ಭಾರವಾದ ಹೆಜ್ಜೆಗಳು

ಕಾಣದ ದಾರಿಯಲ್ಲಿ ನೂರೆಂಟು ಮುಳ್ಳುಗಳ ಹಾಸಿಗೆಯು
ಬೀಸುವ ಗಾಳಿಯ ವಿರುದ್ಧ ನಮ್ಮ ಹೆಜ್ಜೆಗಳು
ದಿನವೂ ಮಲಗಿ ಏಳುವ ಸೂರ್ಯಚಂದ್ರರೂ ನೋಡುತ್ತಿಲ್ಲ
ಏನೆಂದು ಬಣ್ಣಿಸುವುದು ಈ ಬವಣೆಯ ಕಥೆಯ

ಮುಂಜಾನೆಯ ಬೆಳಕಲ್ಲಿ ಕತ್ತಲೆಯು ತುಂಬಿರಲು
ಗುಡುಗು ಮಿಂಚಿನ ಬಾಳುವೆಯು ಮನವನ್ನು ಅಪ್ಪಿರಲು
ಆ ವಿಧಿಯ ಪಾದ ಸೇರುವ ಮುನ್ನ ಈ ನೋವು ಹಿಂಡುತಿರಲು
ಗೆಲ್ಲಲೇಬೇಕು ನೋವ ಸವಿಯಲೇಬೇಕು ಅನುದಿನವೂ

ಕಾಡುಮೇಡುಗಳ ದಟ್ಟದಾರಿಯಲಿ ರಾತ್ರಿಯ ಒಳಸೆರಗಿನಲ್ಲಿ
ಬಿದ್ದಮಳೆಯು ತನ್ನ ಬಣ್ಣ ಕಳಚಿ ಕಾಲುವೆಗುಂಟ ತೊರೆಯಾಗಿ
ಹಸಿದ ಕೆಸರಿನಲಿ ಹೆಜ್ಜೆಗಳು ಆಳವಾಗಿ ಮೂಡುತಿರಲು
ಏಳಲು ಕಸುವಿಲ್ಲ ಪಾದಗಳ ಭಾರವು ಹಿಮ್ಮೇಳದಿ ಬಿಡದಿರಲು

ಮಡಿ ಮೈಲಿಗೆಯ ದೇಹಕ್ಕೆ ರತಿಶೃಂಗಾರದ ಕುಸುಮವೇತಕೆ
ಹಾದಿಬೀದಿಯ ಹೊಲಸು ಒಳಗಿನಿಂದ ನಾರುತಿರಲು
ಇಟ್ಟಹೆಜ್ಜೆಯ ಪಯಣದಲಿ ಹಿರಿದಿಲ್ಲ ಕಿರಿದಿಲ್ಲ
ಚಿತ್ತ ಬಾಳುವೆಯ ಚೆಲುವಿನಲ್ಲಿ ಭರವಸೆಯು ಬೆಳಕಾಗಿರಲು

ಬಾಡದ ಹೂವನು ಅರಸುತಿದೆ ದುಂಬಿಯು ಭುವಿಯನುದ್ದಕ್ಕೂ
ಒಳಗಿರುವ ನೆತ್ತರಿನ ರುಚಿಯ ಹಂಬಲದ ಕಾರಣವೋ
ಕೊರೆದು ಬೀಸುವ ಸುಳಿಗಾಳಿಯು ಹೊತ್ತು ತಂದಿಹ ಮಾತುಗಳಲಿ
ನನ್ನ ನೆರಳು ನನ್ನನ್ನೆ ಕೊಲ್ಲಲು ಬೆನ್ನೆಟ್ಟುತ್ತಿದೆ ಹಸಿವಿಗೆ ಭಂಗ ತರದಂತೆ

ಕಾಣದ ಗುರಿಯ ಬೆನ್ನೆತ್ತಿ ಓಡುವ ಮೃಗದಂತೆ
ಹೆಣ್ಣೊಡಲಿನ ಗರ್ಭವು ವೀರ್ಯವ ಅಪ್ಪಿ ಕುಳಿತಂತೆ
ಹೆಬ್ಬಂಡೆಯ ಒಡೆದು ನೀರು ಕುಡಿದವಗೆ ಎಲ್ಲಿದೆ ಸಾವಿನ ಭಯ
ನರಸಿಂಹನಿಂದ ಹೊಟ್ಟೆ ಬಗಿಸಿಕೊಂಡ ಹಿರಣ್ಯಕಶಿಪು ಒಳಗಿರಲು

ದೂರದ ನದಿಬಯಲಲ್ಲಿ ಯಾವುದೋ ಬೆಂಕಿಯು ಉರಿಯುತಿಹುದು
ಶವವಾಹಕರು ನನಗಾಗಿ ಕಾಯುತಿಹರು ಈ ದೇಹ ಸುಡಲೆಂದು
ಜೀವನ ಚಕ್ರವು ಸುತ್ತುತ್ತಿದೆ ಇರಲಿ ಮತ್ತೆ ನಿನ್ನೊಂದಿಗೆ ಸೇರುವೆ
ಸುಟ್ಟ ಬೂದಿ ಮಣ್ಣಸೇರಿ ನಿನ್ನ ಪಾದವ ಚುಂಬಿಸುವ ಕ್ಷಣಕೆ

ಪ್ರಕೃತಿಮಾಯೆ

ನಗು ಒಳಗಿದೆ
ನೀ ಕಾಣಬೇಕಷ್ಟೇ!
ನಿನ್ನ ಒಳಗಣ್ಣನು ತೆರೆದು
ನನ್ನಂತರಂಗವನ್ನು ನೀ ನೋಡಬೇಕಷ್ಟೇ!
ಬಯಸಿದ್ದು ಬೆಟ್ಟದ್ದಷ್ಟು
ದಕ್ಕಿದ್ದು ಹಿಡಿಯಷ್ಟು
ಆದರೂ ನಾವಿಬ್ಬರೂ ಸಂಧಿಸಬೇಕಾದ
ದಾರಿ ಯಾಕೋ ಕಾಣುತ್ತಲೇ ಇಲ್ಲ.

ಎಷ್ಟು ವರ್ಷಗಳ ಅಂತರ
ನಮ್ಮಿಬ್ಬರ ಮಾತು-ಮೌನದ ನಡುವೆ
ಕಟ್ಟಿಕೊಂಡ ಕೋಟೆಗಳು ಒಳಗೊಳಗೆ
ಪೈಪೋಟಿ ಒಮ್ಮೊಮ್ಮೆ
ಹೋರಾಟವೂ ನಿರಂತರ…
ಒಳಗಿನ ಕತ್ತಲು ಕವಿಯುವವರೆಗೂ
ನಿನ್ನ ಕೋಟೆಯಾಚೆಗಿನ ಮೃದು ಹೃದಯ
ನನಗೆ ಕಾಣಲೇ ಇಲ್ಲ.
ಅದು ನಿನಗೂ ಅನಿಸಿರಬೇಕಲ್ಲವೇ?

ಮನಸು ಈಗ ಹಂಬಲಿಸುತ್ತಿದೆ
ನಿನ್ನ ಕೋಟೆಯ ಬಿಗಿದಪ್ಪಲು
ಸುಂದರ ವದನ; ಸ್ನಿಗ್ಧ ನಗು
ಹೊರಗಿನ ಸೌಂದರ್ಯವು ರುಚಿಸುತ್ತಿಲ್ಲವೇಕೆ
ಈಗ ನನಗೆ?
ಮಾತು-ಮನಸು-ಹೃದಯಗಳ ಸಾಮ್ಯತೆ
ಯಾಕೋ ಕಡಿಮೆಯಾದಂತಿದೆ
ಒಂದಕ್ಕೊಂದು ಸಂಬಂಧವಿಲ್ಲ; ಹೂರಣವಿಲ್ಲ
ಮಾತಿಲ್ಲ-ಕತೆಯಿಲ್ಲ; ಲೆಕ್ಕವಿಲ್ಲ-ಬರಹವಿಲ್ಲ.
ಬದುಕಿನ ವಿಸ್ತಾರದ ಹಮ್ಮು-ಬಿಮ್ಮು
ಕೆರೆಕೋಡಿಯಂತೆ ಹರಿದು ಉಕ್ಕಿದರೂ
ಅರಿವಿಲ್ಲದ ಮಾಯೆಯ ಸಂಕೋಲೆ
ಸುತ್ತುವರಿದು ಬೆಸೆಯಲು ಬಿಡುತ್ತಿಲ್ಲವಲ್ಲ
ನನಗೂ-ನಿನಗೂ!

ಈ ತರ್ಕದ ಅಂತಿಮ ಸತ್ಯ ಹೊರಬಿದ್ದಿದೆ
ಗಂಡಿಗೆ ಹೆಣ್ಣು ಮಾಯೆ
ಹೆಣ್ಣಿಗೆ ಗಂಡು ಮಾಯೆ
ಹೆಣ್ಣು-ಗಂಡಿಗೆ ಪ್ರಕೃತಿ ಮಾಯೆ
ನಮ್ಮಿಬ್ಬರ ಹೃದಯದಲಿ ಕಾವ್ಯ ಹುಟ್ಟಲು
ಇನ್ನೇನು ಬೇಕು?
ನನ್ನ ಕಾವ್ಯ ಬಯಲಾಗಿದೆ
ನಿನ್ನದು ಇನ್ನೂ ಬಾಕಿಯಿದೆ
ಓದುವ ಕಾತುರವಂತೂ ಹಾಗೆ ಇದೆ!?

 

ಶ್ರೀಧರ ಬನವಾಸಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯವರು.
ಮೆಕ್ಯಾನಿಕಲ್ ಎಂಜಿನಿಯರಿಂಗ್, ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್‍ ನಲ್ಲಿ ಅಧ್ಯಯನ ಮಾಡಿದ್ದಾರೆ.
ಸದ್ಯ `ವೆಸ್ತಾಕ್ರಾಫ್ಟ್’ ಎಂಬ ಸಂಸ್ಥೆಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
`ಅಮ್ಮನ ಆಟೋಗ್ರಾಫ್’, `ದೇವರ ಜೋಳಿಗೆ’, `ಬ್ರಿಟಿಷ್ ಬಂಗ್ಲೆ’, `ಬೇರು’ (ಕಾದಂಬರಿ), ತಿಗರಿಯ ಹೂಗಳು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.
ಇವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ `ಯುವ ಪುರಸ್ಕಾರ’, ಕರ್ನಾಟಕ ಸಾಹಿತ್ಯ ಅಕಾಡೆಮಿಯ `ಚದುರಂಗ’ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ