Advertisement
ಮೋಸದ ಆಟ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಮೋಸದ ಆಟ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಮಾರನೇ ದಿನ, ನಾವೆಲ್ಲರೂ ಏಳುವ ಹೊತ್ತಿಗಾಗಲೇ ಸಾಲಗಾರರೆಲ್ಲ ಸೇರಿದ್ದರು. ಸಹಾಯರ್ಥ ಪ್ರದರ್ಶನ ಆಡಿದ ಮೇಲೆ, ಅದರಲ್ಲೂ ಹೌಸ್‌ಫುಲ್ ಕಲೆಕ್ಷನ್ ಗಳಿಸಿದ ಮೇಲೆ ದುಡ್ಡು ವಾಪಾಸು ಕೇಳಲು ಬರುವುದು ನ್ಯಾಯಸಮ್ಮತ ತಾನೆ. ಈ ಬಾರಿ, ಪಕ್ಕಾ ವ್ಯವಹಾರಸ್ಥರಂತೆ ಅವರೆಲ್ಲ ಕಂಡಿದ್ದರು. ನಾವೂ ಅಷ್ಟೇ, ಕಂಪೆನಿಯ ಸಾಲವನ್ನು ನಮ್ಮ ಮಾಲೀಕರು ಈಗ ತೀರಿಸುತ್ತಾರೆ ನೋಡಿ ಎಂಬ ಭಾವಭಂಗಿಯಲ್ಲೇ ನಿಂತಿದ್ದೆವು. ದುಡ್ಡಿನ ಗಂಟು ಇಟ್ಟುಕೊಂಡಿದ್ದ ಸಣ್ಣಪ್ಪನವರೆಲ್ಲಿ?
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹತ್ತೊಂಭತ್ತನೆಯ ಕಂತು

ಮಾಂಡ್ರೆ ಕವಿಗಳು ಮತ್ತು ಬಿ.ಪಿ. ಸಣ್ಣಪ್ಪನವರ ಕಂಪೆನಿ ಹೊಸದಾಗಿ ಶುರುವಾಗಿತ್ತಾದರೂ ನಷ್ಟದಲ್ಲೇ ಸಾಗುತ್ತಿತ್ತು ಎಂದು ಈ ಹಿಂದೆ ನಿಮಗೆ ಹೇಳಿದ್ದೆ. ಈಗಾಗಲೇ ರಂಗಭೂಮಿಕೆಯಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದ ನಾಟಕಗಳಾದ ‘ಹಳ್ಳಿ ಹುಡುಗಿ’, ‘ಸಮಾಜಕ್ಕೆ ಸವಾಲು’ ಎಂಟ್ಹತ್ತು ನಾಟಕಗಳನ್ನು ಆಡಿದರೂ, ಪುರುಷ ಕಲಾವಿದರೇ ಹೆಚ್ಚಾಗಿ ಸ್ತ್ರೀ ವೇಷ ಮಾಡಲು ಆರಂಭಿಸಿದರೂ ಅದೇಕೋ ಏನೋ ಟಿಕೆಟ್ ಕಲೆಕ್ಷನ್ ಮಾತ್ರ ಆಗುತ್ತಿರಲಿಲ್ಲ. ಬಹಳಷ್ಟು ಜನ ಎಷ್ಟೋ ಚರ್ಚೆ ನಡೆಸಿದ್ದೇ ನಡೆಸಿದ್ದು. ಇದೊಂದು ರೀತಿಯಲ್ಲಿ ಕುರುಡರೆಲ್ಲ ಸೇರಿ ಆನೆಯನ್ನು ವರ್ಣಿಸಿದಂತೆ! ಆದರೇನು ಪ್ರಯೋಜನ? ಉತ್ತರವಾಗಲೀ ಪರಿಹಾರವಾಗಲೀ ಸಿಗಲಿಲ್ಲ. ದಿನಗಳು ಉರುಳುತ್ತಿದ್ದಂತೆ ಸಾಲ ಮಾತ್ರ ಏರುತ್ತಲೇ ಹೋಯಿತು.

ಕಂಚಿ ಥಿಯೇಟರ್ ಹಾಕಿಕೊಟ್ಟವರೆಲ್ಲ ಸಾಲ ವಾಪಾಸು ಪಡೆಯಲು ಕಂಪೆನಿಗೆ ದೌಡಾಯಿಸಿದ್ದರು. ಅವರೆಲ್ಲರಿಗೂ ಬೇಬಿ ಊಟ, ತಿಂಡಿ ನೀಡಿ ಆರೈಕೆ ಮಾಡಿದಳು. ಎಷ್ಟು ದಿನ ಹೀಗೆ ತಳ್ಳುವುದಕ್ಕೆ ಸಾಧ್ಯ? ಮುಂದಿನ ದಾರಿ ಕಾಣದೆ, ಸಹಾಯಾರ್ಥ ಪ್ರದರ್ಶನ (ಬೆನಿಫಿಟ್ ಶೋ) ನಡೆಸುವುದೆಂದು ಮಾಲೀಕರು ತೀರ್ಮಾನಿಸಿದರು. ಸಹಾಯಾರ್ಥ ಪ್ರದರ್ಶನ ಅಂದರೆ ಕಂಪೆನಿಗೆ ಲಾಭ ಮಾಡಿಕೊಳ್ಳಲು ಪ್ರಸಿದ್ಧ ಕಲಾವಿದರನ್ನು ಅತಿಥಿ ಕಲಾವಿದರಾಗಿ ನಟಿಸುವಂತೆ ಕಂಪೆನಿಗೆ ಆಹ್ವಾನಿಸುವುದು. ಉಳಿದ ದಿನಗಳಲ್ಲಿ ಎರಡು ರೂಪಾಯಿಗೆ ಟಿಕೇಟ್ ಇದ್ದರೆ, ಸಹಾಯಾರ್ಥ ಪ್ರದರ್ಶನದಲ್ಲಿ ಹತ್ತು – ಇಪ್ಪತ್ತು ರೂಪಾಯಿಗಳಾಗುತ್ತಿತ್ತು. ಕಂಪೆನಿಗೆ ಸಹಾಯವಾಗಲೆಂದು ಮತ್ತು ಅತಿಥಿ ಕಲಾವಿದರ ಸಂಬಳ ಪಾವತಿಗೆ ಹೀಗೆ ಟಿಕೇಟ್ ಮೊತ್ತವನ್ನು ಏರಿಸುತ್ತಾರೆ.

ಕೌಲಿ ಚೆನ್ನಬಸಪ್ಪನವರ ಕಂಪೆನಿಗೆ ಆಗ ದೊಡ್ಡ ಹೆಸರಿತ್ತು. ಅವರ ಮಗಳು ಜಯಲಕ್ಷ್ಮೀ ಪಾಟೀಲ್. ನೀವು ಇವರನ್ನು ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ನೋಡಿರಲಿಕ್ಕೂ ಸಾಕು. ಅವಳು ನನ್ನ ಅತ್ಯಾಪ್ತ ಗೆಳತಿ. ‘ಮುಚ್ಚುಮರೆಯಿಲ್ಲದೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ’ ಅಂತ ಕುವೆಂಪು ಹೇಳುತ್ತಾರಲ್ಲಾ ಹಾಗೆ, ನನಗವಳು ಅಂತರಾತ್ಮದ ಗೆಳತಿ. ಅವಳು ಯಾವತ್ತೂ ನನ್ನ ‘ಅಕ್ಕಣಿ’ ಎಂದೇ ಕರೆಯುತ್ತಿದ್ದದ್ದು. ನಾನೂ ಓಗೊಡುತ್ತಿದ್ದೆ. ಸಮವಯಸ್ಕರಾಗಿದ್ದ ನಮ್ಮ ನಡುವೆ ಯಾವ ಒಳಗುಟ್ಟುಗಳೂ ಇಲ್ಲ. ಇಬ್ಬರೂ ಮಾತುಕತೆಯಾಡಿ, ಹಗುರಾಗುತ್ತೇವಷ್ಟೆ. ಹಾಂ, ಜಯಲಕ್ಷ್ಮಿಯ ಅಕ್ಕ ಕೌಲಿ ಸೋಮಕ್ಕ ಮತ್ತವರ ತಂಗಿಯರನ್ನೆಲ್ಲ ನಮ್ಮ ಕಂಪೆನಿ ಮಾಲೀಕರು ಅತಿಥಿ ಕಲಾವಿದರಾಗಿ ಬಂದು ನಟಿಸಬೇಕೆಂದು ಒತ್ತಾಯಿಸಿದರು. ಅವರೆಲ್ಲ ಸೇರಿ ‘ಕೊಂಡು ತಂದ ಗಂಡ’ ನಾಟಕವಾಡಿದರೆಂದು ಅನಿಸುತ್ತದೆ. ಅಂತೂ ಹೌಸ್‌ಫುಲ್ ಕಲೆಕ್ಷನ್ ಆಯಿತು ನೋಡಿ!

ಇನ್ನು ಬೆನಿಫಿಟ್ ಶೋ ಮಾಡಿದರೆ ಕಂಪೆನಿಗೆ ಲಾಭವಾಗಬಹುದು ಎಂದು ಎಲ್ಲರೂ ಎಣಿಸಿದ್ದರು. ಎಣಿಕೆಯಂತೆ ಆಯಿತು ಕೂಡ. ಕಂಚಿ ಥಿಯೇಟರ್ ಅವರಲ್ಲಿ ವಿನಂತಿಯಿಟ್ಟು, ಹದಿನೈದು ದಿನಗಳ ಕಾಲಾವಕಾಶ ಕೇಳಿದರು. ಏಕೆಂದರೆ, ನಾಟಕಕ್ಕೆ ಸಂಬಂಧಿಸಿದ ಕರಪತ್ರವನ್ನು ಊರೂರಿನ ಮನೆಮನೆಗೆ ತಲುಪಿಸಬೇಕು. ಕಛೇರಿಗಳಿಗೆ, ಬೇರೆ ಬೇರೆ ಇಲಾಖೆಗಳಿಗೆ, ಮಾರುಕಟ್ಟೆಗೆ ಎಲ್ಲಕೂ ಕೊಟ್ಟು ಪ್ರಚಾರ ಮಾಡುವುದೇನು ಒಂದೇ ಉಸಿರಿನಲ್ಲಿ ನಾ ಹೀಗೆ ಹೇಳಿದಷ್ಟು, ನೀವು ಹೀಗೆ ಒಂದೇ ಓಘದಲ್ಲಿ ಓದಿದಷ್ಟು ಸುಲಭವೇ!

ಆಗಿನ ಜನರ ಮಾನವೀಯತೆ ನನಗೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಬಡ ಕಲಾವಿದರು ಕಷ್ಟದಲ್ಲಿದ್ದಾರೆ, ಹೊಸ ಕಂಪೆನಿ ನಷ್ಟದಲ್ಲಿದೆ ಎಂದಾಗ ಜನರೆಲ್ಲ ಸಹಾಯ ಹಸ್ತ ಚಾಚುತ್ತಿದ್ದರು. ‘ಕೊಂಡು ತಂದ ಗಂಡ’ ಇದೊಂದೇ ನಾಟಕ ಮೂರು ಶೋ ನಡೆಯಿತು. ಮಧ್ಯಾಹ್ನ ಮೂರುವರೆಗೆ ಒಂದು, ಸಂಜೆ ಆರೂವರೆಗೆ ಎರಡನೆಯದ್ದು ಮತ್ತು ರಾತ್ರಿ ಒಂಭತ್ತೂವರೆಗೆ ಕೊನೆಯ ಶೋ. ಅಂತೂ ಭರ್ಜರಿಯಾಗಿ ಮುಗಿಯಿತು. ಇನ್ನೂ ಟಿಕೇಟ್ ಬೇಕು, ನಾವು ನಾಟಕ ನೋಡಬೇಕು ಒಳಗೆ ಬಿಡಿ ಎಂದು ಜನರ ಕೂಗು ಒಳತನಕವೂ ಕೇಳುತ್ತಿತ್ತು. ಒಟ್ಟಿನಲ್ಲಿ, ಜನಸಾಗರವೇ ಹರಿದುಬಂದಿತ್ತು ಎನ್ನಿ.

ಅತಿಥಿ ಕಲಾವಿದರಾಗಿ ಬಂದವರಿಗೆ ಮೂರು ದಿನಗಳಿಗೆ ಗೌರವ ಧನವನ್ನು ನೀಡಬೇಕಿತ್ತು. ಅದರಲ್ಲಿ ಹೋಗಲು, ಬರಲು ಎರಡು ದಿನಗಳು ಮತ್ತೆ ನಾಟಕ ಪ್ರದರ್ಶನದ ಒಂದು ದಿನ. ಎಲ್ಲ ದಿನಗಳಿಗೂ ಸಂಬಳವನ್ನು ನೀಡುವುದು ವಾಡಿಕೆ. ಆದರೆ ಮಾಂಡ್ರೆ ಕವಿಗಳಿಗೆ, ತಲೆವಾನ ಬಿ.ಪಿ.ಸಣ್ಣಪ್ಪನವರೆಂದರೆ ನಾಡಿನ ದಂತಕಥೆಗಳೆಂದೇ ಕಲಾವಿದರು ಭಾವಿಸಿದ್ದರು. ಹಾಗಾಗಿ ಅವರಲ್ಲಿ ನಾವು ದುಡ್ಡು ತೆಗೆದುಕೊಳ್ಳುವುದು ಸರಿಯಲ್ಲವೆಂದು, ಹಾಗೇ ಹೊರಟರು ಅವರು.

ಇತ್ತ ಕೇಳಿ, ಕೊನೆಯ ಶೋ ಆಗುತ್ತಿದ್ದಂತೆ ಮುಗಿಬಿದ್ದ ಜನ ಸಮೂಹ ಕಂಡು ನಮಗಾದ ಖುಷಿ ಹೇಳತೀರದು. ಕೆಲ ಹಿರಿಯ ಕಲಾವಿದರು ಸಂಬಳವಾಗುತ್ತದೆಂದು ಕಂಠಪೂರ್ತಿ ಕುಡಿದಿದ್ದರು. ನಾವು ಸಂಬಳ ಕೈ ಸೇರುವ ಕ್ಷಣವನ್ನು ಕಲ್ಪಿಸಿಕೊಂಡೇ ಸಂಭ್ರಮಿಸುತ್ತಿದ್ದೆವು. ಕತ್ತಲ ಆಗಸಕ್ಕೂ ಆಗ ಕನಸಿನ ಬಣ್ಣ ಹಚ್ಚಿದ್ದೆವು. ಅಷ್ಟು ದಿನಗಳವರೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲಾಗದ ಅಸಹಾಯಕತೆಗೆ ಆಗ ಮುಕ್ತಿ ದೊರಕಿದಂತಿತ್ತು. ದುಡ್ಡಿನ ಮುಖವನ್ನೇ ಕಂಡಿರಲಿಲ್ಲವಲ್ಲಾ, ಸಂಬಳ ಎಂಬುದು ನಮ್ಮೆಲ್ಲರ ಖುಷಿಯನ್ನು ನೂರ್ಮಡಿಸಿತ್ತು.

ನಿದಿರೆಯ ಸುಖದಿಂದ ಜಾರಿ, ಹತ್ತು ಗಂಟೆಯ ಬೆಳಕು ಕಾಣುವ ಹೊತ್ತಿಗೆ ಯುಗ ಕಳೆದಂತಹ ಅನುಭವ. ಸರಿ, ನಿತ್ಯಕರ್ಮಗಳನ್ನೆಲ್ಲ ಮುಗಿಸಿ, ಮಾಲೀಕರ ಬರುವಿಕೆಯನ್ನೇ ಕಾಯುತ್ತಿದ್ದೆವು. ಯಾರೋ ಹೇಳಿದರು, ಸಣ್ಣಪ್ಪನವರು ರಾಮದುರ್ಗಕ್ಕೆ ಹೋಗಿದ್ದಾರೆಂದು. ಬಾಕಿ ಉಳಿಸಿದ್ದ ಸಾಲ ತೀರಿಸಲು ಹೋಗಿರಬಹುದೆಂದು ಎಲ್ಲರೂ ಭಾವಿಸಿದ್ದರು. ಮಧ್ಯಾಹ್ನದ ಹನ್ನೆರಡರ ಸೂರ್ಯ ಅಷ್ಟು ಸುಡುತ್ತಿದ್ದನೋ ಇಲ್ಲವೋ ಸಣ್ಣಪ್ಪನವರು ಯಾವಾಗ ಬರುತ್ತಾರೆಂದು ನೆನೆದೇ, ಮೈ ಬೆವರುತ್ತಿತ್ತು. ಮೂರು ಕಳೆದು ಆರಾದರೂ ಸಣ್ಣಪ್ಪನವರ ಸುಳಿವು ಕಾಣಲಿಲ್ಲ. ಇವತ್ತಲ್ಲದಿದ್ದರೂ ನಾಳೆಗಾದರೂ ಬರುತ್ತಾರಲ್ಲ ಬಿಡು ಎಂದು ನಮ್ಮನ್ನು ನಾವೇ ಸಂತೈಸಿಕೊಂಡಿದ್ದೂ ಆಯಿತು; ಸಂಜೆಯ ನಾಟಕವನ್ನೂ ಆಡಿದ್ದಾಯಿತು.

ಮಾರನೇ ದಿನ, ನಾವೆಲ್ಲರೂ ಏಳುವ ಹೊತ್ತಿಗಾಗಲೇ ಸಾಲಗಾರರೆಲ್ಲ ಸೇರಿದ್ದರು. ಸಹಾಯರ್ಥ ಪ್ರದರ್ಶನ ಆಡಿದ ಮೇಲೆ, ಅದರಲ್ಲೂ ಹೌಸ್‌ಫುಲ್ ಕಲೆಕ್ಷನ್ ಗಳಿಸಿದ ಮೇಲೆ ದುಡ್ಡು ವಾಪಾಸು ಕೇಳಲು ಬರುವುದು ನ್ಯಾಯಸಮ್ಮತ ತಾನೆ. ಈ ಬಾರಿ, ಪಕ್ಕಾ ವ್ಯವಹಾರಸ್ಥರಂತೆ ಅವರೆಲ್ಲ ಕಂಡಿದ್ದರು. ನಾವೂ ಅಷ್ಟೇ, ಕಂಪೆನಿಯ ಸಾಲವನ್ನು ನಮ್ಮ ಮಾಲೀಕರು ಈಗ ತೀರಿಸುತ್ತಾರೆ ನೋಡಿ ಎಂಬ ಭಾವಭಂಗಿಯಲ್ಲೇ ನಿಂತಿದ್ದೆವು. ದುಡ್ಡಿನ ಗಂಟು ಇಟ್ಟುಕೊಂಡಿದ್ದ ಸಣ್ಣಪ್ಪನವರೆಲ್ಲಿ?

ಅಷ್ಟೂ ದುಡ್ಡಿನೊಂದಿಗೆ ನಾಪತ್ತೆಯಾಗಿಬಿಟ್ಟಿದ್ದರು!

ಅಷ್ಟರಲ್ಲೇ ಸಣ್ಣಪ್ಪನವರು ಉಳಿದ ಕಡೆಗಳಲ್ಲಿ ಹೀಗೆ ಹಣವನ್ನು ಲಪಟಾಯಿಸಿ, ಕುಖ್ಯಾತರಾಗಿದ್ದರು. ಮಾಂಡ್ರೆ ಕವಿಗಳು ಅದ್ಹೇಗೆ ನಂಬಿದರೋ? ನಮ್ಮ ಕಂಪೆನಿಗೂ ಹೀಗೆ ಮೋಸ ಮಾಡಿಯೇ ಬಿಟ್ಟರು. ಸಾಲ ನೀಡಿ ಎಂದು ಅವರೆಲ್ಲ ಬೊಬ್ಬಿಡುತ್ತಿದ್ದರೆ ಮಾಂಡ್ರೆ ಕವಿಗಳ ಸ್ಥಿತಿ ಹೇಗಾಗಬೇಡ! ದಿಕ್ಕೆಟ್ಟು, ಕಂಗಾಲಾಗಿ ಕುಸಿದುಬಿಟ್ಟರು. ಊರಜನರಲ್ಲಿ, ಕಲಾವಿದರಲ್ಲಿ ಹಣ ನೀಡುವಂತೆ ಕೇಳದೆ ಬೇರೆ ಮಾರ್ಗವಾದರೂ ಕವಿಗಳಿಗೆ ಏನಿತ್ತು? ತಮಗಾದಷ್ಟನ್ನು ಕೊಟ್ಟು ಕಳುಹಿಸಿದರು.

ಈ ನಡುವೆ ಒಂದಷ್ಟು ಜನ ಕಂಪೆನಿಗೆ ನುಗ್ಗಿ, ತಾವು ಸರಸ್ವತಿ ಅವರ ಸಂಬಂಧಿಕರೆಂದು ಮಾಲೀಕರಿಗೆ ಹೇಳಿದ್ದರು. ಇವರ ಪರಿಚಯವೇ ಇಲ್ಲ ಎಂದು ನಾನು ಹೇಳಿದ ನಂತರ, ಮದುವೆಯಾಗುವಂತೆ ಒಬ್ಬ ಒತ್ತಾಯಿಸಿದ್ದ. ನನ್ನ ಪ್ರತಿಕ್ರಿಯೆಗಾಗಿ ಮಾಲೀಕರು ಕಾಯುತ್ತಿರುವಂತೆ ಅನಿಸಿತು. ಸಾಧ್ಯವಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ, ಎರಡನೇ ಮಾತಿಗೆ ಅವಕಾಶ ಕೊಡದೆ ಹೇಳಿಯೇಬಿಟ್ಟೆ. ಪದದ ಕೊನೆಯ ಅಕ್ಷರ ನನ್ನ ಬಾಯಿಯಿಂದ ಹೊರಬೀಳುವಷ್ಟರಲ್ಲಿ ಮಾಲೀಕರು ಬಂದಿದ್ದವರ ಕೆನ್ನೆಗೆ ಎರಡೇಟು ಕೊಟ್ಟು ಕಳಿಸಿದರು.

(ಹಿಂದಿನ ಕಂತು: ಕಮರಿದ ಕನಸುಗಳು…)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ