ನಿನ್ನೆಯಲ್ಲ ಮೊನ್ನೆ- ಹೆದ್ದಾರಿಯಲ್ಲಿರುವಾಗ ಕಾರಿನ ಹಿಂದೇನೋ ಉರುಟಿದ ಸದ್ದು ಕೇಳಿ ಸ್ವಲ್ಪ ರೇಜಿಗೆಯಾಯಿತು. ನಯವಾಗಿ ಓಡುವ ಕಾರಿನಲ್ಲಿ ಏನಾದರೂ ಕುಲುಕುವ ಹಾಗೆ, ಗುಡುಗುಡಿಸುವ ಹಾಗೆ ಸದ್ದು ಬಂದರೆ ಆಗುವ ಇನ್ನಿಲ್ಲದ ಪಿರಿಪಿರಿಯಲ್ಲಿ ಫಟ್ಟಿಯನ್ನು ಚಂಡಾಡಿಬಿಡುತ್ತೇನೆ. ಹೆಂಡಿರಿಗೆ ಹೆರಿಗೆ ಅಂತ ವಾರದ ಮಟ್ಟಿಗೆ ರಜೆ ಅಂತ ಹೋದವನು ಈ ತನಕ ಬಂದಿಲ್ಲ. ಒಟ್ಟಿನಲ್ಲಿ ಹೇಗೋ ಬಚಾವಾದ…! ಫಟ್ಟಿ ನಾನು ಕೂಗಾಡುವವರೆಗೆ ಸುಮ್ಮನಿದ್ದು ಆಮೇಲೆ ಏನಾದರೂ ಸಬೂಬು ಹೇಳುತ್ತಾನೆ- ಆ ಮಾತು ಬೇರೆ. ಅವತ್ತು ಯಲಹಂಕದಾಚೆಯ ಹೊಸ ಏರ್‍‍ಪೋರ್ಟ್ ರೋಡಿನ ಬದಿಗೆ ಕಾರು ನಿಲ್ಲಿಸಿ ಡಿಕ್ಕಿ ತೆರೆದೆ. ಎರಡು ತೆಂಗಿನಕಾಯಿಗಳು ಆಗಾಗ್ಗೆ ಡಿಕ್ಕಿ ಹೊಡೆದು ಉರುಟಾಡಿದ್ದವು. ಒಂದು ಸೀಳಿಕೊಂಡು ನೀರು ಈಚೆ ಬಂದಿತ್ತು. ಮತ್ತೊಂದು ಗಿಟುಕಾಗಿ ಕುಲುಕುತ್ತಿತ್ತು. ಹೆಬ್ಬಾಳದ ಫ್ಲೈಓವರಿಗೆ ಮೊದಲಿನ ಹಂಪಿನ ಮೇಲೆ ನನ್ನ ಕಣ್ಣು, ಕೈ ತಪ್ಪಿ ಗಾಡಿ ಧೇಯ್ಡಂತ ಚಿಮ್ಮಿದ ಕಾರಣಕ್ಕೇನೋ ಬದಿಗೆ ಸಿಗಿಸಿದ ಚೀಲದ ಹಿಡಿಯ ಕುಣಿಕೆ ಕಳಚಿದ್ದಿರಬೇಕು. ಕಾಯಿಗಳಿದ್ದ ಚಿತ್ತಾರದ ಪೇಪರು ಕವರುಗಳು ಹರಿದು, ಎಳನೀರು ಬೆರೆತು ತೊಪ್ಪೆಯಾಗಿದ್ದವು. ಯಾವುದೋ ಮದುವೆ ಮನೆಯಲ್ಲಿ ಕೊಟ್ಟವಿರಬೇಕು. ಕವರಿನ ಮೇಲಿದ್ದ ಡೇಟು ನೋಡಿದೆ. ಏಪ್ರಿಲ್ ಕೊನೆಯ ವಾರದಲ್ಲಾದ ಮದುವೆ. ಫಟ್ಟಿಯ ಮೇಲೆ ವಿಪರೀತ ಕೋಪ ಬಂತು. ನಮ್ಮ ಮೈಗೆ ತಕ್ಕ ಇತಿಮಿತಿಯಿರುವ ಕಾರಿನ ಚಿಕ್ಕ ಒಳಾವರಣವನ್ನೂ ಚೊಕ್ಕವಿಡಲಾಗುವುದಿಲ್ಲ ಇವನಿಗೆ… ಥತ್ತ್! ನನಗೆ ನಾನೇ ಹೇಳಿಕೊಂಡೆ. ಎಲ್ಲವನ್ನೂ ಮತ್ತೆ ಚೀಲಕ್ಕೆ ತುರುಕಿ ಹಿಡಿಯನ್ನು ಬಂದೋಬಸ್ತುಪಡಿಸಿ ಮತ್ತೆ ಸ್ಟಿಯರಿಂಗ್ ಹಿಡಿದೆ. ಎರಡು ತಿಂಗಳಿನಿಂದ ಆ ಎರಡು ಕಾಯಿಗಳು ಡಿಕ್ಕಿಯಲ್ಲೇ ಉಳಿದಿವೆಯೆಂದರೆ ಎಂಥ ಬೇಜವಾಬ್ದಾರೀ… ಬರುತ್ತಲೇ ಕೇಳಬೇಕು -ಅಂತೆಲ್ಲ ಯೋಚಿಸಿದೆ.

ಮದುವೆ ಮನೆಗಳಲ್ಲಿ ಯಾಕಾದರೂ ತಾಂಬೂಲ ಕೊಡುತ್ತಾರೋ? ಸುಮ್ಮನೆ ಸಂಪ್ರದಾಯವೆಂತಲೋ, ಒಮ್ಮೊಮ್ಮೆ ಶೋಕಿಗೋ… ಒಟ್ಟಿನಲ್ಲಿ ಕೊಟ್ಟರಾಯಿತು ಅಂತ ಕೊಟ್ಟುಬಿಡುತ್ತಾರೆ. ಅಡುಗೆಯ ಕಾಂಟ್ರಾಕ್ಟಿನಲ್ಲಿ ತೆಂಗಿನಕಾಯಿಯನ್ನೂ ಬರೆಸಿರುವುದರಿಂದ ಬೇಡವೆಂದರೂ ಅಂತ ಕೈಗೆ ತುರುಕುತ್ತಾರೆ. ಸುಮ್ಮನೆ ಮುಟ್ಟಿದರೆ ಸಾಕು, ತೆಗೆದುಕೊಂಡ ಶಾಸ್ತ್ರವಾಗುತ್ತೆ ಅಂದರೆ ಒಪ್ಪದೆ, ಫಲ ತಾಂಬೂಲ ಬಿಟ್ಟುಹೋಗಬಾರದು ಅಂತ ಒತ್ತಾಯಿಸುತ್ತಾರೆ. ಮನೆ ತುಂಬ ಕಾಯಿ ಬಿದ್ದು ಉರುಟಾಡುತ್ವೆ ಕಣೋ… ಎಲ್ಲ ಸರಿ. ತೆಂಗಿನಕಾಯಿ ಒಟ್ಟಕ್ಕೇಂತ ಒಂದಿಷ್ಟು ಜಾಗ ಮಾಡಲಿಲ್ಲವಲ್ಲ ನೀನು? -ಅಂತ ಅಮ್ಮ ಆಗಾಗ ಗೊಣಗುವುದಿದೆ. ನೀನೆಂಥ ಆರ್ಕಿಟೆಕ್ಟು ಅನ್ನುವಂತಹ ಉಡಾಫೆಯ ಧಾಟಿ. ಅಮ್ಮಾ, ಅದೆಲ್ಲ ನಿನ್ನ ಕಾಲಕ್ಕಾಯಿತು… ಈಗ ತೆಂಗಿನಕಾಯಿ ಯಾರು ಉಪಯೋಗಿಸುತ್ತಾರೆ? -ಅಂತ ರೇಗುತ್ತೇನೆ. ನಿನಗೆ ಬೇಡದಿದ್ದರೆ ಬಿಡು… ನಮಗಂತೂ ಬೇಕು -ಅನ್ನುವ ಅಮ್ಮ ಈಗೀಗಲಂತೂ ಸೆಡ್ಡಿನಿಂದ ರುಬ್ಬಿ ಹಾಕಿದ ಹುಳಿಯಿಂದ ರೋಸು, ಫಟ್ಟಿ, ಅಪ್ಪಲುಕೊಂಡಗಳ ಊಳಿಗಪಡೆಯನ್ನು ಪುಷ್ಕಳವಾಗಿ ಪೋಷಿಸುತ್ತಾಳೆ.

ನನಗೆ ನೆನಪಿರುವ ಹಾಗೆ ಬರೇ ಹತ್ತು ವರ್ಷಗಳ ಹಿಂದಿನವರೆಗೆ ನಮ್ಮ ವಾರಿಗೆಯವರ ಎಲ್ಲ ಮನೆಗಳಲ್ಲೂ ತೆಂಗು ತಿರುವಿ ಮಾಡಿದ ಮಸಾಲೆಯಿರದೆ ಸಾರು, ಹುಳಿ ಆಗುತ್ತಿರಲಿಲ್ಲ. ಸಾರೆಂದರೆ ಬೇಳೆಯ ಕಟ್ಟಿಗೆ ಹಿಂಡಿದ ಟೊಮೇಟೋ ಹುದುಗಿಸಿ, ಒಂದೆರಡು ಕುದಿ ಬಂದ ಮೇಲೆ ತೆಂಗು ತುರಿ ಇಳಿಬಿಡಬೇಕು. ಮೇಲಕ್ಕೆ ಇಂಗು ಒಗ್ಗರಿಸಬೇಕು. ಕೊಚ್ಚಿದ ಕೊತ್ತಂಬರಿ, ಕರಿಬೇವಿನ ಎಸಳು… ಅಬ್ಬಾ! ಎಂಥ ಘಮ ಅದು!! ನೆನೆದರೇ ನೀರೂರುತ್ತದೆ. ತೆಂಗು, ಇಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತೆ ಅನ್ನುವುದು ಹಳೆ ಮೈಸೂರಿನ ನಾವು, ಅದರಲ್ಲೂ ಪುಳಿಚಾರು ಬ್ರಾಹ್ಮಣಿಕೆ ಹುಟ್ಟು ಹಾಕಿದ ಗಾದೆಯೇ ಇದ್ದೀತು. ಆದರೆ ಈಗ ಹಾಗಿಲ್ಲ. ಎಲ್ಲರೂ ಇದ್ದಕ್ಕಿದ್ದಂತೆ ಇನ್ನಿಲ್ಲದಂತೆ ಕೆಲೊರಿ ಕಾನ್‍ಷಿಯಸ್ ಆದಂತಿದೆ. ಕಾಯೆಂದರೆ ಕೊಲೆಸ್ಟಿರಾಲ್ ಎನ್ನುವ ಮಟ್ಟಿಗೆ ಒಮ್ಮೆಗೇ ಹಿಮ್ಮೆಟ್ಟುತ್ತೇವೆ. ಕೋಸು, ಹುರುಳೀಕಾಯಿ ಪಲ್ಯಕ್ಕಿರಲಿ, ಕಡಲೆಬೇಳೆ ಹೆಸರುಬೇಳೆ ಕೋಸಂಬರಿಯಲ್ಲೂ ಕಾಯಿ ನಿಷಿದ್ಧ. ಮದುವೆ, ಮುಂಜಿಗಳಲ್ಲಿ ಎಲೆ ತುದಿಗೆ ಬಡಿಸಿದ ಪಲ್ಯಗಳಲ್ಲಿ ಹೋಳಿಗೊಂದು ತುರಿಯಿರುವುದರಿಂದ ಮುಸುಡಿ ಹಿಂಡಿ ಬದಿಗೆ ಸರಿಸುತ್ತೇವೆ. ಏನೂ ಆಗಲ್ಲ ತಿನ್ನಿ ಅಂತ ಪಂಕ್ತಿಯಲ್ಲಿರುವ ಹಿರಿಯರು ಹೇಳುತ್ತಾರೆ. ಏನಾದರೂ ಆಗುವ ಹಾಗಿದ್ದರೆ ಖಂಡಿತ ತಿಂತಿದ್ದೆ, ಮಾವ -ಅಂತ ನಗುತ್ತೇನೆ… ಮನೆಯಲ್ಲಿ ರುಬ್ಬಿ ಮಾಡುವ ಸಾಂಪ್ರದಾಯಿಕ ಮಜ್ಜಿಗೆ ಹುಳಿಗೆ ಪರ್ಯಾಯವಾಗಿ ಬರೇ ಹುಳಿಮಜ್ಜಿಗೆಗೆ ಕಡಲೆ ಹಿಟ್ಟು ಕದಡಿ ಕುದಿಸಿ, ಒಗ್ಗರಿಸಿದ ನಾರ್ಥಿಂಡಿಯನ್ ಕಡಿಯನ್ನು ನಾನೇ ಮಾಡುತ್ತೇನೆ. ಅಮ್ಮ ಅದರ ರುಚಿ ನೋಡಿ ಕಣ್ಣರಳಿಸಿದರೂ- ಎಲ್ಲ ಸರಿ. ಚೂರು ತೆಂಗಿನ ತುರಿ ಬೀಳಬೇಕಿತ್ತು ಅಂತ ಲೊಚಗುಟ್ಟಿಯೇ ಚಪ್ಪರಿಸುತ್ತಾಳೆ. ಅದು ಮಜ್ಜಿಗೆ ಹುಳಿ ಥರವೇ ಹೊರತು ಸಾಕ್ಷಾತ್ ಮಜ್ಜಿಗೆಹುಳಿಯಲ್ಲ ಅಂತ ಅವಳ ವಾದ. ಅದೇನೇ ಇರಲಿ, ನಲವತ್ತು ತುಂಬಿಕೊಂಡಿರುವ ನನ್ನ ಕಸಿನ್ನುಗಳೆಲ್ಲರೂ ಈಚೆಗೆ ಏಕಾಏಕಿ ತೆಂಗಿನಕಾಯಿ ವರ್ಜಿಸಿಬಿಟ್ಟಿದ್ದೇವೆ. ನಮ್ಮ ಲೋ ಕಾಲ್, ಲೋ ಕಾರ್ಬ್, ಲೋ ಫ್ಯಾಟ್ ಡಯಟ್‍ನಿಂದ ಹಿಂದಿನ ತಲೆಮಾರಿನ ಅಳಿದುಳಿದ ಮಂದಿ ತತ್ತರಿಸಿದಂತಿದೆ. ಒಟ್ಟಿನಲ್ಲಿ ನಮ್ಮ ಮನೆಗಳಲ್ಲಿ ಕಟ್ಟುನಿಟ್ಟಿನ ತೆಂಗಿರದ ಪಥ್ಯ!

ಮುಂಡೇವು… ತಿಂದುಂಡುಕೊಂಡಿರೋ ವಯಸಿನಲ್ಲಿ ಇಲ್ಲದ್ದು ಡಯಟ್ ಮಾಡುತ್ವೆ! ಕಾಯಿಲ್ಲ ಕರಟಿಲ್ಲ… ನಾಲಗೆ ರುಚಿಯೇ ಮರೆತು ಹೋಗುತ್ತೆ ಅಂತೀನೀ -ಹೀಗೆ ಅಮ್ಮನ ಚಿಕ್ಕಂದಿನ ಗೆಳತಿಯೊಬ್ಬರು ಹೋದ ವಾರ ಮನೆಗೆ ಬಂದವರು ಊಟಕ್ಕೆ ಕುಳಿತಾಗ ತಮ್ಮ ಮಗ, ಸೊಸೆಯನ್ನು ದೂರುತ್ತಿದ್ದರು. ನಮ್ಮ ಕಾಲದಲ್ಲಿ ದಿನಕ್ಕೊಂದು ಕಾಯಿ ಒಡೀತಿದ್ವಿ. ಈಗ ವಾರಕ್ಕೊಂದಾದರೆ ಹೆಚ್ಚು. ಈ ಮುಂದಿನವಕ್ಕೆ ತೆಂಗಿನಕಾಯಿ ಅಂದರೇನೂ ಅಂತಾನೇ ಮರೆತು ಹೋಗುತ್ತೇನೋ… ಅಂತ ಅಮ್ಮ ವಿಷಾದಿಸುತ್ತಿದ್ದಳು. ಇನ್ನು ಹತ್ತು ವರ್ಷ ಆದ ಮೇಲೆ ಕಾಯಿ ರುಬ್ಬಿ ಹುಳಿ ಮಾಡೋದೂ ಹೊಸ ರೆಸಿಪಿ ಆಗಿಬಿಡುತ್ತೇನೋ ಅಂತ ಆಕೆ ಮಮ್ಮಲಿಸಿದರು! ಹೌದು. ಈ ಕಾಲದ ಪಾರುಪತ್ಯವೇ ಹೀಗೇನೋ. ದೇವರಿಗೆಂದು ಕಾಯಿ ಒಡೆಸಿದರೆ ನಮಗೆ ಅದನ್ನು ಮನೆಗೆ ತರಲಿಕ್ಕೆ ಅದೇನೋ ಹಿಂದೇಟು. ನಾವು ಯಾರೂ ಅದರ ಕಡೆಗೆ ಕಣ್ಣು ಹಾಯಿಸದೆ ಫ್ರಿಜ್ಜಿನಲ್ಲಿಟ್ಟೂ ಬೂಸಲು ತಂದು ಕಡೆಗೆ ಕಸಕ್ಕೆಸೆಯುತ್ತೇವೆ. ಅಪರೂಪಕ್ಕೆ ಒಡೆದ ತೆಂಗಿನಕಾಯಿ ಕೆಟ್ಟಿದ್ದರೆ ಬದಲಿಸಿಕೊಂಡು ಬರಲು ದಿನಸಿ ಅಂಗಡಿಗೆ ವಾಪಸು ಹೋಗುವುದಿಲ್ಲ. ಆ ಕುರಿತು ವಿಷಾದವಿಲ್ಲ. ನಮಗೆ ಇದ್ದಕ್ಕಿದ್ದಂತೆ ತೆಂಗಿನ ಬಗ್ಗೆ ಯಾಕಿಷ್ಟು ತಾತ್ಸಾರ? ಅಮ್ಮ ಹೀಗೊಮ್ಮೆ ಒಡೆದ ಕಾಯನ್ನು ತುರಿದು ಫ್ರೀಝರಿಗೆ ತುರುಕಿ, ದಿನಾ ತನಗೆ ಬೇಕಾಗುವಷ್ಟನ್ನೇ ಚಮಚೆಯಲ್ಲಿ ತೆಗೆದು ತನ್ನಷ್ಟಕ್ಕಷ್ಟೆ ಉಪಯೋಗಿಸುತ್ತಾಳೆ. ಮನೆಗೆ ಬರುವವರಿಗೆಲ್ಲ ತಾಂಬೂಲ ಕೊಟ್ಟು ಇರುವ ಕಾಯಿಗಳನ್ನು ಸಾಗುಹಾಕುತ್ತಾಳೆ. ಒಂದು ಕಾಲದಲ್ಲಿ ಕುಂಕುಮದ ಜೊತೆ ಕಾಯಿ ಕೊಡುವುದು ಮರ್ಯಾದೆಯ ಲಕ್ಷಣವಾಗಿತ್ತು. ಹಾಗೆ ಕೊಡುವಾಗಲೂ ಏನೋ ಚೌಕಾಸಿಯಿರುತ್ತಿತ್ತು. ಯಾರಿಗೆ ಕಾಯಿ, ಯಾರಿಗೆ ಬರೇ ಬಾಳೆಹಣ್ಣು ಅಥವಾ ಬೆಲ್ಲದಚ್ಚು ಅಂತ ಲೆಕ್ಕ ಹಾಕಿದ್ದೂ ಇತ್ತು. ಈಗ ನಮಗೆಲ್ಲ ಕಾಯೆಂದರೆ ಎಷ್ಟು ಅಗ್ಗ!

ಬರೇ ಹತ್ತು ವರ್ಷಗಳಲ್ಲಿ ಕಾಲ ನಮ್ಮನ್ನು ಹೇಗೆ ಬದಲಿಸಿಬಿಟ್ಟಿದೆ? ಯೋಚನೆಯಾಗುತ್ತದೆ. ಇವೆಲ್ಲ ಬದಲುಗೊಂಡ ನಮ್ಮ ಜೀವನ ಮೌಲ್ಯಗಳೇ? ಪಿಝಾ, ಕೇಯೆಫ್ಸೀ, ಮೆಕ್‍ಡೊನಾಲ್ಡ್‌ಗಳ ಮಹಾತ್ಮೆಯೆ? ಕೋಕ್, ಪೆಪ್ಸಿಗಳ ಬಳುವಳಿಯೆ? ಯಾವುದೋ ಬಹುರಾಷ್ಟ್ರೀಯ ಹುನ್ನಾರವೆ? ದೂರ ಪಶ್ಚಿಮದ ಕಪೋಲಕಲ್ಪಿತಕ್ಕೆ ಶರಣೆಂದ ನಮ್ಮ ಮನಸ್ಸುಗಳ ಭಿಡೆಯೆ? ಇನ್ನೆಂಥದೋ ಮುಲಾಜೆ? ಅರ್ಥವಾಗುವುದಿಲ್ಲ. ಇವಕ್ಕೆಲ್ಲ ಉತ್ತರ ಹೌದು ಅಂತಾದರೆ ಕಾಯಿ, ತುಪ್ಪ ಬಿಟ್ಟು, ಸೂಖಾ ಸುಟ್ಟ ರೊಟ್ಟಿಯನ್ನೂ, ಪಾಲಿಷು ಉಜ್ಜದೆ ಕೆಂಪು ಮಿಕ್ಕ ಅಕ್ಕಿಯನ್ನು ತಿನ್ನತೊಡಗಿದ್ದೇ ಗದ್ದದ ಕೆಳಗಿನ ಬೊಜ್ಜಿನ ಪದರ ತಂತಾನೇ ಕರಗಿದ್ದು ಸುಳ್ಳೆ? ತೆಂಗು ಬೆಳೆಯುತ್ತಿದ್ದಲ್ಲೆಲ್ಲ ಅದನ್ನೇ ಊಟದೊಟ್ಟಿಗಿನ ರುಚಿಕಟ್ಟಾಗಿ ಯಾವತ್ತೂ ಇಟ್ಟುಕೊಂಡವರ ತಲೆಮಾರುಗಳು ಇರಲೇ ಇಲ್ಲವೆ? ಪ್ರಶ್ನೆಗಳು ಒಂದೇ ಸಮ ಡೋಲಾಯಿಸುತ್ತವೆ.

ಅಲ್ಲವೆ? ನಾವೇ ಸಂದುಕೊಂಡ ನಮ್ಮದೇ ಕಾಲವೊಂದಿತ್ತಲ್ಲ? ಕಣ್ಣೆದುರೇ ಸರಿದುಹೋದ ಇತ್ತೀಚಿನ ಕಾಲ. ಆಗ ಮನೆ ಮನೆಯಲ್ಲೂ ಎದುರಿಗೆ ತೆಂಗು ನೆಡುವ ವಾಡಿಕೆಯಿತ್ತು. ಅದು ಕಲ್ಪತರುವೆಂಬ ನಂಬುಗೆಯಿತ್ತು. ಅದರಿಂದ ಮನೆಯ ಮಟ್ಟಿಗೆ ಆಗುವ ವರ್ಷಾವರಿ ಹುಲುಸು ಫಸಲೂ ಇತ್ತು. ಅನಿವಾರ್ಯವಾಗಿ ಮರ ಕಡಿಯುವ ಪ್ರಸಂಗವಿದ್ದಲ್ಲಿ ಪ್ರಾಯಶ್ಚಿತ್ತವಾಗಿ ಒಂದಕ್ಕೆ ನಾಲ್ಕರ ಹಾಗೆ ಅವನ್ನು ನೆಟ್ಟು ಬೆಳೆಸುವ ಪರಿಹಾರವೂ ಇತ್ತು. ಒಮ್ಮೊಮ್ಮೆ ಮರ ಮಾಡು, ಸೂರುಗಳಲ್ಲಿ ತೂರಿ ಮೇಲೆ ಬಿಸಿಲುಮಚ್ಚಿನಲ್ಲಿ ಫಲ ಕೊಡುವ ಸಾಧ್ಯತೆಯೂ ಇತ್ತು… ಬೆಳೆದ ಊರೊಳಗೆ ಉದ್ದಗೆ ಗರಿದೂಗುವ ತೋಪುಗಳಿರುತ್ತಿದ್ದವು. ಮನೆಗಳಿಗೆ ಹಿನ್ನೆಲೆಯಾಗಿ ಅವು ವಾಲುತ್ತಿದ್ದವು. ಬೀದಿಯ ಚಿತ್ರಣದಲ್ಲಿ ಕಟ್ಟಡಗಳಿಗೂ ಎತ್ತರದಲ್ಲಿ, ಅಡ್ಡ ಹಾಯುವ ಎಷ್ಟೆಲ್ಲ ತಂತಿ, ತಾರುಗಳ ತೂಗುಗಳ ಮೇಲಕ್ಕೆ ಬಾಗಿಕೊಂಡಿರುವ ಉದ್ದಾನುದ್ದ ಕಾಂಡದ ಗೆರೆಗಳು. ತುದಿಯಲ್ಲಿ ಝೊಂಪೆ ಝೊಂಪೆ ಗರಿಗಳ ಹಸಿರು, ಹಳದಿ, ಕಂದುಗಳ ಬೆರಕೆಯ ಕುಚ್ಚಿಗೆ. ಎತ್ತರವೆಂದರೆ ಆಕಾಶದಲ್ಲಿ ತಾನಷ್ಟೇ ಎನ್ನುವ ಹಾಗೆ. ಅದರ ಕಾಯಿ, ಹೆಡೆಗಳ ಪೊಟರೆಗಳಲ್ಲಿ ಯಾರೋ ಹಾರಿಸಿದ ಗಾಳಿಪಟ ಬಾಲಂಗೋಚಿ ಸಹಿತ ಗೋತಾ ಹೊಡೆದು ಕಚ್ಚಿರುವ ಜ್ಞಾಪಕ. ಚಿತ್ರ…. ಆ ಕಾಲ ನಮ್ಮೆದುರೇ ಸಂದುಹೋಯಿತು. ನಮ್ಮ ಇರವುಗಳು ನಮಗಿಂತ ಎತ್ತರಕ್ಕೆ ಬೆಳೆದವು. ತೆಂಗಿನ ಎತ್ತರಕ್ಕೂ ಮಿಗಿಲಾದವು. ರಿಯಲ್ ಎಸ್ಟೇಟ್ ಹುನ್ನಾರದಲ್ಲಿ ತೋಪುಗಳು ಕಡಿದುಕೊಂಡು ಎಲ್ಲೆಲ್ಲೂ ಕಟ್ಟಡಗಳೇ ಆಗಿಬಿಟ್ಟವು. ಊರಿನ ನೆಲ ಮತ್ತು ಆಕಾಶ ಬದಲಾಗಿ ಹೋಯಿತು. ಜತೆಗೆ ಊರನ್ನಾಗಿಸುವ ಅದರ ಲ್ಯಾಂಡ್‍ಸ್ಕೇಪು, ಸ್ಕೈ-ಸ್ಕೇಪು, ಇತರೆ ಸ್ಕೇಪುಗಳೂನೂ…

ಕಾರು ವೇಗದ ಸವಾರಿ ಮಾಡುತ್ತ ಮುಂದೆ ಧಾವಿಸುತ್ತಿತ್ತು. ಹಾದಿ ಬದಿಯಲ್ಲಿ ಹೊಸ ಲೇಔಟುಗಳು. ಎಷ್ಟೋ ಹೊಸ ಮನೆಗಳು. ಹೊಸ ವಿನ್ಯಾಸಗಳು… ಹಳೆಯ ಪ್ರತೀತಿಗಳ ಪ್ರತೀಕವಾದ ತೆಂಗು ಎಲ್ಲೂ ಕಾಣ ಸಿಗಲಿಲ್ಲ. ಹೌದು. ಮಹಾನಗರದ ಹೊಸ ಬಡಾವಣೆಗಳಲ್ಲಿ ಹುಡುಕಿದರೂ ತೆಂಗು ಸಿಗುವುದಿಲ್ಲ. ಏಕೆಂದರೆ ಹೊಸ ತಲೆಮಾರು ಅದನ್ನು ಅಷ್ಟಾಗಿ ನಂಬುವುದಿಲ್ಲ. ಅಲ್ಲದೆ- ಮನೆಯೆದುರು ತೆಂಗು ನೆಡುವುದು ಔಟ್‍ಡೇಟೆಡ್ ಅಂತ ನನ್ನ ಗೆರೆಗಳೆದುರು ಮೇಜಿನಾಚೆ ಕುಳಿತವರಿಗೆ ನಾನೇ ಹೇಳುವುದಿದೆಯಲ್ಲ… ಅದೂ ಅಲ್ಲದೆ ಕರ್ಚೀಫಿನಷ್ಟು ಅಗಲದ ಬಟ್ಟೆ ಹಿಡಿದು ಟವಲಿನ ಸವಲತ್ತು ಕನಸುವ ಇವತ್ತಿನ ಮಂದಿ ತೆಂಗಿನ ಮರ ಹಾಕುವಷ್ಟು ತೆರಹನ್ನು ಸೈಟಿನಿಂದೆಲ್ಲಿ ಹೊರತುಪಡಿಸಿಯಾರು?