ಡೋಗ್ರಿ ನವೋದಯ ಚಳವಳಿಯ ಪ್ರಮುಖರಾದ ಪ್ರೊ. ನೀಲಾಂಬರ್ ದೇವ್ ಶರ್ಮಾ ಅವರದು ಪ್ರಶಾಂತ ವ್ಯಕ್ತಿತ್ವ. ಸುಂದರವಾದ ನಿಲುವು. ಸ್ವತಃ ಬರಹಗಾರರಾಗಿ ಗುರುತಿಸಿಕೊಂಡದ್ದಲ್ಲದೆ ಡೋಗ್ರಿ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಸಲು ಇತರರಿಗೆ ಪ್ರೋತ್ಸಾಹ ನೀಡಿದವರು. ಸಾಂಸ್ಥಿಕ ಚಟುವಟಿಕೆಗಳಲ್ಲಿ, ಭಾಷಾ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು. ಡೋಗ್ರಿ ಜನಪದ ಸಾಹಿತ್ಯದ ದಾಖಲೀಕರಣ ಯೋಜನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

 

‘ಕಳೆದು ಹೋದದ್ದು ಚಂದವೋ , ಚಂದದ್ದೇ ಕಳೆದು ಹೋಗುತ್ತದೋ ಗೊತ್ತಾಗುವುದಿಲ್ಲ. ನನ್ನ ಜೀವನಯಾನದಲ್ಲಿ ಇಂಥದ್ದು ಹಲವು ಭಾರಿ ಘಟಿಸಿದೆ’ ಎಂದು ಮಾತು ಶುರು ಮಾಡಿದವರು ಡೋಗ್ರಿ ,ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿಯೂ ಬರವಣಿಗೆ ಮಾಡಿದ ಸಾಹಿತಿ ಪ್ರೊ. ನೀಲಾಂಬರ್ ದೇವ್ ಶರ್ಮ .

ಜಮ್ಮುಕಾಶ್ಮೀರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅವರಿಗೆ ಡೋಗ್ರಿ ಸಾಹಿತ್ಯ ಕ್ಷೇತ್ರ ಸಾಗಿ ಬಂದ ದಾರಿಯ ಬಗ್ಗೆ ಅಗಾಧವಾದ ಜ್ಞಾನವಿತ್ತು. 1931ರಲ್ಲಿ ಜಮ್ಮುವಿನಲ್ಲಿ ಹುಟ್ಟಿದ ಶರ್ಮಾ, 2020ರಲ್ಲಿ ತೀರಿಕೊಂಡರು. 2011 ರಲ್ಲಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು.

ಸ್ವಾತಂತ್ರ್ಯ ಪೂರ್ವದ ಜಮ್ಮುಕಾಶ್ಮೀರ ರಾಜ್ಯವನ್ನು ನೋಡಿದ್ದ ಅವರಲ್ಲಿ ಸ್ವಾತಂತ್ರ್ಯೋತ್ತರದ ಬೆಳವಣಿಗೆಗಳ ಬಗ್ಗೆ, ವಿಭಜನೆಯ ರಕ್ತಸಿಕ್ತ ಅಧ್ಯಾಯದ ಬಗ್ಗೆ ಬೇಸರ ಸಹಜವಾಗಿತ್ತು. ವೈಯಕ್ತಿಕವಾಗಿ ಅವರು ಬಹಳ ಸಮಾಧಾನದ, ಈ ಜೀವ ಜಗತ್ತಿನ ಆಗು ಹೋಗುಗಳ ವಿಸ್ಮಯದ ಬಗ್ಗೆ ವಿನೀತ ಭಾವವನ್ನು ಹೊಂದಿದ ವ್ಯಕ್ತಿಯಾಗಿದ್ದರು. ‘ಕರ್ಮವಷ್ಟೇ ನನ್ನ ಪಾಲಿನದ್ದು’ ಎಂದು ನಂಬಿದವರು. ಬಹಶಃ ಅವರ ಈ ಸಂತೃಪ್ತ ಭಾವವನ್ನು ಅರಸಿಕೊಂಡು ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿತ್ತು.

ತಮ್ಮ ಈ ‘ಚಂದ’ದ ಹೇಳಿಕೆಯನ್ನು ಸಮರ್ಥಿಸಲು ಅವರು ಎರಡು ಕಥೆಗಳನ್ನು ಹೇಳಿದರು.

‘ಕಾಲೇಜು ದಿನಗಳಲ್ಲಿ ನನಗೊಬ್ಬ ಸ್ನೇಹಿತನಿದ್ದ. ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ, ಓದುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವನು ಬರವಣಿಗೆಯಲ್ಲಿಯೂ ಒಂದು ಕೈ ಮೇಲು. ಅವನ ಹೆಸರು ಮಾಧವ ಲಾಲ್ ಹುಸೇನ್ ತಾರೀಕ್. ಅವನ ಪ್ರೇರಣೆಯಿಂದಲೇ ನಾನು ಉರ್ದುವಿನಲ್ಲಿ ಬರೆಯಲು ಶುರು ಮಾಡಿದೆ. ನನ್ನ ಬರಹಗಳು ಚೆನ್ನಾಗಿವೆ ಎಂದು ಅವನು ತಾರೀಪು ಮಾಡಿದ್ದರಿಂದ ನನ್ನಲ್ಲಿ ಮತ್ತಷ್ಟು ಬರೆಯುವ ಹುಮ್ಮಸ್ಸು ಮೂಡಿತು. ಆದರೆ ಬರಹಲೋಕಕ್ಕೆ ಪ್ರವೇಶ ಮಾಡಿದ ಎಷ್ಟೋ ವರ್ಷಗಳ ಬಳಿಕ ನನಗೆ ಅರಿವಾಯಿತು ನನ್ನ ಸ್ನೇಹಿತನ ಹೆಸರು ಬಹಳ ಚಂದವಿತ್ತು ಎಂದು. ಅವನ ಅಮ್ಮ ಹಿಂದೂ ಆಗಿದ್ದರು. ಹಾಗಾಗಿ ಅವರು ತಮ್ಮ ಮಗನಿಗೆ ಮಾಧವಲಾಲ್ ಹುಸೇನ್ ಎಂಬ ಹೆಸರಿಟ್ಟಿದ್ದರು. ಅವನ ಹೆಸರೇ ಎಷ್ಟೊಂದು ಚಂದದ ಕತೆಗಳನ್ನು ಸಂಕೇತಿಸುತ್ತದಲ್ಲ ? ಎಂದು ಈಗಲೂ ನೆನಪಿಸಿಕೊಳ್ಳುತ್ತೇನೆ.
ಎರಡನೆಯ ಕಥೆ ಬಹಳ ವಿಶೇಷವಾದ್ದೇನೂ ಅಲ್ಲ. ಭಯೋತ್ಪಾದನೆಯ ಕಗ್ಗತ್ತಲ ಅಧ್ಯಾಯ ಜಮ್ಮುಕಾಶ್ಮೀರ ರಾಜ್ಯದಲ್ಲಿ ಆರಂಭವಾದಾಗಲೇ ನಮಗೆಲ್ಲ ಅರಿವಾಗಿದ್ದು, ರಾಜ್ಯದಲ್ಲಿ ಜನರು ಭಾಷಣ,ಉಪನ್ಯಾಸ, ಹೋರಾಟ, ಜಗಳ, ಪ್ರೀತಿ, ಸನ್ಮಾನ ಅಂತೆಲ್ಲ ಎಷ್ಟೊಂದು ಚೆನ್ನಾಗಿದ್ದರು ಎಂಬುದು. ಅದು ಕಳೆದು ಹೋಯಿತು ಎಂಬುದು’
ಜಮ್ಮುವಿನಲ್ಲಿ ಹುಟ್ಟಿದ ನೀಲಾಂಬರ್ ದೇವ್ ಶರ್ಮಾ ಅವರ ತಂದೆ, ಮದನ್ ಮೋಹನ್ ಶಾಸ್ತ್ರಿ.  ಅವರು ರಾಜನ ಆಸ್ಥಾನದಲ್ಲಿ ಜ್ಯೋತಿಷಿಯಾಗಿದ್ದರು. ಸಂಸ್ಕೃತದ ಪ್ರಕಾಂಡ ಪಂಡಿತರೆಂದು ಪ್ರಸಿದ್ಧಿಯನ್ನೂ ಪಡೆದವರು. ಒಮ್ಮೆ ರಾಜನನ್ನು ಬ್ರಿಟಿಷರು ಇಂಗ್ಲೆಂಡ್ ಗೆ ಆಹ್ವಾನಿಸಿದ್ದರು. ವಿದೇಶ ಪ್ರಯಾಣಕ್ಕೆ ಹೊರಡುವ ಸಂದರ್ಭ ಬಂದಾಗ, ಮುಂದಿನ ಫಲಾಫಲಗಳ ಕುರಿತು ರಾಜನು, ಜ್ಯೋತಿಷಿಯವರ ಸಲಹೆ ಕೇಳುವುದು ವಾಡಿಕೆ. ಹೀಗೆ ಫಲ ಜ್ಯೋತಿಷದ ಪ್ರಸ್ತಾಪ ಬಂದಾಗ, ‘ನೀವು ಸಾಯುವ ಸಂಭವವಿದೆ’ ಎಂದು ಶಾಸ್ತ್ರಿಗಳು, ನೇರವಾಗಿ ರಾಜನಿಗೆ ತಿಳಿಸುತ್ತಾರೆ. ಸಿಟ್ಟುಗೊಂಡ ರಾಜ, ಅವರನ್ನು ಆಸ್ಥಾನದಿಂದ ಹೊರದಬ್ಬಿದ್ದ. ಶಾಸ್ತ್ರಿಗಳ ಮಾತು ನಿಜವಾಗಿ, ಆ ಕುರಿತು ಐತಿಹ್ಯಗಳೇ ಸೃಷ್ಟಿಯಾಗಿದ್ದವಂತೆ.

ಆಸ್ಥಾನದ ಜ್ಯೋತಿಷಿಯಾದ್ದರಿಂದ ಶ್ರೀಮಂತ ಜೀವನವನ್ನು ಕಂಡಿದ್ದ ಅವರ ಕುಟುಂಬ ಇದ್ದಕ್ಕಿದ್ದಂತೆಯೇ ಬೀದಿಗೆ ಬಂದಿತ್ತು. ಶಾಸ್ತ್ರಿಗಳ ಪಾಂಡಿತ್ಯದ ಕುರಿತ ಮಾಹಿತಿಯನ್ನು ಪಡೆದ ಜೈಪುರದ ರಾಜ, ತನ್ನ ಆಸ್ಥಾನಕ್ಕೆ ಬರುವಂತೆ ಆಹ್ವಾನಿಸಿದ್ದುಂಟು. ಶಾಸ್ತ್ರಿಗಳಿಗೆ ಮತ್ತೆ ರಾಜರ ಹಂಗಿಗೆ ಬೀಳುವುದಕ್ಕಿಂತ ಬಡತನವೇ ವಾಸಿ ಎನಿಸಿತ್ತು. ಹಾಗಾಗಿ ನೀಲಾಂಬರ್ ದೇವ್ ಅವರ ಬಾಲ್ಯವು ಕಡುಕಷ್ಟವನ್ನು ದಾಟಿ ಬಂದಿತ್ತು. ಆದರೆ ತಂದೆಯವರ ಸಂಸ್ಕೃತ ಪಾಂಡಿತ್ಯ, ಓದುವಿಕೆಯು ಕೊಟ್ಟ ಜ್ಞಾನ ಅವರಿಗೆ ಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸಲು ನೆರವಾಗಿತ್ತು. ತಂದೆಯಿಂದ ಜ್ಯೋತಿಷವನ್ನು ಕಲಿತರೂ ಅವರು ಆಯ್ಕೆ ಮಾಡಿಕೊಂಡಿದ್ದು ಸಾಹಿತ್ಯ ಕ್ಷೇತ್ರವನ್ನು. ಸಂಗೀತವೆಂದರೆ ಅವರಿಗೆ ಇನ್ನಿಲ್ಲದ ಪ್ರೀತಿ.

ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನೀಲಾಂಬರ್ ದೇವ್ ಅವರು ಇಂಗ್ಲಿಷ್ ಸಾಹಿತ್ಯ ಅಧ್ಯಯನವನ್ನು ಇಂಗ್ಲೆಂಡ್ ನಲ್ಲಿ ಮಾಡಿದರು. ಅವರ ಅಂತರಂಗದಲ್ಲಿ ಹುದುಗಿದ್ದ ಸಂಗೀತದ ಒಲವು ಅಲ್ಲಿ ಅವರನ್ನು ಪಾಶ್ಚಾತ್ಯ ಸಂಗೀತದ ಕಡೆಗೆ ಸೆಳೆಯಿತು. ಈ ಆಸಕ್ತಿಯೇ ಮುಂದೆ ಡೋಗ್ರಿ ಸಾಹಿತ್ಯ ಕ್ಷೇತ್ರಕ್ಕೆ ಅವರು ಮಹಾನ್ ಕೊಡುಗೆ ಕೊಡುವಂತೆ ಮಾಡಿತು ಎನ್ನಬಹುದು.

ಅವರ ಪ್ರಕಾರ, ಪಾಶ್ಚಾತ್ಯ ಸಂಗೀತದಲ್ಲಿ ಕಲಾವಿದರ ಅಥವಾ ವಾದ್ಯಗಳ ಸಮ್ಮೇಳನ ಮೂಡಿಸುವ ಒಟ್ಟಂದವೇ ಪ್ರಧಾನವಾದುದು. ಅಂದರೆ ಸ್ವರಮೇಳವೇ ವಿಸ್ತಾರವಾಗುತ್ತ ಸಾಗುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮಾಧುರ್ಯಕ್ಕೆ ಆದ್ಯತೆ. ಡೋಗ್ರಿ ಜನಪದ ಸಂಗೀತ ಕ್ಷೇತ್ರದಲ್ಲಿ ಮಾತ್ರ ವಿಶೇಷವೆಂಬಂತೆ ಈ ಸ್ವರ ಮೇಳದ ಅಂಶವೊಂದು ಎದ್ದು ಕಾಣುವಂತಿದೆ ಎಂಬುದನ್ನು ಪ್ರೊ. ಶರ್ಮಾ ಗುರುತಿಸಿದರು: ‘ಡೋಗ್ರಿ ಜನಪದರು ಹಾಡುವಾಗ ಒಂದು ಕಿವಿಯನ್ನು ಅಂಗೈಯಿಂದ ಮುಚ್ಚಿ ಹಾಡುತ್ತಿದ್ದರು. ಯಾಕೆಂದರೆ ಪಾಶ್ಚಾತ್ಯರಂತೆ ಇಲ್ಲಿನ ಜನಪದ ಸಂಗೀತ ಕ್ಷೇತ್ರವು ಶೈಕ್ಷಣಿಕ ಶಿಸ್ತಿನದ್ದಲ್ಲ. ಪಕ್ಕದಲ್ಲಿ ಹಾಡುವವನ ಪಿಚ್ ಅಥವಾ ಶ್ರುತಿ ತನ್ನ ಹಾಡಿಗೆ ತೊಂದರೆ ಆಗದಿರಲೆಂದು ಹೀಗೆ ಮಾಡುತ್ತಿದ್ದರು. ತಮ್ಮೊಳಗಿನ ದನಿಯನ್ನೇ ಅವರು ಪ್ರಕಟವಾಗಿ ಹೊಮ್ಮಿಸಬಲ್ಲವರಾಗಿದ್ದರು. ಅಂತಹ ಜನಪದ ತಂಡಗಳಿಗೆ ಒಬ್ಬ ನಾಯಕನಿರುತ್ತಿದ್ದ. ಅವನು ಸ್ವರಮೇಳದ ವಿಸ್ತಾರಕ್ಕೆ ದಾರಿಮಾಡಿಕೊಡುತ್ತಿದ್ದ. ಸ್ವರಮೇಳ ಸೃಷ್ಟಿಸುವ ಅನುರಣನ ಭಾವದ ಅಂಶವನ್ನು ಸಾಮೂಹಿಕ ವೇದಘೋಷದಲ್ಲಿಯೂ ನಾವು ಗುರುತಿಸಬಹುದು.

(ಫೋಟೋಗಳು: ಲೇಖಕರವು)

ವೈಯಕ್ತಿಕವಾಗಿ ಅವರು ಬಹಳ ಸಮಾಧಾನದ, ಈ ಜೀವ ಜಗತ್ತಿನ ಆಗು ಹೋಗುಗಳ ವಿಸ್ಮಯದ ಬಗ್ಗೆ ವಿನೀತ ಭಾವವನ್ನು ಹೊಂದಿದ ವ್ಯಕ್ತಿಯಾಗಿದ್ದರು. ‘ಕರ್ಮವಷ್ಟೇ ನನ್ನ ಪಾಲಿನದ್ದು’ ಎಂದು ನಂಬಿದವರು.

ಡೋಗ್ರಿ ಜನಪದ ಸಂಗೀತದ ಅರಿವು ನನಗಿದ್ದರೂ, ಇಂಗ್ಲೆಂಡ್ ನಲ್ಲಿದ್ದಾಗ ನನಗೆ ನನ್ನೂರಿನ ಸಂಗೀತದ ಬಗ್ಗೆ ಹೆಚ್ಚು ಯೋಚಿಸಬೇಕು ಎನಿಸಿತು. ಅಲ್ಲಿಂದ ಬರುವಷ್ಟರಲ್ಲಿ ನಾನು ಸಂಗೀತವನ್ನು ಕುಡಿದ ಅಮಲಿನಲ್ಲಿಯೇ ಇದ್ದೆನೆನಿಸುತ್ತದೆ. ಹಾಗಾಗಿ ಒಂದು ಟೇಪ್ ರೆಕಾರ್ಡರ್ ಇಟ್ಟುಕೊಂಡು ಡೋಗ್ರಿ ಹಾಡುಗಳು, ಜನಪದ ಕತೆಗಳನ್ನು ದಾಖಲಿಸುತ್ತ ಸಾಗಿದೆ. ಮುಂದಕ್ಕೆ ಅಕಾಡೆಮಿಯ ಕೆಲಸ ಕೈಗೆತ್ತಿಕೊಂಡಾಗ ಈ ಕೆಲಸ ಕಾರ್ಯಗಳ ಹಿನ್ನೆಲೆ ನನಗೆ ಹೆಚ್ಚು ಸಹಾಯಕ್ಕೆ ಬಂತು. ಅಕಾಡೆಮಿ ಕಾರ್ಯದರ್ಶಿಯಾಗಿದ್ದಾಗ ಮೊದಲ ಹಂತದಲ್ಲಿ ಡೋಗ್ರಿ ಜನಪದ ಹಾಡುಗಳ ಏಳು ಸಂಪುಟಗಳನ್ನು ಹೊರತಂದೆವು. ಬಳಿಕ ಇದು 28 ಸಂಪುಟಗಳಷ್ಟು ವಿಸ್ತಾರವಾಯಿತು. ಬಹುಶಃ ಭಾರತದ ಯಾವುದೇ ಜನಪದ ಭಾಷೆಯಲ್ಲಿ ಆ ಕಾಲಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಜನಪದ ಸಾಹಿತ್ಯದ ದಾಖಲೀಕರಣ ನಡೆದಿರಲಿಕ್ಕಿಲ್ಲವೇನೋ. ನಮ್ಮದೇ ಆಸುಪಾಸಿನ ಭಾಷೆಗಳಲ್ಲಂತೂ ನಡೆದಿಲ್ಲ. ಯಾಕೆಂದರೆ ನಮ್ಮೊಡನೆಯೇ ಇರುವ ಉರ್ದು ಭಾಷೆ- ಸೀಮಿತ ಪ್ರದೇಶದ ಭಾಷೆಯಲ್ಲ. ಹಾಗಾಗಿ ಜನಪದ ಹಿನ್ನೆಲೆಯ ವ್ಯಾಪ್ತಿ ಚಿಕ್ಕದು. ಹಿಂದಿ ಭಾಷೆಯಂತೂ ಆಯಾ ಪ್ರದೇಶಗಳಿಗೆ ತಕ್ಕಂತೆ ಮಾರ್ಪಾಡುಗೊಳ್ಳುವಂತಹುದು. ಇನ್ನೊಂದು ವಿಷಯವನ್ನೂ ಗಮನಿಸಬೇಕು: ಇಲ್ಲಿ ಡೋಗ್ರಿ ಜನಪದ ಸಾಹಿತ್ಯವು ಅಷ್ಟೊಂದು ಶ್ರೀಮಂತವೂ ಹೌದು. ಜೊತೆಗೆ ಅದು ಜೀವಂತವಾಗಿಯೇ ಇದ್ದುದರಿಂದ ನಮಗೆ ದಾಖಲೀಕರಣಕ್ಕೆ ಲಭ್ಯವಾಗುವುದೂ ಸುಲಭವಾಯಿತು’ ಎನ್ನುತ್ತ ದಾಖಲೀಕರಣದ ಇಡೀ ಪ್ರಕ್ರಿಯೆಯನ್ನು ವಿವರಿಸಿದರು. ‘ಅಂದಹಾಗೆ ಚಂದದ ಸಾಹಿತ್ಯ ಸಿರಿ ಕಳೆದು ಹೋಗಬಾರದೆಂಬುದೇ ನನ್ನ ಆಶಯವಾಗಿತ್ತು’ ಎನ್ನುತ್ತ ಮೆಲುವಾಗಿ ನಕ್ಕರು.

ಪ್ರೊ. ಶರ್ಮಾ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದಾಗಲೇ ಅಕಾಡೆಮಿಯ ಪ್ರಾದೇಶಿಕ ಕಚೇರಿಯನ್ನು ಲೇಹ್ ನಲ್ಲಿ ತೆರೆಯುವುದು ಸಾಧ್ಯವಾಯಿತು. ಕಾಶ್ಮೀರದ ಸೂಫಿಯಾನಾ ಸಂಗೀತಕ್ಕೆ ಸಂಗೀತ ನಾಟಕ ಅಕಾಡೆಮಿಯ ಮಾನ್ಯತೆಯೂ ದೊರೆಯಿತು. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಡೋಗ್ರಿ ಸಲಹಾ ಸಮಿತಿಯ ಮೊದಲ ಸಲಹಾಗಾರರಾಗಿಯೂ ಕೆಲಸ ಮಾಡಿದ್ದರು. ಆದರೆ ಈ ಎಲ್ಲ ಕೆಲಸಗಳ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದ ಶರ್ಮಾ ಅವರು, ಚುನಾವಣಾ ರಾಜಕೀಯ ಪ್ರವೇಶಿಸಲು ನಿರ್ಧರಿಸಿದ 1972ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.

ಅವರು ಬರೆದ ಆಧುನಿಕ ಡೋಗ್ರಿ ಸಾಹಿತ್ಯ ವನ್ನು ಪರಿಚಯಿಸುವ ಇಂಗ್ಲಿಷ್ ಕೃತಿ(An Introduction to Modern Dogri Literature) ಡೋಗ್ರಿ ಸಾಹಿತ್ಯದ ಬಗ್ಗೆ ಇಂಗ್ಲಿಷ್ ನಲ್ಲಿ ಬಂದ ಮೊತ್ತ ಮೊದಲ ಕೃತಿ. ಚೆಟೆ ಕಿಶ್ ಕಟ್ಟೆ, ಕಿಶ್ ಮಿಟ್ಟೆ (ಪ್ರವಾಸೀಕಥನ), ರಿಷ್ತೇ(ಪ್ರಬಂಧ), ಕಹಾನಿ ದಿ ತಪಾಷ್ (ಕಥಾಸಂಕಲನ) ಅವರ ಮುಖ್ಯ ಕೃತಿಗಳು. ನಿಘಂಟು ರಚನೆಯ ಯೋಜನೆಯಲ್ಲಿಯೂ ಅವರು ತೊಡಗಿಸಿಕೊಂಡಿದ್ದರು.

ಪ್ರೊ. ಶರ್ಮಾ ಅವರ ಮೆಚ್ಚಿನ ಬರಹಗಾರ ಶರತ್ ಚಂದ್ರ ಚಟರ್ಜಿ . ಹೆಚ್ಚು ಸಾಧ್ಯತೆಗಳು ಅವಿತಂತೆ ಕಥೆಗಳನ್ನು ಬರೆಯುವ ಚಟರ್ಜಿ ಶೈಲಿ ಅವರಿಗಿಷ್ಟ. ಡೋಗ್ರಿ ಭಾಷೆಯಲ್ಲಿ ಮೊತ್ತ ಮೊದಲ ಸಣ್ಣ ಕತೆ ಬರೆದ ಬಿ.ಪಿ. ಸಾಠೆ( ಭಗವತ್ ಪ್ರಸಾದ್ ಸಾಠೆ -1910-1973) ಅವರಿಗೆ ಆದರ್ಶ. ‘ಸಾಹಿತ್ಯ ಕ್ಷೇತ್ರದಲ್ಲಿ ಡೋಗ್ರಿ ಭಾಷೆಗೆ ಸ್ಥಾನವೇ ಇಲ್ಲದ ಆ ಕಾಲದಲ್ಲಿ ಅವರು ಡೋಗ್ರಿಯನ್ನು ಒಂದು ಭಾಷೆಯಾಗಿ ಪರಿಗಣಿಸಿಕೊಂಡು ಬರವಣಿಗೆ ಶುರು ಮಾಡಿರುವುದೇ ಸಾಹಸದ ಕೆಲಸ. ರವೀಂದ್ರನಾಥ ಟ್ಯಾಗೋರ್, ಪ್ರೇಮ್ ಚಂದ್ ಮುನ್ಶಿಯವರಂತಹ ಬರಹಗಾರರು ಕೂಡ ಮೆಚ್ಚು’ ಎನ್ನುವ ಅವರು ಡೋಗ್ರಿ ಬರಹಗಳ ಮೂಲ ಆಶಯ ಇರುವುದು ಹೋರಾಟದಲ್ಲಿ ಎಂದು ಗುರುತಿಸುತ್ತಾರೆ.

ಗುಡ್ಡಗಾಡು ಪ್ರದೇಶದಲ್ಲಿಯೇ ಜೀವನ ಸಾಗಿಸುವ ಡುಗ್ಗರ್ ಜನರು ಮೂಲತಃ ಹೋರಾಟಗಾರರು. ಹಾಗಾಗಿ ಹೆಚ್ಚಿನವರು ಸೇನೆಯಲ್ಲಿ ಕೆಲಸ ಮಾಡಿದ ಅನುಭವಸ್ಥರು. ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಬಲವಾಗಿ ನಂಬಿ ಸ್ವಾತಂತ್ರ್ಯ ಹೋರಾಟದಲ್ಲಿ ಅವರೆಲ್ಲ ಭಾಗವಹಿಸಿದ್ದರು. ಆದರೆ ಈ ಭಾಗವಹಿಸುವಿಕೆಯ ಸಂದರ್ಭದಲ್ಲಿಯೇ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ತಮ್ಮದೇ ನಾಡಿನ ವಿಶೇಷತೆಯನ್ನುಗುರುತಿಸುವುದು ಅಗತ್ಯ ಎಂಬುದು ಅರಿವಿಗೆ ಬಂತು. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಡೋಗ್ರಿ ಪ್ರಭಾವದ ಸಂಗೀತ ಸ್ವತಂತ್ರವಾಗಿ ನಿಲ್ಲಬಾರದೇಕೆ ? ಡೋಗ್ರಿ ಕಥೆಗಳು ಸ್ವತಂತ್ರವಾಗಿ ಗುರುತಿಸಿಕೊಳ್ಳಬಾರದೇಕೆ ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿಯೇ ‘ಡೋಗ್ರಿ ಸಂಸ್ಥಾ’ ಎಂಬ ವೇದಿಕೆಯು 1944 ರಲ್ಲಿ ರೂಪುಗೊಂಡಿತು. 1977 ರಲ್ಲಿ ಈ ಡೋಗ್ರಿ ಸಂಸ್ಥಾದ ಅಧ್ಯಕ್ಷರಾಗಿ ಪ್ರೊ. ನೀಲಾಂಬರ್ ದೇವ್ ಶರ್ಮಾ ಆಯ್ಕೆಯಾದರು. ಬರೋಬ್ಬರಿ 20 ವರ್ಷಗಳ ಕಾಲ ಈ ಸಂಸ್ಥೆಯ ಮೂಲಕ ಡೋಗ್ರಿ ಪರವಾಗಿ ಕೆಲಸ ನಿರ್ವಹಿಸಿದರು. ಡೋಗ್ರಿಭಾಷಾ ಹೋರಾಟವು ಇದೇ ಅವಧಿಯಲ್ಲಿ ನಡೆಯಿತು ಎಂಬುದು ಗಮನಾರ್ಹ.

ಪ್ರಶಾಂತ ಮನಸ್ಥಿತಿಯ, ಮೌನವನ್ನೇ ಹೆಚ್ಚು ಪ್ರೀತಿಸುವ ಪ್ರೊ. ಶರ್ಮಾ ಮೀಟಿಂಗ್ ಗಳನ್ನು ಸಕಾರಾತ್ಮಕವಾಗಿಯೇ ನಿರ್ವಹಿಸುತ್ತಿದ್ದರು ಎಂಬುದು ಪ್ರಚಲಿತವಾಗಿದ್ದ ಮಾತು. ರಚನಾತ್ಮಕ ಕೆಲಸಗಳು ಮುಂದುವರೆಯಬೇಕು ಎಂಬ ದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ, ಸಂಘಟನಾತ್ಮವಾಗಿ ವ್ಯವಹರಿಸುವ ಚತುರತೆ ಅವರಲ್ಲಿತ್ತು.

ಜಗತ್ತಿನಲ್ಲಿ ಕೇವಲ ಕತ್ತಲೆ ಅಥವಾ ‘ಶುದ್ಧಕತ್ತಲು’ ಎನ್ನುವುದು ಇರುವುದಿಲ್ಲ. ಕಗ್ಗತ್ತಲಲ್ಲಿಯೂ ಬೆಳಕೊಂದು ಅವಿತಿರುತ್ತದೆ. ಹಾಗೆಯೇ ಬರೀ ಬೆಳಕೇ ಬೆಳಕು ಎಂಬ ಸ್ಥಿತಿಯೂ ಇರುವುದಿಲ್ಲ. ಹೊಳೆಯುವ ಬೆಳಕಿನ ಚಾದರದಡಿಯಲ್ಲಿ ಕತ್ತಲೆಯ ಹಾಸೊಂದು ಇದ್ದೇ ಇರುತ್ತದೆ ಎಂದು ಪ್ರೊ. ನೀಲಾಂಬರ್ ದೇವ್ ಶರ್ಮಾ ಬಲವಾಗಿ ನಂಬಿದ್ದವರು. ಅದಕ್ಕೆ ಪೂರಕವಾದ ವಿಚಾರಗಳನ್ನೂ ಜೋಡಿಸಿ ಹೇಳಿದರು. ಜಮ್ಮು ಮತ್ತು ಕಾಶ್ಮೀರ ರಾಜ್ಯವೇ ಸದಾ ತುಮುಲದಲ್ಲಿ ಸಾಗುವಾಗ, ಇನ್ನು ಬದುಕು ಮುಗಿದೇ ಹೋಯಿತು ಎಂಬಂತಹ ಸ್ಥಿತಿ ಅನೇಕ ಬಾರಿ ನಿರ್ಮಾಣವಾಗಿದ್ದುಂಟು. ಆಗೆಲ್ಲ ಈ ನಂಬಿಕೆಯೇ ಅವರನ್ನು ಕೈಹಿಡಿದು ನಡೆಸಿದೆ ಎನಿಸುತ್ತದೆ.