ಬೇರೊಡೆದ ಮರ

ನೀ ಬರುವಾಗ, ಹಸಿರನು
ಚಿಗುರಿಸುವ ಬೇರೊಡೆದ
ಮರದಂತಿದ್ದೆ ನಾನು..

ಆಗ ಸುಖವಾಗುತ್ತಿತ್ತು ಕಂದಾ,
ನನ್ನೊಳಗೆ ನೀ ಮಿಡಿಯುವಾಗ,
ತಂತಿ ಮೀಟಿದ ವೀಣೆಯಾಗುವ
ಪುಳಕದಲಿ ನನಗೆ ಕಂಪನ…

ಪುಟ್ಟ ಮೃದುಪಾದದ ಚಿಟ್ಟೆಯೊಂದು
ಹತ್ತಿ ಬಟ್ಟೆಯನುಟ್ಟು ಎಲ್ಲಿಂದಿಲ್ಲಿಗೆ
ಹಾರಿ ಬಂತೆಂದು ಅಚ್ಚರಿಪಟ್ಟಿದ್ದೆ ..!

ನಿನ್ನನೇ ನೋಡುತ್ತಾ, ನೋಡುತ್ತಾ,
ಹಿತವಾದ ಬೆಳಕು ಚೆಲ್ಲುವ ತಾರೆಯ
ಜೋಡಿ ಕಂಗಳ ಸುಳಿಯಲಿ
ಮುಳುಗಿ, ದಣಿವರಿಯೆ ಸುತ್ತುವ
ಭುವಿಯ ಮಾರುತಮಾತೆ ನಾನಾಗಿದ್ದೆ..!

ಅನುಗಾಲದ ಸಂಭ್ರಮವ ಹೊತ್ತು
-ತಂದ ಒಲವಿನ ನಗುವೆ, ನೀ
ನನಗೆಂದಿಗೂ ಸೋಲರಿಯದ
ಜಗದ ಗೆಲುವೇ. ನೀನಿರೆ ನನ್ನೊಡನೆ
ನಾನೊಂದು ಸದಾ ಬೇರೊಡೆದು
ಚಿಗುರುವ ಹಸಿರು ಮರ…

ಮಂಡ್ಯ ಮೂಲದ ಕೆ.ಎಂ ವಸುಂಧರಾ ಬೆಂಗಳೂರು ವಾಸಿ.
ಕರ್ನಾಟಕ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮರೆತು ಬಿಟ್ಟದ್ದು’ ಇವರ ಪ್ರಕಟಿತ ಕವನ ಸಂಕಲನ.
ಬರವಣಿಗೆ,ಓದು, ಪ್ರವಾಸ, ಚಾರಣ ಇವರ ಹವ್ಯಾಸಗಳು.