ಒಂದುವೇಳೆ ಬೆಂಗಳೂರು ಸಮುದ್ರಮಟ್ಟಕ್ಕಿಂತ ಒಂದು ಮುನ್ನೂರು ಮೀಟರ್ ಕೆಳಗಿದ್ದಿದ್ದರೆ? ಅರಬ್ಬೀ ಸಮುದ್ರದ ಮೂಲಕ ಬಂದ ಗಾಳಿ ಪಾಲ್ಘಾಟ್ ಗ್ಯಾಪಿನ ಕಾರಣ ಪಶ್ಚಿಮ ಘಟ್ಟಗಳಿಗೆ ಅಪ್ಪಳಿಸದೇ ಊಟಿ ತಲುಪಿ ಅಲ್ಲಿ ತಂಪುಗೊಂಡು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿ ಈಗಿನ ಎತ್ತರಕ್ಕೆ ತಡೆಯಿರದ ಕಾರಣ ಮುಂದೆ ಹೋಗಿಬಿಡುತ್ತಿತ್ತು. ಈಗಿನ ಅತ್ಯುತ್ತಮ ಹವಾಮಾನ ಇರುತ್ತಲೇ ಇರಲಿಲ್ಲ. ಹೈದರಾಲಿ ಮತ್ತು ಟಿಪ್ಪು ಲಾಲ್‌ಬಾಗ್ ನಿರ್ಮಿಸುತ್ತಲೇ ಇರಲಿಲ್ಲ. ಮೈಸೂರು ಅರಸರಿಗೆ ಪ್ರಿಯವಾದ ಜಾಗವಾಗುತ್ತಲೇ ಇರಲಿಲ್ಲ. ಬ್ರಿಟಿಷರಿತೆ ತಮ್ಮ ಊರನ್ನು ನೆನಪಿಸುವ ಪ್ರದೇಶವೂ ಆಗುತ್ತಿರಲಿಲ್ಲ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

ಚಿಕ್ಕವನಿದ್ದಾಗಿಲಿಂದನೂ ತಿರುಗೋದು ಎಷ್ಟು ಇಷ್ಟವೋ ಭೂಪಟವನ್ನು ನೋಡುತ್ತಾ ಮನಸ್ಸಿನಲ್ಲೇ‌ ಪ್ರಯಾಣ ಮಾಡುತ್ತಾ ಕಳೆದು ಹೋಗುವುದೂ ಅಷ್ಟೇ ಇಷ್ಟವಾಗಿತ್ತು. ಐದನೇ ತರಗತಿಯಲ್ಲಿದ್ದಾಗ ನನ್ನ ಉಪನಯದ‌ ಸಮಯದಲ್ಲಿ ನನ್ನ ಸೋದರ ಮಾವ ನನಗೆ Orient Longman ಭೂಪಟವೊಂದನ್ನು ಕೊಟ್ಟಿದ್ದರು. ಅದು ದಶಕಗಳ ಕಾಲ ನನ್ನ ಆತ್ಮೀಯ ಸಂಗಾತಿಯಾಗಿತ್ತು. ಅದೆಷ್ಟೋ ಬಾರಿ ಅದನ್ನು ನೋಡುತ್ತಾ ನನ್ನದೇ ಕಾಲ್ಪನಿಕ ಪ್ರಪಂಚದಲ್ಲಿ ತೇಲಿಹೋಗುತ್ತಿದ್ದೆ. ಮುಂದೆ ನಾನು ಭೇಟಿಕೊಟ್ಟ ಎಷ್ಟೋ ಜಾಗಗಳನ್ನು ಅದಾಗಲೇ ಭೂಪಟದಲ್ಲಿ ನೋಡಿ ಮುಗಿಸಿದ್ದೆ.

ಒಂದು ಪ್ರದೇಶದ ಆಹಾರ, ವಿಚಾರ, ಸಂಸ್ಕೃತಿ, ರಾಜಕೀಯ ಇತ್ಯಾದಿ ಬಹುಮುಖ್ಯ ಸಂಗತಿಗಳಲ್ಲಿ ಆ ಪ್ರದೇಶದ ಭೌಗೋಳಿಕತೆ ಬೀರುವ ಪ್ರಭಾವ ಬಹಳ ಮಹತ್ವದ್ದು. ಹಾಗೆ ನೋಡಿದರೆ ಆ ಪ್ರದೇಶದ ಭೌಗೋಳಿಕತೆಗೆ ಅನುಗುಣವಾಗಿಯೇ ಆಹಾರ, ಉಡುಪು ಇತ್ಯಾದಿಗಳು ಬಳಕೆಗೆ ಬಂದಿರುವುದು. ಆದರೆ ರಾಜಕೀಯ? ಅದೂ ಕೂಡ ಭೌಗೋಳಿಕತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಅದು ಹವಾಮಾನ, ಮಳೆ, ಬೆಳೆ, ನದಿ, ಬೆಟ್ಟಗಳನ್ನು ಒಳಗೊಂಡ ಪ್ರಾಕೃತಿಕ ಭೌಗೋಳಿಕತೆಯೇ ಆಗಿರಬಹುದು ಅಥವಾ ನೆರೆಯ ದೇಶಗಳು, ವಿದೇಶೀ ಸಂಸ್ಕೃತಿಯ ಪ್ರಭಾವದಿಂದ ಉಂಟಾದ ರಾಜಕೀಯ ಭೌಗೋಳಿಕತೆಯೇ ಇರಬಹುದು. ಅದಕ್ಕೇ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ Geopolitics ಅನ್ನುವುದು ಬಹುಮುಖ್ಯವಾದ ಸಂಗತಿಯಾಗಿದೆ.

ಒಂದೆರಡು ಉದಾಹರಣೆ ಹೇಳುತ್ತೇನೆ, ಒಂದುವೇಳೆ ಬೆಂಗಳೂರು ಸಮುದ್ರಮಟ್ಟಕ್ಕಿಂತ ಒಂದು ಮುನ್ನೂರು ಮೀಟರ್ ಕೆಳಗಿದ್ದಿದ್ದರೆ? ಅರಬ್ಬೀ ಸಮುದ್ರದ ಮೂಲಕ ಬಂದ ಗಾಳಿ ಪಾಲ್ಘಾಟ್ ಗ್ಯಾಪಿನ ಕಾರಣ ಪಶ್ಚಿಮ ಘಟ್ಟಗಳಿಗೆ ಅಪ್ಪಳಿಸದೇ ಊಟಿ ತಲುಪಿ ಅಲ್ಲಿ ತಂಪುಗೊಂಡು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿ ಈಗಿನ ಎತ್ತರಕ್ಕೆ ತಡೆಯಿರದ ಕಾರಣ ಮುಂದೆ ಹೋಗಿಬಿಡುತ್ತಿತ್ತು. ಈಗಿನ ಅತ್ಯುತ್ತಮ ಹವಾಮಾನ ಇರುತ್ತಲೇ ಇರಲಿಲ್ಲ. ಹೈದರಾಲಿ ಮತ್ತು ಟಿಪ್ಪು ಲಾಲ್‌ಬಾಗ್ ನಿರ್ಮಿಸುತ್ತಲೇ ಇರಲಿಲ್ಲ. ಮೈಸೂರು ಅರಸರಿಗೆ ಪ್ರಿಯವಾದ ಜಾಗವಾಗುತ್ತಲೇ ಇರಲಿಲ್ಲ. ಬ್ರಿಟಿಷರಿತೆ ತಮ್ಮ ಊರನ್ನು ನೆನಪಿಸುವ ಪ್ರದೇಶವೂ ಆಗುತ್ತಿರಲಿಲ್ಲ. ಕರ್ನಾಟಕದ ಒಂದು ಸಾಧಾರಣ ಜಿಲ್ಲಾ ಕೇಂದ್ರವಾಗಿರುತ್ತಾ ಇತ್ತು. ಈಗಿರುವ ಅಂತಾರಾಷ್ಟ್ರೀಯ ಖ್ಯಾತಿ, ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಸರು ಯಾವುದೂ ಇರ್ತಾ ಇರಲಿಲ್ಲ. ಮೈಸೂರಿಗೋ ಇಲ್ಲಾ ಕರ್ನಾಟಕದ ರಾಜಧಾನಿ ಯಾವುದಾಗಬೇಕೆಂದು ಚರ್ಚಿಸುವಾಗ ಮುನ್ನೆಲೆಗೆ ಬಂದ ಹೆಸರುಗಳಲ್ಲಿ ಒಂದಾಗಿದ್ದ ದಾವಣಗೆರೆಗೋ ಆ ಪಟ್ಟ ಸಿಗುತ್ತಾ ಇತ್ತು.

ಕೆಲ ತಿಂಗಳ ಹಿಂದೆ ನನ್ನ ಗೆಳೆಯ ವಿನಯ್ ಟಿಮ್ ಮಾರ್ಷಲ್ ಅವರು ಬರೆದ Prisoners of Geography ಮತ್ತು Power of Geography ಓದಲು ಹೇಳಿದ. ಹೆಸರು ಕೇಳಿದ ಕೂಡಲೇ ಪುಸ್ತಕದಲ್ಲಿರಬಹುದಾದ ವಿಷಯಗಳ ಬಗ್ಗೆ ಊಹಿಸಿದೆ. ಕೂಡಲೇ ಎರಡೂ ಪುಸ್ತಕಗಳನ್ನು ಆನ್‌ಲೈನ್ ಮೂಲಕ ತರಿಸಿದೆ. ಅಲ್ಲಿಂದ ಒಂದೊಂದೂ ಅಧ್ಯಾಯಗಳನ್ನೂ ಅತೀವ ಆಸಕ್ತಿಯಿಂದ ಓದಿದ್ದೇನೆ. ಅವರ ಇನ್ನೊಂದು ಪುಸ್ತಕ Power of Geography ಓದಲು ಇನ್ನೂ ಶುರುಮಾಡಿಲ್ಲ.

ಮೊದಲು ಇದ್ದ ಅಧ್ಯಾಯ ರಷ್ಯಾದ ಬಗ್ಗೆ. ಅದನ್ನು ಓದಿದರೆ ರಷ್ಯಾ ಯುಕ್ರೇನ್ ಯುದ್ಧಕ್ಕೆ ಕಾರಣವೇನೆಂದು ಬಹುಮಟ್ಟಿಗೆ ಗೊತ್ತಾಗುತ್ತದೆ. ಇಲ್ಲಿರುವ ಒಂದು ಅಧ್ಯಾಯವಾದ ರಷ್ಯಾದ ಕುರಿತಾಗಿಯೇ ನನ್ನ ಮಾತುಗಳಲ್ಲಿ ಹೇಳುವುದಾದರೆ –

ಪ್ರಪಂಚದಲ್ಲೇ ದೊಡ್ಡ ದೇಶ ಯಾವುದು ಅನ್ನೋ ಪ್ರಶ್ನೆಗೆ ರಷ್ಯಾ ಎಂಬ ಉತ್ತರ ಐದನೇ ತರಗತಿಯ ಮಗುವಿಗೂ ಗೊತ್ತಿರುತ್ತದೆ. ಈ ರಷ್ಯಾ ಅನ್ನುವ ದೇಶ ವಿಸ್ತೀರ್ಣದಲ್ಲಿ ಹೆಚ್ಚು ಕಮ್ಮಿ ಭಾರತದ ಐದುವರೆ ಪಟ್ಟು, ಚೈನಾ ಮತ್ತು ಅಮೆರಿಕಾದ ಎರಡು ಪಟ್ಟು ದೊಡ್ಡದಾಗಿದೆ. ದೇಶ ದೊಡ್ಡದಾದರೂ ಅದಕ್ಕಿರುವ ಭೌಗೋಳಿಕ ಅನಾನುಕೂಲತೆಗಳು ಒಂದೆರಡಲ್ಲ. ಅತ್ಯಂತ ಶೀತಲವಾದ ಸೈಬೀರಿಯಾ, ಅಭಿವೃದ್ಧಿಗೆ ಪೂರಕವಾಗುವ ಖನಿಜ ಸಂಪತ್ತಿನ ಕೊರತೆ, ಉತ್ತಮವಾದ ಬಂದರುಗಳು, ಭೀಮಾಕಾರದ ದೇಶದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಲು ಬೇಕಾಗುವ ಅನಾನುಕೂಲತೆ ಇತ್ಯಾದಿ.

ರಷ್ಯಾದ ರಾಜಧಾನಿ ಮಾಸ್ಕೋದಿಂದ ಪೂರ್ವದ ಮುಖ್ಯನಗರವಾದ ವ್ಲಾಡಿಯೋಸ್ಟೋಕ್ ತಲುಪಲು 8 ಗಂಟೆ ಬೇಕು. ಕಾರಿನಲ್ಲೋ‌ ಇಲ್ಲಾ ರೈಲಿನಲ್ಲೋ ಅಲ್ಲ, ವಿಮಾನದಲ್ಲಿ. ನೆನಪಿಡಿ ತಿರುವನಂತಪುರದಿಂದ ದೆಹಲಿಗೋ ಇಲ್ಲಾ ಬೆಂಗಳೂರಿನಿಂದ ದುಬೈಗೋ ಹೋಗಲು 3 ರಿಂದ 5 ಗಂಟೆ ಸಾಕು. ಜನರ ಸಾಗಾಣಿಕೆ ಸಮಸ್ಯೆಯೇ ಅಲ್ಲ. ಸರಕು ಸಾಗಾಣಿಕೆ? ಯುದ್ಧದ ಸನ್ನಿವೇಶದಲ್ಲಿ ಸೈನ್ಯ ಮತ್ತು ಅದಕ್ಕೆ ಮತ್ತು ಪರಿಕರಗಳ ಸಾಗಾಣಿಕೆ? ಅತ್ಯಂತ ಸವಾಲಿನ ಕೆಲಸವಲ್ಲವಾ?

ಸರಕು ಸಾಗಾಣಿಕೆಯ ವಿಷಯಕ್ಕೆ ಬರೋಣ. ಅಂದಿಗೂ ಇಂದಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತೀ ಹತೀ ಹೆಚ್ಚಿನ ಸರಕುಸಾಗಾಣಿಕೆಯಾಗುವುದು ಜಲ ಮಾರ್ಗದ ಮೂಲಕ. ನೆಲ ಮಾರ್ಗ ಮತ್ತು ವಾಯು ಮಾರ್ಗಗಳಿಗೆ ಹೋಲಿಸಿದರೆ ಜಲಮಾರ್ಗವು ಅತ್ಯಂತ ಕಮ್ಮಿ ವೆಚ್ಚದಾಯಕವಾದುದು ಮತ್ತು ವ್ಯಾಪಕ ಬಳಕೆಯಲ್ಲಿರುವಂಥದ್ದು. ನಮ್ಮ ಮಂಗಳೂರೋ ಇಲ್ಲಾ ಚೆನ್ನೈಯೋ ಅಥವಾ ಯಾವುದೇ ಬಂದರುಗಳ ತೆಗೆದುಕೊಳ್ಳಿ. ಇವೆಲ್ಲಾ ಇರುವುದು ತೆರೆದ ಸಮುದ್ರದಲ್ಲಿ. ಅಂದರೆ ಆರಾಮಾಗಿ ಮುಖ್ಯ ಅಂತಾರಾಷ್ಟ್ರೀಯ ಜಲಮಾರ್ಗಕ್ಕೆ ಹೋಗಬಹುದು. ಆದರೆ ರಷ್ಯಾ? ಸಾವಿರಾರು ಕಿಲೋಮೀಟರ್ ಉದ್ದದ ಕರಾವಳಿ ಇರುವುದಂತೂ ನಿಜ. ಆದರೆ ಅವುಗಳಲ್ಲಿ 90%ಕ್ಕೂ ಹೆಚ್ಚಿನ ಕಡೆಗಳ ಬಂದರುಗಳನ್ನು ವರ್ಷದ 4 ತಿಂಗಳುಗಳ ಕಾಲ ಬಳಸಲು ಸಾಧ್ಯವಿಲ್ಲ. ಚಳಿಗೆ ಸಮುದ್ರದ ನೀರೆಲ್ಲಾ ಹೆಪ್ಪುಗಟ್ಟಿರುತ್ತದೆ. ವರ್ಷವಿಡಿ ಬಳಸಲು ಯೋಗ್ಯವಾದ ಬಂದರುಗಳಿರುವುದು ರಷ್ಯಾದ ‘ಕಪ್ಪು ಸಮುದ್ರದ’ ಕರಾವಳಿಯಲ್ಲಿ ಮಾತ್ರ. ಅಲ್ಲಿನ ಎಲ್ಲಾ ಬಂದರುಗಳು ಒಂದುಕಾಲದಲ್ಲಿ ಯುಕ್ರೇನಿನ ಭಾಗವಾಗಿದ್ದ ‘ಕ್ರಿಮಿಯಾ’ಗೆ ಬಹಳ ಸಮೀಪದಲ್ಲಿವೆ.

ದೇಶ ದೊಡ್ಡದಾದರೂ ಅದಕ್ಕಿರುವ ಭೌಗೋಳಿಕ ಅನಾನುಕೂಲತೆಗಳು ಒಂದೆರಡಲ್ಲ. ಅತ್ಯಂತ ಶೀತಲವಾದ ಸೈಬೀರಿಯಾ, ಅಭಿವೃದ್ಧಿಗೆ ಪೂರಕವಾಗುವ ಖನಿಜ ಸಂಪತ್ತಿನ ಕೊರತೆ, ಉತ್ತಮವಾದ ಬಂದರುಗಳು, ಭೀಮಾಕಾರದ ದೇಶದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಲು ಬೇಕಾಗುವ ಅನಾನುಕೂಲತೆ ಇತ್ಯಾದಿ.

ಮತ್ತೊಂದು ವಿಷಯಕ್ಕೆ ಬರೋಣ. ಏಷ್ಯಾ ಮತ್ತು ಯುರೋಪಿನ ನೈಸರ್ಗಿಕ ಗಡಿಗಳಲ್ಲಿ ಒಂದು ಯೂರಲ್ ಪರ್ವತ ಶ್ರೇಣಿ ಇನ್ನೊಂದು ಟರ್ಕಿಯಲ್ಲಿನ ಬೋಸ್ಪರಸ್ ಕಾಲುವೆ. ಈ ಕಾಲುವೆ ಎಷ್ಟು ಕಿರಿದಾಗಿದೆ ಅಂದರೆ ಕೆಲವೆಡೆ ಬರೀ ಮುಕ್ಕಾಲು ಕಿಲೋಮೀಟರುಗಳಷ್ಟು ಅಗಲವಾಗಿದೆ. ಕಪ್ಪು ಸಮುದ್ರದ ಯಾವುದಾದರೂ ಒಂದು ಬಂದರಿನಿಂದ ಹೊರಟ ರಷ್ಯಾದ ಒಂದು ಹಡಗು ಟರ್ಕಿಯ ಒಡೆತನದ ‘ಬೋಸ್ಪರಸ್’ ಮತ್ತು ‘ಡ್ಯಾರ್ಡನಲ್ಲಸ್’ ಕಾಲುವೆ ದಾಟದೇ ಮುಖ್ಯ ಸಮುದ್ರಕ್ಕೆ ಬರಲು ಸಾಧ್ಯವೇ ಇಲ್ಲ. ಮನಸ್ಸು ಮಾಡಿದರೆ ಇಡೀ ಇಲ್ಲಿಂದ ರಷ್ಯಾಗೆ ತಲುಪುವ ಜಲಮಾರ್ಗ ಮುಚ್ಚುವುದು ಟರ್ಕಿಗೆ ಕ್ಷಣಮಾತ್ರದ ಕೆಲಸ.

ಅದೇ ರೀತಿ ಬಾಲ್ಟಿಕ್ ಸಮುದ್ರದ ದಂಡೆಯಲ್ಲಿನ ಸೆಂಟ್ ಪೀಟರ್ಸ್‌ಬರ್ಗ್‌ ಬಂದರು ಕೂಡಾ ರಷ್ಯಾಗೆ ಅಷ್ಟೊಂದು ಅನುಕೂಲಕರವಾಗೇನೂ ಇಲ್ಲ. ಡೆನ್ಮಾರ್ಕ್, ಸ್ವೀಡನ್, ಎಸ್ಟೋನಿಯಾ ಇತ್ಯಾದಿ ದೇಶಗಳ ಜಲಪ್ರದೇಶಗಳಿಗೆ ಸಮೀಪದಲ್ಲಿ ಹಾದುಹೋಗಬೇಕಾಗುತ್ತದೆ.

ಅದಕ್ಕೇ ನಾನು ಮೇಲೆ ಹೇಳಿರುವ ಎಲ್ಲಾ ದೇಶಗಳ ಜೊತೆಗಿನ ಸಂಬಂಧ ರಷ್ಯಾಗೆ ಬಹುಮುಖ್ಯವಾದುದು. ಅಲ್ಲದೇ ಈ ಎಲ್ಲಾ ದೇಶಗಳ ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ರಷ್ಯಾ ಹದ್ದಿನ ಕಣ್ಣಿಡಬೇಕಾಗುತ್ತದೆ.

ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಭೌಗೋಳಿಕ ಅನುಕೂಲತೆಗಳು ಮತ್ತು ಅನಾನುಕೂಲತೆಗಳಿರುತ್ತವೆ. ಅವು ಆ ದೇಶದ ಸಂಸ್ಕೃತಿ, ಜನಜೀವನ, ವ್ಯಾಪಾರ ವ್ಯವಹಾರದ ಮೇಲಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಸಂಬಂಧ ಮತ್ತು ವಿದೇಶಾಂಗ ನೀತಿಯ ಜೊತೆಗೂ ಗಾಢವಾದ ಸಂಬಂಧ ಹೊಂದಿರುತ್ತವೆ ಎಂದು ಹೇಳಲು ರಷ್ಯಾದ ಉದಾಹರಣೆ ತೆಗೆದುಕೊಂಡೆ. ಇದೇ ರೀತಿ ಚೈನಾ, ಕೋರಿಯಾ, ಜಪಾನ್, ಆಫ್ರಿಕಾ, ಭಾರತ-ಪಾಕಿಸ್ತಾನ, ಮಧ್ಯಪ್ರಾಚ್ಯ ಇತ್ಯಾದಿಗಳ ಕುರಿತೂ ಅಧ್ಯಾಯಗಳಿವೆ ಇವೆ.

ಈ ವಿಷಯದ‌ ಕುರಿತು ಚಿಕ್ಕಂದಿನಿಂದಲೇ ನನಗಿದ್ದ ಅತೀವ ಆಸಕ್ತಿಯ ಕಾರಣ ನಾನಿದನ್ನು ಧರ್ಮಗ್ರಂಥದಂತೇ ಓದಿದೆ. ನಾನು ನನ್ನ ಜೀವನದಲ್ಲಿ ಓದಿದ ಅದ್ಭುತ ಪುಸ್ತಕಗಳಲ್ಲಿ ಒಂದೆಂದು ಭಾವಿಸುತ್ತೇನೆ. ಆದರೆ ಈ ಪುಸ್ತಕದಲ್ಲಿ ಕೂಡಾ ಕೆಲ ಮಿತಿಗಳು ಕಂಡುಬಂದವು‌. ಕೆಲವು ಭಾಗಗಳನ್ನು ಲೇಖಕರು ಪುಟ ತುಂಬಿಸಲು ಬರೆದಂತೆ ಅನ್ನಿಸಿತು. ಅದೇ ರೀತಿ ಪ್ರಪಂಚದಲ್ಲೇ ಯಾವದೇಶಗಳಿಗೂ ಇರದ ಭೌಗೋಳಿಕ ಅನುಕೂಲತೆಗಳನ್ನು ಹೊಂದಿದ ಮತ್ತು ಆ ದೇಶ ಜಗತ್ತಿನ ಅತ್ಯಂತ ಶಕ್ತಿಯುತ ದೇಶವಾಗಲು ಕಾರಣವಾದ ಅಮೇರಿಕಾದ ಭೌಗೋಳಿಕತೆ ಬಗ್ಗೆ ಹೇಳಬೇಕಾದರೆ ಅಲ್ಲಿನ ಋಣಾತ್ಮಕ ಅಂಶಗಳನ್ನು ಹೇಳಲು ಲೇಖಕರು ಸೋತಿದ್ದಾರೆ ಎಂದು ಅನ್ನಿಸಿತು.

ಭೂಗೋಳ ಮತ್ತು ರಾಜಕೀಯದ ಕುರಿತು ಆಸಕ್ತಿಯುಳ್ಳವರಿಗೆ ಇದು ಬಹಳ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡುತ್ತದೆ. ಇದನ್ನು ಓದಲು ಜಗತ್ತಿನ ವಿವಿಧ ದೇಶಗಳ ಬಗ್ಗೆ, ವಿವಿಧ ಭೂಭಾಗಗಳ ಬಗ್ಗೆ ಪ್ರಾಥಮಿಕ ಮಾಹಿತಿ ಅತೀ ಅವಶ್ಯಕ. ಅಷ್ಟಾಗಿಯೂ ಆಗಾಗ ಭೂಪಟವನ್ನು ನೋಡುವುದು ಅನಿವಾರ್ಯವಾಗುತ್ತದೆ. ಆದರೆ ಖಂಡಿತವಾಗಿಯೂ ಅದ್ಭುತವಾದ ಓದನ್ನು ಕೊಡುತ್ತದೆ. ನಿರೂಪಣೆ ಕೂಡಾ ಎಲ್ಲೂ ಪೂರ್ವಾಗ್ರಹಪೀಡಿತವಾಗಿತದೇ ತಟಸ್ಥವಾಗಿದೆ. ಪುಸ್ತಕದಲ್ಲಿ ಇರುವುದಕ್ಕಿಂತ ಹತ್ತುಪಟ್ಟು ಹೆಚ್ಚು ಹೊಸ ವಿಷಯಗಳ ಬಗ್ಗೆ ತಿಳಿಯಲು ಕುತೂಹಲ ಕೆರಳಿಸುತ್ತದೆ.