ಮೊನ್ನೆ ಮೊನ್ನೆ ಮೈಸೂರಿಗೆ ಹೋಗಿ ಬಂದೆ. ತುಂಬಾ ದಿನದಿಂದ ಬೆಂಗಳೂರು ಬಿಟ್ಟು ಹೊರಗೆ ಹೋಗದೇ ಜೀವ ಚಡಪಡಿಸುವ ಹಾಗೆ ಆಗಿತ್ತು. ಮತ್ತದೇ ಬೇಸರ, ಅದೇ ಸಂಜೆ..ಅದೇ ಏಕಾಂತ … ತಲೆ ಕೆಟ್ಟುಹೋಗಿತ್ತು ನನಗೆ. ಮೂರು ದಿನ ಮೈಸೂರಿಗೆ ಹೋಗಿ ಒಂದಿಷ್ಟು ತಿರುಗಾಡುವ ಅವಕಾಶ ಸಿಕ್ಕಾಗ ಜೀವ ಸಂಭ್ರಮಿಸಿತು.

ನನಗೆ ಒಬ್ಬಳೇ ಅಲೆದಾಡುವ ಆಸೆ … ಮೌನದಲ್ಲಿ, ಏಕಾಂತದಲ್ಲಿ! ಜೊತೆಗೆ ಯಾರೆಂದರೆ ಯಾರೂ ಇರಬಾರದು. ಅದು ನನ್ನ ಕನಸಿನ ಪ್ರವಾಸ. ಮಣಿರತ್ನಂನ ‘ಗೀತಾಂಜಲಿ’ ಸಿನೆಮಾದಲ್ಲಿ ನಾಗಾರ್ಜುನ ಓಡಾಡ್ತಾ ಇರ್ತಾನಲ್ಲ .. ಒಬ್ಬನೇ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ, ಹೇಗೆಂದರೆ ಹಾಗೆ .. ಆ ಥರ ಬದುಕಬೇಕು ಆಗಾಗ ಅನ್ನೋದು ನನ್ನ ಇಂದಿಗೂ ತೀರದ ಆಸೆ. ನನಗೆ ಇಷ್ಟ ಬಂದ ಕಡೆ ಮರದಡಿಯಲ್ಲಿ ಮಲಗಿ ಕೈಲೊಂದು ಪುಸ್ತಕ ಹಿಡಿದು ಓದುತ್ತಾ ಮಧ್ಯೆ ಮಧ್ಯೆ ಆ ಗಾಢ ಮೌನವನ್ನ ಉಸಿರ ಹಾಗೆ ಎಳೆದುಕೊಳ್ಳುತ್ತಾ ಅಲ್ಲಿನ ಮೌನಕ್ಕೆ ನನ್ನದಿಷ್ಟು ಮೌನವನ್ನ ಜೊತೆಯಾಗಿಸಿ ಹರಟಲು ಬಿಟ್ಟು … ಸಾಕು ಸಾಕ ನನ್ನ ಕನಸುಗಳ ವರ್ಣನೆ .. ಅದಕ್ಕೆ ನೂರೆಂಟು ಕೊಕ್ಕೆಗಳು, ಅಡೆತಡೆಗಳು ಇರೋದ್ರಿಂದ ಇರೋದ್ರಲ್ಲೇ ಸುಖ ಕಾಣುವಾ ಅಂತ ಹೀಗೆ ಹೊರಟಿದ್ದಾಯ್ತು.

ಬಸ್‌ನ ಭರ್ತಿ ಜನರಿದ್ದರಿಂದ ಮೌನವಂತೆಲ್ಲ ಕನಸು ಕಾಣೋದು ಬಿಟ್ಟು ಆ ಗದ್ದಲದಲ್ಲಿ ಮುಳುಗಿದೆ. ಹೋಗುತ್ತ ಹೋಗುತ್ತಲೇ ಮೊದಲಿಗೆ ಕೊಕ್ಕರೆ ಬೆಳ್ಳೂರು ನೋಡಿ ಹೋಗುವ ಸಲಹೆ ಎದುರಾಯ್ತು. ಪಾಪ ತಮ್ಮ ಪಾಡಿಗೆ ತಾವಿದ್ದ ಕೊಕ್ಕರೆಗಳಿಗೆ ಮತ್ತಿಷ್ಟು ಅನಪೇಕ್ಷಿತ ಅತಿಥಿಗಳು ಭೇಟಿ ನೀಡಲು ಹೊರಟೆವು. ಆ ಸ್ಥಳವನ್ನು ಸುಂದರ ಪ್ರವಾಸ ತಾಣವಾಗಿ ಮಾಡಲು ಅದೇನೇನೋ ಯೋಜನೆಗಳಿವೆಯಂತೆ .. ಅವು ಯಾವುವೂ ಸಧ್ಯಕ್ಕೆ ಕೈಗೂಡುವಂತವಲ್ಲ ಅಂತ ಅಲ್ಲಿ ಹೋದ ಮೇಲೆ ಅನ್ನಿಸಿತು. ಅಲ್ಲೊಂದು ತಂತಿಯ ಬೇಲಿ. ಅದರೊಳಗೆ ಮೈಮುರಿಯುತ್ತಾ ಕೂತ ಒಂದಿಷ್ಟು ಕೊಕ್ಕರೆಗಳು ಮತ್ತೆ ನನಗೆ ಹೆಸರು ಗೊತ್ತಿಲ್ಲದ ಕೆಲವು ಪಕ್ಷಿಗಳು ಸುಮ್ಮನೆ ಸೋಮಾರಿತನದಿಂದ ಕೂತಿದ್ದವು. ನನಗೆ ಪುಟ್ಟ ಮಕ್ಕಳನ್ನ ‘ಡೇ ಕೇರ್ ಸೆಂಟರ್‌’ ನಲ್ಲಿ ಬಿಟ್ಟಿರ್ತಾರಲ್ಲ ಆ ದೃಶ್ಯ ನೆನಪಾಯಿತು. ಮಕ್ಕಳು ಪಾಪದವುಗಳಂತೆ ಕೂತಿರುತ್ತವಲ್ಲ ಹಾಗನ್ನಿಸಿ ಬಿಟ್ಟಿತು. ಆ ಬೇಲಿ ಯಾಕೆ ಯಾಕಿದ್ದರು ಅಂತ ನನಗೆ ತಿಳಿಯಲಿಲ್ಲ. ಪಕ್ಕದಲ್ಲೊಂದು ಸಣ್ಣ ಮಂಟಪ. ಅಲ್ಲಿಷ್ಟು ಜನ ಕೂಡಾ ಪಕ್ಷಿಗಳಂತೆಯೇ ಸೋಮಾರಿತನದಿಂದ ಅದೇನೋ ಮಾಡುತ್ತಲೋ, ಆಡುತ್ತಲೋ ಕೂತಿದ್ದರು. ಮತ್ತೊಂದು ಗಮನಿಸಿದ ವಿಷಯವೆಂದರೆ ಅದೆಷ್ಟೊಂದು ಮಕ್ಕಳು ಅಲ್ಲಿ! ನಮ್ಮ ಸುತ್ತ ಮುತ್ತೆಲ್ಲ ಬರೀ ಪಿಳ್ಳೆಗಳು. ಒಬ್ಬ ಹುಡುಗ ಹತ್ತಿರ ಬಂದು ಮೆಲ್ಲಗೆ ಶುರು ಮಾಡಿದ ‘ಅದನ್ನ ಪೆಲಿಕನ್ ಅಂತವ್ರೆ ಆಂಟಿ…’ ಅಂದ. ನಾನು ನಸು ನಕ್ಕೆ ಅವನನ್ನ ನೋಡಿ. ‘ಆ ಕಡೆ ಇದ್ಯಲ್ಲಾ ಅದನ್ನ ..’ ಅಂತ ಮತ್ತೇನೋ ಹೆಸರು ಹೇಳಿದ. ‘ಇದಿಲ್ವಾ ಆಂಟಿ ೫ ಕೆ.ಜಿ ಮೀನನ್ನ ಒಂದೇ ಏಟಿಗೆ ತಿನ್ತದೆ. ಮೂರು ಲೀಟರ್ ನೀರನ್ನ ಗಟ ಗಟ ಅಂತ ಕುಡೀತದೆ …’ ಹೇಳುತ್ತಾ ಹೋದ. ನಾನೂ ಪಾಪ ಅಷ್ಟೆಲ್ಲ ಏನೋ ಹೇಳಿ ಕೊಳ್ತಿದೆಯಲ್ಲ ಅಂತ ‘ವೆರಿ ಗುಡ್ .. ಜಾಣ ಕಣೋ ನೀನು. ಎಲ್ಲ ತಿಳ್ಕೊಂಡಿದೀಯ’ ಅಂತ ಹುರಿದುಂಬಿಸಿದೆ. ಹೆಸರು ಕೇಳಿದೆ .. ‘ಸರತ್’ ಅಂದ! ‘ನಾನು ನಾಲ್ಕನೇ ಕ್ಲಾಸು ಆಂಟಿ. ಚೆಂದಾಗಿ ಓದ್ತೀನಿ. ಆದ್ರೆ ಬುಕ್ ತಗೊಳಕ್ಕೆ ಕಾಸೇ ಕೊಡಲ್ಲ ನಮ್ಮಪ್ಪ … ’ ಅಂದ. ಯಾಕೆ ಕೊಡಲ್ಲ ಅಂದರೆ ‘ಕಾಸಿಲ್ಲ ಅಂತಾನೆ ನಮ್ಮಪ್ಪ’ ಅಂದ. ಮುಖ ಸಪ್ಪಗಾಗಿತ್ತು. ನಾನು ಕರಗಿದೆ ಒಂದಿಷ್ಟು. ಫೋಟೋ ತೆಗೆಯಲು ಹೋದೆ .. ಕೂಡಲೇ ಮುಖ ಮುಚ್ಚಿ ಬಗ್ಗಿ ಕುಳಿತು ಬಿಟ್ಟ. ನನಗೆ ಒಂದೇ ಆಶ್ಚರ್ಯ. ಯಾಕೆ ಅಂತ ಕೇಳಿದರೆ ’ನಮ್ಮವ್ವ ಬಯ್ಯತ್ತೆ’ ಅಂದ. ‘ಫೋಟೋ ತೆಗೆಸಿಕೊಂಡರೆ ನಿಮ್ಮವ್ವ ಬಯ್ತಾರಾ’ ಅಂತ ನಗಲು ಶುರು ಮಾಡಿದೆ. ಆ ಹುಡುಗ ತಮಾಷೆ ಮಾಡ್ತಿದಾನೆ ಅಂದುಕೊಂಡು ಫೋಟೋ ತೆಗೆಯಲು ರೆಡಿಯಾದೆ. ಮುಖ ಸೀರಿಯಸ್ಸಾಗಿ ಮಾಡಿಕೊಂಡು ‘ಬ್ಯಾಡ ಆಂಟಿ .. ಅವ್ವ ಬಯ್ತಾಳೆ’ ಅಂತ ಹೇಳಿದ. ನನಗೆ ಅದಕ್ಕೂ ಮೀರಿ ಮುಂದುವರೆಯಲು ಆಗಲಿಲ್ಲ. ಫೋಟೋ ತೆಗೆಯುವ ಪ್ರಯತ್ನ ನಿಲ್ಲಿಸಿದೆ. ಅಲ್ಲೆಲ್ಲ ಸುತ್ತಾಡಿದೆ. ಅವನು ಹಿಂಬಾಲಿಸುತ್ತಲೇ ಇದ್ದ. ‘ಆಂಟಿ ಕಾಸು ಕೊಟ್ರೆ ಬುಕ್ ತಗೊಳ್ತೀನಿ … ಓದಕ್ಕೆ ತುಂಬ ಇಷ್ಟ ಆಂಟಿ .. ಪ್ಲೀಸ್ … ’ ಅನ್ನುತ್ತಾ. ‘ಚೆನ್ನಾಗಿ ಓದು ಮರಿ .. ದುಡ್ಡು ಹಾಳು ಮಾಡ್ಬೇಡಾ’ ಅನ್ನುತ್ತಾ ಸ್ವಲ್ಪ ಹಣ ಕೊಟ್ಟೆ. ಒಂದು ಬುಕ್ ಬಂದರೆ ಅಷ್ಟೇ ಬರಲಿ .. ಎರಡು ಬಂದರೆ ಅಷ್ಟೇ ಬರಲಿ ಅಂದುಕೊಂಡೆ. ಆ ನಂತರ ಸಿನಿಮಾದಲ್ಲಿ ದೇವರು ಅಂತರ್ಧಾನನಾದ ಹಾಗೆ ಮಾಯವಾದ. ‘ಆಂಟಿ ….’ ಮತ್ತೊಂದು ಧ್ವನಿ. ನೋಡಿದರೆ ಮತ್ತೊಂಡು ಪಿಳ್ಳೆ! ‘ಆಂಟಿ .. ಪೆನ್ನಿಲ್ಲ ಆಂಟಿ .. ಕಾಸು ಕೊಟ್ರೆ ಪೆನ್ನು ತಗೊಳ್ತೀನಿ’ ಅಂದ. ನಾನು ಕಣ್ಣು ಕಿರಿದಾಗಿಸಿ ‘ಅವನಿಗೆ ಕಷ್ಟ ಅಂದ ಕೊಟ್ಟೆ. ನೀನು ಸುಳ್ಳು ಹೇಳಿ ಮತ್ತೆ ಕಾಸು ಇಸ್ಕೊಳಕ್ಕೆ ನೋಡ್ತೀಯಲ್ಲ’ ಅಂತ ಗದರಿಸಿದೆ. ‘ಆಂಟಿ ನೀವು ಕೊಟ್ಟ ಕಾಸನ್ನ ತಗೊಂಡೋಗಿ ಅಲ್ಲಿ ಆಟ ಆಡ್ತವ್ನೆ ಅವ್ನು’ ಅಂತ ತೋರಿಸಿದ. ಅಲ್ಲಿ ಒಬ್ಬ ದೊಡ್ಡವನ ಜೊತೆ ದುಡ್ಡು ಕಟ್ಟಿ ಅದೆಂಥದ್ದೋ ಆಟ ಆಡ್ತಾಕೂತಿದ್ದ ಆ ಸರತ್! ಕೂಡಲೆ ಅವನನ್ನ ಕರೆದರೆ ಚೂರೂ ಅಳುಕಿಲ್ಲದೇ ಬಂದ. ‘ದುಡ್ಡು ಕಟ್ಟಿ ಜೂಜಾಡ್ತೀಯೇನೋ’ ಅಂದೆ. ಅವನು ಗಾಬರಿ ಬೀಳುತ್ತಾನೆ ಅಂತೆಲ್ಲ ಎಣಿಸಿದ್ದೆನಲ್ಲ ಎಲ್ಲ ಸುಳ್ಳಾಯ್ತು. ಅವನು ಕಣ್ಣು ಕೂಡ ಪಿಳುಕಿಸದೆ ‘ಅವ್ನು ಅವ್ನಲ್ಲ ಆಂಟಿ ಆಡಕ್ಕೆ ಕಾಸು ಬೇಕು ಅಂತ ಗದರಿಸಿ ಕಿತ್ಕೊಂಡ’ ಅಂದ! ಉಹೂ .. ಅಲ್ಲಿಗೆ ಇದು ಸಾಮಾನ್ಯ ಗಂಡಲ್ಲ ಅಂತ ಸುಮ್ಮನಾದೆ. ಅಷ್ಟರಲ್ಲಿ ಈ ಪೆನ್ನು ಕೇಳುತ್ತಿದ್ದ ಪಿಳ್ಳೆ ಇನ್ನಿಷ್ಟು aggressive ಆಗಿ ಕೇಳಲು ಶುರು ಮಾಡಿತು. ನಾನು ಪರ್ಸಿನಿಂದ ಪೆನ್ನು ತೆಗೆದು ‘ಇದನ್ನೇ ತಗೊಳ್ಳೋ .. ಬರೆಯಕ್ಕೆ ನೀನೇ ಇಟ್ಕೋ ..’ ಅಂದೆ. ಅವನು ಕೆಕ್ಕರಿಸಿ ನೋಡಿ ಅಂತರ್ಧಾನನಾದ!

ಶ್ರೀರಂಗಪಟ್ಟಣದಲ್ಲಿ ತಂಪಾದ ನೀರಲ್ಲಿಷ್ಟು ಕುಳಿತರೆ ಜೀವ ತಣ್ಣಗಾದೀತು ಅಂತ ಹೋದೆವು. ಅಲ್ಲಿ ಅದೆಷ್ಟು ಅಂಗಡಿಗಳು! ಇಡೀ ಸ್ಥಳವನ್ನೇ ಆಕ್ರಮಿಸಿದ್ದ ವ್ಯಾಪಾರಿಗಳು. ಅಲ್ಲಲ್ಲಿಯೇ ಒಲೆ ಹಚ್ಚಿ ಕೂತ ಕೆಲವು ಪ್ರವಾಸಿಗರು. ಅಲ್ಲಿದ್ದ ದೇವ ದೇವತೆಗಳಿಗೆ ಪೂಜಾರಿಯೊಬ್ಬರು ಪೂಜೆ ಮಾಡಿಸುತ್ತಿದ್ದರು. ಮೂರು ಕುಂಬಳ, ಅದರ ಮುಂದೆ ಮೂರು ತೆಂಗಿನಕಾಯಿ, ಅದರ ಮುಂದಿಟ್ಟ ನಿಂಬೆಹಣ್ಣುಗಳು, ಅಲ್ಲಿದ್ದ ವಿಗ್ರಹಗಳಿಗೆ ಪ್ರದಕ್ಷಿಣೆ ಸುತ್ತುತ್ತಿದ್ದ ಭಕ್ತರು, ಪಕ್ಕದಲ್ಲೇ ಇದ್ದ ನದಿ ನೀರನ್ನ ಪ್ಲಾಸ್ಟಿಕ್ ಬಾಟಲಿನಲ್ಲಿ ತಂದು ಪ್ರೋಕ್ಷಣೆ ಮಾಡುತ್ತಿದ್ದ ಪೂಜಾರಿ … ನಾನು ಇಲ್ಲಿ ಸಲ್ಲುವವಳಲ್ಲ ಅಂತ ಸಾರಿ ಹೇಳಿತು. ಗೋಸಾಯಿ ಘಾಟ್ ಅನ್ನೋ ಸ್ಥಳ ಮಾತ್ರ ಇದ್ದುದರಲ್ಲೆ ಸ್ವಲ್ಪ ಶುದ್ಧವಿತ್ತು. ತಂಪಾದ ನೀರಲ್ಲಿ ಉದ್ದಕ್ಕೆ ಕಾಲು ಚಾಚಿ ಕುಳಿತುಬಿಟ್ಟೆ ಒಂದಿಷ್ಟು ಹೊತ್ತು… ಮೌನದಲ್ಲಿ, ಶಾಂತಿಯಲ್ಲಿ. ಇಡೀ ಪ್ರವಾಸದಲ್ಲಿ ನೆನಪಲ್ಲಿ ಉಳಿದಿರೋ ಕ್ಷಣಗಳೆಂದರೆ ಅವು ಮಾತ್ರ.

ಮತ್ತೆ ಹೋಗಿದ್ದು ಗೋಪಾಲಸ್ವಾಮಿ ಬೆಟ್ಟಕ್ಕೆ. ಹೋದ ಸಲ ಹೋದಾಗ ಚುಮು ಚುಮು ಛಳಿಯಲ್ಲಿ ಬೆಟ್ಟ ಹತ್ತಿ ಹೋದ ನೆನಪು ಇನ್ನೂ ಹಸಿರಾಗಿತ್ತು ಮನಸಿನಲ್ಲಿ. ಅದೇ ಖುಷಿಯಲ್ಲಿ ಅಲ್ಲಿಗೆ ಹೋದೆ. ಒಂದು ಸಲ ದೇವರ ಭೇಟಿಯಾಗಿ ಪ್ರಾರ್ಥಿಸಿದ್ದು ಆಗಿತ್ತು. ಪದೆ ಪದೆ ಹೋದವರೇ ಹೋಗಿ, ಕೇಳಿದ್ದೇ ಕೇಳ್ತಿದ್ದರೆ ಗೋಪಾಲಸ್ವಾಮಿಗೆ ಬೇಜಾರಾಗಬಹುದು ಅಂತ ಎಣಿಸಿ ನಾನು ದೇವಸ್ಥಾನದ ಒಳಗೆ ಹೋಗದೇ ಬೆಟ್ಟದಲ್ಲಿ ಒಂದಿಷ್ಟು ಓಡಾಡುವ ನಿರ್ಧಾರಕ್ಕೆ ಬಂದೆ. ಅಲ್ಲಿ ಹಿಂದಿನ ಸಲ ಬಂದಿದ್ದಾಗ ಕಾಣದ ಬೋರ್ಡ್ ಇತ್ತು … ‘ಪ್ಲಾಸ್ಟಿಕ್ ನಿಷೇಧಿಸಿದೆ’ ಅಂತಿತ್ತು. ಸಧ್ಯ ಒಳ್ಳೆದಾಯ್ತು ಬಿಡು ಸ್ಥಳ ಕೊಳಕಾಗೋದಿಲ್ಲ ಅಂತ ಹಿಗ್ಗಿದೆ. ಮುಂದಕ್ಕೆ ೧೦ ಹೆಜ್ಜೆ ಇಟ್ಟಿದ್ದೆವೋ, ಇಲ್ಲವೋ ಯಾರೋ ಕಿರುಚುವ ಸದ್ದಾಯ್ತು. ನೋಡಿದರೆ ವೀರಪ್ಪನ್ ಥರ ಹುಲಿ ಪಟ್ಟೆಯ ಡಿಸೈನ್ ಇದ್ದ ಯೂನಿಫಾರ್ಮ್ ಧರಿಸಿದ್ದ ಅರಣ್ಯ ಇಲಾಖೆಯ ಕಾವಲುಗಾರ! ಯಾಕೆ ಬಿಡೋದಿಲ್ಲ ಅಂತ ವಿಚಾರಿಸಿದರೆ ಅದೀಗ ರಿಸರ್ವ್ ಫಾರೆಸ್ಟ್ ಆಗಿದೆಯೆಂತಲೂ ಹಾಗಾಗಿ ಆ ಒಂದಿಷ್ಟು ದೇವಸ್ಥಾನದ ಸುತ್ತ ಮುತ್ತಲಿನ ಜಾಗ ಬಿಟ್ಟರೆ ಬೇರೆ ಕಡೆ ಬಿಡೋದಿಲ್ಲ ಅಂತ ಹೇಳಿದ. ಮನಸ್ಸು ವಿಲಿ ವಿಲಿ ಒದ್ದಾಡಿತು. ಪ್ಲಾಸ್ಟಿಕ್, ಕೂಗಾಟ, ಮಾತು, ತಿನ್ನುವುದು ಏನೆಲ್ಲ ನಿಷೇಧಿಸಿದ್ದರೆ ಸರಿ … ಆದರೆ ಆ ಅದ್ಭುತ ನೋಟದಿಂದಲೇ ವಂಚಿತರನ್ನಾಗಿ ಮಾಡಿದರಲ್ಲ ಅಂತ ತುಂಬಾ ಬೇಸರವಾಗಿ ಹೋಯಿತು. ಆ ಕಾವಲುಗಾರನ ಜೊತೆ ಏನು ಮಾತಾಡಿದರೆ ಏನು ಪ್ರಯೋಜನ? ಪಾಪ ಅವನು ಏಣಿಯ ಕೊನೆಯ ಮೆಟ್ಟಿಲು .. ಅವನೇನು ಮಾಡಿಯಾನು? ಒಳ್ಳೆಯ ನೋಟದಿಂದ ಕೂಡಾ ನಾವು ವಂಚಿತರಾಗ್ತಾ ಹೋದರೆ ಕೊನೆಗೆ ಉಳಿಯುವುದಾದರೂ ಏನು? ಹಿಂದಿನ ಬಾರಿ ಬಂದಾಗ ಬೆಟ್ಟದ ದಾರಿ ಸೀದಾ ಸ್ವರ್ಗಕ್ಕೆ ಮೆಟ್ಟಿಲು ಅನ್ನೋ ಹಾಗೆ ಖುಷಿ ಪಟ್ಟಿದ್ದೆ. ಅಷ್ಟೇ … ಎಷ್ಟು ನಮ್ಮದೋ ಅಷ್ಟು ಮಾತ್ರ ದಕ್ಕುವುದು ಅನ್ನೋ ವೈರಾಗ್ಯ ಇಣುಕಿತು ಮನಸಿನಲ್ಲಿ. ಸರಿ ಬೆಟ್ಟ ನಡೆದು ಇಳಿಯೋಣ .. ಬಂದಿದ್ದಕ್ಕೆ ಅದೇ ಲಾಭ ಅಂದುಕೊಂಡು ನಡೆಯಲು ಶುರು ಮಾಡಿದರೆ ಆ ವೀರಪ್ಪನ್‌ಗೆ ಯಾಕೋ ಸುಮ್ಮಾನ ಬಂದಿತ್ತು ಅಂತ ಕಾಣುತ್ತದೆ. ಸ್ವಲ್ಪ ಅತಿರೇಕಕ್ಕೆ ಹೋಗಿ ‘ನಡ್ಕೊಂಡು ಹೋಗ್ತೀರಾ? ಯಾಕೆ? ಬಸ್‌ನಲ್ಲಿ ಹೋಗಿಬಿಡಿ’ ಅಂತ ವರಾತ ಹಚ್ಚಿದ. ಮೊದಲೇ ಸ್ವರ್ಗದಂಚಿಗೆ ಹೋಗಿ ಕೂಡಾ ಸ್ವರ್ಗದ ದರ್ಶನವಾಗದ್ದಕ್ಕೆ ದುಃಖವಿತ್ತು. ಯಾವಾಗ ನಡೆದು ಇಳಿಯಲೂ ತಕರಾರು ಶುರು ಮಾಡಿದನೋ ಎಲ್ಲ ಒಟ್ಟಿಗೆ ಅವನ ಮೇಲೆ ಹರಿಹಾಯ್ದೆವು. ನಂತರ ತೆಪ್ಪಗಾದ ಅವನು. ಒಂದಿಷ್ಟು ದೂರ ನಡೆದು ಬಂದಿದ್ದೆವು. ಅಲ್ಲಿನ ಬಂಡೆಯೊಂದು ಸುಮಾರು ಹತ್ತು ಅಡಿ ಮೇಲೆ ಇತ್ತು. ಅಲ್ಲಿ ಸ್ವಲ್ಪ ಹೊತ್ತು ಕೂತು ಹೋಗುವ ನಿರ್ಧಾರ ಮಾಡಿ ಹತ್ತಿದರೆ ಎರಡೇ ನಿಮಿಷಕ್ಕೆ ಅದೆಲ್ಲಿಂದಲೋ ಆ ವೀರಪ್ಪನ್ ಹಾಜರ್. ಅಲ್ಲಿ ಕೂಡಾ ಹತ್ತೋ ಹಾಗಿಲ್ಲ ಅಂತ ಇಳಿಸಿದ. ಅಲ್ಲಿಂದ ಮುಂದೆ ಹೆಜ್ಜೆ ಹೆಜ್ಜೆಗೂ ಬೆಂಬಿಡದ ಭೂತದ ಹಿಂಬಾಲಿಸಲು ಶುರು ಮಾಡಿದ. ಆ ರೀತಿ ಹಿಂಬಾಲಿಸುತ್ತಿರುವಾಗ ಏನು ನೋಡುವುದು? ಸೀದಾ ಬಸ್ ಹತ್ತಿ ವಾಪಸ್ ಹೊರಟೆವು.

ಮರುದಿನ ಬಲಮುರಿ ಫಾಲ್ಸ್ ಗೆ ಹೊರಟೆವು. ೧೫ ವರ್ಷದ ಕೆಳಗೆ ಬಂದಾಗ ಅಲ್ಲಿ ನೀರು ಮತ್ತು ನಮ್ಮನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಈಗ ಅಲ್ಲಿ ಕಾಲಿಟ್ಟ ಕೂಡಲೇ ಬೆಚ್ಚಿ ಬಿದ್ದೆ. ಅದೆಷ್ಟೊಂದು ಅಂಗಡಿಗಳು .. ಅದೆಷ್ಟು ಗಲೀಜು! ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಖಾರ ಹಾಕಿಟ್ಟ ಹುರಿದದ್ದೋ, ಕರಿದಿದ್ದೋ ಮೀನುಗಳು ಮತ್ತು ಅದಕ್ಕೆ ಮುತ್ತಿದ್ದ ನೊಣಗಳು ಕಣ್ಮನ ತಣಿಸಿದವು! ಗಾಳಿ ಹೋಗುತ್ತಿದ್ದ ಉತ್ಸಾಹದ ಬಲೂನಿಗೆ ಬಲವಂತವಾಗಿ ಪುಸ್ ಪುಸ್ ಎಂದು ಗಾಳಿ ತುಂಬುತ್ತಾ ಫಾಲ್ಸ್ ನ ಪಕ್ಕಕ್ಕೆ ಬಂದರೆ ಅಲ್ಲೇನಿತ್ತು?! ಮಧ್ಯದಲ್ಲೇನೋ ಕಾಂಕ್ರೀಟ್ ಗೋಡೆ. ಅದರ ಈಚೆ ಬದಿಯಿಷ್ಟು ಕಟ್ಟೆಯಲ್ಲಿ ನಿಂತಂತ ನೀರು .. ಆಚೆ ಬದಿ ಫಾಲ್ಸ್. ಈಚೆ ಬದಿ ಮನುಷ್ಯರೆಲ್ಲ ಪಾದ ಮುಳುಗುವಷ್ಟು ಆಳದ ನೀರಿನಲ್ಲಿ ನಿಂತಿದ್ದರು. ಈ ಪಕ್ಕಕ್ಕೆ ತಿರುಗಿದರೆ ಪ್ಲಾಸ್ಟಿಕ್ ಕವರ್, ಬಾಟಲ್‌ಗಳ ರಾಶಿ ರಾಶಿ. ಅಲ್ಲೇ ಬಟ್ಟೆ ಕೂಡಾ ಒಗೆಯುತ್ತ ಕೂತಿದ್ದರು ಕೆಲವು ಹೆಂಗಸರು. ಅಲ್ಲೊಂದು ತೆಪ್ಪ ಬರುತ್ತಿತ್ತು . ಅದನ್ನು ನೋಡಿ ಅದೆಷ್ಟು ನಕ್ಕೆ ನಾನು. ಪಾದ ಕೂಡಾ ಮುಳುಗದ ಅಥವಾ ಮಧ್ಯ ಭಾಗದಲ್ಲಿ ಇನ್ನಿಷ್ಟು ಆಳ ಇರಬಹುದೆಂದು ಭ್ರಮೆ ಇಟ್ಟುಕೊಂಡರೂ ಇನ್ನೆರಡು ಅಡಿ ಆಳವಿದ್ದೀತು .. ಆ ನೀರಿನಲ್ಲಿ ತೆಪ್ಪದಲ್ಲಿ ಸುತ್ತು ಹೋಗಿ ಬರುತ್ತಿದ್ದವರು .. ಜನ ಮರುಳೋ, ಜಾತ್ರೆ ಮರುಳೋ! ಮೆಟ್ಟಿಲ ಬಳಿ ಇಳಿದು ಪಾದ ಒದ್ದೆ ಮಾಡಿಕೊಂಡಾದರೂ ಹೋಗೋಣವೆಂದರೆ ಅಸಾಧ್ಯ ಪಾಚಿ, ಕಸ ಕಡ್ಡಿ, ಕೊಳಕು. ಅಲ್ಲಿಗೆ ಆ ಸ್ಥಳದ ವೀಕ್ಷಣೆಯೂ ಮುಗಿಯಿತು.

ಅಂದಹಾಗೆ ಮೈಸೂರಿನಲ್ಲಿ ಐಷಾರಾಮಿ ಕಾರಿನಂತಹ ಜಟಕಾ ಗಾಡಿಗಳು! ಅದನ್ನು ನೋಡಿ ನನಗೆ ನಗು ಬಂತು. ಇದರಲ್ಲಿ ಹೋಗೋ ಅನುಭವ ಕಾರಿನಲ್ಲಿ ಹೋಗೋ ಅನುಭವಕ್ಕಿಂತ ಭಿನ್ನವಾಗೇನೂ ಇರೋದಿಲ್ವೇನೋ ಅನ್ನಿಸಿತು. ಆ ಕೊಳಕು ಟಾಂಗಾದಲ್ಲಿ ಪಾಪ ಆ ಕುದುರೆ ನಮ್ಮ ಭಾರ ಹೊರಲಾಗದೆ ಒದ್ದಾಡುತ್ತಿದ್ದಾಗ ಜಟಕಾಗಾಡಿ ಸವಾರ ತೂಕವನ್ನು ಸರಿಸಮನಾಗಿಸಲು ಹಿಂದೆ ಮುಂದೆ ಕೂರಿಸುತ್ತಿದ್ದನಲ್ಲ ಆ ದಿನಗಳು ನೆನಪಾದವು .. ನಾನು ಈ ಥರದ ಜಟಕಾ ನೋಡಿದ್ದು ಇದೇ ಮೊದಲು. ಇದರಲ್ಲಿ ಯಾಕೋ ಸ್ವಾರಸ್ಯವೇ ಮೂಡಲಿಲ್ಲ ಯಾರಿಗೂ.