‘ಹಳ್ಳ ಬಂತು ಹಳ್ಳ’ ಕೃತಿ ಬಂದಾಗ ಅವರ ವಿದ್ವತ್ತು ಓದುಗರಿಗೆ ಪರಿಚಯವಾಯ್ತು. ಶುದ್ಧ ಹಾಸ್ಯ ಸೃಷ್ಟಿಸುವ ಶಕ್ತಿ ಇರುವವರಿಗೆ ಬದುಕನ್ನು ಗಾಢವಾಗಿ ನೋಡುವ ಶಕ್ತಿಯೂ ಇರುತ್ತದೆ ಎಂಬುದು ಈ ಕೃತಿ ನಿರೂಪಿಸಿತ್ತು. ಯಾವುದೇ ಅನುಮಾನವಿಲ್ಲದೆ ಈ ಕಾದಂಬರಿ ಕನ್ನಡ ಸಾಹಿತ್ಯಲೋಕದ ಅಪರೂಪದ ಕೃತಿ. ಅದು ಬಿಡುಗಡೆಯಾದಾಗ ನಾನು ಸಂಭ್ರಮ ಪಟ್ಟು ಅದರ ಕುರಿತು ವಿ.ಕ. ದಲ್ಲಿ ವಿಮರ್ಶೆ ಬರೆದಿದ್ದೆ. ಆ ವಿಮರ್ಶೆಯಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರಲಿ ಎಂದು ಆಶಿಸಿದ್ದೆ. ಅಂತೆಯೇ ಅವರಿಗೆ ಆ ಪ್ರಶಸ್ತಿ ಅನಂತರದ ವರ್ಷ ಬಂದಿತು.
ಇಂದು ಬೆಳಗ್ಗಿನ ಜಾವ ತೀರಿಕೊಂಡ ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯರ ಕುರಿತು ಕಥೆಗಾರ ವಸುಧೇಂದ್ರ ಬರಹ

ಈ ದಿನ ಬೆಳಗಿನ ಜಾವ 4:30 ಕ್ಕೆ ಹಿರಿಯ ಲೇಖಕರಾದ ಶ್ರೀನಿವಾಸ ವೈದ್ಯರು ತೀರಿಕೊಂಡರೆಂಬ ವಿಷಯ ತಿಳಿದು ದುಃಖವಾಯ್ತು. ಧಾರವಾಡ ಸಾಹಿತ್ಯ ವಲಯದ ಪ್ರತಿರೂಪದಂತಿದ್ದ ಶ್ರೀನಿವಾಸ ವೈದ್ಯರ ಬರವಣಿಗೆ ಅಪರೂಪವಾದದ್ದು. ಅವರ ‘ಮನಸುಖರಾಯನ ಮನಸು’ ಕೃತಿಯ ಕಾಲದಿಂದಲೂ ಅವರ ಪರಿಚಯ ನನಗಿತ್ತು. ಇತ್ತೀಚೆಗೆ ಈ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಛಂದ ಪುಸ್ತಕದ ಕೃತಿಗಳನ್ನು ಅವರಿಗೆ ತಪ್ಪದೆ ಗೌರವ ಪ್ರತಿಯಾಗಿ ಕಳುಹಿಸುತ್ತಿದ್ದೆ. ಅವರ ಜೊತೆಯಲ್ಲಿ ಅವರ ಪತ್ನಿಯೂ ಅತ್ಯಂತ ಶ್ರದ್ಧೆಯಿಂದ ಆ ಕೃತಿಗಳನ್ನು ಓದಿ ಅಭಿಪ್ರಾಯ ತಿಳಿಸುವುದು ನನಗೆ ಸಂತೋಷ ತರುತ್ತಿತ್ತು.

ಆರಂಭದಲ್ಲಿ ಸಾಹಿತ್ಯವಲಯವು ಅವರನ್ನು ಹಾಸ್ಯಲೇಖಕ ಎಂದೇ ಭಾವಿಸಿತ್ತು. ‘ತಲೆಗೊಂದು ತರತರ’ ಮತ್ತು ‘ರುಚಿಗೆ ಹುಳಿಯೊಗರು’ ಕೂಡಾ ಹಾಸ್ಯ ಲೇಖನಗಳ ಸಂಗ್ರಹವಾಗಿವೆ. ಅವರೂ ಶುರುವಿನಲ್ಲಿ ತಮ್ಮನ್ನು ‘ಹಾಸ್ಯ ಲೇಖಕ’ ಎಂದು ಅಂದುಕೊಂಡಿದ್ದರು ಎಂಬುದಕ್ಕೆ ‘ಮನಸುಖರಾಯ’ ಎಂಬ ಪದದ ಬಳಕೆಯಾಗಿದೆ ಅನ್ನಿಸುತ್ತೆ. ಆದರೆ ಆ ಪುಸ್ತಕದಲ್ಲಿಯೇ ಅತ್ಯಂತ ಗಂಭೀರ ಸಂಗತಿಗಳು ವ್ಯಕ್ತವಾಗಿದ್ದವು. ಹಾಸ್ಯದ ಮುಸುಕಿನಲ್ಲಿ ಅಡಗಿದ ಸಾಕಷ್ಟು ನೋವು, ವಿಷಾದಗಳನ್ನು ಆ ಕಥಾರೂಪಿ ಪ್ರಬಂಧಗಳು ಹೇಳುತ್ತಿದ್ದವು.

 ‘ಹಳ್ಳ ಬಂತು ಹಳ್ಳ’ ಕೃತಿ ಬಂದಾಗ ಅವರ ವಿದ್ವತ್ತು ಓದುಗರಿಗೆ ಪರಿಚಯವಾಯ್ತು. ಶುದ್ಧ ಹಾಸ್ಯ ಸೃಷ್ಟಿಸುವ ಶಕ್ತಿ ಇರುವವರಿಗೆ ಬದುಕನ್ನು ಗಾಢವಾಗಿ ನೋಡುವ ಶಕ್ತಿಯೂ ಇರುತ್ತದೆ ಎಂಬುದು ಈ ಕೃತಿ ನಿರೂಪಿಸಿತ್ತು. ಯಾವುದೇ ಅನುಮಾನವಿಲ್ಲದೆ ಈ ಕಾದಂಬರಿ ಕನ್ನಡ ಸಾಹಿತ್ಯಲೋಕದ ಅಪರೂಪದ ಕೃತಿ. ಅದು ಬಿಡುಗಡೆಯಾದಾಗ ನಾನು ಸಂಭ್ರಮ ಪಟ್ಟು ಅದರ ಕುರಿತು ವಿ.ಕ. ದಲ್ಲಿ ವಿಮರ್ಶೆ ಬರೆದಿದ್ದೆ. ಆ ವಿಮರ್ಶೆಯಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರಲಿ ಎಂದು ಆಶಿಸಿದ್ದೆ. ಅಂತೆಯೇ ಅವರಿಗೆ ಆ ಪ್ರಶಸ್ತಿ ಅನಂತರದ ವರ್ಷ ಬಂದಿತು.

ಅನಂತರ ಅವರು ಮಾರ್ಕ್ವೆಜ್ ಕಾದಂಬರಿಯೊಂದನ್ನು ಅನುವಾದಿಸಿ, ನನಗೆ ನಾಲ್ಕು ಮಾತುಗಳ ಬೆನ್ನುಡಿ ಬರೆಯಲು ಕೇಳಿಕೊಂಡಿದ್ದರು. ಅವರು ಸಾಹಿತ್ಯ ಪ್ರೀತಿ ದೊಡ್ಡದಿತ್ತು. ಮುಂದೆ ತಮ್ಮ ವೃತ್ತಿ ಬದುಕಿನ ಖಾಸಗಿ ಸಂಗತಿಗಳನ್ನು ಒಳಗೊಂಡ ‘ಇನ್ನೊಂದು ಸಂತೆ’ ಎಂಬ ಕೃತಿಯನ್ನೂ ಬರೆದರು. ಭಾರತದ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳ ಬೆಳವಣಿಗೆಯ ದಟ್ಟ ವಿವರಗಳನ್ನು ನೀಡುವ ಈ ಕೃತಿಯೂ ನನಗೆ ಇಷ್ಟವಾಗಿತ್ತು. ‘ದಯವಿಟ್ಟು ನೀವು ಮತ್ತೊಂದು ಕಾದಂಬರಿ ಬರೆಯಿರಿ’ ಎಂದು ಸಿಕ್ಕಾಗಲೆಲ್ಲಾ ಕೇಳಿಕೊಳ್ಳುತ್ತಿದ್ದೆ. ‘ಕಾದಂಬರಿ ಬರೀ ಬೇಕು ಅಂತ ಆಸೆ. ಆದರೆ ಆಗ್ತಾ ಇಲ್ಲ. ಯಾರಿಗೂ ಮೊದಲ ಕಾದಂಬರಿಗೆ ದೊಡ್ಡ ಪ್ರಶಸ್ತಿ ಬರಬಾರದು ನೋಡ್ರಿ. ವಿಪರೀತ ಒತ್ತಡಕ್ಕೆ ಒಳಗಾಗಿ ಬಿಡ್ತೀವಿ’ ಎಂದು ನನ್ನ ಮುಂದೆ ಒಮ್ಮೆ ಬೇಸರದಿಂದ ಹೇಳಿಕೊಂಡಿದ್ದರು.

ರಂಗಶಂಕರದಲ್ಲಿ ಯಾವುದೇ ಒಳ್ಳೆಯ ನಾಟಕವಾದರೂ ಪತ್ನಿ ಸಮೇತ ಅವರು ಬರುತ್ತಿದ್ದರು. ರಂಗಶಂಕರದ 24ನೇ ಮೇನ್ ರಸ್ತೆ ದಾಟಿದರೆ ಅವರ ಮನೆಯಿತ್ತು. ‘ಶ್ರದ್ಧಾ’ ಕತೆಯಲ್ಲಿ ಬರುವ ಅವರ ತಂದೆಯಂತೆಯೇ ಅವರಿಗೂ ಶ್ರೀಮದ್‌ ಗಾಂಭೀರ್ಯದ ವ್ಯಂಗ್ಯದ ಭಾಷೆ ಒಲಿದಿತ್ತು. ಅದನ್ನು ಬರವಣಿಗೆಯಲ್ಲೂ, ಹರಟೆಯಲ್ಲೂ ಬಳಸುತ್ತಲೇ ಇದ್ದರು.

‘ನನಗೆ ಎಡ-ಬಲ ಪಂಗಡ ಅಂದ್ರೆ ಗೊತ್ತಿಲ್ರಪ್ಪಾ… ಒಳ್ಳೆ ಸಾಹಿತ್ಯ- ಕೆಟ್ಟ ಸಾಹಿತ್ಯ ಮಾತ್ರ ಗೊತ್ತಾಗ್ತದೆ’ ಎಂದು ನಗುತ್ತಲೇ ಹೇಳುತ್ತಿದ್ದರು. ಕ್ಲಿಷ್ಟದ ಭಾಷೆಯನ್ನು ಬಳಸುವುದರ ಬಗ್ಗೆಯೂ ಅವರಿಗೆ ತಕರಾರಿತ್ತು. ‘ಈ ಇತ್ಯಾತ್ಮಕ ನೇತ್ಯಾತ್ಮಕ ಅಂತ ಮಾತು ಶುರು ಮಾಡಿದ್ರೆ, ಕನ್ನಡ ಅಂತ್ಲೇ ಅನ್ನಿಸಂಗಿಲ್ಲ ತೊಗೋರೀ…’ ಎಂದು ನಕ್ಕು ಬಿಡುತ್ತಿದ್ದರು.

‘ದೇಶ-ಕಾಲ’ ಸಾಹಿತ್ಯ ಸಂಚಿಕೆ ಶುರುವಾದ ಮೇಲೆ ಅವರು ಕತೆಗಳನ್ನು ಗಂಭೀರವಾಗಿ ಬರೆಯತೊಡಗಿದರು. ‘ರುದ್ರಪ್ರಯಾಗ’ (?) ಮತ್ತು ‘ಕಪ್ಪೆ ನುಂಗಿದ ಹುಡುಗ’ ಅವರ ಮಹತ್ವದ ಕಥಾಸಂಕಲನಗಳು. ಎರಡೂ ಕನ್ನಡದ ಅಪರೂಪದ ಕಥಾಸಂಕಲನಗಳಾಗಿವೆ.

ತಮ್ಮ ಇಳಿ ವಯಸ್ಸಿನಲ್ಲಿಯೂ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಉತ್ಸಾಹ ಅವರಲ್ಲಿತ್ತು. ಅವರ ಮನೆಯಲ್ಲಿಯೇ ಒಮ್ಮೆ ಓಎಲ್‌ಎನ್ ಸಾರ್ ಅವರು ಅಲ್ಲಮಪ್ರಭು ಅವರ ವಚನಗಳ ಬಗ್ಗೆ ಸುಮಾರು ಎರಡು ತಾಸು ಮಾತಾಡಿದ್ದರು. ಸಾಹಿತ್ಯದ ಹರಟೆ ಬಹಳ ಮುಖ್ಯ ಎಂದು ನಂಬಿದ್ದ ಅವರು ಅಂತಹ ಕೆಲವು ಕಾರ್ಯಕ್ರಮಗಳನ್ನೂ ಆಯೋಜಿಸಿದ್ದರು.

ಇಂದಿನ ಅವರ ಅಗಲಿಕೆ ಮನಸ್ಸಿಗೆ ಅತೀವ ನೋವನ್ನು ತಂದಿದೆ. ಅಗಲಿದ ಜೀವಕ್ಕೆ ಶ್ರದ್ಧಾಂಜಲಿಗಳನ್ನು ಸಲ್ಲಿಸುವೆ.