ಸ್ಟೀವ್ ತನ್ನ ವ್ಯಕ್ತಿತ್ವದಲ್ಲೇ ಇದ್ದ ಗುಣಗಳಿಂದ ಸರೀಸೃಪಗಳ ಪ್ರಪಂಚದಲ್ಲಿ ಸಂಪೂರ್ಣವಾಗಿ ಮುಳುಗಿದ. ಅವನಪ್ಪ ಬಾಬ್ ಮೊಸಳೆ ಹಿಡಿಯುವ ಕಲೆಯನ್ನು ಹೇಳಿಕೊಟ್ಟ ಮೇಲಂತೂ ಅದನ್ನೇ ಕರಗತ ಮಾಡಿಕೊಂಡು ಮುಂದೆ ಅವನ ಮೊಸಳೆ ಹಿಡಿಯುವ ಪ್ರವೀಣತೆ ಹೆಸರುವಾಸಿಯಾಯ್ತು. ಅವನ ಅಪ್ಪಅಮ್ಮಂದಿರು ಮತ್ತು ಸ್ಟೀವ್ ತಮ್ಮ ಕುಟುಂಬದ ಮೃಗಾಲಯವನ್ನು ಸ್ವಲ್ಪಸ್ವಲ್ಪವೇ ಬೆಳೆಸುತ್ತಾ ಅದನ್ನು ಸ್ಥಳೀಯ ಜನರಿಗೆ ಪರಿಚಯಿಸಿ ಅಲ್ಲಿಂದ ಮುಂದೆ ತಮ್ಮ ಕೆಲಸ ಮತ್ತು ಮೃಗಾಲಯದ ಹೆಸರು ದೇಶದ ಉದ್ದಗಲಕ್ಕೂ ಹರಡಿ ಜನರು ತಮ್ಮಲ್ಲಿಗೆ ಬರುವಂತೆ ಮಾಡಲು ತುಂಬಾ ಶ್ರಮಿಸಿದರು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಹಾಗೊಬ್ಬ ಅವನಿದ್ದ. ಇಲ್ಲೇ, ಬಹು ಹತ್ತಿರದಲ್ಲೇ. ನಮ್ಮ ಬ್ರಿಸ್ಬನ್ ನಗರದಿಂದ Sunshine Coast ಕಡೆ ಹೊರಟರೆ ಐವತ್ತು ನಿಮಿಷಗಳ ಕಾರು ಪ್ರಯಾಣದ ದೂರದಲ್ಲೇ ಅವನ ಮನೆಯಿದ್ದದ್ದು. ಅಂತಿಂಥಾ ಮನೆಯಲ್ಲ ಅವನದ್ದು. ಆದರೆ ಅವನಲ್ಲಿದ್ದಾಗ ನಾನು ಸಾವಿರ ಮೈಲಿ ದೂರದಾಚೆ ಮತ್ತೊಂದು ಕಡಲ ತೀರದ ವಲೊಂಗೊಂಗ್ ನಲ್ಲಿದ್ದೆ. ನಾನು ಬ್ರಿಸ್ಬನ್ ಕಡೆ ಬರುವಷ್ಟರಲ್ಲಿ ಅವನು ಮನೆಬಿಟ್ಟು ನಡೆದಿದ್ದ.

ಅವನು ಸ್ಟೀವ್ ಅರ್ವಿನ್ (Steve Irwin), ಬಹುಪಾಲು ಆಸ್ಟ್ರೇಲಿಯನ್ನರ ಕಣ್ಮಣಿ, ಮುತ್ತಿನ ಹಾರ. ಒಬ್ಬರಲ್ಲ ಒಬ್ಬರು ಅವನನ್ನು ಅವರ ಅಣ್ಣನೋ, ತಮ್ಮನೋ ಇಲ್ಲಾ ಮಗನೋ ಎಂಬಂತೆ ಕಂಡು ‘ಅವನು ನಮ್ಮವನು’ ಎಂದು ಬೀಗುತ್ತಿದ್ದರು. ಅವನ ಸ್ನೇಹಿತರಿಗಂತೂ ಅವನೆಂದರೆ ಪಕ್ಕದಲ್ಲೇ ಇರುವ ಕಡಲಿನಷ್ಟು ಪ್ರೀತಿ. ಅವನೋ ಅವರನ್ನು ಚಕಿತಗೊಳಿಸುವಂತೆ ಪ್ರೀತಿಯುಕ್ಕಿಸಿ ಬತ್ತದ ಚಿಲುಮೆಯಾಗಿದ್ದ. ಈ ಪ್ರಪಂಚದ ಅನೇಕ ದೇಶಗಳಲ್ಲಿರುವ ಅವನ ಕೋಟಿಕೋಟಿ ಅಭಿಮಾನಿಗಳ ಹೃದಯದಲ್ಲಿ ಅವನಿಗೊಂದು ಶಾಶ್ವತ ಸ್ಥಾನ ಸಿಕ್ಕಿಬಿಟ್ಟಿತ್ತು. ಅವೆಲ್ಲವನ್ನು ಅವನು ಕಿರಿವಯಸ್ಸಿನಲ್ಲೇ ಸಾಧಿಸಿದ್ದು ಆಸ್ಟ್ರೇಲಿಯನ್ ಯುವಕರಿಗೆ ಕ್ರಿಕೆಟ್, ರಗ್ಬಿ, ಸಾಕರ್ ಆಟಗಳ ಜೊತೆಜೊತೆಗೆ ಸ್ಟೀವ್ ಜ್ಞಾಪಕದಲ್ಲಿರುತ್ತಿದ್ದ.

ಚಿಕ್ಕಮಕ್ಕಳು ಕಿಲಿಕಿಲಿಯೆನ್ನುತ್ತಾ ಅವನ ಮೆಚ್ಚಿನ ಪದ Crikey, ಅವನು ಅದನ್ನು ಹೇಳುವ ಸ್ಟೈಲ್ ಗಳನ್ನ ಅನುಕರಿಸುತ್ತಿದ್ದರು. ನಮ್ಮ ಮನೆಯಲ್ಲೂ crikey ಪದ ಎಲ್ಲಾ ಕಡೆ ಓಡಾಡಿದ ಕಾಲವಿತ್ತು. ಮೊಸಳೆ ಹಿಡಿಯುವ ಅನುಕರಣೆಯಲ್ಲಿ ಮಕ್ಕಳು ಪರಸ್ಪರ ಕುತ್ತಿಗೆಗೆ ಹಗ್ಗದ ಕುಣಿಕೆ ಹಾಕಿ, ಅದನ್ನು ನೋಡಿದ ನಾನು ಹೌಹಾರಿದ್ದು, ಅಂತಹ ಘಟನೆಗಳಿಂದ ಬೇಸತ್ತು ನನಗೆ ಈ crikey ಮನುಷ್ಯನ ಸಹವಾಸ ಸಾಕಾಗಿದ್ದ ಕಾಲವೂ ಇತ್ತು.

ಅವನು ಮಾಡಿದ ಮೋಡಿ ಅಂಥದ್ದು. ಎಂಥದ್ದು ಅದು, ಹೇಗಿತ್ತು ಅದು ಅಂತ ಹೇಳಲು ಅವನನ್ನು ಕಂಡವರಿಗೆ ಮಾತ್ರ ಸಾಧ್ಯವಂತೆ. ಹಾಗಂತ ಹೇಳಿದ್ದು ಅವನನ್ನು ಕಣ್ಣಾರೆ ನೋಡಿದವರು. ಅವನ ಸ್ವಭಾವಸಿದ್ಧ ಒರಟುತನ, ವಾಚಾಳಿತನ, ಮಗುವಿನಂತಹ ನಿಷ್ಕಪಟ ನಡೆನುಡಿ, ಎಲ್ಲವನ್ನೂ ಜನ ತೂಗುತ್ತಿದ್ದರು, ಅಳೆಯುತ್ತಿದ್ದರು. ಮೈಮೇಲೆ ಅವನ ಮೋಡಿಯನ್ನೂ ಆವಾಹಿಸಿಕೊಂಡು ನಲಿಯುತ್ತಿದ್ದರು. ಎಂಥ ಒರಟ, ಅವನ ಹೆಂಡತಿ ಅದ್ಹೇಗೆ ಸಹಿಸಿಕೊಂಡಾಳೋ, ಎಂದು ಬಿದ್ದುಬಿದ್ದು ನಗುತ್ತಿದ್ದರು, ಹಾಗಂತ ಹೇಳುತ್ತಲೇ ಮುದ್ದುಗರೆಯುತ್ತಿದ್ದರು. ಅವನ ಅತ್ಯಂತ ಆಳವಾದ ಆಸ್ಟ್ರೇಲಿಯನ್ accent ಮತ್ತು ಮಾತನಾಡುತ್ತಿದ್ದ ಹಾವಭಾವ ತುಂಬಿದ ಶೈಲಿ ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲ, ಹೊರದೇಶಗಳಲ್ಲಿ ಕೂಡ ಬಹು ಪ್ರಸಿದ್ಧಿ. ಎಷ್ಟೆಂದರೆ, ಹಿಂದೊಮ್ಮೆ ನಾನು ಹಾಲೆಂಡಿನಲ್ಲಿ, ಜರ್ಮನಿಯಲ್ಲಿ ತಿರುಗಾಡುತ್ತಿದ್ದಾಗ ‘ನಾನು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವುದು’ ಅಂತ ಹೇಳಿಕೊಂಡರೆ ಕೇಳಿದವರು ‘ನಿಜವಾ?! ಆದರೆ ನಿನ್ನದು ಆಸ್ಟ್ರೇಲಿಯನ್ accent ಅಲ್ಲವೇ ಅಲ್ಲ. ನಿನ್ನ ಉಚ್ಚಾರ ಸ್ಟೀವ್ ಅರ್ವಿನ್ ಮಾತನಾಡುವಂತೆ ಇಲ್ಲ’ ಎಂದು ನೇರವಾಗಿ ಹೇಳುತ್ತಿದ್ದರು. ಆಗ ನಾನು ‘ನಾನು ಆಸ್ಟ್ರೇಲಿಯಾಗೆ ಹೋದ ವಲಸೆಗಾರಳು, ಹಾಗಾಗಿ ನನ್ನದು ಇಂಡಿಯನ್ ಉಚ್ಚಾರ,’ ಎಂದು ಸಮಜಾಯಿಷಿ ಉತ್ತರ ಕೊಡುತ್ತಿದ್ದೆ.

Crikey ಸ್ಟೀವ್ ಅಪರಿಮಿತ ಉತ್ಸಾಹದ ಮೋಡಿಗಾರ. ‘ಸಾಕಪ್ಪಾ ಸಾಕು ಮಾತು ನಿಲ್ಲಿಸು, ನಿನ್ನ ವಾಚಾಳಿತನಕ್ಕೆ ಬ್ರೇಕ್ ಹಾಕು’ ಎಂದು ಅವನ ಸ್ನೇಹಿತರೇ ಹೇಳುತ್ತಿದ್ದರಂತೆ. ಹಾಗಂತ ಅವನ ಜೊತೆ ಕೆಲಸಮಾಡುತ್ತಿದ್ದ ಕಿರುಚಿತ್ರ ಸಿಬ್ಬಂದಿ ಹೇಳುತ್ತಿದ್ದರು. ಅದನ್ನು ಕೇಳಿದ, ನೋಡಿದ ಪ್ರತ್ಯಕ್ಷ ಸಾಕ್ಷಿದಾರರ ಬಾಯಿಂದ ನಾನದನ್ನು ಕೇಳಿದ್ದು, ಹಾಗಾಗಿ ಅದು ನಿಜದ ಮಾತೇನೆ ಎಂದು ನಂಬಿ ಆ ನಂಬಿಕೆಯನ್ನು ಮನೆಮಂದಿಗೆಲ್ಲ ಹಂಚಿದ್ದೀನಿ. ನಮ್ಮ ಮನೆಯ crikey ಹುಡುಗರು ಆ ನಂಬಿಕೆಯಲ್ಲಿ ಅದ್ದಿಕೊಂಡು ಮುಳುಗಿ ಆ ಸ್ಟೀವ್ ದಾರಿ ಹಿಡಿದು ಅವನಂತೆಯೇ ನಟಿಸುತ್ತಿದ್ದ ದಿನಗಳಿಗೆ ನಾನು ಸಾಕ್ಷಿಯಾಗಿ, ಅದರಿಂದಾದ ಸೈಡ್ ಎಫೆಕ್ಟ್ ಗಳು ಹರಡದಂತೆ ತಡೆಯಲು ಹೆಣಗಾಡಿದ್ದೀನಿ. ನಮ್ಮಂಥ ಸಾಮಾನ್ಯರ ಬದುಕಿನಲ್ಲಿ ಇಷ್ಟೆಲ್ಲಾ, ಇಂತಿಂಥ ಸಂಭವಗಳಿಗೆ ಆಸ್ಪದ ಕೊಡುವುದಕ್ಕೇ ತಾನು ಹುಟ್ಟಿದ್ದು ಎಂಬಂತೆ Crikey Steve Irwin ಪೋಸ್ಟರುಗಳಲ್ಲಿ ತನ್ನ ಚಿಕ್ಕ ಹುಡುಗನ ಕುತೂಹಲದ ಮುಖವನ್ನು ತೋರಿಸುತ್ತಾ ನಿಂತಿರುತ್ತಿದ್ದ. ಅದರಿಂದಲೇ ಏನೋ, ಅವನು ದೂರದ ಬ್ರಿಟನ್, ಅಮೆರಿಕ, ಕೆನಡಾ, ಯೂರೋಪಿನ ರಾಷ್ತ್ರಗಳಲ್ಲಿ ಕೂಡ ತನ್ನ ಜಾದೂವನ್ನು ಬೀರಿದ್ದ.

ಇಷ್ಟಕ್ಕೂ ಈಗ್ಯಾಕೆ ಈ ಸ್ಟೀವ್ ಕತೆ ಹೇಳ್ತಿದಾಳೆ ಎನ್ನುವ ಪ್ರಶ್ನೆ ನಿಮಗೆ ಬಂದಿರಬೇಕು. ಇತ್ತೀಚೆಗೆ ಆಸ್ಟ್ರೇಲಿಯಾ ನಿವಾಸಿಗಳಾದ ಹಲ್ಲಿ, ಹಾವು, ಜೇಡಗಳ ಬಗ್ಗೆ ಬರೆದಿದ್ದನ್ನ ಒಬ್ಬ ಸ್ನೇಹಿತರಿಗೆ ಹೇಳುತ್ತಿದ್ದೆ. ಗಾಯವಾಗಿ ಸತ್ತೇ ಹೋಗುವಂತಿದ್ದ ಭಾರಿ ವಿಷದ ಹಾವೊಂದು ತನಗಿನ್ನೂ ಈ ಪ್ರಪಂಚಕ್ಕೆ ವಿದಾಯ ಹೇಳುವ ಸಮಯ ಬಂದಿಲ್ಲ ಎಂದುಕೊಂಡು ಎದ್ದು ಸಮುದ್ರದಲ್ಲಿ ಈಜಲು ಹೋದ ಕತೆಯೊಳಗಿನ ಉಪಕತೆಯನ್ನ ಹೇಳುತ್ತಾ ಇದ್ದೆ. ಅವರೋ, ‘ನಮ್ಮ ದೇಶದ ಬಗ್ಗೆ ಇಷ್ಟೆಲ್ಲಾ ಬರೀತಾ ಇದ್ದೀಯ, ನಮ್ಮೆಲ್ಲರ ಹೆಮ್ಮೆಯಾದ Steve Irwin ಬಗ್ಗೆ ಬರ್ದಿದ್ದೀಯಾ?’, ಎಂದು ವಿಚಾರಿಸಿದರು. ಕಟ್ಟುಮಸ್ತಾಗಿದ್ದ ಆಳು, ಅರಳು ಹುರಿದಂತೆ ಮಾತಾಡಿ ಎಲ್ಲರನ್ನೂ ಬಲೆಗೆ ಹಾಕಿಕೊಳ್ಳುತ್ತಿದ್ದ, ಅದೆಷ್ಟು ಆತ್ಮವಿಶ್ವಾಸವಿತ್ತು ಅವನಿಗೆ, ಭಯವೆಂಬುದೇ ಅವನಿಗೆ ಗೊತ್ತಿರಲಿಲ್ಲ, ಆ ನಿರ್ಭಯತೆಯಿಂದಲೇ ನಮಗೆಲ್ಲಾ ವಿದಾಯ ಕೂಡ ಹೇಳದೆ, ಬರಿಯ ನಲವತ್ತರ ಹರೆಯದಲ್ಲಿ ಎದ್ದು ಹೊರಟೇಹೋದ, ಎನ್ನುತ್ತಾ ಭಾವುಕರಾದರು. ಅವರ ಆ ಭಾವುಕತೆಯನ್ನು ನೋಡಿ ಬೆರಗಾಗಿ ಹೋದ ನನ್ನ ಕಣ್ಣಿನ ಮುಂದೆ crikey ನೆನಪುಗಳ ಕಂತೆ ಬಿಚ್ಚಿಕೊಂಡಿತು.

ಸ್ಟೀವ್ ತನ್ನ ಅಪ್ಪ Bob Irwin ರಿಂದ ನೈಸರ್ಗಿಕ ಚರಿತ್ರೆ, ಪ್ರಾಣಿ ಪ್ರಪಂಚ, ಚರ್ಯೆ, ಬದುಕುವ ಪರಿ ಎಲ್ಲವನ್ನೂ ಕಲಿತದ್ದು. ಬಾಬ್ ಸರೀಸೃಪ ಅಧ್ಯಯನದಲ್ಲಿ ಪರಿಣಿತರು. ಅಮ್ಮ ಲಿನ್ ಗಾಯಗೊಂಡ ಪ್ರಾಣಿಪಕ್ಷಿಗಳನ್ನು ಕಾಪಾಡುತ್ತಿದ್ದರು. ಎಳೆಯದರಲ್ಲೇ ಮೆಲ್ಬೋರ್ನ್ ಬಿಟ್ಟು ಬ್ರಿಸ್ಬನ್ ಗೆ ಬಂದ ಕುಟುಂಬ Sunshine Coast ಪ್ರದೇಶದಲ್ಲಿ ತಳವೂರಿತು. ಅಪ್ಪಅಮ್ಮಂದಿರು ಸರೀಸೃಪಗಳ ಚಿಕ್ಕದೊಂದು ಮೃಗಾಲಯವನ್ನು ಸ್ಥಾಪಿಸಿದರು. ಸ್ಟೀವ್ ತನ್ನ ವ್ಯಕ್ತಿತ್ವದಲ್ಲೇ ಇದ್ದ ಗುಣಗಳಿಂದ ಸರೀಸೃಪಗಳ ಪ್ರಪಂಚದಲ್ಲಿ ಸಂಪೂರ್ಣವಾಗಿ ಮುಳುಗಿದ. ಅವನಪ್ಪ ಬಾಬ್ ಮೊಸಳೆ ಹಿಡಿಯುವ ಕಲೆಯನ್ನು ಹೇಳಿಕೊಟ್ಟ ಮೇಲಂತೂ ಅದನ್ನೇ ಕರಗತ ಮಾಡಿಕೊಂಡು ಮುಂದೆ ಅವನ ಮೊಸಳೆ ಹಿಡಿಯುವ ಪ್ರವೀಣತೆ ಹೆಸರುವಾಸಿಯಾಯ್ತು. ಅವನ ಅಪ್ಪಅಮ್ಮಂದಿರು ಮತ್ತು ಸ್ಟೀವ್ ತಮ್ಮ ಕುಟುಂಬದ ಮೃಗಾಲಯವನ್ನು ಸ್ವಲ್ಪಸ್ವಲ್ಪವೇ ಬೆಳೆಸುತ್ತಾ ಅದನ್ನು ಸ್ಥಳೀಯ ಜನರಿಗೆ ಪರಿಚಯಿಸಿ ಅಲ್ಲಿಂದ ಮುಂದೆ ತಮ್ಮ ಕೆಲಸ ಮತ್ತು ಮೃಗಾಲಯದ ಹೆಸರು ದೇಶದ ಉದ್ದಗಲಕ್ಕೂ ಹರಡಿ ಜನರು ತಮ್ಮಲ್ಲಿಗೆ ಬರುವಂತೆ ಮಾಡಲು ತುಂಬಾ ಶ್ರಮಿಸಿದರು.

ಅವನು ಮಾಡಿದ ಮೋಡಿ ಅಂಥದ್ದು. ಎಂಥದ್ದು ಅದು, ಹೇಗಿತ್ತು ಅದು ಅಂತ ಹೇಳಲು ಅವನನ್ನು ಕಂಡವರಿಗೆ ಮಾತ್ರ ಸಾಧ್ಯವಂತೆ. ಹಾಗಂತ ಹೇಳಿದ್ದು ಅವನನ್ನು ಕಣ್ಣಾರೆ ನೋಡಿದವರು. ಅವನ ಸ್ವಭಾವಸಿದ್ಧ ಒರಟುತನ, ವಾಚಾಳಿತನ, ಮಗುವಿನಂತಹ ನಿಷ್ಕಪಟ ನಡೆನುಡಿ, ಎಲ್ಲವನ್ನೂ ಜನ ತೂಗುತ್ತಿದ್ದರು, ಅಳೆಯುತ್ತಿದ್ದರು.

ಅಪ್ಪ, ಮಗ ಇಬ್ಬರೂ ಕ್ವೀನ್ಸ್ ಲ್ಯಾಂಡ್ ರಾಜ್ಯಸರ್ಕಾರದ ಜೊತೆ ಸೇರಿ ಅವರ ಅನೇಕ ಮೊಸಳೆ ಹಿಡಿಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಕುಶಲತೆಯನ್ನು ಹಂಚಿದರು. ಆಸ್ಟ್ರೇಲಿಯಾದ ಬಹುಪ್ರಸಿದ್ಧ Saltie ಮೊಸಳೆ – ಹದಿನೈದು ಅಡಿಗಿಂತಲೂ ಉದ್ದದ, ಟನ್ ಗಟ್ಟಲೆ ಭಾರದ, ಡೈನೊಸೊರ್ ಕಾಲದ ಪುರಾತನ ಜೀವಿ ಮೊಸಳೆಗಳನ್ನು ಹಿಡಿಯುವ ಕೆಲಸ ಯಾವಾಗಲೂ ನಡೆಯುತ್ತಿರುತ್ತದೆ. ಮುಂದೆ ಅಪ್ಪನಿಂದ ಮೃಗಾಲಯ ನಿರ್ವಹಣೆ ಜವಾಬ್ದಾರಿಯನ್ನು ತಾನು ಪಡೆದುಕೊಂಡು ಸ್ಟೀವ್ ಮೊಸಳೆ ಕಾರ್ಯಕ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಮೃಗಾಲಯಕ್ಕೆ ಆಸ್ಟ್ರೇಲಿಯಾ ಝೂ ಎಂದು ಹೆಸರಿಟ್ಟು ಅದನ್ನು ದೊಡ್ಡ ಸಂಸ್ಥೆಯಾಗಿ ಬೆಳೆಸಿದ. ಅವರ ಕೆಲಸಗಳಲ್ಲಿ ಪ್ರಾಣಿ ಅಧ್ಯಯನ, ಸಂರಕ್ಷಣೆ, ಮನರಂಜನೆ, ಬೃಹತ್ saltie ಮೊಸಳೆಗಳಿಗೆ ಆಹಾರ ಕೊಡುವ ಮುಖ್ಯ ಕಾರ್ಯಕ್ರಮ, ಮೊಸಳೆ ಮತ್ತು ಸರೀಸೃಪಗಳ ಅಧ್ಯಯನವೆಂಬಂತೆ ಅನೇಕ ಹೊಸತನಗಳನ್ನು ತಂದರು.

ಸ್ಟೀವ್ ಜೀವನದ ಅತ್ಯಂತ ಮುಖ್ಯ ಹೊಸ ಬೆಳವಣಿಗೆಯೆಂದರೆ ತಮ್ಮದೇ ಆಸ್ಟ್ರೇಲಿಯಾ ಝೂನಲ್ಲಿ ಅವನು ಅಮೇರಿಕನ್ ಹುಡುಗಿ ಟೆರ್ರಿಯನ್ನು ಭೇಟಿಯಾಗಿ ಅವರಿಬ್ಬರಿಗೂ ಪರಸ್ಪರ ಪ್ರೀತಿಯುಂಟಾಗಿ ಕೆಲಕಾಲದಲ್ಲೇ ಅವರು ಬಾಳಸಂಗಾತಿಗಳಾಗಿದ್ದು. ಟೆರ್ರಿ ಬಂದ ಮೇಲೆ ಸ್ಟೀವ್ ಪೊರೆಬಿಟ್ಟ ಹೆಬ್ಬಾವಿನಂತೆ ಮತ್ತಷ್ಟು ಚುರುಕಾಗಿ ಹೀರೋ ಆಗಿಬಿಟ್ಟ. ಅದೇ ಕಾಲದಲ್ಲಿ ಸ್ಟೀವ್ ತನ್ನ ಕೆಲಸಗಳನ್ನು ಟೆಲಿವಿಷನ್ ಪರದೆಗೆ ತರಲು ಪ್ರಯತ್ನಿಸುತ್ತಿದ್ದ. ಅವರ ಇಡೀ ತಂಡಕ್ಕೆ ಹೊಸ ಆಲೋಚನೆಗಳು, ಕಲ್ಪನೆಗಳು, ಬಂಡವಾಳ, ಮಾರುಕಟ್ಟೆ ಎಲ್ಲದರ ಅವಶ್ಯಕತೆಯಿತ್ತು. ಆಸ್ಟ್ರೇಲಿಯನ್ ಕಷ್ಟಕರ ಸ್ವಾಭಾವಿಕ ಪರಿಸರದಲ್ಲಿ ಹೊಸದಾಗಿ ಮದುವೆಯಾದ ಜೋಡಿ ಸ್ಟೀವ್ ಮತ್ತು ಟೆರ್ರಿ ಜೊತೆಯಾಗಿ ನಡೆಸಿದ ಪ್ರಾಣಿಪರಿಸರ ಕಿರು ಪ್ರಾಜೆಕ್ಟ್ ಗಳನ್ನು ಅವರ ಸ್ನೇಹಿತರು ಚಿತ್ರೀಕರಿಸಿದರು. ತಂಡ ಅವನ್ನೇ ಕಿರುಚಿತ್ರಗಳನ್ನಾಗಿ ಮಾಡಿ ಅಮೇರಿಕಾದಲ್ಲಿ ಟೆಲಿವಿಷನ್ ಸರಣಿಯಾಗಿ ಪ್ರಸಾರವಾಗುವಂತೆ ನೋಡಿಕೊಂಡು ಮಾರುಕಟ್ಟೆ ಸಂಪಾದಿಸಿದರು. ಅಮೇರಿಕಾದ ಹೊಸ ಅಳಿಯ ಸ್ಟೀವ್ ಮತ್ತು ಆಸ್ಟ್ರೇಲಿಯನ್ ಹೊಸ ಸೊಸೆ ಟೆರ್ರಿ ಬೆಳಗಾಗುವಷ್ಟರಲ್ಲಿ ಮನೆಮಾತಾಗಿದ್ದರು.

(ಸ್ಟೀವ್ ಇರ್ವಿನ್ ಕುಟುಂಬ)

ಅವರಿಬ್ಬರ ಪ್ರೀತಿಪ್ರಣಯಕ್ಕೆ ಸಾಕ್ಷಿಯಾದದ್ದು ಆಸ್ಟ್ರೇಲಿಯನ್ ಬುಷ್ ಎಂಬಂತೆ ಮೂಡಿಬಂದ ಕಾರ್ಯಕ್ರಮಕ್ಕೆ ಹೊಸ ರೆಕ್ಕೆ ಸೇರಿದ್ದು ಸ್ಟೀವ್ ನ ಮೊಸಳೆ ಹಿಡಿಯುವ ನೈಪುಣ್ಯತೆ. ಅಮೆರಿಕನ್ನರು, ಬ್ರಿಟನ್ನರು, ಯೂರೋಪಿಯನ್ನರು, ಚೀನಿಯರು, ಜಪಾನಿಗಳು ನಿಬ್ಬೆರಗಾಗಿ ಸ್ಟೀವ್ ಉಚ್ಚಾರಣೆ ಮತ್ತು ಅವನ crikey ಪದಕ್ಕೆ ಮನಸೋತರು. ಗಂಡಹೆಂಡತಿ ಟಿವಿ ಕಾರ್ಯಕ್ರಮಗಳನ್ನಷ್ಟೇ ಅಲ್ಲದೆ, ಚಲನಚಿತ್ರಗಳನ್ನೂ ಮಾಡಿದರು. ಹಲವು ಚಿತ್ರಗಳಲ್ಲಿ ಅವರ ಪ್ರಾಣಿಗಳು, ಮೊಸಳೆಗಳು, ಹಾವುಗಳು, ಪಕ್ಷಿಗಳು ಅಭಿನಯಿಸಿ ಅವೂ ಕೂಡ ಮನೆಮಾತಾದವು. ಅವನ್ನು ಪ್ರತ್ಯಕ್ಷವಾಗಿ ನೋಡಲೆಂದು ಜನರು ಹೊರದೇಶಗಳಿಂದ ಬಂದರು. ಆಸ್ಟ್ರೇಲಿಯನ್ ಝೂ ಪ್ರಖ್ಯಾತವಾಯ್ತು. ಜನ ಅವನನ್ನು ‘ಕ್ರೊಕೊಡೈಲ್ ಹಂಟರ್’ ಎಂದು ಕರೆದರು. ಸಂಸ್ಥೆಗೆ, ಅವನಿಗೆ ಅನೇಕ ಪ್ರಶಸ್ತಿಗಳು ಸಂದವು.

ಈ ಮಧ್ಯೆ ಸ್ಟೀವ್-ಟೆರ್ರಿ ಜೋಡಿಗೆ ಬಿಂಡಿ (Bindi Irwin) ಮಗಳಾಗಿ ಹುಟ್ಟಿದ್ದಳು. ಅಪ್ಪ ಸ್ಟೀವ್ ಗೆ ಮಗಳೆಂದರೆ ಬಲು ಮುಚ್ಚಟೆ ಮತ್ತು ಅಪಾರ ಪ್ರೀತಿ. ಅವಳು ಆರು ವರ್ಷದವಳಾಗಿದ್ದಾಗ ಅವಳಿಗೆ ಮುದ್ದುತಮ್ಮನಾಗಿ ರಾಬರ್ಟ್ ಬಂದ. ಕುಟುಂಬ ಪರಿಪೂರ್ಣವಾಗಿತ್ತು, ಸಂತೋಷವಾಗಿತ್ತು. ಸ್ಟೀವ್ ತನ್ನ ಹೆಂಡತಿ, ಮಕ್ಕಳೆಂದರೆ ಪ್ರಾಣ ಬಿಡುತ್ತಾನೆ, ಎಂದು ಟೆರ್ರಿ ಎಲ್ಲರಿಗೂ ಹೇಳುತ್ತಿದ್ದರು.

ಹೀಗೆಲ್ಲಾ ಬಾಳುತ್ತಿದ್ದ ಸ್ಟೀವ್ ೨೦೦೬ ಇಸವಿ ಸೆಪ್ಟೆಂಬರ್ ತಿಂಗಳಲ್ಲಿ ಸಮುದ್ರಜೀವಿಯಾದ ಸ್ಟಿಂಗ್ ರೇ (stingray) ಒಂದರ ಬಾಲದ ಮುಳ್ಳುಕೊಕ್ಕೆಯಿಂದ ತಿವಿಸಿಕೊಂಡು ಪ್ರಾಣಬಿಟ್ಟ. ಆ ಸಮಯದಲ್ಲಿ ಅವನು ಮತ್ತು ಹೊರದೇಶದ ತಂಡವೊಂದು ಸಮುದ್ರಜೀವಿಗಳ ಬಗ್ಗೆ Ocean’s Deadliest ಎಂಬ ಚಲನಚಿತ್ರಕ್ಕೆಂದು ಚಿತ್ರೀಕರಣ ನಡೆಸಿದ್ದರು. ಆ ಚಿಕ್ಕ stingray ದೇಹಕ್ಕೂ ಸ್ಟೀವ್ ಗೂ ಎರಡು ಅಡಿ ಅಂತರವಿತ್ತಂತೆ. ಇದ್ದಕ್ಕಿದ್ದಂತೆ ವಿಚಲಿತವಾದ stingray ವ್ಯಗ್ರವಾಗಿ ತನ್ನ ಮುಲ್ಲುಕೊಕ್ಕೆಯಿಂದ ಸ್ಟೀವ್ ಎದೆಯನ್ನು ಚುಚ್ಚಿತ್ತಂತೆ. ತನ್ನ ಪುಪ್ಪುಸಕ್ಕೆ ಮಾತ್ರ ಮುಳ್ಳು ತಗುಲಿದ್ದು ಎಂದೇ ನಂಬಿದ್ದ ಅವನಿಗೆ ಮುಳ್ಳುಕೊಕ್ಕೆ ಹೃದಯದ ಪದರವನ್ನೇ ಛಿದ್ರಿಸಿದ್ದು ಅರಿವೇ ಆಗದೆ ಪ್ರಾಣಬಿಟ್ಟನಂತೆ.

ಅವನು ಸತ್ತ ಸುದ್ದಿಯನ್ನು ನನಗೆ ಹೇಳಿದ್ದು ನಮ್ಮತ್ತೆ. ಅವರಿಗೆ ಆ ದಿನ ಮತ್ತು ವಾರ ಪೂರ್ತಿ ವಿಶೇಷ ಕಾರ್ಯಕ್ರಮಗಳಿದ್ದವು. ತನ್ನ ಒಬ್ಬ ಸ್ನೇಹಿತರನ್ನು ನೋಡಿಕೊಂಡು ಬಂದು ಇನ್ನೊಬ್ಬರನ್ನು ಕಾಣಲು ಆಕೆ ಆ ಮಧ್ಯಾಹ್ನ ವಲೊಂಗೊಂಗ್ ನಿಂದ ಮೆಲ್ಬೋರ್ನ್ ಗೆ ಪ್ರಯಾಣಿಸಲಿದ್ದರು. ಪ್ರಯಾಣಕ್ಕೆ ಮುಂಚೆ ಧಡಬಡನೆ ಮನೆಗೆ ಬಂದು ಕೆಂಪು ಮುಖದಿಂದ ಉದ್ವಿಗ್ನ ಹಾವಭಾವದೊಡನೆ ಅವನ ಸಾವಿನ ಸುದ್ದಿ ಹೇಳಿದರು. ಆಗ ನಮ್ಮನೆಯಲ್ಲಿ Steve Irwin ಇದ್ದ ಅನೇಕ ಸಿಡಿ, ವಿಡಿಯೋ ಕ್ಯಾಸೆಟ್ಟುಗಳು, ಡಿವಿಡಿಗಳು ಇದ್ದವು. ಅವನ್ನೆಲ್ಲಾ ಪದೇಪದೇ ನೋಡಿ ನನ್ನ ಮೈಚರ್ಮ ದಪ್ಪಗಾಗಿತ್ತು. ತಣ್ಣನೆ ದನಿಯಲ್ಲಿ ‘ಹೌದಾ, ಸತ್ತನಾ, ಹೇಗೆ, ಅಯ್ಯೋ ಪಾಪ’, ಅಂದೆ. ಆಸ್ಟ್ರೇಲಿಯನ್ ಅತ್ತೆಗೆ ಆಘಾತವಾಯ್ತು.

‘ಅವನು ಸತ್ತದ್ದು ದೇಶಕ್ಕೆ ದೊಡ್ಡ ನಷ್ಟ. ಇಡೀ ದೇಶವೇ ಅಳುತ್ತಿದೆ, ಶೋಕಸಂತಾಪ ಸೂಚಿಸಲು ಶಾಲೆಗಳನ್ನು ಮುಚ್ಚುತ್ತಾರೆ. ಅಯ್ಯೋ, ನಮ್ಮ ದೇಶದ ಮಕ್ಕಳನ್ನು ನೆನೆಸಿಕೊಂಡರೆ ಹೇಗಪ್ಪಾ ಅವರು crikey ಕ್ರೊಕೊಡೈಲ್ ಹಂಟರ್ ಇಲ್ಲದೆ ಬದುಕುತ್ತಾರೆ ಎಂದು ಚಿಂತೆಯಾಗುತ್ತಿದೆ. ಅಮೆರಿಕ, ಬ್ರಿಟನ್ ಎಲ್ಲಾ ಕಡೆ ಸುದ್ದಿ ಹರಡಿದಾಗ ಏನಾಗುತ್ತದೋ ಏನೋ. ನಾನೀಗ ಕಾರಿನಲ್ಲಿ ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಬೇಕು. ದಾರಿಯಲ್ಲಿ ಏನೇನಾಗುತ್ತದೋ ಏನೋ, ಇಡೀ ದೇಶಕ್ಕೆ ಶಾಕ್ ಹೊಡೆದಿದೆ. ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೋ ಗೊತ್ತಿಲ್ಲ. ಎಲ್ಲವೂ ಅಯೋಮಯವಾಗಿದೆ. ಪಾಪ, ನಿನಗೆ ಇದೆಲ್ಲಾ ಅರ್ಥವಾಗುವುದಿಲ್ಲ, ಭಾರತದಿಂದ ಬಂದ ನಿನಗೆ ನಮ್ಮ ಹೆಮ್ಮೆಯ ಸ್ಟೀವ್ ಬಗ್ಗೆ ಏನೂ ಗೊತ್ತಿಲ್ಲ’, ಅಂತ ಒಂದೇಸಮನೆ ಮಾತನಾಡುತ್ತಲೇ ಇದ್ದರು. ನನಗೆ ದಂಗುಬಡಿಯಿತು. ಆಗಲೇ ನನಗೆ ಆ ಮೋಡಿಗಾರನ ಪ್ರಭಾವಳಿ ಅರ್ಥವಾಗಿದ್ದು.

ನನ್ನಿಂದ ಆಸ್ಟ್ರೇಲಿಯನ್ ಅತ್ತೆಗಾದ ನಿರಾಸೆಯನ್ನು ಸರಿಪಡಿಸಲು ಮರುವರ್ಷವೇ ತೀರ್ಥಯಾತ್ರೆ ರೀತಿ ವಲೊಂಗೊಂಗ್ ನಿಂದ ಹೋಗಿ ಆಸ್ಟ್ರೇಲಿಯಾ ಝೂಗೆ ಭೇಟಿಕೊಟ್ಟು ಸ್ಟೀವ್ ಇಲ್ಲದ, ಮುದುಡಿಕೊಂಡಿದ್ದ ಅವನ ಮನೆಯ ಅಷ್ಟೂ ಮೊಸಳೆಗಳನ್ನು ನೋಡಿ, ನಾವು ಮನೆಮಂದಿ ಅವಕ್ಕೆಲ್ಲಾ ಹಲೋ ಹೇಳಿ ಬಂದೆವು. ಆಗ ಅವನ ಹೆಂಡತಿ ಟೆರ್ರಿ ಮತ್ತು ಮಕ್ಕಳು ಕಾಣಲಿಲ್ಲವಲ್ಲ ಎಂದು ಎಲ್ಲರಿಗೂ ನಿರಾಸೆಯಾಗಿತ್ತು.

ಬ್ರಿಸ್ಬನ್ ಗೆ ಬಂದಮೇಲೆ ಮತ್ತೆರಡು ಬಾರಿ ಅಲ್ಲಿಗೆ ಹೋಗಿ ಹಳೆನೆನಪುಗಳಿಗೆ ಒಂದಷ್ಟು ಹೊಸ ಪಾಲಿಶ್ ಹಚ್ಚಿ, ಟೆರ್ರಿ, ಬಿಂಡಿ, ರಾಬರ್ಟ್, ಸ್ಟೀವ್ ಪ್ರಾಣಸ್ನೇಹಿತ ವೆಸ್, ಅವನ ಕುಟುಂಬ, ಮೊಸಳೆಗಳು, ಚಲನಚಿತ್ರಗಳಲ್ಲಿ ನೋಡಿದ್ದ ಅವನ ತಂಡದವರು, ಪ್ರಾಣಿಪಕ್ಷಿ, ಎಲ್ಲವನ್ನೂ ಕೂಲಂಕುಶವಾಗಿ ನೋಡಿದಮೇಲೆ ನಾನೂ ಕೂಡ ಒಂದಷ್ಟು ಆಸ್ಟ್ರೇಲಿಯನ್ ಆಗಿದ್ದೀನಿ.