Advertisement
ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

ರಿಯಾಧಿನ ರಾತ್ರಿ

ತಣ್ಣಗಿನ ಕತ್ತಲಲ್ಲಿ
ಕಡಲಿನ‌ ಮೊರೆತದ ಸದ್ದು
ಆಳ ಕೊರೆಯುತ್ತಾ
ಕನಸಿನೊಳಗೂ ನುಸುಳಿ ಹೋಗುವ ಹಾಗೆ
ರಿಯಾಧಿನ ರಾತ್ರಿಯಲ್ಲಿ
ರಸ್ತೆ ತುಂಬ ಕಾರುಗಳ ಕಾರುಬಾರು

ರಾಶಿ ವಾಹನಗಳ ನಡುವೆ
ಧುತ್ತನೆ ಬಂದು ಬ್ರೇಕ್ ಒತ್ತಿ
ಸರ್ರೆಂದು ಸುರುಳಿ ಸುತ್ತುವ
ಅರಬ್ಬಿ ಹುಡುಗರ ಕಾರಿನಾಟದ ಕಾಟಕ್ಕೆ
ಸಿಟ್ಟಡಗಿಸಿ ಸುಮ್ಮಗಿರುವ
ಪಾಕಿಸ್ತಾನಿ ಟ್ಯಾಕ್ಸಿ ಚಾಲಕನಿಗೆ
ಸಿಗ್ನಲ್ಲಿನ ಬೆಳಕು ಹಸಿರಾಗದ ಚಿಂತೆ

ಮಂದಬೆಳಕಿನ ಕೆಫೆಯೊಳಗೆ ಕೂತ
ಈಜಿಪ್ಟಿನ ಸುಂದರಿಗೆ
ಅವಳೇ ಸೇದಿದ ಸಿಗರೇಟಿನ ಹೊಗೆ
ಕಾಣಿಸುತ್ತದೆ
ತನ್ನದೇ ಮುಂಗುರುಳ ಹಾಗೆ

‘ಇವಳಂತೂ ಟಿಪ್ಸು ಕೊಡುವವಳಲ್ಲ’ ಎಂದು
ಕಣ್ಣಲ್ಲೇ ಸಿಕ್ಕ ಅಂದಾಜಿನ ಸಿಟ್ಟು
ಟೇಬಲ್ಲಿನ ಪಕ್ಕ ಹುಕ್ಕಾ ತಂದಿಟ್ಟ
ಬೆಂಗಾಲಿ ಹುಡುಗನಿಗೆ

ಬೀಫ್ ಸುಕ್ಕ ಸಿಕ್ಕುತ್ತದೆಂದು
ಗೂಗಲ್‌ ಮ್ಯಾಪಿನಲ್ಲಿ
ದಾರಿ ಹುಡುಕುತ್ತ
‘ಕೇರಳ ಹೋಟೆಲ್’ ತಲುಪುವ
ಮಲಯಾಳಿ ಹುಡುಗರಿಗೆ
ಅದೆಂಥದೋ ಸಂಭ್ರಮ

ನಡುರಾತ್ರಿ ಎರಡೂವರೆ ಗಂಟೆಗೆ
ಚೀಸ್ ಬರ್ಗರ್‌ಗಾಗಿ
ಮೆಕ್ ಡೊನಾಲ್ಡ್ಸ್ ನ ಕಿಟಕಿ ಬಳಿ
ಸಾಲು ನಿಂತ ಸೌದಿಗಳ ಕಾರು ಕಂಡು
ನಗು ಬಾರದಿದ್ದರೂ ನಗುತ್ತಾನೆ
ಸಿಬ್ಬಂದಿ ಸುಡಾನಿ ಹುಡುಗ

ಯುನಿಫಾರ್ಮಿನ ಕಿಸೆಯೊಳಗೆ
ಬೆರಳು ತಾಕಿಸಿ ಎಣಿಸುತ್ತಾಳೆ
ಫಿಲಿಪ್ಪೀನಿನ ಹುಡುಗಿ
ಸಿಕ್ಕ ಟಿಪ್ಸಿನ ನೋಟುಗಳನ್ನು
ಅಂದಾಜಿಸುತ್ತ ಹತ್ತು ಇಪ್ಪತ್ತೆಂದು

ಕಂಬಳಿ ಹೊದ್ದ ಮೇಲೂ
ಲೆಕ್ಕ ಹಾಕುತ್ತಾನೆ
ಮನೆಗೆ ಕಳಿಸಲು ಇನ್ನೇನು ಬಾಕಿ ಎಂದು
ಹೈಸ್ಕೂಲಿನಲಿ ಗಣಿತ ಸೋತು
ದುಡಿಯಲು ಬಂದ ಬ್ಯಾರಿ ಹುಡುಗ

ಬಂಗಾರದ ಬೆಲೆ ಬಾನ ಮುಟ್ಟುವಾಗ
ತಲೆಕೆಟ್ಟು ಕೂರುತ್ತಾನೆ
ತಂಗಿಯ ಮದುವೆಗೆ
ಹಣ ಕೂಡಿಸಿಟ್ಟ ಯುವಕ

ಹೊಟ್ಟೆಯೊಳಗಿಂದ
ಮಗು ತುಳಿದ ಸಂಭ್ರಮಕ್ಕೆ
ಹೊತ್ತು ನೋಡದೆ ಕರೆ ಮಾಡಿದ್ದಾಳೆ
ಊರಿನಿಂದ
ಅವನೊ, ಗಾಢ ನಿದ್ದೆಯಿಂದೆದ್ದು
ಖುಷಿಗೆ ಜತೆಯಾಗಿದ್ದಾನೆ

ಕತ್ತಲೆಗೆ ಹೆದರುತ್ತಾನೆ
ಕಪ್ಪುನೆಲದ ಕೊಲೆ ಆರೋಪಿ
ಸೆರೆಮನೆಯ ಗೋಡೆ ನೋಡುತ್ತ
ಶಿರಚ್ಛೇಧದ ದುಃಸ್ವಪ್ನಕ್ಕೆ ಬೆಚ್ಚಿಬೀಳುತ್ತ
ಬೆಳಕು ಹರಿಯುವುದ ಕಾಯುತ್ತಾನೆ
ಕ್ಷಮೆಯ ಕಿರಣ ಇಂದಾದರೂ
ಮೂಡೀತೆಂದು

ಟಿಕ್ ಟಾಕಿನಲಿ
ಗಾಝಾದ ಸುದ್ದಿ‌ ನೋಡುತ್ತ
ಪೆಪ್ಸಿ ಕುಡಿಯುತ್ತ
ಸುಟ್ಟ ಸಿಗರೇಟಿನ ಬೂದಿ
ಕಾರಿನ ಗಾಜಿನಿಂದಾಚೆ ತಟ್ಟುತ್ತಾನೆ
‘ತೋಬು’ಧಾರಿ ಅರಬಿ ಯುವಕ

ಬಾಗಿಲು ಮುಚ್ಚುವ ಸದ್ದಿಗೆ
ಓಡಿ ಅಂಗಡಿ ತಲುಪುತ್ತಾನೆ
ಒಂದು ರಿಯಾಲಿನ ಕುಬ್ಬೂಸಿಗಾಗಿ
ಕೊನೆಯ ಬೆಂಗಾಲಿ ಗಿರಾಕಿ

ಕಣ್ಣಳತೆಗೆ ಸಣ್ಣಳತೆ ಆಕಾಶ
ಕನಸುಗಳ ಹುಟ್ಟು ಕಣ್ಣಲ್ಲೆ ಸುಟ್ಟು
ಕರಗುವುದು ಸಹಜ
ಕತ್ತಲಳಿದು ಬೆಳಕು
ಹರಿಯುವುದೊಂದೆ ನಿಜ

ರಿಯಾಧ್: ಸೌದಿ ಅರೇಬಿಯಾದ ರಾಜಧಾನಿ
ತೋಬು/ತೋಬ್: ಸೌದಿ ಅರೇಬಿಯಾದಲ್ಲಿ ಪುರುಷರ ಸಾಂಪ್ರದಾಯಿಕ ಉಡುಗೆ
ರಿಯಾಲ್: ಸೌದಿ ಅರೇಬಿಯಾದ ಕರೆನ್ಸಿ
ಕುಬ್ಬೂಸ್: ಸೌದಿ ಅರೇಬಿಯಾದ ರೊಟ್ಟಿ

About The Author

ಶರೀಫ್ ಕಾಡುಮಠ

ಶರೀಫ್ ಕಾಡುಮಠ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನವರು. ಸಮಾಜಮುಖಿ ಮಾಸಿಕ, ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಸೌದಿ ಅರೇಬಿಯಾದ ರಿಯಾಧ್‌ನಲ್ಲಿದ್ದಾರೆ. ಇವರ ಅನೇಕ ಬರಹ, ಕವಿತೆಗಳು ಪತ್ರಿಕೆ, ವೆಬ್ ಸೈಟ್‌ಗಳಲ್ಲಿ ಪ್ರಕಟವಾಗಿವೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ