“ಒಂದರ ಪಕ್ಕದ ಮನೆಯಲ್ಲಿ ಈ ಎರಡು ಸಂಸಾರಗಳಿದ್ದರೂ ಇಡೀ ಚಿತ್ರದುದ್ದಕ್ಕೂ ಮಿಸೆಸ್ ಚಾನ್‌ ಳ ಗಂಡನನ್ನಾಗಲೀ, ಚೌನ ಹೆಂಡತಿಯನ್ನಾಗಲೀ ನಾವು ನೇರವಾಗಿ ನೋಡಲಾಗದಂತೆ ನಿರ್ದೇಶಕ ಚಿತ್ರಿಕೆಗಳ ಮೂಲಕ ನಿರೂಪಿಸಿದ್ದಾನೆ. ಆ ಪಾತ್ರಗಳು ಮುಖ್ಯ ಪಾತ್ರಗಳ ಮೇಲೆ ಉಂಟುಮಾಡುವ ಪ್ರಭಾವ ಹೆಚ್ಚಿನದೆಂದು ಮತ್ತು ಅವರು ಕೇವಲ ನೆಪ ಮಾತ್ರ ಎಂಬ ನಿರ್ದೇಶಕನ ಪರಿಕಲ್ಪನೆಗೆ ಅನುಸಾರವಾಗಿ ನಿರೂಪಣೆ ಜರುಗುತ್ತದೆ. ತೀರ ಅಗತ್ಯವಿದ್ದಾಗ ಬೆನ್ನು ಮಾಡಿ ಕುಳಿತ ಅವರ ಮಾತು ಕೇಳಿಸಿದರೆ, ಒಂದೆರಡು ಬಾರಿ ಪರದೆಯ ಮೇಲೆ ಕಾಣಿಸಿಕೊಳ್ಳದ ಅವರ ಮಾತುಗಳಷ್ಟೇ ನಮಗೆ ಕೇಳಿಸುತ್ತದೆ.
ಎ. ಎನ್. ಪ್ರಸನ್ನ ಬರೆಯುವ ‘ಲೋಕ ಸಿನೆಮಾ ಟಾಕೀಸ್‌’ ನ ಎರಡನೆಯ ಕಂತು

 

ಸುಮಾರು ನೂರೈವತ್ತು ವರ್ಷಗಳ ಕಾಲ ಬ್ರಿಟಿಷರ ವಸಾಹತು ಪ್ರದೇಶವಾಗಿದ್ದ ಹಾಂಗ್‍ ಕಾಂಗ್ ಇಪ್ಪತ್ತನೆ ಶತಮಾನದ ಕೊನೆಗೆ ಚೀನಾಗೆ ಹಸ್ತಾಂತರವಾಗುವಂತೆ 1984ರಲ್ಲಿ ಒಪ್ಪಂದವಾಯಿತು. ಆ ನಡುವಿನ ಅವಧಿಯಲ್ಲಿ ಅಲ್ಲಿನ ಜನಸಮುದಾಯದ ಒಟ್ಟಾರೆ ಬದುಕಿನಲ್ಲಿ ವಿವಿಧ ಬಗೆಯ ತಲ್ಲಣ, ತಾಕಲಾಟ, ತಳಮಳ ಉಂಟಾದದ್ದು ಅನಿವಾರ್ಯ. ನೆನಪು ಮತ್ತು ವಾಸ್ತವಗಳ ನಡುವೆ ಅವರ ಮನಸ್ಸುಗಳಲ್ಲಿ ಒತ್ತಡದ ಉಯ್ಯಾಲೆ. ಇದು ಅವರ ಭಾವಕ್ಷೇತ್ರಕ್ಕೂ ವಿಸ್ತಾರವಾದದ್ದು ತೀರ ಸಹಜ. ಇಂಥ ಪರಿಸ್ಥಿತಿಯಲ್ಲಿ ಅಲ್ಲಿನವರ ಜೀವನವನ್ನು ಬಿಂಬಿಸುವ ಚಲನಚಿತ್ರ ನಿರ್ದೇಶಕರಲ್ಲಿ ವಾಂಗ್ ಕಾರ್ ವಾಯ್ ಪ್ರಮುಖ.

ಅವನು ಹಾಂಗ್‍ ಕಾಂಗ್‌ ನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ನಂತರ ಚಿತ್ರಕಲೆಯ ಅಭ್ಯಾಸದಲ್ಲಿ ತೊಡಗಿಕೊಂಡ. ತನಗೆ ದೃಶ್ಯ ಮಾಧ್ಯಮದಲ್ಲಿ ಸಹಜ ಆಸಕ್ತಿ ಇದೆ ಎನ್ನುವ ಅಂತರಂಗದ ಧ್ವನಿಯನ್ನು ಅರಿತು ಚಿತ್ರಕಥೆ ಬರೆಯುವುದರ ಬಗ್ಗೆ ತರಬೇತಿ ಪಡೆದ. ಆಗ ಹಾಂಗ್‍ ಕಾಂಗ್‌ ನಲ್ಲಿ ಪ್ರಚಲಿತದಲ್ಲಿದ್ದ ಚಿತ್ರ ನಿರ್ಮಾಣ ಮಾರ್ಗದಿಂದ ದೂರ ಸಿಡಿದು ಪ್ಯಾಟ್ರಿಕ್ ಟ್ಯಾಮ್‍ ನ ಚಲನಚಿತ್ರ ನಿರ್ಮಾಣ ಪಂಥದಲ್ಲಿ ಒಬ್ಬನಾದ. ಹಾಂಗ್‍ ಕಾಂಗ್‌ ಮೇಲೆ ಪೂರ್ವ-ಪಶ್ಚಿಮದ ಪ್ರಭಾವದ ಬಗ್ಗೆ ಸ್ಥಳೀಯ ರಾಜಕೀಯ ಮತ್ತು ಐತಿಹಾಸಿಕ ವಿಷಯಗಳನ್ನು ಸೃಷ್ಟ್ಯಾತ್ಮಕವಾಗಿ ಬಿಂಬಿಸುವುದು ಈ ಪಂಥದ ಪ್ರಮುಖ ಉದ್ದೇಶ.

ಪ್ರೇಮ, ಒಂಟಿತನ ಮತ್ತು ಅಲ್ಲಿನ ಸಾಂಸ್ಕೃತಿಕ, ಭೌಗೋಳಿಕ ಹಾಗೂ ಆಧ್ಯಾತ್ಮಿಕ ಸಂಗತಿಗಳಿಗೆ ಸಂಬಂಧಿಸಿದಂತೆ ನೆಲೆಯಿಲ್ಲದಂತಾದವರ ಬಗ್ಗೆ ವಾಂಗ್‌ ಕಾರ್‌ ವಾಯ್‌ ಗೆ ಕಾಳಜಿ. ದೇಶದ ಪ್ರಮುಖ ವಿಷಯ-ವಿಚಾರಗಳ ಧಾರೆಯಿಂದ ದೂರವಾದವರು, ವರ್ತಮಾನದ ಒತ್ತಡದಲ್ಲಿ ಸಿಲುಕಿದವರು ಭವಿಷ್ಯ-ಭರವಸೆಯಿಲ್ಲದೆ ವರ್ತಮಾನದಲ್ಲಿ ತೊಳಲಾಡುವುದು ಅವನ ಚಿತ್ರದ ವಿಷಯಗಳು.


ಕೇವಲ ಇಪ್ಪತ್ತರ ವಯಸ್ಸಿನಲ್ಲಿಯೇ ಪ್ಯಾಟ್ರಿಕ್ ಟ್ಯಾಮ್‍ ನ `ಫೈನಲ್ ವಿಕ್ಟರಿ’(1987)ಯ ಚಿತ್ರಕಥೆಯ ಲೇಖಕನಾಗಿ ಖ್ಯಾತಿ ಗಳಿಸಿದ. ಅನಂತರ ಆ ಚಿತ್ರದ ಸಂಕಲನಕಾರ ಕ್ವೋಕ್-ಕುನ್‌ ಚೆಂಗ್ ಜೊತೆಗೂಡಿ ದೃಶ್ಯ ವಿನ್ಯಾಸದಲ್ಲಿ ಸೌಂದರ್ಯ ಪ್ರಜ್ಞೆಯನ್ನು ಮೆರೆದ ಚಿತ್ರಗಳನ್ನು ನಿರ್ಮಿಸಿದ. ಮೊದಲನೆ ಚಿತ್ರದಿಂದಲೆ ಅವನ ವಿಶಿಷ್ಟ ಪರಿಕಲ್ಪನೆಯ ಬೇರುಗಳನ್ನು ಹುಡುಕಲು ಸಾಧ್ಯವಿದೆ. ಕಥಾವಸ್ತುಗಳ ಜೊತೆಗೆ ವಾತಾವರಣಸೃಷ್ಟಿ ಅವನ ಚಿತ್ರಗಳ ವಿಶೇಷತೆ. ಹಾಂಗ್‍ ಕಾಂಗ್‌ ನ ಜನರ ಬದುಕಿನ ಪದರುಗಳನ್ನು ಪ್ರತಿಫಲಿಸುವುದರ ಜೊತೆಗೆ ಅದರ ವಿಶ್ಲೇಷಣೆಯೇ ಚಿತ್ರಗಳ ಆಶಯ. ಅವನ ಚಿತ್ರಗಳಲ್ಲಿ ನೇರ ನಿರೂಪಣೆ ಇರುವುದಿಲ್ಲ. ದೃಶ್ಯಗಳು ಮತ್ತು ಚಿತ್ರಿಕೆಗಳಿಗೆ ಪರಸ್ಪರ ಕೊಂಡಿ ಕಾಣುವುದು ಅಪರೂಪ. ಚಿತ್ರಗಳಲ್ಲಿ ಕಥನಕ್ಕಿಂತ ಭಾವಾಭಿವ್ಯಕ್ತಿಗೆ ಆದ್ಯತೆ. ಕಥನ ಸ್ವರೂಪದಲ್ಲಿ ಕೂಡ ನೇರ ಬೆಳವಣಿಗೆ ಇರುವುದಿಲ್ಲ.

ಅವನ ಬಹುತೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳು ಪರಸ್ಪರ ಪರಿಚಿತವಾದ ತರುವಾಯ ಅನುರಾಗದ, ಪ್ರೇಮದ ನೆಲೆಯ ಕಡೆ ಚಲಿಸುತ್ತವೇನೋ ನಿಜ. ಆದರೆ ಬಹಳ ಬೇಗನೆ ಒತ್ತಡದಲ್ಲಿ ಸಿಲುಕಿ ಸುಲಭವಾಗಿ ಬಗೆಹರಿಯಲಾರದ ಸಂಕಷ್ಟದ ಪರಿಸ್ಥಿತಿಗೆ ಗುರಿಯಾಗುತ್ತವೆ. ಅಲ್ಲದೆ ಪಾತ್ರಗಳು ತೀವ್ರ ಸಾಂದ್ರತೆಯ ಭಾವನೆಗಳನ್ನು ವ್ಯಕ್ತಪಡಿಸುವಾಗಲೂ ಅತಿ ಕಡಿಮೆ ಮಾತುಗಳನ್ನು ಬಳಸುತ್ತವೆ. ಹೀಗಾಗಿ ಅತ್ಯಂತ ಸೂಕ್ಷ್ಮತರ ಭಾವನೆಗಳನ್ನು ಕೇವಲ ಕಣ್ಣು ಹೊರಳಿಸುವಿಕೆ, ರೆಪ್ಪೆಗಳ ಚಲನೆ, ಆಂಗಿಕ ಭಂಗಿ, ವರ್ತನೆ ಇವುಗಳ ಜೊತೆಗೆ ಮೌನ ಹಾಗೂ ಹಿನ್ನಲೆ ಸಂಗೀತದ ಮೂಲಕ ನಿರೂಪಿಸುತ್ತಾನೆ. ಇದಕ್ಕೆ ಪೂರಕವಾಗಿ ಪಾತ್ರಗಳ ಉಡುಪು ಹಾಗೂ ಹಿನ್ನೆಲೆಯ ಬಣ್ಣವನ್ನು ಹೊಂದಿಸಿ ದೃಶ್ಯಗಳ ಸಂಯೋಜನೆ ರೂಪಿಸುತ್ತಾನೆ. ಹೆಚ್ಚಿನ ಚಿತ್ರಗಳಲ್ಲಿ ಅವನು ಗಾಢವೆನಿಸುವ ಕೆಂಪು, ನೀಲಿ ಮತ್ತಿತರ ಬಣ್ಣಗಳನ್ನು ಬಳಸುತ್ತಾನೆ. ಪಾತ್ರಗಳ ಮನಸ್ಸಿನಲ್ಲಿ ಉಂಟಾಗುವ ವಿವಿಧ ಬಗೆಯ ಭಾವ ಮತ್ತು ಅವುಗಳ ತೀವ್ರತೆಯನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತ ರೂಪಕಗಳು ಮತ್ತು ಸಂಕೇತಗಳನ್ನು ಉಪಯೋಗಿಸುವುದು ಅವನ ಚಿತ್ರಗಳಲ್ಲಿನ ವಿಶೇಷತೆ.

ನಿರೂಪಣೆಯಲ್ಲಿ ದೃಶ್ಯವಿನ್ಯಾಸ ಮತ್ತು ಎಳೆಎಳೆಯಾಗಿ ಪಾತ್ರಪೋಷಣೆ ಒದಗಿಸಿ ದಟ್ಟವಾಗಿ ಬೆಳೆಸುವ ಸಾಮರ್ಥ್ಯಕ್ಕಾಗಿಯೇ ಅವನಿಗೆ ಜಾಗತಿಕ ಮನ್ನಣೆ ದೊರಕಿದೆ. ಇದಲ್ಲದೆ ಚಿತ್ರಗಳಲ್ಲಿ ಅಬ್ಬರದ, ಅದ್ಧೂರಿಯ ಸೆಟ್ ಮತ್ತು ಸ್ಥಳಗಳನ್ನು ಬಳಸುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಒಳಾಂಗಣದಲ್ಲಿಯೇ ಅವನ ಚಿತ್ರಗಳ ದೃಶ್ಯಗಳು ಹೆಚ್ಚು. ಸಾಮಾನ್ಯವಾಗಿ ಇಡೀ ದೃಶ್ಯದ ಹಿನ್ನೆಲೆಯನ್ನು ಅಂದರೆ ಅಲ್ಲಿರುವ ಅವಕಾಶ, ವಸ್ತುಗಳು, ಅವುಗಳಲ್ಲಿರುವ ಬಣ್ಣ, ಮುಂತಾದವುಗಳನ್ನು ದೃಶ್ಯದ ಉದ್ದೇಶಿತ ಭಾವಪ್ರೇರಣೆಗೆ ಬಳಸುತ್ತಾನೆ. ವಾಂಗ್ ಕಾರ್ ವಾಯ್‍ ನ ಹೆಗ್ಗಳಿಕೆ ಎಂದರೆ ಚಿತ್ರಕಥೆಯನ್ನು ಪೂರ್ಣವಾಗಿ ಸಿದ್ಧಪಡಿಸಿ ಅದನ್ನು ಅವಲಂಬಿಸುವುದಕ್ಕೆ ಬದಲಾಗಿ ಸಮಯಸ್ಫೂರ್ತಿಯಿಂದ ಚಿತ್ರೀಕರಣದಲ್ಲಿ ತೊಡಗುತ್ತಾನೆ ಎನ್ನುವುದು.

ಎಳೆಯವನಾಗಿದ್ದಾಗ ಅವನನೊಬ್ಬ ಗ್ರಾಫಿಕ್ ಡಿಸೈನರ್. ಅಂತರಾಳದಲ್ಲಿ ಎಲ್ಲೋ ಮಿನುಗಿದ ಎಳೆಗೆ ಅನುಸಾರವಾಗಿ ಸಿಕ್ಕಿದ್ದು ಟೆಲಿವಿಷನ್ ಸಂಸ್ಥೆಯಲ್ಲಿ ಕೆಲಸ. ದೃಶ್ಯ ಮಾಧ್ಯಮದ ರೂಪವಾದ ಅದರಲ್ಲಿ ಕೆಲಸ ಮಾಡುವಾಗಲೇ ಅದನ್ನು ನೋಡುತ್ತಿದ್ದ ಕಣ್ಣು, ಕೇಳಿಸಿಕೊಳ್ಳುತ್ತಿದ್ದ ಕಿವಿ ಅವನಲ್ಲಿ ಚಿಗುರೊಡೆಯುತ್ತಿದ್ದ ಅಭಿಲಾಷೆಗೆ ಪೋಷಣೆ ಒದಗಿಸಿತು. ಅದರಿಂದ ಹುಟ್ಟಿದ್ದು 1988ರ `ಆಸ್ ಟಿಯರ್ಸ್ ಗೋ ಬೈʼ. ಆ ಚಿತ್ರ ಹೆಗ್ಗಳಿಕೆ ಸಾಧಿಸಿದ್ದು ದೃಶ್ಯಪರಿಕಲ್ಪನೆಯ ಶೈಲಿಯಿಂದ. ಚಿತ್ರದಲ್ಲಿ ನೇರ ಹಾಗೂ ಸಂಕೀರ್ಣತೆಯಿಲ್ಲದ ನಿರೂಪಣೆ ಇದೆ.

ಅದು ಗ್ಯಾಂಗ್‍ಸ್ಟರ್‍ ನೊಬ್ಬನ ಜೀವನಕ್ಕೆ ಸಂಬಂಧಿಸಿದ ಕಥನ. ಅವನಿಗೆ ತನ್ನ ಯಜಮಾನನ ಬಗ್ಗೆ ಇರುವ ನಿಷ್ಠೆ, ಸ್ನೇಹಿತನ ಜೊತೆಗಿನ ವಿಶ್ವಾಸ ಮತ್ತು ಗಾಢವಾಗಿ ಪ್ರೇಮಿಸುವ ಪ್ರಿಯತಮೆ ಇವರುಗಳ ಮಧ್ಯೆ ಭಾವನಾತ್ಮಕವಾಗಿ ತನ್ನನ್ನು ತಾನೇ ಹುಡುಕುವ ಪ್ರಯತ್ನ ಮಾಡುತ್ತಾನೆ. ಇದರ ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ಅಮೆರಿಕದ ಕ್ವಿಂಟಿನ್ ಟರಂಟಿನೋ, ಜರ್ಮನಿಯ ಟಾಮ್ ಟಿಕ್ವರ್ ಮತ್ತು ಚೀನಾದವನೇ ಆದ ಯಾಂಗ್ ಇಮಾವೋ ಮೂಡಿಸಿರುವ ಪ್ರಭಾವವನ್ನು ಗುರುತಿಸಬಹುದು. ಇದರ ಹೊರತಾಗಿಯೂ ಅವನು ತನ್ನದೇ ವಿಶಿಷ್ಟತೆಯ ಛಾಪು ರೂಢಿಸಿಕೊಳ್ಳುವುದರಲ್ಲಿ ಸಫಲನಾಗಿದ್ದಾನೆ.

(ವಾಂಗ್ ಕಾರ್ ವಾಯ್‍)

ವಾಂಗ್ ಕಾರ್ ವಾಯ್‍ ಗೆ ಪ್ರೇಮದ ಹಿನ್ನೆಲೆಯಲ್ಲಿ ಅದರೊಳಗೆ ಅಡಗಿರುವ ಏಕಾಂಗಿತನ, ತವಕ ಮುಖ್ಯವೆನಿಸುತ್ತದೆ. ಇದಕ್ಕೆ ಹೆಣೆದುಕೊಂಡಂತೆ ಪೂರ್ವ ಮತ್ತು ಪಶ್ಚಿಮಗಳ ಬೆಸುಗೆ ಸಾಧ್ಯವೇ ಹೇಗೆಂದು ಪರೀಕ್ಷಿಸುತ್ತಾನೆ. ಇವುಗಳ ಜೊತೆಯಲ್ಲಿಯೇ ಭೂತ ಮತ್ತು ವರ್ತಮಾನಗಳ ಸಂಘರ್ಷವೂ ಜತೆಗೂಡುತ್ತದೆ. ಇವುಗಳಿಂದಾಗಿ ಹಾಂಗ್‍ ಕಾಂಗ್‌ ನ ಸಿನಿಮಾ ಕ್ಷೇತ್ರ ಚೀನಾದ ಮೂಲಧಾರೆಯ ಸಿನಿಮಾಗೆ ಸಂಬಂಧಿಸಿದಂತೆ ಸಂಕ್ರಮಣ ಸ್ಥಿತಿಯಲ್ಲಿರುವಂತೆ ತೋರುತ್ತದೆ.

‘ಡೇಸ್ ಆಫ್ ಬೀಯಿಂಗ್ ವೈಲ್ಡ್’ಅವನ ಎರಡನೆ ಚಿತ್ರವಾದರೂ ಮೊದಲನೆ ಚಿತ್ರಕ್ಕಿಂತ ತೀರ ಭಿನ್ನ. ಅವನ ಇತರ ಚಿತ್ರಗಳಂತೆ ಈ ಚಿತ್ರವೂ ನಗರ ಕೇಂದ್ರಿತ. ವಸ್ತುವಿನ ಪರಿಕಲ್ಪನೆ ಮತ್ತು ಕಲಾತ್ಮಕತೆಯ ನಿರೂಪಣೆಯಲ್ಲಿ ಹಣ ಗಳಿಸಲು ಸೋತರೂ ವಿಶಿಷ್ಟತೆಗಾಗಿ ಮಾನ್ಯತೆ ಪಡೆಯಿತು. ಅರ್ಜಂಟೀನಾದ ಮ್ಯಾನುಯಲ್ ಪಲ್ಗ್‍ ನ ʻಹಾರ್ಟ್ ಬ್ರೇಕ್ ಟ್ಯಾಂಗೋʼನಿಂದ ಸ್ಫೂರ್ತಿ ಪಡೆದ ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರವೂ ತನ್ನತನಕ್ಕಾಗಿ ಹಂಬಲಿಸುತ್ತದೆ.

ಅವನ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಇನ್ನೊಂದು ಸಂಗತಿಯೆಂದರೆ ಪ್ರೇಮದಲ್ಲಿ ಸಿಲುಕಿರುವ ವ್ಯಕ್ತಿಗಳು ಸಾಕಷ್ಟು ಕಡಿಮೆ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ಸಂಧಿಸುತ್ತಾರೆ. ಒಬ್ಬರು ಮತ್ತೊಬ್ಬರ ಬಗ್ಗೆ ಪ್ರತ್ಯೇಕವಾಗಿಯೇ ವಿವಿಧ ಬಗೆಯ ತೊಡಕುಗಳನ್ನು ಎದುರಿಸಬೇಕಾದ ಸನ್ನಿವೇಶಗಳು ಉಂಟಾಗುತ್ತವೆ. ಸರಿಸುಮಾರು ಈ ಬಗೆಯ ನಿರೂಪಣಾ ವಿಧಾನವನ್ನು ಅವನ `ಚುಂಗ್‍ಕಿಂಗ್ ಎಕ್ಸ್‍ಪ್ರೆಸ್’, `ಫಾಲೆನ್ ಏಂಜೆಲ್ಸ್’ ಮತ್ತು `ಹ್ಯಾಪಿ ಟುಗೆದರ್’ ಮತ್ತು `2046’ ಚಿತ್ರಗಳಲ್ಲಿಯೂ ಕಾಣಬಹುದು. `ಫಾಲನ್ ಏಂಜೆಲ್ಸ್’ನಲ್ಲಿ ಅವನಿಗೆ ಅತ್ಯಂತ ಪ್ರಿಯವಾದ ಒಂಟಿತನ ಪ್ರೇಮದ ಹುಡುಕಾಟ, ನಿರರ್ಥಕ ಬದುಕು, ಅನಿಶ್ಚಿತ ಭವಿಷ್ಯ ಮುಂತಾದವುಗಳನ್ನು ಪ್ರ‌ತ್ಯೇಕ ಪಾತ್ರಗಳ ಮೂಲಕ ಮುಂದಿಡುತ್ತಾನೆ.

ಸೃಷ್ಟಿಕ್ರಿಯೆಯಲ್ಲಿ ತೊಡಗುವವರು ಒಂದೇ ವಿಷಯವನ್ನು ಕುರಿತು ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತಪಡಿಸುತ್ತಾರೆ ಎಂದು ಸಾಮಾನ್ಯವಾಗಿ ಒಪ್ಪಿಗೆಯಾದ ಅಭಿಪ್ರಾಯ. ಇದು ವಾಂಗ್ ಕಾರ್ ವಾಯ್‍ ಗೆ ಕೂಡ ಅನ್ವಯಿಸುತ್ತದೆ. 1997ರ ಕಾನ್ ಚಿತ್ರೋತ್ಸವದಲ್ಲಿ `ಹ್ಯಾಪಿ ಟುಗೆದರ್’ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಆ ಪುರಸ್ಕಾರಕ್ಕೆ ಪಾತ್ರನಾದ ಚೀನಾದ ಮೊದಲಿಗ ಎನ್ನಿಸಿಕೊಂಡ. ಈ ಚಿತ್ರ ಸಲಿಂಗ ಪ್ರೇಮಿಗಳ ಜೀವನವನ್ನು ಕುರಿತದ್ದು.

2000 ಕಾನ್ ಚಲನ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯಲ್ಲದೆ ಇತರ ಮೂವತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾದ ಅವನ ʻಇನ್ ದ ಮೂಡ್ ಫಾರ್ ಲವ್ʼ ಚಿತ್ರ ಅವನಲ್ಲಿ ಹುದುಗಿರುವ ದೃಶ್ಯ ಮಾಧ್ಯಮದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಭಾಷೆಯ ಮಾಧ್ಯಮವನ್ನು ಬಳಸುವವರಿಗೆ ಮನುಷ್ಯನ ಮನಸ್ಸಿನಲ್ಲಿ ಉಂಟಾಗುವ ವಿವಿಧ ಬಗೆಯ ಭಾವ ಮತ್ತು ಅವುಗಳ ತೀವ್ರತೆಯನ್ನು ವ್ಯಕ್ತಪಡಿಸುವುದಕ್ಕೆ ರೂಪಕಗಳು ಮತ್ತು ಸಂಕೇತಗಳು ನೆರವಾಗುತ್ತವೆ. ಅನೇಕ ಪರಿಕರಗಳಂತೆ ಭಾಷೆಯೂ ಒಂದು ಭಾಗವಾದ ದೃಶ್ಯಮಾಧ್ಯಮದ ಸವಾಲುಗಳು ಭಿನ್ನ ರೀತಿಯದು. ಅದರಲ್ಲಿ `ಕಾಣಿಸುವ’ ಮತ್ತು `ಕೇಳಿಸುವ’ ವಿಧಾನಗಳನ್ನು ಬಿಟ್ಟು ಬೇರೆ ಇಲ್ಲ. ನಿರ್ದೇಶಕ ತನ್ನೆಲ್ಲ ಕಲ್ಪನೆ ಮತ್ತು ಸಾಮರ್ಥ್ಯವನ್ನು ಧಾರೆ ಎರೆಯಬೇಕಾದದ್ದು ಇವುಗಳ ಕಡೆಗೆ. ಮೇಲುನೋಟಕ್ಕೆ ಪ್ರೇಮಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ಹೊಂದಿರುವ ಚಿತ್ರದಲ್ಲಿ ಪ್ರತ್ಯೇಕತೆಯನ್ನು ಸಾಧಿಸಿದ್ದಾನೆ ವಾಂಗ್ ಕಾರ್ ವಾಯ್.

ಕಥಾವಸ್ತುಗಳ ಜೊತೆಗೆ ವಾತಾವರಣಸೃಷ್ಟಿ ಅವನ ಚಿತ್ರಗಳ ವಿಶೇಷತೆ. ಹಾಂಗ್‍ ಕಾಂಗ್‌ ನ ಜನರ ಬದುಕಿನ ಪದರುಗಳನ್ನು ಪ್ರತಿಫಲಿಸುವುದರ ಜೊತೆಗೆ ಅದರ ವಿಶ್ಲೇಷಣೆಯೇ ಚಿತ್ರಗಳ ಆಶಯ.

ಚಿತ್ರದ ಕಥೆ ಸರಳ, ನೇರ ಹಾಗೂ ಸುಸಂಬದ್ಧ. 60ರ ದಶಕದಲ್ಲಿ ಹಾಂಗ್‍ ಕಾಂಗ್‌ ನ ಒತ್ತೊತ್ತಾಗಿ ವಠಾರದಂತಿರುವ ಕಡೆ ಉದ್ಯೋಗಸ್ಥೆಯಾದ ಮಿಸೆಸ್‌ ಚಾನ್ ಮತ್ತು ಪತ್ರಿಕೆಯೊಂದರಲ್ಲಿ ಸಂಪಾದಕನಾದ ಚೌ ಒಂದರ ಪಕ್ಕದಲ್ಲಿ ಮತ್ತೊಂದಿರುವ ಬಾಡಿಗೆ ಮನೆಯಲ್ಲಿ ತಂಗುತ್ತಾರೆ. ಅವರ ಜೀವನ ಸಂಗಾತಿಗಳು ಅನೈತಿಕ ಸಂಬಂಧದಲ್ಲಿರುವರೆಂಬ ಅನುಮಾನವಿದ್ದರೂ ಅವರುಗಳೇ ಗಾಢವಾದ ಪ್ರೇಮ ಬಂಧನಕ್ಕೆ ಒಳಗಾಗುತ್ತಾರೆ. ಆದರೆ ತಮ್ಮ ಜೀವನ ಸಂಗಾತಿಗಳು ಮಾಡಿದ ತಪ್ಪನ್ನು ತಾವೂ ಮಾಡಬಾರದೆಂದು ನಿರ್ಧರಿಸಿ ತೀವ್ರತರ ಸಂಕಟಕ್ಕೊಳಗಾಗುತ್ತಾರೆ. ಪ್ರಧಾನವಾದ ಯಾವುದೊಂದು ಘಟನೆಯೂ ಇರುವುದಕ್ಕೆ ಆಸ್ಪದವಿರದ ಈ ಕಥೆಯನ್ನು ಆಯಾ ಪಾತ್ರಗಳಿಗೆ ಸಂಬಂಧಿಸಿದ ದಿನನಿತ್ಯದ ಚಟುವಟಿಕೆಗಳನ್ನು ಮಾತ್ರ ಬಳಸಿಕೊಳ್ಳುತ್ತಾನೆ ವಾಂಗ್ ಕಾರ್ ವಾಯ್.

ಚಿತ್ರದ ಮೊದಲನೆ ದೃಶ್ಯದಲ್ಲಿಯೇ ಮಿಸೆಸ್‌ ಚಾನ್ ಮನೆಯೊಡತಿಗೆ ತನ್ನ ಬಗ್ಗೆ ತಿಳಿಸಿ, ಹೊರಡುವ ಮುಂಚೆ ಆಗಷ್ಟೇ ಅಲ್ಲಿಗೆ ಬಂದ ಚೌನತ್ತ ಸಾಮಾನ್ಯ ದೃಷ್ಟಿ ಹಾಯಿಸಿ ಹೋಗುತ್ತಾಳೆ. ಮನೆಯೊಡತಿ ಆಗಷ್ಟೆ ಹೋದ ಆಕೆಗೆ ಮನೆಯನ್ನು ಬಾಡಿಗೆ ಕೊಟ್ಟಿರುವುದನ್ನು ತಿಳಿಸಿ ಪಕ್ಕದಲ್ಲಿರುವುದನ್ನು ನೋಡಲು ಹೇಳುತ್ತಾಳೆ. ನಂತರ ಬಾಡಿಗೆಗೆ ತೆಗೆದುಕೊಂಡ ಮನೆಗಳಿಗೆ ಅವರಿಬ್ಬರೂ ಸಾಮಾನುಗಳನ್ನು ಒಳಗಿಡುವ ಜನರಿಗೆ ಸೂಕ್ತ ಸೂಚನೆಗಳನ್ನು ಕೊಡುವ ದೃಶ್ಯ ತೆರೆದುಕೊಳ್ಳುತ್ತದೆ. ಆ ಇಕ್ಕಟ್ಟು ಮೆಟ್ಟಿಲುಗಳು, ಚಿಕ್ಕ ಕಾರಿಡಾರ್ ಮುಂತಾದವು ಒತ್ತಡದಿಂದಿರುವ ಮುಖ್ಯ ಪಾತ್ರಗಳ ಮಾನಸಿಕ ನೆಲೆಯನ್ನು ಸೂಚಿಸುತ್ತದೆ ಅನಂತರ ಗಡಿಬಿಡಿಯಿಂದ ಹೊರಟ ಮಿಸೆಸ್‌ ಚಾನ್ ಮನೆಯೊಡತಿಗೆ ತನ್ನ ಗಂಡನನ್ನು ಕರೆದು ತರಲು ಏರ್‍ಪೋರ್ಟಿಗೆ ಹೋಗುತ್ತಿರುವುದನ್ನು ತಿಳಿಸುತ್ತಾಳೆ.

ಒಂದರ ಪಕ್ಕದ ಮನೆಯಲ್ಲಿ ಈ ಎರಡು ಸಂಸಾರಗಳಿದ್ದರೂ ಇಡೀ ಚಿತ್ರದುದ್ದಕ್ಕೂ ಮಿಸೆಸ್ ಚಾನ್‌ ಳ ಗಂಡನನ್ನಾಗಲೀ, ಚೌನ ಹೆಂಡತಿಯನ್ನಾಗಲೀ ನಾವು ನೇರವಾಗಿ ನೋಡಲಾಗದಂತೆ ನಿರ್ದೇಶಕ ಚಿತ್ರಿಕೆಗಳ ಮೂಲಕ ನಿರೂಪಿಸಿದ್ದಾನೆ. ಆ ಪಾತ್ರಗಳು ಮುಖ್ಯ ಪಾತ್ರಗಳ ಮೇಲೆ ಉಂಟುಮಾಡುವ ಪ್ರಭಾವ ಹೆಚ್ಚಿನದೆಂದು ಮತ್ತು ಅವರು ಕೇವಲ ನೆಪ ಮಾತ್ರ ಎಂಬ ನಿರ್ದೇಶಕನ ಪರಿಕಲ್ಪನೆಗೆ ಅನುಸಾರವಾಗಿ ನಿರೂಪಣೆ ಜರುಗುತ್ತದೆ. ತೀರ ಅಗತ್ಯವಿದ್ದಾಗ ಬೆನ್ನು ಮಾಡಿ ಕುಳಿತ ಅವರ ಮಾತು ಕೇಳಿಸಿದರೆ, ಒಂದೆರಡು ಬಾರಿ ಪರದೆಯ ಮೇಲೆ ಕಾಣಿಸಿಕೊಳ್ಳದ ಅವರ ಮಾತುಗಳಷ್ಟೇ ನಮಗೆ ಕೇಳಿಸುತ್ತದೆ. ಎರಡು ಸಂಸಾರದವರು ಮನೆಯೊಡತಿಯ ಸಂಸಾರದೊಡನೆ ಕೂಡಿ ಗೆಲುವಿನಿಂದ ಆಟವೊಂದನ್ನು ಆಡುವ ದೃಶ್ಯದಲ್ಲಿ ಬಾಗಿಲಲ್ಲಿ ನಿಂತ ಮಿಸೆಸ್‌ ಚಾನ್, ಬೇರೆ ಊರಿಗೆ ಕೆಲಸದ ನಿಮಿತ್ತ ಹೊರಟ ಗಂಡನಿಗೆ, ಈ ಬಾರಿ ಇನ್ನೆಷ್ಟು ದಿನ ಎಂದು ಕೇಳುವಾಗ, ಸಾಕಷ್ಟು ಅವಧಿಯ ಅಗಲಿಕೆಯನ್ನು ಸೂಚಿಸುವ ದೃಶ್ಯ ಸಂಯೋಜನೆ ಇರುವುದನ್ನು ಕಾಣುತ್ತೇವೆ. ಅದೇ ಬಗೆಯಲ್ಲಿ ಚೌ ನ ಹೆಂಡತಿಯೂ ಊರಿನಲ್ಲಿರುವುದಿಲ್ಲ.

ಚಿತ್ರದ ನಿರೂಪಣೆಯಲ್ಲಿ ಹತ್ತಾರು ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಮಿಸೆಸ್‌ ಚಾನ್ ಮತ್ತು ಮಾರ್ಷಿಯಲ್‌ ಆರ್ಟ್ಸ್‌ ಬಗ್ಗೆ ಪುಸ್ತಕ ಬರೆಯಬೇಕೆಂದಿರುವ ಚೌ ಅದಕ್ಕಾಗಿ ಜಪಾನಿ ಭಾಷೆಯ ಕಷ್ಟ ಇತ್ಯಾದಿ ಸಂಭಾಷಣೆಗಳಿಂದ ಕೇವಲ ಪರಿಚಯದ ಮೆಟ್ಟಿಲಿಂದ ಮುಂದೆ ಸಾಗುವುದನ್ನು ಕಾಣುತ್ತೇವೆ. ಅನಂತರ ಜಪಾನ್‌ ಭಾಷೆಯನ್ನು ಬಲ್ಲ ಮಿಸೆಸ್‌ ಚಾನ್‌ ಳ ಸಹಾಯವನ್ನು ಚೌ ಪಡೆದ ತರುವಾಯ ಅವರಿಬ್ಬರೂ ತಮ್ಮೊಳಗಿನ ಅಂತರಂಗವನ್ನು ಇಷ್ಟಿಟ್ಟೆ ತೆರೆದಿಡುವ ಮಟ್ಟ ತಲುಪಿ ಮದುವೆಯಿಂದ ಉಂಟಾಗುವ ಮಿತಿಗಳ ಬಗ್ಗೆ ಅನ್ನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ.

ಆಗೊಮ್ಮೆ ಚೌನ ಹೆಂಡತಿ ಊರಿಗೆ ಬರುವಳಿದ್ದಾಳೆಂದು ತಿಳಿದು ಅವನು ಮನೆಯಲ್ಲಿಲ್ಲದ ಶೂಗಾಗಿ ಹುಡುಕಾಡುತ್ತಾನೆ. ಅದನ್ನು ಹಿಂದೊಂದು ದಿನ ಅವಸರದಲ್ಲಿದ್ದ ಮಿಸೆಸ್‌ ಚಾನ್‌ ಹಾಕಿಕೊಂಡು ಹೋಗಿರುತ್ತಾಳೆ. ಈ ಪ್ರಕರಣ ಮಿಸೆಸ್‌ ಚಾನ್‌ ಳನ್ನು ತಬ್ಬಿಬ್ಬು ಮಾಡಿರುತ್ತದೆ. ಇದಾದ ನಂತರ ಚೌಗೆ ಹೆಂಡತಿ ಊರಿನಲ್ಲಿ ಇರುವ ದಿನವೊಂದರಲ್ಲಿ ತಮ್ಮ ಮನೆಯಲ್ಲಿನ ಆಷ್ ಟ್ರೇಯಲ್ಲಿ ಅರ್ಧ ಸೇದಿದ ತನ್ನದಲ್ಲದ ಸಿಗರೇಟು ಸಿಗುತ್ತದೆ. ಇಲ್ಲಿ ನಿರ್ದೇಶಕ ಆಷ್ ಟ್ರೇನಲ್ಲಿ ತುಂಡು ಸಿಗರೇಟು, ಅದನ್ನೆತ್ತಿಕೊಳ್ಳುವ ಚಿತ್ರಿಕೆಗಳಲ್ಲಿ ಪಾತ್ರದ ಸೂಕ್ಷ್ಮ ಮನೋಭೂಮಿಕೆಯನ್ನು ಬಿಂಬಿಸುತ್ತಾನೆ. ಈ ರೀತಿಯ ಪುರಾವೆಗಳಿಂದ ಮಿಸೆಸ್ ಚೌ ಮತ್ತು ಮಿ. ಚಾನ್ ರಲ್ಲಿ ಇರುವ ಸಂಬಂಧದ ಬಗ್ಗೆ ತಿಳಿಯುತ್ತದೆ. ಜೊತೆಗೆ ಅವರಿಬ್ಬರೂ ಸರಿಸುಮಾರು ಏಕ ಕಾಲಕ್ಕೆ ಕೆಲಸದ ನೆಪ ಹೇಳಿ ಹೊರ ದೇಶಕ್ಕೆ ಹೋಗುವುದು ಅವರ ಅನ್ನಿಸಿಕೆಗೆ ಪುಷ್ಟಿ ನೀಡುತ್ತದೆ. ತಮ್ಮ ಜೀವನ ಸಂಗಾತಿಗಳು ಪ್ರಣಯಿಗಳೆಂದು ಮಿಸೆಸ್‌ ಚಾನ್‌ ಮತ್ತು ಚೌ ಇಬ್ಬರಿಗೂ ಗೊತ್ತಾಗುತ್ತದೆ.

ತಮ್ಮ ಜೀವನ ಸಂಗಾತಿಗಳು ಮಾಡಿದ ತಪ್ಪನ್ನು ತಾವೂ ಮಾಡಬಾರದೆಂದು ಪರಸ್ಪರ ಒಪ್ಪಿಗೆ ಸೂಚಿಸುತ್ತಾರೆ. ಹೀಗೆ ಒಪ್ಪಿಗೆ ಸೂಚಿಸಿದರೂ ಅವರಿಬ್ಬರೂ ಪರಸ್ಪರ ದೈಹಿಕ ಸಂಬಂಧಕ್ಕಾಗಿ ಹಪಹಪಿಸುವುದನ್ನು ಕಾಣುತ್ತೇವೆ. ಅದರೂ ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ಕಾರಣ ತಾವು ಹಾಗೆ ಮಾಡದಿದ್ದರೆ ಅದು ತಂದೊಡ್ಡುವ ಜವಾಬ್ದಾರಿ ಮತ್ತು ಸ್ವಾತಂತ್ರ್ಯ ಹರಣವನ್ನು ಕುರಿತು ಚೌ ಹೇಳಿದ್ದಕ್ಕೆ ಮಿಸೆಸ್‌ ಚಾನ್ ಹೆಚ್ಚಾಗಿ ಮೌನಸಮ್ಮತಿ ವ್ಯಕ್ತಪಡಿಸುತ್ತಾಳೆ. ಆದರೆ ಅದು ಅವಳ ಅಭಿಲಾಷೆಯನ್ನು ಮುಚ್ಚಿಡುತ್ತದೆ. ಇದನ್ನು ನಿರೂಪಿಸುವ ದೃಶ್ಯ ಸಂಯೋಜನೆ ನಿಜಕ್ಕೂ ಅನನ್ಯ. ಇಬ್ಬರ ಬಾಳು ಪ್ರತ್ಯೇಕವೆಂದು ಸೂಚಿಸುವಂತೆ ಅವಳು ಹೇಳುವಾಗ ಇಡೀ ಪರದೆಯ ಮೇಲೆ ಅವಳು ಮಾತ್ರ ಇದ್ದು, ನಂತರ ಅವನು ಪ್ರವೇಶಿಸುತ್ತಾನೆ. ಅವನು ತನ್ನ ಅಭಿಪ್ರಾಯ ಹೇಳುವಾಗ ಫ್ರೇಮ್‍ ನ ಮುಮ್ಮುಖದಲ್ಲಿ [ಫೋರ್‍ಗ್ರೌಂಡ್] ಕಬ್ಬಿಣದ ಸರಳುಗಳಿದ್ದು ಪರಿಸ್ಥಿತಿ ಜೈಲಿನಂತಿದೆ ಎನ್ನುವುದನ್ನು ಸೂಚಿಸುವಂತಿದೆ. ಈ ರೀತಿಯ ದೃಶ್ಯಗಳಿಂದ ಮತ್ತು ಪಾತ್ರಗಳು ಪರಸ್ಪರ ಪ್ರತಿಕ್ರಿಯೆ ವ್ಯಕ್ತಪಡಿಸಲು ಮೌನ ಮುಖಭಾವದ ಮಹತ್ವವನ್ನು ನಿರ್ದೇಶಕ ಮನದಟ್ಟು ಮಾಡುತ್ತಾನೆ. ಇದೇ ಕ್ರಮವನ್ನು ವಾಂಗ್ ಕಾರ್ ವಾಯ್ ಚಿತ್ರದುದ್ದಕ್ಕೂ ಬಳಸಿರುವುದು ವಿಶೇಷವಾಗಿ ಕಾಣಿಸುತ್ತದೆ.

ಕ್ರಮೇಣ ಚೌ ಮತ್ತು ಮಿಸೆಸ್‌ ಚಾನ್ ಸಂಬಂಧ ನಿಕಟವಾಗುತ್ತದೆ. ಆದರೆ ತಾವಿಬ್ಬರೂ ಹೀಗೆ ಮುಂದುವರಿಯುವುದು ಉಚಿತವಲ್ಲ. ಹೆಚ್ಚು ಭೇಟಿಯಾಗುವುದು ಬೇಡವೆಂದು ಚೌಗೆ ತಿಳಿಸುತ್ತಾಳೆ. ಅವನೂ ಅದಕ್ಕೆ ಒಪ್ಪುತ್ತಾನೆ. ಆದರೆ ಅವರು ಮತ್ತೆ ಭೇಟಿಯಾಗದೆ ಇರುವುದು ಸಾಧ್ಯವಾಗುವುದಿಲ್ಲ. ಅವರು ಹೊಟೆಲ್‍ ನ ಏಕಾಂತ ಸ್ಥಳದಲ್ಲಿ ಅನೇಕ ಬಾರಿ ಭೇಟಿಯಾಗುತ್ತಾರೆ. ಅವನು ತಮ್ಮಿಬ್ಬರ ಸಂಬಂಧದ ಬಗ್ಗೆ ಆಫೀಸಿನಲ್ಲಿ ಸಿಗರೇಟು ಸೇದುತ್ತ ಆಲೋಚನಾ ಮಗ್ನನಾಗಿ ಕುಳಿತಾಗ ಅದರ ತೀವ್ರತೆಯನ್ನು ಅವನು ಸೇದುವ ಸಿಗರೇಟಿನ ಹೊಗೆಯ ಸಾಕಷ್ಟು ಅವಧಿಯ ಚಿತ್ರೀಕರಣದಲ್ಲಿ ಬಿಂಬಿಸುತ್ತಾನೆ.

ಮಿಸೆಸ್‌ ಚಾನ್ ಮತ್ತು ಚೌರಲ್ಲಿ ಸ್ನೇಹ ಬೆಳೆಯುವಾಗ ಮತ್ತು ಅದು ಮತ್ತಷ್ಟು ಹೆಚ್ಚಾದಾಗ ಅವರು ತಾವು ವಾಸಿಸುವ ಸ್ಥಳದಿಂದ ಸ್ವಲ್ಪ ದೂರದ ತನಕ ಕಾರಿನಲ್ಲಿ ಒಟ್ಟಿಗೆ ಬಂದು, ಗಾಸಿಪ್‍ ಗೆ ಕಾರಣವಾಗುವುದೆಂದು ಅಲ್ಲಿ ಅವನು ಇಳಿದು, ಅವಳು ಮುಂದೆ ಹೋಗುವುದು ವಾಡಿಕೆಯಾಗಿರುತ್ತದೆ. ಅನೇಕ ಸಲ ಮಳೆಯಾಗುತ್ತಿದ್ದಾಗ ಅವರು ಆ ಸ್ಥಳದಲ್ಲಿ ನಿಂತುಕೊಂಡು ಮಾತಾಡುತ್ತಿರುತ್ತಾರೆ. ಈ ಬಾರಿ ಅವರು ಭೇಟಿಯಾದಾಗ ತನಗೆ ತಿಳಿಯದಂತೆ ಅವಳ ಬಗ್ಗೆ ಪ್ರೇಮದ ಭಾವನೆಗಳು ತೀವ್ರವಾಗತೊಡಗುತ್ತದೆ. ಅವಳ ಗಂಡ ಬಾರದೆ ಹೋಗಿದ್ದರೆ ಒಳ್ಳೆಯದಾಗುತ್ತಿತ್ತು. ಆದರೆ ಈಗ ಅವನು ವಾಪಸು ಬಂದಿರುವುದರಿಂದ ಇನ್ನು ಭೇಟಿಯಾಗುವುದಿಲ್ಲ ಎಂದು ಹೇಳಿ ಹೊರಡುತ್ತಾನೆ. ಇದರ ನಂತರದ ದೃಶ್ಯದಲ್ಲಿ ದೇಹ ಮತ್ತು ಮನಸ್ಸುಗಳಿಗೆ ಸಂಬಂಧಿಸಿದಂತೆ ಅವರು ಹಾಕಿಕೊಂಡ ಗಡಿ ಮತ್ತು ಪಡುವ ಹಿಂಸೆಯನ್ನು ವಾಂಗ್ ಕಾರ್ ವಾಯ್ ಸಮರ್ಥವಾಗಿ ದಾಖಲಿಸುವ ರೀತಿ ವಿಶಿಷ್ಟವೆನಿಸುತ್ತದೆ. ಅನಂತರ ಚೌ ಮಿಸೆಸ್‌ ಚಾನ್‌ ಗೂ ತಿಳಿಸದೆ ಊರು ಬಿಟ್ಟು ಹೋಗಿಬಿಡುತ್ತಾನೆ. ಅಲ್ಲಿಗೆ ಮತ್ತೆ ಬರುವುದು ವರ್ಷಗಳ ನಂತರ.

ಊರಿನಲ್ಲಿ ಅನೇಕ ಕಡೆ ಕಟ್ಟಡಗಳು ಪಾಳು ಬಿದ್ದಿರುತ್ತವೆ. ಅವನು ಒತ್ತೊತ್ತಿ ಬಂದ ನೆನಪುಗಳಿಂದ ಕಳೆದ ದಿನಗಳನ್ನು ಪರಿಭಾವಿಸುತ್ತಾನೆ. ತಾನಿದ್ದ ವಠಾರದ ಬಳಿ ಹೋದಾಗ ಹಿಂದೆ ಇದ್ದ ಮನೆಯೊಡತಿಯ ಮನೆಯಲ್ಲಿ ಯಾರೋ ಇರುತ್ತಾರೆ. ಮಿಸೆಸ್ ಚಾನ್‌ ಳ ಸಂಸಾರದ ಬಗ್ಗೆ ವಿಚಾರಿಸಿದಾಗ ಆಕೆ ಈಗ ನಾಲ್ಕಾರು ವರ್ಷದ ಮಗನೊಡನೆ ಇರುವಳೆಂದು ತಿಳಿಯುತ್ತದೆ. ಅನಂತರ ಅವಳು ರಂಪ ಮಾಡುತ್ತಿರುವ ಮಗನನ್ನು ಸರಿಪಡಿಸುವುದರಲ್ಲಿ ನಿರತಳಾಗಿದ್ದನ್ನು ಸುಮ್ಮನೆ ದೂರದಲ್ಲಿ ನಿಂತು ನೋಡುತ್ತಾನೆ. ಪ್ರೇಮ ಪ್ರಕರಣದಲ್ಲಿ ಸಿಲುಕಿದ ಸೂಕ್ಷ್ಮ ಮನಸ್ಸಿನವರು ಅನುಕೂಲಕರ ಸಂದರ್ಭ ಮತ್ತು ಕಾರಣಗಳ ಹೊರತಾಗಿಯೂ ಒಂದು ಮಿತಿಯೊಳಗೆ ಬೆಳೆಸುವ ಸಂಬಂಧದಲ್ಲಿ, ವಿಧಿಸಿಕೊಂಡ ಮಿತಿಯೊಳಗೆ ವರ್ತಿಸುವ ಬಗೆಯನ್ನು ಅತ್ಯಂತ ಸಮರ್ಥವಾಗಿ ಉದ್ದೇಶಿತ ಆಶಯದಂತೆ ನಿರ್ದೇಶಕ ವಾಂಗ್ ಕಾರ್ ವಾಯ್ ಪ್ರಸ್ತುತಪಡಿಸುತ್ತಾನೆ. ಅವನು ಯಶಸ್ವಿ ಪ್ರಯತ್ನಕ್ಕೆ ದೊರೆತ ಮನ್ನಣೆಯ ಜೊತೆಗೆ ನಮ್ಮ ಚಪ್ಪಾಳೆಯನ್ನೂ ಗಿಟ್ಟಿಸುತ್ತಾನೆ.

1989ರಿಂದ 2000ವರೆಗೆ ಅವನು ತಯಾರಿಸಿದ್ದು 6 ಚಿತ್ರಗಳು ಮತ್ತು ಎಲ್ಲ 6 ಚಿತ್ರಗಳೂ ಚೀನಾದ 100 ಅತ್ಯುತ್ತಮ ಚಲನಚಿತ್ರಗಳಲ್ಲಿ ಸೇರ್ಪಡೆಯಾಗಿವೆ. ಅವನ `ಆಶೆಸ್ ಆಫ್ ಟೈಮ್’, `ಆಸ್ ಇಯರ್ಸ್ ಗೊ ಬೈ’, `ವಾಕ್ ಆಪಾನ್ ಫೈರ್ʼ ಅಪಾರ ಮನ್ನಣೆ ಪಡೆದ ಚಿತ್ರಗಳಲ್ಲಿ ಕೆಲವು. ಅವನು 2006ರ ಕಾನ್ ಚಿತ್ರೋತ್ಸವದಲ್ಲಿ ಜೂರಿಗಳಲ್ಲಿ ಒಬ್ಬನಾಗಿದ್ದ. 2007ರ ಕಾನ್ ಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗದಲ್ಲಿ ಪ್ರಾರಂಭವಾದ `ಮೈ ಬ್ಲಾಕ್‍ಬೆರಿ ನೈಟ್ಸ್’ ಇಂಗ್ಲಿಷ್ ಭಾಷೆಯಲ್ಲಿ ನಿರ್ಮಿತವಾದ ಅವನ ಮೊದಲ ಚಿತ್ರ. ಗೋವಾದಲ್ಲಿ ಪ್ರದರ್ಶಿತವಾದ ಏಷಿಯಾ ಚಲನಚಿತ್ರ ಪ್ರಶಸ್ತಿ ವಿಜೇತ `ದ ಗ್ರಾಂಡ್‍ ಮಾಸ್ಟರ್ಸ್’ (2013) ಕುಂಗ್‍ ಫು ಹೋರಾಟವನ್ನು ಪ್ರಖ್ಯಾತ ಬ್ರೂಸ್ ಲೀಗೆ ಕಲಿಸಿಕೊಟ್ಟ ಗುರುವಿನ ಜೀವನವನ್ನು ಆಧರಿಸಿದೆ.