ಆಟ ಆಗುವಲ್ಲಿಗೆ ಮೇಳ ಹೋಗಿ ಆಟ ಆಡಿಸಲು ವೀಳ್ಯ ಕೊಡುವವರ ಮನೆಯಲ್ಲಿ “ತಾಳಮದ್ದಳೆ” ಹಾಕುವ ಕ್ರಮ ಹಿಂದೆ ಇತ್ತು.  ಆಟ ಆಡಿಸುವವರ ಮನೆಯಲ್ಲಿ ದೀಪ ಸ್ಥಾಪನೆ ಮಾಡಿ ಭಾಗವತರು ಮತ್ತು ಮದ್ದಳೆಗಾರರು ಕುಳಿತು ಭಾಗವತರು ಒಂದೆರಡು ದೇವರ ಸ್ತುತಿಯನ್ನು ಹಾಡುತ್ತಿದ್ದರು. ಹೀಗೆ ತಾಳಮದ್ದಳೆ ಹಾಕುವ ಮೂಲಕ, ಅಂದಿನ ಆಟ ಆಡಿಸಬೇಕೆಂದು ಸೇವಾಕರ್ತರಲ್ಲಿ  ಮನವಿ ಮಾಡುವುದು,  ಭಾಗವತರ ಸಾಮರ್ಥ್ಯ ಮತ್ತು ನೈಪುಣ್ಯ ನೋಡಿ ಆ  ಮನೆಯವರು ವೀಳ್ಯವನ್ನು ನಿರ್ಧರಿಸುವುದು ಇದೇ ಸಂದರ್ಭದಲ್ಲಿ. ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯ ಬರಹ.

 

ಚೌಕಿ ಅಂದರೆ ವೇಷ ಹಾಕುವ ಮಖವರ್ಣಿಕೆ ಸಿದ್ಧಮಾಡುವ ವೇಷ-ಹಿಮ್ಮೇಳ ಪರಿಕರಗಳನ್ನು ಇರಿಸುವ ಮತ್ತು ಯಕ್ಷಗಾನ ಮೇಳದ ದೇವರ ಪೆಟ್ಟಿಗೆ (ಸಾಂಕೇತಿಕವಾಗಿ ರಾಮ-ಲಕ್ಷ್ಮಣರ ಕಿರೀಟ)ಯನ್ನು ಇರಿಸುವ ತಾಣ. ಇದು ಸಾಮಾನ್ಯವಾಗಿ ರಂಗಸ್ಥಳದ ಹಿಂಭಾಗವೇ ಸ್ವಲ್ಪ ದೂರದಲ್ಲಿ ಇರುವಂಥದ್ದು.

ಕಿರಿಯ ಬಲಿಪ ನಾರಾಯಣ ಭಾಗವತರು ಅಂದಿನ ಮೇಳಗಳ ಚೌಕಿಯ ಕ್ರಮಗಳನ್ನು ಈ ರೀತಿ ಹೇಳುತ್ತಾರೆ: ಆಟ ಮುಗಿದೊಡನೆಯೇ ಬೇಗ ಬೇಗನೇ ಗಂಟು ಮೂಟೆ ಕಟ್ಟಿ ವೇಷದ ಪೆಟ್ಟಿಗೆಗಳನ್ನು ಮತ್ತು ವೇಷಧಾರಿಗಳ ವೇಷಗಳ ಗಂಟನ್ನು ಆಯಾ ಕಲಾವಿದರೇ, ಹೊತ್ತುಕೊಂಡು ಮರುದಿನ ಆಟ ನಡೆಯುವ ಜಾಗಕ್ಕೆ ನಡೆಯಬೇಕಿತ್ತು. ಈ ನಡೆಗೆ ಸರಾಸರಿಯಾಗಿ ಹತ್ತರಿಂದ ಹದಿನೈದು ಮೈಲಿನವರೆಗೂ ಇರುತ್ತಿತ್ತು. ಒಂದು ಮೈಲು ಅಂದರೆ ಸಾಧಾರಣ ಒಂದುವರೆ ಕಿ.ಮಿ. ಅದೊಂದು ದಿನ ಕಳಸದಿಂದ ಕೊಟ್ಟಿಗೆಹಾರದವರೆಗೂ ಸರಿಸುಮಾರು 28 ಮೈಲಿಗಳಷ್ಟು ದೂರ ನಡೆದುದನ್ನು ಕಿರಿ ಬಲಿಪರು ನೆನಪಿಸಿಕೊಳ್ಳುತ್ತಾರೆ. ಹೀಗೆ ಒಂದು ಆಟದ ಸ್ಥಳದಿಂದ ಮತ್ತೊಂದು ಆಟದ ಸ್ಥಳದವರೆಗಿನ ನಡಿಗೆಯ ಚಿತ್ರವನ್ನು ಕಟ್ಟಿಕೊಡುತ್ತಾರೆ. ಒಂದು ಬಡಿಗೆಯಲ್ಲಿ ಪಾತ್ರೆಯನ್ನು ಕಟ್ಟಿ ಅದಕ್ಕೆ ನೀರನ್ನು ತುಂಬಿಸಿಕೊಳ್ಳುತ್ತಿದ್ದರು.  ಹಿಂದಿನ ದಿವಸ ಆಟ ಆಡಿಸಿದವರ ಅಡುಗೆಗಾಗಿ ಕೊಟ್ಟು ಬಳಸಿ ಮಿಕ್ಕಿದ್ದ ಬೆಲ್ಲವನ್ನು ಹಿಡಿದುಕೊಂಡು ಎಲ್ಲಾ ಕಲಾವಿದರು, ಚೌಕಿ, ರಂಗಸ್ಥಳದ ಕೆಲಸಗಾರರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಈ ಪಾತ್ರೆಯ ನೀರು ನಡಿಗೆಯ ಆಯಾಸವನ್ನು ನಿವಾರಿಸಲು ಬೇಕಾಗಿತ್ತು. ನೀರು ಮತ್ತು ಬೆಲ್ಲವಷ್ಟೇ ಪಯಣದ ಸಾಂಗತ್ಯಕ್ಕೆ ಇದ್ದದ್ದು. ಇಷ್ಟರಿಂದಲೇ ನಡಿಗೆಯ ಆಯಾಸವನ್ನು ಪರಿಹರಿಸಿಕೊಳ್ಳಬೇಕಿತ್ತು. ಮುಂದಿನ ಬಿಡಾರಕ್ಕೆ ತಲುಪಿಯೇ ಆಹಾರದ ಚಿಂತೆ,ಮಾತು.

ಈ ಹಾದಿಯ ಮಧ್ಯವೇ ಯಕ್ಷಗಾನದ ಪಾಠ-ಅಭ್ಯಾಸ ಇತ್ಯಾದಿ. ಎಲ್ಲಾದರೂ ದಣಿವಾರಿಸಿಕೊಳ್ಳಲು ಮರದಡಿಯೋ ನದಿಯ ಸಮೀಪವೋ ಕೊಂಚ ಕಾಲದ ವಿರಾಮ ಪಡೆಯುತ್ತಿದ್ದರು. ನಂತರದ ಸಮಯವನ್ನು ಕಿರಿಯ ಕಲಾವಿದರು ತಮ್ಮ ಕಲಾಭ್ಯಾಸಕ್ಕಾಗಿ ಬಳಸಿಕೊಳ್ಳುತ್ತಿದ್ದರು. ನದಿಯ ಬದಿಯಲ್ಲೋ ಅಥವಾ ಕೆರೆಯ ಸಮೀಪವೋ ವಿಶ್ರಾಂತಿಗೆ ಕೊಂಚ ನಿಲ್ಲುವಾಗ ತಮ್ಮ ಉಡುಪುಗಳನ್ನು ಒಗೆದು ಅದು ಒಣಗುವಷ್ಟು ಹೊತ್ತು ಕಾಯುತ್ತ ಕುಳಿತಿರಬೇಕಿತ್ತು. ಈ ಕಾಯುವ ಕಾಲವನ್ನು ಅಭ್ಯಾಸಕ್ಕೆ ಬಳಸುತ್ತಿದ್ದರು. ಹಿರಿಯ ಕಲಾವಿದರು ಕಿರಿಯರಿಗೆ ನಾಟ್ಯಾಭ್ಯಾಸವನ್ನೋ, ಹಿಮ್ಮೇಳ ಕಲಾವಿದರು, ಭಾಗವತರು ಪ್ರಸಂಗ ಪದ್ಯವನ್ನೋ, ಚೆಂಡೆ-ಮದ್ದಳೆ ನುಡಿತದ ಅಭ್ಯಾಸವನ್ನೋ ಮಾಡಿಸುತ್ತಿದ್ದರು.  ಸರಾಸರಿ ಹತ್ತರಿಂದ ಹದಿನೈದು ಮೈಲಿಗಳ ನಡಿಗೆಗಳಿಂದ ನಲುಗುತ್ತಿತ್ತು ಕಲಾವಿದರ ಜೀವಗಳು.

ಚೌಕಿಯಲ್ಲಿ ಅಜ್ಜ ಬಲಿಪ ನಾರಾಯಣ ಭಾಗವತರು ಸರಿಯಾಗಿ ಸಂಜೆ ಐದು ಘಂಟೆಗೆ ಬಂದು ಕುಳಿತುಕೊಳ್ಳುತ್ತಿದ್ದರೆಂದು ಕಿರಿಯ ಬಲಿಪರು ನೆನಪಿಸುತ್ತಾರೆ. ಹಾಗೆ ಬಂದ ಭಾಗವತರಲ್ಲಿ ವೇಷಧಾರಿಗಳು ಒಬ್ಬೊಬ್ಬರಾಗಿ ಬಂದು ತಮ್ಮ ಭಾಗದ ಪದ್ಯಗಳ ಮಾಹಿತಿ ಕೇಳುತ್ತಿದ್ದರಂತೆ. ಬಲಿಪರು ಪದ್ಯವನ್ನು ಹೇಳುತ್ತಿದ್ದರು ಮತ್ತು ‘ಇದಕ್ಕೇನು ಅರ್ಥ ಹೇಳುತ್ತಿಯೇ’ ಎಂದು ಕೇಳುತ್ತಿದ್ದರು. ವೇಷಧಾರಿಯು ತನಗೆ ಗೊತ್ತಿದ್ದ ಅರ್ಥವನ್ನು ಹೇಳಬೇಕಾಗಿತ್ತು. ಹಾಗೆ ಅರ್ಥ ಒಪ್ಪಿಸಿದಮೇಲೆ ಅದಕ್ಕೆ ತಿದ್ದುಪಡಿಯನ್ನು ಭಾಗವತರೇ ಮಾಡುತ್ತಿದ್ದುದು. ಹೀಗೆ ವೇಷಧಾರಿಯ ಪಾತ್ರದ ಅರ್ಥ ರಂಗ ನಡೆ ಇವೆಲ್ಲವನ್ನೂ ವಿವರಿಸಿ ತಿಳಿಹೇಳುತ್ತಿದ್ದರು. ಆಯಾ ಕಲಾವಿದರಿಗೆ ಸಂದ ಪಾತ್ರ ನಿರ್ವಹಣೆಯ ಭಾಗದ ಪದ್ಯ, ಎದುರು ವೇಷಧಾರಿಯ ಅರ್ಥ ಹೀಗೆ ಇಡೀ ಪ್ರಸಂಗದ ಪದ್ಯಗಳು ಗೊತ್ತಿದ್ದುದರಿಂದ ವೇಷಧಾರಿಗಳಿಗೆ ಸುಲಭವಾಗಿ ತಿಳಿವಳಿಕೆ ದೊರಕುತ್ತಿತ್ತು. ಅಜ್ಜ ಬಲಿಪರು ಚೆನ್ನಾಗಿ ಚೆಂಡೆ ಮದ್ದಳೆಯನ್ನೂ ನುಡಿಸುವವರಾಗಿದ್ದರಿಂದ ಇದರ ಕುರಿತಾಗಿಯೂ ವಿವರಿಸುತ್ತಿದ್ದರು. ನುಡಿಸುವಿಕೆಯ ಕ್ರಮಗಳನ್ನೂ ಹೇಳಿಕೊಡುತ್ತಿದ್ದರು.

ಚೌಕಿಯ ಕ್ರಮ

ಹೆಣೆದ ತೆಂಗಿನ ಗರಿ, ತಟ್ಟಿ ಇವುಗಳಿಂದ ಮೂರು ಬದಿಯಲ್ಲಿ ಚೌಕಿಗೆ ಅಡ್ಡ ಕಟ್ಟುತ್ತಿದ್ದರು. ದೇವರ ಪೆಟ್ಟಿಗೆಯ ಬಲ ಭಾಗದಲ್ಲಿ ಭಾಗವತರಿಗೆ ಸ್ಥಾನ. ಎಡ ಭಾಗದಲ್ಲಿ ವೇಷಧಾರಿಗಳ ಚೀಲ, ವಸ್ತ್ರಗಳಿಗೆ ಪೆಟ್ಟಿಗೆ ಇರುತ್ತಿದ್ದವು. ಅಲ್ಲೇ ಅವುಗಳನ್ನು ಇಡಬೇಕಿತ್ತು ಎಂಬ ರಿವಾಜು ಇತ್ತು .

ಚೌಕಿಯ ಊಟಕ್ಕೆ ಕುಚ್ಚಿಲಕ್ಕಿಯೇ ಬಳಸುತ್ತಿದ್ದರು. ಬೆಳ್ತಿಗೆ ಬಳಸುವುದು ಕೇವಲ ಅಮಾವಾಸ್ಯೆಯಂದು ಮಾತ್ರ. ಯಾಕೆಂದರೆ ಅಂದು ಚೌಕಿಯಲ್ಲಿ ದೇವರಿಗೆ ಅಮಾವಾಸ್ಯೆ ಪೂಜೆ ಇರುತ್ತಿತ್ತು. ಹಾಗಾಗಿ ಅಂದು ಕುಚ್ಚಿಲಕ್ಕಿ ಮಾಡುತ್ತಿರಲಿಲ್ಲವಂತೆ. ದೇವರ ಪೂಜೆಗೆ ಅಂದು ಪಾಯಸವನ್ನು ಮಾಡುತ್ತಿದ್ದುದುಂಟು.  ಕಲಾವಿದರು, ಆಟ ಆಡಿಸುವವರು ಮತ್ತು ನೋಡುವವರು ಇವರೆಲ್ಲರಿಗೂ ಯಾವ ಕಾಲದೋಷದ ದುಷ್ಪರಿಣಾಮ ಬಾರದಿರಲಿ ಎಂಬ ಸದ್ಭಾವದಿಂದ ಚೌಕಿಯ ದೇವರಿಗೆ ಮಾಡುವ ಪೂಜೆ. ‘ಅಮವಾಸ್ಯೆ ಪೂಜೆ’ ಇದು ಪ್ರಾಯಶಃ ಸದ್ಯ ಕಟೀಲು ಮೇಳದಲ್ಲಿ ಮಾತ್ರ ಈ ಪೂಜೆಯನ್ನು ಕಾಣಬಹುದು.

ಕಲಾವಿದರಿಗೆ ಅಂದು ಬೆಳಗ್ಗೆ ತಾಳಮದ್ದಳೆ ಹಾಕುವ ಸಂದರ್ಭದಲ್ಲಿ ಆಟವಾಡಿಸುವವರು ಕೊಟ್ಟ ಕುಂಬಳಕಾಯಿ, ಸೌತೆಕಾಯಿ, ಹಲಸಿನಕಾಯಿ, ಬಾಳೆಕಾಯಿ ಇತ್ಯಾದಿಗಳಿಂದ ಸಾಂಭಾರ್/ಹುಳಿ ತಯಾರಿಸುತ್ತಿದ್ದರು. ಅಂದಿನ ಕಾಲದಲ್ಲಿ ಮಜ್ಜಿಗೆ ಇರುತ್ತಿರಲಿಲ್ಲ. ಬೇಕಿದ್ದರೆ ಹೊರಗಿನಿಂದ ಕಲಾವಿದರೇ ಅವರ ಖರ್ಚಲ್ಲೇ ಇದನ್ನು ಹೊಂದಿಸಬೇಕಾಗುತ್ತಿತ್ತು.  ಹಿರಿಯ ಬಲಿಪ ನಾರಾಯಣ ಭಾಗವತರು ಹೆಚ್ಚಾಗಿ ಹಾಲನ್ನು ಉಪಯೋಗಿಸುತ್ತಿದ್ದು ಅವರ ಜತೆಗೆ ಕೂಡ್ಲು ಮೇಳದಲ್ಲಿದ್ದ ಕುದುರೆಕೋಡ್ಲು ರಾಮ ಭಟ್ಟರೂ ಹಾಲನ್ನೇ ಮಜ್ಜಿಗೆಯ ಬದಲಾಗಿ ಉಪಯೋಗಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಅದೊಂದು ದಿನ ಬಲಿಪರಿಗೆ ಕಳಸದಲ್ಲಿ ಆಟವಿತ್ತು. ಪ್ರಾಯಶಃ ಕಟೀಲು ಮೇಳದ್ದೇ ಇರಬೇಕೆಂದು ಅವರ ನೆನಪು. ಆಗ ರಂಗಸ್ಥಳ ಇತ್ಯಾದಿ ವೇಷಭೂಷಣ ಮತ್ತು ಕಲಾವಿದರನ್ನು ಕರೆದೊಯ್ಯಲು ಲಾರಿಯ ಬಳಕೆ ಬಂದಾಗಿತ್ತು. ಆಟ ಮುಗಿಸಿ ಹೊರಡುವ ಕ್ಷಣದಲ್ಲಿ ಯಾವುದೋ ತಾಂತ್ರಿಕ ತೊಂದರೆಯಿಂದ ಲಾರಿ ಹಾಳಾಯ್ತು. ಸರಿಪಡಿಸಲು ಸದ್ಯದ ಮಟ್ಟಿಗೆ ಅನನುಕೂಲವಾಗಿತ್ತು.

ಬಲಿಪರು ಹತ್ತೊಂಬತ್ತು ಮೈಲುದೂರದಲ್ಲಿದ್ದ ಅಂದಿನ ಕ್ಯಾಂಪ್‌ನ ಸ್ಥಳವಾದ ಕೊಟ್ಟಿಗೆಹಾರಕ್ಕೆ ನಡೆಯಲು ಸಂಕಲ್ಪಿಸಿಯೇ ಬಿಟ್ಟರು. ಕೈಯ್ಯಲ್ಲೊಂದು ಕಬ್ಬಿನ ಜಿಲ್ಲೆ ಹಿಡಿದುಕೊಂಡು ಜಗಿದುಕೊಂಡು ನಡೆದೇ ಬಿಟ್ಟರು. ಕಬ್ಬಿನ ಜಿಲ್ಲೆ ಹಲ್ಲಿನ ಸ್ವಚ್ಛತೆಗೂ, ಆರೋಗ್ಯವರ್ಧನೆಗೂ, ಪೌಷ್ಟಿಕಾಂಶವಾಗಿಯೂ ಬಳಕೆಯಾಗಿ ದೇಹಕ್ಕೆ ಅನೇಕ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಬಲಿಪರ ಅಂಬೋಣ. ಮುಂಜಾನೆ ಹೊರಟ ನಡಿಗೆ ನಿಂತದ್ದು ಕೊಟ್ಟಿಗೆಹಾರದಲ್ಲೇ; ತಲುಪುವಾಗ ಮಧ್ಯಾಹ್ನ ಕಳೆದಿತ್ತು. ಅಲ್ಲೇ ಒಬ್ಬರ ಫಲಾಹಾರ ಮಂದಿರದಲ್ಲಿ (ಹೋಟೆಲ್) ಬಿಸಿನೀರು ಪಡೆದು ಮುಖತೊಳೆದುಕೊಂಡು ದಣಿವಾರಿಸಿಕೊಂಡರು. ಇದೆಲ್ಲ ಅಂದಿನ ಚಿತ್ರಗಳು. ಇಂದು ಊಹಿಸಲೂ ಕಷ್ಟಪಡುವ ವಿಚಾರ.

ಹೀಗೆ ಒಂದು ಆಟದ ಸ್ಥಳದಿಂದ ಮತ್ತೊಂದು ಆಟದ ಸ್ಥಳದವರೆಗಿನ ನಡಿಗೆಯ ಚಿತ್ರವನ್ನು ಕಟ್ಟಿಕೊಡುತ್ತಾ: ಒಂದು ಬಡಿಗೆಯಲ್ಲಿ ಪಾತ್ರೆಯನ್ನು ಕಟ್ಟಿ ಅದಕ್ಕೆ ನೀರನ್ನು ತುಂಬಿ ಹಿಂದಿನ ದಿವಸ ಆಟ ಆಡಿಸುವವರು ಕೊಟ್ಟ, ಬಳಸಿ ಮಿಕ್ಕಿದ್ದ ಬೆಲ್ಲವನ್ನು ಹಿಡಿದುಕೊಂಡು ಎಲ್ಲಾ ಕಲಾವಿದರು, ಚೌಕಿ, ರಂಗಸ್ಥಳದ ಕೆಲಸಗಾರರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು.

ತಾಳಮದ್ದಳೆ ಹಾಕುವ ಕ್ರಮ

ತಾಳಮದ್ದಳೆ ಹಾಕುವ ಕ್ರಮವೆಂದರೆ ಈಗಿನ “ಲುಪ್ತನಾಟ್ಯ”ವೆಂದು ಕರೆಯಲ್ಪಡುವ ಜನಪ್ರಿಯ ಪ್ರಕಾರವೆಂದಲ್ಲ; ಯಕ್ಷಗಾನ ಪ್ರಸಂಗವನ್ನು ಕೇವಲ ಪಾತ್ರಗಳ ಮೂಲಕ ವೇಷರಹಿತವಾಗಿ ಅರ್ಥಹೇಳುವ ಮೂಲಕ ಅಭಿನಯಿಸುವುದಲ್ಲ. ಈಗಿನ “ತಾಳಮದ್ದಳೆ” ಎಂಬುದಕ್ಕೂ “ತಾಳಮದ್ದಳೆ ಹಾಕುವ” ಕ್ರಮಕ್ಕೂ ವ್ಯತ್ಯಾಸ ಇದೆ.

ಆಟ ಆಗುವಲ್ಲಿಗೆ ಮೇಳ ಹೋಗಿ ಆಟ ಆಡಿಸಲು ವೀಳ್ಯ ಕೊಡುವವರ ಮನೆಯಲ್ಲಿ “ತಾಳಮದ್ದಳೆ” ಹಾಕುವ ಕ್ರಮ ಹಿಂದೆ ಇತ್ತು.  ಆಟ ಆಡಿಸುವವರ ಮನೆಯಲ್ಲಿ ದೀಪ ಸ್ಥಾಪನೆ ಮಾಡಿ ಭಾಗವತರು ಮತ್ತು ಮದ್ದಳೆಗಾರರು ಕುಳಿತು ಭಾಗವತರು ಒಂದೆರಡು ದೇವರ ಸ್ತುತಿಯನ್ನು ಹಾಡುತ್ತಿದ್ದರು. ಇದರಲ್ಲೊಂದು ಸಂಕೇತವಿದೆ. ತಾಳಮದ್ದಳೆ ಹಾಕುವುದರಿಂದ ಅಂದಿನ ಆಟ ಆಡಿಸಬೇಕೆಂದು ಸೇವಾಕರ್ತರಲ್ಲಿ ಭಿನ್ನೈಸುವುದು. ಭಾಗವತರ ಸಾಮರ್ಥ್ಯ ಮತ್ತು ನೈಪುಣ್ಯ ನೋಡಿ ಆ  ಮನೆಯವರು ವೀಳ್ಯವನ್ನು ಕೊಡುತ್ತಿದ್ದರು. ಮತ್ತು ಯಾವ ಆಟ ಆಡಿಸುವುದು ಎಂಬ ನಿರ್ಣಯವನ್ನೂ ಮಾಡುತ್ತಿದ್ದರು. ಪ್ರಧಾನ ಭಾಗವತನೇ “ತಾಳಮದ್ದಳೆ” ಹಾಕಬೇಕೆಂಬುದು ಆಟ ಆಡಿಸುವವರ ಅಪೇಕ್ಷೆಯೂ ಇತ್ತು. ಪ್ರಧಾನ ಭಾಗವತ ಬರದೇಹೋದ ಪಕ್ಷದಲ್ಲಿ ವೀಳ್ಯದಲ್ಲಿ ಅದರ ಪರಿಣಾಮ ಕಾಣುತ್ತಿತ್ತು.

ಆ ಮನೆಯಲ್ಲಿ ತಾಳಮದ್ದಳೆ ಹಾಕಿಯಾದಮೇಲೆ ಮನೆಯವರು ಕೊಡುವ ಅಕ್ಕಿ, ತರಕಾರಿ, ವೀಳ್ಯದೆಲೆ ಮತ್ತು ಸಣ್ಣ ದಕ್ಷಿಣೆ (ನಾಲ್ಕಾಣೆ)ಯನ್ನು ಪಡೆದುಕೊಂಡು ಬರುವುದು ಕ್ರಮವಿದ್ದಿತು. “ತಾಳಮದ್ದಳೆ ಹಾಕುವುದು” ಊರಿನ ಇತರ ಗಣ್ಯರ ಮನೆಯಲ್ಲೂ ನಡೆಯುತ್ತಿತ್ತು. ಮೊದಲು “ತಾಳಮದ್ದಳೆ” ಹಾಕಿದ ಮನೆಯಲ್ಲಿ ಸೂಚಿಸಿದ ಇತರ ಮನೆಯಲ್ಲಿ ತಾಳಮದ್ದಳೆ ಹಾಕಲು ಹೋಗುತ್ತಿದ್ದರು. ಹೀಗೆ ಹೋಗಿ ತಾಳಮದ್ದಳೆ ಹಾಕಿದ ಮನೆಯಿಂದ ಪಡೆದ ಅಕ್ಕಿ, ತರಕಾರಿ ಇತರ ಅಡುಗೆಯ ವಸ್ತುಗಳಿಂದ ಬಿಡಾರದಲ್ಲಿ ಕಲಾವಿದರಿಗೆ ಊಟದ ವ್ಯವಸ್ಥೆ ನಡೆಯಬೇಕಿತ್ತು.

ಊರಲ್ಲಿ ಒಂದೆರಡು ಮನೆಯಲ್ಲಿ ಹೀಗೆ “ತಾಳಮದ್ದಳೆ ಹಾಕುವ” ಕ್ರಮ ನಡೆಯುತ್ತಿತ್ತು. ಒಂದು ಮನೆಯಿಂದ ಮತ್ತೊಂದು ಮನೆಗೆ “ತಾಳಮದ್ದಳೆ” ಹಾಕಲು ಒಂದೆರಡು ಮೈಲಿ ನಡೆದೇ ಹೋಗುತ್ತಿದ್ದುದುಂಟು. ಹೋಗಿ ಅಲ್ಲಿ ಕೊಟ್ಟ ಹಲಸಿನ ಕಾಯಿ, ಬಾಳೆಕಾಯಿ ಇತ್ಯಾದಿ ಸಿಕ್ಕಿದ್ದನ್ನು ತರಬೇಕು. ತಂದು ಮತ್ತೆ ಕಲಾವಿದರ ಹೊಟ್ಟೆ ಪೊರೆಯಬೇಕು.

ಕಿರಿಯ ಬಲಿಪ ನಾರಾಯಣ ಭಾಗವತರೆನ್ನುವಂತೆ “ತಾಳಮದ್ದಳೆ ಹಾಕುವ” ಕ್ರಮ ಪ್ರಾಯಶಃ ಆರಂಭವಾದದ್ದು ಕಲಾವಿದರ ಮಧ್ಯಾಹ್ನದ ಹೊಟ್ಟೆಪಾಡಿಗಾಗಿ ಇರಲೂಬಹುದು. ಕಲಾವಿದರ ಹಸಿವನ್ನು ತಣಿಸಲು ಊರಿನ ಗಣ್ಯರ ಮನೆಯಲ್ಲಿ “ತಾಳಮದ್ದಳೆ” ಹಾಕಿ ಬಂದ ಪಡಿಯಕ್ಕಿ. ತೆಂಗಿನಕಾಯಿ ಇವನ್ನು ಪಡೆದು, ಮೇಳದ ಅಡುಗೆಯವರು ಕಲಾವಿದರಿಗೆ ಆಹಾರ ತಯಾರಿಸುತ್ತಿದ್ದರು. ಜತೆಗೆ, ತಾಳಮದ್ದಳೆ ಹಾಕುವ ಸಂದರ್ಭ ಸಿಕ್ಕ ದಕ್ಷಿಣೆಯಲ್ಲಿ ಅಡುಗೆಯ ಇತರ ಸಾಮಾಗ್ರಿಗಳನ್ನು ಹೊಂದಿಸಬೇಕಿತ್ತು. ಬೆಳಗಿನ ಉಪಹಾರವೇನು ನಿಶ್ಚಿತವಾಗಿ ಇರುತ್ತಿರಲಿಲ್ಲ. ಎಲ್ಲಿಯಾದರೂ ಹೋಟೇಲುಗಳು ಸಿಕ್ಕರೆ “ತಾಳಮದ್ದಳೆ” ಹಾಕುವ ಕಾರ್ಯಕ್ರಮ ಮುಗಿದೊಡನೆ ಹೋಟೇಲಿಗೆ ಹೋಗಿ ಬೆಳಗಿನ ಉಪಹಾರ ತೀರಿಸಿ ಮತ್ತೆ ಬಿಡಾರಕ್ಕೆ ಬರುತ್ತಿದ್ದುದು. ಅಜ್ಜ ಬಲಿಪರು ಹೋಟೆಲಿಗೆ ಹೋಗುತ್ತಿರಲಿಲ್ಲ. ಅವರು ಕಬ್ಬನ್ನೇ ತಿಂದು ಉಪಹಾರ ತೀರಿಸಿಕೊಳ್ಳುತ್ತಿದ್ದರು. ಬೆಳಗಿನ ಸ್ನಾನ, ಸಂಧ್ಯಾವಂದನೆಗಳನ್ನು ಮಾಡಿದ ಬಳಿಕವೇ ಉಪಾಹಾರ ಸೇವಿಸುವ ವಾಡಿಕೆ ಇದ್ದುದರಿಂದ, ಇವನ್ನೆಲ್ಲ ಹೊಂದಿಸಲು ಸೌಕರ್ಯಗಳನ್ನು ಹುಡುಕಿಕೊಳ್ಳಬೇಕಿತ್ತು.

ಇಂದು “ತಾಳಂದ್ದಳೆ” ಹಾಕುವ ಕ್ರಮ ಲುಪ್ತವಾಗಿದೆ. ಆದರೆ ಅಪವಾದವೆನ್ನುವಂತೆ ಕಟೀಲು ಮೇಳದಲ್ಲಿ ಮೇಳ ಹೊರಡುವ ಮೊದಲು ದೇವರ ಎದುರು ಪ್ರಧಾನ ಭಾಗವತ ಮತ್ತು ಪ್ರಧಾನ ಮದ್ದಳೆಗಾರ “ತಾಳಮದ್ದಳೆ ಹಾಕುವ” ಸಂಪ್ರದಾಯವನ್ನು ನೆರವೇರಿಸುತ್ತಾರೆ. ಇದಾದ ಮೇಲೆ ಮೇಳ ಹೋದಕಡೆಯಲ್ಲೆಲ್ಲಾ ಈ ಕ್ರಮ ಇರುವುದಿಲ್ಲ.