ಪಟ್ಟಣಗಳಲ್ಲಿ ಹಲವು ವರ್ಷಗಳು ಇದ್ದು ರೂಢಿಯಾದವರಿಗೆ ಹಳ್ಳಿಗೆ ಹೋಗಿ ಇರುವುದು ಅಷ್ಟು ಸುಲಭ ಅಲ್ಲ.. ಸೌಲಭ್ಯಗಳು ಅಲ್ಲಿ ಸುಧಾರಿಸಿವೆ, ಸಿಗ್ನಲ್ನಿಂದ ಹಿಡಿದು ಹಲವಾರು ವ್ಯವಸ್ಥೆಗಳು ಈಗ ಅಲ್ಲಿವೆಯಾದರೂ ಜನರ ಮನಸ್ಥಿತಿ ಹಾಗೂ ಕೆಲವು ಪ್ರಶ್ನೆಗಳು ಹೈರಾಣು ಮಾಡುತ್ತವೆ! ಆದರೆ ಕ್ರಮೇಣ ಅದನ್ನು ತಮಾಷೆಯಾಗಿ ತೆಗೆದುಕೊಂಡರೆ ನಮ್ಮ ತಲೆ ಹಾಳು ಮಾಡಿಕೊಳ್ಳುವುದು ತಪ್ಪುತ್ತದೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣದ ಹೊಸ ಬರಹ ನಿಮ್ಮ ಓದಿಗೆ
ಭತ್ತ ಬೆಳೆದು, ಅಕ್ಕಿ ಮಾಡಿಸಿ ತಿಂದು ಖುಷಿ ಪಟ್ಟಿದ್ದು ಆಯ್ತು. ನಾವೊಬ್ಬರೇ ಖುಷಿ ಪಟ್ಟರೆ ಆಯ್ತೆ? ಕೆಲವು ಸ್ನೇಹಿತರಿಗೆ ನಾವೇ ಬೆಳೆದ ಅಕ್ಕಿ ಅಂತ ಹೆಮ್ಮೆಯಿಂದ ಕೊಟ್ಟೆವು. ಕೆಲವರು ಖುಷಿಯಿಂದ ತಿಂದು ಹೊಗಳಿದರು. Polished ಅಕ್ಕಿಯನ್ನು ತಿಂದು ರೂಢಿ ಇರುವ ಇನ್ನೂ ಕೆಲವರಿಗೆ ಪೌಷ್ಠಿಕ ಅಕ್ಕಿ ಇಷ್ಟವಾಗಲಿಲ್ಲ. ಅವರು ಅದನ್ನು ತಿನ್ನಲೆ ಇಲ್ಲ ಅಂತಲೂ ತಿಳಿಯಿತು. ಆಮೇಲೆ ಹೀಗೆ ಎಲ್ಲರಿಗೂ ಕೊಡುವುದನ್ನು ಬಿಟ್ಟೆ! free ಅಂತ ಸಿಕ್ಕ ಯಾವುದಕ್ಕೂ ಬೆಲೆ ಇರುವುದಿಲ್ಲ. ನಮ್ಮ ದೇಹವನ್ನೇ ನೋಡಿ, ಅದು ಫ್ರೀ ಆಗಿ ಸಿಕ್ಕಿದೆ. ಆದರೆ ನಾವು ಬೆಲೆ ಕೊಡುವುದು ದುಬಾರಿ ಕಾರುಗಳಿಗೆ, ಬಂಗಲೆಗಳಿಗೆ, ದುಡ್ಡಿಗೆ ಅಲ್ಲವೇ!? ಅದೂ ಅಲ್ಲದೆ ಎಲ್ಲರಿಗೂ ಎಲ್ಲವೂ ಇಷ್ಟ ಆಗಬೇಕು ಅಂತಲೂ ಇಲ್ಲವಲ್ಲ. ಹೀಗಾಗಿ ನಾವು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಇಷ್ಟಪಟ್ಟು ತಿನ್ನುವವರು ಇದ್ದರೆ ಮಾತ್ರ ಕೊಡಬೇಕು ಎಂಬುದನ್ನು ಅವತ್ತಿನಿಂದ ಅರಿತೆ. ಅದರ ಅರಿವು ಮೂಡಿಸಿದ ಆ ಮಹನೀಯರಿಗೆ ನಾನು ಋಣಿ!
*****
ನನ್ನ ಮುಂದಿನ ದಾರಿ ಹಾಗೂ ನಡೆ ಇನ್ನೂ ಅಸ್ಪಷ್ಟವಾಗಿತ್ತು. ಒಂದಿಷ್ಟು ದಿನಗಳು ಹಳ್ಳಿಯಲ್ಲಿ ಇದ್ದು ಅಲ್ಲಿನವರ ಜೊತೆಗೆ ಬೆರೆಯೋಣ ಹಾಗೂ ಅವರನ್ನು ಇನ್ನೂ ಅರಿಯೋಣ ಅನಿಸಿತು. ನನ್ನ ಸ್ವಭಾವಕ್ಕೆ ಹೊಂದಿಕೊಳ್ಳುವ ಹಾಗೂ ನನ್ನ ಹಾಗೆಯೇ ಯೋಚಿಸುವ ಯಾರಾದರೂ ಸಿಕ್ಕಾರೆಯೆ ಅನ್ನುವ ಆಸೆ ಇತ್ತು. ಬೆಂಗಳೂರಿನಿಂದ ಮತ್ತೆ ದಾಸನಕೊಪ್ಪಕ್ಕೆ ಬಂದೆ. ಆಗ ನಾಗಣ್ಣ ನನ್ನ ಜೊತೆಗೆ ಇರಲಿಲ್ಲ. ಅವರಿಗೆ ಕೈ ಫ್ರಾಕ್ಚರ್ ಆಗಿ ಬೆಂಗಳೂರಿನಲ್ಲೇ ಉಳಿದರು.
ಪಟ್ಟಣಗಳಲ್ಲಿ ಹಲವು ವರ್ಷಗಳು ಇದ್ದು ರೂಢಿಯಾದವರಿಗೆ ಹಳ್ಳಿಗೆ ಹೋಗಿ ಇರುವುದು ಅಷ್ಟು ಸುಲಭ ಅಲ್ಲ.. ಸೌಲಭ್ಯಗಳು ಅಲ್ಲಿ ಸುಧಾರಿಸಿವೆ, ಸಿಗ್ನಲ್ನಿಂದ ಹಿಡಿದು ಹಲವಾರು ವ್ಯವಸ್ಥೆಗಳು ಈಗ ಅಲ್ಲಿವೆಯಾದರೂ ಜನರ ಮನಸ್ಥಿತಿ ಹಾಗೂ ಕೆಲವು ಪ್ರಶ್ನೆಗಳು ಹೈರಾಣು ಮಾಡುತ್ತವೆ! ಆದರೆ ಕ್ರಮೇಣ ಅದನ್ನು ತಮಾಷೆಯಾಗಿ ತೆಗೆದುಕೊಂಡರೆ ನಮ್ಮ ತಲೆ ಹಾಳು ಮಾಡಿಕೊಳ್ಳುವುದು ತಪ್ಪುತ್ತದೆ!
ನಾನು ಹಳ್ಳಿಯಲ್ಲಿ ಇರುವ ಬಾಡಿಗೆ ಮನೆಯ ಜೊತೆಗೆ ಇತರ ಹಲವಾರು ಮನೆಗಳು ಇವೆ. ಚಾಳಿನಂತೆ ಇರುವ ಆ ಬಾಡಿಗೆ ಮನೆಗಳ ಸಮುಚ್ಚಯದಲ್ಲಿ ಇರುವ ಇತರರು ಕ್ರಮೇಣ ನನ್ನ ಇರುವನ್ನು ಗಮನಿಸತೊಡಗಿದ್ದರು. ಇವನ್ಯಾರೋ ಹೊಸಬ ಪಟ್ಟಣದಿಂದ ಹಳ್ಳಿಗೆ ಬಂದು ಏನು ಮಾಡುತ್ತಿದ್ದಾನೆ ಎಂಬ ಕುತೂಹಲದಿಂದ ನೋಡುತ್ತಿದ್ದರು. ಅವತ್ತು ಒಬ್ಬರು ಸಿಕ್ಕರು..
ಇಲ್ಲೇ ಯಾಕ್ ಅದೀರಿ?
ಇಲ್ಲೆ ಹತ್ತರದಾಗ ನನ್ನ ಹೊಲಾ ಅದರಿ. ಅದಕ್ಕ ಇಲ್ಲೇ ಬಾಡಿಗಿ ಇದ್ದೀನಿ..
ಒಬ್ರ ಇರ್ತೀರಿ ಇಲ್ಲೆ?
ಹೌದು ರಿ ಅಂದೆ. ಹೆಂಡತಿ ಮಗಳನ್ನು ಬೆಂಗಳೂರಿನಲ್ಲಿ ಬಿಟ್ಟು ಇಲ್ಲಿ ಹೊಲ ಮಾಡುತ್ತಿರುವ ನಾನು ಹುಚ್ಚನಂತೆಯೇ ಅವರಿಗೆ ಕಂಡಿರಬೇಕು.
ಏನ್ ಬೆಳದೀರಿ ಈ ಸಲ?
ಭತ್ತ ಹಾಕಿದ್ವಿ..
ಎಷ್ಟು ಬಂತು ?
25 ಚೀಲ
ಎಷ್ಟು ಏಕರೇಕ್ಕ?
ಹೆಚ್ಚು ಕಡಿಮೆ ೩ ಎಕರೆ…
ಏ ಭಾಳ ಕಡಿಮೆ ಆತು. ಅಲ್ಲಿಂದ ಇಲ್ಲಿಗೆ ಬಂದು ಬರೆ ಅಷ್ಟು ಭತ್ತ ಬೆಳದು ಹೆಂಗ ಪೂರೈಸ್ಟೈತಿ? Loss ಅಲ್ಲಾ ನಿಮಗ?
ಅವರು ಹೇಳಿದ್ದು ನಿಜವೇ ಆಗಿದ್ದರೂ ಪ್ರಥಮ ಬಾರಿಗೆ, ಏನೂ ಅನುಭವವೇ ಇರದ ಒಬ್ಬ, ಹೆಚ್ಚು ಕರ್ಚಿಲ್ಲದೆ ಇಷ್ಟೊಂದು ಚೀಲ ಭತ್ತ ಬೆಳೆದಿದ್ದಕ್ಕೂ, ಯಾವಾಗಲೂ ಬೆಳೆಯುವ ರೈತರು chemical ಹಾಕಿ ಬೆಳೆಯುವದಕ್ಕೂ ದೊಡ್ಡ ವ್ಯತ್ಯಾಸ ಇರುತ್ತೆ. ಅದನ್ನು ಪ್ರೋತ್ಸಾಹಿಸುವ ಬದಲು ಹೀಗೆ ಅವರು ಹೇಳಿದ್ದು ನನಗೆ ಬೇಜಾರು ತಂದಿತ್ತು.
ನಾನೊಬ್ಬ spiritual farmer, ನನಗೆ ಇದರಲ್ಲಿಯೇ ದುಡ್ಡು ಮಾಡಬೇಕು ಅನ್ನೋದಕಿಂತ ವಿಭಿನ್ನವಾಗಿ ಬೆಳೆಯಬೇಕು, ಪ್ರಯೋಗಗಳನ್ನು ಮಾಡಿ ಇಲ್ಲೊಂದು ರೈತ ಬಳಗ ಸೃಷ್ಟಿಸಬೇಕು, ಸಾವಯವ ಕೃಷಿ ನನ್ನ ಧ್ಯೇಯ ಹಾಗೆ ಹೀಗೆ ಅಂತ ಹೇಳಿದರೂ ಆ ಮನುಷ್ಯ, ನೀನು ಮಾಡಿದ್ದು waste of time ಅನ್ನುವ ತರಹ ತಲೆ ಅಲ್ಲಾಡಿಸಿ ಲೋಚ್ ಲೋಚ್ ಅಂತ ತಮ್ಮ ಅಸಹನೆ ಹೊರಹಾಕುತ್ತ ಹೊರಟು ಹೋದರು. ಇನ್ನುಮೇಲೆ ಇಂತವರಿಗೆಲ್ಲ ಉತ್ತರಿಸುವ ಗೋಜಿಗೆ ಹೋಗಲೇಬಾರದು ಅಂತ ಅಂದುಕೊಂಡೆ.
ಮರುದಿನ ಅಲ್ಲೊಬ್ಬ ಮೇಷ್ಟ್ರು ಸಿಕ್ಕರು. ನನ್ನ ಪರಿಚಯ ಆದ ಮೇಲೆ ಮತ್ತೆ ಅವೆ ಪ್ರಶ್ನೆ ಕೇಳಿದರು. ನಾನು ಈ ಸರ್ತಿ ಸ್ವಲ್ಪ ಜಾಣ್ಮೆ ವಹಿಸಿ ಇಪ್ಪತ್ತೈದು ಚೀಲ ಬೆಳೆದಿದ್ದು ಒಂದು ಎಕರೆಯಲ್ಲಿ ಅಂತ ಸುಳ್ಳು ಹೇಳಿದೆ. ಇಲ್ಲವಾದರೆ ಅವರ ಉಪದೇಶ ಯಾರು ಕೇಳಬೇಕು ಅಂತ. ಆದರೆ ಆ ಮೇಷ್ಟ್ರು ಅದಕ್ಕೂ ತಲೆ ಆಡಿಸಿ, ಏ ಭಾಳ ಕಡಿಮೆ ಆತು ಬಿಡ್ರಿ ಅನ್ನಬೇಕೆ! ನಾನು ಸಹನೆ ಕಳೆದುಕೊಂಡೆ.
ನಿಮ್ಮದು ಹೊಲ ಐತೆನ್ರಿ? ನೀವು ಖುದ್ದಾಗಿ ಏನೇನು ಬೆಳೆದೀರಿ ಅಂತ ಅವರಿಗೆ ವಾಪಸ್ಸು ಪ್ರಶ್ನೆ ಮಾಡಲು ಶುರು ಮಾಡಿದೆ. ತಮ್ಮ ಜೀವಮಾನದಲ್ಲಿ ಈಗಾಗಲೇ ಏನನ್ನೂ ಒಂದು ಸಲವೂ ಬೆಳೆಯದ ಅವರು ನನಗೇ ಹೇಳಲು ಬಂದಿದ್ದರು. ನಾನು ವಿಚಾರಿಸತೊಡಗಿದಾಗ ಮೆತ್ತಗೆ ಅಲ್ಲಿಂದ ಕಾಲ್ಕಿತ್ತರು. ಇಂಥವರು ಎಲ್ಲಾ ಕಡೆಯೂ ಸಿಗುತ್ತಾರೆ. ಅವರನ್ನು ಹೇಗೆ ಸಂಭಾಳಿಸಬೇಕು ಅಂತ ಹಳ್ಳಿಗೆ ಹೋಗುವ ನಮ್ಮಂಥವರು ಕಲಿಯಬೇಕು.
ನಮ್ಮ ದೇಹವನ್ನೇ ನೋಡಿ, ಅದು ಫ್ರೀ ಆಗಿ ಸಿಕ್ಕಿದೆ. ಆದರೆ ನಾವು ಬೆಲೆ ಕೊಡುವುದು ದುಬಾರಿ ಕಾರುಗಳಿಗೆ, ಬಂಗಲೆಗಳಿಗೆ, ದುಡ್ಡಿಗೆ ಅಲ್ಲವೇ!? ಅದೂ ಅಲ್ಲದೆ ಎಲ್ಲರಿಗೂ ಎಲ್ಲವೂ ಇಷ್ಟ ಆಗಬೇಕು ಅಂತಲೂ ಇಲ್ಲವಲ್ಲ. ಹೀಗಾಗಿ ನಾವು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಇಷ್ಟಪಟ್ಟು ತಿನ್ನುವವರು ಇದ್ದರೆ ಮಾತ್ರ ಕೊಡಬೇಕು ಎಂಬುದನ್ನು ಅವತ್ತಿನಿಂದ ಅರಿತೆ. ಅದರ ಅರಿವು ಮೂಡಿಸಿದ ಆ ಮಹನೀಯರಿಗೆ ನಾನು ಋಣಿ!
ನನಗೆ ಇನ್ನೂ ನನ್ನಂತೆ ಯೋಚಿಸುವವರು ಆ ಹಳ್ಳಿಯಲ್ಲಿ ಸಿಕ್ಕಿರಲಿಲ್ಲ. ಹಾಗೆಯೇ ಒಂದು ದಿನ ನನ್ನ scooter ಗೆ ಪೆಟ್ರೋಲ್ ಹಾಕಿಸಲು ಹೋಗುವಾಗ ಮಧ್ಯದಲ್ಲಿ ಒಂದು ಸುಂದರ ತೋಟ ಕಂಡಿತು. ಅಲ್ಲೊಬ್ಬರು ನಿಂತಿದ್ದರು. ಅವರನ್ನು ಮಾತಾಡಿಸಿದಾಗ ಅವರ ಹೆಸರು ದರ್ಶನ ಅಂತ ಗೊತ್ತಾಯ್ತು. ಅವರು ನೋಡಲು ಕಲಿತವರಂತೆ ಕಂಡರು. ಮಾತಾಡುವಾಗ ಕೂಡ ಹೊಸ ಹೊಸ ವಿಷಯಗಳನ್ನು ಕುರಿತು ಹೇಳುವುದನ್ನು ಕೇಳಿ ನನಗೆ ಖುಷಿಯಾಯ್ತು.
ಬರ್ರಿ ಸರ್ ನಮ್ಮ ತೋಟ ತೋರಿಸ್ತೀನಿ ಆಂತ ಒಳಗೆ ಕರೆದೊಯ್ದರು. ಅಚ್ಚುಕಟ್ಟಾಗಿ ಮಾಡಿದ್ದಾರೆ ಅನಿಸಿತು. ದೊಡ್ಡ ಗೇಟ್ ಹಾಗೂ ಸುತ್ತಲೂ ಒಳ್ಳೆಯ ಬೇಲಿ ಇತ್ತು. ಒಳಗಡೆ ಒಂದು ಸುಸಜ್ಜಿತ ಅನಿಸುವ ಫಾರ್ಮ್ ಹೌಸ್ ಇತ್ತು. ಅದಕ್ಕೆ ಸುತ್ತಲೂ ಕ್ಯಾಮೆರಾ ಕಣ್ಗಾವಲು ಇದ್ದದ್ದು ನೋಡಿ ನನಗೆ ಬಹಳ ಖುಷಿಯಾಯ್ತು. ನಾನೂ ಹೀಗೆ ಮಾಡಬಹುದು ಎಂಬ ಹುರುಪು ಬಂತು. ಅದಕ್ಕೆ ತುಂಬಾ ಖರ್ಚು ಮಾಡಿದ್ದಾರೆ ಅಂತ ದರ್ಶನ್ ಹೇಳಿದರು. ಅದು ಬೇರೆ ಯಾರದೋ ತೋಟ ಅಂತಲೂ, ಇವರು ಅದನ್ನು ನೋಡಿಕೊಳ್ಳುತ್ತಿರುವ ವಿಷಯ ಅವರಿಂದಲೇ ತಿಳಿಯಿತು. ನಾವು ನಮ್ಮ ಹೊಲದಿಂದ ದೂರ ಇರುವಾಗ ಹೀಗೊಬ್ಬರು ಜವಾಬ್ದಾರಿಯಿಂದ ನೋಡಿಕೊಳ್ಳುವವರು ಇದ್ದರೆ ಎಷ್ಟು ಚೆನ್ನ ಅನಿಸಿತು. ಅವರಿಗೆ ನನ್ನ ಹೊಲವನ್ನು ಕೂಡ ತೋರಿಸಿದೆ. ನಾನು ತೋಟ ಮಾಡಿದಾಗ ನಾನಿಲ್ಲದಾಗ ಅವರು ಅದನ್ನು ನೋಡಿಕೊಳ್ಳಲು ಸಾಧ್ಯವೇ ಅಂತ ಕೇಳಿದಾಗ ಅವರು ಈಗಾಗಲೇ ತನಗೆ ಸಾಕಷ್ಟು ಕೆಲಸ ಇದೆ ಆದರೂ ನಿಮ್ಮ ತೋಟ ನೋಡಿಕೊಳ್ಳುವೆ ಅಂತ ಹೇಳಿದಾಗ ಅವರ ಬಗ್ಗೆ ನನಗೆ ಇನ್ನೂ ಭರವಸೆ ಮೂಡಿತು. ಅಂತೂ ಹಳ್ಳಿಯಲ್ಲಿ ನನಗೊಬ್ಬರು support ಮಾಡುವವರಿದ್ದಾರೆ ಅಂತ ಸಮಾಧಾನ ಆಯ್ತು.
ಮರುದಿನ ಅವರು ಫೋನ್ ಮಾಡಿ ವಿಚಾರಿಸಿದರು. ತೋಟದ ಕೆಲಸ ಯಾವಾಗ ಶುರು ಮಾಡುತ್ತೀರಿ ಅಂತ ಕೇಳಿದರು. ನಾನು ಇನ್ನೂ ಸ್ವಲ್ಪ ದಿನಗಳು ಬೇಕಾದೀತು ಅಂದೆ. ಅವರು ತಮ್ಮ ತೋಟದ ಮಾಲೀಕರು ಶಿರಸಿಯಲ್ಲಿ ಇದ್ದಾರೆ ಅಂತಲೂ ಅವರು ತುಂಬಾ ದುಡ್ಡು ಮಾಡಿದ್ದಾರೆ. ನೀವು ಅವರನ್ನು ಒಂದು ಸಲ ಭೇಟಿಯಾಗಿ ಅಂದರು.
ದುಡ್ಡೇ ದೊಡ್ಡಪ್ಪ ಅಂತ ನಂಬುವವರನ್ನು ಆದಷ್ಟು ನಾನು ದೂರವೇ ಇಟ್ಟಿರುತ್ತೇನೆ. ಹೀಗಾಗಿ, ನೋಡೋಣ ಸಧ್ಯಕ್ಕೆ ಆಗಲಿಕ್ಕಿಲ್ಲ ಅಂತ ಹೇಳಿದೆ. ಮತ್ತೆರಡು ದಿನಗಳಲ್ಲಿ ಮತ್ತೆ ಕರೆ ಮಾಡಿದರು.
ಸರ್ ಅವರನ್ನು ಭೇಟಿ ಆಗಿದ್ರ? ಇನ್ನೂ ಯಾಕೆ ಆಗಿಲ್ಲ ಅಂತೆಲ್ಲ ವಿಚಾರಿಸಲುತೊಡಗಿದರು. ನನಗ್ಯಾಕೋ ಇವರು ಸ್ವಲ್ಪ ಹೆಚ್ಚೇ followup ಮಾಡುತ್ತಿದ್ದಾರೆ ಅಂತ ಅನಿಸಿತು. ನಮ್ಮಿಬ್ಬರನ್ನೂ ಭೇಟಿ ಮಾಡಿಸುವ ವಿಚಾರದ ಹಿಂದೆ ಏನೋ ಉದ್ದೇಶ ಅಡಗಿರಬಹುದೆ ಅಂತಲೂ ಅನಿಸಿತು.
ಮುಂದೊಮ್ಮೆ ಸಂಜೆ ಏನೋ ಓದುತ್ತಾ ಕೂತಾಗ ಮತ್ತೆ ಅವರ ಕರೆ ಬಂತು.
ಏನ್ ಮಾಡ್ತಾ ಇದೀರಿ ಸರ್..
ನನಗೆ ತುಂಬಾ ಕೋಪ ಬರ್ತಾ ಇತ್ತು. ಆದರೂ ಅಪಾರ ಸಹನೆಯಿಂದ ಪುಸ್ತಕ ಓದುತ್ತಾ ಇದ್ದೀನಿ urgent ಇಲ್ಲ ಅಂದರೆ ಆಮೇಲೆ ಮಾತಾಡೋಣ ಅಂದೆ..
ಸ್ವಲ್ಪ ಪುಸ್ತಕ ಪಕ್ಕಕ್ಕ್ ಇಟ್ಟು ನಮ್ಮ ಜೊತೆ ಮಾತಾಡಿ ಸರ್.. ಎಂಬ ಅವರ ಮಾತು ನನಗೆ ಸಿಕ್ಕಾಪಟ್ಟೆ ಕೆರಳಿಸಿತು. ಆದರೂ ತೋರ್ಪಡಿಸದೆ, ಆಯ್ತು ದರ್ಶನ್ ಏನಾದ್ರೂ urgent ಇದ್ದರೆ ಖಂಡಿತ ಮಾತಾಡೋಣ ಹೇಳ್ರಿ ಅಂದೆ..
ಹಾಗೆ ಹೇಳಿದಾಗ ಆ ಆಸಾಮಿ, ಇವತ್ತು ಏನು ಅಡಿಗೆ ಮಾಡಿದೀರ? ಏನು ಸ್ಪೆಷಲ್ ಇವತ್ತು… ಅನ್ನುವ ಪ್ರಶ್ನೆಗಳನ್ನು ಕೇಳಿ ನನ್ನ ತಲೆಯ ಬಿಸಿಯನ್ನು ಸರಿಯಾಗಿ ಏರಿಸಿದ. ಈ ಸಲ ನನಗೆ ತಡೆಯಲು ಸಾಧ್ಯವಾಗಲಿಲ್ಲ. ಇಂತದೆಲ್ಲ ಮಾತಾಡೋಕೆ ನನಗೆ ಸಮಯವಿಲ್ಲ ಆಮೇಲೆ ಸಿಗುವೆ ಅಂತ ಹೇಳಿ ಫೋನ್ ಕಟ್ ಮಾಡಿದೆ. ಇವರ್ಯಾಕೊ ನನಗೆ ಸರಿ ಹೋಗಲ್ಲ ಅನಿಸಿತು. ಮತ್ತೆ ಮುಂದೆ ಎರಡು ಮೂರು ಸಲ ಕರೆ ಮಾಡಿದರು. ನಾನು ಅವರಿಗೆ ಈಗ ಸಧ್ಯಕ್ಕೆ ನನಗೆ ಪುರುಸೊತ್ತಿಲ್ಲ ನಿಮ್ಮ ಸಹಾಯ ಬೇಕಾದಾಗ ಹೇಳುವೆ. ಮತ್ತೆ ಮತ್ತೆ ಕರೆ ಮಾಡಬೇಡಿ ಅಂತ ಮೆಸೇಜ್ ಮಾಡಿ ಅವರ ಜೊತೆಗೆ ವ್ಯವಹಾರ ಮಾಡುವುದೇ ಬೇಡ ಅಂತ ಬಿಟ್ಟೆ.
ಜೀವನ ಪಾಠಗಳು ನಾವು ಇರುವ ತನಕ ಮುಗಿಯುವುದೇ ಇಲ್ಲ. ಯಾರು ಹಿತವರು ನಮಗೆ ಎಂದು ಆರಿಸುವಾಗ ಹೀಗೆ ಅಹಿತಕರ ಸಂಗತಿಗಳು ನಡೆಯುತ್ತವೆ. ಅಥವಾ ಹಳ್ಳಿಯ ಜನಜೀವನ ಗೊತ್ತಿರದ ನಮಗೆ ಇಂತಹ ಸಂಗತಿಗಳನ್ನು ಸಹಿಸಲು ಅಸಾಧ್ಯ ಅನಿಸುತ್ತದೇನೋ. ಆದರೂ ನಾನು ಚಲ ಬಿಡದ ತ್ರಿವಿಕ್ರಮನಂತೆ ಹುಡುಕಾಟ ನಡೆಸಿದ್ದೆ.
ಅಷ್ಟೊತ್ತಿಗೆ ನನ್ನ ಹೊಲದಲ್ಲಿ ಒಂದು ಲೈಟ್ ಕಂಬ ಅಡ್ಡ ಬಂದಿದ್ದು ಗಮನಕ್ಕೆ ಬಂತು. ನಾನು ಯಾವಾಗಲೂ ಹಳ್ಳಿಯಲ್ಲಿ ಇರುತ್ತಿರಲಿಲ್ಲವಾದ್ದರಿಂದ, ಯಾರೋ ಪಕ್ಕದವರು ತಮಗೆ connection ಬೇಕು ಅಂತ ನನ್ನ ಹೊಲದಲ್ಲಿ ಅಡ್ಡಲಾಗಿ ಒಂದು ಕಂಬ ಹಾಕಿಸಿ ಬಿಟ್ಟಿದ್ದರು. ಅದು ಯಾರು ಮಾಡಿದ್ದು ಅನ್ನುವ ಕುರಿತು ಒಬ್ಬೊಬ್ಬರು ಒಂದೊಂದು ಹೇಳಿ ನನ್ನ ತಲೆ ಹಾಳು ಮಾಡಿದ್ದರು.
ಆಗ ಒಬ್ಬ ಎಲೆಕ್ಟ್ರಿಕ್ ಕಂಟ್ರಾಕ್ಟರ್ ಪರಿಚಯ ಆದರು. ಅವರ ಸಹಾಯದಿಂದ ಕಂಪ್ಲೈಂಟ್ ಮಾಡಿದರೂ ಕೂಡ ಏನೂ ಪರಿಹಾರ ಸಿಗಲಿಲ್ಲ. ವಿದ್ಯುತ್ ಇಲಾಖೆಯ ಸಿಬ್ಬಂದಿಗೆ ಹೇಳಿದರೆ ಅದನ್ನು ತೆಗೆಸಿ ಬೇರೆ ಕಡೆಗೆ ಹಾಕಿಸುವುದಕ್ಕೆ 20 ಸಾವಿರ ಕೊಡಬೇಕು ಅಂತ ಬೇಡಿಕೆ ಇಟ್ಟ. ಇದೊಳ್ಳೆ ಕತೆ ಆಯ್ತಲ್ಲ! ನೀವೇ ಇದನ್ನು ನನಗೆ ಹೇಳದೆ ಕೇಳದೆ ಅಡ್ಡಲಾಗಿ ನನ್ನ ಹೊಲದಲ್ಲಿ ಹಾಕಿ, ಈಗ ಅದನ್ನು ತೆಗೆಯಲು ದುಡ್ಡು ಕೆಳುತ್ತೀರಲ್ಲ ಇದೆಂತ ನ್ಯಾಯ ಅಂದೆ. ಆ ಸಿಬ್ಬಂದಿ ಬೇರೆ ಯಾರೋ ಒಂದಿಷ್ಟು ಹುಡುಗರನ್ನು ಕರೆದುಕೊಂಡು ಬಂದಿದ್ದ. ಅವರು private company ಯವರು ಅಂತಲೂ, ಅವರೆ ಕಂಬವನ್ನು ತೆಗೆದು ಬೇರೆ ಕಡೆ ಹಾಕಿಕೊಡುತ್ತಾರೆ ಅಂತ ಹೇಳಿದರು. ಅವರಲ್ಲಿ ಒಬ್ಬನಂತೂ ಮಟ ಮಟ ಮಧ್ಯಾಹ್ನವೆ ಎಣ್ಣೆ ಹಾಕಿದ್ದ. ಆ ಸಿಬ್ಬಂದಿ ಬೇರೆಯವರ ಬಳಿ ಕಂಬ ಹಾಕಿಸಿ ನನ್ನಿಂದ ಒಂದಿಷ್ಟು ದುಡ್ಡು ಮಾಡುತ್ತಾನೆ ಆಂತ ನನಗೆ ಅನಿಸಿತು. ಅಲ್ಲೊಂದು ವ್ಯವಸ್ಥಿತ ದಂಧೆ ಇರುವ ಸಂಶಯ ದಟ್ಟವಾಯ್ತು.
ಸದ್ಯಕ್ಕಂತೂ ಕಂಬ ತೆಗೆಸುವ ಖರ್ಚು ಬೇಡ ಅಂತ ಅವರನ್ನು ಸಾಗ ಹಾಕಿದೆ. ಆದರೆ ನಾನು ಬೆಂಗಳೂರಿನಲ್ಲಿ ಇರುವಾಗ ಇಂತಹ ಘಟನೆಗಳು ನಡೆಯದಂತೆ ಹಾಗೂ ನನ್ನ ಹೊಲವನ್ನು ಅಲ್ಲಿಂದಲೇ ಕಾಯಲು cctv camera ಯಾಕೆ ಹಾಕಬಾರದು ಎಂಬ ಯೋಚನೆ ಬಂತು. ದರ್ಶನ ಅವರ ತೋಟದಲ್ಲಿ ನೋಡಿದ್ದೆನಲ್ಲ. ಆದರೆ ಅವರನ್ನು ಅದರ ಕುರಿತು ವಿಚಾರಿಸುವ ಪ್ರಶ್ನೆಯೇ ಇರಲಿಲ್ಲ. ಆ ಊರಿನಲ್ಲಿ ಬೇರೆ ಯಾರಾದರೂ ಸಿಸಿಟಿವಿ ಅಳವಡಿಸುವವರು ಸಿಗುವರೆ ಎಂದು ವಿಚಾರಿಸಲು ತೊಡಗಿದೆ.
(ಮುಂದುವರಿಯುವುದು…)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
ಹಳ್ಳಿಯ ಜೀವನದ ಹೊಸ ಹೊಸ ಅನುಭವಕ್ಕೆ ತೆರೆದುಕೊಳ್ಳುತ್ತಿದ್ದೀರಿ, ನೀವು ಹಂಚಿಕೊಳ್ಳುತ್ತಿರುವ ಈ ಅನುಭವ ನಮಗೆ ಓದಲು ತುಂಬ ಖುಷಿಯಾಗುತ್ತಿದೆ. ನಿಮ್ಮ ಹಾಗೆ ಯೋಚಿಸುವ ಮನಸ್ಥಿತಿಯುಳ್ಳವರು ಅಲ್ಲಿ ಸ್ವಲ್ಪ ದಿನದಲ್ಲಿ ಖಂಡಿತವಾಗಿ ಸಿಗಬಹುದು ಅನ್ನುವ ಬಲವಾದ ನಂಬಿಕೆ ನನ್ನದು.
ಗದಗ ಅವರೆ, ಓದಿ ಪ್ರೋತ್ಸಾಹಿಸುತ್ತಿರುವ ತಮಗೆ ಧನ್ಯವಾದಗಳು! ಹೌದು ನಮ್ಮ ಹಾಗೆ ಯೋಚಿಸುವವರು ಎಲ್ಲ ಕಡೆ ಸಿಕ್ಕೆ ಸಿಗುತ್ತಾರೆ. ಕೆಲವರು ಇದ್ದಕ್ಕಿದ್ದ ಹಾಗೆಯೇ ಕಳಚಿಕೊಂಡೂ ಹೋಗುತ್ತಾರೆ! ಅದುವೇ ಜೀವನ ಅಲ್ಲವೇ!? ????????