ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಒಂದು ಚಿಟಿಕೆ ಮಣ್ಣು’ ಕಥೆ, ಇಡಿಯಾಗಿ ಭೂಮಿಯನ್ನು ಕಾಂಕ್ರೀಟ್ ಕಾಡಾಗಿಸುವುದರ ಮೂಲಕ ಅದರ ಸ್ವರೂಪವನ್ನು ವಿಕಾರಗೊಳಿಸುತ್ತಿರುವ ಮನುಷ್ಯನ ಸ್ವಾರ್ಥ ಮನೋಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಕಥೆಯಲ್ಲಿ ಬರುವ ಕಲ್ಲಪ್ಪನಿಗಿರುವ ಮಣ್ಣು ತಿನ್ನುವ ಹವ್ಯಾಸದ ಮೂಲಕ ಅನ್ನ ಬೆಳೆಯುವ ಭೂಮಿಯ ಮಹತ್ವವನ್ನು ಕಥೆಗಾರ ಸಾರುತ್ತಾನೆ. ಇಂಚಿಂಚೂ ಬಿಡದಂತೆ ಭೂಮಿಯನ್ನು ಆಕ್ರಮಿಸಿಕೊಂಡಿರುವ ಕಾಂಕ್ರೀಟ್ ಕಟ್ಟಡಗಳು, ಭವಿಷ್ಯದಲ್ಲಿ ಅನ್ನವನ್ನು ಬೆಳೆಯಲು ಭೂಮಿಯೇ ಇಲ್ಲದಂತಾಗಬಹುದಾದ ಅಪಾಯದ ಮುನ್ಸೂಚನೆಯನ್ನು ಈ ಕಥೆ ನೀಡುತ್ತದೆ!
ಲಕ್ಷ್ಮಣ ಬಾದಾಮಿಯವರ “ಒಂದು ಚಿಟಿಕೆ ಮಣ್ಣು” ಕಥಾಸಂಕಲನದ ಕುರಿತು ಕಲ್ಲೇಶ್ ಕುಂಬಾರ್ ಬರಹ

 

ತನ್ನ ಸುತ್ತಣ ಲೋಕದ ವಿದ್ಯಮಾನಗಳನ್ನು ಸೂಕ್ಮವಾಗಿ ಅವಲೋಕಿಸುವ ಗುಣವನ್ನು ಮೈಗೂಡಿಸಿಕೊಂಡಿರುವ ಲಕ್ಷ್ಮಣ ಬಾದಾಮಿ ಅವರು ನಮ್ಮ ನಡುವಿನ ಸಮರ್ಥ ಕಥೆಗಾರರು. ತಮ್ಮ ಬದುಕಿನ ತಿಳುವಳಿಕೆಯಿಂದಾಗಿ ಅವರೊಳಗೆ ರೂಪುಗೊಂಡಿರಬಹುದಾದ ತಾತ್ವಿಕತೆಯ ಹಿನ್ನೆಲೆಯಲ್ಲಿಯೇ ಲೋಕಾನುಭವಗಳನ್ನು ವಾಸ್ತವದ ಪ್ರತಿಕೃತಿಯಾಗಿ ಚಿತ್ರಿಸದೇ, ಅವೆಲ್ಲವುಗಳನ್ನು ಮರುಸೃಷ್ಟಿ ಮಾಡುವುದರ ಮೂಲಕ ನಾವು ಕಾಣದ ಹೊಸದೊಂದು ಲೋಕವನ್ನು ಕಥೆಯೊಳಗೆ ತೆರೆದಿಡುತ್ತಾರೆ.

ಸಧ್ಯ, ಕಥೆಗಾರ ಲಕ್ಷ್ಮಣ ಬಾದಾಮಿ ಅವರು ಮನುಷ್ಯ ಬದುಕಿನ ವಿವಿಧ ಮಗ್ಗುಲಗಳನ್ನು ಪ್ರತಿಫಲಿಸುವಂಥ, ಮಾನವೀಯ ಸಂಬಂಧಗಳ ನೆಲೆಗಳನ್ನು ಶೋಧಿಸುವ ಹತ್ತು ಕಥೆಗಳನ್ನೊಳಗೊಂಡ ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನವನ್ನು ಹೊರ ತಂದಿದ್ದಾರೆ. ಈ ಸಂಕಲನದ ಮೊದಲ ಕಥೆ ‘ಕಾಣುವ ಕಣ್ಣು’, ಸಾಂಪ್ರದಾಯಿಕವಾದ, ಶೂನ್ಯ ಬಂಡವಾಳದ ಸಹಜ ಮತ್ತು ಸಾವಯವ ಕೃಷಿ ಪದ್ಧತಿಯ ಮಹತ್ವದ ಕುರಿತು ಮಾತನಾಡುತ್ತದೆ. ಜೊತೆಗೆ, ಅವಸರದಲ್ಲಿ ಬೆಳೆ ತೆಗೆದು, ಹಣ ಮಾಡಬೇಕೆಂಬ ದುರಾಲೋಚನೆಯಲ್ಲಿ ಈ ದೇಶದ ರೈತನು ಸುಧಾರಿತ ಬೀಜ, ರಸಗೊಬ್ಬರ, ಕ್ರಿಮಿನಾಶಕ ಅಂತೆಲ್ಲ ಅವುಗಳ ಬೆನ್ನು ಬಿದ್ದು ಕಮ್ಮೀ ಅವಧಿಯಲ್ಲಿ ಬೆಳೆ ತೆಗೆಯುವ ಧಾವಂತಕ್ಕೆ ಸಿಲುಕಿ ಒಂದರ್ಥದಲ್ಲಿ ಭೂತಾಯಮ್ಮನ ಮೇಲೆ ಅತ್ಯಾಚಾರವನ್ನು ಎಸಗುತ್ತಿದ್ದಾನೆ ಎಂದು ಕಳಕಳಿಯನ್ನು ವ್ಯಕ್ತಪಡಿಸುತ್ತದೆ.

ಹಾಗೆ ನೋಡಿದರೆ, ಭೂತಾಯಮ್ಮನ ಮಡಿಲೊಳಗೆ ಬೀಜ ಮೊಳಕೆಯೊಡೆಯುವುದು, ಚಿಗುರೊಡೆಯುವುದು ಮತ್ತು ಬೆಳೆಯಾಗುವುದು- ಈ ಇಂಥ ಕ್ರಿಯೆಗಳೆಲ್ಲ ಪ್ರಕೃತಿಯೊಳಗೆ ಸಂಭವಿಸುವ ಸಹಜ ಕ್ರಿಯೆಗಳು! ಬೀಜ ಅಂಕುರಿಸುವ ಕಾರ್ಯ ತಾಳ್ಮೆಯಿಂದ, ತಾಧ್ಯಾತ್ಮದಿಂದ ನಡೆಯಬೇಕು. ಆಗಲೇ ರೈತನ ಬಾಳು ಬಂಗಾರವಾಗುವುದು ಎಂಬುದು ಈ ಕಥೆಯ ತಾತ್ವಿಕತೆಯೂ ಕೂಡ ಆಗಿದೆ.

(ಲಕ್ಷ್ಮಣ ಬಾದಾಮಿ)

ಇಲ್ಲಿ, ಕಥೆಯ ಮುಖ್ಯಪಾತ್ರ ಸಿದ್ದಪ್ಪ, ಈ ದೇಶದ ಮಧ್ಯಮ ವರ್ಗದ ರೈತರ ಬದುಕನ್ನು ಪ್ರತಿನಿಧಿಸುತ್ತಾನೆ. ತಲೆಮಾರಿನಿಂದ ಬಂದ ನಾಲ್ಕು ಎಕರೆ ಭೂಮಿಯನ್ನು ಸರಿಯಾಗಿ ಹದ ಮಾಡುವ ಪದ್ಧತಿ ಅರಿಯದೇ, ಪದೇಪದೇ ನಷ್ಟವನ್ನು ಅನುಭವಿಸಿ, ವ್ಯವಸಾಯವೆಂದರೆ ಹಿಂಜರಿಯಲಾರಂಭಿಸುತ್ತಾನೆ. ಇದರೊಂದಿಗೆ, ಆತ, ತನ್ನ ಮಗ ಕಲ್ಲಪ್ಪ ಒಕ್ಕಲುತನವನ್ನು ಮುಂದುವರೆಸುವುದು ಬೇಡವಾಗಿರುವುದಕ್ಕೆ ಆತನಿಗೆ ಸಹಜವಾದ ಕೃಷಿ ವಿಧಾನದ ಅರಿವು ಇಲ್ಲದಿರುವುದೂ ಸಹ ಒಂದು ಕಾರಣವಾಗಿದೆ. ಹೀಗಾಗಿ, ಆತ ಸಹಜವಾಗಿಯೇ ತನ್ನ ಮಗ ನೌಕರಿ ಮಾಡಲಿ ಎಂದು ಬಯಸುತ್ತಾನೆ. ಅದು ಆತನ( ಸಿದ್ದಪ್ಪ) ಅನಿವಾರ್ಯ ಕಾರಣ ಪ್ರೇರಿತ ಬಯಕೆಯಾಗಿರುವುದು, ಅದಕ್ಕೆಲ್ಲ ಆತ ಅನುಸರಿಸಿದ ಅವೈಜ್ಞಾನಿಕ ಕೃಷಿ ಪದ್ಧತಿಯೇ ಪರೋಕ್ಷವಾಗಿ ಕಾರಣವಾಗುವುದು ಪರಿಸ್ಥಿತಿಯ ವ್ಯಂಗದಂತಿದೆ.

ಕಡೆಗೂ ಇದೆಲ್ಲವನ್ನೂ ಮೀರಿ ತನ್ನಪ್ಪ ಸಿದ್ದಪ್ಪನ ಆಶೆಗೆ ವಿರುದ್ಧವಾಗಿ ಸರಕಾರಿ ನೌಕರಿಯಿಂದ ವಿಮುಖನಾಗಿ ವ್ಯವಸಾಯದತ್ತ ಮುಖ ಮಾಡುವುದು ಒಂದರ್ಥದಲ್ಲಿ ಈ ಲೋಕಕೆ ಅನ್ನವನ್ನು ನೀಡುವ ರೈತನೇ ಎಲ್ಲಕ್ಕೂ ಮಿಗಿಲು ಎಂಬ ಮಾತನ್ನು ಪುಷ್ಟೀಕರಿಸುತ್ತದೆ. ಮತ್ತು, ಕಥೆಯುದ್ದಕ್ಕೂ ರೈತ ಕುಟುಂಬವೊಂದರ ಭೂಮಿಯೊಂದಿಗಿನ ಸಂಬಂಧ ಹಾಗೂ ರೈತರ ಬದುಕನ್ನು ಕಥೆಗಾರ ಆರ್ದ್ರವಾಗಿ ಕಟ್ಟಿಕೊಟ್ಟಿದ್ದಾರೆ.

ಇನ್ನು, ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿರುವ ಈ ನಾಡಿನ ಮಠ ಮಾನ್ಯಗಳು ಮುಗ್ಧ ಭಕ್ತರನ್ನು ಹೇಗೆಲ್ಲ ವಂಚಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಕಥೆಗಾರ ಲಕ್ಷ್ಮಣ, ‘ಆಶೀರ್ವಾದ’ ಎಂಬ ಕಥೆಯನ್ನು ಹೆಣೆದಿದ್ದಾರೆ. ಈ ದೇಶದಲ್ಲಿ ಎಲ್ಲವೂ ಕೂಡ ನಂಬಿಕೆ ಹಾಗೂ ಆಚರಣೆಗಳ ನೆಲೆಯ ಮೇಲೆಯೇ ನಿಂತಿರುವ ಕಾರಣವಾಗಿಯೇ ರಾಜಕಾರಣಿಗಳು ಮಠ ಮಾನ್ಯಗಳನ್ನು ಬ್ಯಾಂಕುಗಳನ್ನಾಗಿ ಮಾಡಿಕೊಂಡಿರಬಹುದಾದ ಸಾಧ್ಯತೆಯ ಬಗ್ಗೆ ಈ ಕಥೆ ವಿವರಿಸುತ್ತದೆ. ಹಾಗೆಯೇ, ಇಂದು ಧರ್ಮವನ್ನು ಎತ್ತಿ ಹಿಡಿಯಬೇಕಾಗಿರುವ ಮಠಾಧಿಪತಿಗಳು ತಮ್ಮ ತಮ್ಮ ಶ್ರೀಮಠಗಳ ಮುಗ್ಧ ಭಕ್ತಾದಿಗಳನ್ನು ಮುಂದಿಟ್ಟುಕೊಂಡು ಅಧಿಕಾರದ ಗದ್ದುಗೆಯ ವ್ಯಾಮೋಹವನ್ನು ಬೆಳೆಸಿಕೊಂಡು ಧರ್ಮಭ್ರಷ್ಟರಾಗುತ್ತಿರುವ ಬಗ್ಗೆ ಹಲವು ಮಗ್ಗುಲಗಳನ್ನು ಪರಾಮರ್ಶಿಸುತ್ತದೆ.

ಅವಸರದಲ್ಲಿ ಬೆಳೆ ತೆಗೆದು, ಹಣ ಮಾಡಬೇಕೆಂಬ ದುರಾಲೋಚನೆಯಲ್ಲಿ ಈ ದೇಶದ ರೈತನು ಸುಧಾರಿತ ಬೀಜ, ರಸಗೊಬ್ಬರ, ಕ್ರಿಮಿನಾಶಕ ಅಂತೆಲ್ಲ ಅವುಗಳ ಬೆನ್ನು ಬಿದ್ದು ಕಮ್ಮೀ ಅವಧಿಯಲ್ಲಿ ಬೆಳೆ ತೆಗೆಯುವ ಧಾವಂತಕ್ಕೆ ಸಿಲುಕಿ ಒಂದರ್ಥದಲ್ಲಿ ಭೂತಾಯಮ್ಮನ ಮೇಲೆ ಅತ್ಯಾಚಾರವನ್ನು ಎಸಗುತ್ತಿದ್ದಾನೆ ಎಂದು ಕಳಕಳಿಯನ್ನು ವ್ಯಕ್ತಪಡಿಸುತ್ತದೆ.

ಈ ಕಥೆಯಲ್ಲಿ ಬರುವ ಸಿರಿಪುರ ಎಂಬ ಗ್ರಾಮ, ನೈತಿಕತೆಯ ಪಾತಳಿಯನ್ನು ಮೀರಿದ ಇಂಥ ಕ್ರಿಯೆಗಳಿಗೆ ಸಾಕ್ಷಿಯಾಗಿ ನಿಲ್ಲುವುದರ ಮೂಲಕ ನಮ್ಮ ದೇಶದಲ್ಲಿ ರಾಜಕಾರಣ ಎಂಬುದು ಧರ್ಮ ಮತ್ತು ಭಕ್ತಾದಿಗಳ ಮೌಢ್ಯತೆಯೊಂದಿಗೆ ಥಳಕು ಹಾಕಿಕೊಂಡಿರುವ ವಿಚಾರಕ್ಕೆ ಪ್ರತಿಮೆಯಂತಿದೆ.

ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಒಂದು ಚಿಟಿಕೆ ಮಣ್ಣು’ ಕಥೆ, ಇಡಿಯಾಗಿ ಭೂಮಿಯನ್ನು ಕಾಂಕ್ರೀಟ್ ಕಾಡಾಗಿಸುವುದರ ಮೂಲಕ ಅದರ ಸ್ವರೂಪವನ್ನು ವಿಕಾರಗೊಳಿಸುತ್ತಿರುವ ಮನುಷ್ಯನ ಸ್ವಾರ್ಥ ಮನೋಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಕಥೆಯಲ್ಲಿ ಬರುವ ಕಲ್ಲಪ್ಪನಿಗಿರುವ ಮಣ್ಣು ತಿನ್ನುವ ಹವ್ಯಾಸದ ಮೂಲಕ ಅನ್ನ ಬೆಳೆಯುವ ಭೂಮಿಯ ಮಹತ್ವವನ್ನು ಕಥೆಗಾರ ಸಾರುತ್ತಾನೆ. ಇಂಚಿಂಚೂ ಬಿಡದಂತೆ ಭೂಮಿಯನ್ನು ಆಕ್ರಮಿಸಿಕೊಂಡಿರುವ ಕಾಂಕ್ರೀಟ್ ಕಟ್ಟಡಗಳು, ಭವಿಷ್ಯದಲ್ಲಿ ಅನ್ನವನ್ನು ಬೆಳೆಯಲು ಭೂಮಿಯೇ ಇಲ್ಲದಂತಾಗಬಹುದಾದ ಅಪಾಯದ ಮುನ್ಸೂಚನೆಯನ್ನು ಈ ಕಥೆ ನೀಡುತ್ತದೆ! ಪಟ್ಟಣ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮ ಈಗ ಪ್ರತೀ ಹಳ್ಳಿಗೂ ಕಾಲಿಟ್ಟಿರುವುದು ವಿಪರ್ಯಾಸದ ಸಂಗತಿ. ಅನ್ನ ಬೆಳೆಯಲು ಭೂಮಿಯೇ ಇಲ್ಲವಾದರೆ ಮುಂದಿನ ಸ್ಥಿತಿ ಹೇಗಿರಬಹುದು?- ಎಂದು ಯೋಚಿಸಿದಾಗ ಮನುಷ್ಯನ ಸ್ವಾರ್ಥ ಗುಣಕ್ಕೆ ಮುಂದೊಮ್ಮೆ ಪ್ರಕೃತಿಯೇ ಪಾಠ ಕಲಿಸುತ್ತದೆ ಎಂಬುದು ಇಡಿಯಾಗಿ ಕಥೆಯ ಆಶಯವಾಗಿದೆ.

ಈ ಸಂಕಲನದಲ್ಲಿರುವ ‘ಈ ಪಯಣ ಮುಗಿಯುವುದಿಲ್ಲ’ ಎಂಬ ಕಥೆ, ತಾನು ಪಯಣಿಸುವ ದಾರಿಯಲ್ಲಿ ಅನುಭವಕ್ಕೆ ಬಂದ ಸಹ ಪ್ರಯಾಣಿಕರ ಬದುಕಿನಲ್ಲಿನ ಸಂಭ್ರಮ, ಸಂತಸ, ಸಂಕಟ, ಸಾವು, ನೋವು, ಅಗಲಿಕೆ, ಅಸಂಗತ ಜೀವನಕ್ರಮ- ಇತ್ಯಾದಿಗಳ ಕುರಿತಾಗಿ ಕಥೆಗಾರನಿಗೆ ಆದ ಅನುಭವಗಳ ವಿವರಣೆಯನ್ನು ನೀಡುತ್ತ, ಅವುಗಳ ಕುರಿತಾದ ವಿಷಣ್ಣತೆಯ ಭಾವವನ್ನು ಓದುಗನ ಮನದಲ್ಲಿ ಮೂಡಿಸುತ್ತ ಹೋಗುತ್ತದೆ. ಹಾಗೆ ನೋಡಿದರೆ, ಇಡಿಯಾಗಿ ಕಥೆಯು ಕ್ರಿಕೆಟ್ ಕಾಮೆಂಟರಿಯಂತೆ ವಿವರಣೆಯನ್ನು ಕೊಡುತ್ತ ಹೋಗುತ್ತದೆಯಾದರೂ ಮನುಷ್ಯನ ಎಂದೂ ಮುಗಿಯದ ಬದುಕಿನ ಪಯಣದಲ್ಲಿ ಮುಖಾಮುಖಿಯಾಗುವ ಇಂಥ ಕ್ಷುಲ್ಲಕ ಅನುಭವಗಳನ್ನು ಸಮಯ ಕೊಟ್ಟು ಮುಟ್ಟಿ ತಟ್ಟಿ ಮಾತಾಡಿಸಿದ ಅನುಭವವಾಗುತ್ತದೆ.

ಹಾಗೆಯೇ, ‘ಜೀವ ದನಿಗಳು’ ಎಂಬ ಕಥೆ, ಹಸಿವು ಮತ್ತು ಕ್ರೌರ್ಯದ ಕುರಿತಾಗಿ ಮಾತನಾಡುತ್ತದೆ. ಹಸಿವನ್ನು ನೀಗಿಸಿಕೊಳ್ಳುವುದು ಈ ಲೋಕದ ಸಕಲ ಜೀವಿಗಳ ಹಕ್ಕು ಮತ್ತು ಉದ್ದೇಶವಾಗಿದ್ದರೂ ಸಹ ವಿವೇಕಿಯಾಗಿರುವ ಮನುಷ್ಯ ಇಂಥ ಸಂದರ್ಭದಲ್ಲೂ ಸಹ ಹೇಗೆಲ್ಲ ಕ್ರೌರ್ಯವನ್ನು ಮೆರೆಯುತ್ತಾನೆ ಎಂಬ ವಿಚಾರಕ್ಕೆ ಪ್ರತಿಮೆಯಾಗಿ ಇಲ್ಲಿ ಸಂಭವಿಸುವ ಘಟನೆಗಳು ಬರುತ್ತವೆ. ಅಸಹಾಯಕ ಸ್ಥಿತಿಯಲ್ಲಿರುವ ತಾಯಿ ಮಗ ಏನಕೇನ ಕಾರಣಗಳಿಂದಾಗಿ ದುರಗಮ್ಮನಿಗೆ ಬಲಿ ಕೊಡಲು ಕೊಟ್ಟಿದ್ದ ಹೋತದ ಮರಿಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟ ಮನುಷ್ಯನ ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತದೆ!

ಅಲ್ಲದೇ, ಈ ಸಂಕಲನದಲ್ಲಿ ‘ಆಶೀರ್ವಾದ’ ಮತ್ತು ‘ಮಠದ ದಾರಿ’ ಎಂಬ ಎರಡು ಕಥೆಗಳಿದ್ದು, ಇವೆರಡೂ ಕಥೆಗಳು ಧರ್ಮದ ಹಿನ್ನೆಲೆಯಲ್ಲಿ ಸ್ವಾರ್ಥ ಕಾರಣವಾಗಿ ಕಳೆದು ಹೋದ ನೈತಿಕತೆಯನ್ನು ಶೋಧಿಸುತ್ತವೆ. ‘ಆಶೀರ್ವಾದ’ ಕಥೆಯಲ್ಲಿ, ಮಠದ ಭಕ್ತನಿಗೆ ಸಲ್ಲಬೇಕಾದ ಸನ್ಮಾನ ಸಲ್ಲದೇ, ತೀರ ಅನಿರೀಕ್ಷಿತವಾಗಿ ಆ ಕ್ಷೇತ್ರದ ಎಮ್ಮೆಲ್ಲೆಗೆ ಸಂದುಹೋಗುವುದರ ಮೂಲಕ ಮಠ ಮಾನ್ಯಗಳು ಅಧಿಕಾರದ ಗದ್ದುಗೆಯನ್ನು ಗೌರವಿಸುವುದಕ್ಕಾಗಿ ತನ್ನ ಭಕ್ತಾದಿಗಳನ್ನು ಹೇಗೆಲ್ಲ ಕಡೆಗಣಿಸುತ್ತವೆ ಎಂಬುದರ ವ್ಯಂಗ್ಯವಿದೆ. ‘ಮಠದ ದಾರಿ’ ಕಥೆ, ಅಭಿವೃದ್ಧಿಯ ನೆಪದಲ್ಲಿ ಬದಲಾದ ಧಾರ್ಮಿಕ ಧೋರಣೆಗಳ ಕುರಿತು ವಿವರಿಸುತ್ತದೆ.

ಇಲ್ಲೂ ಒಂದು ಮಠವಿದೆ. ಈ ಮಠಕ್ಕೂ ಧರ್ಮದ ದಾರಿ ತಪ್ಪಿಸಿದ ಕಳಂಕವಿದೆ. ಮನಃಶಾಂತಿಯನ್ನು ಅರಸಿ ಈ ಮಠಕ್ಕೆ ಬರುವ ಭಕ್ತನಿಗೆ ಇದೆಲ್ಲವನ್ನು ಮೀರಿ ಮಠವೇ ಶಾಲೆಯಾದ ಬಗ್ಗೆ ಸಮಾಧಾನವಿದೆ. ತಾನು ಸಂಗ್ರಹಿಸಿದ ಹಣವನ್ನು ಆ ಶಾಲೆಗೆ ನೀಡುವುದರ ಮೂಲಕ ಧಾರ್ಮಿಕ ವಿಚಾರಕ್ಕೆ ಹೊಸ ಭಾಷ್ಯವನ್ನು ಬರೆಯುತ್ತಾನೆ. ಹೀಗೆ, ಹೊಸದೊಂದು ಆಯಾಮದಲ್ಲಿ ಧರ್ಮವನ್ನು ನೋಡಿರುವುದು ಕಥೆಯ ಶಕ್ತಿಯೂ ಹೌದು.

ಈ ಸಂಕಲನದ ಎಲ್ಲ ಕಥೆಗಳು ಒಂದಿಲ್ಲೊಂದು ಕಾರಣದಿಂದಾಗಿ ಆಪ್ತವಾಗುತ್ತವೆ. ಇಲ್ಲಿ ಬಳಸಿರುವ ನುಡಿಗಟ್ಟುಗಳು, ಶರಣರ ವಚನಗಳು ಕಥೆಗಳ ತೂಕವನ್ನು ಹೆಚ್ಚಿಸಿವೆ. ಕಥೆಗಾರ ಲಕ್ಷ್ಮಣ, ಚಿತ್ರ ಕಲಾವಿದನಾಗಿರುವುದರಿಂದಾಗಿ ತನ್ನ ಸುತ್ತಣ ಲೋಕದಲ್ಲಿ ಅನುಭವಕ್ಕೆ ಬಂದ ಸಂಗತಿಗಳನ್ನು ಈ ಕಥೆಗಳಲ್ಲಿ ಒಂದು ಅಪೂರ್ವವಾದ ಕಲಾಕೃತಿಯಂತೆ ಅರಳಿಸಿದ್ದಾರೆ. ಈ ನಿಟ್ಟಿನಲ್ಲಿ ಲಕ್ಷ್ಮಣ ಬಾದಾಮಿ ಅವರು ಅಭಿನಂದನಾರ್ಹರು.

(ಕೃತಿ: ಚಿಟಿಕೆ ಮಣ್ಣು (ಕಥಾಸಂಕಲನ), ಲೇಖಕರು: ಲಕ್ಷ್ಮಣ ಬಾದಾಮಿ, ಪ್ರಕಾಶನ: ಛಂದ ಪುಸ್ತಕ, ಬೆಂಗಳೂರು, ಪ್ರಕಟಣೆ: 2019, ಪುಟಗಳು: 144, ಬೆಲೆ: 130 ರೂ)