ಮಾನವನ ಪ್ರಕೃತಿಯ ಮೇಲಿನ ದಬ್ಬಾಳಿಕೆಗೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಟ್ರಾಕ್ಟರ್‌ನಂತಹ ಯಂತ್ರ ಎಲ್ಲರಂತೆಯೇ ಜೀವಿಸುವ ಹಕ್ಕಿರುವ ಹಾವಿನ ಜೀವಕ್ಕೆ ಕುತ್ತು ತಂದಿತ್ತು. ಹಾವು ಕಣ್ಣಿಗೆ ಕಾಣುವ ಜೀವ. ಇನ್ನೂ ಸೂಕ್ಷ್ಮವಾಗಿರುವ ಕಣ್ಣಿಗೆ ಕಾಣದ ಎಷ್ಟೋ ಜೀವಗಳು ಮಣ್ಣಿನಲ್ಲಿ ಬೆರೆತು ವಾಸ ಮಾಡುತ್ತವೆ. ಅವುಗಳನ್ನೆಲ್ಲ ಬುಡಮೇಲು ಮಾಡಿ ಕತ್ತರಿಸಿ ಹಾಕಲು ನಮಗೆ ಹಕ್ಕಿದೆಯೆ? ಅಲ್ಲೊಂದು ನಮಗರಿವಿಲ್ಲದೆ ಉಸಿರಾಡುತ್ತಿರುವ ಜಗತ್ತು ಇದೆ. ಅವುಗಳಿಂದ ನಮ್ಮ ಗಿಡ ಮರಗಳಿಗೆ ಪೋಷಣೆಯೂ ನಿರಂತರವಾಗಿ ಸಿಗುತ್ತಿದೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

ಟ್ರಾಕ್ಟರ್ ಒಂದು ಹೊಲದಲ್ಲಿ ಉಳುಮೆ ಮಾಡುತ್ತಿದೆ ಅಂತ ಅದರ ಸದ್ದು ಗದ್ದಲದಿಂದಲೇ ಹೇಳಬಹುದು. ಭೂಮಿಯ ಇಂಚಿಂಚನ್ನೂ ಬಗೆದು ಮಣ್ಣನ್ನು ಬುಡಮೇಲು ಮಾಡುತ್ತಾ ಸಾಗುವ ಅದರ ಶಬ್ದ ಒಂದು ಕಡೆ ಆದರೆ ಅದನ್ನು ನಡೆಸುವ ಸಾರಥಿ ದೊಡ್ಡದಾಗಿ ಹಾಡು ಹಾಕಿಕೊಂಡು ಓಡಿಸುತ್ತಾನಲ್ಲ ಅದರ ಶಬ್ದ ಇನ್ನೂ ಭಯಂಕರ. ಎಷ್ಟೋ ಮೀಟರುಗಳವರೆಗೂ ಕೇಳುತ್ತದೆ. ಹೀಗಾಗಿ ಇಂತಹ ಟ್ರಾಕ್ಟರ್‌ಗಳ ಹಿಂದೆ ಎಂದೂ ನಿಲ್ಲಬಾರದು. ಅಕಸ್ಮಾತಾಗಿ ಟ್ರ್ಯಾಕ್ಟರ್ ಕೆಳಗೆ ಬಿದ್ದು ಸಿಕ್ಕಿಕೊಂಡು ನಾವು ಎಷ್ಟೇ ಕೂಗಿದರೂ ಸಾರಥಿಗೆ ಗೊತ್ತೇ ಆಗೋಲ್ಲ! ಬಹುಶಃ ಹಾಗೆ ಹಿಂದೆ ಯಾರೂ ನಿಲ್ಲಬಾರದು ಅಂತಲೇ ಅಷ್ಟೊಂದು ಶಬ್ದ ಮಾಡುತ್ತಾರೋ ಏನೋ! ಹೀಗೆ ಓಡಿಸುತ್ತಾ ಇರುವಾಗ ಅದರ ಇಂಜಿನ್ ಬಂದ್ ಮಾಡಿದರು ಅಂದರೆ ಒಂದೋ ಕೆಲಸ ಮುಗೀತು ಇಲ್ಲವೇ ಏನೋ ಅಡಚಣೆ ಬಂದಿರಬೇಕು ಅಂತ. ಕೆಲವೊಮ್ಮೆ ದೊಡ್ಡ ದೊಡ್ಡ ಕಂಟಿ, ಬಳ್ಳಿಗಳು ರೋಟರ್‌ನ ಅಡಿಯಲ್ಲಿ ಸಿಕ್ಕಿಕೊಳ್ಳುತ್ತವೆ ಕೂಡ.

ಹೀಗೆ ನಮ್ಮ ಹೊಲದಲ್ಲಿ ಒಮ್ಮೆ ಟ್ರ್ಯಾಕ್ಟರ್ ಹೊಡೆಯುತ್ತಿದ್ದಾಗ ಅದರ ಗಡಚಿಕ್ಕುವ ಸದ್ದು ನಿಂತು ಹೋಯ್ತು. ಟ್ರ್ಯಾಕ್ಟರ್ ಓಡಿಸುತ್ತಿದ್ದ ಬಾಬು ಅದರಿಂದ ಕೆಳಗೆ ಇಳಿದಿದ್ದ. ನಿಂತಲ್ಲಿಂದಲೇ ನಮಗೆ ಬಾ ಅಂತ ಸನ್ನೆ ಮಾಡಿ ಕರೆಯುತ್ತಿದ್ದ. ಯಾವುದೇ ಪರಿಸ್ಥಿತಿಯಲ್ಲೂ ಅದರಿಂದ ಅವರು ಕೆಳಗೆ ಇಳಿಯೋದು ತುಂಬಾ ಕಡಿಮೆ. ಏನಾಯ್ತು ನೋಡೋಣ ಅಂತ ಅವನ ಬಳಿ ಸಾಗಿದೆ. ಅಲ್ಲೊಂದು ಅನಾಹುತ ಆಗಿತ್ತು. ಅವನು ಉಳುಮೆ ಮಾಡುವಾಗ ಅವನ ರೋಟರ್ ಅಡಿ ಒಂದು ದೊಡ್ಡ ನಾಗರ ಹಾವು ಸಿಕ್ಕಿ ಛಿದ್ರವಾಗಿತ್ತು. ಇನ್ನೂ ಜೀವ ಇತ್ತಾದ್ದರಿಂದ ಅದನ್ನು ಹೊಡೆದು ಸಾಯಿಸಿಬಿಟ್ಟಿದ್ದ ಅವನು. ಈಗಾಗಲೇ ಚಕ್ರದಡಿ ಸಿಕ್ಕಿ ಅರೇಜೀವವಾಗಿದ್ದ ಹಾವು ಇನ್ನೂ ನೋವು ಅನುಭವಿಸಬಾರದು ಅಂದುಕೊಂಡು ಅದನ್ನು ಸಾಯಿಸಿದ್ದು ಅವನ ತಪ್ಪಾಗಿರಲಿಲ್ಲ. ಆದರೆ ನಮಗೆ ತುಂಬಾ ಸಂಕಟವಾಯ್ತು.

ಪಕ್ಕದ ಹೊಲದ ಗೌಡರಿಗೂ ವಿಷಯ ತಿಳಿದು ಸಂಜೆ ತಮ್ಮ ಬೈಕಿನಲ್ಲಿ ಹೊಲಕ್ಕೆ ಬಂದಾಗ, ಹಾವು ಸತ್ತ ವಿಷಯ ತಿಳಿದು ಭಾರಿ ಬೇಸರ ಆಯ್ತು ಅಂತ ಮೊಸಳೆ ಕಣ್ಣೀರು ಸುರಿಸಿದರು. ಯಾಕಂದರೆ ಹಿಂದಿನ ದಿನವೇ, “ಇಡೀ ಹೊಲ ಸ್ವಚ್ಹ ಇರಬೇಕು ನೋಡ್ರಿ, ಹಾವು ಕಂಡರ ಆಗಂಗಿಲ್ಲ ನನಗ… ಅದು ಎದುರಿಗೆ ಕಂಡರ ಸಾಯಿಸೆ ಬಿಡ್ತೀನಿ…” ಅಂದವರು ಇವತ್ತು ಹೀಗೆ ಹೇಳುತ್ತಿದ್ದರು. ಅದು ದೇವ್ರು ಇದ್ದಂಗ ಇತ್ತು ನೋಡ್ರಿ ಅಂತ ಮತ್ತೆ ಕಣ್ಣು ವರೆಸಿಕೊಂಡರು!

ಮಾನವನ ಪ್ರಕೃತಿಯ ಮೇಲಿನ ದಬ್ಬಾಳಿಕೆಗೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಟ್ರಾಕ್ಟರ್‌ನಂತಹ ಯಂತ್ರ ಎಲ್ಲರಂತೆಯೇ ಜೀವಿಸುವ ಹಕ್ಕಿರುವ ಹಾವಿನ ಜೀವಕ್ಕೆ ಕುತ್ತು ತಂದಿತ್ತು. ಹಾವು ಕಣ್ಣಿಗೆ ಕಾಣುವ ಜೀವ. ಇನ್ನೂ ಸೂಕ್ಷ್ಮವಾಗಿರುವ ಕಣ್ಣಿಗೆ ಕಾಣದ ಎಷ್ಟೋ ಜೀವಗಳು ಮಣ್ಣಿನಲ್ಲಿ ಬೆರೆತು ವಾಸ ಮಾಡುತ್ತವೆ. ಅವುಗಳನ್ನೆಲ್ಲ ಬುಡಮೇಲು ಮಾಡಿ ಕತ್ತರಿಸಿ ಹಾಕಲು ನಮಗೆ ಹಕ್ಕಿದೆಯೆ? ಅಲ್ಲೊಂದು ನಮಗರಿವಿಲ್ಲದೆ ಉಸಿರಾಡುತ್ತಿರುವ ಜಗತ್ತು ಇದೆ. ಅವುಗಳಿಂದ ನಮ್ಮ ಗಿಡ ಮರಗಳಿಗೆ ಪೋಷಣೆಯೂ ನಿರಂತರವಾಗಿ ಸಿಗುತ್ತಿದೆ. ಅಂತಹ ಜೀವಿಗಳನ್ನು ನಿರ್ನಾಮ ಮಾಡಿ ಅಲ್ಲೊಂದಿಷ್ಟು ರಾಸಾಯನಿಕ, ವಿಷಗಳನ್ನು ಸುರಿದು ಬೆಳೆಯುವ ಅಕ್ಕಿ ತಿಂದರೆ ನಾವೂ ಒಂದು ದಿನ ಅವುಗಳಂತೆಯೆ ಒದ್ದಾಡಿ ಸಾಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರ ಪರಿಣಾಮವನ್ನು ಈಗಾಗಲೇ ನೋಡುತ್ತಿದ್ದೇವೆ.

ಇನ್ನು ಮುಂದೆ ನಾನು ಟ್ರಾಕ್ಟರ್ ಹೊಡೆಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು, ನನ್ನ ಹೊಲದಲ್ಲಿ ಉಳುಮೆ ಮಾಡುವುದನ್ನೇ ಕ್ರಮೇಣ ನಿಲ್ಲಿಸಬೇಕು ಅಂತ ನಿರ್ಧರಿಸಿದೆ. ಸತ್ತಿದ್ದ ನಾಗರಹಾವಿನ ಅಂತ್ಯಕ್ರಿಯೆ ಅಲ್ಲಿಯೇ ಹೊಲದಲ್ಲಿ ಒಂದು ಕಡೆ ಮಾಡಿದೆವು.

ವಾಪಸ್ಸು ಮನೆಯ ಕಡೆಗೆ ಹೋಗುವಾಗ “ಸರ್ ಉಳುಮೆ ಮಾಡೋದು ಬೇಡಾ ಅಂತೀರಾ, ಮಣ್ಣು ಸಡಿಲ ಮಾಡೋದು ಕಷ್ಟ ಅಲ್ವಾ?” ಅಂತ ನಾಗಣ್ಣ ಕೇಳಿದರು.

“ನಾವು ಸರಿಯಾದ ರೀತಿಯಲ್ಲಿ ಸಹಜ ಕೃಷಿ ಪದ್ಧತಿ ಮಾಡಿದರೆ ಕ್ರಮೇಣವಾಗಿ ಮಣ್ಣು ತಾನಾಗಿಯೇ ಸಡಿಲ ಆಗುತ್ತೆ ಬಿಡಿ..” ಅಂದೆ.

ಅವನು ಉಳುಮೆ ಮಾಡುವಾಗ ಅವನ ರೋಟರ್ ಅಡಿ ಒಂದು ದೊಡ್ಡ ನಾಗರ ಹಾವು ಸಿಕ್ಕಿ ಛಿದ್ರವಾಗಿತ್ತು. ಇನ್ನೂ ಜೀವ ಇತ್ತಾದ್ದರಿಂದ ಅದನ್ನು ಹೊಡೆದು ಸಾಯಿಸಿಬಿಟ್ಟಿದ್ದ ಅವನು. ಈಗಾಗಲೇ ಚಕ್ರದಡಿ ಸಿಕ್ಕಿ ಅರೇಜೀವವಾಗಿದ್ದ ಹಾವು ಇನ್ನೂ ನೋವು ಅನುಭವಿಸಬಾರದು ಅಂದುಕೊಂಡು ಅದನ್ನು ಸಾಯಿಸಿದ್ದು ಅವನ ತಪ್ಪಾಗಿರಲಿಲ್ಲ. ಆದರೆ ನಮಗೆ ತುಂಬಾ ಸಂಕಟವಾಯ್ತು.

ಭೂಮಿಯಲ್ಲಿ ಸಹಜವಾಗಿ ಉಳುಮೆ ಮಾಡುವ ಪ್ರಾಣಿ ಅಂದರೆ ಅದು ಎರೆಹುಳು. ಅದು ಭೂಮಿಯ ಒಳಗೆ ಎಷ್ಟೋ ಅಡಿಗಳ ಆಳಕ್ಕೆ ಹೋಗಿ ಅಲ್ಲಿಂದ ಪೋಷಕಾಂಶಗಳನ್ನು ತಂದು ಭೂಮಿಯ ಮೆಲ್ಪದರಕ್ಕೆ ಸುರಿಯುತ್ತೆ. ನಾವು ಉಳುಮೆ ಮಾಡುತ್ತಿದ್ದರೆ ಅದರಂತಹ ಎಷ್ಟೋ ಜೀವಿಗಳಿಗೆ ಉಳಿಗಾಲವಿಲ್ಲ. ಅಂತಹ ಜೀವಿಗಳಿಗೆ ಜೀವಿಸಲು ಅನುವು ಮಾಡಿಕೊಡುವ ಪದ್ಧತಿಯೇ ನೈಸರ್ಗಿಕ ಕೃಷಿ. ಅದು ಅಂದುಕೊಂಡಷ್ಟು ಸುಲಭವೂ ಅಲ್ಲ. ಆದರೆ ಹಲವು ವರ್ಷಗಳು ಕಷ್ಟಪಟ್ಟರೆ ಮುಂದೆ ಅದೇ ನಮ್ಮನ್ನು ಸಲಹುತ್ತದೆ.

ಅತ್ತೆಗೂ ವಿಷಯ ತಿಳಿಸಿದೆವು. ಆಗಿದ್ದು ಆಗಿಹೋಯ್ತು, ಶಿರಸಿಯಲ್ಲಿ ಇರೋ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಕೈಮುಗಿದು ತಪ್ಪಾಯ್ತು ಅಂತ ಕೇಳಿಕೊಂಡು ಒಂದಿಷ್ಟು ಕಾಣಿಕೆ ಹಾಕಿ ಬಾ ಅಂದರು. ನಾನೂ ಹೂಂ ಅಂದೆ. ಮೊದಲಿನ ಹಿರಿಯರು ಪ್ರಾಣಿ, ಗಿಡಮರಗಳಿಗೆ ಒಂದು ದೈವತ್ವವನ್ನು ಕೊಟ್ಟಿದ್ದರು. ಹೀಗಾಗಿ ಜನರು ಹೆದರುತ್ತಿದ್ದರು. ಕೆಲವು ಗಿಡಗಳನ್ನು ಕಡೆಯೋದು ಬೇಡ ಅಂದರು, ಅದನ್ನೊಂದು ಕತೆಗೆ ಲಿಂಕ್ ಮಾಡಿದರು. ಹೀಗೆ ಮಾಡಿದರೆ ಹಾಗೆ ಆಗುತ್ತೆ ಅಂದರು. ನಾಗರ ಹಾವನ್ನು ಕೊಂದರೆ ಪಾಪ ಬರುತ್ತೆ ಅಂದರು. ಇಂತಹ ಬೆದರಿಕೆಗಳು ಇದ್ದಿದ್ದಕ್ಕೇನೆ ಪ್ರಕೃತಿ ರಕ್ಷಣೆ ಸಾಧ್ಯವಾಗಿತ್ತು. ಅದನ್ನೆಲ್ಲ ನಂಬದೆ ಮೂಢನಂಬಿಕೆ ಅಂತ ನಕ್ಕು ಅವಹೇಳನ ಮಾಡಿದ ವಿದ್ಯಾವಂತರು ಪ್ರಕೃತಿ ನಾಶಕ್ಕೆ ತೊಡಗಿದರು. ಮುಂದೊಂದು ದಿನ ನಮ್ಮ ನಾಶಕ್ಕೆ ಮುನ್ನುಡಿ ಬರೆಯುತ್ತದೆ ಎಂಬ ಅರಿವೂ ಇಲ್ಲದಂತೆ!

*****

ಈ ರೀತಿ ಭೂಮಿಯನ್ನು ಉಳುಮೆ ಮಾಡಿ ನಂತರ ಭತ್ತವನ್ನು ಚೆಲ್ಲುವ ಅಥವಾ ಬೀರುವ ಪ್ರಕ್ರಿಯೆ ಸುಲಭ ಆದರೂ ಮುಂದೆ ಕಳೆ ನಿಯಂತ್ರಣ ಸ್ವಲ್ಪ ಕಷ್ಟ. ಬೀಜಗಳನ್ನು ಎಸೆಯುವುದರಿಂದ ಅವು ಎಲ್ಲೆಂದರಲ್ಲಿ ಬೀಳುತ್ತವೆ. ಕೆಲವು ಕಡೆ ಹೆಚ್ಚು, ಕೆಲವು ಕಡೆ ತೆಳುವಾಗಿ, ಇನ್ನೂ ಕೆಲವು ಕಡೆ ಬೀಳದೆಯೂ ಇರಬಹುದು. ಇದಕ್ಕಿಂತ ವ್ಯವಸ್ಥಿತವಾದ ಪದ್ಧತಿ ನೆಟಿಗೆ ಪದ್ಧತಿ. ಅದರಲ್ಲಿ ಮೊದಲು ಭತ್ತದ ಸಸಿಗಳನ್ನು ತಯಾರಿಸಿ ಇಟ್ಟುಕೊಂಡು ಆಮೇಲೆ ಗದ್ದೆಯಲ್ಲಿ ನೀರು ಹಾಯಿಸಿ ರಾಡಿ ಮಾಡುತ್ತಾರೆ. ಅದಕ್ಕೆ ಅರಲು ಗದ್ದೆ ಅಂತಾರೆ. ಇಲ್ಲಿ ಕೆಲಸ ತುಂಬಾ ಜಾಸ್ತಿ. ಹೆಚ್ಚು ಜನ ಆಳುಗಳು ಬೇಕು. ಅದೂ ಅಲ್ಲದೆ ಗದ್ದೆಗಳಲ್ಲಿ ನಿರಂತರವಾಗಿ ನೀರು ನಿಲ್ಲಿಸಬೇಕು. ಜೊತೆಗೆ ಕಳೆ ನಾಶಕ ಕೂಡ ಹೊಡೆಯುತ್ತಾರೆ. ಇದರಿಂದ ಆಗುವ ದೊಡ್ಡ ಲಾಭ ಅಂದರೆ ಕಳೆ ಬೆಳೆಯುವುದೇ ಇಲ್ಲ. ಆದರೆ ನಷ್ಟ ಯಾರಿಗೆ? ಹೀಗೆ ಬೆಳೆದ ಭತ್ತವನ್ನು ತಿಂದವರಿಗೆ!

ನಿಜ ಹೇಳಬೇಕೆಂದರೆ ಭತ್ತಕ್ಕೆ ನೀರು ನಿಲ್ಲಿಸುವ ಪದ್ಧತಿಯೇ ಸರಿ ಅಲ್ಲ. ಹಿಂದೆ ಯಾರೋ ಪುಣ್ಯಾತ್ಮ ಹೀಗೆ ನೀರು ನಿಲ್ಲಿಸಿ ಕಳೆಯನ್ನು ನಿಯಂತ್ರಿಸಿದ್ದನಂತೆ. ಮುಂದೆ ಅದನ್ನೇ ಎಲ್ಲರೂ ಅನುಸರಿಸಲು ತೊಡಗಿದರಂತೆ. ಈ ಸಂಗತಿಯನ್ನು ಡಾ. ನಾರಾಯಣ ರೆಡ್ಡಿ ಅವರ ಕೆಲವು ಪ್ರವಚನದಲ್ಲಿ ಈಗಾಗಲೇ ಹಲವು ಬಾರಿ ಆಲಿಸಿದ್ದೆ. ನೀರನ್ನು ನಿಲ್ಲಿಸುವುದರಿಂದ ಬೇರುಗಳಿಗೆ ಉಸಿರುಗಟ್ಟುತ್ತದೆ. ಇದರಿಂದ ಇಳುವರಿ ಕಡಿಮೆ ಆಗುತ್ತದೆ. ನೀರು ನಿಲ್ಲಿಸದೆ ಕ್ರಮಬದ್ಧವಾಗಿ ಬಿತ್ತನೆ ಮಾಡಿ ಕಳೆ ನಿಯಂತ್ರಣ ಮಾಡಿದರೆ ಇದರ ನಾಲ್ಕು ಪಟ್ಟು ಇಳುವರಿ ತೆಗೆಯಬಹುದು ಅಂತ ಅವರು ಸಿದ್ಧ ಮಾಡಿ ತೋರಿಸಿದ್ದರು. ಅದಕ್ಕೆ SRI ಪದ್ಧತಿ ಅಂತಲೂ ಹೇಳುತ್ತಾರೆ. ಪ್ರತಿ ಅಡಿಗೊಂದರಂತೆ ಭತ್ತದ ಸಸಿಗಳನ್ನು ನೆಟ್ಟು ಬೆಳೆಸುವ ಪದ್ಧತಿ ಅದು. ಬೇರುಗಳಿಗೆ ಉಸಿರಾಡಲು ಆಮ್ಲಜನಕ ಎಷ್ಟು ಮುಖ್ಯ ಎಂಬುದು ಮಣ್ಣು ರಹಿತ ಕೃಷಿಯಲ್ಲಿ ಈಗಾಗಲೇ ನಾನು ಮನದಟ್ಟು ಮಾಡಿಕೊಂಡಿದ್ದೆ ಕೂಡ. ಏನೇ ಆದರೂ ನಾನು ಮಣ್ಣಿನಲ್ಲಿ ಇನ್ನೂ ಹೊಸಬ. ಇವೆಲ್ಲ ಪದ್ಧತಿಗಳನ್ನು ನನಗೆ ನಾನು ಮನವರಿಕೆ ಮಾಡಿಕೊಳ್ಳಲು ಇನ್ನೂ ತುಂಬಾ ಸಮಯ ಬೇಕು ಎಂಬುದು ನನಗೆ ಗೊತ್ತಿತ್ತು. ಅದಕ್ಕಾಗಿ ನಾನು ಹಲವರಿಂದ ನಗೆಪಾಟಲಿಗೆ ಕೂಡ ಒಳಗಾಗಬೇಕಿತ್ತು. ಕಳೆನಾಶಕ ಹೊಡೆಯೊಲ್ಲ ಅಂದಾಗ ನಮ್ಮ consultant ಗುಡ್ದಪ್ಪನೆ ಬಿದ್ದು ಬಿದ್ದು ನಕ್ಕಿದ್ದರಲ್ಲ!

*****

ಟ್ರಾಕ್ಟರ್ ಹೊಡೆದ ಮೇಲೆ ಎರಡು ದಿನಗಳಾದರೂ ಬಿಟ್ಟು ಆಮೇಲೆ ಭತ್ತ ಚೆಲ್ಲೋಣ ಅಂತ ಗುಡ್ಡಪ್ಪ ಹೇಳಿದ್ದರು. ನಾನು ಅದಾಗಲೇ ಭತ್ತಕ್ಕೆ ಬೀಜ ಹುಡುಕಲು ಶುರು ಮಾಡಿದ್ದೆ. ನಮಗೆ ಬೇಕಾದಾಗ ತುರ್ತಾಗಿ ಬೀಜ ಸಿಗಬೇಕಲ್ಲ. ಆದರೆ ಮಳೆ ಬರುವುದರ ಒಳಗೆಯೇ ಬಿತ್ತಬೇಕಿತ್ತು. ನಾವು ಬಿತ್ತಿದ ಮೇಲೆ ಮಳೆ ಬಂದರೆ ತೊಂದರೆ ಇರಲಿಲ್ಲ. ಹೀಗೆ ರೈತರ ಕಷ್ಟಗಳು ಒಂದೊಂದೇ ನಮ್ಮ ಅನುಭವಕ್ಕೆ ಬರಲು ತೊಡಗಿದ್ದವು!

ಹೀಗೆ ವಿಚಾರಿಸುತ್ತಿದ್ದಾಗ ಪರಿಚಯದ ಒಬ್ಬರು ಅಲ್ಲೊಂದು ಅಕ್ಕಿ ಗಿರಣಿಯಲ್ಲಿ ಬಿತ್ತಲು ಭತ್ತ ಸಿಗುವುದೇ ಅಂತ ವಿಚಾರಿಸಲು ಹೇಳಿದರು. ಕೊನೆಗೂ ಅವರು ಸ್ಥಳೀಯ ತಳಿಯ ಭತ್ತದ ಎರಡು ಚೀಲ ಕೊಡಲು ಒಪ್ಪಿದರು. ಅದರ ಹೆಸರು ಗಿಡ್ಡ ಭತ್ತ ಅಂತ. ಆ ಭತ್ತ ದಾಸ್ತಾನು ಮಾಡಿ ಇಟ್ಟಿದ್ದು, ಹೀಗಾಗಿ ಮೊಳಕೆ ಬಂದರೆ ನಿನ್ನ ಅದೃಷ್ಟ ಅಂದರು. ನಾನು ರಿಸ್ಕ್ ತೆಗೆದುಕೊಳ್ಳಲು ತಯಾರಿದ್ದೆ. ಯಾಕೆಂದರೆ ಬೇರೆ ಆಯ್ಕೆಗಳೂ ಇರಲಿಲ್ಲವಲ್ಲ! Beggars have no choice ಅಂತಾರಲ್ಲ ಹಾಗೆ!

ಮನೆಗೆ ಹೋದ ಮೇಲೆ ಜೋರು ನಿದ್ದೆ ಎಳೆಯುತ್ತಿತ್ತು. ಅವತ್ತು ತುಂಬಾ ಸುಸ್ತಾಗಿತ್ತಲ್ಲ. IT ಕಂಪನಿಗಳಲ್ಲಿ ಕೆಲಸ ಮಾಡಿದಾಗ ಅನುಭವಿಸಿದ ಸುಸ್ತು ಬೇರೆಯೇ ಇರುತ್ತಿತ್ತು. ಆಗ ಕಣ್ಣುಗಳಲ್ಲಿ ಉರಿತ, ಕೈಕಾಲುಗಳಲ್ಲಿ ಸೆಳೆತ. ಈಗಿನ ಸುಸ್ತು ಮಾತ್ರ ಬೇರೆಯೇ. ಆಗ ಮಲಗಿದರೂ ಸಮಾಧಾನ ಇರುತ್ತಿರಲಿಲ್ಲ. ಈಗ ಮಲಗಿದ ಮರುಕ್ಷಣವೇ ಸುಖದ ನಿದ್ದೆ. ಅದು ಗೊತ್ತಾಗಿದ್ದು ಬೆಳಿಗ್ಗೆ ಎದ್ದಾಗಲೇ!

ಮುಂದೆರಡು ದಿನಗಳಲ್ಲಿ ಗುಡ್ಡಪ್ಪ, ನಾಗಣ್ಣ ಹಾಗೂ ನಾನು ಸೇರಿ ಭತ್ತವನ್ನು ಬೀರಿದೆವು. ನಾವು ಬೀರುತ್ತಿದ್ದ ಹಾಗೆಯೇ ಹಿಂದಿನಿಂದ ಬಾಬುನ ಟ್ರ್ಯಾಕ್ಟರ್ rotor ಮಣ್ಣನ್ನು ಮೇಲೆ ಕೆಳಗೆ ಮಾಡುತ್ತಾ ಸಾಗಿತು. ನಮ್ಮ ಅದೃಷ್ಟಕ್ಕೆ ಮಳೆಯೂ ಬರಲಿಲ್ಲ. ನಾವು ಹೀಗೆ ಮಾಡುತ್ತಿದ್ದಾಗ ಮಳೆ ಬಂದರೂ ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ವ್ಯರ್ಥವಾಗುತ್ತಿತ್ತು. ಒಟ್ಟಿನಲ್ಲಿ ಧೈರ್ಯಂ ಸರ್ವತ್ರ ಸಾಧನಂ ಅಂತ ನಮ್ಮ ಹೊಲದಲ್ಲಿ ನಾವೇ ಕೈಯಾರೆ ಮಾಡಿದ್ದ ಮೊಟ್ಟ ಮೊದಲ ಬಿತ್ತನೆ ಯಶಸ್ವಿಯಾಗಿ ಮುಗಿದಿತ್ತು. ಇನ್ನು ಮುಂದೆ ಎಲ್ಲವೂ ಸಂಪೂರ್ಣ ಮಳೆಯ ಮೇಲೆ ಅವಲಂಬಿತವಾಗಿತ್ತು. ಇನ್ನೊಂದು ವಾರದವರೆಗೆ ಮಳೆ ಬಂದಿಲ್ಲವಾದರೂ ತೊಂದರೆ ಇಲ್ಲ ಅಂತ ಮಾವ ಹೇಳಿದ್ದು ಸ್ವಲ್ಪ ಸಮಾಧಾನ ತಂದಿತ್ತು. ಅವತ್ತು ರಾತ್ರಿ ಮತ್ತೆ ಗಡದ್ದು ನಿದ್ದೆ…

(ಮುಂದುವರಿಯುವುದು…)