ಅಂತರ್ಮುಖಿ
ಅವಳನ್ನು ಪ್ರೀತಿಸುತ್ತಿಲ್ಲವೀಗ
ದುಬಾಲು ಬಿದ್ದಿದ್ದಾಳೆ ಅವಳೇ
ನನ್ನ ಒಂಟಿಧ್ವನಿ ಕುಯ್ ಎನ್ನುವಾಗೆಲ್ಲಾ
ಅವಳ ನರಳುವಿಕೆ ನೆತ್ತರ ಹೊಕ್ಕು ನರಳಿಸುತ್ತದೆ.
ಅವಳನ್ನು ಮೋಹಿಸುತ್ತಿಲ್ಲ
ಅವಳು ನನ್ನೊಳಗೇ ವಾಸಿಸುತ್ತಿದ್ದಾಳೆ
ನನ್ನವಳ ಸಹವಾಸಕ್ಕೀಗ ಹತ್ತರ ಪ್ರಾಯ
ನಾನವಳ ನೆನಪಿಸಿಕೊಳ್ಳಲಾರೆನೀಗ
ಅವಳು ಕಾಣಸಿಗುತ್ತಾಳೆ, ಕವಲುದಾರಿಯಂತೆ ದುತ್ತನೇ..
ಎತ್ತ ಹೋಗಲೂ ತಿಳಿಯುತ್ತಿಲ್ಲ
ನೆನಪುಗಳು ಅವಳ ಅಸ್ತಿಯಂತೆ…
ಅವಳ ಒಂದು ಹೆಸರಿಲ್ಲ
ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ
ಅವಳಿದ್ದಾಳೆ ಕಾಣಸಿಗುತ್ತಾಳೆ
ಪ್ರತಿ ಪುಟದಲ್ಲಿ, ನನಗರಿವಿಲ್ಲದೇ ನನ್ನೀ ಊಹೆಗಳಲ್ಲಿ
ಬಸವಳಿದ್ದೇನೆ
ಮದುವೆಯಾಗಿ, ಮಕ್ಕಳಾಗಿ, ಜೀವನದ ಹೊಡೆತಕ್ಕೆ
ದಾರಿ ದಿಕ್ಕುತಪ್ಪಿಸುವಲ್ಲಿ ನಿರತವಾಗಿದೆ ಅವಳ ತೃಷೆ
ಏನನ್ನಲಿ ಅವಳ
ಹೆಣ್ಣೆನ್ನಲೇ, ಹೊನ್ನೇನಲೇ… ತಿಳಿಯುತ್ತಿಲ್ಲ
ಶಿವಕುಮಾರ ಚನ್ನಪ್ಪನವರ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಹೀಲದಹಳ್ಳಿಯವರು.
‘ಒಂದು ಭ್ರೂಣದ ಕನಸು’ (ಕವಿತಾ ಸಂಕಲನ) ‘ಮುಖವಾಡದ ಮಾಫಿಯಾದಲ್ಲಿ’ (ಕಥಾ ಸಂಕಲನ) ಹಲವು ಪತ್ರಿಕೆಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟವಾಗಿವೆ ಮತ್ತು ಇವರ ಕತೆಗಳಿಗೆ ಹಲವು ಬಹುಮಾನಗಳು ಸಂದಿವೆ