ಈಗ ಒಂದ ಎರಡ ವರ್ಷದಿಂದ ನಮ್ಮನಿ ಬಾಜು ಇಬ್ಬರ ಅಗದೀ ವಯಸ್ಸಾದ ಗಂಡಾ ಹೆಂಡ್ತಿ ಬಂದಾರ. ಹಂಗ ಅದ ಅವರದ ಸ್ವಂತ ಮನಿ, ಇಷ್ಟ ವರ್ಷ ಬೆಂಗಳೂರಾಗ ಮಗಾ ಸೊಸಿ ಜೊತಿ ಇದ್ದರು ಹಿಂಗಾಗಿ ಹುಬ್ಬಳ್ಳಿ ಮನಿ ಭಾಡಗಿ ಕೊಟ್ಟಿದ್ದರು. ಎರಡ ವರ್ಷದ ಹಿಂದ ಮಗಾ ’ನಾ ಲಂಡನ್ನಿಗೆ ಶಿಫ್ಟ ಆಗ್ತೇನಿ, ಐದ ವರ್ಷದ ಪ್ರೋಜೆಕ್ಟ ಅದ’ ಅಂತ ಹೇಳಿ ಹೆಂಡ್ತಿ ಮಕ್ಕಳನ್ನ ಕಟಗೊಂಡ ಲಂಡನ್ನಿಗೆ ಹೋದ ಮ್ಯಾಲೆ ಇವರಿಗೆ ಬೆಂಗಳೂರ ಒಲ್ಲೆ ಅನಸ್ತ. ಇತ್ತಲಾಗ ಮಗಳು ಅಳಿಯಾನು ಆಸ್ಟ್ರೇಲಿಯಾದಾಗ ಸೆಟ್ಲ್ ಆಗಿ ಬಿಟ್ಟಿದ್ದರು. ಅದರಾಗ ಮೊದ್ಲ ವಯಸ್ಸಾದವರು, ಬೆಂಗಳೂರಂಥಾ ಊರಾಗ ಇಬ್ಬರ ಇರೋದ ರಿಸ್ಕ, ಆವಾಗ ಬೆಂಗಳೂರಾಗ ಬ್ಯಾರೆ ವಯಸ್ಸಾದ ಗಂಡಾ ಹೆಂಡತಿ ಇಬ್ಬರ ಇದ್ದ ಮನಿಗೆ ಕಳ್ಳರ ನುಗ್ಗಿ ಅವರನ ಕೊಂದ ಕಳವು ಮಾಡ್ಕೊಂಡ ಹೋಗೊದ ಭಾಳ ನಡದಿತ್ತ. ಹಿಂಗಾಗಿ ಇವರ ಹೆದರಿ ಎಲ್ಲಿದ ಬಿಡ ಸುಮ್ಮನ ನಮ್ಮ ಊರಿಗೆ ಹೋಗಿ ಆರಾಮ ಸಾಯೋತನಕ ಇರೋಣ ಅಂತ ವಾಪಸ ಹುಬ್ಬಳ್ಳಿಗೆ ಬಂದರು.

ಹಂಗ ಆ ಅಜ್ಜಾಗ ಏನಿಲ್ಲಾಂದ್ರು ಒಂದ ಎಂಬತ್ತ ಎಂಬತ್ಯಾರಡ ವಯಸ್ಸಿರಬೇಕು ಅಜ್ಜಿಗೆ ಒಂದ ಎಪ್ಪತ್ತೆಂಟ ವಯಸ್ಸ, ಇಬ್ಬರದು ಭಾರಿ ಹೇಳಿ ಮಾಡಸಿದ ಜೋಡಿ. ಅರವತ್ತಕ್ಕ ಅರವು ಮರವು ಅಂತಾರ ಇವರದಂತು ಎಂಬತ್ತರ ಸಂಸಾರ ಕೇಳ್ತಿರೇನ ಅಗದಿ ಭಾರಿ ನೋಡೊ ಹಂಗ ಇರತದ ಇವರ ಸಂಸಾರ. ಅಜ್ಜಾಗ ಕಿವಿ ಅಷ್ಟ ಸರಿ ಕೇಳಸಂಗಿಲ್ಲಾ ಅಜ್ಜಿಗೆ ಕಣ್ಣ ಸ್ವಲ್ಪ ಮಬ್ಬ ಆಗ್ಯಾವ. ಹಂಗ ಇಬ್ಬರಿಗೂ ನೆನಪಿನ ಶಕ್ತಿ ಅಷ್ಟಕ್ಕ ಅಷ್ಟ. ಇಬ್ಬರ ಬಾಯಾಗು ಹಲ್ ಸೆಟ್ ಇದ್ದರು ಮಾತಿಗೆ ಏನ ಕಡಿಮೆ ಇರಲಿಲ್ಲಾ. ಇನ್ನ ಇಬ್ಬರದು ಮಣಕಾಲ ಹಿಡದಿಲ್ಲಾ, ಶುಗರ ಅಂತು ಅವರ ಮನೆತನದಾಗ ಇಲ್ಲಂತ. ಒಟ್ಟ ಇಬ್ಬರು ಅಜ್ಜಾ-ಅಜ್ಜಿ ಕೂಡಿ ಆರಾಮ ಸಂಸಾರ ಮಾಡ್ಕೋತ ಹೊಂಟಾರ. ಏನರ ತಮ್ಮ ಕೈಲೆ ಆಗಲಾರದ್ದ ಕೆಲಸ ಇತ್ತಂದರ ನನಗ ನನ್ನ ಹೆಂಡತಿಗೆ ಹೇಳ್ತಿರ್ತಾರ. ನಾ ಮರತರು ನನ್ನ ಹೆಂಡತಿ ಅವರ ಹೇಳಿದ್ದ ಕೆಲಸ ಅಗದಿ ತಪ್ಪದ ಮಾಡತಿರತಾಳ.

ಆ ಅಜ್ಜಿಗೆ ನಮ್ಮವ್ವ ಖಾಸ ಫ್ರೇಂಡ್. ದಿನಾ ಇಬ್ಬರೂ ಕೂಡಿ ಒಂದ ತಾಸ ಹರಟಿ ಹೊಡದಾಗ ಸಮಾಧಾನ. ನಮ್ಮವ್ವಗ ಮಾತ ಕೇಳಲಾರದ ಗಂಡನ ಬಗ್ಗೆ, ಮುಗ್ಗಲಗೇಡಿ ಮಗನ ಬಗ್ಗೆ, ಸೊಸಿ ಛಾಡಾ, ಮೊಮ್ಮಕ್ಕಳ ಮಂಡತನಾ ಅಂತ ಹೇಳಕೊಳ್ಳಿಕ್ಕೆ ಆಡಕೊಳ್ಳಿಕ್ಕೆ ಸಿಕ್ಕಾ ಪಟ್ಟೆ ವಿಷಯರ ಅವ, ಪಾಪ ಆ ಅಜ್ಜಿಗೆ ಅವರ ಯಾರು ಇದ್ದು ಇಲ್ಲಾರದಂಗ ಹಿಂಗಾಗಿ ತಿರಗಿ ಮುರಗಿ ಗಂಡನ ಛಾಡಾ ಹೇಳಕೋತ ಹೊತ್ತ ಕಳಿತಾಳ. ಅಲ್ಲಾ ಹಂಗ ಅಜ್ಜಿ ಅರವತ್ತ ವರ್ಷದಿಂದ ಗಂಡನ ಬಗ್ಗೆ ಆಡಕೊಂಡರು ಮುಗಿವಲ್ತು ಅಂದರ ಆ ಗಂಡನ ಮಹಾತ್ಮೆ ಎಷ್ಟ ಇರಬೇಕ ವಿಚಾರ ಮಾಡ್ರಿ.

ಇನ್ನ ಅಜ್ಜಾನ ಬಗ್ಗೆ ಹೇಳಬೇಕಂದರ ನನ್ನ ಪ್ರಕಾರ ಅಂವಾ ಅಂತೂ ದೇವರಂತಾ ಮನಷ್ಯಾ. ತಾ ಆತು ತನ್ನ ಮನಿ ಆತು, ಊರ ಉಸಾಬರಿ ಇಲ್ಲಾ, ಮನ್ಯಾಗ ಅವನ ಉಸಾಬರಿ ನಡಿಯಂಗಿಲ್ಲಾ. ಒಬ್ಬರಿಗೂ ತುಟಿ ಬಿಚ್ಚಿ ಒಂದ ಮಾತಾಡಿದ ಮನಷ್ಯಾ ಅಲ್ಲಾ. ದಿವಸಾ ಐದ ಗಂಟೇಕ್ಕ ಏಳೋದು ಒಂದ ತಾಸ ವಾಕಿಂಗ್. ವಾಕಿಂಗನಿಂದ ಬರತ ಅರ್ಧಾ ಲಿಟರ್ ಹಾಲಿನ ಪಾಕೇಟ ಹಿಡಕೊಂಡ ಮನಿಗೆ ಬರೋದಕ್ಕು ಅಜ್ಜಿ ಎದ್ದ ಸಾರಿಸಿ ರಂಗೋಲಿ ಹಾಕತಿರ್ತಾಳ. ಮುಂದ ತಾವ ಒಲಿ ಮುಂದ ನಿಂತ ಹಾಲ ಕಾಯಿಸಿ ಎರಡ ವಾಟಗಾ ಚಹಾ ಮಾಡಿ ಹೆಂಡ್ತಿನ್ನ ಕರದ ಕೊಡೊರು. ಮುಂದ ಒಂದ ತಾಸ ಪೇಪರ ಓದೋದು.

ಆ ಪೇಪರ ಹಾಕೊವನ ಜೊತಿಗೆ ಇವರದ ವಾರದಾಗ ಮೂರ ದಿವಸ ಜಗಳಾ. ಇವರು ತಿಂಗಳದಾಗ ಮೂರ ಸರತೆ ಪೇಪರ ಚೇಂಜ ಮಾಡೋರು ಒಂದ ವಾರ ಸಂಯುಕ್ತ ಕರ್ನಾಟಕ, ಒಂದ ವಾರ ವಿಜಯ ಕರ್ನಾಟಕ ಒಂದ ವಾರ ವಿಜಯ ವಾಣಿ, ಅದನ್ನ ಹಾಕಿದರ ಅದನ್ಯಾಕ ಹಾಕೀದಿ, ಇದನ್ನ ಹಾಕಿದರ ಇದನ್ಯಾಕ ಹಾಕಿದಿ ಅಂತ ಜಗಳ ಶುರು. ಇವರಿಗೆ ತಾವ ಯಾ ಪೇಪರ ಹೇಳಿದ್ದೆ ಅನ್ನೋದನ್ನ ತಾವ ಮರತ ಬಿಡೋರು. ಮ್ಯಾಲೆ ನಮ್ಮ ಓಣ್ಯಾಗ ಪೇಪರ ಹಾಕೋರ ಬ್ಯಾರೆ ಮೂರ ತಿಂಗಳಿಗೆ ಒಮ್ಮೆ ಚೇಂಜ್ ಆಗೋರ ಮತ್ತ ಅದ ಹಣೇಬರಹ.

ಪೂರ್ತಿ ಪೇಪರ ಓದಿ ಮುಗಿಸಿ ಲಾಸ್ಟಿಗೆ ನಿಧನ ವಾರ್ತೆ ಓದೋದ ಇವರ ದಿನದ್ದ ಚಟಾ. ಹಂಗ ತಮ್ಮ ಪೈಕಿ ಯಾರರ ಹಾನಗಲ್, ಸವಣೂರ, ತಿಳವಳ್ಳಿ, ಅಕ್ಕಿ ಆಲೂರ ಕಡೇದವರ ಹೆಸರ ಅವ ಏನ ನೋಡಿ ಹೆಂಡ್ತಿಗೆ ಒದರಿ
“ಏ, ಆ ಶಾನಬೋಗರ ನಾಣಿ ಹೋದನಂತ ನೋಡ” ಅಂತ ಹೇಳೊರು. ಅದಕ್ಕ ಅಜ್ಜಿ “ಅಯ್ಯ ಖೋಡಿ ಓಯ್ದಂದ.. ನನ್ನಕಿಂತ ಸಣ್ಣದ. ಈಗ ದಣೇನ ಎಪ್ಪತ್ತೈದ ದಾಟಿರಬೇಕ, ಅದಕ್ಕೇನಾಗಿತ್ತ ಧಾಡಿ” ಅಂತ ಅಕಿ ಅನ್ನೋಕಿ.  ಹಿಂಗ ಒಮ್ಮೆ ನಿಧನ ವಾರ್ತೆ ಓದಿದ ಮ್ಯಾಲೆ ಇವರ ಸ್ನಾನಕ್ಕ ಹೋಗೊರು. ಸ್ನಾನ ಆದ ಮ್ಯಾಲೆ ಒಂದ ತಾಸ ದೇವರ ಪೂಜಿ. ಅಷ್ಟರಾಗ ಅಜ್ಜಿ ಒಂದಿಬ್ಬರ ಮನಿ ಕಂಪೌಂಡ ನುಗ್ಗಿ ಆ ಮನಿ ಮಂದಿಗೆ ಗೊತ್ತಾಗಲಾರದಂಗ ಹೂ ಹರಕೊಂಡ ಬಂದಿರ್ತಾಳ. ಅದ ಹಿಂಗ ಆಗಿತ್ತಲ್ಲಾ ನಮ್ಮ ಲೈನನಾಗ ಯಾರದರ ಮನಿ ಗಿಡದಾಗ ನಾವ ಏಳೋದರಾಗ ಹೂ ಹೋಗಿದ್ವು ಅಂದರ ಅಜ್ಜಿನ ಒಯ್ದಾಳ ಅಂತ ಗ್ಯಾರಂಟೀ ಇರತಿತ್ತ.

ಇನ್ನ ಅಜ್ಜಾನ ಪೂಜಿ ಮುಗಿಯೊದಕ್ಕು ಅಜ್ಜಿ ಸ್ನಾನ ಮುಗಿಸಿ ಮಂಗಾಳರತಿ ತೊಗೊಳಿಕ್ಕೆ ರೆಡಿ ಆಗಿರ್ತಾಳ. ಅಷ್ಟರಾಗ ಕುಕ್ಕರ ಎರಡ ಸೀಟಿ ಹೊಡದಿರ್ತದ, ಹತ್ತ ಅನ್ನೋದರಾಗ ಊಟಾ ಮಾಡೇ ಬಿಡ್ತಾರ. “ಈಗ ಒಂದ್ಯಾರಡ ವರ್ಷ ಆತು ನಮ್ಮ ಮನೇಯವರ ಹಲ್ ಸೆಟ್ಟಿಗೆ ಭಕ್ಕರಿ ಚಪಾತಿ ಬರವಲ್ವು ಹಿಂಗಾಗಿ ಬರೇ ಅನ್ನನ ನಮ್ಮ ಮನ್ಯಾಗ” ಅಂತ ಅಜ್ಜಿ ಏನ ತನ್ನ ಹಲ್ಲಿನ ಸೆಟ್ ಕಬ್ಬಣದ ಅನ್ನೊರಗತೆ ಮಾತಾಡೋಕಿ. ಒಂದ ಮುಂಜಾನೆ ಹತ್ತುವರಿ ಹನ್ನೊಂದಕ್ಕ ಫ್ರೀ ಆದರು ಅಂದರ ಮುಗಿತು ಸಂಜಿ ಚಹಾ ತನಕ ಇಬ್ಬರಿಗೂ ಕೆಲಸಿಲ್ಲಾ ಬೊಗಸಿಲ್ಲಾ. ಅಜ್ಜಿ TVಮುಂದ ಅಜ್ಜಾ ಮನಿ ಮುಂದ ವರಾಂಡಾದಾಗ ಠಿಕಾಣಿ ಹೂಡಿ ಬಿಡ್ತಾರ. ಅಜ್ಜಗ ಕಿವಿ ಕೇಳಂಗಿಲ್ಲಾಂತ ಅಜ್ಜಿ ಅವನ ಜೊತಿ ಭಾಳ ಮಾತಡಲಿಕ್ಕೆ ಹೊಗಂಗಿಲ್ಲಾ. ಅಕಿಗೆ ಕಣ್ಣ ಕಾಣಂಗಿಲ್ಲ ಅದೇನ ತಲಿ tv ನೋಡ್ತಾಳೊ ಅಂತ ಅಜ್ಜ ಅನ್ನೋವಾ. ಅದರಾಗ ಅಕಿಗೆ ಯಾ ಸಿರಿಯಲ್ ಯಾ ಚಾನೆಲದಾಗ ಬರ್ತದ ನೆನಪ ಇರಂಗಿಲ್ಲಾ. ಹಿಂಗಾಗಿ ಗಂಡಗ ಕರದ 882 ಹಚ್ಚರಿ, 886 ಹಚ್ಚರಿ ಅಂತ ಜೀವಾ ತಿಂತಿರತಾಳ. ಅದರಾಗ ಒಂದಿಷ್ಟ ಸಿರಿಯಲ್ ದಿವಸಕ್ಕ ಎರೆಡೆರಡ ಸಲಾ ಬಂದರ ಎರಡೂ ಸರತೆನೂ ಅಷ್ಟ ಭಕ್ತಿಯಿಂದ ನೋಡ್ತಾಳ. ಪಾಪ ಹೊತ್ತ ಹೋಗಬೇಕಲಾ.

ಸಂಜಿ ಮುಂದ ಚಹಾ ಕುಡದ ಅಜ್ಜಾಂದ ಮತ್ತೊಂದ ರೌಂಡ ವಾಕಿಂಗ, ಅಜ್ಜಿದ ನಮ್ಮವ್ವನ ಜೊತಿ ಹರಟಿ ಕಾರ್ಯಕ್ರಮ ಶುರು. ದಿವಸಾ ಅಜ್ಜಗ ವಾಕಿಂಗ ಹೋಗಬೇಕಾರ ಅಜ್ಜಿ ಒಂದಿಲ್ಲಾ ಒಂದ ಸಾಮಾನ ತರಲಿಕ್ಕೆ ಹೇಳೊಕಿ, ಕಡಿಕೆ ಏನು ಇಲ್ಲಾಂದರ ಬಿ.ಪಿ, ಟಾನಿಕ್ ಗುಳಗೆರ ಇದ್ದ ಇರತದ. ಅದ ಹಿಂಗಾ ಆಗ್ತಿತ್ತ ಅಂದರ ಅಜ್ಜಿ ಹೇಳೊದ ಒಂದ ಸಾಮಾನ ಅಜ್ಜ ತರೋದ ಒಂದ ಸಾಮಾನ ಆಗತಿತ್ತ. ಅಜ್ಜಗ ಅಂಗಡಿ ಮಟಾ ಹೋಗೊದರಾಗ ಅಕಿ ಹೇಳಿದ್ದ ಮರತ ಬಿಡತಿತ್ತ. ಮತ್ತ ಆ ಸಾಮಾನ ವಾಪಸ ಕೊಟ್ಟ ಬ್ಯಾರೆ ತರೋರ. ಅವರೇನ ಮುದ್ದಾಮ್ ವಾಕಿಂಗ ಆಗ್ತದ ಅಂತನೋ ಇಲ್ಲಾ ಖರೇನ ಮರಿತಿದ್ದರೋ ಆ ದೇವರಿಗೆ ಗೊತ್ತ.

ಅಲ್ಲಾ ಹಂಗ ಅಜ್ಜಿನು ಅಕಿನ ಇದ್ದಳ ಬಿಡ್ರಿ. ಮ್ಯಾಲೆ ಟ್ಯಾಂಕಿಗೆ ನೀರ ಏರಸಲಿಕ್ಕೆ ಬಟನ್ ಶುರು ಮಾಡಿ ಅಕಿ ಟಿ.ವಿ. ಮುಂದ ಕೂತ ಬಿಡೋಕಿ, ಅದ ಮುಂದ ಟ್ಯಾಂಕ ತುಂಬಿ ಹರದರು ಇಬ್ಬರಿಗೂ ನೆನಪ ಇರಂಗಿಲ್ಲಾ, ಮತ್ತ ನಮ್ಮಂತಾವರ ಯಾರರ ಹೋಗಿ ಹೇಳಿದ ಮ್ಯಾಲೆ ಬಂದ ಮಾಡೋರು. ಹಂತಾದರಾಗ ಅಜ್ಜಿ ಮತ್ತ ಗಂಡಗ ಜೋರ ಮಾಡೋಕಿ
“ಏನ ಖಬರಗೇಡಿ ಇದ್ದೀರಿ, ನಿಮಗ ಹೇಳಿದ್ನೆ ಇಲ್ಲೊ, ಟ್ಯಾಂಕ ತುಂಬಿದ ಮ್ಯಾಲೆ ಬಂದ ಮಾಡ ಅಂತ ಹೇಳಿ, ಇಲ್ಲೇ ಪೇಪರ ಓದಕೋತ ಕೂತರಿ, ನೀರ ಬೀಳಲಿಕತ್ತಿದ್ದ ಕೇಳಸಂಗಿಲ್ಲಾ” ಅಂತ ಅವನ ಕಿವ್ಯಾಗ ಜೋರ ಒದರೊಕಿ. ಅಲ್ಲಾ ಪಾಪ ಅವರಿಗರ ಮೊದ್ಲ ಕಿವಿ ಕೇಳಸಂಗಿಲ್ಲಾ ಅದರಾಗ ನೆನಪಿನ ಶಕ್ತಿನೂ ಅಷ್ಟಕ್ಕ ಅಷ್ಟ.

ಇನ್ನ ಒಲಿ ಮ್ಯಾಲೆ ಹಾಲ ಕಾಸಲಿಕ್ಕೆ ಇಟ್ಟಾಗು ಹಂಗ ಅಜ್ಜಿ ಹಾಲ ಕಾಸಲಿಕ್ಕೆ ಇಟ್ಟ ಮರತ ಬಿಡೋಕಿ. ಮುಂದ ಅದನ್ನ ಗಂಡsನ ನೋಡಿ ಆರಿಸಿದರ ಆರಸಬೇಕು ಇಲ್ಲಾಂದರ ಇಲ್ಲಾ. ಕಡಿಕೆ ಒಂದ ಅರ್ಧಾ ತಾಸಿಗೆ ಅಜ್ಜನ
“ಯಾರದೋ ಮನ್ಯಾಗ ಹಾಲ ಹೊತ್ತಿದ ವಾಸನಿ ಬರಲಿಕತ್ತದ” ಅಂದಾಗ ಇಕಿಗೆ ನೆನಪಾಗೋದ
“ಅಯ್ಯ, ಹಣೇಬರಹ ಹಾಲ ಇಟ್ಟಿದ್ದೆ, ನೀವರ ನೆನಪ ಮಾಡಬಾರದೇನ” ಅನ್ನೋಕಿ. ಆ ಅಜ್ಜಂದ ಮೂಗ ಭಾರಿ ಚುರಕ ಇತ್ತ. ಅಂವಾ ಯಾರ ಮನ್ಯಾಗ ಏನ ಅಡಗಿ ಮಾಡ್ಯಾರ ಅನ್ನೋದ ಬರೇ ಹೊರಗ ರಸ್ತೇದಾಗ ಬರೋ ವಾಸನಿ ಮ್ಯಾಲೆ ಹೇಳತಿದ್ದಾ. ಅದರಾಗ ನನ್ನ ಹೆಂಡತಿ ಪುದಿನಾ ಪಲಾವ, ಟೊಮ್ಯಾಟೋ ಭಾಥ ಅಂತು ಕಣ್ಣ ಮುಚ್ಚಿ ಹೇಳ್ತಿದ್ದಾ. ಅಲ್ಲಾ ನನ್ನ ಹೆಂಡತಿ ಮಾಡಿದ್ದ ಪುದಿನಾ ಪಲಾವ್ ಬಾಯಗ ಹೆಂಗರ ಇರಲಿ ಆದರ ನಮ್ಮ ಇಡಿ ಓಣಿ ಘಮಾ ಘಮಾ ಅಂತಿರತದ.
ಹಂಗ ಅಜ್ಜಿದ ಮರವು ಭಾಳ ವಿಚಿತ್ರ ಇರತಿದ್ದವು.

“ನಿನ್ನೆ ಹೆಪ್ಪ ಹಾಕೋದ ಮರತ ಬಿಟ್ಟೆ ಹೆಪ್ಪಿಗೆ ಒಂದ ಚೂರ ಮೊಸರ ಕೊಡ್ವಾ..”
“ನಮ್ಮ ಮನೆಯವರ ಲಿಂಬೆ ಹಣ್ಣ ತರೊದ ಮರತ ಬಂದಾರ ಪಾನಕ್ಕಕ್ಕ ಒಂದ ಲಿಂಬೆ ಹಣ್ಣ ಕೊಡು…”
“ಅಯ್ಯ ಸುಡಗಾಡ, ನಿನ್ನೆ ನಳಾ ಬರತದ ಅಂತ ಲಕ್ಷನ ಇದ್ದಿದ್ದಿಲ್ಲವಾ, ಟ್ಯಾಂಕಿನ ನಳಾ ಚಾಲು ಮಾಡಿದ್ದಿಲ್ಲಾ, ಮನ್ಯಾಗ ಒಂದ ಹನಿ ನೀರ ಇಲ್ಲಾ, ಕುಡಿಲಿಕ್ಕೆ ಒಂದ ಕೊಡಾ ನೀರ ಕೊಡ್ವಾ”…. ಹಿಂಗ ಒಂದ ಎರಡ.
ಅಕಿ ಹಿಂಗ ಮಾಡೊದಕ್ಕು ಅಜ್ಜಾ “ಅಕಿ ಮರಿಲಾರದ್ದ ಅಂದರ ಗಂಡನ್ನ ಒಂದ ನೋಡ್ರಿ” ಅಂತ ಅನ್ನೋದಕ್ಕು ಭಾಳ ಕರೆಕ್ಟ ಅನಸತಿತ್ತ. ಆದರ ಅಜ್ಜಿಗೆ ಹಂಗ ಅಂದರ ಭಾಳ ಸಿಟ್ಟ ಬರತಿತ್ತ.
“ಅಯ್ಯ ಅವರೇನ ಭಾಳ ಶಾಣ್ಯಾರ ಇದ್ದಾರ ತೊಗೊ,ಎಲ್ಲೆ ಚಸ್ಮಾ ಇಡತಾರ ಅಲ್ಲೇ ಮರತ ಬಿಟ್ಟಿರತಾರ ಹಿಂಗಾಗಿ ಇರೋ ಎರಡ ಕಣ್ಣಿಗೆ ಮೂರ ಚಸಮಾ ಮಾಡಿಸ್ಯಾರ…

ಅದು ಹೋಗಲಿ ಇಬ್ಬರದು ಹಲ್ ಸೆಟ ತೊಳದ ಇಟ್ಟಾಗ ತಮ್ಮ ಹಲ್ ಸೆಟ ಯಾವದ ಅಂತ ಸಹಿತ ಅವರಿಗೆ ಗೊತ್ತ ಇರಂಗಿಲ್ಲಾ, ಮತ್ತ ನಾನ ತಂಬಾಕ ತಿಂದ ಹುಳಕ ಹತ್ತಿದ್ದ ಹಲ್ ಸೆಟ್ ನಿಂಬದು ಅಂತ ಹೇಳಿದಾಗ ಗೊತ್ತಾಗೊದು” ಅಂತ ಅಜ್ಜಿ ಹೇಳೋಕಿ.
“ಅಯ್ಯ, ಅಕಿ ಮಾತ ಏನ ಕೇಳ್ತೀರಿ, ಮೊನ್ನೆ ಭಾಂಡೆ ತಿಕ್ಕೋಕಿಗೆ ಮರತ ತನ್ನ ಹಲ್ ಸೆಟ್ ಸಹಿತ ಭಾಂಡಿ ಜೊತಿ ತಿಕ್ಕಲಿಕ್ಕೆ ಇಟ್ಟೋಕಿ ಅಕಿ” ಅಂತ ಅವರ ಅನ್ನೋದು. ದಿವಸಾ ಇಬ್ಬರದು ಹಿಂಗ ನಡದಿರತಿತ್ತ.
ಮೊನ್ನೆ ರವಿವಾರ ಸಂತಿಗೆ ಹೋಗಬೇಕಾರ ಅಜ್ಜಿ ನಾನು ಬರ್ತೇನಿ ನಾಡದ ನೂಲ ಹುಣ್ವಿಗೆ ಒಂದ ಸ್ವಲ್ಪ ಸಾಮಾನ ತರೋವ ಅವ ಅಂತ ಅಜ್ಜನ ಜೊತಿ ಸಂತಿಗೆ ಅಜ್ಜಿನೂ ಹೋದ್ಲು. ಅಜ್ಜಾ ಹತ್ತ ಕಡೆ ಕಾಯಿಪಲ್ಲೆ ಆರಿಸಿ, ಮೂಸಿ ಮೂಸಿ ನೋಡಿ, ಹತ್ತ ಸರತೆ ಜಿಕೇರಿ ಮಾಡಿ ತೊಗೊಳೊಂವಾ ಅಜ್ಜಿಗೆ ಅದ ಬಗಿ ಹರಿಯಂಗಿಲ್ಲಾ. ಅಜ್ಜ ಒಮ್ಮೆ ಸಂತಿಗೆ ಹೋದನಂದರ ತೊಗೊಳೊದ ಎರಡನೂರ ರೂಪಾಯಿದ್ದ ಕಾಯಿಪಲ್ಲೆ ಆದರೂ ಮಿನಿಮಮ್ ಎರಡತಾಸ ಮಾಡೊಂವಾ.
ಹಿಂಗ ಇವರ ಜೊತಿ ಹೊಂಟರ ಬೆಳಗ ಹರಿತದ ತಡಿ ಅಂತ ಹೆಂಡತಿ ನೀವ ಒಂದ ಸ್ವಲ್ಪ ಸಾಮಾನ ತೊಗೊಳ್ರಿ ನಾ ಒಂದ ಸ್ವಲ್ಪ ತೊಗೊತೇನಿ ಅಂತ ಇಬ್ಬರು ಡಿವೈಡ ಆಗಿ ಖರೀದಿಗೆ ಹೋದರು. ಮುಂದ ಇಬ್ಬರು ತಮ್ಮ ತಮ್ಮ ಲಿಸ್ಟ ಪ್ರಕಾರ ಸಾಮಾನ ಖರೀದಿ ಮಾಡ್ಕೋತ ಹೊಂಟ್ರು.

ಅಜ್ಜಾಂದ ಖರೀದಿ ಮುಗಿತು ಅಂವಾ ಸೀದಾ ಸಾಮಾನ ಭಾಳ ಆಗ್ಯಾವ ತಡಿ ಅಂತ ಪ್ರತಿವಾರದ ಗತೆ ಆಟೋ ಮಾಡ್ಕೊಂಡ ಮನಿಗೆ ಬಂದ ಬಿಟ್ಟಾ. ಮನಿಗೆ ಬಂದ ಕಾಯಿಪಲ್ಲೆ ಎಲ್ಲಾ ಸುರವಿ ಸ್ವಚ್ಛ ಮಾಡಿ ಫ್ರಿಡ್ಜ ಒಳಗ ಇಟ್ಟ ಒಂದ ಸ್ವಲ್ಪ ಅಡ್ಡಾದರ ಆತ ಅಂತ ಮಲ್ಕೊಂಡ ಬಿಟ್ಟಾ. ಮುಂದ ನಾಲ್ಕ ಗಂಟೆ ಸುಮಾರ ಎದ್ದ ಹಂಗರ ಹಾಲ ಬಿಸಿ ಮಾಡಿ ಚಹಾ ಮಾಡಿದರಾತು ಅಂತ ಹಾಲ ಕಾಯಸಲಿಕ್ಕೆ ಇಟ್ಟ ಅಜ್ಜಿನ್ನ ಎಬಿಸಿದರಾತು ಅಂತ ನೋಡಿದರ t.v. ಮುಂದ ಅಡ್ಡಾಗತಿದ್ದ ಅಜ್ಜಿ ಗಾಯಬ. ಅಜ್ಜಿ ಇದ್ದಿದ್ದೇಲಾ. ಹಂಗರ ಇಕಿ ಹರಟಿ ಹೊಡಿಲಿಕ್ಕೆ ಹೋಗಿರ ಬೇಕ ಬಿಡ ಅಂತ ತಾವ ಒಂದ ವಾಟಗಾ ಚಹಾ ಮಾಡ್ಕೊಂಡ ಕುಡದ ಕಟ್ಟಿಗೆ ಬಂದ ಕೂತರು. ಮುಂದ ಒಂದ ತಾಸ ಆದರು ಅಜ್ಜಿದ ಪತ್ತೇ ಇಲ್ಲಾ, ಕಡಿಕೆ ಸಂಜಿ ಮುಂದ ಅವರ ಮನಿ ಮುಂದ ವಾಕಿಂಗ ಹೊಂಟಿದ್ದ ನನ್ನ ಹೆಂಡತಿನ್ನ ನಿಲ್ಲಿಸಿ
“ನಮ್ಮ ಮುದಕಿ ನಿಮ್ಮ ಮನ್ಯಾಗ ಇದ್ದಾಳೇನ್ವಾ, ಅಕಿನ್ನ ಕಳಸ ಮನಿಗೆ ಮೂರ ಸಂಜಿ ಆತು ಹರಟಿ ಸಾಕ ಮಾಡ ಅಂತ ಹೇಳ” ಅಂತ ಹೇಳಿದ್ರು. ಅದಕ್ಕ ನನ್ನ ಹೆಂಡತಿ
“ಅಜ್ಜಿ ನಮ್ಮನೀಗೆ ಇವತ್ತ ಬಂದೇ ಇಲ್ಲಾ, ನೀವ ಮಧ್ಯಾಹ್ನ ಇಬ್ಬರು ಕೂಡೆ ಸಂತಿಗೆ ಹೋಗಿದ್ದರಲಾ” ಅಂತ ಹೇಳಿದಾಗ ಅವರಿಗೆ ಥಟಕ್ಕನ ನೆನಪಾತ, ಸಂತಿಗೆ ಹೆಂಡ್ತಿನ್ನ ಕರಕೊಂಡ ಹೋಗಿ ಅಲ್ಲೇ ಬಿಟ್ಟ ಬಂದೇನಿ ಅಂತ. ಅಲ್ಲಾ ಹಂಗ ಅಜ್ಜಾಂದ ನೆನಪಿನ ಶಕ್ತಿ ಅಷ್ಟಕ್ಕ ಅಷ್ಟ ಖರೆ ಅದರಾಗ ಅಜ್ಜಿ ಪ್ರತಿ ರವಿವಾರ ಸಂತಿಗೆ ಹೋಗೊಕಿ ಏನ ಅಲ್ಲಾ ಹಿಂಗಾಗಿ ಅಕಿನ್ನ ಸಂತ್ಯಾಗ ಮರತ ಬಂದಿದ್ದನ್ನ ಇವರ ಮರತ ಬಿಟ್ಟಿದ್ದರು. ಆ ಮಾತಿಗೆ ಆಗಲೇ ಮೂರ ತಾಸ ಆಗಲಿಕ್ಕೆ ಬಂದಿತ್ತ. ಪಾಪ, ಅಜ್ಜ ಗಾಬರಿ ಆಗಿ ನೀನು ಬಾರವಾ ತಂಗಿ ಅಂತ ನನ್ನ ಹೆಂಡ್ತಿ ಜೊತಿ ಮಾಡ್ಕೊಂಡ ವಾಪಸ ಸಂತಿಗೆ ಹುಡಕಲಿಕ್ಕೆ ಹೊಂಟರು.

ಇತ್ತಲಾಗ ಅಜ್ಜಿದ ಏನ ಕಥಿ ಆಗಿತ್ತಂದರ ಅಕಿ ಕುಡಿ ಬಾಳೆ ಎಲಿ ಹುಡ್ಕೋತ ಹೊಂಟಾಗ ಗಾಂಧಿನಗರ ಕಮಲಾಬಾಯಿ ಭೆಟ್ಟಿ ಆದರಂತ ಅವರ ಜೊತಿ ಒಂದ ಸ್ವಲ್ಪ ಮಾತಾಡಿ ಕಡಿಕೆ ಅವರ ಭಾಳ ದಿವಸದ ಮ್ಯಾಲೆ ಸಿಕ್ಕೀರಿ ಮನಿಗೆ ಬಂದ ಒಂದ ಕಪ್ ಚಹಾ ಕುಡದ ಹೋಗರಿ ಅಂತ ಕರದರಂತ ಸೀದಾ ಅವರ ಮನಿಗೆ ಹೋಗಿ ಚಹಾ ಕುಡದ ಒಂದ ತಾಸ ಹರಟಿ ಹೊಡದ ಅಲ್ಲೇ ಅರ್ಧಾ ತಾಸ ಅಡ್ಡಾಗಿ ಎದ್ದರಂತ. ಮುಂದ ಸಂಜಿ ಆತು ದೇವರ ಮುಂದ ದೀಪಾ ಹಚ್ಚಬೇಕು ಮನಿಗೆ ಹೋಗ್ತೇನಿ ಅಂತ ಎದ್ದಾಗ ಸಡನ್ ಆಗಿ
“ಅಯ್ಯ ನನ್ನ ಹಣೇಬಾರ, ನಾ ಸಂತಿಗೆ ನಮ್ಮ ಮನೆಯವರ ಜೊತಿ ಬಂದಿದ್ದೆ, ಅವರನ ಮರತ ನಿಮ್ಮ ಜೊತಿ ಹರಟಿ ಹೋಡ್ಕೊತ ಇತ್ತಲಾಗ ಬಂದ ಬಿಟ್ಟೇನಿ” ಅಂತ ಅಜ್ಜಿಗೆ ಆವಾಗ ನೆನಪಾತಂತ.

ಪಾಪ ನಮ್ಮ ಮನೇಯವರು ನನ್ನ ಎಲ್ಲೆಲ್ಲೆ ಹುಡಕ್ಯಾಡ್ಯಾರೋ ಏನೋ ಅಂತ ಅಲ್ಲಿಂದ ಮನಿ ಲ್ಯಾಂಡ ಲೈನಿಗೆ ಫೊನ ಹಚ್ಚಿದರಂತ. ಅಜ್ಜನ ಉದ್ದನಿ ಮೊಬೈಲ ನಂಬರ ಅಜ್ಜಿಗೆ ನೆನಪ ಇದ್ದಿದ್ದಿಲ್ಲಾ, ಇಲ್ಲೆ ನೋಡಿದರ ಹತ್ತ ರಿಂಗ ಆದರೂ ಮನ್ಯಾಗ ಯಾರ ಫೋನ ಎತ್ತವಲ್ಲರೂ. ಅಕಿಗೆ ಗಂಡಗ ಕಿವಿ ಬ್ಯಾರೆ ಕೇಳಸಂಗಿಲ್ಲಾ, ಫೋನರ ಬೆಡರೂಮಿನಾಗ ಅದ ಇವರ ಹೊರಗ ಕೂತರಂದ ಒಳಗಿಂದ ಏನು ಲಕ್ಷ ಇರಂಗಿಲ್ಲಾ, ಇಲ್ಲಾ ಎಲ್ಲರ ನನ್ನ ಹುಡಕಲಿಕ್ಕೆ ಮನಿ ಕಿಲಿ ಹಾಕಿ ಅಡ್ಡಾಡಲಿಕತ್ತಾರೊ ಅಂತ ವಟಾ- ವಟಾ ಅನ್ಕೋತ ಸೀದಾ ಆಟೊ ತೊಗಂಡ ಮನಿ ಕಡೆ ಬರೋದಕ್ಕು ಕುಮಾರ ಪಾರ್ಕ ಹತ್ತರ ಎದರಿಗೆ ಅಜ್ಜಾ ಮತ್ತ ನನ್ನ ಹೆಂಡತಿ ಕೂಡೆ ಟೆನ್ಶನದಾಗ ಹೊಂಟೊರ ಸಿಕ್ಕರು. ಮುಂದ ಅದ ಆಟೋದಾಗ ಅಜ್ಜನ್ನೂ ಹತ್ತಿಸಿಗೊಂಡ ವಾಪಸ ಮನಿಗೆ ಬಂದ್ರು.
ಇತ್ತಲಾಗ ಇಡಿ ಓಣಿ ಮಂದಿ ತಮ್ಮ ತಮ್ಮ ಮನಿ ಮುಂದ ನಿಂತ ಹಿಂಗ ಅಜ್ಜಾ ಮಧ್ಯಾಹ್ನ ಸಂತಿಗೆ ಹೋದಾಗ ಹೆಂಡ್ತಿನ್ನ ಮರತ ಬಂದಾರಂತ ಅಂತ ಮಾತಾಡ್ಕೊತ ನಿಂತಿದ್ದರು. ಅವರಿಬ್ಬರು ಆಟೋ ಇಳದರು ಆದರ ನನ್ನ ಹೆಂಡತಿ ಕಾಣಲಿಲ್ಲಾ..ಅಯ್ಯ ಇದೇನ ಬಂತ ಹಣೇಬರಹ.. ತಮ್ಮ ಹೆಂಡತಿ ಸಿಕ್ಕದ್ದ ಖುಷಿ ಒಳಗ ಈ ಸರತೆ ನನ್ನ ಹೆಂಡತಿನ್ನ ಮರತ ಬಂದರೇನ ಅಂತ ನಾ ಕೇಳಿದರ
“ಏ, ಅಕಿ ವಾಕಿಂಗ ಮುಗಿಸಿ ಬರ್ತೇನಿ ಅಂತ ಹೊದ್ಲೊ…ನಾ ಹಂಗ್ಯಾಕ ಮಂದಿ ಹೆಂಡ್ತಿನ್ನ ಮರತ ಬರಲಿ” ಅಂತ ಅಜ್ಜಾ ನಕ್ಕೋತ ಅಜ್ಜಿ ಕೈ ಹಿಡ್ಕೊಂಡ ತಮ್ಮ ಮನಿ ಹೊಕ್ಕಾ…

ಈ ಮಾತಿಗೆ ಈಗ ಮೂರ ದಿವಸ ಆಗಲಿಕ್ಕೆ ಬಂತ, ನಮ್ಮ ಓಣ್ಯಾಗ ಎಲ್ಲಾರ ಮನ್ಯಾಗೂ ಅಜ್ಜಾ ಸಂತಿಗೆ ಹೋಗಿ ಹೆಂಡ್ತಿ ಮರತ ಬಂದಿದ್ದರದ ಮಾತ, ಉಳದವರೇಲ್ಲಾ ಬರೇ ಮಾತಾಡಿದರು ಆದರ ನಾ ಅದನ್ನ ಬರದೆ.
ಅಲ್ಲಾ ಹಂಗ ವಯಸ್ಸಾದವರು ನಾ ಹಿಂಗ ವಯಸ್ಸಾದವರ ಬಗ್ಗೆ ಬರದಿದ್ದಕ್ಕ ತಪ್ಪ ತಿಳ್ಕೋಬ್ಯಾಡರಿ. ನಂಗೊತ್ತ ಇವತ್ತಿಲ್ಲಾ ನಾಳೆ ನನಗು ವಯಸ್ಸಾಗೇ ಆಗ್ತದ ಆವಾಗ ನಂಬದು ಇದ ಹಣೇಬರಹ ಅಂತ. ಆದರು ಹೆಂಡ್ತಿನ್ನ ಮರತ ಬರೋ ಅಷ್ಟ ಮರುವತನ ಅಂದರ….ನಮ್ಮ ಕಡೆ ಅಂತು ಸಾಧ್ಯ ಇಲ್ಲ ಬಿಡ್ರಿ, ನಮ್ಮ ಹೆಂಡತಿ ನಮಗ ಮರಿಲಿಕ್ಕೆ ಬಿಡಂಗಿಲ್ಲಾ, ಇನ್ನ ಮರತರ ಅಕಿನ ನಮ್ಮನ್ನ ಮರಿಬೇಕ ಇಷ್ಟ.