ಹೌದಲ್ಲವೇ; ಇಷ್ಟೆಲ್ಲ ಆಯುಧಗಳಿಂದ ದಂಡಿಸುತ್ತಿರುವ ನಾವು ಅಪರಾಧಿ ಎಂದೆನಿಸಿದವರ ತಪ್ಪೇನು ಎಂದು ಅರಿಯದೇ ಇಷ್ಟು ಕಾಲ ದಂಡಿಸುತ್ತಲೇ ಬಂದಿದ್ದೇವಲ್ಲಾ… ತಿಳಿಯದೆ ಮಾಡಿದ ಹಿಂಸೆಯೂ ಹಿಂಸೆಯೇ ಅಲ್ಲವೇ… ಎಷ್ಟೊಂದು ತಲೆ ಕಡಿದೆವು… ಅರೆ ಜೀವ ಮಾಡಿ ಜೀವಂತ ಶವ ಮಾಡಿದೆವು… ಈಗಲೂ ಬಲಿಗಂಬದಲ್ಲಿ ಬಲಿಹಾಕುವ ನಮ್ಮ ಉತ್ಸಾಹಕ್ಕೆ ದಣಿವೇ, ತಡೆಯೇ ಇಲ್ಲವಲ್ಲಾ…
ಮೊಗಳ್ಳಿ ಗಣೇಶ್‌ ಬರೆದ ಕಥೆ ‘ಅಹಾ! ಎಷ್ಟು ಸಹನೆʼ ಈ ಭಾನುವಾರದ ನಿಮ್ಮ ಓದಿಗೆ

 

ಅದೊಂದು ಹತ್ತಾರು ಕಾಲುದಾರಿಗಳ ಪ್ರಾಚೀನ ಕೂಡುದಾರಿ. ಅಲ್ಲೇ ಬಂದು ಬಲಿಗಂಬ ಇತ್ತು. ಅದಕ್ಕೆ ಯಾವತ್ತೂ ಬಿಡುವಿರಲಿಲ್ಲ. ಯಾರೊ ಯಾರನ್ನೊ ಪಂಚಾಯ್ತಿಯಲ್ಲಿ ತಪ್ಪಿತಸ್ಥರು ಎಂದು ತೀರ್ಮಾನಿಸಿ ಸಂಸಾರ ಸಮೇತ ಬಂಧಿಸಿ ತಂದು ಆ ಬಲಿಗಂಬಕ್ಕೆ ಬಲವಾಗಿ ಕಟ್ಟಿಹಾಕಿ ಬಿಡುತ್ತಿದ್ದರು. ಬಲಿಗಂಬದ ಮುಂದೆ ಬಲವಾದ ಬಾರುಗೋಲು, ಬಡಿಗೆ, ಕೆಲವೊಮ್ಮೆ ಚಾಕು ಬಾಕು ಕೊಡಲಿ ಕತ್ತಿ ಮಚ್ಚುಗಳನ್ನು ಹರಿತಗೊಳಿಸಿ ಇಟ್ಟಿರುತ್ತಿದ್ದರು. ಅವರವರ ಹರಕೆಯ ಶಕ್ತ್ಯಾನುಸಾರ ಆ ಆಯುಧಗಳನ್ನು ಭಕ್ತರು ಬಳಸಬಹುದಾಗಿತ್ತು. ಎಲ್ಲಿಂದ ಅಂತಹ ಪಂಚಾಯ್ತಿಯ ದಂಡನೆ ಆರಂಭವಾಗಿ ಕಾಲ ಕಾಲದಲ್ಲಿ ಏನೆಂದು ಬದಲಾವಣೆಗಳ ಮಾಡಿಕೊಂಡಿತ್ತೊ ಗೊತ್ತಿಲ್ಲ. ಪದ್ಧತಿ ಮತ್ತೆ ಮತ್ತೆ ಕ್ರೂರವಾಗಿ ವಿಸ್ತಾರವಾಗಿ ಊರೂರುಗಳಲ್ಲೆಲ್ಲ ಹಬ್ಬಿತ್ತು.

ಆ ಪ್ರಾಚೀನ ಕೂಡು ದಾರಿಯ ಸಂಗಮ ಸ್ಥಳ ಆ ಕಾಲದಲ್ಲಿ ಒಂದು ಮನರಂಜನೆಯ ಕ್ರೀಡಾಂಗಣವಾಗಿ ಪರಿವರ್ತನೆ ಆಗಿತ್ತು. ಅಲ್ಲಿ ಮತ್ತಷ್ಟು ಬಲಿಗಂಬಗಳನ್ನು ನಿರ್ಮಾಣ ಮಾಡಿ ತರಾವರಿ ದಂಡಾಧಿಕಾರಿಗಳನ್ನು ನೇಮಿಸಲಾಗಿತ್ತು. ಅಪರಾಧಿ ಎಂದು ಯಾರನ್ನು ಬಲಿಗಂಬಕ್ಕೆ ಕಟ್ಟಲಾಗುತ್ತಿತ್ತೋ; ಅವರಿಗೆ ಯಾರು ಬೇಕಾದರೂ ದೇವರ ಹೆಸರಲ್ಲಿ ತಮಗೆ ಇಷ್ಟವಾದ ಆಯುಧ ಬಳಸಿ ಹೊಡೆದು ಪೂಜೆ ತೀರಿಸಿಕೊಂಡು ಹೋಗಬಹುದಿತ್ತು. ಕೆಲವರು ಮಚ್ಚು ಬೀಸಿ ನೆತ್ತರಲ್ಲಿ ಮುಳುಗಿಸಿ ಕತ್ತು ಕಡಿಯುತ್ತಿದ್ದರು ಕುರಿ ಮೇಕೆಗಳ ಬಲಿಕೊಟ್ಟಂತೆ. ಮತ್ತೆ ಕೆಲವರು ಬರ್ಜಿಯಲ್ಲಿ ತಿವಿದು ನರಳಿಸಿ ಹೋಗುತ್ತಿದ್ದರು. ಸಣ್ಣ ಪುಟ್ಟ ಹರಕೆಯವರು ಪೊರಕೆ, ಹರಿದ ಚಪ್ಪಲಿಗಳಲ್ಲಿ ಬಡಿದು ಅವರ ತಲೆ ಮೇಲೆ ಹೂ ಎಸೆದು ಪಾಪಿಗಳಿಗೆ ಬುದ್ಧಿ ಹೇಳಿದೆ ಎಂದು ಹೊರಟು ಹೋಗುತ್ತಿದ್ದರು. ಒಟ್ಟಿನಲ್ಲಿ ತರಾವರಿ ವಿಚಿತ್ರ ಶಿಕ್ಷೆ. ಕೆಲವರೊ ಬಾಯಿ ತುಂಬ ಎಲೆ ಅಡಿಕೆ ತಿಂದು ಎಂಜಲು ಉಗಿದು ಉಗಿದು ರಕ್ತ ಸಿಕ್ತ ದೇಹದಂತೆ ಮಾಡಿ ವಿಪರೀತ ಹೇಸಿಗೆಯ ಮಾತಲ್ಲಿ ಬೈಯ್ದು ಸಾಯಿರಿ ಎಂದು ಹೊರಟುಬಿಡುತ್ತಿದ್ದರು. ಅಲ್ಲಿ ದಂಡಾಧಿಕಾರಿಗಳು ಯಾವತ್ತೂ ಎಚ್ಚರವಾಗಿದ್ದರು. ಅವರಿಗೆ ಯಾವ ಬಿಕ್ಕಟ್ಟುಗಳೂ ಇರಲಿಲ್ಲ. ಪ್ರಾಚೀನ ಬರ್ಬರ ನಡತೆಗೆ ಲಂಗು ಲಗಾಮಿರಲಿಲ್ಲ.

ಹೊಡೆಯಲು ಮುಕ್ತ ಅವಕಾಶವಿತ್ತು. ಅದೊಂದು ದಂಡಿಸುವ ಹರಕೆಯಾಗಿತ್ತು. ಹೆಂಗಸರು ಕೆನ್ನೆಗೆ ಮೆಲ್ಲಗೆ ತಟ್ಟಿ ತಲೆ ಮೇಲೆ ಹೂ ಎಸೆದು ಕೈ ಮುಗಿದು ಹೊರಟು ಹೋಗುತ್ತಿದ್ದರು. ಆ ಬಲಿಗಂಬದ ಆಚರಣೆ ಮುಗಿಸಿ ಮುಂದೆ ಹೋದರೆ ಅಲ್ಲೇ ದೇವಾಲಯವಿತ್ತು. ಭಕ್ತರು ದೇಗುಲಕ್ಕೂ ಹೋಗಿ ಅಹಿಂಸೆಯ ಪೂಜೆಯನ್ನೂ ಮಾಡಿ ಧರ್ಮ ಕಾರ್ಯ ಎಸಗಿದೆವು ಎಂದು ಬಂಡಿ ಏರಿ ಅವರವರ ಊರು ದಾರಿಯತ್ತ ನಡೆದುಬಿಡುತ್ತಿದ್ದರು.

ಯಾರಿಗೂ ಯಾವ ಪಾಪಪ್ರಜ್ಞೆಯೂ ಇಲ್ಲ, ತಪ್ಪು ಒಪ್ಪಿನ ಆಯ್ಕೆಯೇ ಇಲ್ಲ. ಜಡ ಎಂದರೆ ಜಡವೇ? ಸದಾ ಚಾಲ್ತಿಯಲ್ಲಿರುವ ಮಾನದಂಡ, ಯಾವತ್ತೂ ಸಾಗಿಬಂದಿರುವ ಹಿಂಸೆಯ ಸಾವಿರಾರು ಶಿಕ್ಷೆಯ ಕ್ರಮಗಳು… ಆ ದಾರಿಯಲ್ಲಿ ಒಂದು ದಿನ ಆಕಸ್ಮಿಕವಾಗಿ ಒಬ್ಬ ಧ್ಯಾನಿಯೊ ಯೋಗಿಯೊ ಸನ್ಯಾಸಿಯೊ ದೇವರೊ ಎಂದೆನಿಸಿಕೊಳ್ಳುವ ಒಬ್ಬ ಬಂದ. ಅವತ್ತಲ್ಲಿ ವಿಶೇಷ ಹರಕೆಗಳು ನಡೆದಿದ್ದವು. ಸಾಲು ಸಾಲು ಭಕ್ತರು ತರಾವರಿ ಆಯುಧಗಳ ಹಿಡಿದು ದಂಡಿಸಿ ಹರಕೆ ತೀರಿಸಿಕೊಳ್ಳಲು ನೂಕು ನುಗ್ಗಾಟದಲ್ಲಿದ್ದರು. ಸನ್ಯಾಸಿ ತಡೆದ. ಬಲಿಗಂಬದ ಮೇಲೆ ಆ ಅಮಾಯಕರ ಜೊತೆ ನಿಂತು; ಶಾಂತಿ ಶಾಂತಿ ಶಾಂತಿ ಎಂದ.

ಓಹೋ ಯಾರೋ ದೇವದೂತ ಬಂದ. ನಮ್ಮ ಶರಣ ಬಂದ. ನಮ್ಮನ್ನು ಕಾಯುವ ದೈವ ಬಂತೆಂದು ಜನಜಾತ್ರೆ ತಟಕ್ಕನೆ ಕೈ ಮುಗಿದು ಕುಂತು ನಿಂತು ಪಂಚೇಂದ್ರಿಯಗಳನ್ನು ಕೊಡಿವಿಕೊಂಡಿತು. ಮೃತಕಾಲದ ರೂಢಿಗತ ಮನಸ್ಸಿಗೆ ಆ ಸನ್ಯಾಸಿ ಏನು ಕೇಳುತ್ತಿದ್ದಾನೆ ಎಂಬುದು ಮುಟ್ಟಲು ಬಹಳ ತಡವಾಯಿತು. ಶವಸ್ಥ ಮನಸ್ಥಿತಿಯಲ್ಲೇ ಬದುಕಿ ಬಂದಿದ್ದ ಆ ದಂಡನೆಯ ಸಮಾಜಗಳಿಗೆ ಇರಿಸು ಮುರುಸಾಯಿತು. ಅವರವರ ಗತ ಮನಸ್ಸು ಅಲ್ಲೇ ನಿಂತುಬಿಟ್ಟಿತ್ತು. ಕೆಲವು ಯಜಮಾನರು ಸಮರ್ಥಿಸಿಕೊಳ್ಳಲು ಬಂದರು. ಧೀಮಂತ ಸನ್ಯಾಸಿ ಹೊಡೆಯುತ್ತಿದ್ದವರ ತಡೆದು ಕೇಳಿದ…

‘ಇವರಿಗೆ ಯಾಕೆ ಈ ಪರಿಯಲ್ಲಿ ಹೊಡೆದು ಬಡಿದು ಹಿಂಸಿಸುತ್ತಿದ್ದೀರಿ?’

‘ಹೊಡೆಯಿರಿ ಎಂದು ಹಿರಿಯರು ಹೇಳಿದ್ದರು; ಹಾಗಾಗಿ ಹೊಡೆಯುತ್ತಿದ್ದೇವೆ’

‘ಯಾವ ಕಾರಣಕ್ಕಾಗಿ ದಂಡಿಸಲು ಸೂಚಿಸಿದ್ದರು’

‘ಮರೆತು ಹೋಗಿದೆ ಸ್ವಾಮೀ; ಯೋಚಿಸಿ ಹೇಳುವೆ…’

ಅಲ್ಲಿದ್ದ ದಂಡಾಧಿಕಾರಿ ಭಕ್ತರ ಪರವಾಗಿ ಒಬ್ಬ ಪಾಳೆಯಗಾರ ಈ ಸನ್ಯಾಸಿಗೆ ತಾನು ತಕ್ಕ ಉತ್ತರ ಕೊಡುವೆ ಎಂದು ಸನ್ಯಾಸಿಯನ್ನು ತೀಕ್ಷ್ಣವಾಗಿ ದಿಟ್ಟಿಸಿ; ಸಿಟ್ಟಿನಿಂದ ‘ನೀನು ಯಾವೂರ ಸನ್ಯಾಸಿ’ ಎಂದ.

‘ನಾನು ಈ ಲೋಕದ ಸುಖ ದುಃಖ, ಹಿಂಸೆ ಅಹಿಂಸೆ, ನ್ಯಾಯ ಅನ್ಯಾಯಗಳನ್ನು ಧ್ಯಾನಿಸುವ ಒಬ್ಬ ಸಾಮಾನ್ಯ ಸನ್ಯಾಸಿ ಮನುಷ್ಯ’

‘ಹಾಗಾದರೆ ಮುಂದೆ ಹೋಗೂ… ಊರೂರುಗಳು ಭಿಕ್ಷೆ ನೀಡುತ್ತವೆ. ನಾವು ಧರ್ಮ ಪರಿಪಾಲನೆ ಮಾಡುತ್ತಿದ್ದೇವೆ’

‘ಹಿಂಸೆ ಧರ್ಮವೇ? ಅಪಮಾನ ಮಾಡಬೇಡಿ. ಇವರ ತಪ್ಪೇನು ಹೇಳಿ? ಯಾಕೆ ಈ ನರಕ ಹಿಂಸೆ?’

‘ಹೇ ಹೋಗಯ್ಯಾ… ತಲೆ ತಿನ್ನಬೇಡ’

‘ನೀವೇ ಮನುಷ್ಯತ್ವವನ್ನು ಹೀನವಾಗಿ ಬರ್ಬರವಾಗಿ ಕಿತ್ತು ತಿನ್ನುತ್ತಿರುವುದು. ನಾನೊಬ್ಬ ದೇವರ ದಾಸನೂ ಹೌದು; ನೊಂದು ನಲುಗಿದವರ ಸೇವಕನೂ ಹೌದು. ಆ ಬಲಿಗಂಬಕ್ಕೆ ಬಿಗಿಸಿಕೊಂಡು ನಿಂತಿರುವ ಆ ಬಡಪಾಯಿ ಜನರ ಗಾಯಕ್ಕೆ ಮದ್ದರೆಯುವುದೂ ನಾನೇ… ಶಿಕ್ಷಿಸುವುದಕ್ಕೆ ನಿಮಗೆ ಕಾರಣವೇ ಗೊತ್ತಿಲ್ಲ ಎಂದರೆ; ಅವರ ಅಪರಾಧಗಳು ಏನು ಎಂಬುದೂ ಗೊತ್ತಿರುವುದಿಲ್ಲ. ಶಿಕ್ಷೆಯ ತೀರ್ಪು ಕೊಟ್ಟವರು ಯಾರೆಂಬುದೂ ನಿಮಗೆ ಗೊತ್ತಿಲ್ಲ. ಪೂರ್ವಿಕರು ಮಾಡುತ್ತ ಬಂದದ್ದನ್ನೇ ಆಚರಿಸಿಕೊಂಡು ಬಂದಿದ್ದೇವೆ ಎಂದು ಸಂಪ್ರದಾಯವ ಹೇಳಿದರೆ; ಅಮಾಯಕ ಜೀವಿಗಳು ಸತತವಾಗಿ ನಿಮ್ಮ ಮುಗ್ಧ ಮೂರ್ಖ ಹಿಂಸೆಯಿಂದ ಸಾಯುತ್ತಿವೆಯಲ್ಲಾ… ನಿಮ್ಮಿಂದಾಗಿ ಎಷ್ಟೊಂದು ಸಮಾಜಗಳಿಗೆ ಮಾನವತ್ವದ ನಷ್ಟವಾಗಿದೆಯಲ್ಲಾ… ಅದನ್ನು ಹೇಗೆ ಸರಿಪಡಿಸುವುದು… ಆ ತಪ್ಪಿಗಾಗಿ ಈಗ ಯಾರ್ಯಾರನ್ನು ನೇಣಿಗೇರಿಸಬೇಕೂ… ನೀವೇ ಹೇಳಿ? ಇವರೇನು ತಪ್ಪು ಮಾಡಿದ್ದಾರೆ? ಯಾಕೆ ಇಷ್ಟೊಂದು ಮಾನವ ದ್ವೇಷ ಹಿಂಸೆ ಅಸಮಾನತೆ? ಎಲ್ಲ ಧರ್ಮ ಸಂಸ್ಕೃತಿ ಯಜಮಾನಿಕೆ ಬಹಳ ನಶ್ವರ ಭೂಮಿಯ ಮೇಲೆ… ಮನುಷ್ಯ ಕ್ಷಣಿಕ… ಮೂರು ದಿನದ ಸಂತೆ; ಇವೆಲ್ಲ ನಿಮಗೆ ಗೊತ್ತಿದ್ದರೂ ಇವರಿಗೆ ಯಾಕೆ ಹೊಡೆಯುತ್ತಲೇ ಬಂದಿದ್ದೀರೀ…’

ಆ ತನಕ ಯಾರೂ ಕೇಳಿರಲಿಲ್ಲ. ಅಮಾಯಕರ ತಪ್ಪೇನು ಎಂಬುದೇ ತಿಳಿಯದೆ ಬಡಿವ ಹರಕೆಯವರಿಗೂ ಖಚಿತವಾಗಿ ಯಾವ ಕಾರಣದಿಂದ ಹಿಂಸಿಸುತ್ತಿದ್ದೇವೆ ಎಂಬುದೂ ಗೊತ್ತಿರಲಿಲ್ಲ. ಬಲಿಗಂಬದವರಿಗೂ ತಾವೇಕೆ ಇಷ್ಟೊಂದು ಮಾರಣಾಂತಿಕ ಶಿಕ್ಷೆಗೆ ಯಾವತ್ತೂ ಒಳಗಾಗುತ್ತಿದ್ದೇವೆ ಎಂಬ ಎಚ್ಚರವೂ ಇರಲಿಲ್ಲ. ಶಿಕ್ಷೆಯಲ್ಲಿ ನಲುಗಿ ನರಳಿ ಅವರು ಅಹಿಂಸೆಯ ಶಿಖರವಾಗಿದ್ದರು. ಅಷ್ಟೆಲ್ಲ ನರಕದಲ್ಲೂ ಬಲಿಗಂಬದಲ್ಲೇ ನಾಳೆಯನ್ನು ಕಾಯುತ್ತಿದ್ದರು. ಆ ದಿವ್ಯ ಸನ್ಯಾಸಿ ಬಂದು ತಮ್ಮ ಪರವಾಗಿ ಏನು ಹೇಳಿದ್ದಾನೆಂಬುದರ ಕಡೆಗೆ ಬಿಡದಂತೆ ನೋವುಗಳು ಮುತ್ತಿಕೊಂಡು ಅವರು ಅರೆಜೀವವಾಗಿದ್ದರು.

ಹೆಂಗಸರು ಕೆನ್ನೆಗೆ ಮೆಲ್ಲಗೆ ತಟ್ಟಿ ತಲೆ ಮೇಲೆ ಹೂ ಎಸೆದು ಕೈ ಮುಗಿದು ಹೊರಟು ಹೋಗುತ್ತಿದ್ದರು. ಆ ಬಲಿಗಂಬದ ಆಚರಣೆ ಮುಗಿಸಿ ಮುಂದೆ ಹೋದರೆ ಅಲ್ಲೇ ದೇವಾಲಯವಿತ್ತು. ಭಕ್ತರು ದೇಗುಲಕ್ಕೂ ಹೋಗಿ ಅಹಿಂಸೆಯ ಪೂಜೆಯನ್ನೂ ಮಾಡಿ ಧರ್ಮ ಕಾರ್ಯ ಎಸಗಿದೆವು ಎಂದು ಬಂಡಿ ಏರಿ ಅವರವರ ಊರು ದಾರಿಯತ್ತ ನಡೆದುಬಿಡುತ್ತಿದ್ದರು.

ಅತ್ತ ಜಾತ್ರೆಯ ಗದ್ದಲ ತಗ್ಗಿ ಇದೇನಿದು ಸನ್ಯಾಸಿಯ ಮುಂದೆ ಪಾಳೆಯಗಾರರ ಹಲ್ಲೆ ಎಂದು ಜನ ಜಮಾಯಿಸಿದರು. ಒಂದು ಕಾಲಕ್ಕೆ ಅವರೆಲ್ಲ ದಂಡಿಸುವ ಹರಕೆ ತೀರಿಸಿದ್ದವರೇ… ಆದರೆ ಸನ್ಯಾಸಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ. ಸಾತ್ವಿಕ ಪ್ರತಿಭಟನೆಯ ಆ ಏಕಾಂಗಿ ಸನ್ಯಾಸಿಯ ಮಾನವೀಯ ಪ್ರತಿಭಟನೆ ಜನಜಾತ್ರೆಯಲ್ಲಿ ಏನೋ ಮೋಡಿ ಮಾಡಿತ್ತು.

ಹೌದಲ್ಲವೇ; ಇಷ್ಟೆಲ್ಲ ಆಯುಧಗಳಿಂದ ದಂಡಿಸುತ್ತಿರುವ ನಾವು ಅಪರಾಧಿ ಎಂದೆನಿಸಿದವರ ತಪ್ಪೇನು ಎಂದು ಅರಿಯದೇ ಇಷ್ಟು ಕಾಲ ದಂಡಿಸುತ್ತಲೇ ಬಂದಿದ್ದೇವಲ್ಲಾ… ತಿಳಿಯದೆ ಮಾಡಿದ ಹಿಂಸೆಯೂ ಹಿಂಸೆಯೇ ಅಲ್ಲವೇ… ಎಷ್ಟೊಂದು ತಲೆ ಕಡಿದೆವು… ಅರೆ ಜೀವ ಮಾಡಿ ಜೀವಂತ ಶವ ಮಾಡಿದೆವು… ಈಗಲೂ ಬಲಿಗಂಬದಲ್ಲಿ ಬಲಿಹಾಕುವ ನಮ್ಮ ಉತ್ಸಾಹಕ್ಕೆ ದಣಿವೇ, ತಡೆಯೇ ಇಲ್ಲವಲ್ಲಾ… ನಮ್ಮೊಳಗಿನ ಪಾತಕರನ್ನೂ ಬಿಡುಗಡೆಗೊಳಿಸಿ, ನಮ್ಮನ್ನೂ ಮುಕ್ತರನ್ನಾಗಿಸಿ; ಆ ಬಲಿಪಶು ಬಲಿಗಂಬದವರನ್ನೂ ಬಿಡಿಸಲು ಬಂದ ಈ ಸನ್ಯಾಸಿ ನಮಗೆ ಬೇಕೂ… ಎಂದು ಪಾಳೆಯಗಾರನ ಬಂಟರೇ ಸನ್ಯಾಸಿಗೆ ಜಯಘೋಷ ಹಾಕುವ ಉತ್ಸಾಹದಲ್ಲಿದ್ದರು. ಭಕ್ತಗಣ ಅತ್ತ ವಿಚಾರ ಮಾಡುತ್ತಲೇ ಗೊಂದಲದಲ್ಲಿತ್ತು. ಅಂತಲ್ಲಿ ಸಮಚಿತ್ತತೆ ಸಾಧ್ಯವಿರಲಿಲ್ಲ. ಕಾಲಚಕ್ರ ಹೇಗೆ ಹರಿದು ಬರುತ್ತದೊ…

ಜನಜಾತ್ರೆ ತಾವಿನ್ನು ಈ ಹಿಂಸೆಯ ನರಕದ ಹರಕೆಯ ಬಿಟ್ಟುಬಿಡುತ್ತೇವೆ ಎಂದು ಸನ್ಯಾಸಿಯ ಮಾತಿಗೆ ಕೈ ಮುಗಿಯುತ್ತಿದ್ದರು. ಅಂತಹ ಉನ್ನತ ಸಾಕ್ಷಾತ್ಕಾರದ ಸನ್ಯಾಸಿ ಮನುಷ್ಯ ಅವನಾಗಿದ್ದ. ಈ ಕೂಡಲೆ ಬಲಿಗಂಬದವರ ಕಟ್ಟು ಕಳಚಿ ವಿಮೋಚನೆ ಮಾಡಿ ಎಂದ ಸನ್ಯಾಸಿ.

ಪಾಳೆಯಗಾರನ ಬಂಟರು ಸನ್ಯಾಸಿಯ ಮಾತಿಗೆ ತಲೆದೂಗುತ್ತಿದ್ದರು. ವ್ಯಗ್ರವಾಗಿ ಇವನ ಅತ್ತ ಎಳೆದೊಯ್ದು ಮುಗಿಸಿ ಎಂದು ಪಾಳೆಯಗಾರ ಆದೇಶಿಸಿದ. ಬಂಟರು ಸನ್ಯಾಸಿಯನ್ನು ಮುಟ್ಟಲು ಹೆದರಿ ಹಿಂದೆ ಸರಿದು ತಮ್ಮಿಂದಾಗದು ಎಂದರು. ಈ ಕೃಶ ದೇಹದ ದರಿದ್ರ ಸನ್ಯಾಸಿಯ ಕೊರಳ ಮುರಿಯಲು ಭಯವೇ ಎಂದು ಪಾಳೆಯಗಾರ ನುಗ್ಗಿ ಕತ್ತು ಹಿಡಿದು ಎಳದಾಡಿ ಬೀಳಿಸಲು ಮುಂದಾದ. ಕೊಲ್ಲುವ ಭಯದಲ್ಲಿ ಪಾಳೆಯಗಾರನ ಕೈ ಕಾಲು ದೇಹವೆಲ್ಲ ನಡುಗುತ್ತಿತ್ತು. ಕೊಂದುಬಿಡುವೆಯಾ; ಅಷ್ಟು ಸಲೀಸೇ ಜೀವವು ಎಂದು ಸನ್ಯಾಸಿ ದಿವ್ಯವಾಗಿ ಗೋಣು ಬಗ್ಗಿಸಿ ಬಲವಾಗಿ ನಿಂತಿದ್ದ. ಭಕ್ತರು ವಿಚಿತ್ರ ಸಂದಿಗ್ಧತೆಯಲ್ಲಿದ್ದರು. ಕೆಲವರು ಅಸಹಾಯಕತೆಯಲ್ಲಿ ನೋಡುತ್ತಿದ್ದರೆ ಹಲವರು ಬೇಗ ಒಂದು ತೀರ್ಮಾನಕ್ಕೆ ಜನಜಾತ್ರೆ ಬರಬೇಕು ಎಂದು ಉದ್ವಿಗ್ನವಾಗುತ್ತಿತ್ತು. ತರಾವರಿ ಮಾತುಗಳು ಪ್ರತಿಧ್ವನಿಸಿದವು.

‘ಏನು ಮಾಡೋಣ ಹೇಳಿ, ಏನಾದರೊಂದು ದಾರಿ ಕಾಣಬೇಕು’

‘ನಮಗೆ ಸನ್ಯಾಸಿ ಬೇಕೊ, ಪಾಳೆಯಗಾರ ಬೇಕೊ…’

‘ಇಲ್ಲಾ; ಯಾರಾದರೂ ಒಬ್ಬ ಯೋಗ್ಯರು ಬೇಕೊ’

‘ಸನ್ಯಾಸಿಯೇ ಬೇಕೂ; ಅವನ ಮಾತು ಪರಿವರ್ತಿಸಿತು’

‘ಹಾಗಾದರೆ ಆ ಬಲಿಗಂಬದವರೂ ಬೇಕೆಂದಾಯಿತಲ್ಲವೇ’

‘ಹೊಡೆದು ಬಂದ ನಾವೂ ಪಾಪಿಗಳೇ; ದಂಡನೆಗೆ ನರಳಿ ಜೊತೆಗೇ ಬಂದವರೂ ನಮ್ಮವರೇ… ಸನ್ಯಾಸಿಯ ಮಾತು ನಮಗೀಗ ಮುಖ್ಯ’

‘ನಮ್ಮನ್ನು ಹದ್ದು ಬಸ್ತಿನಲ್ಲಿಟ್ಟು ಆಳಲು ಒಬ್ಬ ಪಾಳೆಯಗಾರನೇ ಬೇಡವೇ… ಇಷ್ಟು ಕಾಲ ಅವನ ನೆರಳಲ್ಲೇ ಇದ್ದೆವಲ್ಲಾ… ಮಾರ್ಗ ತೋರುವ ಒಬ್ಬ ನಾಯಕ ಬೇಡವೇ’

‘ಬೇಕಿಲ್ಲಾ; ನಮ್ಮನ್ನು ಆಳುವವರಿಂದಲೇ ನಾವೆಲ್ಲ ತಪ್ಪುದಾರಿಗೆ ಬಂದೆವು’

‘ಹಾಗಾದರೆ ನಮಗೆ ಯಾರು ದಾರಿ…’

‘ನಮಗೆ ನಾವೇ ದಾರಿ. ನಮ್ಮ ಪಾಡು ನಮ್ಮದು ಅವರ ದುಃಖ ಅವರದು. ನಮ್ಮ ಕಷ್ಟ ನಷ್ಟ ನಮ್ಮದು. ನಾವೇ ನಮ್ಮ ಹೊರೆಯ ಹೊತ್ತು ಸಾಗಬೇಕೂ’

ಮುಗಿಯದ ಮಾತುಗಳು ಹೀಗೇ ಸಾಗುತ್ತಿದ್ದವು.

ಸರಿಯಾದ ಒಂದು ಸಮಷ್ಠ ನಿರ್ಣಯಕ್ಕೆ ಬರಲಾಗದೆ ಜನ ವಾದ ವಿವಾದಗಳಲ್ಲಿ ಮುಳುಗಿದ್ದವು. ಕ್ಷಣ ಕ್ಷಣಕ್ಕೂ ಗದ್ದಲ ಏರಿಳಿಯುತ್ತಿತ್ತು. ಅಹಾ! ಎಂತಹ ನಾಟಕ… ಆ ಜನದಟ್ಟಣೆಯ ಕೂಡು ದಾರಿಯ ಬಲಿಗಂಬದ ಸರ್ಕಲ್ಲಿನಲ್ಲಿ ಹೇಗೊ ಮೂರು ಗುಂಪುಗಳಾದವು. ಸನ್ಯಾಸಿಯ ಪ್ರವೇಶ ಪರಿಣಾಮ ಮಾಡಿತ್ತು. ಪಾಳೆಯಗಾರ ವ್ಯಗ್ರನಾಗುತ್ತಿದ್ದ. ಈಗವನ ಆದೇಶಗಳಿಗೆ ಆ ಜನ ಕಿವಿಗೊಡದೆ ಅವರವರರದೇ ಧರ್ಮ ಕರ್ಮ, ಪಾಪ ಪುಣ್ಯ, ಸ್ವರ್ಗ ನರಕ, ಹಿಂಸೆ ಅಹಿಂಸೆಯ ಬಾರೀ ಬಾರಿ ವಿಚಾರಗಳಲ್ಲಿ ತಲೆ ಕೆಡಿಸಿಕೊಂಡು ವಿಮೋಚನೆಯ ಕೀಲಿಗಳ ಕಳೆದುಕೊಂಡು ತಲೆ ಚಚ್ಚಿಕೊಳ್ಳುವಂತೆ ಬಿಗಡಾಯಿಸಿದ್ದರು.

ಪಾಳೆಯಗಾರನ ಪರವಾಗಿ ಒಂದು ಬಣ ತೊಡೆ ತಟ್ಟಿ ನಿಂತಿತ್ತು. ದುಃಖಕ್ಕೆ ಮಿಡಿವ ಬಡವರು ಸನ್ಯಾಸಿಯ ಪರವಾಗಿ ಇನ್ನೊಂದು ಬಣವಾಗಿದ್ದರು. ಆಗೋದೆಲ್ಲ ಆಗಲಿ; ನೋಡೋದಷ್ಟೇ ನಮ್ಮ ಜಾಣತನ ಎಂದು ದೊಡ್ಡ ಪ್ರಮಾಣದ ಪ್ರೇಕ್ಷಕ ಸಮಾಜ ಸುರಕ್ಷಿತ ವೇಷಗಳಲ್ಲಿ ಮತ್ತೊಂದು ವರ್ಗವಾಗಿತ್ತು. ಬಲಿಗಂಬಕ್ಕೆ ಇವರು ಅರ್ಹರು ಎಂದು ನಿರ್ಧರಿಸಿದ್ದ “ಹೀನ” ಜಾತಿಯ ಯಾವೊಬ್ಬರೂ ಅಲ್ಲಿ ಇರಲಿಲ್ಲಾ. ಅಲ್ಲಿ ಅಂತವರಿಗೆ ಪ್ರವೇಶವಿರಲಿಲ್ಲ. ನುಗ್ಗಿ ಹೋಗಿ ತಡೆದು ನಮ್ಮವರ ದಂಡಿಸಬೇಡಿ ಎಂಬ ಧೈರ್ಯವೇ ಸ್ವಾತಂತ್ರ್ಯವೇ ಆ ಅನಾಥರಿಗೆ ಇರಲಿಲ್ಲ. ಯಾವೊಂದು ತೀರ್ಮಾನಕ್ಕೂ ಬರುತ್ತಿರಲಿಲ್ಲ. ಸನ್ಯಾಸಿ ದಣಿದು ಮಂಡಿಯೂರಿ ಪ್ರಾರ್ಥನೆಗೆ ಕೂತ. ಬಲಿಗಂಬದ ಮುಂದೆಯೇ ಇದ್ದ. ಗತಕಾಲದ ರಕ್ತಸಿಕ್ತ ಬಿಗಿದ ಹಗ್ಗಗಳು ಕೊಳೆತು ನೆಪಮಾತ್ರಕ್ಕೆ ಬಿಗಿದಂತಿದ್ದವು. ಬಲಿಗಂಬದಲ್ಲಿದ್ದ ಆ ಪುಟ್ಟ ಮಕ್ಕಳು ಪಾಳೆಯಗಾರನನ್ನೇ ನೋಡುತ್ತಿದ್ದವು.

ಇದೇ ತಕ್ಕ ಸಮಯ ಎಂದು ಸೊಂಟದಲ್ಲಿದ್ದ ಚಾಕು ತೆಗೆದು ಸನ್ಯಾಸಿಯ ಹೊಟ್ಟೆಗೆ ಇನ್ನೇನೊ ತಿವಿಯುವವನಿದ್ದ. ಕಟ್ಟು ಕಿತ್ತುಕೊಂಡು ಮಕ್ಕಳು ಜಿಗಿದಾಡಿ ಹೋಗಿ ಪಾಳೆಯಗಾರನ ಕೈಲಿದ್ದ ಕತ್ತಿಯನ್ನು ಅತ್ತು ಅತ್ತ ಬಿಸಾಡಿದರು. ಜನರಿಗೆ ತಿಳಿಯಿತು. ಪಾಳೆಯಗಾರನನ್ನು ಹಿಡಿದರು. ತಪ್ಪಿಸಿಕೊಳ್ಳಲು ಯತ್ನಿಸಿದ. ಸನ್ಯಾಸಿ ಆ ಬಲಿಗಂಬದ ಮಕ್ಕಳ ತಬ್ಬಿ ಹಿಡಿದುಕೊಂಡು ಸಂತೈಸಿ ಬಲಿಗಂಬದ ಬಳಿ ಬಿದ್ದಿದ್ದವರ ಎತ್ತಿ ಕೂರಿಸಿ ನೀರು ಕುಡಿಸಿದ. ಪಾಳೆಯಗಾರನ ಪರವಿದ್ದ ಜನ ಎದುರಾಳಿಗಳ ವಿರುದ್ಧ ಬಡಿದಾಟಕ್ಕೆ ತೊಡಗಿದರು. ಸನ್ಯಾಸಿ ಆ ಜನರ ಆರ್ಭಟವ ತಡೆಯಲು ಮುಂದಾದ. ಪಾಳೆಯಗಾರ ತಪ್ಪಿಸಿಕೊಂಡಿದ್ದ. ಅವನ ವಿರುದ್ಧ ಹಾಗೂ ಪರ ಇದ್ದವರು ನಿರ್ಣಾಯಕ ಹೋರಾಟದಲ್ಲಿ ಮುಳುಗಿದಂತಿದ್ದರು.

ಸನ್ಯಾಸಿಯ ಮಾತು ಅವರ ಯುದ್ಧಭೂಮಿಯಲ್ಲಿ ಯಾರಿಗೂ ಕೇಳಿಸುತ್ತಿರಲಿಲ್ಲ. ಯಾರೋ ಕಿರುಚಿದರು; ‘ಲೇ ಆ ಬಿಕಾರಿ ಭಿಕ್ಷುಕ ಸನ್ಯಾಸಿಯ ಹಿಡಿದು ಬಲಿಹಾಕಿರೊ; ಅವನಿಂದಲೇ ಅಣ್ಣ ತಮ್ಮಂದಿರಂತಿದ್ದ ನಮ್ಮ ನಡುವೆ ಒಡಕು ಉಂಟಾಗಿ ಕಿತ್ತಾಡಿಕೊಳ್ಳಬೇಕಾದ ಪರಿಸ್ಥಿತಿ ಬಂತೆಂದು ಮತ್ತೊಬ್ಬ ಪಾಳೆಯಗಾರ ಮುಂದೆ ಬಂದ. ಅಷ್ಟೇ ಪ್ರಬಲವಾದ ಸನ್ಯಾಸಿಯ ಮಾತಿಗೆ ಮರುಗಿದ್ದವರು ಅಡ್ಡಬಂದಿದ್ದರು. ಬಲಿಗಂಬದ ಮಕ್ಕಳು ತಂದೆ ತಾಯಿಗಳ ಕರೆದು; ಸನ್ಯಾಸಿಯನ್ನೂ ಕರೆದು; ನೀನು ಮುಂದೆ ನಡೆ ಎಂದು ಹೇಳಿ ಆ ಗದ್ದಲದ ಹಿಂಸೆಯಲ್ಲಿ ದೂರ ಸರಿಯಲು ಕ್ಷಣ ಮಾತ್ರದಲ್ಲಿ ಮಾಯವಾದರು.

ಅವರು ಬಹಳ ದೂರ ದಾರಿ ದಾಟಿ ಬಂದರು. ಬಲಿಗಂಬದ ಕುಟುಂಬವೊಂದು ಗಾಯಗೊಂಡಿತ್ತಾದರೂ ಅದಕ್ಕೆ ಯಾರ ಮೇಲೂ ದ್ವೇಷ ಇರಲಿಲ್ಲ. ಆ ಗಂಡ ಹೆಂಡತಿ, ಮೂರು ಮಕ್ಕಳು ಬೆಟ್ಟ ಗುಡ್ಡ ಪರ್ವತಗಳ ದಾಟಿ ಹೊಳೆಯ ದಾರಿಯ ಕ್ರಮಿಸಿ ಅಲ್ಲಿ ದೂರದ ಬಯಲಿಗೆ ಬಂದಾಗ ಕಾಡಿನ ಪಕ್ಕದಲ್ಲೇ ಒಂದು ಬೃಹತ್, ಆಲದ ಮರ ತುಂಬಾನೆ ತುಂಬ ಬಾಚಿತ್ತು. ಅಲ್ಲೇ ಒಂದು ಬೌದ್ಧ ದೇಗುಲವೂ ಇತ್ತು. ಗತಕಾಲದ್ದು. ಪಾಳು ಬಿದ್ದಿತ್ತು. ಆದರೂ ಬಲಿಷ್ಠವಾಗಿತ್ತು. ಅವರಲ್ಲಿ ನೆಲೆ ನಿಂತು ಅಂದಗೊಳಿಸಿ ಅಂಗಳದಲ್ಲಿ ಹೂ ಗಿಡಗಳ ಬೆಳೆಸಿ ಪಶು ಪಕ್ಷಿಗಳ ಜೊತೆಗೆ ಬದುಕುತ್ತಿದ್ದರು.

ಆಮೇಲೆ ಆ ಪೇಟೆ ಪಟ್ಟಣ ಊರು ಕೇರಿ ಕೂಡು ದಾರಿಗಳಲ್ಲಿ ಬಲಿಗಂಬದ ದಂಡನೆ ಹೇಗೆ ಸಾಗಿತ್ತೊ ಎಂಬುದು ಅವರಿಗೆ ಗೊತ್ತಿರಲಿಲ್ಲ. ಆದರೆ ಆ ದುಃಸ್ವಪ್ನಗಳಲ್ಲೇ ಅವರು ಉಳಿದ ದಿನಗಳ ಎಣಿಸುತ್ತಿದ್ದರು. ಅಲ್ಲಿ ಆ ದೂರದಲ್ಲಿ ಅದೇ ದಂಡನೆ, ದೌರ್ಜನ್ಯ, ಹಿಂಸೆ, ಅತ್ಯಾಚಾರ, ಕೊಲೆ, ಸುಲಿಗೆಗಳು ಬರ್ಬರವಾದರೂ ಅತ್ಯಾಧುನಿಕವಾಗಿ ಸಾಗುತ್ತಿದ್ದವು. ಆ ದೇಶ, ಸಮಾಜ, ತಾವೀಗ ವಿಶ್ವದಲ್ಲಿ ಬಲಿಷ್ಠ ಎಂದು ಬೀಗುತ್ತಿದ್ದವು. ಹಾಗೆಯೇ ಅಹಿಂಸೆಯ ಮರವೂ ಬೆಳೆಯುತ್ತಿತ್ತು.