ಸಂದುಕಟ್ಟುಗಳನ್ನು ಪ್ರತಿನಿಧಿಸುವ ಸಾಹಿತ್ಯ ನಿರ್ಮಿತಿಗಳು ಪುರೋಹಿತಶಾಹಿಯ ಜಾತಿ ಮೇಲರಿಮೆಯ ಫಲಿತಗಳಾಗಿರುವುದನ್ನು ಗುರುತಿಸತೊಡಗಿದವು.

(ಎಚ್.ಎಸ್. ಶಿವಪ್ರಕಾಶ್)

ಹೀಗೆ ಲಾವಾರಸದಂತೆ ಒಳಗಿನ ಕುದಿಯಲ್ಲಿ ಸೃಜನಶೀಲ ಮನಸ್ಸುಗಳು ಬೇಯುತ್ತಿದ್ದವು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಬರಹಗಾರ ಮತ್ತು ಕಲಾವಿದರ ಒಕ್ಕೂಟ ರಚನೆಯಾಗಿ ಶ್ರೀ ಕುವೆಂಪು ಅವರ ಮೂಲಕ ಉದ್ಘಾಟಿಸಲ್ಪಟ್ಟಿತು. ಆಗ ಕುವೆಂಪು ಅವರು ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ಶತ್ರುಗಳನ್ನು ವೈಚಾರಿಕ ಆಕೃತಿಗಳಲ್ಲಿ ಹುಡುಕುವ ಹೋರಾಡುವ ಹೊಸ ವಿನ್ಯಾಸವೊಂದರ ಕಡೆಗೆ ಗಮನಸೆಳೆದರು. ಅಲ್ಲಿಂದ ಮುಂದೆ ಕನ್ನಡ ಸಾಹಿತ್ಯದಲ್ಲಿ ಬಂಡಾಯವೆಂಬ ಹೊಸ ಪಂಥವೊಂದು ಪ್ರಾರಂಭವಾಯಿತು. ಹೀಗೆ ಸಾಹಿತ್ಯವನ್ನು ನಿರ್ಮಿಸುವ ಹಾಗೂ ಸಾಹಿತ್ಯವನ್ನು ಅರ್ಥೈಸುವ ಹೊಸ ನುಡಿ ಪರಿಕರಗಳ ಶೋಧ ಪ್ರಾರಂಭವಾಯಿತು. ಈ ಹೊಣೆಯನ್ನು ಹಾಗೂ ಅದರ ಸ್ವರೂಪವನ್ನು ವಿವರಿಸುವ ಕಾರ್ಯವನ್ನು ಆಗಿನ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಜಿಎಸ್‌ಎಸ್‌ ಅವರ ನೇತೃತ್ವದಲ್ಲಿ ನಿಭಾಯಿಸಿತು. ಆವರೆಗೆ ಆರಾಧನೆಗೆ ಭಾಜನವಾಗಿದ್ದ ನವ್ಯ ಎಂಬ ಹೆಸರಿನ ಕಾವ್ಯಕಟ್ಟೋಣಕ್ರಮದ ಬಗ್ಗೆ ಹೊಸ ತಲೆಮಾರಿನ ಕವಿಗಳಿಗೆ ಅನುಮಾನಗಳು ಉಂಟಾದವು. ‘ಇಕ್ರಲಾ ವದೀರ‍್ಲಾ’ ಎಂಬ ಶತಮಾನಗಳ ಮಡುಗಟ್ಟಿದರೊಚ್ಚಿನಿಂದ ಸಿದ್ಧಲಿಂಗಯ್ಯ ಅವರು ದಲಿತಕಾವ್ಯದ ಉದ್ಘಾಟನೆಯನ್ನು ಮಾಡಿದ್ದರು. ಹೀಗೆ ಕನ್ನಡ ಕವಿತೆಯು ಕತ್ತಲ ದಾರಿಯಲ್ಲಿರುವಾಗ ಶಿವಪ್ರಕಾಶರು ಕನ್ನಡ ಕವಿತಾ ಜಗತ್ತಿಗೆ ‘ಮಿಲರೇಪ’ ಎಂಬ ಕವನಸಂಕಲನದ ಮಿಂಚುಹುಳುಗಳ ದೊಂದಿಯನ್ನು ಹಿಡಿದು ಬಂದರು.

ಅಂದಿನಿಂದ ಇಂದಿನವರೆಗೆ ಶಿವಪ್ರಕಾಶರ ಕಾವ್ಯದ ಪಯಣ ಕನ್ನಡಕಾವ್ಯದ ಎಲ್ಲೆಗಳನ್ನು ವಿಸ್ತರಿಸುತ್ತಲೇ ಇದೆ. ಶಿವಪ್ರಕಾಶರ ಪೂರ್ವದಲ್ಲಿ ಕನ್ನಡಕವಿತೆಯು ನವೋದಯದಕಾಲದಲ್ಲಿ ಅನುಭವದ ಎತ್ತರದ ಡೈಮೆನ್ಷನ್‌ಅನ್ನು(ನವೋದಯ ಕವಿತೆಗಳಲ್ಲಿ ಭೂಮಿ ಆಕಾಶಗಳ ನಡುವಣ ಲಾಳಿಯಂತಾಡುವ ಸಂಬಂಧಗಳನ್ನು ನೆನಪಿಸಿಕೊಳ್ಳಬಹುದು), ನವ್ಯರಕಾಲದಲ್ಲಿ ಕವಿತೆ ಆಳದ ಡೈಮೆನ್ಷನ್‌ಅನ್ನು ಪಡೆದುಕೊಂಡಿತ್ತು (ಅಗೆಯುವ ಕ್ರಿಯೆ-ಆಳಕ್ಕೆ ಇಳಿಯುವ ಕ್ರಿಯೆಯೇ ಪ್ರಧಾನವಾಯಿತು). ಅನುಭವ ಪ್ರಾಮಾಣಿಕವಾಗಿರಬೇಕು ಎಂಬ ಘೋಷಣೆಯಿಂದಾಗಿ ಕವಿತೆಯಲ್ಲಿ ಒಳ ಪ್ರಯಾಣಗಳ ಮನೋಗಣಿಗಾರಿಕೆ ನಡೆಯಿತು. ಭೂಮಿಗೀತ ಮತ್ತು ಭೂತ ಪದ್ಯಗಳನ್ನು ನೆನಪಿಸಿಕೊಳ್ಳಬಹುದು ಆದರೆ ಕನ್ನಡಕವಿತೆಯ ನಿರ್ಮಿತಿಯಲ್ಲಿ ಅಗಲದ ಡೈಮೆನ್ಷನ್‌ಅನ್ನು ನಿಜದ ಅರ್ಥದಲ್ಲಿ ಶೋಧಿಸಿ ನಿರೂಪಿಸಿದ್ದೇ ಶಿವಪ್ರಕಾಶರ ಕೊಡುಗೆಯಾಗಿದೆ. ಶಿವಪ್ರಕಾಶರ ಕವಿತೆಗಳು ಕೊಳಕ್ಕೆ ಒಗೆದ ಕಲ್ಲಿನಿಂದ ಉಂಟಾಗುವ ಅಲೆಯ ಸ್ವರೂಪದಲ್ಲಿ (೩೬೦ ಡಿಗ್ರಿ ನೆಲೆಯಲ್ಲಿ) ಲೋಕವಿಸ್ತಾರವನ್ನು ಪರಿಶೀಲಿಸುವ ವಿನ್ಯಾಸವನ್ನು ಹುಡುಕಿ ಹೊರಟ ಮಹಾ ಪಯಣದಂತಿವೆ.

ಕಾಲು ನಡಿಗೆಯಲ್ಲದೆ ಸೈಕಲ್‌ ಸವಾರಿಯನ್ನು ಕೂಡ ಎಂದೂ ಮಾಡದ ಶಿವಪ್ರಕಾಶರು ಕನ್ನಡ ಕವಿಗಳಲ್ಲಿ ಷಟ್ಖಂಡ ಮಂಡಲಗಳ ವಿಸ್ತಾರವನ್ನು ಸ್ಪರ್ಶಿಸಿ ಬರೆದ ಮೊದಲ ಕವಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಕಾವ್ಯ ಮಾರ್ಗವನ್ನು ಸುಬ್ರಹ್ಮಣ್ಯ ಮಾರ್ಗವೆಂದು ಬಣ್ಣಿಸಿಕೊಂಡಿದ್ದಾರೆ.  ಕೇವಲ ಕನ್ನಡ ಸಂಸ್ಕೃತಿಯಲ್ಲಿ ಮಾತ್ರವಲ್ಲ ಬುಡಕಟ್ಟಿನ ಸಂಸ್ಕೃತಿಯಲ್ಲೂ ಕೂಡ ವಿಶ್ವಾತ್ಮಕತೆಯ ನೆಲೆಗಳು ಇರುತ್ತವೆ. ಆ ವಿಶ್ವಾತ್ಮಕತೆಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಸನ್ನಿವೇಶಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಕರ್ನಾಟಕದಲ್ಲಿ ನೆಲೆಯೂರಲು ಸಾಧ್ಯವಾಗದಿದ್ದರೂ ಕೂಡ ಆ ಕನ್ನಡತನವನ್ನು ನನ್ನೊಳಗೆ ಉಳಿಸಿಕೊಂಡು ಪಳನಿ(ಸುಬ್ರಹ್ಮಣ್ಯ) ಯಾವ ಥರ ಹಣ್ಣನ್ನು ಕಿತ್ತುಕೊಳ್ಳುವ ಬದಲು ತಾನೇ ಹಣ್ಣು ಅಂತ ತಿಳಿಕೊಂಡನೋ ಈ ದಾರಿಯಲ್ಲಿ ಇದೀನಿ ನಾನು. ನನ್ನ ಕಾವ್ಯಕೂಡ ಇದೇ ದಾರಿ ಹಿಡಿದಿದೆ ಬಹಳ ಸ್ಪಷ್ಟವಾಗಿ ತಮ್ಮ ಬಾಳಿನ ಹಾಗೂ ಕವಿತೆಯ ಲೋಕ ದೃಷ್ಟಿಯನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಆದ ಕಾರಣ ಬಿಕ್ಕುಗಳು, ಸಮಣರು ಶರಣರು, ಸಂತರು, ದಾಸರು, ಸೂಫಿಗಳು, ದರ್ವೇಸಿಗಳು, ಮುನಿಗಳು, ಜನಪದರು ಇಂಥ ಇನ್ನೂ ಅನೇಕ ಲೋಕ ಕರುಣಿಗಳ ಕಣ್ಣುಗಳ ಮೂಲಕ ಮನುಷ್ಯ ಜಗತ್ತು ಮತ್ತು ಜೀವಜಗತ್ತನ್ನು ತಮ್ಮ ಸಂವಾದಕ್ಕೆ ಒಳಗು ಮಾಡಿಕೊಂಡವರಲ್ಲಿ ಶಿವಪ್ರಕಾಶರೇ ಮೊದಲಿಗರು.

ಐಂದ್ರಿಕ ಅನುಭವಗಳ ಮೂಲಕ ದಾಟಿ ಬರುವ ಭಾವ-ಅನುಭಾವಗಳನ್ನು ಕನ್ನಡಿಸುತ್ತಲೇ ಬೆಳೆಯುತ್ತಿರುವ ರಚನೆಗಳಾಗಿವೆ. ಕವಿತೆಯ ಮೂಲಕ ಲೋಕವನ್ನು ಕಾಲವಿಸ್ತೀರ್ಣ, ದೇಶವಿಸ್ತೀರ್ಣ ಮತ್ತು ಮನೋವಿಸ್ತೀರ್ಣಗಳಲ್ಲಿ ಗ್ರಹಿಸುವ – ಅನುಸಂಧಾನಿಸುವ ಕಾವ್ಯಭಾಷೆಯ ರಸಸಿದ್ಧಿಯನ್ನು ಶಿವಪ್ರಕಾಶರು ಶೋಧಿಸುತ್ತಲೇಇದ್ದಾರೆ.

ಗ್ರೀಕ್ ಮತ್ತು ಇಂಗ್ಲಿಷ್ ಸಾಹಿತ್ಯ ಪರಂಪರೆಗಳನ್ನು ಸಾಹಿತ್ಯದ ವಿದ್ಯಾರ್ಥಿಯಾಗಿ ಆಳವಾಗಿ ಅಧ್ಯಯನ ಮಾಡಿದ್ದರೂ ಅವರ ಕವಿತೆಗಳ ಒಳ ಸ್ಪೇಷಿಯಲ್‌ ಆವರಣ ಮಾತ್ರ ಮಾರ್ಗಕಾವ್ಯದ ವಸ್ತು ಮತ್ತು ಛಂದಸ್ಸುಗಳನ್ನು ಬಿಟ್ಟುಕೊಟ್ಟು ಕಾಲದಾರಿಗಳ ಚಿಂತನೆಗಳತ್ತ ಆಕರ್ಷಿತವಾದದ್ದಾಗಿದೆ. ಆದಕಾರಣದಿಂದಲೇ ಶಿವಪ್ರಕಾಶರ ಕವಿತೆಗಳ ಕೇಂದ್ರದಲ್ಲಿ ದುಃಖವನ್ನು ಬೆನ್ನುಹತ್ತಿರುವ ಪ್ರಕ್ರಿಯೆ ಸ್ಥಾಯಿಯಾಗಿರುವುದನ್ನು ಕಾಣಬಹುದು. ಸಮಗಾರ ಭೀಮವ್ವ ಕವಿತೆಯಲ್ಲಿನ ಜೀವಸಂಗೋಪನೆಯ ಪ್ರಾರ್ಥನೆಯ ಧಾಟಿ ಈ ಮಾತಿಗೆ ಪುರಾವೆಯನ್ನು ಒದಗಿಸುತ್ತದೆ. ಶಿವಪ್ರಕಾಶರ ಮಿಲರೇಪದ ಕವಿತೆಗಳ ಕಟ್ಟುವಿಕೆಯಲ್ಲಿ ಆಧುನಿಕ ಕನ್ನಡಕವಿತೆಯಲ್ಲಿ ಆವರೆಗೆ ಕಾಣದ ನುಡಿಯ ಹೊಸಪ್ರಯೋಗಗಳು ಕಂಡುಬಂದವು. ಬರಹಗಾರರಾಗುವ ಪ್ರತಿಯೊಬ್ಬರೂ ಒಂದು ಸಾಹಿತ್ಯ ಪರಂಪರೆಯನ್ನು ಪ್ರವೇಶಿಸುತ್ತಾರೆ ಎನ್ನುವ ಮಾತಿದೆ. ಆದರೆ ಶಿವಪ್ರಕಾಶರು ತಮ್ಮ ಕಾವ್ಯ ಅನ್ವೇಷಣೆಯ ಪ್ರಕ್ರಿಯೆಯಲ್ಲಿ ಜಗತ್ತಿನ ಹಲವಾರು ಸಾಹಿತ್ಯಪರಂಪರೆಗಳನ್ನು ಹೊಕ್ಕು ಬಂದಿದ್ದಾರೆ. ಮುತ್ತು ಮುಳಗನ ಹಕ್ಕಿಯಂತೆ ಆ ಎಲ್ಲಾ ಸಾಹಿತ್ಯಪರಂಪರೆಗಳ ಅನನ್ಯವಾದ ಸಂವೇದನೆಗಳನ್ನು ಕನ್ನಡಕ್ಕೆ ಕಸಿಮಾಡಿದ್ದಾರೆ. ಶಿವಪ್ರಕಾಶರ ಕಾವ್ಯದಲ್ಲಿ ವಿಶ್ವಾತ್ಮಕತೆ ಕೇವಲ ಆಶಯವಾಗಿ ಮಾತ್ರವಲ್ಲದೆ ಅನುಭೂತಿಯಾಗಿಯೂ ಸಂಭವಿಸಿದೆ. ಇವರ ಕಾವ್ಯದಗುರುತ್ವಶಕ್ತಿ ಅವರ ವಿಸ್ತಾರವಾದ ಓದಿನಲ್ಲಿದೆ; ಲೋಕ ಸಂಚಾರದಲ್ಲಿದೆ.

ಶಿವಪ್ರಕಾಶರು ತಮ್ಮಕವಿತೆಗಳಲ್ಲಿ ನಡೆಸಿರುವ ಭಾಷಿಕ ಪ್ರಯೋಗಗಳು ಅವರನ್ನು ನಿಸ್ಸಂದೇಹವಾಗಿ ಕನ್ನಡದ ವರ್ತಮಾನದ ದೊಡ್ಡಕವಿಯನ್ನಾಗಿ ಮಾಡಿವೆ. ಅನೇಕ ಜನ ಕವಿಗಳು ಒಂದೇ ಬಗೆಯ ಭಾಷಾ ಪ್ರಯೋಗದಸಿದ್ಧ ಏಕತಾನತೆಗೆ ಸಿಕ್ಕಿಕೊಂಡುಬಿಟ್ಟಿರುತ್ತಾರೆ. ವೈವಿಧ್ಯಮಯವಾದ ವಸ್ತುಗಳನ್ನು ಕುರಿತು ಕವಿತೆ ಬರೆಯುತ್ತಿದ್ದರೂ ಅವರ ಕಾವ್ಯಶಿಲ್ಪದ ಕಟ್ಟೋಣದಲ್ಲಿ ಮಾತ್ರ ಏಕರೂಪಕಾತ್ಮಕತೆಯು ಉಳಿದುಬಿಟ್ಟಿರುತ್ತದೆ. ಆದರೆ ಸಮರ್ಥ ಕವಿ ಮಾತ್ರ ಈ ಸಮಸ್ಯೆಯನ್ನುತಮ್ಮ ಭಾಷರೂಢಿಗಳನ್ನು ತಾವೇ ಮುರಿಯುವ ಮೂಲಕ ಮೀರುತ್ತಿರುತ್ತಾರೆ. (ಪೆನ್ನು, ಕಾಗದ, ತೊಲಗಿ- ಶಿವಪ್ರಕಾಶ ಉಪಮೆಯ ರೋಗಿ) ಶಿವಪ್ರಕಾಶರ ಕವಿತೆಗಳಲ್ಲಿ ನಿರಂತರ ಪ್ರಯೋಗಶೀಲತೆ ಎದ್ದು ಕಾಣುತ್ತದೆ. ಇವರ ಕಾವ್ಯದಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಮಾರ್ಗ ಮತ್ತು ದೇಸಿ ನುಡಿ ಪ್ರಯೋಗಗಳ ಸಾಕ್ಷಿಗಳು ಸಾಕಷ್ಟು ಸಿಕ್ಕುತ್ತವೆ. “ಹೊಲದಾಟಿ ದಣಿದು ಬಂದವನೆ” ಚಿರತೆ ಕಣ್ಣುಗಳಂತೆ ಉರಿವ ಸ್ಪಾಟ್ ಲೈಟುಗಳು’(ಮಿಲರೇಪ ಸಂಕಲನದಿಂದ) ನವೋದಯ ಹಾಗೂ ನವ್ಯಕಾವ್ಯದಲ್ಲಿ ಬಳಕೆಯಾದ ನುಡಿವರಸೆಯ ಕಸಿಯಿಂದ ರೂಪಿಸಿಕೊಂಡ ಭಾಷಾ ಪ್ರಯೋಗದ ಮೂಲಕ ತಮ್ಮಕಾವ್ಯ ಪಯಣವನ್ನು ಶಿವಪ್ರಕಾಶರು ಆರಂಭಿಸಿರುವುದನ್ನು ಅವರ ಆರಂಭದ ಕವಿತೆಗಳ ಅಭ್ಯಾಸದಿಂದ ಗುರುತಿಸಬಹುದು. ಮುಂದೆ ಕಾಲ ಸರಿದಂತೆ ಶಿವಪ್ರಕಾಶರ ಚಿತ್ತ ಸಮಾಜದ ಅಂಚುಗಳತ್ತ ತಿರುಗಿತು. ನವ್ಯದ ಪ್ರವರ್ತಕರು ಪಾವಿತ್ರತೆಯನ್ನು ತಿರಸ್ಕರಿಸಿದ್ದರೆ ಶಿವಪ್ರಕಾಶರು ತಮ್ಮ ಕವಿತೆಯ ಮೂಲಕ ಹೊಸ ಪಾವಿತ್ರತೆಯ ಹುಡುಕಾಟ ನಡೆಸಿದ್ದರು. ಅದರ ಭಾಗವಾಗಿ ಜನರ ಆಡುನುಡಿಗಳನ್ನು, ಜನಪದ ಲಯಗಳನ್ನು ಕವಿತೆಯ ಕಟ್ಟುವಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಯೋಗಿಸ ತೊಡಗಿದರು. ಶಿವಪ್ರಕಾಶರ ಪ್ರವೇಶಕ್ಕೆ ಮುನ್ನ ಕವಿತೆಯ ಕಾವ್ಯಶಿಲ್ಪಕ್ಕೆ ಅನಿವಾರ್ಯವಾಗಿದ್ದ ವೈದಿಕ ಪುರಾಣ ಪ್ರತೀಕಗಳು ಕನ್ನಡ ಕವಿತೆ ರಚನೆಗಳಿಂದ ಕಣ್ಮರೆಯಾದವು. ಇದು ಕನ್ನಡ ಕವಿತೆ ಪಡೆದುಕೊಂಡ ಬಹುಮುಖ್ಯವಾದ ಪಲ್ಲಟವಾಗಿದೆ.

ಕವಿತೆಗಳಲ್ಲಿ ಬೇಂದ್ರೆ ಮತ್ತು ಕಂಬಾರರು ಜನಪದರ ನುಡಿ ಲಯಗಳ ವಿನ್ಯಾಸಗಳನ್ನು ವ್ಯಾಪಕವಾಗಿ ಬಳಸಿದರೂ ಕವಿತೆಯ ಒಳ ದೃಷ್ಟಿಕೋನ ಮಾತ್ರ ಜನಪದ ಬದುಕಿನದ್ದು ಆಗಿರಲಿಲ್ಲ. ಬೇಂದ್ರೆ ಅವರಲ್ಲಿ ಉದಾರವಾದಿ ವೈದಿಕ ಮನೋಧರ್ಮ ಕಾಣಿಸಿದರೆ ಕಂಬಾರರಲ್ಲಿ ನವ್ಯರ ಜೀವನ ಮೀಮಾಂಸೆಯೇ ಹೂರಣವಾಗಿದೆ. ಹೆಣ್ಣು ಮತ್ತು ಭೂಮಿಯ ಸಂಬಂಧಗಳನ್ನು ಈ ಇಬ್ಬರು ಕವಿಗಳು ಪುರುಷಕೇಂದ್ರಿತ ಕ್ರಮದಲ್ಲಿಯೇ ನಿಬಿಡವಾಗಿ ಕಟ್ಟಿದ್ದಾರೆ ಆದರೆ ಶಿವಪ್ರಕಾಶರು ಕವಿತೆಯ ಒಡಲೊಳಗೆ ಗಂಡು ವ್ಯಸನಗಳಿಂದ ಬಿಡಿಸಿಕೊಂಡಿದ್ದಲ್ಲದೆ, ವ್ಯಕ್ತಿನಿಷ್ಠತೆಯಿಂದ ಸಮುದಾಯನಿಷ್ಠತೆಯ ಕಡೆಗೆ ಪಯಣ ಬೆಳಸಿದ್ದಾರೆ ಹಾಗೂ ಆ ಸಮುದಾಯಗಳ ಲೋಕದೃಷ್ಟಿಯನ್ನು ಕವಿತೆಗಳಲ್ಲಿ ಪ್ರತಿಫಲಿಸಿದ್ದಾರೆ. (ನೀವೆಲ್ಲಾಇದ್ದೀರಿ ನನ್ನಲ್ಲಿ, ನಾನು ನಿಮ್ಮಲ್ಲಿ, ಈ ನಾಗರೀಕತೆಯ ಮೇರುರಾಷ್ಟ್ರದಲ್ಲಿ) ಈ ದೃಷ್ಟಿಯಿಂದ ಆಧುನಿಕ ಕನ್ನಡ ಕವಿಗಳಲ್ಲಿ ನಿಜದ ಅರ್ಥದಲ್ಲಿ ಸಬಾಲ್ಟ್ರನ್‌ ಕಾವ್ಯ ಪರಂಪರೆಯನ್ನು ನಿರ್ಮಿಸಿದವರು ಶಿವಪ್ರಕಾಶರೇ ಆಗಿದ್ದಾರೆ.

‘ಮಳೆಬಿದ್ದ ನೆಲದಲ್ಲಿ’ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ವಲಯ ಎಂಬತ್ತರ ದಶಕದ ಮಹತ್ವದ ಕಾವ್ಯಕೃತಿ ಎಂದು ಪರಿಗಣಿಸಿತು. ಮುಖ್ಯವಾಗಿ ಸಿಂಗಿರಾಜ ಸಂಪಾದನೆ, ಸಮಗಾರಭೀಮವ್ವ, ಕಲ್ಯಾಣ ಮುಂತಾದ ಕವಿತೆಗಳು ಕನ್ನಡ ನೆಲದಲ್ಲಿ ನಡೆದಿದ್ದ ಮಾನವೀಯತೆಯ ಪ್ರಯೋಗಗಳ ಅನನ್ಯತೆಗಳನ್ನು ಮರು ಶೋಧಿಸುವ ಕಾರಣದಿಂದ ಮಹತ್ವದ ರಚನೆಗಳಾಗಿ ಅಧ್ಯಯನಕ್ಕೆ ಒಳಗಾಗಿವೆ. ಕವಿತೆಗಳಲ್ಲಿನ ವಸ್ತು ಪ್ರಪಂಚಗಳು ಮತ್ತು ಕವಿಯ ಅನುಭವ ಪ್ರಪಂಚಗಳು ಕವಿತೆಗಳಲ್ಲಿ ಐಂದ್ರಿಕತೆಯ ಅನುಭವ ತರ್ಕವನ್ನು ಮುರಿದು ಕಟ್ಟುವ ಮಾಯಕದ ಆಯಾಮಗಳು ಈ ರಚನೆಗಳಿಗೆ ಕಾಡುವ ಗುಣವನ್ನು ತಂದುಕೊಟ್ಟಿವೆ.

ಸಮಗಾರ ಭೀಮವ್ವ ಮತ್ತು ಸಿಂಗಿರಾಜ ಸಂಪಾದನೆ ಕವಿತೆಗಳು ರಂಗ ಕೃತಿಗಳಾಗಿಯೂ ಜನರೊಟ್ಟಿಗೆ ಸಂವಾದಕ್ಕೆ ತೊಡಗಿದವು. ಎಂಬತ್ತರ ದಶಕದಲ್ಲಿ ಶರಣರ ವಚನ ಮತ್ತು ಆಲೋಚನೆಗಳನ್ನು ಕರ್ನಾಟಕದ ಸಮಾಜೋ-ಧಾರ್ಮಿಕ-ರಾಜಕಿಯ ಪರಿಸ್ಥಿತಿಗಳನ್ನು ವಿಮರ್ಶಿಸಲು ವೈಚಾರಿಕ ಆಕೃತಿಗಳಾಗಿ ಬಳಕೆಗೆ ತಂದವರಲ್ಲಿ ಶಿವಪ್ರಕಾಶರು ಪ್ರಮುಖರು. ವಚನಗಳ ನಿಕಟ ಓದು, ಅಕ್ಕ ಮತ್ತು ಅಲ್ಲಮರು ನುಡಿಸಿದ ಬೆಡಗಿನ ರೀತಿಯ ಪ್ರತಿಮಾ ನಿರ್ಮಾಣದ ಸಾಮರ್ಥ್ಯವನ್ನು ಶಿವಪ್ರಕಾಶರು ತಮ್ಮ ಕವಿತೆಗಳಲ್ಲಿ ಕುಂದಿಲ್ಲದಂತೆ ಬಳಸಿದರು. ಇದೇ ಕಾರಣದಿಂದ ಇರಬೇಕು ಕನ್ನಡ ವಿಮರ್ಶಾವಲಯ ಎಂಬತ್ತು-ತೊಂಬತ್ತರ ದಶಕದಲ್ಲಿ ಶಿವಪ್ರಕಾಶರನ್ನು ಅನುಭಾವಿ ಕವಿಯೆಂದು ಗುರುತಿಸತೊಡಗಿತು.

ತೊಂಬತ್ತರ ದಶಕದಲ್ಲಿ ಅವರು ಹೊರತಂದ ಅಣುಕ್ಷಣಚರಿತೆಯಲ್ಲಿ ಶಿವಪ್ರಕಾಶರ ಕಾವ್ಯ ಅಭಿವ್ಯಕ್ತಿಯು ಶಿಖರವನ್ನು ಮುಟ್ಟಿತು. ಭಾರತೀಯ ಸಮಾಜತೊಂಬತ್ತರ ದಶಕದಲ್ಲಿ ಹಿಂದೂ ಸನಾತನ ಚಿಂತನೆಯನ್ನು ಎದುರಿಸಲು ಯುರೋಪು ಪ್ರಣೀತ ವ್ಯಕ್ತಿನಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಅಭಿವೃದ್ಧಿ ಚಿಂತನೆಗಳಿಂದ ಸಾಧ್ಯವಿಲ್ಲವೆಂದು ತಲ್ಲಣಿಸುತ್ತಿರುವಾಗ ಭಾರತೀಯ ಶ್ರಮಣ ಪರಂಪರೆಗಳಲ್ಲಿದ್ದ ವೈದಿಕೇತರವಾದ ಬಂಡುಕೋರ ಚಿಂತನೆಗಳಲ್ಲಿ ಶಿವಪ್ರಕಾಶರು ಈ ವಿದ್ಯಮಾನಕ್ಕೆ ಮದ್ದನ್ನು ಹುಡುಕುತ್ತಿದ್ದರು. ಇದು ಕಚ್ಚಿದ ಹಾವಿನ ವಿಷವನ್ನು ಇಳಿಸಲು ಕಾಡಿನ ಎಲೆ ಸೊಪ್ಪುಗಳನ್ನು ತಂದುಹಿಂಡಿರಸ ಕುಡಿಸಿ ಪ್ರಾಣಪೊರೆಯುವ ಅಜ್ಞಾತ ಹಳ್ಳಿಯ ನಾಟಿ ವೈದ್ಯರನ್ನು ನೆನಪಿಸುವಂಥದ್ದು. ಶಿವಪ್ರಕಾಶರು ತಮ್ಮ ಕವಿತೆಗಳಲ್ಲಿ ಪ್ರಾಣ ಪೊರೆಯುವ ಇಂತಹ ತಲಪರಿಗೆಗಳನ್ನು ಹುಡುಕುತ್ತಿದ್ದರು.

ಅಣುಕ್ಷಣಚರಿತ್ರೆಯ ಕವಿತೆಗಳಲ್ಲಿ ಕನಸು ಮತ್ತು ಬೇಟೆಗಳ ನಡುವೆ ಲೋಲಾಕಿನಂತೆ ತುಯ್ಯುವ ಬಣ್ಣನೆಗಳು ಓದುವ ನಮ್ಮನ್ನು ತಮ್ಮ ಮಾಯಾವರಣಕ್ಕೆ ಸೇರಿಸಿಕೊಳ್ಳುತ್ತವೆ. ಮುಂದೆ ಸೂರ್ಯಜಲದ ನಂತರದ ಕವಿತೆಗಳಲ್ಲಿ ಕಾವ್ಯಸಂಕಲ್ಪವೇ ಬದಲಾಗಿ ಹೋಗಿದೆ. ನನ್ನ ವಿಶಿಷ್ಟ ದನಿಯನ್ನು ಸ್ಥಾಪಿಸುವ ಇಂಗಿತಕ್ಕೆ ಬದಲಾಗಿ ಜಡಜಂಗಮಗಳ ಹಲವಂದದ ದನಿಗಳಲ್ಲಿ ನನ್ನದೆಂಬ ದನಿಯನ್ನು ಹುಡುಕಿಕೊಂಡು ಆ ಎಲ್ಲ ದನಿಗಳೊಂದಿಗೆ ವ್ಯವಹರಿಸುತ್ತ, ನನ್ನ ಸಣ್ಣದನಿಯನ್ನು ಎಲ್ಲ ದನಿಗಳ ಬೀಜವಾದ ಮೊದಲ ಜೀವದದನಿಗೆ ಮರುತಾಕಿಸುವ ಒಳಗಿನ ಒತ್ತಡವೆ ನನಗೆ ಮೂಲ ಪ್ರೇರಣೆಯಾಗಿದೆ ಎನ್ನುವ ಶಿವಪ್ರಕಾಶರ ಕಾವ್ಯಕಟ್ಟೋಣದ ತಿಳಿವು ಕನ್ನಡಕಾವ್ಯ ಪರಂಪರೆಯಲ್ಲಿ ಬರೆದ ಆಧುನಿಕ ಶ್ರೇಷ್ಠಕವಿಗಳಲ್ಲಿ ಕೆ.ಎಸ್.ಎನ್‌. ಅವರ ತಿಳಿವಿಗೆ ಮಾತ್ರ ಹೋಲಿಸಬಹುದಾಗಿದೆ. ‘ಇದು ಅವನ ಕವನ ಇದು ನನ್ನ ಕವನ ಎಂಬುದು ಸಟೆ ಇದು ಕನ್ನಡದಕವಿತೆ ಎಂಬುದು ದಿಟ’ ಎಂದ ಬೇಂದ್ರೆ ಅವರ ಈ ಮಾತು ಶಿವಪ್ರಕಾಶರ ಮನೋಗತವನ್ನು ಅರಿಯಲು ಸಹಾಯವಾಗುತ್ತದೆ.

(ಕೆ ವೈ ನಾರಾಯಣಸ್ವಾಮಿ)

ತೊಂಬತ್ತರ ದಶಕದ ಕೊನೆಯ ಭಾಗದ ಹೊತ್ತಿಗೆ ಶಿವಪ್ರಕಾಶರು ಮಹಾಚೈತ್ರ, ಮಾದಾರಿ ಮಾದಯ್ಯ ಹಾಗೂ ಮಂಟೇಸ್ವಾಮಿ ಕಥಾಪ್ರಸಂಗದಂಥ ಯಶಸ್ವಿ ನಾಟಕಗಳ ಮೂಲಕ ಕನ್ನಡರಂಗಭಾಷೆಯನ್ನೇ ಬದಲಿಸಿದ್ದರು. ರಂಗಭೂಮಿಯ ಒಡನಾಟ ಶಿವಪ್ರಕಾಶ ಕವಿತೆಯ ನಿರ್ಮಿತಿಯ ಮೇಲೆ ದಟ್ಟವಾದ ಪ್ರಭಾವವನ್ನು ಬೀರಿದೆ. ಕವಿತೆಯ ಪ್ರಾಣಕವಿತೆಯ ನಾದರೂಪದಲ್ಲಿದೆ. ಅಲ್ಲದೆ ಅದು ಕಣ್ಣೋದಿನ ಅನುಭವವಲ್ಲ; ಕಿವಿಯ ಮೂಲಕವೇ ತಿಳಿಯುವ ಅನುಭವ ಎಂಬ ನಂಬಿಕೆಯನ್ನು ಶಿವಪ್ರಕಾಶರು ತಳೆದಿರುವುದನ್ನು ಆ ಕಾಲಘಟ್ಟದ ನಂತರ ಬರೆದಿರುವ ಎಲ್ಲಾ ಕವಿತಾ ಸಂಕಲನಗಳು ಹಾಡುಗಬ್ಬಗಳಾಗಿರುವುದನ್ನು ಗುರುತಿಸಬಹುದು. ತಮ್ಮ ಆರಂಭದ ಕವಿತೆಗಳಲ್ಲಿ ಓದುಗರಿಗೆ ನೋಡಿಸಲು ಹೊರಟ ಕವಿತೆಗಳು ನಂತರದಲ್ಲಿ ಕೇಳುಗರೊಂದಿಗೆ ಹಾಡುಗಳಾಗಿ ಮಾತನಾಡತೊಡಗಿವೆ.

ಶಿವಪ್ರಕಾಶರು ಆನು ಒಲಿದಂತೆ ಬರೆದಿರುವ ಅಥವಾ ಹಾಡಿಕೊಂಡಿರುವ ಕಾವ್ಯಸಮಸ್ತವನ್ನು ಅಧ್ಯಯನ ಮಾಡಿದರೆ ಕಳೆದ ಎರಡು ಶತಮಾನಗಳ ಅಂತ್ಯ ಆದಿಗಳನ್ನು ಬೆಸೆದುಕೊಂಡಿರುವ ಕರ್ನಾಟಕದ ಚರಿತ್ರೆ ಹಾಗೂ ಜಾಗತಿಕ ವಿದ್ಯಮಾನಗಳು ನಮ್ಮ ಅರಿವಿಗೆ ಬರುತ್ತವೆ. ಬಹಿರಂಗ ಮತ್ತು ಅಂತರಂಗಗಳು ಎದರುಗೊಂಡ ಜೀವಹಿಂಸೆ ಮತ್ತು ಜೀವದಯೆಗಳ ನಡುವಿನ ಸಂಘರ್ಷಗಳನ್ನು ಮುಖಾಮುಖಿಯಾದಂತೆ ಅನ್ನಿಸುತ್ತದೆ. ಶಿವಪ್ರಕಾಶರ ಕವಿತೆಯು ಹೀಗೆ ನಿಚ್ಚಂಪೊಸತಾಗುವ ಪ್ರಕ್ರಿಯೆಯಲ್ಲಿ ಕವಿತೆ ಮತ್ತು ಸಹೃದಯರ ಸಂಬಂಧಗಳ ವ್ಯಾಖ್ಯಾನಗಳು ಬದಲಾಗುತ್ತಾ ಬಂದಿವೆ. ಅಲ್ಲದೆ ಕಾವ್ಯಮೀಮಾಂಸೆಯ ಸ್ವರೂಪವನ್ನು ಗ್ರಹಿಸಲು ಆಕರವಾಗಿಯೂ ಒದಗಿಬರುತ್ತವೆ. ಒಬ್ಬ ಲೇಖಕನನ್ನು ಆತ ಸೃಷ್ಟಿಸಿದ ಕೃತಿಗಳ ಆಧಾರದ ಮೇಲೆ ಶ್ರೇಷ್ಠನೆಂದು ವಿಮರ್ಶೆ ನಿಷ್ಕರ್ಷೆ ಮಾಡುತ್ತದೆಯಾದರೂ ನಿಜದ ಅರ್ಥದಲ್ಲಿ ಆತ ಸೃಷ್ಟಿಸಿದ ಅಭಿವ್ಯಕ್ತಿ ಮಾರ್ಗವನ್ನು ಮುಂದಿನ ಸೃಜನಶೀಲ ತಲೆಮಾರುಗಳು ಅನುಕರಿಸುವ ಕ್ರಿಯೆ ಮಾತ್ರ ಆತನ ಸಾಂಸ್ಕೃತಿಕ ಮಹತ್ವವನ್ನು ನಿರ್ಣಯಿಸಬಲ್ಲವು. ಈ ದೃಷ್ಟಿಯಿಂದ ಶಿವಪ್ರಕಾಶರು ಅವರ ನಂತರದ ನೂರಾರು ಕವಿಗಳ ಕಾವ್ಯ ನಿರ್ಮಿತಿಗಳಲ್ಲಿ ಪುನರ್ ಸೃಷ್ಟಿಯಾಗುತ್ತಿದ್ದಾರೆ. ಇಲ್ಲವೆ ಈಗ ಬರೆಯುತ್ತಿರುವ ಯುವಕವಿಗಳು ಶಿವಪ್ರಕಾಶರ ಕಾವ್ಯಪ್ರಭಾವಳಿಯಿಂದ ಪಾರಾಗಲು ತಮ್ಮದೇ ಹೊಸದಾರಿಗಳ ಹುಡುಕಾಟದಲ್ಲಿದ್ದಾರೆ.

ಇದು ಶಿವಪ್ರಕಾಶರ ಕವಿತೆಗಳ ದಿಟದ ಯಶಸ್ಸು ಎಂದು ನಾನು ತಿಳಿದಿದ್ದೇನೆ. ನಾನು ಕೂಡ ಒಬ್ಬ ಕವಿಯಾಗಿ ಬರೆಯ ಹೊರಟಾಗಲೆಲ್ಲಾ ಶಿವಪ್ರಕಾಶರ ಪ್ರಮಾಣವನ್ನು ದಾಟಬೇಕಾದ ಸವಾಲನ್ನು ಎದುರಿಸಿದ್ದೇನೆ. ಇಂತಹ ಸೃಜನಶೀಲ ಸವಾಲನ್ನು ತನ್ನ ರತ್ನಪರೀಕ್ಷಾ ವಿಧಾನದಿಂದ ಮಹಾಕವಿ ಶಿವಪ್ರಕಾಶರು ಇಂದಿಗೂ ಮುಂದುವರೆಸಿದ್ದಾರೆ. (ಮಹಾಕಾವ್ಯದ ವ್ಯಾಪ್ತಿಗಿಂತ ಹಿರಿದಾದ ವಸ್ತು ವೈವಿಧ್ಯವನ್ನು ಮತ್ತು ಛಂದೋಪ್ರಯೋಗಗಳನ್ನು ಗಮನಿಸಿದರೆ ಖಂಡಿತವಾಗಿಯೂ ಶಿವಪ್ರಕಾಶರದು ಮಹಾಕವಿ ಪ್ರತಿಭೆ ಎಂಬುದನ್ನು ಅವರ ಕಟು ವಿಮರ್ಶಕರು ಒಪ್ಪುತ್ತಾರೆ) ಕವಿತೆಯೆಂಬ ಕಡಲಿನ ರತ್ನಗರ್ಭವನ್ನು ಪ್ರವೇಶಿಸುವ ಮತ್ತು ಪಾರಾಗುವ ಮಾಯಾಶಕ್ತಿಯನ್ನು ನನ್ನಂಥವರಿಗೆ ಕಲಿಸುತ್ತಲಿರುವ ಕವಿಗುರು ಶಿವಪ್ರಕಾಶರಿಗೆ ನಮಸ್ಕಾರ.