ಕಳೆದ ಶನಿವಾರ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿಯವರು ಒಂದು ಅಪರೂಪದ ಕಾರ್ಯಕ್ರಮ ಏರ್ಪಡಿಸಿದ್ದರು. ನೆದರ್ ಲ್ಯಾಂಡ್ ನ ರಾಡಾ ಸೆಸಿಕ್ ಎಂಬ ಕಲಾವಿದೆ ನಿರ್ಮಿಸಿದ ಮೂರು ಕಿರು ಚಿತ್ರಗಳ ಪ್ರದರ್ಶನ. ಜೊತೆಗೆ ಅವರ ಪತಿ ಜಾನ್ ಬೋಸ್ಟರ್ಸ್ ಅವರಿಂದ ಗಿಟಾರ್ ವಾದನ.

ರಾಡಾ ಸೆಸಿಕ್ ಈಗ ನೆದರ್ ಲ್ಯಾಂಡಿನಲ್ಲಿ ನೆಲೆಸಿದ್ದಾರೆ. ಆದರೆ ಅವರು ಹುಟ್ಟಿ ಬೆಳೆದು, ಕೆಲಸ ಮಾಡುತ್ತಿದ್ದುದು ಯುಗೋಸ್ಲಾವಿಯಾದಲ್ಲಿ. ಕೆಲವೇ ವರ್ಷಗಳ ಹಿಂದೆ ನಡೆದ  ಸರಯೆವೋ ಯುದ್ಧದ ಗಲಭೆ, ಹಿ೦ಸೆಗಳ ಕಾಲದಲ್ಲಿ ದೇಶ ಬಿಟ್ಟು ನಿರಾಶ್ರಿತರಾಗಿ ಹೋದವರಲ್ಲಿ ರಾಡಾ ಕೂಡಾ ಒಬ್ಬರು. ಕಪ್ಪು ಪ್ಯಾಂಟು, ಗುಲಾಬಿ ಹೂಗಳಿದ್ದ ಕಪ್ಪು ಟಾಪ್, ಬೆಳ್ಳಿ ಒಡವೆಗಳು  ಜೊತೆಗೆ ಮುದ್ದಾದ ಕೆಂಪು ಬಿಂದಿಯ ರಾಡಾ ಪರಿಚಯ ಭಾಷಣ ಮಾಡಲು ಬಂದು ನಿಂತರು. ಅವರು ಮಾತಾಡಲು ಪ್ರಾರಂಭ ಮಾಡಿದಾಗ ಅವರೊಳಗೆ ಇನ್ನೂ ತುಡಿಯುತ್ತಿರುವ ಮಾಸದ ಗಾಯಗಳ ಅರಿವೇ ನಮಗಾಗುವ ಹಾಗಿರಲಿಲ್ಲ.

‘ಇದ್ದಕ್ಕಿದ್ದಂತೆ  ಬ೦ದು ಅಪ್ಪಳಿಸಿದ ಯುದ್ಧ, ಭಯಂಕರ  ಹಿಂಸೆ ನಮ್ಮ ಜನರ ಬದುಕನ್ನು ಬುಡಮೇಲು ಮಾಡಿತ್ತು. ದೇಶ ಹತ್ತಿ ಉರಿಯುತ್ತಿತ್ತು. ನಾನೊಬ್ಬ ಪೊಲಿಟಿಕಲ್ ರೆಫ್ಯೂಜಿಯಾಗಿ ದೇಶ ಬಿಡಲು  ಕೆಲವು ಗಂಟೆಗಳ ಕಾಲ ನೀಡಲಾಯಿತು. ಜೊತೆಗೆ ಕೇವಲ  ೧೦ ಕಿಲೋ ತೂಕದ ಒಂದು ಬ್ಯಾಗನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದರು.!  ಹುಟ್ಟಿ ಬೆಳೆದು ೪೦ ವರ್ಷಗಳು ಕಳೆದ ನೆಲ. ತಂದೆ, ತಾಯಿ, ಒಡಹುಟ್ಟಿದವರು, ಸ್ನೇಹಿತರ ಜೊತೆ ಬಾಳಿದ ಮನೆ. ಮತ್ತೆ ಇಲ್ಲಿಗೆ ಮರಳಿ ಬರುವೆನೋ ಇಲ್ಲವೋ ಎಂಬ ಅನುಮಾನ. ಭಾರದ ಹೃದಯದಿಂದ ನಾನು ನನ್ನ ದೇಶ ಬಿಟ್ಟಿದ್ದೆ ‘.

‘ನೆದರ್ ಲ್ಯಾಂಡಿನಲ್ಲಿ ನಮ್ಮನ್ನು ತುಂಬ  ಪ್ರೀತಿಯಿಂದ ಬರಮಾಡಿಕೊಂಡರು. ಅಲ್ಲಿ ಮೊದಲು ಎದುರಿಸಿದ್ದು ತಿಂಗಳುಗಳ ನಿರ್ವಾತ, ನಂತರ ಭಯಂಕರ ಖಿನ್ನತೆ. ತಿಳಿಯದ ದೇಶ, ತಿಳಿಯದ ಭಾಷೆ, ಎಂದೂ ಕಂಡರಿಯದ ಮುಖಗಳು. ಯಾವಾಗಲೋ ಬರುತ್ತಿದ್ದ ಪತ್ರಗಳು. ಸ್ನೇಹಿತರಿಂದ, ಅಣ್ಣನಿಂದ, ಅಮ್ಮನಿಂದ. ‘ಸುಗ್ಗಿ ಕಾಲ. ಬೆಳೆ ತೆಗೆಯುತ್ತಿದ್ದೇವೆ.  ಹೋದ ವರ್ಷ ನೀನು ಜೊತೆಗಿದ್ದೆ’,  ‘ನಿನ್ನ ಪ್ರೀತಿಯ ಮುದಿ ನಾಯಿ  ಸತ್ತು ಹೋಯಿತು’,  ‘ಈಗ ಇಲ್ಲಿ ಎಲ್ಲೆಲ್ಲೂ ನಿಶ್ಶಬ್ದ. ಮಕ್ಕಳಿಗೆ ಸ್ಕೂಲಿಲ್ಲ, ಪವರಿಲ್ಲ, ನೀರಿಲ್ಲ.’,  ‘ನಾನೀಗ ಮುದುಕಿಯಾಗಿದ್ದೇನೆ. ಸೇಬು ಹಣ್ಣು  ಕೀಳಲು ಮರ ಹತ್ತುವುದು ಸಾಧ್ಯವಿಲ್ಲ.’ ಮತ್ತೆ ನಾನವರನ್ನೆಲ್ಲಾ ನೋಡುವೆನೇ?…’

ಅವರ ಈ ಮೊದಲ ಅನುಭವಗಳನ್ನು ಆಧಾರಿಸಿ ಮಾಡಿದ ಚಿತ್ರ ‘ಅ ರೂಮ್ ವಿದೌಟ್ ಅ ವ್ಯೂ’. ಎಲ್ಲೆಲ್ಲಿಂದಲೋ ಹಣ ಕಲೆ ಹಾಕಿ, ಇದ್ದ ಬದ್ದ ಎಕ್ವಿಪ್ಮೆಂಟ್ನಲ್ಲೇ ಮ್ಯಾನೇಜ್ ಮಾಡಿ  ನಿರ್ಮಿಸಿದ್ದು. ರಾಡಾ ಸಾಹಸ ಅಚ್ಚರಿ ಹುಟ್ಟಿಸುವಂಥದ್ದು. ಅವರ ಮನಸ್ಸು ತುಂಬಿರುವ ಕ್ಷೋಭೆ, ಯಾತನೆ ಅವರ ಪ್ರತಿಮೆಗಳಲ್ಲಿ, ನೆರಳು ಬೆಳಕುಗಳ ಬೆರಕೆಯಲ್ಲಿ ನಿಚ್ಚಳವಾಗಿ ಕಂಡು ಬರುತ್ತದೆ.  ಅಲ್ಲಿಲ್ಲಿಂದ ಬರುವ ಸ್ವಲ್ಪ ಸ್ವಲ್ಪ ಹಣ, ಸಂಗೀತ ರಚಿಸಲು ಗಂಡನ ಸಹಾಯ, ಬೇರೆ ಬೇರೆ  ದೇಶದ ಸಹೃದಯ ತಂತ್ರಜ್ಞರ  ನೆರವು ಅವರ ಚಿತ್ರಗಳನ್ನು ಸಾಧ್ಯವಾಗಿಸಿತ್ತು. ನಮ್ಮವರೇ ಆದ ಕ್ಯಾಮರಾಮನ್  ಆರ್. ವಿ. ರಮಣಿ  ಕೂಡ ಅವರ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ರಾಡಾ ಅವರ ಮತ್ತೊಂದು ಚಿತ್ರ ‘ಸೋಸ್ಕೆ’ ಬಹಳ ತಲ್ಲಣ ಮೂಡಿಸುತ್ತದೆ.  ‘ಸೋಸ್ಕೆ’ ಎಂದರೆ ಜಿಪ್ಸಿ ಭಾಷೆಯಲ್ಲಿ ‘ಏಕೆ?’ ಎಂದರ್ಥ. ‘ನಾವೂ ಒಂದು ರೀತಿಯಲ್ಲಿ ಜಿಪ್ಸಿಗಳೇ ತಾನೇ?’  ಎಂದು ರಾಡಾ ಸವಾಲು ಹಾಕುತ್ತಾರೆ. ‘ಸೋಸ್ಕೆ’ ಬೇರೆ ಬೇರೆ ದೇಶಗಳಿಂದ ನೆದರ್ ಲ್ಯಾಂಡಿಗೆ  ಬಂದ ಮೂರು ಜನ ರೆಫ್ಯೂಜಿಗಳ ಕತೆ. ಪೆರೇರಾ ಶ್ರೀಲಂಕಾದಿ೦ದ ಬಂದ ಡಾಕ್ಟರ್. ವೆರೊನಿಕ್ ಬುರುಂದಿಯಿ೦ದ  ಓಡಿ ಬಂದಿರುವ ಡಿಪ್ಲೋಮ್ಯಾಟ್. ಲ್ಯೂಬಾ ಚೆಚೆನ್ಯಾದಿಂದ ಬಂದಿರುವ ಖ್ಯಾತ ನಟಿ. ಎಲ್ಲಾ ಕಡೆಯೂ ಯುದ್ಧ ಸೃಷ್ಟಿಸಿದ ರಕ್ತಪಾತ, ಇಕ್ಕಟ್ಟಿನ ಭಯಾನಕ ವಾತಾವರಣ ಇವರುಗಳು ತಾಯಿನೆಲವನ್ನು ತೊರೆದು ಬರುವ ಹಾಗೆ ಮಾಡಿದೆ.

ಡಾಕ್ಟರ್ ಪೆರೇರಾ ತಮಿಳು ಮೂಲದ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ೨ ತಿಂಗಳಲ್ಲಿ ಬರಲಿರುವ ಕಂದನಿಗಾಗಿ ಕಾತರದಿಂದ ಕಾಯುತ್ತಿದ್ದರು. ಇದ್ದಕ್ಕಿದ್ದಂತೆ ಆಘಾತ ಬಂದೆರಗಿತ್ತು. ಸಮುದ್ರ ದಂಡೆಯ ಮೇಲೆ ವಾಕ್ ಹೋಗುತ್ತಿದ್ದಾಗ, ಅವರ ಏಳು ತಿಂಗಳು ಬಸುರಿ ಹೆಂಡತಿಯನ್ನು ಕೊಚ್ಚಿ ಹಾಕಿದ್ದರು. ಹಾಗೆಯೇ ಅವರ ಕಣ್ಣೆದುರಿಗೇ ನೂರಾರು ಮಕ್ಕಳನ್ನೂ ಮುಗಿಸಿದ್ದರು.

“ಎಲ್ಲಾ ಬಿಟ್ಟು ಇಲ್ಲಿಗೆ ಓಡಿ ಬರಬೇಕಾಯಿತು. ದಿನವೆಲ್ಲಾ ಸುಮ್ಮನೆ ಕೂತಿರುತ್ತೇನೆ. ಬುದ್ಧನನ್ನು ಪ್ರಾರ್ಥಿಸುತ್ತೇನೆ. ನಮ್ಮ ಮನೆ, ನಮ್ಮವರು, ನಮ್ಮ ದೇಶ, ಮನಸ್ಸು ತುಂಬಿ ಹೋಗಿದೆ. ಇಲ್ಲಿನ ಜನ ಒಳ್ಳೆಯವರು. ನಮಗೆ ತುಂಬಾ ಸಹಾನುಭೂತಿ ತೋರಿಸುತ್ತಾರೆ. ನಮ್ಮ ಕತೆ ಕೇಳಿ ಕಣ್ಣೀರು ಹಾಕುತ್ತಾರೆ. ಆದರೆ ಅವರಿಗೆ ಅರ್ಥ ಆಗುವುದು ಸಾಧ್ಯವಿಲ್ಲ. ಇಲ್ಲಿಯೂ ಅಗಾಧ ಸಮುದ್ರ ಇದೆ. ಆದರೆ ಸ್ವಲ್ಪ ಮಂಕು ಎನ್ನಿಸುತ್ತದೆ. ಶ್ರೀಲಂಕಾ ಸಮುದ್ರ ಎಂಥಾ ಅದ್ಭುತ ನೀಲಿ! ದೂರದಲ್ಲಿ ಹಸಿರಿನ ರಾಶಿ. ಬೀಸಿ ಎಲ್ಲಾ ಗಾಯಗಳನ್ನೂ ಮಾಯಿಸುವ ಶಕ್ತಿಯಿರುವ  ಹಾಯೆನಿಸುವ ಗಾಳಿ. ಫಳಿಚ್ ಅಂತ ಬಿಸಿಲು. ಆದರೆ ಅಲ್ಲಿ ಬೀಚಿನಲ್ಲಿ ಓಡಾಡುವಾಗ ಯಾವಾಗಲೂ ಭಯ. ಹಿಂದೆ ಮುಂದೆ ನೋಡಲು ಭಯ. ಅಕ್ಕ ಪಕ್ಕ ನೋಡಲು ಭಯ. ಇಲ್ಲಿ ಭಯವಿಲ್ಲ…..”

ಬುರುಂದಿಯಿ೦ದ  ಬಂದ ವೆರೋನಿಕ್ ವಿದ್ಯಾವಂತೆ. ದೊಡ್ಡ ಅಧಿಕಾರಿಯಾಗಿದ್ದವಳು. ಎರಡು ಮಕ್ಕಳ ತಾಯಿ. ‘ಒಂದು ದಿನ ನನ್ನ ಕಣ್ಣೆದುರಿಗೇ  ನಮ್ಮ ತಂದೆ, ತಾತ, ಅಕ್ಕ ಪಕ್ಕದವರು  ಎಲ್ಲರನ್ನೂ ಕೊಂದರು. ಮನೆಗೆ ಬೆಂಕಿ ಹಚ್ಚಿದರು. ನಮ್ಮ ಕಣ್ಣೆದುರಿಗೇ ನಮ್ಮ ಪ್ರೀತಿಯ ಮನೆ ಬೂದಿ ರಾಶಿಯಾಯಿತು. ತಿರುಗಿ ನಡೆಯುವ ಮೊದಲು, ಕೊನೆಗೆ ಕಣ್ಣಿಗೆ ಬಿದ್ದಿದ್ದು ನಾವು ದಿನಾ ಚಹಾ ಕುಡಿಯುತ್ತಿದ್ದ ಕಪ್ಪಿನ ಚೂರು. ನಾನು ನನ್ನ ಮಕ್ಕಳನ್ನು ಉಳಿಸಿಕೊಳ್ಳಲು ಓಡಿ ಬಂದೆ. ಇಲ್ಲದಿದ್ದರೆ ಖಂಡಿತಾ ಬರುತ್ತಿರಲಿಲ್ಲ. ಅಲ್ಲಿ ದೊಡ್ಡ ಮನೆ, ಅಡಿಗೆಯವರು, ಆಳು-ಕಾಳು,  ಡ್ರೈವರ್ ಗಳು… ನನಗೆ ಯಾವ ಕೆಲಸವೂ ಗೊತ್ತಿರಲಿಲ್ಲ. ಇಲ್ಲಿ ಬಂದ ಮೇಲೆ ಅಡಿಗೆ ಕಲಿತೆ. ಮನೆ ಕೆಲಸ ಕಲಿತೆ. ಭಾಷೆ ಕಲಿತೆ. ಹಾಗೇ ದಿನ ಕಳೆಯುತ್ತಿದೆ. ಅಲ್ಲಿ ಅಷ್ಟು ಜವಾಬ್ದಾರಿಯ ಪದವಿಯಲ್ಲಿದ್ದೆ. ಇಲ್ಲಿ ಬಂದ ತಕ್ಷಣ ಕಂಪ್ಯೂಟರ್ ಕೀ ಬೋರ್ಡ್ ಉಪಯೋಗಿಸಲು ಬರುತ್ತಾ? ಅಂದರು. ಫ್ಯಾಕ್ಸ್ ಮಾಡುವುದು ಹೇಗೆಂದು ತೋರಿಸಿ ಕೊಟ್ಟರು! ಈಗಲೂ ನನಗೆ ಮನೆ ಎಂದರೆ ಬುರುಂದಿಯೇ… ಮಕ್ಕಳಿಗೆ ಏನು ಹೇಳಲಿ..? ‘

೧೬ ವರ್ಷಗಳು ನಟಿಯಾಗಿ ನರ್ತಕಿಯಾಗಿದ್ದ  ಚೆಲುವೆ  ಲ್ಯೂಬಾಗೆ ‘ಬೇರೆ’ ಬದುಕೇ ಗೊತ್ತಿಲ್ಲ. “ನನ್ನ ಬದುಕೇ ಅಭಿನಯ, ನೃತ್ಯ. ಅದಿಲ್ಲದೆ ನಾನಿಲ್ಲ. ಇಲ್ಲಿ ನಾನೇನು ಮಾಡಲಿ” ಎಂದು  ಕಣ್ಣು ತುಂಬಾ ನೀರು ತುಂಬುತ್ತಾಳೆ.

ರಾಡಾ ಹಾಗೂ ಜಾನ್  ಈಗ ನೆದರ್ ಲ್ಯಾಂಡಿನಲ್ಲಿ ತಕ್ಕಮಟ್ಟಿಗೆ ಸೆಟಲ್  ಆಗಿದ್ದಾರೆ. ಅವರ ಚಿತ್ರಗಳು ವಿಶ್ವಾದ್ಯಂತ ಪ್ರದರ್ಶಿತವಾಗುತ್ತಿದೆ. ಆದರೆ ರಾಡಾ ಮನಸ್ಸಿನಲ್ಲಿ ಕಾಡುತ್ತಲೇ ಇರುವ ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳಿಲ್ಲ.

‘ನೆದರ್ಲ್ಯಾಂಡ್ಸ್ ಜನ ತುಂಬಾ ಒಳ್ಳೆಯವರು. ನಮ್ಮನ್ನು ತುಂಬಾ ಪ್ರೀತಿಯಿಂದ ಸ್ವಾಗತಿಸಿದರು. ನೆಲೆ ನೀಡಿದರು. ಸಹಾನುಭೂತಿ ತೋರಿದರು. ಸಹಾಯ ಮಾಡಿದರು. ಇಲ್ಲಿ ಒಂದು ಬದುಕು ಹುಟ್ಟು ಹಾಕುವಂತೆ ಮಾಡಿದರು. ಆದರೆ ರೆಫ್ಯೂಜಿಗಳು ನೆರೆ ಹೊರೆಯವರಾಗಿ ಬಂದಾಗ ಮಾತ್ರ  ಅವರಿಗೆ ಸ್ವಲ್ಪ ಕಸಿವಿಸಿಯಾಗುತ್ತದೆ. ಇಲ್ಲಿನ ಜನರೇ ಇರುವ ಅಪಾರ್ಟ್ಮೆಂಟ್  ಬಿಲ್ಡಿಂಗ್ ಗಳಲ್ಲಿ ನಾವುಗಳು ಬಾಡಿಗೆಗೆ ಬಂದರೂ ಅವರಿಗಷ್ಟು ಇಷ್ಟವಾಗುವುದಿಲ್ಲ ಅನ್ನಿಸುತ್ತೆ… ಏಕೆ ಅರ್ಥವಾಗುವುದಿಲ್ಲ’.