“ಮೊದಲೇ ತಂಪಾದ ಧಾರವಾಡದ ನೆಲ,ಜೊತೆಗೆ ಬೇಂದ್ರೆ,ಮನ್ಸೂರ್,ಬಾಳಪ್ಪ, ಪುಣೇಕರ್‌ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ.ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟ.ವಿಮರ್ಶಕರಾಗಿ ಚೆನ್ನಿಯವರು ಪ್ರಸಿದ್ಧರಾದರೂ, ಅವರೊಬ್ಬ ಯಶಸ್ವಿ ಕತೆಗಾರರೂ ಹೌದು. ಆದ್ದರಿಂದ ಕಥಾನಿರೂಪಣೆಯ ಧ್ವನಿ ಈ ಪ್ರಬಂಧಗಳಿಗೆ ಸಹಜವಾಗಿಯೇ ದಕ್ಕಿದೆ. ಲಾಲಿತ್ಯದ ಗುಣವು ಪಡ್ಡೆಯ ದಿನಗಳ ಮುಖ್ಯ ಲಕ್ಷಣವಾದ್ದರಿಂದ, ಈ ಲಲಿತ ಪ್ರಬಂಧಗಳು ಬಹು ಯಶಸ್ವಿಯಾಗಿವೆ”
ಕೆಂಡಸಂಪಿಗೆಯಲ್ಲಿ ಸರಣಿಯಾಗಿ ಮೂಡಿಬಂದಿದ್ದ ವಿಮರ್ಶಕ ರಾಜೇಂದ್ರ ಚೆನ್ನಿಯವರ ಪುಸ್ತಕದ ಕುರಿತು ಕಥೆಗಾರ ವಸುಧೇಂದ್ರ.

“ಪಡ್ಡೆದಿನಗಳು” ಎನ್ನುವ ಪದವೇ ನಮ್ಮಲ್ಲಿ ಹೊಸ ಹರೆಯವನ್ನು ಉಕ್ಕಿಸುವಷ್ಟು ಸಶಕ್ತವಾದದ್ದು. ಆ ದಿನಗಳನ್ನು ಬಹುತೇಕ ಎಲ್ಲಾ ಸಾಹಿತಿಗಳೂ ಮತ್ತೆಮತ್ತೆ ಚಪ್ಪರಿಸಿರುವುದನ್ನು, ಕಳೆದುಕೊಂಡದ್ದಕ್ಕೆ ವಿಷಾದಿಸಿರುವುದನ್ನು ನಾವು ಸಾಹಿತ್ಯದಲ್ಲಿ ಕಾಣುತ್ತೇವೆ. “ಅಲ್ಲೇ ಸುತ್ತಾಡತಾವ ನಮ್ಮ ಖ್ಯಾಲ, ಎಲ್ಲಿ ಹೋದಾವೋ ಗೆಳೆಯಾ ಆ ಕಾಲಾ” ಎಂದು ಬೇಂದ್ರೆ ಪರಿತಪಿಸಿದರೆ, ಲಕ್ಷ್ಮೀನಾರಾಯಣಭಟ್ಟರು “ಎಂತಾ ಹದವಿತ್ತೆ, ಹರಯಕೆ ಏನೋ ಮುದವಿತ್ತೆ” ಎಂದು ಹೇಳಿ ಹೆಣ್ಣಿಗೂ ಪಡ್ಡೆಯ ದಿನಗಳು ಅಷ್ಟೇ ಸಂತೋಷವನ್ನು ಕೊಡುವಂತಹವು ಎಂದು ಸಮರ್ಥಿಸಿದ್ದಾರೆ. ಹಿರಿಯ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರ “ಧಾರವಾಡದ ಪಡ್ಡೆದಿನಗಳು”ಎನ್ನುವ ಈ ಪುಟ್ಟ ಪುಸ್ತಕ ನಮ್ಮ ನೀರೀಕ್ಷೆಯನ್ನು ಯಾವುದೇ ರೀತಿಯಲ್ಲಿಯೂ ಹುಸಿಗೊಳಿಸುವುದಿಲ್ಲ. “ಕಾಲನೆನ್ನುವ ಪಾಪಿ ಕಡೆಗೂ ನಮ್ಮ ಪಡ್ಡೆದಿನಗಳನ್ನು ಕದ್ದು ನಡದೇಬಿಟ್ಟನು” ಎಂದು ವಿಷಾದವನ್ನು ಸೂಚಿಸುತ್ತಲೇ ಚೆನ್ನಿಯವರು ಈ ಪುಸ್ತಕವನ್ನು ಮುಕ್ತಾಯಗೊಳಿಸಿದಾಗ, ಓದುಗರೂ ತಮ್ಮ“ಆ ದಿನಗಳ”ಸಂಭ್ರಮದ ಬಿಂಬವನ್ನು ಲೇಖಕರ ಪಡ್ಡೆಯ ದಿನಗಳ ಕನ್ನಡಿಯಲ್ಲಿ ನೋಡಿಕೊಂಡ ಭಾವವನ್ನು ನೀಡುತ್ತದೆ.

ಪಡ್ಡೆಯ ದಿನಗಳ ತಮಾಷೆಯೆಂದರೆ, ಆ ದಿನಗಳ ಸೊಗಸು, ಸ್ವಾತಂತ್ರ್ಯ ಮತ್ತು ಸೌಂದರ್ಯವು ನಡು ವಯಸ್ಸು ಬಂದ ನಂತರವೇ ತಿಳಿಯುತ್ತದೆ. ಕಾಲೇಜು ಓದುವ ಹೊತ್ತಿನಲ್ಲಿ ಪಾಕೇಟ್‌ ಮೊನಿಗಾಗಿ ಅಪ್ಪನ ಮುಂದೆ ಕೈ ಒಡ್ಡುವುದಕ್ಕೆ ರೋಸಿ ಹೋಗಿ, ಯಾವಾಗ ಕೆಲಸಕ್ಕೆ ಸೇರಿ ಸ್ವಂತ ಗಳಿಸಲು ಶುರುವಿಡುತ್ತೀನೋ ಎನ್ನಿಸುತ್ತಿರುತ್ತದೆ. ಸರಿಯಾಗಿ ಒಬ್ಬ ಹುಡುಗಿಯೊಡನೆಯೂ ಸ್ನೇಹ ಬೆಳೆಸಲು ಸಾಧ್ಯವಾಗದಂತಾಗಿ, ಹೇಗೋ ಮದುವೆಯಾಗಿ ಹೆಣ್ಣನ್ನು ಕಂಡರೆ ಸಾಕು ಅನ್ನಿಸುತ್ತಿರುತ್ತದೆ. ಪರೀಕ್ಷೆ-ಫಲಿತಾಂಶಗಳ ಹಾವಳಿಗೆ ರೇಜಿಗೆ ಹುಟ್ಟಿ ಅವುಗಳಿಂದ ಯಾವಾಗ ತಪ್ಪಿಸಿಕೊಳ್ಳುವೆನೋ ಎಂದು ಮನಸ್ಸು ತುಡಿಯುತ್ತಿರುತ್ತದೆ. ಕೆಲವೇ ದಿನಗಳಲ್ಲಿ ಕೆಲಸವೂ ಸಿಕ್ಕಿ, ಹಣವೂ ದಕ್ಕಿ, ಹೆಣ್ಣೂ ಸಿಕ್ಕು, ಪರೀಕ್ಷೆ-ಫಲಿತಾಂಶಗಳ ಕಿರಿಕಿರಿಗಳೂ ಕಣ್ಮರೆಯಾದ ಹೊತ್ತಿನಲ್ಲಿ “ಎಲ್ಲಿ ಹೋದಾವೋ ಗೆಳೆಯಾ ಆ ಕಾಲಾ” ಅಂತ ಹಪಹಪಿಸಲು ಪ್ರಾರಂಭಿಸುತ್ತೇವೆ. ಆದ್ದರಿಂದಲೇ ಪಡ್ಡೆಯ ದಿನಗಳ ಕುರಿತು ಬರೆಯಲು ಪಡ್ಡೆಯ ವಯಸ್ಸಿನ ಹುಡುಗನಿಗೆ ಸಾಧ್ಯವಾಗುವುದಿಲ್ಲ. ಏನಿದ್ದರೂ ನಡುವಯಸ್ಸು ದಾಟಬೇಕು. ಬೆಟ್ಟದ ಮೇಲೆ ಹತ್ತದೆ ಬಯಲಿನ ಸೌಂದರ್ಯ ಕಾಣುವುದಾದರೂ ಹೇಗೆ?

(ಡಾ. ರಾಜೇಂದ್ರ ಚೆನ್ನಿ)

ಪರೀಕ್ಷೆ-ಫಲಿತಾಂಶಗಳ ಹಾವಳಿಗೆ ರೇಜಿಗೆ ಹುಟ್ಟಿ ಅವುಗಳಿಂದ ಯಾವಾಗ ತಪ್ಪಿಸಿಕೊಳ್ಳುವೆನೋ ಎಂದು ಮನಸ್ಸು ತುಡಿಯುತ್ತಿರುತ್ತದೆ. ಕೆಲವೇ ದಿನಗಳಲ್ಲಿ ಕೆಲಸವೂ ಸಿಕ್ಕಿ, ಹಣವೂ ದಕ್ಕಿ, ಹೆಣ್ಣೂ ಸಿಕ್ಕು, ಪರೀಕ್ಷೆ-ಫಲಿತಾಂಶಗಳ ಕಿರಿಕಿರಿಗಳೂ ಕಣ್ಮರೆಯಾದ ಹೊತ್ತಿನಲ್ಲಿ “ಎಲ್ಲಿ ಹೋದಾವೋ ಗೆಳೆಯಾ ಆ ಕಾಲಾ” ಅಂತ ಹಪಹಪಿಸಲು ಪ್ರಾರಂಭಿಸುತ್ತೇವೆ.

ರಾಜೇಂದ್ರ ಚೆನ್ನಿಯವರ ಪಡ್ಡೆಯ ದಿನಗಳು ಒಂದು ರೀತಿಯಲ್ಲಿ ಸುವರ್ಣ ದಿನಗಳೆಂದೇ ಹೇಳಬಹುದು. ಮೊದಲೇ ತಂಪಾದ ಧಾರವಾಡದ ನೆಲ, ಜೊತೆಗೆ ಬೇಂದ್ರೆ-ಮನ್ಸೂರ್-ಬಾಳಪ್ಪ- ಪುಣೇಕರ್‌ ತರಹದ ಹಿರಿಯರು ಜೀವಂತ ಯಕ್ಷರಂತೆ ಆ ಮಣ್ಣಿನಲ್ಲಿ ಓಡಾಡಿಕೊಂಡಿದ್ದ ಕಾಲ. ಅದೆಲ್ಲವನ್ನೂ ಬಡಿವಾರ ಉತ್ಪ್ರೇಕ್ಷೆಗಳಿಲ್ಲದ ಪರಿಪಕ್ವವಾದ ಭಾಷೆಯಲ್ಲಿ ಚೆನ್ನಿಯವರು ಹೇಳಿರುವುದು ಓದುಗರಾದ ನಮ್ಮೆಲ್ಲರ ಅದೃಷ್ಟವೆನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ವಿಮರ್ಶಕರಾಗಿ ಚೆನ್ನಿಯವರು ಪ್ರಸಿದ್ಧರಾದರೂ, ಅವರೊಬ್ಬ ಯಶಸ್ವಿ ಕತೆಗಾರರೂ ಹೌದು. ಅವರ ಹಲವು ಕತೆಗಳು ದೀಪಾವಳಿ ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿವೆ ಮತ್ತು ಎರಡು ಮುಖ್ಯ ಕಥಾಸಂಕಲನಗಳನ್ನೂ ಅವರು ಪ್ರಕಟಿಸಿದ್ದಾರೆ. ಆದ್ದರಿಂದ ಕಥಾನಿರೂಪಣೆಯ ಧ್ವನಿ ಈ ಪ್ರಬಂಧಗಳಿಗೆ ಸಹಜವಾಗಿಯೇ ದಕ್ಕಿದೆ. ಲಾಲಿತ್ಯದ ಗುಣವು ಪಡ್ಡೆಯ ದಿನಗಳ ಮುಖ್ಯ ಲಕ್ಷಣವಾದ್ದರಿಂದ, ಈ ಲಲಿತ ಪ್ರಬಂಧಗಳು ಬಹು ಯಶಸ್ವಿಯಾಗಿವೆ.

ಹರೆಯದ ದಿನಗಳ ಆಲೋಚನಾ ಲಹರಿಯೇ ಬೇರೆ. ಈ ಮತಲಬೀ ದುನಿಯಾದ ಮೈಲಿಗೆಯ ಸ್ಪರ್ಶ ಅದಕ್ಕೆ ಆಗಿರದೆ ಪವಿತ್ರವಾಗಿರುತ್ತದೆ. ಹೇಮಾಮಾಲಿನಿ ಎಂಬ ಕನಸಿನ ಕನ್ಯೆ, ಅವರೂರಿನ ಹುಡುಗ ಗಿರೀಶ ಕಾರ್ನಾಡರ ಕೈಹಿಡಿದು ಮದುವೆಯಾಗಿ, ಧಾರವಾಡದ ಸೊಸೆಯಾಗಿ ಬಂದು, ಬೆಳಿಗ್ಗೆ ಎದ್ದು ಅಂಗಳದಲ್ಲಿ ರಂಗೋಲಿ ಹಾಕುತ್ತಾಳೆ ಎಂದು ತರ್ಕಬದ್ಧವಾಗಿ ನಂಬುವ ವಯಸ್ಸದು. ರಾತ್ರಿಯ ಹೊತ್ತೇ ಊರೆಲ್ಲಾ ಸುತ್ತಾಡುತ್ತಾ “ಹಗಲುಗಳು ಸುಂದರವಾದ ರಾತ್ರಿಗಳಿಗೆ ಯಾವುದೋ ಬೇಕೂಫ್ ಬರೆದ ನೀರಸವಾದ ಮುನ್ನುಡಿ”ಎಂದು ಭಾವಿಸುವ ಕಾಲವದು. ನಾಟಕದ “ಜಮುಖಾನ ಕ್ಲಾಸ್‌”ನಲ್ಲಿ ಕುಳಿತು, ರಂಗದಲ್ಲಿ ಪ್ರವೇಶಿಸಿದ ಪ್ರಾಣಿಯೊಂದು ಲದ್ದಿ ಹಾಕಿದರೆ “ಒನ್ಸ್‌ಮೋರ್‌” ಎಂದು ಕಿರುಚಿ ಸಂಭ್ರಮಿಸುವ ಹೊತ್ತದು. ಕಾಲೇಜಿನ ಚುನಾವಣೆಗೆ ವಿರೋಧ ಪಕ್ಷದವರು ಕಾರು, ಜೀಪು, ಜಟಕಾಬಂಡಿಗಳನ್ನು ತಂದು ಪ್ರಚಾರ ಮಾಡಿದರೆ, ಮತ್ತೊಂದು ತಂಡ ಮುರುಘಾ ಮಠದ ಆನೆಯನ್ನೇ ಏರಿ ಬಂದು ಪ್ರಚಾರ ಮಾಡುವ ಜೀವನೋತ್ಸಾಹದ ಹಂತವದು. ಹಿರಿಯರ ಬದುಕಿನ ನೀರಸ ತಾಳಕ್ಕೆ ದಕ್ಕದ ಯೌವನದ ಕುಣಿತ, ಅದರ ಅತಾರ್ಕಿಕ ಲಯದಿಂದಲೇ ಕಳೆಗಟ್ಟುತ್ತದೆ.

ಕಾಲೇಜಿನ ಚುನಾವಣೆಗೆ ವಿರೋಧ ಪಕ್ಷದವರು ಕಾರು, ಜೀಪು, ಜಟಕಾಬಂಡಿಗಳನ್ನು ತಂದು ಪ್ರಚಾರ ಮಾಡಿದರೆ, ಮತ್ತೊಂದು ತಂಡ ಮುರುಘಾ ಮಠದ ಆನೆಯನ್ನೇ ಏರಿ ಬಂದು ಪ್ರಚಾರ ಮಾಡುವ ಜೀವನೋತ್ಸಾಹದ ಹಂತವದು. ಹಿರಿಯರ ಬದುಕಿನ ನೀರಸ ತಾಳಕ್ಕೆ ದಕ್ಕದ ಯೌವನದ ಕುಣಿತ, ಅದರ ಅತಾರ್ಕಿಕ ಲಯದಿಂದಲೇ ಕಳೆಗಟ್ಟುತ್ತದೆ.

ಹರೆಯದ ವಯಸ್ಸಿಗೆ ಶಾಸ್ತ್ರೀಯ ಸಂಗೀತದ ರುಚಿ ಹತ್ತುವುದು ಬಹಳ ಅಪರೂಪ. ಸಂಗೀತ ಅಭ್ಯಾಸ ಮಾಡುವ ಹುಡುಗರ ಮಾತು ಬೇರೆ. ಆದರೆ ಇಲ್ಲಿ ಲೇಖಕರಿಗೆ ಮತ್ತು ಅವರ ಗುಂಪಿನವರಿಗೆಲ್ಲರಿಗೂ ಮಲ್ಲಿಕಾರ್ಜುನ ಮನ್ಸೂರರ ಸಂಗೀತವನ್ನು ಆಹ್ವಾನಿಸುವ ರಸಿಕತೆ ಇದೆ. ಅದಕ್ಕಾಗಿ ಒಂದು ರಾತ್ರಿ ಶೆರೆ-ಗಿರೆ ಕುಡಿಯುವುದನ್ನು ಬಿಟ್ಟು, ‘ಕಾಡುತೂಸು’  (ಬೀಡಿ) ಸೇದುವ ಖಯಾಲಿಯನ್ನು ಮರೆತು ಪಡ್ಡೆ ಗುಂಪು ಮನ್ಸೂರರ ಸಂಗೀತವನ್ನು ಮೈಯೆಲ್ಲಾ ಕಿವಿಯಾಗಿ ಕೇಳಿ ’ಮನಸೂರೆ’ ಗೊಳ್ಳುವ ಅಧ್ಯಾಯವಿದೆ. ಮನ್ಸೂರರ ಸಂಗೀತದ ಸುಖವನ್ನು ಲೇಖಕರು ವರ್ಣಿಸುವ ಸಾಲುಗಳು ಒಂದು ಸುಶ್ರಾವ್ಯವಾದ ಆಲಾಪನೆಯನ್ನೇ ಓದುಗರಿಗೆ ಕೇಳಿಸುವಷ್ಟು ಸೂಕ್ಷ್ಮವಾಗಿದೆ.

ಆ ಕಾಲದ ಬಹುಮುಖ್ಯ ಸಾಹಿತಿಗಳಾದ ಬೇಂದ್ರೆ, ಪುಣೇಕರ್‌, ಶಂಬಾ – ಮುಂತಾದವರೂ ಈ ಪ್ರಬಂಧದಲ್ಲಿ ಬಂದು ಹೋಗಿದ್ದಾರೆ. ಬೇಂದ್ರೆಯವರ ಜಿಗುಟು ಸ್ವಭಾವದ ಪರಿಚಯ ಮಾಡಿಕೊಡುತ್ತಲೇ, ಅವರ ಭಾಷಣ ಮತ್ತು ಪದ್ಯಕ್ಕೆ ಬೆರಗಾಗಿದ್ದನ್ನು ಲೇಖಕರು ಕಟ್ಟಿಕೊಡುತ್ತಾರೆ. ಲಂಕೇಶರು ಒಮ್ಮೆ ಧಾರವಾಡಕ್ಕೆ ಬಂದಾಗ ಮಾಡಿದ ಭಾಷಣದ ಪ್ರಸ್ತಾಪ ನಾರಾಯಣಾಚಾರ್ಯರ ಮೂಲಕ ಒಂದು ಪ್ರಬಂಧದಲ್ಲಿ ಬರುತ್ತದೆ. “ಅಯ್ಯೋ, He was advocating free sex you see” ಎಂದು ಆ ಭಾಷಣಕ್ಕೆ ಭಾವುಕರಾಗಿ ನಾರಾಯಣಾಚಾರ್ಯರು ಪ್ರತಿಕ್ರಿಯಿಸಿದರೆ, ಅದಕ್ಕೆ ಹೋಗಲಾಗದ ಲೇಖಕರು ತಮ್ಮ ಖೊಟ್ಟಿ ನಸೀಬನ್ನು ಹಳಿದುಕೊಳ್ಳುವ ಪ್ರಸಂಗ ಮಜವಾಗಿದೆ.

ಈ ಸನ್ನಿವೇಶವನ್ನು ಓದಿದ ನಂತರ ನನ್ನ ಮನಸ್ಸು ಸದ್ಯದ ಪರಿಸ್ಥಿತಿಯನ್ನು ಅದರೊಡನೆ ತುಲನೆ ಮಾಡಲು ತೊಡಗಿತು. ಸೆಕ್ಸ್‌ ಎನ್ನುವುದು ಎಲ್ಲಾ ದಿಕ್ಕಿನಿಂದಲೂ ನಮ್ಮ ಯುವಕ-ಯುವತಿಯರಿಗೆ ಈಗ ಸುಲಭವಾಗಿ ಲಭ್ಯವಾಗುವಂತಿದ್ದರೂ, ಸಾರ್ವಜನಿಕ ವೇದಿಕೆಯಲ್ಲಿ free sex ಅನ್ನು ಸಮರ್ಥಿಸಿ ಭಾಷಣ ಮಾಡುವ ಸ್ವಾತಂತ್ರ್ಯ ಈಗಿಲ್ಲವೇನೋ ಎಂದು ನನಗೊಮ್ಮೆ ಅಳುಕಾಯ್ತು.

ಲಂಕೇಶರು ಒಮ್ಮೆ ಧಾರವಾಡಕ್ಕೆ ಬಂದಾಗ ಮಾಡಿದ ಭಾಷಣದ ಪ್ರಸ್ತಾಪ ನಾರಾಯಣಾಚಾರ್ಯರ ಮೂಲಕ ಒಂದು ಪ್ರಬಂಧದಲ್ಲಿ ಬರುತ್ತದೆ. “ಅಯ್ಯೋ, He was advocating free sex you see” ಎಂದು ಆ ಭಾಷಣಕ್ಕೆ ಭಾವುಕರಾಗಿ ನಾರಾಯಣಾಚಾರ್ಯರು ಪ್ರತಿಕ್ರಿಯಿಸಿದರೆ, ಅದಕ್ಕೆ ಹೋಗಲಾಗದ ಲೇಖಕರು ತಮ್ಮ ಖೊಟ್ಟಿ ನಸೀಬನ್ನು ಹಳಿದುಕೊಳ್ಳುವ ಪ್ರಸಂಗ ಮಜವಾಗಿದೆ.

ಹುಕ್ಕೇರಿ ಬಾಳಪ್ಪ ಅವರು ಹೇಳುವ ಒಂದು ಮಾತು ನನ್ನನ್ನು ಬಹಳ ಕಾಡಿತು. ಬೇಂದ್ರೆಯ ಭಾಷಣದ ಸಂದರ್ಭದಲ್ಲಿ ಅವರು “ಘಮ ಘಮ ಗಮಾಡಿಸ್ತಾವ ಮಲ್ಲಿಗಿ” ಎನ್ನುವ ಕವಿವರೇಣ್ಯರ ಹಾಡನ್ನು ಭಾವಪೂರ್ಣವಾಗಿ ಹಾಡಿ, ಪಡ್ಡೆ ಹುಡುಗರ ಮನಸ್ಸು-ಹೃದಯಗಳನ್ನು ಗೆದ್ದು ಬಿಡುತ್ತಾರೆ. ಹಾಡನ್ನು ಮುಗಿಸಿದ ನಂತರ ಪಡ್ಡೆ ಹೈಕಳನ್ನು ನೋಡಿ “ಇಂಥಾ ಹಾಡು ಹೇಳೋ ಬದಲು ’ದಂ ಮಾರೋ ದ’ ಅಂತೀರಲ್ಲೋ” ಎಂದು ದೂಷಿಸುತ್ತಾರೆ. ತಮಾಷೆಯೆಂದರೆ ನನಗೆ “ದಂ ಮಾರೋ ದಂ” ಅತ್ಯಂತ ಇಷ್ಟವಾದ ಹಾಡು. ಜೀನತ್‌ ಅಮಾನ್‌ಳ ನಶೆಯೇರಿದ ಹಾವಭಾವ, ಆಶಾ ಬೋಂಸ್ಲೆಯ ಮಾದಕವಾದ ಧ್ವನಿ, ಆರ್ಡಿ ಬರ್ಮನ್‌ನ ಸಂಗೀತದ ಹೊಸತನ – ಈಗಲೂ ಕಾಡುತ್ತವೆ. ಬೇಂದ್ರೆಯ ಹಾಡಿಗೆ ಅದರದೇ ರಸಿಕತೆಯಿದ್ದರೆ, ಈ ಸಿನಿಮಾ ಹಾಡು ಆ ಕಾಲದ ಬದುಕಿನ ಕಿರಿಕಿರಿಗಳನ್ನೆಲ್ಲಾ ಮರೆತು ತುಸು ಸ್ವಾತಂತ್ರ್ಯದ ಬದುಕಿನ ಕನಸು ಕಾಣುವಂತೆ ಯುವಕರಿಗೆ ಮೋಡಿ ಮಾಡಿತ್ತು. ಆದರೆ ಅದ್ಯಾಕೆ ಬಾಳಪ್ಪನವರಿಗೆ ಈ ಹಾಡು ಅಸಹನೀಯವೆನ್ನಿಸಿತು? ಬಹುಶಃ ಒಂದು ಪಡ್ಡೆಯ ದಿನಗಳ ಸಂಗತಿಗಳು ಮತ್ತೊಂದು ಪಡ್ಡೆಯ ದಿನಗಳಿಗೆ ಅಷ್ಟಾಗಿ ಹೊಂದಾಣಿಕೆಯಾಗುವುದಿಲ್ಲ ಎನ್ನಿಸುತ್ತದೆ. ಕೊನೆಗೂ ನಮ್ಮ ನಮ್ಮ ಯೌವನಗಳು ನಮಗೆ ಚಂದ ಕಾಣಿಸುತ್ತವೆ!

ಚೆನ್ನಿಯವರ ಪಡ್ಡೆಯ ದಿನಗಳಲ್ಲಿ ಸಮಾಜದ ಜೊತೆ ಒಡನಾಡುವ ಸಾಕಷ್ಟು ವಿಷಯಗಳು ಪ್ರಸ್ತಾಪವಾಗಿವೆ. ಹೋಳಿ ಹಬ್ಬದ ಆಚರಣೆಯಲ್ಲಿ ಕುಳ್ಳು ಕದಿಯುವುದು, ಅಶ್ಲೀಲ ಮಾತುಗಳಲ್ಲಿ ಬಾಯಿ ಬಡಿದುಕೊಳ್ಳುವುದು, ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಕೊಡುವುದು, ಊರಿಗೆ ಬಂದ ಕಂಪನಿ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ಊರಿನ ಸಾಹಿತಿ-ಸಂಗೀತಗಾರರೊಡನೆ ಬೆರೆಯುವುದು – ಇತ್ಯಾದಿಗಳೆಲ್ಲವೂ ದಟ್ಟವಾಗಿ ಕಾಣಿಸುತ್ತವೆ. ಇವೆಲ್ಲವೂ ಸಾಧ್ಯವಾಗಿರುವುದಕ್ಕೆ ಒಂದು ವಿಶೇಷಕಾರಣವೆಂದರೆ ಅವರು ಮತ್ತವರ ಗುಂಪು ಊರಿನಲ್ಲಿ ತಮ್ಮ ಕುಟುಂಬಗಳ ಜೊತೆಯಲ್ಲಿಯೇ ಇದ್ದರು ಎನ್ನುವುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕಾಲೇಜು ಎನ್ನುವುದು ಊರಿಗೆ ಮತ್ತದರ ಸಂಸ್ಕೃತಿಗೆ ಸಂಬಂಧವೇ ಇಲ್ಲವೆನ್ನುವಂತೆ ಎಲ್ಲೋ ಊರಿಂದ ದೂರದಲ್ಲಿ ಇರುತ್ತದೆ. ಜೊತೆಗೆ ಹಾಸ್ಟೆಲ್ ಬದುಕಿನಲ್ಲಿ ವಿದ್ಯಾರ್ಥಿಗಳ ಹೊರತು ಬೇರೊಂದು ಪ್ರಪಂಚದ ಪ್ರವೇಶಕ್ಕೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ಸಮಾಜದೊಡನೆ ಬೆರೆತು ಅದರ ರೀತಿ-ನೀತಿಗಳನ್ನು ಅರ್ಥಮಾಡಿಕೊಳ್ಳಲು ಹರೆಯದ ದಿನಗಳಲ್ಲಿ ಅವಕಾಶವೇ ಇಲ್ಲದಂತಾಗುತ್ತದೆ. ಈ ಹಾಸ್ಟೆಲ್ ಪದ್ಧತಿಗಿಂತಲೂ ಈ ಹಿಂದೆ ನಮ್ಮ ನಾಡಿನಲ್ಲಿದ್ದಂತೆ ವಾರಾನ್ನದ ಪದ್ಧತಿಯೇ ಹೆಚ್ಚು ಉತ್ತಮವಾದದ್ದು ಮತ್ತು ಸಾರ್ವಜನಿಕ ಕಾಳಜಿಯನ್ನು ಹೊಂದಿದ್ದು ಎಂದು ನನಗನ್ನಿಸುತ್ತದೆ.

ಇವೆಲ್ಲವೂ ಸಾಧ್ಯವಾಗಿರುವುದಕ್ಕೆ ಒಂದು ವಿಶೇಷಕಾರಣವೆಂದರೆ ಅವರು ಮತ್ತವರ ಗುಂಪು ಊರಿನಲ್ಲಿ ತಮ್ಮ ಕುಟುಂಬಗಳ ಜೊತೆಯಲ್ಲಿಯೇ ಇದ್ದರು ಎನ್ನುವುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕಾಲೇಜು ಎನ್ನುವುದು ಊರಿಗೆ ಮತ್ತದರ ಸಂಸ್ಕೃತಿಗೆ ಸಂಬಂಧವೇ ಇಲ್ಲವೆನ್ನುವಂತೆ ಎಲ್ಲೋ ಊರಿಂದ ದೂರದಲ್ಲಿ ಇರುತ್ತದೆ. ಜೊತೆಗೆ ಹಾಸ್ಟೆಲ್ ಬದುಕಿನಲ್ಲಿ ವಿದ್ಯಾರ್ಥಿಗಳ ಹೊರತು ಬೇರೊಂದು ಪ್ರಪಂಚದ ಪ್ರವೇಶಕ್ಕೆ ಅವಕಾಶವೇ ಇರುವುದಿಲ್ಲ.

ಕಥೆಗಾರ ವಸುಧೇಂದ್ರ

ಕನ್ನಡದ ಹಿರಿಯ ವಿಮರ್ಶಕರೆಲ್ಲಾ ಲಲಿತ ಪ್ರಬಂಧ ಪ್ರಕಾರಕ್ಕೆ ಆಕರ್ಷಿತರಾಗುತ್ತಿರುವುದು ಬಹು ಕುತೂಹಲದ ಸಂಗತಿಯಾಗಿದೆ. ಗಿರಡ್ಡಿ, ರಹಮತ್, ನರಹಳ್ಳಿಯವರು ಈಗಾಗಲೇ ಸಾಕಷ್ಟು ಲಲಿತ ಪ್ರಬಂಧಗಳನ್ನು ಬರೆದಿದ್ದಾರೆ. ಅವರೊಡನೆ ಈಗ ಚೆನ್ನಿಯವರೂ ಕೈಜೋಡಿಸಿದ್ದು ಒಳ್ಳೆಯ ಸಂಗತಿಯೇ ಆಗಿದೆ.ಚೆನ್ನಿಯವರೂ ಸೇರಿದಂತೆ ಇವರೆಲ್ಲರೂ ಈ ಬರವಣಿಗೆ ತಮಗೆ ಅತ್ಯಂತ ಸಂತೋಷವನ್ನು ನೀಡಿದೆ ಎಂದು ಹೇಳಿಕೊಂಡಿದ್ದಾರೆ. ವಿಶೇಷ ಅಧ್ಯಯನ ಮತ್ತು ಗಂಭೀರತೆಯನ್ನು ಬೇಡುವ ವಿಮರ್ಶೆಗೆ ಅಲ್ಪ ವಿರಾಮ ನೀಡಿ, ಮೈ-ಮನಸ್ಸು ಹೂ ಹಗುರಗೊಳ್ಳುವಂತೆ ಲಾಲಿತ್ಯ ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಕನ್ನಡದ ಸಾಹಿತ್ಯ ದೃಷ್ಟಿಯಿಂದಲೂ, ಓದುಗರ ದೃಷ್ಟಿಯಿಂದಲೂ ಮತ್ತೂ ಲೇಖಕರ ದೃಷ್ಟಿಯಿಂದಲೂ ಹಿತಕಾರಿಯಾದ ಸಂಗತಿ ಎನ್ನಿಸುತ್ತದೆ.

(ಚಿತ್ರಗಳು: ಗುಜ್ಜಾರಪ್ಪ)