ಎರಡೂ ಕೈಗಳಿಗೂ ಅಮ್ರದ ದುಂಡಿಯನ್ನು ಪಟ್ಟಗಣಿಯಿಂದ ಸುತ್ತಿ ಬಿಗಿಯಾಗಿ ಹಿಡಿದುಕೊಂಡು ಮೊಣಕಾಲಿನವರೆಗೂ ತಿರಿವಿಕೊಂಡ. ಮೊಣಕಾಲಿನ ಮೇಲೆ ಜಪ್ಪಯ್ಯ ಎಂದರೂ ದುಂಡಿ ಒಂದಿಂಚೂ ಮೇಲೇಳಲಿಲ್ಲ. ಸ್ವಲ್ಪ ಸಾವರಿಸಿಕೊಂಡು ನರನಾಡಿಗಳಲ್ಲಿನ ಸಮಸ್ತ ಶಕ್ತಿಯನ್ನು ಒಟ್ಟು ಮಾಡಿ ಉಡ ಕೂಡಾ ನಾಚುವಂತೆ ಬಿಗಿಯಿಡಿದು ಬಿಲ್ಲಿನಂತೆ ಹಿಂದಕ್ಕೆ ಬಾಗಿ ದುಂಡಿಯನ್ನು ಮೇಲೆಳೆದುಕೊಂಡ. ದುಂಡಿ ಎದೆಯ ದಾರಿ ಹಿಡಿಯುತು. ಹನುಮಂತಯ್ಯನ ನರನಾಡಿಗಳು ಚಡಚನೆ ಪತರಗುಟ್ಟು ತೊಡಗಿದವು. ಎದೆ ಮೇಲೆ ಒಂದೆರಡು ಉಳ್ಡಿಕೆ ಉಳ್ಡಿ ನಿಂತಿತು. ಬಲಗಡೆ ಭುಜದ ದಾರಿ ಅಷ್ಟು ಸುಲಭಕ್ಕೆ ಹತ್ತಲಿಲ್ಲ. ಜನರು ಉಸಿರು ಬಿಗಿಯಿಡಿದು ನಿಂತರು.
ಮಂಜಯ್ಯ ದೇವರಮನಿ, ಸಂಗಾಪುರ ಬರೆದ ಪ್ರಬಂಧ ನಿಮ್ಮ ಓದಿಗೆ

ಹನುಮಂತಯ್ಯ ಬಹಳ ಗಟ್ಟಿ ಮುಟ್ಟಾದ ಮನುಷ್ಯ. ಅವನದು ವಜ್ರಕಾಯ. ಹರೆಯದಲ್ಲಿ ತುಂಬಾ ಸಾಹಸಕಾರ್ಯಗಳನ್ನು ಮಾಡಿ ಹೆಸರಾಗಿದ್ದವನು. ಸಂಗಾಪುರದಲ್ಲಿ ಹನುಮಂತಯ್ಯ ಹೆಸರಿನ ತುಂಬಾ ಜನರಿದ್ದಾರೆ. ಯಾರನ್ನಾದರೂ ನೀವು ಕೇಳಿದರೆ ಯಾವ ಹನುಮಂತಯ್ಯ? ಎಂಬ ಪ್ರಶ್ನೆ ಪಟ್ಟನೆ ತಿರುಗಿ ಬರುತ್ತದೆ. ಅದೇ… ರೀ… ದುಂಡಿ ಎತ್ತುವ ಹನುಮಂತಯ್ಯ ಎಂದರೆ ಓ… ದುಂಡಿ…! ದುಂಡಿಸ್ವಾಮಿ…! ಮರುಕ್ಷಣದಲ್ಲೇ ಹನುಮಂತಯ್ಯನ ಪರಾಕ್ರಮಗಳು ನಾಲಿಗೆ ತುದಿಗೆ ನುಗ್ಗಿ ಬರುತ್ತವೆ. ಅವನ ಕೈಗಳಿಂದ ಅದೆಷ್ಟು ಮಿಣಿಗಳು ಹರಿದಿವೆಯೋ, ಅದೆಷ್ಟು ಚಕ್ಕಡಿಗಳು ಪುಡಿಪುಡಿಯಾಗಿವೆಯೋ, ಅದೆಷ್ಟು ದುಂಡಿಗಳು ಒಡೆದು ಹೋಳುಗಳಾಗಿವೆಯೋ, ಅದೆಷ್ಟು ಗಡಿಗೆಗಳು ಪುಡಿ ಪುಡಿಯಾಗಿವೆಯೋ, ಅದೆಷ್ಟು ಗೆಳೆಯರ ಮೂಗುಗಳು ರಕ್ತಕಾರಿವೆಯೋ ಲೆಕ್ಕವಿಲ್ಲ!!! ಹನುಮಂತಯ್ಯನ ಕಿತಾಪತಿಗಳು ಒಂದೆರಡಲ್ಲ. ದಿನ ಒಂದಿಲ್ಲೊಂದು ಜಗಳಗಳು ಮನೆ ಬಾಗಿಲು ತಟ್ಟುತ್ತಿದ್ದವು. ಸಣ್ಣಿರವ್ವನಿಗೆ ದಿನಾಲು ಮಗನ ಜಗಳದ ಗಂಟು ಬಿಡಿಸಿ ಬಿಡಿಸಿ ಸಾಕಾಗಿ ಹೋಗಿತ್ತು. “ಕೆಟ್ಟಚಾಳಿ ಕಲ್ಲಾಕಿದ್ರೂ ಹೋಗಲ್ಲ… ದುಂಡಿ ಹಾಕಿದ್ರೆ ಹೋಗ್ತದಾ… ತೆಲಿಮ್ಯಾಲ ಬಂಡೆಗಲ್ಲು ಎತ್ಯಾಕಬೇಕು… ಅಷ್ಟೇ… ತೆಲಿಯೋ ವಜ್ರದುಂಡಿ ಆಗೇತಿ” ಎಂದು ಶಪಿಸುತ್ತಿದ್ದಳು.

ಸಂಗಾಪುರದಲ್ಲಿ ಗರಡಿಮನೆಗಳು ಇರಲಿಲ್ಲ. ಆದರೂ ಯುವಕರು ಕುಸ್ತಿಯಾಡುವುದನ್ನು ಕಲಿತಿದ್ದರು. ತಿಪ್ಪೆಗುಂಡಿಗಳೆ ಕುಸ್ತಿ ಅಖಾಡಗಳಾಗಿದ್ದವು. ಹನುಮಂತಯ್ಯ ಕುಸ್ತಿಯಲ್ಲಿ ಪಳಗಿದವ. ಕಚ್ಚಿ ಕಟ್ಟಿದರೆ ವಾರಿಗೆಯ ನಾಲ್ಕೈದು ಹುಡುಗರನ್ನು ತರುಬುತ್ತಿದ್ದ. ಕೈ ಹಾಕಿ ಚಂಡಡಿಗೆ ಕಾಲು ಮೇಲೆ ಮಾಡಿ ಎತ್ತಿ ಬಿಸಾಕಿಬಿಡುತ್ತಿದ್ದ. ಅವನ ತದ್ದಕಕ್ಕೆ ಎಲ್ಲರೂ ತಬ್ಬಿಬ್ಬಾಗುತ್ತಿದ್ದರು. ಮುಷ್ಟಿ ಮಾಡಿ ಗುದ್ದಿದರೆ ತೆಂಗಿನಕಾಯಿ ಒಳಾಗುತ್ತಿತ್ತು ಅಂತಹದರಲ್ಲಿ ಮೂಗಿನ ಒಳ್ಳಿಗಳು ಯಾವ ಲೆಕ್ಕ..! ತೆಂಗಿನಕಾಯಿ ಒಡೆದು ಎಳೆನೀರು ಸೋರಿದಂತೆ ನಾಸಿಕಗಳು ರಕ್ತವನ್ನು ಉಚ್ಚುತ್ತಿದ್ದವು. ತದಕಿಸಿಕೊಂಡವರು ಇವನ ಸುದ್ದಿ ಬೇಡವೆಂದು ಸುಮ್ಮನಾಗುತ್ತಿರಾದರೂ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು.

ಇನ್ನೊಂದು ವಿಚಾರ… ಊರಲ್ಲಿ ಹುಣಸೆಮರಗಳು ಸಾಲು ಸಾಲಾಗಿ ಹಬ್ಬಿದ್ದವು. ಸರಕಾರಿ ಹುಣಸೆ ಮರಗಳು. ಅವುಗಳನ್ನು ಹೊನ್ನಾಳ್ಳಿಯ ಸಾಬರು ಹರಾಜು ಹಿಡಿಯುತ್ತಿದ್ದರು. ಬೇಸಿಗೆಯಲ್ಲಿ ಫಲಿತ ಹುಣಸೆಹಣ್ಣುಗಳನ್ನು ಬಡಿಯಲು (ಚಪ್ಪರಿಸಲು) ಕೂಲಿಯವರು ಬೇಕಿತ್ತು. ಹಳೆಯದಾದ ದೊಡ್ಡ ಹುಣಸೆಮರಗಳನ್ನು ಹತ್ತಿ ಬಡಿಯುವುದು ಸಾಮಾನ್ಯವಲ್ಲ. ಆ ಕೆಲಸಕ್ಕೆ ಎಲ್ಲರು ಹೆದರುತ್ತಿದ್ದರು. ಕೇಳಿದಷ್ಟು ಕೂಲಿ ಕೊಡುತ್ತೇವೆ ಎಂದರು ಯಾರೂ ಮುಂದೆ ಬರುತ್ತಿರಲಿಲ್ಲ. ಹುಣಸೆಹಣ್ಣು ಬಡಿಯಲು ಹನುಮಂತಯ್ಯನೇ ಬರಬೇಕಾಯಿತು. ಕ್ಷಣಾರ್ಧದಲ್ಲಿ ಮಂಗನಂತೆ ಹುಣಸೆಮರದ ಜರ್ಲು ಹಿಡಿದು ತುದಿಯನ್ನು ತಲುಪಿ ಬಿದಿರುಕೋಲಿನಿಂದ ಚಪ್ಪರಿಸುತ್ತಿದ್ದ. ಬಾಲ್ಯದಲ್ಲಿ ಅವನು ಹತ್ತದ ಮರಗಳಿಲ್ಲ. ಮರದಿಂದ ಮರಕ್ಕೆ ಮಂಗನಂತೆ ಜಿಗಿಯುತ್ತಿದ್ದ. ರಾತ್ರಿ ಸರಿಹೊತ್ತಿನ ತನಕ ಮರದಲ್ಲೇ ಇರುತ್ತಿದ್ದ. ಅವನವ್ವ ಸಣ್ಣಿರವ್ವ ಕಾಡಿ ಬೇಡಿದ ಮೇಲೆಯೇ ಮರ ಬಿಟ್ಟು ಕೆಳಗಿಳಿದು ಬರುತ್ತಿದ್ದ.

ಎತ್ತಿನಗಾಡಿಗಳಿಗೆ ಕೀಲೆಣ್ಣೆ ಎರೆಯಲು, ಹಳ್ಳದಲ್ಲಿ ಸಿಕ್ಕಿಹಾಕಿಕೊಂಡ ಚಕ್ಕಡಿಯನ್ನು ಎತ್ತಲು, ಗಳೆಸಾಮಾನುಗಳನ್ನು ಹೊತ್ತು ಸಾಗಿಸಲು, ಹೊಲದಲ್ಲಿ ಹೂತುಹೋದ ಕಬ್ಬಿಣದ ನೇಗಿಲು ಎತ್ತಲು, ಮನೆಯ ಮಾಳಿಗೆಯ ಚಪ್ಪಡಿ ಕಲ್ಲುಗಳನ್ನು ಎತ್ತಿಡಲು ಹನುಮಂತಯ್ಯ ನೆರವಾಗುತ್ತಿದ್ದ. ಅದರಲ್ಲಿ ಕೀಲೆಣ್ಣೆ ಎರೆಯುವುದು ತುಂಬಾ ಕಷ್ಟದ ಕೆಲಸ. ಒಬ್ಬ ಉದ್ದುಗಿಯನ್ನು ಹೆಗಲ ಮೇಲೆ ಎತ್ತಿಹಿಡಿಯಬೇಕು ಇನ್ನೊಬ್ಬ ಗುಂಬದ ಗಾಲಿಯನ್ನು ತೆಗೆದು ಹೆರ್ಚಟಗಿಯಲ್ಲಿನ ಕೀಲೆಣ್ಣೆಯನ್ನು ತೆಗೆದು ಕಬ್ಬಿಣದ ಅಚ್ಚಿಗೆ ಎರೆಯಬೇಕು. ಇದು ಒಬ್ಬರಿಂದಾಗದ ಕೆಲಸ. ಆ ಕೆಲಸವನ್ನು ಹನುಮಂತಯ್ಯ ಒಬ್ಬನೇ ಮಾಡುತ್ತಿದ್ದ. ಅವನೊಬ್ಬ ಹುಂಬುಗಾರ. ಸಾಕಷ್ಟು ಜನರಿಗೆ ಒಳ್ಳೆಯ ಕೆಲಸ ಮಾಡಿಕೊಟ್ಟಿದ್ದಾನೆ. ಆಗೆಲ್ಲಾ ಜನರು ಹನುಮಂತಯ್ಯನನ್ನು ಹೊಗಳುತ್ತಿದ್ದರು.

*****

ಬೆನ್ನೂರು ಬಯಲುಸೀಮೆ. ಮಳೆಗಿಂತ ಬಿಸಿಲಿನದೆ ರಾಜ್ಯಬಾರ. ಮಳೆ ಆಗೊಮ್ಮೆ ಈಗೊಮ್ಮೆ ಘರ್ಜಿಸಿ ಉಗುಳಿ ಮಾಯವಾಗಿಬಿಡುತ್ತಿತ್ತು. ಕೆಂಡದಂತ ಬಿಸಿಲು ಜನರನ್ನು ಮುಳ್ಳುಗಾಯಿ ಸುಟ್ಟಂತೆ ಸುಡುತ್ತಿತ್ತು. ಜನ ಬಗ್ಗುತ್ತಿದ್ದಿಲ್ಲ ಬಿಸಿಲಿಗೆ ಸೆಡ್ಡು ಹೊಡೆದು ಬದುಕುತ್ತಿದ್ದರು.

ಅಷ್ಟೋ ಇಷ್ಟೋ ಉಗುಳಿದ ಮಳೆಗೆ ಉಳುಮೆ, ಬಿತ್ತನೆಗೆ ಅಣಿಯಾಗುತ್ತಿದ್ದರು. ಬೆಳೆದರೆ ಕೊಯ್ಲು, ಒಂದಿಷ್ಟು ದುಡ್ಡು! ಬರಗಾಲ ಬಿದ್ದರೆ ಅದು ಇಲ್ಲ, ಓಸಿ, ಇಸ್ಪೀಟು, ಜೂಜು, ಹೆಂಗಸಿನ ಚಾಳಿ ಸುಖ ನೀಡಿದರೂ ಕೊನೆಗೆ ಬರೆ ಹಾಕುತ್ತಿದ್ದವು. ಮಕ್ಕಳ ಮದುವೆ ಸಾಲ, ಅನಾರೋಗ್ಯ, ಅಣ್ಣ ತಮ್ಮರ ಜಗಳ, ಕೋರ್ಟು ಕಛೇರಿ ಸುತ್ತಾಟ, ಸಾಲ ಕೊಟ್ಟವರ ಉಪಟಳ ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಮತ್ತೆ ಜೀವನ ಜೋಕಾಲಿ ಜೀಕಬೇಕಿತ್ತು. ಈ ಕಷ್ಟದ ಕೋಟೆಯ ಗೋಡೆಯಲ್ಲಿ ಸಿಲುಕಿದ ಸಂಗಾಪುರದ ಜನಗಳಿಗೆ ಯುಗಾದಿ ಬಂದರೆ ಮತ್ತೆ ಹೊಸ ಕಸುವು ಕರಕೀಯ ಕುಡಿಯಂತೆ ಚಿಗರುತ್ತಿತ್ತು. ಅದರ ಫಲವೇ… ಯುಗಾದಿಯಂದು ನಡೆಯುವ ಸಾಹಸ ಕ್ರೀಡೆಗಳು. ಅವುಗಳಲ್ಲಿ ತುಂಬಿದ ಗಡಿಗೆ ಎತ್ತುವುದು, ಚಕ್ಕಡಿಬಂಡಿ ಗಾಲಿಗಳನ್ನು ಒಬ್ಬನೇ ಬಿಡಿಸಿ ಮತ್ತೆ ಜೋಡಿಸುವುದು, ಒಬ್ಬನೇ ಎತ್ತಿನಗಾಡಿಗೆ ಕೀಲೆಣ್ಣೆ ಎರೆಯುವುದು, ಅರ್ತಿಕಲ್ಲು ಕಟ್ಟಿ ಹೊಡೆಯುವುದು, ಮರದ ನೇಗಿಲನ್ನು ಬಾಯಲ್ಲಿ ಕಚ್ಚಿ ಎತ್ತುವುದು, ಜೋಡಿ ಗುಂಬದ ಗಾಲಿಗಳನ್ನು ಒಬ್ಬನೇ ಓಡಿಸುವುದು, ಕಲ್ಲಿನ ದುಂಡಿಗಳನ್ನು ಎತ್ತುವುದು ಇನ್ನು ತಹರೆವಾರಿ ಕಸರತ್ತುಗಳು ಜರುಗುತ್ತಿದ್ದವು.

ದುಂಡಿ ಎತ್ತುವುದು ವೀರಭುಜಭಲದ ಕ್ರೀಡೆ. ಅದೊಂದು ಯಾವುದೇ ಆದಾಯವಿಲ್ಲದ, ಫಲಾಪೇಕ್ಷೆಯಿಲ್ಲದ, ಕೇವಲ ಯಶೋಭಿಲಾಷೆಗಾಗಿ ಬೆವರಿಳಿಸಿ ಮಾಡುವ ಭೀಮ ಸಾಹಸಕಾರ್ಯ. “ಅದೇನು ಮಹಾ! ಬಳೆ ತೊಟ್ಟ ಹೆಂಗಸರು ಕೆಂಪಿಂಡಿ ಅರೆಯಲು ಎಡಗೈಯಲ್ಲಿ ದುಂಡಿ ತಿರುವುತ್ತಾರೆ” ಎಂದು ಮೂಗು ಮುರಿಯಬೇಡಿ. ಚಟ್ನಿ ಅರೆಯುವ ದುಂಡಿಗೂ; ಅಖಾಡದಲ್ಲಿಯ ದುಂಡಿಗೂ ಆಡುಮರಿಗೂ ಆನೆಗೂ ಇರುವ ವ್ಯತ್ಯಾಸವಿದೆ. ಕೈಗಳಿಗೆ ಅಮ್ರದ, ಉಸಿರು ಬಿಗಿಹಿಡಿದರು ಮೊಣಕಾಲಿನವರೆಗೂ ತಿರುಗದ ದುಂಡಿಯೆಲ್ಲಿ…? ಎಡಗೈಯಲ್ಲಿ ಚಟ್ನಿ ಅರೆಯುವ ಗುಂಡುಕಲ್ಲು ಎಲ್ಲಿ…?

ಅದು ಇರಲಿ ವಿಷಯಕ್ಕೆ ಬರುತ್ತೇನೆ. ಸಂಗಾಪುರದ ಇತಿಹಾಸದ ಸ್ವಾರಸ್ಯಕರ ಸಂಗತಿಯೊಂದನ್ನು ಹೇಳುತ್ತೇನೆ. ಹಳ್ಳಿಗಳಲ್ಲಿ ಬೀಗತನಗಳು ಒಳ್ಮಳ್ಳಿ ಆಗುತ್ತವೆ. ಅಂದರೆ ಒಂದೇ ಊರಿನ ಜೊತೆಗೆ ಸಂಬಂಧಗಳು, ಬೀಗತನಗಳು, ಕೊಡುಕೊಳ್ಳಿಗಳಾಗುವುದು ಸಾಮಾನ್ಯ. ಅಂತೆಯೇ ಸಂಗಾಪುರದಿಂದ ಮಾದಾಪುರಕ್ಕೆ ಹೆಣ್ಣುಕೊಟ್ಟು ಹೆಣ್ಣು ತೆಗೆದುಕೊಳ್ಳುವುದು ನಿರೋಳ್ಳೋ ದಾರಿಯಷ್ಟು ಸಲೀಸಾಗಿತ್ತು. ಹಳೇ ಬೀಗರು ಹೊಸ ಬೀಗರು ಒಂದಾಗುವದೆಂದರೆ ಹಾಲು ಗೋಧಿಹುಗ್ಗಿ ಕಲಸಿಕೊಂಡು ಉಂಡಂತೆ. ಹೆಣ್ಣೆತ್ತವರು ಗೊತ್ತುಗುರಾಚಾರ ಇಲ್ಲದ ದೂರದ ಊರುಗಳಿಗೆ ಹೆಣ್ಣು ಕೊಟ್ಟು ಕಷ್ಟವನ್ನು ಕಣ್ಣಾರೆ ನೋಡಲಾಗದೆ ಇತ್ತಕಡೆ ಅನುಭವಿಸಲಾಗದೆ ಕೊನೆಗೆ ಬಿಡಲಾಗದೆ ಕೊರಗುವುದಕ್ಕಿಂತ ಹಳೆ ಸಂಬಂಧಗಳಲ್ಲಿ ಮದುವಿ ಮಾಡಿ ಹೆಗಲಾಗುವುದು ಉತ್ತಮ ಎಂಬ ನಂಬಿಕೆ. ಇದರಿಂದಾಗಿ ಮದುವೆಯ ಮಮತೆಯ ಗೋಧಿಹುಗ್ಗಿ ಗಂಗಯ್ಯನ ಎರಡೆರಡು ಜೊತೆ ಕೆರಗಳು ಸವೆಯುವುದು ತಪ್ಪುತ್ತಿತ್ತು.

ಗಂಗಯ್ಯ ಹೊನ್ನಾಳ್ಳಿ ಸೀಮೆಯ ಮದುವೆಯ ಮಮತೆಯ ಕರೆಯೋಲೆಯ ಮುಖ್ಯ ಪಾತ್ರಧಾರಿ. ಅವನು ಮದುವೆಯ ವಿಚಾರದಲ್ಲಿ ನಿಭಾಯಿಸದಿರುವ ಕೆಲಸಗಳೇ ಇಲ್ಲ. ಇನ್ನೇನು ಮದುವೆನೇ ಆಗಲ್ಲ ಅನ್ನುವಂತ ಅದೆಷ್ಟೋ ವರಗಳಿಗೆ ಗಂಗಯ್ಯ ಹೆಣ್ಣು ಹುಡುಕಿ ಗಂಟುಹಾಕಿದ್ದಾನೆ. ಹೆಣ್ಣು ಗೊತ್ತು ಮಾಡುವುದರಿಂದ ಹಿಡಿದು ವೀಳ್ಯಶಾಸ್ತ್ರ, ಅರಿಶಿಣ ಶಾಸ್ತ್ರ, ಒಟ್ಟಿನಲ್ಲಿ ಪಾಕಶಾಸ್ತ್ರದಿಂದ ದಾರಿ ಮುಹೂರ್ತದವರೆಗೂ ಎಲ್ಲಾ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಿದ್ದ ಆದ್ದರಿಂದ ಎಲ್ಲರೂ ಗಂಗಯ್ಯನನ್ನು ಬಯಸುತ್ತಿದ್ದರು. ಗಂಗಯ್ಯ ಅಲೆದು ಅಲೆದು ಅವನ ಚಪ್ಪಲಿಗಳು ಸವೆದು ನಾಯಿ ನಾಲಿಗೆಯಾಗಿರುತ್ತಿದ್ದವು. ಇತ್ತೀಚಿಗೆ ಒಳ್ಮಳ್ಳಿ ಸಂಬಂಧದಲ್ಲಿ ಲಗ್ನವಾಗುತ್ತಿದ್ದರಿಂದ ಮದುವೆಯ ಮಮತೆಯ ಕೆಲಸಕ್ಕೆ ಕಣ್ಣಿಕಟ್ಟಿ ಕಮ್ಮತಕ್ಕೆ ನಿಂತಿದ್ದ.

ಮಾದಾಪುರದ ಜನ ತಮ್ಮ ಹೆಣ್ಣುಗಳನ್ನು ಕಣ್ಮುಚ್ಚಿ ಸುಮ್ಮನೆ ಕೊಟ್ಟು ಬಿಡುತ್ತಿರಲಿಲ್ಲ. ಅದಕ್ಕಾಗಿಯೇ ಸಾಹಸ ಸ್ಪರ್ಧೆಯೊಂದನ್ನು ಏರ್ಪಡಿಸುತ್ತಿದ್ದರು. ಅದೆ ದುಂಡಿ ಎತ್ತುವ ಸ್ಪರ್ಧೆ…! ಯುಗಾದಿ ಹಬ್ಬದಂದು ವಧುನ್ವೇಷಣೆಯ ಈ ಭೀಮಸಾಹಸ ಕ್ರೀಡೆಗೆ ರಾಮನಗೌಡ್ರ ಮನೆಯ ಮುಂದೆ ರಂಗಸ್ಥಳ ಸಜ್ಜಾಗುತ್ತಿತ್ತು. ಮಧ್ಯಾಹ್ನ ಒಬ್ಬಟ್ಟಿನ ಊಟದ ನಂತರ ದುಂಡಿ ಎತ್ತುವುದನ್ನು ನೋಡಲು ಸೇರುತ್ತಿದ್ದರು.

ಯುವಕರು ಕುಸ್ತಿಯಾಡುವುದನ್ನು ಕಲಿತಿದ್ದರು. ತಿಪ್ಪೆಗುಂಡಿಗಳೆ ಕುಸ್ತಿ ಅಖಾಡಗಳಾಗಿದ್ದವು. ಹನುಮಂತಯ್ಯ ಕುಸ್ತಿಯಲ್ಲಿ ಪಳಗಿದವ. ಕಚ್ಚಿ ಕಟ್ಟಿದರೆ ವಾರಿಗೆಯ ನಾಲ್ಕೈದು ಹುಡುಗರನ್ನು ತರುಬುತ್ತಿದ್ದ. ಕೈ ಹಾಕಿ ಚಂಡಡಿಗೆ ಕಾಲು ಮೇಲೆ ಮಾಡಿ ಎತ್ತಿ ಬಿಸಾಕಿಬಿಡುತ್ತಿದ್ದ. ಅವನ ತದ್ದಕಕ್ಕೆ ಎಲ್ಲರೂ ತಬ್ಬಿಬ್ಬಾಗುತ್ತಿದ್ದರು. ಮುಷ್ಟಿ ಮಾಡಿ ಗುದ್ದಿದರೆ ತೆಂಗಿನಕಾಯಿ ಒಳಾಗುತ್ತಿತ್ತು ಅಂತಹದರಲ್ಲಿ ಮೂಗಿನ ಒಳ್ಳಿಗಳು ಯಾವ ಲೆಕ್ಕ..! ತೆಂಗಿನಕಾಯಿ ಒಡೆದು ಎಳೆನೀರು ಸೋರಿದಂತೆ ನಾಸಿಕಗಳು ರಕ್ತವನ್ನು ಉಚ್ಚುತ್ತಿದ್ದವು.

ಯುಗಾದಿ ಹಬ್ಬದ ದಿನ. ಮಧ್ಯಾಹ್ನದ ಬಿಸಿಲು ದಾಳ ದಾಳವಾಗಿ ಸುರಿಯುತ್ತಿತ್ತು, ಬೇವಿನ ಮರ ಮೈಚಾಚಿ ಎಲ್ಲರ ನೆತ್ತಿಗೆ ನೆರಳಿನ ಸೆರುಗು ಹಾಸಿತ್ತು. ಕರಿಯಣ್ಣನ ಹಲಗೆಯ ಸದ್ದಿನಿಂದ ಜಟ್ಟಿಗಳು ಹುರುಪುಗೊಂಡಿದ್ದರು. ಹೆಣ್ಣು ಗಂಡುಗಳು, ಮುದುಕ ಮುಂಡರುಗಳು ಬಿಟ್ಟಗಣ್ಣಾಗಿ ಕಾಯುತ್ತಿದ್ದರು. ರಾಮನಗೌಡ್ರು, ಅವರ ಪಕ್ಕ ಮಲ್ಲಯ್ಯಗೌಡ್ರು ಹಿಂದುಗಡೆ ಬಸಪ್ಪಜ್ಜ ಅವರ ವಾರಗೆ ತೇರುಲಿಂಗಯ್ಯ ಕುಳಿತಿದ್ದರು. ವಿವಿಧ ಗಾತ್ರದ ದುಂಡಿಗಳಿಂದ ಜಟ್ಟಿಗಳಿಂದ ರಂಗಸ್ಥಳ ತುಂಬಿತ್ತು. ಮಲ್ಲಯ್ಯಗೌಡ್ರು ತೇರುಲಿಂಗಯ್ಯನನ್ನು ನೋಡಿ ಮಾತಿಗೆಳೆದರು.

“ಏನಲೇ ತೇರಾ ಮಗಳ ಲಗ್ಣ ಮಾಡೋನೋ ಅದಿಯೋ ಇಲ್ಲೋ… ಹುಡುಗಿ ನೋಡಿದ್ರೆ ಗಿಣಿಮರಿ ಆಗೇತಿ ಒಳ್ಳೆಕಡೆ ನೋಡಿ ಕೊಟ್ಟು ತೆಲಿ ಮ್ಯಾಲಿನ ಭಾರ ಇಳಿಸಿಕೊಳ್ಳೋದು ಬಿಟ್ಟು ಗುಂಡುಕಲ್ಲು ಕುಂತಾಂಗ ಕುಂತಿಯಲ್ಲ”

“ನಿಮ್ಗೆ ಗೊತ್ತಿಲ್ಲದ್ದು ಏನೈತಿ ಮಲ್ಲಣ್ಣ. ಇವತ್ತಲ್ಲ ನಾಳೆ ಮಾಡಬೇಕು. ಮನಿಯಾಗ ಇಟ್ಟಗೊಂಡು ಕೂರಾಕ ಆಗತೈತಾ?” ತೇರು ಲಿಂಗಯ್ಯ ಮಲ್ಲಯ್ಯಗೌಡ್ರ ಬಳಿ ಸೂರು ಕೇಳಿದ. ಲೆಕ್ಕದಲ್ಲಿ ತೇರುಲಿಂಗಯ್ಯ ಗಂಡಿನ ತಲಾಷೆಯಲ್ಲಿದ್ದ.

“ಆ ವಾರಷೆ… ಅಲ್ಲಿ… ಅಗೋ ಆ ಅಖಾಡದ ಮಗ್ಗಲಲ್ಲಿ ನಿಂತಾನ ನೋಡು ಅವ್ನೆ ಸಂಗಾಪುರದ ದುಂಡಿಸ್ವಾಮಿ. ಚಲೋ ವರ ಆಗ್ತಾನ ನೋಡು ನಿನ್ನ ಮಗಳಿಗೆ” ಮಲ್ಲಯ್ಯಗೌಡ್ರು ತೋರಿಸಿದರು. ತೇರುಲಿಂಗಯ್ಯ ದುಂಡಿಸ್ವಾಮಿ ಬಗ್ಗೆ ಕೇಳಿದ್ದನಾದರೂ ನೋಡಿರಲಿಲ್ಲ. ಇವತ್ತೇ ಅಖಾಡದಲ್ಲಿ ನೋಡಿದ್ದು.

‘ಅಲಲಾ… ಹುಡ್ಗ ಚೌಡವ್ವಗ ಬಿಟ್ಟ ಗೂಳಿಯಾಗ್ಯಾನ. ಬಣ್ಣನೋ ಪೇಡೆ ರಾಮಣ್ಣನ ಅಂಗಡಿ ಮಿಠಾಯಿ ಆಗೇತಿ, ಕೈಕಾಲುಗಳು ಗಂಧದ ಕೊಳ್ಡ ಆಗೇವು… ಈಡು-ಜೋಡು ಸುದ್ದು ಆಕ್ಕವು’ ಮನಸು ಗುಣಾಕಾರದಲ್ಲಿ ಮುಳುಗಿತು.

ಮಲ್ಲಯ್ಯಗೌಡ್ರು “ಲೇ ತೇರಾ… ದುಂಡಿಸ್ವಾಮಿ ಹುಂಬಗಾರ.. ಏನಾರ ಮಾಡಿ ರೊಚ್ಚಿಗೆಬ್ಬಿಸು ನಿನ್ನ ಕೆಲ್ಸ ಆದಂಗೆ… ದುಂಡಿ ಏನಾದ್ರೂ ಮಾಡಿ ಗೆದ್ದಕೊಳ್ಳಲೇಬೇಕಲೇ…!” ಬುದ್ದಿವಾದ ಹೇಳಿದರು.

ಅದೇ ಗುಂಗಿನಲ್ಲಿ ತೇರುಲಿಂಗಯ್ಯ ಅಖಾಡಕ್ಕೆ ಬಂದ.
“ಏ ತ್ಯೆಗಿಯೋ ಅಯ್ಯಪ್ಪ… ನಿ ಯಾಕ ಇಲ್ಲಿ ನಿಂತಿ. ಅದು ದುಂಡಿ ಅಖಾಡ ಐತಿ. ಅವು ದುಂಡಿಗಳು… ಲಿಂಗದಕಾಯಿಗಳಲ್ಲ… ಸರಿ ದೂರು ಸರದು ನಿಲ್ಲು” ಹನುಮಂತಯ್ಯನಿಗೆ ಇನ್ನಿಲ್ಲದ ಕೋಪ ಬಂತು.

“ಏ ಯಜಮಾನ… ನಾನು ಉಂಡಿ ತಿನ್ನೋಕೆ ಬಂದಿಲ್ಲ, ದುಂಡಿ ಎತ್ತಾಕ ಬಂದೀನಿ.. ನನ್ನನ್ನು ಏನು ತಿಳಿದಿ… ಯಾವ ದುಂಡಿ ತೋರ್ಸತಿಯ ತೋರ್ಸು. ಎತ್ತಿ ಹಾಕದಿದ್ರ ಲಿಂಗದಕಾಯಿ ಕಟ್ಟಿಕೊಂಡು ಮಠ ಸೇರಿಕೊಳ್ಳತೀನಿ, ಎತ್ತಿ ಹಾಕಿದ್ರ ನೀ ಏನು ಕೊಡ್ತಿ ಹೇಳು?” ಎಂದು ತೊಡೆ ತಟ್ಟಿದನು. ತೇರು ಲಿಂಗಯ್ಯನಿಗೂ ಇದೆ ಬೇಕಿತ್ತು. ಆಸೆಯ ಬಳ್ಳಿಯ ಹೂವೊಂದು ಕಿಲ ಕಿಲ ನಕ್ಕಂತಾಯಿತು. ತೇರುಲಿಂಗಯ್ಯ ಒಂದು ದುಂಡಿಯನ್ನು ತೋರಿಸಿ “ಈ ದುಂಡಿಯನ್ನು ಎತ್ತಿದ್ದೆ ಕರೆವು ಆದ್ರೆ ನನ್ನ ಮಗಳ ಕೊಟ್ಟು ಲಗ್ನ ಮಾಡ್ತೀನಿ. ನನ್ನ ಮಗಳು ಗಿಣಿ ಗಿಣಿಯಾಗೇತಿ ನೋಡ್ತಿಯೇನು ಮತ್ತ… ಅಲ್ಲಿ ಗೌಡ್ರು ಮನೆ ಕಟಾಂಜನ ಕಟ್ಟೆ ಮೇಲೆ ಕುಂತಾಳ ನೋಡಲ್ಲಿ ಅವಳೇ…” ಎಂದು ತೋರಿಸಿದನು. ಹನುಮಂತಯ್ಯನ ಮನದಲ್ಲಿ ವಿಶಾಲಾಕ್ಷಿ ಸೆರೆಯಾದಳು. ವಿಶಾಲಾಕ್ಷಿ ಸಂಗಾಪುರದ ಬಾವಿ ನೀರಿಗೆ ಬಂದಾಗ “ಲೇ ದುಂಡಿ ಅವಳು ತೇರುಲಿಂಗಯ್ಯನ ಮಗಳು ವಿಶಾಲಾಕ್ಷಿ… ಎಷ್ಟು ಚೆಂದ ಅದಾಳ ನೋಡು… ಮತ್ತ ಮದಿವಿಯಾಗ್ತಿಯೇನು” ಎಂದು ಗೆಳೆಯರು ಚಾಷ್ಟಿ ಮಾಡುತ್ತಿದ್ದದ್ದು ನೆನಪಿಗೆ ಬಂತು. ಒಳಗೊಳಗೇ ಉಬ್ಬಿಹೋದ.

ಕರಿಯಣ್ಣನ ಹಲಗೆ ಜೋರು ಮಾಡತೊಡಗಿತು. ಜಟ್ಟಿಗಳು ಕಚ್ಚಿಕಟ್ಟಿ ಸಿದ್ಧರಾದರು. ಹನುಮಂತಯ್ಯ ತೇರುಲಿಂಗಯ್ಯ ತೋರಿಸಿದ ದುಂಡಿ ಸಣ್ಮಾಡಿ ಕೈ ಹಾಕಿದ.

ಎರಡೂ ಕೈಗಳಿಗೂ ಅಮ್ರದ ದುಂಡಿಯನ್ನು ಪಟ್ಟಗಣಿಯಿಂದ ಸುತ್ತಿ ಬಿಗಿಯಾಗಿ ಹಿಡಿದುಕೊಂಡು ಮೊಣಕಾಲಿನವರೆಗೂ ತಿರಿವಿಕೊಂಡ. ಮೊಣಕಾಲಿನ ಮೇಲೆ ಜಪ್ಪಯ್ಯ ಎಂದರೂ ದುಂಡಿ ಒಂದಿಂಚೂ ಮೇಲೇಳಲಿಲ್ಲ. ಸ್ವಲ್ಪ ಸಾವರಿಸಿಕೊಂಡು ನರನಾಡಿಗಳಲ್ಲಿನ ಸಮಸ್ತ ಶಕ್ತಿಯನ್ನು ಒಟ್ಟು ಮಾಡಿ ಉಡ ಕೂಡಾ ನಾಚುವಂತೆ ಬಿಗಿಯಿಡಿದು ಬಿಲ್ಲಿನಂತೆ ಹಿಂದಕ್ಕೆ ಬಾಗಿ ದುಂಡಿಯನ್ನು ಮೇಲೆಳೆದುಕೊಂಡ. ದುಂಡಿ ಎದೆಯ ದಾರಿ ಹಿಡಿಯುತು. ಹನುಮಂತಯ್ಯನ ನರನಾಡಿಗಳು ಚಡಚನೆ ಪತರಗುಟ್ಟು ತೊಡಗಿದವು. ಎದೆ ಮೇಲೆ ಒಂದೆರಡು ಉಳ್ಡಿಕೆ ಉಳ್ಡಿ ನಿಂತಿತು. ಬಲಗಡೆ ಭುಜದ ದಾರಿ ಅಷ್ಟು ಸುಲಭಕ್ಕೆ ಹತ್ತಲಿಲ್ಲ. ಜನರು ಉಸಿರು ಬಿಗಿಯಿಡಿದು ನಿಂತರು. ಹತ್ತು ಹದಿನೈದು ನಿಮಿಷ ದುಂಡಿ ಒಂಚೂರು ಮಿಸಕಾಡಲಿಲ್ಲ. ಹನುಮಂತಯ್ಯನ ನರಗಳು ಮತ್ತಷ್ಟು ಹುರಿಯಾಗ ತೊಡಗಿದವು. ಮೇಲಕ್ಕೋ… ಕೆಳಕ್ಕೋ… ಆಗಲೋ… ಈಗಲೋ… ತಾಕಲಾಟಾವಿದ್ದ ಅಲ್ಲಿ ಕೆಂಪಾತಿ ಕೆಂಪು ಬಣ್ಣ ಮೆತ್ತಿಕೊಂಡಿದ್ದ ಸಂಜೆಯ ಸೂರ್ಯ ಈರಣ್ಣನ ಗುಡಿಯ ಕಳಸವನ್ನು ಪಳಗುಟ್ಟುತ್ತಿದ್ದ. ಇನ್ನೇನು ಹೊತ್ತು ಮುಳುಗಲು ಮಾರುದ್ದನಿದ್ದ ಸೂರ್ಯ ಕೂಡಾ ಕುತೂಹಲದಿಂದ ಕಾಯುತಿದ್ದ. ಸ್ವಲ್ಪ ಕೊಸಾರಾಡಿದಂತೆ ಕಂಡ ದುಂಡಿ ದಾರಿಯಿಡಿದು ಒಮ್ಮೆಗೆ ಬಲ ಭುಜದ ಮೇಲಿಂದ ನುಗ್ಗಿ ಹೋಯಿತು. ಜನ ಉಸಿರ ಬಿಟ್ಟು ನಿರಾಳರಾದರು. ಹನುಮಂತಯ್ಯ ದುಂಡಿಯನ್ನು ಭುಜದ ಮೇಲಿಂದ ಎತ್ತಿ ಹಾಕಿದ್ದೆ ತಡ ಜನಗಳು ಓ… ಜಯಘೋಷದೊಂದಿಗೆ ಕೇಕೆ ಹಾಕಿ ಕುಣಿದರು. ಕರಿಯಣ್ಣನ ಹಲಗೆ ಜಡ್… ನಕಾ.. ನಕಾ.. ಜಡ್… ಜೋರು ಬಡಿದುಕೊಳ್ಳತೊಡಗಿತು. ಅಖಾಡ ಗದ್ದಲದಲ್ಲಿ ಮುಳುಗಿತು. ವಾರೋಪ್ಪತ್ತಿನಲ್ಲಿ ವಿಶಾಲಾಕ್ಷಿ ಹನುಮಂತಯ್ಯನ ಮನೆ ತುಂಬಿದಳು.