ಶಾಂತಜ್ಜನ ಕೊನೆಯ ದಿನಗಳಲ್ಲಿ ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹೀಗಿದ್ದೂ ನಾಟಕವಾಡುವ ಖಯಾಲಿ ಬಿಡುತ್ತಲೂ ಇರಲಿಲ್ಲ. ಸ್ಟೇಜಿಗೆ ಬರುವವರೆಗೂ ಅವನನ್ನು ಯಾರಾದರೂ ಕೈ ಹಿಡಿದು ಕರೆದುಕೊಂಡು ಬರಬೇಕಾಗಿತ್ತು. ಆದರೆ ರಂಗಕ್ಕೆ ಬಂದಮೇಲೆ ಕಣ್ಣು ಕಾಣುವವರಿಗಿಂತಲೂ ಚೆನ್ನಾಗಿ ನಟಿಸುತ್ತಿದ್ದ. ಹೆಣ್ಣು ಗಂಡಾಗಿಯೂ, ಗಂಡು ಹೆಣ್ಣಾಗಿಯೂ ನಟಿಸಿದಾಗಲೇ ಒಬ್ಬ ಒಳ್ಳೆಯ ಕಲಾವಿದನೆನಿಸಿಕೊಳ್ಳುತ್ತಾನೆ ಎನ್ನುತ್ತಿದ್ದ ಶಾಂತಜ್ಜ ಈಗ ತೀರಿಕೊಂಡೇ ಇಪ್ಪತ್ತು ವರ್ಷಗಳ ಮೇಲಾಗಿರಬಹುದು. ಆದರೆ ಅವನ ಮೀರ್ ಸಾದಕ, ಮುದುಕನ ಮದುವೆಯ ಮುದುಕ, ಲಕ್ಷ್ಮೀಪತಿರಾಯ, ಮುಂತಾದ ನಾಟಕಗಳನ್ನು ಮರೆಯಲು ಸಾಧ್ಯವೇ ಇಲ್ಲ.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಹದಿನಾಲ್ಕನೆಯ ಕಂತು.

 

ಅದು ಎಂಬತ್ತರ ದಶಕ. ಸಿದ್ದಾಪುರದಲ್ಲಿ ರಂಗಭೂಮಿ ಚಟುವಟಿಕೆಗಳು ಅಷ್ಟಾಗಿ ನಡೆಯದ ದಿನಗಳು. ಆಗಾಗ ಕಂಪನಿ ನಾಟಕಗಳು ಬಂದು ನೆಹರೂ ಮೈದಾನವೋ, ಸಮಾಜಮಂದಿರದಲ್ಲೋ ತಿಂಗಳುಗಟ್ಟಲೆ ಟೆಂಟ್ ಹಾಕಿ ಒಂದಷ್ಟು ನಾಟಕಗಳನ್ನು ಆಡಿ ಹೋಗುತ್ತಿದ್ದದ್ದು ಬಿಟ್ಟರೆ, ಸಿದ್ದಾಪುರದ್ದೇ ಆದ ನಾಟಕ ಸಂಸ್ಥೆ ಎಂಬುದಿರಲಿಲ್ಲ. ಇದಕ್ಕೂ ಮುಂಚೆ ತುಂಬ ಹಳೇ ಕಾಲದಲ್ಲಿ ನನ್ನ ದೊಡ್ಡಜ್ಜ (ಸೀತಾರಾಮ ಶಾಸ್ತ್ರಿ, ಹುಲಿಮನೆ) ಜೈಕರ್ನಾಟಕ ನಾಟ್ಯ ಸಂಘ ಎಂಬ ನಾಟಕ ಕಂಪನಿಯನ್ನು ಪ್ರಾರಂಭಿಸಿ ದೇಶಾದ್ಯಂತ ಓಡಾಡಿದ್ದನ್ನು ಕೇಳಿಬಲ್ಲೆ. ನಾವೆಲ್ಲ ದೊಡ್ಡಾಗುವ ಹೊತ್ತಿಗೆ ಅವಸಾನದ ಅಂಚಿನಲ್ಲಿದ್ದ ದೊಡ್ಡಜ್ಜ 1986, ಮೇ 16ರಂದು ತೀರಿಹೋದ. ಅವ ತೀರಿಹೋದ 4-5 ವರ್ಷಗಳ ನಂತರ ಅವನದ್ದೇ ಹೆಸರಿನಲ್ಲಿ ಹುಟ್ಟಿಕೊಂಡದ್ದು ಸೀತಾರಾಮ ಶಾಸ್ತ್ರಿ ಪ್ರತಿಷ್ಠಾನ. ಈ ಪ್ರಯುಕ್ತ ಹುಟ್ಟಿಕೊಂಡದ್ದು ಸೀತಾರಾಂ ಶಾಸ್ತ್ರಿ ಪ್ರತಿಷ್ಠಾನ. ನಂತರ ಇದೇ ಸಂಸ್ಥೆ (2004) ರಂಗಸೌಗಂಧ ಎಂದು ಬದಲಾವಣೆಗೊಂಡಿತು.

ನನ್ನ ಸೋದರ ಮಾವ ರಂಗಕರ್ಮಿ ಶ್ರೀಧರ ಹೆಗಡೆ ಹುಲಿಮನೆ ಅದನ್ನು ಪ್ರಾರಂಭಿಸಿದಾಗ ನಾನು ಪಿಯುಸಿ ಮೊದಲ ವರ್ಷದಲ್ಲಿದ್ದೆ. ದೊಡ್ಡಜ್ಜನ ಕಂಪನಿಯಲ್ಲಿ ಅಲ್ಲಿಂದಿಲ್ಲಿಯವರೆಗೂ ಇದ್ದ ಖ್ಯಾತ ಹಾಸ್ಯ ಕಲಾವಿದ ಮೂಡುಗೋಡು ಶಾಂತಕುಮಾರ ಅವರನ್ನು ಕರೆಸುವ ಕುರಿತು ಮಾತುಕತೆಗಳು ನಡೆಯುತ್ತಿದ್ದವು.

ಶಾಂತಕುಮಾರ ಸಿದ್ದಾಪುರಕ್ಕೆ ಬಂದು ನಮ್ಮ ತಂಡದಲ್ಲಿ ಪಾತ್ರ ಮಾಡುವವರೆಗೂ ಅವರ ಕುರಿತು ಅಷ್ಟಾಗಿ ಗೊತ್ತಿರಲಿಲ್ಲ. ತೀರ್ಥಳ್ಳಿ ಸಮೀಪದ ಮೂಡುಗೋಡಿನವರಾದ ಶಾಂತಕುಮಾರ ಆ ಕಾಲಕ್ಕೆ ಪ್ರಸಿದ್ಧ ಹಾಸ್ಯ ಕಲಾವಿದರಾಗಿದ್ದರು. ಮುದುಕನ ಮದುವೆ, ಟಿಪ್ಪುಸುಲ್ತಾನ, ವರದಕ್ಷಿಣೆ, ಸಂದೇಹ ಸಾಮ್ರಾಜ್ಯ ಮುಂತಾದವುಗಳು ಜನಪ್ರಿಯ ನಾಟಕಗಳಾಗಿದ್ದವು. ಮೂಡುಗೋಡು ಶಾಂತಕುಮಾರ ಎಂದೇ ಪ್ರಸಿದ್ಧಿ ಪಡೆದಿದ್ದ ಶಾಂತಕುಮಾರ ಮತ್ತು ಹುಲಿಮನೆ ಸೀತಾರಾಮ ಶಾಸ್ತ್ರಿ ಇಬ್ಬರೂ ಆ ಕಾಲಕ್ಕೆ ಯಶಸ್ವೀ ಜೋಡಿ ಎನಿಸಿದ್ದರು.

ಟಿಪ್ಪುಸುಲ್ತಾನ ನಾಟಕದಲ್ಲಿ ಸೀತಾರಾಮ ಶಾಸ್ತ್ರಿಯವರ ಟಿಪ್ಪುಸುಲ್ತಾನ, ಶಾಂತಕುಮಾರ ಮೀರ್ ಸಾದಕ, ವರದಕ್ಷಿಣೆ ನಾಟಕದಲ್ಲಿ ದೊಡ್ಡಜ್ಜ(ಸೀತಾರಾಮ ಶಾಸ್ತ್ರಿಯವರ) ಲಕ್ಷ್ಮೀಪತಿರಾಯ ಮತ್ತು ಶಾಂತಕುಮಾರ ಅವರ ಗುಲಾಬಿ ಪಾತ್ರ ಆ ಕಾಲಕ್ಕೆ ತುಂಬ ಪ್ರಸಿದ್ಧಿಪಡೆದಿದ್ದವು. ಇಷ್ಟೆಲ್ಲ ಹೆಸರಿರುವ ಶಾಂತಕುಮಾರ ಅವರ ಕುರಿತು ಅಷ್ಟರಲ್ಲಾಗಲೇ ಸಾಕಷ್ಟು ಚರ್ಚೆಗಳೂ ನಡೆದಿದ್ದವು.

ಹೇಗೆ ಉತ್ತಮ ಕಲಾವಿದನಾಗಿದ್ದನೋ ಹಾಗೆಯೇ ಅವ ಸ್ವಲ್ಪ ಹುಶಾರಿನವನೂ ಆಗಿದ್ದ. ಹಾಗಾಗಿ ಮನೆ, ಜಮೀನು ಎಲ್ಲ ಮಾಡಿಕೊಂಡಿದ್ದಾನೆಂದೂ ಹೇಳುತ್ತಿದ್ದರು. ನಿಜ, ಈ ಕಲಾವಿದರ ಅನೇಕರ ಬದುಕು ಬಹುತೇಕ ದುರಂತಗಳಲ್ಲೇ ಕೊನೆಯಾಗಿಬಿಡುತ್ತದೆ. ಬದುಕಿಗೆ ಬೇಕಾದ ಒಂದು ಶಿಸ್ತಿಗೆ ಒಳಪಡದೇ ಏನೇನೋ ಆಗಿ, ಕೊನೆಗಾಲದಲ್ಲಿ ಉಳಿಯಲು ಒಂದು ಸೂರು, ದುಡ್ಡು ದುಕ್ಕಾಸು ಕೂಡ ಇರದೇ ಬರ್ಬಾದಾಗಿ ಹೋದ ಕಲಾವಿದರು ಸಾಕಷ್ಟಿದ್ದಾರೆ. ಅದರಲ್ಲಿ ನನ್ನ ಅಜ್ಜನೂ ಹೊರತಾಗಿರಲಿಲ್ಲ. ಇವರಿಗೆಲ್ಲ ಹೋಲಿಸಿದರೆ ಶಾಂತಕುಮಾರ ಪರವಾಗಿಲ್ಲ, ದುಡ್ಡು ಕಾಸು ಮಾಡಿಕೊಂಡಿದ್ದಾನೆ ಎಂದು ಮಾವ ಹೇಳಿದ್ದ.

ಶಾಂತಕುಮಾರ ಎಂಬ ಕಲಾವಿದರ ಬಗ್ಗೆ ಇಷ್ಟೆಲ್ಲ ಕೇಳಿದ ನಮಗೆ ಅವರನ್ನು ನೋಡುವ ತವಕ. ಮೊದಲ ನಾಟಕ ಟಿಪ್ಪುಸುಲ್ತಾನ. ಅದರಲ್ಲಿ ಟಿಪ್ಪುಸುಲ್ತಾನ ಶ್ರೀಧರ ಹೆಗಡೆ ಹುಲಿಮನೆ ಮತ್ತು ಮೀರ್ ಸಾದಕನ ಪಾತ್ರಗಳನ್ನು ಶಾಂತಕುಮಾರ ಮಾಡಿದ್ದರು. ಶಾಂತಕುಮಾರ ಬರುತ್ತಾರೆಂಬ ಸುದ್ದಿಕೇಳಿಯೇ ಹುಲಿಮನೆ ಕುಟುಂಬದ ಅನೇಕರು ಅವರ ನಾಟಕ ನೋಡಲು ಬಂದಿದ್ದರು. ಈ ಪೈಕಿ ನನ್ನ ಅಜ್ಜ ಲಕ್ಷ್ಮೀನಾರಾಯಣಪ್ಪನೂ ಒಬ್ಬ. ಅವ ಸೀತಾರಾಮ ಶಾಸ್ತ್ರಿಯ ದೊಡ್ಡ ಅಣ್ಣ. ದೊಡ್ಡಜ್ಜನ ಎಲ್ಲ ನಾಟಕಗಳನ್ನೂ ಪ್ರೀತಿಯಿಂದ ನೋಡಿದವ.

ಅವತ್ತಿನ ದಿನ ನನಗಿನ್ನೂ ನೆನಪಿದೆ. ನಮ್ಮ ಮನೆಗೆ ಶಾಂತಕುಮಾರ ಅವರನ್ನು ಕರೆತರಲಾಯಿತು. ಮನೆಯಲ್ಲಿ ಅವರಿಗಾಗಿಯೇ ಕಾಯುತ್ತಿದ್ದ ಅಜ್ಜ. ಇಬ್ಬರೂ ಒಬ್ಬರನ್ನೊಬ್ಬರು ನೋಡಿದ್ದೇ. ಶಾಂತಣ್ಣಾ…ಎಂದು ಅಜ್ಜನೂ…ಲಕ್ಷ್ಮೀ…ಎಂದು ಶಾಂತಜ್ಜನೂ ಒಟ್ಟಿಗೇ ಅಪ್ಪಿಕೊಂಡರು. ಇಬ್ಬರ ಸಮಾಗಮ ಆದಮೇಲೆ…ಉಭಯ ಕುಶಲೋಪರಿಗೆ ಶುರುಮಾಡಿದರು. ‘ಎಂಗೆ ಕಿವಿ ಕೇಳ್ತೇ ಇಲ್ಲೆ…’ ಎಂದು ಅಜ್ಜನೂ, ‘ಎಂಗೆ ಕಣ್ಣು ಆಪರೇಷನ್ ಆತು…’ ಶಾಂತಜ್ಜನೂ ಪರಸ್ಪರ ಹೇಳಿಕೊಂಡ ಮೇಲೆ, ‘ನಿಂಗೆ ವಯಸ್ಸೆಷ್ಟಾತ ಹಂಗರೆ’ ಎಂದು ಶಾಂತಜ್ಜ ನನ್ನ ಅಜ್ಜನಿಗೆ ಕೇಳಿದ. ‘ಎಂಗೆ 88 ಆತು, ನಿಂಗೆಷ್ಟಾತು’ ಎಂದು ಅಜ್ಜ ಕೇಳಿದ್ದಕ್ಕೆ, ‘ಎಂಗೆ 76 ಆತು’, ಎಂದವನೇ, ‘ಹಂಗಾರೆ ಜಾತಕ ಹೊರಡಿಸಿಬಿಡನ. ಮದುವ್ಯಾಪನಾ ಹ್ಯಾಂಗೆ…’ ಎಂದು ಹುಬ್ಬು ಹಾರಿಸಿ ಕೇಳಿದ ಶಾಂತಜ್ಜ. ವಯಸ್ಸು ಎಷ್ಟಾದರೇನು, ನಾನು ಸದಾ ಯುವಕ. ಯಾಕೆಂದರೆ ನಾನು ಶಾಂತಕುಮಾರ ಎಂದು ಜೋರಾಗಿ ನಕ್ಕ.

ಅದುವರೆಗೆ ಶಾಂತಕುಮಾರ ಇದ್ದದ್ದು ಅವನನ್ನು ನೋಡಿದ ಕೂಡಲೇ ನಾವೆಲ್ಲ ಶಾಂತಜ್ಜ ಎಂದು ಕರೆಯಲು ಶುರುಮಾಡಿ, ಏಕವಚನ ಪ್ರಯೋಗಕ್ಕೆ ಇಳಿದದ್ದಾಗಿತ್ತು.

ಇಬ್ಬರೂ ಸೇರಿ ದೊಡ್ಡಜ್ಜನ ಪಾರ್ಟು, ಅವನ ಮಾತು, ಗತ್ತು, ಭಾಷೆ, ಹೀಗೆ ಮಾತುಕತೆ ಎಲ್ಲೆಲ್ಲೋ ಹೋಗಿ ಕಡೆಗೆ ಅವನ ದುರಂತದ ಬದುಕಿನ ಬಗೆಗೂ ಒಂದಿಷ್ಟು ಹೇಳಿಕೊಂಡು ಸಮಾಧಾನಪಟ್ಟುಕೊಂಡರು. ನಂತರ ಅಂದಿನ ನಾಟಕಗಳಾದ ಟಿಪ್ಪುಸುಲ್ತಾನ ಮತ್ತು ವರದಕ್ಷಿಣೆ ನಾಟಕದ ಕುರಿತು ಮಾತು ತಿರುಗಿತು. ಮೊದಲು ಟಿಪ್ಪುಸುಲ್ತಾನವನ್ನೂ, ನಂತರ ವರದಕ್ಷಿಣೆ ನಾಟಕವನ್ನೂ ಆಡುವುದೆಂದು ಮೊದಲೇ ತೀರ್ಮಾನಿಸಿಯಾಗಿತ್ತು.

ಅಂದಿನ ಮೀರ್ ಸಾದಕನ ಪಾತ್ರವನ್ನು ನನ್ನ ಜೀವಮಾನದಲ್ಲಿ ಮರೆಯಲಾರೆ. ಅಷ್ಟು ಅದ್ಭುತವಾಗಿತ್ತು ಶಾಂತಜ್ಜನ ಮೀರ್ ಸಾದಕ. ಎಷ್ಟೋ ಸಲ ಜನ ಶಾಂತಜ್ಜನನ್ನು ಮೀರ್ ಸಾದಕನೆಂದೇ ಗುರುತಿಸುತ್ತಿದ್ದರು. ರಂಗಕ್ಕೆ ಮೀರ್ ಸಾದಕನ ಪ್ರವೇಶವೇ ಅದ್ಭುತವಾಗಿತ್ತು.

ನಸೀಬೋಂಕೇ ಸಿರಾವೋಮೆ ಹೋತಾ ಹೈ ಫೇರ್
ಮಕಡೀಕಿ ಜಾಲೋ ಮೇ ಕಾಂಪತಾ ಹೈ ಶೇರ್
ಮೇ ಮೀರ್ಸಾಲಧಕ್ ಹೂ…ಮೀರ್ ಸಾಧಕ್… ಎನ್ನುತ್ತ ಮೈಕ್ ಮುಂದೆ ಬರುವ ಮೀರ್ ಸಾದಕ ಮಾತುಗಳೇ ಅವನ ಬಂಡವಾಳ.

ವಿಚಿತ್ರ ಮ್ಯಾನರಿಸಂಗಳಿಂದ ಮನಸೆಳೆಯುವ ಮೀರ್ ಸಾದಕನ ಪಾತ್ರಧಾರಿ ಶಾಂತಜ್ಜನ ಮಾತುಗಳು ಕೂಡ ಅಷ್ಟೇ ಆಕರ್ಷಕವಾಗಿರುತ್ತಿದ್ದವು. ತಲೆಗೆ ಉದ್ದ ಟೊಪ್ಪಿಹಾಕಿಕೊಂಡಿದ್ದ ಎದುರಿಗೆ ಬಂದ ಸುಲ್ತಾನನ ಸೈನಿಕನಿಗೆ, ಏನೋ ತಗಡು ಹಾಕ್ಯಂಡುಬಿಟ್ಟಿದ್ದೀಯಲ್ಲೋ, ತೆಗದು ಹಂಚು ಹಾಕ್ಕೋ..ಮನೆಗೆ ಸೂರು ಆಗ್ತದೆ ಎನ್ನುವುದಿರಬಹುದು, ದಿವಾನ್ ಪೂರ್ಣಯ್ಯನವರಿಗೆ, ಏ…ಪೂರ್ಣಯ್ಯ, ಸಂಪೂರ್ಣಯ್ಯ ಆಗ್ಹೋಗ್ತೀಯ ನೀನು, ಸಂಪೂರ್ಣ ರಾಮಾಯಣಕ್ಕೆ ಸಂಪೂರ್ಣ ನಾರಾಯಣರಾಯ.. .ಕಾರ್ನ್‍ ವಾಲೀಸನಿಗೆ ಕಾರ್ನಿಸ್-ವಾರ್ಲಿಸ್ ದೊರೆಗೋಳು.. ಹೀಗೆ ಶಬ್ದಗಳನ್ನು ಒಡೆದು ಹೇಳುವುದಿರಲ್ಲಿ ಶಾಂತಜ್ಜ ನಿಸ್ಸೀಮನಾಗಿದ್ದ. ಈ ಕಾರಣಕ್ಕಾಗಿಯೇ ಅವನು ಹೆಚ್ಚು ಜನಪ್ರಿಯನೂ ಆಗಿದ್ದ.

ಈ ನಾಟಕದಲ್ಲಿ ಬರುವ ಕಾರ್ನ್‍ ವಾಲೀಸ ಮೀರ್ ಸಾದಕನ ಮನೆಗೆ ಬಂದಾಗ ಪಕ್ಕದಲ್ಲಿದ್ದ ಹೆಂಡತಿಗೆ ಇವಳ್ಯಾರು ಎಂದು ಕೇಳುತ್ತಾನೆ. ಇವಳು ನನ್ನ ಅರ್ಧಾಂಗಿ, ಪತ್ನಿ ಎಂದು ಏನೆಲ್ಲ ಹೇಳಿದರೂ ಅವನಿಗರ್ಥವಾಗುವುದಿಲ್ಲ. ಆಗ ಹೆಂಡತಿ ಎಂದು ಅಭಿನಯಿಸಿ ತೋರಿಸಿದಾಗ.. ಓ…ವೈಫ್…ವೈಫ್..ಎಂದು ಕಾರ್ನವಾಲೀಸ್ ಹೇಳಿದಾಗ, ತಕ್ಷಣ ನೋಡೇ… ನೀನು ಪೈಪ್ ಅಂತೇ ಎನ್ನುತ್ತಾನೆ ಮೀರ್ ಸಾದಕ.

ನಂತರ ಟಿಪ್ಪುಸುಲ್ತಾನನ ಸಭೆಯಲ್ಲಿ ಒಮ್ಮೆ ಒಂದು ನೃತ್ಯ ಪ್ರದರ್ಶನವಿರುತ್ತದೆ. ನೃತ್ಯಮಾಡುತ್ತಿದ್ದಾಗ ಟಿಪ್ಪುಸುಲ್ತಾನನೊಬ್ಬನೇ ಅದನ್ನು ನೋಡಬೇಕು, ಈ ಮೀರ್ ಸಾದಕ ಓರೆಗಣ್ಣಲ್ಲಿ ಅವಳನ್ನು ನೋಡುತ್ತಿದ್ದಾಗ ‘ಕಣ್ಣುಮುಚ್ಚು…’ ಎಂದು ಸುಲ್ತಾನ ಬೈಯ್ಯುತ್ತಾನೆ. ಅದಕ್ಕೆ ‘ಕ್ಷಮಿಸಬೇಕು ಖಾವಂದ್. ಏನು ಮಾಡಿದರೂ ಈ ಕಣ್ಣು ಮುಚ್ಚುತ್ತಿಲ್ಲ. ಎಳದೀ…ಎಳದೀ..ಮುಚ್ಚಬೇಕು. ಅವಳ ನೃತ್ಯದ ಸೊಗಸು ಹಾಗಿದೆ’ ಎಂದಾಗ ಸ್ವತಃ ಸುಲ್ತಾನನಿಗೂ ನಗು ತಡೆಯಲಾಗಿರಲಿಲ್ಲ. ಹೀಗೆ ಆ ಕ್ಷಣದ ಹಾಸ್ಯ, ಮಾತಿನ ಚಟಾಕಿ, ಬಹಳ ಅದ್ಭುತವಾಗಿರುತ್ತಿತ್ತು.

ಇದರ ನಂತರ ವರದಕ್ಷಿಣೆ ನಾಟಕವನ್ನು ಕೈಗೆತ್ತಿಕೊಂಡಿದ್ದರು. ಅದೇ ಸಮಯದಲ್ಲೇ ವರದಕ್ಷಿಣೆ ನಾಟಕಕ್ಕಾಗಿ ಅಲ್ಲಿನ ಬಾಲಿಕೊಪ್ಪ ಶಾಲೆಯಲ್ಲಿ ನಮ್ಮ ತಾಲೀಮು ನಡೆಯುತ್ತಿತ್ತು ಕೂಡ. ತಾಲೀಮು ಮಾಡುತ್ತಿರುವಾಗಲೇ ಅಚಾನಕ್ಕಾಗಿ ಅಲ್ಲಿಗೆ ಬಂದ ಶಾಂತಜ್ಜ. ನಟನೆ ಕುರಿತು ಒಂದಷ್ಟು ಪಾಠ ಮಾಡಿದವನೇ, ನನ್ನೆಡೆಗೆ ತಿರುಗಿ, ‘ತಂಗೀ ನೀ ನಾಟಕದಲ್ಲಿ ಯಾವ ಪಾರ್ಟು ಮಾಡ್ತೀದ್ದೀಯ, ಸೊಸೆ ಸೀತೆ ಪಾರ್ಟಾ’ ಎಂದು ಕೇಳಿದ. ಅಲ್ಲ ಎಂದು ತಲೆ ಅಲ್ಲಾಡಿಸಿದೆ, ಮತ್ತೆ, ನರ್ಸ್ ಪಾತ್ರವಾ? ಎಂದು ಕೇಳಿದ. ಅದಕ್ಕೂ ಅಲ್ಲ ಎಂದೆ. ಮತ್ಯಾವುದು ಎಂದಿದ್ದಕ್ಕೆ ‘ನಿನ್ನ ಹೆಂಡತಿಯ ಪಾತ್ರವನ್ನೇ ಮಾಡ್ತಾ ಇದ್ದೇನೆ’ ಎಂದೆ.

ಈ ಕಲಾವಿದರ ಅನೇಕರ ಬದುಕು ಬಹುತೇಕ ದುರಂತಗಳಲ್ಲೇ ಕೊನೆಯಾಗಿಬಿಡುತ್ತದೆ. ಬದುಕಿಗೆ ಬೇಕಾದ ಒಂದು ಶಿಸ್ತಿಗೆ ಒಳಪಡದೇ ಏನೇನೋ ಆಗಿ, ಕೊನೆಗಾಲದಲ್ಲಿ ಉಳಿಯಲು ಒಂದು ಸೂರು, ದುಡ್ಡು ದುಕ್ಕಾಸು ಕೂಡ ಇರದೇ ಬರ್ಬಾದಾಗಿ ಹೋದ ಕಲಾವಿದರು ಸಾಕಷ್ಟಿದ್ದಾರೆ. ಅದರಲ್ಲಿ ನನ್ನ ಅಜ್ಜನೂ ಹೊರತಾಗಿರಲಿಲ್ಲ.

‘ಅಯ್ಯೋ ತಂಗಿ, ವಯಸ್ಸನೇ ಇದು..’ ಎಂದು ತುಂಬ ಕನಿಕರದಿಂದ ಕೇಳಿದ. ಹಾಗೆ ಶಾಂತಜ್ಜ ಕೇಳಲು ಕಾರಣವಿತ್ತು. ಆಗ ಅವನ ವಯಸ್ಸು 77 ದಾಟಿತ್ತು. ನಾನಿನ್ನೂ 17ರ ಗಡಿಯಲ್ಲಿದ್ದೆ. ಆ ಹದಿನೇಳರ ಬಾಲೆ 77ರ ಅಜ್ಜನ ಹೆಂಡತಿಯ ಪಾತ್ರ ಮಾಡುವವಳಿದ್ದೆ. ‘ಅಯ್ಯೋ ತಂಗಿ, ನಿನ್ನ ಮುಖಕ್ಕೆ ಎಷ್ಟು ಗೆರೆ ಬಳ್ಯವೋ ಎಂತದೇನ’ ಎಂದ. ಹಾಗೆ ಹೇಳಿದ ಶಾಂತಜ್ಜ ನಾಟಕದ ದಿನ ಸ್ವತಃ ನಿಂತು ನನ್ನ ಮುಖಕ್ಕೆ ಗೆರೆ ಬಳಿದು ಮೇಕಪ್ ಮಾಡಲು ನಿಂತಿದ್ದ. ಎಷ್ಟು ಗೆರೆ ಬಳಿದರೂ ಅವನ ವಯಸ್ಸಿಗೆ ಸರಿಗಟ್ಟುವಂತೆ ನನ್ನ ಮುದುಕಿ ಮಾಡಲಾಗಲಿಲ್ಲ. ಆಗ ‘ಬಿಡು, ನೀ ನನ್ನ ಮೂರನೇ ಹೆಂಡತಿ ಎಂದ್ರಾಯ್ತು’ ಎಂದು ಅಲ್ಲಿಯೂ ಕಾಲೆಳೆದ.

ಅಷ್ಟೆಲ್ಲ ಕಾಲೆಳೆದ ಶಾಂತಜ್ಜ, ರಂಗದ ಮೇಲೆ ಮಾತ್ರ ಬೇರೆಯದೇ ವ್ಯಕ್ತಿಯಾಗಿಬಿಟ್ಟಿದ್ದ. ಅವನನ್ನು ನೋಡಿ ಇತರರೆಲ್ಲ ಹೆದರಿಕೊಂಡುಬಿಟ್ಟಿದ್ದರು. ಮಾತಿನಲ್ಲಿ, ಅಭಿನಯದಲ್ಲಿ, ರಂಗದಮೇಲೆ ಇಡುವ ಹೆಜ್ಜೆಯಲ್ಲಿ, ಆಂಗಿಕ ಅಭಿನಯದಲ್ಲಿ… ಸ್ವಲ್ಪವೂ ತಪ್ಪುವ ಹಾಗಿರಲಿಲ್ಲ. ನಾವೆಲ್ಲ ಮಾತನಾಡುವುದು ನಿಧಾನವಾದರೆ ಜಗ್ಗಿ ಮಾತನಾಡಿ… ಎಂದು ಅಲ್ಲಿಯೇ ಜೋರಾಗಿ ಹೇಳಿಬಿಡುತ್ತಿದ್ದ. ಹಾಗಾಗಿ ಸುಮಾರಿನಂಥವರೆಲ್ಲ ಅವನಿಗೆ ಹೆದರಿ ಮಾತೇ ಹೊರಡದಂತೆ ನಿಂತುಬಿಡುತ್ತಿದ್ದರು.

ವರದಕ್ಷಿಣೆ ನಾಟಕದ ಕೇಂದ್ರಬಿಂದು ಜುಗ್ಗ ಲಕ್ಷ್ಮೀಪತಿರಾಯ. ಪೈಸೆ ಬಿಚ್ಚುವವನಲ್ಲ. ಅವನಿಗೊಬ್ಬನೇ ಮಗ ರಾಮಚಂದ್ರ. ಆದರೆ ಅವನಿಗೆ ಮದುವೆ ಮಾಡಿಸಿದ್ದು ಬಡವರ ಮನೆಯ ಹುಡುಗಿ ಸೀತೆ. ವರದಕ್ಷಿಣೆ ಕೊಡಬೇಕೆಂಬ ಕಡ್ಡಾಯದೊಂದಿಗೆ ಮದುವೆ ಮಾಡಿರುತ್ತಾರೆ. ವರದಕ್ಷಿಣೆ ಕೊಡುವ ಶಕ್ತಿ ಸೀತೆಯ ಅಪ್ಪ ನಾರಾಯಣ ರಾಯನಿಗೆ ಇಲ್ಲದೆ ಆಮೇಲೆ ಕೊಡುತ್ತೇವೆಂದು ಏನೋ ಸಬೂಬು ಹೇಳಿ ಮದುವೆ ಮಾಡಿರುತ್ತಾನೆ. ಹಣ ಕೊಡದ ಕಾರಣಕ್ಕಾಗಿ ಲಕ್ಷ್ಮೀಪತಿರಾಯ ಸೊಸೆಯನ್ನು ಮನೆಯಿಂದ ಹೊರಹಾಕಿದ್ದ. ಹೀಗಾಗಿ ಸೀತೆ ಅಪ್ಪನ ಮನೆಯಲ್ಲೇ ಇದ್ದಳು. ಅವಳನ್ನು ಗಂಡನ ಮನೆ ಸೇರಿಸಬೇಕೆಂಬ ಹರಸಾಹಸದಲ್ಲಿ ಭಾಗಿಯಾದವರು ಆ ಊರಿನ ಡಾಕ್ಟರ್ ಗಂಡಹೆಂಡತಿ. ಅವರಿಬ್ಬರೂ ಸಂಧಾನ ಮಾಡಬೇಕೆಂದು ಒಂದಿನ ಲಕ್ಷ್ಮೀಪತಿರಾಯನ ಮನೆಗೆ ಬರುತ್ತಾರೆ. ಅಷ್ಟೊತ್ತಿಗೆ ಲಕ್ಷ್ಮೀಪತಿರಾಯನ ಪಾತ್ರಧಾರಿ ಶಾಂತಜ್ಜನಿಗೆ ಎದುರು ಪಾತ್ರಧಾರಿಗಳು ಸರಿಯಾಗಿ ಮಾತನಾಡಲಿಲ್ಲವೆಂದು ಆಗಲೇ ವಿಪರೀತ ಸಿಟ್ಟು, ಉರಿಮುಖಹೊತ್ತು ನಿಂತಿದ್ದ. ಅದೇ ಹೊತ್ತಿಗೆ ಈ ಇಬ್ಬರೂ ಬಂದರು. ಅವರು ಬಂದಿರುವುದನ್ನು ನೋಡಿದವನೇ ಲಕ್ಷ್ಮೀಪತಿರಾಯ,
‘ಅದೇ.. ನೀವು ಹಾಕಿಕೊಂಡ ಆ ಮೆಟ್ಟು ಇದೆಯಲ್ಲ, (ಚಪ್ಪಲಿ) ಅದನ್ನು ಮನೆಯ ಹೊರಗಿಟ್ಟುಬನ್ನಿ’ ಎಂದು ನಾಟಕದ ಡೈಲಾಗನ್ನೇ ಹೇಳಿದ.

ನರ್ಸ್: ಇದರಲ್ಲೆಲ್ಲ ಏನಿದೆ ರಾಯರೇ. ಇದು ನಾವು ಮನೆಯಲ್ಲಿ ಹಾಕಿಕೊಳ್ಳುವ ಚಪ್ಪಲಿಗಳು ಎನ್ನಬೇಕು. ಆದರೆ ಅವಳಿಗೆ ಆ ರಂಗಸ್ಥಳ, ತುಂಬಿದ ಜನ, ಮುಖ್ಯವಾಗಿ ಶಾಂತ್‍ ಕುಮಾರನಂಥ ಮೇರುನಟ, ಇವರನ್ನೆಲ್ಲ ನೋಡಿ ಬೆದರಿ ಮಾತು ಮರೆತೇ ಹೋಯಿತು.

ನರ್ಸ್: ಇದರಲ್ಲಲೆಲ್ಲ ಏನಿದೆ ರಾಯರೇ… ಎಂದು ಹೇಳಿ ಸುಮ್ಮನಾದಳು. ಮತ್ತೆ ಮತ್ತೆ ಇದರಲ್ಲೆಲ್ಲ ಏನಿದೆ ರಾಯರೇ..ಎಂದಷ್ಟೇ ಹೇಳಿ ನಿಲ್ಲುತ್ತಿದ್ದಳು.
ಎಷ್ಟೊತ್ತಾದರೂ ಇದಷ್ಟು ಬಿಟ್ಟು ಬೇರೇನೂ ಮಾತು ಬಾರದ ಕಾರಣಕ್ಕೆ ಶಾಂತಜ್ಜನಿಗೆ ಸಿಟ್ಟು ಬಂದುಬಿಟ್ಟಿತು.

‘ಅದರಲ್ಲಿ ಏನಿದೆ ಅಂದರೆ, ಚರ್ಮ ಇದೆ, ಮೇಲೆ ಮೊಳೆ ಹೊಡೆದಿದ್ದಾರೆ’ ಎಂದುಬಿಟ್ಟ. ಅದು ನಾಟಕದ ಡೈಲಾಗ್ ಆಗದ ಕಾರಣಕ್ಕಾಗಿ ನರ್ಸ್ ಪಾತ್ರಧಾರಿಗೆ ಮತ್ತೂ ಮಾತು ಮರೆತೇ ಹೋಯಿತು. ಪ್ರೇಕ್ಷಕರೆಲ್ಲ ಜೋರಾಗಿ ನಗಲು ಶುರುಮಾಡಿದರು. ಇವರು ಮಾತನಾಡಲು ಬಂದವರಲ್ಲ ಎಂದು ಗೊಣಗಿಕೊಂಡ ಲಕ್ಷ್ಮೀಪತಿರಾಯ.

ಹಿಂದುಗಡೆ ಪ್ರಾಂಪ್ಟ್ ಮಾಡುವವರು ಹೇಳಿಕೊಟ್ಟ ಮೇಲೆ, ಅಂತೂ ಅವಳಿಗೆ ಮಾತು ನೆನಪಾಗಿ, ‘ಇದರಲ್ಲೆಲ್ಲ ಏನಿದೆ ರಾಯರೇ? ಇವು ನಾವು ಮನೆಯಲ್ಲಿ ಹಾಕಿಕೊಳ್ಳುವ ಚಪ್ಪಲಿಗಳು…’ ನಿಧಾನಕ್ಕೆ ಹೇಳಿದಳು.

ಶಾಂತಜ್ಜನಿಗೆ ಅಷ್ಟೊತ್ತಿಗಾಗಲೇ ಸಿಟ್ಟು ನೆತ್ತಿಗೇರಿತ್ತು. ‘ನೀವು ನಿಮ್ಮ ಮನೆಯಲ್ಲಿ ಅದರಿಂದ ದೇವರಿಗೆ ಧೂಪಾರತಿ ಬೇಕಾದ್ರೂ ಮಾಡಿ. ಆದರೆ ನಮ್ಮನೆಯಲ್ಲಿ ಮಾತ್ರ ಅದು ಅಲ್ಲೇ ಇರತಕ್ಕದ್ದು’ ಎಂದು ಬಾಗಿಲ ಕಡೆ ಕೈ ತೋರಿಸಿ ಹೇಳಿದ.

ಆಗ ಅವಳಿಗೇನು ಮಾತನಾಡಲೂ ಆಗದೆ ಸುಮ್ಮನೆ ನಿಂತುಬಿಟ್ಟಳು.

ಕೊನೆಯಲ್ಲಿ ಸೊಸೆಯ ತಂದೆ ನಾರಾಯಣ ರಾಯ, ದಯವಿಟ್ಟು ನನ್ನ ಮಗಳನ್ನು ಮನೆಗೆ ಸೇರಿಸಿಕೊಳ್ಳಿ ಎಂದು ಹೇಳಬೇಕು. ಅವನೂ ಹಾಗೇ ಮಾತನಾಡದೆ ಸುಮ್ಮನಿದ್ದ. ಸುಮಾರು ಹೊತ್ತು ನೋಡಿದ ಶಾಂತಜ್ಜ ಪಕ್ಕದಲ್ಲಿದ್ದ ನನ್ನ ಬಳಿ, ‘ಅವ ಮಾತನಾಡುವುದಿಲ್ಲ, ನೀನೇ ಮಾತನಾಡು’ ಎಂದುಬಿಟ್ಟ. ರಂಗಸ್ಥಳ ಖಾಲಿ ಬಿಡಬಾರದು ಎಂಬ ಕಾರಣಕ್ಕೆ ನಾನೇ ಅವನ ಡೈಲಾಗನ್ನೂ ಹೇಳಿಬಿಟ್ಟಿದ್ದೆ. ಆಗ ನನಗೆ ವಯಸ್ಸು ಸಣ್ಣದು, ಮತ್ತು ಇವರೆಲ್ಲ ನನ್ನ ಅಜ್ಜಂದಿರು, ಹಾಗಾಗಿ ಯಾವ ಭಯವೂ ಇಲ್ಲದೇ ಹೇಳಿದ್ದೆ.

ಇದಾದ ನಂತರ ಶಾಂತಜ್ಜ ನನ್ನ ಬಳಿ ಬಂದು, ‘ತಂಗಿ ಕಲಾವಿದರ ಕುಟುಂಬದವಳು ನೀನು. ಕಲಾದೇವಿ ನಿನಗೆ ಒಲಿದಿದ್ದಾಳೆ. ಇದನ್ನು ಇಲ್ಲಿಗೇ ಬಿಡಬೇಡ, ಮುಂದುವರಿಸಿಕೊಂಡು ಹೋಗು’ ಎಂದು ತಲೆಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದ. ನಾನು ತಲೆ ಅಲ್ಲಾಡಿಸಿದ್ದಷ್ಟೇ ಬಂತು. ನಂತರ ಬದುಕಿನ ಓಘದಲ್ಲಿ ಎಲ್ಲೆಲ್ಲೋ ಹೋಗಿ ಕಡೆಗೆ ಪತ್ರಿಕೋದ್ಯಮಕ್ಕೆ ಬಂದು ಅಲ್ಲೇ ಕಳೆದು ಹೋಗಿ ರಂಗಭೂಮಿಯ ಕಡೆ ಮುಖಮಾಡಲಾಗಲಿಲ್ಲ. ಆದರೆ ಈಗಲೂ ಒಮ್ಮೊಮ್ಮೆ ಖ್ಯಾತ ಕಲಾವಿದ ಶಾಂತಜ್ಜ ಆಶೀರ್ವದಿಸಿದ ತಲೆಯಿದು ಎಂದು ಮನೆಯಲ್ಲಿ ಹೇಳುತ್ತಿರುತ್ತೇನೆ.

ಇಂಥ ಶಾಂತಜ್ಜನ ಕೊನೆಯ ದಿನಗಳಲ್ಲಿ ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹೀಗಿದ್ದೂ ನಾಟಕವಾಡುವ ಖಯಾಲಿ ಬಿಡುತ್ತಲೂ ಇರಲಿಲ್ಲ. ಸ್ಟೇಜಿಗೆ ಬರುವವರೆಗೂ ಅವನನ್ನು ಯಾರಾದರೂ ಕೈ ಹಿಡಿದು ಕರೆದುಕೊಂಡು ಬರಬೇಕಾಗಿತ್ತು. ಆದರೆ ರಂಗಕ್ಕೆ ಬಂದಮೇಲೆ ಕಣ್ಣು ಕಾಣುವವರಿಗಿಂತಲೂ ಚೆನ್ನಾಗಿ ನಟಿಸುತ್ತಿದ್ದ. ಹೆಣ್ಣು ಗಂಡಾಗಿಯೂ, ಗಂಡು ಹೆಣ್ಣಾಗಿಯೂ ನಟಿಸಿದಾಗಲೇ ಒಬ್ಬ ಒಳ್ಳೆಯ ಕಲಾವಿದನೆನಿಸಿಕೊಳ್ಳುತ್ತಾನೆ ಎನ್ನುತ್ತಿದ್ದ ಶಾಂತಜ್ಜ ಈಗ ತೀರಿಕೊಂಡೇ ಇಪ್ಪತ್ತು ವರ್ಷಗಳ ಮೇಲಾಗಿರಬಹುದು. ಆದರೆ ಅವನ ಮೀರ್ ಸಾದಕ, ಮುದುಕನ ಮದುವೆಯ ಮುದುಕ, ಲಕ್ಷ್ಮೀಪತಿರಾಯ, ಮುಂತಾದ ನಾಟಕಗಳನ್ನು ಮರೆಯಲು ಸಾಧ್ಯವೇ ಇಲ್ಲ.