ಬಿಗ್ ಬೇಬಿ ಕೆಡಾಕೆಸ್‌ನಲ್ಲಿ ಬಂದಿಳಿದಾಗ ಅವನನ್ನು ಭಾರೀ ಸಂಭ್ರಮದಿಂದ ಸ್ವಾಗತಿಸಲಾಯಿತು. ಆ ಸಂಭ್ರಮಾಚರಣೆಯ ಅಂಗವಾಗಿ ಪಟ್ಟಣದ ಮೇಯರ್ ಶಾಲಾ ಕಾಲೇಜುಗಳಿಗೆ ಮೂರು ದಿನದ ರಜೆಯನ್ನೂ ಘೋಷಿಸಿದನಂತೆ. ಮುಂದಿನ ಕೆಲ ತಿಂಗಳ ಕಾಲ, ನಮ್ಮ ಬೆಂಗಳೂರಿನ ಬಿಗ್ ಬೇಬಿ, ತನ್ನೆಲ್ಲಾ ಕುಟುಂಬದವರಿಂದ ಬೇರಾಗಿ, ಸ್ಪೇನಿನ ಸಾಲ್ವಡಾರ್ ಡಾಲಿಯ ಖಾಸಗಿ ಉದ್ಯಾನದಲ್ಲಿ ಒಬ್ಬನೇ ಸುತ್ತಾಡಿದನಂತೆ. ಆದರೆ, ಅವನು ಬೆಳೆದಂತೆ, ನೋಡಿಕೊಳ್ಳುವುದು ಕಷ್ಟವಾಗಿ, ಬಾರ್ಸೆಲೋನಾ ನಗರದ ಮೃಗಾಲಯಕ್ಕೆ ಅವನನ್ನು ರವಾನಿಸಲಾಯಿತಂತೆ. ಅಲ್ಲೂ ಸಹ ಅವನಿಗೆ ಕಾದಿದ್ದದ್ದು ಏಕಾಂತವಾಸವಷ್ಟೇ.
“ಆನೆಗೆ ಬಂದ ಮಾನ” ಸರಣಿಯಲ್ಲಿ ಆನೆಗಳ ಬಗೆಗೆ ಹಲವು ರೋಚಕ ಮಾಹಿತಿ ಬರೆದಿದ್ದಾರೆ ಶೇಷಾದ್ರಿ ಗಂಜೂರು

 

ಹಾನ್ಸ್‌ಕೆನ್ ಒಬ್ಬಳು ಶ್ರೀಲಂಕಾದ ಆನೆ. ಅವಳು ಹುಟ್ಟಿದ್ದು ಕ್ರಿ.ಶ.೧೬೩೦ರಲ್ಲಿ. ಅವಳು ಹುಟ್ಟಿದಾಗ, ಶ್ರೀಲಂಕಾ – ಅಂದಿನ “ಸಿಲೋನ್” – ಡಚ್ ಈಸ್ಟ್ ಇಂಡಿಯಾ ಕಂಪೆನಿಯ ಅಧೀನದಲ್ಲಿತ್ತು. ಆ ಕಾಲದಲ್ಲಿ ಹಾಲೆಂಡಿನ ಗದ್ದುಗೆಯಲ್ಲಿದ್ದವನು ರಾಜಕುಮಾರ ಫ್ರೆಡೆರಿಕ್ ಹೆನ್ರಿ. ಅವನಿಗೆ, ತನ್ನ ದೇಶಕ್ಕೆ ಹೇಗಾದರೂ ಮಾಡಿ ಒಂದು ಆನೆಯನ್ನು ತರಿಸಲೇಬೇಕೆಂಬ ಆಸೆ ಇತ್ತು. ಆ ಸಮಯದಲ್ಲಿ, ಯೂರೋಪಿನಲ್ಲಿ, ಹೆಚ್ಚೆಂದರೆ ಒಂದೋ-ಎರಡು ಆನೆಗಳು ಇದ್ದಿರಬಹುದು. ಅವೂ ಸಹ ಇನ್ನಾರೋ ರಾಜನ ಆಶ್ರಯದಲ್ಲಿ. ಹೀಗಾಗಿ, ಯೂರೋಪಿಯನ್ನರಲ್ಲಿ, ಆನೆಗಳ ಬಗೆಗೆ ವಿಪರೀತ ಕುತೂಹಲ ಮನೆ ಮಾಡಿತ್ತು. ಆನೆಗಳ ಬುದ್ಧಿವಂತಿಕೆ, ನೆನಪಿನ ಶಕ್ತಿಗಳ ಬಗೆಗೆ ಹಲವಾರು ದಂತ ಕತೆಗಳು ಹರಿದಾಡುತ್ತಿದ್ದವು. ತನ್ನ ಆಶ್ರಯದಲ್ಲಿ ಆನೆಯನ್ನು ಹೊಂದಿರುವುದು ರಾಜನೊಬ್ಬನಿಗೆ ಪ್ರತಿಷ್ಠೆಯ ವಿಷಯವೂ ಆಗಿತ್ತು.

ಫ್ರೆಡೆರಿಕ್ ಹೆನ್ರಿಯ, ಕುತೂಹಲ-ಪ್ರತಿಷ್ಠೆಗಳು ಹಾನ್ಸ್‌ಕೆನ್‌ಳ ಜೀವನವನ್ನು ಪಲ್ಲಟಗೊಳಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ೧೬೩೩ರಲ್ಲಿ, ಅವಳಿಗೆ ಮೂರು ವರ್ಷವಿದ್ದಾಗ, ಅವಳನ್ನು ಅವಳ ಕುಟುಂಬದಿಂದ ಬೇರ್ಪಡಿಸಿ ಹಡಗೊಂದಕ್ಕೆ ಹತ್ತಿಸಲಾಯಿತು. (ಅಂದಹಾಗೆ, “ಹಾನ್ಸ್‌ಕೆನ್” ಎಂಬ ಅವಳ ಹೆಸರು, “ಆನೆ” ಎಂಬ ಪದದ ಡಚ್ ರೂಪಾಂತರವಷ್ಟೇ)

ಹಾನ್ಸ್‌ಕೆನ್, ಏಳು ತಿಂಗಳ ಸುದೀರ್ಘ ನೌಕಾಯಾನದ ನಂತರ, ಹಾಲೆಂಡ್ ತಲುಪಿದಳು. ಆದರೆ, ಅವಳು ಬಂದು ತಲುಪಿದ ಕೆಲವೇ ತಿಂಗಳಲ್ಲಿ, ರಾಜಕುಮಾರ ಫ್ರೆಡೆರಿಕ್ ಹೆನ್ರಿಯ ಕುತೂಹಲ ತಣಿಯಿತು. ಜೊತೆಗೇ, ಆನೆಯೊಂದನ್ನು ನೋಡಿಕೊಳ್ಳುವುದು ಕಷ್ಟದ ಮತ್ತು ಅತ್ಯಂತ ಖರ್ಚಿನ ವಿಷಯ. ಹೀಗಾಗಿ, ಅವನು, ಹಾನ್ಸ್‌ಕೆನ್‌ಳನ್ನು ತನ್ನ ಆಸ್ಥಾನಿಕನೊಬ್ಬನಿಗೆ “ಉಡುಗೊರೆ”ಯಾಗಿ ನೀಡಿದ. ರಾಜನಿಗೇ, ಸಾಕಲಾಗದ ಆನೆಯನ್ನು ಅವನ ಆಸ್ಥಾನಿಕನು ಸಾಕುವನೇ?! ಅವನು, ಹಾನ್ಸ್‌ಕೆನ್‌ಳನ್ನು ವರ್ತಕನೊಬ್ಬನಿಗೆ ಮಾರಿದ. ಆ ವರ್ತಕ ಇನ್ನೊಬ್ಬ ವರ್ತಕನಿಗೆ ಮಾರಿದ. ಹೀಗೆ, ಅವಳ ಮೇಲಿನ ಮಾಲೀಕತ್ವ ಎರಡು-ಮೂರು ಸಲ ಕೈ-ಬದಲಾಗಿ, ಕೊನೆಗೆ, ಕಾರ್ನೆಲಿಸ್ ವಾನ್ ಗ್ರೊಯೆನ್‌ವೆಲ್ಟ್ ಎಂಬುವನ ಕೈ ಸೇರಿತು. ಅವನು, ಅವಳನ್ನು ೨೦,೦೦೦ ಗಿಲ್ಡರ್‌ಗೆ (ನಮ್ಮ ಇಂದಿನ ಸುಮಾರು ನಾಲ್ಕು ಕೋಟಿ ರೂಪಾಯಿ) ಕೊಂಡುಕೊಂಡ. ಹಾನ್ಸ್‌ಕೆನ್ ತನ್ನ ಮುಂದಿನ ಇಡೀ ಜೀವನವನ್ನು ಈ ಕಾರ್ನೆಲಿಸ್‌ನ ಆಶ್ರಯದಲ್ಲಿಯೇ ಕಳೆದಳು.

ಈ ಕಾರ್ನೆಲಿಸ್, ಮನರಂಜನೆಯ ಉದ್ದಿಮೆಯಲ್ಲಿದ್ದವನು. ಯೂರೋಪಿನ ದೇಶಗಳ ಊರೂರು ಸುತ್ತುತ್ತಾ ಪ್ರದರ್ಶನಗಳನ್ನು ಏರ್ಪಡಿಸಿ, ಅದರಿಂದ ಹಣಗಳಿಸುತ್ತಿದ್ದವನು. ಅವನು ಹಾನ್ಸ್‌ಕೆನ್‌ಳಿಗೆ, “ಮಲಗು ಎಂದಾಗ ಮಲಗುವುದು”, “ಏಳು ಎಂದಾಗ ಏಳುವುದು”, “ಬಕೆಟ್ ಹಿಡಿಯುವುದು”, “ತುಪಾಕಿಯಿಂದ ಗುಂಡು ಹಾರಿಸುವುದು”, “ಕತ್ತಿ ಝಳಪಿಸುವುದು”, “ಧ್ವಜ ಬೀಸುವುದು”, ಹೀಗೆ, ನಾನಾ ಚಾತುರ್ಯಗಳನ್ನು ಕಲಿಸಿಕೊಟ್ಟ. ಇತಿಹಾಸಕಾರರು ಹೇಳುವಂತೆ, ಅವಳು, ತನ್ನ ಜೀವಿತಾವಧಿಯಲ್ಲಿ ಯೂರೋಪಿನ ೧೩೬ಕ್ಕೂ ಹೆಚ್ಚು ನಗರ-ಪಟ್ಟಣಗಳಲ್ಲಿ ತನ್ನ ಚಾತುರ್ಯಗಳ ಪ್ರದರ್ಶನ ನೀಡಿದಳಂತೆ.

ಹಾನ್ಸ್‌ಕೆನ್, ಊರೂರು ಸುತ್ತುತ್ತಾ ಪ್ರದರ್ಶನಗಳನ್ನು ನೀಡುತ್ತಿದ್ದಾಗ, ೧೬೩೭ರಲ್ಲಿ, ಆಮ್‌ಸ್ಟರ್‌ಡ್ಯಾಂನಲ್ಲಿ ಮಹಾನ್ ಕಲಾವಿದ ರೆಂಬ್ರಾಂಟ್‌ನ ಕಣ್ಣಿಗೆ ಬಿದ್ದಳು.

ರೆಂಬ್ರಾಂಟ್, ಹಾನ್ಸ್‌ಕೆನ್‌ಳ ಹಲವಾರು ಚಿತ್ರಗಳನ್ನು ಸ್ಕೆಚ್ ಮಾಡಿದ. ಆ ಕಾಲದ ಹಲವಾರು ಕಲಾವಿದರು ಅವಳ ಚಿತ್ರಗಳನ್ನು ರಚಿಸಿದರಾದರೂ, ರೆಂಬ್ರಾಂಟ್‌ನ ಚಿತ್ರಗಳಲ್ಲಿ ಒಂದು ವಿಶೇಷವಿದೆ. ಉಳಿದ ಕಲಾವಿದರು, ಹಾನ್ಸ್‌ಕೆನ್ ತನ್ನ ಚಾತುರ್ಯಗಳನ್ನು ಪ್ರದರ್ಶಿಸುತ್ತಿರುವುದನ್ನು ತಮ್ಮ ಚಿತ್ರಗಳಲ್ಲಿ ಸೆರೆ ಹಿಡಿದಿರಿಸಿದರೆ, ರೆಂಬ್ರಾಂಟ್ ತನ್ನ ಸ್ಕೆಚ್‌ಗಳಲ್ಲಿ ಹಿಡಿದಿರಿಸುವುದು ಅವಳ ನಡೆ, ವಿರಮಿಸುವ ಭಂಗಿ ಇತ್ಯಾದಿ ಸಹಜ ಕ್ರಿಯೆಗಳನ್ನು ಮಾತ್ರ. ಕೆಲ ಚಿತ್ರಗಳಲ್ಲಿ, ರೆಂಬ್ರಾಂಟ್, ಹಾನ್ಸ್‌ಕೆನ್‌ಳ ಮೈ ಚರ್ಮದ ಪ್ರತಿ ಸುಕ್ಕೂ, ಕೂದಲನ್ನೂ ಗಮನಿಸಿ ಚಿತ್ರ ರಚಿಸಿದ್ದಾನೆ.

ಆನೆಗಳು ಅನಾದಿಕಾಲದಿಂದಲೂ ಕಲಾವಿದರಿಗೆ ಸ್ಫೂರ್ತಿಯನ್ನೊದಗಿಸಿವೆ. ಹತ್ತಾರು ಸಾವಿರ ವರ್ಷಗಳ ಹಿಂದೆ, ಮಾನವ ಚರಿತ್ರೆಯ ಆದಿಯಲ್ಲಿಯೇ, ರಚಿಸಿದಂತಹ ಆನೆಗಳ ಚಿತ್ರಗಳು ಆಫ್ರಿಕದ ಹಲವೆಡೆ ಇಂದು ಕಾಣ ಸಿಗುತ್ತವೆ. ಭಾರತದಲ್ಲಂತೂ, ಆನೆ (ಮತ್ತು ಗಣೇಶನ) ಶಿಲ್ಪ ಮತ್ತು ಚಿತ್ರಕಲೆಗಳು ಇತಿಹಾಸದುದ್ದಕ್ಕೂ ಇದ್ದೇ ಇವೆ. ಇತ್ತೀಚಿನ ವರ್ಷಗಳಲ್ಲೂ ಸಹ, ಆನೆಗಳ ಬಗೆಗಿನ ಈ ಬೆರಗು ಕಡಿಮೆಯಾಗಿಲ್ಲ. ಎಮ್. ಎಫ್. ಹುಸೇನರ ಕುದುರೆಗಳು ಹಲವರಿಗೆ ಪರಿಚಿತವಿರಬಹುದು. ಆದರೆ, ಅವರೂ ಸಹ ಆನೆಗಳ ಹಲವಾರು ಚಿತ್ರಗಳನ್ನು ರಚಿಸಿದ್ದಾರೆ. ಅಮೆರಿಕನ್ ಸಮಾಜದ ದೈನಂದಿನತೆಯನ್ನು, ತನ್ನ ಪೇಂಟಿಂಗ್‌ಗಳಲ್ಲಿ ಹಿಡಿದಿಟ್ಟ ನಾರ್ಮನ್ ರಾಕ್‌ವೆಲ್, ಆನೆಗಳ ಚಿತ್ರ ರಚಿಸಿದ್ದಾನೆ. ಪಾಪ್ ಆರ್ಟ್‌ನ ಪಿತಾಮಹನೇ ಎನ್ನಬಹುದಾದ ಆಂಡಿ ವೋರ್ಹಾಲ್‌ಗೂ ಆನೆಗಳು ಸ್ಫೂರ್ತಿಯನ್ನು ಒದಗಿಸಿವೆ. ಯೂರೋಪ್ ಮತ್ತು ಅಮೆರಿಕದ ವಿವಿಧ ನಗರಗಳ ಗೋಡೆಗಳ ಮೇಲೆ ರಚಿಸಿದ “ಗ್ರಫೀಟಿ”ಗಳಿಂದಲೇ ಖ್ಯಾತನಾ(ರಾ)ಗಿರುವ, ಬ್ಯಾಂಕ್ಸಿ ಎಂಬ ನಾಮಾಕಿಂತ ಕಲಾವಿದನಿ(ರಿ)ಗೆ ಕೂಡಾ ಆನೆಗಳು ವಸ್ತುಗಳಾಗಿವೆ. ಆನೆಗಳ ಬಗೆಗಿನ ಬೆರಗು, ಸಾಲ್ವಡಾರ್ ಡಾಲಿಯಂತಹ ಸರ್ರೇಯಲಿಸ್ಟ್ ಕಲಾವಿದನನ್ನೂ ಬಿಟ್ಟಿಲ್ಲ.

ಡಾಲಿಯ “Swans Reflecting Elephants” ಕಲಾಕೃತಿ ಅಪಾರ ಹೆಸರನ್ನು ಪಡೆದಿರುವಂತಹುದು. ಆನೆಯ ಸೊಂಡಿಲುಗಳು ಹಂಸಗಳ ಕೊರಳುಗಳಾಗುವ ಈ ಪೇಂಟಿಂಗ್ ಹಲವಾರು ವ್ಯಾಖ್ಯಾನಗಳಿಗೆ ಕಾರಣವಾಗಿದೆ.

೧೯೬೦ರ ದಶಕದಲ್ಲಿ, ಏರ್ ಇಂಡಿಯಾ ಉತ್ತುಂಗದಲ್ಲಿ ಇತ್ತು. ಜಗತ್ತಿನ ಅತ್ಯಂತ ವೈಭವೋಪೇತ ವಿಮಾನ ಸಂಸ್ಥೆಗಳ ಮುಂಚೂಣಿಯಲ್ಲಿ ಏರ್ ಇಂಡಿಯಾ ಇದ್ದ ಕಾಲ ಅದು. ಆ ಸಮಯದಲ್ಲಿ, ನ್ಯೂಯಾರ್ಕ್‌ನ ಯಾವುದೋ ಒಂದು ಪಾರ್ಟಿಯಲ್ಲಿ, ಏರ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥರು ಸಾಲ್ವಡಾರ್ ಡಾಲಿಯನ್ನು ಭೇಟಿಯಾದರು. ಮಾತು ಎಲ್ಲೆಲ್ಲಿಗೋ ತಿರುಗಿ, ಕೊನೆಗೆ, ಸಾಲ್ವಡಾರ್ ಡಾಲಿ, ಏರ್ ಇಂಡಿಯಾಗೆ Ash Trayಗಳನ್ನು ವಿನ್ಯಾಸ ಮಾಡಿಕೊಡುವ ಕುರಿತು ಹೊರಳಿತು. ಆ ಮಾತುಕತೆಯ ನಂತರ ಡಾಲಿ, ಒಂದು ವಿನ್ಯಾಸವನ್ನೂ ಮಾಡಿಕೊಟ್ಟ. ಆನೆಗಳು ಹಂಸಗಳಾಗುವ ಆ ವಿನ್ಯಾಸ, ಅವನ “Swans Reflecting Elephants” ಕೃತಿಯಿಂದಲೇ ಪ್ರೇರಿತವಾದದ್ದೆಂದು ಮೊದಲ ನೋಟಕ್ಕೇ ಗೋಚರವಾಗುತ್ತದೆ. ಡಾಲಿಯ ಆ ವಿನ್ಯಾಸವನ್ನು ಬಳಸಿ, ಏರ್ ಇಂಡಿಯಾದವರು ಸುಮಾರು ೫೦೦ ರಿಂದ ೮೦೦ ಪಿಂಗಾಣಿ Ash Trayಗಳನ್ನು ತಯಾರಿಸಿದರಂತೆ. ಡಾಲಿ ಡಿಸೈನ್ ಮಾಡಿದ ಈ Ash Trayಗಳನ್ನು ತಮ್ಮ ವಿಮಾನಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವವರಿಗೆ ನೀಡುವ ಆಲೋಚನೆ ಅವರಿಗೆ ಇತ್ತಂತೆ. ಎಷ್ಟು ಮಂದಿ ಏರ್ ಇಂಡಿಯಾ ಪ್ರಯಾಣಿಕರು ಈ Ash Trayಗಳನ್ನು ಗಿಟ್ಟಿಸಿದರೋ ತಿಳಿಯದು. ಆದರೆ, ಇವು ಇಂದು ಅತ್ಯಂತ ಬೆಲೆಬಾಳುವ ಕಲೆಕ್ಟರ್ಸ್ ಐಟೆಮ್ಸ್.

ಅವಳು ಬಂದು ತಲುಪಿದ ಕೆಲವೇ ತಿಂಗಳಲ್ಲಿ, ರಾಜಕುಮಾರ ಫ್ರೆಡೆರಿಕ್ ಹೆನ್ರಿಯ ಕುತೂಹಲ ತಣಿಯಿತು. ಜೊತೆಗೇ, ಆನೆಯೊಂದನ್ನು ನೋಡಿಕೊಳ್ಳುವುದು ಕಷ್ಟದ ಮತ್ತು ಅತ್ಯಂತ ಖರ್ಚಿನ ವಿಷಯ. ಹೀಗಾಗಿ, ಅವನು, ಹಾನ್ಸ್‌ಕೆನ್‌ಳನ್ನು ತನ್ನ ಆಸ್ಥಾನಿಕನೊಬ್ಬನಿಗೆ “ಉಡುಗೊರೆ”ಯಾಗಿ ನೀಡಿದ.

ಡಾಲಿಯೇನೋ, ತನ್ನ ಮಾತಿನಂತೆ Ash Tray ವಿನ್ಯಾಸ ಮಾಡಿಕೊಟ್ಟ. ಆದರೆ, ಅದಕ್ಕೆ ಬದಲಿಗೆ ಅವನಿಗೆ ಸಂಭಾವನೆ ಕೊಡುವುದಾದರೂ ಏನು?! ಏರ್ ಇಂಡಿಯಾದ ಅಧಿಕಾರ ವರ್ಗದವರು, ಈ ಕುರಿತು ಡಾಲಿಯನ್ನು ಸಂಪರ್ಕಿಸಿದರಂತೆ. ಅದಕ್ಕೆ ಅವನು, “ಮರಿ ಆನೆಯೊಂದನ್ನು ಕೊಟ್ಟು ಬಿಡಿ” ಎಂದನಂತೆ. ಏರ್ ಇಂಡಿಯಾದವರು, ಮೊದಲಿಗೆ, ಅವನು ಜೋಕ್ ಮಾಡುತ್ತಿರಬಹುದು ಎಂದೇ ತಿಳಿದರಂತೆ. ಆದರೆ, ಅದು ಅವನ ನಿಜವಾದ ಅಪೇಕ್ಷೆ ಎಂದು ತಿಳಿದ ಮೇಲೆ, ೧೯೬೭ರ ಒಂದು ದಿನ, ನಮ್ಮ ರಾಜ್ಯದ ಒಂದು ಮರಿಯಾನೆಗೆ ತನ್ನ ಕುಟುಂಬದಿಂದ ಬೇರಾಗುವ ಸಂದರ್ಭ ಎದುರಾಯಿತು. ಎರಡು ವರ್ಷದ “ಬಿಗ್ ಬೇಬಿ” ಹೆಸರಿನ ಮರಿ ಆನೆಯೊಂದನ್ನು, ಬೆಂಗಳೂರಿನಿಂದ ವಿಮಾನದಲ್ಲಿ ಸ್ವಿಟ಼್ಜರ್‌ಲ್ಯಾಂಡಿನ ಜಿನೀವಾ ನಗರಕ್ಕೆ ಏಕಾಂಗಿಯಾಗಿ ಕಳುಹಿಸಲಾಯಿತು. ಅಲ್ಲಿಂದ, ಟ್ರಕ್ ಒಂದರಲ್ಲಿ, ಸಾಲ್ವಡಾರ್ ಡಾಲಿ ಇದ್ದ ಸ್ಪೇನ್‌ನ ಕೆಡಾಕೆಸ್ ಪಟ್ಟಣಕ್ಕೆ ಕರೆದೊಯ್ಯಲಾಯಿತು.

ಬಿಗ್ ಬೇಬಿ ಕೆಡಾಕೆಸ್‌ನಲ್ಲಿ ಬಂದಿಳಿದಾಗ ಅವನನ್ನು ಭಾರೀ ಸಂಭ್ರಮದಿಂದ ಸ್ವಾಗತಿಸಲಾಯಿತು. ಆ ಸಂಭ್ರಮಾಚರಣೆಯ ಅಂಗವಾಗಿ ಪಟ್ಟಣದ ಮೇಯರ್ ಶಾಲಾ ಕಾಲೇಜುಗಳಿಗೆ ಮೂರು ದಿನದ ರಜೆಯನ್ನೂ ಘೋಷಿಸಿದನಂತೆ. ಮುಂದಿನ ಕೆಲ ತಿಂಗಳ ಕಾಲ, ನಮ್ಮ ಬೆಂಗಳೂರಿನ ಬಿಗ್ ಬೇಬಿ, ತನ್ನೆಲ್ಲಾ ಕುಟುಂಬದವರಿಂದ ಬೇರಾಗಿ, ಸ್ಪೇನಿನ ಸಾಲ್ವಡಾರ್ ಡಾಲಿಯ ಖಾಸಗಿ ಉದ್ಯಾನದಲ್ಲಿ ಒಬ್ಬನೇ ಸುತ್ತಾಡಿದನಂತೆ. ಆದರೆ, ಅವನು ಬೆಳೆದಂತೆ, ನೋಡಿಕೊಳ್ಳುವುದು ಕಷ್ಟವಾಗಿ, ಬಾರ್ಸೆಲೋನಾ ನಗರದ ಮೃಗಾಲಯಕ್ಕೆ ಅವನನ್ನು ರವಾನಿಸಲಾಯಿತಂತೆ. ಅಲ್ಲೂ ಸಹ ಅವನಿಗೆ ಕಾದಿದ್ದದ್ದು ಏಕಾಂತವಾಸವಷ್ಟೇ.

*****


“Adam and Eve in Paradise” ಎನ್ನುವುದು ರೆಂಬ್ರಾಂಟ್‌ನ ಒಂದು ಮಹತ್ತರ ಕೃತಿ. ಇದರಲ್ಲಿ, ಚಿತ್ರಿತವಾಗಿರುವ ಆಡಂ ಮತ್ತು ಈವ್, ಉಳಿದ ಕಲಾವಿದರ ಚಿತ್ರಗಳಲ್ಲಿನ ಆಡಂ, ಈವ್‌ಗಳಂತೆ ಇಲ್ಲ. ಅವರ ದೇಹಾಕಾರಗಳಲ್ಲಿ ಮತ್ತು ಮುಖಗಳಲ್ಲಿ ಕಾಣುವುದು ಮಾನವತೆಯ ಸಾಮಾನ್ಯತೆಯೇ ಹೊರತು, ಉಳಿದ ಕಲಾವಿದರ ರಚನೆಗಳಲ್ಲಿ ತೋರುವ “Ideal” ಜೋಡಿಯಲ್ಲ.

ರೆಂಬ್ರಾಂಟ್‌ನ ಈ ಚಿತ್ರದಲ್ಲಿ, ಡ್ರಾಗನ್ ಒಂದು ದುಷ್ಟತೆ-ಕೆಡುಕು-ಪಾಪ-ಅಧರ್ಮಗಳ ಸಂಕೇತವಾಗಿ ನಿಂತಿದ್ದರೆ, ಅದರೊಂದಿಗೇ, ಗುಂಡು-ಗುಂಡಾಗಿರುವ ಆನೆಯೊಂದು ಸಹ ಇದೆ. ಆನೆ, ಇಲ್ಲಿ ದೈವಾನುಗ್ರಹ ಮತ್ತು ಪರಿಶುದ್ಧತೆಯ ಪ್ರತೀಕ. ಹಲವಾರು, Art Historians ಹೇಳುವಂತೆ ಈ ಆನೆ ಬೇರಾರೂ ಅಲ್ಲ. ಅವಳು, ಹಾನ್ಸ್‌ಕೆನ್.

ರೆಂಬ್ರಾಂಟ್‌ನ ಕಲ್ಪನಾ ಲೋಕದಲ್ಲಿ, ಮಾನವರ ಉಗಮದಲ್ಲೇ ಕಾಣಿಸಿಕೊಂಡ ಹಾನ್ಸ್‌ಕೆನ್, ನಿಜ ಜೀವನದಲ್ಲಿ ಹೆಚ್ಚು ಕಾಲ ಬದುಕಲಿಲ್ಲ. ತನ್ನ ಮಾಲೀಕನ ಜೊತೆ ಊರೂರು ಸುತ್ತಿ ಪ್ರದರ್ಶನಗಳನ್ನು ನೀಡುತ್ತಿದ್ದ ಅವಳು ೧೬೫೫ರಲ್ಲಿ ಇಟಲಿಯ ಫ್ಲಾರೆನ್ಸ್ ನಗರಕ್ಕೆ ಬಂದಳು. ಆ ವರ್ಷದ ನವೆಂಬರ್ ೯ರಂದು ಅವಳು ಆ ನಗರದ ಮುಖ್ಯರಸ್ತೆಯೊಂದರಲ್ಲಿ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದವಳು ಮೇಲೇಳಲಿಲ್ಲ. ಅವಳ ಪಾದಗಳಲ್ಲಿ ವಿಪರೀತ ಗಾಯಗಳಾಗಿ, ಅದರ ಸೋಂಕಿನಿಂದ ಘಾಸಿಗೊಂಡಿದ್ದ ಅವಳು ಅಲ್ಲೇ ಮೃತಳಾದಳು. ಆಗ ಅವಳಿಗೆ ಕೇವಲ ೨೫ ವರ್ಷ ವಯಸ್ಸು.

ಅವಳು ಕುಸಿದು ಸಾವನ್ನಪ್ಪುವ ವೇಳೆಗೆ, ಸ್ಟೆಫನೋ ಡೆಲ್ಲಾ ಬೆಲ್ಲಾ ಎಂಬ ಇಟಾಲಿಯನ್ ಕಲಾವಿದ ಅಲ್ಲಿಯೇ ಇದ್ದ. ಅವನು, ಹಾನ್ಸ್‌ಕೆನ್‌ಳ ಕೊನೆಯ ಕ್ಷಣಗಳನ್ನು ತನ್ನದೊಂದು ಚಿತ್ರದಲ್ಲಿ ಹಿಡಿದಿಟ್ಟಿದ್ದಾನೆ.

*****

ಅಗಲಿದವರನ್ನು ನೆನೆಪಿಸಿಕೊಳ್ಳುವುದು, ಅವರಿಗಾಗಿ ಸ್ಮಾರಕ ಸಮಾಧಿಗಳನ್ನು ನಿರ್ಮಿಸುವುದು ಮಾನವತೆಯ ವೈಶಿಷ್ಟ್ಯವೆಂದೇ ಗುರುತಿಸಲಾಗುತ್ತದೆ. ಇಂತಹ ನಡವಳಿಕೆ ಬೇರಾವ ಪ್ರಾಣಿಗಳಲ್ಲೂ ಕಾಣದೆಂದೇ ಅಭಿಪ್ರಾಯ ಇತ್ತೀಚಿನವರೆಗೆ ಇತ್ತು. ಆದರೆ, ಆನೆಗಳು, ಅಗಲಿದ ತಮ್ಮವರಿಗಾಗಿ ಇಂತಹ “ಸಮಾಧಿ”ಗಳನ್ನು ನಿರ್ಮಿಸುವುದು, ಶೋಕಿಸುವುದನ್ನು ಗಜತಜ್ಞರು ಗಮನಿಸುತ್ತಿದ್ದಾರೆ. ಕೆನ್ಯಾದಲ್ಲಿ, ಆನೆಗಳೇ “ನಿರ್ಮಿಸಿರುವಂತಹ ಸ್ಮಶಾನ”ಗಳೇ ಇರುವುದು ಕಂಡುಬಂದಿವೆ.

ಆನೆಗಳ ಗುಂಪೊಂದು ಸುತ್ತಾಡುತ್ತಿರುವಾಗ, ಅವುಗಳಿಗೆ, ಆನೆಯೊಂದರ ಅಸ್ತಿ ಪಂಜರವೊಂದು ಕಂಡರೆ, ಆ ಗುಂಪು ಅಲ್ಲಿಯೇ ನಿಂತು, ಆ ಅಸ್ತಿ ಪಂಜರವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಅದಕ್ಕೆ “ಗೌರವ ಸಲ್ಲಿಸುವುದನ್ನು” ತಜ್ಞರು ನೋಡಿದ್ದಾರೆ.

ತಮ್ಮ ಮರಿಗಳು ನಿಧನಹೊಂದಿದಾಗ, ದೂರವಾದಾಗ, ಅವುಗಳ ಅಮ್ಮಂದಿರು ಹಲವಾರು ದಿನಗಳ ಕಾಲ ನೀರು-ಆಹಾರದಲ್ಲೂ ಆಸಕ್ತಿ ಹೊಂದದೆ, ವಿಷಾದದ ನೋವಿನಲ್ಲಿರುವುದು ಸರ್ವೇ ಸಾಮಾನ್ಯ ಎನ್ನುತ್ತಾರೆ ಅವುಗಳೊಂದಿಗೆ ದೀರ್ಘ ಕಾಲದ ಒಡನಾಟ ಹೊಂದಿರುವವರು. ತಮ್ಮ ಕುಟುಂಬದ ಆನೆಗಳು ಸತ್ತಾಗ, ಅವರ ದೇಹವನ್ನು ಮಣ್ಣು, ಎಲೆ-ಗಿಡಗಳಿಂದ ಮರೆ ಮಾಡಿ, ಹಲವಾರು ಗಂಟೆಗಳ ಕಾಲ ಅಲ್ಲಿಯೇ ಸದ್ದಿಲ್ಲದೇ ಕಣ್ಣೀರಿಡುತ್ತಾ ನಿಂತಿರುವ ಆನೆಗಳ ಎಷ್ಟೋ ವರದಿಗಳು ಇಂದು ಇವೆ. ಕೇವಲ ಆನೆಗಳ ಮೃತ ದೇಹಗಳನ್ನು ಮಾತ್ರವಲ್ಲ, ಮನುಷ್ಯರ ಮೃತ ದೇಹಗಳನ್ನೂ ಸಹ ಆನೆಗಳು “ಸಮಾಧಿ” ಮಾಡಿರುವ ವರದಿಗಳೂ ಇವೆ.

ಅವು ಶೋಕಾಚರಣೆಗಳೇ? “ಶೋಕ” ಎಂಬ ಭಾವ ಆನೆಗಳ ಭಾವ ಪ್ರಪಂಚದಲ್ಲೂ ಇದೆಯೇ? ಆನೆಗಳಿಗೂ ಭಾವ ಪ್ರಪಂಚವಿದೆಯೇ? ಇವೆಲ್ಲಾ ಪ್ರಶ್ನೆಗಳಷ್ಟೇ.

ಹಾನ್ಸ್‌ಕೆನ್ ಸತ್ತ ನಂತರವೂ, ಅವಳ ಪ್ರದರ್ಶನ, ಅವಳಿಂದ ಹಣಗಳಿಕೆ ನಿಲ್ಲಲಿಲ್ಲ. ಅವಳ ಮಾಲೀಕ, ಅವಳ ಮೃತ ದೇಹವನ್ನು ಇಟಲಿಯ ಫರ್ಡಿನೆಂಡೋ ಡಿ ಮೆಡಿಚಿ ಎಂಬ ಇಟಲಿಯ ಗಣ್ಯ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ. ಡಿ ಮೆಡಿಚಿಗೆ, ವಿಜ್ಞಾನದಲ್ಲಿ ಆಸಕ್ತಿಯಿತ್ತು. ಹೀಗಾಗಿ, ಅವಳ ದೇಹವನ್ನು ಕೂಲಂಕುಶವಾಗಿ ಅಧ್ಯಯನ ಮಾಡಲಾಯಿತು. ಆಧುನಿಕ ಪಾಶ್ಚಾತ್ಯ ವಿಜ್ಞಾನ ಕೂಲಂಕುಶವಾಗಿ ಅಧ್ಯಯನ ನಡೆಸಿದ ಪ್ರಪ್ರಥಮ ಆನೆಯೆಂದರೆ, ಅವಳು ಹಾನ್ಸ್‌ಕೆನ್. ನಂತರದಲ್ಲಿ, ಅವಳ ದೇಹವನ್ನು ಫ್ಲಾರೆನ್ಸ್‌ನ ಗ್ಯಾಲೆರಿಯೊಂದರಲ್ಲಿ ಪ್ರದರ್ಶನಕ್ಕೆ ಇಡಲಾಯಿತು.


ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ, ಅವಳ ಚರ್ಮ ಹಾಳಾಗಿದ್ದರಿಂದ, ಕೇವಲ ಅಸ್ತಿ ಪಂಜರವಷ್ಟೇ ಉಳಿಯಿತು. ಇಂದು, ಅವಳ ತಲೆ ಬುರುಡೆಯನ್ನು ರೆಂಬ್ರಾಂಟ್ ಕಲಾ ಪ್ರದರ್ಶನದ ಅಂಗವಾಗಿ, ಆಮ್‌ಸ್ಟರ್‌ಡ್ಯಾಂನ “ರೆಂಬ್ರಾಂಟ್ ಹೌಸ್”‌ನಲ್ಲಿ ತಾತ್ಕಾಲಿಕವಾಗಿ ಇಡಲಾಗಿದೆ.

“ಡ್ರಾಗನ್‌”ಗಳು ಎಲ್ಲೆಡೆ ಇರುವುದರಿಂದ, ಮ್ಯೂಸಿಯಂಗಳಲ್ಲಿ ಅವುಗಳ ಪ್ರದರ್ಶನ ಅನವಶ್ಯಕ.