ಶಸ್ತ್ರ ಸನ್ನದ್ಧ ಶಾಂತಿ ಸಂಧಾನ

ಮುನಿಸಿಕೊಂಡಾಗ ವಕಾಲತ್ತುಗಳ ಬೇಡಿಕೆ
ಕುಸಿತವಾಗುತ್ತದೆ ಪರ್ಯಾಯ ಸಂಧಾನ
ನಿರಾಳ ಸಿದ್ಧಾಂತಕ್ಕೆ ಸಾವ ಸಂಭೋಗವಲ್ಲದೆ
ವೈರಾಗ್ಯ ತಾಳದು ಶಾಂತಿ ಸಮಾಧಿಯ ಸಂವೇದನೆ

ಶಸ್ತ್ರ ಸಜ್ಜಿತ ಕದನಗಳ ನಿರ್ಗಮನದಲ್ಲಿ
ಉಂಟಾಗುವಾಗ ಸಂಧಾನದ ಬಯಕೆ
ಆತಂಕಗಳು ಕಂಗಾಲುಗಳು ಕದನಕ್ಕೇನೆ
ಸಾಯುವುದಿಲ್ಲ ಇಲ್ಲಿ ಶಸ್ತ್ರಗಳು

ಎದೆಯೆದೆಗಳ ಬಿರಿದಾರಿದ ನೋವು
ಮುಂದುವರೆದ ಪಯಣದ ಅಲೆದಾಟದಲ್ಲಿ
ಚೌಕಾಶಿಯ ರಾಜಿಗಿಳಿಯುತ್ತದೆ ರಕ್ತದ ಒತ್ತೆಯಾಳಾಗಿ
ಸಂಧಾನದ ರಾಯಭಾರಿಯೀಗ ಸಿದ್ಧಾಂತಗಳ ದಲ್ಲಾಳಿ

ಕಿಕ್ಕಿರಿದ‌ ದಾವೆಗಳ ತುಲನೆಯ ಫಲಿತಾಂಶ
ಸಾಂಕೇತಿಕ ಕಾನೂನುಗಳ‌ ಕನವರಿಕೆಯಲಿ
ಶಾಂತಿ ಒಕ್ಕೂಟದ ಕರಕಿಗೇನೆ ವಿಚ್ಛೇದನದ ಬೆಂಕಿ
ಸಾಂತ್ವನದ ಕನಸುಗಳೇ ಸಂಧಾನದ ಆತ್ಮಕತೆಯ ಪುಟಗಳು

ಮುಸುಕುಧಾರಿ ಎಲೆಮರೆಯ ಉಲ್ಕಾಪಾತಗಳು
ಠರಾವು ಹಾಡುತ್ತವೆ ಹೃದಯದ ಬಲವಂತ ವಲಸೆಗೆ
ತೇವಾಂಶ ನಿರೀಕ್ಷೆಯ ಹವಾಮಾನ ಮುನ್ಸೂಚನೆಯಂತೆ
ಶಿಬಿರದ ಮೇಲೆ ಒಡಲಲ್ಲಿ ಸಿಡಿಲು ತುಂಬಿದ ಆಲಿಕಲ್ಲು ದಾಳಿ…

 

ರಾಮಕೃಷ್ಣ ಸುಗತ ಮೂಲತಃ ಬಳ್ಳಾರಿ ಜಿಲ್ಲೆಯ ಪಟ್ಟಣಸೆರಗಿನವರು.
 ಸಧ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿ.
ʼಉರಿಯ ಪೇಟೆಯಲಿ ಪತಂಗ ಮಾರಾಟʼ ಪ್ರಕಟಿತ ಕವನ ಸಂಕಲನ.
ಸಾಹಿತ್ಯ, ಕಿರುಚಿತ್ರ ನಿರ್ಮಾಣ, ಆಧ್ಯಾತ್ಮ ಆಸಕ್ತಿಯ ಕ್ಷೇತ್ರಗಳು.